Sep 222013
 

ಪ್ರಧಾನವಾಗಿ ಉಪಮಾಲಂಕಾರವನ್ನು ಬಳಸಿ, ಗೆಳೆತನವನ್ನು ವರ್ಣಿಸಿರಿ. ಛಂದಸ್ಸಿನ ಆಯ್ಕೆ ನಿಮಗೇ ಬಿಟ್ಟದ್ದು.

ಉಪಮಾಲಂಕಾರದ ಪಾಠ ಇಲ್ಲಿದೆ :: http://padyapaana.com/?page_id=1643

  136 Responses to “ಪದ್ಯ ಸಪ್ತಾಹ ೮೧: ಅಲಂಕಾರಯುತ ವರ್ಣನೆ :: ಗೆಳೆತನ”

  1. ಬಿಸಿಲೊಳ್ ನೆಳಲೊಲ್
    ಪಸಿವೊಳ್ ತಿನಿಸೊಲ್
    ಕಿಸೆಯೊಳ್ ಬಡವಗೆ ಪಣದವೊಲು
    ದೆಸೆಯೊಳ್ ಶುಕ್ರನೊ-
    ಲಸಿಯೊಲ್ ಯೋಧಂ-
    ಗುಸಿರೊಲ್ ಜೀವಿಗೆ ಗೆಳೆತನಮೈ

    ನಡುಗನ್ನಡ ನುಸುಳಿಹುದು, ಗೆಣೆಯರಲ್ಲವೇ ಸಹಿಪರ್ 😉

    • ನಮ್ಮವೋಲ್ ನೇಹಿಗಳು ಸಹಿಸಲೇನ್ ಸಿಡಿಯಲೇನ್
      ತಮ್ಮ ನೀ ಗಣಿಪೆಯೇನೆಮ್ಮ ಮಾತಂ|
      ಸುಮ್ಮನೆ ಸ್ನೇಹವನು ತೋರುವವಧಾನಿಗಳು
      ಬಿಮ್ಮನೆಚ್ಚರಿಸರೇಂ ಶಾಸ್ತ್ರಸ್ಖಲಕಂ||

      • ಪ್ರಸಾದು-ಅಣ್ಣಾ :),

        ಯಾರು ಸರಿದಾರಿ ತೋರಿದರೂ, ತಿಳಿಯೋಣ ಅದಕ್ಕೇನಂತೆ. ಯಾಕಂದ್ರೆ

        ಒಂದಕ್ಷರದ ಕಲಿಕೆಯುಂ ಬಲ್ಮೆ ದಲ್ ಗೆಣೆಯ
        ನಿಂದಾದರೇನಹಿತನಿಂದಾದರೇಂ?
        ಸಂದಿರ್ಪ ಸುಜ್ಞಪ್ತಿಯಂ ಮುನ್ನ ಪರಿಕಿಸುತೆ
        ವಂದಿಸುವುದಲ್ತೆ ವಿದ್ಯಾರ್ಥಿಗಣ್ಣಾ (ಗೆ ಅಣ್ಣಾ)

      • ೧) ಅಹಿತ? ಅದು ‘ನಿಂದಾದರೇನನಿಬರಿಂದಾದರೇಂ?’ ಎಂದಾಗಬೇಕೆ?
        ೨) ಪರಕಿಸುತೆ ~ ಪರಿಕಿಸುತೆ. ಒಮ್ಮೆ ಇಂಥದ್ದೇ ಒಂದು ಕಾಗುಣಿತದೋಷವನ್ನು ಒಂದು manuscriptನಲ್ಲಿ ತೋರಿಸಿದೆ: ಪರವ್ರಾಜಕ ~ ಪರಿವ್ರಾಜಕ. ಇದು ಬರಿಯ ಕಾಗುಣಿತದೋಷವಲ್ಲ, ‘ಬೇರೆಯವರ(ಬಟ್ಟೆಯ)ನ್ನು ಒಗೆಯುವವನು’ ಎಂದೂ ಅರ್ಥಬರುತ್ತದೆ ಎಂದು ಹೇಳಿದರೂ ‘ಇದ್ದುಗೊಳ್ಳಲಿ ಬಿಡಿ ಸರ್’ ಎಂದರು; ಬಿಟ್ಟುಬಿಟ್ಟೆ. ಆ ಪುಸ್ತಕ ಹಾಗೆಯೇ ಅಚ್ಚಾಗಿದೆ. ಇಂಥವರಿಂದ ಪರಿಶೀಲಿತ ಎಂದು ನನ್ನ ಹೆಸರೂ ಇದೆ!

        • ಗೆಣೆಯನಿಂದಾದರೇಂ ಆದರೇಂ ಅಹಿತನಿಂದಾದರೇಂ (ಶತ್ರುವಿಂದಾದರೇನು). ಪರಿಕಿಸುತೆಯನ್ನು ತಿದ್ದಿದ್ದೇನೆ 🙂

      • ಒಳ್ಳೆಯದನ್ನು (ತಿದ್ದುಕೊಳ್ಳಲು ಅನುವಾಗುವುದು) ಮಾಡುವ ಉದಾತ್ತತೆ ಅಹಿತರಿಗೆಲ್ಲಿರುತ್ತದೆ?

        • ಒಂದು ವೇಳೆ ತಿದ್ದಿದರೆ ಸ್ವಾಗತಿಸೋಣ, ಯಾರು ಸರಿಯಾದ ಮಾರ್ಗ ತೋರಿದರೂ ತಿಳಿಯೋಣ ಅಂತ ಅರ್ಥ

  2. ಕರುಳಬಂಧದಿ ಬೆಸೆಯೆ ಮರೆತ ದೇವನು ತಾನು
    ಬೆರೆಸಿಹನು ಗೆಳೆತನದೊಳೆಮ್ಮನೀಪರಿ ಕಾಣು |
    ಕೊರೆದು ಬಟ್ಟೆಯ ಹೊಲಿದಬಳಿಕ ದರ್ಜಿಯು ತಾನು
    ಧರಿಸಲನುವಾಗಲಿಡೊ ಕಾಜಗುಂಡಿಯ ತೆರದಿ ||

    (ಬದುಕಿನಲ್ಲಿ ಗೆಳೆತನ “ಕಾಜ-ಗುಂಡಿ”ಯ ಹಾಗೆ, ಪೂರ್ಣ ಹೊಲಿದ ನಂತರವೂ ಕಾಜ-ಗುಂಡಿ ಇರದ ಬಟ್ಟೆ ಅಪೂರ್ಣ ಅಲ್ಲವೇ? ಹಾಗೆ)

  3. ಸುಳಿವ ವಾತವದುರಿಯುವಗ್ನಿಗೆ
    ಹೊಳೆವ ದಿನಪನು ಬೆಳೆವ ತರುವಿಗೆ
    ಮಳೆಯ ಜಲವೇ ಧರಣಿಗುಸಿರನ್ನೀವವೊಲು ಸತತ |
    ಅಳಲಿನಲಿ ಸ೦ತೈಸುತಲಿ ಬಿಡ
    ದಳರುತಿರೆ ತೋಳ್ ಬಳಸುವಾತನೆ
    ಗೆಳೆತನಕೆ ಕುರುಹೆ೦ಬ ನುಡಿಗಳು ನಿತ್ಯನೂತನವು||

    • ಪದ್ಯ ಚೆನ್ನಾಗಿದೆ. ಸುಮ್ಮನೆ ಎರಡು ಸವರಣೆ: ಸತತಂ, ನಿತ್ಯನೂತನವೈ.

    • Nice poem.
      “ಸತತ” ಸರಿ. ಛಂದಸ್ಸೇನು ಕೆಡುವುದಿಲ್ಲ. “ಸತತಂ” ನಡುಗನ್ನಡಕ್ಕೆ ಒಪ್ಪುವುದಿಲ್ಲ. ಅಂತೆಯೇ “ನೂತನವು” ಸರಿಯಾಗಿದೆ.

    • ರಘುಮುಳಿಯ ಅವರೇ, ಪದ್ಯ ಚೆನ್ನಾಗಿದೆ

  4. ಮರುಭೂಮಿಯೊಳು ಸಿಗುವ ಜಲಸ್ರೋತದಂತೆ
    ಉರಿವ ಬಿಸಿಲಿಗೆ ಪಿಡಿವ ಛತ್ರದಂತೆ |
    ಕೊರೆವ ಚಳಿಯಲಿ ಹೊದೆವ ಹಚ್ಚಡವಿದಂತೆ
    ಪಿರಿದು ಗೆಳೆತನ ಲತೆಗೆ ತರುವಿನಂತೆ ||

  5. ಸಲ್ಲದುಪಮಾನಮೀ ನೇಹವಿಷಯದೊಳೆಂದು-
    ಮೆಲ್ಲ ನೇಹಗಳನನ್ಯಮಿಹುವಿಲ್ಲಿ|
    ಮೊಲ್ಲೆ-ಮಲ್ಲಿಗೆ-ಜಾಜಿಯೊಳು ದುಂಬಿ ಬೆರೆತವೋಲ್
    ಲಲ್ಲೆಗರೆದೊಡೆ ಮನುಜ ಜಾರನೆಂಬರ್||

  6. ಚಾತಕಂಗಳವೋಲೆ ಕಂಗಳ್
    ಕಾತರದೆ ಕಾದಿರ್ಪುವಾಪ್ತನ
    ಶೀತಕಿರಣನನೊಪ್ಪುವಾ ಮುಖದರ್ಶನಕ್ಕಿಂದು |
    ಆತ ಕಂಡೊಡನಾವಲಂದದಿ
    ಪೂತದೀತನ ಮೋರೆ ಹೃದಯದೆ
    ಸ್ರೋತಈಶನ ಪಾಂಗೆ ಪೊಣ್ಮಿದುದೊಲವು ಫಕ್ಕೆಂದು ||

    ಆವಲ್- ನೈದಿಲೆ
    ಸ್ರೋತಈಶ- ಸಮುದ್ರ

    • ಒಳ್ಳೆಯ ಪದಪ್ರಯೋಗ ಹಾಗೂ ಯುಕ್ತಕವಿಸಮಯ ಸೇರಿ ”ಕುಸುಮ’ಷಟ್ಪದಿಯು ”ಸಫಲ’ವಾಗಿದೆ.

    • ಶ್ರೀಕಾಂತರೆ, ಪದಪ್ರಯೋಗ ಬಹಳ ಚೆನ್ನಾಗಿದೆ. ಕಡೆಯ ಎರೆಡು ಸಾಲಿನ ಅರ್ಥ ಬಿಡಿಸಿ ಹೇಳಿರಿ.

    • ರಾಗ ಸೋಮ
      ಧನ್ಯವಾದಗಳು.

      ಸೋಮ! ಕೊನೆಯ ಎರಡು ಸಾಲುಗಳ ವಿವರಣೆ.

      ಪೂತದು ಈತನ ಮೋರೆ- ಇವನ ಮುಖವು ಅರಳಿತು
      ಹೃದಯದೆ ಸ್ರೋತಈಶನ ಪಾಂಗೆ ಪೊಣ್ಮಿದುದು ಒಲವು ಫಕ್ಕೆಂದು- ಹೃದಯದಲ್ಲಿ ಸಾಗರದಂತಕ್ಕೆಂದುಫಕ್ಕೆಂದು ಉಕ್ಕಿತು (ಚಂದ್ರನ ಸೆಳೆತದಿಂದ ಸಾಗರ ಉಕ್ಕುವಂತೆ)

      ಸ್ರೋತಸ್+ಈಶ- ಸ್ರೋತಈಶ

    • ಶ್ರೀಕಾಂತ್ ಸರ್,
      ನಿಮ್ಮ “ಭಾಮಿನಿ” ಪದ್ಯ ಬಹಳ ಇಷ್ಟವಾಯಿತು. “ಹೃದಯದೆ (ಸ್ರೋತ ….)” ೫ ಮಾತ್ರೆ ಯಾಗುವುದಲ್ಲವೇ? ಹೇಗೆ ಬದಲಿಸಬಹುದೆಂದು ತಿಳಿಯಲು ಕೇಳುತ್ತಿರುವೆ.

      • ಉಷರವರೆ- ಸೂಕ್ಷ್ಮವಾಗಿ ಗಮನಿಸಿದ್ದೀರ. ಅಪರೂಪಕ್ಕೊಮ್ಮೆ ನಾನೂ ಶಿಥಿಲದ್ವಿತ್ವವನ್ನು ಬಳಸಬೇಕಾಗುತ್ತೆ.

