Feb 152015
 

ಶಿಖರಿಣೀ ಛಂದಸ್ಸಿನ ಪಾದಾಂತ್ಯವಾದ “ನೋವು ನಲಿವೇ” ಎಂಬುದನ್ನು ಬಳಸಿ ಪದ್ಯವನ್ನು ರಚಿಸಿರಿ

  96 Responses to “ಪದ್ಯಸಪ್ತಾಹ ೧೩೮: ಪದ್ಯಪೂರಣ”

  1. ವನ೦ ಮೇಣಾತ್ಮಾರಾಮಕುಪಮೆಯೆನಲ್ ರ೦ಜಿಸಿತಲಾ,
    ಮನೋಜ೦ ಮೇಣೆಚ್ಚಿರ್ಪ ಶರತತಿಯಿ೦ ಕಾಣ್ ಶಿವಮದೈ,
    ತನೂಜರ್ ಮೇಣ್ ತಾತಾದ್ಯರನೆ ಕೊಲಲು೦ ಧರ್ಮದ ಜಯ೦,
    ಮನ೦ ಮೇಣ್ ತಾನಪ್ಪಲ್ ಪಿರಿತನಮನೈ, ನೋವು ನಲಿವೇ

    ಶಿವ = ಶುಭ

    ಮನಸ್ಸು ಒ೦ದು ಹಿರಿದಾದ ತತ್ತ್ವವನ್ನು ಅಪ್ಪಿ ನಡೆದರೆ ನೋವು ನಲಿವೇ ಆಗುತ್ತದೆ. ಉಲ್ಲೇಖಕ್ಕೆ ರಾಮನ ವನವಾಸ, ಕುಮಾರ ಸ೦ಭವ, ಮಹಾಭಾರತದ ಧರ್ಮಯುದ್ಧ ಇವುಗಳನ್ನು ಕೊಟ್ಟಿದೆ. (ಸೂಚ್ಯವಾಗಿ ರಾಮ, ಶಿವ, ಜಯ ಎ೦ಬ ಪದಗಳನ್ನೂ ತರಲಾಗಿದೆ)

    • ಕಲ್ಪನೆ ಚೆನ್ನಾಗಿದೆ. ಕಠಿನವಾದ ಶಿಖರಿಣಿಯನ್ನು ಬೇಗದಲ್ಲಿಯೇ ನಿರಿವಹಿಸಿದ್ದೀರಿ; ಅಭಿನಂದನೆಗಳು. ಆದರೆ ಅರ್ಥಸ್ವಾರಸ್ಯಕ್ಕೆ ಹೆಚ್ಚಾಗಿ ಒತ್ತಾಸೆ ನೀಡದ ರೀತಿಯಲ್ಲಿ “ಆ” ಎಂಬ ಅವ್ಯಯವನ್ನು ಎರಡೆರಡು ಬಾರಿ (ಕೇವಲ ಗುರುನಿರ್ವಾಹಕ್ಕಾಗಿ) ತಂದಿರುವುದು ಅಷ್ಟಾಗಿ ರಂಜಿಸದು. ಇಂಥ ವೃಥಾ “ಆ”ಕಾರಗಳನ್ನು ಗುರುಸಾಧನಮಾತ್ರಕ್ಕಾಗಿಯೇ ತರುತ್ತಿರುವ ಮತ್ತೂ ಹಲವಾರು ಪದ್ಯಪಾನಿಗಳಿದ್ದಾರೆ. ಅವರೆಲ್ಲರಿಗೂ ಈ ಮೂಲಕ ನಮ್ರವಾದ ಎಚ್ಚರಿಕೆಯನ್ನು ನೀಡುತ್ತಿದ್ದೇನೆ:-)
      ಇನ್ನು ಕನ್ನಡಕ್ಕೆ ಯತಿವಿಲಂಘನದ ಹಾದಿಯೇನೋ ಇದ್ದೇ ಇದೆ. ಆದರೆ ಶಿಖರಿಣಿ, ಹರಿಣಿ, ಪೃಥ್ವಿ, ಮಂದಾಕ್ರಾಂತೆ, ಸ್ರಗ್ಧರೆ, ಮಹಾಸ್ರಗ್ಧರೆ, ಮೇಘವಿಸ್ಫೂರ್ಜಿತ, ಮಾಲಿನಿ, ಪ್ರಹರ್ಷಿಣಿ, ರುಚಿರೆ, ಶಾಲಿನಿಗಳಂಥ ಪ್ರಸಿದ್ಧಯತಿಪ್ರಬಲವೃತ್ತಗಳನ್ನು ಯಾವುದೇ ಭಾಷೆಯಲ್ಲಿ ನಿರ್ವಹಿಸುವಾಗಲೂ ಅವುಗಳ ಯತಿವಿರಾಮವನ್ನು ಕೂಡಿದ ಮಟ್ಟಿಗೆ ಪಾಲಿಸಿದಲ್ಲಿ ಶ್ರುತಿಕಟುತ್ವವು ತಪ್ಪುತ್ತದೆ. ಇದೂ ಸಹ ಎಲ್ಲರಿಗೆ ಸಲ್ಲುವ ಹಾರ್ದಸೂಚನೆ.

      • ಧನ್ಯವಾದಗಳು ಸರ್! ಸದ್ಯಕ್ಕೆ ಆಕಾರಗಳನ್ನು ತೆಗೆದಿದ್ದೇನೆ. ಮತ್ತೊಮ್ಮೆ ಯತಿಗಳ ಕೈ ನೋಡುತ್ತೇನೆ 🙂

      • ನೀ, ಆಕಾರರಹಿತ ಯತಿಯ ಕೈಹಿಡಿವ ಆಸೆಯೇಕೆ?
        ಯಾಕಾರೆ ನೋಡುವೆಯೊ ಯತಿಯ ಕೈಗಳ ಪೂಜ್ಯ-
        ರಾ ಕಾಲ್ಗಳಲ್ತೆಲಾಶ್ರಯಣೀಯವೈ|
        ಆಕಾರಮಧ್ಯಲುಪ್ತದ ’ಯುವತಿ’ ’ಯತಿ’ಯೆನಿಸ-
        ಲೇಕೀ ಉಪೇಕ್ಷೆ ಕಾಗುಣಿತಾಂಶದೊಳ್||

        • ನಮಿಪ್ಪೆಂ ರಂಪರ್ಗಾಂ ಮೊದಲು ಪರಿಹಾರಕ್ಕೆ ಕವನಂ
          ಕಮೆಂಟಿಂಗಾಮೇಲೇ ನುಡಿವುದುಚಿತಂ ಪದ್ಯಪಥದೊಳ್ 😉 :-p

        • ಅಹಾ! ಬಂದಿತ್ತೈ ‘ಯೋಚನೆ’ಯ ಛವಿಯಿಂ ಕೇಳಿದೆನಗಂ
          ಮಹಾ ವ್ಯಾಖ್ಯಾತನ್ ನೀನದನುಮ್ ’ಅಘ’ಮನ್ನಾಗಿಸಿದೆಯೈ (ಅಘ=guilt)|
          🙁 ಅಲ್ಲರ್ದೆ
          (irony)ಪ್ರಹಾಸಂ ನೋಡೈ ನೀಂ ವಿಕಟಮಿನಿತುಂ ತಾನಿರವುದೇಂ
          (Some Mr. Sahai) ಸಹಾಯ್ ಎಂಬೊಬ್ಬಂ ವಾಮಪಥಿಕನೆನುತ್ತೆನ್ನ ಬಗೆಯಲ್||

        • Prasad sir, only yati I see regularly is Swami Harshanandji, who hides his feet with a cloth while we bow down to him, and we can only see his hands giving us the chocolates 🙂 🙂

  2. ನವಂ ಮಾಸಂಗಳ್ ಪೆಣ್ ತಳೆದು ಬಸುರೊಳ್ ವಂಶಹಿತಕೃ-
    ದ್ಧವಿಸ್ಸೆಂಬೋಲ್ ಗರ್ಭಾಂಬುಧಿಯ ಸುಧೆಯಂ; ತಾಳುತೆನಿತೋ|
    ಸ್ರವತ್ಕಷ್ಟಾಕಾಶಂಗಳನಹಹ! ಸಯ್ಪಿಂ ಜನಿಯಿಪಳ್
    ಪ್ರವಾಳಾಭಾಪತ್ಯಪ್ರಭೆಯನೆನೆ ಕೇಳ್! ನೋವು ನಲಿವೇ!!

    ಇದು ತೀರ ಸರಳವಾದ ಸರ್ವಸಾಮಾನ್ಯಪೂರಣ. ನವಮಾಸಗರ್ಭವನ್ನು ತಳೆದ ಹೆಣ್ಣು ತಾಯಾಗುವ ಮೂಲಕ ನೋವೆಲ್ಲ ನಲಿವಾದ ಪರಿ ಇಲ್ಲಿದೆ.
    ಹಿತಕೃತ್+ಹವಿಸ್ = ಹಿತಕೃದ್ಧವಿಸ್; ಸ್ರವತ್ಕಷ್ಟಾಕಾಶ = ಸುರಿಯುತ್ತಿರುವ ಕ್ಲೇಶಗಳೆಂಬ ಆಕಾಶ; ಸಯ್ಪು = ಅದೃಷ್ಟ, ಪ್ರವಾಳ+ಆಭ+ಅಪತ್ಯ+ಪ್ರಭೆ = ಹವಳದಂಥ ಮಗುವಿನ ಕಾಂತಿ.

