Jun 012014
 

ಮಿತ್ರರೆ,

ಈ ವಾರ ನಿದ್ರೆಯ ಬಗೆಗೆ ಅಲಂಕಾರಯುತ ಪದ್ಯಗಳನ್ನು ರಚಿಸೋಣ.

ಛಂದಸ್ಸು ನಿಮ್ಮ ಆಯ್ಕೆ. ಯಾವುದಾದರು ಅಲಂಕಾರವನ್ನುಪಯೋಗಿಸಿ ನಿಮ್ಮ ಪದ್ಯಗಳನ್ನು ಸಜ್ಜುಗೊಳಿಸಿರಿ

  59 Responses to “ಪದ್ಯಸಪ್ತಾಹ ೧೧೧: ಅಲಂಕಾರಯುತ ವರ್ಣನೆ”

  1. ಜಾಗರ್ಯಾರ್ಕೇ ತ್ವಸ್ತಮಾಪ್ತೇ ನಿದ್ರಾರಾತ್ರಿಃ ಸಮಾವೃತಾ |
    ಸುಸ್ವಪ್ನಚಂದ್ರತಾರಾಭಾ ದುಃಸ್ವಪ್ನೋಲೂಕಭೀಕರಾ ||

    (ಎಚ್ಚರವೆಂಬ ಸೂರ್ಯನು ಮುಳುಗಲು ನಿದ್ರೆಯೆಂಬ ರಾತ್ರಿಯು ಕವಿದಳು. ಸುಸ್ವಪ್ನಗಳು ಅಲ್ಲಿ ಚಂದ್ರತಾರೆಗಳಂತೆ – ಆಹ್ಲಾದಕರ; ದುಃಸ್ವಪ್ನಗಳು ಗೂಬೆಗಳಂತೆ – ಅಶುಭಸೂಚಕ )

    ತರಾತುರಿಯಲ್ಲಿ ಏನೋ ಬರೆದಿದ್ದೇನೆ. ಮನ್ನಿಸಿ.

    • ತುರಾತುರಿಯಲ್ಲಿ ಬರೆದಿರೆಂಬುದು ನಿಜವೇ.

      ಸತ್ಯವನೆ ನುಡಿದೆಚ್ಚರ-ಸುಷುಪ್ತಿ-ಸ್ವಪ್ನಕ್ಕ-
      ಮಿತ್ಯರ್ಥಗೊಳಿಸಿಹಿರಿ ಪದ್ಯಮನ್ನುಂ|
      ಸೃತ್ಯಕೆರವಾಗದಿರ್ದಿರೆ ತುರಾತುರಿಯು ಸಾ-
      ಹಿತ್ಯವಿರದೇಂ ತುರೀಯಾವಸ್ಥೆಯುಂ||

    • ತರಾತುರಿಯದಾದೊಡಂ ಭವದಮೋಘವಾಕ್ಸೀವನಂ
      ತುರಾಯಿಯೆನೆ ಸಂದುದಯ್ ಸರಸಕಾವ್ಯದುಷ್ಣೀಷಕಂ 🙂

      ಭವತ್ + ಅಮೋಘ + ವಾಕ್ + ಸೀವನಂ (ಹೊಲೆಯುವಿಕೆ)

    • ಇಲ್ಲಿರುವುದು ಸಾವಯವ ರೂಪಕಾಲಂಕಾರ.

  2. ನಿದ್ರಾವಸ್ಥೆ ಹಾಗೂ ನಿದ್ರಾವಸ್ಥೆಯ ಪರಿಣಾಮ:

    ತಾರ್ಕಿಕರ್ಗಿರಲೆಲ್ಲ ಚರ್ಚೆ-ಜಿಜ್ಞಾಸೆಗಳು
    ಕರ್ಕ(good)ನಿದ್ರೆಯೊಳೇನು ವೇದ್ಯಮೆಂದು|
    ಕರ್ಕಶವದೇನುಂಟು ನಿದ್ರಾಪ್ರಭಾವದೊಳ್
    ಶರ್ಕರವದಲ್ತೆಲನುಭವಿಗಳಿಂಗೆ||

    • ಅರ್ಕಾಸ್ತಸಮಯದೊಳ್ ಮೆರೆವ ಭೋಗದ ವಸ್ತು
      ಮರ್ಕಟೀಯಪ್ರಾಸದಿಂದಮಿಂತು |
      ಕರ್ಕಪಾದಾಷ್ಟಕಗ್ರಸ್ತಬಕಭಾವಸಂ-
      ಪರ್ಕಮಂ ಪೊಂದಿದವೊಲಾಯ್ತೆ ನಿಮಗಂ? 🙂