  7. ಉಪ್ಪು ನೀರೊಳು ಬೆರೆವ ತೆರದಲಿ
    ಸೊಪ್ಪು ನೆರೆದಿಳೆಯೊಳಗೆ ತಾನದ
    ಕೊಪ್ಪಿ ಸವೆಯಲು ಮಂಜು ಮುಸುಕದು ಸೂರ್ಯಗೊಲಿವಂತೆ
    ತಪ್ಪ ತಿದ್ದಲು ಗುರುವಿನರಿವಲಿ
    ಯಿಪ್ಪ ಸಲಹೆಗೆ ಮಂತ್ರಿಪರಿಯಲಿ
    ತುಪ್ಪ ತಾನಿರೆ ಹಾಲಿನೊಳಗದು ಜಡಕೆ ಚೇತನವು

    ಸೊಪ್ಪು =ಎಲೆ

    • ಭಾಲ ಅವರೇ, ಚೆನ್ನಾಗಿದೆ.
      ಒಂದಂಶ ಗಮನಿಸಬಹುದು, ಮಂತ್ರಿಪರಿಯಲಿ -> ಮಂತ್ರಿಯ ಪರಿಯಲಿ ಆಗಬೇಕು. ಮಂತ್ರಿಯವೊಲೇ ಎಂದು ಮಾಡಬಹುದು

      • ಮಂತ್ರಿಯೊಲವಲಿ– ಅಂದ್ರೆ ಸರಿಹೋಗುವುದೇ ? ಈಗಿನ ಕೆಲವು ಮಂತ್ರಿವರ್ಯರ(partial ) ಒಲವಿನಂತೆ ಅಪಾರ್ಥಕ್ಕೆ ಗುರಿಯಾಗುವುದು ಬೇಡವೆಂದು ಮಂತ್ರಿ ಪರಿಯಲಿ ಅಂತ ಬದಲಿಸಿಕೊಂಡೆ

        • ಭಾಲ ಅವರೇ,
          ಮಂತ್ರಿಪರಿ ಪ್ರಯೋಗ ಅರಿಸಮಾಸವಾಗುತ್ತದೆ -> ಮಂತ್ರಿಯ ಪರಿ ಸರಿ ಆದರೆ ಮಾತ್ರಾಗಣನೆ ತೊಡಕಾಗುತ್ತದೆ

          ಇನ್ನೊಂದಂಶ ನಾನು ಸೂಚಿಸಿದ್ದು ಮಂತ್ರಿಯೊಲವಲಿ ಅಲ್ಲ ಮಂತ್ರಿಯವೊಲೇ ಮಂತ್ರಿಯಹಾಗೆಯೇ ಎಂಬ ಅರ್ಥವಷ್ಟೆ ಬರುತ್ತದೆ ಗಮನಿಸಿರಿ

          • ಧನ್ಯವಾದಗಳು . ಸರ್ ,ದಯವಿಟ್ಟು ಅನ್ಯಥಾ ಭಾವಿಸಬೇಡಿ . ನೀವು ಮೊದಲನೆ ಸಲ ಹೇಳಿದ್ದನ್ನು ಗ್ರಹಿಸಿಕೊಂಡಿದ್ದೆನೆ ಮಂತ್ರಿಯವೊಲೇ ಅನ್ನುವ ಪದದ ಸ್ಥಾನದಲ್ಲಿ ಮಂತ್ರಿಯೊಲವಲಿ ಅನ್ನುವ ಪದ ಸೂಕ್ತ ಪದವಾಗಬಹುದೊ ಎಂಬುದಾಗಿತ್ತು ನನ್ನ ಪ್ರಶ್ನೆ . .ರಾಜನಿಗೆ ಮತ್ತು ಮಂತ್ರಿಗೆ ಪರಸ್ಪರರಲ್ಲಿ ಇರುವ ವಿಶ್ವಾಸ ಅನ್ನುವ ಅರ್ಥದಲ್ಲಿ … …ನಾನು ಪ್ರಶ್ನಿಸಿದ ರೀತಿ ಸರಿಯಾಗಿಲ್ಲ ಎನ್ನುವುದು ಮನದಟ್ಟಾಯಿತು .

            ಉಪ್ಪು ನೀರೊಳು ಬೆರೆವ ತೆರದಲಿ
            ಸೊಪ್ಪು ನೆರೆದಿಳೆಯೊಳಗೆ ತಾನದ
            ಕೊಪ್ಪಿ ಸವೆಯಲು ಮಂಜು ಮುಸುಕದು ಸೂರ್ಯಗೊಲಿವಂತೆ
            ತಪ್ಪ ತಿದ್ದಲು ಗುರುವಿನರಿವಲಿ
            ಯಿಪ್ಪ ಸಲಹೆಗೆ ಮಂತ್ರಿಯವೊಲೇ
            ತುಪ್ಪ ತಾನಿರೆ ಹಾಲಿನೊಳಗದು ಜಡಕೆ ಚೇತನವು

  8. ಮಿತ್ರನನು ಕಂಡಾಗ ಸೂರ್ಯಕಾಂತಿಗೆ ಮುದವು
    ಮಿತ್ರನಿಲ್ಲದೆ ಸೊರಗುವುದು ಕಮಲವು |
    ಮಿತ್ರ ಬರೆ ಕಾರ್ಮೋಡ ಚದುರುತೋಡುವುದಲಾ
    ಮಿತ್ರಸಂಪ್ರಾಪ್ತಿ ದುಷ್ಕರವು ಜಗದಿ ||

    ಮಿತ್ರ = ಸೂರ್ಯ, ಗೆಳೆಯ

  9. ತೇವಗೊಂಡಿಹ ಮಣ್ಣಿನೊಂದಿಗೆ ಕಟ್ಟುವಿಟ್ಟಿಗೆ ಭವನದಂದದಿ
    ಭಾವ ಸಂದಿರಲರ್ಥದೊಂದಿಗೆ ಶಬ್ದಗಟ್ಟುವ ಕವನದಂದದಿ
    ಜೀವ ಜೀವರ ತುಂಬು ನಂಬಲಿ “ನೇಹ”ದೊಂದಿನ ಬದುಕು ಕಾಣಿರ
    ದಾವ ದೈವವದಿಟ್ಟ ರಕ್ಷೆಯೊ ಹುಟ್ಟುಸಾವಿನ ನಡುವ ಬಾಳಲಿ ||

  10. ತೆರೆಮರೆಯೊಳಿರುವ ಸಖನೆಷ್ಟು ಪೊಗಳಲಿನಾನು
    ಹೊರೆಯಾದೆನವಗೆ ನಾ ಮೂಟೆಯಂತೆ|
    ಸರಿಯಾದ ಸಮಯದಲಿ ನೆರವಾಗುತಿರುವವಗೆ
    ಕರವಮುಗಿಯುವೆನಯ್ಯ ಭಕ್ತನಂತೆ|

  11. ಮುಳುಗುತಿಹ ದಿನಕರಗೆ ಸಾಗರವದಾಸರೆಯು
    ಕಳೆಯೆ ರಾತ್ರಿಯ ಶಶಿಗೆ ತಾರೆಗಳೆ ಜೊತೆಯು |
    ಬಳಲಿ ಸೊರಗಿದ ನೆಲಕೆ ಮೇಘ ಮಳೆ ಸುರಿಸುವುದು
    ಕಳೆಯೆ ಮನಸಿನ ದುಗುಡ ಗೆಳೆಯನವನಿಹನು ||

  12. ಸ್ನೇಹಂ ಜೀವನಯಾನ-
    ಸ್ನೇಹಮೆನಲ್ ಸುಗಮಮಲ್ತೆ ಗುರಿಯಂ ಸೇರಲ್ |
    ಮೋಹಕಪುಷ್ಪಕದವೊಲು-
    ತ್ಸಾಹಕರಂ ವಿಪುಲಮಿತ್ರಯಾತ್ರಿಚಯಕ್ಕಂ ||

    (ಉಪಮಾಲಂಕಾರದೊಡನೆ ರೂಪಕ ಮತ್ತು ಛೇಕಾನುಪ್ರಾಸಗಳೂ ಬಂದಿವೆ)

    • ಗಣೇಶ್ ಸರ್, ಪದ್ಯ ಬಹಳ ಚೆನ್ನಾಗಿದೆ, ಹಲವೆಡೆ ಅನುಪ್ರಾಸವಿದೆ:

      ಮೋಹಕ, ಪುಷ್ಪಕ, ಉತ್ಸಾಹಕ ಮತ್ತು ಮಿತ್ರ ಯಾತ್ರಿ

      ಇದರಲ್ಲಿ ಛೇಕಾನುಪ್ರಾಸವೆಂದರೆ ಯಾವುದು, ತಿಳಿಸಿಕೊಡಿರಿ?

    • ವಿಪುಲಮಿತ್ರಯಾತ್ರಿಚಯ – ನಮ್ಮ ವಾರ್ಷಿಕ ಪ್ರವಾಸಗಳು
      ಮೋಹಕಪುಷ್ಪಕ – ನಾವು ಪ್ರಯಾಣಿಸುವ ವಾಹನ

    • ಗಣೇಶ್ ಸರ್, ಪದ್ಯಪಾನದಲ್ಲಿನ ನಿಮ್ಮ ಈ “ಸ್ನೇಹ ಜೀವನ ಯಾನ…”, ಆಯುರ್ವೇದದ “ಸ್ನೇಹ ಪಾನ”ವನ್ನು ನೆನೆಪಿಸಿತು. ಧನ್ಯವಾದಗಳು.

      • ನಿಮ್ಮ subtle ಪ್ರಶ್ನೆಗೆ ನಮ್ಮ ಉತ್ತರ: ಇಲ್ಲ, ನಾವು ಯಾತ್ರೆ ಹೋದಾಗ ಸ್ನೇಹಪಾನ (ಎಣ್ಣೆ ಪಾರ್ಟಿ) ಮಾಡೋಲ್ಲ.

        • ಪ್ರಸಾದ್ ಸರ್,
          ನಾನು ಖಂಡಿತ ಆ ಅರ್ಥದಲ್ಲಿ ಹೇಳಿದ್ದಲ್ಲ, ಈ “ಸ್ನೇಹಪದ್ಯ” ದಿಂದ “ಪದ್ಯಪಾನ”ದಲ್ಲಿ “ಸ್ನೇಹಪಾನ”ವಾಯಿತೆಂದು ಹೇಳಿದ್ದು, ಒಂದು ವಿಶೇಷವೆಂದರೆ ಆಯುರ್ವೇದದ “ಸ್ನೇಹಪಾನ”ವೂ ಒಂದು ವಿಧದ ಎಣ್ಣೆ(ತುಪ್ಪ)ಯಂತೆ !

        • ನನ್ನ ವಿಕಟಪ್ರತಿಕ್ರಿಯೆಗೆ ಇಷ್ಟು ಗಹನವಾದ ಸಮರ್ಥನೆ ಬೇಕಿಲ್ಲ 🙂

    • ಪದ್ಯ ಬಹಳ ಹಿಡಿಸಿತು.
      ಏಣ್ಣೆಯೆಂದರೆ ಸ್ನೇಹ. ಸ್ನೇಹವೆಂದರೆ ಎಣ್ಣೆ.

      प्रीतिं तनॊति हृदयम् विकचीकरॊति

      विस्मारयत्यहितमात्मरुजं पिनष्टि।

      ग्राम्यं पुनात्यवितथं विशिनष्टि संध्यां

      स्नॆहात्परं वद किमस्ति सुधासमानम् ॥

    • ಚಿಕ್ಕ ಪದ್ಯದಲ್ಲಿ ಇಷ್ಟೆಲ್ಲಾ ಧ್ವನಿ ತುಂಬಿದ್ದೀರಿ. ಧನ್ಯವಾದಗಳು 🙂

    • ಮಧುರವಾದ ಪದ್ಯ. “ಸ್ನೇಹಂ ಜೀವನಯಾನಸ್ನೇಹಂ” ಎಂಬ ಭಾಗ ಪರಮರಮಣೀಯವಾಗಿದೆ 🙂

  13. ಗಗನಕೆ ದಿನಪನ
    ಚಿಗುರಿಗೆ ಮುಗುಳಿನ
    ತೊಗಲಿಗೆ ಉಡುಪಿನ ಬಗೆಗಳೊಲು |
    ಜಗದಗಲದೊಳಿಹ
    ಖಗ ಮೃಗ ಮನುಜರ
    ನಗವಘವಿರಹಿತ ಗೆಳೆತನವು ||

    • 🙂

      ದಯವಿಟ್ಟು ಮೂರನೇ ಪಾದವನ್ನು – ತೊಗಲಿಗೆ ತೊಡುಗೆಯ ಬಗೆಗಳೊಲು- ಎಂಬುದಾಗಿ ತಿದ್ದಿಕೊಳ್ಳಿರಿ. ಅಲ್ಲಿ ದೋಷವಿದೆಯೆಂದು ಬಳಿಕ ಗಮನಿಸಿದೆ. 🙂

      ಖಗ ಮೃಗ ಮನುಜರ ಎಂಬಲ್ಲಿ ಪದಗಳ ನಡುವೆ ಅಂತರವಿರಬೇಕೇ ಬೇಡವೇ ಎಂಬ ಸಂದೇಹವಿದೆ.

    • ಸರ್ವಲಘು ಗತಿ ಚೆನ್ನಾಗಿದೆ.

