Feb 232015
 

1234

  74 Responses to “ಪದ್ಯಸಪ್ತಾಹ ೧೩೯: ಚಿತ್ರಕ್ಕೆ ಪದ್ಯ”

  1. ಯಮಕಾಲಂಕಾರಯುಕ್ತವಾದ ಒಂದು ಕಂದ:

    ಖದ್ಯೋತನ ಮೇಲೆರಗುವ
    ಖದ್ಯೋತನವೊಲ್ ಮಧುವ್ರತಂ ಬಳಿಸಾರ್ಗುಂ|
    ಖದ್ಯೋತನಸುಮದೆಡೆಗಂ
    ಖದ್ಯೋತನಕಾವ್ಯವಾಣಿಗಾಸ್ಪದಮೆನಿಸಲ್||

    ದೃಷ್ಟಾಂತಾಲಂಕಾರವುಳ್ಳ ಒಂದು ವಸಂತತಿಲಕ:

    ಚಾಮೀಕರಪ್ರಕರಮಂ ಕದಿಯಲ್ಕೆ ಚೋರಂ
    ಸೀಮಾತಿರಿಕ್ತಬಲದಿಂದೆರಗುತ್ತಲಿರ್ಪು-
    ದ್ದಾಮಕ್ರಮಂ ಮಿಹಿರಪುಷ್ಪಕೆ ತುಂಬಿ ಸೋಲ್ವ
    ಪ್ರೇಮಪ್ರಕರ್ಷದೆ ವಲಂ ಸೊಗಸಾಗಿ ತೋರ್ಗುಂ||

    • ಗಣೇಶ್ ಸರ್, ಬಹಳ ಬಹಳ ಚೆನ್ನಾಗಿದೆ ನಿಮ್ಮ ಪೂರಣಗಳು
      ಅಷ್ಟಾವಧಾನಸುಮವು ಅನುಪಮವಾಗಿ ಅರಳುವುದು ರಾಗರೆಂಬ ದುಂಬಿಗಾಗಿಯೆ. ಎಂಟು ಅತ್ಯುತ್ತಮವಾದ ಪದ್ಯಗಳಿಂದ ಈ ವಾರದ ಪೂರಣಗಳಿಗೆ ಮೆರಗನ್ನು ತಂದಿರುವುದಕ್ಕೆ ನಮಿಸುತ್ತೇನೆ

      ಅಷ್ಟಾವಧಾನದಲರಂ
      ಸ್ಪಷ್ಟಮೆನಲ್ ಫುಲ್ಲಮೆಸೆವ ತುಂಬಿಯೆ ರಾಗರ್
      ಅಷ್ಟೋಪಚಾರದಿಂ ಸಂ-
      ತುಷ್ಟರನಾಗಿಸರೆ ಪದ್ಯಪಾನದಸುಮಮಂ

  2. ಉತ್ಪಲಮಾಲೆಯಲ್ಲಿ ಒಂದು ಅನ್ಯೋಕ್ತಿ:

    ಆಶೆಗದೆಲ್ಲಿ ಪಾರಮೆಲೆ ಬಂಭರ! ದಂಭರಸೈಕಸಾರಗುಂ-
    ಜಾಶಯ! ಭಾನುಕಾಂತಿಸುಮಗಾತ್ರಮದೆಲ್ಲಿ? ಭವದ್ವಪುರ್ವರಾ-
    ಕಾಶಯಮೆಲ್ಲಿ? ಸಾಗರಕೆ ತೆಪ್ಪವದಪ್ಪಳಿಪಂತೆವೋಲ್ ವಲಂ
    ಪೇಶಲಕಾಯ! ಸಾಗು ಮಹರಾಯ! ತನೂಚಿತಸೂನದತ್ತಲೇ||

  3. ಮತ್ತೇಭವಿಕ್ರೀಡಿತದಲ್ಲಿ ಮತ್ತೊಂದು ಅನ್ಯೋಕ್ತಿ:

    ಮಕರಂದಪ್ರಿಯಪಾನಕೆಂದು ನಲವಿಂದಂ ಬಂದುದಿಂದಿಂದಿರಾ-
    ರ್ಭಕಸತ್ಕಾರ್ಮುಕಮೌರ್ವಿಗೊಪ್ಪುವ ಮಹಾಸ್ಪಂದಂ ಗಡಿಂದಿಂದಿರಂ|
    ಪ್ರಕಟೋದ್ಘಾಟಕನಪ್ಪೆನಾಂ ನಿಜಮರಂದಾಗಾರಕೆಂದೀ ಮಲರ್
    ಸ್ವಕರಂ ಸಾರ್ಚುವ ಮುನ್ನಮೇ ತಿರುಪಿದಂ ತಿಗ್ಮಾಂಶುವೀ ವಕ್ತ್ರಮಂ||

  4. ಶೂರೋದಾರಮಲಾ ಮಧುವ್ರತಮಿದೇ ಸಾಂಗ್ರಾಮಿಕೋತ್ಸಾಹಿ ದು-
    ರ್ವಾರಾಗಾರಗಭೀರದುರ್ಗನಿಲಯಂ ತೀಕ್ಷ್ಣಾಗ್ರನಿಸ್ತ್ರಿಂಶವಿ-
    ಸ್ಫಾರಂ ಯುದ್ಧನಿರುದ್ಧಮಾಗಿ ಸುಮಸೂರ್ಯಾಕಾರಮಂ ಸೀಳುತುಂ
    ವೀರಸ್ವರ್ಗಮನೇರ್ವವೋಲೆರಗುತಿರ್ಕುಂ ಧೈರ್ಯಧರ್ಮಂ ಧ್ರುವಂ||

    (ಇಲ್ಲಿ ಜೇನುಹುಳುವನ್ನು ವೀರನೊಬ್ಬನಿಗೆ ಒಪ್ಪವಿಡಲಾಗಿದೆ. ಯುದ್ಧದಲ್ಲಿ ಗತಿಸುವ ಶೂರರು ರವಿಮಂಡಲವನ್ನು ಭೇದಿಸಿ ವೀರಸ್ವರ್ಗವನ್ನು ಗಳಿಸುವರೆಂಬ ಕವಿಕಲ್ಪನೆಯನ್ನು ಆಧರಿಸಿ ಈ ಪದ್ಯದ ರಚನೆ ಸಾಗಿದೆ)

  5. ಇದು ಅರ್ಥಾಂತರನ್ಯಾಸಾಲಂಕಾರವುಳ್ಳ ಒಂದು ಚಂಪಕಮಾಲೆ:

    ರವಿರುಚಿಪುಷ್ಪವಾಟಿಯಿದರೊಳ್ ಮಧುಪೂರಿತಚಾರುಕೌಸುಮೋ-
    ತ್ಸವಕಣಮಾನುಮಿರ್ಪುದೆ ಅಭಾವದ ಭಾವಮದೇಕೊ ಕಾಣೆನೀ|
    ನವಲಮದಾಳಿ ಪೂವನಿದನೊಂದನೆ ಕಾಮಿಸಿ ಸಾರುತಿರ್ಕುಮೀ
    ಭುವನದೆ ವಾಂಛೆಗಳ್ಗೆ ವಿಧಿನಿರ್ಣಯಮೇಳನಮಾವುದಾವುದೋ?

