Oct 112013
 

ಉತ್ಪಲಮಾಲೆ ಛಂದಸ್ಸಿನ ಪದ್ಯದ ಮೂರನೆಯ ಸಾಲಿನ ಕೊನೆಯ ಭಾಗ ಹಾಗೂ ನಾಲ್ಕನೆಯ ಸಾಲುಗಳು ಹೀಗಿವೆ ::

………………… ಸುಮಧುರೇ ಮದಿರಾಕ್ಷಿ ಮನೋಹರೇ ವರೇ
ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

ಪದ್ಯದ ಉಳಿದ ಭಾಗವನ್ನು ರಚಿಸಿ ಸ್ವಾರಸ್ಯಕರವಾಗಿ ಪೂರ್ಣಗೊಳಿಸಿರಿ

ಉತ್ಪಲಮಾಲೆಯ ಬಂಧ ಹೀಗಿದೆ :: ನಾನನನಾನನಾನನನನಾನನನಾನನನಾನನಾನನಾ (ಉತ್ಪಲಮಾಲೆ ಕೋಮಲ ವಿಶಾಲ ಸುಶೀಲ ವಿಲೋಲ ವೃತ್ತಮೈ)

  156 Responses to “ಪದ್ಯ ಸಂಚಿಕೆ ೮೨: ಸಮಸ್ಯಾ ಪೂರಣ”

 1. ಮುಂದಲೆಗಪ್ಪ ಪಿಂತಿನ ಮುಖಾಬ್ಜಮನೀಕ್ಷಿಸೆ ಮೋಹದಾಳದಾ
  ಕಂದರದೊಳ್ ವಿಲಾಸಿ ತೊಳಲುತ್ತಳಲುತ್ತಿರೆ ಕಾಪಿಡಲ್ಕವ-
  ಳ್ವಂದೊಡೆ ಪೇಳ್ದನಯ್ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  • Ooh la la…..all i can say in just a word is dat dis piece is a masterpiece….unparalleled art thine works sir….kudos to ur poems…they simply rock dis website…u r the juggler of words in true sense sir….! 🙂 🙂

   • ಮೌರ್ಯ ಅತಿಶಯತಮೋಕ್ತಿಗೆ ಸಂಕೋಚಿಸುತ್ತ ಧನ್ಯವಾದಗಳು 🙂

 2. ಸಮಸ್ಯೆ ಇರುವುದು ಸಂಸ್ಕೃತದಲ್ಲಲ್ಲವೆ? ಕನ್ನಡಕ್ಕೂ ಒಗ್ಗುತ್ತದೆಯೆ?

  • ಸಂಬೋಧನೆಗಳೇ ಇರುವುದರಿಂದ, ಕನ್ನಡಕ್ಕೂ, ಸಂಸ್ಕೃತಕ್ಕೂ ಸುಲಭವಾಗಿ ಒಗ್ಗುತ್ತದೆ

   • ಸಂಸ್ಕೃತದಲ್ಲಾದರೆ ತರುಣೀ ಮತ್ತು ರಮಣೀ ಪ್ರಥಮಾ ವಿಭಕ್ತಿಯಾಗುತ್ತದೆ ಸಂಬೋಧನೆಯಲ್ಲೇ ಅವುಗಳನ್ನು ಉಳಿಸಿಕೊಳ್ಳುವ ಪಕ್ಷದಲ್ಲಿ ಅವೆರಡು ಪದಗಳಿಗೆ ಸಮಾನಾರ್ಥಕ ಪದಗಳನ್ನು ಬಳಸಬಹುದು/ಬೇಕು
    ಅವಧಾನಿಗಳು ‘ಲಲನೇ ಪ್ರಮದೇ’ (in that order to satisfy chandas constraint) ಸೂಚಿಸಿದ್ದಾರೆ

   • ಕನ್ನಡದಲ್ಲಿ ಸಂಬೋಧನೆಯು ’ತರುಣಿಯೇ’, ’ರಮಣಿಯೇ’ ಎಂದಾಗುತ್ತವೆ. ’ತರುಣೀ’ ’ರಮಣೀ’ ರೂಪಗಳು ಸಂಬೋಧನೆಯೆನಿಸುತ್ತವೆಯೆ?

    ಕನ್ನಡದಲ್ಲಿ ’ಹೇ ತರುಣಿ’, ’ಹೇ ರಮಣಿ’ ಎಂಬ ಹ್ರಸ್ವಸಂಬೋಧನರೂಪಗಳಿವೆಯೆ?

    • ಕನ್ನಡವ್ಯಾಕರಣದ ಬಗೆಗೆ ಕಳವಳವೇನೂ ಬೇಕಿಲ್ಲ:-)
     ರಮಣಿ, ರಮಣೀ, ರಮಣಿಯೆ, ರಮಣಿಯೇ ಇತ್ಯಾದಿಗಳೆಲ್ಲವೂ ಪೂರ್ವದ ಮಹಾಕವಿಗಳಿಂದ ಪ್ರಯೋಗದಲ್ಲಿ ಪ್ರತಿಷ್ಠಿತವಾಗಿವೆ.

 3. ಮುಂದಿನ ಬೈಗೊಳಪ್ರತಿಮಸುಂದರಿಯಂ ಸೆಳೆಯಲ್ ಸ್ವಚಾಟುವಾ-
  ಕ್ಸುಂದರಜಾಲದೊಳ್ ಸರಸಸಿದ್ಧತೆಯೊಳ್ ಮಣಿದರ್ಪಣಾಮುಖಂ
  ಚಂದದಿ ಪೇಳ್ದನಾ , “ಸುಮಧುರೇ, ಮದಿರಾಕ್ಷಿ, ಮನೋಹರೇ, ವರೇ,
  ಸುಂದರಿ, ಶೋಭನಾಂಗಿ, ತರುಣೀ, ರಮಣೀ, ರಸಿಕಪ್ರಿಯೇ, ಪ್ರಿಯೇ”

  ಬರುವ ಸಂಜೆಯಲ್ಲಿ ತನ್ನ ಪ್ರಿಯೆಯನ್ನು ಸೆಳೆಯಲು ಏನೇನು ಹೇಳಬಹುದೆಂಬ ಯೋಚನೆಯಿಂದ ಕನ್ನಡಿಯ ಮುಂದೆ ಸಿದ್ಧತೆ (rehearsal) ಮಾಡುತ್ತಾ ಸಂಬೋಧನೆಗಳನ್ನೆಲ್ಲಾ ಒಮ್ಮೆ ಅಭ್ಯಾಸ ಮಾಡಿದನೆಂಬ ಪೂರಣ.

  ಎಂದಿನಂತೆ ತಪ್ಪಿದ್ದರೆ ತಿದ್ದಿ. 😛

  • ಎಂದಿನಂತೆ ತಿದ್ದಬೇಕೋ ಅಥವಾ ಎಂದಿನಂತೆ ತಪ್ಪಿದೆಯೋ? 😉
   ಸಂಸ್ಕೃತಭಾಷಾಭೂಯಿಷ್ಟವಾಗಿದೆ. ನನ್ನಂಥವರಿಗೆ ಅಧ್ಯಯನಕ್ಕೆ ಒದಗಿಬರುತ್ತದೆ.

   • ಎರಡೂ ಅಲ್ಲ ಎಂದಿನಂತೆ ರಂಪರ ಕಾಮೆಂಟ್ ಇಂದೂ ಬಂತು 😉

    • ಪ್ರಿಯ ರಾಘವೇಂದ್ರ, ಪರಿಹಾರವು ಚೆಲುವಾಗಿದೆ; ಧನ್ಯವಾದ

  • ಮಣಿದರ್ಪಣಾಮುಖಂ ಚೆನ್ನಾಗಿದೆ ಪದ ಪ್ರಯೋಗ, ಇಂಥ ಪ್ರಯೋಗವಗವನ್ನು ಮಾಡಲು ಹೆಚ್ಚು ಹವಣಿಸಿದಷ್ಟು ಅದು ನನ್ನಿಂದ ದೂರ ಸರಿಯುತ್ತಿದೆ 🙁

  • Dear Raghavendra,

   Brillient pooranam. Please correct the Rhyming point in second line.

   • ಮೆಚ್ಚುಗೆಗೆ ಧನ್ಯವಾದಗಳು ನಿಮ್ಮ ಸಲಹೆಯಂತೆ ವಾಕ್ಯಂಗಳ ಜಾಲದೊಳ್ ಎಂಬಲ್ಲಿ ಪ್ರಾಸವನ್ನು ಸುಧಾರಿಸಿ ವಾಕ್ಸುಂದರಜಾಲದೊಳ್ ಎಂದು ಮಾಡಿದ್ದೇನೆ 🙂

 4. ಪಂದೆಯವೊಲ್ ವಿದೂಷಕನವೊಲ್ ನೆರೆ ಪೀಡಿಸುವಾ ಶಕಾರನಿಂ
  ನೊಂದ ವಸಂತಸೇನೆ ನರಳುತ್ತಿರೆ ಧೂರ್ತನು ಸಂಗಕೆಂದೆನ-
  ಲ್ವಂದಿರೆ ಪೇಳ್ದನೈ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  • ಚೆನ್ನಾಗಿದೆ. ಆದರೆ ಪಾಂಗಿನ ಎಂದರೇನೇ ವೊಲ್ ಎನ್ನುವ ತಾತ್ಪರ್ಯವಾಗುತ್ತದೆ.
   ಹೀಗೆ ಸವರಿಸಬಹುದು.:
   …………………ವಿದೂಷಕನವೊಲ್ ನೆರೆ ಪೀಡಿಸುವಾ ಶಕಾರನಿಂ

 5. माधववाहिनीं गतदिने परिदृश्य नृपत्निसोदरः
  हृन्मथितः खलः तमसि कामपिपासुरहो शिशायिषुः
  जल्पति हल्लने “सुमधुरे मदिराक्षि मनोहरे वरे
  सुन्दरि शोभनाङ्गि ललने प्रमदे रसिकप्रिये प्रिये” ||

  नृपत्निसोदरः = शकारः
  माधव = वसन्त
  वाहिनी = सेना

  ಶಕಾರ ಹಾಗು ವಸಂತಸೇನೆಯಿಬ್ಬರನ್ನೂ ಸಂಸ್ಕೃತ ವಿಭಕ್ತಿ ಪ್ರತ್ಯಯಗಳಲ್ಲಿ ತರಲು ತುಂಬಾ ಕಷ್ಟಪಟ್ಟು (ಎರಡು ಗುರುಗಳು ಒಟ್ಟಿಗೆ ಈ ಛಂದಸ್ಸಿನಲ್ಲಿ ಇರದ ಕಾರಣ) ಆಗದೆ ಪರ್ಯಾಯಗಳನ್ನು ಬಳಸಿ ತರುವ ಹೊತ್ತಿಗೆ ಸೋಮಣ್ಣನ ಪದ್ಯವಾಗಲೇ ಬಂದಿದೆ. ಅದರೂ ನನ್ನದೂ ಹಾಕುತ್ತಿದ್ದೇನೆ.

  ತಾತ್ಪರ್ಯ: ವಸಂತಸೇನೆಯನ್ನು ಹಿಂದಿನದಿನ ನೋಡಿದ ಖಲನು ಮನಸ್ಸಿನಲ್ಲಿ ಉನ್ಮಥಿತನು ಕಾಮುಕನು ಆದ ಶಕಾರನು ನಿದ್ರೆ ಮಾಡುವ ಇಚ್ಛೆ ಇದ್ದರೂ ಮಾಡಲಾಗದೆ ಹೊರಳಾಡುತ್ತಾ ಬಗೆಬಗೆಯಲ್ಲಿ ಅವಳನ್ನು ಕರೆಯುತ್ತಿರುವನೆಂಬ ಕಲ್ಪನೆ.

  • ಪದ್ಯದಲ್ಲಿ ಹಲವು ರಾಚನಿಕದೃಷ್ಟಿಯ ಸವರಣೆಗಳು ಬೇಕಿವೆ. ಮುಖತಃ ಸೂಚಿಸುವೆ.

 6. धृष्टपतिः, प्रमादवशतॊ शयनॆ स्खलितॆ ‘सुवासिनी’-
  नाम्नि, हठात्-तदा तु विरसात् स्थगितॆ मणितॆ, वधानतॊ ।
  जल्पति तत्क्षणं , “सुमधुरे मदिराक्षि मनोहरे वरे
  सुन्दरि शोभनाङ्गि ललने प्रमदे रसिकप्रिये प्रिये” ||

  • two minor corections: tO has to be taH.
   Incidentally, I found versification in sanskrit in utpalamaala to be a very tortourous experience. Maybe the vritta does not lend itself naturally to sanskrit poems. I felt like a circus performer (more than usual :-)) trying to somehow fit words in their places and balancing all the while worrying if the entire edifice is going to come down crumbling any minute.

   धृष्टपतिः, प्रमादवशतः शयनॆ स्खलितॆ सुवासिनी
   नाम्नि, हठात्-तदा तु विरसात् स्थगितॆ मणितॆ, वधानतः ।
   जल्पति तत्क्षणं , “सुमधुरे मदिराक्षि मनोहरे वरे
   सुन्दरि शोभनाङ्गि ललने प्रमदे रसिकप्रिये प्रिये” ॥

   • Coincidentally even I found it very difficult (generally grammar to some extent and specifically style have been my waterloo). Inspite of AdiprAsa constraint in kannada I found it easier there.