      • ಶ್ರೀ ಮೂರ್ತಿಯವರೆ, ಧನ್ಯವಾದ.

  14. ಗೆಳೆಯನವ ನನ್ನದೆಯೆ ನೆಳಲಂತೆ ಕಾಣ್ವನವ
    ನೊಳಗಿರುವ ನನ್ನಂತರಾತ್ಮದಂತೆ |
    ಗೆಳೆಯನವ ನನ್ನನೆಯೆ ನೆಳಲಂತೆ ಕಾಯ್ವನವ
    ಬಳಿಯಿರುವ ನನ್ನಮ್ಮನಾತ್ಮದಂತೆ ||

  15. ಪ್ರಸ್ತುತ ಪದ್ಯವು ಉಪಮಾಪ್ರಪೂರ್ಣವಾಗಿಲ್ಲ….. ಏಕೆ ಉಪಮಾಲಂಕಾರಹೀನವಾಗಿದೆ. ಆದರೂ ಪದ್ಯಪಾನದಲ್ಲಿ ಒಮ್ಮೆಯೋ ಇಮ್ಮೆಯೋ ಇಂತಹ ಕಟ್ಟಳೆಗಳ ಉಲ್ಲಂಘನೆಗೆ ವಿರೋಧವಿಲ್ಲವೆಂಬ ನಂಬಿಕೆಯಿಂದ ಪದ್ಯವನ್ನು ಪ್ರಸ್ತುತಪಡಿಸುತ್ತಿದ್ದೇನೆ….ನನ್ನ ನಂಬಿಕೆಯು ಸಟೆಯೆಂದಾದಲ್ಲಿ ಕ್ಷಮೆಯಿರಲಿ 🙂

    ಕೆಳೆತನವೈ ದಶಾಸ್ಯನನುಜಾತಗಂ, ಅರ್ಕಸುತಂಗಮಾಯ್ತು ಭೂ
    ವಳಯ ಸುಖಂಗಳಿಂತುಂ ; ಅಧನಾಧನ ಧಾಮ ಸುಧಾಮಗಾಯ್ತದಿ
    ಟ್ಟಳಂ ; ಅಮರೇಂದ್ರವಜ್ರಮೆ ಗಡಾ ಸುಪೃಥಾತ್ಮಜರರ್ದನಾದ್ರಿಗಂ
    ಭಳಿಭಳಿಯೆಂಬರಿಂತು ಬುಧರಿಂತುಟು ನೇಹಮನೀ ನೃಲೋಕದೊಳ್

    ದಶಾಸ್ಯನನುಜಾತ – ವಿಭೀಷಣ
    ಅರ್ಕಸುತ – ಸುಗ್ರೀವ
    ಇಟ್ಟಳ – ಸಮೃದ್ಧಿ
    ಪೃಥಾತ್ಮಜರ್ – ಪಾಂಡವರು
    ಅರ್ದನ – ತೊಂದರೆ

  16. ಇಲ್ಲಿರುವುದು ಉಪಮೆಯೇ ಹೌದಾದರೂ ಯುಕ್ತಾಯುಕ್ತತೆ/ಔಚಿತ್ಯದ ಬಗ್ಗೆ ಸ್ವಲ್ಪ ಸಂದೇಹವಿದೆ. 😛
    मित्रत्वं शर्करोपेतनिम्बूपानकसन्निभम् |
    ह्लादयति जनान् तद्वदाम्लयुक्तमपि क्षितौ ||

    मित्रत्वं क्षितौ शर्करोपेतनिम्बूपानकसन्निभम् | तद्वत् आम्लयुक्तं अपि जनान् ह्लादयति |

    ಗೆಳೆತನವು ಸಕ್ಕರೆ ಬೆರೆಸಿದ ನಿಂಬೆ ಹಣ್ಣಿನ ಪಾನಕದಂತೆ. ಒಂದಿಷ್ಟು ಪ್ರಮಾಣದಲ್ಲಿ ಹುಳಿಯಿದ್ದರೂ ಪಾನಕವು ಬೇಸಿಗೆಯಲ್ಲಿ ಹೇಗೆ ಆಹ್ಲಾದವನ್ನೇ ಕೊಡುತ್ತದೋ ಹಾಗೆ ಗೆಳೆತನದಲ್ಲಿ ಆಗೀಗ ಉಂಟಾಗುವ ಮನಸ್ತಾಪಗಳು ಇತ್ಯಾದಿಗಳ ಹುಳಿಯಿದ್ದರೂ ಕೊನೆಗೆ ಪರಿಣಾಮವು ಲೋಕದಲ್ಲಿ ಜನರಿಗೆ ಆಹ್ಲಾದವೇ ಆಗಿರುತ್ತದೆ.

    • .

      • ನಮೋ ನಮಃ 😀
        ನಿಮ್ಮ ‘ಧ್ವನಿಪೂರ್ಣ’ವಾದ ವಿಮರ್ಶೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನನಗಿಲ್ಲ. ಸಮ್ಮತಿಯೋ, ಅಸಮ್ಮತಿಯೋ , ಟಂಕಿಸುವಲ್ಲಿ ದೋಷವೋ ನಾ ತಿಳಿಯೆ. ದಯವಿಟ್ಟು ‘ವಾಚ್ಯ’ ಮಾಡುವಿರಾ?

    • Looks good to me

      • ಧನ್ಯವಾದಗಳು

        • सादृशमित्यसाधु, सदृशमिति स्यात्, परन्त्वेवं कृते छन्दोभङ्गो जायते । सन्निभमित्यस्य शब्दस्य अथवा समञ्जसस्य शब्दान्तरस्य प्रयोगो दोषं परिहरिष्यति। कुतो ह्लादयन्तीति? ह्लादयतीत्येव साधु किन्त्वनेनापि छन्दो दुष्यतीत्यमुना हेतुना स्वीक्रियतामन्यदेव क्रियापदम् ।

          • thanks for valuable feedback. I’ve made the changes in the original verse itself.
            1) using सन्निभम्
            2) yes I’ve used bahuvachana which is wrong and hlAdayati because of 3 laghus even though doesn’t violate the lakshana of anushtup sounds jarring. but most the other synonyms I could find too suffer the same in their nijanta forms so I’ve retained hlAdayati.

  17. सुमनोहारिणी मैत्री वल्लीवामोदवर्षिणी ।
    किन्त्वङ्कुरितमात्रा सा फलतीत्यद्भुतं सखे ॥

    ಸುಮನೋಹಾರಿಣೀ ಮೈತ್ರೀ ವಲ್ಲೀವಾಮೋದವರ್ಷಿಣೀ |
    ಕಿನ್ತ್ವಂಕುರಿತಮಾತ್ರಾ ಸಾ ಫಲತೀತ್ಯದ್ಭುತಂ ಸಖೇ ||

    ಗೆಳೆಯ! ಒಳ್ಳೆಯ ಮನಸ್ಸನ್ನು/ಒಳ್ಳೆಯ ಮನಸ್ಸುಳ್ಳವರನ್ನು ಸೆಳೆಯುವ (ಸುಮನೋಹಾರಿಣೀ), ಸಂತಸವನ್ನು ಸೂಸುವ (ಆಮೋದವರ್ಷಿಣೀ) ಗೆಳೆತನವು ಹೂಗಳಿಂದ ರಮಣೀಯವಾಗಿರುವ (ಸುಮನೋಹಾರಿಣೀ), ಪರಿಮಳವನ್ನು ಸೂಸುವ (ಆಮೋದವರ್ಷಿಣೀ) ಬಳ್ಳಿಯಂತೆ.
    ಆದರೆ ಗೆಳೆತನವು ಅಂಕುರಿಸುತ್ತಿದ್ದಂತೆಯೇ ಫಲವನ್ನು ನೀಡುತ್ತದೆ ಎಂಬುದು ಆಶ್ಚರ್ಯ!

    ಅಂದರೆ ಮೈತ್ರಿಯು ಸುಮನೋಹಾರಿಣಿ, ಆಮೋದವರ್ಷಿಣಿಯಾದುದರಿಂದ ಲತೆಯಂತೆ ಎಂದಿದ್ದರೂ ಲತೆಯು ಅಂಕುರಿತವಾಗಿ, ಪಲ್ಲವಿತವಾಗಿ, ಪುಷ್ಪಿತವಾಗಿ ಬಳಿಕ ಫಲವನ್ನೀಯುತ್ತದೆ. ಆದರೆ ಮೈತ್ರಿ ಮಾತ್ರ ಅಂಕುರಿತವಾಗುತ್ತಿದ್ದಂತೆಯೇ ಫಲವನ್ನು ನೀಡುತ್ತದೆಂಬುದು ಅಚ್ಚರಿಯೇ ಸರಿ ಎಂದು ತಾತ್ಪರ್ಯ.
    ಮೈತ್ರಿಯ ಫಲವು ಅನುಭವೈಕವೇದ್ಯವಾದುದರಿಂದ ಮತ್ತು ಎಲ್ಲರ ಅನುಭವಕ್ಕೆ ಗೋಚರವಾದುದರಿಂದ ಅದನ್ನು ವಾಚ್ಯವಾಗಿ ಹೇಳಿಲ್ಲ.

    ಈ ಪದ್ಯದ ಪೂರ್ವಾರ್ಧದಲ್ಲಿ ಶ್ಲಿಷ್ಟವಾದ ಉಪಮಾಲಂಕಾರ ಹಾಗೂ ಉತ್ತರಾರ್ಧದಲ್ಲಿ ವ್ಯತಿರೇಕಾಲಂಕಾರವಿದೆ 🙂

  18. सुश्राव्य-गान-भरिता सान्द्र-स्थालीव सौहृदम् ।

    दीर्घा स्यादारतिः पश्चात्-तत्तथैवानुवर्तते ॥

    saandra-sthaalee = Compact disc (CD). (though I am not a fan of this term, this has been accepted and used. We are mere mortals following)
    aarati: = interval, pause
    sauhrudam = friendship

    Friendship is like a compact disc which is filled with melodious music. Even if paused for a long time, it continues from where it left off

    • nice

    • ತುಂಬಾ ನವೀನವಾದ ಉಪಮಾನ ಬಳಸಿದ್ದೀರಿ. ತುಂಬಾ ಇಷ್ಟವಾಯಿತು 🙂

    • ಸೌಹೃದಂ ಬದಲು ಮಿತ್ರತಾ ಅಂತಿದ್ದರೆ ಚೆನ್ನಾಗಿರ್ತಿತ್ತಲ್ವಾ? ಆಗ ಲಿಂಗಸಮನ್ವಯ ಆಗ್ತಿತ್ತು. ಅಥವಾ ಸ್ನೇಹಕ್ಕೆ ಲಿಂಗಭೇದವಿಲ್ಲ ಅನ್ನೋದನ್ನು ಹೀಗೆ ಧ್ವನಿಸುತ್ತಿದೆಯೇ ನಿಮ್ಮ ಪದ್ಯ?

      • ಅಹೋ ಶಂಕರ! ನಿಶ್ಶಂಕಂ ವಚ್ಮಿ ತೇ ಸೂಕ್ತಿಚಾತುರೀಮ್ |
        ಯಯಾ ದೋಷಾ ಅಪಿ ಮುದಾ ಮೈತ್ರೀಜ್ಯೋತ್ಸ್ನಾಮನೋಹರಾಃ ||

  19. In Sri S. L. Bhyrappa’s PARVA, Kunti takes along a friend when she joins her husband on his exile to the forest. Eventually when the friend is dead, Kunti laments that there is now none in whom she can pour out her mind. The author remarks that one gets only a single friend in a lifetime.
    ಎನಿಬರಂ ಸಂಧಿಸಿದೊಡೇನಹುದು ಜೀವನದೆ
    ಕೊನರುವುದು ಮೈತ್ರಿಯೋರ್ವರೊಳು ಮಾತ್ರಂ|
    ಮಿನುಗಲೇಂ ಸಾಸಿರದೆ ತಾರೆ ಮರೆಯಾಗವೇ-
    ನಿನನೋರ್ವ ಬಂದು ನಿಲಲಾಗಸದೊಳಂ||

  20. ಆಹಾ! ಇದೀಗ ಈ ಸಂಚಿಕೆಯಲ್ಲಿ ಸಂಸ್ಕೃತಪದ್ಯಗಳೂ ಇಂಗ್ಲಿಷ್ ಗದ್ಯದ ಪ್ರತಿಕ್ರಿಯೆಗಳೂ ಒಳ್ಳೆಯ ಮಣಿಪ್ರವಾಳವಾಗಿ ನವಚಂಪೂಕಾವ್ಯದಂತೆ ವಿಸ್ತರಿಸಿವೆ. ಸಂತೋಷ. ನನ್ನ ಅಂಕ್ಯ(lap-top) ಸ್ವಲ್ಪ ಕೈಕೊಟ್ಟ ಕಾರಣ ನನ್ನಿಂದ ಪ್ರತಿಕ್ರಿಯೆಗಳಿಗೆ ವಿಲಂಬವಾಗಿದೆ. ಮನ್ನಿಸಿರಿ.