  3. ಅರಳಿಸುತೆ ಭಾವಮುಕುಲಂಗಳಂ,ತೋಷಿಪ ನಿ
    ದಿರೆ ಮಾಯೆಯಾಗಿಯೇ ತೋರುತಿರ್ಕುಂ|
    ಪರಮಸುಖಮಂ ಕೊಡುಗು ಬಯಸಿದರನಚ್ಚಿರಿದು,
    ತಿರುಕನಂ ನೃಪನಾಗಿಸಿ ಕ್ಷಣದೊಳು||

    • ಇಲ್ಲಿ ಪ್ರಧಾನವಾಗಿ ಅತಿಶಯೋಕ್ತಿ ಇದೆ.

  4. ಕೊಡುತಿರಲ್ ನೆಮ್ಮದಿಯ ದಣಿದಿರ್ಪ ದೇಹಕ್ಕೆ
    ಬಿಡಿಸುತುಂ ನೋವ ನಿಶೆಯೊಳ್ ನಿತ್ಯವುಂ|
    ತಡವಾಯ್ತೆನುತಲೆದ್ದ ಜನರು ಮುಂಜಾವಿನೊಳ್
    ಕಗಣಿಸುತಿಹರು ನಿದ್ರಾದೇವಿಯಂ|

    • Nice perception. Though a letter is omitted in the last line, the reader will read it nevertheless.

      • ನೀವೇ ಒಪ್ಕೊಂಡ್ ಮೇಲೆ ಮುಗೀತು… 🙂 ಆದರೂ ಸವರಣೆಗೆ ಧನ್ಯವಾದಗಳು..
        last line would start as ಕಡೆಗಣಿಸುತಿಹರು**

        • ಅನ್ಯೋಕ್ತಿಯ ಪ್ರಯತ್ನ, ಸರಿಯೇ?

          • ಪ್ರಿಯ ಚೀದಿ, ಇಲ್ಲಿ ಅನ್ಯೋಕ್ತಿ ಕಾಣುತ್ತಿಲ್ಲ. ತೊಂದರೆಯಿಲ್ಲ – ಇನ್ನೊಂದು ಪ್ರಯತ್ನಿಸಿದರಾಯಿತು.

    • ಇಲ್ಲಿರುವುದು ಪ್ರಧಾನವಾಗಿ ಸ್ವಭಾವೋಕ್ತಿ.

  5. ಸಮಾನತಾಸತ್ತ್ವಸಮಸ್ತಮೂಲಮಂ
    ಪ್ರಮೈಕಪೂರ್ಣಾನುಭವಪ್ರಮೋದಮಂ |
    ಕ್ರಮಾತಿರಿಕ್ತಕ್ರಮದಿಂದೆ ತುಂಬುವೀ
    ಅಮೇಯಸುಪ್ತ್ಯದ್ವಯತತ್ತ್ವಕಂ ನಮೋ ||

    • ಇಲ್ಲಿ ವಿಶೇಷಾಲಂಕಾರವು ಮುಖ್ಯವಾಗಿದೆ.

  6. ಎಲ್ಲರಲ್ಲೂ ಒಂದು ಪ್ರಾರ್ಥನೆ – ನೀವು ಬರೆದಿರುವ ಪದ್ಯಗಳಲ್ಲಿನ ಅಲಂಕಾರವನ್ನು ಗುರುತಿಸಿ ಅದನ್ನು ತೋರ್ಪಡಿಸಿರಿ. ಇದರಿಂದ ಓದುಗರಿಗೆ ಉಪಯೋಗವಾಗುವುದು.

  7. ಅನಿತನಿತು ನಿದೆರೆಯೊಳ್ ಜಾರಿರಲ್ ತನುವದಿಂ
    ತೆನಿತೆನಿತು ತಮವದಾವರಿಸೆ ಮನವಂ ।
    ಕನವರಿಕೆ ಸೊಪನಗಳ್ ಮುಚ್ಚಿರ್ದ ಕಂಗಳೊಳ್
    ಮನವರಿಕೆಯಾಗಿರಲ್ ಸೋಜಿಗವದುಂ ।।

    (ನಿದ್ದೆ ಮಂಪರಲ್ಲಿ ಅಲಂಕಾರ ತಿಳಿಯುತ್ತಿಲ್ಲ, ರಾಮಚಂದ್ರ ಸರ್ !!)

