Dec 072013
 

ಪದ್ಯಪಾನಿಗಳೇ,

ಮುಕ್ತಕಗಳನ್ನು ಬರೆಯುವಲ್ಲಿ ಕೈಪಳಗಿರುವ ಪದ್ಯಪಾನಿಗಳು ಪದ್ಯಗುಚ್ಛಗಳಲ್ಲಿ ವರ್ಣನೆಯನ್ನು ಮಾಡಬೇಕಾಗಿ ವಿನಂತಿ. ಒಂದೇ ವಸ್ತುವಿಗೆ ಹಲವಾರು ಪದ್ಯಗಳನ್ನು ಅವಿರತವಾಗಿ ಬರೆಯುವ ನಿಮ್ಮ ದಕ್ಷತೆಯನ್ನು ಈ ಕಂತಿನಲ್ಲಿ ಪ್ರದರ್ಶಿಸುವ ಸದವಕಾಶವಿದೆ.

ಈ ಕೆಳಗಿನ ನಿಯಮಗಳನ್ನು ಗಮನಿಸಿ:

  • ಐದಕ್ಕೂ(5) ಹೆಚ್ಚಿನ ಪದ್ಯಗಳಲ್ಲಿ ಪ್ರಕೃತಿಯ ಯಾವುದಾದರೂ ಒಂದು ಆಯಾಮವನ್ನು ವರ್ಣಿಸಬೇಕು. 
  • ಪರ್ಯಾಯವಾಗಿ ಪ್ರಕೃತಿವರ್ಣನೆಯ ಯಾವುದಾದರೂ ಮಹಾಕವಿಯ 5ಕ್ಕೂ ಹೆಚ್ಚಿನ ಪದ್ಯವಿರುವ ಗುಚ್ಛವನ್ನು ಅನುವಾದ ಮಾಡಾಬೇಕು.
  • ಸಂಸ್ಕೃತ ಮತ್ತು ಕನ್ನಡದಲ್ಲಿ ಪದ್ಯರಚನೆ ಮಾಡಬಹುದು

ಉದಾಹರಣೆಗೆ ಕುಮಾರವ್ಯಾಸಭಾರತದ ಆದಿಪರ್ವದಲ್ಲಿ ಬರುವ ವಸಂತವರ್ಣನೆಯನ್ನು ಕೆಳಗೆ ಕಾಣಬಹುದು:

ತೆಗೆದುದಗ್ಗದ ತಂಪು ನದಿ ಸರ
ಸಿಗಳ ತಡೆಯಲಿ ಹೆಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಟಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

ಫಲಿತಚೂತದ ಬಿಣ್ಪುಗಳ ನೆರೆ
ತಳಿತ ಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

ಜಗವ ಹೊಗೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಲಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ

ನೆನಪಿರಲಿ ಬಿಡಿ ಪದ್ಯಗಳಲ್ಲ, ಐದಕ್ಕೂ ಹೆಚ್ಚು ಪದ್ಯಗಳಲ್ಲಿ ವರ್ಣಿಸಬೇಕು… ಕಲ್ಪನೆ ಗರಿಗೆದರಲಿ…

ವಿ.ಸೂ:  ಬಹಳ ಪ್ರಯತ್ನ ಪಟ್ಟೆ ನಾಲ್ಕು ಪದ್ಯವನ್ನು ಬರೆದಿದ್ದೇನೆ, ಐದನೇಯದು ತೋಚುತ್ತಿಲ್ಲ ಎನ್ನುವ ಪರಿಸ್ಥಿತಿಯಿದ್ದರೆ, ನಾಲ್ಕನ್ನೇ ಹಾಕಿ 🙂

  135 Responses to “ಪದ್ಯ ಸಪ್ತಾಹ ೯೦: ಸಂಪೂರ್ಣ ವರ್ಣನೆ”

  1. ದೂರಸಾಗರದಾಚೆ ನೇಸರ‌
    ನೇರಿಬರುತಿರೆ ಕೆಂಪಬಣ್ಣವ‌
    ತೋರುತಿರ್ಪನು ಬೆಳಕದಾರಿಯನೀ ಧರೆಯ ಜನಕೆ
    ತಾರೆಗಳನೊಡಗೂಡೆ ಚಂದಿರ‌
    ನಾರಿಗುಂ ಕಾಣಿಸದ ಲೋಕವ‌
    ಸೇರುತಲಿ ಮರೆಯಾದನೈ ಮುಂಜಾವಿನೊಳು ನೋಡ‌

    ತೆಂಗುಗರಿಗಳು ತೂಗುತಿಹುದೈ
    ಸಿಂಗರಿಸುತಾ ಕಡಲ ತೀರದ‌
    ಕಂಗಳಾ ಪೊದಿಕೆಯನು ಸರಿಸುತ ಬೆಳಕ ಚಿಮ್ಮುತಲಿ
    ರಂಗುರಿನ ದೋಣಿಯಿಂದಾ
    ಲಂಗರವನಿಳಿಬಿಟ್ಟು ಬಂದರು
    ತಂಗಲೆಂದೀ ನಾವಿಕರು ಸಾಗರದ ದಡದೆಡೆಗೆ

    ಆಗಸದೆ ಬಾನಾಡಿಗಳು ಬಲು
    ವೇಗದಿಂ ಬಡಿಯುತ್ತೆ ರೆಕ್ಕೆಯೊ
    ಳಾಗರಿಗಳೆಲ್ಲೆಡೆಯುಮುದುರುತ ತೇಲಿ ಬರುತಿರಲು
    ತೂಗುತಿರಲುಯ್ಯಾಲೆಯಂತೀ
    ಸಾಗರದ ಮಧ್ಯದೊಳಗಲೆಯೊಳು
    ಸಾಗುತಿರೆ ಮೀನ್ ಗಳುಜಿಗಿದು ಪಕ್ಕಿಗಳ ಕರೆಯುತಲಿ

    ಮೆತ್ತೆ ಹಾಸಿಗೆಯಂತೆ ಕಂಡಿರ‌
    ಲಿತ್ತ ನೀರೊಳು ಪೊಳೆಯುತಿರ್ಪುದು
    ಮೆತ್ತರಕೆ ಪೋಗಿರಲು ಸೂರ್ಯನು ಬಿಸಿಲ ಪೆರ್ಚಿಸುತ‌
    ಸುತ್ತ ಕಡಲೊಳ್ ನೀರವತೆಯಿಂ
    ದೆತ್ತನೋಡಲು ಮೌನವಿರಲೀ
    ಹೊತ್ತಿನೊಳ್ ಸಾಗರವು ಬೇಸರದಿಂದ ನೊಂದಿರಲು

    ಕರೆವುದೈ ಸಾಗರವು ಗೆಳೆಯನ‌
    ಮರೆತು ಪೋಗಿಪನೆಲ್ಲಿಗೆನ್ನುತ‌
    ಧರೆಯೆಡೆಗೆ ಬರಲೆಂದು ತಾ ಭೋರ್ಗರೆಯುತಿಹುದಣ್ಣಾ.
    ಹರನ ಶಿರದಿಂದಿಣುಕಿ ಚಂದಿರ‌
    ನಿರುಳಿನೊಳ್ ಪುಸಿಬೆಳಕಿನಿಂ ಬರು
    ತಿರಲು ಕಡಲೊಳ್ ಮೂಡಿತೈ ಸುಂದರ ಸಮಾಗಮವು

    Sunrise to sunset 🙂

  2. ‘ರಂಗುರಂಗಿನ ದೋಣಿಯಿಂದಾ’ typo corrected in 2nd poem 4th line

    • ಆತ್ಯಂತಸುಂದರವಾದ ವರ್ಣನೆಯ ಪದ್ಯಗಳಿವು.ಅಭಿನಂದನೆಗಳು. ಇಡಿಯ ಈ ಗುಚ್ಛವು ಭಾವಗೀತೆಯಂತಿದೆ. ಭಾಷೆ-ಬಂಧಗಳೂ ಒಪ್ಪವಾಗಿವೆ. ಒಂದೋ ಎರಡೋ ಕಡೆ ಛಂದಸ್ಸಿನ ಗತಿಯು ಎಣಿಕೆಯ ದೃಷ್ಟಿಯಿಂದ ಸರಿಯಾಗಿದ್ದರೂ ಗತಿಸುಭಗತೆಯ ಕಾರಣ ಸ್ವಲ್ಪ ಅಹಿತವಾಗಿವೆ (ಉದಾ: ಸಾಗುತಿರೆ ಮೀನ್ಗಳು ಜಿಗಿದು….) “ತೆಂಗುಗರಿಗಳು ತೂಗುತಿಹುವೈ” ಎಂದಾದಲ್ಲಿ ವ್ಯಾಕರಣ ಸರಿಯಾದೀತು.

  3. “ಸಿಹಿ”ಯಾಗುವ ಹಾಲಿನ ವಿವಿಧ ರೂಪಗಳು (ಮೊಸರು,ಬೆಣ್ಣೆ,ತುಪ್ಪ) – “ದೇವ”ನಿಗೆ ಸಲ್ಲುವ ವಿಧಾನದೊಂದಿಗೆ, ಮಾನವನ ಮನಪರಿವರ್ತನೆಯ ವಿವಿಧ ಮಾರ್ಗಗಳ ಹೋಲಿಕೆಯಲ್ಲಿ, ಸಂದ “ನಿಜ ಘನದ ಅರ್ಪಣೆ” :

    ಮಿಕ್ಕ ಕೆಚ್ಚಲಿನ ಬೆಚ್ಚನೆಯ ನೊರೆಹಾಲದುವು
    ತಕ್ಕುದದು ದೇವಗಾರಂಭಪಾನಂ |
    ಚೊಕ್ಕ ಮನವದು ಗಟ್ಟಿ ಸವಿಹಾಲು, ತಿಳಿಯಹುದು
    ಸಿಕ್ಕ ವಿಷಯಂಗಳಾನೀರ್ಬೆರೆಯೆ ತಾಂ ||

    ಮಿಕ್ಕ ಹಾಲೊಳಗಾದ ಹೆತ್ತಕೆನೆಮೊಸರಿಂದೆ
    ದಕ್ಕುದೈ ತಂಪಿನಭಿಷೇಕವವಗಂ |
    ಮುಕ್ಕನೀಂ ಹಾಲ್ ಮನಕೆ ಹಾಕು ತತ್ತ್ವದ ಹೆಪ್ಪು
    ಹೊಕ್ಕು ಮನವಂಮಾಡೆ ಗರಣೆ ಮೊಸರಂ ||

    ಮಿಕ್ಕ ಮೊಸರಿಂಬಂದ ಹಸನಾದ ಹೊಸಬೆಣ್ಣೆ
    ಮುಕ್ಕುರುದು ಕಾಣವಗಲಂಕಾರವುಂ |
    ಉಕ್ಕೆ ಮೊಸರಿನಮನವ ಮಥಿಸಿ ಕಡೆಗೋಲಿನಿಂ
    ಹೆಕ್ಕೆ ಹಸಿಯುಂಡೆ ಹುಸಿ ಜಗಕಂಟದೈ ||

    ಮಿಕ್ಕ ಬೆಣ್ಣೆಯ ಕಾಸಲಾದ ಘಮತುಪ್ಪದೊಳ್
    ಲಕ್ಕ ದೀಪಾರತಿಯ ಧೂಪವವಗಂ |
    ತಕ್ಕ ಕಾಯಿಸೆ ಮನದ ಬೆಣ್ಣೆಯಂ ಸದ್ದಡಗಿ
    ಸೊಕ್ಕು ಮನವಾಗೆ ಘನಸತ್ತ್ವ ತುಪ್ಪಂ ||

    ಮಿಕ್ಕ ತುಪ್ಪವು ಬೆರೆತ ಬೆಲ್ಲದಾ ಪರಮಾನ್ನ
    ವಿಕ್ಕುದೆನ್ನಿಷ್ಟ ನೈವೇದ್ಯವವಗಂ |
    ಉಕ್ಕರಿಸಿ ಮನದೆ “ಸಿಹಿ”ಯೊಪ್ಪತುಪ್ಪವ ಬೆರೆಸಿ
    ಹೆಕ್ಕಿ ಸಿಹಿಯಿಂ ಸಿಹಿಯ ಹಂಚೆಲ್ಲರೊಳ್ ||

    • ಪದ್ಯಬಂಧವು ತತ್ತ್ವಭರಿತವಾಗಿಯೇನೋ ಇದೆ. ಆದರೆ ಇದು ಉದ್ದಿಷ್ಟವಸ್ತುವನ್ನು ಕುರಿತ ವರ್ಣನೆಯಾಗಲಿಲ್ಲವಲ್ಲಾ! ಜೊತೆಗೆ ಎಲ್ಲ ಪದ್ಯಗಳಿಗೂ ಒಂದೇ ಪ್ರಾಸವನ್ನಿಟ್ಟುಕೊಳ್ಳುವ ಮೂಲಕ ತುಂಬ ಇಕ್ಕಟ್ತಿಗೆ ಸಿಲುಕಿದಂತಿದೆ. ಹೀಗಾಗಿ ಅವೇ ಪದಗಳ ಅನಪೇಕ್ಷಿತವೂ ಅರ್ಥಪೂರಕವಲ್ಲದ್ದೂ ಆದ ಪುನರುಕ್ತಿಯು ತಲೆದೋರಿದೆ. ದಯಮಾಡಿ ಈ ಬಗೆಗೆ ಗಮನವಿರಿಸಿ ಪ್ರಕೃತಿವರ್ಣನೆಯನ್ನೇ ಹೊಸರೀತಿಯಲ್ಲಿ ಮಾಡಿ ಸಹಪದ್ಯಪಾನಿಗಳಿಗೆ ಉಣಬಡಿಸಿರಿ. ನಿಮ್ಮ ನಿರಂತರ ಶ್ರದ್ಧಾಮಯ ಪ್ರಯತ್ನಕ್ಕಿದು ಸುಲಭವೇ ಆಗುತ್ತದೆ.

      • ಕ್ಷಮಿಸಿ ಗಣೇಶ್ ಸರ್,
        ಸರಿಯಾಗಿ ಗಮನಿಸಲಿಲ್ಲ.( ೫ ಪದ್ಯವಿದ್ದಕಾರಣ ಹಾಕಿಬಿಟ್ಟೆ! )
        ಪ್ರಕೃತಿಯಬಗ್ಗೆ ಬರೆಯುತ್ತೇನೆ.

  4. ನಾವು trekkingಗೆ ಹೋಗಿದ್ದಾಗ ಒಮ್ಮೆ ಛಳಿಗಾಲದಲ್ಲಿ ಸೂರು ಇಲ್ಲದೆ ಆಕಾಶದ ಕೆಳಗೆ (view pointನ) ಕಲ್ಲು ಬೆಂಚಿನ ಮೇಲೆ ಮಲಗಿ ಫಜೀತಿ ಪಟ್ಟ ಅನುಭವದ ಹಿನ್ನಲೆಯಲ್ಲಿ ಅಂಥಾ ರಾತ್ರಿಯ ವರ್ಣನೆಯನ್ನು ಇಲ್ಲಿ ಮಾಡಿದ್ದೇನೆ.

    ತರಣಂ ಗೆಯ್ಯುತಲಚಲಶಿ-
    ಖರಮಂ ದಾಂಟುತಿರೆ ವೀಕ್ಷಣಸ್ಥಲಮಂ ಶಾ
    ರ್ವರಿಯೊಳ್ ಸಾರ್ದಪ ತರುಣರ್
    ಪರಿಕರಮಿರದಿರ್ಪ ತಂಗುದಾಣದೊಳುಳಿದರ್

    ವೀಕ್ಷಣಸ್ಥಲಮಂ – view point

    ದಾಂಟಿರೆ ಕಾಠಿಣ್ಯಂಗಳ
    ನೀಂಟುತಲೆನಿತೋ ಪ್ರಗಲ್ಭತರಣಕ್ರಮಮಂ
    ಕುಂಟಿಪ ಪದಮಂ ನೀಳ್ದರ್
    ಮೀಂಟಿತು ವಿಶ್ರಮದ ಗೀತಿಕೆಯು ತನುಮನದೊಳ್

    ಮಸಗಿಸೆ ಕಳ್ತಲೆ ಭುವಿಯಂ,
    ಮಸುಕಿಪ ಶೀತಲಪರಿಕ್ರಿಯಂ ಚಂದ್ರಿಕೆಯಂ
    ಕಸಿಯಲಮವಾಸೆಯುಂ ಗಡ
    ಜಸದಿಂ ಮೆರೆದುದು ವಿವರ್ತನದೆ ತದ್ನಕ್ತಂ

    ಮಸಗಿಸೆ – ಹರಡಲು
    ಪರಿಕ್ರಿಯಂ – enclosure

    ಪೊಳೆವಾ ತಾರಕಗಳನೇಂ
    ನಳನಳಿದಪುದೆಂದು ಮಿಣುಕುಪುಳುವಿಡಿಯುತೆ ಸಂ
    ಕುಳಮಂ ಗಡ ನಭಪಾತ್ರಕ
    ದೊಳಿರಿಸಿದನೆ ತಾಂ ಘನಂಗೊಳಿಸಿ ಹೇಮಂತಂ

    ಘನರವಮಂ ಜಿಲ್ಲಿಕೆಗಳ್
    ತನಿಯೆರ್ಚುತಲೀಯೆ ಪಿಡಿದು ಪಿಂತಿನ ತೆರೆಯಂ
    ಪುನರುಚ್ಛರಿಸಲ್ ತೋರ್ದಪು
    ದಿನನಂ ಪೊಯ್ಯಲ್ಕೆ ಶಸ್ತ್ರಮಂ ಮಸೆದಪವೊಲ್

    ಜಿಲ್ಲಿಕೆಗಳ್ – cricket insect
    ಪಿಡಿದು ಪಿಂತಿನ ತೆರೆಯಂ – one wave of chirping of cricket reaching the previous chirping wave
    This appeared as if the night is sharpening weapon to wage war on Sun

    ಯಾಮಿನಿ ದೊಷೆಯದೆಂದಾ
    ಭೂಮಿಕೆ ಹದನಮದೊಡರ್ಚಿ ಕಟ್ಟಳ್ಕೆಗಳಿಂ
    ಸ್ತೋಮದೆ ಶೀತಲಕರದಿಂ
    ಕಾಮಿಸಿ ಸೆಳೆದಳ್ ತಪಕ್ಕೆ ಭಂಗಮನಿತ್ತಳ್

    ಹದನ – is proper
    ಒಡರ್ಚಿ ಕಟ್ಟಳ್ಕೆ – by tight embrace
    ತಪ – heat/austerity
    The name dOShA is apt for yAmini as she embraced me tightly with her icy arms in the night and forcefully took heat out of me

    ಪತಿಕರಿಸುತ್ತೆಕ್ಕಟಿಯಿನ
    ನತಿ ಮಂದಗತಿಯಿನೆ ರಷ್ಮಿಕರದಿನೆ ಪೊಯ್ಯಲ್
    ಕ್ಷತಿಯನ್ನಿತ್ತನು ಕಳ್ತಲೆ
    ಗತಿಯಾಘಾತಮನೆ ಗೆಯ್ಯೆ ತನಿವೆಳಕಾಯ್ತಯ್

    ಪತಿಕರಿಸು – to act kindly
    ಎಕ್ಕಟ – ಒಬ್ಬನೆ
    ತನಿವೆಳಕು – ಪೂರ್ತಿ ಬೆಳಕು

    • ಆಹಾ! ಸೋಮ! ಮಹೋದಯ!
      ಗಾಹಿತಹೇಮಂತನೈಶತಟಿನೀತೋಯಾ!
      ಸ್ವೇಹಿತಮನಿಂತು ಕವಿತಾ-
      ವಾಹನದೊಳ್ ನುಡಿದ ನಿನ್ನ ಬಲ್ಮೆಯೆ ಗೇಯಂ ||

      ಒಳ್ಳೆಯ ಶಬ್ದಾರ್ಥಸಮ್ಪನ್ನವಾದ ನೂತನ-ಸ್ವೋಪಜ್ಞಶೈಲಿಯ ಛಾಪು ಮೂಡಿದೆ. ಈ ಕಾರಣದಿಂದ ನಿನ್ನ ಭಾವಸಾಮಗ್ರಿಯ ಅನನ್ಯತೆ ಸ್ಫುಟವಾಗಿದೆ. ಆದರೆ ಕೆಲವೊಂದು ಮುದ್ರಣಪ್ರಮಾದಗಳೂ ಅಸಾಧುಪದಪ್ರಯೋಗಗಳೂ ಇವೆ. ಫೋನಿನಲ್ಲಿ ಮುಖತಃ ವಿವರಿಸಿಯೇನು.

  5. (ವೃತ್ತದೊಳಂ ಕರ್ಣಾಟಾ
    ವೃತ್ತಿಯೊಳಂ ಖ್ಯಾತಮಾದ ಷಡ್ವಿಧಮಯಮೀ
    ವೃತ್ತಂಗಳಿಂತು ನಿತ್ಯಾ
    ವೃತ್ತಿಯ ಸೂರ್ಯಾಸ್ತಮಾನಮಂ ವರ್ಣಿಸುಗುಂ||)

    ಉ|| ರೋಹಿತವರ್ಣದಾಗಸದ ಕೆನ್ನೆಯ ಕನ್ನೆಯೆ ಸಂಜೆವೆಣ್ಣೆನಲ್
    ಮೋಹಕಮಾದ ನೀಲನಭಮೆಂಬ ಬನಕ್ಕೆ ಬರುತ್ತೆ ಗೆಯ್ಯಲಾ
    ದೋಹದದಿಂದಮಂತಸುಗೆಯಾಂತ ಸುಮಾಳಿಯವೋಲೆ ತೋರ್ದ ಮಂ-
    ದೇಹನ ಕೊಂದವಂ ದಿನಪನೆಯ್ದಿದನಲ್ತೆ ಸಮುದ್ರತೀರಕಂ||
    (ರೋಹಿತ ವರ್ಣದ ಆಗಸದ ಕೆನ್ನೆಯ ಕನ್ನೆಯೆ ಸಂಜೆವೆಣ್ಣು ಎನಲ್ ಮೋಹಕಮಾದ ನೀಲ(ವಿಶಾಲ)ನಭಮೆಂಬ ಬನಕ್ಕೆ ಬರುತ್ತೆ (ದೋಹದಮಂ) ಗೆಯ್ಯಲ್ ಆ ದೋಹದದಿಂದಂ ಅಂತು ಅಸುಗೆ(ಅಶೋಕ) ಆಂತ ಸುಮಾಳಿಯವೋಲೆ ತೋರ್ದ ಮಂದೇಹನ ಕೊಂದವಂ ದಿನಪಂ ಸಮುದ್ರತೀರಕಂ ಅಯ್ದಿದನಲ್ತೆ )

    ಚಂ|| ಬನದೊಳಮೆಲ್ಲ ವಾನರಗಣಂ ಕವಿದಿರ್ಕುಮೆ ಕಳ್ತಲೆನ್ನುತುಂ
    ಮನೆಗಳ ದಿಕ್ಕಿಗೆಯ್ದೊಡವರಾ ರವದಿಂ ಬೆದರ್ದಂ ಪುರಂದರಂ
    ಹನುಮನೆ ಸೂರ್ಯಭಕ್ಷಣಕೆ ಸಾರ್ದಪನೆಂದು ಕನಲ್ದು ವಜ್ರಮಂ
    ಘನಗಳ ಕೆಂಪಿನಂಚುಗಳೊಳಿಟ್ಟವೊಲೇ ಮಿಗೆ ಕಾಣ್ಗುಮಾಗಸಂ||
    (ಬನದೊಳಂ ಎಲ್ಲ ವಾನರಗಣಂ ‘ಕಳ್ತಲ್ ಕವಿದಿರ್ಕುಮೆ’ ಎನ್ನುತುಂ ಮನೆಗಳ (ಮಂಗಗಳು ಮನೆ ಮಾಡಿಕೊಂಡಿರುತ್ತವೆ ಎಂಬೊಂದು ಕಲ್ಪನೆಯಿಂದ) ದಿಕ್ಕಿಗೆಯ್ದೊಡೆ ಅವರ ಆ ರವದಿಂ ಬೆದರ್ದಂ(ಶಿ.ದ್ವಿ) ಪುರಂದರಂ(ಇಂದ್ರಂ) ಹನುಮನೆ ( ‘ಹನುಮ’ಶುದ್ಧರೂಪ ಹೌದೋ ಅಲ್ಲವೋ!ಕನ್ನಡದಲ್ಲಿ ಬಳಕೆಯಲ್ಲಿರುವ ಕಾರಣ ಬಳಸಿದೆ) ಸೂರ್ಯಭಕ್ಷಣಕೆ ಸಾರ್ದಪಂ ಎಂದು ಕನಲ್ದು ವಜ್ರಮಂ ಘನಗಳ ಕೆಂಪಿನ ಅಂಚುಗಳೊಳ್ ಇಟ್ಟವೊಲೇ ಆಗಸಂ ಮಿಗೆ ಕಾಣ್ಗುಂ )

    ಶಾ|| ತಾನೊರ್ವಳ್ ನಿಶೆಯೆಂಬವಳ್ ಸಕಲತಾರಾವೃಂದದಿಂ ಶೋಭ್ಯಮಂ
    ನಾನಾರತ್ನವಿಭೂಷಣಂಗಳನುಡುತ್ತುಂ ಪ್ರೇಮಿಯಂ ಚಂದ್ರನಂ
    ಕಾಣಲ್ಕುಂಗುರಮಂ ತರುತ್ತುಮವಿಸಿಟ್ಟಿರ್ಪಂದದಿಂ ಬೆನ್ನ ಪಿಂ
    ತೇನೀ ರಾಗಿಯ ಬಿನ್ನಣಂಗಳವೊಲೇ ಸೂರ್ಯಾಸ್ತಮಾಭಾಸಿಕುಂ||
    (ತಾನ್ ಒರ್ವಳ್ ನಿಶೆ ಎಂಬವಳ್ ಸಕಲ ತಾರಾ ವೃಂದದಿಂ ಶೋಭ್ಯಮಂ ನಾನಾರತ್ನವಿಭೂಷಣಂಗಳನ್ ಉಡುತ್ತುಂ ಪ್ರೇಮಿಯಂ ಚಂದ್ರನಂ ಕಾಣಲ್ಕೆ ಉಂಗುರಮಂ ತರುತ್ತುಂ ಬೆನ್ನ ಪಿಂತೆ ಅವಿಸಿಟ್ಟಿರ್ಪ ಅಂದದಿಂ ಏನೀ ರಾಗಿಯ(=ಅನುರಾಗಿ; ರಾಮಧಾನ್ಯವಲ್ಲ;-)) ಬಿನ್ನಣಂಗಳವೊಲೇ ಸೂರ್ಯಾಸ್ತಂ ಆಭಾಸಿಕುಂ!)

