Aug 302014
ಎಲ್ಲಾ ಪದ್ಯಪಾನಿಗಳೂ ಗೌರೀ-ಗಣೇಶ ಹಬ್ಬವನ್ನು ಅದ್ಧೂರಿಯಿಂದ ಆಚರಿಸಿರುತ್ತೀರೆಂದು ನಂಬಿದ್ದೇನೆ 🙂
ಚಂಪಕೋತ್ಪಲ ಮಾಲೆಯ ಪಾದಾಂತ್ಯಕ್ಕೆ ಹೊಂದುವ “ಮೆರುಗೇಂ ಗಣೇಶನಿಂ” ಬಳೆಸಿ ಪದ್ಯರಚನೆಯನ್ನು ಮಾಡಿರಿ
ಎಲ್ಲಾ ಪದ್ಯಪಾನಿಗಳೂ ಗೌರೀ-ಗಣೇಶ ಹಬ್ಬವನ್ನು ಅದ್ಧೂರಿಯಿಂದ ಆಚರಿಸಿರುತ್ತೀರೆಂದು ನಂಬಿದ್ದೇನೆ 🙂
ಚಂಪಕೋತ್ಪಲ ಮಾಲೆಯ ಪಾದಾಂತ್ಯಕ್ಕೆ ಹೊಂದುವ “ಮೆರುಗೇಂ ಗಣೇಶನಿಂ” ಬಳೆಸಿ ಪದ್ಯರಚನೆಯನ್ನು ಮಾಡಿರಿ
ಗೋಮಯಗುಪ್ತಿಯಾಗಿ ಮಿಗೆ ಮಣ್ಣಿನ ಮೂರ್ತಿಯ ರೂಪನಾಂತು ದೂ-
ರ್ವಾಮಹಿತಾತ್ಮನಾಗಿ ಮಿಗಿಲರ್ಕದ ಪತ್ರಮೆನುತ್ತೆ ಮರ್ತೆ ನಿ-
ಸ್ಸೀಮತೆಯಿಂದೆ ಮುಮ್ಮೊದಲ ಪೂಜೆಯನೋಜೆಯನಾಂತನಲ್ತೆ ನಿ-
ಷ್ಕಾಮತೆಯಿಂದೆನುತ್ತೆ ಪರಿಕಿಪ್ಪೊಡೆ ಕೇಳ್! ಮೆರುಗೇಂ ಗಣೇಶನಿಂ!!
ಪ್ರಿಯ ಗಣೇಶ್, ಪತ್ರ, ದೂರ್ವಾಲಂಕೃತನಾದ ಸಗಣಿಯ, ಮಣ್ಣಿನ ರೂಪದ, ನಿಷ್ಕಾಮನೆಂಬಂತೆ ಮೊದಲ ಪೂಜೆಯನ್ನು ಪಡೆಯುವ ಗಣೇಶನ ಮೆರುಗು ಬಹಳ ಸುಂದರವಾಗಿ ಚಿತ್ರಿತವಾಗಿದೆ.
ಇದೋ, ಸ್ವದೇಶಕ್ಕೆ ಬಂದೊಡನೆಯೇ ಮೊತ್ತಮೊದಲ ಕೃತಜ್ಞತಾಂಜಲಿ:-)
ಬಹಳ ಸಂತೋಷ, ಸ್ವಾಗತ ಗಣೇಶ್ ಸರ್ 🙂
ಸುಧಾರಿಸಿಕೊಳ್ಳಿರಿ, ಶನಿವಾರ ಭೇಟಿಮಾಡುತ್ತೇನೆ 🙂
ತೋರುತಸೊಂಡಿಲಂ ಬಳುಕಿಸುತ್ತಿರೆಪೊಟ್ಟೆನಾಚೆಗೀಚೆಗಂ
ಭಾರದೊಳೌಂಕಿರಲ್ಲಿಲಿಯಧೊಪ್ಪೆನೆಬಿದ್ದುದ ನೋಡೆ ಸೈಪಿನಿಂ
ಪೋರನವೊಲ್ನಗಲುಚಂದಿರಗೊಮ್ಮೆಲೆ ಶಾಪವಿತ್ತನೀ
ಧೀರನಪಾಡುತುಂ ನಮಿಸುವಾ ಧರೆಯೊಳ್ ಮೆರುಗೇಂ ಗಣೇಶನಿಂ
3rd line corrections needed.