    • ತೊಂದರೆಯಿಲ್ಲ. ಮಂಪರು ಕಳೆದ ನಂತರ ಅಲಂಕಾರವನ್ನು ಗುರುತಿಸಬಹುದು. 🙂

    • ಇಲ್ಲಿ ಪ್ರಹರ್ಷಣಾಲಂಕಾರವು ತೋರುತ್ತಿದೆ.

  8. ಕಳೆಯೆ ಬರುತಲಿ, ತನುವ ಬಳಲಿಕೆ
    ಸೆಳೆದು ನಿನ್ನೆಡೆ,ಮುದವ ನೀಡುತೆ
    ಇಳೆಯ ಸಗ್ಗದೊಳೆನ್ನ ತೂಗುವ ಜೀವಸಖಿ ನೀನು|
    ಒಳಕವಾಟದೆ,ಚಿತ್ತಗೇಹದ,
    ಕುಳಿತು ಹಿತಮಂ ಕಾವ ನಿನ್ನೊಡೆ
    ಮಿಳಿವ ಹಂಬಲ,ಸುಮವು ಬಯಸುವ ಗಂಧದೊಲ್!ಸತ್ಯಂ||

    (ಸುಮವು ಗಂಧವನ್ನು ಸೂಸಿದರೂ, ಅನುಭವಿಸಲಾಗದು)

    • ಅತಿಶಯೋಕ್ತಿ ಮತ್ತು ದೃಷ್ಟಾಂತಾಲಂಕಾರಗಳ ಸಂಮಿಶ್ರವಿಲ್ಲಿ ತೋರಿದೆ.

    • ಬಹಳ ವ್ಯತ್ಯಯ ಪುಷ್ಪ-ಮನುಜ
      ರ್ಗಿಹುದು ನೋಡಲ್, ನಷ್ಟಮದುಮೇ-
      ನಹುದು ಹೂವದು ತನ್ನ ಗಂಧವ ತಿಳಿಯದಿರ್ದೊಡೆಯುಂ?
      ಅಹಿತಮಿರ್ದುಂ ತನ್ನ ದೇಹದ
      ಬಹುಕಮಟು ವಾಸನೆಯು ಮಾನವ,
      ಸಹಿತದವರಂ ಗಣಿಪನೇಂ ನಿಜನಾಸಬಂಧಿಸದನ್|| (ತನ್ನ ಮೂಗನ್ನೆ ಮುಚ್ಚಿಕೊಳ್ಳದವನು)

      • ನಿಮ್ಮ ಭಾವನೆಯನ್ನು ಅರ್ಥೈಸಿಕೊಳ್ಳಲಾರದ ನಾನು, ವಾಸನೆಯ ಕುರಿತು ಬರೆದ ಪದ್ಯವಲ್ಲ(ನನ್ನದು),ಎನಬಲ್ಲೆ ಪ್ರಸಾದರೇ. 🙂

  9. ಉರಗ ಹಿಸ್ಸೆನುತಿಹುದೊ ಪಡು ಸಾ
    ಗರವು ಭೋರ್ಗರೆದಿಹುದೊ ಭರತದಿ
    ತರುವ ಕೊರೆಯುತಲಿಹರೊ ಕೂರ್ಗತ್ತಿಯಲಿ ನಟ್ಟಿರುಳು?
    ತೊರೆದು ನಿದಿರೆಯ ಹೊದಿಕೆ ಝಾಡಿಸಿ
    ಭರದಿ ನೋಳ್ದರೆ ಹಸೆಯಲೊರಗುತ
    ಗೊರಕೆ ಹೊಡೆಯುತಲಿಹನು ಗೆಳೆಯನು ತನುವ ಮರೆಯುತಲಿ!

    • 😀 😀 ತುಂಬ ಚೆನ್ನಾಗಿದೆ.

    • ಸಸಂದೇಹಾಲಂಕಾರವೂ ಸ್ವಲ್ಪಮಟ್ಟಿನ ಸ್ವಭಾವೋಕ್ತಿಯೂ ಇಲ್ಲಿವೆ.