  6. ವ್ಯತಿರೇಕಾಲಂಕಾರವುಳ್ಳ ಒಂದು ತೇಟಗೀತಿಪದ್ಯ:

    ಸೂರ್ಯಸಂಚಾರದನುಸಾರಮಾತ್ಮವದನ-
    ತೂರ್ಯವಾದ್ಯಮಂ ತಿರುಗಿಪ್ಪ ಪೂಗಳಿವುಗಳ್|
    ಹಾರ್ಯಮಂ ಕೊಳ್ವುದಂತೆಯೇ ಮಧುಪ! ನಿನ್ನ
    ಚೌರ್ಯಮಂ ಲೆಕ್ಕವಿಡುವನೇಂ ಚಿತ್ರಭಾನು?

  7. ಉತ್ಪ್ರೇಕ್ಷೆ ಮತ್ತು ರೂಪಕಾಲಂಕಾರಗಳ ಸಮಾಹಾರದ ಒಂದು ದ್ರುತವಿಲಂಬಿತ:

    ತರಣಿತೇಜದ ಪುಷ್ಪಸಮುದ್ರಮಂ
    ತರಣಿಕುಂ ಮಧುಪಾನಿಲಿಯೆಂಬವೊಲ್|
    ಎರಗುತಿರ್ಕುಮನನ್ಯವಿಚಾರದಿಂ
    ದೊರೆಗುಮೇ ಕುಸುಮಾಸವಸೀತೆ ಮೇಣ್?

    • ರಾಗರ್ ಸ್ವಾರ್ಥಪರರ್ ಬಹು-
      ವೇಗರ್ ಪದ್ಯರಚನಾಪದಕ್ರಮಣಿಕೆಯೊಳ್
      ವಾಗೀಶ್ವರಿಯ ಮನೆಗಿವರ್
      ಕೂಗಳತೆಯೊಳೆ ಮನೆಮಾಡಿಹರ್, ಬಲುಕೇಳ್ದರ್

      ಸ್ವಾರ್ಥಪರರ್ – in grabbing all the ideas and composing poems without letting others take some time.
      ಬಲುಕೇಳ್ದರ್ – (bahushrutar), here, the one who every now and then has been hearing the words of Saraswati, as his house is very near to her.

      • ಐಡಿಯ ಬಹಳ ಚೆನ್ನಾಗಿದೆ. ’ಸ್ವಾರ್ಥಪರರ್’ ಎಂಬುದನ್ನು ಉತ್ತರಾರ್ಧಕ್ಕೆ ಅನ್ವಯಮಾಡಿದರೆ ಇನ್ನೂ ಸೊಗಯಿಸುತ್ತದೆ – ವಾಗೀಶ್ವರೀಗೃಹೋಪವಾಸಸ್ವಾರ್ಥಪರರ್ ಎಂಬರ್ಥದಲ್ಲಿ. ಪದ್ಯರಚನಾಪದಕ್ರಮಣಿಕೆಯೊಳ್ ಸ್ವಾರ್ಥವೇನಿಲ್ಲ, ಔದಾರ್ಯವೇ ಎಲ್ಲ!

  8. ಕವಿತಾಸ್ಪೂರ್ತಿದ್ಯುಮಣಿಯ
    ಛವಿಯಂ ನೆರೆಪೀರ್ದು ಬಳೆದ ಪದ್ಯಸುಮಗಳಂ
    ಕವಿಷಟ್ಪದಿಗಳ ಮುನ್ನಮೆ
    ಸವಿದಿರ್ಪನ್ ರಾಗನಲ್ತೆ ನವ್ಯಹರಿಹರಂ

    (ನಸುಕಿನೊಳೆದ್ದು ಹೋದೋಟದಿಂದ ಬಗೆಬಗೆಯ ಹೂಗಳನ್ನಾಯ್ದು ಪಂಪಾಪತಿಗೆ ಮಾಲೆಯನ್ನು ಹರಿಹರನು ಕಟ್ಟುತ್ತಿರುವಾಗ ಆಗಷ್ಟೆ ಎದ್ದು ಗಿಡಗಳತ್ತ ಬಂದ ದುಂಬಿಗಳ ಪಾಡು ನಮ್ಮೆಲ್ಲರದ್ದಾಗಿದೆ)

    • clap clap

      • ನೀಲಕಂಠ-ಜೀವೆಂ-ಪ್ರಸಾದುಗಳ ಮೆಚ್ಚುಮಾತುಗಳಿಗೆ
        ಸಾಲು ಸಾಲು ಸೊಗಸಾದ ಸೂಕ್ತಿಸಂಪದಕೆ ಪದಕೆ ಗಳಿಗೆ|
        ನಿಂತು ನೋಂತು ಮನವಾಂತು ವಂದಿಸಿದೆನೆನ್ನ ಸೊಲ್ಮೆವೂವಿಂ
        ಕಂತಲಾಗದೆಂದುಂ ಕವಿತ್ವಖದ್ಯೋತಮೆಂದು ಸಾವಿಂ||

    • ದಶದಳದೆ ರವಿಕಾಂತಿ
      ವಿಶದಗೊಂಡೆರೆಯೆ ತಾಂ
      ಕುಶಲದಿಂದಳಿಗವಿಗೆ ರಸಗವಳವಂ ।
      ದಶದಿಶೆಯ ಕವಿಕಾಂತಿ
      ದೆಶೆಯು, ತಾನೊರೆದು ಪರ-
      ವಶಗೊಳಿಸುದಳಿಕುಲವ ರಸಗುಣದೊಳುಂ ।।

      ಧನ್ಯವಾದಗಳು ಗಣೇಶ್ ಸರ್.

  9. 1) Of the many flowers, only one is big. The myriad others are very small.
    2) There is a cow in the bottom left corner of the pic. There are more cows behind it.
    ಸಂತುಲಿತದೃತಾವರ್ತಗತಿ||
    ಸೊಕ್ಕಿಂ ನಗುತಿರ್ಕುಂ ಪೃಥುಪುಷ್ಪಂ ಗಡಮೊಂದುಂ
    ಕೊಕ್ಕೇಂ ಗಡ ಗಣ್ಯಂ? ಬಹುಸೂಕ್ಷ್ಮಂ ಭ್ರಮರಂ ತಾಂ|
    ಮಿಕ್ಕೆಲ್ಲವು ಪುಷ್ಪಂಗಳವಾಕಾರದೆ ಕ್ಷುದ್ರಂ (small)
    ಪಕ್ಕಾಗವೆ ವಿಧ್ವಂಸಕೆ ಗೋಸಂಕುಲ ಮೇಯಲ್||

    • Didn’t u see a crow standing on the tail of the last cow in the Herd? 🙂

      • ಹಾಗೆ ಸೊಗಸಾಗಿ ಹೊನ್ನಾಗಿ ನಗುತಿಹ ಮಲರು
        ಬೀಗುತಿರೆ ಚಿತ್ರದೊಳ್ ತುಂಬಿಯೊಡನೆ|
        ನೀಗುವುದೆ ನೀವದಂ ಮಬ್ಬಾದ ಮತ್ತಾವು-
        ದೋ ಗುಂಪುಗಳಿಗಿಂತು ಹಾದಿರಂಪ?

      • @ Sri RG: ಮೊತ್ತವಾದ ಉತರವನ್ನು ಜಿವೆಂ ನೀಡಿದ್ದಾರೆ. ನಾನು ಇಷ್ಟು ಬರೆದದ್ದೇ ಹೆಚ್ಚು 🙁
        @ Srisha: Thanks for opening a slew of ideas 🙂

  10. ಸೂಸುತಲಿ ಕಾಂತಿಯನು ಸುಮವೊಂದೆ ನಕ್ಕಿರಲು
    ನೇಸರನ ಬರವೊಂದೆ ಹಿತಮಾಯಿತೇ?
    ಬೀಸಿರುವ ವಾಂಛೆಯನು ಭೃಂಗದೊಡೆ ಕಳುಹಿರಲು
    ಮಾಸಿರ್ದ ಹೃದಯದೊಳು ಕಳೆಯೇರಿತೇ?