    • ಅಹೋ!! ಮಚ್ಚಿತ್ತಕ್ಕಂ ಮೊದಲೊಳಿದೆ ದಲ್ ಬಂದುದಕಟಾ!!
      ಅಹಃಪಂಬೊಲ್ ಕಾಂತಿಚ್ಛಟೆಯೆ ಮೆರೆಗುಂ ಪದ್ಯಮಿದರೊಳ್

    • There cant be any greater Nalivu for this nOvu. 🙂

  3. ಪರಾಗಂ ಪೊಂದಿಲ್ಲೆಂದೆನುತೆ ದಿಟ ದೇವಂಗಿರಿಸರೈ
    ವಿರಾಗಂ ತೋರೆನ್ನಂ ಶಿರದಿರಿಸರೈ,ನಿರ್ದಯರೆನ
    ಲ್ಕರೇ! ದೂರಂ ಸಾರ್ದುಂ ನಗುನಗುತೆ ಕೊಂಡಾಡುವರಲಾ!
    ಅರಳ್ದುಂ ನಿಂದಿರ್ಪೀ ವನಕುಸುಮದಾ ನೋವು,ನಲಿವೇ?

    (ಅರಳಿ ನಿಂತ ವನಸುಮವದ ನೋವು)

    • ಆಹಾ! ತುಂಬ ಸೊಗಸಾದ ಕಲ್ಪನೆ ಹಾಗೂ ಅದಕ್ಕಿಂತ ಮಿಗಿಲೆನಿಸುವ ಪದ್ಯಪದ್ಧತಿ. ನೀವು ಕನ್ನಡನುಡಿಜಾಡಿನ ಪಾಲಿಗೆ ದುಷ್ಕರವಾದ ಶಿಖರಿಣಿಯನ್ನು ಅದೆಷ್ಟು ಸುಕರವನ್ನಾಗಿಸಿದ್ದೀರಿ!! ಅಭಿನಂದನೆಗಳು. ಯತಿಸ್ಥಾನದ ಯುಕ್ತವಾದ ಪಾಲನೆ, ಒಳ್ಳೆಯ ಪ್ರಾಬಂಧಿಕವಾದ ಶೈಲಿ, ಹಳಗನ್ನಡದ ಹದ ಎಲ್ಲ ಚೆನ್ನಾಗಿ ಕಲೆತಿವೆ.

    • Managing so much of serial gurus in kannada is a big task, along with aadi prasa and that too with no fillers….Motivates me to try composing a shikharini now.
      Looks effortless….

    • Kanchana madam, should it not be “paraagamam pondu”, and “viraagamam tori” etc. in dviteeya vibhakti? Where as you have brought it to prathama vibhakti. please clarify.

      • ಇದೇ ತಾಣದ ಪ್ರಶ್ನೋತ್ತರದಲ್ಲಿ ಅಚ್ಚಾಗಿರುವ “ವಿಭಕ್ತಿ ಪಲ್ಲಟ” ದ ವಿಷಯವನ್ನು ನೋಡಿರಿ. ಅಲ್ಲಿರುವ ವಿವರಗಳನ್ನು ಇಲ್ಲಿ ಟಂಕಿಸುತ್ತಿದ್ದೇನೆ :

        ಕನ್ನಡದಲ್ಲಿ ವಿಭಕ್ತಿಪಲ್ಲಟ:
        ಪ್ರಥಮ ವಿಭಕ್ತಿಯ ರೂಪವನ್ನು, ಸಂದರ್ಭಕ್ಕೆ ತಕ್ಕಂತೆ ಪ್ರಥಮ ಮತ್ತು ದ್ವಿತೀಯ ವಿಭಕ್ತಿ ರೂಪದಲ್ಲಿ ವ್ಯಾಖ್ಯಾನಿಸಬಹುದು.

        “ಕನ್ನಡದಲ್ಲಿ ವಿಭಕ್ತಿಪಲ್ಲಟದ ಸೌಕರ್ಯವಿದೆ. ಆದರೆ ಅದು ಅನ್ವಯಕ್ಲೇಶದೊಡನೆ ತಳುಕುಹಾಕಿಕೊಂಡಾಗ ಕಷ್ಟವಾಗುತ್ತದೆ”
        “ಕನ್ನಡಕ್ಕೆ ವಿಭಕಿಪಲ್ಲಟವೆಂಬ ಅನುಕೂಲತೆಯಿದೆ. ಕೆಲಮಟ್ಟಿಗಿದು ಸಂಸ್ಕೃತಕ್ಕೂ ಇದೆ. ಆದರೆ ಎಲ್ಲ ಹದದೊಳಗಿರಬೇಕು, ರಿಯಾಯಿತಿಯು ಅತಿಯಾಗಬಾರದು. ಹಾಲಿಗೆ ಎಷ್ಟು ನೀರು ಹಾಕಬಹುದು? (ಗಮನಿಸಿರಿ; ಇಲ್ಲಿಯೇ ವಿಭಕ್ತಿಪಲ್ಲಟವಿದೆ!)”

        • ಕಾ೦ಚನ ಮೇಡಮ್! ನಿಮ್ಮನ್ನು ಇನ್ನು ಮೇಲೆ ನ೦ಬುವುದಾದರೂ ಹೇಗೆ? ಶನಿವಾರದ ಬಾಣಕಾವ್ಯದ ಅಮಲಿನಲ್ಲಿ ಏನೇನು ಪಲ್ಲಟ ಮಾಡುತ್ತೀರೊ!!

          ಕಬ್ಬಿಣಮಾದುದೆ ಕಾ೦ಚನ-
          ಮುಬ್ಬಿನೊಳೆಮ್ಮ೦ ವಿಭಕ್ತಿಪಲ್ಲಟದಿ೦ದ೦
          ಕಬ್ಬದಿ ವ೦ಚಿಸೆ, ಬಾಣನ
          ಮಬ್ಬೊಳು ಚಹವುಪ್ಪುಸಕ್ಕರೆಯ ಪಲ್ಲಟದಾ!!

          • ಇನ್ನೂ ಹೊಸಬರು ನೀವು! ಇಷ್ಟು ಬೇಗನೆ ಅಪಾಯವನ್ನು ಅರಿತರಲ್ಲಾ!(ಪದ್ಯವನ್ನು ಬರೆವ ವೇಗದಲ್ಲೇ). ಹಾಗೆಯೇ ತಪ್ಪಿಸಿಕೊಳ್ಳುವ ಉಪಾಯವನ್ನೂ ಶೀಘ್ರ ಕಂಡುಕೊಳ್ಳಿ ನೀಲಕಂಠಾ 🙂

  4. ಚಲಚ್ಚಕ್ರಂ ಕಾಲಂ ನಿಖಿಲಭುವನಕ್ಕಾದ ನಿಯಮಂ
    ಜ್ವಲತ್ಕೋಪಾಟೋಪಂ ಸರಸವಿರಸಂ ದ್ವೇಷಮುಮಿರಲ್
    ಸಲಲ್ ಬಾಳೆಂತೆಂಬೀ ತರುವಿನೊಳಗೇಗಳ್ ರಸಮಯಂ
    ಫಲಂ ತುಂಬಿರ್ಕುಂ ದಲ್ ನವರಸದೊಳಂ ನೋವುನಲಿವೇ!
    (ಚಲಿಸುತ್ತಿರುವ ಚಕ್ರದಂತಿರುವ ಕಾಲ ಸಕಲಜಗತ್ತಿಗಾದ ನಿಯಮ,
    ಅಲ್ಲಿ ಜ್ವಲಿಸುತ್ತಿರುವ ಕೋಪಾಟೋಪ, ಸರಸವಿರಸ, ದ್ವೇಷ ಎಲ್ಲವೂ ತುಂಬಿರುತ್ತವೆ. ಹೀಗೆ ಈ ಬಾಳೆಂಬ ತರುವಿನಲ್ಲಿ ಯಾವಾಗಳೂ ರಸಮಯವಾದ ಫಲ ತುಂಬಿರುತ್ತದೆ. ಅದರಲ್ಲಿ ನವರಸಗಳಲ್ಲಿಯೂ ನೋವುನಲಿವೇ ಅಲ್ಲವೇ! )
    *ನೋವೇ ನಲಿವು ಎಂಬರ್ಥದಲ್ಲಿ ಅಲ್ಲದೇ ನೋವುನಲಿವುಗಳೆರಡೂ ಎಂಬರ್ಥದಲ್ಲಿ ಪರಿಹಾರ

    • ಅಹೋ! ಶೈಲೀಸೌಖ್ಯಂ ಶ್ರವಣಪುಟಪೇಯಂ ಮಧುರಿಮಾ-
      ವಹಂ; ವಾಗರ್ಥೀಯಾದ್ವಯಸುಷಮೆಯೇಂ ಚೆಲ್ವಿನೆರಕಂ!!

  5. ಪ್ರವೃತ್ತಂ ಸಂಧಾನಂ ಬೆಸೆಯಲಿನಿದುಂ ಜೀವದೊಳು ಜೀ-
    ವವಂ ಕಾಣ್ ಸಂತಾನಂ ಮೃದುಲ ಮಧುರಂ ಕಾವುದೊಲವುಂ ।
    ವಿವರ್ತಂ ಸಂದರ್ಭಂ ಜಗುಳಲಿನಿತುಂ ಗೋಳದೊಳ ಗೋ-
    ಳವುಂ ಮೇಣ್ ಗಂಭೀರಂ ಪ್ರಸವಸಮಯಂ ನೋವುನಲಿವೇ !!

