Feb 172014
 

ಅನ್ಯೋಕ್ತಿ ಅಲಂಕಾರವನ್ನು ಬಳಸಿ ಉತ್ತಮವಾದ ಪದ್ಯವನ್ನು ರಚಿಸಿರಿ

ಒಂದು (ಅಪ್ರಧಾನ) ವಸ್ತುವನ್ನು ಆಧರಿಸುತ್ತಲೆ ಬೇರೊಂದರ (ಪ್ರಧಾನವಸ್ತುವಿನ) ಲಕ್ಷಣವನ್ನು ವಿವರಿಸುವುದು ಅನ್ಯೋಕ್ತಿಯಾಗುತ್ತದೆ

ಉದಾ:
ಅಖಿಲೇಷು ವಿಹಂಗೇಷು ಸತ್ಸು ಸ್ವಚ್ಛಂದಚಾರಿಷು
ಶುಕಪಂಜರಬಂಧಸ್ಥ ಮಧುರಾಣಾಂ ಗಿರಾಂ ಫಲಂ

ಉದಾಹರಣೆಗಾಗಿ ಕನ್ನಡದಲ್ಲಿ ಇದೇ ಭಾವವನ್ನು ತೋರುವ ಪ್ರಯತ್ನ-
ಸರ್ವವಿಹಂಗಂಗಳ್ ಗಡ
ಗರ್ವದೆ ಮನದಿಚ್ಛೆಯಂತೆ ಪಾರಲ್ ಮುಗಿಲೊಳ್
ಒರ್ವಗೆ ಬಂಧನಮಕಟಾ
ಬೀರ್ವುದೆ ನೀನಿಂತು ಗಿಳಿಯೆ! ಸವಿಸೊಲ್ಪರಿಯಂ?

  133 Responses to “ಪದ್ಯಸಪ್ತಾಹ ೯೬: ಅಲಂಕಾರಯುತ ವರ್ಣನೆ”

 1. ನಿರತವು ತರುಣಿಗಣ ವನ
  ತಿರುಗಣೆ ರೂಪದ ತಯಾರಿ ಪತ್ರಲಿಖಿತದೊಳ್
  ಹರನೊಲಿಸುವಾಸೆಯೊಂದೇ
  ಭರದೆ ತಪಸಿನೊಳ್ ತೊಡೆರ್ದಪರ್ಣೆಗೆ ಗಿರಿಯೊಳ್

  ಪಾರ್ವತಿಯು ಕಾಮದಹನದ ಬಳಿಕ ತನ್ನ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಶಿವನನ್ನು ಒಲಿಸಿಕೊಳ್ಳಲು ಹಿಮಾಲಯದ ತಪ್ಪಲಿನಲ್ಲಿ ತಪಸ್ಸು ಮಾಡುವ ಹಿನ್ನೆಲೆಯಲ್ಲಿ ಈ ಪದ್ಯವು ರಚನೆಯಾಗಿದೆ. ಪಾರ್ವತಿಯು ಆಗಿನ್ನು ತರುಣಿ. ಆವಳ ಸ್ನೇಹಿತೆಯರೆಲ್ಲಾ ವನವಿಹಾರ, ಸೌಂದರ್ಯ ವರ್ಧನೆಯ ಕಾರ್ಯಗಳು, ತಮ್ಮ ಪ್ರಿಯರಿಗೆ ಪತ್ರ ಬರೆಯುವುದು ಇಂತಹ ವಿಷಯಗಳಲ್ಲಿ ನಿರತರಾಗಿದ್ದರೆ ಪಾರ್ವತಿಯು ಮಾತ್ರ ಘೋರ ತಪಸ್ಸನ್ನೇ ಮಾಡಿದಳು. ಇಲ್ಲಿ ಅನ್ಯೋಕ್ತಿ ಅಲಂಕಾರವು ಇದೆಯೋ ಇಲ್ಲವೋ ಗೊತ್ತಿಲ್ಲ. ಉದಾಹರಣೆಗೆ ಕೊಟ್ಟಿರುವ ಮಾದರಿಯ ಜಾಡಿನಲ್ಲಿ ರಚಿಸಿದ್ದೇನೆಂದು ತಿಳಿದಿದ್ದೇನೆ.

  ತೊಡೆರ್ದ – ತೊಡಗಿದ , ಈ ಪ್ರಯೋಗ ಸರಿಯೇ?

  ನಿರಾಹಾರದ ತಪಸ್ಸಿನಲ್ಲಿ ಪಾರ್ವತಿಯು ಉದುರಿದ ಎಲೆಗಳನ್ನೂ ಕೂಡ ಸೇವಿಸದಿದ್ದರಿಂದ ಅವಳಿಗೆ ”ಅಪರ್ಣ’ ಎಂದು ಹೆಸರು ಬಂದಿತಂತೆ.

  • ಸವರಿಸಿದ ಪದ್ಯ:

   ನಿರತವು ತರುಣಿಗಣ ವನದ
   ತಿರುಗಾಟ ಮುಖದ ತಯಾರಿ ಪತ್ರಲಿಖಿತದೊಳ್
   ಹರನೊಲಿಸುವಾಸೆಯೊಂದೇ
   ಭರದೆ ತಪಸಿನೊಳ್ ತೊಡೆರ್ದಪರ್ಣೆಗೆ ಗಿರಿಯೊಳ್

  • ಅನ್ಯೋಕ್ತಿ ಅಲಂಕಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ರಚಿಸಿರುವ ಈ ಪದ್ಯವನ್ನು ದಯವಿಟ್ಟು ಆಲಕ್ಷಿಸಿರಿ.

 2. ತುಂಬಿಬರೆ ಯೌವನವದಂಗಾಂಗವಂ ಬರಿಸಿ,
  ಅಂಬುಜದ ಹೂವಂತೆಮೊಗವರಳಿತು
  ಕೆಂಬಣ್ಣವಂ ತಳೆದು ತೊನೆಯುತ್ತಲಾಸುಮವು
  ದುಂಬಿಗಳ ಸಾಲನ್ನೇ ಬರಮಾಡಿತು

 3. ಶ್ರೀ ಆರ್ ಕೆ ಶ್ರೀಕಂಠನ್ ಅವರು ಇಂದು ದಿವಂಗತರಾದ ಸುದ್ದಿ ಕೇಳಿದಾಗಿನಿಂದ ಮನಸ್ಸು ಅದೇ ವಿಷಯಕ್ಕೇ ಕೊರೆಯುತ್ತಿತ್ತು. ಅದರ ವಿಷಯವಾಗೇ ಬರೆದ ಈ ಪದ್ಯದಲ್ಲಿ ವಸ್ತುವನ್ನು ಹೆಸರಿಸದೇ ಇರುವುದರಿಂದ ಇದು ಅನ್ಯೋಕ್ತಿಯ ಸರಿಯಾದ ಪ್ರಯೋಗವಾಗುತ್ತದೆಯೇ , ಇಲ್ಲವೇ ಎನ್ನುವುದನ್ನು ಬಲ್ಲವರು ದಯವಿಟ್ಟು ತಿಳಿಸಿ.

  ಒಂದು ಮಾಘದ* ಚೆಂದದಿರುಳಲಿ
  ನಂದನದಿ ಸೇರಿದಲು ಸುರಗಣ
  ಚಂದದಲಿ ತಲೆದೂಗಲಿಕೆ ಗಾಯನದ ಸುಧೆಯಲ್ಲಿ
  ಅಂದದೇಕೋ ನಾರದನ ಹಾ-
  ಡೊಂದು ಸೊಗಯಿಸದಿರಲು ಜವ ಕರೆ
  ತಂದನೇ ಕರ್ನಾಟಕದ ಕೋಗಿಲೆಯ ಹಾಡಲಿಕೆ?

  *ಶ್ರೀಕಂಠನ್ ಅವರು ನಿಧನರಾದ 2/17/2014 ರಂದು ಮಾಘ ಮಾಸ ಕೃಷ್ಣ ತದಿಗೆ

 4. A small variation of the previous one :

  ಒಂದು ಮಾಘದ ಚೆಂದದಿರುಳಲಿ
  ನಂದನದಿ ಸೇರಿರಲು ಸುರಗಣ
  ಚಂದದಲಿ ತಲೆದೂಗಲಿಕೆ ನಾರದನ ಗಾಯನಕೆ
  ಇಂದದೇಕೋ ತನ್ನ ಹಾಡ
  ಲ್ಲೊಂದು ಸೊಗಸೂ ಕಾಣದೆಯೆ ಕರೆ
  ತಂದನೈ ಹಾಡಲಿಕೆ ಕರ್ನಾಟಕದ ಕೋಗಿಲೆಯ!

 5. ಮೊಗದೊಳ್ ಕಲೆಯಂ ಪೊತ್ತಿರೆ
  ಜಗಕಂ ಪುಸಿವೆಳಕನೀಡೆತಾಂ ಕಳ್ತಲಿನೊಳ್|
  ಜಗದೀಶನ ಕೃಪೆಯಿಂದಂ
  ಮುಗಿಲೊಳ್ ರಾರಾಜಿಸಿರ್ಪನಂ ಚಂದಿರ ತಾಂ|

  ಮುಖದಲ್ಲಿ ಕಲೆ (ಕಳಂಕ) ವನ್ನು ಹೊತ್ತಿದ್ದರೂ, ಜಗಕ್ಕೆ ತನ್ನ ಸ್ವಂತದಲ್ಲದ ಬೆಳಕನ್ನು ಕತ್ತಲಿನಲ್ಲಿ ಕೊಡುತ್ತಿದ್ದರೂ, ಆ ಜಗದೀಶನ ಕೃಪೆಯಿಂದ ಮುಗಿಲಿನಲ್ಲಿ ಚಂದಿರನು ಯಾವಾಗಲೂ ರಾರಾಜಿಸುತ್ತಿರುತ್ತಾನೆ..

  ಇದು ಅನ್ಯೋಕ್ತಿಗೆ ಒಪ್ಪುತ್ತದೆಯೇ??

  • ಪ್ರಿಯ ಚೀದಿ, ಪದ್ಯವು ಸೂಗಸಾಗಿದೆ. ಭಾಷಾಪಾಕವೂ ಚೆಲುವಾಗಿದೆ. ಅನ್ಯೋಕ್ತಿತ್ವವೂ ಇಲ್ಲಿದೆ. ಕೇವಲ ಒಂದೆರಡು ಪುಟ್ಟ ಸವರಣೆಗಳಷ್ಟೇ ಬೇಕು. ಆದುದರಿಂದ ಕಡೆಯ ಸಾಲನ್ನು ಸ್ವಲ್ಪ ಮಾರ್ಪಡಿಸುವುದಾದರೆ ಅದು ಹೀಗೆ:
   ಮುಗಿಲೊಳ್ ರಾರಾಜಿಸಿರ್ಪನಲ ಶಶಿ ಬೆಡಗಿಂ !!

   ಒಳ್ಳೆಯ ಪದ್ಯಕ್ಕಾಗಿ ಧನ್ಯವಾದ.

   • ಧನ್ಯವಾದಳು ಸರ್… ಒಬ್ಬ ದಡ್ಡ ಹುಡುಗ ಮೊದಲನೇ ಅಟೆಂಟ್ ನಲ್ಲಿಯೀ ಪರೀಕ್ಷೆ ಪಾಸ್ ಆದಷ್ಟು ಸಂತೋಷವಾಗುತ್ತಿದೆ… ಸವರಣೆಗೂ ಧನ್ಯವಾದಗಳು.. 🙂 🙂

 6. ಕಳೆಯಲೆಂತು ದಿನಗಳ? ಕತ್ತಲಾವರಿಸಿರಲು
  ಇಳೆಯೊಳಗೆ ನಾನೊಂಟೆಯೆಂದೆನಿಸಲು
  ಹಳೆಯನೆಂಪುಗಳೆಲ್ಲ ಬಳಿವಂದು ಕಾಡಿರಲು
  ಬಳೆಯೆಲ್ಲವೂ ಸದ್ದ ನಿಲ್ಲಿಸಿರಲು

 7. ಇಲ್ಲಿಯ ವರೆಗಿನ ಪದ್ಯಗಳಲ್ಲಿ ಅನ್ಯೋಕ್ತಿಯ ಸೊಗಡು ನನಗಿನ್ನೂ ಕಂಡುಬಂದಿಲ್ಲ. ಕಾಂಚನ ಅವರ ಮೊದಲಪದ್ಯದಲ್ಲಿ ಅದರ ಸುಳಿವಿದೆ. ಮಿಕ್ಕವು ವರ್ಣನೆ, ಉತ್ಪ್ರೇಕ್ಷೆ, ಸ್ವಭಾವೋಕ್ತಿಗಳ ಜಾಡು ಹಿಡಿದಂತೆ ತೋರುವುದು.

  • ಮೌಳಿಯವರೇ! ನಿಮ್ಮ ಮಾತು ನಿಜವೆಂದೇ ತೋರುತ್ತದೆ. ಪದ್ಯಗಳೇನೋ ಚೆನ್ನಾಗಿವೆ; ಭಾವವೇನೋ ಚೆಲುವಾಗಿದೆ.ಆದರೆ ತಾಂತ್ರಿಕವಾಗಿ ಅನ್ಯೋಕ್ತಿಯಾಗವು.