    ಮ|| ಪತಿಯಂ ಕಾಣದೆ ಪದ್ಮಮೆಲ್ಲಮುರೆ ವಿಭ್ರಾಂತಂಗಳಾಗಿರ್ಕುಮೇಂ
    ಪತಿಯನ್ವೇಷಣಕೆಂದು ಸಾರ್ದಪವೆ ಮೇಣ್ ಪಾದಂಗಳಾಲೇಪನಂ
    ಚ್ಯುತಮಾಗುತ್ತೆ ವಿಲೇಪಿತಂ ನೆಲಕೆನುತ್ತುಂ ತೋರ್ಕುಮಾ ನೀರೊಳಂ
    ಪ್ರತಿಬಿಂಬಂ ನಭದೊಳ್ಪ ಕೆಂಪಿನಿಮಲಾ ಸೂರ್ಯಾಸ್ತಮಾಗುತ್ತಿರಲ್||
    (ಪತಿಯಂ ಕಾಣದೆ ಪದ್ಮಂ ಎಲ್ಲಂ ಉರೆ ವಿಭ್ರಾಂತಂಗಳ್ ಆಗಿರ್ಕುಮೇಂ? ಪತಿಯ ಅನ್ವೇಷಣಕೆ ಎಂದು ಸಾರ್ದಪವೆ? ಮೇಣ್ ಪಾದಂಗಳ ಆ ಲೇಪನಂ ಚ್ಯುತಂ ಆಗುತ್ತೆ ನೆಲಕೆ ವಿಲೇಪಿತಂ ಎನುತ್ತುಂ ಸೂರ್ಯಾಸ್ತಮಾಗುತ್ತಿರಲ್ ನಭದ ಒಳ್ಪ ಕೆಂಪಿನಿಂ ಆ ನೀರೊಳಂ ಪ್ರತಿಬಿಂಬಂ ತೋರ್ಕುಂ)

    ಸ್ರ|| ಆ ರುದ್ರಾಕ್ಷ್ಯಗ್ನಿಸಂತಪ್ತನನೆನೆ ಜನರಾ ತಾಪಮಂ ಪೆರ್ಚಿಸುತ್ತುಂ
    ವಾರಸ್ತ್ರೀರಕ್ತವರ್ಣಾಧರದೊಳುರೆ ನಿಲಲ್ ಜಾರುತುಂ ಪೋದನಂ ಕಾ-
    ಮಾರಿಪ್ರಾಸಪ್ರತೀಕ್ಷಾನಿರತನತಿಭಯಭ್ರಾಂತನಂ ಪೋಲ್ವವೋಲೇ
    ಸೇರುತ್ತುಂ ನೀರನಾಗಳ್ ನಿರುಕಿಪರಿಗೆ ತಾಂ ಕಂಡನೈ ನೀರಜಾಪ್ತಂ||
    (ಆ ರುದ್ರ+ಅಕ್ಷಿ+ಅಗ್ನಿ(=ಶಿವನ ನೇತ್ರಾಗ್ನಿ)ಸಂತಪ್ತನಂ ಎನೆ ಜನರಾ ತಾಪಮಂ ಪೆರ್ಚಿಸುತ್ತುಂ ವಾರಸ್ತ್ರೀ ರಕ್ತವರ್ಣ+ಅಧರದೊಳ್ ಉರೆ ನಿಲಲ್ ಜಾರುತುಂ ಪೋದನಂ ಕಾಮಾರಿ(=ಶಿವ) ಪ್ರಾಸ(=ಆಯುಧ)ಪ್ರತೀಕ್ಷಾ ನಿರತಂ ಅತಿಭಯಭ್ರಾಂತನಂ ಪೋಲ್ವವೋಲೇ ನೀರಂ ಆಗಳ್ ಸೇರುತ್ತುಂ ನಿರುಕಿಪರಿಗೆ ತಾಂ ಕಂಡನೈ ನೀರಜಾಪ್ತಂ(=ಕಮಲಾಪ್ತ=ಸೂರ್ಯ)

    ಮಸ್ರ|| ಅರಿಲ್ಗಳ್ ಮೆಲ್ಲಂ ಬರತ್ತುಂ ಕುರುಕುಲಕಲಹಕ್ಕೆಯ್ದ ಭೂಪಾಲಭಾಲ
    ಕ್ಕುರೆ ವ್ಯಾಘಾತಂ ಸಲಲ್ ಬಿಳ್ದ ಕನಕಮುಕುಟಂಗಳ್ಗೆ ಪೋಲುತ್ತಿರಲ್ ಮೇಣ್
    ಹರಿಯೇ ಭೀಷ್ಮಾವಸಾನಕ್ಕೆನುತೆ ತಳೆದವೊಲ್ ಚಕ್ರಮಂ ಕೋಪದಿಂದಂ
    ಧರೆಯನ್ನಂ ಬಾಗಿಸುತ್ತುಂ ಬಿಡುತಿಹನೆನುವಂತಂತು ತೋರಿತ್ತು ನೇಸರ್||
    (ಅರಿಲ್ಗಳ್(=ನಕ್ಷತ್ರ ಶಿ.ದ್ವಿ) ಮೆಲ್ಲಂ ಬರುತ್ತುಂ ಕುರುಕುಲಕಲಹಕ್ಕೆಯ್ದ ಭೂಪಾಲಭಾಲಕ್ಕೆ ಉರೆ ವ್ಯಾಘಾತಂ ಸಲಲ್ ಬಿಳ್ದ ಕನಕಮುಕುಟಂಗಳ್ಗೆ ಪೋಲುತ್ತಿರಲ್ ಮೇಣ್ ಭೀಷ್ಮಾವಸಾನಕ್ಕೆನುತೆ ಕೋಪದಿಂದಂ ಹರಿಯೇ ಚಕ್ರಮಂ ತಳೆದವೊಲ್ ಧರೆಯ ಅನ್ನಂ(=ಅನ್ನೆಗಂ=ವರೆಗೆ) ಬಾಗಿಸುತ್ತುಂ ಬಿಡುತಿಹಂ ಎನುವಂತೆ ಅಂತು ನೇಸರ್ ತೋರಿತ್ತು )

    ಸ್ರಗ್ಧರಾ, ಮಹಾಸ್ರಗ್ಧರಾಗಳ ಗತಿಗೆ ಮುಖ್ಯವಾಗಿರಬೇಕಾದ (ಕನ್ನಡಕ್ಕೆ ಯತಿ ಇಲ್ಲದ ಕಾರಣ 🙂 ) ಯತಿ ವಿಲಂಘನ ಮಾಡಿದ್ದೇನೆ.

    • ಖ್ಯಾತಕರ್ಣಾಟ-ಕರ್ಣಾಟವೃತ್ತಂಗಳೊಳ್
      ಸ್ಫೀತವಾಗ್ರೀತಿಯಿಂ ಪದ್ಯಬಂಧಂಗಳಂ|
      ಪ್ರೀತಿಯಿಂದಿತ್ತ ಮಿತ್ರಾ! ಭವಚ್ಛೈಲಿಯುಂ
      ದ್ಯೋತಿತಂ ಸಲ್ವ ಪ್ರಾಬಂಧಿಕಸ್ಫಾರದಿಂ ||

      ಕನ್ನಡಕೆ ಯತಿಯಿಲ್ಲ; ಕೋಣಂಗೆ ಮತಿಯಿಲ್ಲ-
      ವೆನ್ನುವೀ ಗಾದೆಯಂ ತಿಳಿಯೆಯೇನು?
      ಭಿನ್ನೈಸೆ ತಪ್ಪಲ್ಲ ನೀಂ ಸ್ರಗ್ಧರಾದಿಗಳೊ-
      ಳಿನ್ನು ಯತಿಯಂ ಮೀರೆ ತರುಣಸುಕವಿ!

      ಅಲ್ಲಲ್ಲಲ್ಲಿಣಿಕಿದ ವ್ಯಾಕೃತಿ-
      ಯೊಲ್ಲದ, ವಾಗ್ರೂಢಿಯೊಪ್ಪದ ಕಳೆಗಳಂ ನಾಂ |
      ಮೆಲ್ಲನೆ ತಿಳಿಸಲ್ ಕಳೆವುದು
      ಸೊಲ್ಲೊಳ್ ನವುರಾಗಿ ಮಾಗಿ ಕೊಪ್ಪಲತೋಟಾ!

      • ಪೊಂದಿದೆನಾನಂದಮನಾಂ
        ಮುಂದಿನ ತರಗತಿಯೊಳೆಲ್ಲಮಂ ಕೇಳ್ವೆನಿದಂ
        ಸಂದಿರ್ಪೀ ದೋಷಂಗಳ
        ಛಂದದೆ ಪರಿಹರಿಸಿಮೊಳ್ಪನುಪದೇಶಿಸುತುಂ||

  6. (ಸೂರ್ಯಾಸ್ತದ ಬೆಡಗು)

    ಉರುಟು ಕೆ೦ಪಿನ ಚೆ೦ಡಿನ೦ದದ
    ಲುರಿಯುಗುಳಿ ಬಸವಳಿಯುತರುಣನು
    ತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿ|
    ತಿರುತಿರುಗಿ ಹಾರುತಿರೆ ಜಲಧಿಯ
    ತೆರೆಗಳಪ್ಪಳಿಸುತಲಿ ದಡವ
    ನ್ನುರವಣಿಯಲದೊ ಸುತ್ತುವರಿದಿವೆ ಸನಿಹಕೈದಿದನ||

    ಹಲವ ಹೆಗಲಲಿ ಹೊತ್ತು ರೈತರು
    ನಿಲಯಕೈತರುತಿರಲು ಚಿಣ್ಣರು
    ಕಲಕಲಸ್ವನದೊಡನೆಯಾಟವನಾಡುತಲಸಿಹರು|
    ಚಿಲಿಪಿಲಿಯಗುಟ್ಟುತಿಹ ಹಕ್ಕಿಗ
    ಳಲೆಯುತಲಿ ಸೇರುತಿರೆ ನೆಲೆ ತ೦
    ಬೆಲರು ಬೀಸುತ ಬೀಳ್ಗೊಡುತ್ತಿದೆಯಸ್ತಮಿಸುವವನ ||

    ಇ೦ಬನಿತ್ತಿಹ ನೆಲೆಯ ತಾ ಬಿಡು
    ತ೦ಬುದಗಳೇರುತಲಿ ಸೊಬಗಿನೊ
    ಳ೦ಬುಜದ ಬ೦ಧುವಿನ ಸನಿಹದಿ ಬೀಸೆ ಚಾಮರವ|
    ಅ೦ಬಿಗರು ದಡಕೈದೆ ನಾವೆಯೊ
    ಳ೦ಬುಧಿಯು ರ೦ಗೇರುತುಕ್ಕಿರ
    ಲ೦ಬುರುಹದಳ ಸೊರಗಿ ಸುಕ್ಕಿದೆ ವಿರಹದಗ್ನಿಯಲಿ ||

    ರಣದಲಳಿಯುವ ಸಮಯ ರಕುತದ
    ಕಣಗಳೆಲ್ಲವು ಹರಿವ ತೆರದ
    ಲ್ಲೆಣಿಕೆಗೆಟಕದ ತೆರದಿ ಬಾ೦ದಳ ಕೆ೦ಪ ಸೂಸಿಹುದು|
    ಅಣಿಯ ಕಟ್ಟುತಲದೊ ತಮಾಸುರ
    ನೆಣಿಸುತಿಹ ರ೦ಜಿಸೆ ಕ್ಷಣಗಳ
    ದಣಿದು ಬಳಲುತಲಿನನು ನೇಪಥ್ಯಕ್ಕೆ ಜಾರುತಿರೆ ||

    ಕಿರಣ ಶರದಳದಮಿತ ಸ೦ಚಿಯ
    ಶರಧಿತಳದಿ೦ದೆತ್ತಿ ಧರಿಸಲು
    ತೆರಳುತಿಹನೋ ದಿನಪ ಮರಳಲು ದಿನದ ಕೊನೆಗೆನುತ|
    ಧರಧುರದ ಕಾ೦ತಿಯನು ತರೆ ಸ೦
    ಚರಿಸುತಿಹ ರವಿಯನ್ನು ವೀಕ್ಷಿಸಿ
    ಕರಮುಗಿವೆನೀ ಲೋಕದೊಡೆಯನು ರಚಿಸಿದದ್ಭುತಕೆ||

    • ಚೆಲ್ವಿನೀ ಷಟ್ಪದಿಗಳಂ ಮತಿ-
      ಸೋಲ್ವಿನಂ ಸವಿಯುತಿರೆ ಮುಳಿಯರೆ!
      ಸಲ್ವುದಲ್ತೆ ರಸಾರುಣೋದಯ-
      ಮಲ್ವಿದಾ ಎನದೆ:-)
      (ಅಲ್ವಿದಾ = good bye ಎನ್ನಲು ಉರ್ದೂ ಶಬ್ದ)

      ಎಲ್ಲ ಪದ್ಯಗಳೂ ಸೊಗಸಾಗಿವೆ. ಆದರೆ ಭಾಷೆ-ಬಂಧ-ಪ್ರಾಸ-ಅಲಂಕಾರಾದಿಗಳ ಸಮಗ್ರಮೌಲ್ಯದಿಂದ ನನಗೆ ಮೂರನೆಯ ಪದ್ಯವು ಅತಿಶಯವೆನಿಸಿದೆ.
      ನಾಲ್ಕನೆಯ ಪದ್ಯದ ಐದನೆಯ ಸಾಲಿನಲ್ಲಿಇ ಛಂದೋಭಂಗವಿದೆ; ದಯಮಾಡಿ ಸವರಿಸಿಕೊಳ್ಳಿರಿ.

      • ಧನ್ಯವಾದಗಳು ಸರ್ . ’ ತೆರದಿ’ ಎ೦ಬ ದ್ವಿರುಕ್ತಿಯನ್ನೂ ತಿದ್ದಿದೆ.

        ರಣದಲಳಿಯುವ ಸಮಯ ರಕುತದ
        ಕಣಗಳೆಲ್ಲವು ಹರಿವ ತೆರದ
        ಲ್ಲೆಣಿಕೆಗೆಟಕದೆ ಪಡುವಣಾಗಸ ಕೆ೦ಪ ಸೂಸಿಹುದು|
        ಅಣಿಯ ಕಟ್ಟುತಲದೊ ತಮಾಸುರ
        ನೆಣಿಸುತಿಹ ಚಣಗಳನು ರ೦ಜಿಸೆ
        ದಣಿದು ಬಳಲುತಲಿನನು ನೇಪಥ್ಯಕ್ಕೆ ಜಾರುತಿರೆ ||

  7. ಮಂದಮಾರುತ ತಂದ ತಂಪಲಿ
    ಮಿಂದುಮಯ್ಮರೆತಿರಲು,ದೂರದ
    ಲೊಂದು ಮೊರೆತವ ಕೇಳಿ ಕಂಪಿಸಿತೇನು ಬಿರಿಸುಮನ?
    ಕುಂದಿಪೋಗುತಕಡಲಸದ್ದಿನೊ
    ಳಿಂದು ನೇಸರನಡಗಿ ಕುಳಿತನೆ
    ಬಂದಮಲೆಯೊಳ್ಗವಿಸಿ ಮೊಗವಂ ಸೆರಗದೆಂದರಿತು? || ೧ ||

    ಅವಿತು ಕೊಂಡಿಹ ಸಮಯ ಸಾಧಿಸಿ
    ಕವಿದು ಮೇಘದ ಮಾಲೆಯಾಗಲೆ
    ಬೆವರನಳಿಸಲು ಜಗದ ಜನತೆಯ,ಮಳೆಯ ಸುರಿಸಿದವು
    ಭವಕೆ ಭಾಗ್ಯವು ಬಂದಿತೆನ್ನುತ
    ಕವಿತೆ, ಕುಣಿತಗಳೆದ್ದು ಮೆರೆಯ
    ಲ್ಕವನಿ ಮಾತೆಯು ನಳನಳಿಸಿದಳು ಗಂಧವನುಸೂಸಿ || ೨ ||

    ನಿಮಿಷಮಾತ್ರದಿ ಹೊಳೆಯು ಹರಿಯಿತು
    ದಮಿಸಿ ಮಕ್ಕಳ ದುಗುಡವನು ತಾ
    ರಮಿಸಿ ತೇಲಿಸಿತವರ ಕಾಗದ ದೋಣಿ ತನ್ನೊಳಗೆ
    ಶಮಿತವಾಯ್ತೇಮಿನನ ರೌದ್ರವು?
    ಗಮಿಸಿರಲುಹೊಂಬಣ್ಣ ತಳೆದುಂ?
    ವಿಮಲ ಮನವಂ ತಳೆದನೇನವ ಪುಟ್ಟ ಮಗುವಿನೊಲು? || ೩ ||

    ಹೊಂಡ ಹೊಳೆಗಳು ತುಂಬಿ ಕೊಂಡವು
    ದಂಡಿ ಮೃಗ,ಮನುಜರನು ಗೆಲ್ಲುತ
    ಕಂಡ ಕಂಡೆಡೆಗೆಲ್ಲ ಹರ್ಷದ ಧಾರೆ ಹೊಮ್ಮಿಸುತ
    ಬಂಡೆ ಸಂಧಿಗಳಲ್ಲಿ ನುಗ್ಗುತ
    ಕಂಡು ತಗ್ಗಿನೊಳೊಮ್ಮೆ ಜಾರುತ
    ಬಂಡುಣಿಪುದುಂ ನೊಂದ ಮನಕೀ ಜೀವ ವಿಸ್ಮಯವು || ೪ ||

    ಹಸಿರು ನಕ್ಕಿತು ಭುವಿಯಲೆಲ್ಲೆಡೆ
    ಕಸುವ ಕಂಡಿತು ಗೋಡೆ ಗೋಪುರ
    ರಸವ ಕಂಡಿತು ಕಲ್ಲು ಕಲ್ಲೂ ಜಡವ ತಾ ಮರೆತು
    ಒಸಗೆಯುಕ್ಕುತೆ ತುಂಬಿತೆಲ್ಲೆಡೆ
    ಹೊಸತು ಜೀವದ ಸೃಷ್ಠಿಗೋಸುಗ
    ಜಸವು ಸಲ್ವುದು ತಂಪನೆರೆದಾಣ್ಮಂಗೆ ಮರೆಯದೆಯೆ || ೫ ||

    • ವರ್ಷಾಕಾಲದ ಚೆಲುವಾದ ವರ್ಣನೆಗಾಗಿ ಧನ್ಯವಾದ. ಮೊದಲ ಪದ್ಯದ ಕಡೆಯ ಎರಡು ಸಾಲುಗಳ ಅಭಿಪ್ರಾಯವು ಗೊತ್ತಾಗಲಿಲ್ಲ. ಇಲ್ಲಿ ಪ್ರಾಸಕ್ಕಾಗಿ ಸ್ವಲ್ಪ ಯತ್ನಿಸಿದಂತಿದೆ:-)
      ”ಶಮಿತವಾಯ್ತೇನಿನ” ಎಂಬುದು ಯುಕ್ತರೂಪ.
      ಒಂದೆರಡು ಮುದ್ರಣದೋಷಗಳನ್ನು ತಿದ್ದಬಹುದು.

      • ಧನ್ಯವಾದಗಳು ತಮಗೇ. ಪದ್ಯದಲ್ಲಿ ತಿದ್ದುಪಡಿಯನ್ನು ಮಾಡಿಕೊಂಡಿದ್ದೇನೆ.

        ಬೆಟ್ಟದ ಸಾಲನ್ನು ಸೆರಗೆಂದು ತಿಳಿದು , ಮೊಗವನ್ನದರಲ್ಲಿ ಹುದುಗಿಸಿಟ್ಟು ,ಅಡಗಿ ಕುಳಿತನೇ ಇಂದು? – ಎನ್ನುವದನ್ನು ಆ ಎರಡು ಸಾಲುಗಳು ತಿಳಿಸುತ್ತವೆ ಎಂದುಕೊಂಡಿದ್ದೆ. 🙂

  8. ಪುಷ್ಪಿತಾಗ್ರದಲ್ಲಿ ಐದು ಪದ್ಯಗಲನ್ನು ಹಾಕುತ್ತಿದ್ದೇನೆ.

    ನಸುಕಮಿಸುನಿ ನಲ್ಮೆಯಿಂ ಪೊರಳ್ಗುಂ
    ಪಸುಮರನೊಳ್ ಕಿಸುಪಾರ್ದು ತಾಂ ಕೆರಳ್ಗುಂ
    ಕಸುವಳಿದಪ ಕಳ್ತಲುಂ ತೆರಳ್ಗುಂ
    ನಸುನಗೆ ಬೀರುತೆ ನಾಣ್ಚಿ ಪೂವರಳ್ಗುಂ

    ಮಿಸುನಿ- ಚಿನ್ನ; ಕಿಸುಪು- ಕೆಂಪು; ಕಸುವು- ಶಕ್ತಿ;

    ಚುಮುಚುಮುವೆನೆ ಚುರ್ಚಿ ಸುತ್ತಮುತ್ತಲ್
    ಗಮಗಮಗುಟ್ಟುತೆ ಗಾಳಿ ತೀಡಲಿತ್ತಲ್
    ದುಮುದುದುಮನೆ ದುಂಬಿದುಂಬಲೊತ್ತಲ್
    ದ್ರುಮಮದು ಕಂಡುದು ತೂಗುತತ್ತಲಿತ್ತಲ್

    ತುಂಬಲ್- ಗುಂಪು;

    ಸುಮಸುಮದಿನೆ ಸೋರುತಿರ್ಪ ತೇನಂ
    ತಮದಮಗೆನ್ನುತೆ ತಾಗಿದೂಗಿ ಗಾನಂ
    ಸಮನಿಸುತುರೆ ಸಾಗಿ ಪೀರ್ವ ಪಾನಂ
    ಭ್ರಮೆಗೊಳಿಸಲ್ ಭ್ರಮರಕ್ಕದೇಂ ಸುಮಾನಂ

    ತೇನ್- ಜೇನು; ಸುಮಾನ- ಸಂತೋಷ

    ಸವಿದು ಮಲರ ಸಾರಮಂ ಪರಾಗಂ
    ಕವಿದುದು ಮೆಯ್ಗಹ ಗಾಢಹೇಮರಾಗಂ
    ಲಿವಿಯದೊಲವ ಲೇಖನೀಪ್ರಯೊಗಂ
    ಬುವಿಗದು ಪೇಳ್ವುದು ಭೋಗಮೀವ ಬೀಗಂ

    ಲಿವಿ- ಲಿಪಿ, ಬರೆಹ, ಚಿತ್ತಾರ; ಬೀಗು- ಆನಂದ

    ರವಿಗೆ ಬುವಿಯ ರಾಧನಾವಭಾಸಂ
    ಸಿವಿಗೆಯನಂಗಗೆ ಜೀವಸಂವಿಕಾಸಂ
    ಕವಿಗೆ ಪೊಳೆವ ಕಲ್ಪನಾವಿಲಾಸಂ
    ತವಿಗೆ ತಪಸ್ಸಿಗೆ ತಾಂ ವಸಂತಮಾಸಂ

    ರಾಧನಾವಭಾಸಂ- ಆರಾಧನೆಯ ಅಭಿವ್ಯಕ್ತಿ; ಸಿವಿಗೆ- ರಥ; ತವಿಗೆ- ಅಳಿವು, ವಿನಾಶ

    • ಸರಿ ಸರಿ ಸಿರಿಗನ್ನಡಕ್ಕೆ ಸುಗ್ಗಿ
      ಸ್ಫುರಿಸುವ ನಿಮ್ಮಯ ಪುಷ್ಪಿತಾಗ್ರವಾಣೀ-
      ವಿರಚನೆಯ ರುಚಿ ಪ್ರಸನ್ನನೂತ್ನಾ-
      ಕ್ಷರಘಟಿತಂ ಸಿರಿಯಾಣ್ಮ! ವೆಗ್ಗಳಂ ದಲ್ !!

    • Many thanks Ganesh, I will add a couple more padyas to this soon.

    • ಎಲರೊಳಲೆಯುತೇರಿ ಜಾರಿ ಪತ್ತುಂ
      ಕೆಲಮುಮನೀಕ್ಷಿಸಿ ಕೆಚ್ಚೊಡಂ ಬರುತ್ತುಂ
      ಮಲರಿಗೆರಗಿ ಮೈಕಮಂ ಕೊಳುತ್ತುಂ
      ಕಲೆವುದು ಮೋದದಿ ಕಾಂತನಂತೊಲುತ್ತುಂ

      ಮೈಕ- ಮತ್ತು, ಜ್ಞಾನ ತಪ್ಪುವಿಕೆ

      ಮೊಗೆದುಣುವುದು ಮೋದಿಮೋದಿ ತುತ್ತಂ
      ತೆಗೆವುದು ಮೋರೆಗೆ ತೀಡಿತೆಂದು ಮತ್ತಂ
      ನೆಗೆವುದು ಮರುನೀರಲರ್ಗೆ ಚಿತ್ತಂ
      ಬಗೆಬಗೆ ಬಂಡಿಗೆ ಬಾಗುಳಂಬಡುತ್ತಂ

      ಮೋದು- ಹೊಡೆ, ಗುದ್ದು
      ನೀರಲರ್- ಚೆಲುವಾದ ಹೂವು
      ಬಾಗುಳ- ವ್ಯಾಕುಲ

      • ಆದ್ಯಂತಪ್ರಾಸಪಾರೀಣಂ ಮಾದ್ಯದ್ರಸಪರಾಯಣಂ |
        ಹೃದ್ಯಂ ಶ್ರೀಕಾಂತಕಂ ಭಾಣಂ ವೇದ್ಯಂ ಕರ್ಣಾಟಸದ್ಗುಣಂ ||

  9. ಚುಮಚುಮು ಮೊಬ್ಬುಮೊಬ್ಬಿನಲಿ ಮಂಗಳದಂಗಳದಿಬ್ಬನಿಂಗಳಿಂ
    ಚಿಮಕಿಸೆ ನೀರ ನೀರಹನಿ ನೇಸರನೇನದನಮ್ಮನಂದದಿಂ ।
    ಸುಮನಸ ರಂಗು ರಂಗವಲಿ ಹಾಗವಹಾಕುತೆ ಚಿತ್ರ ಚಂದದಿಂ
    ಚಮಕಿಸೆ ಹೊನ್ನ ಹಿನ್ನೆಲೆಯ ತಂದವ ತುಂಬಿಹ ಗುಮ್ಮನಂದದಿ।।

    ಬಿರುಬಿಸಿಲೇನಿದೀದಿವಸ ಬೆಳ್ಬೆಳಗಂಬರಕಾವಕಾರಣಂ
    ಸುರಿಸುತೆ ತುಂಬೆ ಜೀವಬಲ ಚೇತನವೇನವನಮ್ಮನಂದದಿಂ ।
    ಧರೆಗದೊ ಹೊಚ್ಚಿ ಮುಚ್ಚಿಹ ನೇಸರತಾಸೆರಗೆಂತು ನೇಹದಿಂ
    ಧರಿಸಿಹ ನೋಡ ಮೋಡವದೋನೆರಳೇನದರಿಂದೆ ತಂಪಿದಂ ।।

    ಮರುಮಸುಕಾಗೆ ಸಂಜೆಯಲಿ ಕಂಡ ದಿಗಂತದೆ ಪೂರ್ಣಚಂದಿರಂ
    ಬೆರೆಸಿಹ ಕೆಂಪು ತಂಪನೆಲೆ ನೇಸರ ತಾನೆಯೆ ಚಂದ್ರನಂದದಿಂ ।
    ಎರೆಯುತೆ ಬೆಳ್ಳಿ ತಂಬೆಳಕ ಸೂರ್ಯನ ಚೂರಿವ ರಾತ್ರಿರಂಗದೊಳ್
    ಹರಸಿಹ ಮೌನ ಲಾಲಿಯನೆ ಹೊದ್ದಿಸಿ ಹಾಡಿರಲಮ್ಮನಂದದಿಂ ।।

    ಸರಿದಿಹ ಸಂಜೆಗಂಜುತಲೆ ಹಚ್ಚಿಹನೀಬಗೆ ಚಂದ್ರ ದೀಪವಂ
    ಸರದಿಯೆ ಬಂದು ಬಾಂದಳದೆ ನೇಸರ ನೋಡದನಂದದಂದದಿಂ ।
    ಕರಿಯಿರುಳಿಂದಮಾವಸೆಯು ದೀಪವದಿಲ್ಲವು ಕಾಣ ಕಾರಣಂ
    ಮರೆಯೊರೆಸಲ್ಕೆ ಕಟ್ಟಿಮಸಿ ಚಿಮ್ಮಣಿತುಂಬಿದುದಮ್ಮ ಚಿಂತೆಯಿಂ।।

    (ನಿತ್ಯದ ಪ್ರತಿಹಂತದಲ್ಲೂ “ಅಮ್ಮನಂತೆ” ಕಂಡ ಸೂರ್ಯನ ವರ್ಣನೆ )

    • Cheedi, UshaUmesh, SomaNNa, Raghu MuLiya, KoppalatOTa, Kanchana and Srikanth murthy…Thanks for your wonderful poems. This is really motivating others here…great going.