ಪೋರನವೊಲ್ನಗುತ್ತಿರಲುಚಂದಿರಗೀಗಳೆ ಶಾಪವಿತ್ತನೀ
ಮತ್ತೊಂದು typo – ಮೊದಲನೆಯ ಸಾಲು ಹೀಗಿರಬೇಕಿತ್ತು – “ತೋರುತಸೊಂಡಿಲಂ ಬಳುಕಿಸುತ್ತಿರೆಪೊಟ್ಟೆಯನಾಚೆಗೀಚೆಗಂ”
ಚರಣಮನಾಂತು ನೆಚ್ಚದರ ಜೀವನದೊಳ್ ಬೆಳಕಾಗಿ ಬಂದುತಾಂ
ಹರಿಸುತೆ ಸರ್ವ ದುಃಖ ನಿಚಯಂ ಮಿಗೆ ನಿಂದಿರೆ ಪೂರ್ವ ಕಾಲದಿಂ,
ಪರಿವ ಶರಾವತಿಪ್ರಯುತ ಸಾಗರಕಂಠದ ಪಚ್ಚೆ ಬೀಡಿರಲ್
ಪುರವಿಡಗುಂಜಿಯುಂ ತಳೆದ ನಿಚ್ಚದ , ಪೆರ್ಮೆರುಗೇಂ ಗಣೇಶನಿಂ!!
(ಗಣೇಶರ ಸಲಹೆಯಂತೆ ಪದ್ಯದಲ್ಲಿ ಸವರಣೆ ಮಾಡಿರುವೆ 🙂 )
ನರ್ತನ ಭಂಗಿಯಲ್ಲಿದ್ದ ಧಾರವಾಡದ ಸಾರ್ವಜನಿಕ ಗಣೇಶ ವಿಗ್ರಹವೊಂದನ್ನು ನೋಡಿದಾಗ ಬರೆದ ಪದ್ಯ.. ಕೊಟ್ಟಿರುವ ಪದ್ಯಪೂರಣವನ್ನು ಬಿಟ್ಟು ಬೇರೊಂದು ಪದ್ಯ ಬರೆದಿರುವುದಕ್ಕೆ ಕ್ಷಮೆಯಿರಲಿ….
ನಾನಾಮೋದಕಖಾದ್ಯಗಂಧಸುರಸಾಸ್ವಾದಪ್ರಸನ್ನಾನನ-
ಸ್ತಾನಾಲಾಪವಿತಾನಗಾನಗಮಕೈಃ ಸಂಗೀತಕೈರ್ನoದಿತಃ |
ಭೃತ್ಯೈರ್ಭಾವಿತಪಾವನಾಂಘ್ರಿಯುಗಲೋ ನಿತ್ಯಂ ಸ್ತುತೋ ಯಃ ಸುರೈಃ
ನೃತ್ಯನ್ನೋ ನಟರಾಜಸೂನುರನಿಶಂ ಪಾಯಾತ್ ಸದಾ ಸಂಕಟಾತ್ ||
ಅಡ್ಡಿಯಿಲ್ಲ, ಒಳ್ಳೆಯ ಪದ್ಯವೇ ನಮ್ಮ ಕೈಸೇರಿದೆ…..ಅಂದಹಾಗೆ ಬಹಳ ದಿನಗಳಿಂದ ಕಾಣೆಯಾದಿದ್ದೀರಲ್ಲಾ! ಕುಶಲ ತಾನೆ?
ಕುಶಲವಾಗಿದ್ದೇನೆ ಸರ್. ಅದು…… ಈ ತಿಂಗಳು ಕನ್ನಡ ಎಂ. ಎ. (external – ಎಮ್ಮೆ) ಪರೀಕ್ಷೆ ಬರೆಯಲಿದ್ದೇನೆ. ಹಾಗಾಗಿ ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ದಲ್ಲಿ ತೊದಗಿದ್ದೇನೆ. ಆದಷ್ಟು ಬೇಗ ಮತ್ತೆ ಪದ್ಯರಚನಾಭ್ಯಾಸದಲ್ಲಿ ತೊಡಗಿಕೊಳ್ಳುವೆ… ಧನ್ಯವಾದಗಳು
ಚೀದಿ ಮತ್ತು ಕಾಂಚನ ಅವರ ಪದ್ಯಗಳಲ್ಲಿ ಸ್ವಲ್ಪ ಸವರಣೆಗಳು ಬೇಕಿವೆ. ಅದನ್ನು ನಾನು ಊರಿಗೆ ಬಂದೊಡನೆ ಮುಖತಃ ಕಂಡಾಗ ತಿಳಿಸುವೆ. ಅಂದಹಾಗೆ, ಈ ಬಾರಿ ಅದೇಕೆ ಜಿ ಎಸ್ ರಾಘವೇಂದ್ರ ಇನ್ನೂ ಸಂಸ್ಕೃತಸಮಸ್ಯೆಯನ್ನು ಪದ್ಯಪಾನದಲ್ಲಿ ಹಾಕಿಲ್ಲ? ಹೊಸ ತಿಂಗಳು ಬಂದಿತಲ್ಲ!!
