Jun 092014
 

download9

  75 Responses to “ಪದ್ಯಸಪ್ತಾಹ ೧೧೨: ಚಿತ್ರಕ್ಕೆ ಪದ್ಯ”

  1. ನೆಲನೊಳ್ ಕೋಟ್ಯನುಕೋಟಿವರ್ಣವಿಚಯಂ, ಬಾನೊಳ್ ಕ್ವಚಿತ್ಕೇವಲಂ
    ವಲಮೆಂದೇಳಿಸೆ ಕೂರ್ಮೆಯಿಂ ಪ್ರಕೃತಿಮಾತೆ; ಸ್ಪರ್ಧೆಯಿಂದಂಬರಂ |
    ಮಳೆವಿಲ್ಲಂ ತಳೆಯಲ್ಕೆ ಬಣ್ಣದೊಡಲಂ; ಜಾಣಿಂದಮೀ ಭೂಮಿ ಕ-
    ರ್ಬಿಳಿಸಾಲಿಂ ಸುರಚಾಪರಾಗಮಖಿಳಕ್ಕೀ ಸೀಮೆಯಂ ಸೂಚಿಪಳ್ ||

    ಬಾನು-ಬುವಿಗಳು ಗಂಡ-ಹೆಂಡಿರೆಂದು ವೇದಪ್ರಸಿದ್ಧಸಂಕೇತ. ನೆಲದಲ್ಲಿಯೇ ಅನೇಕವರ್ಣಗಳ ಆಯತನ; ಬಾನಿಗೆ ಈ ಭಾಗ್ಯ ಹೆಚ್ಚಿಲ್ಲವೆಂದು ಪ್ರಕೃತಿಮಾತೆಯು ನಲ್ಮೆಯಿಂದ ಚುಡಾಯಿಸಿದಾಗ ಆಗಸವು ತನಗೂ ಬಣ್ಣಗಳ ಬೆಡಗುಂಟೆಂದು ತೋರಲು ಕಾಮನ ಬಿಲ್ಲನ್ನು ಹೊಮ್ಮಿಸಿತು. ಆಗ ಜಾಣೆ ಭೂಮಿಯು ಈ ಬಾನಬಣ್ಣಗಳೆಲ್ಲ ಕಪ್ಪು ಮತ್ತು ಬಿಳಿಗಳೆಂಬ ಎರಡು ವಿಲಕ್ಷಣವರ್ಣಗಳ ನಡುವೆಯೇ ನಿಲ್ಲುವಂಥವೆಂದು (ಜೀಬ್ರಾಗಳ – ಪಟ್ಟೆಗುದುರೆಗಳ – ಮೂಲಕ) ಸೂಚಿಸಿ ಗೆಲವಿನ ನಗೆ ಬೀರಿದಳೆಂದು ತಾತ್ಪರ್ಯ.
    ಕಪ್ಪು ಎಲ್ಲ ಬಣ್ಣಗಳನ್ನೂ ಹೀರುತ್ತದೆ ಅಂತೆಯೇ ಎಲ್ಲ ಅಪಾರದರ್ಶಕವರ್ಣಗಳ ಸಮಾಹಾರ; ಬಿಳಿಯು ಎಲ್ಲ ಬಣ್ಣಗಳನ್ನೂ ಚೆದುರಿಸುತ್ತದೆ ಹಾಗೂ ಸಕಲಪಾರದರ್ಶಕವರ್ಣಗಳ ಸಮಾಹಾರವೆಂಬ ವಿಜ್ಞಾನವೂ ಇಲ್ಲಿ ಒದಗಿ ಬಂದಿದೆ.

    • ಭೂಮಾತೆಯನ್ನು ಗೆಲ್ಲಿಸಿದ ಬಣ್ಣಗಳ ತರ್ಕ ಬಹಳ ಚೆನ್ಣಾಗಿದೆ ಗಣೇಶ್ ಸರ್

  2. Rasa tumbida kalpanege namaskaragalu.

  3. ಬಾಂದಳದಿ ಮೂಡಿಹುದು ಕಾಮನಬಿಲ್ಲು
    ಪಶುಪಕ್ಷಿಜೀವಜಡಕೆ ತುಂಬಿಹುದು ನಲಿವು
    ಮರೆತು ನಿಂತಂತಿವೆ ಜಿರಾಫ಼ೆಗಳ ಹಿಂಡು
    ಸಮೃದ್ದ ಹುಲ್ಲುಗಾವಲಿನಲಿ ಮೆಲ್ಲುತಲಿ ನಿಂದು

    • ಪದ್ಯಪಾನದ ವತಿಯಿಂದ ನಿಮಗೆ ನಲ್ಬರವು. 🙂

      ಈ ಜಾಲದಾಣವು ಅಭಿಜಾತ(classical)ಕವಿತೆಯ ಕಲಿಕೆ-ನಿರ್ಮಿತಿಗಳಿಗೇ ಮೀಸಲಾಗಿರುವ ಕಾರಣ ಇಲ್ಲಿಯ ಪ್ರತಿಯೊಂದು ಪದ್ಯವೂ ಛಂದಸ್ಸು-ವ್ಯಾಕರಣ-ಅಲಂಕಾರಗಳಿಗೆ ಉತ್ತರದಾಯಿಯಾಗಿರಬೇಕು. ಹೀಗಾಗಿ ತಾವು ದಯಮಾಡಿ ಪದ್ಯಪಾನದ ಮುಖಪುಟದಲ್ಲಿರುವ ಛಂದಸ್ಸು-ವ್ಯಾಕರಣ-ಅಲಂಕಾರಗಳ ಪ್ರಾಥಮಿಕಪಾಠಗಳನ್ನು ಚೆನ್ನಾಗಿ ಪರಿಶೀಲಿಸಿಕೊಂಡು ಪದ್ಯರಚೆನೆಗೆ ತೊಡಗಿರಿ. ನಿಮ್ಮ ಆಗಮನದಿಂದ ಪದ್ಯಪಾನವು ಮತ್ತಷ್ಟು ಕಳೆಯೇರಲಿ.

      • Sincere apologies to all the mistakes. I will put my efforts to improve based on your suggestion.

