Apr 202014
 

ಚುನಾವಣೆಯ ಚಿಹ್ನೆಗಳಾದ ‘ಕಮಲ, ಕರ, ಆನೆ ಮತ್ತು ಶಂಖ’ ಪದಗಳನ್ನು ಬಳೆಸಿ ಉತ್ತಮವಾದ ರಾಜನ/ರಾಜಧರ್ಮದ ಬಗ್ಗೆ ಪದ್ಯಗಳನ್ನು ಬರೆಯಿರಿ

  47 Responses to “ಪದ್ಯಸಪ್ತಾಹ ೧೦೫: ದತ್ತಪದಿ”

  1. ಅನಿಶಂ ಖದ್ಯೋತಂ ತಾಂ
    ಕನಲಿ ಕರಗಳಿಂದಲೀ ಧರೆಯ ಸಲಹುವವೊಲ್
    ತನುವಂ ತಾನೆ ದಣಿಸಿಯುಂ
    ಜನದ ಮೊಕ ಮಲರುವವೊಲ್ ಪೊರೆವವಂ ರಾಜಂ

    • ಮೊದಲ ಮೂರು ಪಾದಗಳಲ್ಲಿ ಹಳಗನ್ನಡದ ಭಾಷಾಪಾಕವೂ ದತ್ತಪದನ್ಯಾಸವೂ ಮೆಚ್ಚುವಂತಿವೆ. ಆದರೆ ಕಡೆಯ ಸಾಲಿನಲ್ಲಿ ದತ್ತಪದವಿನ್ಯಾಸದ ಜಾಣ್ಮೆ ಚೆನ್ನಿದ್ದರೂ ಭಾಷೆಯ ಹದ ಸ್ವಲ್ಪ ಸಡಲಿದೆ. ಆದರೆ ಚಿಕ್ಕದಾದ ಕಂದದ ಕುಕ್ಷಿಯೊಳಗೆ ಈ ಪರಿಯ ಅರ್ಥವೈಶದ್ಯವನ್ನೂ ಧಾರಾಶುದ್ಧಿಯನ್ನೂ ತಂದಿರುವುದು ಸ್ತುತ್ಯರ್ಹವೆಂಬುದು ನಿಸ್ಸಂಶಯ.

    • ಹೌದು. ಭಾಷೆ ಹಾಗೂ ದತ್ತಪದನ್ಯಾಸ ಚೆನ್ನಾಗಿದೆ.

  2. ತರಲವೃತ್ತ || ಕಮಲದಂದದೆ ರಾಜಕೀಯದ ಪಂಕದೊಳ್ ಮಡಿಮಾಸದಂ-
    ತಮಲಮಾಗಿರಲೊಪ್ಪುಗುಂ ಕರಮಾಳ್ವ ಪೆರ್ಮೆಯನುರ್ಚುತುಂ |
    ಕುಮತಿಯಾನೆಯ ಮೀಹಮಂ ಮಿಗೆ ಪೋಲದಂದದೆ ಕಜ್ಜದೊಳ್
    ಸಮೆವುದಯ್ ನೃಪಧರ್ಮಮಂ ಜಯಶಂಖನಾದಮಿದೇ ಸದಾ !!

    • ‘ರಾಜಕೀಯ ಪಂಕದೊಳ್ ಕಮಲದಂತೆ”
      “ಕುಮತಿಯಾನೆಯ ಮೀಹ”-ತುಂಬಾ ಚೆನ್ನಾಗಿವೆ.

  3. ಸಂಸ್ಕೃತದಲ್ಲಿ ಒಂದು ಚಿಕ್ಕ ಪದ್ಯವನ್ನು ಬರೆಯುತ್ತಿದ್ದೇನೆ. ಕ್ಷಮಿಸಬೇಕು —
    ಯಶ್ಶೋಕಮಲನಾಶಾರ್ಥಂ ಪ್ರಯುಂಕ್ತೇ ಮೃದುಲಂ ಕರಂ |
    ಅನಿಶಂ ಖೇನ ಚಾನೇತುಂ ಸತ್ಕೀರ್ತಿಂ ಯತತೇ ನೃಪಃ ||
    यश्शोकमलनाशार्थं प्रयुङ्क्ते मृदुलं करम् ।
    अनिशं खेन चानेतुं सत्कीर्तिं यतते नृपः ॥