  11. ಹೂವು ಮತ್ತು ಝೇ೦ಕರಿಸುವ ದುಂಬಿಯ ನಡುವೆ ನಡೆಯುವ ಸಂಭಾಷಣೆ –

    ಸೂರ್ಯಕಾಂತಿ ಹೂವದೇನೆ
    ಸೂರ್ಯಬರುವ ದಿಕ್ಕಿನತ್ತ
    ಕಾರ್ಯತಂತ್ರ ಬೆಸೆವ ನಿನ್ನ ದಿನದ ವೈಖರಿ? I
    ಆರ್ಯೆ ನಿನ್ನ ನಾದ ಮಂತ್ರ
    ಧೈರ್ಯಕಿರುವ ಶಕ್ತಿ ಯಂತ್ರ
    ಕಾರ್ಯಕಿರುವ ಬೇರು,ನೀರು ಮಣ್ಣದೀಪರಿ II

    ಶಕ್ತಿ ಯಂತ್ರ =ಸೂರ್ಯ ಮತ್ತು ದುಂಬಿಯ ಝೇ೦ಕಾರ

  12. ಬರುತುಂ ಮಧುಪಾನಕೆ ಝೇಂ-
    ಕರಿಸುತ್ತಿರೆ, ಸೂಸೂರ್ಯಕಾಂತಿಯೊರ್ಮೆಲೆ ತಲೆಯೆ-|
    ತ್ತಿರೆ, ದುಂಬಿಯ ಕರೆಯುತೆ ತೆರೆ
    ಮರೆಯಲ್ಲಿರಿಸಿರ್ಪುದೆಲ್ಲ ಪೂಗಳ ನೋಡಾ|

  13. ನನ್ನ ಮೊತ್ತ ಮೊದಲ “ಹಾಳೆ ಪೆನ್ನನು ಪಿಡಿಯದೊ೦ದಗ್ಗಳಿಕೆಯ” ಪದ್ಯ 🙂

    ವಿಷಯ೦ ಗಡ ಪಿರಿದೊ, ಮನದ
    ವಿಷಯಾಸಕ್ತಿ ಗಡ ಪಿರಿದೊ, ಮಥಿಸಲ್ಕೆಮಗೀ
    ವಿಷಯದೊಳೆ ಕಾ೦ಬುದು ಸುಮ೦
    ತೃಷೆಯುತ್ಕರ್ಷಕೆಲೆ ಚಿತ್ರಣ೦, ನಿಜಮಲ್ಲೈ

  14. ರವಿಯ ಕಾಂತಿಯನೆಲ್ಲ ಭುವಿಯೊಳುಣಬಡಿಸಲ್ಕೆ
    ಸವರಿಸುತೆ ಸುಮರಾಜಿ ಕಂಗೊಳಿಸಿರೆ
    ಛವಿಯ ಹಾಸಿಗೆ ಕಾವ ಗಿರಿಪಂಕ್ತಿಯೊಡ್ಡುತಿರೆ
    ಬವರವಿದು ಸಗ್ಗದಲೆ ತೇಲುತಿಹುದೇ?

  15. ಒಡಲೊಳ್ ತುಂಬಿದ ಮಧುವಂ
    ತಡೆಯೊಡ್ಡದೆಯಿತ್ತು ಪಾಲಿಸಿರೆ ಮಧುಪಗಳಂ
    ಕಡೆಯೇಂ ಪೂವಬ್ಬೆಗೆ ತಾಂ
    ಹಡೆದುಂ ದುಗ್ಧಸುಧೆಯಿಂ ಮರಿಗಳಂ ಕಾಯ್ವಾ||

  16. तरणिस्सत्त्ववितारकोऽपि न जनैस्त्वालोक्यते तद्धिया
    बहुधा धातुयुतो गिरिर्न विबुधैः सत्यां भवत्यां प्रिये
    भ्रमराकर्षकशक्तियुक्तललने चित्रे स्वकान्त्या चिरं
    अतिशेते किल सूर्यमेव दिवि खे नानाप्रकारैश्शुभे

  17. “ಹತ್ತರೊಳಗೆ ಹನ್ನೊಂದಾ”
    ಗೆತ್ತದೆ ತಲೆಯಂ ಪರೀಕ್ಷೆಯಂ ನೀಗಿದವರ್
    ಸುತ್ತಲು ನೆರದೆರಲೀತಂ
    ಕುತ್ತಂ ಪೊತ್ತಳಿಗೆ ಮೇವನೊದಗಿಸುತಿರ್ಪಂ

  18. तरणिस्सत्त्ववितारकोऽपि न जनैस्त्वालोक्यते तद्धिया
    बहुधा धातुयुतो गिरिर्न विबुधैः सत्यां भवत्यां प्रिये
    भ्रमराकर्षकशक्तियुक्तललने चित्रे स्वकान्त्या चिरम्
    अतिशेते किल सूर्यमेव दिवि खे नानाप्रकारैश्शुभे

  19. ಲಯಗ್ರಾಹಿ || ಪೂ-ದುಂಬಿ ಎಂದೆಂದಿಗುಂ ನಿರ್ವಿಕಾರಂ(unchanging)
    (attraction)ಕಾದಲ್ ಮಗುಳ್ ಕೊಳ್ವುದುಂ-ನೀಳ್ವುದಂತೇ(as hitherto)|
    ಹೌದಾದೊಡಾ ಸೃಷ್ಟಿಗಿದ್ದುಂ ನಿಬದ್ಧಂ,
    ಖೇದಂ! ನರಂ ತಾನದಿಂತೇಕನಿತ್ಯಂ||

  20. ದಿನಪನನುರಾಗದಗ್ಗಳಿ-
    ಕೆ, ನಿತ್ಯಮದು ಮಧುಪನೆನ್ನಯನರಸುವ೦ ಮೇ-
    ಣೆನೆ ಮಗುದೊ೦ದು, ಸುಮ೦ ತನ-
    ಗೆಣೆಯಿನ್ನಾರೆ೦ಬ ಸೊರ್ಕಿನಿ೦ ಪೆರ್ಚಿರ್ಕು೦

    ಸೂರ್ಯಕಾ೦ತಿ ಹೂವಿನ ಸೊಕ್ಕಿಗೆ ಎರಡು ಕಾರಣ 🙂

    • ನಿಮ್ಮೀ ಕಂದದ ಪೂರ್ವಾರ್ಧದಲ್ಲಿ ಗತಿಹಿತವಿಲ್ಲ; ಉತ್ತರಾರ್ಧದಲ್ಲಿ ಪರವಾಗಿಲ್ಲ.
      ದಯಮಾಡಿ ಸವರಿಸಿಕೊಳ್ಳಿರಿ.