    • ಶ್ರೀಹರ್ಷರಿಗೆ ಪಾನಗೋಷ್ಠಿಗೆ ಸ್ವಾಗತ. ಹೀಗೊಂದು ಸವರಣೆ:
      ಬಾಂದಳದಿ ಮೂಡಿಹುದು ನೋಡು ಕಾಮನಬಿಲ್ಲು
      ಮಂದೆಪಶು-ಪಕ್ಷಿಗಳಿಗಿತ್ತು ನಲಿವಂ|
      ದಂದುಗವ ಮರೆತು ನೆಮ್ಮದಿಯಿನಿಂ ಮಿಗಹಿಂಡು
      ಚಂದದಿಂ ಹುಲ್ಲ ಮೇಯುತಿಹುದಿಂದು||
      ದಯವಿಟ್ಟು http://padyapaana.com/?page_id=631 ಇಲ್ಲಿರುವ ಪಾಠಗಳನ್ನು ಗಮನಿಸಿಕೊಳ್ಳಿ. ಬಿಡದೆ ತೊಡಗಿಕೊಳ್ಳಿ.

  4. ಬರಿಯೋದೇ ಬಿಳಿಗರ್ಪುಗಳ್ಗೊಲೆಯುತುಂ ಮಣ್ಣಲ್ಲಿ ಪುಲ್ಮೆಲ್ಲುತುಂ
    ಪರಿದೋಡುತ್ತಲೆಗುಂ ಬಳಲ್ದು ಸರಿಗುಂ ಮೇಣ್ ಬಾಲಮಂ ಬೀಸುತುಂ |
    ಸ್ಫುರಿತಾನಂತಪದಪ್ರತಿಷ್ಠಿತಮನೇಕಚ್ಛಾಯಮಚ್ಛಾಯಮು-
    ಚ್ಚರುಚಿಪ್ರಚ್ಛುರಿತಂ ನಿತಾಂತಮೆಸೆಗುಂ ನಿಸ್ತಾಂತಮಾ ಪ್ರಾತಿಭಂ ||

    ಶುಷ್ಕಪಾಂಡಿತ್ಯವು ಬರಿಯ ಕಪ್ಪು-ಬಿಳಿಗಳಲ್ಲಿ ಎಲ್ಲವನ್ನೂ ಕಾಣುವ, ನೆಲಬಿಟ್ಟೇಳದ,ದಿಕ್ಕಿಲ್ಲದೆ ಓಡಿ ಬಳಲುವ ಬಗೆಯಾದರೆ ಪ್ರತಿಭೆಯು ತಾನು ಅಸೀಮಸ್ಥಿತಿಯಲ್ಲಿ ಅತ್ಯುನ್ನತಿಯಲ್ಲಿ ವಿಹರಿಸುತ್ತ ಅನೇಕವರ್ಣಚ್ಛಾಯೆಗಳಲ್ಲಿ ಜಗವನ್ನು ಬಳಲಿಕೆಯಿಲ್ಲದೆ ಕಾಣುತ್ತ ಬೆಳಗುವುದೆಂದು ತಾತ್ಪರ್ಯ.

    • ಇಲ್ಲಿಯ ಧ್ವನಿಸ್ವಾರಸ್ಯವನ್ನು ನಾನು ವಿವರಿಸಲಾರೆ. ಕೇವಲ ಕೆಲವೊಂದು ಕಠಿನಪದಗಳಿಗೆ ಅಥವಾ ಸಾಭಿಪ್ರಾಯಪ್ರಯೋಗಗಳಿಗೆ ಅರ್ಥವನ್ನಷ್ಟೇ ನಿವೇದಿಸುವೆ:
      ಅನಂತಪದ = ಆಕಾಶ, ಅನೇಕಚ್ಛಾಯಂ = ಅನೇಕವರ್ಣಗಳನ್ನು ತಳೆದದ್ದು, ಅಚ್ಛ + ಆಯಂ = ಶುಭ್ರವಾದ ಹರಹನ್ನು ಹೊಂದಿದುದು. ಉಚ್ಚ + ರುಚಿ + ಪ್ರಚ್ಛುರಿತಂ = ಚೆನ್ನಾದ ಕಾಂತಿಯಿಂದ (ಅಭಿರುಚಿಯಿಂದ) ಕಂಗೊಳಿಸುತ್ತಿರುವುದು, ನಿತಾಂತ = ಸದಾ, ನಿಸ್ತಾಂತಂ = ಬಳಲಿಕೆಯಿಲ್ಲದ, ಪ್ರಾತಿಭಂ = ಪ್ರತಿಭೆಯ ಸತ್ತ್ವ.

      • ಒಳ್ಳೆಯ ಪದ್ಯಗಳ ಮೂಲಕ , ಪ್ರತಿಭೆ ಮತ್ತು ಪಾಂಡಿತ್ಯದ ಸಮಾಗಮವನ್ನು
        ಪ್ರತ್ಯಕ್ಶ ತೋರುತ್ತಿರುವದಕ್ಕೆ ಧನ್ಯವಾದಗಳು.

    • ಗಣೇಶ್ ಸರ್, ಬಹಳ ಚೆನ್ನಾಗಿದೆ ಪದ್ಯ, ಶುಷ್ಕಪಾಂಡಿತ್ಯವನ್ನು ಹೇಸರಗತ್ತೆಯ ಕಪ್ಪುಬಿಳಿಪಿನ ಸಂಕುಚಿತತೆಗೆ ಹೋಲಿಕೆ ಚೆನ್ನಾಗಿದೆ, ಕತ್ತೆಯ ಚೇಷ್ಟೆಗಳಿಂದ ಶುಷ್ಕರ ನೀರಸ ಕಾರ್ಯಗಳು ಚೆನ್ನಾಗಿ ಬಿಂಬಿಸಲ್ಪಟ್ಟಿದೆ. ‘ಅನೇಕಚ್ಛಾಯಮಚ್ಛಾಯಮುಚ್ಚರುಚಿ/ನಿತಾಂತ ನಿಸ್ತಾಂತ’ ಎನ್ನುವಲ್ಲಿ ಶಬ್ಧಾಲಂಕಾರವು ಬಹಳ ಚೆನ್ನಾಗಿದೆ 🙂

    • ನಿಮ್ಮ ಪದ್ಯಗಳನ್ನು ಹೊಗಳಲಾರೆ.
      ನಿಸ್ತಾಂತಂ ತಾನದುಮದೆನಿತುಂ ಚಾಪತಾನಾಯ್ತು ಪೇಳೈ
      ಸುಸ್ತಿಂ bendಆಗುತಲಿ ನೆಲಮಂ ಕಚ್ಚಿ ಬಾಡಿರ್ಪುದಲ್ತೆಲ್| 😉

      • ಸೋಮ, ಕಾಂಚನಾ ಮತ್ತು ಪ್ರಸಾದು ಅವರ ಮನದುಂಬಿದ ಮೆಚ್ಚುಗೆಗಾಗಿ ಧನ್ಯವಾದಗಳು.