    • ರಾಘವೇಂದ್ರ “Inspite of AdiprAsa constraint in kannada” ಅನ್ನುವುದು ಸರಿಯೇ? ಆದಿಪ್ರಾಸದ ಬಂಧದಿಂದ ವಿವಿಧ ಪದಜೋಡಣೆಯ ಸಾಧ್ಯತೆಗಳಲ್ಲಿ ಕವಿಯ ಕಲ್ಪನೆ ಕೆರಳಿ ಹೇಗೆ ಪದ್ಯರಚನೆಗೆ ಪೂರಕವಾಗುತ್ತದೆ ಎನ್ನುವ ವಿಷಯವನ್ನು ಉದಾಹರಣೆಯೊಂದಿಗೆ ನೆನ್ನೆಯಷ್ಟೇ ಪಾಠದಲ್ಲಿ ಚರ್ಚಿಸಿದ್ದೇವೆ. ಕನ್ನಡ ಪದ್ಯರಚನೆಯ ಸುಭಗತೆಗೆ ಆದಿಪ್ರಾಸದ ಕೊಡುಗೆ ಅತಿ ಹೆಚ್ಚೆಂದೇ ತೋರುತ್ತದೆ. ಅದರಿಂದ ಸಿಗುವ ಶಬ್ಧಾಲಂಕಾರದ ಸೊಗಸು, ವಾಚನ ಮತ್ತು ಪದ್ಯವನ್ನು ನೆನಪಿಡುವಲ್ಲಿ ಅದರ ಪಾತ್ರವಂತೂ ಗೊತ್ತೇ ಗೊತ್ತಿದೆ. ಚಿತ್ರಬಂಧದಲ್ಲಿ ತೊಡಕಾಗಬಹುದು, ಇನ್ನಿತರ ಪದ್ಯಪ್ರಕಾರಗಳಲ್ಲಿ ಪದಗಳು ಹೊಳೆಯದಿದ್ದರೇನು ನಿಘಂಟನ್ನು ಹಿಡಿದರೆ ಸಾಕು ತೊಡಕಲ್ಲ ಸಹಾಯಕವೇ ಅಲ್ಲವೇ? 🙂

     • ಸೋಮಣ್ಣ,
      ಕನ್ನಡ ಪದ್ಯರಚನೆಯಲ್ಲಿ ಆದಿಪ್ರಾಸದಿಂದ ಉಂಟಾಗುವ ಹೊಸ ಹೊಳಹುಗಳನ್ನು ಹಾಗೂ ಅದರಿಂದ ಉಂಟಾಗುವ ಸಂತಸವನ್ನು ನಾನೂ ಸಹ ಒಂದೆರಡು ಬಾರಿ ಅನುಭವಿಸಿದ್ದೇನೆ/ಆಸ್ವಾದಿಸಿದ್ದೇನೆ. ಜೊತೆಗೆ ಉತ್ಪಲಮಾಲೆಯಂತಹ ನಿರ್ಯತಿ ಛಂದಸ್ಸಿನಲ್ಲಿ ಆದಿಪ್ರಾಸವು ಪಾದದ ಆರಂಭ/ಕೊನೆಯನ್ನು ತಿಳಿಯಲು ಸಹ ನೆರವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ನಾನು ಇಲ್ಲಿ ಹೇಳಿದ್ದು ಸಂಸ್ಕೃತದೊಂದಿಗೆ ತುಲನೆಮಾಡಿದಾಗ ಆದಿಪ್ರಾಸವು ಒಂದು extra constraint ಎಂದಷ್ಟೇ. ಜೊತೆಗೆ ಕನ್ನಡದಲ್ಲಿ ನನ್ನ ವ್ಯುತ್ಪತ್ತಿ ತುಂಬಾ ಕಡಿಮೆ ಇರುವುದರಿಂದ ಇನ್ನೊಂದಿಷ್ಟು ಅಭ್ಯಾಸ ಮಾಡುವವರೆಗೆ (ಸದ್ಯಕ್ಕೆ) ಆದಿಪ್ರಾಸ ನನಗೆ ಸ್ವಲ್ಪ ತೊಡಕೇ. 🙂

     • ವರಸೋಮನೆ ಬಳಸಿಹೆ ನೀಂ
      ’ಕೆರಳಿ’ಯನಾವಾದಿಪ್ರಾಸಕಾಗೆನುತಲಿ ಪೇಳ್|
      ’ಅರಳಿ’ಯು ಸಲ್ಲದೆಲಿತ್ತೇಂ,
      ಬಿರುಸಿಲೆ ಮಿರಮಿರನೆ ಮಿನುಗಿಸಲ್ಕೆಣಿಸಿದೆಯೇಂ??

     • ಹೌದು ‘ಅರಳಿ’ಯನ್ನೂ ಬಳಸಬಹುದಿತ್ತು. ಅರಳಿಗಿಂತ ಕೆರಳಿ impulsive ಆಗಿದೆ ಎಂದು ಬಳಸಿದೆ

   • ಸುಧೀರ್ ಸರ್ “सुवासिनी नाम्नि” ಎಂಬ ಪ್ರಯೋಗವನ್ನು ಗಮನಿಸಿದಾಗ ಉತ್ಪಲಮಾಲೆಯ ನಿರ್ವಹಣೆಯಲ್ಲಿ ನೀವು ಪಟ್ಟಿರಬಹುದಾದ ಶ್ರಮದ ಅರಿವಾಯಿತು. ನಿಮಗೇ ತ್ರಾಸವಾಗಿರಬೇಕಾದರೆ ಸಂಸ್ಕೃತದಲ್ಲಿ ಉತ್ಪಲಮಾಲೆಯ ರಚನೆ ಕಷ್ಟವೆಂದು ಒಪ್ಪಲೇ ಬೇಕು 🙂

    • ಸೋಮ, ಕೆಲವು ಅನಿವಾರ್ಯ ಕಾರಣಗಳಿಂದ ನಾನು ನನ್ನ ಪದ್ಯದ ಸಂದರ್ಭವನ್ನು ವಿವರಿಸಿಲ್ಲ. ರಸಿಕರಿಗೆ ಅರ್ಥವಾಗಿರಬಹುದು. ಸುವಾಸಿನೀ ಎಂಬ ಪದ ಬಳಸುವುದಕ್ಕೆ ಕಾರಣ ಅದು ಒಬ್ಬಾಕೆಯ ಹೆಸರೂ ಆಗಿರಬೇಕು ಮತ್ತು ಸಂಬೋಧಿಸಲು ಒಳ್ಳೆಯ ವಿಶೇಷಣವೂ ಆಗಿರಬೇಕೆಂಬುದಷ್ಟೆ. ಅದರಿಂದ ವಿಶೇಷವಾದ ತ್ರಾಸ ಆಗಲಿಲ್ಲ. ಆದರೆ ವೃತ್ತ ನಿರ್ವಹಣೆಯಲ್ಲಿ ನಾನು ಮೊದಲೇ ಬಹಳ ಚಾಣಾಕ್ಷನೇನಲ್ಲ. ಪೆಟ್ರೋಲ್ ಗಾಡಿಗೆ ಸೀಮೆ-ಎಣ್ಣೆ ಹಾಕಿ ಹೇಗೋ ಓಡಿಸುವಂತೆ ಪದ್ಯಗಳನ್ನು ಹೊಸೆಯುತ್ತೇನೆ. ಆದರೆ ಉತ್ಪಲಮಾಲೆಯಲ್ಲಿ ಬಲವಂತದಿಂದ ಪದಗಳನ್ನು ತುರುಕುವಂತೆ ಆಯಿತು. ನನ್ನ ಮನಸ್ಸು ವಿರೋಧಮಾಡುತ್ತಲೇ ಇದ್ದರೂ against my will ಎಂಬಂತೆ ಮುಗಿಸಿದೆ. ಈ ಆನುಭವವು ವಿಚಿತ್ರವಾಗಿದ್ದುದರಿಂದ ಇಲ್ಲಿ ಹಂಚಿಕೊಂಡೆ.

     • ಸುಧೀರ್ ಸರ್, ಇವತ್ತು ಶತಾವಧಾನಿಯವರೂ ಮತ್ತು ರಾಘವೇಂದ್ರ ಇಬ್ಬರೂ ಸಿಕ್ಕಿದಾಗ ಇದೇ ವಿಷಯದ ಬಗ್ಗೆ ಮಾತನಾಡುತ್ತಿದ್ದೆವು. ಆಗ ಚಂಪಕ/ಉತ್ಪಲಮಾಲೆ ಕನ್ನಡಕ್ಕೆ ಒಗ್ಗುವಷ್ಟು ಸಂಸ್ಕೃತಕ್ಕೆ ಹೇಗೆ ಒಗ್ಗುವುದಿಲ್ಲವೆಂದು ತಿಳಿಸಿಕೊಟ್ಟರು, ಇದನ್ನೇ ನೀವೂ ಸೂಚಿಸಿದ್ದೀರಿ ಎನ್ನುವುದು ತಿಳಿಯುತ್ತದೆ. ‘ನಾಮ್ನಿ’ಯನ್ನು filler ಆಗಿ ಬಳಸಿರಬಹುದೆಂದು ಬಗೆದು ನಾನು ಹಿಂದಿನ ಕಾಮೆಂಟ್ ಮಾಡಿದ್ದೆ ಅಷ್ಟೆ ಕ್ಷಮಿಸಿರಿ 🙂

 7. रात्रिचराधमो विबुधमौलिनिवेशितशासनाक्षरै-
  स्तुल्यमनङ्गपीडितमना दशभिः समबोधयन्मुखैः ।
  इत्यवनीसुतां “सुमधुरे मदिराक्षि मनोहरे वरे
  सुन्दरि शोभनाङ्गि ललने प्रमदे रसिकप्रिये प्रिये” ॥
  ಕಾಮಪೀಡಿತನಾದ ರಾವಣನು ಸ್ವಯಂ ದೇವತೆಗಳಿಗೇ ಆಜ್ಞೆಯನ್ನು ನೀಡುವ ತನ್ನ ಹತ್ತೂ ಬಾಯಿಗಳಿಂದ ಏಕಕಾಲಕ್ಕೆ ಸೀತೆಯನ್ನು ಹೀಗೆ ಸಂಬೋಧಿಸಿದನು – “ಸುಮಧುರೇ—” ಇತ್ಯಾದಿ.

  • ಹತ್ತು ಸಂಬೋಧನೆಗಳನ್ನು ಗುರುತಿಸಿ ಬಹಳ ಚೆನ್ನಾಗಿ ರಾವಣನಿಗೆ ಹೊಂದಿಸಿದ ಪೂರಣ ಹಿಡಿಸಿತು 🙂

   • Thanks Soma. Nimma padyagala aashayavannu hosagannadadalli haaki Maurya avara pratikriye nodi nanage arthavaagtillavalla anta novoo arthamaadikollale beku annuva kutoohalavoo untaagide. Please

    • ಶಂಕರ್,
     ಸತ್ಯ ಹೇಳ್ತೀನಿ, ಮೌರ್ಯನ ಪ್ರತಿಕ್ರಿಯೆಗೆ ಬಹಳ ಸಂಕೋಚವಾಯಿತು, ಉತ್ತೇಜನ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೌರ್ಯನಿಗೆ ಸಲ್ಲುತ್ತವೆ, ಧನ್ಯವಾದ ಹೇಳುವಲ್ಲಿ ಇದೇ ಭಾವವನ್ನೇ ತೋರಿದ್ದೇನೆ. ಇನ್ನೊಂದಂಶ, ಹೊಸಗನ್ನಡದಲ್ಲಿ ಪದ್ಯದ ಆಶಯವನ್ನು ವಿಶೇಷವಾಗಿ ಸೂಚಿಸುವುದೇನೂ ಆ ಪದ್ಯದಲ್ಲಿ ಅಡಗಿಲ್ಲ, ಪದ್ಯದ ಸಾಮಾನ್ಯವಾದ ಅರ್ಥವಷ್ಟೆ ಇರುವುದು 🙂

  • ೧) ಅಯ್ಯಯ್ಯೋ! ವಿಶೇಷಣಗಳ ಸಂಖ್ಯೆಯನ್ನು ಎಣಿಸದೆಹೋದೆನೆ!
   ೨) ಒಂದು ವಿಶೇಷಣ ಭಿನ್ನವಾಗಿದೆ – ರಸಿಕಪ್ರಿಯೇ. ’ನಾನು ರಸಿಕ’ ಎಂಬ ನಿಗಮನಾರ್ಥವನ್ನು ಹೊರತುಪಡಿಸಿ, ಮಿಕ್ಕೆಲ್ಲವುಗಳಂತೆ ಇದು ವಕ್ತೃವಿಗೆ beneficial ಆಗಿ ಇಲ್ಲ.

 8. ಕುಂದಿಪುದಾತ್ಮದೇಳ್ಗೆ ವಿಷಯಂಗಳ ಸಂಗಮನೀಕ್ಷಿಸಲ್ಕೆನಲ್
  ಮಂದಿರದೊಳ್ ಪ್ರಲಾಪಿಸುತೆ ಲಂಪಟಚಿತ್ತದೆ ಪೂವ್ಗಳಾಕೆಯಾ
  ಚಂದಕೆ ಪೇಳ್ದನಯ್ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ಮಂದಿರದಲ್ಲಿ ಇಂದ್ರಿಯನಿಗ್ರಹದ ಬಗ್ಗೆ ಭಕ್ತಾದಿಗಳಿಗೆ ಪ್ರವಚನ ನೀಡುವಾಗಲೇ ತನ್ನ ಮನಸ್ಸಿನಲ್ಲಾದ ಗೊಂದಲವನ್ನು ನಿಗ್ರಹಿಸಲಾಗದ ‘modern ಸ್ವಾಮಿ/ಗುರುವಿನ’ ಬಗ್ಗೆ

  • LoL. ಪೂವ್ಗಳಾಕೆಯಾ?

   • ಪೂವ್ಗಳಾಕೆ = ಹೂ ಮಾರುವವಳು, ಹೂ ಕಟ್ಟುವವಳು ದೇವಸ್ಥಾನದ ಮುಂದೆ ಇರುತ್ತಾರಲ್ಲ

  • ಚೆನ್ನಾಗಿ ಗಮನಿಸಿಕೊಂಡಿದ್ದೀರಿ ಸೋಮ. ಹಿಂದೆ ಪದ್ಯಪಾನದಲ್ಲಿ ನನ್ನದೊಂದು ‘ಚಿತ್ರಕ್ಕೆ ಪದ್ಯ’ ಇದೇ ಜಾಡಿನಲ್ಲಿದೆ: http://padyapaana.com/?p=559 ರಲ್ಲಿ ಸಂಖ್ಯೆ 3

   • ಹೌದು ಪ್ರಸಾದು ನೆನಪಿದೆ ಇನ್ನೊಮ್ಮೆ ಓದಿಕೊಂಡೆ, ನಾನು ಗಮನಿಸಿದ್ದೀನಿ ಎನ್ನುವುದಕ್ಕಿಂತ ನಾನು ಊಹಿಸಿದ್ದೀನಿ ಎನ್ನುವುದು ಸತ್ಯವಾಗಿಯೂ ಸತ್ಯಕ್ಕೆ ಹತ್ತಿರವಾದದ್ದು 🙂

 9. ಇಂದು ತಗಾದೆ ನೀ ತೆಗೆಯಬೇಡವೆ ಗೊಗ್ಗರೆಯೇ, ಮನೋದರೇ,
  ತೊಂದರೆ ನೀಡಲೇಕೆನಗೆ ಕೇಕರೆ? ಯೋಚಿಪೆ ಪಿಂತೆ ನಿನ್ನ ನಾ-|
  ನೆಂದೆನದೇತಕೋ ’ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ’??
  (ಮನೋದರೆ = ಮನಂ ದಾರಯತಿ ಇತಿ. ಕೇಕರೆ = squint eyed – not by default but by design during a fight)

 10. ಕುಂದದೆ ಮಾಡೆ ಮಂದಬೆಳಕೊಳ್ ಮಧು ಸೇವನೆಯಂ ಪದೇ ಪದೇ
  ನಿಂದಿಹ ನಾರಿ ವಿಗ್ರಹವ ಕಂಡೊಡೆ ತಾಂ ಮುದಪಾನಮತ್ತ, ಮ
  ತ್ತಿಂದವ ಪೇಳ್ದನೈ, “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ” |

  • ಐಡಿಯ ಚೆನ್ನಾಗಿದೆ.
   ಮೂರನೆಯ ಪಾದ – ಇಂದು – ಪ್ರಸ್ತುತತೆ ಕಡಿಮೆ. ಬೇರೆ ಪದ (ಉದಾ: ಪಾನಮತ್ತನು ಚಂದದಿ) ಹೊಂದಿಸಿ.

   • ಧನ್ಯವಾದಗಳು ಪ್ರಸಾದ್ ಸರ್,
    ಪಾನಮತ್ತ, ಮತ್ತಿಂದವ ಪೇಳ್ದ = “ಪಾನಮತ್ತನು ಮತ್ತಿನಿಂದ ಹೇಳಿದ” ಎಂಬ ಅರ್ಥ ಬರುವುದಿಲ್ಲವೆ?