  4. ಪ್ರಜೆಗಳನ್ನು ಅನುಚಿತಮಾರ್ಗದಿಂದ ಉಚಿತಮಾರ್ಗಕ್ಕೆ ತರುವುದೇ ಪರಮಾರ್ಥನೀತಿ. ನಯನಾತ್ ನೀತಿರುಚ್ಯತೇ. ಈ ನೀತಿಯನ್ನು ರಾಜನು ನಿರ್ವಹಿಸುವುದರಿಂದ ಇದು ರಾಜನೀತಿ ಎನಿಸಿತು.
    ಮ.ವಿ||
    ಅನಿಶಂ (ಸದಾ) ಖಾಂಕ(ಸೂರ್ಯ)ಸಮಾನದೀಪ್ತನರಸಂ| ತಾಂ ಕಳ್ತಲಂ ವಾರಿಸು
    ತ್ತನಿಬರ್ ನೀತಿಯ ಮಾರ್ಗದೊಳ್ ಸುಕರದಿಂ| ಸಾಗಿಂ ಗಡೆಂದುಂ ಸದಾ
    ಜನಗಳ್ ಹಾಯದವೋಲತಂತ್ರಪಥಮಂ| ತಾನೆಲ್ಲರಂ ನಡೆಸುವಂ
    ಖನಿಯೀ ರಾಜನ ರಾಜನೀತಿಕಮಲಂ (ಸಮೃದ್ಧಿ)| ರಾಷ್ಟ್ರಕ್ಕೆ ತಾಂ ಸಲ್ಲದೇಂ

    • ಪ್ರಾಯಿಕವಾಗಿ ಪದ್ಯಪದ್ಧತಿ ಚೆನ್ನಾಗಿಯೇ ಇದೆ. ಆದರೆ ಜಿನಸಂ ಎಂದರೆ ಏನು? ಇನ್ನಷ್ಟು ಹಳಗನ್ನಡದ ಬಿಗಿ ಬಂದರೆ ಯುಕ್ತ.

      • ಜಿನಸು = reins ಎಂದುಕೊಂಡಿದ್ದೆ. ನಿಘಂಟುವಿನಲ್ಲಿ ಇಲ್ಲ 🙁 ಆ ಶಬ್ದವನ್ನು ತೆಗದು ಪದ್ಯವನ್ನು ತಿದ್ದಿದ್ದೇನೆ. ಭಾಷೆಯಲ್ಲಿ ಹೆಚ್ಚೇನೂ ಸುಧಾರಣೆಯಿಲ್ಲ.

  5. ಅರಿಗಳಂ ಮದಿಸಿದಾನೆಯವೊಲೀ ಸಮರದೊಳ್
    ಕರವಾಳದಿಂ ವಧಿಸಿ ಜಯಮನಿತ್ತನ್|
    ತೊರೆದಳೈ ವೈರಿಪಡೆಯನುಕಮಲಸಂಜಾತೆ
    ಹರಸುತೆನೃಪಗೆ ಶಂಖನಾದಮೊಳಗಲ್|

  6. ಎಲ್ಲ ದತ್ತಪದಗಳನ್ನೂ ಪ್ರಕಾರಾಂತರವಾಗಿಯೇ ತರುವ ಒಂದು ಪ್ರಯತ್ನ:

    ಈಶಂ ಖರ್ಪರಪಾಣಿಯಾಗುತೆ ನಿಜೌದಾರ್ಯಂ ಸಲಲ್ ಕಾಯ್ವವೊಲ್
    ಕಾಶಿಪ್ಪ ತ್ರಿತಯೋರ್ಜೆಯಿಂದೆ ಪೊರೆಯುತ್ತಾನೆಂಬವೊಲ್ ಲೋಗರಂ |
    ಪೈಶಲ್ಯಪ್ರಿಯನಾಗಿಯುಂ ಪ್ರಜೆಗಳೊಳ್ ತಾಂ ಭೀಕರಂ ವೈರಕೆಂ-
    ದಾಶಾಂತಂ ನಿಜಸೀಮೆಗಂ ಸ್ವಕಮಲೋತ್ತೀರ್ಣಂ ಗೆಲಲ್ ಸಲ್ವನಯ್ ||