   ಎಲ್ಲರೂ ದಯಮಾಡಿ ಅಲಂಕಾರಗಳ ವಿಡಿಯೋ ಪಾಠಗಳನ್ನುಗಮನಿಸುವುದು. ಅಲ್ಲಿ ಅಪ್ರಸ್ತುತಪ್ರಶಂಸಾಲಂಕಾರವೆಂಬ ಒಂದು ಅಲಂಕಾರವಿದೆ. ಅದೇ ಎಲ್ಲ ಅನ್ಯೋಕ್ತಿಗಳಿಗೂ ಜೀವಾತುಭೂತವಾದ ಅಲಂಕಾರ.ಇದರಲ್ಲಿ ಬಿಕ್ಕಟ್ಟೇನಿಲ್ಲ. ಪ್ರಕೃತ (The actual message/idea that we have drive home in a suggestive manner) ಮತ್ತು ಅಪ್ರಕೃತ (What is explicitly told as an analogy in the poem) ಅಂಶಗಳ ನಿರ್ವಾಹವೇ ಅನ್ಯೋಕ್ತಿಗಳಿಗೆಲ್ಲ ಮೂಲವಾದ ಅಪ್ರಸ್ತುತಪ್ರಶಂಸಾಲಂಕಾರ. ಸಾಮಾನ್ಯವಾಗಿ ಲೋಕದಲ್ಲಿ ನಾವು ಹೇಳಬೇಕಾದುದನ್ನು ಜೋರಾಗಿ ಹೇಳಿ ಮಾತನ್ನು ನೇರವಾಗಿ ಮುಗಿಸುತ್ತೇವೆ. ಆದರೆ ಕಾವ್ಯ/ಕಲೆಗಳಲ್ಲಿ ಹಾಗಲ್ಲ.ಹೇಳಬೇಕಾದುದನ್ನು ಪ್ರಕಾರಾಂತರವಾಗಿ ಸೂಚಿಸುತ್ತೇವೆ(Indirect suggestion). ಚೀದಿಯ ಪದ್ಯವನ್ನೇ ಗಮನಿಸುವುದಾದರೆ ಅಲ್ಲಿ ಯಾವುದೇ ಅರ್ಹತೆಯಿಲ್ಲದ ವ್ಯಕ್ತಿಯೊಬ್ಬನು ’ಚಮಚಾಗಿರಿ’ಯಿಂದಲೇ ದೊಡ್ಡ ಸ್ಥಾನಕ್ಕೆ ಬಂದ ಸಂಗತಿಯನ್ನು ಹೇಳುವುದೇ ಪ್ರಕೃತ/ಮುಖ್ಯವಿಷಯ. ಆದರೆ ಚಂದ್ರನು ಅಪ್ರಕೃತ/ಅಮುಖ್ಯವಿಷಯ. ಇಂತಿದ್ದೂ ಚಮಚಾಗಿರಿಯ ಬಗೆಗೆ ನೇರವಾಗಿ ಹೇಳಿದ್ದಕ್ಕಿಂತ ಪರಿಣಾಮಕಾರಿಯಾಗಿ ಚಂದ್ರನ ಪ್ರಸ್ತಾವದಿಂದಲೇ ನಮ್ಮ ಇಂಗಿತವು ರಸಿಕರ ಮನಮುಟ್ಟುವುದು ಎಲ್ಲರಿಗೂ ಸುವೇದ್ಯ. ಇದೇ ಕಾವ್ಯದ, ಅರ್ಥಾತ್ ಅಲಂಕಾರದ, ವಾಗ್ವಕ್ರತೆಯ (ಮಾತಿನ ಬಾಗು) ಹೆಗ್ಗಳಿಕೆ. ಸೋಮನು ನೀಡಿದ ಉದಾಹಾರಣೆಯದೂ ಹೀಗೆಯೇ: ಯಾವುದೇ ವಿಶೇಷತೆಗಳಿಲ್ಲದ ಸಾಮಾನ್ಯರೆಲ್ಲ ಹಾಯಾಗಿ ಸ್ವಾತಂತ್ರದಿಂದ ಇದ್ದಾಗ ಅಸಾಮಾನ್ಯರು ಮಾತ್ರ ಅವರ ಗುಣವಿಶೇಷತೆಗಳ ಕಾರಣದಿಂದಲೇ ನಿರ್ಬಂಧ-ಕಷ್ಟಗಳಿಗೆ ಒಳಗಾಗುತ್ತಾರೆಂಬ ಪ್ರಕೃತಾರ್ಥವನ್ನು ಗಿಳಿಗಷ್ಟೇ ಪಂಜರವಾಸವೆಂಬ ಅಪ್ರಕೃತಾರ್ಥದ ಮೂಲಕ ಕವಿಯು ಮನಮುಟ್ಟಿಸಿದ್ದಾನೆ. ಇಂತಾದರೂ ಈ ಕ್ರಮವೇ ಎಲ್ಲ ಸಹೃದಯರಿಗೆ ಮಿಗಿಲಾಗಿ ಪ್ರಿಯವಾಗುತ್ತದೆ.
   ಎಲ್ಲ ಪದ್ಯಪಾನಿ ಗೆಳೆಯರೂ ಇದನ್ನರಿತು ಒಳ್ಳೆಯ ಅನ್ಯೋಕ್ತಿಗಳನ್ನು ಹೊಮ್ಮಿಸಲಿ.

 8. ಇಲ್ಲಿ ವರ್ಣಿತವಾಗಿರುವ ’ಅಪ್ರಧಾನ”ವನ್ನು ಆಧರಿಸಿ ಯಾವ ’ಪ್ರಧಾನ”ವು ಸ್ಫುರಿಸುವುದೋ, ಅವರವರಭಾವಕ್ಕನುಗುಣವಾಗಿ ಊಹಿಸಿಕೊಳ್ಳಬಹದು.

  ಪಚ್ಚೆಯಚ್ಚನು ಬಿಚ್ಚಿ ಜೀವಂತಿಕೆಯ ಸದಾ ಪುಷ್ಪಿಸುವ ಸೌರಭದ ವೃಕ್ಷರಾಜ
  ಬಿಚ್ಚುಮಾತಿನ ಪಕ್ಷಿವಂಶಕಾಶ್ರಯನೆ ಮೇಲುಲಿಯೆ ವಂಶೀಗಾನ, ಶಬ್ದ ಭೂಜ
  ಪೆರ್ಚಿ ಸಮೃದ್ಧಿಫಲ ವೈವಿಧ್ಯ ಸೃಷ್ಟಿಸುವೆ ಋತುಮಾನಕೆಡೆಗೊಡದೆ ರಸಿಕ ಬಂಧು
  ಅಚ್ಚರಿಯ ಮಾದರಿಗೆ ಸತ್ಯಲೋಕದ ಬೀಜ ಬಿತ್ತಿದನೆ ಮೆಚ್ಚಿಸಲು ಬೊಮ್ಮ ತಂದು

  ಆಲ ದಂತಲ್ಲವಿತರ ತರುಬೆಳೆವುದಿಲ್ಲಿ
  ಮೇಲಕೇರ್ದಂತೆ ಬಾಗುತ್ತ ಹರಡಿ ಚೆಲ್ಲಿ
  ಲೀಲೆ ಶತಪತ್ರ ಸಾಸಿರದ ಫಲದಸುಮದ
  ಕ್ಷ್ವೇಲಮಂ ಸುಧೆಯಗೈವಂಥ ಮಣ್ಣಗುಣದ

  • ಚಂದ್ರಮೌಳಿಯವರ ಅನ್ಯೋಕ್ತಿಯ ಸೊಗಸುತನದ ಬಗೆಗೆ ನಾನು ಏನೆನ್ನಲಿ? ಅದನ್ನು ಬಾಯ್ಬಿಟ್ಟು ಮೆಚ್ಚತೊಡಗಿದರೆ ಮರವೇ ಮೈಮೇಲೆ ಬಿದ್ದೀತೆಂದು ಅಳುಕಿ ಸುಮ್ಮನಾಗುವೆ; ಮನ್ನಿಸಿರಿ:-)

  • ಚಂದ್ರಮೌಳಿಯವರೆ ಬಹಳ ಚೆನ್ನಾಗಿದೆ

 9. ಪ್ರಿಯ ಸೋಮ, ಒಳ್ಳೆಯ ಅನುವಾದವನ್ನೇ ಮಾಡಿದ್ದೀಯೆ. ದುಷ್ಕರಪ್ರಾಸವನ್ನೂ ಚೆನ್ನಾಗಿ ನಿರ್ವಹಿಸಿದ್ದೀಯೆ. ಆದರೆ ಕಡೆಯ ಸಾಲಿನಲ್ಲಿ ಮೊದಲ ಪದವು ವ್ಯಾಕರಣಶುದ್ಧವಾಗದು.
  ಸ್ವಲ್ಪ ಸವರಣೆಗಳು ಬೇಕು:
  ಸರ್ವವಿಹಂಗಂಗಳ್ ಗಡ
  ………………………………………………
  ………………………….
  ಬೀರ್ವುದೆ ನೀನಿಂತು ಗಿಳಿಯೆ! ಸವಿಸೊಲ್ಪರಿಯಂ?
  (ಸವಿ+ಸೊಲ್+ಪರಿಯಂ)

  • ನನ್ನ ಅನುವಾದ:
   ಬಾನೊಳ್ ಮೆರೆಯೆ ಬೇರೆಲ್ಲ
   ತಾವೇತಾವಾಗಿ ಹಕ್ಕಿಗಳ್|
   ಬಂಧಿತಂ ಗಿಳಿ ಮಾತ್ರಂ ತಾಂ
   ತನ್ನ ಸುಶ್ರಾವ್ಯ ಕಂಠದಿಂ||

  • Ganesh Sir, thanks I have corrected the padya:)

 10. ಖಾದಿಯ ತೊಟ್ಟುಂ ನಗುತಲ್
  ವೇದಿಯನೇರಿ ಕರಮಂತಿರುಗಿಸುತಲಿರ್ಪಂ,
  “ಗಾಂಧಿ”ಯ ನಾಮಮಹಿಮೆಯಿಂ
  ಹೊಂದುವನೇಂ ಕೀರ್ತಿಯಂ ಭರತಖಂಡದೆ ತಾಂ?

  • ಇಲ್ಲಿ ಎಲ್ಲವೂ ವಾಚ್ಯವಾಗಿಬಿಟ್ಟಿದೆ. ಹೀಗಾಗಿ ಪ್ರಕೃತ-ಅಪ್ರಕೃತಗಳ ಪ್ರಮೇಯವೇ ಇಲ್ಲವಾಗಿದೆ.

 11. आहारात् दूरवासात् त्वमसि जडमतिर् भोः पिपीलि ब्रवीमि
  संमर्दो लम्बमार्गे च विगतविनयैस् तेन निर्वेद-सृष्टिः।
  हिंसालूनां प्रहारो भवति हि बहुशः मार्गरोधः क्वचिच्च
  क्षेमन् ते वच्मि भद्रेऽथ जठरभरणं स्यान् निवासात् समीपे॥
  [ पश्चादित्थं सम्पादितम् –
  * भो पिपीली श्रुणुष्व → भोः पिपीली ब्रवीमि ]

 12. ಲಕ್ಷ್ಮೀಶನ ಈ ಪದ್ಯ ಈ ಅಲಂಕಾರಕ್ಕೆ ಪ್ರಮಾಣವೆ?
  ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ
  ನಾಗೇಂದ್ರನಂ ಬುದ್ಧಿದೊರೆಸಿತ್ತು ಪುರಮರ್ದ
  ನಾಗೇಂದ್ರನಂ ನಿಂದು ತಲೆವಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ|
  ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ
  ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಥ
  ನಾಗೇಂದ್ರಧರನ ಜಾತೆಯ ನಿಲವುಗೆಡಿಸಿ ನೆರೆರಾಜಿಸಿತು ಮೂಜಗದೊಳು||

  • ಇಲ್ಲ; ಸರ್ವಥಾ ಇಲ್ಲ. ಇದೆಲ್ಲವೂ ಪ್ರಕೃತವಾದ ಧರ್ಮರಾಜನ ಕೀರ್ತಿಯನ್ನೇ ವಾಚ್ಯವಾಗಿ ವರ್ಣಿಸಿದೆಯಲ್ಲದೆ ಅಪ್ರಕೃತವಾದ ಯಾವುದೇ ಸಂದರ್ಭವನ್ನೂ ತಂದಿಲ್ಲ. ಆತನ ಯಶಸ್ಸು ಬೆಳ್ಳಗಿದೆಯೆಂದಷ್ಟೇ ಇಲ್ಲಿಯ ತಾತ್ಪರ್ಯ. ಇದನ್ನು ಬಿಳಿಯ ಬಣ್ಣದ ಅಸಂಖ್ಯವಸ್ತುಗಳನ್ನೆಲ್ಲ ನೇರವಾಗಿ ಸಾದೃಶ್ಯ-ವೈಸದೃಶ್ಯಗಳಿಗೆಂದು ತಂದು ಕವಿಯು ಅತಿಶಯೋಕ್ತಿ, ಪರ್ಯಾಯೋಕ್ತಿ, ಉಪಚಾರವಕ್ರತಾ ಮುಂತಾದ ಉಕ್ತಿವೈಚಿತ್ರದ ಮೂಲಕ ರಂಜಿಸಿದ್ದಾನೆ. ಅಲ್ಲದೆ ಆರೂ ಸಾಲುಗಳಲ್ಲಿ ಯಮಕಾಲಂಕಾರವನ್ನೂ ಮಾಡಿ ಶಬ್ದಚಮತ್ಕಾರವನ್ನೂ ಸಾಧಿಸಿದ್ದಾನೆ.