    ಮುಖ್ಯವಾಗಿ ಸುಧೀರ್ ಅವರ ಎರಡುಪದ್ಯಗಳೂ (ವಸಂತತಿಲಕದ ಶಿಷ್ಟೋಪಮೆಯಂತೂ ಅತಿವೇಲ. ಇಲ್ಲಿಯ ಪಿನಷ್ಟಿ, ವಿಶಿನಷ್ಟಿ ಮುಂತಾದ ಕ್ರಿಯಾಪದಗಳ ಪ್ರೌಢಕ್ರಿಯಾಪದಗಳ ಪ್ರಯೋಗ ಹಾಗೂ ನೇಹ ಮತ್ತು ’ದಾಹ’ಗಳನ್ನು ಒಪ್ಪವಿಟ್ಟ ಪರಿ ಅನ್ಯಾದೃಶ. ಅಂತೆಯೇ ಶ್ಲೋಕದಲ್ಲಿ ರೂಪಿತವಾದ ಸಾಂದ್ರಸ್ಥಾಲಿಯ ಹೋಲಿಕೆಯುಳ್ಳ ಕವಿತೆ ಅನನ್ಯ; ಅಭಿರಾಮ. ಈ ಬಗೆಯ ಉಕ್ತಿಚಮತ್ಕಾರ-ನಾವೀನ್ಯಗಳೆಲ್ಲ ಸುಧೀರರದೇ ಸೊತ್ತು) ಸಹೃದಯಾವರ್ಜಕ.

    ಮೈತ್ರೀಸಮಗ್ರವೈಚಿತ್ರ್ಯಂ ಕಥಂ ಸ್ಯಾದಿತಿ ಚಿಂತಿತೇ |
    ಸುಧೀರಸ್ಯೇವ ತನ್ನೂನಮಿತ್ಯುತ್ತರಮುದೀರ್ಯತೇ ||

    ಜಿ ಎಸ್ ರಾಘವೇಂದ್ರರ ಪದ್ಯದಲ್ಲಿ ಶಂಕರ್ ಹೇಳಿದಂತೆ ಗತಿಕಾರ್ಕಶ್ಯವಿದೆ. ಉಳಿದಂತೆ ಅದು ನವೀನೋಪಮೆಯ ಕಾರಣ ಅರ್ಥಪೈಶಲ್ಯದಿಂದ ಕೂಡಿದೆಯೆನ್ನಲು ತಕರಾರಿಲ್ಲ.

    ಜಂಬೀರಪಾನಕಪ್ರಖ್ಯಾ ರಾಘವೇಂದ್ರೀಯಸಾಹಿತೀ |
    ನಮ್ರಾನ್ ವಯಸ್ಯಾನ್ ಕುರುತೇ ಕಮ್ರಮಾಧುರ್ಯಮೇದುರಾ ||

    ಇನ್ನು ಮಹೇಶ ಹಾರ್ಯಾಡಿ ಅವರ ಶ್ಲಿಷ್ಟೋಪಮಾ-ವ್ಯತಿರೇಕಸಂಕರವು ನಿಜಕ್ಕೂ ಆಕರ್ಷಕ.ಉಪಮೆಯು ಹಳತಾದರೂ ಅದನ್ನು ಬಳಸುವ ಬಗೆ ಹೊಸತಾದರೆ ಅದೆಷ್ಟು ಚೆಲುವಾದೀತೆಂಬ ಅರಿವೇ ಇಲ್ಲಿದೆ. ಜೊತೆಗೆ ಅಲಂಕಾರಗಳನ್ನು ಒಂಟೊಂಟಿಯಾಗಿ ಬಳಸದೆ ಹದವರಿತು ಸಂಕರ-ಸಂಸೃಷ್ಟಿಗಳನ್ನು ಮಾಡಿದಲ್ಲಿ ಕವಿತೆಗೆ ಮತ್ತೂ ಮೆರುಗು ಬಂದೀತೆಂಬ ಆಯಾಮವೂ ಧ್ವನಿಸಿದೆ.

    ಮಹೇಶೇ ವರ್ಷತಿ ಸ್ನೇಹಾತ್ ಸುದೂರಾದಪಿ ಸರ್ವಥಾ |
    ಕಾವ್ಯಪ್ರಸೂನಪಾರಮ್ಯಂ ಮಿತ್ರಾಮೋದಾಯ ಕಲ್ಪ್ಯತೇ ||

    ಇನ್ನು ನನ್ನ ನಚ್ಚಿನ ಮಿತ್ರರಾದ ಹಾದಿರಂಪರು ಅಪರೂಪಕ್ಕೆ ವಿಕಟಕವಿತ್ವವನ್ನು ಬಿಟ್ಟು ನಿಕಟಕವಿತ್ವವನ್ನು ರಚಿಸಿದ್ದಾರೆಂಬುದು ಆನಂದಾಶ್ಚರ್ಯಗಳ ಸಂಗತಿ:-) ಆದರೆ ಹಲವರು ಗಾಢಮಿತ್ರರಿರಬಲ್ಲರೆಂಬುದು ಕೆಲವರ ಅನುಭವವೇದ್ಯಸತ್ಯವಲ್ಲವೇ!

    ಪರ್ವದಲ್ಲಿಯ ಕುಂತಿಗಂತಾದೊಡನುಭವಂ
    ಸರ್ವರಲ್ಲದು ಸಲ್ಲಲಪ್ಪುದೇನು?
    ಚಾರ್ವಾನುರಾಗ್ಯದೊಳ್ ಸಲ್ಗುಮೀ ಅದ್ವೈತ-
    ಮುರ್ವರೆಯೊಳುಂಟಿದಕ್ಕಂ ವಿಪಕ್ಷಂ!! 😉

    • ಕೃತಜ್ಞತೆಗಳು ಸರ್. ಇದು ಭೈರಪ್ಪನವರ ಮಾತು ಎಂದು ಮೊದಲೇ ಹೇಳಿ ಕವನಿಸಿದ್ದೇನೆ. ನಿಮ್ಮ ಮಾತಂತೂ ಸರಿ.

    • ಧನ್ಯವಾದ 🙂

    • ಜೀವನದಲ್ಲಿ ಎಷ್ಟು ಸ್ನೇಹಿತರಿದ್ದರೂ ಇನ್ನೂ ಒಬ್ಬ ಒಳ್ಳೆಯ ಸ್ನೇಹಿತನಿಗೆ ಅಥವಾ ಸ್ನೇಹಿತೆಗೆ ಜಾಗ ಇದ್ದೇ ಇರುವುದು ಎನ್ನುವ ತತ್ತ್ವವನ್ನು ಗಣೇಶರು ತಮ್ಮ ‘ಜೀವನ-ಯಾನ-ಸ್ನೇಹ’ ಪದ್ಯದಲ್ಲಿ ‘ಪುಷ್ಪಕ’ ಎಂಬ ಒಂದೇ ಪದದಲ್ಲಿ ಧ್ವನಿಸಿದ್ದನ್ನು ಓದಿ ಬಹಳ (೨ ಲಾರ್ಜ್ ಕುಡಿದಷ್ಟು :-)) ಸಂತೋಷಪಟ್ಟೆನಲ್ಲದೆ ಹ್ಯಾಂಗ್-ಒವರ್ ಅನ್ನು ಇನ್ನೂ ಅನುಭವಿಸುತ್ತಿದ್ದೇನೆ.

      • “ಪ್ರಾಯಃ ಪ್ರತ್ಯಯಮಾಧತ್ತೇ ಸ್ವಗುಣೇಷೂತ್ತಮಾದರಃ” 🙂

      • ಸುಧೀರರೆ, ಲಾರ್ಜಿನಲ್ಲಿರುವ ಸುಖ ಲಾರ್ಜಿನ ಹ್ಯಾಂಗೋವರ್ರಿನಲ್ಲಿ ಇಲ್ಲವಂತೆ, ಬಲ್ಲವರ ಮಾತು. ಅಲ್ಲದೆ ಜೋರು ತಲೆನೋವಂತೆ. ಹಾಗಾಗಿ ನಿಮ್ಮ ಮಾತಿಗೆ ಏನು ಅರ್ಥ ಕಟ್ಟುವುದೋ ತಿಳಿಯುತ್ತಿಲ್ಲ 😉

        • ಜೀವೆಂ ಅವರೆ, ನೀವು ಹೇಳುವುದು ಸಾಧುವೇ.

          ಆದರೂ, ಎಲ್ಲ ಹ್ಯಾಂಗ್-ಓವರ್ ಗಳೂ ದುಃಖಮಯವಾಗಿರುವುದಿಲ್ಲವಷ್ಟೆ. ಮದ್ಯಪಾನದ ನಂತರದ ಪ್ರಭಾವ ಮಾತ್ರ ತಲೆನೋವು ತರಿಸಬಹುದು. ಆದರೆ ಇದು ಪದ್ಯಪಾನವಲ್ಲವೆ? ಇಲ್ಲಿ ಹ್ಯಾಂಗ್-ಓವರ್ ಗಳು ಹಿತವಾಗಿಯೇ ಇರುತ್ತವೆ ಎಂದು ನನ್ನ ಅನುಭವ. ಪದ್ಯಪಾನದ ಪರಿಭಾಷೆ ಏನೆಂದರೆ:
          ಅತ್ರಾರ್ಯಾನುಷ್ಟುಭೌ ಸ್ಮಾಲ್ ಸ್ಯಾತ್-
          ಉಪಜಾತ್ಯಾದಯಶ್ಚ ಲಾರ್ಜ್ |
          ಮಂದಾಕ್ರಾಂತಾದಯೋ ನೈಂಟಿ
          ಪಟಿಯಾಲಾ ತು ಸ್ರಗ್ಧರಾ ||

          🙂

          • ವಾಹ್! ಬೋಧಪ್ರದವಾಗಿದೆ. ‘ಪಟಿಯಾಲಾ’ ಗೊತ್ತಿರಲಿಲ್ಲ.

          • ಕಂದವು ತ್ರಿಪದಿಯು ಛಂದದ ಷಟ್ಪದಿ
            ಸಂದುವೇಂ ನಾಡ ಭಟ್ಟಿಗೆ? ಸರಿಸಮ
            ನಿಂದವೇಂ ಸೋಡಾ ಸೀಸ(ಸೆ)ಗೆ?

            🙂

    • ನಿಲ್ಲಲು ಸರಿಯಾಗಿ ಬಲ್ಲನೆ ಸೀಸೆಯ-
      ನೆಲ್ಲವ ಖಾಲಿ ಗೈದವಂ| ಸೀಸವ
      ಬಲ್ಲಿದ ಪೇಳ್ವಂ ನಿಂದಲ್ಲೇ||

  21. ಮದಿರಾಮಿವ ತೇ ಬಂಧೋ ಸ್ವಾದಂ ಸ್ವಾದಂ ಮನೋಹರಾಂ ಮೈತ್ರೀಮ್ |
    ಪ್ರಕಟೀಕರೋಮಿ ವಿವಶೋ ರಹಸ್ಯಶತಮಂತರಂಗಚಿರಗೂಢಮ್ ||

    ಸಖನೇ, ಮದಿರೆಯಂತಿರುವ ನಿನ್ನ ಮೈತ್ರಿಯನ್ನು ಸವಿದು ಸವಿದು ವಿವಶನಾದ ನಾನು ಹೃದಯದಲ್ಲಿ ಚಿರಕಾಲದಿಂದ ಅಡಗಿದ್ದ ನೂರಾರು ರಹಸ್ಯಗಳನ್ನು ಬಿಚ್ಚಿಡುವೆನು
    ( ಮದ್ಯಪಾಯಿಗಳು ತಮ್ಮ ರಹಸ್ಯಗಳನ್ನು ಕಾಪಾಡಲು ಸಾಧ್ಯವಾಗುವುದಿಲ್ಲವೆಂಬುದು ಲೋಕವಿದಿತ.)