      • ಧನ್ಯವಾದಗಳು ಸರ್.
        ನನಗೆ ಉಪಮೆಯಾಗಿಯೂ ಗೆಳೆಯನಿಗೆ ಉತ್ಪ್ರೇಕ್ಷೆಯಾಗಿಯೂ ತೋರಿದ್ದರಿ೦ದ ಅಲ೦ಕಾರವನ್ನು ಗುರುತಿಸುವಲ್ಲಿ ಸ್ವಲ್ಪ ಗೊ೦ದಲವಿತ್ತು.

    • ಈ ಮಾತು ನಿಮ್ಮ ಆ ಗೆಳೆಯನದು ಎಂದು ಪರಿಗಣಿಸಿದರೆ, ಅದ್ಭುತವಾದ ’ಅನ್ಯೋಕ್ತಿ’ ಎಂದು ಮೆಚ್ಚಬಹುದು 🙂

  10. ನಗೆಗಡಲಿನಲ್ಲಿ ನಲಿದಾಡಿಸಿದ್ದಕ್ಕೆ ಧನ್ಯವಾದಗಳು.

  11. ನೋವು ಮರೆಯಲು ಬೇಕು ಕುಂಭಕರ್ಣನ ನಿದ್ರೆ
    ಭಾವ ಬಿರಿಯಲು ಬೇಕು ತನ್ನತನ ಮರೆತು I
    ಜೀವನವು ಸಾಕೆನಲು ಬೇಕು ಮುದಿತನವದಕೆ
    ಜೀವ ಮಾಗಿ ಬಯಸುವ ಚಿರನಿದ್ರೆಯು II

    ಭಾವ ಬಿರಿಯಲು ಬೇಕು ತನ್ನತನ ಮರೆತು =ಏಕಾಗ್ರತೆ =ಎಚ್ಚರದಲ್ಲಿರುವ ನಿದ್ರೆ ,
    ವೃದ್ಧಾಪ್ಯದಲ್ಲಿ ಇನ್ನೊಬ್ಬರಿಂದ ಚಾಕರಿ ಮಾಡಿಸಿ ಕೊಳ್ಳುವ ಮೊದಲೇ ಸಾವು ಬರಲಿ ಎಂದು ಜವಾಬ್ದಾರಿ ಕಳೆದು ಕೊಂಡ ವೃದ್ದರು ಬಯಸುವ ಸಾವು
    ಕುಂಭಕರ್ಣನ ನಿದ್ದೆ (ಆರು ತಿಂಗಳು ಅಲ್ಲ) ಅನ್ನುವಲ್ಲಿ ಉಪಮಾಲಂಕಾರ ಅಂದು ಕೊ೦ಡಿದ್ದೇನೆ . ತಪ್ಪಿದ್ದರೆ ತಿಳಿಸಿ ಕೊಡಿ .

    • ಉಲ್ಲೇಖ, ವ್ಯತಿರೇಕ, ವಕ್ರೋಕ್ತಿ ಮುಂತಾದ ಅಲಂಕಾರಗಳ ಛಾಯೆ ಇಲ್ಲಿದೆ.
      ಕೂನೆಯ ಪಾದವನ್ನು “ಜೀವ ಮಾಗಲ್ಕೆಳಸೆ ಚಿರನಿದ್ರೆಯು” ಎಂದು ಸವರಿಸಿದರೆ
      “ಜೀವ ಮಾ|ಗಿ ಬಯಸುವ| …..” ಎನ್ನುವಲ್ಲಿರುವ ಯತಿಭಂಗದೋಷವು ನಿವಾರಣೆಗೊಳ್ಳುತ್ತದೆ.

      • ಸರ್ ,
        ಮಾರ್ಗದರ್ಶನಕ್ಕೆ ಧನ್ಯವಾದಗಳು .

        ನೋವು ಮರೆಯಲು ಬೇಕು ಕುಂಭಕರ್ಣನ ನಿದ್ರೆ
        ಭಾವ ಬಿರಿಯಲು ಬೇಕು ತನ್ನತನ ಮರೆತು I
        ಜೀವನವು ಸಾಕೆನಲು ಬೇಕು ಮುದಿತನವದಕೆ
        ಜೀವ ಮಾಗಲ್ಕೆಳಸೆ ಚಿರ ನಿದ್ರೆಯು II

  12. सीम्नःपालनतत्परस् तु कुरुते विद्यारुचिं तत्करम्
    भिक्षुः कश्चन याचते सविनयं वित्तार्जने मग्नताम्।
    यक्षः कश्चन काङ्क्षते लघुबलिं धर्मे च कामे रतेर्
    निद्रासिम्न्यवगाहने विगलिता धर्मार्थकामाढ्यता॥
    [अथवाऽन्तिमे पादे – निद्रासिम्न्यवगाहने कठिनता पश्य त्वमेव प्रभो!]
    [उत्प्रेक्षा वाऽत्र?]