    • It is very heartening to see the progress of Ms Usha and her earnestness in learning with a strong affinity towards classical poetry. Congratulations !!

      As expected, Soma, Srikanth, Koppathota, kanchana and others too have brought out blooming floral lines. Thanks to All. Amongst his busiest schedule and work, Dr Ganesh’s individual versified support and motivation is really motivating !!

    • ನಿಮ್ಮಯ ಶೀಘ್ರಕಾವ್ಯರಚನೋತ್ಕಟಪಾಟವಮಂ ವಿಭಾವಿಸು-
      ತ್ತಮ್ಮನ ಚಿತ್ರಣಂ ರವಿ-ಸುಧಾಂಶುನಿರೂಪಣದೊಳ್ ಮಲರ್ವ, ಮೆಯ್
      ಜುಮ್ಮೆನುತಿರ್ಪ ಕಲ್ಪನೆಯ ಭಾವುಕನೂತನಭಾನಮಂ ಮನಂ
      ಸಮ್ಮುದದಿಂದೆ “ಮೌಳಿ”ವಚನಕ್ಕನುವಾಕಮನಾಡುತಾಡುಗುಂ

      ಆದೊಡೆ ಭಾಷಾಶುದ್ಧಿಯ
      ಮೋದಂ ಕೊರೆಯಾಯ್ತು ಪ್ರಾಸದಾಸ್ಯದ ಮೋಜೂಳ್|
      ವೇದನೆಯಿಂದೊರೆದೆನಿದಂ
      ಖೇದಮನುಳಿದಂತೆ ನೀಂ ನಿಭಾಯಿಸುವುದಿದಂ ||

    • ನಿಮ್ಮೆಲ್ಲರ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು ಸರ್, ಮೊದಲು ಚೌಪದಿಯೇ ಹೊಂದಿ ತಾದರೂ (ಒದಗಿದ ಸುಲಭ ಪ್ರಾಸ ಪದಗಳನ್ನು ಬಳಸಿ) ವೃತ್ತದಲ್ಲಿ ಬರೆಯಲು ಪ್ರಯತ್ನಿಸಿದ್ದು. ಭಾವಕ್ಕೆ ಭಾಷೆ ಸಹಜವಾಗಲಿಲ್ಲವೆಂದು ಅನ್ನಿಸಿದ್ದು ಸಿಜ. ಛಂದಸ್ಸಿನ ಆಯ್ಕೆಯಲ್ಲಿ ತೊಡಕಾಗುತ್ತಿದೆ. ದಯವಿಟ್ಟು ಪರಿಹರಿಸಿಕೊಳ್ಳುವ ವಿಧಾನ ತಿಳಿಸಿಕೊಡಿ

      • ನಿಮ್ಮ ಶ್ರದ್ಧೆ-ಸಾಧನೆಗಳು ದಿಟವಾಗಿ ಅಭಿನಂದನೆಗೆ ಅರ್ಹ. ಅಲ್ಲದೆ ನಿಮ್ಮ ವೃತ್ತವಿನಿಯೋಗವೂ ಯುಕ್ತವಾಗಿದೆ. ಕೇವಲ ಹಳಗನ್ನಡದ ಭಾಷೆಯ ಬನಿಯನ್ನು ಸ್ವಲ್ಪ ಹೆಚ್ಚಿಸಿಕೊಳ್ಳಬೇಕು. ಇದು ಪೂರ್ವಸೂರಿಗಳಾದ ಮಹಾಕವಿಗಳ ರಚನೆಗಳ ಗಾಢವಾದ ಓದಿನಿಂದಷ್ಟೇ ಸಾಧ್ಯ.

        • ಕೆಲಸದೊತ್ತಡದಲ್ಲಿ ಓದು ಸಾಗುತ್ತಿಲ್ಲ, ಗಣೇಶ್ ಸರ್ (ಅದೇ ಬಹಳವಾಗಿ ಕಾಡುತ್ತಿದೆ.) ಅದು ಸಾಧ್ಯವಾಗಲಿ ಎಂಬುದೇ ನನ್ನ ಪ್ರಾರ್ಥನೆ.

  10. ಬರಗಾಲದೊಳ್ ನಭದೆಡೆಗೆನೋಡೆ ಪುರಜನರು
    ಪರಿಹರಿಸುತುಂ ಜಲದಭಾವದಿಂದ|
    ಧರೆಯ ತಣಿಸುತ್ತೆ ಕಣ್ಣೀರಿನಭಿಷೇಕದಿಂ
    ವರುಣ ದೇವಂಗೆ ಮೊರೆಯಂ ಪೊಕ್ಕಿರಲ್|

    ಹೊಲಗದ್ದೆಯೊಳ್ ಕಾಣದಾಗಲ್ಕೆ ಪಸಿರನ್ನು
    ಜಲಮಿಲ್ಲದೀ ನೆಲವು ಬಿರುಕೊಡೆದುದೈ|
    ಹಲದ ಲೋಹಕೆ ತೈಲಮಂ ಸೋಂಕಿಸಿರದಾಗಿ
    ಕೆಲಸಕ್ಕೆಬಾರದೆಯೆ ಕಂದಾಗಿರಲ್|

    ಸುತ್ತಣೂರೊಳ್ ಬಿಸಿಯ ಬಿರುಗಾರಿ ಪೊಡೆಯುತ್ತೆ
    ಪತ್ತುರಿಯಲಿರ್ಪುದೊಣಗಿದ ಮರಗಳು|
    ಬತ್ತಿಯಾರತಿಯಂತೆ ಬೆಳಗುತಿರೆ ಪುರವನ್ನು
    ಮೆತ್ತರೆಕೆ ಬೆಳೆದ ತೆಂಗಿನ ಗರಿಗಳು|

    ದಟ್ಟ ಪೊಗೆಯುಂಡೆಗಳುಮಾವರಿಸಲೆಲ್ಲೆಡೆಯು
    ಮಟ್ಟಹಾಸದೆ ನಗುತಿದಂತಿರ್ಪುದು|
    ಕೆಟ್ಟ ಗಾಳಿಯ ಸೇವಿಸಲ್ಕಾಗದೆಯೆ ಗೂಡ
    ಬಿಟ್ಟು ಪೋದವು ಪಕ್ಕಿಗಳು ವಲಸೆಗೆ|

    ಪೊಗೆಯುಮೇಲೇರುತಿರಲಾಗಸವ ಸೇರುತಲಿ
    ಧಗೆಯ ಪೆರ್ಚಿಸುತಿರ್ಪುದೀ ಭುವಿಯೊಳು|
    ಪಗುರವಾಗಿಪ ಮೋಡ ಭಾರೈಸುತಿರಲಿತ್ತ
    ನಗುತ ನೋಡಿರೆ ಜನರುಮಾಗಸವನು|

    ಎಲ್ಲಿನೋಡಿದರಲ್ಲಿ ಕಳ್ತಲೆಯು ಮೂಡಿರಲ್
    ಲ್ಕಲ್ಲಲ್ಲೆ ಪನಿಕಿಸುತೆ ಪುಟವೇರಿರಲ್|
    ಮಲ್ಲಿಗೆಯ ಪರಿಮಳವದೇನಿಲ್ಲವೆಂಬಂತೆ
    ಇಲ್ಲಿಪಸಿ ಮಣ್ಣು ಘಮಘಮಿಸುತಿಹುದೈ|

    ಪಿಂತುಮುಂತೆಲ್ಲೆಡೆಯೊಳಿಂ ಸುರಿಯೆ ಜಡಿಮಳೆಗ
    ದೆಂತ ಹರ್ಷದಿ ಸ್ವಾಗತವ ಕೋರಿರಲ್|
    ಸಂತಸದ ಕಂಬನಿಯಪೊತ್ತ ರೈತರು ತಮ್ಮ
    ಸ್ವಂತ ಕೃಷಿಗಾರಿಕೆಗೆ ಮೊದಲಾದರು|

    • ಪದ್ಯ १) ಎರಡು ಪದಗಳನ್ನು swap ಮಾಡಿ ’ಬರಗಾಲದೊಳ್ ನೋಡೆ ನಭದೆಡೆಗೆ ಪುರಜನರು’ ಎಂದರೆ ಗತಿ ಎಷ್ಟು ಸುಧಾರಿಸುತ್ತದೆ ನೋಡಿ.
      ಪರಿಹರಿಸುತುಂ?
      ಪದ್ಯ ೩) ಬಿರುಗಾರಿ – ಬಿರುಗಾಳಿ?
      ಪದ್ಯ ೪) ನಗುತಿದಂತಿರ್ಪುದು?
      ಪದ್ಯ ೬) ಪರಿಮಳವದೇನಿಲ್ಲವೆಂಬಂತೆ – very colloquial. ‘ಪರಿಮಳಕೆ ಪೈಪೋಟಿಯೆಂಬಂತೆ’ ಎಂದರೆ ಮೇಲಲ್ಲವೆ?
      ಪದ್ಯ ೭) ದೆಂತೊ ಹರ್ಷದಿ
      ಇದೆಲ್ಲ ಏನೇ ಇರಲಿ, ಚೆನ್ನಾದ ವರ್ಣನೆಯ ಏಳು ಪದ್ಯಗಳು ಹರಿದಿರುವುದು ಶ್ಲಾಘನೀಯ.

      • ಚೀದಿಯ ಪದ್ಯಗಳಿಗೆ ನಾನು ಮಿಂಚೆಯಲ್ಲಿ ಮೆಚ್ಚುಮಾತನ್ನು ಕಳುಹಿದ್ದೆ. ಆದರೆ ಅದು ಇಲ್ಲೇಕೆ ಪ್ರಕಟವಾಗಿಲ್ಲವೋ ತಿಳಿಯುತ್ತಿಲ್ಲ. ದಯಮಾಡಿ ಅಭಿಜ್ಞರು ಇದರ ಮರ್ಮವನ್ನು ಅರುಹಬೇಕು.

      • ಸವರಣೆಗೆ ಧನ್ಯವಾದಗಳು ಪ್ರಸಾದು ಅವರೆ…

  11. ಕರಿಯ ಮೋಡವು ಹೆಪ್ಪುಗಟ್ಟಲು
    ಬಿರಿವ ಭೂಮಿಗೆ ಮಳೆಯ ತರುವೊಲು
    ಭರದಿಯಾಗಸ ಮಿಂಚ ಹೊಮ್ಮಿಸಿ ಸಿಡಿಲ ಸಿಡಿಸುತಲಿ I
    ಕೊರಗಿ ಬೇಗೆಗೆ ಬಿಸಿಲ ತಾಪಕೆ
    ಸೊರಗಿ ಕುಂದಿಹ ಜೀವ ಸಂಕುಲ
    ಮೊರೆಯನೊಡ್ಡಲು ತಡೆಯಲಾರದೆ ನೊಂದು ಬವಣೆಯಲಿ II

    ಇಳೆಗೆ ಬೀಳಲು ಮಳೆಯ ನೀರದು
    ಜಳಕವಾಡುತ ಭುವಿಯು ಹರ್ಷದಿ
    ಪುಳಕಗೊಳ್ಳುತ ಮೆರಗು ತಂದಿತು ಹಸುರು ವರ್ಣದಲಿ I
    ತಳದ ಮೂಲಕೆ ಜಲವನಿಂಗಿಸಿ
    ಕೊಳೆಯ ಜಾಡಿಸಿ ನೀರ ಧಾರೆಯ
    ಹೊಳೆಯು ಹರಿಯಿತು ತುಂಬಿ ತುಳುಕುತ ಮಣ್ಣ ಬಣ್ಣದಲಿ II

    ಜಾಜಿ, ಸಂಪಿಗೆಯರಳಿ ಮಲ್ಲಿಗೆ
    ಸೋಜಿಗದಿ ಹೊಮ್ಮಿಸುತ ಕಂಪನು
    ಬಾಜಿ ಕಟ್ಟಲು ತಾವು ಸೂಸುವ ಗಂಧ ಮೇಲೆಂದು I
    ಮೋಜ ನೋಡುತ ಸುಳಿದ ದುಂಬಿಯು
    ಗೋಜಿಗಿಳಿಯದೆ ಬಾಜಿಗಾರರ
    ಹೆಜ್ಜೆ ಕಿತ್ತಿತು ಮಳೆಯು ಸುರಿಯಲು ಮಧುರ ಜಿಹ್ವೆಯಲಿ II

    ಉತ್ತು ನೆಲವನು ಹಸನು ಮಾಡಿರೆ
    ಭತ್ತ ಪೈರದು ಕದಿರ ನೊಡೆಯುತ
    ಲಿತ್ತಿಹುದು ಹೊಸ ಕಳೆಯ ಗಾಳಿಗೆ ತೊನೆದು ತೂಗುತಲಿ I
    ಕತ್ತು ಚಾಚುತ ಕಾದು ಕುಳಿತಿಹ
    ಬತ್ತದುತ್ಸಾಹದಿರೆ ಬಕಗಳು
    ಸುತ್ತಿ ಗದ್ದೆಗೆ ಹೊಂಚು ಹಾಕುವ ಸೊಬಗ ನೋಟವದು II

    ತೋಡು ,ತೊರೆಗಳ ,ಹಳ್ಳ ,ಕೊಳಗಳ
    ಬಾಡಿ ನಿಂತಿಹ ವೃಕ್ಷ , ಲತೆಗಳ
    ನಾಡಿ ಮಿಡಿಯುವ ಜೀವ ಜಲವನು ಮಳೆಯು ತುಂಬಿರಲು I
    ಕಾಡಿ ಮನುಜರ ಹಲವು ತೆರದಲಿ
    ರಾಡಿ ಮಾಡುತ ಹಾದಿ ಬೀದಿಯ
    ಮೋಡಿ ಮಾಡುವ ಮಳೆಯಗಾಲಕೆ ಸಾಟಿಯೆಲ್ಲುಂಟು? II

    • ಮೂರನೆಯ ಪದ್ಯದಲ್ಲಿನ ಕಲ್ಪನೆ ಮನೋಹರವಾಗಿದೆ. ದುಂಬಿ ನಡೆದಾಡದೆ ಹಾರಾಡಿದರೂ ಅದನ್ನು ಷಟ್ಪದಿ ಎಂದು ಗುರುತಿಸಿರುವುದಕ್ಕೂ, ಅದು ’ಕಾಲುಕಿತ್ತಿತು’ ಎಂದು ನೀವು ಹೇಳಿರುವುದಕ್ಕೂ ಸರಿಯಾಗಿದೆ!
      ನಾಲ್ಕನೆಯ ಪದ್ಯದಲ್ಲಿನ ಸ್ವಭಾವೋಕ್ತಿಯೂ ತುಂಬ ಚೆನ್ನಾಗಿದೆ. ’ಕಿಯದ್ವಾರಂ…’ ಎಂಬಂತೆ ಇದನ್ನು ಹಲವರು ಗಮನಿಸಿದ್ದರೂ (ನಾನೂ), ಹೀಗೆ ಅಭಿವ್ಯಕ್ತಿಸಿದವರೆಷ್ಟು?

      • ದಿಟವೇ ಪ್ರಸಾದು. ನೀವೆಂದಂತೆ ಭಾಲ ಅವರ ಈ ಪದ್ಯಪಂಚಕ ಸೊಗಸಾಗಿದೆ. ಆದರೆ ನೀವು ಮಿಗಿಲಾಗಿ ಮೆಚ್ಚಿದ (ನಾನೂ ಮೆಚ್ಚಿದ:-) ಮೂರನೆಯ ಪದ್ಯದ ಆರನೆಯ ಸಾಲಿನಲ್ಲಿ ಪ್ರಾಸವು ತಪ್ಪಾಗಿದೆ. ಭಾಲ ಅವರು ದಯಮಾಡಿ ತಿದ್ದಿಕೊಳ್ಳುವುದು.

        • ನನ್ನಂಥ ನಾನೂ ಆ ಪ್ರಾಸದೋಷವನ್ನು ಗಮನಿಸಲಿಲ್ಲ ಎಂದರೆ ಪದ್ಯದ appeal ಎಷ್ಟು ಚೆನ್ನಿರಬೇಡ!

          • ಸರ್ ,ನೀವು ಪದ್ಯವನ್ನು ಮೆಚ್ಚಿ ಬರೆದುದಕ್ಕಾಗಿ ನನ್ನಂಥ ನನ್ನಿಂದ ಧನ್ಯವಾದಗಳು 🙂

        • ಧನ್ಯವಾದಗಳು ಸರ್ . ಈ ರೀತಿಯ ಪ್ರಾಸ ತಪ್ಪೆಂದು ತಿಳಿದಿರಲಿಲ್ಲ.ಸರಿಪಡಿಸಿದೆ

          ಜಾಜಿ, ಸಂಪಿಗೆಯರಳಿ ಮಲ್ಲಿಗೆ
          ಸೋಜಿಗದಿ ಹೊಮ್ಮಿಸುತ ಕಂಪನು
          ಬಾಜಿ ಕಟ್ಟಲು ತಾವು ಸೂಸುವ ಗಂಧ ಮೇಲೆಂದು I
          ಮೋಜ ನೋಡುತ ಸುಳಿದ ದುಂಬಿಯು
          ಗೋಜಿಗಿಳಿಯದೆ ಬಾಜಿಗಾರರ
          ಸಾಜವಿದೆನುತ ಮಧುವ ಹೀರಿತು ಮಳೆಯ ಬಿಡುವಿನಲಿ II

          • ಆಗ ದುಂಬಿಯನ್ನು ಓಡಿಸಿದಿರಿ. ಈಗ ಅದಕ್ಕೆ ಸ್ವಲ್ಪ ಬುದ್ಧಿಪ್ರದಾನ ಮಾಡಿದ್ದೀರಿ. ಚೆನ್ನಾಗಿದೆ. ಒಂದೇ ಒಂದು ಸವರಣೆ: ಚಂಪಕ – ಸಂಪಗೆ (ಸಂ’ಪಿ’ಗೆ ತಪ್ಪು).

          • ಸರ್ ,
            ‘ ಚಂಪಕ ‘ ಅನ್ನುವ ಪದಕ್ಕೆ ಶಬ್ದ ಕೋಶದಲ್ಲಿ ‘ಸಂಪಿಗೆ’ ಅನ್ನುವ ಪದವನ್ನೇ ಬಳಸಿದ್ದಾರಲ್ಲಾ .

  12. शशाङ्कोदयवर्णनम्-
    ಚಂದ್ರೋದಯದ ಬಣ್ಣನೆ-

    तमसा गोमयेनालं संस्कृते गगनेऽङ्गणे ।
    किरणं चूर्णमादाय शिशिरांशोः करण्डकात् ॥
    तारकानिचया रङ्गवल्ल्यर्था बिन्दवः सिताः ।
    आवर्जयन्ति चेतांसि विन्यस्ता निशया स्त्रिया ॥

    ತಮಸಾ ಗೋಮಯೇನಾಲಂ ಸಂಸ್ಕೃತೇ ಗಗನೇಂಗಣೇ |
    ಕಿರಣಂ ಚೂರ್ಣಮಾದಾಯ ಶಿಶಿರಾಂಶೋಃ ಕರಂಡಕಾತ್ ||
    ತಾರಕಾನಿಚಯಾ ರಂಗವಲ್ಲ್ಯರ್ಥಾ ಬಿಂದವಃ ಸಿತಾಃ |
    ಆವರ್ಜಯಂತಿ ಚೇತಾಂಸಿ ವಿನ್ಯಸ್ತಾ ನಿಶಯಾ ಸ್ತ್ರಿಯಾ ||

    * ಇರುಳೆನ್ನುವ ಹೆಣ್ಣು ಕತ್ತಲೆಯೆನ್ನುವ ಗೋಮಯದಿಂದ ಆಗಸವೆನ್ನುವ ಅಂಗಳವನ್ನು ಚೆನ್ನಾಗಿ ಶುದ್ಧಿಗೊಳಿಸಿ ಚಂದ್ರನೆನ್ನುವ ಕರಡಿಗೆಯಿಂದ ಕಿರಣವೆನ್ನುವ ಹುಡಿಯನ್ನು ತೆಗೆದುಕೊಂಡು ರಂಗವಲ್ಲಿಯನ್ನು ಬಿಡಿಸಲೆಂದು ಹಾಕಿದ ನಕ್ಷತ್ರಗಳ ಸಮೂಹವೆನ್ನುವ ಬೆಳ್ಳನೆಯ ಬಿಂದುಗಳು ಮನಸ್ಸನ್ನು ಅಪಹರಿಸುತ್ತಿವೆ.

    शीतांशुकरसंस्पर्शसञ्जातपुलका इव ।
    तारागणा मनोज्ञायां विभावर्यां विरेजिरे ॥

    ಶೀತಾಂಶುಕರಸಂಸ್ಪರ್ಶಸಂಜಾತಪುಲಕಾ ಇವ |
    ತಾರಾಗಣಾ ಮನೋಜ್ಞಾಯಾಂ ವಿಭಾವರ್ಯಾಂ ವಿರೇಜಿರೇ ||

    *ಮನೋಹರವಾದ ರಾತ್ರಿಯಲ್ಲಿ ನಕ್ಷತ್ರಗಳ ಸಮೂಹವು ಚಂದ್ರನ ಕರದ (ಕಿರಣದ, ಕೈಯ) ಸ್ಪರ್ಶದಿಂದ ಉಂಟಾದ ರೋಮಾಂಚನವೋ ಎಂಬಂತೆ ಶೋಭಿಸಿತು.

    पूर्णिमायां कलानाथे लूतातन्ताविव स्थिते ।
    ऊर्णनाभ इवाभाति कलङ्कस्तद्गतोऽसितः ॥

    ಪೂರ್ಣಿಮಾಯಾಂ ಕಲಾನಾಥೇ ಲೂತಾತಂತಾವಿವ ಸ್ಥಿತೇ |
    ಊರ್ಣನಾಭ ಇವಾಭಾತಿ ಕಲಂಕಸ್ತದ್ಗತೋಸಿತಃ ||

    *ಹುಣ್ಣಿಮೆಯಂದು ಚಂದ್ರನು ಜೇಡರ ಬಲೆಯಂತೆ ಕಾಣಿಸುತ್ತಿರಲು, ಅಲ್ಲಿರುವ(ಚಂದ್ರನಲ್ಲಿರುವ) ಕಪ್ಪಾದ ಕಳಂಕವು ಜೇಡದಂತೆ ಕಾಣಿಸುತ್ತಿದೆ.

    वृद्धिमीयुषि तारेशे तारं स्वनति सागरः ।
    ऋद्धिं वीक्ष्य तनूजस्य को न तुष्यति जन्मदः ॥

    ವೃದ್ಧಿಮೀಯುಷಿ ತಾರೇಶೇ ತಾರಂ ಸ್ವನತಿ ಸಾಗರಃ |
    ಋದ್ಧಿಂ ವೀಕ್ಷ್ಯ ತನೂಜಸ್ಯ ಕೋ ನ ತುಷ್ಯತಿ ಜನ್ಮದಃ ||

    *ಚಂದ್ರನು ಬೆಳೆಯುತ್ತಿದ್ದಂತೆ ಸಮುದ್ರವು ಜೋರಾಗಿ ಶಬ್ದಮಾಡುತ್ತಿದೆ. ಮಗನು ಬೆಳೆಯುವುದನ್ನು ನೋಡಿ ಜನ್ಮ ನೀಡಿದ ಯಾರಿಗೆ ತಾನೇ ಸಂತೋಷವಾಗುವುದಿಲ್ಲ?

    • ಮಹೇಶಮಕುಟೇ ಚಂದ್ರಃ ಸ್ಥೂಲಮುಕ್ತಾಫಲಂ ಬಭೌ|
      ಮಹೇಶಕಾವ್ಯಮೇತತ್ತು ಸುಹೃದಾಂ ಮುಕುಟಂ ತಥಾ ||

    • वाणीकटाक्षवीक्षाविभावरीभावितोदया जीयात् ।
      निर्गतकलङ्कशङ्का त्वच्छक्तिशशाङ्कमूर्तिरसमाना ॥

  13. ನಂದದಗ್ನಿದ್ಯುತಿಯ ನಂದನನ ಮುಂದಿರಿಸಿ
    ನಂದಿಸುತ್ತನುಮಾನಗಳ ಮನವ ತೆರೆಸಿ
    ಸ್ಪಂದಿಸುತಜನಕೆ ಸ್ವೋಪಜ್ಞತೆಯ ಸಾಧಿಸುತ
    ಕುಂದಿರದೆಳೆದೆತೇರ ಕೌಟುಂಬಪಥದ

    ವೈರುಧ್ಯ’ದಲು ಮೇಲೆ’ನುವ ತಾಯ್ತನವ ತೋರಿ
    ದಾರಿತೋರುತ ಕಾವ್ಯಕಲೆಯಾಟವಾಗೆ
    ಪೂರಿಸುತ ವಾರಿಸುತ ತಿದ್ದಿಬೆಳಸಿದೆ ಸುತನ
    ಭೂರಿವೈದುಷ್ಯಪ್ರತಿಭೆಯೆರಕದೊಳ್

    ಧರೆ ರತ್ನಗರ್ಭೆಯೇಂ ನವರತ್ನಸಮಸುತನ
    ಪರಿದಾನವಿತ್ತೆ ಜನಮನವರಳಿ ನಲಿಯೆ
    ಅರಿವಳಿದರೇಂ? ಕಿಡಿಯು ಹೊತ್ತಿಸದೆ ಹಣತೆಯನು
    ಚರಿತಾರ್ಥಮೈತಾಯೆ ಚರಿಸಿದಪಥಂ

    ಸ್ವೀಯ ಪರಕೀಯ ವೈಷಮ್ಯವಿಲ್ಲದ ಪ್ರೇಮ
    ತಾಯರೂಪವತಳೆದು ಮೆದುಮಾಡಿ ಮನವ
    ಗಾಯಗಳ ಮಾಗಿಸುತ್ತಸಮತೆಯ ತೂಗಿಸುವ
    ತಾಯಾದನೇಂ ಸುತಂ ಪರಿಚರ್ಯೆವಿಡಿದು

    ಮಣ್ಣಮೂಸೆಯಮೊಳಕೆಯನ್ನಸತ್ವವಹೀರಿ
    ಬಣ್ಣಗಳ ಭಿನ್ನಗಳ ಪನ್ನತೆಯ ಮೆರೆದು
    ಕಣ್ಣಾಗಿ ಸತ್ವಕ್ಕೆ ನಿತ್ಯಸತ್ಯಕ್ಕೊದಗಿ
    ಹೆಣ್ಣಾದಳೇಂ ಮಣ್ಣು ಮಣ್ಣೆಹೆಣ್ಣಾಯ್ತೊ

    • ಎನ್ನ ಮಾತೃಪ್ರಕೃತಿವರ್ಣನೆಯನಿಲ್ಲಿ ನೀ-
      ವುನ್ನತೋನ್ನತವಿಧಿಯಿನೆಸಗಿದಿರಲಾ |
      ಮನ್ನಣೆಗಿದಕ್ಕೆ ನಾನೀವುದೇನಂ ಮೌಳಿ!
      ಸೊನ್ನೆಯಾಗದೆ ವರ್ಣವಿಭವವೆನ್ನಾ!!