    • ಅತ್ಯುತ್ತಮಕವಿತಾನಾಂ ವಲ್ಲೀನಾಮಿವ ವಿತಾನಭೂತಸ್ತ್ವಮ್ |
      ಯತ್ರ ಸಮಸ್ತರ್ತುಸುಮಾನ್ಯಮೇಯಸುರಭೀನಿ ಭಾಸನ್ತೇ ||

    • ಸೋದರ, ಭೃಶಮ್ ಆವರ್ಜಿತೋಸ್ಮಿ ಅನಯಾ ಕವಿತಯಾ 🙂

    • धन्यवादाः –
      साधुकारो रसज्ञानां कविताश्रवणोत्सवे ।
      पद्मासनाङ्गनापाङ्गनिरीक्षणविवर्तति ॥

  22. ಸಂಸ್ಕೃತದಲ್ಲೂ ಪದ್ಯಗಳನ್ನು ನೋಡಿ ಒಂದು ಪ್ರಯತ್ನ ..
    दण्डात्त्राणं भटेभ्योऽमितगतिगमने द्योतनेनेव काले
    यानस्थाने दयाभिर्धनगलनबिले पूरणेनेव रिक्ते ।
    यानाभावेऽपरस्य स्वरथगमनतः प्रापणेनेव देशे
    कालेऽपृष्टे च मैत्री पदि पदि कुरुते साहचर्ये हि लोके ॥

    ಕನ್ನಡಲಿಪಿ ‘ಬರಹconvert’ದಿಂದ ಬಂದದ್ದು …
    ದಣ್ಡಾತ್ತ್ರಾಣಂ ಭಟೇಭ್ಯೋಽಮಿತಗತಿಗಮನೇ ದ್ಯೋತನೇನೇವ ಕಾಲೇ
    ಯಾನಸ್ಥಾನೇ ದಯಾಭಿರ್ಧನಗಲನಬಿಲೇ ಪೂರಣೇನೇವ ರಿಕ್ತೇ |
    ಯಾನಾಭಾವೇಽಪರಸ್ಯ ಸ್ವರಥಗಮನತಃ ಪ್ರಾಪಣೇನೇವ ದೇಶೇ
    ಕಾಲೇಽಪೃಷ್ಟೇ ಚ ಮೈತ್ರೀ ಪದಿ ಪದಿ ಕುರುತೇ ಸಾಹಚರ್ಯೇ ಹಿ ಲೋಕೇ ||

    अमितगतिगमने द्योतनेन दण्डात् भटेभ्यः च त्राणम् इव, यानस्थाने धनगलिबिले रिक्ते दयाभिः पूरणेन (त्राणम्) इव, अपरस्य यानाभावे स्वरथगमनतः देशे प्रापणेन (त्राणम्) इव .. एवं मैत्री अपृष्टे काले च साहचर्ये लोके पदि पदि पदे पदे (त्राणम्) कुरुते ।

    ಭಾವಾರ್ಥ – ವೇಗವಾಗಿ ಗಾಡಿ ಓಡಿಸುವಾಗ ಯಾರೋ ಒಬ್ಬ ಪಥಿಕ ಸೂಚನೆ ಕೊಟ್ಟು ದಂಡದಿಂದ ಹಾಗೂ ಭಟರಿಂದ ರಕ್ಷಿಸಿದಂತೆ; ಗಾಡಿ ನಿಲ್ಲಿಸಿದಾಗ (ಪಾರ್ಕಿಂಗ್ ಲಾಟ್ನಲ್ಲಿ) ಮೀಟರ್ ಮುಗಿದು ಹೋದಾಗ ಯಾರೋ ಒಬ್ಬ ಚಿಲ್ಲರೆ ತುಂಬಿಸಿದಂತೆ (ಅದರಿಂದ ದಂಡ ತಪ್ಪ್ಲಿಸಿದಂತೆ); ವಾಹನವಿಲ್ಲದಿರುವನಿಗೆ ತನ್ನ ರಥದಲ್ಲಿ ಸ್ಥಾನಕೊಟ್ಟು ರೈಡ್ ಕೊಟ್ಟಹಾಗೆ — ಹೀಗೆ ಜೀವನವೆಂಬ ಸಾಹಚರ್ಯ ಮಾರ್ಗದಲ್ಲಿ ಗೆಳೆತನವು ಯಥಾಕಾಲವಾಗಿ ಬೇಡಿಕೆಯನ್ನು ಅಪೇಕ್ಷಿಸದೆ ಹೆಜ್ಜೆ ಹೆಜ್ಜೆಗೂ ರಕ್ಷಣೆಗಾಗಿ ಬರುತ್ತದೆ.

    • ತುಂಬ ಅಭಿನವ ಮತ್ತು ಅಭಿರಾಮವಾದ ಕಲ್ಪನೆ. ಬಂಧವೂ ಚೆನ್ನ
      ಆದರೆ ನಿಮ್ಮ ಅಭಿಪ್ರಾಯವು ಸುಬೋಧವಾಗದಂತಿದೆ. ಇದಕ್ಕೆ ಮುಖ್ಯಕಾರಣ ನೀವು ಈ ತೆರನಾದ ನವಕಲ್ಪನೆಗಳನ್ನು ಪದ್ಯೇತರವ್ಯಾಖ್ಯಾನಿರಪೇಕ್ಷವಾಗಿ ತಿಳಿಸುವ ಮಟ್ಟಿಗೆ ಪದ್ಯದದಲ್ಲಿಯೇ ಸಾಮಗ್ರಿಯನ್ನು ಒದಗಿಸದಿರುವುದು. ಇದಕ್ಕೆ ನಿಮ್ಮ ಪ್ರಸ್ತುತ ಪದ್ಯದ ಭಾಷಾನಿರ್ವಾಹವೂ ಕಾರಣ, ಸಂಸ್ಕೃತದ ಅನದ್ಯತನೀಯತೆಯೂ ಕೆಲಮಟ್ಟಿಗೆ ಕಾರಣ:-)

      • याथातथ्यवचोदानं परिष्कारमतेन यत् ।
        तन्मैत्रीं तनुते बुद्ध्या गुरूणां तर्जनं यथा ॥

        परन्तु ..
        मैत्री ननु समेष्वेव क्व गुरुः क्वाप्यहं गुणः ।
        चित्रं लोके कदाचित्स्यात् कृष्णकुचेलयोर्यथा ॥
        (गुणः अप्रधानः)

        ಭಾವಾರ್ಥ – (೧) ತಪ್ಪನ್ನು ತಿದ್ದಲು ಇದ್ದಿದ್ದನ್ನು ಇದ್ದಾಗ ಹೇಳುವ ಮಾತುಗಳು ಗುರುಗಳ ಬೈಗಳಂತೆ ಬುದ್ಧಿಯೊಂದಿಗೆ ಮೈತ್ರಿಯನ್ನು ಹಿಚ್ಚಿಸುವುದು.
        ಆದರೆ… (೨) ಮೈತ್ರಿಯು ಸಮಾನರಲ್ಲವೆ ಸಂದುವುದು? ಗುರುಗಳೆಲ್ಲಿ, ಬಡಪಾಯಿ ನಾನೆಲ್ಲಿ? ಹಾಗೂ ಕೆಲವೊಮ್ಮೆ ಲೊದಕಲ್ಲಿ ವಿಚಿತ್ರ ಕಾಣಿಸುತ್ತೆ ಅಲ್ಲವೆ? ಕೃಷ್ಣ ಸುದಾಮರ ಮೈತ್ರಿಯಂತೆ..

  23. उपसर्गेण धात्वर्थं … ಪದ್ಯದಿಂದ ಪ್ರೇರಿತನಾಗಿ ಒಂದು ಪದ್ಯ

    स्नेहो जीवनसंग्रामे व्याकृतावुपसर्गवत् |
    धात्वर्थमिव जीवार्थमन्यत्र नयते बलात् ||
    ಜೀವನವೆಂಬ ಯುದ್ಧದಲ್ಲಿ ಸ್ನೇಹವು ವ್ಯಾಕರಣದಲ್ಲಿ ಉಪಸರ್ಗವಿದ್ದಂತೆ. ಅಂತೆಯೇ ಧಾತುವಿನ ಅರ್ಥವನ್ನು ಉಪಸರ್ಗವು ಬೇರೆಡೆಗೆ ಕೊಂಡೊಯ್ಯುವಂತೆ ಸ್ನೇಹವು ಜೀವ(ನ)ದ ಅರ್ಥವನ್ನು ಬೇರೆಡೆಗೆ ಕೊಂಡೊಯ್ಯುತ್ತದೆ.

    ಹೇಗೆ ವಿವಿಧ ಉಪಸರ್ಗಗಳಿಂದ ಧಾತುವಿನ ಅರ್ಥವು ಬೇರೆ ಬೇರೆಯಾಗುತ್ತದೋ ಹಾಗೆಯೇ ಬೇರೆ ಬೇರೆ ರೀತಿಯ ಸ್ನೇಹದಿಂದ (ಸ್ನೇಹಿತರಿಂದ) ನಮ್ಮ ಜೀವನವು ಬೇರೆ ಬೇರೆ ಅರ್ಥವನ್ನೇ ಪಡೆಯುತ್ತದೆ

    ಮಿತ್ರ ಸುಧೀರರಂತೆ ಸ್ನೇಹ = ಎಣ್ಣೆ ಎಂಬಂತೆಯೂ ಪದ್ಯಕ್ಕೆ ಅರ್ಥ ಕಲ್ಪಿಸಬಹುದೇನೋ ಅನುಭವಸ್ಥರು ಹೇಳಬೇಕು 😛

    ಇನ್ನು ‘ಸ್ನೇಹ’ ಅಂದರೆ ಕರಿದ ತಿಂಡಿ ಬರಬೇಕಲ್ಲವೇ ?

    स्नेहो जीवनपाकेऽस्मिन् भृष्टभक्ष्यमिवाशने |
    भक्ष्यादशनमाप्नोति रसं स्नेहात्तु जीवनम् ||

    ಜೀವನದ ಪಾಕದಲ್ಲಿ ಸ್ನೇಹವು ನಿತ್ಯಾಹಾರದಲ್ಲಿ ಕರಿದ (ಭಕ್ಷ್ಯ) ತಿಂಡಿಯಿದ್ದಂತೆ. ಭಕ್ಷ್ಯದಿಂದ ಆಹಾರ ಹೇಗೆ ರಸ(ರುಚಿ)ವನ್ನು ಪಡೆಯುತ್ತದೆಯೋ ಹಾಗೆ ಜೀವನವೂ ಸ್ನೇಹದಿಂದ ರಸತ್ವವನ್ನು ಪಡೆಯುತ್ತದೆ.

    • ಪದ್ಯಗಳೆರಡೂ ಚೆಲುವಾಗಿವೆ. ಆದರೆ ಮೊದಲ ಶ್ಲೋಕದ ಪದ “ವ್ಯಾಕರಣೇ” ಎಂಬುದರ ಸ್ಥಾನದಲ್ಲಿ ವ್ಯಾಕೃತೌ” ಎಂದಾದರೆ ಛಂದಸ್ಸು ಸರಿಯಾಗುತ್ತದೆ. ಅಂತೆಯೇ ಎರಡನೆಯ ಶ್ಲೋಕದಲ್ಲಿ ಭಕ್ಷ್ಯಮಿವ ಎಂದಾಗಬೇಕು. ಇಲ್ಲವಾದರೆ ಲಿಂಗದೋಷ ಬರುತ್ತದೆ.ಹಾಗೆಯೇ ಜೀವನಃ ಎಂಬುದನ್ನು ಜೀವನಂ ಎಂದೂ ಸವರಿಸಿಕೊಳ್ಳಬೇಕು.

      • ಧನ್ಯವಾದಗಳು,
        ಮೂಲದಲ್ಲೇ ತಿದ್ದುಪಡಿ ಮಾಡಿದ್ದೇನೆ

  24. ಕಲೆಗಳೊಡನೆ ಮಾನವನ ಗೆಳೆತನದ ಕುರಿತಾದ ಪದ್ಯ

    ಕಲೆಗಳೊಡನಾಡಿತನ ಮಧುರಫಲ ಸವಿವಂತೆ
    ಹೊಳೆವ ನಕ್ಷತ್ರಗಳ ಸೊಬಗಿನಂತೆ |
    ಜಲದ ಮೇಲ್ಗಡೆಯಿರುವ ಕಮಲಪುಷ್ಪಗಳಂತೆ
    ಕಳೆಯುವುದು ಮನದಾಳದಳಲ ಸಂತೆ ||

  25. सदा विष्णुपदासक्तं कलानिधिविवर्धनम् ।
    बाष्पहारिकरं मित्रं जगत्यां को नु विस्मरेत् ॥

    ಸದಾ ವಿಷ್ಣುಪದಾಸಕ್ತಂ ಕಲಾನಿಧಿವಿವರ್ಧನಮ್ |
    ಬಾಷ್ಪಹಾರಿಕರಂ ಮಿತ್ರಂ ಜಗತ್ಯಾಂ ಕೋ ನು ವಿಸ್ಮರೇತ್ ||

    ಯಾವಾಗಲೂ ವಿಷ್ಣುವಿನ ಅರ್ಥಾತ್ ಭಗವಂತನ ಚರಣಗಳಲ್ಲಿಯೇ ಆಸಕ್ತನಾಗಿರುವ, ಕಲೆಗಳ ನಿಧಿಯಾದವನನ್ನು ಬೆಳೆಯುವಂತೆ ಮಾಡುವ, ಕಣ್ಣೀರನ್ನು ಒರೆಸುವ ಕೈಯುಳ್ಳ ಮಿತ್ರನನ್ನು(ಗೆಳೆಯನನ್ನು) ಜಗತ್ತಿನಲ್ಲಿ ಯಾರು ತಾನೇ ಮರೆಯುತ್ತಾರೆ?