 13. (ಇಲ್ಲಿ ತುಂಬ ಸರಳಭಾಷೆ-ಛಂದಸ್ಸುಗಳಲ್ಲಿ ಕ್ರಮವಾಗಿ ಮಯೂರಾನ್ಯೋಕ್ತಿ, ವೃಶ್ಚಿಕಾನ್ಯೋಕ್ತಿ ಮತ್ತು ನಯನಾನ್ಯೋಕ್ತಿಗಳನ್ನು ಅಹಂಕಾರಿಗಳನ್ನು ನಿಂದಿಸುವ ಉದ್ದೇಶವೇ ಪ್ರಕೃತವಾಗಿರುವಂತೆ ರಚಿಸಿದ್ದೇನೆ. ಇವು ನಮ್ಮ ಸಹಪದ್ಯಪಾನಿಗಳಿಗೆ ಮಾದರಿಯಾಗಬಹುದು)

  ಬಿಂಕದಿಂ ಕುಣಿದು ನೀನೇ ನಿನ್ನ ಗರಿಗಳಂ
  ಶಂಕೆಯಿಲ್ಲದೆ ಕೊಡವಿಕೊಳ್ವೆಯಾ ನವಿಲೇ!
  ಮಂಕೆ! ನಿನಗೇ ಚೆಲುವು ಖಿಲವಾಯ್ತು; ಗರಿಗಳಂ
  ಸಂಕಲಿಸಿ ಮುಡಿಗಿಡುವನದೊ ನಲಿದು ಕೃಷ್ಣ !!

  ಹತ್ತು ಸಾವಿರ ವಿಷದ ಹಲ್ಲಿದ್ದರೂ ಶೇಷ
  ಮೆತ್ತಗಿರುವನು ಹೆಡೆಯ ಬಾಗಿಸುತ್ತ |
  ಎತ್ತಿ ಸಾಗಿದೆ ಬಿಂದುವಿಷವಿರುವ ಕೊಂಡಿಯನೆ
  ಮತ್ತಷ್ಟು ಮಲೆಯುತ್ತ ಮರಿಚೇಳಿದೋ!!

  ಚೆಲುವಾದ ನೋಟವನು ಕಂಡ ಹಿಗ್ಗಿಂ ಕಣ್ಣೆ!
  ಮಲೆತು ಕಿವಿ-ಮೂಗುಗಳ ಮರೆಯಬೇಡ |
  ನಿಲಿಸಿಕೊಳದಿರ್ದೊಡವು ಕನ್ನಡಕವನ್ನು ನಿನ-
  ಗೊಲಿಯುತಿತ್ತೇ ನಿಶಿತದೃಷ್ಟಿ-ಸೃಷ್ಟಿ?

  • ಧನ್ಯವಾದ ಗಣೇಶ್ ಸರ್, ನಾನು ಅನ್ಯೋಕ್ತಿಯ ಕಡೇ ಸಾಲಿನಲ್ಲಿ ಪ್ರಧಾನವಸ್ತುವಿನ ಪ್ರಸ್ತಾಪ ಬರಬೇಕೇನೋ ಎಂದುಕೊಂಡಿದ್ದೆ. ನಿಮ್ಮ ಮಾದರಿಯ ಪದ್ಯದಿಂದ ಅನ್ಯೋಕ್ತಿಯಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದಹಾಗಾಯಿತು 🙂

  • ಮೊದಲ ಮತ್ತು ಮೂರನೇಯ ಪದ್ಯಗಳು ತುಂಬಾ ನವೀನ ಕಲ್ಪನೆಗಳಿಂದ ಮನಮುಟ್ಟಿದವು. 🙂

  • ಮೊದಲನೆಯ ಪದ್ಯಕ್ಕೆ ಪ್ರತಿಕ್ರಿಯೆ:
   ನನ್ನ-ನಿಮ್ಮವೊಲರಾ ಗರಿಗಳನ್ನಾಯುವೊಡೆ
   ಖಿನ್ನವಾಗುವುದಾಗಲಾ ಮಯೂರಂ|
   ಚನ್ನಕೃಷ್ಣನು ಧರಿಸಲಾ ಗರಿಯ ಮುಡಿಯೊಳಗೆ
   ಮನ್ನಣೆಯು ವನಮಯೂರಕ್ಕಲ್ಲಮೇಂ||

   ಎರಡನೆಯ ಪದ್ಯಕ್ಕೆ ಪ್ರತಿಕ್ರಿಯೆ:
   ಆ ಪರಿಯ ಶೇಷನಂ ಕಂಡುಕೇಳ್ದವರಿಲ್ಲ
   ಶಾಪವಿತ್ತವರಿಹರು ಚೇಳ ಕಂಡು|
   ತಾಪವಾವುದು ಪೇಳಿ ಪೆರ್ಚೀರ್ವರೊಳಗೀಗ
   ಭಾಪ ಚೇಳೊಳೊ ಶೇಷನಾಗನೊಳೊ ಮೇಣ್||

   ಮೂರನೆಯ ಪದ್ಯಕ್ಕೆ ಪ್ರತಿಕ್ರಿಯೆ:
   ಧನ್ಯತೆಯ ಭಾವದಿಂ ಸುಮ್ಮನಿರ್ದೊಡೆ ಸಲ್ಗು-
   ಮನ್ಯಥಾ ಕಿವಿ-ಮೂಗನಾದರಿಸದೆಲ್|
   ಮನ್ಯು ವ್ಯತ್ಯಸ್ತಗೊಳ್ಳುತೆ ಕಣ್ಣು ಪೊಂದುವುದ-
   ನನ್ಯ ಕಾಂಟ್ಯಾಕ್ಟುಗಳ ಮೋಜಿನಿಂದಂ||
   (ಮನ್ಯು=mood. ಕಾಂಟ್ಯಾಕ್ಟು=contact lens)

   • ಪ್ರಿಯ ಪ್ರಸಾದು,
    ನಿಮ್ಮ ಪ್ರತಿಕ್ರಿಯಾಪದ್ಯಗಳೆಲ್ಲ ಚೆನ್ನಾಗಿವೆ. ನಿಮ್ಮೀ ’ವಂಡರ್ ಗಣ್ಣಿ’ನ ಪರ್ಯಾಯಾಭಿವ್ಯಕ್ತಿಗಳೆಲ್ಲ ನನಗೆ ಆಸ್ವಾದ್ಯವೇ. ತಥಾಪಿ ವಚ್ಮಿ:-)

    ಅನ್ಯರ ಉಕ್ತಿಗಳ ಬಗೆಗೇ “ಅನ್ಯೋಕ್ತಿ”ಗಳನ್ನು ಪೋಣಿಸುತ್ತಿರುವುದಕ್ಕೆ ಹೆಗಲೆಣೆಯಾಗಿ ರಸಮಯವಾದ ಅನ್ಯೋಕ್ತಿಗಳನ್ನೂ ಬರೆಯುವ ಅನುಗ್ರಹ ಮಾಡಿರಿ:-)

    • I have already posted one in Sl. No. 26. Kindly see if it is really anyokti.
     Do you really mean that my three responsive verses serve as examples of anyokti?

  • ನನಗೆ ಎರಡನೇ ಮತ್ತು ಮೂರನೇ ಪದ್ಯಗಳು ಬಹಳ ಇಷ್ಟವಾದವು. ಅದರಲ್ಲೂ ’ಕೊಂಡಿಯನೆ ಎತ್ತಿ ಸಾಗಿದೆ ” ಎಂಬ ಚೇಳಿನ ಸ್ವಭಾವವರ್ಣನೆ ಮನಮೋಹಕ. ಧನ್ಯ ನಾನು! ಗಣೇಶರೇ ಧನ್ಯ !ಇಂತಹ ಪದ್ಯ ಓದಿ!!

 14. ವ್ಯಾಘ್ರಚರ್ಮಾಸನಾರೂಢೋ ನಿಷ್ಕ್ರಮ್ಯ ಸಿಂಹವಾಹನಾತ್ |
  ವಿಧೃತಾರ್ಷಭಪಾದತ್ರಶ್ಚಕಾರ ಗೋಮಯೇ ಪದಮ್ ||

  ರಾಜಯೋಗ್ಯವಾದ ಕಾರ್ ಅವನದು. ಅದರಲ್ಲಿ ಹುಲಿಚರ್ಮದ ಸೀಟುಗಳು. ಋಷಭದ ಚರ್ಮದಿಂದ ಮಾಡಿದ ಬೂಟು ಕಾಲಿನಲ್ಲಿ. ಅಂತಹ ಅವನು ಕಾರಿಂದ ಹೊರ ಬಂದು ಗೋಮಯದಲ್ಲಿ ಕಾಲಿಟ್ಟನು.

  • ನೈತದನ್ಯೋಕ್ತಿರಿತ್ಯೇವ ದೂಯೇ ಮಿತ್ರ ನರೇಶ! ಭೋಃ !!

   • ಅವಧಾನಿನ್, ಪುನಶ್ಚಿನ್ತನಮನು ಕಾನಿಚಿತ್ ಪದ್ಯಾನಿ ಅಧೋ ಲಿಖಾಮಿ. ತತ್ರ ಸಾಧುತ್ವಪರಿಶೀಲನಂ ಪ್ರಾರ್ಥಯೇ.

 15. ತುತ್ತಿನ ಚೀಲಕೆ ಕಷ್ಟಮ್
  ನೆತ್ತಿಯ ಮೇಗಡೆಯರಳಿದ ಮಲ್ಲಿಗೆ ಪೂವೇಂ
  ಮತ್ತಿನ ದೊರೆಗಂ ದಾಂಡಿಗ-
  ರತ್ತ ನಿಲಲೆದುರು ಖರೀದಿ ಮಾಡುವ ತೆವಲೇಂ

  ’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎನ್ನುವಂತೆ ತಾನೇ ಹರಾಜಾಗುವ ಸ್ಥಿತಿಯಲ್ಲಿರುವ ವಿಜಯ್ ಮಲ್ಯನು
  ಐಪಿಎಲ್ ಆಟಗಾರರನ್ನು ಕೊಳ್ಳಲು ಪ್ರಯತ್ನಿಸಿದ್ದರ ಬಗ್ಗೆ ರಚಿಸಿರುವ ಪದ್ಯ. ಅನ್ಯೋಕ್ತಿ ಬಂದಿದಿಯೋ ಇಲ್ಲವೋ ದಯವಿಟ್ಟು ತಿಳಿಸಿರಿ.

  • ಖರೀದಿ – ಹಿಂದೀ ಪದ ಬಳಸ ಬಹುದೇ?

   • ಖರೀದಿ – ಕನ್ನಡ ಪದ ಹೌದೋ ಅಲ್ಲವೋ ತಿಳಿದಿಲ್ಲ.
    ’ಲಿಲಾವಲಿ ಪಡೆಯುವ ಛಲಂ’ ಎಂದು ತಿದ್ದಬಹುದೇನೊ..
    ಲಿಲಾವು – ಹರಾಜು , ಇದೂ ಕೂಡ ಉರ್ದು ಪದವಿದ್ದಂತೆ ತೋರುತ್ತದೆ.

 16. ಸೊನ್ನೆಯು ಹಲವಿರೆ
  ಮನ್ನಣೆಯಿಲ್ಲವು
  ಸೊನ್ನೆಯದೆಡಗಡೆಗೊಂದಿರಲು I
  ಸಣ್ಣನೆ ಬಲವದು
  ಸನ್ನೆಯ ಹಿಂದಿರೆ
  ಹೊನ್ನಿನ ಬೆಲೆಯದು ಸಲ್ಲುವುದು II

  ಸೊನ್ನೆಯ ಎಡಗಡೆಯಲ್ಲಿ ಒಂದು ಬರೆದಾಗ ಸೊನ್ನೆಗೆ ಬೆಲೆ;ಹಾಗೆಯೇ ಭೌತಿಕವಾಗಿ ಭಾರವಾದ ವಸ್ತುಗಳನ್ನು ವಸ್ತುಗಳನ್ನು ಚಲಿಸುವಂತೆ ಮಾಡಲು ಸನ್ನೆ (lever )ಇದ್ದಾಗ ಬಲದ ಪ್ರಯೋಗಕ್ಕೆ ಬೆಲೆ ಸಿಗುವುದು ಎಂಬ ಅರ್ಥದಲ್ಲಿ ಬರೆದಿದ್ದೇನೆ .