 11. ನನ್ನೊಂದು ಅವಧಾನದಲ್ಲಿ ಕೀ ಶೇ. ಲಂಕಾ ಕೃಷ್ಣಮೂರ್ತಿಯವರು ನೀಡಿದ ಈ ಸಮಸ್ಯೆಯನ್ನು ನಾನು ಹೀಗೆ ಪರಿಹರಿಸಿದ್ದೆ:

  ಕೊಂದು ಜಟಾಯುವಂ ಕಪಟಸಂಯಮಿವೇಷಧರಂ ದಶಾನನಂ
  ತಂದು ವಸುಂಧರಾಸುತೆಯನಕ್ರಮದಿಂ ನಿಜಕಾಮವೃತ್ತಮಂ |
  ನಿಂದು ನಿವೇದಿಪಂ “ಸುಮಧುರೇ!……………………….
  ………………………………………………..ಪ್ರಿಯೇ!” ||

  ಇದನ್ನು ಪ್ರಿಯಮಿತ್ರ ಶಂಕರ್ ಸಂಸ್ಕೃತದಲ್ಲಿ ತುಂಬ ಸೊಗಸಾಗಿ, ನಾನು ಸಾಗಿದ ಹಾದಿಯಲ್ಲಿಯೇ ಪರಿಹರಿಸಿದ್ದಾನೆ. ಎಷ್ಟಾಗಲಿ, ಇಂಥ ಕವಿತೆಯ ಎಲ್ಲ ಗರಡಿಪಟ್ಟು-ವರಸೆಗಳನ್ನು ಬಲ್ಲವನಲ್ಲವೇ! ವಸ್ತುತಃ ಆತನ ಪದ್ಯದಲ್ಲಿ ರಾವಣನಿಗೆ ಹಾಕಿದ ವಿಶೇಷಣವು ತುಂಬ ಧ್ವನಿಪೂರ್ಣವಾಗಿದೆ. ನನ್ನ ಪದ್ಯದ ’ದಶಾನನ’ ಎಂಬ ವಿಶೇಷಣವು ಈ ಸಮಸ್ಯಾಪೂರಣದ ಜೀವಾಳ. ಪ್ರಸಾದು ಅವರು ಇಲ್ಲಿಯ ವಿಶೇಷಣಗಳ ಸಂಖ್ಯೆಯನ್ನು ಎಣೆಕೆಮಾಡದುದಕ್ಕಾಗಿ ವಿಷಾದಿಸಿದುದು ಸೊಗಸಾದ ಸಂಗತಿ:-)
  ಇಂಥ ಸಮಸ್ಯೆಗಳಿಗೆ ಈ ಬಗೆಯ ಎಚ್ಚರ ಅತ್ಯಾವಶ್ಯಕ. ಆದರೆ ಪ್ರಕಾರಾಂತರಪರಿಹಾರವೂ ಸಾಧ್ಯ. ಬೇಗದಲ್ಲಿಯೇ ಪೂರಯ್ಸಿ ಕಳುಹುವೆ.
  ಸುಧೀರನೆಂದಂತೆ ಸಂಸ್ಕೃತದಲ್ಲಿ ಚಂಪಕೋತ್ಪಲಗಳು ಕಷ್ಟನಿರ್ವಾಹ್ಯ. ಆದರೆ ಶಂಕರನ ಪದ್ಯವನ್ನು ಕಂಡಾಗ ಹಾಗೇನೂ ತೋರುತ್ತಿಲ್ಲ:-)

 12. ಮಿಂದಿರೆ ರಕ್ತಿಯೊಳ್ ಕುವರಿಯಂ ವರಿಸಲ್ಕೆನೆ ಪತ್ರಮಂ ಯುವಂ
  ಪೊಂದಿಸಲಳ್ಕಿ ತಾಂ ಗಡಮುಪಕ್ರಮಮೆಂತೆನೆ ಚಿಂತಿಸಲ್ಕೆ ಸಾ-
  ಲೊಂದೊರೆದಂ ಸಖೀ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ಒಂದೊರೆದಂ ಸರಿಯೇ ಹಳಗನ್ನಡಕ್ಕೆ?
  ಉಪಕ್ರಮ = start

 13. ಮಂದಿಯ ರಕ್ಷಿಸಲ್ಕಿನಿಯನಾಗೆ ಹುತಾತ್ಮನನಾನುಕೃತ್ಯದಿಂ
  ನಂದಿದ ಬಾಳ್ಮೆಯಾ ಪಣತೆಯೊಳ್ ಸೊಡರಪ್ಪುಗುಮಾಣ್ಮನಾಡಿದಾ
  ನಂದದ ಸೊಲ್ಗಳಿಂ “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  ಅನನಾನುಕೃತ್ಯ – unparalleled effort in war

 14. ಸಹೃದಯರೇ / ಗುರುರೂಪಿಗಳೇ,

  ಸಮಸ್ಯಾಪೂರಣಕ್ಕೆ ಸಮಸ್ಯೆ ತಂದಿದ್ದಕ್ಕೆ ಕ್ಷಮಿಸಿ!
  ಆದ್ಯ ರಂಗಾಚಾರ್ಯರು ಸಂಪಾದಿಸಿದ, ಅಕ್ಷರ ಪ್ರಕಾಶನದ “ಭರತ ಮುನಿಯ ನಾಟ್ಯ ಶಾಸ್ತ್ರ”ದ ೧೨೮ನೇ ಪುಟದಲ್ಲಿ “ಉತ್ಪಲಮಾಲಿನೀ”ಯನ್ನು – ಹತ್ತು ಅಕ್ಷರಗಳ ಪಾದದಲ್ಲಿ ಮೊದಲಿನ ಮೂರು, ಕೊನೆಯ ಮೂರು ಗುರುಗಳಾಗಿದ್ದರೆ ಅದು ಉತ್ಪಲಮಾಲಿನೀ ಎಂದಿದ್ದಾರೆ. ಆದರೆ ಪದ್ಯಪಾನದಲ್ಲಿ ಬೇರೆಯೇ ಎನಿಸುತ್ತದೆ, (ಅಂದರೆ ಅಕ್ಷರಗಣಗಳನ್ನು ಹಾಕಿರಬಹುದಾದ ತಂತ್ರ ನನಗೆ ತಿಳಿಯುತ್ತಿಲ್ಲ ಎನ್ನಿಸುತ್ತಿದೆ) ಯಾವುದು ಸರಿ? – “ನಾನನನಾನನಾನನನನಾನನನಾನನನಾನನಾನನಾ”

  ಯಾವುದಕ್ಕೂ ನನ್ನ ಪ್ರಯೋಗವನ್ನು ಪದ್ಯಪಾನದ ಮಾರ್ಗದಲ್ಲಿ ಮಾಡಿದ್ದೇನೆ. ಸಮಸ್ಯಾ ಪೂರಣದ ಅಲಂಕಾರವು ‘ಅಮ್ರೇಡಿತ ಯಮಕ’ವೆಂದು ತೋರುತ್ತದೆ. ಅದೇ ಅಲಂಕಾರವನ್ನು ಬಳಸಲೆತ್ನಿಸಿದ್ದೇನೆ, ದಯದಿಂ ಪರಾಮರ್ಶಿಪುದು…

  ಕಂಡಳ್ ಸೋಮಸ್ಮಿತೆ ಇದಿರ್ವಂದಳ್ ಕಾಮಮನೋಹರೇ ಸುರೇ
  ಪ್ರವರದಿಂ ಪುರೂರವ ಅಲಂಪಿದನುಂ ಉಷಸೇ ಪ್ರಿಯೇ ಪ್ರಿಯೇ
  ಕ್ಷಮಿಸು ಮಾನಿನೀ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  • ಇದು ನನ್ನ ಎರಡನೆಯ ಪ್ರಯತ್ನ, ಸಡಗರದಲ್ಲಿ ಆದಿಪ್ರಾಸಹಾಕುವುದನ್ನು ಮರೆತೇ ಬಿಟ್ಟಿದ್ದೇನೆ!

   ಬಂದಳ್ ಸೋಮಸ್ಮಿತೆ ಇದಿರ್ವಂದಳ್ ಕಾಮಮನೋಹರೇ ಸುರೇ
   ಅಂದದಿ ಪುರೂರವ ಅಲಂಪಿದನುಂ ಉಷಸೇ ಪ್ರಿಯೇ ಪ್ರಿಯೇ
   ನಿಂದಿರೆ ಮಾನಿನೀ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
   ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

   – ಪ್ರಸನ್ನ

   • ಪ್ರಸನ್ನರೇ ಪದ್ಯಪಾನಕ್ಕೆ ಸ್ವಾಗತ, ದಯಮಾಡಿ ನಿಮ್ಮ ಪ್ರಯತ್ನವನ್ನು ಹೀಗೇ ಮುಂದುವರೆಸಿರಿ. ಉತ್ಪಲಮಾಲೆಯ ಬಗ್ಗೆ ನೀವು ಕೇಳಿರುವ ಪ್ರಶ್ನೆಯನ್ನು ತಿಳಿದವರು ವಿವರಿಸುವರು. ಒಂದೆರಡಂಶಗಳು:
    1. ನಿಮ್ಮ ಪದ್ಯದ ಮೊದಲೆರೆಡು ಸಾಲ್ಗಳು “ನಾನನನಾನನಾನನನನಾನನನಾನನನಾನನಾನನಾ” ಎಂಬ ವೃತ್ತಲಕ್ಷಣಕ್ಕೆ ಹೊಂದುತ್ತಿಲ್ಲ ಸವರಿಸಿ.
    2. ಬಂದಳ್, ಇದಿರ್ವಂದಳ್ ಎಂಬಲ್ಲಿ ಎರೆಡೂ ಒಂದನ್ನೇ ಸೂಚಿಸುವುದರಿಂದ ಬೇರೆಯರೀತಿಲ್ಲಿ ಬಳಸಬಹುದೇ ಗಮನಿಸಿ.
    3. “ಕಾಮಮನೋಹರೇ ಸುರೇ” ಎಂಬುದು ಸಂಬೋಧನೆಯೇ ಆಗಬೇಕು ಕಾಮಮನೋಹರೆಯು… ಎಂಬರ್ಥ ಬರುವುದಿಲ್ಲ
    4. ‘ಅಲಂಪಿದ’ಎಂದರೇನು?
    5. “ಪುರೂರವ ಅಲಂಪಿದ” ಎನ್ನುವಲ್ಲಿ ಸಂಧಿಯಾಗಲೇಬೇಕು ಪುರೂರವನಲಂಮಿಸಿದನು
    6. “ಅಲಂಪಿದನುಂ” ಎಂದರೆ ಅಲಂಪಿದನು ಕೂಡ ಎಂದರ್ಥ, ನಿಮ್ಮ ಆಶಯ ಬೇರೆಯಿತ್ತೆ?

    ಮೊದಮೊದಲು ಹೀಗೆ ಸ್ವಲ್ಪ ತೊಡಕಾಗುವುದುಂಟು, ಕ್ರಮೇಣ ಸುಭಗವಾಗುತ್ತದೆ, ಪ್ರಯತ್ನ ಮುಂದುವರೆಸಿರಿ 🙂

    • ಧನ್ಯವಾದಗಳು ಸೋಮ ಅವರೇ…

     ನಿಮ್ಮ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರಿಸುತ್ತೇನೆ.

     ನನ್ನ ವ್ಯಾಕರಣ ಕಲಿಕೆಗೆ ಹೊಸದರ ಎಲ್ಲ ಸಂಕಷ್ಟಗಳು ಸಾದರಗೊಂಡಿವೆ! ನೂರಾರು ಪ್ರಶ್ನೆಗಳು!

     ಒಳ್ಳೆ ಕನ್ನಡ ಪಂಡಿತರು ಸಿಕ್ಕರೆ ಅರೆಕಾಲಿಕ ಶಿಷ್ಯವೃತ್ತಿ ಮಾಡಲಿಚ್ಚಿಸಿದ್ದೇನೆ. ಬೆಂಗಳೂರಿನ ದಕ್ಷಿಣ ಅಂದರೆ ಕೋರಮಂಗಲ, ಇಂದಿರಾ ನಗರ, ಸರ್ಜಾಪುರ (HSR) ದಲ್ಲಿ ಯಾರಾದರೂ ಪಂಡಿತರಿದ್ದರೆ, ಮಾನ್ಯ ಪದ್ಯಪಾಣಿಗಳು ಪರಿಚಯಿಸಿ ಸಹಕರಿಸಿದರೆ ಮಹತ್ಸಹಾಯವಾಗುವುದು.

     • ಪದ್ಯಪಾನದ ಪದ್ಯ ರಚನೆಗಳಲ್ಲಿ ಪಾಲ್ಗೊಳ್ಳಿ ಮತ್ತು ರಾಮಾಯಣ ದರ್ಶನಂ, ಗದಾಯುದ್ಧ ಮೊದಲಾದ ಕಾವ್ಯಗಳನ್ನು ಓದಿಕೊಳ್ಳಿರಿ, ಇದೇ ಹಾದಿಯಲ್ಲಿ ಕ್ರಮೇಣ ಏಳಿಗೆ ಕಾಣುವುದೆಂದು ನಾನು ಕೂಡ ಪ್ರಯತ್ನಿಸುತ್ತಿರುವೆ 🙂

     • ಶ್ರೀಪ್ರಸನ್ನ ಅವರಿಗೆ ಪದ್ಯಪಾನದ ಪ್ರವಾಗಿ ಸ್ವಾಗತ. ಸೋಮ ಹೇಳಿದ ಸಲಹೆಗಳು ಮತ್ತು ನಿಮ್ಮ ಪದ್ಯದ ಬಗೆಗಿನ ವಿಮರ್ಶನೆಗಳು ಸರ್ವಥಾ ಸಮುಚಿತ. ನೀವು ಅವನ್ನು ಹಾಯಾಗಿ ಪಾಲಿಸಬಹುದು. ಇನ್ನು ಉತ್ಪಲಮಾಲೆಯ ಹೆಸರಿನ ಬಗೆಗೆ ಬರುವುದಾದರೆ ನಮ್ಮ ಪರಂಪರೆಯಲ್ಲಿ ಬಂದ ಅಲಂಕಾರಲೋಕದಲ್ಲಿಯೂ ಛಂದೋಲಕ್ಷಣಗ್ರಂಥಗಳಲ್ಲಿಯೂ ಹೀಗೆ ಒಂದೇ ಹೆಸರಿನಲ್ಲಿ ಹಲವು ವೃತ್ತಗಳೂ ಒಂದೇ ವೃತ್ತಕ್ಕೆ ಹಲವು ಹೆಸರುಗಳೂ ಇರುವುದು ದೃಷ್ಟಚರ. ಇದೊಂದು ತೊಡಕು. ಆದರೆ ಪ್ರಸಿದ್ದಿಯನ್ನು ಅನುಸರಿಸಿ ನಿರ್ಣಯಿಸಬೇಕು. ಹಾಗೆ ಕಂಡಾಗ ಉತ್ಪಲಮಾಲೆ, ಚಂಪಕಮಾಲೆ ಮುಂತಾದುವೆಲ್ಲ ಕನ್ನಡ-ತೆಲುಗುನುಡಿಗಳಲ್ಲಿ ಪಡೆದ ಪ್ರಾಶಸ್ತ್ಯವನ್ನು ಗಮನಿಸಿ ಈ ಹೆಸರುಗಳನ್ನೇ ನಾವೂ ಉಳಿಸಿಕೊಳ್ಳುವುದು ವಿವೇಕ.