    ಖರ್ಪರ = ಮಡಕೆಯ ಮುರುಕು (ಭಿಕ್ಷಾಪಾತ್ರೆ), ಕಾಶಿಪ್ಪ = ಹೊಳೆಯುವ, ತ್ರಿತಯೋರ್ಜೆ = ದೊರೆಗಳಿಗೆಲ್ಲ ಮುಖ್ಯವಾಗಿ ಬೇಕಾದ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿಗಳೆಂಬ ಮೂರು ಶಕ್ತಿಗಳು; ಪೊರೆಯುತ್ತ ಆನ್ ಎಂಬ ವೊಲ್ ಲೋಗರಂ = ಜನರನ್ನೆಲ್ಲ ತಾನೇ ಎಂಬಂತೆ ಕಾಪಾಡುತ್ತಾ, ಪೈಶಲ್ಯ = ಕೋಮಲತೆ, ಆಶಾಂತಂ =ದಿಗಂತ,
    ಸ್ವಕ + ಮಲ + ಉತ್ತೀರ್ಣಂ =ತನ್ನ ಲೋಪದೋಷಗಳನ್ನು ಮೀರಿದವನು.

  7. ಕರತಲಾಮಲಕವಾಗಿರೆ ರಾಜಕಾರಣವು
    ಪರಕೀಯರಮರಿಕೆಯ ಶಂಕೆಯೇಕೈ ।
    ದೊರಕಿಂದುವಮಲ ಸರಕಾರಕಮಲು
    ಭರತಖಂಡವು ಮೆರೆವುದೈ ತಾನೆತಾಂ ।।

    (ಮುಂಬರುವ ದಿನಗಳಲ್ಲಿ ಭಾರತವು “ವಿಶ್ವಗುರು”ವಾಗಿ ಮೆರೆಯಲಿರುವ ಶುಭ ಸೂಚನೆಯನ್ನು ಬಿಂಬಿಸುವ ಪದ್ಯ)

    • ಇದು ಯಾವ ಛಂದಸ್ಸು?

      • ಓ.. ಹೌದು! ತಪ್ಪಾಗಿದೆ ಚೇದಿ, ಪಂಚಮಾತ್ರ ಚೌಪದಿಯಲ್ಲಿ ಪ್ರಯತ್ನಿಸಿದ್ದು. ಸರಿಪಡಿಸಿದ್ದೇನೆ. (ಅಷ್ಟು ಸರಿಯಾಗಲಿಲ್ಲ ಅಲ್ಲವೇ?)

        ಕರತಲಾಮಲಕವಾಗಿರೆ ರಾಜಕಾರಣವು
        ಪರಕೀಯರಮರಿಕೆಯ ಶಂಕೆಯೇಕೈ ।
        ದೊರಕಿರಲುವಮಲ ಸರಕಾರಕಮಲುವಾಗಕಾಣ್
        ಭರತಖಂಡವು ಮೆರೆವುದೈ ತಾನೆತಾಂ ।।

        * ಅಮಲ + ಸರಕಾರಕೆ + ಅಮಲು (ಅಧಿಕಾರ) + ಆಗ

        • ಮೂರನೆಯ ಸಾಲಿನಲ್ಲಿ ಹೆಚ್ಚು ಮಾತ್ರೆಗಳಿವೆ… ಹಾಗೂ ದೊರಕಿರಲುವಮಲ – ದೊರಕಿರಲು+ಅಮಲ – ದೊರಕಿರಲಮಲ ಆಗಬೇಕಲ್ಲವೇ…

        • ೩ನೇ ಸಾಲು ಕ್ಷಿಪ್ರ ಬದಲಾವಣೆಯೊಂದಿಗೆ – ಕಾರಣಕರ್ತ ಚೇದಿ – ನಮೋ !!
          * ದೊರಕಿರಲು”ಕಮಲ” ಸರಕಾರಕಮಲಾಗಕಾಣ್

  8. ನಾಡ ನಾಶಂ ಖಲರ ಕೈಲಾಗದೊಲ್ ಕಾದು
    ನೀಡುವಂ ತಾನೆಲ್ಲ ಭದ್ರತೆಯನುಂ
    ಕಾಡನುಂ ಕರಕವಂ,ಕೊಡುವನುಂ ಕಮಲಮಂ,
    ಮೂಡಿಪಂ ಭರವಸೆಯನರಸನೆಂದೂ

    ಕರ=ತೆರಿಗೆ
    ಕಮಲ=ನೀರು

    • ‘ಯಾನೆ’ ಎಂಬುದು ಕನ್ನಡ ಅಥವಾ ಸಂಸ್ಕೃತದ ಪದವಲ್ಲ. ಪರ್ಷಿಯನ್ ಅಥವಾ ಅರೇಬಿಯನ್(ಅವ್ಯಯ) ಪದವಿರಬಹುದು…ಅದನ್ನು ಇಲ್ಲಿ ಪ್ರಯೋಗ ಮಾಡಬಹುದೆ?