ಆಗಲಿ ಸರ್, ನನ್ನ ಗಮನಕ್ಕೆ ಬಂದ ತಪ್ಪುಗಳನ್ನು ಮೇಲೆ ಸವರಿಸಿದ್ದೇನೆ..
After correcting 1st and 3rd line..
ತೋರುತಸೊಂಡಿಲಂ ಬಳುಕಿಸುತ್ತಿರೆಪೊಟ್ಟೆಯನಾಚೆಗೀಚೆಗಂ
ಭಾರದೊಳೌಂಕಿರಲ್ಲಿಲಿಯ,ಧೊಪ್ಪೆನೆಬಿದ್ದುದ ನೋಡೆ ಸೈಪಿನಿಂ
ಪೋರನವೊಲ್ನಗುತ್ತಿರಲುಚಂದಿರಗೀಗಳೆ ಶಾಪವಿತ್ತನೀ
ಧೀರನಪಾಡುತುಂ ನಮಿಸುವಾ ಧರೆಯೊಳ್ ಮೆರುಗೇಂ ಗಣೇಶನಿಂ
ಪ್ರಿಯ ಚೀದಿ,
ಮುಖತಃ ಗಣೆಶರಿಂದ ಸಲಹೆ ಪಡೆಯುವ ಯೋಜನೆ ಸಾಗುತ್ತಿರಲಾಗಿ, ಒಂದೆರಡು ನನಗೆ ತೋಚಿದ ವೆಷಯಗಳನ್ನು ಇಲ್ಲಿ ಟಂಕಿಸುತ್ತೇನೆ :
ಔಂಕಿರಲ್ + ಇಲಿ = ಔಂಕಿರಲಿಲಿ. ಆದ್ದರಿಂದ “ಔಂಕಿರಲ್ಕಿಲಿ” ಮಾಡಬಹುದೆನಿಸುತ್ತದೆ.
“ನಮಿಸುವಾ ಧರೆಯೊಳ್” ಬದಲು “ನಮಿಸುವೀ ಧರೆಯೊಳ್” ಆದರೆ ದೀರ್ಘಕ್ಕೆ ಸಾರ್ಥಕತೆ ಬಂದೀತು
ಹಲವೆಡೆ ಲಘುಗಳ ಅವಶ್ಯಕೆತೆಯಿದ್ದಲ್ಲಿ, ಭಾಷೆ ಹೊಸಗನ್ನಡವಾಗಿದೆ [ನಾನೂ ಹೀಗೇ ಮಾಡಬಹುದೇನೊ 🙂 ]
‘ರ’ ಕಾರ ಪ್ರಾಸ ಚೆನ್ನಾಗಿ ಹಿಡಿದಿದೆ 😉
ಸವರಣೆಗಳಿಗೆ ಧನ್ಯವಾದಗಳು ರಾಮ್ _/\_ ಅಯ್ಯೋ “ರ” ಕಾರ ಪ್ರಾಸ.. 🙁
ಕರೆದು ತಿಂಡಿಯ ಸುರಿವ ಭಕ್ತರೆಲ್ಲರ ಮನೆಯೊ
ಳರೆ ಗಳಿಗೆಗಿಳಿದು ವಾಹನವನೇರುತಬರಲು
ಸರಿದ ಹಾವನು ಕಂಡು ಗಣಪನನು ಹೊತ್ತ ಮೂಷಕವು ಮುಗ್ಗರಿಸಲಲ್ಲಿ I
ಬಿರಿದ ತನ್ನುದರಕಾಗಲೆ ಗೌರಿಸುತ ಚತುರ
ಹರಿದೋಡಿದುರಗವನೆ ಮತ್ತೆಳೆದು ಸುರುಳಿ ಸುಂ