    • ಪದ್ಯಫಣಿತಿರತಿಚೇತೋಹಾರಿಣೀ | ತಥಾಪ್ಯಸ್ಯಾಶಯೋ ನ ಮೇ ವಿದಿತಃ | ಭವತಾ ಕೃಪಯಾ ಪದ್ಯಸ್ಯಾಸ್ಯ ಭಾವವಿಸ್ತರಣೇನ ಪ್ರಬೋಧನೀಯಃ ಕಿಲಾಯಂ ಜನಃ |

      • अन्तिमे पादे पूर्वं एवं विवक्षितवान् – ” निद्रासिम्न्यवगाहने कठिनता, पश्य त्वमेव प्रभो!” तथा कृते त्वाशय एवम् आसीत् – “निद्रासीमाप्रवेशार्थं विद्यार्जनयत्नः त्याज्यः (केन सूत्रेण इदं पदं निष्पन्नम् इत्यादिनः‌ प्रश्नाः तिरस्कारपदं यान्ति)। वित्तोपार्जनचिन्ता विगाल्या (धनवृद्ध्यै किं stock उत्तमं स्यात्? इत्यादयश् चिन्ताೲ पार्श्वे स्थाप्यन्ते)। तद्विहाय कामानुसरणे ऽपि निद्राकाङ्क्षिनां निर्वेदो भवति (यथा चलच्चित्रमिदम् इदानीं न द्रष्टव्यम् इति सङ्कल्पस् स्यात्)। तथा धार्मिकचिन्तनेनाऽपि अलम् इति चिन्तयेत् (कस्मिन् सत्पात्रे दानम् करवाणि इत्यादिकं न चिन्तयेत् निद्रालुः)। एवं निद्रासीमाप्रवेशः क्लेशाय ।”

        पश्चात् तु अन्तिमೲ पादः एवं कृतः – “निद्रासिम्न्यवगाहने विगलिता धर्मार्थकामाढ्यता॥” तत्र चमत्कारस्य ह्रास एव जातः – मनुष्याणां निद्रागमने धर्मकामार्थसाधनचित्तं न भवतीति वर्त्ता एव उक्ता। अधुना चिन्तयामि “निद्रासिम्न्यवगाहने कठिनता पश्य त्वमेव प्रभो!” इति उत्तरः पाद इति। कृपया भवदभिप्रायं श्रावयतु।

        • ‘ಮೋಕ್ಷಸುಖವನ್ನು ಪಡೆಯಲು ತ್ರಿವರ್ಗವನ್ನೂ ತ್ಯಾಗಮಾಡಬೇಕಾಗುತ್ತದೆ’ ಎಂಬುದಕ್ಕೆ ನಿದ್ರೆಯು ಒಂದು ದೃಷ್ಟಾಂತವಾಗಿದೆ ಎಂಬ ಭಾವವನ್ನು ಹೇಳಿದರೆ ಇನ್ನೂ ಗಭೀರಮನೋಹರವಾಗುವುದು ಎಂದು ನನ್ನ ಅನಿಸಿಕೆ.

          • साधूक्तं केयूर –

            निद्रामोक्षौ सजातीयौ
            धर्मकामार्थवर्जने।
            मोक्षस्तु दुर्लभस् तुच्छो
            न निद्रा सर्वमोदकी॥

            [अत्र व्यतिरेकः।]

      • ಭವದ್ವ್ಯಾಖ್ಯಯೈವ ಸ್ಫುಟೀಕೃತಮಿದಂ ಪದ್ಯಮ್ | ಪರಂ ತು ನ ಸ್ವಯಂ ವ್ಯುತ್ಪನ್ನಮಪಿ ನ್ಯಬೋಧಯತ್ | ಮುಕ್ತಕಾನಿ ವಿಶೇಷತಯಾ ದ್ರಾಕ್ಷಾಪಾಕಪ್ರಖ್ಯಾಣಿ ಸ್ಯುರಿತಿ ಮತ್ಪ್ರೇಕ್ಷಾ |

        • भवदभिप्राये मम सम्मतिरस्ति। मुक्तकेषु स्वजन्या स्पष्टता आवश्यकी। सोऽयं दोषः पद्यरचनसमये दुरभिज्ञः (यतो हि पद्यकर्तुस् तु तत्सन्दर्भे स्वबुद्धौ विवक्षा स्पष्टा भवति।)। समस्याया अस्याः कस् स्यात् परिहारः?