        ರಸಿಕಸಹೃದಯವಯಸ್ಯರ
        ಕಿಸುರಿಲ್ಲದ ಮೆಚ್ಚುಮಾತು ಕವಿಶಾರದೆಯಾ|
        ಹಸೆಮಣೆಯಂಚಿನೊಳೆಳೆದೊಂ-
        ದೊಸಗೆಯ ರಂಗೋಲಿಯಲ್ತೆ ಮುತ್ತು-ಪವಳದಾ ||

      • Apartheid:
        ಗಣಿಸೆಮ್ಮಯ ಚರ್ಮಛವಿಯ
        ನಣಕಿಸಲೇಕಿಂತು ಮುತ್ತು-ಪವಳಮೆನುತ್ತುಂ|
        ಧಣಿ ನಿಚ್ಚಳದಿಂ ಪೇಳಿ ಕ
        ರುಣದಿಂದಾರ್ಮುತ್ತುಮಾರು ಪವಳಮೆನುತ್ತುಂ||

        • ಸೊಗಸಾದ ರಂಗೋಲಿ ನಗಲಿನ್ನಂಗಳದಲ್ಲಿ |
          ಮಗುವಂತೆ ನುಗ್ಗಿ ಅಳಿಸೋದೇ?
          ರಂಪಣ್ಣ!
          ಮುಗುಳನ್ನು ಮೂಸಿ ಹಿಸುಕೋದೇ?

      • ಹೆದೆಯಿಲ್ಲದ ಬಿಲ್ಲಿಗೆ ಬಾಧೆಯದೇಂ?
        ಬೆದೆಯಿಲ್ಲದ ಗೋವಿಗೆ ಗಬ್ಬವದೇಂ?
        ಒದೆಯಿಲ್ಲದ ಪಾಠಕೆ ವಿದ್ಯೆಯದೇಂ?
        ಸೊದೆಯಿಲ್ಲದ ಸಗ್ಗಕೆ ಸಾಯುವುದೇಂ?

  5. स्रष्ट्रा रेखाङ्कनाभ्यासः
    पुरा यदा चिकीर्षितः।
    आदौ जीब्रः कृतः पश्चात्
    धनुरैन्द्रं कृतं मुदा॥

    [अत्रोत्प्रेक्षा ननु?]

    • स्रष्टू रेखाङ्कनोल्लासस्
      तीव्रो जातೲ पुरा यदा।
      जीब्रव्याघ्रावुभौ सृष्टौ
      धनुरैन्द्रं तथा कृतम्॥

      रूपवर्धनकाङ्क्षायां
      जीब्रव्याघ्रौ सहोदरौ।
      कृतवन्तौ पुरा किं वा
      खेश्वास्यस्य विडम्बनम्॥

      • “ಸ್ರಷ್ಟುಃ…….” ಇತ್ಯಾದಿಕೇ ಪದ್ಯೇ
        ರಮಣೀಯೇ ಮನೋಹರೇ |
        ಅಪ್ರತೀತಿಹತಃ ಶ್ಲೋಕಃ
        ಕಿಂ ಚ ’ಖೇಶ್ವಾಸ್ಯ’ಸಂಜ್ಞಯಾ ||

        (ಖ+ಇಷು+ಆಸ = ಖೇಷ್ವಾಸಃ = ಸುರಚಾಪಃ)

    • ವಿಲೋಮಕಾವ್ಯನಿಷ್ಣಾತಃ ಭವತ್ತುಲ್ಯಃ ಜನಾರ್ದನಃ|
      ಜೀವಜ್ಜೀಬ್ರಂ ಸ ಆದೌ ಪಶ್ಚಾತ್ಕೃತಶ್ಚಾಪಜಾಡ್ಯಕಮ್|| 🙂
      (ಕೃತಃ – ತಪ್ಪಿರಬಹುದು)

      • सन्तोषजनकं पद्यं
        त्वं नूनं हि प्रसादवान्।
        प्रसादनाम युक्तं ते
        पद्यैः‌ प्रसादयेः सदा॥

        (उपरि परिष्कृतम् → त्वं नूनमसि प्रसादवान् → त्वं नूनं हि प्रसादवान्।)

        ಪಶ್ಚಾತ್ಕೃತಶ್ಚಾಪಜಾಡ್ಯಕಮ್ -> पश्चात्कृतं चापजाड्यकम्।

        • ಕೃತಜ್ಞತೆಗಳು. ಎರಡನೆಯ ಪಾದದಲ್ಲಿ ಮಾತ್ರಾದೋಷವಿದೆ. ಹೀಗೆ ಸರಿಪಡಿಸಿದರೆ, ಸತ್ಯವನ್ನೂ ಹೇಳಿದಂತಾಗುತ್ತದೆ: त्वं दारोऽसि प्रसादवान्।
          (ದಾರ x ಉದಾರ)

  6. ಪಡೆಗುಂ ಮೇವನು ಕಂಠಪೂರ್ತಿ ಪಶುಗಳ್ ಪುಲ್ಲೊಂದಿಗೊಂದಾಗುತುಂ
    ನಡುವಂ ಬಾಗಿಸುತಿಂದ್ರಚಾಪ ನಮಿಕುಂ ಬಾಳಿತ್ತಬಾನ್ದೇವಗಂ
    ಪಿಡಿದುಂ ಶಾರದಮೇಘಮಾಲೆಯ ನಭಂ ಕಾದಿರ್ಪುದಯ್ ಕಾರಿಗಂ
    ಕುಡಿದುಂ ತಾಂ ರಸಮೆಲ್ಲಮಂ ರಸಿಕನುಂ ಮೇಣ್ಪಾಡುವಂ ಸೃಷ್ಟಿಯಂ

