ವಾಲಿ ಸುಗ್ರೀವಾದಿ ವಾನರ
ಪಾಲಕರ ಕಿಷ್ಕಿಂಧೆ ನಾಡಿದು
ಬಾಲಕನು ಹುಟ್ಟಿದ್ದುದಂಜನದೇವಿಗಿಲ್ಲೆಂದು ||
ವಾಲಿಯಾ ಭಯದಿಂದ ತಮ್ಮನು
ಕಾಲ ಕಳೆದನು ಬಂಟರೊಡನೆಂ
ಪೇಳುವರು ಹೊಂಚಿದ್ದುದನು ಮಾತಂಗ ಪರ್ವತದಿ || ೧ ||
ನದಿಯು ಪಂಪೆಯು, ತುಂಗಭದ್ರೆಯೆ
ಯದರ ಬಳಿಯಲೆ ಋಷ್ಯಮೂಕವ –
ದೆದುರು ಆನೆಯಗುಂದಿಯೆಡೆ ಪಂಪಾಸರೋವರವು ||
ಕದಿದು ರಾವಣನೊಯ್ಯೆ ಸೀತೆಯು
ವೊದಗಿದಾಗೊಗೆದಿದ್ದ ತೊಡವ –
ನ್ನದನು ಬಿದ್ದಾ ಕಾಯ್ದ ತಾಣವನಿಲ್ಲೆ ತೋರುವರು || ೨ ||
ಕೊಂದು ವಾಲಿಯ ರಾಮಚಂದ್ರನು
ತಂದು ಸುಗ್ರೀವನನು ರಾಜನ
ನಂದು ಮಾಡಿಸಿ ನುಳಿದ ಬೆಟ್ಟದಿ ಮಾಲ್ಯವಂತದಲಿ ||
ಹಿಂದೆ ರಾಮಾಯಣದಲಾ ಕಿ –
ಷ್ಕಿಂಧೆ ಕಾಂಡದ ತಾಣಗಳನಾ
ವಿಂದು ಕಂಡರೆ ಮೂಢರಾ ನಂಬಿಕೆಗಳೋ ನಿಜವೋ? || ೩ ||
ಇಸವಿ ಹದಿಮೂರ್ನೂರ ಆರಲಿ
ನಸಿದ ಹತ್ತಿಪ್ಪತ್ತು ವರ್ಷಗ –
ಳಸುರ ಪೀಡೆಯು ದಕ್ಷಿಣಕು ಬಡಿದಿದ್ದ ದುರ್ದಿನಗಳ್ ||
ಮುಸಲ ಖಿಲ್ಜಿಯು ದಿಲ್ಲಿಯಲಿ ತಾ –
ನೆಸಗಿ ದಬ್ಬಾಳಿಕೆಯ ಬಲು ನಂ –
ದಿಸಲು ಕ್ಷತ್ರಿಯ ಶಕ್ತಿಯನು ನುಗ್ಗಿದನು ದಕ್ಷಿಣಕೆ || ೪ ||
ಮಲ್ಲಿಕಾಫರನವನ ಬಂಟನ –
ದಿಲ್ಲಿ ಬಂದಕ್ಕಿಸಿದ ಕ್ರೂರಿಯು
ಹಲ್ಲು ಮಸೆಯುತ ನುಂಗಿದಾ ಚೆದುರಿದ್ದ ರಾಜ್ಯಗಳಾ ||
ಇಲ್ಲದಿರೆಯೊಗ್ಗಟ್ಟದಿವರಲಿ
ಸಲ್ಲುವುದೆ ರಾಜ್ಯಗಳ ರಕ್ಷಣೆ
ಕಲ್ಲು ಸಕ್ಕರೆ ಕಠಿನವಲ್ಲವೆ ಹುಡಿಗೆ ಹೋಲಿಸಿರೆ || ೫ ||
ಸೋಲಿಸಿದನಾ ದೇವಗಿರಿಯ –
ನ್ನಾಳುತಿರ್ದಾ ಯಾದವರ ಮುಂ –
ಬೀಳಿಸಿದನವನೊರಂಗಲ್ಲಿನ ಕಾಕತೀಯರನು ||
[ಕೀಳು ರಾಮೆಶ್ವರವ ಗೆಡಿಸಿ]
ಕೀಳುಗೆಡಿಸುತ ರಾಮಸೇತುವ
ಗಾಳಿಸಿ ಶ್ರೀರಂಗ ಮಧುರೆಯ
ತೋಳ ಕುರಿಯಂ ಮುರಿದವೋಲಾ ದೋರಸಂದ್ರವನು [ದ್ವಾರಸಮಂದರಮಂ] || ೬ ||
ಹಿಂದು ಶಕ್ತಿಯ ದಕ್ಷಿಣದಲೀ
ಮುಂದೆ ನುಗ್ಗಿದ ಯವನ ಶಕ್ತಿಯು
ಬಂಧಿಸುತ ಕೊನೆಗೊತ್ತುವಂತೆಯೆ ತೋರಿದಾ ದಿನಗಳ್ ||
ಬೆಂದು ಬಳಲಿದ ಹೊಯ್ಸಳರ ಕುಲ
ನಂದುತಿರ್ದಂತೆಯೆಲೆ ಹುಟ್ಟಿದು –
ದಂದು ವಿದ್ಯಾರಣ್ಯ ಪ್ರೇರಿತ ಸಂಗಮರ ಯುಗವು || ೭ ||
– ರಾಮಚಂದ್ರ
Super Sir 🙂