          • ತದಿದಮತ್ಯಂತಂ ಸುಕರಮ್ | ರಸಧ್ವನೌ ಶ್ರದ್ಧಧಾನೇನ ಕವಿನಾ ಪರಮಾ ವಕ್ರೋಕ್ತಿಃ ಸಾಧನೀಯಾ | ವಿಚಿತ್ರೈವಾಭಿಧಾ ವಕ್ರೋಕ್ತಿಃ ಕಿಲ ! ಅತೋ ಹಿ ವಾಚ್ಯಾರ್ಥಸ್ಪಷ್ಟತಾ ಸರ್ವಥಾ ಯತನೀಯಾ | ತತ್ತು ರೂಢಿಮೇವ ಶ್ರಯತೇ |

  13. ಬಿರುಬಿಸಿಲ ದಿನದಂದು ರಾಮಕಥನದ ವೇಳೆ
    ತರಗತಿಯೊಳೊರಗಿರಲ್ ಗುರುಗಳುಂ ತಾವ್ ।
    ಪರಿಚಯಿಸೆ ನಿದ್ರಿಸುದು ಕುಂಭಕರ್ಣನೊಲೆಂದು
    ಪರಿವೀಕ್ಷಕರಿಗೊರೆದರೊಡನೆದ್ದು ಕಾಣ್ ।।

    (ಒಮ್ಮೆ ತರಗತಿ(=classroom)ಯಲ್ಲಿ ಶಿಕ್ಷಕರು ಹಾಯಾಗಿ (ಒರಗು=)ನಿದ್ರಿಸುತ್ತಿರುವ ವೇಳೆ, ಅಕಸ್ಮಾತಾಗಿ ಪರಿವೀಕ್ಷಕರು(=inspector) ಬಂದಾಗ, ತಕ್ಷಣ ಎದ್ದು “ಕುಂಭಕರ್ಣ ಈ ರೀತಿ ನಿದ್ರಿಸುತ್ತಿದ್ದ” ಎಂದು ಹೇಳಿ “ಸಮಯಸ್ಪೂರ್ತಿ” ಮೆರೆದ ವಿನೋದ ಘಟನೆಯ – ಪದ್ಯರೂಪ !!)

  14. || ಉತ್ಪಲಮಾಲಾವೃತ್ತ || ( ಉಪಮಾಲಂಕಾರ,ರೂಪಕಾಲಂಕಾರ,….. )

    ರಾತ್ರಿಯೊಳಿಂದು ತಾನ್ ಮೆರೆಯಲಾಗಸದೊಳ್ ಪೊಸಬೆಣ್ಣೆಮುದ್ದೆಯೊಲ್,
    ಸ್ತೋತ್ರಿಸಿ ದೇವರಂ,ಪವಡಿಸಲ್ ದಣಿವಾರಿಸೆ,ಲೋಕದೊಳ್ ನರರ್-|
    ಧಾತ್ರಿಯ ಕತ್ತಲೊಳ್,ದಿನದ ಕಾರ್ಯದ ಕಾರಣದಿಂದೆ ಸೋತಿರಲ್,
    ಸೂತ್ರದ ಗೊಂಬೆಗಳ್,ಬಿಡದೆ ಕಾಡುವ ನಿದ್ರೆಯ ಭದ್ರಮುಷ್ಟಿಯೊಳ್ ||

    • ಪದ್ಯ ತುಂಬ ಚೆನ್ನಾಗಿದೆ; ಅಭಿನಂದನೆಗಳು.

      • ಸಹೋದರರಾದ ಶತಾವಧಾನಿಗಳ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

  15. ಬೆರೆತಿರಲ್ಕ ಣ್ರೆಪ್ಪೆಗಳೆರಡುಮೊದಲರಸದಿ (ಶೃಂಗಾರದಿ)
    ವರಕೂಸನರೆಕ್ಷಣದಿಪೆತ್ತುತ ನಿ-
    ದಿರೆಯರೂಪದಿ, ರವಿಯುದಯದಿ ರೆಪ್ಪೆಗಳಗಲಿ,
    ವಿರಹದಿ ಶಶಿಯುಗಮಕೆವೆ ಕಾಯುತಲಿ ।।

    ಉಪಮಾಲಂಕಾರ ಎನ್ನಬಹುದೆ… ??