 15. ಅಂದದ ಬಾರುಮೈಡು ಬಳಿ ಬಂದಿರೆ ನಿಂದಿರೆ ಸೀಸೆಯನ್ನು ಕೈ
  ಯಿಂದೆಳೆಯುತ್ತಲಪ್ಪಿ ಕುಡುಕಂ ನಲವಿಂದದನೊತ್ತಿ ಕಣ್ಣಿಗಿಂ
  ತೆಂದನು ಲೋಲ ನೀಂ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  • 🙂 ಒಳ್ಳೆಯ ಹಾಸ್ಯಸಂಮಿತೆ! ಇಲ್ಲಿಯ ಸಮಸ್ಯಾವಾಕ್ಯದ ಪುನರುಕ್ತಿಬಾಹುಳ್ಯಕ್ಕೆ ಸೊಗಸಾದ ಅನ್ವಯವು ಕುಡುಕನ ಮಾತಿನ ಮೂಲಕ ದಕ್ಕಿ ಸಾರ್ಥಕ್ಯ ಸಂದಿದೆ.

  • ಗಣೇಶರೆ,
   ಕುಡುಕ ಮತ್ತವನ ಪುನರುಕ್ತಿಗಳೆಲ್ಲ secondary. ಇಲ್ಲಿ ಕವಿ ಹೇಳಿರುವುದು, ಕುಡುಕನು ಆ ಮದಿರಾಕ್ಷಿಯನ್ನು ಬಿಟ್ಟು ಮದಿರೆಯನ್ನು ಹಿಡಿದುಕೊಂಡ ವಿಪರ್ಯಾಸ ಕುರಿತು.

 16. ನೊಂದಿರೆ ಸಾದ್ವಿ ದ್ರೌಪದಿಯು ಕಾಮುಕ ಕೀಚಕನಾಟ ಕಾಟದೊಳ್
  ಬಂದಿರಲಂದು ಭೀಮ ಸತಿ ವೇಷವತೊಟ್ಟದ ಕಂಡ ಭಂಡ ಸೈ
  ರಂಧ್ರಿಗೆ ಪೇಳ್ದನೇಂ, ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ |

  • ಪ್ರಶ್ನೆಯಾಗಿ ಪರಿವರ್ತಿಸಿರುವ idea ಚೆನ್ನಾಗಿದೆ

  • ಪರಿಹಾರವು ಚೆನ್ನಾಗಿದೆಯದರೂ ಬಂಧದಲ್ಲಿ ಮತ್ತಷ್ಟು ಬಿಗಿ ಬಂದರೆ ಒಳಿತು.

  • ಧನ್ಯವಾದಗಳು ಗಣೇಶ್ ಸರ್, ಸೋಮ.
   ಸರಿಪಡಿಸಿಕೊಳ್ಳುತ್ತೇನೆ ಸರ್, “ಪದ್ಯಶಿಲ್ಪ”ದ ಬಗ್ಗೆ ನನಗೂ ದಯವಿಟ್ಟು ತಿಳಿಸಿಕೊಡಿ.

 17. ಚಂದದಿ ಪತ್ನಿಯರ್ಕಳನವಂ ಹರಿಯೆಂತು ಪೊಗಳ್ವನೆನ್ನುತುಂ
  ಬಂದಿರೆ ನಾರದಂ ಕುತುಕದಿಂ ಪರಿವೀಕ್ಷಿಸಲೆಲ್ಲ ಸೌಧದೊಳ್
  ನಿಂದುರೆ ಕೇಳ್ದನೈ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ||
  (‘ಕೃಷ್ಣ ಹೇಗೆ ತನ್ನೆಲ್ಲ ಪತ್ನಿಯರೊಂದಿಗೆ ಮಾತನಾಡುತ್ತಾನೆ’ ಎಂದು ಕುತೂಹಲದಿಂದ ನೋಡಲೆಂದು ಬಂದ ನಾರದ ಎಲ್ಲಾ ಸೌಧಗಳಲ್ಲಿಯೂ “ಸುಮಧುರೇ ಮದಿರಾಕ್ಷಿ ಮನೋಹರೇ ವರೇ ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ” ಎಂಬ ಸಂಬೋಧನೆಯನ್ನು ಕೇಳಿದನು..)

  • ಪುರಾಣಕ್ರಮವನ್ನು ಅನುಸರಿಸಿ ಮಾಡಿದ ಅಭಿರಾಮಪರಿಹಾರಕ್ಕಾಗಿ ಅಭಿನಂದನೆ. ನಿಜಕ್ಕೂ ಒಳ್ಳೆಯ ಪೂರಣ. ಚೆಂದದೆ ಎಂದು ಸವರಿಸಿದರೆ ಮತ್ತೂ ಒಳಿತು.

   • ಧನ್ಯವಾದಗಳು ಸರ್:-)

    ಚೆಂದದೆ ಪತ್ನಿಯರ್ಕಳನವಂ ಹರಿಯೆಂತು ಪೊಗಳ್ವನೆನ್ನುತುಂ
    ಬಂದಿರೆ ನಾರದಂ ಕುತುಕದಿಂ ಪರಿವೀಕ್ಷಿಸಲೆಲ್ಲ ಸೌಧದೊಳ್
    ನಿಂದುರೆ ಕೇಳ್ದಪಂ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
    ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ||

 18. ಮುಂದಣಪೂಗಳಿಂದೆ ಮನೆಯಂದಮನಾಶಿಪ ತೋಟವಾಳನೊಂ-
  ದೊಂದೆಲಗಂ ಸುಮಕ್ಷಮತೆಯಾಂತೊಡೆ ನಾರಿಯವೊಲ್ವೆಸರ್ಗಳಿಂ
  ಚಂದದೆ ಕೂಗುವಂ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ತೋಟವಾಳ – gardner
  ಎಲಗಂ – plant

 19. ಮಂದಿರಮಂಡನಪ್ರಮದೆಯರ್ಕಳೆ ಪೆಣ್ಗಳೊಳಾಭಿರಾಮ್ಯಮಂ
  ಕುಂದಿಪವೊಲ್ ಗಡಂ ಮೆರೆದು ಪೊಯ್ಸಳರಾಯರ ಮಾನಸಂಗಳೊಳ್
  ನಿಂದಿರೆ ಪೇಳ್ದರಯ್ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ಬೇಲೂರು ಶಿಲಾಬಾಲಿಕೆಯರ ಅಂದ ತಮ್ಮ ಸ್ತ್ರೀಯರ ಅಂದವನ್ನು ಮೀರಿಸಿ ಹೊಯ್ಸಳ ರಾಯರ ಮನದಲ್ಲಿ ನಿಂತ ಪೂರಣ

 20. ಎಲ್ಲರ ಪೂರಣಗಳೂ ಸೊಗಸಾಗಿ ಸಾಗುತ್ತಿವೆ. ಗಣೇಶರ ಮೂಲ ಪೂರಣ ಮತ್ತು ಶಂಕರರ ವಿಶಿಷ್ಟರೀತಿಯ ಪೂರಣಗಳು ಅನುಪಮ. ಇವುಗಳಿಗೆ ಸರಿತೂಗಿಸಲಾರೆನಾದರೂ, ಆ ಜಾಡಿನಲ್ಲೇ, ವಿಷ್ಣು, ವೈಕುಂಠವನ್ನು ತ್ಯಜಿಸಿದ ಲಕ್ಷಿಯನ್ನು ಹುಡುಕುತ್ತಾ, ತನ್ನ ದಶಾವತಾರಗಳ ವಿವಿಧರೂಪ ಭಾವಗಳಿಂದ ಆಕೆಯನ್ನು ಕರೆದಾಗ ದಶದಿಕ್ಕುಗಳು ಹೀಗೆ ಪ್ರತಿಧ್ವನಿಸಿದವೇ ಎಂಬ ಕಲ್ಪನೆ.

  ಇಂದಿರೆ ಕೋಪದಿಂ ಭೃಗುವಿಭಂಗದಿ ಮಾಧವನಂ ವಿಯೋಗಿಸಲ್
  ಕುಂದಿದ ಭಾವದಿಂ ಕರೆಯೆ ವಿಷ್ಣು ದಶಾನ್ವಿತ ರಾಗ ಭಾವದಿಂ
  ಬಂದಿಹ ವಾಣಿಯೇಂ “ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  • ಆಹಾ! ತುಂಬ ಸೊಗಸಾಗಿ ಅದೇ ಹತ್ತು ಎಂಬ ಸಂಖ್ಯೆಯನ್ನು ನವವಿಧಾನದಿಂದ ಅನ್ವಯಿಸಿದ ಬಗೆಯಿಲ್ಲಿದೆ. ನಿಜಕೂ ಕಲ್ಪನೆಗೆ ಕೊರತೆಯೆಂಬುದಿಲ್ಲ. ವಾಗ್ದೇವಿಯು ಹರಸಿದಲ್ಲಿ ಯಾವುದು ತಾನೆ ಅಸಾಧ್ಯ!

 21. ಮಂದಿಯೆನಲ್ ‘ಸಖೀ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ’
  ಸ್ಪಂದಿಸಲಕ್ಕುಮೇ ಕುಜನಲಂಪಟರಾಟಕೆ ಸೊಲ್ಗಳಂಬುಗಂ
  ನಿಂದಿಸಲಕ್ಕುಮೇ ಖರರ ಕೀಳ್ಮೆಯ ನೋಟಕೆ ಸದ್ಗೃಹಸ್ಥೆಗಂ

  ಪದ್ಯ ಸ್ವಲ್ಪ ಶಿಥಿಲವಾಗಿದೆ ಎಂದು ತೋರುತ್ತದೆ

  • ಪ್ರಿಯ ಸೋಮ! You have again come to your form of replete parihaara-s!! ಸದ್ಯದ ಈ ಪದ್ಯಶೈಥಿಲ್ಯವಿದ್ದರೂ ಅಡ್ಡಿಯಿಲ್ಲ; ಪೂರಣಕ್ರಮವು ಅಭಿರಾಮವಾಗಿದೆ:-) ಉಳಿದ ಪೂರಣಗಳು ಚೆನ್ನಾಗಿವೆ. ಆದರೆ ಇನ್ನು ಮುಂದೆ ಮತ್ತೂ ಹೆಚ್ಚಾಗಿ ಪದ್ಯಶಿಲ್ಪದ ಕಡೆಗೆ ಗಮನವಿತ್ತಲ್ಲಿ ಒಳಿತು.ಈ ಬಗೆಗೆ ನನ್ನ ಲೇಖನವೊಂದು ’ಕಾವ್ಯಕಲ್ಪ’ ಗ್ರಂಥದಲ್ಲಿ ಕಾಣಬಹುದು.

   • ಗಣೇಶ್ ಸರ್ ಧನ್ಯವಾದಗಳು ನಿಮ್ಮ ಸಲಹೆಯನ್ನು ಪಾಲಿಸುತ್ತೇನೆ, ನಿಮ್ಮಿಂದ ಕಾವ್ಯಕಲ್ಪದ ಪ್ರತಿಯನ್ನು ಪಡೆಯುತ್ತೇನೆ 🙂

 22. ಪೊಂದಿಸೆ ಬಲ್ಮೆಯಿಂ ಸ್ವರಗಳಂ ದನಿಯೆತ್ತಿ ಸ ಗಾ ರಿ ಮಾ ಗ ಪಾ
  ಮಂದದೆ ರಾಗಮಂ ಬೆಳೆಸುತುಂ ನವಪಲ್ಲವಿಯಂ ಸರಾಗದಿಂ
  ಚೆಂದದಿ ಪಾಡಿದಂ “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  • ಆಹಾ! ಎಂಥ ನೂತನಪರಿಹಾರಕ್ರಮ!! ಚೀದಿ! ತುಂಬ ಅಭಿನಂದನೆಗಳು. ನಿನ್ನ ಸಂಗೀತಪರಿಜ್ಞಾನವಿಲ್ಲಿ ಸೊಗಸಾಗಿ ಅನ್ವಿತವಾಗಿದೆ.

 23. ವಿಂದೊಕೆಯೊಳ್ ಪ್ರವಾಸಕೆನೆ ಪೂರ್ವವಯರ್ಕಳ ದಾರ್ಢ್ಯದಾ ಸುಹೃ-
  ದ್ವೃಂದದೆ ಹಾಸ್ಯದಿಂಬು ನಗೆಬೀರುತಿರಲ್ ಗಡಮಾ ಸಿತೇತರ-
  ರ್ಗೆಂದೆನೆ ಪೇಳ್ದರಯ್ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ನಮೀಬಿಯಾದ ರಾಜಧಾನಿ ವಿಂದೊಕೆಯಲ್ಲಿ (Windhoek) ಪ್ರವಾಸಕ್ಕೆ ಹೋದ ತರುಣರು ಸಿತೇತರ ಮಹಿಳೆಯರನ್ನು ತಮ್ಮತಮ್ಮಲ್ಲೇ ಅಣುಕಿಸಿದರೆಂಬ ಪೂರಣ.

  ಇನ್ನೊಂದಂಶ ಈಗಿನಕಾಲದ ಹುಡುಗ್ರಿಗೆ ಘನಗಾಂಭೀರ್ಯ ಕಡಿಮೆ ಬಿಡಿ 😉

 24. ನೆನ್ನೆಯ ರಾತ್ರಿಯಲ್ಲಿ ಮೂರು ಹೊಸಬಗೆಯ ಪರಿಹಾರಗಳನ್ನು ಇಲ್ಲಿ ಟಂಕಿಸಿದೆನಾದರೂ ಅದಾವುದೋ ಪ್ರಮಾದದ ಕಾರಣ ಕಳುಹುವ ಮೊದಲೇ ಅವೆಲ್ಲವೂ ಮಾಯವಾದುವು. ಮೊನ್ನೆಯ ಚಂಡಮಾರುತದಲ್ಲಿ ಕುಯಿಲಿಗೆ ಬರಲಿದ್ದ ಪಸಲೆಲ್ಲ ನಿಟ್ಟೊರಸಲ್ಪಟ್ಟ ಹಾಗೆ ಎಲ್ಲ washout ಆಯಿತು:-( ಇದೀಗ ಮತ್ತೆ ಧಾರಣಾಬಲದಿಂದ ಹೇಗೋ ಅವನ್ನು ಗೆಳೆಯರ ಅವಗಾಹನೆಗಾಗಿ ನಿವೇದಿಸುತ್ತಿದ್ದೇನೆ.

  ಸಂದಿರೆ ಪಂಚವಕ್ತ್ರ-ಚತುರಾಸ್ಯ-ಮುರಾರಿಗಳಳಾಣ್ಮೆಯರ್ಕಳಂ
  ಚಂದವೆಸರ್ಗಳಿಂದೆ ಕರೆಯಲ್ಕೆ ತೊಡಂಗೆ ತೊಡಂಕಿದೆನ್ನುತುಂ |
  ಕುಂದೆನಲೇತಕೋ? ಸುಮಧುರೇ!…………………………..
  ……………………………………………………ಪ್ರಿಯೇ! ||

  (ತ್ರಿಮೂರ್ತಿಗಳ ಮುಖಗಳೆಲ್ಲ ಒಟ್ಟಾಗಿ ಹತ್ತು. ಆದುದರಿಂದ ಅವರೆಲ್ಲ ಒಮ್ಮೆಲೇ ತಮ್ಮ ಸತಿಯರನ್ನು ಆಹ್ವಾನಿಸುವಾಗ ಸಮಸ್ಯೆಯು ಸಮಸ್ಯೆಯೇ ಆಗಿ ಉಳಿಯದು. ಇಂತಿರಲು ತೊಡಕೆಲ್ಲಿ?)