      ಆದೊಡಂ ಮತ್ತೊರ್ಮೆ ನಿಮ್ಮೊಳೆನ್ನ ವಿನಮ್ರ-
      ವಾದ ಬೇಡಿಕೆಯಿಂತು ಸಲ್ಲುತಿಹುದು |
      ಹ್ಲಾದಮಯಮಪ್ಪ ಸುನಿಸರ್ಗದ ಮನೋಜ್ಞತೆಯ-
      ನಾದರಿಸಿ ರಚಿಸಿಮೆಮ್ಮಯ ಮೋದಕಂ||

  14. ದೂರ ಸಾರಿ ನಿನ್ನನಗಲಿ
    ಊರುನೂರ ಸುತ್ತಿ ಬರಲು
    ಯಾರು ತೋರದಂತ ಪ್ರೀತಿಯಿತ್ತೆ ಗೆಳೆಯನೆ
    ಆರಿಗಾರುಮಿಲ್ಲವೆಂದು
    ಸಾರಿ ಪೇಳ್ವ ಮರುಳರನ್ನು
    ತೀರ ಸಣ್ಣ ಮಾಡಿ ದೊಡ್ಡ ಗೆಲುವ ಕಂಡೆಯೆ ||೧||

    ಅಂದು ಕಳೆಯುತೆಷ್ಟೊ ಘಳಿಗೆ
    ಮಿಂದುಯೊಲುಮೆ ಜಲದಿ ಮುಳುಗೆ
    ಹೊಂದಿ ಕೆಂದ ಸೂರ್ಯ ನಾಚಿ ತೆರೆಗೆ ಸರಿದನೆ
    ಬೆಂದು ಮಿಡಿದ ಮನವನೆಂದು
    ಮಂದ ಗಾಳಿಯಿಂದ ತವಿಸಿ
    ಎಂದು ಕಾಣದಂತ ಸುಖವನಿತ್ತೆ ಸಾಗರಾ ||೨||

    ‘ಹುಟ್ಟುವವಗೆ ಸಾವು ಸಹಜ’
    ಮೆಟ್ಟಿರುವೆಯಿದನ್ನು! ಬಲ್ಲೆ
    ದಿಟ್ಟತನವು ನಿನ್ನ ಸೊತ್ತೆದಂದಿನಿಂದಲೂ
    ಬಿಟ್ಟ-ಸಕಲ ಕೆಟ್ಟ ಗುಣವ
    ಸಿಟ್ಟು ಸಿಡುಕು ಸೊಕ್ಕು ಹಠವ,
    ಕಟ್ಟುನಿಟ್ಟ ನೇಹಕಿದುವು ಸುಲಭಸಾಧ್ಯವೇ ?||೩||

    ಕಳೆಯುತಿರಲು ಸಮಯವನ್ನು
    ಕೊಳಕು ಮೀನು ಗಿಲಗಳೊಡನೆ
    ಉಳಿದೆಯೆಷ್ಟು ಶುಧ್ಹವಾಗಿ ಸುಮನನಾಗಿಯೂ
    ಕೆಳೆಯ,ಸಂಗದಲ್ಲಿ ನಿನ್ನ
    ಮುಳಿವ ದಿನಪ ತಾರೆಯಿರಲು
    ತಳೆದ ಶಾಂತಿ ಸಹನೆಗಿಂದು ಬಾಗಿ ಬಂದೆನು ||೪||

    ಕೊಡುತಲಿರಲು ಲೋಕವೆಲ್ಲ-
    ಯುಡುಗೆ ತೊಡುಗೆಗಿಂದು ಬೆಲೆಯ,
    ಮಡಿಯ ತೋರಿ ಹೃದಯವನ್ನೆ ಕಂಡೆಯಲ್ಲವೇ
    ಉಡುಗಿತಿಂದು ಬಾಳದರ್ಧ
    ಎಡವಿ ಬಿದ್ದರೇನು ಕಾಂತಿ
    ಕಡೆಗಣಿಸದಲೋಡಿ ಬರುವೆಯೆಂದಿನಂತೆನೀ||೫||

    • ಭೋಗಷಟ್ಪದಿಯೊಳುದಾರ-
      ವಾಗಿ ಬಳುಕಿ ಬಾಗುತಿರುವ
      ಸಾಗರವನು ಕುರಿತ ಕವಿತೆ ಸೊಗಸುದುಂಬಿತು.

  15. निशावसाने पृथिवीं समावृणोत्
    सितेन नाको वसनेन किं प्रियाम् ।
    अवाप्य शुभ्रं सुहृदो बलाहका-
    -द्धिमातिपातेन तथावभासते ॥

    ರಾತ್ರಿಯಲ್ಲ ಹಿಮಪಾತವಾಗಿತ್ತು. ಬೆಳಗಾಗುತ್ತಿದ್ದಂತೆ ಅದನ್ನು ನೋಡಿದ ಮೇಲೆ ಹೀಗೆ ತೋರಿತು – ಆಕಾಶನು ತನ್ನ ಮಿತ್ರನಾದ ಮೇಘನಿಂದ ಬಿಳಿಯ ಬಟ್ಟೆಯನ್ನು ಪಡೆದು, ಪ್ರಿಯಳಾದ ಭೂಮಿಯಮೇಲೆ ತಾನೇ ಆವರಿಸಿದನೋ ಎಂಬಂತೆ.

    दिवाकरो वीतबलोऽरुणोपि यत्
    महद्धि शैत्यं परिहर्तुमक्षमः ।
    यथा स्वदेशे सति धूर्तपालने
    शुभेक्षणाः शासनमुद्रया स्थिताः ॥

    ಆಗ ಕೆಂಪಾದ ಸೂರ್ಯನೂ ಕೂಡ ದೀನನಾಗಿ ತೋರುವನು – ಚಳಿಯನ್ನು ಹೋಗಲಾಡಿಸಲಾಗದೆ. ಹೇಗೆ ನಮ್ಮ ದೇಶದಲ್ಲಿ ಧೂರ್ತಪಾಲನೆಯಿರಲು ಒಳ್ಳೆಯವರು ನಾಮಮಾತ್ರ ಶಾಸಕರು, ದುರ್ಬಲರು.

    परं तु बालेषु सकालचिन्तनं
    प्रपश्य बाह्ये सहखेलनं हिमे ।
    क्षिपन्ति पिण्डानि हिमस्य नन्दने
    तथा च पक्षौ रचयन्ति भूतले ॥

    ಆದರೆ ಮಕ್ಕಳಲ್ಲಿ ಸಮಯಪ್ರಜ್ಞೆ ನೋಡು! ಹೊರಗಡೆ ಹಿಮದಲ್ಲಿ ಒಟ್ಟಿಗೆ ಆಡುತ್ತಿದ್ದಾರೆ! ಸ್ನೊ ಬಾಲ್ ಎಸಿತಾರೆ, ಭೂಮಿಯಲ್ಲಿ ಬಿದ್ದು, ಹಿದಲ್ಲಿ ರೆಕ್ಕೆಗಳು ಕಾಣುವಂತೆ ಕೈ ಆಡಿಸುತ್ತಾರೆ (“ಏನ್ಜಲ್ ವಿಂಗ್ಸ್ ಮಾಡುತ್ತಾರೆ).

    इदं च दृष्ट्वा गुरुपादपो मुदा
    हसन् स वर्षेद्धिमबिन्दुगोलकाः ।
    मुदाश्रितानां वयसो न मुख्यता
    सदा रमन्ते रमणीयवस्तुषु ॥

    ಇದನ್ನು ನೋಡು ವೃದ್ಧವೃಕ್ಷನು ಸಂತಸದಿಂದ ನಗುತ್ತ ತನ್ನಲ್ಲಿದ್ದ ಹಿಮಬಿಂದುಗಳನ್ನು ಚೆಂಡಿನಂತೆ ವರ್ಷಿಸಿದ. ಸಂತೋಷದಲ್ಲಿರುವರಿಗೆ ವಯಸ್ಸಿನ ಯೋಚನೆಯಿಲ್ಲ. ಸದಾನಂದವನ್ನು ಯಥೋಚಿತವಾಗಿ ಪಡೆಯುತ್ತಾರೆ.

    निसर्गदीना बहवो हि शाखिनः
    कठोररूपा हृतहारिताः स्थिताः ।
    तथापि केचित् तरवो नु हारितं
    भजन्ति संस्कारबलात् सदाभवम् ॥

    ಬಹಳ ಮರಗಳು ಸ್ವಭಾವದಿಂದ ದುರ್ಬಲರು (ಚಳಿಯನ್ನು ತಡಿಯದೆ) ಎಲೆಗಳನ್ನು ಕಳೆದುಕೊಂಡು ಕಠೋರರೂಪವನ್ನು ಧರಿಸುತ್ತವೆ. ಆದರೆ ಕೆಲವ ಮರಗಳು ಮಾತ್ರ ಸಂಸ್ಕಾರಬಲದಿಂದ ಸದಾ ಹಸಿರಾಗಿರುತ್ತವೆ.

    पुटेषु तेषां हिममण्डनं कृतं
    सुरैरिवासीत्तरुदेवतार्चनम् ।
    तरोस्तले कल्पितगेहसंगमो
    यथाशिषं द्विर्लभते भवेच्च वः ॥

    ಮರಗಳ ಮೇಲೆ ಬಿದ್ದ ಹಿಮವು ಸುರರಿಂದ ಮಾಡಲ್ಪಟ್ಟ ತರುದೇವತಾರ್ಚನೆಯಂತಿತ್ತು. ಆ ಮರಗಳ ಕೆಳಗೆ ಮನೆಮಾಡಿದ ಜಂತುಗಳು ಹೀಗೆ ಎರಡುಪಟ್ಟು ಆಶೀರ್ವಾದಪಡೆದರು (ತರುದೇವತೆಗಳ ಸಹವಾಸ ಹಾಗೂ ದೇವತಾರ್ಚನೆ). ಹಾಗೆ ನಿಮಗೂ, ನಮಗೂ ಎರಡುಪಟ್ಟು ಆಶೀರ್ವಾದದೊರಕಲಿ.

  16. ಅಡತಡೆಯೊಂದುಮಿಲ್ಲದೆಯೆ ಪೂರ್ವದಿ ಬಾನೊಳುನಿಸ್ವನಕ್ರಮಂ
    ಬಡೆದ ರಥಾಂಗಕಿಂದು ಘನಬೃಂದವಿಘಾತ ಸುಖಪ್ರಯಾಣಕಂ
    ಗಡಗಡಿಸುತ್ತ ಸೂರ್ಯಶಶಿ ತೇರ್ಗಳ ಚಕ್ರಭಯಂಕರಸ್ವನಂ
    ಬಿಡಿಸುತೆಸಾಗಿರಲ್ ಸತತ ಕೇಳ್ವುದೆ ಮೇಘಸಮೂಹಘೋಷಮೈ

    (ಹಿಂದೆ (ಗ್ರೀಷ್ಮದಲ್ಲಿ) ಆಕಾಶ ಪಥದಲ್ಲಿ ಸೂರ್ಯಚಂದ್ರರ ಯಾನ ರಥ ಚಕ್ರಗಳಿಗೆ ಅಡ್ಡವಿರದೆ ಏಕಧಾಟಿಯಾಗಿ ಸಾಗಿತ್ತು. ಈಗ ಕಠಿನ ಮೇಘಗಳ ಗುಂಪು ಅಡ್ಡಾಗಿ ಅವನ್ನು ಸೀಳಿಕೊಂಡು ರಥದ ಓಟನಡೆದಿದೆ. ಆ ಭಯಂಕರ ಧ್ವನಿಯೇ ಸತತವಾಗಿ (ಗುಡುಗಿನ ರೂಪದಲ್ಲಿ) ಕೇಳುತ್ತಿದೆ.)

    ಪ್ರತಿದಿನಮುಂ ಕ್ರಮಂನಿಲದೆ ವಾರಿಧಿಯಂ ಸವಿಯುತ್ತ ನೀರಿನೊ-
    ಳ್ಗತಿಶಯವಸ್ತುವಾಲವಣ ಘಟ್ಟಗಳೆಲ್ಲವು ಮೇಘದಾವನಿಂ
    ಗತಿವಡೆದುಂ ಛಟೀಲೆನಲು ಪತ್ತಿರೆ ಗರ್ಭದಗೋಳ ಭಗ್ಗೆನೆಲ್
    ದ್ಯುತಿಯತಿ ಸಾಂದ್ರದಿಂ ಸೃಜಿಸಿದತ್ ಸತಟಿತ್ ಸ್ತವಿತಂಗಳೆಂಬೆನೇ

    (ಅತಿಸಾಂದ್ರವಾದ ಮೇಘಗರ್ಭಗೋಳಗಳಲ್ಲಿ ಪ್ರತಿದಿನವೂ ಹೀರಿದ ಸಮುದ್ರದ ನೀರಿನ ಲವಣ ಹೆಪ್ಪುಗಟ್ಟಿ ಅಚ್ಚುಗಳಾಗಿ ಮೇಘದಲ್ಲಿನ ಕಿಚ್ಚು ಅವಕ್ಕೆ ಅಂಟಿ ಆಸ್ಪೋಟಿಸಿದಾಗಿನ ಧ್ವನಿಯೋ ಎಂಬತೆ ಮಿಂಚಿನಿಂದ ಕೂಡಿದ (ಸತಟಿತ್) ಗುಡುಗು (ಸ್ತವಿತ) ಸೃಷ್ಟಿಯಾಯಿತು.)

    ಇನರಶ್ಮಿ ತೃಷೆಯಿಂದೆ ವಾರ್ಧಿಜಲಮಂ ಸೋಂಕುತ್ತ ಚುಯ್ಯೆನ್ನಲೋ
    ಷ್ಮನಬೆನ್ನೇರುತ ಧೂಮಪರ್ಬಿರಲುವಾತಾಧೂತ ಮಾಗುತ್ತಲಾ
    ಘನಸಂಧಿಸ್ರವಿತಾಶ್ರುಬಿಂದು ಬೆದರುತ್ತಲ್ ದಿಕ್ತಟಪ್ರೋತ್ಥಿತ
    ಸ್ತನಯಿತ್ನುಚ್ಛಟ ಚಂಚಲರ್ಮೆರೆಯಲಾಸಾರಂ ಮಹಾಪೂರಮೈ

    (ಕ್ರಮವಾಗಿ ಮಳೆ. ದಿಗಂತದಲ್ಲಿ ಮೇಘಸಂಘದ ತ್ರಿವಿಕ್ರಮವ್ಯಾಪ್ತಿ. ಜಡಿಮಳೆಯ ಆರ್ಭಟ ಹೇಗಿತ್ತೆಂದರೆ, ಸೂರ್ಯಕಿರಣಗಳು ತೃಷೆಯಿಂದ ಸಮದ್ರವನ್ನು ಸೇರಿ ನೀರನ್ನು ತಾಕಲಾಗಿ, ತಮ್ಮೊಳಗಿನ ವಿದ್ಯುದಗ್ನಿಗೆ “ಚುಂಯ್” ಎಂದು, ಹೊಗೆಯಾಗೆದ್ದು ಗಾಳಿಗೆ ಚದುರಿ, ಆ ಮೇಘಗಳ ಸಂಧಿಗಳಲ್ಲಿ ಸ್ರವಿಸಿ ನಡುಗುತ್ತಿರುವ ಬಾಷ್ಪಗಳಂತೆ ಕಂಡವು .(ಊಷ್ಮ=ಅಗ್ನಿ, ವಾತ+ಅಧೂತ=ಗಾಳಿಗೆ ಚಿನ್ನಾಗೆ ಚೆದರಿದ, ಘನ+ಸಂಧಿ+ಸ್ರವಿತ+ ಅಶ್ರು= ಮೇಘಗಳ ಸಂಧಿಗಳಲ್ಲಿ ಮಿಡಿಯುವ ಕಣ್ಣೀರು, ದಿಕ್ತಟ=ದಿಕ್ಕುಗಳೆಂಬ ಬಂಡೆಗಳಮೇಲೆ ಉತ್ಥಿತ=ಮೇಲಕ್ಕೆ ವ್ಯಾಪಿಸಿದ ಸ್ತನಯಿತ್ನುಚ್ಛಟ = ಸಿಡಿಲಮೇಘಮಾಲೆ, ಆಸಾರ= ಜಡಿಮಳೆ))

    ನೆಲಕಂ ದಕ್ಕಿದಜೀವನಂಗಳ ನಿಜಾನಿಷ್ಟೋಗ್ರಮಾರ್ತಾಂಡ ಮಂ-
    ಡಲಮೀಂಟಲ್ ನಿಜವೈರಿವೈರಿಸಖನಾಖದ್ಯೋತನಂಪೀರ್ದು ತಂ
    ದಿಳೆಗೊಟ್ಟೂಡಿಸಿ ತಣ್ಪತಂದುಸುರಿಯಲ್ಕೆಂತಪ್ಪುದೋರಂತೆ ಮಂ
    ಡಲವನ್ ರಾಹು ತಳರ್ವವೋಲ್ ಗಗನದೊಳ್ ಕಾಲಾಭ್ರಗಳ್ ಸೇರ್ದುವೈ

    (ಆಕಾಶದಲ್ಲೆಲ್ಲಾ ತುಂಬಿದ ಕಪ್ಪುಮೋಡಗಳು ಹೇಗಿವೆ? ರಾಹುಮಂಡಲ ಬೆಳೆದು ಗಗನವ್ಯಾಪಿಯಾದಂತಿದೆ. ಏಕೆಂದರೆ ತನ್ನ ಶತೃವಿನ ಶತೃ ತನಗೆ ಮಿತ್ರನೆಂಬ ರಾಜನೀತಿಯಂತೆ, ತನ್ನ ಶತೃವಾದ ರವಿಗೆ ಶತ್ರು ಭೂಮಿ ತನಗೆ (ರಾಹುವಿಗೆ) ಮಿತ್ರ. ಈ ನಿಜ ಅನಿಷ್ಟ, ಉಗ್ರ ಮಾರ್ತಾಂಡ ಭೂಮಿಯ ಸಂಪತ್ತಾದ ನೀರನ್ನು ಅಪಹರಿಸಿ ಹೀರಿ ಕುಡಿದಿದ್ದನ್ನೆಲ್ಲಾ ಒಂದೇ ಸಾರಿ ಕಕ್ಕಿಸಿ ಕೆಳಗಿಳಿಸಲು ರಾಹು ಬೆಳೆದನೋ ಎಂಬಂತೆ ಕಾರ್ಮೋಡಗಳಿದ್ದವು.)

    ಬಲಿಪರ್ಜನ್ಯ ಸುಕೇಕಿಪಾತ್ರಪಡೆಯನ್ನಾಡಿಪ್ಪನೈ ಮೇಘಮಂ-
    ಡಲಮೋ ಮದ್ದಲೆ ಕುಂಗುತೇಳುತ ಮರುನ್ಮಾರ್ದಂಗಿಕಂ ತೋಷದಿಂ
    ಬಲದಿಂದೊತ್ತಲು ಧಾರೆವೆಳ್ಳಿಕಡಗಂ ಭೂಮಂಡನಂ ಬೀಳ್ದಕೆಂ
    ಪಲರ್ಗುಚ್ಚಂತಿಹುದಿಂದ್ರಗೋಪತತಿಯಲ್ಲೋಲಕ್ರಮಂಧಾರೆಗಳ್

    ವರ್ಷದೇವತೆಯಾದ ಪರ್ಜನ್ಯ ನವಿಲುಗಳ ಗುಂಪುಗಳನ್ನು ಆಡಿಸುತ್ತಿರುವಾಗ ಮೇಘಮಂಡಲ ಮದ್ದೆಲೆಯಾಯಿತು. ಮರುತ್ ಮಾರ್ದಂಗಿಕ
    ಮೃದಂಗ ನುಡಿಸುವಾಗ ತಾನೂ ಅದರೊಡನೆ ಮೇಲಕ್ಕೆದ್ದು ಕೆಳಗಿಳಿಯುವಂತೆ ಆ ಮೋಡಗಳು ಕುಂಗಿ ಮೇಲೇಳುವಿಕೆ. ಆ ಶ್ವೇತಧಾರೆ ಭೂಮಿಗೆ ಬೆಳ್ಳಿಯಕಾಲ್ಗೆಜ್ಜೆಯಾದರೆ, ಅದಕ್ಕೆ ಕೆಂಪು ಬಣ್ಣದ ಕುಚ್ಚುಗಳು ಆ ಮಳೆಯಧಾರೆಯೇ ಆಧಾರವಾದ ಇಂದ್ರಗೋಪಗಳು (ಒಂದು ರೀತಿಯ ಕೆಂಪು ಹುಳು).

    (ಮೂಲದಲ್ಲಿನ ಅತ್ಯದ್ಭುತ ಉತ್ಪ್ರೇಕ್ಷಾಲಂಕಾರ ಮಾಲೆಯ ಸೃಷ್ಟಿಕರ್ತ ಸಾಹಿತೀ ಸಮರಾಂಗಣ ಸಾರ್ವಭೌಮನೆಂದು ಪ್ರಖ್ಯಾತನಾದ ಶ್ರೀಕೃಷ್ಣದೇವರಾಯ. ಆತ ತೆಲುಗಿನಲ್ಲಿ ರಚಿಸಿದ ವರ್ಣನಾಪ್ರಧಾನ ಪ್ರಬಂಧ ” ಆಮುಕ್ತಮಾಲ್ಯದ” (ವಿಷ್ಣುಚಿತ್ತೀಯ) ದಲ್ಲಿನ ಗ್ರೀಷ್ಮ-ವರ್ಷ ಋತುಗಳ ವರ್ಣನೆ ವರ್ಣನಾತೀತ. ಅಲ್ಲಿನ ಅನೇಕಪದ್ಯಗಳಲ್ಲಿ ಕೆಲವು ಪದ್ಯಗಳಭಾವವನ್ನು ಆಧಾರಮಾಡಿಕೊಂಡು ಮೇಲಿನ ಪದ್ಯಗಳು ಮೂಡಿವೆ. ಮೂಲದ ಸೊಗಸನ್ನು ಅನುವಾದಿಸಲು ಅಶಕ್ತನಾಗಿ ಅದರ ಭಾವವನ್ನಷ್ಟೆ ದಕ್ಕಿದಷ್ಟನ್ನು ಹಿಡಿದು ಹಂಚಿದ್ದೇನೆ, ಆದಷ್ಟರ ಮಟ್ಟಿಗೆ ಅಲಂಕಾರಾರ್ಥಗ್ರಾಹ್ಯಸೌಲಭ್ಯಕ್ಕಾಗಿ, ಆಕವಿಯ ಅತಿಕ್ಲಿಷ್ಟತೆಯನ್ನು ನೀರಾಗಿಸಿದ ಭಾಷೆಯನ್ನು ಜಾಳಾಗಿಸಿದ ಖಿನ್ನತೆಯಿಲ್ಲದಿಲ್ಲ)

    • రాయల కావ్యచ్చాయల్
      కేయూరములాయె మరల గీస్సతి కరుణన్|
      మీ యీ కన్నడసేతన్
      హాయిని గుంఫించెనౌర! హరనామాంకా!!

    • కన్నడపుని కావ్యములో
      నున్నతమైనైదు పద్యములననువాదం
      కన్నడములో సొగసుగా
      నున్నటు ఓ చంద్రమౌలి ఒసగితివి భళీ|

      I particularly liked the first padya. Thanks. Please give the originals as well, or at least the chapter and verse numbers.

      • Thanks Srikanth. I also liked the first piece. The rest of four is a secondary choice ! I picked up these to share a sample, since it will surely provide a new dimension of imagination to our young poets.The selection of verses are from 4th Canto of ‘Amukta mAlyada’ and the numbers are between verses from 80 to 90. Regards,

  17. (ಹಳ್ಳಿಯಲ್ಲಿ ಮುಂಜಾನೆಯ ಸೊಬಗು)

    ಪೊತ್ತರೆಯೊಳ್ ರವಿ,
    ಕತ್ತಲ ಕಳೆಯುತೆ-
    ಯಿತ್ತಂ ಬೆಳಕಂ ಬುವಿಗೆಲ್ಲಂ |
    ಕತ್ತಂ ಚಾಚುತೆ,
    ಸುತ್ತಲ್ ನೋಡಿದು
    ದತ್ತಣ ಮರದಿಂದುಲಿವ ಪಿಕಂ ||

    ಸುಂದರಗೃಹಮಿರೆ
    ಚಂದದ ಗ್ರಾಮದೊ-
    ಳಂದದೆ ಮನುಜರ್ ನೆಲೆಸಿಪ್ಪರ್ |
    ಮಂದಿರದೊಳ್ ರಘು-
    ನಂದನನಿಪ್ಪನ್,
    ಪೊಂದುತೆ ಕಳೆಯಂ ನಗೆಮೊಗದೊಳ್ ||

    ಸಿಂಗರಗೊಂಡಿಪು-
    ದಂಗಣ,ಪೂಗಳ
    ಕಂಗಳ ತಣಿಪಾ ರಂಗುಗಳಿಂ |
    ಕಂಗಿನ,ಬಾಳೆಯ,
    ತೆಂಗಿನ ತೋಟದೊ-
    ಳಂಗನೆಯರ್ ಕಲೆತೋದುವರೈ ||

    ಮರದೊಳ್ ಪಾರುತೆ-
    ಯರಗಿಣಿ ಪಕ್ಕಿಗ-
    ಳರಿಯುತೆ ಪಣ್ಗಳನಾಯುತಿರೆ,|
    ಮರದಿಂದುದುರಿದ
    ಬಿರಿದಾ ಫಲಗಳ-
    ನರಸುವ ಚಿಣ್ಣರ ಬಗೆಯಂದಂ ||

    ತೋಟದ ಪಕ್ಕದೊ-
    ಳಾಟಮನಾಡ-
    ಲ್ಕೋಟಂ ಗೈದಿರಲಾ ಮಕ್ಕಳ್ |
    ದಾಟುತೆಯಿವರಂ,
    ನಾಟಿಗೆ ನಡೆಯುವ-
    ರಾಟದ ಬಾಲರ ತಾಯಂದಿರ್ ||

    • ಬೆಳಗನೆ ಬೆಳಗುವ
      ಪಳಗಿದ ಪದ್ಯಗ
      ಳಿಳಿವವು ಭಾವದ ಬೇರ್ಗಳಿಗೆ !!

      • ಸಲಿಪೆಂ ವಂದನೆ,
        ನಲಿವಿಂ,ನಯದಿಂ,
        ಸುಲಲಿತಪದ್ಯಮಿದೆನೆ ಚಂದ್ರರ್ 🙂

        • ಕಿರುದೊರೆಯೊಳ್ ನಿ-
          ರ್ಝರಿಣೀನಾಯಿಕೆ
          ಭರದಿಂದಂ ಪೊಂಗಿದ ಪಾಂಗಿಂ|
          ಶರಷಟ್ಪದಿಯೊಳ್
          ಮೆರೆವೀ ನಿಮ್ಮಯ
          ವರಕವಿತೆಗೆ ನಾಂ ಪ್ರಣಮಿಸುವೆಂ ||

          • ವಂದಿಸಿ ಮಣಿವೆಂ
            ಸುಂದರಪದ್ಯಮಿ-
            ದೆಂದಿರೆ ತಾಮುಪಮೆಯಗೂಡಿ |
            ಪೊಂದಿದೆನಾತ್ಮಾ-
            ನಂದಮನಾನಿಂ-
            ತೆಂದೆನೆ ವಿಬುಧರ್ ಪದಮೋದಿ ||

          • ಕ್ಷಮಿಸಿರಿ,

            ಕೊನೆಯ ಪಾದದಲ್ಲಿ – ಪದವೋದಿ – ಎಂಬುದಾಗಿ ಸವರಿಕೊಳ್ಳಬೇಕು.