    • ತಮ್ಮ ಪದ್ಯದಲ್ಲಿ ಛಂದಸ್ಸು ತಪ್ಪಿದೆ (ಚೌಪದಿಯ ಲಕ್ಷಣವನ್ನು ಚೆನ್ನಾಗಿ ಪರಿಶೀಲಿಸಿರಿ) ವರಕೂಸು ಇತ್ಯಾದಿಯಲ್ಲಿ ಅರಿಸಮಾಸವಿದ್ದು ವ್ಯಾಕರಣವೂ ಜಾರಿದೆ. ಅಲ್ಲದೆ ಇಲ್ಲಿ ಉಪಮಾಲಂಕಾರವೂ ಇಲ್ಲ. ದಯಮಾಡಿ ಮತ್ತೆ ಹೊಸತಾಗಿ ರಚಿಸಿರಿ.

      • ಧನ್ಯವಾದಗಳು ಮೇಷ್ಟ್ರೇ…
        ಚೌಪದಿಯ ಲಕ್ಷಣಗಳಲ್ಲಿ ಮತ್ತು ವ್ಯಾಕರಣಗಳಲ್ಲಿ ಮತ್ತೆ ಎಡವಿದ್ದಕ್ಕೆ ವಿಷಾದವಿದೆ …!! ಆದರೆ ಚೌಪದಿಯ ಲಕ್ಷಣಗಳನ್ನು ತಿಳಿಯಲು ಯಾವುದಾದರು ಜಾಲತಾಣದ ಲಿಂಕ್ ಇದೆಯೇ ?
        ಮತ್ತೆ ಪ್ರಯತ್ನಿಸುವೆ… ಧನ್ಯವಾದಗಳು..

        • ಪ್ರಿಯ ವೇದಪ್ರಕಾಶರೆ,
          ಛಂದಸ್ಸು, ಅಲಂಕಾರಗಳ ಲಕ್ಷಣಗಳನ್ನು ತಿಳಿಯಲು ಇನ್ನಾವ ಜಾಲತಾಣಕ್ಕೂ ಹೋಗಬೇಕಿಲ್ಲ. ಪದ್ಯಪಾನದ ತಾಣದಲ್ಲಿಯೇ ಪದ್ಯ ವಿದ್ಯೆಯ ಕೆಳಗಡೆ ಎಲ್ಲ ವಿಡಿಯೋ ಪಾಠಗಳೂ ಇವೆ.
          🙂

  16. ಎಳೆಯರ್ಗುನ್ನತಿ, ಬಿಜ್ಜೆಯಂ ಬಯಸಿಪರ್ಗಜ್ಞಾನಮುಂ, ಸ್ವಪ್ನದೊಳ್
    ಪೊಳೆವಾ ಲಾಸ್ಯದ ತಾಣಮಲ್ತೆ ಯುವರ್ಗಂ, ಯೋಧಂಗೆ ಪಂಚತ್ವಮುಂ, (ಯುವರ್ಗಂ ಶಿ. ದ್ವಿ)
    ಬೆಲೆವೆಣ್ಗಳ್ಗೆ-ಪುರಂದರರ್ಗೆ ಹತಿ, ಮೇಣ್ ನೈರಸ್ಯಮುಂ ವೃದ್ಧರೊಳ್,
    ಮುಳಿಸಿರ್ಪಂಗೆ ಮರೀಚಿ, ನಿಷ್ಕುಟಭಟಂಗಂ ದಂಡಮೈ ರಾಜನಿಂ

    ರೂಪಕಾಲಂಕಾರ: ನಿದ್ರೆಯು – ಮಕ್ಕಳಿಗೆ ಬೆಳವಣಿಗೆ, ವಿದ್ಯಾರ್ಥಿಗಳಿಗೆ ಅಜ್ಞಾನ, ತರುಣರಿಗೆ ಕನಸಿನ (ಮೂಲಕ) ಲಾಸ್ಯಲೋಕ, ಯೋಧನಿಗೆ ಮೃತ್ಯು, ಬೆಲೆವೆಣ್ಣಿಗೆ ಮತ್ತು ಕಳ್ಳರಿಗೆ ನಷ್ಟ, ವೃದ್ಧರಲ್ಲಿ ನೀರಸ ಭಾವ, ಅಶಾಂತನಿಗೆ ಮರೀಚಿಕೆ, ದ್ವಾರಪಾಲಕನಿಗೆ ರಾಜನಿಂದ ದಂಡ