    (ಶಿಖರಿಣಿಯಲ್ಲಿ ಪ್ರಸವ ವೇದನೆ !!)

    • Nice . Could you please explain send half?

      • ಉಷಾ ಅವರೇ! ತುಂಬ ಸೊಗಸಾದ ಶಿಖರಿಣಿಯ ಸೀಕರಣೆಯನ್ನು ಉಉಣಬಡಿಸಿದ್ದೀರಿ; ಧನ್ಯವಾದಗಳು. ನಿಮ್ಮ ಪದ್ಯದಲ್ಲೆಲ್ಲಿಯೂ ಶಬ್ದಾರ್ಥಗಳ ಲೋಪವಿಲ್ಲ, ಎಲ್ಲ ಅನವದ್ಯವಾಗಿದೆ. ನೀವೂ ಕಾಂಚನಾ ಅವರಂತೆ ಸಲೀಲವಾಗಿ ಶಿಖರಿಣಿಯನ್ನು ಏರಿದ್ದೀರಿ! ಈ ವೃತ್ತವೇನಾದರೂ ಸ್ತ್ರೀಪಕ್ಷಪಾತಿಯೇ?? 🙂 🙂

        • ಶ್ರೀ ಶಂಕರರ ಮತ್ತು ಶಂಕರಸುತರ ಸುಂದರ ರಚನೆಗಳು ಕಣ್ಮುಂದಿರುವಾಗ, ಈ ಸಂದೇಹವೇ ತಮಗೆ?? 🙂
          ಏನಿದ್ದರೂ, ನಾನೇನಾದರೂ ಪದ್ಯವನ್ನು ಬರೆಯುತ್ತಲಿದ್ದರೆ ಅದು ಈ ದೇವರ ಕೃಪೆಯಿಂದಷ್ಟೇ.

      • ಧನ್ಯವಾದಗಳು ಗಣೇಶ್ ಸರ್, ಶ್ರೀಶ
        “ಶಿಖರಿಣಿ”ಯಲ್ಲಿನ ಪ್ರಸವ ವೇದನೆಯ “ನಿವೇದನೆ”ಯನ್ನ (ಪದ್ಯರಚನೆ) ಮೆಚ್ಚಿದ್ದಕ್ಕಾಗಿ !!
        (ವಿವರ್ತ = ಉರುಳಾಟದಲ್ಲಿ ಜರುಗುತ್ತಾ ಜಾರಿ ಕಳಚುವ ಗರ್ಭದ (ಪ್ರಸವ ಕಾಲದ) ವಿವರಣೆ – ಗೋಳದಲ್ಲಿ (ಗೋಳಿನಲ್ಲಿ !) “ಗೋಳ” ಕಂಡದ್ದು “ವಿಶ್ವಗರ್ಭ”ದ ಕಲ್ಪನೆ !!)
        ಹೂ ಮನದ ಹೆಂಗಳೆಯರಿಗೆ – ಪದ್ಯಪಾನ ನಲಿವು ತುಂಬಿದೆ …..!! “ನೋವು ನಲಿವೇ”…..!!
        ಬಹುಶಃ “ಸಮಸ್ಯೆ”ಯ ಸಾಲಿನಿಂದಾಗಿ – “ವಿಷಣ್ಣಂ ಗಂಭೀರಂ ವಿಕಟಮಧುರಂ ತಾಂ ಶಿಖರಿಣೀಂ” – ಸ್ತ್ರೀಪಕ್ಷಪಾತಿಯಂತೆ ತೋರುತ್ತಿಹಳೇ ?!

  6. ಮಹಾದುಃಖಂ ಸೂರ್ಯೋದಯಕೆ ಮೊದಲೇಳುತ್ತೆ ಪಠನಂ
    ವಿಹಾರಕ್ಕುಂ ಭಂಗಂ ಬೆದರಿಪ ಪರೀಕ್ಷಾವಿಧಿಗಳುಂ |
    ಅಹೋ! ಕಷ್ಟಂ ವಿದ್ಯಾರ್ಜನೆ ಮನುಜರಿಂಗಾದೊಡಮಿದೋ
    ಮಹಸ್ಸಂ ಜೀವಕ್ಕಂ ಸೊಗದೆ ಕುಡುವೀ ನೋವು ನಲಿವೇ ||೧||

    ದುರಾಪಂ ವೈರಾಗ್ಯಂ ಸೆಳೆಯುತಿರೆ ಸಂಸಾರದ ರಸಂ
    ಚರಚ್ಚೇತಸ್ಸಂ ಬೊಮ್ಮನೊಳೆ ನಿಲಿಸಲ್ಕುಂ ಕಠಿನಮಯ್ |
    ಕರಂ ದುರ್ಗಂ ಕಾಣೀ ವಿರತಿಸೃತಿಯಿಂತಾದೊಡಮಿದಂ
    ನರಂ ಧೀರಂ ಪೊಂದಲ್ ದಿಟದೊಳವಗೀ ನೋವು ನಲಿವೇ ||೨||

    ಮನೋಜ್ಞಂ ಪೂದೋಟಂ ಬೆದರಿಪ ಮಹಾರಣ್ಯತತಿಯುಂ
    ಕನನ್ನಕ್ಷತ್ರಂ ಬಾನ್, ಒಡನೆ ಘನನಿರ್ಘೋಷಭಯದಂ |
    ಘನಂ ದುಃಖಧ್ವಾಂತಂ ಮಗುಳುದಿಪುದೈ ಮೋದರುಚಿಯುಂ (ರುಚಿ = ಪ್ರಭೆ)
    ಮನುಷ್ಯರ್ಗಿಂತಿರ್ಕುಂ ಬದುಕ ನಡೆಯೊಳ್ ನೋವುನಲಿವೇ ||೩||
    ಬದುಕಿನಲ್ಲಿ ನೋವುನಲಿವುಗಳು ಸಮ್ಮಿಶ್ರಿತವಾಗಿಯೇ ಇರುತ್ತವೆ ಎಂಬರ್ಥದಲ್ಲಿ ಈ ಪದ್ಯ.

    ಮೊದಲ್ ನವ್ಯಂ ಹೃದ್ಯಂ ಬಗೆಯೊಳುದಿಸಲ್ ಕಲ್ಪನೆಯದ-
    ಕ್ಕುದಾರಂ ಪ್ರಾಸಾಢ್ಯಂ ನುಡಿಗಡಣಮಂ ವೃತ್ತದೊಳೆ ಚೆಂ-
    ದದಿಂ ಗೂಡಲ್ ಕಾಣ್! ಉಣ್ಮುವುದು ಕವನಂ ಬನ್ನದಿನಿತಂ-
    ತ್ಯದೊಳ್ ಮೆಚ್ಚಲ್ಕಾಣ್ಮರ್ ಸಹೃದಯರುಮಾ ನೋವು ನಲಿವೇ ||೪||
    ವಿಶೇಷತಃ ಕನ್ನಡದಲ್ಲಿ ಶಿಖರಿಣಿಯ ರಚನೆಯಲ್ಲಿ ಎದುರಾದ ಕಾಠಿನ್ಯದ ಅನುಭವದ ಪದ್ಯವಿದು 😉

    • ಪ್ರಸನ್ನಂ ಗಂಭೀರಂ ಗುರು-ಲಘುಯುತಿಪ್ರಾಪ್ತಿಪುಲಕಂ
      ಜಸಂಗೊಂಡಿಲ್ಲಿರ್ಕುಂ ಶಿಖರಿಣಿಯನೇರ್ವೊಂದು ಕತದೊಳ್|

      • ಪೆಜತ್ತಾಯಾ! ಮಾಯಾಮಯಜಗದಮೇಯಾನಯದವೊಲ್
        ಪ್ರಜಾಗೇಯಶ್ರೀಯ ಪ್ರಿಯಕವನದಾಯರ್ಧಿ ಬಗೆಯಲ್!

        • ಸರಾಗಂ ಶ್ರೀರಾಗಂ ಪ್ರಕಟಗೊಳಿಸಲ್ ತನ್ನ ಮುದಮಂ
          ವರಾಮೋದಾಸಾರಂ ತವೆ ಪುಳಕಮಂ ನೀಡುವುದು ದಲ್ 🙂

    • ನಿಜಚ್ಛಂದೋವೈದುಷ್ಯದೆ ಸೃಜಿಸುತುಂ ಕಷ್ಟಮೆನುವಾ
      ಪೆಜತ್ತಾಯರರ್ಗೀಗಳ್ ನಮಿಪೆನಿವು ಹೃದ್ಯಂಗಳೆನಿಕುಂ||

      • ಇದೇಂ ವೈದುಷ್ಯಂ ಪೇಳ್ ತುರುಕರುಗಳಂ ಬಂಧಿಸುವವೊಲ್
        ಸದಾಮಂ ಬನ್ನಂಗೊಳ್ಳುತೆ ನುಡಿಗಳಂ ವೃತ್ತದೊಳಿಡಲ್ 🙂
        ಮೆಚ್ಚುಗೆಗೆ ಧನ್ಯವಾದಗಳು 🙂