      ಅನೇಕರು ಮಾತ್ರಾಬಂಧಗಳಲ್ಲಿ ವೃತ್ತಗಳಲ್ಲಿರುವಂತೆ ಯಥಾಕ್ಷರ ಗುರು-ಲಘುನಿಯಮದ ಪಾಲನೆಯ ಕ್ಲೇಶವಿರದ ಕಾರಣ ನಿರ್ವಹಣೆಯು ಸುಲಭ, ಕೇವಲ ಗಣ ಮತ್ತು ಮಾತ್ರಾಸಮತ್ವವನ್ನು ಪಾಲಿಸಿದರೆ ಸಾಕೆಂದು ಭ್ರಮಿಸುತ್ತಾರೆ. ಆದರೆ ಇಷ್ಟೇ ಸಾಕಾಗದು; ಮಾತ್ರಾಬಂಧಗಳಲ್ಲಿ ಭಾಷಾಪದಗತಿ ಮತ್ತು ಛಂದಃಪದಗತಿಗಳ ನಡುವೆ ಅದೊಂದು ಬಗೆಯಾದ ಹಿತಸಂತುಲನವಿರಬೇಕು. ಇದಕ್ಕೆ ಯಾವುದೇ ಮುಷ್ಟಿಗ್ರಾಹ್ಯನಿಯಮಗಳಾಗಲಿ, ಸುಲಭದ ಸೂತ್ರಗಳಾಗಲಿ ಕಾಣವು. ಆದರೆ ಮಹಾಕವಿಗಳ ಗತಿಸೌಂದರ್ಯಮಹಿತವಾದ ಒಳ್ಳೊಳ್ಳೆಯ ಕಂದ-ಚೌಪದಿ-ಷಟ್ಪದಿ-ರಗಳೆ-ಸಾಂಗತ್ಯ-ತ್ರಿಪದಿ-ಸೀಸ ಮುಂತಾದುವುಗಳನ್ನು ಮತ್ತೆ ಮತ್ತೆ ಎಚ್ಚರದಿಂದ ಓದಿ ಓದಿಯೇ ಈ ಸೂಕ್ಷ್ಮಗಳನ್ನು ತಿಳಿಯಬೇಕು.

      • ಸರ್, ತಾವು ಇತ್ತೀಚೆಗಷ್ಟೆ ಹೊಗಳಿದ್ದು ನನಗೆ ದೃಷ್ಟಿಯಾಯಿತೆ೦ದು ತೋರುತ್ತದೆ… 🙂 ತಿದ್ದಿದ್ದೇನೆ, ದಯವಿಟ್ಟು ಒಪ್ಪಿಸಿಕೊಳ್ಳಿ…

        ದಿನಪ೦ ತನ್ನೊಳೆ ತೋರ್ಪೊ೦-
        ದನುರಕ್ತಿ, ಪ್ರತಿದಿನ೦ ಮಧುಕರ೦ ತಳೆದೊ೦-
        ದನುಪಮರಕ್ತಿ, ಸುಮ೦ ತನ-
        ಗೆಣೆಯಿನ್ನಾರೆ೦ಬ ಸೊರ್ಕಿನಿ೦ ಪೆರ್ಚಿರ್ಕು೦

        • ನೀಲಕಂಠರೆ, ಎರಡನೇ ಸಾಲಿನಲ್ಲಿ ಮಾತ್ರೆಗಳು ಹೆಚ್ಚಾಗಿದ್ದಂತಿದೆ..

          ಹಾಗೂ ಪೊದಿರ್ಪೆಣೆಯಿರದ = ಪೊಂದಿರ್ಪು + ಎಣೆಯಿರದ, ಹೀಗೆ ಬಿಡಿಸಿದರೆ ಸರಿಯೇ?

          • Yes, thanks. Corrected above.
            It was supposed to be broken as pondirpa + eNeyirada. Anyway it is gone now.

    • ೧) ಎನ್ನಯನರಸುವ೦ – ಇದರ ವಿಭಕ್ತಿ ಹೇಗೆ?
      ೨) ಮೇಣೆನೆ ಮಗುದೊ೦ದು – ಮೇಣ್~ಮಗುದೆ ದ್ವಿರುಕ್ತಿಯಾಯ್ತು. ಮೇಣೆಂಬುದೊಂದು ಎನ್ನಬಹುದಲ್ಲವೆ?

      • ರ೦ಪರೆ, ಹೌದು, ರಾತ್ರಿ ೩ಕ್ಕೆ ಬರೆದ ಪದ್ಯ, ಏನೇನೊ ಆಗಿದೆ. ಮೇಲೆ ಸವರಣೆ ಇದೆ.

      • 3 ಗಂಟೆಯು ರಾತ್ರಿಯಲ್ಲ. ಹಗಲು!
        ಪೊತ್ತೊಳೇನಿಹುದಯ್ಯ ದೋಷವು?
        ಎತ್ತಲಿಹೆ ನೀ ಮಧ್ಯರಾತ್ರಿಯ? (ಇತ್ತಲೋ ಅತ್ತಲೋ ತಿಳಿಯೆಯ?)
        ಪತ್ತಿರಂ ನೀನಲ್ತೆ ಹಗಲಿಗೆ?
        ಸುತ್ತಿಬಂದಿಹೆ ರಾತ್ರಿಯಂ||

  21. ಮೊಸಳೆಗಳೇಂ ಸೈನಿಕರೇಂ
    ಬಿಸಿಕೆಂಡದ ರಾಶಿಯೇಂ ಪೊಗುವಪರಿ ತಿಳಿದೆಂ
    ಪಸರಿಸಿರೆ ಕೋಟೆಯು ಚೆಲುವೆ
    ರಸದರಸಿಯವಳ್ ಕುಮಾರಿ ದೊರಕುವಳೇ ಪೇಳ್

    ಈ ಚಿತ್ರವನ್ನು ನೋಡಿದ ತಕ್ಷಣವೇ ನನಗೆ ಕೇಸರಗಳು ಸೈನಿಕರಂತೆ ಕಾಣಿಸಿದವು. ಆ ಕಲ್ಪನೆಯನ್ನೇ ಮುಂದುವರಿಸಿ, ದಳಗಳನ್ನು ಮೊಸಳೆಗಳಿಗೆ, ಒಳಗಿನ ಸುತ್ತನ್ನು ಕೆಂಡದ ರಾಶಿಗೆ ಹೊಂದಿಸಿ, ಈ ಮೂರು ರೀತಿಯ ಕೋಟೆಯೊಳಗೆ ರಾಜಕುಮಾರಿ ಇರುವಳೆಂದೂ, ನಾಯಕ(ದುಂಬಿ)ನ ಸ್ವಗತವೆಂಬಂತೆ ರಚಿಸಿರುವ ಪದ್ಯ.

    • ನಿಮ್ಮೀ ಕಲ್ಪನೆಯು ನಾವೀನ್ಯವನ್ನೇನೋ ಹೊಂದಿದೆ. ಆದರೆ ಅಷ್ಟಾಗಿ ಉಚಿತವೆನಿಸದೇನೋ… ಹೂವಿನಂಥ ಸುಕುಮಾರಮನೋಹರವಸ್ತುವಿನಲ್ಲಿ ಸೈನಿಕರ, ಮೊಸಳೆಗಳ, ಕೆಂಡಗಳ ಭಾವವನ್ನು ಪ್ರಸ್ತುತ ಚಿತ್ರದ ಸೀಮಿತಸ್ವರೂಪದಲ್ಲಿ ಕಾಣುವುದು ರಸಾವಹವಾದೀತೇ ಎಂದು ನನ್ನ ಸಂದೇಹ. ಶ್ರೀಹರ್ಷನಂಥವರು ಈ ಬಗೆಯ ದುರೂಹ್ಯಕಲ್ಪನೆಗಳನ್ನು ಮಾಡುತ್ತಾರೆ; ನವ್ಯಕವಿತೆಯಲ್ಲಿಯೂ ಇಂಥ ಕಲ್ಪನೆಗಳಿವೆ. ಆದರೆ ಸಂದರ್ಭಶುದ್ಧಿಯಿಲ್ಲದ ಎಡೆಗಳಲ್ಲಿದು ಸಹೃದಯಹೃದ್ಯವೇ ಎಂಬುದು ನನ್ನ ಜಿಜ್ಞಾಸೆ. ಇರಲಿ; ತುಂಬ ಗಂಭೀರವಾಗಿ ಚರ್ಚಿಸಬೇಕಾದ ಈ ಸಂಗತಿಯತ್ತ ಸಹಪದ್ಯಪಾನಿಗಳು ಕುತೂಹಲ ತೋರಿ ಉದ್ಬೋಧಕಚಿಂತನೆಗೆ ಎಡೆಮಾಡಿಯಾರೆಂದು ನಿರೀಕ್ಷಿಸುವೆ.