    • ಉಲ್ಲೇಖಾಲಂಕಾರಸ-
      ಮುಲ್ಲಸಿತಂ ಸೋಮ ! ನಿನ್ನ ನೂತನಕವಿತಾ-
      ಸಲ್ಲಾಪಂ ಸಹೃದಯಜನ-
      ವಲ್ಲೀಸಹಕಾರಸದೃಶಮಾನಂದಕರಂ ||

      ನಿನ್ನ ಪದ್ಯದಲ್ಲಿ ಮುಖ್ಯವಾದುದು ಉಲ್ಲೇಖಾಲಂಕಾರ (ಸಹಕಾರ = ಮಾವಿನ ಮರ)

  17. ಮುನಿಸುಗೊಂಡಿಹ ತಂದೆಯಂ ಮರೆಗೈದುವಂದಿರೆ ತಾಯಿತಾಂ
    ಬನಿದ ಕೂರ್ಮೆಯಭಾವಮಂ ಮಡಿಲಲ್ಲಿ ಕಂದಗೆ ತೋರಿದೊಲ್
    ಕನಪುಗಂಗಳ ಸೂರ್ಯನಂ ಬಲುದೂರಕಟ್ಟುತಲೆಮ್ಮನುಂ
    ಕೆನೆಯಗರ್ಪಿನ ರಾತ್ರಿದೋಲಿಕೆಯಲ್ಲೆತೂಗಿದೆ ನಿದ್ರೆಯುಂ

  18. ಪಟ್ಟಂಬಿಡದಳ್ದುಂ ಮಣಿ
    ಕಟ್ಟಂ ಕಿತ್ತೊಗೆಯುತಿರ್ದ ಕಂದಂ ತಾಂ, ಕಣ್-
    ಕಟ್ಟಂ ಕಾಣ್ ! ತೊಟ್ಟಿಲಿನೊಳ್
    ಬೆಟ್ಟಂ ಸೀಪಂತು ನಿದಿರೆಯೊಳ್ ಜಾರಿದುದುಂ ।।

    ಅತ್ತತ್ತು ಸೋತ ಹಠಮಾರಿ ಕಂದ, ಕೊನೆಗೂ ನಿದ್ರಿಸಿದ ಜಾದು !! (ಕಾದಂಬರಿಯ ೪೨ನೇ ಪದ್ಯದಿಂದ ಪ್ರೇರೇಪಿತಗೊಂಡ ಕಂದ)

  19. Bindu prayogadalli matte doshavaagide. Kshamisi, saripadisalu prayatnisuttene.

    • ಪಟ್ಟುಹಿಡಿಯುತಲತ್ತ ಕಂದಗೆ
      ಪೆಟ್ಟಕೊಟ್ಟಿರಲಮ್ಮ, ತಾ ಮಣಿ-
      ಕಟ್ಟ ಕಿತ್ತೆಸೆದಂದು ಹೊರಳುತೆ ಹಠವ ಮಾಡಿರಲುಂ ।
      ಪುಟ್ಟನವನನುವೊಲಿಸಿ ರಮಿಸುತೆ
      ತಟ್ಟಿ ತೊಟ್ಟಿಲೊಳಿಟ್ಟು ತೂಗಿರೆ
      “ಬೆಟ್ಟ ಸೀಪುತ ಸಿಟ್ಟ ನುಂಗುತ”ಲೊಡನೆ ಮಲಗಿದನುಂ ।।

      ಕೊನೆಗೂ ಅಳುವ ಕಂದನನ್ನು ತಟ್ಟಿ ಮಲಗಿಸಲು ಭಾಮಿನಿಗೆ ಸಾಧ್ಯವಾಗಿದೆಯಲ್ಲವೇ ?!

  20. ತುಂಬಾ ಚನ್ನಾಗಿವೆ

Leave a Reply to ರಾಗ-रागः (ಆರ್ ಗಣೇಶ್; R Ganesh) Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)