ದಿರಲು ಮೂಷಕವನಂಜಿಸಿ ಸರ್ಪಕೊದಗಿದಾ ಮೆರುಗೇಂ ಗಣೇಶನಿಂದ II
ಚತುರಮತಿಯಾದ ಗಣೇಶ ತೊಂದರೆ ಕೊಟ್ಟ ಹಾವನ್ನೂ ತನ್ನ ಉದರಾಭರಣ ಮಾಡಿಕೊಂಡ ಅನ್ನುವ ತಾತ್ಪರ್ಯ . ( ಹಳೆಗನ್ನಡ ಹದವಾಗದೆ ಉತ್ಪಲ / ಚಂಪಕ ಮಾಲೆಯಲ್ಲಿ ಸಾಧ್ಯವಾಗಿಲ್ಲ )
ಆಹಾ! ಇದು ನಿಜಕ್ಕೂ ಸೊಗಸಾದ ಕಾವ್ಯಕಲ್ಪನೆ!!…ಅಭಿನಂದನೆಗಳು….ಅಲ್ಲದೆ ಪೂರಣಕ್ಕಾಗಿ ನೀಡಿದ ಪದ್ಯಪಾದಭಾಗವನ್ನು ತುಂಬ ಚತುರತೆಯಿಂದ ವಾರ್ಧಕದ ಗತಿಗೆ ಅಚ್ಚುಕಟ್ಟಾಗಿ ಅಳವಡಿಸಿರುವುದು ಮತ್ತೂ ಅಭಿನಂದನೀಯ. ದಿಟವೇ, ಹಳಗನ್ನಡದ ಹದವು ಕುದುರದೆ ವೃತ್ತ-ಕಂದಗಳ ನಿರ್ವಾಹ ಕಷ್ಟ. ಆದರೆ ಹಾಗೆಂದು ನೀವು ಸುಮ್ಮನೆ ಕೈ ಚೆಲ್ಲಿ ಕೂಡದೆ ಇಷ್ಟೊಂದು ಚೆನ್ನಾದ ಷಟ್ಪದಿಯನ್ನು ಒಳ್ಳೆಯ ಕಲ್ಪನೆಯಿಂದ ರೂಪಿಸಿದ್ದೀರಿ! ಧನ್ಯವಾದ.
ಸರ್ , ನನ್ನ ಅರಿವಿನ ಮಿತಿಯೊಳಗೆ ಮಾಡಿಕೊಂಡ ಅನುಕೂಲ ಶಾಸ್ತ್ರಕ್ಕೆ 🙂 (ವಾರ್ಧಕ ಷಡ್ಪದಿಗೆ )ಉತ್ತಮ ಬಹುಮಾನ ದೊರೆತಿರುವುದಕ್ಕೆ ಸಂತೋಷವಿದೆ .ಕೃತಜ್ಞತೆಗಳು . ಪದ್ಯ ಬರೆಯುತ್ತಾ , ಬರೆಯುತ್ತಾ ಹೊಸತನ್ನು ಹುಡುಕುವಲ್ಲಿ ಬುದ್ಧಿ ಚುರುಕಾಗುವುದoತು ಸತ್ಯ .
ಮಂಜುಭಾಷಿಣೀ ||
ಭರಿತಂ ಕಣಾ! ಭರತಭೂಮಿ ದುಷ್ಟಚಿ-
ತ್ತರಿನೆಲ್ಲಮೂಲೆಯೊಳುಂ, ಈ ಮಹಾಜನರ್ |
ಶಿರ ಕಾಯಲಕ್ಷಮನಿನೀ ಪ್ರಪಂಚಕಂ
ಮೆರುಗೇಂ ಗಣೇಶನಿನೆನುತ್ತೆ ನಿಂದಿಪರ್ ||
ಅಕ್ಷಮ – ಅಸಮರ್ಥ.