  ನಂದಿತಪೃಚ್ಛಕಾರ್ಯ! ನಿಮಗಂ ಸತಿಯಂ ನುತಿಸಲ್ಕೆ ಶಂಕೆಯೇಂ?
  ಸ್ಪಂದಿಸಿ ಸಾಹ್ಯಮೀವೆನಿದೊ ಕೊಳ್ಳಿಮ್, ಉದಾರಿ ಗಡಾಂ “ಸಖೀ! ಸುಧಾ-
  ಮಂದಿರೆ! ಮೋಹಿನೀ! ಸುಮಧುರೇ!………………………………
  …………………………………………………………..ಪ್ರಿಯೇ!” ||

  (ಇದು ಪೃಚ್ಛಕನಿಗೇ ತಿರುಮಂತ್ರದಂಥ ಪರಿಹಾರ.ಇಲ್ಲಿ ಸಮಸ್ಯೆಯ ಮಾತುಗಳಿಗೆ ಮತ್ತೆ ಮೂರು ಸಂಬೋಧನಗಳನ್ನೂ ಸೇರಿಸಿ ಅಲ್ಲಿಯ ಸಂಖ್ಯಾಛಲದ ಸಾಧ್ಯತೆಯನ್ನೂ ಇಲ್ಲವಾಗಿಸುವ ಮೂಲಕ ಪೃಚ್ಛಕನಿಗೆ ತನ್ನ ಸವಾಲೇ ಅಪ್ರಸ್ತುತವೆಂಬಂತೆ ವಿಡಂಬಿಸಿ ತಿರುಗಿಸಲಾಗಿದೆ:-)

  ನಿಂದಿಸೆ ನರ್ಮದಿಂ ದಯಿತನಾಣ್ಮೆಯನಾಕೆ ಕನಲ್ದ ಪಾಂಗಿನಿಂ-
  ದೆಂದಿರೆ “ದಂಡಮೀ ಕ್ರಮಕೆ ಮನ್ನುತಿ ನೂರ್ವಗೆಯಿಂದೆ ಗೆಯ್ವುದೆಂ-
  ದಂ”ದದೆ ಪೇಳ್ವನಯ್ : “ಸುಮಧುರೇ!……………………….
  ……………………………………………………ಪ್ರಿಯೇ!” ||

  (ಇದೊಂದು ದಾಂಪತ್ಯನರ್ಮಕಲಹ. ತನ್ನನ್ನು ಗಾಲಿಗಳಿಂದ ಗೇಲಿಗೊಳಿಸಿದನೆಂದು ಹುಸಿಮುನಿಸಿನ ಕಾಂತೆ ನಲ್ಲನ ಈ ಅಪರಾಧಕ್ಕಾಗಿ ದಂಡವನ್ನು ವಿಧಿಸುತ್ತಾಳೆ. ಆ ಪ್ರಕಾರ ಅವನು ಇವಳನ್ನು ನೂರು ಬಗೆಯಿಂದ ಹೊಗಳಬೇಕು. ಆಗ ಅವನು ಆನಂದದಿಂದ ಹೀಗೆ ಮೊದಲಿಡುತ್ತಾನೆ:-)

  ಸಹಪದ್ಯಪಾನಿಗಳ ಕಲ್ಪನವೈಭವವನ್ನು ಕಂಡ ಬಳಿಕ ನನಗೆ ಈ ಸಮಸ್ಯೆಗೆ ಅದೆಷ್ಟು ಪರಿಹಾರಸಾಧ್ಯತೆಗಳಿವೆಯೆಂದು ತೋರುತ್ತಿದೆ. ಆಹಾ! ಕವಿತಾವಾಗ್ವಿಲಾಸದ ಅನಂತಪ್ರಕಾರಗಳೆಷ್ಟು ವಿಸ್ಮಯಾವಹ! ಮುದಾವಹ!! ಈ ಬಗೆಯ ಆನಂದವನ್ನು ಈಯುತ್ತಿರುವ ಎಲ್ಲ ಸಹೃದಯರಿಗೂ ನನ್ನ ಹಾರ್ದಿಕಪ್ರಣತಿಶತಗಳು

  • “ರಾವಣನ ದಶಶಿರವದೇಂ? ನರನು ಶತಶಿರನು!…” ಅಲ್ಲವೇ ಗಣೇಶ್ ಸರ್? ಪೂರಣಗಳು ಬಹಳ ಇಷ್ಟವಾದವು . ಈ ಬಗೆಗಳಲೆಲ್ಲ ಪರಿಹರಿಸಬಹುದೆಂಬ ಊಹೆಯೂ ಇರಲ್ಲಿಲ್ಲ. ಎಲ್ಲ ಪದ್ಯಪಾನಿಗಳಿಗೂ ಧನ್ಯವಾದಗಳು .

  • ಗಣೇಶ್ ಸರ್, ನಿಮ್ಮ ಧಾರಣೆಯ ಬಲಕ್ಕೆ ಟಂಕಿಸುವ ಸಾಫ್ಟ್ವೇರ್ಗಳಲ್ಲಾಗುವ ಪ್ರಮಾದ ಯಾವ ಲೆಕ್ಕ 🙂

   ಮೊದಲ ಪದ್ಯ ಚೆನ್ನಾಗಿದೆ ಅದರಲ್ಲಿ ಮುರಾರಿಗಳಳಾಣ್ಮೆಯರ್ಕಳಂ -> -ಮುರಾರಿಗಳೊಳಾಣ್ಮೆಯರ್ಕಳಂ ಎಂದಾಗಬೇಕೆ?

   ಸುಖಸಂಸಾರಕ್ಕೆ ಹದಿಮೂರು ಸೂತ್ರ ಒದಗಿಸಿದ ತಿರುಮಂತ್ರದ ಎರಡನೇಯ ಪೂರಣ ವಿಶೇಷವಾಗಿದೆ

   ಮೂರನೆಯ ಪದ್ಯದಲ್ಲಿ ಸಂಬೋಧನೆಗಳಿಗೆ ಕೊಟ್ಟಿರುವ ತರ್ಕದ ಪೂರ್ವರಂಗ ಸೊಗಸಾಗಿದೆ

   • ಕ್ಷಮಿಸಬೇಕು; ಉಟ್ಟಂಕನಪ್ರಮಾದದಿಂದ ಉತ್ಪಲಮಾಲೆಯಲ್ಲಿ ಒಂದು ವಿಜಾತೀಯಸುಮವು ಹೆಚ್ಚಾಗಿ ಬಂದು ಸೇರಿದೆ:-)
    ಅದು “……….ಮುರಾರಿಗಳಾಣ್ಮೆರ್ಕಳಂ” ಎಂದಾಗಬೇಕು.
    ಸೋಮ, ಸೂಚನೆಗಾಗಿ ಧನ್ಯವಾದಗಳು.; ಮೆಚ್ಚುಗೆಗಾಗಿಯೂ ಮತ್ತಷ್ಟು ನಮನಗಳು.

 25. ಅಂದವ ತೋರುತುಂ ಬಳೆಗಳಂ ಝಲಝಲ್ಲೆನುತುಂ ಕರಂಗಳಂ
  ಬಂದಳು ನರ್ತಕೀ ಕನಸಿನೊಳ್ ಮದವೇರುತೆತಾನುಪೇಳಿದನ್
  ಗೊಂದಲ ಗೊಳ್ಳುತಾ – ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  • ಮೊದಲನೇ ಪಾದದಲ್ಲಿ ಸ್ವಲ್ಪ ಸವರಿಸಿದ್ದೇನೆ

   ಅಂದವ ತೋರುತುಂ ಬಳೆಗಳಂ ಝಲಝಲ್ಲೆನುತುಂ ಕರಂಗಳಿಂ
   ಬಂದಳು ನರ್ತಕೀ ಕನಸಿನೊಳ್ ಮದವೇರುತೆತಾನುಪೇಳಿದನ್
   ಗೊಂದಲ ಗೊಳ್ಳುತಾ – ಸುಮಧುರೇ ಮದಿರಾಕ್ಷಿ ಮನೋಹರೇ ವರೇ
   ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

 26. ಮಂದ ಸುಧೀರ ಕೇಳಲವಧಾನಿಯ ಭಾಮೆಗೆ ಹತ್ತು ಪತ್ರ, ಕೋ
  ಒಂದನೆ ಕಂತಿದೆಂದು ಭರದಿ ಕ್ರಮವಾಗಿ ವಧಾನಿ ಪೇಳಿದಾ |
  ಚೆಂದದ ಮಾತುಗಳ್ – ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ ||

  ಆದಿ ಪ್ರಾಸದ ಹಂಗಿಲ್ಲದೆ –

  ಕೆತ್ತಿದ ಹತ್ತುಶಿಲ್ಪಗಳ ತಾ ಕೊನೆಗೊಮ್ಮೆ ಮುಗುಳ್ನಗುತ್ತ ನೋ,
  ಡಿ ಶ್ರಮವಾರಿಬಿಂದುಕಲಿತಾಂಗ ಮಹಾ ಜಕಣಾಚಾರಿ ಶಿಲ್ಪಿ
  ಬೀಳ್ಕೊಡುತಿರ್ಪನೇ? – ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ ||

  ತಪ್ಪುಗಳನ್ನು ಮುಲಾಜಿಲ್ಲದೆ ತಿದ್ದಬೇಕೆಂದು ಕೋರುತ್ತಾ –

  • ಸುಧೀರ್ ಸರ್, ಆಹಾ! ಜಕಣಾಚಾರಿಯಿಂದ ಶಿಲ್ಪಗಳನ್ನು ಬೀಳ್ಕೊಡುವ ಕಲ್ಪನೆ ಬಹಳ ಹಿಡಿಸಿತು :), ಈ ಪದ್ಯದಲ್ಲಿ 2ನೇ ಸಾಲಿನ ಪಾದಾಂತ್ಯದಲ್ಲಿ ಗುರು ಬಿಟ್ಟುಹೋಗಿದೆ ಹಾಗೂ ಅದೇ ಸಾಲಿನಲ್ಲಿ ‘ಜಕಣಾಚಾರಿ’ಎಂಬ ಪ್ರಯೋಗ ಬಂದಿದೆ, ಎರಡು ಗುರು ಬಂದುಬಿಟ್ಟಿದೆ.

   • ಪ್ರಿಯ ಸುಧೀರ್, ನೀನು ಕನ್ನಡದಲ್ಲಿ ಬರೆಯುತ್ತಿರುವುದು ನಮಗೆಲ್ಲ ತುಂಬ ಮುದಾವಹ. ಹಳಗನ್ನಡದ ಆಭಿಜಾತ್ಯಕ್ಕೆ ಅಷ್ಟಿಷ್ಟು ಕೊರೆಯಾದರೂ ಅತ್ಯಂತವಿನೂತನವೂ ಅಭಿರಾಮವೂ ಆದ ಈ ಪರಿಹಾರಗಳ ಸೊಗಸಿಗಾಗಿ ನಾನುಉ ಮನಸಾರೆ ಮೆಚ್ಚದಿರಲಾರೆ. ಸೋಮನ ಸೂಚನೆಗಳೆಲ್ಲ ಮಾನ್ಯ.

   • ಪ್ರಿಯ ಸೋಮ, ಸೂಚನೆಗಳಿಗೆ ಧನ್ಯವಾದಗಳು.
    ಇಲ್ಲಿ ತಪ್ಪುಗಳಿರುವುದಕ್ಕೆ ಕಾರಣವೇನೆಂದು ಈ ಕೆಳಗಿನ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಸರಿಯೆಂದು ಗುರುತಿಸಿ.
    ೧) ಸೋಮನು ಪದ್ಯಪಾನದಲ್ಲಿ ಬಂದ ಪದ್ಯಗಳನ್ನೆಲ್ಲ ಸರಿಯಾಗಿ ಗಮನಿಸಿ ಓದುತ್ತಿರುವನೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ಸುಧೀರನು ಮಾಡಿದ ಕುತಂತ್ರ.
    ೨) ನಮ್ಮ ರಾಷ್ಟ್ರಗೀತೆಯಲ್ಲಿಯೇ ಹೇಳಿರುವಂತೆ ದಾಕ್ಷಿಣಾತ್ಯರು ಉತ್ಪಲಮಾಲೆಯಲ್ಲಿ ತಪ್ಪು ಮಾಡುವರು (ದ್ರಾವಿಡ ಉತ್ಪಲ ಭಂಗ.)
    ೩) ಸುಧೀರನು ಹಳೆಗನ್ನಡದ ಸಾಹಿತ್ಯವನ್ನು ಓದದೆ, “ಕಮ ಕಮ ಕಮ ಕಮಲಾಕ್ಷಿ, ಮಿಣ ಮಿಣ ಮಿಣ ಮೀನಾಕ್ಷಿ, ಪಟ ಪಟ ಪಟ ಪಂಚರಂಗಿ ಬಾರೆ, ಐತಲಕಡಿ ಬಾರೆ” ಮುಂತಾದ ಸಂಬೋಧನೆಗಳಿಂದ ಪ್ರಭಾವಿತನಾಗಿ ಅದರಂತೆಯೇ ಇದೂ ಎಂದು ಸಮಸ್ಯಾಪೂರಣಕ್ಕೆ ಧುಮುಕಿರುವುದು.
    ೪) ಮೇಲಿನ ಯಾವುದೂ ಅಲ್ಲ. ಸಾಮರ್ಥ್ಯದ ಕೊರತೆ ಮಾತ್ರ.
    🙂

    • ‘ದ್ರಾವಿಡ ಉತ್ಕಲ ವಂಗ’ ಎಂಬಲ್ಲಿ ಒಂದು ಪದವನ್ನು ಮಾತ್ರ ಏಕೆ ಕಾಗುಣಿತಶುದ್ಧವಾಗಿ ಉಳಿಸಿಕೊಂಡಿರಿ?