    (ಪಶುಗಳು,ಕಾಮನಬಿಲ್ಲು,ನಭಗಳ ಕೃತಜ್ಞತಾಭಾವದಂತೆ ರಸಿಕನೂ ಸೃಷ್ಠಿಗೆ ತಲೆಬಾಗುವನೆಂಬ ಅರ್ಥ)

    • ಸ್ವಲ್ಪ ವ್ಯಾಕರಣದ ತೊಡಕಿರುವಂತಿದೆ (ಉದಾ: ಪಡೆಗುಂ ಘಾಸಂ ಅಕಂಠಪೂರ್ತಿ ಎಂದರೆ ಸಾಕೂಸಾಲದ ಆಹಾರ ಎಂದಾಗುತ್ತದೆ. ಇದು ಆಕಂಠಪೂರ್ತಿ ಎಂದಿದ್ದರೆ ಹೂಟ್ಟೆತುಂಬ ಎನ್ನುವ ಅರ್ಥ ಸಾಧ್ಯ. ನಿಮ್ಮ ಇಂಗಿತವಿಲ್ಲಿ ಏನು? ಇತ್ಯಾದಿ. ಮುಖತಃ ಚರ್ಚಿಸೋಣ:-)

  7. ಕರಂಭ|| ಬಾನಂಗಳಂ ತಾನೆಸೆದರ್ತು ಬಣ್ಣದಿಂ-
    ದನೇಕತಾನಲ್ತೆ ವಸುಂಧರಾರುಚಂ|
    ಏನೆಲ್ಲ ವರ್ಣಾಂತರಮಿರ್ದೊಡೊಂದನುಂ
    ಚುನಾಯಿಸರ್ದಿರ್ದಪರಲ್ತೆ ಗಾರ್ದಭರ್||

    • ಕೆಲವೊಂದು ವ್ಯಾಕರಣದ ತೊಡಕುಗಳಿವೆ. ಮುಖತಃ ಚರ್ಚಿಸೋಣ.

  8. ಇದೊಂದು ಲಘುಪದ್ಯ:

    ಬಿಳಿಯೊಡಲಿನ ಮೇಲ್ ಕರ್ವಟ್ಟೆಯೋ ಮತ್ತದೇಂ ಕ-
    ರ್ಪುಳಿಯಲೊಡಲಿನೊಳ್ ಬೆಳ್ವಟ್ಟೆಯೋ ಮೇಲೆನಲ್ಕಂ |
    ತಳಮಳಮಿರೆ ತಾನೀ ಪುಂಡ್ರಹೋತ್ರಂಗಳೊಳ್; ಬಾನ್
    ಪೊಳೆವ ಮಳೆಯ ಬಿಲ್ಲಂ ನಿರ್ನೆರಂ ಮೇಲೆ ತಾಳ್ಗುಂ ||

    {ಮಾಲಿನೀವೃತ್ತದ ಈ ಪದ್ಯವು ಜೀಬ್ರಾದ(ಪುಂಡ್ರ=ಪಟ್ಟೆ ಹೋತ್ರ=ಕುದುರೆ) ಮೇಲಿರುವ ಪಟ್ಟೆಗಳು ಬಿಳಿಯೋ ಕಪ್ಪೋ ಎಂದು ಜಿಜ್ಞಾಸೆ ಮಾಡಿದೆ. ಆದರೆ ಮಳೆಬಿಲ್ಲು ಮಾತ್ರ ಬಾನ ಮೇಲಿನ ಪಟ್ಟೆಯೆಂದು ತೀರ್ಮಾನಿಸಿದೆ.}

    • ಬಹಳ ಚೆನ್ನಾಗಿದೆ ಸರ್

    • ಗಣೇಶ್ ಸರ್, “ಲಘು”ಪದ್ಯವೆಂದಿರಾ? ಇದು “ಗುರು”(ತಿನ) ಪದ್ಯವೇ !! (ಶೀಘ್ರವಾಗಿ ಬರೆದದ್ದಿರಬಹುದು)

      ನಿಮ್ಮೆಲ್ಲ ಗುರುತ್ವಾಕರ್ಷಕ ಪದ್ಯಗಳಿಗೆ ತುಂಬು ಹೃದಯದ ಧನ್ಯವಾದಗಳು.

  9. ನೀಲಾಂಬರದೊಳ್ ನೇಸರ
    ನೋಲಲ್ ಸಂಭವಿಸೆ ಹೇತು ಬಂಧವದೆಂತುಂ ?!
    ಕಾಲಾಂತರದೊಳ್ ಹೇಸರ
    ಸಾಲೊಳ್ ಸಂಭವವೆ ಸೇತು ಬಂಧವದಿಂತುಂ ??

    ಕಾಲಾಂತರ (= ಕಪ್ಪು ಪಟ್ಟಿಗಳಿರುವ) ಹೇಸರದ ಸಾಲು ~ (=ವರ್ಣ ಭೇದವಿರುವ) ಮನುಕುಲದಲ್ಲಿ ಎಂದಾದರು ಈ ರೀತಿ ವರ್ಣಮಯವಾದ ಸೇತುಬಂಧ ಸಾಧ್ಯವೇ ??

  10. ಮಳೆಯೆ ತಾನಿರದ ಕಡೆಯೊಳಿಂದ್ರಚಾಪವನು ನೋಡೆನಲ್ಕಾ
    ಮೊಳೆಯದಿರ್ಪ ಬುದ್ಧಿಯಿಹ ಕತ್ತೆಗಳಿಗಷ್ಟೆ ಕಾಂಬುದೆಂಬೆಂ!