    ಯಾವಾಗಲೂ ಆಗಸದಲ್ಲೇ ಅಂಟಿಕೊಂಡಿರುವ, ಚಂದ್ರನನ್ನು ಬೆಳೆಯುವಂತೆ ಮಾಡುವ, ಹಬೆಯನ್ನು ಕರಗಿಸುವ ಕಿರಣಗಳನ್ನುಳ್ಳ ಮಿತ್ರನನ್ನು(ಸೂರ್ಯನನ್ನು) ಯಾರು ತಾನೇ ಮರೆಯುತ್ತಾರೆ?

    ಮಿತ್ರಂ ಮಿತ್ರ ಇವ ಎಂಬ ಶಬ್ದಶಕ್ತ್ಯುದ್ಭವವಾದ ಉಪಮಾಧ್ವನಿಯು ಇಲ್ಲಿದೆ 🙂

    • ಇದು ನಿಜವಾಗಿ ಪ್ರತಿಭೆ ಮತ್ತು ಪಾಂಡಿತ್ಯಗಳ ಸಮಾಹಾರಫಲ. ಉಪಮಾಲಂಕಾರವನ್ನು ಧ್ವನಿತರೂಪದಲ್ಲಿ ಬಳಸುವ ಅದ್ಭುತರಚನೆಯನ್ನು ಮಾಡಿದುದಕ್ಕಾಗಿ ಧನ್ಯವಾದಗಳು. ಈ ತೆರನಾದ ನವನವೀನಪ್ರಕಲ್ಪಗಳು ಪದ್ಯಪಾನಿಗಳಿಗೆ ಹೊಸಹೊಳಹನ್ನು ನೀಡಲಿ.

    • ತುಂಬಾ ಚೆನ್ನಾಗಿದೆ. ನಿಮ್ಮ ಪದ್ಯ ನೋಡಿದೊಡನೆ “तस्मिन् काले नयनसलिलं योषितां खण्डितानां…” ಜ್ಞಾಪಕಕ್ಕೆ ಬಂತು.

  26. आकर्ण्य जीवने मैत्री पायसे शर्करा यथा ।
    मधुमेही स्मयेनेव ब्रूते देहि वचोऽन्तरम् ॥

    ಭಾವಾರ್ಥ – ಪಾಯಸದಲ್ಲಿ ಸಕ್ಕರೆಯಂತೆ ಜೀವನದಲ್ಲಿ ಮೈತ್ರಿಯು ಎಂಬ ಮಾತನ್ನು ಕೇಳಿ ಮಧುಮೇಹರೋಗದಿಂದ ಅಭಿತಪ್ತನು ಮೆಲ್ಲನೆ ನಗುತ್ತ “ಬೇರೆ ಉಪಮೆ ಕೊಡಪ್ಪ” ಅಂತ ಹೇಳಿದ.

    • पायसे मारिचं पश्यन् मेही तुष्टः कथं भवेत्?
      वचोन्तरं न, वक्रत्वात् पाकं भिन्नं स याचते॥

      • वर्तन्ते शर्करास्थाने माधुर्यस्य विकल्पकाः ।
        मैत्र्या नास्ति तथाभूता जीवने तोषकारकाः ॥

        (ಸಕ್ಕರೆಯ ಸ್ಥಾನದಲ್ಲಿ ಬೇರೆ ಮಾಧುರ್ಯಕಾರಕಗಳು ಇವೆ (ಸಾಕರೀನ್ ಇತ್ಯಾದಿ). ಆದರೆ ಹಾಗೆ ಜೀವನದಲ್ಲಿ ಮೈತ್ರಿಯಂತೆ ಸಂತೋಷಕೊಡುವ ವಿಕಲ್ಪಗಳಿಲ್ಲ.)

        (अपि च भवतः उत्तरे किंचित् परिष्कारः अपेक्षितः इति मन्ये – याच् धातुः आत्मनेपदी इति मम स्मरणम् । अतः याचते इति भवेत् । मेही इत्यस्य अन्ते दैर्घ्यम् अपेक्षितम् । मधुमेहः अस्य अस्ति इति मधुमेही । छन्दोभङ्गः तु भवति तेन ।)

        • ಪ್ರಿಯ ನರೇಶರೇ!
          ( ಹೀಗೆ ಟಂಕಿಸುವಾಗಲೇ ನನಗೆ ಇಲ್ಲಿ ನರೇ + ಶರೇ ಎಂಬ ಸಭಂಗಶ್ಲೇಷವೂ ಹೊಳೆಯುತ್ತಿದೆ:-)
          ಪ್ರಸಾದು ಅವರ ಪದ್ಯದಲ್ಲಿದ್ದ ವ್ಯಾಕರಣಪ್ರಮಾದಗಳನ್ನು ತಿದ್ದಿದುದಕ್ಕಾಗಿ ಧನ್ಯವಾದಗಳು) ಅಂತೆಯೇ ನಿಮ್ಮ ಶ್ಲೋಕವೂ ಸೊಗಸಾಗಿದೆ.ಇಲ್ಲಿಯ ದೃಷ್ಟಾಂತವೂ ನವೀನವಾಗಿ ಬಗೆಸೆಳೆದಿದೆ.

      • Thank you Sri Naresh. I have effected corrections as indicated. Hope it is better now. Your sanskrit gadya is as good as your padya. I would be happy to see how you would rephrase my verse. I am already happy that my fledgling sanskrit versification is sensible.

      • ಪ್ರಸಾದು ಸರ್
        ತುಷ್ಟಃ ಅಂತ ಆಗಬೇಕು ತುಷ್ಟಂ ಅಲ್ಲ. ಮಧುಮೇಹಿ ನೀರೋಗನಾಗಿದ್ದವನು ರೋಗಿಯಾದನೇ ಹೊರತು ಪುರುಷನಾಗಿದ್ದವನು ನಪುಂಸಕನೂ ಆಗಲಿಲ್ಲವಷ್ಟೆ.

      • LoL
        शकारान्ताख्य धीमद्भ्यां (नरेश, गणेश)
        लिङ्गभेदो न दर्शितः|
        दर्शितः स त्वया किन्तु
        शकाराद्याख्य धीमता|| (शङ्कर)
        ಕೃತಜ್ಞತೆಗಳು ಶಂಕರ್ ಸರ್. ಮೂಲದಲ್ಲೇ ತಿದ್ದಿದ್ದೇನೆ.

  27. ಎರಡು ದಡಗಳನಡುವೆ ಹರಿವ ನದಿಯೊಲು ತಿಳಿಯ
    ಸರಿಮನದ ಗೆಳೆತನವು ಸೇರೆ ಸಾಗರದೊಡಲ
    ತೆರೆಮರೆಯೆ ತಾವಳಿವ ದಡದವೊಲು ಗೆಳೆಯರೈ ।
    ಎರಡು ಹಳಿಗಳಮೇಲೆ ಸರಿವ ಬಂಡಿಯು ತಿಳಿಯ
    ಸರಿಸಮದ ಗೆಳೆತನವು ಮುಗಿದಿರಲು ಪಯಣವದು
    ಸರಿಯದೇ ತಾವುಳಿವ ಹಳಿಯವೊಲು ಗೆಳೆಯರೈ ।।

    • ಆದರಣೀಯ ಉಷಾ ಉಮೇಶರಿಗೆ ನಮಸ್ಕಾರ.
      ನಿಮ್ಮ ಪ್ರಕೃತಪದ್ಯದ ವಿಮರ್ಶೆಯ ಮುಲಕ ನಾನು ಪದ್ಯಪಾನಿಗಳೆಲ್ಲರಿಗೆ ಕೆಲವೊಂಡು ಸಂಗತಿಗಳನ್ನು ಅವಗಾಹನೆಗೆ ತರುತ್ತಿದ್ದೇನೆ. ದಯಮಾಡಿ ಎಲ್ಲರೂ ಗಮನಿಸಬೇಕಾಗಿ ವಿನಂತಿ.

      ನಿಮ್ಮ ಸದ್ಯದ ಪದ್ಯಬಂಧದಲ್ಲಿ ಪಂಚಮಾತ್ರಾಗಣಗಳ ಪದಗಳು ಯಥಾಗಣವಾಗಿ, ಅಂದರೆ ಲೆಕ್ಕಕ್ಕೆ ಲೆಕ್ಕವೆಂಬಂತೆ ಮತ್ತೆ ಮತ್ತೆ ಬಂದ ಕಾರಣ ಪದ್ಯಗತಿಯಲ್ಲಿ ಯಾಂತ್ರಿಕತೆ ಹೆಚ್ಚಾಗಿದೆ. ಸೇಡಿಯಾಪು ಅವರು ಹೇಳುವಂತೆ ಛಂದಃಪದಗತಿ (ಮಾತ್ರೆಗಳಿಂದಾದ ಗಣಗಳ ನಡಿಗೆ ಅಥವಾ ಅವುಗಳ ಗತಿ) ಹಾಗೂ ಭಾಷಾಪದಗತಿ (ಪದ್ಯದಲ್ಲಿ ಬಳಕೆಯಾಗುವ ಭಾಷೆಯ ಪದಗಳಲ್ಲಿ ತೋರುವ ಗುರುಲಘುಮಯವಾದ ಅಕ್ಷರಗಳಿಂದ ಉಂಟಾಗುವ ಮಾತ್ರಾಗಣಗಳ ಗತಿ) ಒಟ್ಟಾಗಿ ಒಂದು ಹದದಲ್ಲಿ ಬರಬೇಕು. ಆಗಲೇ ಇವೆರಡರ ಸಮಾಯೋಗವಾದ ಪದ್ಯಗತಿಯು ಚೆಲುವಾಗುತ್ತದೆ. ಇಲ್ಲವಾದರೆ ಛಂದಃಪದಗತಿಯ ಎಣೆಮೀರಿದ ಅನುಸರಣದಿಂದ ಪದ್ಯಗತಿಯಲ್ಲಿ ಯಾಂತ್ರಿಕತೆಯೂ, ಭಾಷಾಪದಗತಿಯ ಬಗೆಗೇ ಮಿತಿಮೀರಿ ಗಮನವೀಯುವುದರಿಂದ ಯತಿಭಂಗ ಮತ್ತು ಛಂದೋಗತಿಭಂಗಗಳೇ ಒದಗಿ ಇಡಿಯ ಪದ್ಯಗತಿಗೇ ಸಂಚಕಾರಬರುವುದೂ ಉಂಟು. ಇವುಗಳ ಪೈಕಿ ಎರಡನೆಯದು ಉಂಟುಮಾಡುವ ದೋಷಕ್ಕಿಂತ ಮೊದಲನೆಯದರ ಪ್ರಮಾದ ಅಲ್ಪವಾದದ್ದು. ಅನೇಕರಿಗೆ ಪದ್ಯರಚನಾಕಾಲದಲ್ಲಿ ಈ ಬಗೆಯ ಸಮಸ್ಯೆಗಳು
      ತಲೆದೋರುತ್ತವೆ. ಇದೇ ರೀತಿಯ ಕ್ಲೇಶದಿಂದ ಅನುಷ್ಟುಪ್ ಶ್ಲೋಕದ ರಚನೆಯಲ್ಲಿಯೂ ಹಲವರಿಗೆ ಗತಿಸೌಷ್ಠವವು ಕುದುರುವುದಿಲ್ಲ. ಹೀಗಾಗಿಯೇ ಯಥಾಕ್ಷರಗುರುಲಘುನಿಯಮವುಳ್ಳ ಶಾರ್ದೂಲವಿಕ್ರೀಡಿತ, ಮಂದಾಕ್ರಾಂತಾ, ಮಾಲಿನೀ ಮುಂತಾದ ವರ್ಣವೃತ್ತಗಳಿಗಿಂತ ಹೆಚ್ಚಿನ ರಚನಾಸೌಲಭ್ಯವುಳ್ಳ ಕಂದ, ಚೌಪದಿ, ಷಟ್ಪದಿ ಮುಂತಾದ ಮಾತ್ರಾಜಾತಿಯಬಂಧಗಳು ಶ್ರುತಿಕಟುವಾಗಿ ನಿರ್ವಹಿಸಲು ಕ್ಲೇಶಾವಹವೆನಿಸುತ್ತವೆ. ಹೀಗೆಯೇ ಅತ್ಯಂತ ಸುಲಭದ ಛಂದಸ್ಸೆಂದು ಹೆಸರಾದ ಅನುಷ್ಟುಪ್ ಶ್ಲೋಕವೂ ತೊಡಕಾಗುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಖ್ಯವಿಧಾನವೆಂದರೆ ಮಹಾಕವಿಗಳ ಗತಿಸುಭತೆಯುಳ್ಳ ಪದ್ಯಗಳನ್ನು ಗಮನವಿರಿಸಿ ಛಂದೋಧಾಟಿಗೆ ಅನುಸಾರವಾಗಿ ಗಟ್ಟಿಯಾಗಿ ಮತ್ತೆ ಮತ್ತೆ ಓದಿಕೊಳ್ಳುವುದೇ.