  • ತುಂಬಾ ಚೆನ್ನಾಗಿದೆ

   • ಧನ್ಯವಾದಗಳು ಸರ್ .
    ಎಲ್ಲವನ್ನೂ ಓದಿದ ನಂತರ ನಾನು ಬರೆದುದು ಖ೦ಡಿತವಾಗಿಯೂ ತಪ್ಪು ಎಂಬ ತೀರ್ಮಾನಕ್ಕೆ ಬಂದಿದ್ದೆ . ಸರಿಯಾಗಿದೆ ಅಂತ ತಿಳಿದು ಗೊಂದಲಕ್ಕೀಡಾಗಿದ್ದೇನೆ !

    • ಗೊಂದಲವನ್ನು ತೊಡೆಯಲು ಈಗೊಂದು ತಪ್ಪು-ಪದ್ಯವನ್ನು ರಚಿಸಿದರಾಯಿತು 😉

     • ಇದು ನನಗೆ ಬಯಸದೆ ಬಂದ ಭಾಗ್ಯ ಅಂತ ತಿಳಿದು ಕೊಳ್ಳುತ್ತೇನೆ ಸರ್ 🙂

 17. ಮೊನ್ನೆಯ ಸಾವಿರದ ಅವಧಾನದಲ್ಲಿ ಆಶುಕವಿತೆಗೆ ಈಚಲ ಮರದ ಬಗ್ಗೆ ಅನ್ಯೋಕ್ತಿ ಕೇಳಿದ್ದೆ. ಅದಕ್ಕೆ ರಚಿಸಿಕೊಂಡಿದ್ದ ಪದ್ಯವನ್ನೇ ಹಾಕುತ್ತಿದ್ದೇನೆ 🙂
  ಮ.ವಿ||
  ಸಕಲಂಕಂ ಮಿಗೆ ನಿನ್ನ ಛಾಯೆಯೊಳಿರಲ್ಕಾ ತಕ್ರಮುಂ ಮೇಣದೇ-
  ತಕೆ? ಹೇ ಈಚಲೆ! ಛದ್ಮರೂಪಿ! ಕೆಳೆ ಭಲ್ಲೂಕಾಭರೊಳ್, ಸಾಂಬನಂ-
  ಬಕವಹ್ನಿಪ್ರಭವರ್ಣಪರ್ಣಮುಮದೇಕೇಕಾಂತದೊಳ್ ವಾಸಮುಂ
  ಮಕುಟಂ ಕಂಟಕ ಸಂಕಟ ಪ್ರಕಟಮೇ? ವೈಕಟ್ಯಕೂಟಾ! ಕುಟಾ!!

  • ಕೊಪ್ಪಲತೋಟ, ಎಂದಿನಂತೆ ಪದ್ಯದ ಶೈಲಿ ಚೆನ್ನಾಗಿದೆ. ಪೂರ್ಣವಾಗಿ ಅರ್ಥವಾಗಲ್ಲಿಲ್ಲ, ಸ್ವಲ್ಪ ವಿವರಣೆ ಕೊಡೋಪ್ಪ:)

  • ಅರ್ಥ: ಹೇ ಈಚಲೇ! ನಿನ್ನ ಛಾಯೆಯಲ್ಲಿ ಇರುವಾಗ ತಕ್ರವೂ ಕಲಂಕ ಸಹಿತವೇಕಾಯಿತು? ಛದ್ಮರೂಪಿಯೇ (ತೆಂಗು,ತಾಳೆ ಮರಗಳ ಹೋಲಿಕೆ ಇರುವುದರಿಂದ) ನಿನ್ನ ಗೆಳೆತನ ಕರಡಿಯಂತಹವರ ಜೊತೆ. (ಈಚಲ ಹಣ್ಣು ತಿನ್ನಲು ಕರಡಿ ಬರುತ್ತದೆ ಎಂದು ನಮ್ಮ ಕಡೆ ಹೇಳುವುದನ್ನು ಕೇಳಿದ್ದೇನೆ) ಶಿವನ ಕಣ್ಣಿನ ಬೆಂಕಿಯಂತಹ ಬಣ್ಣದ ಎಲೆಗಳೇಕೆ? ಏಕಾಂತದಲ್ಲಿಯ ವಾಸವೇಕೆ? ವಿಕಟತೆಗಳ ಕೂಟವಾದ ಕುಟ(ಮರ)ನೇ ಮಕುಟವು ಕಂಟಕಸಂಕಟಗಳ ಪ್ರಕಟವೇ?
   (ದುರ್ಜನರಿಗೆ ಆರೋಪಿಸಿಕೊಳ್ಳಬಹುದಾದ ಕಾರಣ ಅನ್ಯೋಕ್ತಿ ಆಗಬಹುದು ಎಂದುಕೊಂಡಿದ್ದೇನೆ)

   • ಅನ್ಯೋಕ್ತಿತ್ವವು ಇಲ್ಲಿ ಪ್ರಸ್ಫುಟವಾಗಿಯೇನೋ ಇದೆ. ಆದರೆ ಈಚಲಿಗೆ ಹಾಕಿರುವ ವಿಶೇಷಣಗಳೆಲ್ಲ ಯುಕ್ತವಾಗಿ ಅನ್ವಿತವಾದಂತೆ ತೋರಲಿಲ್ಲ. ಹೀಗಾಗಿ ಅರ್ಥಬೋಧೆಗೆ ತೊಡಕಾಯಿತು.

 18. ಉಣ್ಣೆಯ ದಿರಸಂ ತೊಟ್ಟುಂ
  ಕಣ್ಣಂ ಮಿಟುಕಿಸುತಲಕ್ಕರೆ ಪಡೆವ ಬೆಕ್ಕೇ!
  ಬಣ್ಣಂ ತಿಳಿವುದು ನಿಜದಾ
  ಅಣ್ಣನ ಮನೆಗೊಂದು ನಾಯಿ ಬಂದಾ ಕ್ಷಣದೊಳ್!!
  (ಮನೆಗೆ ನಾಯಿ ಬಂದಾಗ, ಒಡೆಯನ ಪ್ರೀತಿ ನಾಯಿಗೇ ದೊರಕುವದು)
  (ಇಲ್ಲಿ , ಒಳ್ಳೆಯ ಗುಣದವರಿಗೆ ಮಾನ್ಯತೆ (ವೇಷ -ಭೂಷಣಕ್ಕಲ್ಲ)ಎಂಬ ಭಾವ ಬಂದಿದೆಯೇ?)
  ಅನ್ಯೋಕ್ತಿಯಾಗಿದೆಯೇ? ತಿಳಿಸುವಿರಾ? 🙂
  ಅಣ್ಣ=ಒಡೆಯ

  • ಇದು ಒಳ್ಳೆಯ ಮಾರ್ಜಾರಾನ್ಯೋಕ್ತಿ. ಅಭಿನಂದನೆಗಳು. ಆದರೆ ಕೊನೆಯ ಸಾಲಿನಲ್ಲಿ ಮಾತ್ರ ಸ್ವಲ್ಪ ಸೇರಿಸಬೇಕಿದೆ. ಅದು ಹೀಗೆ:
   ……………………. ………………….ಕ್ಷಣದೊಳ್ ||

  • ಬಹಳ ಚೆನ್ನಾಗಿದೆ

   • ತಮ್ಮಿಬ್ಬರಿಗೂ ಧನ್ಯವಾದಗಳು.
    ಪದ್ಯವನ್ನೂ ಸಾವರಿಸಿರುವೆ.

 19. ತಿಂಬುದು ಮೀನಂ ತಿಮಿ ತಿಮಿ-
  ಯಂ ಭಕ್ಷಿಪುದಲ ತಿಮಿಂಗಲಂ ಗಡಮದನುಂ
  ತಾಂ ಭಕ್ಷಿಪ ಹಿಂಸ್ರಜಲಜ-
  ನೆಂಬೊಲ್ ತೋರ್ದಪುದು ರಾಜಕಾರಣದಾಟಂ

  ಹಿಂಸ್ರಜಲಜಂ – ತಿಮಿತಿಮಿಂಗಲವೆಂದು ತಿಳಿಯಿರಿ

  • ಸೋಮ, ಇಲ್ಲಿ ಅನ್ಯೋಕ್ತಿ ತೋರದಾಗಿದೆ:-( ಏಕೆಂದರೆ ಪ್ರಕೃತವೂ ಅಪ್ರಕೃತದಂತೆ ವಾಚ್ಯವಾಗಿಬಿಟ್ಟಿದೆ!

   • ಗಣೇಶ್ ಸರ್, ವಾಚ್ಯಾಂಶ ತೆಗೆಯುವ ಪ್ರಯತ್ನ ಮಾಡಿದ್ದೇನೆ, ತಪ್ಪಿದ್ದರೆ ತಿದ್ದಬೇಕು:)

    ತಿಂಬುದು ಮೀನಂ ತಿಮಿ ತಿಮಿ-
    ಯಂ ಭಕ್ಷಿಪುದಲ ತಿಮಿಂಗಲಂ ಗಡಮದನುಂ
    ತಾಂ ಭಕ್ಷಿಪ ಹಿಂಸ್ರಜಲಜ-
    ಮೆಂಬೀ ಪಿರಿತನಮೆ ಗೆಲ್ವುದಲ ಹಾ ವಿಧಿಯೇ

 20. ಪಞ್ಜರಸ್ಥಃ ಶುಕಃ ಕೂಜೇತ್ ಮಧುರಂ ಮಧುರಂ ಸದಾ |
  ಕಾಕೋ ಯುಕ್ತತರೋ ಕಾಲೇ ರಟೇನ್ಮಿತ್ರಗಣಾಯ ಸಃ || 1 ||
  (ಕಾಕಾಹ್ವಾನಸ್ಯ ಸುಭಾಷಿತಂ ಚ ಉಪರಿ ಸೂಚನಾಂ ಚ ಮತ್ವಾ ಯತ್ನೋಽಯಮ್.
  ಇಲ್ಲಿ ಅನ್ಯೋಕ್ತಿ ಬಂದಿಹುದೋ ಇಲ್ಲವೋ ಎಂದು ತಿಳಿಯಲು ಮನಸ್ಸಿನಲ್ಲಿದ್ದ ಸಂದರ್ಭ ಇದು – ಅನತಿದೂರೇ ಕಾಲೇ ರಾಜಕೀಯ ನಾಯಕನೊಬ್ಬನ ಟೀವೀ (ಠೀವಿ?) ಸಂದರ್ಶನ.)

  ದೃಷ್ಟ್ವಾ ದೀಪಂ ಸುದೂರಾದ್ಯೋ ಗಮನಾಯೇತಿ ಮನ್ಯತೇ |
  ಪ್ರಾಪ್ಯ ತಂ ಸೋಽಭಿಜಾನೀತೇ ಪುರತೋ ಧೂಮ್ರಶಾಕಟಮ್ || 2 ||
  (ವಿಷಯಃ ಪ್ರಸಿದ್ಧಃ. ಅನ್ಯೋಕ್ತಿಂ ಮನ್ಯೇ).

  ವೃಕ್ಷಚ್ಛಾಯಾವೃತೋ ನಿತ್ಯಂ ಪಾಷಾಣೋ ಭಾಸ್ಕರಪ್ರಿಯಃ |
  ಸಂಧ್ಯಾಯುಕ್ತಂ ರವಿಂ ದೃಷ್ಟ್ವಾ ವಿಲಲಾಪ ನ ಮೇ ರವೇ || 3 ||
  ಭಾಸ್ಕರಪ್ರಿಯಃ ಇತಿ ಬಹುವ್ರೀಹೌ ಮತ್ವಾ, ’ನ ಮೇ ರವೇ’ ಇತಿ ವಿಲಾಪೇ ಅನ್ಯೋಕ್ತಿಃ ಸ್ಯಾತ್ ಕಿಮ್ ? ಭಾವಸ್ತು ನ ಪಾಷಾಣೇ, ಅಪಿ ತು ಜನಮನಸಿ.

  ಜಲಧೇರಪಿ ತೀರೇ ಯೋ ನಾರಿಕೇಲಃ ಪ್ರತಿಷ್ಠಿತಃ |
  ಪೀತ್ವಾ ಭೂಮ್ಯಾ ಜಲಂ ಕ್ಷಾರಂ ದದಾತಿ ಮಧುರಂ ಜಲಮ್ || 4 ||
  (ಮನ್ಮಸಿ ಕರ್ತುಂ ಯತ್ನೋಽಯಮ್. ನಾಸ್ಮಿನ್ ಪದ್ಯೇ ಅನ್ಯೋಕ್ತಿಃ ಖಲು ? ಅತ್ರ ಅಪ್ರಸ್ತುತಪ್ರಶಂಸಾ ?)