      • ಧನ್ಯವಾದಗಳು. ಈ ರೀತಿಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿಯೇ ಪದ್ಯವನ್ನು ಪೋಸ್ಟ್ ಮಾಡಿದೆ. ನನಗೆ ಅನ್ನಿಸಿದ್ದು, ದುಂಬಿಗೆ ಇಷ್ಟು ದೊಡ್ಡ ಹೂವನ್ನು ನೋಡಿ, ಈ ರೀತಿ ಅನ್ನಿಸಬಹುದೇನೋ ಎಂದು. ಸುಕುಮಾರವನ್ನೇ ಅನುಭವಿಸುವ ನಿರೀಕ್ಷೆಯಲ್ಲಿ ಇಂತಹ ವ್ಯತಿರಿಕ್ತ ಭಾವನೆಗಳು ರಸಾಭಾಸವನ್ನೇ ಉಂಟು ಮಾಡಬಹುದು. ನೀವು ಹೇಳಿದ ಹಾಗೆ ಇದು ಚಿಂತನೀಯ ವಿಷಯವೇ. ನಮ್ಮ ಸ್ನೇಹಿತರು ಇದರ ಬಗ್ಗೆ ಏನು ಹೇಳುತ್ತಾರೆಂಬುದರ ಬಗ್ಗೆ ನನಗೂ ಕುತೂಹಲವಿದೆ.

        • ಮೊನ್ನೆಯಿಂದ ನಿಮ್ಮೀ ಪದ್ಯವನ್ನೇ ಮತ್ತೆ ಮತ್ತೆ ಚಿಂತಿಸುತ್ತಿದ್ದೇನೆ; ಮಿತ್ರರ ಪ್ರತಿಕ್ರಿಯೆಗಳಿಗೂ ಕಾಯುತ್ತಿದ್ದೇನೆ.
          ಮೊಸಳೆಗಳು, ಸೈನಿಕರು, ಕೆಂಡಗಳು ಇತ್ಯಾದಿಗಳನ್ನು ವಾಚ್ಯವಾಗಿಯೇ ದಳಗಳ, ಕೇಸರಗಳ, ಅಂಡಾಶಯಗಳ ಜೊತೆಗೆ ರೂಪಕೀಕರಿಸಿದ್ದಲ್ಲಿ ನಿಮ್ಮ ಕಲ್ಪನೆಗೆ ಮತ್ತೂ ಮಿಗಿಲಾಗಿ ಸ್ಪಷ್ಟತೆಯೂ ಔಚಿತ್ಯವೂ ಬರುತ್ತಿತ್ತೆಂದು ನನಗೆ ತೋರುತ್ತದೆ. ಅಲ್ಲದೆ ಚಿತ್ರವೇ ಪದ್ಯರಚನೆಗೆ ಪ್ರಶ್ನೆಯಾದಲ್ಲಿ ಹೊಸಹೂಸ ಕಲ್ಪನೆಗಳು ಕೆರಳಲೆಷ್ಟು ಅವಕಾಶವುಂಟೋ ಆ ಚಿತ್ರಮಾಧ್ಯಮದ್ದೇ ಆದ ಪ್ರಭಾವವು ಒಡ್ಡುವ ನಿರ್ಬಂಧವೂ ಅಷ್ಟೇ ನಿಯಂತ್ರಕವಾಗುವುದೆಂದು ತೋರುತ್ತದೆ. ಗೆಳೆಯ ವಾಸುಕಿಯೂ ಇದನ್ನೇ ಗಮನಿಸಿದ್ದಾನೆ.

          • ಹೌದು ಗಣೇಶ್ ಸರ್,
            ಈಗಿನ photography tricks ಇದಕ್ಕೆ ಕಾರಣವೆನಿಸುತ್ತಿದೆ. (ಚಿತ್ರವನ್ನು zoom ಮಾಡಿ – ಹೂವನ್ನು ಗಮನಿಸಿದಲ್ಲಿ) ಗಾಯತ್ರಿಯವರ ಕಲ್ಪನೆಯ “ಮೂರುಸುತ್ತಿನ ಕೋಟೆ”ಯನ್ನು ಮೇಲಿನಿಂದ ವೀಕ್ಷಿಸಿದಲ್ಲಿ, ಅವರು ಕೊಟ್ಟಿರುವ ಹೋಲಿಕೆಗಳು ಸೂಕ್ತವಾಗಿ ತೋರುತ್ತಿವೆ. ಸೈನಿಕ ದುಂಬಿ ಆಕಾಶದಲ್ಲಿ ಹಾರಿಬಂದು ಕೋಟೆಯನ್ನು ಮೇಲಿನಿಂದ ಇಣುಕಿ ನೋಡುತ್ತಿರುವಂತೆ ಭಾಸವಾಗುತ್ತಿದೆ.

    • ಮೊಸಳೆಗಳ್-ಸೈನಿಕರ್-ಬಿಸಿಕೆಂಡಗಳ ಕೋಟೆ
      ಪಸರಿಸಿರ್ದೊಡಮಳಿಯು ರಸದರಸಿಯಂ|
      (confiscator)ಕಸುಕನಂತಲ್ಲರ್ದೆ ತಾನೆಂತೊ ಜಾಣಿನಿಂ
      ಹಿಸಿದುಕೊಂಡಾಸ್ವಾದಿಪುದು ಕಂತಿನೊಳ್||

  22. ಚಿರಕಾಲಮೆ ಜೀವಿಸುತುಂ
    ಕಿರಿದಾದರುಸೂರ್ಯಕಾಂತಿಕಾಂತಿಯೊಳಿಂದೀ|
    ಸ್ಥಿರಮಾಗಿರ್ಪ ಗಿರಿಯನೇ
    ತೆರೆಮರೆಯೊಳ್ ನೂಂಕಿಕೇಂದ್ರಬಿಂದುಮಿದಾಯ್ತಯ್|

    • ಪ್ರಿಯ ಚೀದಿ, ನಿನ್ನ ಕಲ್ಪನೆಯಂತೂ ಅಮೋಘ! ಆದರೆ ಸ್ವಲ್ಪ ಅರ್ಥ-ಶಬ್ದಗಳೆರಡರ ನಿಟ್ಟಿನಿಂದಲೂ ಸವರಣೆಯಾಗಬೇಕಿದೆ. ಅದು ಹೀಗಿರಬಹುದೇ?

      ಚಿರಮಾಯುವಿಲ್ಲದೊಡಮಿದು
      ಕಿರಿದಿರ್ದುಂ ಸೂರ್ಯಕಾಂತಿ ಕಾಂತಿಯ ಬಲದಿಂ|
      ಸ್ಥಿರತರಗುರುತರಗಿರಿಯನೆ
      ಮರೆಯೊಳ್ ನೂಂಕುತ್ತೆ ಕೇಂದ್ರಬಿಂದುವಿದಾಯ್ತೇ!