    • ಸುಧೀರ್ ಸರ್, haha ‘ದ್ರಾವಿಡ ಉತ್ಪಲ ಭಂಗ’ 2ನೇಯ ಆಯ್ಕೆ ಅದ್ಭುತವಾಗಿದೆ, 3ನೇ ಆಯ್ಕೆಯೂ ಬಹಳ ಸ್ವಾರಸ್ಯಕಾರಿಯಾಗಿದೆ, ಆದರೆ ನನ್ನ ಆಯ್ಕೆ ಒಂದು 🙂

 27. ಮದುವೆಯಾಗಿ ಬಹುಕಾಲ ಕಳೆದ ನಂತರವೂ ಪತ್ನಿಯನ್ನು ’ಪ್ರಿಯೇ’ ’ಮನೋಹರೇ’ ಇತ್ಯಾದಿ ಶಬ್ದಗಳಿಂದ ಸಂಬೋಧಿಸುತ್ತಿದ್ದ ಅಳಿಯನಿಗೆ ಮಾವನ ಮೆಚ್ಚುಗೆ – ಅಳಿಯನ ಮನದ ಪ್ರತಿಕ್ರಿಯೆ:-)

  ಚಂದದೊಳಾಣ್ಮೆಯಂ ’ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ’ |
  ಇಂದಿಗುಮಿಂತು ನೀಂ ಕರೆಯಲ್ ಸೊಗಸಿಂ ಬಹುತೋಷಮಾಯ್ತೆನಲ್
  ಮಂದದೆ ಪೇಳ್ದಪಂ ಪೆಸರನುಂ ಮರೆತೆಂ ಚಿರಕಾಲ ಸಂದಿರಲ್ ||

  • beautiful

  • ಪೆಜತ್ತಾಯರೆ, ಎಂದಿನಂತೆ ಅದ್ಭುತವಾದ ಕಲ್ಪನೆಯನ್ನು ಹಾಸ್ಯವನ್ನೂ ಬೆರೆಸಿ ಕೊಟ್ಟಿದ್ದೀರಿ :), ಟಂಕಿಸುವಲ್ಲಿ ಒಂದು ವ್ಯತ್ಯಾಸವಾಗಿರಬಹುದೇನೋ, ಮೂರನೇಯ ಸಾಲಿನಲ್ಲಿ 3 ಲಘುಗಳ ಬದಲು ‘ಕರೆಯಲ್’ ಎಂಬಲ್ಲಿ ಎರಡೇ ಲಘುವಿದೆ ಸವರಿಸಿರಿ.

   • ಆಹಾ! ಅತಿವೇಲಪರಿಹಾರ!! ಧನ್ಯವಾದ. ಆದರೆ ಸೋಮನೆಂದಂತೆ ಇಲ್ಲಿ “ಕರೆದಿರಲ್” ಎಂದು ಸವರಿಸಿದರೆ ಎಲ್ಲ ಸರಿಯಾದೀತು.

    • ಶರ್ಮರೆ, ಗಣೇಶ್ ಸರ್,
     ಧನ್ಯವಾದಗಳು 🙂 ಉತ್ಪಲಮಾಲೆಯಲ್ಲಿ ಕೈಯಿನ್ನೂ ಪಳಗಿಲ್ಲವಾದ್ದರಿಂದ ಎಡವಿದೆ. ಈಗ ಸವರಿಸಿದ್ದೇನೆ.
     ಚಂದದೊಳಾಣ್ಮೆಯಂ ’ಸುಮಧುರೇ ಮದಿರಾಕ್ಷಿ ಮನೋಹರೇ ವರೇ
     ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ’ |
     ಇಂದಿಗುಮಿಂತು ನೀಂ ಕರೆಯೆ ಬಲ್ಸೊಗಸಿಂ ಬಹುತೋಷಮಾಯ್ತೆನಲ್
     ಮಂದದೆ ಪೇಳ್ದಪಂ ಪೆಸರನುಂ ಮರೆತೆಂ ಚಿರಕಾಲ ಸಂದಿರಲ್ ||

  • cool!

  • Best twist. Here is another:
   Customer: Give me some ‘prepared monoaceticacidester of salicylic acid’.
   Pharmacist: You mean Aspirin?
   C: Yeah. I can never remember that name!

 28. ಎಲ್ಲರಿಗೂ ನಮಸ್ಕಾರ.

  ನನ್ನ ತಲೆಯಲ್ಲಿರುವ ಪುಟ್ಟ ಪದಕೋಶದಲ್ಲಿರುವ ಪದಗಳನ್ನು ಉಪಯೋಗಿಸಿ ಪದ್ಯ ರಚಿಸುವ ಪ್ರಯತ್ನ ಮಾಡಿದ್ದೇನೆ.
  ಎಂದಿನಂತೆ ತಪ್ಪಿದ್ದಲ್ಲಿ ತಿಳಿಸಬೇಕಾಗಿ ಮನವಿ.
  ————————————————————

  ಚಂದನ-ಚಂಪಕಾವೃತ ಮಹಾಘನ ಕಾನನದೊಳ್ ಮಯೂರ ತ
  ನ್ನಂದದ ಕುಂಚದಿಂದವನ ನಾಟ್ಯವ ತೋರುತಲೇ ಮಯೂರಿಗಿಂ
  ತೆಂದನು ಪ್ರೇಮದಿಂ “ಸುಮಧುರೆ ಮದಿರಾಕ್ಷಿ ಮನೋಹರೆ ವರೇ
  ಸುಂದರಿ ಶೊಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  • ತಮಗೆ ಪದ್ಯಪಾನದ ವತಿಯಿಂದ ಆತ್ಮೀಯಸ್ವಾಗತ. ಪೂರಣವೇನೋ ಯುಕ್ತವೆಂಬಂತೆ ತೋರಿದೆ. ಆದರೆ ಅರ್ಥಸ್ಪಷ್ಟತೆಯೋ ನಾವೀನ್ಯವೋ ಇಲ್ಲದಂತಿದೆ. ದಯಮಾಡಿ ಸವರಿಸಿರಿ.

   • ಪೂಜ್ಯ ಗಣೇಶರಿಗೆ ನನ್ನ ನಮಸ್ಕಾರಗಳು. ನೀವು ಹೇಳಿರುವ ಮಾತುಗಳನ್ನು ನೆನಪಿನ್ನಲಿಟ್ಟು ಕೊಳ್ಳುವೆ. ಈಗೀಗಲೆ ಗತಿಗಣುಗುಣವಾಗಿ, ಛನ್ದಸ್ಸಿಗಣುಗುಣವಾಗಿ ಪದಗಳನ್ನು ಜೋಡಿಸುತ್ತಿದ್ದೀನಿ. ನವೀನತೆ ಅರ್ಥಗಂಭೀರ ಪದ್ಯಗಳನ್ನು ರಚಿಸಲು ಪ್ರಯತ್ನಿಸುತ್ತೇನೆ.
    ನಿಮ್ಮೆಲ್ಲರ ಪ್ರೋತ್ಸಾಹ, ಸಹಾಯ ಬೇಕಾಗಿ ಮನವಿ.

   • ಅಂತೆಯೇ ಈ ಪದ್ಯದಲ್ಲಿ ನಾವೀನ್ಯತೆ ಇಲ್ಲವೆಂದು ತಿಳಿಯುತ್ತೆ. ಆದರೆ ತಾವು ಹೇಳಿದ ಅರ್ಥಸ್ಪಷ್ಟತೆ ಏನೆಂದು ತಿಳಿಯಲ್ಲಿಲ್ಲ. ದಯೆಮಾಡಿ ಅದರ ಬಗ್ಗೆ ಇನ್ನೂ ಸ್ವಲ್ಪ ಹೆಚ್ಚಿನ ವಿವರ ಕೊಡಬೇಕಾಗಿ ಮನವಿ.

 29. ಪಂಚಕನ್ಯೆಯರಲ್ಲಿ ಮಂಡೋದರಿ ಒಬ್ಬಳಾದರು, ಆಕೆಯು ತನ್ನ ಗಂಡ ಸೀತೆಯ ಕಂಡು ಮೊಹಿತನಗಿದ್ದನ್ನು ತಿಳಿದು, ಈ ರೀತಿಯ ಪ್ರಶ್ನೆಯನ್ನು ತನ್ನ ದಾಸಿಯರನ್ನು ಕೇಳಿದಳೆಂದು..

  ಕಂಡಿಹರೇನ್ ? ರಾವಣನು ಮೋಹಿಸಿ ಹಾರಿಸಿ ತಂದ ಸೀತೆಯಂ?
  ಚಂದದಿ ಸಾಟಿಯೇ೦? ಜನಕ ಕುವರಿ ಲಂಕಿಣಿ ರೂಪಲಾವಣ್ಯದೀಂ?
  ಅಂದದಿ ಆಕೆಯೇ “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  ಬಾಲಭಾಷೆಯಲ್ಲಿ ಬರಿದ್ದಿದ್ದೇನೆ, ತಪ್ಪಿದ್ದರೆ ದಯವಿಟ್ಟು ತಿಳಿಸಿ.

  • ಛಂದಸ್ಸಿನಲ್ಲಿ ತಪ್ಪಾಗಿದೆ. ಅಲ್ಲಲ್ಲಿ ಲಕ್ಷಣಕ್ಕೆ ಕೊರತೆಯಾಗಿದೆ. ನೀವೇ ವೃತ್ತದ ಗತಿಯೊಡನೆ ಹೋಲಿಸಿ ತಾಳೆ ನೋಡಬಹುದು. ಅಲ್ಲದೆ ಸಮಸ್ಯೆಯು ಸಂಬೋಧನವಿಭಕ್ತಿಯಲ್ಲಿದೆ. ನೀವು ಅದನ್ನು ಪ್ರಥಮವಿಭಕ್ತಿಯೆಂಬಂತೆ ಗ್ರಹಿಸಿರುವುದು
   ವ್ಯಾಕರಣದೃಷ್ಟಿಯಿಂದ ಸಲ್ಲದು. ಮಿಗಿಲಾಗಿ ಅರ್ಥವೂ ಕೆಡುತ್ತದೆ.

   • ನವೀನಾ! ತುಂಬಾ ದಿವಸಗಳ ನಂತರದ ಪ್ರಯತ್ನ, ಒಳ್ಳೆಯದು ನಡೆಯಲಿ…
    ಗಣೇಶರೆಂದಂತೆ ವೃತ್ತದ ಪಾಲನೆ ಸರಿಯಾಗಿಲ್ಲ ಗಮನಿಸುವುದು, ಪ್ರಯತ್ನವನ್ನು ಮುಂದುವರೆಸುವುದು 🙂

 30. ಸಂದಿಸೆ ಯುಕ್ತಿಯಿಂ ಕಪಟವೇಷದೆ ಬಂದವ ತಾಂ ವಿರಕ್ತಿಯಿಂ
  ಮಂದಿರ ಮೂರ್ತಿಗರ್ಚಿಸಿ, ಸುಭದ್ರೆಗೆ ಸೋಗಲಿ ಪಾರ್ಥನಾರ್ತದಿಂ
  ಪಿಂದೆಯೆ ಪೇಳ್ದನೈ, “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ” |

 31. “ಇಂದಿರೆ ಮೋಹಿನೀ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”
  ಬಂದಿರೆ ಕೋಣೆಯಿಂ ಮಗನ ಮೆಲ್ನುಡಿ, ಕೇಳ್ದನುಮಾನಗೊಂಡು ತಾ
  ಯಂದು ಪರೀಕ್ಷಿಸಲ್ಕವನ, ಕಂಡುದು ನಾಟಕ ಕಂಠಪಾಠವೈ !

  • ಒಳ್ಳೆಯ ಪೂರಣಗಳನ್ನು ಅಧಿಕಾಧಿಕಸಂಖ್ಯೆಯಲ್ಲಿ ನೀಡುತ್ತಿರುವುದಕ್ಕಾಗಿ ತಮಗೆ ತುಂಬ ಧನ್ಯವಾದಗಳು. ಈ ಸಮಸ್ಯೆಯ ಪೂರ್ತಿಯಂತೂ ತುಂಬ ಸುಂದರವಾಗಿದೆ.

   • ಧನ್ಯವಾದಗಳು ಗಣೇಶ್ ಸರ್, ಮೊದಲೆರಡು ಸಾಲುಗಳ ಐಡಿಯಾ ನಿಮ್ಮ ಪದ್ಯದ್ದು !

  • ಬಹಳ ಚೆನ್ನಾಗಿದೆ ಉಷಾ ಅವರೇ ವಿನೂತನ ಕಲ್ಪನೆ 🙂

  • ಇದನ್ನೇ ಸ್ವಲ್ಪ ತಿರುಚಿದ್ದೇನೆ:

   “ಇಂದಿರೆ ಮೋಹಿನೀ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
   ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”
   ಎಂದಿರೆ ಕೋಣೆಯಿಂ ಸಖನ ಮೆಲ್ನುಡಿ, ಕೇಳ್ದನುಮಾನಗೊಂಡು ತಾಂ
   ಬಂದು ಪರೀಕ್ಷಿಸಲ್ಕವನ, ಕಂಡುದು ನಾಟಕ ಕಂಠಪಾಠವೈ!

   😉

  • Good one Smt. Usha.

 32. ಎಂದಿಗೆ ಬರ್ಪನಾ ಸುಗುಣಮಂತ ರಸೈಶ್ವರನೆನ್ನನಪ್ಪಿ ಮು –
  ದ್ದಿಂದಲೆ ಕಟ್ಟಿ, ಚುಂಬಿಸುತೆ ಮೈ ನವಿರೇಳಿಸಿ ಕಾಡುತೆನ್ನ ಕೂ –
  ಡೆಂದುಸುರುತ್ತಲುಂ – “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  – ಆ ಚೆಲುವೆಯ perspective
  [ಬಹಳ ಲಘುಗಳು ಬರುವುದರಿಂದ ಹೆಳೆಗನ್ನಡಕ್ಕೆ ಕೊರೆಯಾಗಿದೆ]

  • ಒಳ್ಳೆಯ ಕಲ್ಪನೆ ರಾಮ್, ಇದರ ಭಾಷೆಯನ್ನು ಮತ್ತಷ್ಟು ಬಿಗಿಯಾಗಿಸುವುದು ಸುಲಭ. ಅದು ಹೀಗೆ:

   ಎಂದಿಗೆ ವರ್ಪನಾ ಸುಗುಣಶಾಲಿ ರಸೇಶ್ವರನೆನ್ನನಪ್ಪಿ ಮು-
   ದ್ದಿಂದುರೆ ಕಟ್ಟಿ ಚುಂಬಿಸುತೆ ಮೆಯ್ ನವಿರೇಳಿಸಿ ಕಾಡುತೊಲ್ದು ಕೂ-
   ಡೆಂದುಸುರ್ವಂ ಗಡಾ “ಸುಮಧುರೇ!…………………………
   ………………………………………………….ಪ್ರಿಯೇ!” ||

   • ಮೆಚ್ಚುಗೆಗೆ ಧನ್ಯವಾದ. ಸವರಣೆ ಬಹಳ ಚೆನ್ನಾಗಿದೆ. ಈ ಸವರಣೆಯೇ ಒಂದು ಅಮೂಲ್ಯ ಪಾಠದಂತಿದೆ. ‘ಎನ್ನ’ ಎಂಬುದು ಪುನರುಕ್ತಿಯಾಗಿದೆ ಎಂದು ಗಮನಿಸಿರಲಿಲ್ಲ – ಅದನ್ನು ‘ಒಲ್ದು’ ಎಂದು ಬದಲಿಸಿದ್ದೂ ಅತಿ ಸಮಂಜಸವಾಗಿದೆ.
    ಮುಂದೆ ಓದುಗರಿಗೆ (ನನ್ನನ್ನೂ ಸೇರಿಸಿ) ಆಗಬಹುದಾದ ಉಪಯೋಗವನ್ನರಿತು, ಮೂಲ ಪದ್ಯವನ್ನು ಅಲ್ಲಿಯೇ ಸವರಿಸದೇ ಹಾಗೇ ಬಿಟ್ಟಿರುತ್ತೇನೆ.
    ಎಂದಿಗೆ ರ್ಪನಾ ಸುಗುಣಮಂತಶಾಲಿಸೈಸೇಶ್ವರನೆನ್ನನಪ್ಪಿ ಮು –
    ದ್ದಿಂದಲೆದುರೆ ಕಟ್ಟಿ, ಚುಂಬಿಸುತೆ ಮೈ ನವಿರೇಳಿಸಿ ಕಾಡುತೆನ್ನತೊಲ್ದು ಕೂ –
    ಡೆಂದುಸುರುತ್ತಲುಂರ್ವಂ ಗಡಾ – “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
    ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

    • ರಾಮ್, ನಿನ್ನ ಸಹೃದಯತೆಗೆ ಧನ್ಯವಾದ.
     ನಾನು ಪದೇ ಪದೇ ಹೇಳುವಂತೆ ಪದ್ಯವೊಂದಕ್ಕೆ ಛಂದಸ್ಸಿನ, ಅಲಂಕಾರದ, ಹಳಗನ್ನಡದ, ಆಭಿಜಾತ್ಯದ ಹದವನ್ನು ತರುವುದು ತೀರ ಕಷ್ಟವೇನಲ್ಲ. ಅದೊಂದು ಸಣ್ಣ ಪುಟ್ಟ ಬಗೆಯ ಜಾಗರೂಕತೆ, ರಸಿಕತೆಯ ಸೂಕ್ಷ್ಮಸಂವೇದನೆ ಅಷ್ಟೇ. ಸ್ವಲ್ಪ ಗಮನವಿರಿಸಿ ನಮ್ಮ ಮಹಾಕವಿಗಳ ಜಾಡನ್ನು ಅನುಭವಿಸಿದರೆ ಸಾಕು; ಅದು ಸಿದ್ಧ:-) ಹೀಗಾಗಿ ಯಾರೂ ಇದನ್ನು ಅಸಾಧ್ಯ ಆದರ್ಶವೆಂದು ಭಾವಿಸಬೇಕಿಲ್ಲ.ಎಲ್ಲರೂ ಸರ್ವದಾ ಧೈರ್ಯೋತ್ಸಾಹಗಳಿಂದ ಯತ್ನಿಸಬೇಕಷ್ಟೇ.