  ನಾಸ್ತಿ ತೋಯಂ ಮಮೇತೀನ್ದುರ್ನಿತ್ಯಂ ಕರ್ಷತಿ ಸಾಗರಮ್ |
  ನಿರ್ಜಲೋಽದ್ಯಾಪಿ ಶಂಸ್ಯೋಽಸೌ ಯತತೇ ಯನ್ನಿರಂತರಮ್ || 5 ||
  (ಅತ್ರಾಪಿ ಅಪ್ರಸ್ತುತಪ್ರಶಂಸಾ ಖಲು ?
  “ಶಂಸ್ಯೋಽಸೌ?” ಇತಿ ಕಾಕುನಾ ಪಠ್ಯತೇ ಚೇತ್ ಪ್ರಶಂಸಾ ತು ನಾಸ್ತಿ.)

  • ಬಹುತ್ರ ನಾನ್ಯೋಕ್ತಿರ್ದೃಶ್ಯತೇ| ಕ್ವಚಿದ್ದೃಶ್ಯಮಾನೇಷ್ವಪಿ ನ ಸಾ ಪ್ರಸ್ಫುಟಾ| ಕೃಪಯಾ ಭವತಾ ಪುನಸ್ಸುಭಾಷಿತಭಾಂಡಾಗಾರಾದಿಷು ವಿವಿಧಾನ್ಯೋಕ್ತಯಃ ಪರಿಶೀಲನೀಯಾಃ|

 21. ನೀರೊಳಗೆ ಸುಣ್ಣಮಂ ಕದಡಿರಲ್,ಪಾಲಂತೆ
  ತೋರಿದೊಡಮಪ್ಪುದೇಂ ಸವಿಯ ಕ್ಷೀರಂ ?
  ಕ್ಷಾರತ್ವಮಿರೆ,ರೂಪಸಾಮ್ಯದಿಂದೇಂ ಫಲಂ ?
  ಶಾರದೆಯನರ್ಚಿಸಲ್ಕಿದು ಯೋಗ್ಯಮೇಂ ?

  (ಅಂತಃಸತ್ವವನ್ನೊಳಗೊಂಡಿರದ ಬಾಹ್ಯಾನುಕರಣೆ ನಿಷ್ಪ್ರಯೋಜಕವೆಂಬುದನ್ನು ಕ್ಷೀರಾನ್ಯೋಕ್ತಿಯ ಮೂಲಕ ತಿಳಿಸಲು ಯತ್ನಿಸಿರುವೆ.ದಯಮಾಡಿ ತಪ್ಪಿದ್ದಲ್ಲಿ ತಿಳಿಸಿರಿ.)

  • ದಯಮಾಡಿ ಅನ್ಯೋಕ್ತಿಯ ಲಕ್ಷಣವನ್ನು ಮತ್ತೆ ಚೆನ್ನಾಗಿ ಗಮನಿಸಿರಿ.

   • ನಿಮ್ಮ ಸಲಹೆಗಾಗಿ ಧನ್ಯವಾದ,ಗುರುಗಳೆ.ಮತ್ತೆ ಲಕ್ಷಣವನ್ನುಗಮನಿಸಿ ಇನ್ನೊಂದು ಕಿರಿಯ ಪದ್ಯ ಬರೆಯುತ್ತೇನೆ.ದಯಮಾಡಿ ಪರಿಶೀಲಿಸಿರಿ.

 22. ಕಳೆದ ಭಾನುವಾರದ ’ರಾಗ’ ರ ಸಾವಿರದ ಅವಧಾನದ ಆಶುಕವಿತಾವಿಭಾಗದಲ್ಲಿ “ಕಾಂಗ್ರೆಸ್ ಹುಲ್ಲಿನ” ಬಗ್ಗೆ ಅನ್ಯೋಕ್ತಿಯನ್ನು ಕೇಳಿದ್ದೆ. ಆಶುವಾಗಿ ಉತ್ತಮವಾದ ಎರಡುಪದ್ಯಗಳೇ ಅಲ್ಲಿ ಅವರಿಂದ ಉಕ್ತವಾದವು. ಅದು ಪ್ರತಿಭೆ. ಏಕಾಂತವಾಗಿ ಕುಳಿತು ’ತಯಾರಿಸುವ’ ನಮ್ಮ ಪದ್ಯಗಳು ಬರೀ ಪ್ರಭೆ. ಕಾಂಗ್ರೆಸ್ ಹುಲ್ಲನ್ನು ಕಾದ ಸೀಸಕ್ಕೆ ಹಾಕಿದ ಈ ಪದ್ಯವನ್ನು, ಅನ್ಯೋಕ್ತಿ ಕುರಿತ ಈ ವಾರದ ವಿಷಯಕ್ಕೆ ಸಂಗತವೆಂದು ಇಲ್ಲಿ ಹಾಕಿದ್ದೇನೆ.

  ಬೇರ್ಪಡದ ಶಿವಭವಾನಿಯ ಚುಂಬನಕೆ ಜಾರಿ ಜಾರಿಣಿಯೊಲಂಟಿತೇಂ ಕಾಲಕೂಟಂ
  ಸರ್ಪಸುತ್ತಿನ ವತ್ಸನಾಭಿಯೆನೆ ಹರುಷಮೈ ಮೈವೆತ್ತು ಕೆರಳಿತ್ತೆ ಗರಳ ಸಸ್ಯಂ
  ದರ್ಪ ದೌರ್ಜನ್ಯ ವಾಮಾಚಾರದಿಂದಿರೆ ಯಿರದೆಲೆ ಮೋಹಿಸಿ ಸ್ವಾರ್ಥ ಪೆತ್ತಬೀಜಂ
  ಅರ್ಪಿಸಲಧೋಲೋಕ ಕ್ಷುದ್ರ ಹಣ್ಣಿನಹುಣ್ಣು ಹುಣ್ಣಾಗಿ ಕಣ್ಣರಾಜೀವಮಾಯ್ತೆ

  ಪಿಡಿದ ರಾಹುಲತೆ ಗಾಂಧರ್ವ ದಿಂದ ವೃದ್ಧಿ
  ಬಿಡಿಸೆ ಬಂಧವ ನಮೋ ದಿವ್ಯ ಕಾರ್ಯಸಿದ್ಧಿ
  ಮಿಡಿಯಲೀ ಭೂಮಿ ಹೃತ್ಕಮಲ ಕೈಯ ಮುಗಿವೆ
  ಬಿಡದೆ ಬೇರೆತ್ತಿ ಸುಡುವನಕ ಈಗಲಗಿವೆ

  ಸೀಸಪದ್ಯದ ಎರಡು, ಮೂರು, ನಾಲ್ಕನೆಯ ಪಾದಗಳಲ್ಲಿ ಮತ್ತು ತೇಟಗೀತಿಯ ಮೊದಲ ಪಾದದಲ್ಲಿ ರಾಕ್ಷಸ ಸಸ್ಯದ ಮೂಲ “ನಾಮಗಳು” ಅಡಗಿವೆ ! ತೇಟಗೀತಿಯ ಮೂರನೆಯ ಮತ್ತು ನಾಲ್ಕನೆಯ ಪಾದಗಳಲ್ಲಿ “ವಿಮೋಚನೆಯ” ಮಾರ್ಗ ಸೂಚಿತ. ನಾಲ್ಕನೆಯಪಾದದಲ್ಲಿ ನಾವೆಲ್ಲೆರೂ ಮಾಡಬೇಕಾದ ಕಾರ್ಯದ ಸುಳಿವಿದೆ. ಕೈಯ ಮುಗಿವೆ = ಕೈನ ವಿನಾಶ ನಿಶ್ಚಯ ಎಂದೂ ಆಗುತ್ತದೆ.

  ವತ್ಸನಾಭಿ = ತೀವ್ರವಾದ ವಿಷಸಸ್ಯ
  ಅಧೋಲೋಕದಲ್ಲಿ “ದರ್ಪ ಮತ್ತು ದೌರ್ಜನ್ಯ” ಎರಡೂ ಸೇರಿ ವಾಮಾಚಾರ ಮಾಡಿಕೊಂಡು ಇರಲಾಗಿ ’ಸ್ವಾರ್ಥ’ ಅದನ್ನು ಮೋಹಿಸಿದಾಗ ಹುಟ್ಟಿದ ಬೀಜ. ಅಧೋಲೋಕ ಆ ಕ್ಷುದ್ರ ಹಣ್ಣನ್ನು ತನ್ನ ಮೇಲಿನ ಭೂಮಿಗೆ ಅರ್ಪಿಸಿದಾಗ, ಭೂಮಿ ಗಾಯಗೊಂಡು ಕಣ್ಣಹೂವಾಯ್ತು! ಪಿಡಿದ ರಾಹುಲತೆ..ಅಗೆದುನೋಡಲು ಕಾಣುವ, ಬಳ್ಳಿಯಲ್ಲದಿದ್ದರೂ ರಾಹು ಬಡಿದ ಲತೆಯಂತೆ ಭೂಮಿಯೊಳಗೇ ಕಾಣಿಸದೆ ಹಬ್ಬುವುದು.

  ವಿವರಣೆ ಅತಿಯಾಯ್ತೇನೋ. ಕ್ಷಮೆಯಿರಲಿ.

 23. ಬಹಳ ದಿನಗಳಾದಮೇಲೆ ಬರೆಯುತ್ತಿರುವುದರಿಂದ ಎರಡು ಪದ್ಯಗಳನ್ನು ಹಾಕುತ್ತಿದ್ದೇನೆ.

  ಹೊಳ್ಳರ ಮನೆಯಲ್ಲಿ ನಡೆದ ಅವಧಾನಕ್ಕಾಗಿ ಮಾಡಿದ ಪದ್ಯ

  नोच्चैर्वक्ति न नृत्यति ह्यतिगुरुर्न त्वस्ति पारावत
  पुच्छे वर्णबहुत्वमस्ति न हि यत्तद्धेतुना सर्वथा
  रक्ताक्षोऽपि स भस्मदेह्यपि तथा नीलोऽस्ति कण्ठेऽप्यहो
  न प्राप्तः खलु नीलकण्ठ इति तन्नाम क्षितौ बर्हिवत्

  ಹೇ ಪಾರಿವಾಳವೇ ನೀನು ಜೋರಾಗಿ ಶಬ್ದ ಮಾಡುವುದಿಲ್ಲ, (ಎಲ್ಲರಿಗೂ ತೋರುವಂತೆ) ನರ್ತಿಸುವುದಿಲ್ಲ, ದೊಡ್ಡದಾಗಿಯೂ ಸಹ ಇಲ್ಲ, ಬಾಲದಲ್ಲಿ ತುಂಬಾ ಬಣ್ಣಗಳಿಲ್ಲ, ಅದರಿಂದಲೇ ರಕ್ತಾಕ್ಷನಾಗಿಯೂ (ಕೆಂಪು ಕಣ್ಣುಗಳಿದ್ದರೂ ) ಭಸ್ಮದೇಹನಾಗಿಯೂ (ಬೂದುಬಣ್ಣದ ದೇಹವಿದ್ದರೂ) ಕಂಠದಲ್ಲಿ ನೀಲಿಯಿದ್ದರೂ ನಿನಗೆ ನವಿಲಿನಂತೆ ನೀಲಕಂಠ ಎಂಬ ಹೆಸರು ಸಿಗಲಿಲ್ಲ.
  ಮತ್ತೊಂದು ಪದ್ಯ

  आसृष्ट्या द्युमणिर्जगत्प्रतिदिनं संदीपितोऽपि स्वयम्
  आसृष्ट्या जगतीतलं द्युमणिना संदीपितं प्रत्यहम्
  जानन्तोऽपि निरन्तरं क्षितिजना नालोकयन्ते रविं रविम् |
  संगत्या याकस्मात् भवति क्षणे नभसि सा विद्युल्लताश्चर्यता तां विद्युल्लतां विस्मया-
  मुद्ग्रीवाःदृश्यन्ते परिविस्मिता बहुजना ऊर्ध्वीकृतग्रीवधाः बहुजनाः पश्यन्ति हा सर्वथा ||

  (आसृष्ट्या जगतीतलं द्युमणिना संदीपितं प्रत्यहम् (इति) निरन्तरं जानन्तः अपि क्षितिजनाः रविं न आलोकयन्ते | या अकस्मात् नभसि क्षणे भवति तां विद्युल्लतां विस्मयां (इति) परिविस्मिताः उद्ग्रीवाः बहुजनाः सर्वथा पश्यन्ति)
  ಆದಿಕಾಲದಿಂದಲೂ ಸೂರ್ಯನು ತನ್ನ ಬೆಳಕಿನಿಂದ ಜಗತ್ತನ್ನು ಪ್ರತಿದಿನ ಬೆಳಗುತ್ತಿದ್ದರೂ ನಿರಂತರವಾಗಿ ಅವನ ಪರಿಚಯವಿದ್ದರೂ ಭೂಲೋಕದ ಜನರು ಅವನನ್ನು ನೋಡುವುದೇ ಇಲ್ಲ. ಆದರೆ ಯಾವಾಗಲೋ ಆಕಾಶದಲ್ಲಿ ಮೂಡುವ, ಕ್ಷಣಮಾತ್ರ ಇರುವ ವಿದ್ಯುಲ್ಲತೆಯನ್ನು ಎಲ್ಲರೂ ಮೂಕವಿಸ್ಮಿತರಾಗಿ ತಲೆಯೆತ್ತಿ ನೋಡುತ್ತಾರೆ.