      • ಸವರಣೆಗಳಿಗೆ ಧನ್ಯವಾದಗಳು ಸರ್. … ಮೂರನೇ ಸಾಲಿನ ತಿದ್ದುಗೆಯು ಬಹಳ ಚೆನ್ನಾಗಿದೆ. …

  23. ಗಾತ್ರಮದು ನಭೋಮಂಡಲ
    ಸೂತ್ರಂ ಕಾಣ್ ಸೂರ್ಯಕಾಂತಿಗದುವೇಕಾಂತಂ ।
    ಪಾತ್ರಮದುಪಗ್ರಹದವೋಲ್
    ಯಂತ್ರಂ ಮೇಣ್ ಭ್ರಾಮಕ ಭ್ರಮರದಾತಂತ್ರಂ ।।

    ಗಗನಯಾತ್ರಿಯಂತೆ ಕಾಣುತ್ತಿರುವ ದುಂಬಿಯು ಸೂರ್ಯಯಾನ ಕೈಗೊಂಡಿದೆಯೇ ?!

    • ಅದ್ಭುತವಾದ ಕಲ್ಪನೆ! ಮತ್ತೂ ಸೊಗಸಾದ ಬಂಧ-ಭಾಷೆಗಳ ಅಂದ!! ಅಭಿನಂದನೆಗಳು.

      • ಧನ್ಯವಾದಗಳು ಗಣೇಶ್ ಸರ್.
        ವ್ಯೋಮಯಾನ, ಸೂರ್ಯಕಾಂತಿಗಳಲ್ಲಿ “ನಾನನಾನನಾ” ಒದಗಿಬಂದಿತ್ತಾದರೂ, ವೃತ್ತದಲ್ಲಿ ಪದ್ಯರಚನೆ ಸಾಧ್ಯವಾಗಲಿಲ್ಲ. ಹಾಗಾಗಿ ಗಗನಯಾತ್ರಿಯೊಡೆ ಜೀವವಾಯು,ಸಿರಸ್ತ್ರಾಣಗಳನ್ನ ತರಲಾಗಲಿಲ್ಲ !!

  24. पद्येषु कवयो घ्नन्ति घ्नन्ति तैलेषु तैलकाः ।
    चित्रेषु ग्राहकाः घ्नन्ति ब्रह्मसृष्टिषु त्वां सदा॥

    रूपेण चारु कमनीयतयैव सूर्यः
    चन्द्रेव कोमलतनू रमणीयमास्या ।
    राराज्यते मनसि पद्यपुटान्तरङ्गे
    सूर्येन्दुबिम्बयुगलं समलोकि सद्यः॥

    पद्यैःप्रतोषजनका मधुपानिनस्ते
    मामेव पश्यसि नवेति विचिन्तयन्तः॥
    सूर्यान्नतां विरहसागरमज्जितां त्वां
    चित्रे विलोक्य पुनरेव निपीडयन्ति॥

    त्वं प्रिये जगति नान्यसादृशी
    सर्वदानुसरतीह भूमिजे
    धारयन्त्यपि धवान्तरङ्गकं
    सूर्यमेव खलु बिम्बयेत् स्वयम्॥

    स्वं रूपदर्शिन्यरुणानुरूपा
    ह्येवं निरीक्षानिरतेव भान्ती।
    सूर्यस्य कान्ता बहवो भवन्ति
    घ्नन्तीह वित्ते भव जागरूका ॥

    • ಹೊಸಕಲ್ಪನೆಗಳ ಹೊಳಹೇನೋ ಕಂಡಿದೆ. ಆದರೆ ವ್ಯಾಕರಣಾಪರಿಷ್ಕಾರವು ತುಂಬ ಅವಶ್ಯ. ದಯಮಾಡಿ ನಿಮ್ಮ ಊರಿನಲ್ಲಿ, ನಿಮ್ಮ ವಿದ್ಯಾಲಯದಲ್ಲಿಯೇ ಇರುವ ನಮ್ಮೆಲ್ಲರ ಆತ್ಮೀಯರೂ ಆದ ಶ್ರೀ ಪೆಜತ್ತಾಯರಲ್ಲಿ ತಿದ್ದುಗೆಯನ್ನು ಮಾಡಿಸಿಕೊಳ್ಳಬಹುದು.

  25. ರವಿಕಾಂತಿ ಕಾಂತನಿಛ್ಹಿಸ
    ಲೆವೆಯಿಕ್ಕದೆ ತಪವನಾಚರಿಸೆ, ಮತ್ಸರದಿ೦
    ಸವತಿಗೊಲಿದ ಮಧುವತರ
    ಲ್ಜವನಂ ಕಳುಹಿದಳೆಛಾಯೆ,ನೊಣದ ತೊಡುಗೆಯೊಳ್ ।।

    • ಕಲ್ಪನೆಯು ತುಂಬ ಸೊಗಸಾಗಿದೆ. ಆದರೆ ಭಾಷೆಯಲ್ಲಿ ಮತ್ತೂ ಸ್ವಲ್ಪದ ಪಾಕ ಅಪೇಕ್ಷಿತ.

    • ಕಲ್ಪನೆ ತುಂಬ ಚೆನ್ನಾಗಿದೆ. ಸವತಿಯನ್ನು ನಿಸ್ಸಾರಗೊಳಿಸುವುದು ಎಂಬ ನೇರವಾದ ಅರ್ಥವೊಂದಾದರೆ, ತನ್ನ ಪತಿಯಾದ ಸೂರ್ಯನು ಅವಳನ್ನು ಸಾರದಂತೆ ನೆರಳಿನಿಂದ ಅಡ್ಡಿಮಾಡುವುದು ಎಂಬ ಪರೋಕ್ಷಾರ್ಥವೊಂದು.
      ನನಗೆ ತೋಚಿದ ಸವರಣೆ:
      ರವಿಕಾಂತಿಯಂ ನಿಜದಯಿತ-
      ನೆವೆಯಿಕ್ಕದೆ ಸಾರೆ ಸಹಿಸದೆಲೆ ಮತ್ಸರದಿಂ|
      ಸವತಿಸಿರಿಯನಾ ಮಧುವಂ
      ತವೆ ಪೀರೆಂದಾ ದ್ವಿರೇಫಕೆಂದಳೆ ಛಾಯಳ್||

      ಉತ್ತರಾರ್ಧಕ್ಕೆ ಪರ್ಯಾಯ:
      ಧವನಂ ತನ್ನೆಡೆ ಸೆಳೆಯಲ್
      ಬವರಮರೆಯೊಳಿಂತಡಂಗಿ ಕುಳಿತಳೆ ಛಾಯಳ್||
      (ನೆರಳು ಮಾಡಲು ಏನಾದರೊಂದು ಅಡ್ಡ ಬೇಕಲ್ಲ)

      • ಹೂವಲ್ಲದಿದ್ದರೇನು, ಅದಕ್ಕೆ ಅಡ್ಡಬಂದ ಏನನ್ನೂ ಸೂರ್ಯನು ಹೀರಿಕೊಳ್ಳುವನು ಎಂದು ಯಾರಾದರೂ ತ್ಚಕಾರವೆತ್ತುವರೆ?
        ಕುಸುಮಽವದಿಲ್ದಿದ್ರೆ ಕಸುವಿಽನ ಬವರಽದ
        ಪಸುಮೆಽಯ ಪೀರ್ವ ಸೂರ್ಯ‍ಽನು| ಎನ್ನೆ ನೀಂ
        ರಸಿಕಪ್ರಸಾದು ಕೆಟ್ಟೋದ್ರ!!