    • ಶರಶಟ್ಪದಿಯೊಳ
      ಗೊರೆಯದೆಲಿರ್ಪೆನು
      ಮೆರೆವೀಪರಿ ಕವಿತೆಯನಿನ್ನುಂ|
      ಕೊರೆಯಿಂತಿರಲಾ
      ನುರೆ ಪೊಗಳುವೆನೇಂ
      ವರಮಿದ್ದುಂ ನಿಮ್ಮೀ ಪದ್ಯಂ|

      • ಮಾನ್ಯ ಪ್ರಸಾದರೆ, ಧನ್ಯವಾದ. ನಿಮ್ಮ ಪದ್ಯದ ಎರಡನೇ ಪಾದದ ಬಗೆಗೆ ನನಗೆ ಸಂದೇಹವಿದೆ.(ಟೈಪೊ?)
        ಗೊರೆಯದೊಲಿರ್ಪೆನು ಅಥವಾ ಗೊರೆಯದೆಯಿರ್ಪೆನು – ಸರಿಯೆಂದು
        ನನ್ನ ಭಾವನೆ.

        ಎನ್ನಯ ಪದದಿಂ
        ದುನ್ನತಮಿಪ್ಪೀ
        ಮನ್ನಿಪ ಪದಮಂ ತಾಂ ರಚಿಸೆ |
        ಸನ್ನುತರೆಲ್ಲರ್
        ಚೆನ್ನಿದೆಯೆಂಬರ್
        ಪೊನ್ನದು ಮಣ್ಣಿಗೆ ಸರಿಸಮನೇಂ? ||

      • ಶಕುಂತಲಾರವರೆ,
        ‘ಗೊರೆಯದೆಯಿರ್ಪೆನು’ ಎಂಬ ಅರ್ಥದಲ್ಲಿಯೇ ‘ಗೊರೆಯದೆಲಿರ್ಪೆನು’ (ಗೊರೆಯದೆಲೆ+ಇರ್ಪೆನು) ಎಂದು ಬರೆದಿದ್ದೇನೆ.
        ಒರೆದೂ ‘ಒರೆಯದೊಲಿರ್ಪೆನು’ ಎಂಬಷ್ಟು ವಿನೀತಭಾವ ನನ್ನದಲ್ಲ. ಇಷ್ಟು ಮಾಡಿ ಅಷ್ಟು ಮಾಡಿದೆ ಎಂದು ಹೇಳಿಕೊಳ್ಳುವವನು ನಾನು.
        ಇದು ಶಾಸ್ತ್ರೀಯವಾದ ಉತ್ತರವಾಯಿತು. ಇನ್ನು ಕಾವ್ಯಮಯ ಉತ್ತರ:
        ಸೊಲ್ಲೆನ್ನದರೊಳ
        ಗಿಲ್ಲದ ತಪ್ಪನು
        ಹಲ್ಲೆಯ ಗೈಯಲು ಪುಡುಕಿದಿರೇಂ?
        ಮೆಲ್ಲನೆ ನುಸುಳಿದೆ
        ಹೊಲ್ಲವು ನಿಮ್ಮೊಳೆ
        ಸಲ್ಲಿಸಿ ‘ಕಿಂತು’ವ ‘ದಿಂದು’ವಿಗೆ||
        ನಿಮ್ಮ ಪ್ರತಿಕ್ರಿಯಾಪದ್ಯದ ಮೊದಲ ಪಾದ: ‘ಪದದಿಂದುನ್ನತ’ ಕ್ಕಿಂತ ‘ಪದಕಿಂತುನ್ನತ’ ಎಂದರೆ ಸರಿಯಾಗುತ್ತದೆ (ಆತ್ಮಶ್ಲಾಘ ಮಾಡಿಕೊಳ್ಳುತ್ತಿದ್ದೇನೆ ಎಂದೆಣಿಸದಿರಿ).
        ನಿಮ್ಮ ಪ್ರತಿಕ್ರಿಯಾಪದ್ಯಕ್ಕಾಗಿ ಧನ್ಯವಾದ.

        • ಮಾನ್ಯ ಪ್ರಸಾದರೆ, ಧನ್ಯವಾದ. ನನ್ನ ಪದ್ಯದಲ್ಲಿ -ಸರಿಸಮನೇಂ -ಸರಿಯಲ್ಲವೆಂದೆನಿಸುತ್ತಿದೆ.ನಿಮ್ಮ ಅಭಿಪ್ರಾಯವೇನು? ಸರಿಸಮ ಪ್ರಯೋಗ ತಪ್ಪು ಮತ್ತು
          ಸಮನೇಂ ಎಂಬುದಕ್ಕಿಂತ ಸಮಮೇಂ ಸರಿಯಿರಬಹುದೆಂದು ಬರೆದ ಮೇಲೆ ಅನಿಸುತ್ತಿದೆ.
          ಹೀಗಾದಲ್ಲಿ,-ಪೊನ್ನದು ಮಣ್ಣಿಂದುತ್ತಮವೈ (?!) ಎಂದು ತಿದ್ದಿದರೆ ಸರಿಯೇ?ಅಲ್ಲದಲ್ಲಿ ಹೇಗೆಂದು ದಯವಿಟ್ಟು ತಿಳಿಸಿರಿ.
          ನನ್ನ ಪದ್ಯವನ್ನು ನೀವೆಂದಂತೆ -ಪದಕಿಂತುನ್ನತಮಿಪ್ಪೀ-ಎಂದು ಸವರಿದ್ದೇನೆ.
          ಹಲ್ಲೆ ಮಾಡುವ ಪ್ರವೃತ್ತಿಯಿಲ್ಲ :-), ಕಲಿಯಬೇಕೆಂಬ ಹಂಬಲದಿಂದಷ್ಟೇ ವಿನಯಪೂರ್ವಕವಾಗಿ ಸಂದೇಹಿಸಿದೆ.
          ಸಂದೇಹ ನಿವಾರಣೆಗಾಗಿ ಧನ್ಯವಾದ.

      • ನನ್ನ ಚಾಟುಪದ್ಯವನ್ನು ಇಷ್ಟೆಲ್ಲ ಸೀಳಿನೋಡುವ ಅಗತ್ಯವಿಲ್ಲ.
        ’ಪೊನ್ನದು ಮಣ್ಣಿಗೆ ಸರಿಸಮಮೇಂ (ಸರಿಸಮಂ+ಏಂ)’ ಸರಿ. ಪೊನ್ನು ನಪುಂಸಕಲಿಂಗವಾದ್ದರಿಂದ, ಸರಿಸಮನು+ಏಂ ಸರಿಯಾಗದು.
        ’ಪೊನ್ನದು ಮಣ್ಣಿಂದುತ್ತಮವೈ’ ಎಂಬಲ್ಲಿ ಮಣ್ಣಿ’ಗೆ’ ಬದಲು ಮಣ್ಣಿಂ’ದೆ’ ಎಂದು ಬದಲಾಯಿಸಿರುವುದು, ’ಪದದಿಂ
        ದುನ್ನತಮಿಪ್ಪೀ’ ಎಂಬಲ್ಲಿನ ದೋಷದ ಪುನರಾವರ್ತನೆಯಾಗುತ್ತದೆ. ಉತ್ತಮ ಎಂಬ ಪದವನ್ನು ಬಳಸಲೇಬೇಕೆಂದರೆ, ’ಪೊನ್ನಿಗಿನುತ್ತಮಮೈ/ಮೇಂ ಮಣ್ಣು’ ಎಂದು ಸವರಿಸಬಹುದು.
        ಇಷ್ಟು-ಮತ್ತಷ್ಟು ಸವರಣೆ ಮಾಡಬಲ್ಲ ಸಮರ್ಥರು ನೀವು. ಸುಮ್ಮನೆ ಚೋದ್ಯಕ್ಕಾಗಿ ನನ್ನ ಸಲಹೆ ಕೇಳಿರುವಿರಿ.
        Punch: ಅದೇಕೆ ಆ ಪದ್ಯದ ಪೂರ್ವಾರ್ಧದಲ್ಲಿ ಸುಮ್ಮನೆ ’ನೀಂ’ ಎನ್ನದೆ, ನನ್ನನ್ನು ಯಾರೋ Tom (ತಾಂ), Dick and Harry ಮಾಡಿಬಿಟ್ಟಿದ್ದೀರಿ?!

        • ಸಮಮೇಂ ಎಂಬುದೇ ಸರಿಯೆಂದು ಖಚಿತವಿತ್ತಾದರೂ
          ನೀವು ಆ ತಪ್ಪನ್ನು ಪ್ರಸ್ತಾಪಿಸದ ಕಾರಣ ನಿಮ್ಮನ್ನು ಚಾಟುಪ್ರಶ್ನಿಸುವ ಹಾಗೂ ಸೂಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವ ಹಂಬಲವಾಯಿತು.ನಿಮ್ಮ ಸಮರ್ಪಕವಾದ ಉತ್ತರ, ಪ್ರೋತ್ಸಾಹ ಹಾಗೂ ವಿನೋದಕ್ಕಾಗಿ ಧನ್ಯವಾದ.

  18. ಗಗನ ಭೂಮಿಯ ನಡುವಲೀಪರಿ
    ಜಗದೆ ಕಂಡಿಹ ಭುವನಸುಂದರಿ
    ಮೊಗವ ಮುತ್ತಿಹ ಕುರುಹ ಲೀಲೆಯ ಸೊಗವ ನೋಡದುವು |
    ಹಗಲೆ ಹೊಳೆದಿರುವೋಲೆಯೊಡೆ ಕರಿ
    ಮುಗಿಲ ಹೆರಳಲಿ ಮುಡಿದ ಬಣ್ಣದ
    ಬಗೆಯ ದಂಡೆಯ ಬಳಿಯೆ ಕಂಡುದು ಸೂರ್ಯ ಚಂದಿರವುಂ ||

    ಒಗೆಯ ಸಂಜೆಯ ಕೆನ್ನೆ ತಂಪದು
    ತಗುಲಿ ಹೆಚ್ಚುದು ತುಟಿಯ ಕೆಂಪದು
    ಮುಗುಳು ತುಂಬಿಹ ಮುಕುರದಂದವು ಹಸಿರು ಗಿಳಿಯದು ತಾಂ |
    ಮಿಗಿಲ ಕಡಲಂಚದುವೆ ತಾ ಕಾ-
    ಡಿಗೆಯ ನಿತ್ತಿರಲತ್ತ ನೋಡಾ
    ತೆಗೆಯ ದಿಟ್ಟಿಯ ಬೊಟ್ಟ ನಿಟ್ಟುದು ಕರಿಯ ಗಿರಿಯದು ತಾಂ ||

    ಬಿಗುವಿನಿಂದುಟ್ಟಿರುವ ಪಚ್ಚೆಯ
    ಮುಗುಟದಂಚಲಿ ಕಾಣ ಕಟ್ಟಿಹ
    ಸೊಗದ ತೆಂಗಿನ ಗರಿಯ ಕುಚ್ಚದು ಮೆಚ್ಚು ತಂದಿಹುದು |
    ಬಗಲ ನೆಲವದು ರೆವಿಕೆ ಕಣವದು
    ಮಗುಚಿದೆಲರದು ಪೂಸಿಗಂಧವ
    ಮಗಮಗಿಸುತಿರುವಲರಿನೊಲವಲಿ ಮನವ ತಟ್ಟಿಹುದು ||

    ಕೊರಳ ತುಂಬಿದ ಹಕ್ಕಿ ಹಾರವು
    ಸರಿಗೆ ತಂದಿಹ ಪುಷ್ಪರಾಗವು
    ಬೆರಗ ಬೆಡಗಲಿ ಹಬ್ಬಿಸುತ್ತಿಹ ಬಳ್ಳಿ ಬಳೆಗಳವು |
    ಬೆರಳಿಗಂದವದಲೆಯದುಂಗುರ
    ಹೊರಳಿ ಕಂಡುದು ಕಾಲಿನುಂಗುರ
    ಮರಳಿ ತಂದುದು ಗೆಜ್ಜೆ ಡಂಗುರ ತೊನೆವ ತೆನೆಗಾಳು ||

    ಮರುಳು ಮನುಜರ ಸಾಲು ನಿನ್ನಡಿ
    ಬೆರಗಗೊಂಡುದು ಭವ್ಯ ನಿಲುವಲಿ
    ಬರಿದೆ ಕಂಡಿದುದೇಕೆ ನಿನ್ನಯ ಮಮತೆ ಮಡಿಲೆಂದು |
    ಹರಸುತೆತ್ತುತಲೆಮ್ಮನೊಮ್ಮೆಲೆ
    ಸರಪಳಿಯ ಕಟ್ಟುತುಡಿಗೆಜ್ಜೆಯ
    ತೆರದಿ ನಿನ್ನುಡಿದುಂಬಿ ಮುದ್ದಿಸೆ ತಾಯೆ ನೀನಿಂದು ||

    (ಹಿಂದೊಮ್ಮೆ ಪದ್ಯಪಾನದಲ್ಲಿ “ರಗಳೆ”ಯರೀತಿ ಬರೆದಿದ್ದ ಪದ್ಯದ “ಭಾಮಿನಿ” ರೂಪ)

    • ನಿಜಕ್ಕೂ ಒಳ್ಳೆಯ ಪ್ರಯತ್ನ. ನಿಮ್ಮ ಅಂದಿನ “ರಗಳೆ”ಯು ಇಂದಿನ “ಭಾಮಿನಿ”ಯಾಗಿ
      ಬೆಳೆದುಬಂದ ಬಗೆ ಯಾರಿಗೂ ಸ್ಫೂರ್ತಿದಾಯಕ, ಮಾರ್ಗದರ್ಶಕ. ಸ್ವಲ್ಪ ಗಣಕ್ಕೆ ಗಣಕ್ಕೆ ಪದಗಳನ್ನು ಜೋಡಿಸುವ ಯಾಂತ್ರಿಕವಾದ ಎಚ್ಚರವನ್ನು ಕಲಾತ್ಮಕವಾಗುವತ್ತ ಬೆಳೆಯಿಸಿರಿ.

      • ಧನ್ಯವಾದಗಳು ಗಣೇಶ್ ಸರ್,
        ನಿಜಕ್ಕೂ ಈ ರಚನೆ ಸ್ವಲ್ಪ ಸಮಾಧಾನ ತಂದಿದೆ. ನಿಮ್ಮ ಸಲಹೆಗಳನ್ನ ಗಮನದಲ್ಲಿಟ್ಟುಕೊಳ್ಳುತ್ತೇನೆ.

  19. ಇನ್ನೊಂದು .. ಸ್ವಲ್ಪ ಬೇರೆ ತರಹದ ಚಿತ್ರಣ. ಜ್ವಾಲಾಮುಖಿಯ ನೋಟ ಸ್ಮರಿಸುತ್ತ ರಚಿಸಿದ್ದು –
    पक्षान् स भित्त्वा ननु पर्वातानां
    तृप्तिं ययौ नैव सुराधिपालः ।
    वज्रं गृहीत्वा कुपितः कथंचित्
    तं ताडयामास गिरिं प्रतापी ॥
    ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿಯೂ ಅತೃಪ್ತನಾದ ಇಂದ್ರನು ವಜ್ರಾಯುಧದಿಂದ ಪರ್ವತವನ್ನು ಹೊಡೆದನು.

    पक्षा यदि स्युर्निहिता नु शैले
    सोऽन्यत्र शीघ्रं प्रभवेत् प्रयातुम् ।
    हा हन्त सद्यः परिदग्धदेहः
    तस्थौ गिरिर्वह्निमुखो ज्वलन्सः ॥
    ರೆಕ್ಕೆಗಳಿದ್ದಿದ್ದರೆ ಹಾರಿ ಹೋಗುತ್ತಿತ್ತು. ಆದರೆ ಪಾಪ ಸುಡುತ್ತಾ ನಿಲ್ಲಿತು ಗಿರಿಯು.

    स्फोटश्च तादृक् तनुतेऽद्य काले
    नद्यश्च वह्नेरचलाद् वहन्ति ।
    मार्गेषु जीवं प्रसभं हरन्त्यः
    तोयं विदित्वा जनयन्ति धूमम् ॥
    ಅಂತಹ ಸ್ಫೋಟ ಇವತ್ತೂ ಒಮ್ಮೊಮ್ಮೆ ಕಾಣುತ್ತೆ. ಅಲ್ಲಿ ಬೆಂಕಿಯ ನದಿಗಳು, ದಾರಿಯಲ್ಲಿ ಬಂದದ್ದನ್ನೆಲ್ಲ ನಿರ್ಜೀವ ಮಾಡುತ್ತಾ, ಹರಿಯುತ್ತವೆ. ನೀರನ್ನು (ಸಮುದ್ರವನ್ನು) ಸೇರಿ ಹೊಗೆಯಾಡುವಂತೆ ಮಾಡುತ್ತವೆ.

    आलोक्य वाहं रुधिरस्वरूपं
    भीतेव याता ननु भूमिदेवी ।
    शिष्टावभाति प्रविदग्धदेशे
    भिन्नस्तना घातितपूतनेव ॥
    ಆ ರಕ್ತದಂತೆ ಹರಿಯುತ್ತಿರುವ ನದಿಯನ್ನು ಕಂಡ ಭೂಮಿದೇವಿ ಹೆದರಿ ಹೊರಟಳೇ?! ಅಲ್ಲಿ ಉಳಿದದ್ದು ಸ್ತನದಲ್ಲಿ ಘಾತಿತಳಾದ ಪೂತನಿಯಂತೆ ಕಾಣುತ್ತದೆ.

    अग्निप्रवाहे समयेन शान्ते
    पाषाणरूपः कठिनः प्रजातः ।
    गाढान्धकारेण समं च कृष्णः
    स्तब्धीकृतो निर्झरवाहितौघः ॥
    ಕಾಲಕ್ರಮೇಣ ಆರಿದ ಅಗ್ನಿನದಿಯು ಕಠೋರ ಕಲ್ಲಿನ ರೂಪ ಹೊಂದುವುದು. ಕಗ್ಗತ್ತಲೆಯ ಕಪ್ಪು ಬಣ್ಣ. ಇದ್ದಕ್ಕಿದ್ದಂತೆ ಗಟ್ಟಿಯಾದ ಝರಿಧಾರೆಯ ಸ್ವರೂಪ ಅದರದು.

    रक्तं पयस्तापयुतं दिदृक्षुः
    प्लुत्वा लघून् वह्निवहान् बहूश्च ।
    पाषाणपादो ज्वलनप्रपातं
    गत्वातिलोकं भजते हि दृशम् ॥
    ಅಂತಹ ಕೆಂಪು ಧಾರೆಯನ್ನು ನೋಡಲು ಇಷ್ಟಪಟ್ಟವ ಚಿಕ್ಕ ಚಿಕ್ಕ ಅಗ್ನಿಝರಿಗಳನ್ನು ಹಾರಿ ಕಲ್ಲಲ್ಲಿ ನಡೆದು ಧುಮುಕುತ್ತಿರುವ ಅಗ್ನಿಪಾತಕ್ಕೆ ಹೋಗಿ, ಲೋಕಾತೀತವಾದ ದೃಶ್ಯವನ್ನು ನೋಡುವನು.

    • ಅತಿವಿನೂತನವಸ್ತುಸಮಾಶ್ರಿತಂ
      ಕವನಮೇತದಪೂರ್ವಕಲಾಮಯಮ್ |
      ಅನಲವಕ್ತ್ರಗಿರೇರಸಮಾನತಾ
      ಮನಸಿ ಮೇ ತನುತೇ ಸುಷಮಾಂ ತಮಾಮ್ ||

      ವಿಶೇಷತಃ ನಾಲ್ಕನೆಯ ಪದ್ಯದ ಕಲ್ಪನೆಯು ಅತಿರಮಣೀಯವಾಗಿದೆ; ಧನ್ಯವಾದಗಳು

  20. ನುಣ್ಣನೆಯ ಹಿಮರಾಶಿ ಸುರಿದಿರೆ
    ಮಣ್ಣಿನಾಳದೆ ನೆಟ್ಟ ಬೀಜವು
    ತಣ್ಣನೆಯ ಮನದೊಳ್ ಹುದುಗಿದಾಸೆಯೊಲು ಕಾದಿರೆ ತಾನ್
    ಬಣ್ಣ ಮೆರೆಸುವ ಲತೆಯೊಳಗಿದೆಯೊ
    ಹಣ್ಣ ನೀಡುವ ಮರವು ತಾನೋ
    ಕಣ್ಣೊಳಗಿನಾಕಾಂಕ್ಷೆ ಕಾರಣವಾಯ್ತೆ ಚಳಿ ತಡೆಯಲ್

    ಬಿಳಿಚಿಕೊಂಡಿಹ ಭೂರಮೆಗಿದೋ
    ಅಳಿಸಲಾಗದ ಬಯಕೆ ಸಂಕಟ
    ಬೆಳೆಯುತಿರಲಾ ಗರ್ಭ ತನ್ನೊಡಲೊಳಗೆ ಚಿಂತಿತಳೇನ್
    ಘಳಿಗೆಗಳು ಘಂಟೆಯೆನಿಸುತಿರಲ್
    ಮೊಳಕೆ ಮೂಡಲು ಕಾಲ ಕೂಡಿತೆ
    ನಳನಳಿಸುವಾಸೆ ಬಸಿರು ಬೆಳೆಯುತಿರಲೊಡಲೊಳಗೆ ತಾನ್

    ಏನಿದಾಶ್ಚರ್ಯವು ತಮೋಗುಣ
    ವೇನಿಬಿಡವಾಗಾವರಿಸಿತೇನ್
    ಭಾನು ಕಳೆಗುಂದಿರೆ ದಿನದೊಳಗೆ ನೊಂದಿರಲು ಲೋಕಂ
    ತಾನು ಮೆರೆವಾಸೆಯಿರೆ ಚಂದ್ರಗೆ
    ಕಾನನದಮಲ್ಲಿಗೆಯವನ ಸಿರಿ
    ಮಾನಿತ ರಜನಿಯನುಭವಕೆ ಚಳಿತಂದಿರೆ ನಿಯತಿಯಂ

    ಚಳಿಯ ಕಾರಣದಿಂದ ಜನರು ಮನೆಯೊಳಗೇ ಇದ್ದು ಬೆಳದಿಂಗಳನ್ನು ಆಸ್ವಾದ ಮಾಡದೇ ಇದ್ದುದರಿಂದ ಚಂದ್ರನ ಆ ಬೆಳದಿಂಗಳು ಕಾಡಿನಲ್ಲಿ ಬೆಳೆದ ಮಲ್ಲಿಗೆಯಂತಾಯಿತು.

    ಇಳೆಯ ಮತ್ತೊಂದಾಪ್ರದೇಶದೆ
    ಬೆಳೆಯುತಿದೆ ಸಂಭ್ರಮ ಸಡಗರವು
    ಕಳೆದಿರೆಜನ ದಿನಗಳ ಕ್ರಿಸ್ತನ ಹುಟ್ಟು ನೆನೆಯುತಲಿ
    ಮಿಳಿತವಾಗಿದೆ ಗೀತ ನೃತ್ಯವು
    ಗಳಿಕೆಯೀಗಲೆ ಕಲೆಯ ನಂಬಿದ
    ಕುಲಕೆ ತಮಿಳರ ಮಾರ್ಗಳಿಮಹೋತ್ಸವದೆ ಚೆನ್ನೈಯೊಳ್

    ಯೂರೋಪಿನ ಕ್ರಿಸ್ಮಸ್ ಆಚರಣೆ , ಚೆನ್ನೈನಲ್ಲಿ ಮಾರ್ಗಳಿ ಮಹೋತ್ಸವಗಳು ನಡೆಯುವುದು ಚಳಿಗಾಲದಲ್ಲಿ. ಆ ಉತ್ಸವಗಳ ಸಂಭ್ರಮವನ್ನು ನೆನೆಯುವುದರ ಮೂಲಕ ಶಿಶಿರವು ಯಾತನಾಮಯವಾದದ್ದೇನಲ್ಲ ಎಂದು ಹೇಳಲು ಪ್ರಯತ್ನಿಸಿದ್ದೇನೆ.

    ನಗ್ನ ಶಿಶಿರಕೆ ಬೇಸರಿಸಿ ತಪೋ
    ಮಗ್ನ ಭುವಿಯನ್ನೆಚ್ಚರಿಸೆ ಬಂದನೋ
    ಅಗ್ನಿವರ್ಣದ ಹೂಗಳೆರಚಲು ವಸಂತ ಸು-
    ಲಗ್ನವಿದು ಬಣ್ಣದೋಕುಳಿಯಾಟಕೆ

    ಇದು ಮಾರ್ಚ್ ೨೦,೨೦೧೨ರ ಪದ್ಯಪಾನದಲ್ಲಿ ನಾನೇ ಪೋಸ್ಟ್ ಮಾಡಿದ್ದು.ಈ ಪದ್ಯ ಪು.ತಿ.ನ.ರವರ ’ನಗ್ನ ಗಗನ ನಗ್ನ ವಿಪಿನ ತಪೋಮಗ್ನ ಮೇಧಿನಿ’ಯಿಂದ ಪ್ರೇರಿತವಾದದ್ದು.

    • ವಸ್ತು ಮತ್ತು ಕಲ್ಪನೆಗಳೆಲ್ಲ ಚೆನ್ನಾಗಿವೆ. ಆದರೆ ಕೆಲವೆಡೆ ಭಾಮಿನಿಯ ಗತಿಯು ಪ್ರಕಟವಾಗಿ ಎಡವಿದೆ ಮತ್ತು ಹಲವೆಡೆಗಳಲ್ಲಿ ಮಾತ್ರೆಗಳ ಎಣಿಕೆಯು ಸರಿಯಿದ್ದರೂ ಸಾಲುಗಳಲ್ಲಿ ಲಘುಬಾಹುಳ್ಯದಿಂದಲೂ ಯತಿಭಂಗದಿಂದಲೂ ಗತಿಸುಭಗತೆಯು ಲೋಪಿಸಿದೆ. ನಮ್ಮ ಉಳಿದ ಗೆಳೆಯರೇ ಇದರ ಸವರಣೆಯನ್ನು ಮಾಡುವಲ್ಲಿ ನೆರವಾದಾರು.

      • ಧನ್ಯವಾದಗಳು.ನಮ್ಮ ಗೆಳೆಯರೊಂದಿಗೆ ಚರ್ಚಿಸಿ ಇನ್ನೂ ಉತ್ತಮ ರೀತಿಯಲ್ಲಿ ರಚಿಸುವುದಕ್ಕೆ ಪ್ರಯತ್ನಿಸುತ್ತೇನೆ.