      • Objection sustained:-)

        • ಹಾಗಾದರೆ ಈ ಶಬ್ದವನ್ನು ಬೇರೆಡೆಗೇ ರವಾನಿಸುವೆನು. 🙂
          (ನಿಘಂಟಿನಲ್ಲಿದ್ದುದರಿಂದ ಬಳಸಿದ್ದೆ)

  9. ದೇಶ ಲಾಂಛನ ಕಮಲ ಪುಷ್ಪಕೆ
    ಗಾಸಿ ಮಾಡದೆ ಕರವ ಮುಗಿಯುತ
    ದೇಶ ಸೇವೆಯೊಳೀಶ ಸೇವೆಯ ಬಗೆವ ಸುಚರಿತನು I
    ಕ್ಲೇಷದಾನೆಯ ಮೊರೆಯ ಕೇಳುತ
    ಪಾಶದಿಂದಾ ಶಂಖಪಾಣಿಯು
    ತೋಷದಿ೦ದಲೆ ಬಂದು ಪೊರೆದಂತಿರಲಿ ಪೌರರೊಳು II

    ಕಮಲದ ಹೂ ಭಕ್ತಿ ಮತ್ತು ಜ್ಞಾನದ ಸಂಕೇತ ; ಕರ ಮುಗಿಯು =ಗೌರವಿಸು
    ನಿಷ್ಪಕ್ಷ ಪಾತಿಯಾಗಿರಲಿ ಮತ್ತು ಪ್ರಜೆಗಳಿಗೆ ಅನಿರೀಕ್ಷಿತ ಕಷ್ಟ -ನಷ್ಟಗಳು ಬಂದಾಗ ಪಾಶದಿಂದ ಸ್ವತಃ ತಾನೆ ಓಡೋಡಿ ಬರಲಿ ಎನ್ನುವ ಸಾರ . {ಗಜೇಂದ್ರನ ಭಕ್ತಿಗೆ ಒಲಿದ ಶ್ರೀ ಹರಿಯಂತೆ— ಭಗವಂತನು ಭಕ್ತನ ಪಾಶದಿಂದ/ಬಂಧನದಿಂದ ಬಿಡಿಸಿಕೊಳ್ಳಾರನ೦ತೆ 🙂 }

    • ಒಳ್ಳೆಯ ಪದ್ಯಪೂರಣ. ಆದರ ’ಕ್ಲೇಶ’ವೆಂಬುದೇ ಸಾಧುರೂಪ.

      • ಸರ್ ,
        ಧನ್ಯವಾದಗಳು . ಸರಿಪಡಿಸಿದ ರೂಪದಲ್ಲಿ —

        ದೇಶ ಲಾಂಛನ ಕಮಲ ಪುಷ್ಪಕೆ
        ಗಾಸಿ ಮಾಡದೆ ಕರವ ಮುಗಿಯುತ
        ದೇಶ ಸೇವೆಯೊಳೀಶ ಸೇವೆಯ ಬಗೆವ ಸುಚರಿತನು I
        ಕ್ಲೇಶದಾನೆಯ ಮೊರೆಯ ಕೇಳುತ
        ಪಾಶದಿಂದಾ ಶಂಖಪಾಣಿಯು
        ತೋಷದಿ೦ದಲಿ ಬಂದು ಪೊರೆವಂತಿರಲಿ ಪೌರರೊಳು II

  10. ( ಮತ್ತೇಭವಿಕ್ರೀಡಿತವೃತ್ತ, ಉಪಮಾಲಂಕಾರ,ರೂಪಕಾಲಂಕಾರ)

    ಮನದೊಳ್ ರಾಜ್ಯದ ಕಾರ್ಯಚಿಂತನೆಗಳಿಂ,ರಾಜಂ,ಪ್ರಜಾರಕ್ಷಕಂ,
    ದಿನಮುಂ ಸಂಚರಿಸುತ್ತೆ ಕಾಲ್ನಡಿಗೆಯಿಂ,ನಾಡಾನೆಯೊಲ್ ಠೀವಿಯಿಂ,|
    ಸನಿಹಕ್ಕೈದಿ ಕೃಪಾಕರಂ,ಕರದೆ ತಬ್ಬಲ್ ದೀನರಂ,ಪೋಷಿಸಲ್,
    ಜನರಂ ಕಾಯನೆ,ಶಂಖಮಂ ಕಮಲಮಂ ಪೊಂದಿರ್ಪ ಲಕ್ಷ್ಮೀಶನೊಲ್ ?||