ಪೆಜತ್ತಾಯರೆ – ಪೂರಣವ ವಿಷಯವನ್ನು ಯಥಾವತ್ತಾದ ಅರ್ಥದಲ್ಲಿಯೇ, ಮಂಜುಭಾಷಿಣೀ ವೃತ್ತಕ್ಕೆ ಹೊಂದಿಸಿರುವುದು ಚೆನ್ನಾಗಿದೆ.
|| ಉತ್ಪಲಮಾಲಾವೃತ್ತ, ಉಪಮಾಲಂಕಾರ ||
ಚೌತಿಯ ಲಾಡುಚಕ್ಕುಲಿಗಳಂ ಸವಿಯುತ್ತಿರೆ ಚಿಣ್ಣರಿಚ್ಛೆಯಿಂ,
ನೂತನವಸ್ತ್ರಮಂ ಧರಿಸಿ,ಕಂಗೊಳಿಸುತ್ತೆ ಸುಮಂಗಳಂತೆವೊಲ್,|
“ಭ್ರಾತೃಗಜಾನನಂ ಕರಿಯ ಮೋರೆಯಿನಿರ್ಪನದೇತಕೆಂಬುದಂ-
ತಾತನೆ ಪೇಳೆ”ನಲ್,ಕಥೆಗೆ ಸಂಭ್ರಮಿಸಲ್,ಮೆರುಗೇಂ ಗಣೇಶನಿಂ !! ||
Dear Sri Ganesh, welcome back to India.
ವಿಶ್ವದ ಪದ್ಯಪಾನಿಗಳಿಗಿತ್ತಿಹನೀತನನಂತಯೋಗಮ-
ನ್ನಶ್ವದ ವೇಗದೊಳ್ ರಚಿಸೆ ಛಂದದಪದ್ಯಗಳಂ ಸಹಸ್ರದೊಳ್|
ದಾಶ್ವವದೇನದೆಂಬೆನು ಸಖತ್ವದೊಳಾ ಮೆರುಗೇಂ? ಗಣೇಶನಿಂ-
ದೀಶ್ವರರೂಪಿ ತಾನಿದೊ ಪದಾಬ್ಜಮನಿಟ್ಟಿಹನಲ್ತೆ ರಾಷ್ಟ್ರದೊಳ್||
ಪದ್ಯಪಾನದ ಮೂಲಕ ಪದ್ಯವಿದ್ಯೆಯನ್ನು ಕಲಿಸುವ ಶ್ರೇಷ್ಠಶಿಕ್ಷಕರೂ,ಸಹೋದರರೂ ಆದ ಮಾನ್ಯಶತಾವಧಾನಿಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕಶುಭಾಶಯಗಳು.
ಮುಂದೊಮ್ಮೆ ತಮ್ಮ ಯಾವುದಾದರೂ ಸಾರ್ವಜನೀನ ಭಾಷಣವೋ ಇತರ ಕಾರ್ಯಕ್ರಮವೋ ಏರ್ಪಟ್ಟರೆ, ಅಲ್ಲಿ ನಿಮ್ಮನ್ನು ಸಭಾಸದರಿಗೆ ಹೀಗೆ ಪರಿಚಯಿಸಬಹುದು: ಇವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಮನೆಯಲ್ಲಿಯೇ ತಮ್ಮ ಸೋದರರಲ್ಲಿಯೇ ಪಡೆದುಕೊಂಡರು …. 🙂
ಕಲಿಯುವರೆ ಮನೆಯವರ ಪಾಠಮನ್ನಾಸ್ಥೆಯಿಂ
ಕಲಿತಂತೆ ಶಾಲೆಯೊಳ್ ಮೇಣ್ ಟ್ಯೂಶನಿನೊಳು|
ಕಲಿಯಲೇಂ ಗುರುವೆಂದು ಭಾವಿಸೀ ಸೋದರನೊ- (ಶ್ರೀ ರಾ.ಗ.)
ಳುಲಿದವೋ”ಲಪವಾದಮಾನು”ಮೆಂದುಂ|| 🙂
ಮನೆಯಿರಲ್ ಮೊದಲನೆಯ ಪಾಠಶಾಲೆಯವೊಲೇ,
ಜನನಿಯಂತಿರೆ ಸೋದರರ್ ಬೋಧಿಸಲ್, |
ಮನಕಾಗೆ ಸಂತಸಂ ಕಲಿಯುತಿರೆ ಶಿಶುವಂತೆ,
ನನಸಾಗವೇಂ ತಮ್ಮ ರಮ್ಯೋಕ್ತಿಗಳ್ ? 🙂
ಧನ್ಯವಾದಗಳು:-)