      • ರಾಗರಿಗೂ ಪ್ರಸಾದರಿಗೂ ಸವರಣೆ ಮತ್ತು ಫೀಡ್ಬ್ಯಾಕ್ ಗಾಗಿ ಧನ್ಯವಾದಗಳು…

  26. ಸೂರ್ಯತ್ರಾಟಕನಿತ್ಯಯೋಗನಿರತಂ ನಿರ್ಧೂಮವಹ್ನಿಪ್ರಭಂ
    ಹ್ಯಾಜ್ಞಾಚಕ್ರವಿರಾಜಮಾಣವಿರಜಸ್ವರ್ಣಾಂಬುಜೋದ್ಭಾಸಿತಮ್ l l
    ಯೋಗಿನ್ಯಾಸ್ಯಮಿವಾಚಕಾಸ್ತಿ ವಿಮಲಂ ಭಾನುಪ್ರಸೂನಂ ತ್ವಿದಂ
    ಭೃಂಗಂ ತಸ್ಯ ಸಮೀಪಸರ್ಪಣಜುಷಂ ಭೂತ್ಯಷ್ಟಕಂ ಭಾವಯೇ ll

    ಈ ಸೂರ್ಯಕಾಂತಿ ಪುಷ್ಪವು,
    ಸೂರ್ಯತ್ರಾಟಕವೆಂಬ ಯೋಗಸಾಧನೆಯನ್ನು ಮಾಡುತ್ತಿರುವ ಯೋಗಿನಿಯ ದೇದೀಪ್ಯಮಾನವಾದ ಮುಖದಂತೆಯೂ , ಬಳಿಸಾರುತ್ತಿರುವ ಭೃಂಗವು ಸದ್ಯಃಸಿದ್ಧವಾಗುತ್ತಿರುವ ಅಷ್ಟಸಿದ್ಧಿಗಳ ಮೊತ್ತದಂತೆಯೂ ಕಾಣುತ್ತಿರುವಂತೆ ಕಲ್ಪನೆ

    • ಕಲ್ಪನೆಯೂ ವೃತ್ತಗುಂಫನವೂ ಒಳ್ಳೆಯ ಪ್ರೌಢಿಯಿಂದ ಕೂಡಿವೆ. ಒಂದೆರಡು ಚಿಕ್ಕ ಸವರಣೆಗಳು. ಎರಡನೆಯ ಪಾದವನ್ನೇ ಮೊದಲ ಸಾಲನ್ನಾಗಿಸಿದರೆ ಪಾದಾದಿಯಲ್ಲಿ ಸ್ವಲ್ಪ ಉದ್ವೇಜಕವಾಗಬಹುದಾದ “ಹಿ” ಎಂಬ ನಿಪಾತವಿಲ್ಲದೆಯೇ (ಆಜ್ಞಾಚಕ್ರ….” ಇತ್ಯಾದಿಯಾಗಿ) ಪದ್ಯವನ್ನು ಆರಂಭಿಸಬಹುದು. ಅಲ್ಲದೆ “ವಿರಾಜಮಾನ” ಎಂಬುದು ಸಾಧುರೂಪ.

      • ಧನ್ಯವಾದಗಳು ಸರ್
        ಅನಗತ್ಯ ನಿಪಾತದ ನಿವಾರಣೆಗೆ ತಾವು ಹೇಳಿದ ಉಪಾಯ ತುಂಬ ಪ್ರಯೋಜನಕಾರಿಯಾಗಿದೆ.
        ಪದ್ಯಗಳಲ್ಲಿ ನಿಪಾತಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವೆ.

  27. ಪರಿವಾರವೆಲ್ಲವುಂ ಮುತ್ತುದದೊ ಸುಮಕೆಂದು
    ಪರಿತಪಿಸುತಿದುದೊಂದು ಮರಿದುಂಬಿಯುಂ ।
    ಕರಿಬೀಜ ಸಿಡಿದೊಂದು ಹಾರ್ದುದೆಂತೆಂದುಮೀ
    ಪರಿವೇಷವೆತ್ತುದದೊ ರವಿಕಾಂತಿಯಂ ।।

    (ಕುಸುಮದ ಮೇಲಿನ ಕರಿಚುಕ್ಕಿಗಳು ಮುತ್ತಿರುವ ದುಂಬಿಗಳ ಸಮೂಹದಂತೆ / ಸುತ್ತಿರುವ ಕರಿದುಂಬಿ ಸಿಡಿದ ಸೂರ್ಯಕಾಂತಿಯ ಒಂದು ಬೀಜದಂತೆ ಕಂಡ ಕಲ್ಪನೆಯಲ್ಲಿ)

    • ಅತಿಸುಂದರವೂ ಸಹಜವೂ ಆದ ಕಲ್ಪನೆ. ಅಭಿನಂದನೆಗಳು.

  28. || ಅರವಿಂದವೃತ್ತ ||

    ಗಿರಿಯ ಬಳಿಯ ರವಿಕಾಂತಿಯ ಪೂದೋಂಟಂ ರಮಣೀಯಂ
    ಮೆರೆವ ಗಗನಮಿರೆ ನೀಲದ ವರ್ಣಾಧಿಕ್ಯದೆ,ಭವ್ಯಂ |
    ಮೊರೆದು ನಮಿಸಿ ಮಕರಂದವ ಬೇಳ್ಪಂತಿರ್ಪಳಿಯೊಂದಂ,
    ಹರುಷದೆ ಕರೆದಿರಲೂಡಿಸೆ ಜೇನಂ, ಪುಷ್ಪಮುದಾರಂ ||

    • ಪದ್ಯದ ಸಹಜ-ಸರಳಭಾವಕ್ಕೆ ವಿನೂತನವೃತ್ತವು ಸಾಂಪ್ರದಾಯಿಕವಿನ್ಯಾಸದ ಅಂಚು-ಸೆರಗುಳ್ಳ ಸೀರೆಯು ಹೊಸತಾದ ಬಣ್ಣ-ನೇಯ್ಗೆಗಳಲ್ಲಿ ಮೂಡಿದಂತೆ ಚೆಲುವಾಗಿದೆ.

      • ಸಹೋದರರೆ, ಸೀರೆಯ ಉಪಮೆ ಚೆನ್ನಾಗಿದೆ:-) ಧನ್ಯವಾದಗಳು.

  29. ಸೋಗೆ ಸೊಗಸಿನ ಸೋಗ ಕಾಣೇ-
    ಕಾಂಗಿ ಕುಸುಮವದಿಂತು ಸಾರ್ಚಿಪ-
    ರಾಗಮಂ ತಾನೆತ್ತುತೋಲ್ದ ಭ್ರಮಣದಾ ಭ್ರಮೆಯೊಳ್ ।
    ಹಾಗೆ ಸುಮ್ಮಗೆ ತನ್ನ ತಾನೇ-
    ಕಾಗ್ರದೊಳ್ ಕಣ್ಣಡಿಯ ನಿಟ್ಟಿಸೆ
    ಮೂಗ ಮೇಗಣ ನತ್ತಿನೋಲ್ ತಾಂ ಭ್ರಮರದೀ ಪರಿಯಂ ।।

    (ಏಕಾಂತದಲ್ಲಿ ತನ್ನ “ಮೂಗುಬೊಟ್ಟ”ನ್ನು ತಾನೇ ನಿಟ್ಟಿಸುತ್ತಾ ಸಂಭ್ರರಮಿಸುತ್ತಿರುವ “ಸುಮಬಾಲೆ” !!ತನ್ನ ಮುಂದಿರುವ “ದುಂಬಿ”ಯನ್ನು “ಮೂಗುನತ್ತಿ” ನಂತೆ ಕಂಡಿತೆಂಬ ಕಲ್ಪನೆಯಲ್ಲಿ.