  11. ನೀಲಾಕಾಶಕೆ
    ಮಾಲಿಯು ಬಿಗಿದಿಹ
    ನೂಲಿನಯೇಣಿಯ ಸೊಗಸೇನು !!
    ಮಾಲಿಯ ತೋಟದಿ –
    ಯಾಲಿಸಿ ಮಾತನು
    ಸಾಲೊಳು ಹೆಣೆದಿಹ ಕವಿಯಾರು ?

    ಸೃಷ್ಟಿ ಅನ್ನುವುದು ಭಗವಂತ ತೋಟ . ಭೂಮಿಯಲ್ಲಿರುವ ಜೀವಿಗಳಿಗೆ ಮೇಲೇರಲು ಭಗವಂತ (ಮಾಲಿ ) ಆಕಾಶದಿಂದ ಸೊಗಸಾದ ನೂಲಿನ ಏಣಿಯನ್ನು ಇಳಿ ಬಿಟ್ಟಿದ್ದಾನೆ . ಭಗವಂತನ ತೋಟದಿಂದ ಬೇರೆಯಾಗಿನಿಂತು ಮತ್ತು ಅದರೊಳಗೆ ಇದ್ದು ಶ್ರೇಷ್ಠ ಕವಿಯೊಬ್ಬ ಕವಿತೆ ರಚಿಸಿದ್ದಾನೆ . ಆ ಕವಿ ಯಾರು?
    ಶ್ರೇಷ್ಠ ಕವಿ = (ಗುರು) ಗಣೇಶ .

    • ಪಟ್ಟೆಗುದುರೆಗಳು
      ಬಟ್ಟಬಯಲಿನೊಳು
      ದಿಟ್ಟಿಗೆಡುತೆ ಮೇವಂದದೊಳು |
      ಪುಟ್ಟ ಕವಿಯಿವನು (ರಾಗ)
      ತಟ್ಟದೆಯೇ ನುಡಿ-
      ಗುಟ್ಟನು ಕೆಟ್ಟನು ಕಾಣದೆಯೇ 🙂

      • ಸರ್ ,
        🙂 ಪುಟ್ಟ ಕವಿಯು ತಟ್ಟನೆ ಬರೆದ ಪ್ರತಿಕ್ರಿಯೆಗೆ ಧನ್ಯವಾದಗಳು . ಪುಟ್ಟ ಕವಿಯ ಮೂಲಕ , ಇಲ್ಲಿ ಕಲಿಯುವವರೆಲ್ಲಾ ಮತ್ತೂ ಪುಟ್ಟವರೆ .

      • there is a. small typing mistake. it is not “putta kavi” it should be “huttu kavi” – born poet

  12. ಜೋಡಿಯಂ ಬಯಸಿರ್ದ ಪೊಸಜವ್ವನೆಯೆದೆಯೊ-
    ಳ್ಮೂಡೇರ್ವ ರಂಗನೇ ಮೀರಿಪಂತೆ,
    ಮೋಡವಂ ಮರೆಗೈವ ಮಿತ್ರನಂ ಪೊಂದಲೆನೆ
    ಹೂಡಿರ್ಪಳಂಬರೆ ಪ್ರೀತಿವಿಲ್ಲಂ

  13. ||ಚಂಪಕಮಾಲಾವೃತ್ತ, ಉಪಮಾಲಂಕಾರ||

    ಗಗನದೆ ಸುಂದರಾಕೃತಿಯ ಕಾಮನಬಿಲ್ಲಿರೆ ಪುಷ್ಪಮಾಲೆಯೊಲ್-
    ಬಗೆಗೊಳುತಿರ್ದು ರಾಜಿಸುತೆ,ರಂಗುಗಳಂ ಪಡೆದಂತೆ ಪೂಗಳಿಂ, |
    ಜಗಿಯುತೆ ಪುಲ್ಲನಾ ಧರೆಯೊಳಿರ್ಪ ಮೃಗಂಗಳ ಕಾಲದೇಹದೊಳ್,-
    ಸೊಗದ ಕಮಾನುಗಳ್,ಬಿಳಿಯ ಬಣ್ಣದೆ ಮೂಡಿರೆ,ವಿಸ್ಮಯಾವಹಂ ! ||

  14. ಸಪ್ತ ಸಾಗರ ಸಾರವಂ ಬಗೆದೆತ್ತಿಕೊಂಡವ ಸಾಗಲುಂ
    ಸಪ್ತ ವರ್ಣದ ಮಾರ್ಗದಾ ಸುಳಿವಿಂತು ಕಂಡುದೆ ಬಾನೊಳುಂ।
    ಸಪ್ತ ಜೀವನ ಧಾತುವಂ ಸುರಿಸುತ್ತೆ ನಿಂದವ ಹರ್ಷದಿಂ
    ಸಪ್ತ ವರ್ಣದ ಸೇಸೆಯಿಂ ಹರಸಿಂತು ಕಾಯ್ದನೆ ವರ್ಷದಿಂ ।।

    ಅಂದಹಾಗೆ “ಅವ” = “ಸಪ್ತಸಪ್ತಿ”ಯಲ್ಲವೇ ?!
    (ಈ ಬಣ್ಣದ “ತಾಗು” – ಭುವಿಯಿಂದ ಮೇಲೆ ಸಾಗಿದುದೋ / ಬಾನಿನಿಂದ ಕೆಳಗೆ ಬಾಗಿದುದೋ ಎಂಬ ಸಂದೇಹದಲ್ಲಿ ಕಟ್ಟಿದ “ಮಲ್ಲಿಗೆ ದಂಡೆ”)

  15. ಕತ್ತೆಯು ಪುಲ್ಲನು ತಿಂಬುತ
    ಲತ್ತಿತ್ತಲುಗಾಡದಂತೆ ತೂಂಕಡಿಸಿರಲಾ|
    ಪೊತ್ತೊಳಗಾಗಸಮಂನೋ
    ಡುತ್ತಲೆಬಣ್ಣದಕಮಾನಿನಿಂಪೆದರಿರ್ಕುಂ|

    • ಭಾಷೆಯ ಹದ ಚೆನ್ನಾಗಿದೆ. ಆದರೆ ಕಲ್ಪನೆಯಲ್ಲಿ ಕಾವ್ಯಾಂಶ ಕಡಮೆಯಾಗಿದೆ.