    • ಮೊದಲನೆಯ ಹಾಗೂ ನಾಲ್ಕನೆಯ ಪದ್ಯಕ್ಕೆ ಪ್ರತಿಕ್ರಿಯೆ:
      ವಿದ್ಯಾರ್ಜನೆಯು ಕಷ್ಟಮೆಂದಿರಲ್ ಪಾಠಕರೆ (teacher)
      ಚೋದ್ಯಮೇನೆಂಬ ವಿದ್ಯಾರ್ಥಿದೆಸೆಯಾ!
      ——–
      ಯದ್ಯಪಿ ತ್ವಂ ’ಮೆಚ್ಚಲ್ಕಾಣ್ಮ’ರೆನ್ನಲುಮಿದೋ
      ಸಾದ್ಯಂತ ಪೊಗಳುವೆ ಪೆಜತ್ತಾಯರೆ||

      • ’ಯತ್ತದಗ್ರೇ ವಿಷಮಿವೆ’ಂದು ಕೃಷ್ಣಂ ನುಡಿದ
        ಸತ್ತಮಂ ಸೊಗಮದೆಂದೊರೆಯೆ ತಪ್ಪೇಂ ? 🙂
        ——-
        ಮೆಚ್ಚಿರಲ್ ನೀಮೆಲ್ಲರುಂ ಹರ್ಷವರ್ಷದೊಳ್
        ಮಚ್ಚಿತ್ತಬರ್ಹಿಣಂ ಕುಣಿಯುತಿರ್ಕುಂ 🙂

  7. ಗುಣಾಗ್ರಣೀಯಂ,ಪುತ್ರರತನಮಗಂ ಪೆತ್ತೊಡೊಲವಿಂ,
    ಋಣಂ ತೀರಲ್ಕೆಂತಾಂ ನೆಲದನಲವಿಂದೊಪ್ಪಿಸಿಹರುಂ
    ಕಣಾ! ಸೇನಾಕೈಂಕರ್ಯಮ, ಕದನದೊಳ್ಗಪ್ಪಿದನಲಾ-
    ಕ್ಷಣಂ ವೀರಸ್ವರ್ಗಂ! ವಿಕಟವಿಧಿಯುಂ!! ನೋವುನಲಿವೇ !?

    (ಯುದ್ಧದಲ್ಲಿ ಮಗನನ್ನು ಕಳೆದುಕೊಂಡ ( “ವೀರಮರಣ”ವನ್ನಪ್ಪಿದ ಮಗನ) “ದೇಶಪ್ರೇಮಿ” ತಂದೆತಾಯಿಯರ ನೋವು-ನಲಿವು)

    • ಮೊದಲನೆಯ ಪಾದದಲ್ಲಿ ಛಂದಸ್ಸು ತಪ್ಪಿದೆ (ಗುಣಾಗ್ರಣೀ…); ಅಲ್ಲದೆ ಹಲವೆಡೆ ವ್ಯಾಕರಣವೂ ಜಾರಿದೆ. ದಯಮಾಡಿ ಸವರಿಸಿಕೊಳ್ಳಿರಿ.

      • ಕ್ಷಮಿಸಿ ಗಣೇಶ್ ಸರ್, ಛಂದಸ್ಸು ತಪ್ಪಿದ್ದು ಗಮನಿಸಿರಲಿಲ್ಲ. ಸ್ವಲ್ಪಮಟ್ಟಿಗೆ ತಿದ್ದಲು ಪ್ರಯತ್ನಿಸಿದ್ದೇನೆ. ಮತ್ತೂ ಸವರಿಸಲು ದಯವಿಟ್ಟು ಸಹಾಯ ಮಾಡಿ.

        ಗುಣಾಗ್ರಣ್ಯಂ,ಪುತ್ರಂ,ಕುಲತಿಲಕನಂ ಪೆತ್ತವರುತಾಂ
        ಋಣಂ ತೀರಲ್ಕಿಂತುಂ ನೆಲೆಯ ನೆಲಕೆಂದುಂ ಕಳುಹಿದರ್
        ಕಣಾ! ಸೇನಾಕೈಂಕರ್ಯಕೆ, ಕದನದೊಳ್ಗಪ್ಪಲವನಾ-
        ಕ್ಷಣಂ ವೀರಸ್ವರ್ಗಂ! ವಿಕಟವಿಧಿಯಿಂ, ನೋವು ನಲವೇ !?

        • ಇದೀಗ ಪದ್ಯವು ತುಂಬ ಸುಧಾರಿಸಿದೆ. ಕೇವಲ ಕಣಾ ಎಂಬ ಅವ್ಯಯವು ಪಾದಾದಿಯಲ್ಲಿಯೇ ಬಂದಿರುವೊಂದು ಅನಪೇಕ್ಷಿತ ಸಂಗತಿ. ಇದನ್ನು “ರಣತ್ಸೇನಾಕೈಂಕರ್ಯ….” ಎಂದು ಸವರಿಸಬಹುದು. (ರಣತ್ = ಶಬ್ದಿಸುವ, ಕಲಹಿಸುವ)

          • ಧನ್ಯವಾದಗಳು ಗಣೇಶ್ ಸರ್,
            ಇದೂ “ಲಗಂ” ವಿನ್ಯಾಸದ ಆದಿ ಪ್ರಾಸ ಹೊಂದಿಸುವ ಭರದಲ್ಲಿ ಅರಿಯದೆ ಮಾಡಿರುವ ತಪ್ಪು !! ಸರಿಪಡಿಸಿದ್ದೇನೆ.
            ಗುಣಾಗ್ರಣ್ಯಂ,ಪುತ್ರಂ,ಕುಲತಿಲಕನಂ ಪೆತ್ತವರುತಾಂ
            ಋಣಂ ತೀರಲ್ಕಿಂತುಂ ನೆಲೆಯ ನೆಲಕೆಂದುಂ ಕಳುಹಿದರ್
            ರಣತ್ಸೇನಾಕೈಂಕರ್ಯಕೆ, ಕದನದೊಳ್ಗಪ್ಪಲವನಾ-
            ಕ್ಷಣಂ ವೀರಸ್ವರ್ಗಂ! ವಿಕಟವಿಧಿಯಿಂ, ನೋವು ನಲವೇ !?

  8. ರಸಾಮೋದಂ ಪದ್ಯಂಗಳಿನಿತರೊಳೇ ತೋರುತಿರೆ ,ನೀ-
    ರಸಂ ಸಲ್ಗುಂ ಮರ್ತಿನ್ನುಳಿದರೊಳು,ಕಾವ್ಯಾಂಗದೊಳು ದಲ್?
    ಸಸಾರಂ ಮೇಣ್ ಶಕ್ಯಂ ಹದವರಿವುದಲ್ತೇ ಕಲೆತಿರಲ್
    ವಿಸಾರಂ ಪೊಂದಿರ್ಪೀ ಬದುಕಿನೊಳು ಬಲ್ ನೋವು-ನಲಿವೇ

    (ಒಂದು ಕಾವ್ಯದಲ್ಲಿ ಕೆಲವು ಪದ್ಯಗಳು ರಸಾಸ್ವಾದವನ್ನು ಇತ್ತರೆ,ಇನ್ನ ಉಳಿದವು ನೀರಸವಾಗಿರುತ್ತವೆ.
    ವಿಸ್ತಾರವಾದ ಬದುಕಿನಲ್ಲಿ ನೋವು,ನಲಿವೇ ತುಂಬಿರುವದರಿಂದ ಈ ವಿಷಯವನ್ನು ಅರ್ಥೈಸಿಕೊಳ್ಳುವುದು ಸುಲಭವೂ ಮತ್ತು ಸಾಧ್ಯವೂ ಆಗಿದೆ )

    • ಕಲ್ಪನೆ ಚೆನ್ನಾಗಿದೆ. ಆದರೆ ಸ್ವಲ್ಪ ಭಾಷೆಯ ಪರಿಷ್ಕಾರ ಅವಶ್ಯ.

      • ಧನ್ಯವಾದಗಳು. ಸವರಣೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ 🙂

    • ತುಂಬಿರಲು…ಪೊಂದಿರ್ಪೀ – ದ್ವಿರುಕ್ತಿಯಾಯಿತು. ನನಗೆ ತಿಳಿದಂತೆ ಸವರಿದ್ದೇನೆ:
      ರಸಾಸ್ವಾದಂ ನೀಳ್ಗುಂ ಪಲವುಕವನಂಗಳ್, ಮಗುಳೆ ನೀ-
      ರಸಂ ತಾಮಿರ್ಕುಂ ಪದ್ಯಗಳಿತರೆ ಕಾವ್ಯಾಂಶಗಳೊಳಂ|
      ಸಸಾರಂ ಮೇಣ್ ಶಕ್ಯಂ ಗ್ರಹಿಪುದಿದನುಂ ಜೀವಿತದೆ ಬಲ್
      ವಿಸಾರಂ-ಸಾರಂ ತುಂಬಿರೆ ಮುಕುರದೊಲ್ ನೋವು-ನಲಿವೇ||

      • ಧನ್ಯವಾದ ಪ್ರಸಾದರೇ. ನಾನು ತಿದ್ದಿದ ಬಳಿಕ ನೀವು ಬರೆದದ್ದನ್ನು ನೋಡಿದೆ 🙂

        • ಪ್ರಸಾದು ಅವರ ಸವರಣೆಯೂ ಕಾಂಚನಾ ಅವರದೇ ತಿದ್ದುಗೆಯೂ ಚೆನ್ನಾಗಿವೆ. ಇದೀಗ ಪದ್ಯವು ಬಹಳಷ್ಟು ಸುಧಾರಿಸಿದೆ.