  21. ಹೇರಿ ಹನಿಯ ಮಣಿಯ ಮಾಲೆ
    ಸೀರೆ ಹಸುರ ಸೆರಗು ಭಾರ
    ಸೂರೆಗೈವ ತೆನೆಯ ತೊನೆತ ನದಿಯ ಹಾಡಿಗೆ
    ನೇರ ನಕ್ಕ ಸೂರ್ಯಕಾಂತಿ
    ಬೀರಿ ನೋಟ ಸೃಷ್ಟಿಯರಳೆ
    ಸಾರೆ ಶುಭವ ಭಾನಿನುದಯವಾಯ್ತು ಮೆಲ್ಲಗೆ ||

    ಖಾರವಾಗಿ ನೋಟವೆಸಗೆ
    ನೀರು ಹೆದರಿ ಮೇಲಕೇರಿ
    ಸೇರಿ ಮುಗಿಲ ನಾಡಿನಲ್ಲಿ ಸಂಘ ಕಟ್ಟಿರೆ
    ತಾರೆ ವರ್ಷಋತುವಿನಲ್ಲಿ
    ಹೇರಿ ಬಂದ ಮುತ್ತ ಮಾಲೆ
    ಧಾರೆಯುದುರೆ ಸುಪ್ರಭಾತ ಮರಳಿ ಧರಣಿಗೆ ||

    ಕದ್ದು ಬಳಸಿ ತರುವನಪ್ಪಿ
    ಹೊದ್ದ ಛಳಿಲಿ ಲತೆಯು ನಾಚೆ
    ಸದ್ದು ಹೊರಟ ಮೌನರಾಗ ಸುತ್ತ ಮಾರ್ದನಿ
    ಮುದ್ದು ಮರಿಯನಪ್ಪಿ ಮಲಗಿ
    ಯೆದ್ದ ಕಾವ ಬಿಟ್ಟು ಗುಟುಕ
    ಮೆದ್ದು ತರುವ ಹಕ್ಕಿ ಹಿಂಡ ಬಾನ ಕಲರವ ||

    ಬಿಡದೆ ಬಿರಿದು ಬಾಡಿ ಕುಸುಮ
    ಹಿಡಿದ ಫಲಗಳೆಲ್ಲವಿಲ್ಲಿ
    ತುಡಿತದಾಸೆ ಹದದಿ ನೀಗಿ ನಿತ್ಯ ನೂತನ
    ಮಿಡಿದ ಹೃದಯ ತಾಳ ಗ ತಿಗೆ
    ಬಿಡದೆ ಹರಿಸೊ ರಸದ ಕಡಲು
    ದಡಕೆ ಬಡಿದ ಮೊರೆತ ಭಾವ ಸಾಮರಸ್ಯವು ||

    ದುಡಿವ ನೀತಿ ಕ್ಲಿಷ್ಟವೆನಿಸೊ
    ಕುಡಿದ ಮತ್ತು ನೆತ್ತಿ ಹತ್ತಿ
    ನಡಿಗೆ ಮರೆತು ಸುತ್ತಮುತ್ತ ಕೊಂಡಿ ಕಳಚಲು
    ಜಡ ಮುನಿ ವಿಕೃತ ಪ್ರಕೃತಿಯ
    ಗಡುವ ಮೆಟ್ಟಿ ಮಹಡಿಯೇಳೆ
    ಸಿಡಿದ ಧಾತ್ರಿ ಬರವೊ ನೆರೆಯೊ ಕಾಲ ಲೀಲೆಲಿ ||

    • ಭೋಗಷಟ್ಪದಿಯ ಧಾಟಿ ಚೆನ್ನಾಗಿ ಬಂದಿದೆ. ಆದರೆ ಗಣ-ಗಣಗಳಿಗೆ ಎಣಿಸಿದಂತೆ ಪದಗಳನ್ನು ಜೋಡಿಸುವ ಹವಣು ಕೆಲಮಟ್ಟಿಗೆ ಕೃತಕವೂ ರಚನೆಯ ಕಾಲದಲ್ಲಿ ಬಲುಮಟ್ಟಿಗೆ ಶ್ರಮಾವಹವೂ ಆಗುವುದು. ಜೊತೆಗೆ ಹಲವು ವ್ಯಾಕರಣವಿರುದ್ಧಪದಗಳ ಬಳಕೆಯಿದೆ (ಉದಾ : ಛಳಿಲಿ; ಇದು ಛ/ಚಳಿಗೆ ಎಂದು ತಿದ್ದಲ್ಪಟ್ಟಾಗ ಛಂದಸ್ಸಿಗೂ ವ್ಯಾಕರಣಕ್ಕೂ ಸರಿಯಾದೀತು. ಇಂಥವು ಹಲವಿವೆ)

    • ಇವನ್ನು ಸವರಿಸಿ:
      ಪದ್ಯ ೧) ಭಾನಿನುದಯವಾಯ್ತು – ಬಾನಿನುದಯವಾಯ್ತು ಅಥವಾ ಭಾನುವುದಯವಾಯ್ತು
      ಪದ್ಯ ೪) ಹರಿಸೊ – colloquial
      ಪದ್ಯ ೫) ನಾಲ್ಕನೆಯ ಪಾದದ ಗತಿ ಲಲಿತವಾಗಿಲ್ಲ. ಕೊನೆಯ ಪಾದ ’ಲೀಲೆಲಿ’ – ಲೀಲೆಯೊಳ್. ಮಹಡಿಯೇಳೆ?

      • ದೋಷ ತಿಳಿಸಿ ತಿದ್ದಿಸಿದ ಗುರುಗಳಿಬ್ಬರಿಗೂ ಧನ್ಯವಾದಗಳು… ಹವೀಕ ಭಾಷೆಯಲ್ಲಿ ಹಲವು ಪ್ರಯತ್ನ ಮಾಡಿ ಮಾತ್ರ ಅಭ್ಯಾಸವಿದ್ದ ನನಗೆ ಅದೆ ಧಾಟಿ ಬಂದು ಹೋಯಿತು ಕ್ಷಮಿಸಿ….

        ಹೇರಿ ಹನಿಯ ಮಣಿಯ ಮಾಲೆ
        ಸೀರೆ ಹಸುರ ಸೆರಗು ಭಾರ
        ಸೂರೆಗೈವ ತೆನೆಯ ತೊನೆತ ನದಿಯ ಹಾಡಿಗೆ
        ನೇರ ನಕ್ಕ ಸೂರ್ಯಕಾಂತಿ
        ಬೀರಿ ನೋಟ ಸೃಷ್ಟಿಯರಳೆ
        ಸಾರೆ ಶುಭವ ಬಾನಿನುದಯವಾಯ್ತು ಮೆಲ್ಲಗೆ ||

        ಖಾರವಾಗಿ ನೋಟವೆಸಗೆ
        ನೀರು ಹೆದರಿ ಮೇಲಕೇರಿ
        ಸೇರಿ ಮುಗಿಲ ನಾಡಿನಲ್ಲಿ ಸಂಘ ಕಟ್ಟಿರೆ
        ತಾರೆ ವರ್ಷಋತುವಿನಲ್ಲಿ
        ಹೇರಿ ಬಂದ ಮುತ್ತ ಮಾಲೆ
        ಧಾರೆಯುದುರೆ ಸುಪ್ರಭಾತ ಮರಳಿ ಧರಣಿಗೆ ||

        ಕದ್ದು ಬಳಸಿ ತರುವನಪ್ಪಿ
        ಹೊದ್ದ ಛಳಿಗೆ ಲತೆಯು ನಾಚಿ
        ಸದ್ದು ಹೊರಟ ಮೌನರಾಗ ಸುತ್ತ ಮಾರ್ದನಿ
        ಮುದ್ದು ಮರಿಯನಪ್ಪಿ ಮಲಗಿ
        ಯೆದ್ದ ಕಾವ ಬಿಟ್ಟು ಗುಟುಕ
        ಮೆದ್ದು ತರುವ ಹಕ್ಕಿ ಹಿಂಡ ಬಾನ ಕಲರವ ||

        ಬಿಡದೆ ಬಿರಿದು ಬಾಡಿ ಕುಸುಮ
        ಹಿಡಿದ ಫಲಗಳೆಲ್ಲವಿಲ್ಲಿ
        ತುಡಿತದಾಸೆ ಹದದಿ ನೀಗಿ ನಿತ್ಯ ನೂತನ
        ಮಿಡಿದ ಹೃದಯ ತಾಳ ಗತಿಗೆ
        ಬಿಡದೆ ಹರಿಸಿ ರಸದ ಕಡಲು
        ದಡಕೆ ಬಡಿದ ಮೊರೆತ ಭಾವ ಸಾಮರಸ್ಯವು ||

        ದುಡಿವ ನೀತಿ ಕ್ಲಿಷ್ಟವೆನಿಪ
        ಕುಡಿದ ಮತ್ತು ನೆತ್ತಿ ಹತ್ತಿ
        ನಡಿಗೆ ಮರೆತು ಸುತ್ತಮುತ್ತ ಕೊಂಡಿ ಕಳಚಿರೆ
        ಕೆಡಿಸಿ ಹಸಿರ ಹೀರಿಯೊಸರ
        ಗಡುವ ದಾಟಿ ಮಹಡಿಯೇಳೆ
        ಸಿಡಿದ ಧಾತ್ರಿ ಬರವೊ ನೆರೆಯೊ ಕಾಲ ಲೀಲೆಯೊಳ್ ||

        ಇನ್ನೂ ದೋಷಗಳಿದ್ದರೆ ದಯಮಾಡಿ ತಿಳಿಸಿ ಸರ್…

      • ೧) ಆಪ್ಟೆ ನಿಘಂಟುವಿನ ಪರಿಭಾಷೆಯಲ್ಲಾಗಲೀ ಬೆಂಗಳೂರು ಟಪೋರಿ ಹದಿವಯಸ್ಕರ ಪರಿಭಾಷೆಯಲ್ಲಾಗಲೀ ನಾನು ‘ಗುರು’ ಅಲ್ಲ.
        ೨) ಇನ್ನೂ ದೋಷಗಳಿದ್ದರೆ, ನನಗಿಂತ ಸ್ವಲ್ಪ ಹೆಚ್ಚು ತಿಳಿದವರು ಮಾತ್ರ ತೋರಿಸಿಯಾರು.

  22. ನೋಡsದೊ ನೀಲೀಯ ಮಾಡsಗೆ ಬೆಳಕಿಂಡಿ
    ನಡೆದಾಡೊ ಬೆಳಕ ತಂದsದ | ಭುವಿಯsಗ
    ಲೊಡೆಯನ ತಳಕು ಕಂಡsದ ||೧||

    ಮಸುಕಾದ ಮಾಡsಗ ನಸುಕು ಕೆಂಪನೆಕಂಡಿ
    ಮುಸುಕಿsದ ಮುಂಜೆ ತಂಡಿsಯು | ಭುವಿಯsಗ
    ಮಿಸುಕಿದ ಮಂಜ ದಂಡಿsಯು ||೨||

    ತೆಳ್ಳsಗೆ ಮಾಡಗ ಬೆಳ್ಳsನೆ ತೆರೆ ಕಂಡಿ
    ಸುಳ್ಳsನೆ ದಿನದ ಮರೆಕಂಡಿ | ಭುವಿಯsಗ
    ಮೆಳ್ಳsಗೆ ಕವಿದ ಪೊರೆಕಂಡಿ ||೩||

    ನೋಡsದ ಮೇಲಲ್ಲಿ ಮೋಡsದ ಕರೆ ಕಂಡಿ
    ಓಡುsವ ಮುಗಿಲ ಸೆರೆಕಂಡಿ | ಭುವಿಯsಗ
    ಮಾಡsಗ ಕವಿದ ಮುದಕಂಡಿ ||೪||

    ನೀಳsದ ಮಾಡsಗ ಕೋಲ ಮಿಂಚನು ಕಂಡಿ
    ಸೀಳು ಹೆಂಚಿನೊಳು ಸಂಚsನು | ಭುವಿಯsಗ
    ಕೇಳಿsದ ಗುಡುಗು ಸಿಡಿಲsನು ||೫||

    ಸೋರಿsದ ಮಾಡsಗ ನೀರಿನ ಹನಿಕಂಡಿ
    ಸೂರsಗೆ ಬಿಟ್ಟ ಕಂಡಿsಲಿ | ಭುವಿಯsಗ
    ತೂರಿsದ ತೊಟ್ಟು ಸೋನೆsಯ ||೬||

    ಸಂದಿsಯ ಸೂರsಗ ಬಂದ ಬಿಲ್ಲನೆ ಕಂಡಿ
    ತಂದಿsರುವೇಳು ಬಣ್ಣsವು | ಭುವಿಯsಗ
    ಸಂದಿsದು ಬಾಗು ದೀಪsವು ||೭||

    ಸೂರಿsನ ನೀಲsದಿ ಹಾರೊ ಹಕ್ಕಿಯ ಕಂಡಿ
    ಏರಿsದ ಹಾವಭಾವsವ | ಭುವಿಯsಗ
    ತೋರಿsದ ಪಕ್ಕಿನೋಟsವ ||೮||

    ವಂದಿsಸೆ ತಾ ಬಾನು ಬಾಗಿ ಬಗ್ಗುದ ಕಂಡಿ
    ತಂದಿsರೆ ತಾಗು ನೆಲಕೀಗ | ಭುವಿಯsಗ
    ಸಂಧಿsಸುವಾದಿಗಂತsವ ||೯||

    ಇರುಳsಗ ಮಾಡsಲಿ ನೂರಾರು ಬೆಳಕಂಡಿ
    ಸರಿದುsದು ತುಣುಕು ಚಂದಿsರ | ಭುವಿಯsಗ
    ಸುರಿದುsದು ಮಿಣುಕ ತಂದೀಗ ||10||

    • ಮೂರಡಿ ವಾಮನನೀರೇಳು ಲೋಕವ |
      ಮೀರಿ ವಿಕ್ರಮನಾಗಿರ್ಪಂತೆ | ಸೋದರಿ !
      ಸ್ವಾರಸ್ಯಪೂರ್ಣಂ ಭವದುಕ್ತಿ ||

      • ಅಹಾ..! ಎಂತಹ ಉದಾತ್ತ ತ್ರಿಪದಿ. ಎಲ್ಲ ತ್ರಿಪದಿಗಳ “ಪ್ರತಿನಿಧಿ”ಯಂತಿದೆ ಗಣೇಶ್ ಸರ್,

        ತೂಗುsತೆ ತೊಟ್ಟಿsಲ ಜೋಗುsಳ ಗುನುಗಿsರೆ
        ಲೋಗsದ ಕಂದನಿsಗೆಂದು । ಸರಾಗದೆ
        ತಾಗೀತೆ ಗೋವಿಂದಗಿಂದು ।।

      • ಸರಾಗದೆ: ಅಂಶದಲ್ಲಿ ಕರ್ಷಣಕ್ಕೆ ಅವಕಾಶವಿದ್ದರೂ ಲಗಂ ಬರುವಂತಿಲ್ಲ.
        ‘ಕಂದಮ್ಮನಿಗೆಂದು’ ಹಾಗೂ ‘ಗೋವಿಂದನಿಗಿಂದು’ ಎಂದು ತಿದ್ದಿದರೆ, ಗತಿ ಇನ್ನೂ ಸೊಗಯಿಸುತ್ತದೆ.

        • ಸರಿ ಪ್ರಸಾದ್ ಸರ್, “ಲಗಂ”ಇದ್ದಮೇಲೆ “ಸರಾಗ” ಹೇಗೆ ಸಾಧ್ಯ?! “ರಾಗದೆ” ಅಂದರಾಗದೇ?

          ತೂಗುsತೆ ತೊಟ್ಟಿsಲ ಜೋಗುsಳ ಗುನುಗಿsರೆ
          ಲೋಗsದ ಕಂದಮ್ಮನಿಗೆಂದು । ರಾಗದೆ
          ತಾಗೀತೆ ಗೋವಿಂದನಿಗಿಂದು ।।

    • ಪ್ರತಿಪದ್ಯದ ಮೊದಲೆರಡು ಪಾದಗಳ ಕೊನೆಯ ಶಬ್ದಗಳನ್ನು ಸಮನಾಗಿಸಿಕೊಂಡ ನಿರ್ಬಂಧದಲ್ಲಿಯೂ ಇಷ್ಟು ಸಲೀಸಾಗಿ ಪದ್ಯಗಳನ್ನು ಹೊಸೆದಿರುವಿರೆಂದರೆ, ಇಂತಹ ನಿರ್ಬಂಧದಿಂದ ಬಿಡಿಸಿಕೊಂಡರೆ ಇನ್ನೆಷ್ಟು ಹೊನಲು ಹರಿಯಬೇಡ!
      ಮಾಮೂಲು:
      ೧) ಭುವಿ’ಯಾ’ಗ – ಅವಗ್ರಹ ಬೇಡ.
      ೨) ಮಾಡsಗೆ ಎಂದರೇನು ತಿಳಿಸಿ.
      ೩) ೯ನೆಯ ಪದ್ಯದಲ್ಲಿ ಅನುಪ್ರಾಸವಿಲ್ಲ

      • ಧನ್ಯವಾದಗಳು ಪ್ರಸಾದು ಸರ್, ನೀವು ತೋರಿಸಿರುವ ಎಲ್ಲ ತಪ್ಪುಗಳು ಸರಿಯಾಗಿವೆ. ಮೊದಲ ಹಾಗು ಕೊನೆಯ ಪದ್ಯಗಳಲ್ಲಿನ “ಬೆಳಕಿಂಡಿ” – ಮಿಕ್ಕ ಪದ್ಯಗಳಲ್ಲಿ “ಕಂಡಿ”! ನಿಮ್ಮ ಆಣತಿಯಂತೆ “ಭುವಿಯಾಗ” ಬದಲಿಸುವ ಕಿರು ಪ್ರಯತ್ನ ಮಾಡಿದ್ದೇನೆ. (ಮಾಡಾಗ/ಸೂರಾಗ = ಮಾಡಿನಲ್ಲಿ /ಮೇಲಿನ ಸೂರಿನಲ್ಲಿ)

        ನೋಡsದೊ ನೀಲಿsಯ ಮಾಡಾಗ ಬೆಳಕಿಂಡಿ
        ನಡೆದಾಡೊ ಬೆಳಕ ತಂದsದ | ಭುವಿಯಾಗ
        ಲೊಡೆಯsನ ತಳಕು ಕಂಡsದ ||೧||

        ಮಸುಕಾದ ಮಾಡಾಗ ನಸುಕು ಕೆಂಪನೆಕಂಡಿ
        ನುಸುಕಿsದ ಕೆಂಡದುಂಡಿsಯು | ಮುಂಜಾವ
        ಮಿಸುಕಿsದ ಮಂಜ ದಂಡಿsಯ ||೨||

        ತೆಳ್ಳsಗೆ ಮಾಡಾಗ ಬೆಳ್ಳsನೆ ತೆರೆ ಕಂಡಿ
        ಸುಳ್ಳsನೆ ದಿನದ ಮರೆಕಂಡಿ | ನೆರಳಾಗ
        ಮೆಳ್ಳsಗೆ ಕವಿದ ಪೊರೆಕಂಡಿ ||೩||

        ನೋಡsದ ಮೇಲಲ್ಲಿ ಮೋಡsದ ಕರೆ ಕಂಡಿ
        ಓಡುsವ ಮುಗಿಲ ಸೆರೆಕಂಡಿ | ಮೋಜಾಗ
        ಮಾಡಾಗ ಕವಿದ ಮುದಕಂಡಿ ||೪||

        ನೀಳsದ ಮಾಡಾಗ ಕೋಲ ಮಿಂಚನು ಕಂಡಿ
        ಸೀಳು ಹೆಂಚಿನೊಳು ಸಂಚಾನು | ಬಾನಾಗೆ
        ಕೇಳಿsದ ಗುಡುಗು ಸಿಡಿಲsನು ||೫||

        ಸೋರಿsದ ಮಾಡಾಗ ನೀರಿನ ಹನಿಕಂಡಿ
        ಸೂರಾಗೆ ಬಿಟ್ಟ ಕಂಡಿsಲಿ | ಮಳೆಯಾಗ
        ತೂರೀದ ತೊಟ್ಟು ಸೋನೆsಯ ||೬||

        ಸಂದಿsಯ ಸೂರಾಗ ಬಂದ ಬಿಲ್ಲನೆ ಕಂಡಿ
        ತಂದಿsರುವೇಳು ಬಣ್ಣsವು | ಕಾಪಿsಡೆ
        ಸಂದಿsದು ಬಾಗು ದೀಪsವು ||೭||

        ಸೂರಿsನ ನೀಲsದಿ ಹಾರೊ ಹಕ್ಕಿಯ ಕಂಡಿ
        ಏರಿsದ ಹಾವಭಾವsವು | ಸವಿಯsದು
        ತೋರಿsದ ಪಕ್ಕಿನೋಟsವು ||೮||

        ಮೇಗsಳದಾಬಾನು ಬಾಗಿ ಬಗ್ಗುದ ಕಂಡಿ
        ತಾಗಿsರೆ ತಾನು ನೆಲಕೀಗ | ದೂರಾದೊ
        ಳಾಗೀದುದಾದಿಗಂತsವು ||೯||

        ಕರಿದಾದ ಮಾಡಾಗ ನೂರಾರು ಬೆಳಕಿಂಡಿ
        ಸರಿದುsದು ತುಣುಕು ಚಂದಿsರ | ನಿರುಳಾಗ
        ಸುರಿದುsದು ಮಿಣುಕ ತಂದೀಗ ||10||

  23. Upholding Sharadrtu vis-a-vis the rest (ಇಂದ್ರ/ಉಪೇಂದ್ರವಜ್ರ):
    ಅಸಂಖ್ಯ ಪುಷ್ಪಂಗಳಿನಿಂ ಪ್ರಸನ್ನಂ
    ವಸಂತ ತಾಂ ಜೃಂಭದಿನಿರ್ದೊಡಂ ನೋ|
    ಡಸಹ್ಯದಾ ಮಾಗಿಯು ಪೂರ್ವದರ್ಧಂ
    ನಸೌಖ್ಯಗ್ರೀಷ್ಮಂ ಮಗುಳರ್ಧಮಲ್ತೆಲ್||1

    ಭೀಷ್ಮಂ! ಮರುತ್ತಂ ಬೆಮರಿಂದೆ ತೊಯ್ಯಲ್
    ಗ್ರೀಷ್ಮಂ ಗಡೆಮ್ಮನ್ನು ಸುಡರ್ದೆ ತಾಂ ಪೇಳ್|
    (Wind God)ಶುಷ್ಮಿಪ್ರಸೀದಂಗೊಳದನ್ನೆಗಂ ತಾಂ
    (Mouse)ಮುಶ್ಮಗೃಹಂ ತಾನೆನಿಸರ್ದೆ ಗೇಹಂ||2

    ತರ್ಷಂ ಪೃಥಾಮಾತೆಯ ಹಿಂಗಿಸಿರ್ದೇಂ
    ವರ್ಷಾಸಮಾರಾಧನೆಯೊಡ್ಡುವಂದಂ|
    ಪರ್ಷಂ ಹವಾಮಾನದ ಕಾಟಕೆಂದುಂ
    ಮರ್ಷಂ ಕೆರಳ್ದಿರ್ದಿರದೇಂ ಜನಂಗಳ್||3

    ನಿರೀಕ್ಷೆ ತಾನಾದುದು ಕಾಲಮಿಂದುಂ
    ಶರದೃತುಂ ಬಂತಿದೊ ಸೌಖ್ಯಕಾಲಂ|
    ಚಿರಾಯುಮೆಂದೆಂದಿಗಿದಾಗಲೆಂಬೆಂ
    ಸುರೋಪಮಂ ಕೇಳ್ ಮಳೆ-ಬೇಗೆಯಿಲ್ಲಂ||4

    ಹೇಮಂತಕಿಲ್ಲಂ ನಿಜಭಾವಮೇನುಂ
    ಸೀಮಾಂತಕಾಲಂ ಪರಪೂರ್ವಗಳ್ಗಂ (ಶರತ್-ಶಿಶಿರ)|
    ತೇಮಾನಮಂ ಗೈಯುತೆ ಶಾರದಂ ತಾಂ
    ಹೈಮಕ್ಕಮಾಹ್ವಾನಮನೀವುದೇಕೋ||5

    ಆರಂಭಮಾಯ್ತೀಗ ಕರಾಳಪರ್ವಂ
    ಘೋರಂ ಹಿಮಂ ತಾಂ ಶಿಶಿರಪ್ರಸಾದಂ!
    ಕೋರುತ್ತೆ ಜೀವಿಂಪುವುದೊಂದೆ ಕಾರ್ಯಂ
    ಬಾರಾ ಶರತ್ಕಾಲವೆ ಬೇಗಲೆಂದುಂ||6

    ನಾಲ್ಕನೆಯ ಪದ್ಯದ ಎರಡನೆಯ ಪಾದದಲ್ಲಿನ ’ಶರದೃತುಂ’ (?) ಉಚ್ಚಾರಣೆಯಲ್ಲಿ ರೇಫವು ಗುರುವಾಗಿರುತ್ತದೆ. ಹಾಗೆ ವಿನಾಯಿತಿಯಿಲ್ಲವೆಂದಾದರೆ ಪರ್ಯಾಯ: ಶರತ್ಸಖಂ ಬಂದಿಳೆ ಸೌಖ್ಯಮಾಗಲ್|

    • ನಿಮ್ಮಿಂದ್ರವಜ್ರಂ ಸಕಲರ್ತುಮಾಲಾ-
      ಸಮ್ಮೋದಕಂ ದಲ್ ತರಳಂ ವಿನೂತ್ನಂ |
      ಕಿಮ್ಮೆನ್ನದೇಂ ವ್ಯಾಕೃತಿಯಾದೊಡಂ ಪೇಳ್ !
      ಸಮ್ಮಾನನೀಯಾ! ಸುಜನಪ್ರಸಾದಾ!!

      • ಧನ್ಯೋಸ್ಮಿ. ಎರಡನೆ ಪದ್ಯದ ’ಮುಶ್ಮಗೃಹಂ’ ಕೂಡ ದೋಷಯುಕ್ತ ಎಂದು ಈಗ ಗಮನಿಸಿದೆ. ಇತರ ವ್ಯಾಕೃತಿಗಳನ್ನು ನಿಮ್ಮಲ್ಲಿ ಮುಖತಃ ಪರಿಹರಿಸಿಕೊಳ್ಳುವೆ.

  24. I’ve tried to write verses about the retreat of the rainy season and beginning of autumn. usual disclaimers about grammar arthaspashTate etc apply 😛 except verse 4 which is in vamshastha rest all in indra/upendravajra/upajAti.

    संप्राप्य नैरस्यजयं धरण्यां स मेघराजः प्रतिरोधहीनः |
    वर्षावसाने हि निवर्तनेप्सुः ददर्श तं हस्तिसमूहमेकम् || 1 ||

    सः मेघराजः प्रतिरोधहीनः धरण्यां नैरस्यजयं संप्राप्य वर्षावसाने निवर्तनेप्सुः तं हस्तिसमूहं एकं ददर्श |
    After attaining victory which was without rasa/entertainment due to lack of opposition (kings don’t fight in rainy season) in the end of rainy season the king of clouds who was desirous of returning saw a group of elephants.

    अहो सुयोगं खलु योद्धुमद्य भृत्यान् व्यवस्थापयितुं क्षितौ च |
    निश्चित्य राजाभ्रपताकिनीभृत् युद्धं कुरुध्वन्त्विति सोब्रवीत्तान् || 2 ||

    अहो क्षितौ अद्य योद्धुं भृत्यान् व्यवस्थापयितुं च सुयोगं (इति) निश्चित्य अभ्रपताकिनीभृत् राजा “युद्धं कुरुध्वं” इति तान् (मेघान्) अब्रवीत् |
    “lo behold! a great day to fight and also appoint regents (depending on who fights well)” thus thinking he who has an army of clouds gave them orders to fight.

    तस्मिन्नृतावन्तिमसङ्गरस्स ज्ञात्वेति मेघा रसयुद्धपक्षाः |
    तदा समूहोपरि बाणवृष्टिं चक्रुः स्वतुल्यप्रतिपक्षकामाः || 3 ||

    तस्मिन् ऋतौ सः अन्तिमसन्गरः इति ज्ञात्वा मेघाः रसयुद्धपक्षाः स्वतुल्यप्रतिपक्षकामाः तदा (गज)समूहस्य उपरि बाणवृष्टिं चक्रुः|
    knowing that this fight would be the last one of that season the clouds who were desirous of opponents equal to them and also who takes side of an entertaining fight(don’t like boring fights) showered arrows (rain drops) on that group of elephants.