  ತಪ್ಪುಗಳಿದ್ದರೆ ತಿದ್ದಿ

  • ಒಂದೆರಡು ಸಣ್ಣ ಪುಟ್ಟ ಲೋಪಗಳಿವೆ.ಅವನ್ನು ದೂರವಾಣಿಯಲ್ಲಿಯೇ ತಿದ್ದಬಹುದು. ಉಳಿದಂತೆ ಪದ್ಯಗಳ ಅರ್ಥಸ್ವಾರಸ್ಯ ಮಾತ್ರ ಅತ್ಯದ್ಭುತ.

   • ಧನ್ಯವಾದಗಳು,
    ನೀವು ನಿನ್ನೆ ಹೇಳಿರುವ ಸವರಣೆಗಳಲ್ಲಿ ನೆನಪಿರುವುದನ್ನು ಮಾತ್ರ ಮಾಡಿದ್ದೇನೆ. ಮತ್ತೆ ಇನ್ನೇನಿದ್ದರೂ ಕೇಳಿ ಪುನಃ ಸವರಣೆ ಮಾಡುತ್ತೇನೆ

    • ಎಲ್ಲ ಚೆನ್ನಾಗಿದೆ. ಆದರೆ ಮೂರನೆಯ ಪಾದದಲ್ಲಿ “ವಿಸ್ಮಯಾಂ” ಎಂದು ಮಿಂಚಿಗೆ ಕೊಟ್ಟ ವಿಶೇಷಣದ ಯುಕ್ತತೆ ತಿಳಿಯಲಿಲ್ಲ.

  • ರಾಘವೇಂದ್ರ, ಬಹಳ ಚೆನ್ನಾಗಿದೆ ಪದ್ಯ

 24. ಕರಿಬಣ್ಣ ತನದೆಂಬ ಜಂಬವೇಂ ? ವಾಯಸನೆ,
  ಸರಿಕತಾಂ ಕೋಗಿಲೆಗದೆಂಬ ಭ್ರಮೆಯೆ?
  ಬರುವನು ವಸಂತತಾಂ ತೆರೆದಿಡಲು ಸತ್ಯವನು,
  ಹರಿದಾಡು ಸಗ್ಗದೊಳಗಲ್ಲಿವರೆಗೆ!

  • ಇಲ್ಲಿ ವಸ್ತುನಾವೀನ್ಯವಿಲ್ಲದಿದ್ದರೂ ಅನ್ಯೋಕ್ತಿತ್ವವು ಮಾತ್ರ ಪ್ರಸ್ಫುಟವಾಗಿದೆ.

  • ಇಲ್ಲಿ ವಸ್ತುನಾವೀನ್ಯವಿಲ್ಲದಿದ್ದರೂ (ಅವೇ ಕಾಗೆ-ಕೋಗಿಲೆಗಳು ಬಂದಿರುವ ಕಾರಣ:-) ಅನ್ಯೋಕ್ತಿತ್ವವು ಮಾತ್ರ ಪ್ರಸ್ಫುಟವಾಗಿದೆ.

   • ಧನ್ಯವಾದಗಳು.ಸರ್.
    ಮತ್ತೆ copy ಹೊಡೆಯದಿರಲು ಯತ್ನಿಸುವೆ. 🙂

   • ಕಾಗೆ-ಕೋಗಿಲೆಸಂತತಿಗಳೆಲ್ಲ ಹೊಡೆಯುತ್ತೆ
    ಮಾಗಿರಲ್ ಕಾಪಿಯಂ ಪಿತೃಗಳಿಂ ತಾಂ|
    ಲೋಗರೆಂದಿಗುಮದನೆ ಮೆಚ್ಚುವರ್ ಬಳಸುವರ್
    ಮೇಗಳದ ದೃಷ್ಟಾಂತಮೆಂದರಿಯುತುಂ||

 25. ಅದೇಕೋ ಬಹಳಷ್ಟು ಮಂದಿ ಪದ್ಯಪಾನಿಗಳಿಗೆ ಅಪ್ರಸ್ತುತಪ್ರಶಂಸಾಲಂಕಾರವು ಸ್ಪಷ್ಟವಾದಂತಿಲ್ಲ. ಅನ್ಯೋಕ್ತಿಯೆಂಬುದು ಒಂದು ವಿಶಿಷ್ಟಸಾಹಿತ್ಯಪ್ರಕಾರ. ಅದು ಕೇವಲ ಅಪ್ರಸ್ತುತಪ್ರಶಂಸಾಲಂಕಾರವನ್ನೊಂದನ್ನೇ ಆಶ್ರಯಿಸಿ ಬೆಳೆದಿರುವುದು ಅವಿಸ್ಮರಣಿಯಾಂಶ. ಅಪ್ರಸ್ತುತಪ್ರಶಂಸೆಯಲ್ಲಿ ಪ್ರಕೃತವೆಂದೂ ವಾಚ್ಯವಾಗದು (it never becomes explicit).ಆದರೆ ಅಪ್ರಕೃತವು ಮಾತ್ರ ವಾಚ್ಯವಾಗುತ್ತದೆ. ಇಲ್ಲಿ ಹೆಚ್ಚಿನ ಗೆಳೆಯರು ಎರಡನ್ನೂ ವಾಚ್ಯ ಮಾಡುತ್ತಿದ್ದಾರೆ. ಅಲ್ಲದೆ ಪ್ರಕೃತವು ಗಾಢವಾದ ಲೋಕಪರಿಶೀಲನೆ, ವಿಧಿವಿಡಂಬನೆ, ವಿಟಕತೆ ಮುಂತಾದುವುಗಳಿಂದ ಹೊಮ್ಮಿದ್ದು, ಈ ಮೂಲಕ ಅತ್ಯಂತ ಸೂಕ್ಷ್ಮವೂ ಕಟುವೂ ಆದ ನಿಷ್ಠುರಸತ್ಯಗಳೂ ಲೋಕನೀತಿಯೂ ಧ್ವನಿತವಾಗುತ್ತವೆ. ಹೀಗಾಗಿ ಅನ್ಯೋಕ್ತಿಯು ಲೋಕವೈಷಮ್ಯಕ್ಕೆ ಸದಾ ಕನ್ನಡಿ ಹಿಡಿಯುತ್ತದೆ. ಮಾತ್ರವಲ್ಲ, ಅಗ್ಗದ “ವ್ಯಂಗ್ಯ (cheep satire or sarcasm) ಆಗದೆ
  ಮಾರ್ಮಿಕವಾದ ಸಮಾಜವಿಮರ್ಶೆಯೂ ಆಗಿರುತ್ತದೆ. ಅದು ತುಂಬ ನವುರಾದ ಭಾಷೆಯಲ್ಲಿದ್ದರೂ ಹರಿತವಾಗಿ ಸ್ಫುರಿಸುತ್ತದೆ. ಒಟ್ಟಿನಲ್ಲಿ ಅನ್ಯೋಕ್ತಿಯು ಧ್ವನಿಪ್ರಧಾನವಲ್ಲದಿದ್ದರೂ ಗುಣೀಭೂತವ್ಯಂಗ್ಯವೆಂಬ ಪ್ರಕಾರಕ್ಕೆ ಸೇರುವ ಸಾರ್ಥಕಾಲಂಕಾರಸಾಹಿತ್ಯ.

  • ಗಣೇಶ್ ಸರ್, ತಿಳಿಸಿದ್ದಕ್ಕಾಗಿ ಧನ್ಯವಾದಗಳು, ಇದೇ ಹಿನ್ನಲೆಯಲ್ಲಿ ಅನ್ಯೋಕ್ತಿಗಾಗಿ ಮರಳಿ ಯತ್ನವ ಮಾಡುತ್ತಿದ್ದೇನೆ, ಸರಿಯಿದೆಯೇ ತಿಳಿಸಿಕೊಡಿರಿ, ತಪ್ಪಿದ್ದರೆ ತಿದ್ದಬೇಕು

   ಎನಿತು ಬರಿಸಮೀ ನದಿಯೊಳ್
   ನೆನೆಯುತೆ ತಿಳಿಯಂ ಪ್ರವಾಹಮಂ ಕಂಡೆಯಲಾ
   ಇನಿತುಂ ಮಾರ್ದವಮಿರದೆನೆ
   ತನುವೊಳ್ ತಾಳ್ದಪೆ ಕಠೋರತೆಯನೇ ಶಿಲೆಯೇ

  • ನೀರೊಳ್ ನರಳ್ದಪ ಗಾತ್ರಮ-
   ನಾರೋ ರಕ್ಷಿಪೆನೆನುತ್ತೆ ಕರಮಂ ನೀಡಲ್
   ಸಾರುತೆ ಕೊಂಡಿಯ ವಿಷದಾ-
   ಕ್ಷಾರಮನೊಡ್ಡಲ್ಕೆ ಪೋಪೆ ತರಮೇ ದ್ರೌಣೀ

   ನರಳ್ದಪ ಶಿ ದ್ವಿ
   ದ್ರೌಣೀ – ಚೇಳಿನ ಸಂಬಂಧಿಕನೇ

 26. ಮುಳುಗೆ ನಿಚ್ಚಮು ಪಶ್ಚಿಮದೊಳಂ
  ಪೊಳೆವ ಸೂರ್ಯಗೆ ಭ್ರಮೆಯದಲ್ಲವು
  ಗಳಿಸೆ ಪೊಗಳಿಕೆ ನಿಷ್ಠ ತಾಂ ಕರ್ತವ್ಯದೊಳಗೆನುತುಂ|
  ತೊಳಗಿಗಾ ಪಶ್ಚಿಮದ ದೇಶದ
  ಸೆಳೆತಕಾಂತಿಹ ಮೂಡಣರವೊಲ್
  ಪುಳಕಗೊಳ್ಳುತಲಾ ದಿಶೆಗೆ ಸಾರುವನು ನೇಸರನು||

  The reason for the sun sett(l)ing in the west is not his punctual trait; rather he too is bound Westward (USA) just as the rest of the world is.

  • arthavaaguttilla:-)

  • ಪುನಾರಚಿಸಿದ್ದೇನೆ. ಈಗ ಸರಿಯಾಗಿದೆಯೆ, ತಿಳಿಸಿ

  • ಅಯ್ಯಯ್ಯೋ!! ನಿಮ್ಮ ಪದ್ಯದ ಉತ್ತರಾರ್ಧದಲ್ಲಿ ನೀವೇ ಪ್ರಕೃತಾರ್ಥವನ್ನು ವಾಚ್ಯವಾಗಿಸಿಬಿಟ್ಟಿರಲ್ಲಾ!! withheld result is now announced and it is unfortunately a failure:-(
   ಇದನ್ನು ಹೇಗೆ ಅಪ್ಪಟ ಅನ್ಯೋಕ್ತಿಯನ್ನಾಗಿಸಬಹುದೆಂಬುದನ್ನು ನಾನೇ ರಚಿಸಿ ತೋರಿಸುವೆ.

   • ಪಶ್ಚಿಮದೇಶಗಾಮಿಗಳಾಗುತ್ತಿರುವ ಪೂರ್ವದೇಶದ ಮೇಧಾವಿಗಳನ್ನು
    ಚುಚ್ಚುವ ಇಂಗಿತವೇ ಇಲ್ಲಿ ಪ್ರಕೃತಾರ್ಥ. ಇದನ್ನು ವಾಚ್ಯವಾಗಿಸದೆ ಸೂರ್ಯನ ಪಶ್ಚಿಮಗಾಮಿತೆಯೆನ್ನುವ ಅಪ್ರಕೃತವನ್ನು ಮಾತ್ರ ವಾಚ್ಯವಾಗಿಸಿ ರೂಪಿಸಿದ ಈ ಭಾಮಿನೀಷಟ್ಪದಿಯು ಅನ್ಯೋಕ್ತಿಯ ಪರಿಯನ್ನು ಸ್ಪಷ್ಟವಾಗಿಸುವುದೆಂದು ಭಾವಿಸುವೆ.

    ಸರ್ವದಾ ಕರ್ತವ್ಯಪಾಲನಧೂರ್ವಹನದಿಂ ಪಶ್ಚಿಮಾಶೆಯೊ-
    ಳೊರ್ವನೇ ನೀಂ ಸಾಗಿ ತಂಗುವೆಯೆಂದು ತಿಳಿದಿರ್ದೆಂ |
    ಪರ್ವಿದುದೆ ಪಶ್ಚಿಮದ ಕಾಮನೆ ಸರ್ವಸಾಕ್ಷಿಯೆ! ನಿನಗಮಯ್ಯೋ!
    ಪೂರ್ವಕೇ ಸಂಬದ್ಧರಿನ್ನಾರುಂಟು ಜಗವಿದರೊಳ್?