  9. ಸುಂದರಿಯ ಉಪಟಳವನ್ನು ಸಹಿಸಿಕೊಳ್ಳುವ ಇನಿಯನ ಪೂರಣ

    ತೊಡಲ್ಕೋಪಳ್ ಕೋಪಂ ಬೆಮರುತುಲಿಗುಂ ತ್ರಾಹಿಯೆನುತುಂ
    ಸಿಡಿಲ್ಗುಂ ಕರ್ಣಂಗಳ್ ಪರಿದಪವೊಲಾಕ್ರಂದಮೆಸೆಗುಂ
    ಬಿಡೆಂ ಕಾಣಿಂತಿರ್ಪ ಪ್ರಣಯಿನಿಯನಾ ಚೆಲ್ವ ಮೊಗದೊಳ್
    ಬೆಡಂಗಂ ಕಾಣುತ್ತುಂ ಜಗಮೆ ಮರೆವೆಂ ನೋವು ನಲಿವೇ

    ಅವಳು ತೊಟ್ಟ ಕೋಪವೇ ತ್ರಾಹಿ ಎಂದು ಬೆವರುವುದು, ಸಿಡಿಲಿನ ಕಿವಿಯೂ ಕೂಡ ಹರಿಯುವ ಹಾಗೆ ಆಕ್ರಂದಿಸುವಳು, ಹೀಗಿದ್ದರೂ ನನ್ನ ಪ್ರೀತಿಪಾತ್ರಳನ್ನು ಬಿಡುವುದಿಲ್ಲ, ಆ ಚೆಲುವಾದ ಮೊಗದಲ್ಲಿ ಬೆಡಗನ್ನು ಕಾಣುತ್ತ ಜಗವನ್ನೇ ಮರೆಯುತ್ತೇನೆ… ನೋವು ನಲಿವೇ

    • ಉತ್ತಮತಮಕಲ್ಪನೆಯುಂ
      ವೃತ್ತದ ನಿರ್ವಾಹಕೌಶಲಮುಮೊಪ್ಪಿರಲೀ|
      ಚಿತ್ತಾಕರ್ಷಕಕವನಂ
      ಹೃತ್ತೋಷಕಮಲ್ತೆ ಸೋಮ! ಮೆಚ್ಚುಗೆಯಾಯ್ತಯ್||

    • ಸೋಮರಿದೆತ್ತಣ ಕಾ೦ತಾ-
      ಪ್ರೇಮವಲಾ! ಕಾ೦ತೆ ಮೇಣತಿಕ್ರಾ೦ತೆಯಿವಳ್
      ಕ್ಷೇಮದಿ ಜೊತೆಯಿರ್ಪಾತ೦
      ಭೀಮನೊ ಮೇಣ್ ಪರಶುರಾಮನವತಾರನೊ ತಾ೦

    • ಜಾಣನೈ ಸೋಮ ನೀ ಪೇಳೆ ಏಕೆನ್ನುತುಂ
      ವೇಣಿಯಳ್ ಚೇಷ್ಟೆಯಂ ಗೈದಳಾ ಎಲ್ಲಮಂ!
      ಕಾಣೆವೇಂ ನಿನ್ನ ಕೌಟುಂಬದೌರ್ಜನ್ಯಮಂ
      ಗೋಣನೆತ್ತುತ್ತೆ ಗೈದಿರ್ಪೆ ನೀಂ ಹಿಂಸೆಯಂ|| 😉

    • ಪಡಲ್ ಕೋಪಾಟೋಪಂ ಸಿಡಿಲಿನ ರವಂ ಕುಗ್ಗುಗುಮೆನಲ್
      ಬಿಡೀ ರೋಷಾವೇಶಂ ಕಪಟಚರಿತಂ ಬಲ್ಲೆನನಿತುಂ
      ನುಡೀಗಳ್ ನಿನ್ನೀ ಕೋಳ್ನುಡಿಗಳನಮಾರಯ್ದು ಸರದೊಳ್
      ತೊಡರ್ಪೊಳ್ ಕೋದೀವೆಂ ರಶನೆಯೊಳುಮೀ ಕಂಕಣದೊಳುಂ

      (ಕೋಳು – ಹೊಡೆತ, ಬಂಧನ)

      • ಪದ್ಯ ಚೆನ್ನಾಗಿಯೇ ಇದೆ. ಆದರೆ ನುಡೀಗಳ್ ಎಂಬಲ್ಲಿ ವ್ಯಾಕರಣ ತಪ್ಪಿತು. ಬಿಡು+ಈ = ಬಿಡೀ ಎಂಬಲ್ಲಿಯ ಲೋಪಸಂಧಿ ಸರಿ; ಆದರೆ ನುಡಿ+ಈಗಳ್ = ನುಡೀಗಳ್ ಎಂಬಲ್ಲಿ ಹೀಗಾಗದು. ಅದು ನುಡಿಯೀಗಳ್ ಎಂಬ ಆದೇಶಸಂಧಿಯಾಗಬೇಕಲ್ಲವೇ!

      • ಪಡಲ್ ಕೋಪಾಟೋಪಂ ಸಿಡಿಲಿನ ರವಂ ಕುಗ್ಗುಗುಮೆನಲ್
        ಬಿಡೀ ರೋಷಾವೇಶಂ ಕಪಟಚರಿತಂ ಬಲ್ಲೆನನಿತುಂ
        ಫಡೆಂಬೀ ನಿನ್ನೀ ಕೋಳ್ನುಡಿಗಳನಮಾರಯ್ದು ಸರದೊಳ್
        ತೊಡರ್ಪೊಳ್ ಕೋದೀವೆಂ ರಶನೆಯೊಳುಮೀ ಕಂಕಣಗಳೊಳ್

        ನೀವೆಂದಂತೆ ಅಲ್ಲಿಂದು ಸಂಧಿ ’ಬಿಟ್ಟುಕೊಂಡಿತ್ತು’. ಯಥಾಮತಿ ತಿದ್ದಿದ್ದೇನೆ. ಭಾವ ಕೊಂಚ ಸೊರಗಿತೇನೋ.

  10. ಜನಂಗಳ್ ಸಂಕಷ್ಟಂಬಡುತೆ ಬೆತೆಯಿಂದಿರ್ಕುಮಕಟಾ,
    ಮನಂ ಪಕ್ವಂಗೊಳ್ಳಲ್, ದಿಟಮನರಿವರ್,ಜಾನಿಸುತೆ ಮಂ- |
    ಥನಂಗೈದೇಂ ಲಾಭಂ ಭವದ ಸುಖದುಃಖಂಗಳ ?ನಿಜಾ-
    ತ್ಮನಂ ಕಾಣಲ್ ಜೀವಂ, ದುಗುಡಮಳಿಯಲ್,ನೋವು ನಲಿವೇ ||

    (ಅಕಟಾ, ಜನರು ಸಂಕಷ್ಟಕ್ಕೊಳಗಾಗಿ ವ್ಯಥೆಯಿಂದಿರುತ್ತಾರೆ.ಮನಸ್ಸು ಪಕ್ವವಾದಾಗ,ಭವದ ಸುಖದುಃಖಗಳನ್ನು ಧ್ಯಾನಿಸುತ್ತ ಮಂಥನವನ್ನು ಮಾಡುವುದರಿಂದ ಲಾಭವಿಲ್ಲವೆಂಬ ಸತ್ಯವನ್ನು ತಿಳಿಯುತ್ತಾರೆ.ಜೀವಿಗೆ ಆತ್ಮಸಾಕ್ಷಾತ್ಕಾರವಾದಾಗ ,ದುಗುಡವಳಿದ ಆನಂದದ ಸ್ಥಿತಿ ಲಭಿಸುತ್ತದೆ)

    • ಆಹಾ! ಖಂಡಪ್ರಾಸದ ಸೊಗಸಿನಿಂದ, ಪಾದಮಧ್ಯದ ಯತಿಪಾಲನೆಯಿಂದ, ಒಳ್ಳೆಯ ಭಾಷಾಪಾಕದಿಂದ ಹಾಗೂ ಹೃದ್ಯವಾದ ಕಲ್ಪನೆಯಿಂದ ನಿಮ್ಮ ಪದ್ಯವು ಒಳ್ಳೆಯ ಮೇಲ್ಪಂಕ್ತಿಯಾಗಿ ರಾಜಿಸಿದೆ; ಧನ್ಯವಾದಗಳು.

      • ಸಹೋದರರೆ, ಪದ್ಯವನ್ನು ಮೆಚ್ಚಿ ನನ್ನನ್ನು ಪ್ರೋತ್ಸಾಹಿಸಿರುವುದಕ್ಕಾಗಿ ಧನ್ಯವಾದಗಳು.

  11. ’ಅಪಾತ್ರರು’ ಎಂಬ ತಲೆಚೀಟಿಯನ್ನು ನಾವೇ ಕೆಲವರಿಗೆ ಕಟ್ಟಿ…
    ಅಪಾತ್ರರ್ ಗೈಯಲ್ ಕ್ರೋಧಗೊಳುವೆವು ನಾಂ ಎಂದುಮವರಾ
    (ಬೈಗುಳ)ಉಪಾಲಂಭಂ-ಕೊಂಕುಂ-ಪುಸಿಪೊಡೆತಗಳ್ ನೋವು. ನಲಿವೇ
    ಅಪಾರಂ, ಪ್ರೀತರ್ ಗೈಯಲವನೆಮಗಂ, ಸೈಸಿಕೊಳೆವೇಂ?
    ವಿಪಾಕಂಗೊಳ್ಳರ್ದನ್ನೆಗೆ ದೊರಗುಮೇಂ ಮೋಕ್ಷಮೆಮಗಂ||

    • ಆತ್ಮೀಯ ಹಾದಿರಂಪರೆ! ನಿಮ್ಮ ಭಾಷಾಪಾಕದಲ್ಲಿ ಸ್ವಲ್ಪ ಸುಧಾರಣೆ ಬೇಕು; ಯತಿಪಾಲನೆ ಮತ್ತೂ ಚೆನ್ನಾಗಬೇಕು.