  30. ಚಂದ್ರವೂ ನಿನ್ನವೋಲರ್ಕನೆಡೆ ತಿರುಗಲೇಂ
    ಚಂದ್ರಿಕಾಶಾಂತಿಯಂ ಮೈದಾಳ್ವುದು|
    ಸಾಂದ್ರಕಚ(ರೋಮ)ಹರ್ಷಮಂ ಪೊಂದುತ್ತೆ ಮೈಯೆಲ್ಲ
    (tired)ತಂದ್ರಗೊಳ್ಳುವೆಯೇಕೆ ಉದ್ವೇಗದಿಂ||

  31. ಪಡುವಣ ಬೆಟ್ಟದಲ್ಲಿ ಸೂರ್ಯ ಅಸ್ತಮಿಸುವುದನ್ನು ತಡೆಯುತ್ತೇನೆ ಎಂದು ಪಶ್ಚಿಮದ ಬೆಟ್ಟಕ್ಕೆ ಅಡ್ಡಲಾಗಿ ಅರಳಿ ನಿಂತುದೋ?

    ಬಿಡೆನಿನಸಾರಥಿಯಂ ಮುಳು-
    ಗಡೆಗೊಳ್ಳಲ್ ಪಶ್ಚಿಮಾದ್ರಿಯೊಳುಡುಗಿ ಬೈಗೊಳ್|
    ಪಡುವಣ ಬೆಟ್ಟದೊಳಡಿಯವ-
    ನಿಡಲೆಡೆಕುಡೆನೆಂಬಿನಂ ಮಲರಿನಿಂತುದುದೆಂ? ||

    ಬೆಟ್ಟದೊಳ್ ಅಡಿ ಅವನಿಡಲ್ ಎಡೆ ಕುಡೆನ್ ಎಂಬಿನಂ ಮಲರಿ ನಿಂತುದೋ

  32. There have been so many verses and I might have missed few of them. In case this is a repeat please pardon.

    सेल्फीप्रकारनवलाद्भुतचित्रकार्ये
    तल्लीनसुर्यकमलं पुरतो गिरीणाम् |
    नालोकि चित्रदलनेप्सुमहो द्विरेफम्
    चित्रं तथापि समभून्ननु वीक्षणीयम् ||

    don’t know if words like “selfie” can be used directly in sanskrit. Import is as follows

    “the sunflower stood in front of the mountains in the pretext of taking selfie which has been a rage nowadays and was so engrossed in action that it didn’t even see the bee which was there to play spoilsport. In spite of that the picture indeed turned out to be worth viewing.”

  33. ಉದಿಸಿ ಭಾನುವು ಮತ್ತೆ ಬಂದಿರೆ
    ಬದುವು ಕಳ್ತಲಿನೊಡೆದು ಭೂಮಿಯ
    ಹೊದೆದ ಮುಸುಕನು ಕಳಚಿತೇಂ ನಿಜ ರೂಪವಂ ಮೆರೆಸಿ!
    ಮುದದ ಕಾಲವದೊಲಿಯೆ ಕಾಂತೆಗೆ
    ಹೃದಯ ರಾಗದ ಗುಟ್ಟನರುಹಿತೆ?
    ಹುದುಗಿ ನೆಟ್ಟಾ ಮಧುಪ ಚಿತ್ರವನೆಲ್ಲ ತೆರೆದಿರಿಸಿ!!

    (ಭೂಮಿಗೆ ಭಾನುವು ಬಂದಾಗ ಆಕೆಯ ನಿಜರೂಪವು ತೋರುವಂತೇ ಹೂವಿಗೂ ಮುದದ ಘ್ಹಳಿಗೆಯು ಸನ್ನಿಹಿತವಾಗೆ(ದುಂಬಿಯು ಬಳಿ ಸಾರೆ), ಅದರ ಅಂತರಂಗದ ನಿಜರೂಪವೂ ಬಯಲಾಯಿತೇ?)

  34. The senior bee can’t digest the fact that its fellow beings (the well-arranged black pollen) have ignored it (the senior) and are merrymaking by convening amidst a flower in the serene grazing land (ಗೋಷ್ಪದಂ). It charges at them in a fit of rage (ಖಷ್ಪ).
    ಸ್ವಾಗತ|| ಗೋಷ್ಪದಂ ವಿಜನಮಿರ್ದಿಹ ನಾಡೊಳ್
    ಪುಷ್ಪಮಂಟಪದೆ ಸೇರಿರೆ ನಂಟರ್|
    ದುಷ್ಪಚಂ ಗಡದು ಜೇಷ್ಠವರಂಗಂ
    ಖಷ್ಪದಿಂ ಜವದೆ ನುಗ್ಗುತಲಿರ್ಪಂ||

  35. ಎಲ್ಲಾ ಪದ್ಯಪಾನಿಗಳ ಪದ್ಯವನ್ನು ಓದಿದೆ, ಅತ್ಯುತ್ತಮವಾದ ಕಲ್ಪನೆಯಿಂದೆ ಈ ಬಾರಿಯ ಚಿತ್ರಕ್ಕೆ ಪದ್ಯವನ್ನು ನೆರವೇರಿಸಿಕೊಟ್ಟ ಎಲ್ಲರಿಗೂ ನಮನಗಳು 🙂

    ಇನಪಾನಿಯಿಂ ಮಧುರಪಾನಮಂ ಚಯನಗೊಳಿ-
    ಪನ ಪಾತ್ರಪಾನಿ ಪದ್ಯದಪಾನಿಗಂ
    ಇನಮಧುಪಪುಷ್ಪಾದಿಗಳ್ ಪೆರ್ಚುಗುಂ ನೆಗಳ್ದ
    ಮನದಿಂದೆ ಸತ್ಕಾವ್ಯಕಲೆ ಪೊಣ್ಮುಗುಂ

    ಸೂರ್ಯನಿಂದ ಪಾನಂಗೆಯ್ವನ (ಸೂರ್ಯಕಾಂತಿಯ) ಸಿಹಿಯನ್ನು ಪಾನಂಗೆಯ್ವನ (ದುಂಬಿಯ) ಪಾತ್ರೆಯನ್ನು ಪಾನಂಗೆಯ್ವ ಪದ್ಯಪಾನಿಯ ಮಹತ್ತಾದ ಮನದಲ್ಲಿ ಸೂರ್ಯ, ದುಂಬಿ, ಹೂಗಳೇ ಮೊದಲಾದವುಗಳು ಅತಿಶಯವಾಗಿ ಕಂಡು ಸತ್ಕಾವ್ಯ ಕಲೆ ಹೊಮ್ಮುವುದು

  36. ಸಾಗುವಳಿಯದಿಂತಿಳೆಯೊಳ್
    ಸಾಗುತೆ ಮೈದಳೆದು ಸಾಲುಗಟ್ಟಿರಲಲರುಂ ।
    ಯೋಗಾಯೋಗದೊಳಿಂತಳಿ-
    ಗಾಗಲೆ ದೊರಕುದದೊ ಗಟ್ಟಿ ಸಾಲಾವಳಿಯುಂ ।।

    (ರಾಶಿ ಕುಸುಮಗಳ ನಡುವೆ – ತನ್ನ ಮನದನ್ನೆಯ ಕಲ್ಪನೆಯಲ್ಲಿದೆಯೇ “ದುಂಬಿ” ?!)

Leave a Reply to ರಾಗ (R. Ganesh ) Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)