    (ಧೂರ್ವಹನ = ಭಾಧ್ಯತೆಯನ್ನು ತಾಳುವುದು, ಆಶೆ = ಬಯಕೆ, ದಿಕ್ಕು, ಸರ್ವಸಾಕ್ಷಿ = ಸೂರ್ಯ, ಕಾಮನೆ = ಬಯಕೆ)

   • Fail ಆದ ನಾನು just pass ಆದ ಚೀದಿಯವರಲ್ಲಿ ಪಾಠ ಕಲಿಯುವುದೇ ಲೇಸು 🙁
    ಹೀಗೆ ನಮ್ಮ ಪದ್ಯದ ಕೊರತೆಯಿಂದ ಆರಂಭಿಸಿ ಹೇಳಿದರೆ, ತಿದ್ದುಕೊಳ್ಳಲು ತುಂಬ ಸಹಕಾರಿ. ಧ್ಯನ್ಯವಾದ ಸರ್.

 27. ಗುಡುಗುಡು ಸದ್ದನು ಮಾಡುವ ಜಲಧರ!
  ಒಡಲದು ನಿನ್ನದು ಹೇಗಿಹುದು?
  ನಡುಗಿಸಿ ಎಲ್ಲರ, ಹೆದರಿಸಿ ಬೆದರಿಸಿ
  ಕಡೆಗೂ ಕಂಬನಿ ಸುರಿಸುವೆ ನೀ!

  (ಈ ಅನ್ಯೊಕ್ತಿಯೂ ಮೊದಲೇ ಇದ್ದಿದ್ದಿರಬಹುದು 🙂 )
  (ನೋಡಲು ಗಟ್ಟಿಗರಾಗಿದ್ದವರ ಅಂತರಂಗ)

 28. ತೇಜವೋಟದೊಳಾನು ತಂದುದು
  ಮೋಜ, ಹಾಯ್ದಿರೆ ಗಾಜ ಕಂಡುದು
  ಸೋಜಿಗವ ತನ್ನದೆಯೆ ಬಿಂಬದ ಬಿಂಕಬಿನ್ನಾಣ ।
  ಗೋಜದೊಳಗುಳಿಯೆಸಮದೂರದೆ
  ಸಾಜ ತೋರುದು ಹಾಯಲದು ಬರಿ
  ಗಾಜಿನೊಳಗೆನ್ನೆದೆಯ ಭಾವುಕ ಭಾವಬಾಂಧವ್ಯ ।।

  (ಕನ್ನಡಿ ಮತ್ತು ಬರಿಗಾಜಿನ ಮೂಲಕ ಹರಿವ ಬೆಳಕಿನ ಸ್ವಭಾವ (ಪ್ರತಿಫಲನ/ಪಾರದರ್ಷಕತೆ)ದೊಡನೆ ಮನುಜ ಹೃದಯದ ಭಾವ ಸ್ವಭಾವವನ್ನು ಬಿಂಬಿಸುವ/ಹಾಯಿಸುವ ಪ್ರಯತ್ನ )

  • ವಾಚ್ಯವಾಯಿತಲ್ಲಾ!! ಅನ್ಯೋಕ್ತಿಯು ಅಳಿಯಿತಲ್ಲಾ!!!

   • ಹೌದು ಗಣೇಶ್ ಸರ್, ಅನ್ಯೋಕ್ತಿಯ ರೂಪರೇಷೆ ಅರ್ಥವಾದಂತನ್ನಿಸಿದರೂ, ಯಾವೊಂದನ್ನೂ ಪದ್ಯರೂಪದಲ್ಲಿ ತರಲು ಸಾದ್ಯವಾಗುತ್ತಿಲ್ಲ. ಪ್ರಯತ್ನ ಮುಂದುವರಿಸುವೆ. ತಿದ್ದಿದ ಪದ್ಯ:

    ತೆರೆಬಳಿದಗಾಜ ನೀ ತೂರಲಾಗದೆ ಬೆಳಕೆ
    ಸರಿದೂರದೊಳು ಕಾಣ್ವೆ ನಿನ್ನನೀನು।
    ಬರಿಗಾಜದಾಗಿರಲು ನೀ ತೂರಿಯದರೊಳಗೆ
    ಪರಿಪೂರ್ಣವನು ತೋರ್ವೆಯಲ್ಲವೇನು?

    (ತೆರೆಬಳಿದಗಾಜು = ಕನ್ನಡಿ)

    • ಇದೀಗ ಪದ್ಯವು ಸಲ್ಲಕ್ಷಣವಾದ ಅನ್ಯೋಕ್ತಿಯಾಗಿದೆ.
     ಆದರೆ ಕಾಣ್ವೆ ಮತ್ತು ತೋರ್ವೆ ಪದಗಳು ವ್ಯಾಕರಣಶುದ್ಧರೂಪಗಳಲ್ಲ. ಅವನ್ನು ನಡುಗನ್ನಡದಲ್ಲಿ ಕಾಂಬೆ ಮತ್ತು ತೋರುವೆ ಎಂದಾಗುತ್ತವೆ. ಹಳಗನ್ನಡದಲ್ಲಿ ಮತ್ತೂ ಬೇರೆಯೆ ರೂಪಗಳನ್ನು ಪಡೆಯುತ್ತವೆ. ನಿಮ್ಮ ಸದ್ಯದ ಪದ್ಯದಲ್ಲಿ ಕಾಂಬೆ ಎಂದು ತಿದ್ದಿದಾಗ ಛಂದಸ್ಸೇನೂ ಎಡವದು. ಆದರೆ ತೋರುವೆ ಎಂದು ಸವರಿಸಿದಾಗ ಛಂದಸ್ಸು ಸೀಳುತ್ತದೆ.

     • ಧನ್ಯವಾದಗಳು ಗಣೇಶ್ ಸರ್,
      “ಕರುಣಾಳು ಬಾ ಬೆಳಕೆ …… ” ಹಾಡು ನೆನಪಾಗುತ್ತಿದೆ.
      (“ತೋರ್ವೆ”ಪದ ನೋಡಲೂ ಸರಿತೋರದೆ “ರೆ”ಗೆ “ವ”ಒತ್ತು ಹಾಕಲು ಬಹಳ ಪ್ರಯತ್ನಿಸಿದ್ದೆ!!)

      ತೆರೆಬಳಿದಗಾಜ ನೀ ತೂರಲಾಗದೆ ಬೆಳಕೆ
      ಸರಿದೂರದೊಳು ಕಾಂಬೆ ನಿನ್ನನೀನು।
      ಬರಿಗಾಜದಾಗಿರಲು ನೀ ತೂರಿಯದರೊಳಗೆ
      ಪರಿಪೂರ್ಣವನು ತೋರುತಿರುವೆಯೇನು ? / ತೋರಬಲ್ಲೆನೀನು ।।

 29. ಜಲದಾತರೊಳ್ ಶ್ರೇಷ್ಠ ತಾನೆಂಬ ಭಾವವೇಂ?
  ನೆಲದಿಂದಲೆತ್ತರದೊಳಿರ್ಪ ಸೊಕ್ಕೇಂ?
  ನಲಿವನದಿ,ಕೆರೆಕೊಳ್ಳ,ಜಲಧಿಗಳದಿರದಿರಲು,
  ಜಲಧರನೆ! ಜಗದಿ ನೀನಿರುವುದುಂಟೇಂ?

  • ಶ್ರೇಷ್ಟತೆ – ೪ ಮಾತ್ರೆ. ‘ಜಲದಾತನೆಂದೆನುತೆ ಶ್ರೇಷ್ಟತೆಯ ಮೆರೆವೆಯೇಂ?’ ಎಂದರೆ ಇನ್ನೂ ಸೊಗಯಿಸುತ್ತದೆ. ಪದ್ಯ ಚೆನ್ನಾಗಿದೆ; ಅನ್ಯೋಕ್ತಿಯೆ ಎಂದು ತಿಳಿಯದು.

   • ತಮ್ಮ ಕಾಳಜಿಗೆ ಧನ್ಯವಾದಗಳು. ಮಾತ್ರೆಯನ್ನು ಕೊಟ್ಟಿದ್ದೇನೆ.

 30. ಧರೆಯನೇ ಸುಡುವವೊಲ್ ಬಿಸಿಲುನಭದಿಂಬರಲು
  ಬರಗಾಲದೊಳ್ ಜನರುನೋಯುತಿರಲು|
  ಕರೆತಂದ ವರುಣ ಕಾರ್ಮೋಡಗಳನೊಡೆಯಲ್ಕೆ
  ಮರೆಯಾಯ್ತು ಬಿಸಿಲು ಮಳೆಯೊಳು ಸೇರುತ|

  Not sure if there is anyOkti here! please correct me if I am wrong..

  • ವರುಣನೈತಂದ ಕಾರ್ಮೋ…….
   Verse is good. But I am as good as you in discerning anyokti!

   • It is a feeble annyOkti…no sufficient punch:-)

    • ಅಯ್ಯೋ ಈ ಬಾರಿ ಬರೀ ೩೫% ನಲ್ಲಿ Pass! Will try to do better next time!

    • ಚೀದಿ,
     ನೀವು ಪಾಸ್ ಅಂತಲಾದ್ರೂ ಅದಿರಿ. ನನ್ನ ಫಲಿತಾಂಶ withheld ಆಗಿದೆ! Revaluationಗೆ ಅರ್ಜಿ ಹಾಕಿದ್ದೇನೆ (ಸಂ.26ರಲ್ಲಿ).

 31. ಘನತೆಯಿಂ ಮೆರೆಯುವ ಗುಲಾಬಿಯೆ,
  ಮೊನೆಯ ಮುಳ್ಳಂ ಪೊರ್ದಿ ಮರೆಯೊಳ್,
  ಸನಿಹಕೆಳೆಯುವೆ ಸಕಲ ಜೀವರ ಮನವ ಮೋಹಿಸುತುಂ |
  ಕನಸಿನೊಳ್ ನಿನ್ನನ್ನೆ ಬಯಸಲ್,
  ನನಸಿನೊಳ್ ದೊರಕಿತೆನೆ ಹಿಗ್ಗಿರೆ,
  ಕನಿಕರಿಸದೆಲೆಯವರ ನಿಚ್ಚಂ ಚುಚ್ಚಿ ಕಾಡುವೆಯೇಂ ?! ||

  ( ವಿಷಯಾಸಕ್ತಿಯ ವಸ್ತುವನ್ನು ಪ್ರಕೃತವಾಗಿಸಿ ಗುಲಾಬಿಯ ಅನ್ಯೋಕ್ತಿಯ ಮೂಲಕ ರಚಿಸಿದ ಪದ್ಯ.ದಯಮಾಡಿ ತಪ್ಪಿದ್ದಲ್ಲಿ ತಿಳಿಸಿರಿ.)

 32. ಧೂಮವಂ ದೂರಕ್ಕೆ ತಳ್ಳುತ್ತ ಬೆಳಗಲೇಂ
  ವ್ಯೋಮವನರಿಲ್ಗಳೂ ಸಮನಾಗಿಯೇ,
  ಭೂಮಿಯೊಳಗವುಗಳನು ಕಂಡು , ಕೊಂಡಾಡುವರೆ?
  ಹೇಮಾಂಗಿ ದೂರಕ್ಕೆ ಸರಿವವರೆಗೂ

  ಹೇಮಾಂಗಿ = ಸೂರ್ಯ?
  ಮೋಡವನ್ನು ಚದುರಿಸಿ ಬೆಳಕನ್ನು ನೀಡುವ ಕಾರ್ಯವನ್ನು ರವಿ,ತಾರೆಯರು ಸಮನಾಗಿಯೇ ಮಾಡುತ್ತಲಿದ್ದರೂ, ರವಿಯು ಇರುವವರೆಗೂ ನಕ್ಶತ್ರಗಳು ಕಾಣಿಸಿಕೊಳ್ಳುವದೂ ಇಲ್ಲ.!
  (ಲೋಕದಲ್ಲಿ , ಎಲೆಯ ಮರೆಗಳ ಕಾಯಂತೆ ಇರುವವರು, dominating ವ್ಯಕ್ತಿಗಳು ಮರೆಯಾಗುವವರೆಗೂ ಬೆಳಗುವದೇ ಇಲ್ಲ!)(ಇದು ಎಲ್ಲ ಸಂದರ್ಭದಲ್ಲೂ ಸತ್ಯವಾಗದಿರಬಹುದು!)

 33. ನವೀನಕಲ್ಪನೆಯಲ್ಲದಿದ್ದರೂ ಒಂದೆರಡು ಪ್ರಯತ್ನಗಳು

  ಫಲನ್ತಿ ಕೇಚಿನ್ಮಧುರಂ ತದುಚ್ಚೈಃ
  ತಲೇ ಚ ಕೇಚಿತ್ಸರಲಾನುವಾಪ್ಯಮ್ |
  ಭವನ್ತಿ ಕೇಚಿತ್ ಸುವಿಶಾಲವೃಕ್ಷಾಃ
  ಫಲಂ ನ ತೇಷಾಂ ಭುವಿ ವೋಪರಿಷ್ಟಾತ್ || 1 ||
  (ಕೇಚಿತ್ ವೃಕ್ಷಾಃ ನಾರಿಕೇಲಾದ್ಯಾಃ ಉಚ್ಚೈಃ ಫಲನ್ತಿ. ಕೇಚಿತ್ ತಲೇ ಭೂತಲೇ ಏವ ಸರಲಾನುವಾಪ್ಯಂ ಫಲನ್ತಿ. ಅನ್ಯೇ ಕೇಚಿತ್ ವಿಶಾಲಾಕಾರಾ ಭವನ್ತಿ – ತೇಷಾಂ ಭುವಿ ವಾ ಉಪರಿ ವಾ ಫಲಂ ನಾಸ್ತಿ.)