    • ಅರಸರಿಂಥವರು ಚಣಕಸುತನ ಕಾಲದೊಳಗಿರ್ದರಂತೆ!
      ಮೊರೆವ ಕಾಪ್ಟರದು (Helicopter) ದೊರಕದಿರ್ದೊಡಿಂದಿಡರು ಹೆಜ್ಜೆ ಪೊರಗೆ|

  11. ರಮಣೀಯಪದಪದ್ಧತಿ:-) ಅಭಿನಂದನೆಗಳು.

    • ಶತಾವಧಾನಿ ಸಹೋದರರಿಗೆ ಧನ್ಯವಾದಗಳು.

      • ಈ ನಿಮ್ಮ ಅಭಿನಂದನೆಯು, ತೆಲುಗಿನ ಸಹೋದರ-ಅವಧಾನಿಜೋಡಿಗಳಿಗೋ, ಗಣೇಶರ ಸಹೋದರರಾದ ಶ್ರೀರಂಗರಿಗೋ ಸಂದಂತಾಯಿತು 😉

        • ಕನ್ನಡದ ಏಕೈಕ ಶತಾವಧಾನಿಗಳಿಗೆ ನಾನು ಕನ್ನಡದಲ್ಲಿ ಸಲ್ಲಿಸಿದ ಧನ್ಯವಾದಗಳಿಗೆ ನಿಮ್ಮ ಪ್ರತ್ಯುತ್ತರವನ್ನು ಕಂಡ ತಕ್ಷಣ,ನಿಮಗೇ ತಪ್ಪಾಗಿ ಸಂದಂತಾಗಿದೆಯೇ ಎಂಬ ಸಂದೇಹವಾಯಿತು.ಬಳಿಕ ವಿಷಯ ತಿಳಿದು ನಿರಾಳವಾಗಿದೆ.ತೆಲುಗಿನ ಸಹೋದರ ಅವಧಾನಿಗಳ ಹಾಗೂ ಶ್ರೀರಂಗರ ಕುರಿತಾದ ಮಾಹಿತಿಗಳಿಗೆ ಧನ್ಯವಾದಗಳು. ಶ್ರೀಯುತ ಶ್ರೀರಂಗರು ನನಗೆ ಸಹೋದರರು ಹಾಗೂ ಶತಾವಧಾನಿಗಳ ಸಹೋದರರಾಗುತ್ತಾರೆ. 🙂

  12. ಭಾರತ ಮಹಾಚುನಾವಣೆ
    ಯೊಳ್ ರಾರಾಜಿಪ ನಿಶಾನೆ, ಬಲಕರ ಕಮಲಾ
    ಕಾರವು, ವಾಮದೆ ಶಂಖ ವಿ
    ಚಾರವು ಸರ್ವಸ್ವತಂತ್ರ ಗಣತಂತ್ರವದೈ ।।

    ಶಂಖ = ವ್ಯೂಹ ಭೇದ, ಶತಕೋಟಿ ಸಂಖ್ಯೆಯ ಸಂಕೇತ !
    (ವಿಶ್ವದ ಅತಿದೊಡ್ಡ ಗಣತಂತ್ರ(ಪ್ರಜಾಪ್ರಭುತ್ವ) ವ್ಯವಸ್ಥೆಯ, ಮಹಾ ಚುನಾವಣ ಪ್ರಕ್ರಿಯೆಯನ್ನು ಬಿಂಬಿಸುವ ಪ್ರಯತ್ನ)

    • ಯೊಳ್ರಾರಾಜಿಪ, ಎಂಬಲ್ಲಿ ಆದಿಪ್ರಾಸವು ಸರಿಯೇ?

      • ಆದಿಪ್ರಾಸವು ಸರಿಯಾಗಿದೆ (ರೇಫ). ಆದ್ಯಕ್ಷರಪ್ರಾಸವು ತಪ್ಪಿದೆ – ಉಳಿದೆಲ್ಲ ಗಜಪ್ರಾಸವಾಗಿ, ಇದೊಂದು ಪಾದ ಶರಭಪ್ರಾಸವಾಯಿತು.