  16. ದಿಟಮೆರಡೆ ಬಣ್ಣಮೆನಗು-
    ತ್ಕಟಮೈ ಜಸದಿಂದೆ ಕಾಂಬುದಲ್ತಾ ಬಣ್ಣಂ
    ಸ್ಫುಟಮಲ್ತಲ್ತು ನಭಕೆ ಮ-
    ರ್ಕಟನಾರೊರೆದಪನದೆಂಬುದೇಂ ಖರನಿಕರಂ

    • ಪದ್ಯದ ಶೈಲಿ ಸಲೆಸೊಗಸಾಗಿದೆ. ಆದರೆ ಉತ್ತರಾರ್ಧವು ನನಗೆ ಅರ್ಥವೇ ಆಗುತ್ತಿಲ್ಲ !!

      • ಹೌದು ಗಣೇಶ್ ಸರ್ ಅರ್ಥ ಸ್ಪಷ್ಟತೆಯಿರಲಿಲ್ಲ, ಕಾಮನಬಿಲ್ಲನ್ನು ಕುರಿತು ಹೇಸರಗತ್ತೆಗಳಿಗೆ ಉದಾಸಿನವೇಕಿರಬಹುದೆಂಬ್ಉದನ್ನು ಬಿಂಬಿಸುವುದು ಪದ್ಯದ ಆಶಯವಾಗಿತ್ತು, ಮೂಲದಲ್ಲೆ ತಿದ್ದಿದ್ದೇನೆ 🙂

  17. ಬರೆಬರೆಬಟ್ಟೆಯಲಿಹ ಹೇ-
    ಸರಕತ್ತೆಗಳಿಲ್ಲಿ ಶಾದ್ವಲದಿ ಖೈದಿಗಳೇಂ ?
    ಸೆರೆ ಕಳಚುವಾಸೆಯೇ ಸುಮ-
    ಶರ-ಕಾರ್ಮುಕ-ವರ್ಣರೂಪ-ಸುಸ್ವಪ್ನವದೇಂ ?

    • ಗಗನಂ ಗಗನಾಕಾರಂ ಸಾಗರಸ್ಸಾಗರೋಪಮಃ |
      ಸುಧೀರಕವಿತಾ ನೂನಂ ಸುಧೀರಕವಿತೋಪಮಾ ||
      ತಮ್ಮ ಯಾವೊಂದು ಪದ್ಯದಲ್ಲಿಯೂ ಸ್ವೋಪಜ್ಞನಾವೀನ್ಯ ಮತ್ತು ಚಮತ್ಕಾರಗಳನ್ನು ತಂದೇ ತರುವ ಸುಧೀರರ ಕಲ್ಪನಪ್ರಾವಣ್ಯಕ್ಕೆ ಅಂಜಲಿಃ ಪರಮಾ ಮುದ್ರಾ !!

    • ಸುಧೀರ್ ಸರ್, ಬಹಳ ಚೆನ್ನಾಗಿದೆ ಪೂರಣ

      • Thank you, Ganesh and Soma.
        Ganesh is too kind.
        ಲಘುವಾಗಿ ನನ್ನನ್ನೇ ನಾನು ಚುಡಾಯಿಸಿಕೊಳ್ಳುವುದು ಹೀಗೆ –
        ಲೋ ಸುಧೀರ! ನೀನು ಹೀಗೇ ಇದ್ದರೆ ಯಾರಾದರೂ ಒಮ್ಮೆ ನಿನಗೆ ’ಪೂರಣ ಪೋಲಿ’ ಅಂತ ಬಿರುದು ಕೊಟ್ಟುಬಿಟ್ಟಾರು!

  18. ಪಸಿರಂ ತಳೆದುಂ, ಹೊಣೆಯಿಂ
    ಕಸುವಂ ತುಂಬುತಿರೆ ಪೆತ್ತ ಕಂದರೊಳಿಳೆಯುಂ,
    ನಸುನಗೆಯಂ ದೇವರ್ಕಳ್
    ಪಸೆದುದು ತೃಪ್ತಿಯಿನೆ ,ರಂಗಿನೋಕುಳಿಯಾಯ್ತೇಂ?

    • ಪದ್ಯಶೈಲಿಯು ತುಂಬ ಚೆನ್ನಾಗಿದೆ. ಆದರೆ ಸ್ವಲ್ಪ ವಿವರಣೆಯಿಲ್ಲದೆ ತಿಳಿಯುತ್ತಿಲ್ಲ.

      • ಹಸಿರನ್ನು ತುಂಬಿಕೊಂಡ ಭೂಮಿಯು, ಜವಾಬ್ದಾರಿಯಿಂದ ಉಣಿಸನ್ನು ಇತ್ತು ತನ್ನ ಮಕ್ಕಳನ್ನು ಬಲಪಡಿಸುತ್ತಿರೆ(ಅಥವಾ ಪ್ರಕೃತಿ ಮಾತೆಯು ಹೊಸತನವನ್ನು ತಾ ತಳೆದು ಮಕ್ಕಳಲ್ಲಿ ಉತ್ಸಾಹವನ್ನು ತುಂಬುತ್ತಿರೆ):(ತಾಯ ಘನಕಾರ್ಯದಿಂದ ತೃಪ್ತರಾದ?)ದೇವರು ನಗೆಯನ್ನು ಬೀರಿದ್ದು,ರಂಗಿನ ಅಲೆಯಾಯ್ತೇ?
        (ಈ ರೀತಿಯ ಅರ್ಥವನ್ನು ಕೊಡದ ಪದ್ಯವನ್ನು ಬರೆದದ್ದಕ್ಕೆನ್ನ ಕ್ಷಮಿಸಿ. ಪದ್ಯವನ್ನು ತಿದ್ದುವ ಪ್ರಯತ್ನವನ್ನು ಮಾಡಿದ್ದೇನೆ.)