  ರಭಸಗತೌ ಸಲಿಲಂ ವಿಪುಲಂ
  ಪ್ರಪತನಪಾದಮವಾಪ ಪರಮ್ |
  ತದನು ಗಭೀರದರಂ ಸ್ತಿಮಿತಂ
  ಧರಣಿತಲೇ ಚಲನೇನ ವಿನಾ || 2 ||
  (ಕಾಂಚನ ಅವರ ಐಡಿಯಾ ಪ್ರೇರಿತವಾಗಿ ಇದು .. ರಭವಸದಿಂದ ಜಲಪಾತದಲ್ಲಿ ಬಿದ್ದ ನೀರು ಭೂಮಿಯಲ್ಲಿ ಆಳವಾದ ಗರ್ತವನ್ನು ಮಾಡಿ ನಿಶ್ಚಲತೆಯನ್ನು ಕಾಣುವುದು.)

  • ಅನ್ಯೋಕ್ತಿರ್ನ ಪ್ರಸ್ಫುಟಂ ದೃಶ್ಯತೇ

   • ೨. ಕಶ್ಚಿತ್ ಶಾಸಕಃ ’ಏತತ್ ಕರೋಮಿ, ತತ್ ಕರೋಮಿ’ ಇತ್ಯುಕ್ತ್ವಾ ಧಾರಾಕಾರೋ ಭೂತ್ವಾ ಶಾಸಕಪದಮ್ ಅವಾಪ. ತದನು ರಾಜಕೀಯಸರಸಿ ಗಾಢಂ ರೂಢಃ ನಿಶ್ಚಲಃ ಸನ್ ನ ಕಿಮಪಿ ಪರಿವರ್ತಯತಿ ಇತಿ ಭಾವಃ.

 34. ಸುರಪಥಾತ್ ಸಿತಪುಷ್ಪಹಿಮಂ ಕ್ಷಿತೌ
  ವಿಗತಪತ್ತ್ರತರೋರನುದರ್ಶನಮ್ |
  ಕರುಣಯಾಥ ಜಗಾಮ ತದಾರ್ದ್ರತಾಮ್
  ಇಹ ಘನಾಸಿತರೂಪವವಾಪ ತತ್ ||

  ಸುರಪಥಾತ್ ಶ್ವೇತಪುಷ್ಪಮ್ ಇವ ಹಿಮಂ ಕ್ಷಿತೌ ಭೂಮ್ಯಾಂ ಪತಿತ್ವಾ ವಿಗಲಪತ್ರಸ್ಯ ತರೋಃ ಅನುದರ್ಶನಂ (ಎಲೆಗಳಿಲ್ಲದ ಮರವನ್ನು ನೋಡಿ)
  ಕರುಣಯಾ ಅಥ ತದಾರ್ದ್ರತಾಂ ಜಗಾಮ (ಕರಗಿತು). ಅದೇ ಹಿಮವು ಇಹ ಇಲ್ಲಿ ಘನಮ್ ಅಸಿತಂ (ಬ್ಲಾಕ್ ಐಸ್) ರೂಪಮ್ ಅವಾಪ.
  (ಬ್ಲಾಕ್ ಐಸ್ ಅಪಾಯಕಾರಿ, ಕಣ್ಣಿಗೆ ಕಾಣದಿರುವದರಿಂದ. ಅದರಿಂದ ಜಾರಿ ಬೀಳುವ, ಸ್ಕಿಡ್ ಆಗುವ ಪ್ರಸಂಗಗಳು ಹೆಚ್ಚು.)

  ಭಾವ – ಸುಂದರವಾಗಿ ಕಾಣುವ, ಮೈ ಮರೆಸುವಂತೆ ಮಾತನಾಡುವ ಜನರು ಇಷ್ಟಕಷ್ಟಗಳನ್ನು ಕೇಳಿ ನಮ್ಮವರೇ ಎಂಬ ಪ್ರತ್ಯಯ ಮೂಡಿಸಿ ಆಮೇಲೆ ಬ್ಲಾಕ್ ಐಸಿನಂತೆ ಅಪಾಯವನ್ನುಂಟು ಮಾಡುವರು.

  • ನಿಮ್ಮ ಕಲ್ಪನೆಯು ನವೀನವಾಗಿದೆ; ಪದಪದ್ಧತಿಯೂ ಶುದ್ಧವಾಗಿದೆ. ಆದರೆ ಹಲವು ಬಾರಿ ನಾನಿಲ್ಲಿ ಗಮನಿಸಿರುವಂತೆ ನಿಮ್ಮ ಪದ್ಯಗಳು ಸ್ವಯಂವೇದ್ಯವಾಗದೆ ವ್ಯಾಖ್ಯಾಸಾಪೇಕ್ಷವಾಗುತ್ತವೆ. ವಿಶೇಷತಃ ಇಂಥ ನವೀನಕಲ್ಪನೆಗಳು ಬಂದಿರುವಾಗ! ಆದುದರಿಂದ ಕೂಡಿದಮಟ್ಟಿಗೂ ಪದ್ಯದಲ್ಲಿಯೇ ಅಧ್ಯಾಹಾರಕ್ಕೆ ಆಸ್ಪದವಿಲ್ಲದಂತೆ ಎಲ್ಲವನ್ನೂ ತಿಳಿಸುವ ವ್ಯವಸ್ಥೆಯಾಗಬೇಕು. ಮಾತ್ರವಲ್ಲ,ನೀವು ಬಳಸುವ ಪದಗಳಿಗೆ ನಿಮ್ಮ ವಿವಕ್ಷಿತಾರ್ಥವನ್ನು ಹೊಮ್ಮಿಸುವಂಥ ಶಬ್ದಶಕ್ತಿಯಿದೆಯೇ ಎಂದು ನಿಶ್ಚಯಿಸಿಕೊಂಡಲ್ಲಿ ಒಳಿತು. ಇದು ನಮ್ಮ ಮತ್ತೊಬ್ಬ ಗೆಳೆಯ ಪ್ರಸಾದು ಅವರ ಬರೆಹಗಳಲ್ಲಿಯೂ ಆಗಾಗ ಕಾಣುವ ಕ್ಲೇಶ. ಇಲ್ಲವಾದರೆ ಅಪ್ರತೀತ, ನೇಯಾರ್ಥ, ದುಷ್ಕರ ಮುಂತಾದ ಆಲಂಕಾರಿಕದೋಷಗಳಾಗುತ್ತವೆ.

   • ನೀವು ಹೇಳಿದಂತೆ ಸವರಣೆ ಮಾಡಿದ್ದೇನೆ. ಸ್ವಲ್ಪ ಉದ್ದದ ವೃತ್ತವನ್ನು ಬಳಸಿ ವಿವಕ್ಷಿತಾರ್ಥವನ್ನು ತಿಳಿಸುವ ಪ್ರಯತ್ನ ಇದರಲ್ಲಿ.

    ದೇವಸಮರ್ಪಿತಂ ಸಿತಹಿಮಂ ಭುವಿ ನಯನಶಿವಂ
    ದರ್ಶನತೋ ದಯಾರ್ದ್ರತನು ಯದ್ ವಿಗತದಲತರೋಃ |
    ತೋಯಘನಂ ತಲೇಽಭಿತನುತೇ ತದಸಿತಭರಿತಂ
    ಶೀತಕೃತಂ ಭವನ್ತಿ ಚ ಯತಃ ಸ್ಖಲನಜವಿಪದಃ ||

    ದೇವಸಮರ್ಪಿತಂ ಭುವಿ ಸಿತಹಿಮಂ ನಯನಶಿವಂ ಯದ್ ವಿಗತದಲತರೋಃ ಪತ್ರರಹಿತಸ್ಯ ವೃಕ್ಷಸ್ಯ ದರ್ಶನತಃ ದಯಾರ್ದ್ರತನು ದಯಯಾ ಆರ್ದಂ ತನು ಯಸ್ಯ ತತ್ ಅಸಿತಭರಿತಂ ಶೀತಕೃತಂ ಚ ತೋಯಘನಂ ತಲೇ ಭೂತಲೇ ಅಭಿತನುತೇ ವಿಸ್ತೃತಂ ಭವತಿ ಯತಃ ಯಸ್ಮಾತ್ ತೋಯಘನಾತ್ ಸ್ಖಲನಜವಿಪದಃ ಭವನ್ತಿ.

 35. ಅತ್ತಿಯ ಹಣ್ಣೇ! ನಿನ್ನಯ ಬಣ್ಣಕೆ
  ಮತ್ತಲಿ ಮುತ್ತುವ ಹಕ್ಕಿಗೆ ತಾ
  ಹತ್ತಿರ ಸುಳಿವುದೆ? ನಿನ್ನೊಳಗಡಗಿಹ
  ಮೆತ್ತನ ಹುಳುಗಳ ನಿಜದರಿವು!

  • ಬಲು ಸೊಗಸಾದ ಅನ್ಯೋಕ್ತಿ. ಅಭಿನಂದನೆಗಳು.. ಆದರೆ ಛಂದಸ್ಸು ಯಾವುದೆಂದು ತಿಳಿಯುತ್ತಿಲ್ಲ.

   • ಧನ್ಯವಾದಗಳು.
    ಛಂದಸ್ಸು ಚತುರ್ಮಾತ್ರೆಗಳ ಚೌಪದಿ. ಗತಿ ಸುಭಗತೆ ಏನಾದರೂ ತಪ್ಪಿದೆಯೇ?

    • ಹೌದು; ಗಣವಿಭಾಗದಲ್ಲಿ ಹಿತವಿಲ್ಲ; ಮುಖ್ಯವಾಗಿ ಎರಡನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ.

 36. हे वृक्ष ! त्वं प्रवृद्धः शतमधुऋतुषु प्राप्तवान् वारि भूम्ना
  स्थैर्यं धृत्वा व्यभा भोः ! प्रबलतरमहावायुभिः पीडितोऽपि ।
  झञ्झावातेन विद्धो विदलिततनुः प्राप्तवानायुरन्त्यम्
  नम्राश्चान्ये रमन्ते लघुतरतरवः वायुदेवं प्रणम्य ॥

  (Remembering a poem I had written in 2011 when the East coast of the U.S. was hit by hurricane Irene and a big tree fell in my backyard):
  वासन्तेषु पुनः पुनः समुदितैः राराजितः पल्लवैः
  यो ग्रीष्मेषु विराजते स्म बहुभिः पर्णैर्हरिद्भिर्युतः ।
  सत्कालीनसुवृष्टिसंभृततनुः वृक्षस्स दैत्याकृतिः
  झञ्झावातविभग्नदीनवपुषा शेतेऽद्य पृष्ठाङ्गणे ॥२॥

  • Both the verses are good and technically fulfill the requirements of a vakrOkti. However, in the first verse, pl add a laghu in its third line to meet the metrical requirement.

   • सूचनार्थं धन्यवादः गणॆशवर्य। क्षम्यतां लघुलोपः । अधोलिखितेन पादेन सम्यग्भवेदिति मन्ये ।
    झञ्झावातेन विद्धो विदलिततनुना प्राप्तवानायुरन्त्यम्

 37. ಸಂತಸ ಲೋಕದೆ ತಣ್ಣನ ಮಡುವೊಳು
  ಚಿಂತೆಯಿರದೆ ನೀ ತೇಲುತಿಹೆ!
  ಎಂತಹ ಸುಖಜೀವನವಿದು ಮೀನೇ!
  ಅಂತವೆ! ಬಂದೊಡೆ, ಬಿಸಿಬುವಿಗೆ.

  • ಒಳ್ಳೆಯ ಅನ್ಯೋಕ್ತಿ ಇಲ್ಲಿ ಚತುರ್ಮಾತ್ರಾಗಣಗಳ ಸಂತುಲನವೂ ಸೊಗಸಾಗಿದೆ. ಕಡೆಯಲ್ಲಿ ’ಬಿಸಿಬುವಿಗೆ’ಎಂದರೆ ಮತ್ತೂ ಚೆನ್ನ; ಅರಿಸಮಾಸವೂ ತಪ್ಪಿ ಶಬ್ದಾಲಂಕಾರವೂ ಸಿದ್ಧಿಸುತ್ತದೆ.

 38. One attempt:
  मुग्धान् मृगान् घ्नन्ति वृकाश्च तेषां
  रक्ताननेभ्यः स्रवति क्षतेजं ।
  तथाप्यरण्येषु सदस्सु नूनं
  पतन्ति शब्दाः शमशान्तिमुख्याः ॥

  Innocent animals are killed by wolves whose red mouths drip with blood of the killed. Even then, in the forest assemblies, only the words such as “calmness, peace” fall from their mouths.

  kShatejam – blood.

  We can find a few parallels in the real world. Does it fit an anyokti?

  • Real good anyOkti; very novel idea too. The only pain is that its suggestion is a bitter reality and especially so in the present Indian context:-(

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)