      • ಧನ್ಯವಾದಗಳು. ಯತ್ಯುಲ್ಲಂಘನೆಯನ್ನು ಮೂಲದಲ್ಲೇ ಸವರಿದ್ದೇನೆ. ಭಾಷಾಪರಿಪಾಕ ಅಷ್ಟೆ!

        • ಹಹ್ಹ, ಪ್ರಸಾದರೆ, ಪರಿಪಾಕದ ಬಗ್ಗೆ ತಮ್ಮ ಉತ್ತರ ಪಸ೦ದ ಬ೦ತು. ಅದಕ್ಕೇ ಈ ಕ೦ದಪದ್ಯ….

          ವಸನಾಶನಕ್ಕೆಟುಕಿದುದು
          ಹಸಾದಮೆ೦ದೆನುತ ತೃಪ್ತಿಯಿ೦ದಿಹ ನರನು೦
          ವಸುಧೆಯೊಳವ೦ ಸುಖಿಯು, ಕಾಣ್
          ಪ್ರಸಾದರಟ್ಟಡುಗೆ, ಕೊಟ್ಟ ಪದ್ಯದಿ ಸೊಗಮ೦

        • N,
          ಅಲ್ಪಶಮಿತರ್ ಗಡಂ ನೀಂ
          ಕಲ್ಪನೆ-ಸಾಮರ್ಥ್ಯದೊಳ್ ಮಹಿತರಿರ್ದೊಡಮುಂ|
          ಕಲ್ಪರುಮಾ ಗಣದೀಶರ
          ಶಿಲ್ಪನದಾಹಂ-ನಿರೀಕ್ಷೆಯಧಿಕಂ! ಸೋಲ್ವೆಂ|| 😉

  12. ಕೃತಂ ಕನ್ಯಾದಾನಂ ಪರಮ ಪದವುಂ ಪೆತ್ತವರಿಗಂ
    ಯಥಾವತ್ ಶಾಸ್ತ್ರಂಗಳ್ ಜರುಗಲದುವಾ ಮಂಗಳದಿನಂ
    ಅತಃ ತನ್ನಾತ್ಮಂ ಪೋದ ಪರಿತಪದೊಳ್ ತಾಯ್ಗರುಳಿಗಂ,
    ಪ್ರತೀತಂ ಪೆಣ್ಣಂದುಂ ನಡೆದ ಸಮಯಂ ನೋವು ನಲಿವೇ ।।

    (ಮಗಳನ್ನು ಧಾರೆಯೆರೆದು ಪತಿಗೃಹಕ್ಕೆ ಕಳುಹಿಸಿಕೊಡುವಾಗಿನ ತಾಯಿಯ ಮನದ ಭಾವನೆ)

    • ಪದ್ಯದ ಭಾವವೂ ಬಂಧವೂ ತುಂಬ ಸೊಗಸಾಗಿವೆ. ಆದರೆ ಎರಡನೆಯ ಮತ್ತು ಮೂರನೆಯ ಪಾದಗಳಲ್ಲಿ ಪ್ರಾಸವು ತಪ್ಪಾಗಿದೆ. ಅಲ್ಪಪ್ರಾಣ-ಮಹಾಪ್ರಾಣಗಳ (ತ-ಥ) ಪ್ರಾಸಸಾಂಕರ್ಯವನ್ನು ಮಾಡದಿರುವುದೊಳಿತು ಅತಃ ಇತ್ಯಾದಿ ಸಂಸ್ಕೃತದ ಅವ್ಯಯಗಳನ್ನು (ವಿಶೇಷತಃ ಹೀಗೆ ವಿಸರ್ಗಸಹಿತವಾಗಿ) ಬಳಸುವುದು ಕನ್ನಡದ ಜಾಡಿಗೆ ಹಿತವಾಗದೆಂದು ಕವಿರಾಜಮಾರ್ಗದಂಥ ಗ್ರಂಥವು ತಿಳಿಸುತ್ತದೆ.

      • ಧನ್ಯವಾದಗಳು ಗಣೇಶ್ ಸರ್,
        “ಲಗಂ” ವಿನ್ಯಾಸದ ಆದಿ ಪ್ರಾಸ ಹೊಂದಿಸುವ ಭರದಲ್ಲಿ ಅರಿಯದೆ ಮಾಡಿರುವ ತಪ್ಪುಗಳವು .ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುತ್ತೇನೆ, ತಿಳಿದಮಟ್ಟಿಗೆ ತಿದ್ದಲು ಪ್ರಯತ್ನಿಸಿದ್ದೇನೆ.

        ಕೃತಂ ಕನ್ಯಾದಾನಂ ಪರಮ ಪದವುಂ ಪೆತ್ತವರಿಗಂ
        ಪ್ರತೀತಂ ಶಾಸ್ತ್ರಂಗಳ್ ಜರುಗಲದುವಾ ಮಂಗಳದಿನಂ
        ಶತಸ್ಸಿದ್ಧಂ ಬಂಧಂ ಪೋಪ ಪರಿತಪದೊಳ್ ತಾಯ್ಗರುಳದುಂ
        ವ್ಯತೀತಂ, ಪೆಣ್ಣಂದುಂ ನಡೆದ ಸಮಯಂ, ನೋವು ನಲಿವೇ ।।

  13. ಸುಕಾವ್ಯೋದ್ಯಾನಂ ತಾ ಕರೆಯುತಿರಲೆನ್ನಂ ವಿಹರಿಸಲ್-
    ಕೆ, ಕಾವ್ಯೋದ್ಯೋಗಂ ತಾ ಬಲುಗಹನವೇಂ ಪ್ರಾಸ ತಡೆಯಲ್
    ಸುಕಾವ್ಯಮ್ ಶ್ಲಾಘ್ಯಮ್ ಪೊಗಳುವುದೆ ಲೋಕಂ ಜತನದಿಂ
    ನಕಾರಕ್ಕೇನೆಂಬೆಂ ಜನಿಪಪರಿ ಕೇಳ್ ನೋವು ನಲಿವೇ

    ಪದ್ಯ ರಚನೆಯ ಪ್ರಯತ್ನದಲ್ಲಿರುವವರ ನನ್ನಂತವರ ಸಂದೇಹಗಳು,ನೋವು ನಲಿವುಗಳ ಒಂದು ಕಿರುಚಿತ್ರ.

    • ಒಳ್ಳೆಯ ಕಲ್ಪನೆ, ಗಾಯತ್ರಿಯವರೇ! ಸಾಮಾನ್ಯವಾಗಿ ನಾನು ಗಮನಿಸಿದಂತೆ ನಿಮ್ಮ ಯಾವುದೇ ಪದ್ಯದಲ್ಲಿ ಕಲ್ಪನೆಯ ಅನನ್ಯತೆ ಮತ್ತು ಸ್ವೋಪಜ್ಞತೆಗಳಿರುತ್ತವೆ. ಇದು ತುಂಬ ಸ್ತುತ್ಯಗುಣ. ಆದರೆ ಹಲವೊಮ್ಮೆ ಭಾಷೆ-ಬಂಧಗಳು ಸೊರಗುತ್ತವೆ. ಪದ್ಯರಚನಾಪ್ರಕ್ರಿಯೆಯಲ್ಲಿ ಇಂಥ ತೊಡಕುಗಳು ಯಾರಿಗಾದರೂ ಅನಿವಾರ್ಯ. ಇವಕ್ಕೆಲ್ಲ ನಿರಂತರಪ್ರಯತ್ನ ಮತ್ತು ಪೂರ್ವಸೂರಿವರ್ಯರೆಲ್ಲರ ಉತ್ಕೃಷ್ಟಕವನಗಳ ಸಾವಧಾನಾಧ್ಯಯನವೊಂದೇ ಪರಿಹಾರೋಪಾಯ.
      ಪ್ರಸಕ್ತಪದ್ಯದಲ್ಲಿ ಶಿಖರಿಣಿಯ ಗತಿ, ಯತಿ ಎಲ್ಲ ಸರಿಯಾಗಿಯೇ ಇವೆಯಾದರೂ ಸುಕಾವ್ಯ, ಕಾವ್ಯ, ಸುಕಾವ್ಯ ಎಂಬಿತ್ಯಾದಿಯಾಗಿ ಒಂದೇ ಪದದ ಪುನರುಕ್ತಿಯಾಗಿರುವುದು ಅಷ್ಟಾಗಿ ಆಪ್ಯಾಯನವಲ್ಲ. ಬಹುಶಃ ನೀವೇ ಪದ್ಯದಲ್ಲಿ ಸೂಚಿಸಿದಂತೆ ಪ್ರಾಸದ ತ್ರಾಸ ಇದಕ್ಕೆ ಕಾರಣವಿರಬಹುದು.
      ಶಿಖರಿಣಿಯಲ್ಲಿ ಮೊದಲಿಗೆ ಬರುವ “ಲಗಂ” ವಿನ್ಯಾಸದ ಪ್ರಾಸವೂ ಮತ್ತೆ ಮತ್ತೆ ತಲೆದೋರುವ ಪ್ರಬಲಯತಿಗಳೂ ನಮಗೆಲ್ಲ ಕಾಲೆಳೆಯುವುದು ಉಂಟೇ ಉಂಟು:-)