  19. ತನುವ ಹೋಲುವ ನೆಲವು, ಹುಲುಸುಹುಲ್ಲಿನ ಪಸಿರೆ
    ಮನದ ಹುಟ್ಟಗೆಯದುವು, ಮನುಜಬಗೆಯುಂ ।
    ದಿನದೆ ಮೆಯ್ದಿಹುವೈದು ತುರಗವಿಂದ್ರಿಯಗಳವು
    ನೆನೆದು ತಾವ್ ಭ್ರಮಿಸಿಹವೆ ಸಹಜದೊಗೆಯಂ ।।

    ಚಿತ್ರದ ಬಣ್ಣಗಳಲ್ಲಿ ಕಂಡ ಮನುಜಬಗೆ : ಮೇಯುತಿರುವ ಐದು ತುರಗಗಳು (= “ಪಂಚೇಂದ್ರಿಯ”ಗಳು) ಸಹಜ ವರ್ಣಮಯ “ಒಗೆತನ”ದ ಸ್ಮರಣೆಯಲ್ಲಿ(ನೆನೆದು) ಭ್ರಮಿಸಿವೆಯೇ? ಎಂಬ ಕಲ್ಪನೆ
    (ವಿನೋದವಾಗಿ : ಮಳೆಯಲ್ಲಿ ಒದ್ದೆಯಾಗಿ(ನೆನೆದು) ಬಣ್ಣಕಳೆದುಕೊಂಡ ಸಹಜ “ಒಗೆತ”ದ ಭ್ರಮೆಯೋ ?!)

    • ನಿಮ್ಮ ವ್ಯಾಖ್ಯಾನವಿಲ್ಲದೆಯೇ ಪದ್ಯವು ನೀವು ಬಗೆದಂತೆ ಅರ್ಥವಾಗುತ್ತಿಲ್ಲ.

      • ಧನ್ಯವಾದಗಳು ಗಣೇಶ್ ಸರ್,
        ಮೊದಲ ಮೂರು ಸಾಲುಗಳು – ಶರೀರ,ಮನಸ್ಸು ಮತ್ತು ಪಂಚೇಂದ್ರಿಯಗಳ ಹೋಲಿಕೆಗೆ ಪ್ರಯತ್ನಿಸಿದ್ದು. ಕೊನೆಯಸಾಲು ತಾನಾಗೆ ಬಂದದ್ದು, ಹಾಗಾಗಿ ಈ ಅರ್ಥ ಹುಡುಕುವ ಪ್ರಯತ್ನ ! ಸರಿಪಡಿಸಿಕೊಳ್ಳುತ್ತೇನೆ.

  20. ಆಸೆಗುದುರೆಗಳನೇರಿ ಸಾಗಿ ನಾ ಧೈರ್ಯಧನುವ ಪಿಡಿದು
    ಬೀಸಿ ಸಾಮರ್ಥದೆನ್ನ ಬಾಣವನ್ನದಕೆ ಪೂಡಿ ಸೆಡೆದು
    ಸೂಸಿದೆಲ್ಲೆಡೆಯ ಸೊಬಗ ಹುರುಪ ರಾಸಿಕ್ಯವೆಂಬ ಹೆದೆಗೆ
    ಲೇಸಿನಿಂದೆಸಗಿ ಮುಟ್ಟಬಲ್ಲೆ ಸಾರ್ಥಕ್ಯವೆಂಬ ಗುರಿಗೆ ||

    [ಸಂತುಲಿತ ಮಧ್ಯಾವರ್ತ ಗತಿ – 3+5+3+5+3+5+ಉ]

  21. ಇಳೆಯೊಳ್ ದ್ವಿಧವರ್ಣಂ ನಾಂ
    ತಿಳಿಯಯ್ ಆಜೀವದಿಂದೆ ಮೆರೆದಪೆ ಗಡ ನೀಂ
    ಪೊಳೆಯಲ್ಕಲ್ಪಭವದೆ ಕ-
    ಣ್ಪಿಳಿಯೊಳ್ ಪಂಚತ್ವಮಾಂಪೆ ಬಣ್ಣಗಳಿರಲೇಂ?

  22. ಸೋಮನ ಕಲ್ಬನೆಯ ಹಾದಿಯಲ್ಲಿ ನನ್ನದೊಂದು feable ಪದ್ಯ

    ಹಲವು ಬಣ್ಣಗಳಿದ್ದರೇನು ಕಾಮನಬಿಲ್ಲೆ
    ಕೆಲಕಾಲವಲ್ತೆ ನಿನಗೀನಭದೊಳು|
    ಚೆಲುವೆನ್ನೊಳಿರದಿರ್ದರೇನು ಬಹುಕಾಲ ನಾ
    ಬಿಳಿಕಪ್ಪು ಬಣ್ಣದಿಂ ಜೀವಿಸಿರ್ಪೆ|

    • ಪ್ರಿಯ ಚೀದಿ, ನಿನ್ನ ಈ ಪದ್ಯದಲ್ಲಿ ಚಿತ್ರದ ಎಲ್ಲ ವಿವರಗಳೂ ಬಂದಿವೆ.
      ರಾಮ್, ಸೋಮ, ಕಾಂಚನ, ಉಷಾ ಅವರುಗಳ ಈಚಿನ ಒಂದೊಂದು ಪದ್ಯಗಳಲ್ಲಿ ಚಿತ್ರದ ಎಲ್ಲ ವಿವರಗಳಿಗೆ ಅನ್ವಯಿಸುವ ಅಂಶಗಳಿಲ್ಲ. ಕೆಲವೆಡೆ ಜೀಬ್ರಾಗಳು ಕಾಣೆಯಾಗಿದ್ದರೆ ಮತ್ತೆ ಕೆಲವೆಡೆ ಕಾಮನಬಿಲ್ಲು ಕಾಣೆಯಾಗಿದೆ.