    मेघैर्विमुक्तैर्जलबाणकण्टकैः वन्येभपुत्रं परिरक्षितुं सदा |
    संस्थाप्य तं मातुरधस्तले हिताः करेणुका व्यूहकृता इव स्थिताः व्यूहं करिण्यश्च कृता इव स्थिताः || 4 ||

    मेघैः विमुक्तैः जलबाणकण्टकैः वन्येभपुत्रं सदा परिरक्षितुं तं मातुः अधस्तले संस्थाप्य हिताः करिण्यः व्यूहं कृताः इव स्थिताः (आसन्) |
    To shield the baby elephant which was in the group from the arrows in the form of water drops released by the clouds the female elephants (generally males don’t form groups) placed it under it’s mother and stood around thus creating a war formation and shielding it.

    युद्धज्ञतां वीक्ष्य स वारिनाथः तासां विशेषां विशिष्टां परितुष्टचित्तः |
    प्राप्तोऽहमद्येति च दक्षभृत्याः जगाम संस्थाप्य दिवं नृपस्ताः || 5 ||

    सः वारिनाथः तासां विशिष्टां युद्धज्ञतां वीक्ष्य अद्य दक्षभृत्याः प्राप्तोऽहं इति परितुष्टचित्तः नृपः ताः (करेणुकाः) संस्थाप्य दिवं जगाम |
    Seeing how well-versed they are in the science of war (just that and not in other qualities) the king of waters pleased with them appointed the elephants as the regents to rule over the earth and went to heaven.

    प्राप्ता वरं ता नृपतेर्नवं तत्परीक्षितुं तस्य च साधनत्वम् |
    सद्यश्शरत्काल- विशुद्धितानि-विशुद्धबह्वप्सरांसि जग्मुः खलु शर्शरीकाः || 6 ||

    ताः शर्शरीकाः नवं वरं नृपतेः प्राप्ताः तस्य साधनत्वम् परीक्षितुं सद्यश्शरत्कालविशुद्धबह्वप्सरांसि जग्मुः |
    they of mischievous intent after getting this new favour from the king, desirous of testing their power went towards the lakes containing lots of water were just now purified by the arrival of sharat.

    पुनर्व्यवस्थापयितुं धरित्र्यां प्रशासनं वर्षनृपस्य भव्यम् |
    जग्मुर्यदा हस्तिवराः पयोदान् किं चित्रमद्येति ददर्श भानुः || 7 ||

    धरित्र्यां वर्षनृपस्य भव्यं प्रशासनं पुनर्व्यवस्थापयितुं यदा हस्तिवराः पयोदान् जग्मुः (तदा) किं चित्रं अद्य इति (विचिन्त्य) भानुः ददर्श |
    when those elephants desirous of bringing back the reign of their master (rainy season) on earth went towards the lakes the sun who saw that thought “oh what a surprise I’m witnessing today”

    अम्भोजभूम्यां मधुनःकृषिज्ञान् मग्नान् कृषौ च भ्रमरान् करेभ्यः |
    अपीडयंस्तान् फलपूर्वमेव हृत्वा हि भूमीर्नलिनीश्च तेषाम् || 8 ||

    अम्भोजभूम्यां मधुनःकृषिज्ञान् कृषौ मग्नान् च तान् भ्रमरान् करेभ्यः फलपूर्वमेव तेषां भूमीः हि नलिनीः हृत्वा अपीडयन् |
    those bees who are honey-farmers who were immersed in their work of farming in the lotus-fields were pestered by the elephants by taking away their fields(lotuses) even before they got the fruits of their labour (i.e. honey) in the pretext of collecting taxes.

    आन्दोलिताब्धिं परिवेक्ष्य परिवीक्ष्य हंसाः किं वारिदान्तो न भवेदवन्याम् |
    ततो विचिन्त्योत्तरपर्वतं ते जग्मुः सरो मानसनाम भीताः || 9 ||

    हंसाः आन्दोलिताब्धिं परिवेक्ष्य(->typo) परिवीक्ष्य “वारिदान्तः अवन्यां (अद्यापि) न भवेत् किं” इति विचिन्त्य भीताः ते उत्तरपर्वतं मानसनाम सरः प्रति जग्मुः |
    the swans seeing disturbed muddy waters instead of the clear waters of the sharat season thought that rainy season has not yet retreated and thus thinking they went back towards the northern mountains and the lake named maanasa.

    इत्थं स्वशक्तिं परपीडनाय धूर्ता व्ययन्तः किल सन्ति विद्याम् |
    राज्ञेऽपि नूनं खलु राजभृत्याः उदारताभावविहीनजीवाः || 10 ||

    इत्थं धूर्ताः विद्यां स्वशक्तिं परपीडनाय व्ययन्तः सन्ति किल? राज्ञेऽपि राजभृत्याः उदारताभावविहीनजीवाः नूनं |
    thus the wicked generally spend their knowledge and power to hurt others isn”t it? also servants of the kings tend to be meaner than the king himself.
    (this is just a preachy addition as I didn’t know how to end it :P)

    • There was no warrant to end it. You should have gone on and on. The verses are bodhaprada. I especially liked the diction of the 7th verse.

    • अहो सुरम्यो कवितागणोऽयं भवत्कृतः प्रातिभवैभवाढ्यः ।
      इतोऽपि संवर्धयितुं समर्हो भवेन्नवं सुन्दरखण्डकाव्यम् ॥ 🙂

      तस्मिन्नृतौ इति स्यादिति मन्ये ।
      व्यूहकृता इत्येतत् विवक्षितेऽर्थे न युज्यत इति भाति । तस्मिन्नर्थे कृतव्यूह इति स्यात् ।
      विशेषशब्दः पुंलिङ्गः । विशिष्टशब्दोऽत्र ग्रहीतुं योग्यः ।
      विशुद्धितशब्दः अयुक्तः । अत्रार्थे विशुद्धशब्दः ।
      अपीडयंस्तानिति योग्यम् ।
      परिवेक्ष्य = परिवीक्ष्य ।
      द्वितीय-चतुर्थयोः चरणयोरन्ते अनुस्वारलेखनमयुक्तम् । अत्र मकारः स्यात् ।

      यथाज्ञानमिदमुक्तम् । अन्यथा मा भावयतु वयस्य 🙂

      • ವಯಸ್ಯ,
        ನಿಮ್ಮ ಪ್ರಶಂಸೆ ಹಾಗು ಸಲಹೆಗಳಿಗೆ ಧನ್ಯವಾದಗಳು. ಅನ್ಯಥಾ ಭಾವಿಸುವ ಪ್ರಶ್ನೆಯೇ ಇಲ್ಲ. ನೀವು ಓದಿ ಸಲಹೆಗಳನ್ನು ನೀಡಿರುವುದೇ ಭಾಗ್ಯ 🙂 ನಿರ್ದಾಕ್ಷಿಣ್ಯವಾಗಿ ಸಲಹೆಗಳನ್ನು ಎಲ್ಲರೂ ನೀಡುತ್ತಿದ್ದರೆ ದೋಷಗಳು ಕಡಿಮೆಯಾಗುತ್ತದೆ. ಮೂಲದಲ್ಲೇ ಸವರಣೆಗಳನ್ನು ಮಾಡಿದ್ದೇನೆ

        • 🙂

        • ಮತ್ತೂ ಹಲವು ದೋಷಗಳಿವೆ.ಇವನ್ನೆಲ್ಲ ಮುಖತಃ ತಿಳಿಸುವೆ. ಆದರೆ ಇದೆಲ್ಲಕ್ಕಿಂತ ಮಿಗಿಲಾದುದೇನೆಂದರೆ ಸದ್ಯದ ಕವಿತೆಯ ಅನನ್ಯತೆ.ಇಂಥ ವರ್ಣನೆಯು ಪ್ರಾಯಿಕವಾಗಿ ಸಂಸ್ಕೃತಸಾಹಿತ್ಯಪರಂಪರೆಯಲ್ಲಿಯೇ ಇದುವರೆಗೆ ಇಲ್ಲದ
          ಸಾಹಸ; ಸ್ವಾಗತಾರ್ಹಸಾಹಸ.

          • > ಮತ್ತೂ ಹಲವು ದೋಷಗಳಿವೆ.
            nothing unexpected 😛 so

            शैथिल्यं शब्दशय्यायां व्याकृत्यां विकृतिं सदा |
            मद्गोत्राङ्को भवेन्नेति यत्नं करोमि हे कवे || (भवेत् + न + इति) 😛

            i’ll call/meet you for the corrections

            > ಪ್ರಾಯಿಕವಾಗಿ ಸಂಸ್ಕೃತಸಾಹಿತ್ಯಪರಂಪರೆಯಲ್ಲಿಯೇ ಇದುವರೆಗೆ ಇಲ್ಲದ
            quite unexpected

  25. ರಣಾಂಗಣದಿಂದ ಪಲಾಯನಗೈಯುತ್ತಿರುವ ದುರ್ಯೋಧನನ ಸ್ಥಿತಿ.
    ( ಪ್ರಕೃತಿವರ್ಣನೆಯನ್ನು ಕೈಬಿಟ್ಟಿರುವುದಕ್ಕೆ ಕ್ಷಮಿಸಿ.)

    ಫಡ ! ಕುನ್ನೀ ! ರಣಹೇಡಿ ! ನಿಲ್ಲೆನುತೆ ರೌದ್ರಾವೇಶಘೋಷಂಗಳಿಂ
    ಗುಡುಗುತ್ತುಂ ಪವನಾತ್ಮಜಂ ಬಿಡದೆ ಬೆನ್ನಟ್ಟಲ್ಕೆ ಕಾಡ್ಗಿಚ್ಚವೋಲ್ |
    ನಡುಗುತ್ತುಂ ಪೊಣರಲ್ಕಸಾಧ್ಯಮೆನುತುಂ ದುರ್ಯೋಧನಂ ನೋಂತು ಮೇಣ್
    ನಡೆದಂ ವೇಗದಿನೈಂದ್ರದಿಕ್ಕಿನೆಡೆಗಂ ಸಂಭೀತಿಶೋಕಾಕುಲಮ್ ||

    ಘನಸಿಂಹಾಸನಮೇಂ ? ಸರತ್ನಪಥಮೇಂ ? ಪೊಂದೇರ್ಗಳೇಂ ? ಅಂಗನಾ-
    ಗಣಗಾನಾದಿಗಳೇಂ ? ಪೊಗಳ್ವ ಭಟರೇಂ ? ವೈನೋದಮೇಂ ? ಮೋದಮೇಂ ?
    ಇನಿತುಂ ವೈಭವಶಾಲಿಯೀಗಳಸುಗೆಟ್ಟೇಕಾಂಗಿಯಾಗಿರ್ಪೆನೆಂ-
    ದೆನುತುಂ ಕಂಬನಿದುಂಬಿ ತಾಂ ಜರುಗಿದಂ ಸಂಭ್ರಾಂತಸರ್ಪಧ್ವಜಂ ||

    ಕೊಳೆಯುತ್ತಿರ್ಪ ಕಳೇವರಾಳಿ ಧರಣೀದೌರ್ಭಾಗ್ಯಸಂಕೇತಮೇಂ ?
    ಕಳಿವಣ್ ಮಾಮಕಪಾಪಪಾದಪದಿದೆಂದೆನ್ನುತ್ತೆ ಗೋಳಾಡಿದಂ |
    ಹಳಿದಂ ದುರ್ವಿಧಿಯಂ ಮನಕ್ಕೆ ಮುಳಿದಂ ಹಮ್ಮೈಸಿ ಬೀಳುತ್ತೆ ಕ-
    ಟ್ಟಳಲಿಂದಂ ಪುಯಿಲಿಟ್ಟು ಬಾನ್ ಬಿರಿಯೆ ಮೇಣ್ ಒರ್ವೊರ್ವರಂ ಕಾಣುತುಂ ||

    ಅರರೇ ! ಕರ್ಣ ! ಸುಹೃದ್ಯ ! ನಿನ್ನ ಬಲಿಗೊಟ್ಟೆಂ ಸ್ವಾರ್ಥಕಂ, ಹಾ ! ಸಹೋ-
    ದರ ದುಃಶಾಸನ ! ಮೀರುತುಂ ಸರದಿಯಂ ನೀಂ ಮುನ್ನಮೇ ಪೋದೆಯೇಂ ?
    ತರಳಾ ! ಘಾತಕನಾದೆನಾಂ ಪಿತನುಮೆಂದಾ ಕಾಯಮಂ ಗೊಂಡು ತ-
    ನ್ನುರಕೊತ್ತುತ್ತೆ ಪಲುಂಬಿದಂ ಮಗುಳೆಯೇಳ್ದಂ ರೋಷರಕ್ತೇಕ್ಷಣಂ ||

    ಪುಸಿಯಲ್ತೆನ್ನ ಪ್ರತಾಪಂ ವಿಧುತವಿತತವಿಶ್ವಂಭರಾಧೀರಸತ್ತ್ವಂ
    ಮಿಸುಗುತ್ತಿರ್ಪಾ ಪೃಥಾಪುತ್ರರ ತಲೆಗಡಿವೆಂ ಮತ್ತೆ ವಾತಾತ್ಮಜೀಯಂ |
    ಬಸಿರಂ ಬಿಚ್ಚಿ ದ್ರುತಂ ನೂರ್ವರುಮನನುಜರಂ ಪಿಂದೆಗೊಂಡೆನ್ನ ಸೇಡಂ
    ಪೊಸೆವೆಂ ನಾನೆನ್ನುತಾಗಳ್ ಘುಡುಘುಡಿಸಿದನಾ ಭೈರವಂ ಧಾರ್ತರಾಷ್ಟ್ರಂ ||

    ಭೂಪಂ ಪರಿಪರಿಯಿಂತು ವಿ-
    ಲಾಪಿಸುತುಂ ಪೋರೆ ಕಾಯ್ವೆ ಸತ್ಕಾಲಮನೆಂ-
    ದಾ ಪರ್ಯಂತಂ ಕಾಯಲ್
    ದ್ವೈಪಾಯನನಾಮಸರಸಿಯೆಡೆಗಂ ನಡೆದಂ ||

    • ಪಂಪನೊ ರನ್ನನೊ ಮಿಗೆ ನೈ-
      ಲಿಂಪನಿವಾಸಪ್ರಸನ್ನಸುಕವಿಗಳಾರೋ |
      ಪೆಂಪಿಂ ತಮ್ಮೀ ಕವಿತೆಯೊ-
      ಳಿಂಪಂ ಕೂಡಿಸಿದರೇಂ ಪೆಜತ್ತಾಯ ಕವೀ!!

      • ನಿಮ್ಮೀ ನಲ್ನುಡಿಗಳ್ಗಾಂ
        ಸಮ್ಮದಸಂಕೋಚಮಿಶ್ರಭಾವದೆ ನಮಿಪೆಂ 🙂

    • ಪೂರಣಮಿದಾದುದಲ್ತಿ
      ನ್ನೀರೆಡೆಯೊಳು ಕಣಕಮಂ ಪೊದಿಸಿ ವಿಸ್ತರಿಸಿಂ|
      ಪೂರಕಮಾಗಿ ವಧಾನಿಯ
      ಹಾರೈಕೆಗೊರೆಯಿರ ಭಾರತಕಥಾಪೂರ್ಣಂ?|

  26. ಚೆಲುನೀಲಾಂಬರಭೂಷಿತಾ ಗಗನೆಯುಂ ಕಾದಿರ್ಪಳೈ ಭಾನಿಗಂ
    ಒಲವಿಂದೈತರುತಲ್ಪ್ರಭಾತಮನವಂ ತಂಪಾಯ್ತು ಹೊಯ್ದಾಟವುಂ
    ಮಲರಲ್ಕಾಗಸವಾತನಿಂ,ಕಲಿತದಂ ಮೊಗ್ಗೆಲ್ಲಪೂವಾದವೈ
    ಸಲೆಯುಕ್ಕೇರುತ ಭಾವದೇಲುತಲಿರಲ್ ಬಾನಡಿಯೆಂದಾಯಿತೈ

    ಮಲರು = ವಿಕಾಸ ಹೊಂದು (ಕತ್ತಲಿಂದ ಬೆಳಕಿನೆಡೆ)

    ಕರವಿತ್ತಾ ನವಧೀರಮಿತ್ರ ಸರಿಯಲ್ ಮತ್ತೋರ್ವಳಾತೆಕ್ಕೆಯೊಳ್
    ವಿರಹಾತಪ್ತೆಯ ಬಾಳಿನೊಳ್ ಹರಡಿತುಂ ಕಗ್ಗತ್ತಲುಂ ಥಟ್ಟನೇ
    ನುರಿತಂತಾಹಿರಿಚಂದ್ರತಾರೆ ನುಡಿದರ್ ಬಂದಾಕೆಗಂಸಾಂತ್ವನಂ
    ಭರದೊಂದಾಗಲು ದುಃಖದೊಳ್ ಕುಮುದಗಳ್ ಸನ್ಮಿತ್ರರಾದರ್ ದಿಟಂ

    { ಬೆಳಗಿನ ಮತ್ತು ಸಂಜೆಯ ನೋಟದ ಬಗ್ಗೆ ಬರೆಯುವ ಪ್ರಯತ್ನ ಮಾಡಿದ್ದೇನೆ.
    ೨ ಪದ್ಯವನ್ನು ಬರೆದು ನಿಯಮವನ್ನೂ ಮೀರಿದ್ದೇನೆ. ಕ್ಶಮಿಸಿ. }

    • ಮಧ್ಯಾಹ್ನ, ರಾತ್ರಿ, ಅಪರಾತ್ರಿಗಳ ಬಗೆಗೆ ಒಂದೊಂದು ಪದ್ಯ ಬರೆದಿದ್ದರೆ ಐದಾಗುತ್ತಿತ್ತು.
      ಭಾನಿಗಂ: ಭಾನುವಿಗಂ ಎಂದಾಗಬೇಕು. ಆಗ ಛಂದಸ್ಸು ಕೆಡುತ್ತದೆ. ಸವರಿಸಿ.
      ಕಲಿತದಂ: ಅರಿತದಂ ಎಂದರೆ ಸರಿಯಾಗುತ್ತದೆ (ಆತನಿಂದರಿತದಂ).
      ನುರಿತಂಥಾ.
      ಸಾಂತ್ವನಂ+ಅರಿತು – ವಿಸಂಧಿ
      ಎರಡನೆಯ ಪದ್ಯದ ಚಿತ್ರಣ ತುಂಬ ಚೆನ್ನಾಗಿದೆ.

      • ಪ್ರಸಾದರೇ,ಧನ್ಯವಾದಗಳು.
        ಬರೆಯಲು ಇನ್ನೂ ಸಮಯವಿದೆಯಲ್ಲಾ 🙂
        ಛಂದಸ್ಸು ಕೆಟ್ಟಂತಿಲ್ಲ 🙂

        ವಿಸಂಧಿಯನ್ನು ಈಗ ತಿದ್ದುತ್ತೇನೆ

  27. ಶರದೃತುವರ್ಣನೆಯ ಕೆಲವು ಸಂಸ್ಕೃತಪದ್ಯಗಳ ಕನ್ನಡಾನುವಾದ.

    || ಮಂಜುಭಾಷಿಣೀ ||
    ಅಮಮಾ ! ಅನಂಗಸುಮಸಾಯಕಂಗಳಾ
    ರಮಣೀಯತಾಜನನಶಕ್ತಿಯೆಂತುಟೋ !
    ಸುಮಹಾಂತನುಂ ತರಣಿ ಚಾರುಶಾರದಾ-
    ಗಮಮಾಗೆ ಕನ್ನೆಮನೆಯತ್ತ ಧಾವಿಪಂ ||
    ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿದಾಗ ಶರದೃತುವಿನ ಆರಂಭವೆಂಬ ಜ್ಯೋತಿಃಶಾಸ್ತ್ರೀಯಸಿದ್ಧಾಂತಾಧಾರಿತ ಪದ್ಯವಿದು.
    ಶಾರದಾಗಮ = ಶರತ್ಕಾಲದ ಆಗಮನ.
    ಮೂಲಪದ್ಯ –
    अहो बाणस्य सन्धानं शरदि स्मरभूपतेः ।
    अपि सोऽयं त्विषामीशः कन्याराशिमुपागतः ॥
    – सुभाषितरत्नभाण्डागारम् ।

    || ರಥೋದ್ಧತಾ ||
    ವಾರಿವಾಹಮಲದಿಂದಮಂಬರಂ
    ಭೂರಿದೂಷಿತಮಿದೆಂದು ನೋಂತದಂ |
    ಚಾರುಶೀಲೆ ಶುಚಿಕೌಮುದೀಜಲಾ-
    ಸಾರದಿಂದೆ ತೊಳೆವಳ್ ಶರದ್ವಧು ||
    ಅಂಬರ = ಆಕಾಶ & ಬಟ್ಟೆ.
    ಮೂಲಪದ್ಯ –
    पाथोदजालजटिलं मलिनं शरदङ्गना ।
    अम्बरं धावयामास चन्द्रिकाचयवारिभिः ॥
    – सुभाषितरत्नभाण्डागारम् ।

    || ದ್ರುತವಿಲಂಬಿತಂ ||
    ಸವತಿಯೆಂದು ಕರುಂಬುತೆ ವರ್ಷೆಯ
    ನವಬಲಾಹಕಕುಂತಲರಾಶಿಯಂ |
    ಸವರಿಸಲ್ ಸೆಳೆಯುತ್ತೆ ಶರದ್ವಧು
    ಕುವಲಯಾಯತಲೋಚನೆ ರಾಜಿಪಳ್ ||
    ಬಲಾಹಕ = ಮೋಡ, ಕುಂತಲ = ಕೇಶ, ಸವರಿಸಲ್ = ನಾಶಗೈಯಲು.
    ಮೂಲಪದ್ಯ –
    पयोदकेशेषु विकृष्य रोषान्निष्कास्य सा कोकनदायताक्षी ।
    वर्षावधूं स्वां श्रियमुन्नयन्ती प्रौढा सपत्नीव शरच्चकाशे ॥
    – सुभाषितरत्नभाण्डागारम् ।

    || ಕಂದ ||
    ಶರದಂಗನೆ ನಲ್ಮೆಯಿನಾ
    ಶರಜನನಪ್ಪಲ್ಕೆ ವರ್ಷೆ ದುಗುಡದೆ ನಡೆದಳ್ |
    ಜರೆಯಿಂ ನಶಿಸಲ್ಕೆ ಪಯೋ-
    ಧರಗಳ್ ಲಲನೋಪಗೂಹಲಿಪ್ಸುಗಳಾರ್ ಪೇಳ್ ?||
    ಶರಜ = ಚಂದ್ರ, ಪಯೋಧರ = ಮೋಡ & ಸ್ತನ, ಉಪಗೂಹ = ಆಲಿಂಗನ.
    ಮೂಲಪದ್ಯ –
    अथोपगूढे शरदा शशाङ्के प्रावृड्ययौ शान्ततडित्कटाक्षा ।
    कासां न सौभाग्यगुणोऽङ्गनानां नष्टः परिभ्रष्टपयोधराणाम् ॥
    – कुवलयानन्दः ।

    || ಶಾ.ವಿ. ||
    ತಾನಾ ಕಾನನರಾಜಿಯಿಂ ನಿಜತನೂಸಂಜಾತೆಯಿಂ ಶಾರದಾ-
    ಯಾನಾನೇಹದೊಳಿಂದು ಪುಷ್ಪವತಿಯಿಂ ರೀಣಕ್ರಮಾಶ್ಲಿಷ್ಟನೆಂ-
    ದಾ ನೀತಿಜ್ಞನಗಂ ಮರುಂಗುತಿರುಳೊಳ್ ಜ್ಯೋತ್ಸ್ನಾಪ್ರಭಾಚಂಚದು-
    ತ್ತಾನಧ್ವಾನಿತನಿರ್ಝರಾಶ್ರುಜಲಧಾರಾವರ್ಷದಿಂ ರೋದಿಪಂ ||
    ತಾಂ ಶಾರದಾಯಾನಾನೇಹದೊಳ್ (ಶರದೃತುವಿನ ಆಗಮನದ ಕಾಲದಲ್ಲಿ) ಆ ನಿಜತನೂಸಂಜಾತೆಯಿಂ ಪುಷ್ಪವತಿ(ಪುಷ್ಪವುಳ್ಳ & ರಜಸ್ವಲೆ)ಯಿಂ ಕಾನನರಾಜಿಯಿಂ ರೀಣಕ್ರಮಾಶ್ಲಿಷ್ಟ(ಅನುಚಿತವಾಗಿ ಆಲಿಂಗಿಸಲ್ಪಟ್ಟೆ)ನೆಂದು, ಆ ನೀತಿಜ್ಞಂ ಅಗಂ (ಪರ್ವತ) ಮರುಂಗುತ ಇರುಳೊಳ್ ಜ್ಯೋತ್ಸ್ನಾಪ್ರಭಾಚಂಚದುತ್ತಾನಧ್ವಾನಿತನಿರ್ಝರಾಶ್ರುಜಲಧಾರಾವರ್ಷದಿಂ (ಬೆಳದಿಂಗಳ ಪ್ರಭೆಯಿಂದ ಚಲಿತವಾದ, ಮಹಾಶಬ್ದದಿಂದ ಕೂಡಿದ, ಝರಿಗಳೆಂಬ ಕಣ್ಣೀರಿನ ಮಳೆಯಿಂದ) ರೋದಿಪಂ.
    ಮೂಲಪದ್ಯ –
    स्वतनुजवनराज्या पुष्पवत्याऽश्लिषन्त्या
    ह्यनुचितकृतसङ्गोऽस्मीति शैलोऽनुतप्तः ।
    निशि शशिकरचञ्चन्निर्झरैरश्रुकल्पैः
    शरदि हृदिजखेदस्वेदवान् रोदितीव ॥
    – सिद्धान्तशिरोमणिः ।

    • ಆಹಾ! ಅತಿರಮಣೀಯಾನುವಾದಪದ್ಯಗಳಿವು. ಆದರೆಮೂರನೆಯ ಪದ್ಯದಲ್ಲಿ ಪಾದಾಂತಗುರುತ್ವವು ಬಂದಿಲ್ಲ.ಇದು ಪರಿವರ್ಜನೀಯದೋಷ. ದಯಮಾಡಿ ಸವರಿಸಿಕೊಳ್ಳಿರಿ

      • ಧನ್ಯವಾದಗಳು ಸರ್ 🙂 ಸರಿ. ಸವರಿಸುವೆ.

  28. ನಾನಾಕಾರ್ಯಕ್ಲೇಶಗಳ ಕಾರಣದಿಂದ ಈ ಬಾರಿ ನನ್ನವೇ ಪದ್ಯಗಳನ್ನು ಕಳುಹುವುದು ತಡವಾಗಿದೆ. ಅವಸರದ ಅಡುಗೆಯಾಗಿ ಈ ಕೆಲವು ಸಂಸ್ಕೃತಶ್ಲೋಕಗಳನ್ನೂ ಅವುಗಳ ಕನ್ನಡಪದ್ಯಾನುವಾದಗಳನ್ನೂ ಪದ್ಯಪಾನಿವಯಸ್ಯರಲ್ಲಿ ನಿವೇದಿಸುತ್ತಿದ್ದೇನೆ. ಕ್ರಮಭಂಗವಾಗಬಾರದೆಂಬ ಒಂದೇ ಕಾರಣದಿಂದ ಸಾಗಿರುವ ನನ್ನೀ ಪ್ರಯತ್ನವನ್ನು ಸಹೃದಯರು ಸದಯದಿಂದ ಸಭಾಜಿಸಲಿ.