      • ಧನ್ಯವಾದಗಳು ಗಣೇಶರೇ, ನಿಮ್ಮ ಪ್ರೋತ್ಸಾಹದ ಮಾತುಗಳು ನನ್ನನ್ನು ಯಾವಾಗಲೂ ಎಚ್ಚರಿಸುತ್ತಿರುತ್ತವೆ. ಪ್ರಕೃತ ಪದ್ಯದಲ್ಲಂತೂ ಪ್ರಾಸವನ್ನು ನಿರ್ವಹಿಸುವುದೇ ತ್ರಾಸವಾಯಿತು. ‘ಸು’ ಬಳಸಿರುವುದಂತೂ ನನ್ನ ಮಿತಿಯನ್ನು ಜಗಜ್ಜಾಹೀರ ಮಾಡಿದಂತೆ.ಅಧ್ಯಯನವನ್ನು ಮತ್ತಷ್ಟು ಗಂಭೀರವಾಗಿ ಮಾಡಬೇಕು. ನಿಮ್ಮ ಮಾರ್ಗದರ್ಶನವಂತೂ ಇದ್ದೇ ಇದೆ. ಇಂತಹ ಸಾಧಾರಣ ಪದ್ಯಕ್ಕೂ ನಿಮ್ಮ ವೇಳೆಯನ್ನು ವ್ಯಯಿಸಿದಕ್ಕಾಗಿ ಕೃತಜ್ಣಳಾಗಿದ್ದೇನೆ.

  14. ಪ್ರೀತಿಯ ನೀಲಕಂಠರೇ! ನಿಮ್ಮ ಪದ್ಯಗಳ ಕಲ್ಪನೆ ಮತ್ತು ಭಾಷೆಗಳೆರಡೂ ಬಲುಮಟ್ಟಿಗೆ ವಿದ್ವತ್ಸಹೃದಯರಲ್ಲಿ ಸಂತಸ ತರುವಂತಿರುತ್ತವೆ. ಮುಖ್ಯವಾಗಿ ನಿಮಗೆ ಸೊಗಸಾದ ಕಂದಪದ್ಯಗಳನ್ನು ರಚಿಸುವಲ್ಲಿ ಕೈ ಚೆನ್ನಾಗಿ ಪಳಗಿದಂತೆ ತೋರುತ್ತದೆ. ಅಲ್ಲದೆ ಸಹಪದ್ಯಪಾನಿಗಳ ರಚನೆಗಳ ಭಾಷಾಸೂಕ್ಷ್ಮಾದಿಗಳನ್ನು ಗಮನಿಸಿ ಸರಿ-ತಪ್ಪುಗಳನ್ನು ವಿವೇಚಿಸುವಲ್ಲಿ ನೀವು ತೋರುವ ಆಸ್ಥೆಯೂ ಸ್ತುತ್ಯ. ಪದ್ಯಪಾನದಲ್ಲಿ ನೀವಿಂತು ಸಕ್ರಿಯರಾಗಿ ತೊಡಗಿರುವುದಕ್ಕಾಗಿ ಹಾರ್ದಿಕಾಭಿನಂದನೆಗಳು

    • ಮಿಣುಗುಹುಳುವಿಗಿನನು೦ “ನೀ೦
      ಮಿಣುಗುತ್ತಿಹೆ ಸೊಗದಿ”ನೆ೦ದು ಸವಿಯ೦ ನುಡಿಯಲ್
      ಗುಣುಗಿತ್ತದು, “ಕಣಸಾದುದೊ!
      ದಿನಪನರಿದನೇ೦, ನಿಜಪ್ರತಾಪದೊಳೆನ್ನ೦!!”

      ಮೆಚ್ಚುಗೆಗೆ ಧನ್ಯವಾದಗಳು ಸರ್!

    • “ಮಿಣುಗುಹುಳು”ವಿನ ಪದವಿದುಂ
      ಮಣಿಯುತೆ ತಾಂ ನಡೆದ “ನವಿಲ” ನಲಿವಿನ ನಡೆಯುಂ ।
      ಗೆಣೆಯ”ಹುದು”ವಿನ ಪರಿಯಿದುಂ
      ಮಿಣುಗಿಸಿಹುದು ನುಡಿದು ನವಿರು ನಲವಿನ ನುಡಿಯಂ ।।

  15. ಪ್ರಸನ್ನಂ ಗಂಭೀರಂ ಸೊಬಗಯುವನೊಳ್ ಪ್ರೀತಿ ಜನಿಸಲ್,
    ರಸಾನಂದಂ ಮೇಣ್ ಕಾಂತನೊಲವ ನುತಾ ಪೊಂದೆ,ಮದನಾ
    ಭಿಸಾರಂ ಕೈಗೊಂಡುಂ ಸಲುಗೆ ಲಭಿಸಲ್ಕಾಯ್ತು ಕಡೆಯೊಳ್
    ಪ್ರಸೂನಂ ಪೋಲ್ಡಾ ಕಾಂತೆಯೊಳಡಗಿದಾ ನೋವು,ನಲಿವೇ!

    • Kanchana madam, small typo corrections –
      ambhOja (not ambOja),
      mEr – should it be mEN?
      and on a lighter tone, are you adding water to milk every day, too much? (madanaabhisaaram kaigondu…) 🙂

      • ವ್ಯಾಕರಣ ಶುದ್ಧವಾಗಿ ಬರೆಯಲಾಗದವರು ಹೀಗೆ ಅಲ್ಲವೇ ಮಾಡುವದು, ನೀಲಕಂಠರೇ? 🙂 ಸಧ್ಯ ನೀರಿಗೆ ಹಾಲು ಬೆರೆಸಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಿ 🙂

  16. ಗಡದ್ದಾಗುಂಡ್ಬುಟ್ನಾ? ಕರಗದೆ ಗಡಪ್ಪಂತ ಕುಳಿತಿ
    ತ್ತಿಡೀ ದಿವ್ಸಾ! ವದ್ದಾಡ್ ಕಡೆಗೆ ತಡೆಯಕ್ಕಾದ್ಗೆ ಗುಳಿಗೇಗ
    ಗ್ತಡಕ್ತೀನೀ ಒಂದೂ ಸಿಗದು! ಮೆಡಿಕಲ್ ಶಾಪುಗಳು ಬಂ
    ದ್ಕಡೇಗೌಡ್ಲೆಣ್ಣೇನೇ ಕಹಿಯೆ ಗತಿ ಆ ನೋವು ನಲಿವೆ

    ಆಚಾರ್ಯ ಡಿವಿಜಿಯವರು ಕವಿತ್ವಾವೇಶವನ್ನು ಹರಳೆಣ್ಣೆಗೆ ಹೋಲಿಸಿದ್ದರು. ನನ್ನ ಮಟ್ಟಿಗೆ ಅದು ಅನುಭವಸಿದ್ಧಸತ್ಯ. ಅವರೂ ಒಂದು ’ಶಿಥಿಲಶಿಖರಿಣಿ’ಯನ್ನು ಕಟ್ಟಿದ್ದರು 🙂

    • Aha, Jeevem avare, tumba chennagide!! shikhariniyannu hesarige takkante guddagaadu bhaasheyalliye kottiddeeri 🙂

    • ವಸಾ ವಸ್ ಧಾಟೀಲ್ಹೀಗ್ ಬಲು ಜಬರದಸ್ತಾದ ಕವಿತೇನ್
      ರಸಾ ಪ್ರಾಸಾ ಯೆಲ್ಲಾ ದಿವಿನು ದಿವಿನಾಗಿಲ್ಲಿ ಮಡಗೀ|
      ವಸೀ ಕೂಡಾ ತೆಪ್ಪಾಗ್ ಬಿಡದೆ ವಸಿಯೋ ನಿಮ್ ತ್ಯಳಿವಿಗೇನ್
      ಕುಸೀ ಆಯ್ತಾ ಅಯ್ತೇ! ಸಿವನೆ ಸಿವನೇ! ನಿಮ್ಗೆ ಸರಣೂ||

      • ಹಸಾದಂ. ರಾಗರ್ಗಂ ಗರಳಕೊರಳರ್ಗಂ ನಮಿಪೆನಾಂ

        (ನೀಲಕಂಠರ ಹೆಸರಿನ ಪರ್ಯಾಯಪದದಲ್ಲಿನ ಅರಿಸಮಾಸದ ಬಗ್ಗೆ ಯಾವ ಶಂಕೆಯೂ ಬೇಡ; ಶಿವಸಾನ್ನಿಧ್ಯದಲ್ಲಿ ವೈರನಾಶ ಸ್ವಾಭಾವಿಕ 🙂 )

    • ಇವೆಳ್ಡೂ ಪದ್ಯಗ್ಳೂ ಸಿವನೆ ತಲೆದೂಗಂಽಗವೆ ಮಚಾ|

    • ಜೀವೆ೦ ಅವರಿಗೆ ಶಿಖರಿಣಿಯೊಳಗೊ೦ದು ಅಭಿನ೦ದನೆ 🙂

      ಸಜೀವ೦ ಪದ್ಯ೦ ದಲ್, ನಮಿಪೆನಿದೊ ಜೀವೆಮ್ಮರಿಗೆ ನಾ-
      ನಜೇಯರ್ ನೀ೦ ಪದ್ಯಾದಿರಚನೆಯೊಳು೦, ಕ೦ಡೆನದನು೦,
      ಸುಜಾತ೦ ಪ೦ಕೇಜಾತಮದಿರಲುಮಾ ಪುಷ್ಪಕಮಲ೦,
      ವಿಜಾತೀಯ೦ ಮೇಣ್ ಭಾಷೆ, ಪಠಿಸುವೊಡಾ ನೋವು ನಲಿವೇ!