      • ನಮಸ್ಕಾರಗಳು ಗಣೇಶ್ ಸರ್,
        ಈ “ಮಂದ ಶಿಶು”(ಒಂದು ವರ್ಷವಾದರೂ ಸರಿ ಪದವಿಡಲು ಬರದ)ವನ್ನು ಸಲಹುತ್ತಿರುವ ನಿಮಗೆ ನಾನು ಚಿರಋಣಿ. ನಿಮ್ಮ ಸಲಹೆಗಳನ್ನು ಸಂಪೂರ್ಣ ಕಾರ್ಯರೂಪಕ್ಕೆ ತರುವ ಶಕ್ತಿ ನೀಡೆಂದು, ಇಂದು ಶಾರದೆಯನ್ನ ಬೇಡಿಕೊಂಡಿದ್ದೇನೆ.

  28. ಗುರುಗೆ ಲಘುಬಲವು
    ಕರಕದು ರೇಖೆಯು
    ವರವದು ಹೃದಯಕೆ ಬಾಳಿನಲೀ ।
    ಮರೆವುದು ಮೈಮನ
    ಅರಿವಿನ ಮೈತ್ರಿಗೆ
    ಸರಿಸಮ ಲಯಶೃತಿ ಬದುಕಿನಲೀ ।।

  29. दूरस्थैर्मे हितमतिपरैर्दूरवाण्या भणित्वा
    यन्त्रस्यादो वचनकरणं स्थापयित्वा निधाने ।
    दृष्ट्वा संगं विनिहितकृतं कार्यपूर्तौ समस्थं
    मन्ये तद्वन्मम गतिरपि स्यात् कदाचिद् दिनान्ते ॥

    ಇನ್ನೊಂದು ಆಧುನಿಕ ಅನುಭವವನ್ನು ಕುರಿತು ಮಾಡಿದ ಪ್ರಯತ್ನ

    ಅನ್ವಯದೊಂದಿಗೆ ಭಾವಾರ್ಥ –
    ದೂರಸ್ಥೈಃ ಹಿತಮತಿಪರೈಃ ( ದೂರದಲ್ಲಿರುವ ಹಿತಚಿಂತಕರೊಂದಿಗೆ ) ದೂರವಾಣ್ಯಾ ಭಣಿತ್ವಾ ( ಮಾತನಾಡಿ ) ಯಂತ್ರಸ್ಯ ಅದಃ ವಚನಕರಣಂ ( ದೂರವಾಣೀಯಂತ್ರದ ಮಾತನಾಡುವುದಕ್ಕಾಗಿ ಉಪಯೋಗಿಸುವ ಈ ಭಾಗವನ್ನು ) ನಿಧಾನೇ ಸ್ಥಾಪಯಿತ್ವಾ (ಅದರ ಆಶ್ರಯಸ್ಥಾನದಲ್ಲಿ ಇಟ್ಟು ) ಕಾರ್ಯಪೂರ್ತೌ (ಮಾತಿನ ಕೆಲಸ ಮುಗಿದ ವೇಳೆಗೆ ) ವಿನಿಹಿತಕೃತಂ ಸಂಗಂ ದೃಷ್ಟ್ವಾ ( ಫೋನ್ ಸ್ವಸ್ಥಾನದಲ್ಲಿ ಸಂಗ ಪಡೆದದ್ದನ್ನು ಕಂಡು) — ಕದಾಚಿತ್ ದಿನಾನ್ತೇ ಮಮ ಅಪಿ ಗತಿಃ ತದ್ವತ್ ಸ್ಯಾತ್ .. (ಯಾವತ್ತೋ ಒಂದು ದಿನ ಕಲಸಮುಗಿದಾಗ ನನ್ನ ಗತಿಯೂ ಆ ಟೆಲಿಫೋನಿನ ಹಾಂಡ್ ಸೆಟ್ ನಂತೆ ಹಿತಚಿಂತಕರೊಂದಿಗೆ ಸ್ವಸ್ಥಾನ ಕಾಣುವುದೇನೋ) ಮನ್ಯೇ ( ಎಂದು ಯೋಚಿಸಿದೆ ).

    • ನಿಮ್ಮ ಕಲ್ಪನೆ ಸೊಗಸಾಗಿದೆ. ಆದರೆ ಈ ಮುನ್ನ ನೀವು ರಚಿಸಿದ ಪದ್ಯವೊಂದರ ಹಾಗೆಯೇ ಇಲ್ಲಿಯೂ ಪಾರಿಭಾಷಿಕಪದಗಳ ತೊಡಕು ತಲೆದೋರಿದೆ.ಮುಖ್ಯವಾಗಿ ನೀವು ನಿಮ್ಮದೇ ಪಾರಿಭಾಷಿಕಪದವ್ಯವಸ್ಥೆಯನ್ನು ಮಾಡಿಕೊಂಡಲ್ಲಿ ಪದ್ಯವು ತೀರ ವ್ಯಾಖ್ಯಾಸಾಪೇಕ್ಷವಾಗುವುದು.ಇದು ಕಾವ್ಯಕ್ಕೆ ಹಿತವಲ್ಲ. ಉದಾಹರಣೆಗೆ ರಿಸೀವರ್ ಎಂಬುದನ್ನು ದೇಶಭಾಷೆಗಳಲ್ಲಿ ಗ್ರಾಹಕವೆಂದು ಹೇಳುತ್ತಾರೆ. ಇದು ಯುಕ್ತವೂ ಆಗಿದೆ. ಇದನ್ನು ತಾವು ವಚನಕರಣ ಎಂದು ಹೆಸರಿಸಿದ್ದೀರಿ.ಇದು ತಾಂತ್ರಿವಾಗಿ ತಪ್ಪಲ್ಲವಾದರೂ ಲೋಕದೃಷ್ಟ್ಯಾ ಕಷ್ಟಕಾರಿ.ಹೀಗಾಗಿ ಗ್ರಾಹಕ ಎಂಬುದನ್ನೇ ಬಳಸಾಬಹುದು.ಇಂತಹ ಸಿದ್ಧಶುದ್ಧಪರಿಭಾಷೆಯನ್ನು ಕೂಡಿದಮಟ್ಟಿಗೂ ಬಳಸಿದರೆ ಎಲ್ಲರಿಗೂ ಸುಬೋಧವಾದೀತು.

  30. ಒಂದು ಸಲ ಪ್ರಕಟವಾದ ಬರಹದಲ್ಲಿ, ಓದುಗರು ಸೂಚಿಸಿದ, ಅಥವಾ ಲೇಖಕರಿಗೇ ತೋರಿದ ತಿದ್ದುಪಡಿಗಳನ್ನು, ಮೊದಲಿನ ಬರಹದಲ್ಲಿ ಅಳಿಸದೆ, ಬೇರೆಯಾಗಿ ಮಾಡಿದರೆ, ಲೇಖಕರ, ಓದುಗರ ಯೋಚನಾಸರಣಿ, ಸರಿತಪ್ಪುಗಳು ಮುಂದಿನ ಓದುಗರಿಗೆ ಸ್ಪಷ್ಟವಾಗಿ, ಊಹೆಗೆ ಎಡೆಗೊಡದೆ ತಿಳಿಯುತ್ತವೆ. ಇದರಿಂದ ಕಲಿಕೆಗೆ ಸಹಾಯವಾಗುತ್ತದೆ.

    ಈ ರೀತಿಯ ವೆಬ್ ಸಂಭಾಷಣೆಯ ಶಿಷ್ಟಾಚಾರವನ್ನು ಜಾಲತಾಣಗಳಲ್ಲಿ ಅನೇಕ ಕಡೆ ನೋಡಬಹುದು. ಚಿಕ್ಕ ತಿದ್ದುಪಡಿಯಾದರೆ ಹಳೆಯ ಪದಗಳ ನಡುವೆ ಒಂದು ಅಡ್ಡಗೆರೆ ಎಳೆಯುತ್ತಾರೆ. ಏನಾದರೂ ಮಾಹಿತಿ ತಪ್ಪಾಗಿದ್ದರೆ ಅದನ್ನು Update: ಎಂದು ಸ್ಪಷ್ಟವಾಗಿ ಸೂಚಿಸಿ ಎಲ್ಲಿ, ಏನು ಬದಲಾವಣೆ ಆಗಿದೆ ಎಂದು ಬರೆಯುತ್ತಾರೆ.

  31. I have not maintained AdiprAsa as it is anuShTubh.
    ಬಂಧುಗಳೊಳು ಬಾಂಧವ್ಯಂ ತಾನಿರಲ್ ಮಿತ್ರಮೈತ್ರಿವೋಲ್|
    ಮಿತಮಿರ್ದೊಡೆ ಸಂವೇದಂ ಸಲ್ಗುಂ ವಿಷಯ-ಕಾಲದೊಳ್||
    ತಮ್ಮಂತಿರ್ಪುವು ಮೋಡಂಗಳ್ ದಿಶಾಂತರದೊಳೆಂದಿಗುಂ|
    ಮಳೆಯಂ ಕರೆಯಲ್ಕಷ್ಟೆ ಕ್ಷಣಮಾತ್ರಮೆ ಸೇರ್ವವೋಲ್||

  32. ಪದ್ಯಪಾನಿಗಳೆಲ್ಲರಿಗೂ ನನ್ನ ನಮಸ್ಕಾರ.
    ಈಗೀಗಲೆ ಪದ್ಯದ ರೂಪುರೇಖೆಗಳನ್ನು ಕಲಿಯುತಲಿರುವೆ, ಅದರ ಪ್ರಯತ್ನವೇ ಇಲ್ಲಿನ ಪದ್ಯ
    ವಾರ್ಧಕ ಷಟ್ಪದಿಯಲ್ಲಿ ಪ್ರಯತ್ನ: ಪದ ವ್ಯಾಕರಣ ದೋಷಗಳನ್ನು ತಿಳಿಸಿ ನನಗೆ ಸಹಾಯ ಮಾಡಬೇಕಾಗಿ ವಿನಂತಿ

    ******************************************************************
    ಜೀವನದ ವೃಕ್ಷದಲಿ ಮಧುರಫಲದಂತಿರುವೆ
    ಸಾಗರದದಲೆಯಲಿಹ ಶ್ರೀರಾಗದಂತಿರುವೆ
    ಸ್ನೇಹವೆಂಬಾಲಯದಿ ಮಣಿದೀಪದಂತಿರುವೆ ನಾ ಪಡೆದ ವರಕೀರ್ತಿ ನೀ

    ಹೊಸತೊಂದು ಬಾಳನ್ನು ನನಗಾಗಿ ಸೃಷ್ಟಿಸುವೆ
    ಗೆಳೆತನದ ಸಿರಿಸುರಿದು ರಂಜಿಸುವೆ ರಕ್ಷಿಸುವೆ
    ಎದೆಯಲಿಹ ನಂಜುಂಡಿ ಸುಖಸುಧೆಯ ಚಿಮ್ಮಿಸುವೆ ನನಬಾಳ ಮುಮ್ಮೂರ್ತಿ ನೀ

    *************************************************************************

    • ಕಮಲಪಾದರಿಗೆ ಪಾನಗೋಷ್ಠಿಗೆ ಸ್ವಾಗತ. ಕೈ ತುಸು ಕುದುರಿರುವುದು ಸ್ಪಷ್ಟವಿದೆ. ನಿಯತವಾಗಿ ಕವನಿಸಿ. In light vein ಹೇಳಬಹುದಾದರೆ, ಇಲ್ಲೊಂದು ಉರ್ದುಪದ ನುಸುಳಿದೆ – ನಂಜುಂಡಿ 🙂 ಕ್ಷಮಿಸಿ, ಅದು ಟೈಪೊ ಮಾತ್ರ.
      ಸಾಗರದದಲೆಯಲಿಹ ತಪ್ಪು. ಸಾಗರದಿನಲೆಯೊಳಿಹ ಎಂದು ಸವರಬಹುದು.
      ಮುಮ್ಮೂರ್ತಿ ಎಂದರೇನು?
      ಮುಖ್ಯವಾದ ಕೊರತೆಯೆಂದರೆ ಆದಿಪ್ರಾಸ. ಇಂತಹ ಪ್ರಯತ್ನವನ್ನು homework ಆಗಿ ಮಾಡಿ. ಲಕ್ಷಣಶುದ್ಧವಾದ ಪದ್ಯಗಳನ್ನು ಇಲ್ಲಿ ಹಾಕಿ. ಇಷ್ಟು ಸಿದ್ಧಿಸಿರುವಾಗ, ಪ್ರಾಸವೇನೂ ತ್ರಾಸವಲ್ಲ. ಹೆಚ್ಚು ಬದಲಿಸದೆ ನನಗೆ ತಿಳಿದಂತೆ ತಿದ್ದಿದ್ದೇನೆ. ನೀವು ಬೇರೆ ಪ್ರಾಸವನ್ನಿಟ್ಟುಕೊಂಡು ಪ್ರಯತ್ನಿಸಿ.
      ಜೀವನದ ವೃಕ್ಷದಲಿ ಮಧುರಫಲದಂತಿರುವೆ
      ಯಾವ ಸಾಗರದಲೆಯ ಸಿರಿರಾಗದಂತೆ ವೋಲ್
      ಕಾವ ನೇಹಾಲಯದಿ ಮಣಿದೀಪದಂತಿರುವೆ ನಾ ಪಡೆದ ವರಕೀರ್ತಿ ನೀ|
      ತೀವಿ ನಾವೀನ್ಯವನು ಬಾಳೆನ್ನ ಬೆಳಗಿದೈ
      ಗೈವೆ ರಂಜನೆಯ ನೀ ರಕ್ಷೆಯನು ನೀಡುತ್ತೆ
      ಕೋವಿದನೆ ನಂಜುಂಡು ಸುಖಸುಧೆಯ ಚಿಮ್ಮಿಸುವೆ ನನಬಾಳ ಮುಮ್ಮೂರ್ತಿ ನೀ||

      • ಪ್ರಸಾದುರವವಿರಿಗೆ ನನ್ನ ನಮನ.
        ನೀವು ತೋರಿದ ದೋಷ ಗುರುತಿನಲ್ಲಿಟ್ಟುಕೊಳ್ಳುವೆ. ನಿಮ್ಮ ತಿದ್ದುಪಡಿ ತುಂಬಾ ಚೆನ್ನಾಗಿದೆ. ಮತ್ತೊಮ್ಮೆ ಪ್ರಯತ್ನಿಸಿ ನಾನೂ ಆದಿಪ್ರಾಸ ಬರುವಂತೆ ನೋಡುವೆ. ನೀವು ತೋರಿದಂತೆ ನಾನು ಆದಿಪ್ರಾಸದ ಪ್ರಯೋಗ ಮಾಡಿರಲಿಲ್ಲ.