    कालकापालिकस्याग्रहस्तन्यस्तास्रपात्रवत् ।
    चरमाचलचूडाले भानुबिम्बमलम्बत ॥१॥

    तमोदैत्योदारप्रान्तदारणार्थं समुत्थिताः।
    नरसिंहनखा न्नूनं सन्ध्यादीपशिखार्चिषः॥२॥

    यामिनीभामिनीवॆणीचम्पकस्तबकोपमाः।
    गृहदीपशिखा भान्ति पतन्गालिदुरासदाः॥३॥

    निशावधूर्विधोः पाणिं जग्राहाम्बरमंडपे ।
    चिक्षिपुर्दिक्पुरन्ध्र्यः श्रीमङ्गलर्क्षाक्षतान् मुदा ॥४॥

    लॊकधर्मी दिवा वार्ता भावरूषितवास्तवम् ।
    नाट्यधर्मी निशा काव्यमादर्शो रसभूषणः ॥५॥

    • ಇವು ಕಂದಪದ್ಯರೂಪದ ಛಾಯಾನುವಾದಗಳು:

      ಕಾಲನೆ ಕಾಪಾಲಿಕನೆನೆ
      ಲೀಲೆಯಿನವನಾಂತ ನೆತ್ತರಿನ ಪಾತ್ರದವೊಲ್|
      ವ್ಯಾಲಂಬಿಸಿದತ್ತು ಕಿರಣ-
      ಮಾಲಿಯ ಬಿಂಬಂ ಗಡಂ ಚರಮಗಿರಿಶಿರದೊಳ್ ||

      ಇರುಳೆಂಬಸುರನ ಬಸಿರಂ
      ನೆರೆ ಸೀಳಲ್ ನಿಶ್ಚಯಿಸುತೆ ಮೂಡಿದುವೇನೋ |
      ನರಹರಿಯ ಸೆಳ್ಳುಗುರ್ಗಳೆನೆ
      ಮೆರೆದಪುವೀ ಸೊಡರಕುಡಿಗಳೆತ್ತಲುಮದಟಿಂ ||

      ಇರುಳೆಂಬ ಚೆಲ್ವುವೆಣ್ಣಿನ
      ಕುರುಳೊಳ್ ಮೆರೆದಿರ್ಪ ಸಂಪಗೆಯ ಪೂಗಳವೊಲ್ |
      ಸ್ಫುರಿಸೆ ಮನೆಯ ಕಿರುದೀವಿಗ-
      ಳರರೆ! ಪತಂಗಂಗಳೆಂಬಳಿಗಳೆರಗುವುವೇಂ?

      ಪೆರೆಗಯ್ಯಂ ಕತ್ತಲೆವೆಣ್
      ಮೆರೆವಂಬರಮಂಟಪದೊಳಿದೋ ಸಲೆ ವಿಡಿದಳ್ |
      ಪರಸಿರೆ ದೆಸೆಮುತ್ತೈದೆಯ-
      ರುರುತರತಾರಾಕ್ಷತಾಳಿಯಂ ತಳಿಯುತ್ತುಂ ||

      ಪಗಲೆಂಬುದು ಬರಿ ಸುದ್ದಿಯೆ
      ಮುಗುಳೀ ಜಗದುಜ್ಜುಗಂ ಬರಿದೆ ಭಾವಹತಂ |
      ಸೊಗಸಿರುಳೆಂಬುದು ಕಬ್ಬಂ
      ಮಿಗೆ ಸಚ್ಚಿತ್ಕಲೆಯೆ ನಲಿವೆ ರಸರುಚಿವಿಹಿತಂ ||

      • ಮುಸುಕಿದೊಳಮೊಬ್ಬಸರಿಸುವ
        ಪಸೆಯೆಂಬರಿವೆಂತಿರವನು ಪಿಡಿದಪ್ಪುವುದೋ
        ರಸಸಾಧಯಂತೇನ್ ಭಯ
        ರಸದಿಂ ಶಾಂತಮನುಪಡೆವ ಪರಿಯೇಂ ವಿಬುಧಾ

        • ಅಂಜಲಿಯಂ ಘಟಿಸಿದೆನಿದೊ
          ಮಂಜುಲಗಲಗುಂಜದಮಲಗಮಕಪ್ರಮುಖಾ!
          ಕಿಂಜಲ್ಕಾಯಿತಪದ್ಯನಿ-
          ರಂಜನತಾಕಂಜ! ಪುಂಜಿತಾತ್ಮವಿವೇಕಾ!!

      • ಸೊಗಮಿರುಳೆನುತ್ತೆ ಗಡ ದೀ
        ವಿಗೆಯಂ ಪೂವ್ಗಳೆನೆ ತಾರೆಗಳನುಗುರ್ಗಳೆನಲ್
        ಮರುಳ್ದಕ್ಷತೆಯೆನೆ ಜಸಕಂ
        ಗುರಿಯೆರ್ಚೀಂಟಿರ್ಪ ಪದ್ಯಸಾಯಕಗಣಮೈ!

        ಬಹಳಚೆನ್ನಾಗಿದೆ ಗಣೇಶ ಸರ್ 🙂

    • ಹೃದಯಾವರ್ಜಕವಾದ ಪದ್ಯರತ್ನಗಳು 🙂

      ಗಡಿಬಿಡಿಯಲ್ಲಿ ಉಟ್ಟಂಕಿಸಿದ್ದರಿಂದ ೨-೩ ಕಡೆ ನುಸುಳಿರುವ
      ತಮೋದೈತ್ಯೋದಾರ, ನರಸಿಂಹನಖಾ ನ್ನೂನಂ, ಪತನ್ಗಾಲಿ ಎಂಬಿವು ಕ್ರಮೇಣ ತಮೋದೈತ್ಯೋದರ, ನರಸಿಂಹನಖಾ ನೂನಂ, ಪತಙ್ಗಾಲಿ ಎಂದಾಗಬೇಕಲ್ಲವೇ?

      ಕಲ್ಪನೆಗಳು ಅತ್ಯಂತ ಮನೋಜ್ಞವಾಗಿವೆ. ಅನುಷ್ಟುಪ್ ತೆರನಾದ ಅಲ್ಪಕುಕ್ಷಿಯ ಛಂದಸ್ಸಿನಲ್ಲಿ ಪದಲಾಲಿತ್ಯವಿರುವಂತೆ (ಯಾಮಿನೀಭಾಮಿನೀ… ಇತ್ಯಾದಿ) ಅರ್ಥಾಲಂಕಾರಸಂಕೀರ್ಣವಾದ ಇಂತಹ ಕಲ್ಪನಾಸುಷಮೆಯನ್ನು ತರುವುದು ಎಷ್ಟೊಂದು ಕಷ್ಟವೆಂಬ ಅರಿವಿದ್ದವರಿಗೆ ಈ ಪದ್ಯಗಳ ಸೊಗಸು ಪೂರ್ಣವಾಗಿ ಅರಿವಾದೀತು 🙂

      • ತಿದ್ದುಗೆಗಾಗಿಯೂ ಮೆಚ್ಚುಗೆಗಾಗಿಯೂ ಮತ್ತೆ ಮತ್ತೆ ವಂದನೆಗಳು.
        ಉಭಯಾಲಂಕಾರಝಂಕಾರಸಂಕೀರ್ತಿತಪದ್ಯನಿರ್ಮಿತಿಯ ತೊಡಕು-ತೋಟಿಗಳನ್ನು ಬಲ್ಲ ನಿಮ್ಮಂಥವರ ನಲ್ವಾತುಗಳಿಗೆ ಬಲುಬೆಲೆಯುಂಟು. ಧನ್ಯವಾದ:-)

        • ಇಂತಹ ನಲ್ಗಬ್ಬವನ್ನಿತ್ತಿರುವುದಕ್ಕಾಗಿ ನಾವು ನಿಮಗೆ ಧನ್ಯವಾದವನ್ನು ಹೇಳಬೇಕು 🙂

  29. ಸುತ್ತಲ್ ಭುವಿತಾಂ ದಿವಸಂ
    ಮೆತ್ತಗೆ ಕಾಣ್ ಹಗಲಿನಿಂದಿರುಳಿಗಂ ಸರಿಸಂ |
    ಸುತ್ತಲ್ ರವಿಯಂ ವರುಷಂ
    ಮುತ್ತುತೆ ಬಂದುದದೊ ದೇಶಕಾಲದ ದಿರಸುಂ ||

    ಏರಿರಲಿಂಗುತೆ ಬಿಂದುಂ
    ಸೇರುದು ಮುಗಿಲಿನೊಳಗಂಬು ತುಂಬುತಲಿಂಬಂ |
    ಮೇರೆಯ ಮೀರಿರಲೋಘಂ
    ಧಾರೆಯ ಸುರಿಸಿಹುದು ಮೋದವನೆ ತಾಂ ಮೋಡಂ ||

    ಬಾಗುದೆ ಬಾನುಂ ಕಡೆಗುಂ
    ತಾಗುತಲಿಳೆ ತಳವತಟ್ಟಲೊಮ್ಮೆಲೆಯೊಲವಿಂ |
    ಮೇಗರೆಯುಬ್ಬಿತೆ ನೆಲವುಂ
    ಹಾಗೆಯೆ ಮುಗಿಲೊರಗ ಮುಟ್ಟೆ ಮೆಲ್ಲನೆ ನಲವಿಂ ||

    ಧರೆಯಂ ತಾಗಿದ ಹನಿಯುಂ
    ಭರದಿಂ ತಾಂ ಹರಿದುದೈ ಕೂಡಲ್ ನದಿಯಂ |
    ಹರದಿಂ ಹರಿದ ನದಿಯುಂ
    ವರವುಂ ಕಾಣ್ ಹರಸುದೈ ಹಸಿರಿನಿಂದುಸಿರಂ ||

    ಬಂದುಂ ಸೇರುತೆ ಸಿಂಧುವ
    ಬಿಂದುಂ ತಾನಾಗುತೊಂದು ಕಂಡುದೆ ನೆಲೆಯಂ |
    ಚಂದದಿ ತಾಗುತೆ ದಡವಂ
    ನಿಂದುಂ ತಾನೋಡಲೆಂದು ಬಂದುದೆಯಲೆಯುಂ ||

    ಮಳೆಯನ್ನಿತ್ತಿಹನವನುಂ
    ಹೊಳೆವಾ ಸೂರ್ಯನವತಾಂ ಹೊರಳೆ ಮಂಗಳವುಂ |
    ಇಳೆಯಂ ಸುತ್ತಿಹನಿವನುಂ
    ಬಳಿಯ ಚಂದಿರನು ತಾನುರುಳೆ ತಿಂಗಳದುಂ ||

    ( “ಭೂಮಿ”ಯು “ಸೂರ್ಯ”ನಿಗೆ ಹೇಳಿದ ಮಾತು:
    “ನನ್ನಂ ಸುತ್ತಲು ದಿವಸಂ – ನಿನ್ನಂ ಸುತ್ತುದು ವರುಷಂ”
    ಇದರಲ್ಲಿ “ನನ್ನಂ – ನಿನ್ನಂ” ಪರಸ್ಪರ ಬದಲಾದರೂ ಅರ್ಥದಲ್ಲಿನ ಸ್ವಾರಸ್ಯದ ಕಲ್ಪನೆಯಲ್ಲಿ ಬಂದ ಪದ್ಯ)

    • ನಿಮ್ಮ ಪದ್ಯಶೈಲಿಯು ಕ್ರಮೇಣ ಸುಧಾರಿಸುತ್ತಿದೆಯಾದರೂ ಹಳಗನ್ನಡದ ವ್ಯಾಕರಣವು ಮಾತ್ರ ಶಿಥಿಲವಾಗಿಯೇ ಇದೆ:-( ಪದ್ಯಪಾನದ ಪಾಠಗಳತ್ತ ಮತ್ತೆ ಗಮನ ಹರಿಸಿರಿ.ಮುಖ್ಯವಾಗಿ ನೀವೂ ಸೇರಿದಂತೆ ಅನೇಕಪದ್ಯಪಾನಿಗಳು (ಇತರರೂ) ಹಳಗನ್ನಡದ ಭಾವನೆ(ಭ್ರಮೆ)ಯನ್ನುಂಟುಮಾಡಬೇಕೆಂದು ಎಲ್ಲ ಪದಗಳಿಗೂ ಬಿಂದುವನ್ನು ಸೇರಿಸುತ್ತಾರೆ (ಉದಾ: ಶಂಭುಂ, ಬಿಂದುಂ ಇತ್ಯಾದಿ) ಆದರೆ ಅಕಾರಾಂತವಲ್ಲದ ನಾಮಪದಗಳಿಗೆ ಇದು ಸಲ್ಲದು. ದಯವಿಟ್ಟು ಇಂಥ ಅನೇಕಾಂಶಗಳನ್ನು ಗಮನಿಸಿಕೊಳ್ಳಿರಿ.

      • ಕ್ಷಮಿಸಿ ಗಣೇಶ್ ಸರ್, “ಪದ್ಯವಿದ್ಯೆ”ಯಲ್ಲಿನ “ಹಳೆಗನ್ನಡ ವ್ಯಾಕರಣ”ದ ವಿಡಿಯೋವನ್ನು ನಾನು ಗಮನಿಸಿಯೇ ಇಲ್ಲ. ವಿಡಿಯೋ ವೀಕ್ಷಿಸಿ ಪದ್ಯವನ್ನು ಸರಿಪಡಿಸುತ್ತೇನೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರವಹಿಸುತ್ತೇನೆ.

    • ಚಳಿಗಾಲದ ವರ್ಣನೆ:

    ೧. ಚಳಿಯಿಂ ಕೂಡಿಪೆ ದಂಪತಿ-
    ಗಳಮಾಂ ಸಮನುಂ ವಸಂತಗೆನುವಂ ಮಾಘಂ |
    ತಿಳಿಯಮೊಡಕುದುಟಿವಾಯ್ಗಳ
    ಪಳಿಯಂ ಮುತ್ತಮಿಡಲಾಗದಿಹಸಂಕಟಮಂ |
    (ದಂಪತಿಗಳಂ ಚಳಿಯಿಂ ಕೂಡಿಪೆ, ಆಂ ವಸಂತಗೆ ಸಮನುಂ(ಶೃಂಗಾರದಿ) ಎನುವಂ ಮಾಘಂ, ಒಡಕು ತುಟಿ ಬಾಯ್ಗಳ ಪಳಿಯಂ, ಮುತ್ತಂ ಇಡಲಾಗದಿಹ ಸಂಕಟಮಂ ತಿಳಿಯಂ)
    ವಸಂತನೇನು? ನಾನೂ ಪ್ರೇಮಿಗಳಿಗೆ ಒಳ್ಳೆಯ ಕಾಲವಾಗಿದ್ದೀನಿ, ಚಳಿಯಿಂದ ಒಬ್ಬರನ್ನೊಬ್ಬರು ಅಪ್ಪಲು ಪ್ರೇರಿಸುತ್ತೇನೆ ಎಂದು ಮಾಘ ಬೀಗುತ್ತಾನೆ. ಆದರೆ, ಚುಂಬಿಸಲಾಗದಂತೆ ತುಟಿಗಳು ಒಡೆದು ಹೋಗಿ, ಪ್ರೇಮಿಗಳು ಬಯ್ಯುವುದನ್ನು ಅವನು ತಿಳಿವನೇ?

    ೨. ನಡೆದಿರೆ ಮಹಾಸಮರಗಳೆ-
    ರೆಡು ಬೇಸಗೆಬರಿಸಗಳಿಂ ಪೃಥಿವಿಕಾಲರೊಳುಂ |
    ಇಡುತಿರ್ಪಂ ಠಕ್ಕನ ವೋಲ್
    ನಡೆಯಂ ಮಾಘಂ ಜರುಂಗೆ ಶೀತಲಸಮರಂ ||
    (ಪೃಥಿವಿ, ಕಾಲರೊಳುಂ ಎರಡು ಮಹಾಸಮರಗಳ್ ನಡೆದಿರೆ ಬೇಸಗೆ, ಬರಿಸಗಳಿಂ. ಠಕ್ಕನವೊಲ್ ನಡೆಯಂ ಮಾಘಂ ಇಡುತಿರ್ಪಂ ಜರುಂಗೆ ಶೀತಲಸಮರಂ)
    ಎರಡು ಮಹಾಯುದ್ಧಗಳ(ಬೇಸಿಗೆ ಮತ್ತು ಮಳೆ) ನಂತರ, ಈಗ cold war(ಚಳಿಗಾಲ) ಶುರುವಾಗಿದೆ. ಭೂಮಿ ಮತ್ತು ಕಾಲದ ನಡುವೆ.

    ೩. ನಗೆಬೀರೆ ವಸಂತಂ ಬೇ-
    ಸಗೆಮುಳಿಸಂದೋರೆ, ಸುರಿಸೆಮಳೆಗಣ್ಣೀರಂ |
    ಬಗೆಬಗೆ ಟೊಫ್ಫಿಗೆಯಿಡೆ ಮಂ-
    ದಿಗೆಚಳಿಗಾಲಂ ನಡುಂಗಿ ಋತುನಟನೆಯೊಳುಂ ||
    (ಋತುನಟನೆಯೊಳುಂ ವಸಂತಂ ನಗೆಬೀರೆ, ಬೇಸಗೆ ಮುಳಿಸಂ ತೋರೆ, ಮಳೆ ಕಣ್ಣೀರಂ ಸುರಿಸೆ, ಚಳಿಗಾಲಂ ನಡುಂಗಿ ಮಂದಿಗೆ ಇಡೆ ಬಗೆಬಗೆ ಟೊಪ್ಪಿಗೆಯಂ)
    ಋತುವಿನ ನಟನೆಯೊಳಗೆ, ವಸಂತ ನಕ್ಕರೆ, ಬೇಸಗೆ ಸಿಟ್ಟು ಮಾಡುತ್ತದೆ, ಮಳೆ ಅಳುತ್ತದೆ, ಚಳಿಗಾಲ ನಡುಗುತ್ತದೆ, ಜನರಿಗೆ ಬಗೆಬಗೆಯ ಟೋಪಿಹಾಕುತ್ತದೆ.

    ೪. ಭುವಿಗಂ ಬೆಳ್ಗವಚಂ ಮಾ-
    ನವಗಂ ಪೆರ್ಬಟ್ಟೆಯಂ ತೊಡಿಸಿ ಹೇಮಂತಂ,
    ಭುವಿಯೊಳ್ ಸಜ್ಜನ ನನಿಸಿಹ-
    ನವನಾದರೆ ಪಳುವಬತ್ತಲಿಪುದೇವೇಳ್ವೆಂ ?
    (ಬೆಳ್ಗವಚಂ ಭುವಿಗಂ, ಪೆರ್ಬಟ್ಟೆಯಂ(ದಪ್ಪದಾದ ಬಟ್ಟೆ)) ಮಾನವಗಂ ತೊಡಿಸಿ ಹೇಮಂತಂ, ಸಜ್ಜನನೆನಿಸಿಹನ್ ಭುವಿಯೊಳ್. , ಆದರೆ ava ಅವನ್ ಪಳುವಬತ್ತಲಿಪುದ ಏವೇಳ್ವೆಂ).
    ಭೂಮಿಗೆ ಬಿಳಿ ಹೊದ್ದಿಕೆ ಹೊದೆಸಿ, ಮನುಷ್ಯರಿಗೆ ದಪ್ಪದಪ್ಪವಾದ ಬಟ್ಟೆಯನ್ನು ತೊಡಿಸಿ, ಸಜ್ಜನ ಎನ್ನಿಸಿಕೊಂಡಿದ್ದಾನೆ ಈ ಹೇಮಂತ. ಆದರೆ ಕಾಡನ್ನು ಬೆತ್ತಲೆಗೊಳಿಸುತ್ತಾನಲ್ಲಾ, ಇದಕ್ಕೆ ಏನು ಹೇಳಲಿ?

    ೫. ನಲ್ಲವಸಂತಂ ಮರಳದೆ
    ಬಲ್ಲನೆನಲ್ ಧವಳವಸ್ತ್ರmaಮಂತೊಟ್ಟಿಹೆಯೇಂ ?
    ಸಲ್ಲದು ಘೋರವಿರೂಪಂ (ಗತಪತಿರೂಪಂ))
    ಮೆಲ್ಲಂ ಬರ್ಪನಿದೊ ಮರಳಿ, ಬಿಡು’ತಿರೆ’ ಶೋಕಂ ||
    (ಮರಳದೆ ಬಲ್ಲನ್ ನಲ್ಲ ವಸಂತಂ ಎನಲ್, ಧವಳ ವಸ್ತ್ರಮಂ ತೊಟ್ಟಿಹೆಯೇಂ?, ಘೋರವಿರೂಪಂ ಸಲ್ಲದು, ಮರಳಿಬರ್ಪನಿದೊ ಮೆಲ್ಲಂ, ಬಿಡು ತಿರೆ ಶೋಕಂ)
    ತನ್ನ ನಲ್ಲ ವಸಂತ ಮರಳಿ ಬರಲಿಲ್ಲ ಎಂದು ಬಿಳಿ ಬಟ್ಟೆಯನ್ನು ತೊಟ್ಟು ಶೋಕಿಸುತಿದ್ದೀಯಲ್ಲಾ, ಭೂಮಿಯೇ, ಅವನು ಮರಳಿ ಮೆಲ್ಲನೆ ಬರುತ್ತಾನೆ, ಈ ಘೋರವಾದ ವಿರೂಪವನ್ನು(ವಿಧವೆಯ) ಬಿಡು.

    • ಶ್ರೀಶಂ ಚೆನ್ನಾಗಿದೆ ಪದ್ಯಗಳು 🙂

      ಪೊಸಕಲ್ಪನೆಯರಿವೆಗಳಂ
      ಪೊಸೆಯುತೆ ತೊಡಿಸಲ್ಕೆ ಶಾರದೆಗೆ ತಾಂ ಶ್ರೀಶಂ
      ಜಸಮೇಂ! ಮಾಘನುಪಟಳಂ
      ಪುಸಿಯಪ್ಪುಗುಮಲ್ತೆ! ಬಲ್ಮೆಗಬ್ಬಮಿದಲ್ತೇ 🙂

    • ಅತಿಸ್ವೋಪಜ್ಞನಾವೀನ್ಯಪ್ರತಿಭಾಪ್ರಾಣಿತಂ ವಲಂ |
      ಕೃತಿ ನಿನ್ನದಿದಯ್ ಶ್ರೀಶ! ಸ್ತುತಿಯಲ್ತಿದು ಸಾಜಮಯ್ ||

      ಆದೊಡಂ ಮೊದಲೆರಡು ಪದ್ಯಂಗಳೊಳ್ ಭಾಷೆ-
      ಗಾದುದಯ್ ವ್ಯಾಕರಣಹಾನಿ ಮರ್ತೆ |
      ಸೀದುದಯ್ ಕಂದದೊಂದಂದದ ಗತಿಸ್ಫೂರ್ತಿ
      ಮೋದಮಿಮ್ಮಡಿಸೆ ನೀಂ ಸವರಿಸುವುದಯ್ ||

    • ಕಲ್ಪನೆಗಳು ಸೊಗಸಾಗಿವೆ 🙂

  30. ಎಷ್ಟೋ ದಿನಗಳಿಂದ, ಬೇರೆ ಕೆಲಸಗಳು ಹೆಚ್ಚಾಗಿದ್ದರಿಂದ ಪದ್ಯಪಾನದ ಕಡೆಗೆ ಬರಲಾಗಿರಲಿಲ್ಲ. ಈ ಪ್ರಶ್ನೆ ಹಳತಾಗಿದ್ದರೂ, ಉತ್ತರ ಬರೆಯುತ್ತಿದ್ದೇನೆ. ೪ ಮತ್ತು ೫ ನೇ ಷಟ್ಪದಿಗಳು ಮೊದಲೇ ಬರೆದಿದ್ದವು.ಇನ್ನು ಮೂರನ್ನು ಇವತ್ತು ಬರೆದೆ.

    ಇದು ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ ದ ಸೊಬಗನ್ನು ವರ್ಣಿಸುವ ಪ್ರಯತ್ನ. ಕೊನೆಯ ಸಾಲಿನ “ಸಾವಿನ ಕಣಿವೆ” ಅನ್ನುವುದನ್ನು ಗಮನಿಸಿ.

    ಮರಳು ಕಾಡಿನ ಸೊಬಗ
    ನರಿಯದೆಲೆ ಸುಮ್ಮನೆಯೆ
    ಬರಿದೆ ಮಾತಲ್ಲದನು ಪೇಳ್ವುದೆಂತು
    ತೆರೆದು ಕಣ್ಣನು ನೋಡಿ
    ದರೆ ಹೊಳೆವ ಬಂಗಾರ
    ದರಿವೆ ತೊಟ್ಟಿತೆ ಭೂಮಿಯೆನ್ನಿಸೀತು ॥೧॥

    ಸುತ್ತ ಕಾಂಬುದು ಕೋಟೆ
    ಕೊತ್ತಲಗಳನು ಮೀರಿ
    ಎತ್ತರದ ಬೆಟ್ಟಗಳ ಚೆಲ್ವ ಸಾಲು
    ಎತ್ತ ನೋಡಿದರಲ್ಲಿ
    ಚಿತ್ತವನು ಸೆಳೆವುದೈ!
    ಸುತ್ತ ನೋಡುವ ಕಣ್ಗೆ ಹಬ್ಬವಾಗಿ ॥೨॥

    ಹರಳು ಗಟ್ಟಿರುವುಪ್ಪು
    ಮರಳಿನಾ ಚಿತ್ತಾರ
    ತಿರೆಯುಟ್ಟು ನಲಿಯುತಿಹ ಬಿಳಿಯ ಸೀರೆ
    ಧರೆಗಿಂತ ತಾನೇಕೆ
    ಕಿರಿಯವಳು ಎನ್ನುತಲಿ
    ಮೆರೆವುದಾಗಸವಚ್ಚ ನೀಲಿಯುಟ್ಟು ॥೩॥

    ಹಲ್ಲು ಕಡಿಸುವ ಚಳಿಯ
    ಸೊಲ್ಲನಡಗಿಪ ಕುಳಿರ
    ಕಲ್ಲು ತುಂಬಿದ ಹಾದಿ ಮರೆಸುವಂತೆ
    ಚೆಲ್ಲಿ ಹರಿದಿವೆ ಬಾನ
    -ಲೆಲ್ಲೆಲ್ಲು ತಾರೆಗಳು
    ಮಲ್ಲೆ ಬನದಲಿ ಕೋಟಿ ಹೂಗಳಂತೆ! ॥೪॥

    ಬೇಸರವ ಕಳೆಯಲಿಕೆ
    ನೇಸರುದಯದ ಚಂದ
    ಹಸನಾದ ನೋಟಗಳ ಸಾಲೆ ಇರಲು
    ಹಸಿರು ಸಿಗದಿರಲೇನು?
    ಬಿಸಿಲ ಧಗೆಯಿರಲೇನು?
    ಹೆಸರು ಸಾವಿನಕಣಿವೆ ಸರಿಯಲ್ಲವು! ॥೫॥

    -ಹಂಸಾನಂದಿ

  31. I think the edit time limit was reached before I finished my edits on #3. Reposting.

    ಹರಳು ಗಟ್ಟಿರುವುಪ್ಪು
    ಮರಳಿನಾ ಚಿತ್ತಾರ
    ತಿರೆಯುಟ್ಟು ನಲಿಯುತಿಹ ಬಿಳಿಯ ಸೀರೆ
    ಧರೆಗಿಂತ ತಾನೇಕೆ
    ಕಿರಿಯವಳು ಸೈಯೆಂದು
    ಮೆರೆವುದಾಗಸವಚ್ಚ ನೀಲಿಯುಟ್ಟು ॥೩॥

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)