  • ರಾಮ್ ಚೆನ್ನಾಗಿದೆ ಪೂರಣ

 33. ಸಂದರ್ಭ: ಶ್ರೀ ಹರಿಯು ಬಹಳ ದಿನಗಳ ನಂತರ ಕೈಲಾಸದಲ್ಲಿ ಶಿವನನ್ನು ಭೇಟಿಯಾಗಲು ಬಂದಿರುವಾಗ, ತನ್ನ ಗೆಳೆಯನನ್ನು ಸುಮ್ಮನೆ ಆಟ ಆಡಿಸಲು ಹರಿಯ ಮೋಹಿನಿ ರೂಪವನ್ನು ನೆನೆಸಿಕೊಂಡು, ಹರಿಯನ್ನೇ ತನ್ನ ಸಖಿಯಂತೆ ಸಂಭೋದಿಸುತ್ತಿರುವ ಸಂದರ್ಭ.

  ತಪ್ಪುಗಳನ್ನು ತಿದ್ದಿ ತಿಳಿಸಬೇಕಾಗಿ ವಿನಂತಿ.
  ————————————————————————————————————
  ಸಂದಿಸಲೆಂದು ಬಂದ ಪರಮಾಪ್ತನನಾಡಿಸಲೆಂದು ಶೂಲಿಯಾ
  ನಂದದಿ ಇಂದಿರಾಪತಿಯನೈ ಕುರಿತಾಗಿ ಸರಾಗದಿಂದಲಿಂ
  ತೆಂದನು ಹಾಸ್ಯದಿಂ “ಸುಮಧುರೆ ಮದಿರಾಕ್ಷಿ ಮನೋಹರೆ ವರೇ
  ಸುಂದರಿ ಶೊಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  • ಕಮಲಪಾದರೆ ಒಳ್ಳೆಯ ಕಲ್ಪನೆ :), ಸಣ್ಣ ಸವರಣೆಗಳಿವೆ ‘ಅಂದದಿ ಇಂದಿರಾಪತಿಯನೈ’ ಎಂಬಲ್ಲಿ ಸಂಧಿಯಾಗಬೇಕಾಗುತ್ತದೆ ಮತ್ತು ಇಂದಿರಾಪತಿಯನೈ ಇಂದಿರಾಪತಿಯನ್ನು ಕುರಿತು ಎಂದಾಗುವುದಿಲ್ಲ ಇಂದಿರಾಪತಿಯನಯ್ಯ ಎಂದಾಗುತ್ತದೆ ಸವರಿಸಿರಿ

   • ಸೋಮಣ್ಣನಿಗೆ ಧನ್ಯವಾದಗಳು.

    ಪಾಠ ಇನ್ನೂ ತಲೆಯಲ್ಲಿ ನೆಲೆಸಿಲ್ಲ ಅಂತ ಕಾಣುತ್ತೆ. ಸಂಧಿಯಾಗುವ ಪದಗಳನ್ನು ಕೆಲವೊಮ್ಮೆ ಸಂಧಿಸದೆಯೇ ಬಿಟ್ಟುಬಿಡ್ತಿದೀನಿ. ಇನ್ನು ಮುಂದೆ ಜಾಗರೂಕನಾಗುವೆ.

    ಸ್ವಲ್ಪ ಸವರಿಸಿದ್ದೇನೆ. ಬೇರಾವುದಾದರು ತಪ್ಪಿದ್ದಲ್ಲಿ ತಿಳಿಸಿ.
    ——————————————————————
    ಸಂದಿಸಲೆಂದು ಬಂದ ಪರಮಾಪ್ತನನಾಡಿಸಲೆಂದು ಶೂಲಿಯಾ
    ನಂದದಿ ಪದ್ಮಪಾಣಿ ಹರಿಯನ್ ಕುರಿತಾಗಿ ಸರಾಗದಿಂದಲಿಂ
    ತೆಂದನು ಹಾಸ್ಯದಿಂ “ಸುಮಧುರೆ ಮದಿರಾಕ್ಷಿ ಮನೋಹರೆ ವರೇ
    ಸುಂದರಿ ಶೊಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

 34. ನನ್ನ ವತಿಯಿಂದ ಎರಡು ಪೂರಣಗಳ ಪ್ರಯತ್ನ. ತಪ್ಪುಗಳಿದ್ದಲ್ಲಿ ಕ್ಷಮೆಯೊಂದಿಗೆ ಸಲಹೆಗಳಿರಲಿ. 🙂

  ಸಂದಿರೆ ಭಾಮೆಯಾ ಕಲಹಮಂದು ಮುರಾರಿಯ ರಾಜಸೌಧದೊಳ್
  ಚಂದನಲೇಪನೋಷ್ಣದೊಳಮಾಶರನುಂ ಮಸುಳಲ್ಕಮಿಂತು ಗೋ
  ವಿಂದನುಮಾರ್ದನಯ್ “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  (ಭಾಮಾ – ಕೃಷ್ಣರ ಕಲಹವು ಪುರಾಣಪ್ರಸಿದ್ಧವಷ್ಟೇ. ಸತ್ರಾಜಿತಸುತೆಯ ಮುನಿಸು ಹಾಗೂ ಕೃಷ್ಣನು ಅದನ್ನು ಸಂತೈಸುವ ಸೊಗಸು ಸುಬೋಧವು. ಒಮ್ಮೆ ಭಾಮೆಯ ಮುನಿಸು ಮೇರೆಯನ್ನು ಮೀರಿ ಆಕೆಯು ಮೈಗೆ ಲೇಪಿಸಿದಂತಹ ಚಂದನವು ಉಷ್ಣಪೂರಿತವಾಗಿ ಅಗ್ನಿಯ ತಾಪವನ್ನು ಮೀರಿಸಿದಾಗ ಕೃಷ್ಣನು ಆಕೆಯನ್ನು ಸಂತೈಸಲು “ಸುಮಧುರೇ ಮದಿರಾಕ್ಷಿ….” ಇತ್ಯಾದಿ ಹೊಗಳಿಕೆಗಳ ರಾಶಿಯನ್ನೇ ಆಕೆಯ ಮುಂದಿಟ್ಟನು.)

  ಅಂದದೊಳಂ ಬ್ರಿಗೇಡುಪಥದೊಳ್ ಗಡಮಾರ್ಭಟಿಸಲ್ಕೆ ಭಾವದಿಂ
  ದೆಂದಿಗಮಾನು “ಹಾ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”
  ನಿಂದಿಪರಲ್ತೆ ಜೀನ್ಸುಧರೆಯರ್ ನಿಜದಿಂದೊಲಿದಿತ್ತು ಬಪ್ಪರೇ ?

  (ಇದು ಕಪೋಲ ಕಲ್ಪಿತವಷ್ಟೇ. Brigade Roadನಲ್ಲಿ ನಿಂತು ಅಚ್ಚ ಕನ್ನಡದಲ್ಲಿ “ಸುಮಧುರೇ ಮದಿರಾಕ್ಷಿ…” ಎಂದೆಲ್ಲ ಕೂಗಿದರೆ ಇಂದಿನ ultra-modern ಚೆಲುವೆಯರು ನಿಂದಿಸದೆ ಮರುಳಾಗುವರೇ ? ಎಂಬ ಸಂಶಯ.)

  • ಪ್ರಿಯ ಮೌರ್ಯ, ನಿನ್ನ ಎರಡನೆಯ ಸಮಸ್ಯಾಪೂರಣ ಅಭಿರಾಮ ಹಾಗೂ ಪ್ರತಿನವ.ಇದಕ್ಕಾಗಿ ಹಾರ್ದಿಕವಾದ ಅಭಿನಂದನೆ. ಅಂದ ಹಾಗೆ ನೀನೇ ಏಕೆ ಬ್ರಿಗೇಡ್ ರಸ್ತೆಯಲ್ಲಿ ನಿನ್ನ ಪದ್ಯದ ಸೂಚನೆಯನ್ನು ಜಾರಿಗೆ ತರಬಾರದು? charity begins from home ಅಲ್ಲವೇ!:-)

   • ಗುರುಗಳೇ,
    ತಮ್ಮ ಆಶೀರ್ವಾದಪುರಸ್ಸರವಾದ ಅಭಿನಂದನೆಗಳಿಗೆ ವಚಸಾ,ಮನಸಾ ಧನ್ಯವಾದಗಳು .
    Brigade roadನಲ್ಲಿ ಕನ್ನಡದ ಸಂಭಾಷಣೆಯೇ sub-standard ಎಂದು ಆಗಿರುವಾಗ, ನಾಟಕೀಯವಾದ ಪಳಗನ್ನಡದ ಒರಲು ಮತ್ತೂ ಹಾಸ್ಯಾಸ್ಪದವಾದೀತು. ಆ ಲಲನಾಮಣಿಯರ ಸಹವಾಸ ನನ್ನಂಥವನಿಗೆ ದೂರ. ಮೊದಲೇ ನಾನು ಬ್ರಹ್ಮಚಾರಿ. ಶತಮರ್ಕಟಸದೃಶನೂ ಆಗಬೇಕೆನ್ನುವಿರಾ ? 😛 🙁 🙂

 35. ಅಂದವ ಪಾಡಿರಲ್ “ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”
  ಎಂದನುರಾಗದಿಂ ಮುದದಿ ತನ್ಮನದನ್ನೆಗೆ, ಹತ್ತಕಟ್ಟಿರೇಂ
  ಕೊಂದಿನಿಮುತ್ತಕಟ್ಟಿರೆನೆ ತಾಂಭರದಿಂದಪ್ಪಿ ಮುತ್ತನೊತ್ತಿದನ್ !

  (“ಪ” ಒತ್ತು ಪ್ರೀತಿ ಹೆಚ್ಚಾಗಿ ಬಂದದ್ದು, ನನ್ನದೇನುತಪ್ಪಿಲ್ಲ)

  • ಒಂದು ಚಿಕ್ಕ ಬದಲಾವಣೆ : ಮುತ್ತನೊತ್ತಿದನ್ ! / ಮುತ್ತನಿತ್ತನೇಂ?

 36. ನನ್ನದೊಂದು ಹೊಸ ಪರಿಹಾರ:
  ಕುಂದಿ ಯುವಾವಧಾನಿ ಸಭೆಯೊಳ್ ಜವನಾಶುಕವಿತ್ವರೀತಿಯೆಂ-
  ತೆಂದು ಮಹಾವಧಾನಿವರನೊಳ್ ನುಡಿಯಲ್ ನಗುತೆಂದನಾತನ್ “ಈ
  ಚಂದದೆ ಪೇಳ್ವುದಯ್ “ಸುಮಧುರೇ!………………………………
  ………………………………………………………….ಪ್ರಿಯೇ!” ||

  { ಪ್ರವರ್ಧಮಾನನಾದ ಅವಧಾನಿಯೊರ್ವನು ಪ್ರಬುದ್ಧನಾದ ಅವಧಾನಿಯೊರ್ವನಲ್ಲಿ
  ಕೇಳಿದನು: “ಸಭೆಯಲ್ಲಿ ವೇಗವಾಗಿ ಆಶುಕವಿತೆಯನ್ನು ಹೇಳುವುದಕ್ಕೆ ಕೆಲವೊಂದು ಮಾದರಿಗಳನ್ನು ಸೂಚಿಸಿರಿ”. ಅದಕ್ಕೆ ಹಿರಿಯನು ಹೀಗೆಂದನು:” ಕಷ್ಟವೇನಿಲ್ಲ, ಸುಮ್ಮನೆ ಚೆಲುವಾದ ಸಿದ್ಧಪದಗಳನ್ನು ಛಂದಸ್ಸಿನ ಮೂಸೆಯಲ್ಲಿ (ಅರ್ಥ-ಔಚಿತ್ಯಗಳ ವಿವಕ್ಷೆಯಿಲ್ಲದೆ) ಹಾಕುತ್ತ ಸಾಗಿದರೆ ಸಾಕು. ಅದು ಹೀಗೆ: ಸುಮಧುರೇ!……….ಇತ್ಯಾದಿ:-)}
  ಜವನ = ವೇಗ

 37. ಪೊಂದಿಸಿದೋಲೆಗಟ್ಟದುರುಳಲ್ ಚಕಿತಂ ಬಿಡಿಸುತ್ತೆ ನೋಳ್ಪೊಡೊಂ-
  ದೊಂದರೊಳಪ್ಸರೇ ಸುಮಧುರೇ ಮದಿರಾಕ್ಷಿ ಮನೋಹರೇ ವರೇ |
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ
  ಎಂದಿರಲೇತಕೆಂದೊರೆಯಲಾಂ ಪ್ರಿಯತಾಹದ ಬೇಟೆಗೆಂದನೈ ||

  ಪ್ರಿಯತಾಹ = ಪ್ರೇಮಿಗಳ ದಿನ.
  ಬೇಟೆ = ಪ್ರೇಯಸಿಯ ಪ್ರಾಪ್ತಿಗಾಗಿ ಅನ್ವೇಷಣೆ.