        ಇಲ್ಲಿ ಮುಮ್ಮೂರ್ತಿ ಎಂದರೆ ತ್ರಿಮೂರ್ತಿಗಳು – ಕೊನೆಯ ಮೂರು ಸಾಲುಗಳಲ್ಲಿ ಅವರ ಗುಣಗಳನ್ನು ತಿಳಿಸಿ ಮುಮ್ಮೂರ್ತಿ ಎಂದು ಹೋಲಿಸಿದೆ.
        ಇನ್ನೂ ವೀಡಿಯೋಗಳನ್ನು ನೋಡುತ್ತ ಕಲಿಯೋದು ಸಾಕಷ್ಟಿದೆ, ಕಲಿತು ನಾ ಪ್ರಯತ್ನಿಸೋದು ಇನ್ನಷ್ಟಿದೆ. ಸಾಧ್ಯವಾದಷ್ಟು ಮನೆಪಾಟ ಮಾಡೋದಿದೆ. ಇನ್ನೂ ಒಳ್ಳೆಯ ಪದ್ಯ ರಚಿಸಲು ನಿಮ್ಮ ಸಹಕಾರ ಬೆಕಾಗಿದೆ…. 🙂

      • ಆದಿ ಪ್ರಾಸ ಬರುವಂತೆ ಸವರಿಸಿ ಬರೆದಿರುವೆ, ಸರಿಯಾಗಿದೆಯೆ ??
        —————————————————————————-
        ಗಿಡವೆಂಬ ಜೀವನದಿ ಚಿಗುರಿರುವ ಹೂವಂತೆ
        ಕಡಲಿನೊಳ್ ಅಲೆಯಲಿಹ ಸಿರಿರಾಗವೆಂಬಂತೆ
        ಸುಡುಬೆಂಕಿಯಂತೆಯೇ ಶುದ್ಧವೀ ಗೆಳೆತನವು ನಾ ಪಡೆದ ವರಕೀರ್ತಿ ನೀ
        ಪಡೆದಿರುವೆ ನಿನ್ನಿಂದ ನವ್ಯ ನೂತನ ಶಾಂತಿ
        ನುಡಿಯದೆಯೆ ನುಡಿಸುವೆಯೆ ನನ್ನ ಜೀವನತಂತಿ
        ಕೆಡುಕೆಂಬ ನಂಜುಂಡು ತರುವೆ ನೀ ಸುಖ-ಶಾಂತಿ ನನಬಾಳ ಮುಮ್ಮೂರ್ತಿ ನೀ
        ———————————————————————————-

        • ಚಾತಕಂಗಳವೋಲೆ ಕಂಗಳ್
          ಕಾತರದೆ ಕಾದಿರ್ಪುವಾಪ್ತನ
          ಶೀತಕಿರಣನ ಪೋಲ್ವ ವದನದ ದರ್ಶನಕ್ಕಿಂದು

          ಕಮಲಪಾದರಿಗೆ ಸ್ವಾಗತ. ತಮ್ಮ ಪದ್ಯ ಚೆನ್ನಾಗಿದೆ.ಇದರಲ್ಲಿ ರುಪಕ ಮತ್ತು ಉಪಮೆ ಬೆರೆತು ಬಂದಿವೆ. ಉದಾಹರಣೆಗೆ “ಗಿಡವೆಂಬ ಜೀವನದಿ” ರೂಪಕವಾದರೆ, “ಚಿಗುರಿರುವ ಹೂವಂತೆ” ಉಪಮೆಯಾಯಿತು. ಮುಂದೆ ಕವನಿಸುವಾಗ ಈ ಕಲಬೆರಕೆಯನ್ನ್ಯ್ ತಪ್ಪಿಸಿದರೆ ಒಳಿತು ಅಂತ ನನ್ನ ಅಭಿಪ್ರಾಯ.

          “ಚಿಗುರಿರುವ ಹೂವಂತೆ”- ಹೊವು ಚಿಗುರುವುದಿಲ್ಲವಲ್ಲ?

          “ಕಡಲಿನೊಳ್ ಅಲೆಯಲಿಹ” – ಸಂಧಿ ಮಾಡಬೇಕು. ಮಾಡಿದರೆ ಒಂದು ಮಾತ್ರೆ ಕಡಮೆಯಾಗುತ್ತೆ. ನೋಡಿ ಸರಿಮಾಡಿ.

          ಸಿರಿರಾಗ- ಅರಿಸಮಾಸ.

          • ಶ್ರೀಕಾಂತರಿಗೆ ನನ್ನ ನಮಸ್ಕಾರಗಳು.
            ನೀವು ಸೂಚಿಸಿದ ತಪ್ಪುಗಳನ್ನು ತಿದ್ದಿ ಮತ್ತೆ ಬರದಿರುವೆ: ದಯೆಮಾಡಿ ಮತ್ತೊಮ್ಮೆ ಮೇಲ್ನೋಟ ಹಾಯಿಸಿ:
            —————————————————-
            ಗಿಡದಂತಹ ಬಾಳೊಳು ಅರಳಿರುವ ಹೂವಂತೆ
            ಕಡಲಿನೊಳಲೆಗಳಲಿಹ ಶ್ರೀರಾಗವೆಂಬಂತೆ
            ಸುಡುಬೆಂಕಿಯಂತೆಯೇ ಶುದ್ಧವೀ ಗೆಳೆತನವು ನಾ ಪಡೆದ ವರಕೀರ್ತಿ ನೀ
            ಪಡೆದಿರುವೆ ನಿನ್ನಿಂದ ನವ್ಯ ನೂತನ ಶಾಂತಿ
            ನುಡಿಯದೆಯೆ ನುಡಿಸುವೆಯೆ ನನ್ನ ಜೀವನತಂತಿ
            ಕೆಡುಕೆಂಬ ನಂಜುಂಡು ತರುವೆ ನೀ ಸುಖ-ಶಾಂತಿ ನನಬಾಳ ಮುಮ್ಮೂರ್ತಿ ನೀ

    • ಪ್ರಾಸ ಚೆನ್ನಾಗಿ ಬಂದಿದೆ. ಆದರೆ ಈ ಕೆಲವು ದೋಷಗಳಿವೆ:
      1. ಹ ಬಾಳೊಳು – ಲಗಂ
      2. ಬಾಳೊಳು ಅರಳಿರುವ – ವಿಸಂಧಿದೋಷ
      3. ಕಡಲಿನೊಳಲೆಗಳಲಿಹ – ಇಷ್ಟೊಂದು ಲಘುಗಳು ಹಿತವಾಗಿರವು
      ಭಾಷೆಯನ್ನು ಹೀಗೆ ತುಸು ರೂಢಿಸಬಹುದು:
      ಗಿಡಮೆಂಬ ಬಾಳಿನೊಳಗರಳಿರುವ ಹೂವಿನೊಲ್
      ಕಡಲಿನಲೆಯೊಳಗಿರ್ಪ ಶ್ರೀರಾಗಮೆಂಬವೊಲ್
      ಸುಡುವಗ್ನಿದಿವ್ಯದೊಲು ಶುದ್ಧವೀ ಗೆಳೆತನವು ನಾ ಪಡೆದ ವರಕೀರ್ತಿ ನೀ|
      ಪಡೆದಿಹೆನು ನಿನ್ನಿಂದೆ ನವ್ಯನೂತನಶಾಂತಿ
      ನುಡಿಯದೆಯೆ ನುಡಿಸೆ ನೀ ನನ್ನ ಜೀವನತಂತಿ
      ಕೆಡುಕೆಂಬ ನಂಜುಂಡು ತರುವೆ ನೀ ಸುಖ-ಶಾಂತಿ ನನಬಾಳ ಮುಮ್ಮೂರ್ತಿ ನೀ||

      ನಮ್ಮೆಲ್ಲರ ಸಹಕಾರ ನಿಮಗೆ ಯಾವತ್ತೂ ಇದೆ.

  33. ಬಿಡದೆ ಯತ್ನಿಸು ಮೈತ್ರಿ ಕೊನರುವುದದೊಂದೊಮ್ಮೆ
    ಸೆಡವಿನಿಂದಿರಲೇನು ನೆರೆಯಾತನು|
    ಸೊಡರಿನೊಲ್ ಚಿಗುರದೇಂ ಜೀವಜಲ ತೊಯ್ಸಲ್ ಕೊ-
    ರಡಿನಂಥ ಕಾಂಡದಿಂ ನವಪಲ್ಲವಂ||

    ಆದರೆ,
    ಕಡೆಗಾರೆ ಮಿಡಿಯದಿರ್ದೊಡಮಾತ ವಡೆಯ ನೀಂ
    ಕೊಡಮಾಡು ನಿಡುಸುಯ್ದು ಭಡವನಿಂಗಂ|
    ಒಡನಾಟಕೆಡೆಯನೇ ಕೊಡದಾತ ಕಡೆಯುಸಿರ-
    ನಡಿಗಡಿಗೆ ಬಿಡುತಿರನೆ – ಹಡಪರಂಪ||

    ವಿಡಂಬನಪದ್ಯದಲ್ಲಿ ಸಿಂಹಪ್ರಾಸಪುರಸ್ಸರವಾದ ’ಡ’ಕಾರಪ್ರಾಸವನ್ನು ಪ್ರತಿಗಣದಲ್ಲೂ ಕಾಯ್ದುಕೊಂಡಿದ್ದೇನೆ; ಅದಕ್ಕಾಗಿ ಅಂಕಿತವನ್ನೂ ತಿರುಚಿದ್ದೇನೆ 😉

  34. ನೀರಿನಲಿ ತೇಲುವ ಗುಳ್ಳೆಗಳಂತೆ ಸಾ-
    ಗರವ ದಾಟಲು ಇರುವ ಹರಿಗೊಲಿನಂತೆ
    ಹೂರಣದಲಿ ಸಿಹಿಯಾದ ಬೆಲ್ಲ ಬೆರೆತಂತೆ
    ಇರುವೆ ನೀ ಗೆಳೆಯ ಎಲೆಮರೆ ಕಾಯಂತೆ

    • ನೀರಿನ ಗುಳ್ಳೆ ಅಶಾಶ್ವತತೆಯ ಸಂಕೇತ. ಅನೌಚಿತ್ಯವಾಗುತ್ತದೆ.
      ದಾಟಲು ಇರುವ – ವಿಸಂಧಿದೋಷ
      ಸಿಂಹ/ಗಜಪ್ರಾಸಗಳು ಬೆರೆತಿವೆ. ಲಗಾದಿ ಮತ್ತಿತರ ಛಂದೋದೋಷಗಳಿವೆ. ದಯವಿಟ್ಟು ಸವರಿಸಿ.
      ಇದನ್ನು ವನಮಯೂರ ಛಂದಸ್ಸಿಗೆ ಸುಲಭವಾಗಿ ಅಳವಡಿಸಬಹುದು. ಪ್ರಯತ್ನಿಸಿ: ನಾನನನ ನಾನನನ ನಾನನನ ನಾನಾ. ಉದಾ: ಹೂರಣದ ಬೆಲ್ಲದೊಳಗಿರ್ಪಸವಿಯೆಂಬೆಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)