      ಕೆಸರಿನಲ್ಲಿ ಹುಟ್ಟಿದ್ದರೂ ಕಮಲಪುಷ್ಪ ಪವಿತ್ರವೇ. ಜೀವೆ೦ ಅವರ ಈ ವಿಶೇಷ ಜಾತಿಯ ಭಾಷೆಯ ಪದ್ಯ ಓದಲು ಕಠಿಣವಾದರೂ ಆ ನೋವು ನಲಿವೇ ಆದೀತು… (ಗ್ರಾಮ್ಯ ಭಾಷೆಗೆ ಕೆಸರಿನ ಹೋಲಿಕೆ ಕೊಟ್ಟಿದೆಯೇ ವಿನಃ ದಯವಿಟ್ಟು ಕೀಳು ಎ೦ಬರ್ಥ ತ೦ದುಕೊಳ್ಳಬಾರದು)

      • ದೊಡ್ಮಾತು. ಇಲ್ಲಿಷ್ಟೋ ಮಂದಿ ಹಳಬರವ್ರೆ; ನಾನ್ನಿನ್ನೂ ಹೈದ.

        • ಸ೦ಕೋಚ ಬೇಡ ಜೀವೆ೦ ಅವರೆ, ಪ್ರಾಸ, ಛ೦ದಸ್ಸು ಇತ್ಯಾದಿಗೆ ಹೊ೦ದುವ೦ತೆ ಪದಗಳು ಬ೦ದಿವೆ ಅಷ್ಟೆ… 🙂

        • ಹೈದನೋ ಹೈವಾನನೋ? ನಿರ್ಧರಿಸುವುದು ಪಾನರಂಗ.

  17. ಕಳತ್ರಂ ಮಕ್ಕಳ್ ಕಂಬನಿಯನಿಳಿಸಲ್ಕುಂ ದೃಢದೊಳು-
    ಜ್ಜ್ವಳತ್ಸಂಗ್ರಾಮಾಗ್ನ್ಯರ್ಚಿಗೆ ಧುಮುಕಿದಾ ಧೈರ್ಯನಿಧಿಗಳ್ |
    ವಿಳಾಸಂಗೊಂಡಿರ್ಪರ್ ಜಸದೆ ಚಿರಕಾಲಕ್ಕುಮವರಿಂ-
    ಗಿಳಾಸ್ವಾತಂತ್ರ್ಯಕ್ಕಂ ತ್ಯಜಿಸೆ ತನುವಂ ನೋವು ನಲಿವೇ ||

  18. ಅಂದಹಾಗೆ ವಿವಾಹ ಸಮಯ – ಹೆತ್ತವರೊಡನೆ, ಮಗಳಿಗೂ “ನೋವು ನಲಿವೇ” ಅಲ್ಲವೇ !? ಹಾಗಾಗಿ ಈ ಪೂರಣ (ಸ್ವಲ್ಪ ಬದಲಾವಣೆಯೊಂದಿಗೆ)

    ಕತಂ ಕಲ್ಯಾಣಂ ನಿಚ್ಚಯಿಸಿರಲದೋ ಪೆಣ್ಮಗಳಿಗಂ
    ಪ್ರತೀತಂ ಶಾಸ್ತ್ರಂಗಳ್ ಜರುಗುದದುವಾ ಮಂಗಳದಿನಂ
    ಧೃತಂ ಸಂಬಂಧಂ ಪೊಂದಲನುನಯದೊಳ್, ಪೆಣ್ಮನಕದಂ,
    ಶತಸ್ಸಿದ್ಧಂ ಪುಟ್ಟಿರ್ದ ಮನೆವಿಡುದುಂ, ನೋವುನಲಿವೇ ।।

  19. ಮೊದಲ್ ಮತ್ಸ್ಯಾಕಲ್ಪಂ ಕಮಠಪವರಾಹಾದಿನಟನಂ
    ಸ್ವದೇಶಭ್ರಂಶಂ ಮೇಣ್ ಗಹನಗಮನಂ ಘೋರಸಮರಮ್ I
    ಸುದೀರ್ಘಂ ವೃತ್ತಾಂತಂ ಕೊಳಲಿಗನದಾರ್ ಪೇಳಲಳವರ್
    ಸದಾ ತ್ರೈಲೋಕ್ಯಂ ದಲ್ ಪೊರೆವ ಹರಿಗಾ ನೋವು ನಲಿವೇ II

    • ಚಿರಕಾಲಾನಂತರಮೀ
      ಸರಸೋಜ್ಜ್ವಲವಾಗ್ವಧೂಟಿಕೆಯ ಕೇಯೂರಂ|
      ಮೊರೆದತ್ತಯ್! ಪದನರ್ತನ-
      ಭರದಿಂದೀ ಪದ್ಯಪಾನವೇದಿಕೆಯೆದುರೊಳ್||

      • ಚಿರಕಾಲಾನಂತರದೊಳ್
        ಮರಳಿಹೆನೀ ಪದ್ಯಪಾನವಾಣ್ಯಾಲಯಕಂ I
        ಸುರಭಿಲಮಂಜರಿಹಸ್ತಂ
        ವರಕವಿತಾರ್ಥಿಗಿದಮೋಘಶರಣಸ್ಥಾನಂ ll

        ಹೇ ಕರ್ಣಾಟಕಶತಾವಧಾನಸರಸ್ವತೀಪಾತಿವ್ರತ್ಯೈಕವಿಷಯವಿರಿಂಚನ ಯುವಕವಿಕಮಲಕೋರಕಪ್ರಕರವಿಕಾಸನೋದ್ಭಾಸಿತಪದ್ಯಪಾನಪದ್ಮಾಕರಪ್ರಭಾಕರ ನಮಸ್ತೇ ನಮಸ್ತೇ l

  20. ಎಲ್ಲರ ಪದ್ಯಗಳೂ ಸೊಗಸಾಗಿವೆ… ನನ್ನದೊಂದು ಕುಚೋದ್ಯಪದ್ಯ 😉
    ಸ್ಟೆತಸ್ಕೋಪಂ ಕಯ್ಯೊಳ್ ಪಿಡಿದು ಬಿಳಿ ಮೇಲ್ವಟ್ಟೆ ಧರಿಸಿ
    ಸ್ಮಿತಾಸ್ಯಂಬೊಂದುತ್ತುಂ ಹಲೊ ಎನುತೆ ಮೇಣ್ ಪಲ್ಕಿರಿಯುತೆಂ-
    -ತೊ ತಾಂ ನರ್ಸಿಂದಾಗಳ್ ಪಡೆದು ಕರದೊಳ್ ಸೂಚಿಕೆಯ ಚು-
    ಚ್ಚುತಂ ನಿಲ್ವಾ ವೈದ್ಯರ್ಗಮುಳಿದವರೀ ನೋವು ನಲಿವೇ!!

    • GB, ವೈದ್ಯನಾಗಿದ್ದರೇ ಚೆನ್ನಾಗಿತ್ತು .. 🙂

      • ಅಭಿಯಂತೃವಾಗಿದ್ದಕ್ಕೆ ವೈದ್ಯರ ಬಗ್ಗೆ ಪದ್ಯ… ವೈದ್ಯನಾಗಿದ್ದರೆ ಬೇರೆಯದೇ ಬರೆಯುತ್ತಿದ್ದೆ 😉 😛

    • ಸೊಗಸಾದ ವೈನೋದಿಕಪದ್ಯ:-)

  21. ವಿಹಾರಕ್ಕೇ ಬಂದುಂ ದಿನವು ನಭದೊಳ್ ಕಾಂತಿಕರದಿಂ-
    ಸಹಾಯಂ ತಾಂ ನೀಳ್ದುಂ ಜನದ ಹಿತಮಂ ಕಾಯುತಿಹನಯ್
    ಮಹಾಂತಂ ಮೇಣ್ ಸತ್ಯಂ ಕಠಿನ ತಪಮಂ ಗೈವ ದಿನಪಂ
    ಅಹೋ!ಮೆಚ್ಚೀವಂ ನಿಜವು ಪಡೆದುಂ ನೋವು,ನಲಿವೇ!

  22. “ಸರ್ಕಸ್”ನ ಮೋಜು – ಮುಜುಗರದ ಬಗ್ಗೆ :

    ಉಪಾಯಂ ವ್ಯಾಯಾಮಂ ಖಗಮೃಗದೊಡಂ ಸಾಮಲಿಸಲಾಂ
    ವಿಪರ್ಯಾಸಂ ದಾಸ್ಯಂ ದುಗುಡಸಹಿತಂ ಬಾಲಕರಿಗಂ ।
    ಅಪಾಯಂ ಸರ್ಕಸ್ ವೃತ್ತಿಯದು ಮನುಜರ್ಗಂ ಜಗದೊಳಿಂ-
    ತಪಾಮಾರ್ಗಂ ಲಾಸ್ಯಂ ಕರುಣರಹಿತಂ ನೋವುನಲಿವೇ ।।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)