  23. ಪಸುರ್ವುಲ್ಲಂ ಮೇಯಲ್ಕಿಂ
    ತೆಸೆಯುತುಮಾಗಮಿಸಿ ಕಂಡುವಾ ಕತ್ತೆಗಳಾ
    ಗಸದೊಳ್ ವಿಲ್ಲಂ ಭ್ರಮಿಸುತೆ
    ಬೆಸಗೊಂಡಿರ್ದಪವೆ ರುಚಿಯಿದರ್ಕೇನೆನುತುಂ||
    (ಹಸಿರು ಹುಲ್ಲನ್ನು ತಿನ್ನಲು ಎಂದು ಆಗಮಿಸಿ ಆಗಸದಲ್ಲಿ ಬಿಲ್ಲನ್ನು ಕಂಡವು. ಅದನ್ನೂ ತಿನ್ನುವ ವಸ್ತು ಎಂದು ಭ್ರಮಿಸುತ್ತಾ ಇದಕ್ಕೆ ಏನು ರುಚಿಯಿರಬಹುದೆಂದು ಬೆಸಗೊಡಿರಬಹುದೆ! )

    • ಅಂತಾದೊಡಾ ಕತ್ತೆಗಳೊಳು ವಿಂಗಡಿಸಬೇ-
      ಕೆಂತೊ ಬುದ್ಧಿಯವೆರಡ ಬಲದ ಬದಿಯೊಳ್|
      ಶಾಂತಿಯಿಂ ಮೇಯುತ್ತಿರಲವಿತರ ಕತ್ತೆಗಳು
      ಚಿಂತಿಸಿವೆ ತೋಟಕರ ನಿರ್ದೇಶದೊಲ್|| 🙂

      • ಕತ್ತೆಯ ಯೋಚನಾಲಹರಿಯಂ ಮಿಗೆ ಕಾಣ್ಬೆನದರ್ಕೆ ಕಾರಣಂ
        ಕತ್ತೆಗಳೆಲ್ಲಮಂ ಬನದೆ ಮೇಯಿಸುವಾಂ ಗಡ ತೋಟಕಾಖ್ಯನೈ 🙂

    • ಆಹಾ! ಒಳ್ಳೆಯ ಹೊಸ ಕಲ್ಪನೆ ಮತ್ತು ಸೊಗಸಾದ ಶೈಲಿ! ಅಭಿನಂದನೆಗಳು.

  24. ನಿನ್ನೊಳಿರದ ಬಣ್ಣವನೆನಿತನೊ ನಾಂ ತಾಳ್ವೆನೆನ್ನದೆಲೆ ಬಾನ್
    ಮನ್ನಿಸೆನ್ನಬೇಕಲ್ತೆ ಪಚ್ಚೆಯಂ ತುಸುವೆ ಮೆರೆಸಿದುದಕೆ|
    ಪನ್ನತಿಕೆಯದರ ಬುವಿಯ ಮರಕತದ ಮಾತ್ರಸಾಟಿಯುಂಟೇಂ
    ಹೊನ್ನ ತನ್ನೆಲ್ಲ ತೋರ್ದವೋಲ್ ಧನಿಕನಿಂಗೆ ಯಾಚಕಂ ತಾಂ||

  25. ಮೇಘಲೋಕ ನಲಿಯಲ್ಕೆ ಹೋಳಿಯೋ-
    ಲೋಘದಿನ್ದೆಸೆವ ರಂಗಿನಾಟದಿಂ|
    ಭೋಗಿಯಾಶಿಸಿರೆ ವರ್ಣವೃಷ್ಠಿಯೊಳ್
    ರಾಗದಿಂ ನೆನೆವ ಕಾಂತೆಸಂಗಮಂ||

  26. ಹೊಳ್ಳರಿಗೆ, ಸ್ವಾಗತ 🙂

    • ರವೀಂದ್ರರ್ಗಂ ಪದ್ಯಪಾನಕ್ಕಂ ಸ್ವಾಗತಂ, ತಮ್ಮೀ ಪದ್ಯದ ಭಾಷೆಯಂ ಬಂಧಮುಮಂ ಶೈಲಿಯಂ ಕಂಡೆನ್ನಮನಂ ಮಿಗದವೊಲ್ನಲಿಗುಂ, ಸೋಗೆಯವೊಲ್ ಕುಣಿಗುಂ, ವಿಹಂಗನವೊಲ್ ಪಾರ್ಗುಂ, ಸುಧೆಯ ಘಟದವೊಲ್ ಉರುಳ್ಗುಂ, ನೀರಿನವೊಲ್ ಪರಿಗುಂ, ಬೆಟ್ಟನವೊಲ್ ಅಲುಂಗಾಡದೆ ನಿಲ್ಗುಂ …ಗುಂ …ಗುಂ. ಪದ್ಯಪಾನದೊಳ್ ಪಿಂತೊರ್ಮೆ ತಮ್ಮೀ ಪೆಸರೊಳ್ ಇನ್ನೊರ್ವರ್ ಪೆಸರಾಂತ ಪ್ರಾಜ್ಞಂಮನ್ಯರ್ಗಳ್ ಮೇಣ್ ನೆಗಳ್ತಿವೆತ್ತ ಪ್ರತಿಭಾನ್ವಿತರ್ ರವಿಯಾದೊಡೇನಂತೆ ಪದ್ಯದ ಸುಧಾಪಾನಮಂ ಸಹೃದಯರ್ಗೆ ಮೊಗೆಮೊಗೆದು ಶಶಿಯವೊಲ್ ಉಣಬಡಿಸುತಿರ್ದರ್. ಅವರ್ಗೆ ಪೆರ್ಚಿನ ಕಜ್ಜದ ಕಲಾಪಂಗಳಂ ಪೇರ್ದ ನಿಯತಿಯಿಂ ಎಲ್ಲರ್ ಅವರ್ಕಳ ಪದ್ಯದ ರಸದೌತಣದಿಂದೆ ವಂಚಿಸಲ್ಪಟ್ಟರ್. ಅವರ್ಗೆ ಪದ್ಯಪಾನದೊಳ್ ನಿಚ್ಚಂ ಒರೆಯಿರೆಂದು ಪೇಳ್ದು ಪೇಳ್ದೆನ್ನ ಕಂಠದಿಂ ಒಣಗಿದ ಗದ್ಗದಧ್ವನಿಯಿಂದೆ ಇಂತು ನಿಯತಿಯಂ ಬಿನ್ನವಿಸುವೆನಾಂ ‘ದಯಮಂ ತೋರ್ದು ಇಂತೆಯೇ ಚಿರಕಾಲಮೀ ಕವೀಂದ್ರನ ದಯೆಯೆಮಗಿರ್ಪಂತೆ ಕಾಯ್ಗುಂ’ 😉

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)