      • “ರಾರಾಜಿಪ ನಿಶಾನೆ”ಯೊಂದಿಗೆ ರಾಜಿಮಾಡಿಕೊಂಡು ಈ ತಿದ್ದುಪಡಿ,
        ಭಾರತ ಮಹಾಚುನಾವಣ
        ಹೋರಾಟದೊಳೀ ನಿಶಾನೆ, ಬಲಕರ ಕಮಲಾ
        ಕಾರವು, ವಾಮದೆ ಶಂಖ ವಿ
        ಚಾರವು ಸರ್ವಸ್ವತಂತ್ರ ಗಣತಂತ್ರವದೈ ।।

  13. ಆನಿಹೆನು ಜಯಮನೆನುತೀ
    ಸಾನುಯಶಸ್ತಿಲಕ,ಮಲಗಿ,ಮರೆಯನ್ ಜಗಮಂ
    ತಾನೆಸಗುವನೈ ದುಷ್ಕರ
    ಯಾನಮನೆಂದುಂ ಮಹಾರ್ಣವದ ಶಂಖದವೊಲ್
    ಆನು=ಪಡೆ,ಹೊಂದು

  14. ಕರದೀಕೃತಾಶೇಷಧನಿಕನುಂ ತಾಂ ದುಷ್ಟ-
    ಧರಣೀಶಕಾಲುಷ್ಯವಾರಿ ಕಮಲಂ |
    ದುರಿತಾತ್ಮಶಂಖಭಿತ್ಪರದಾರಮಾತೃಕಂ
    ನರನಾಥನುಂ ತಾನೆ ನರನಾಥನುಂ ||

    ಕರದೀಕೃತಾಶೇಷಧನಿಕನುಂ – ಎಲ್ಲ ಸಿರಿವಂತರೂ ತಪ್ಪದೇ ಕರವನ್ನು (ತೆರಿಗೆಯನ್ನು) ಕೊಡುವಂತೆ ಮಾಡಿದವನು
    ಕಮಲಂ – ನೀರು
    ಶಂಖ – ಹಣೆಯ ಮೂಳೆ

    • ಅತ್ಯದ್ಭುತಂ ಪದ್ಯಮತ್ಯುತ್ತಮಂ ರೂಪ-
      ಮತ್ಯುದಾತ್ತಂ ಭಾವಮತ್ಯುಜ್ಜ್ವಲಂ !!
      (ರೂಪ = ರೂಪಕಾಲಂಕಾರ ಹಾಗೂ ಇಡಿಯ ಪದ್ಯ ಆಕೃತಿ)

      • ಕೃತಕೃತ್ಯನೇ ಅಪ್ಪೆ ತಮ್ಮ ಮೆಚ್ಚುಗೆಯಿಂದ
        ಕಾಣೆ ಕೌ ಮಿಗುವ ಬಹುಮತಿಯನಿದಕಿಂ |

        ಕೌ – ಭೂಮಿಯಲ್ಲಿ 😀

        • ಸಂತೋಷ; ಆದರೆ ಕೌ (ಬುವಿಯಲ್ಲಿ) ಇತ್ಯಾದಿ ಮಣಿಪ್ರವಾಳಗಳನ್ನು ಮಾಡಬಾರದೆಂದು ನಿಯಮವುಂಟು.

  15. ಮತ್ತೊಮ್ಮೆ ಸಂಸ್ಕೃತದಿ ತಲೆಯೆನ್ನದೋಡುತಿದೆ
    ಕ್ಷಮಿಸಿರೆನ್ನಯ ಕವನ ಕನ್ನಡದೊಳಿಲ್ಲ |
    ದತ್ತಪದಿ ನಿಯಮವನು ಪಾಲಿಸಿಹೆನೆಂದೆಣಿಪೆ
    ಕರಕಮಲಶಂಖಗಳನಾನೆಯನು ಹಾಕಿ ||
    करकमलगृहीते विद्यमाने च शङ्खे
    मुखकमलनिविष्टे सञ्जनय्योच्चघोषम् ।
    दुरितभरितशत्रून् भ्रामयन् वेपमानान्
    हरिरिव विजयश्री-भाग्भवेद्राज्यपालः ॥

    • करकमलगृहीतो मोदिवंशोद्भवो वा
      सुकविकुलविसृष्टोत्तुङ्गपद्येषु दृष्टः?
      विबुधजनगणैस्तैः शङ्खघोषे कृते मे
      न भवति विजये वै तस्य काचिद्धिशङ्खा॥

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)