  ಮಿತ್ರನಿರಿಸಿದ್ದ ಓಲೆಗಟ್ಟು ಅಕಸ್ಮಾತ್ ಉರುಳಿ ಬಿದ್ದು, ಅದನ್ನೆತ್ತಿ ನಾನೋದಿದಾಗ ಒಂದೊಂದರಲ್ಲೂ ಅಪ್ಸರೇ ಸುಮಧುರೇ ಇತ್ಯಾದಿ ಪದಗಳಿದ್ದವು. ಏಕೆಂದು ಕೇಳಿದಾಗ ಪ್ರೇಮಿಗಳ ದಿನದಂದು ಹುಡುಗಿಯರಿಗೆ propose ಮಾಡಲು ಎಂದನು. ಎಂದರ್ಥ 🙂
  ಈ ಪ್ರಸಂಗ 100% ಕಾಲ್ಪನಿಕ 😉

  • ಪೆಜತ್ತಾಯರೆ 100% ಕಾಲ್ಪನಿಕವೆಂದು ಕಣ್ಣುಹೊಡೆದಿದ್ದೀರಿ ಅರ್ಥವಾಯಿತು ಬಿಡಿ, ಪ್ರಯತ್ನ ಫಲಿಸಿತೋ ಇಲ್ಲವೋ ಎಂದು ಸರ್ವರಸಮ್ಮುಖದಲ್ಲಿ ಕೇಳಿ ನಿಮಗೆ ತೊಂದರೆ ಕೊಡುವುದಿಲ್ಲ 🙂

   • 🙂 ಪತ್ರಗಳು ಮಿತ್ರನವೆಂದು ಮೊದಲೇ ಹೇಳಿದ್ದೇನಲ್ಲ ಶರ್ಮರೆ 🙂

 38. 10 🙂
  ಕುಂದಿತೆ ನೇಹಮಾಂ ಮುಳಿಯೆ? ಪೋಗದಿರೌ ತವರಿಂಗೆ ಹಾ ವೃಥಾ-
  ಕ್ರಂದನಮೇನೆನುತ್ತೆ ರಮಣಂ ತಲೆವಾಗುತೆ ಪೇಳ್ದನೈ ಮೃಷಾ-
  ಸ್ಪಂದನಮಿಂತುಟೇಂ! ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ಮನಸ್ತಾಪದಲ್ಲಾಡಿದ ಮಾತನ್ನೇ ದೊಡ್ಡದು ಮಾಡಿ ಅಬ್ಬರದಿಂದ ಪ್ರತಿಕ್ರಿಯಿಸಿ ತವರಿಗೆ ಹೋಗಲು ನಿಂತ ಹೆಂಡತಿಗೆ ಗಂಡನು ಬೇಡುವ ಪರಿಪರಿಯಾದ ಪ್ರಯತ್ನ

 39. ಇಂದುವಿಹಾಸಿಭಾಸಮುಖಿಯರ್ ಬೆಡಗಿಂ ನಲಿದಾಡಿಪಾಡುತಿ-
  ರ್ದಂದಮನೀಕ್ಷಿಸುತ್ತೆ ಬಿಡುಗಣ್ಣಿನಿನುತ್ತರನೆಲ್ಲರಂ ಮಹಾ-
  ನಂದಿ ಪೊಗಳ್ದನೈ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ ||

  • ಇಂದುವಿಹಾಸಿಭಾಸಮುಖಿಯರ್ = ಚಂದ್ರನನ್ನೂ ಅಣಕಿಸುವಷ್ಟು ಕಾಂತಿಯ ಮುಖವುಳ್ಳವರು.
   ಉತ್ತರಂ = ಉತ್ತರಕುಮಾರ.

 40. ಮತ್ತೊಂದು ಪ್ರಯತ್ನ:
  ಸಂದರ್ಭ: ಒಳ್ಳೆಯ ರಾಜಭೋಗ ತಿನ್ನಲು ಆಸೆ ಪಟ್ಟ ಗಂಡನು ತನ್ನ ಹೆಂಡತಿಯನ್ನು ಹೊಗಳಿ ಒಳ್ಳೆಯ ಊಟ ಮಾಡಿಸಿಕೊಳ್ಳುವ ಯೋಜನೆ.

  ತಿದ್ದುಪಡಿ ತಿಳಿಸತಕ್ಕದ್ದು
  —————————
  ಇಂದು ಪ್ರಧಾನವಾಗಿ ರಸದೌತಣ ಮಾಡಿಸಿಕೊಳ್ಳುವಾಸೆಯೊಳ್
  ಬಂದುದೆ ನಿಂತು “ಹೇ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”
  ಎಂದವ ತನ್ನ ಪತ್ನಿಯನು ಮಾತಿನ ಹಗ್ಗದಿ ಕಟ್ಟುಹಾಕಿದನ್

 41. ನಮ್ಮೀ ಉತ್ಪಲಮಾಲೆಗಳನ್ನು ಸಮಸ್ಯಾಸರ್ಜಕರಾದ ಕೀ.ಶೇ.ಲಂಕಾಕೃಷ್ಣಮೂರ್ತಿಯವರಿಗರ್ಪಿಸುವುದು ಚೆನ್ನಲ್ಲವೇ :-)?

  ಮಂಕಾಗಿರ್ದವಧಾನಕಂ ಮಗುಳಿಮೀ ಕರ್ನಾಟದೊಳ್ ರಾಗರಿಂ
  ಶಂಕುಸ್ಥಾಪನೆಗೆಯ್ದ ಚಾರುಕವಿತಾಸಾರಪ್ರಸಾರಾಧಿರಾಡ್-
  ಲಂಕಾಪೂರ್ವಕಕೃಷ್ಣಮೂರ್ತಿಬುಧತಾವಾರಾಶಿಯಾ ಪಾದಸ-
  ತ್ಪಂಕೇಜಂಗಳೊಳರ್ಪಿಸಲ್ಕೆ ಪದಪಿಂ ಪೂಮಾಲೆಗಳ್ ಧನ್ಯವಯ್ ||

  • ಉಚಿತವಾಗಿದೆ. ಧನ್ಯವಾದಗಳು.

  • ಪ್ರಿಯ ಪೆಜತ್ತಾಯರೇ!
   ನೀವು ಪ್ರಾತಃಸ್ಮರಣೀಯರಾದ ಕೀ.ಶೇ. ಲಂಕಾ ಕೃಷ್ಣಮೂರ್ತಿಯವರನ್ನು ನೆನೆಯುವ ಮೂಲಕ ಅವರ ಹಾಗೂ ಅವರಂತೆಯೇ ಇಂದು ಕೀರ್ತಿಶೇಷರೇ ಆಗಿರುವ ನನ್ನ ಇನ್ನಿತರ ಹಿರಿಯರ, ವಿದ್ವನ್ಮಿತ್ರರ ಪುಣ್ಯಸ್ಮರಣೆಯನ್ನೇ ನನ್ನ ಪಾಲಿಗೆ ಮರುಕಳಿಸಿಕೊಟ್ಟಿದ್ದೀರಿ. ಸರ್ವಶ್ರೀ ಟಿ.ಎನ್. ಪದ್ಮನಾಭನ್, ತಾಳ್ತಜೆ ಕೇಶವಭಟ್ಟ, ರಾಜೀವಲೋಚನಂ ಮುಂತಾದ ಎಲ್ಲರ ನೆನಪಾಗಿ ಹನಿಗಣ್ಣಾಗಿದ್ದೇನೆ. ಇವರೆಲ್ಲ ಅವಧಾನರಸಿಕರಾಗಿ, ಅಭಿಜಾತಕಾವ್ಯನಿರ್ಮಾಣ-ಆಸ್ವಾದ-ಪ್ರಸಾರಗಳಲ್ಲಿ ಬದ್ಧಾದರರಾಗಿದ್ದರು. ಇಂದು ಅವರು ನಮ್ಮೊಡನೆ ಇದ್ದು ಪದ್ಯಪಾನದಂಥ ಪ್ರಕಲ್ಪವನ್ನು ಕಂಡಿದ್ದಲ್ಲಿ ಅದೆಷ್ಟು ಹರ್ಷಿಸುತ್ತಿದ್ದರೋ ಊಹಿಸಲಾರೆ. ಅವರೆಲ್ಲರ ಸವಿಗನಸನ್ನು ನಸಾಗಿಸುತ್ತಿರುವ ನಿಮ್ಮಂಥ ಪದ್ಯಪಾನಿಮಿತ್ರರಿಗೆಲ್ಲ ಈ ಮೂಲಕ ಅವರ ಹಾಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.

   • ಧನ್ಯೋಽಸ್ಮಿ 🙂 ನಿಮ್ಮ ನುಡಿಗಳಿಗಳಿಗೆ & ಪದ್ಯಪಾನಿಗಳಲ್ಲೊಬ್ಬನಾದುದಕ್ಕೆ.

 42. ಮಂದಿರ ದಾಚೆತಾನಡೆದಪಳ್ ಸುರಸುಂದರಿಕೋಪತಾಪದಿಂ
  ಬಂದಳು ನೀರಿನಾ ಕೊಳದೊಳಾಪ್ರತಿಬಿಂಬವಮೆಚ್ಚಿನೋಡೆತಾ
  ನೆಂದಳ – ದಾರಿವಳ್, ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ಬಂದನು ಪುಂಡತಾ ಗೆಳೆತಿಯರ್ಗಪಹಾಸ್ಯವಮಾಡಲೆಂದುನಿಂ
  ತೆಂದನು ಕೇಳಿರೈ ಪ್ರಥಮಸಾಲಿನಪೆಣ್ಗಳನಾಮಧೇಯಮಂ
  ಚಂದಿರೆ, ಮೋಹಿನೀ, ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ

  ಬಂದಿಪ ಪೂರ್ವದೇಶದಕವಿಂ ಸರಿತಾನೆನ್ನುತಲನೇಕರೊಳ್
  ವಂದಿಸುತೆಲ್ಲರಿಂಗೆ ಸಭೆಯೊಳ್ ತೆರೆದಿಟ್ಟಿದನೀ ಸಮಸ್ಯಯಂ
  “ಕೊಂದಳು ಕಂದನಂ ಸುಮಧುರೇ ಮದಿರಾಕ್ಷಿ ಮನೋಹರೇ ವರೇ
  ಸುಂದರಿ ಶೋಭನಾಂಗಿ ತರುಣೀ ರಮಣೀ ರಸಿಕಪ್ರಿಯೇ ಪ್ರಿಯೇ”

  • ಪ್ರಿಯ ಶ್ರೀಧರ,

   ಉತ್ಪಲಮಾಲೆಯು ನಿನಗೆ ಈ ವೇಗದಲ್ಲಿ ಒಲಿದುದಕ್ಕಾಗಿ ಅಭಿನಂದನೆಗಳು. ಆದರೆ ಭಾಷಾಪ್ರಯೋಗದೃಷ್ಟ್ಯಾ ಕೆಲವೊಂದು ದೋಷಗಳಿವೆ. ಅವನ್ನೆಲ್ಲ ವಿವರವಾಗಿ ದೂರವಾಣಿಯಲ್ಲಿ ತಿಳಿಸುವೆ. ಅಥವಾ ನಮ್ಮ ಸೋಮಣ್ಣನೇ ನೆರವಾದಾನು.

 43. वृद्धिपथोपलिप्सुरिति यः परिदृश्य विदेशपत्तना-
  न्याव्रजितो भृमीन्स कुटिलो भृमिनामकवद्विदेशिनाम् |
  ख्यापयति क्रमेण, मधुरे मदिराक्षि मनोहरे वरे
  सुन्दरि शोभनङ्गि ललने प्रमदे रसिकप्रिये प्रिये ||

  ಇಲ್ಲಿ ಕುಟಿಲ ರಾಜಕಾರಣಿಯೊಬ್ಬ ಅಭಿವೃದ್ಧಿಯ ವಿಷಯಗಳನ್ನು ತಿಳಿದು ಬರುವೆನೆಂದು ವಿವಿಧದೇಶಗಳ ಪ್ರವಾಸ ಮಾಡಿ ಅಭಿವೃದ್ಧಿಯ ಬಗ್ಗೆ ಏನೂ ತಿಳಿಯದೆ ಅದರ ಬದಲಿಗೆ ಮಾರುತಗಳಿಗೆ ವಿದೇಶದಲ್ಲಿ isabella, katrina ಎಂದೆಲ್ಲ ಹೆಸರಿಡುವಂತೆ ಮಾರುತಗಳಿಗೆ ಸುಮಧುರೇ ಮದಿರಾಕ್ಷಿ ಎಂದೆಲ್ಲ ಸಂಬೋಧಿಸಲು ಅನುವಾದನು ಎಂಬ ಕಲ್ಪನೆ.

  ಸಮಸ್ಯೆ ಅರ್ಥಚ್ಛಲದ ಬಗೆಯದ್ದಾದ್ದರಿಂದ ಸುಮಧುರೇ ಪದದ ‘ಸು’ ಉಪಸರ್ಗವನ್ನು ಬಿಟ್ಟು ಸಮಸ್ಯೆಯ ಸಾಲನ್ನು ಬದಲಿಸಿದ್ದೇನೆ. ಸಹೃದಯರು ಮನ್ನಿಸಬೇಕು

 44. ಅಂದದ ಕಾಮನುತ್ಸವದವೋಲ್ ಪೊಸಪೆಣ್ಗಳು ಬಿಂಕದಿಂದ ಕಣ್ –
  ಮುಂದೆಯೆ ಸಾಗಿರಲ್ ತಿರುಗಿಪೆನ್ ದಿಟಮಿಂದು ಕನಿಷ್ಟವೊಬ್ಬಳಂ
  ಎಂದುಲಿದಾಡಿದನ್ – “ಸುಮಧುರೇsss ಮದಿರಾಕ್ಷಿssssss ಮನೋಹರೇsssss ವರೇsss
  ಸುಂದರಿsss ಶೋಭನಾಂಗಿsss ತರುಣೀsss ರಮಣೀsss ರಸಿಕಪ್ರಿಯೇsss ಪ್ರಿಯೇsss ||

  ಪರಿಣಾಮ ನಿಮ್ಮ ಊಹೆಗೆ ಬಿಟ್ಟದ್ದು.

  • ಶ್ರೀಶ, ಪದ್ಯ ಚೆನ್ನಾಗಿದೆ ಆದ್ರೆ ‘ಕನಿಷ್ಠ’ ಅಪೇಕ್ಷೆಯ ಪೂರಣವಾಯ್ತೋ ಇಲ್ಲವೋ ತಿಳಿಯಲಿಲ್ಲ 😉

  • 🙂

   ಶ್ರೀಶ- ಪೊಸವೆಣ್ಗಳು ಅಂತ ಮಾಡಿದರೆ ವಾಸಿ. ಎರಡನೆಯ ಮತ್ತು ಮೂರನೆಯ ಪಾದದ ಮಧ್ಯೆ ಸಂಧಿಯಾಗಬೇಕು. ಆದರೆ ಛಂದಸ್ಸು ಕೆಡುತ್ತೆ. ನೋಡಿ

   • ಶ್ರೀಕಾಂತರೇ,

    Yes, ಪೊಸವೆಣ್ಗಳು ಮತ್ತೂ ವಾಸಿ.
    Tried to remove ವಿಸಂಧಿ ದೋಷ, but crisp solution ಸಿಗ್ಲಿಲ್ಲ….ನೋಡೋಣ ಪ್ರಯತ್ನ ಮಾಡ್ತೀನಿ.

    ಸೋಮಣ್ಣ,
    Why don’t to try this and see the result ? 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)