Apr 272015
 

ಭೂಕಂಪನವನ್ನು ವರ್ಣಿಸಿ ಪದ್ಯ ರಚಿಸಿರಿ

  104 Responses to “ಪದ್ಯಸಪ್ತಾಹ ೧೪೮: ವರ್ಣನೆ”

 1. ಏರಿರಲ್ಕೆ ಜನಸಂಖ್ಯೆ ಬಾನಿನೆತ್ತೆತ್ತರಕ್ಕು ದಿನಮುಂ
  ತೋರುತಿರ್ಪಳವಳಂತರಂಗದಳಲನ್ನು ಕಾಣದವರ್ಗಂ
  ದಾರಿಕಾಣದವಳಂತೆ ಬಿಕ್ಕುತಳುತಿರ್ಪಳಾಳದಿಂದಂ
  ಭಾರವಿಳಿಸೆ ಮೈಕೊಡವಿರಲ್ಕೆಭೂಕಂಪಮಾಯ್ತು ನೋಡಾ

  • ತುಂಬ ದಿನಗಳ ಬಳಿಕ ಚೀದಿಯಿಂದ ಈ ಸಂತುಲಿತಮಧ್ಯಾವರ್ತಗತಿಯ ಬಂಧವನ್ನು ಕಂಡು ಮುದವಾಗಿದೆ. ಪದ್ಯಭಾವವೂ ಸೊಗಸಾಗಿದೆ.

 2. ನೆಲನಂ ಕರ್ಚುತೆ ಬಿದ್ದ ಬಾಲರ್ಮುದುಪರ್, ಪ್ರಾಕಾರ, ಸೌಧಂಗಳುಂ,
  ಬಲದಿಂ ಕಂಪನಮಿತ್ತ ಹಿಂಸೆ,ಕೊರಗೆಲ್ಲಂ ಜ್ಞಾಪಿಕುಂ ಚಿತ್ತದೊಳ್
  ಛಲದಿಂ ಬೀಸುತೆ ಗಾಳಿಯಂದು ,ಮಿಡಿ ಪಣ್ ಕಾಂಡಂಗಳೆಂದೆನ್ನದೇ
  ನುಲಿದುಂ ಪಾಸನೆ ಪಾಸಿ ದು:ಖಮೆರೆದಾ ಮುಂಗಾರ ಧೂರ್ತತ್ವಮಂ

 3. ಮಡಿಲೊಳಿತ್ತು ಸ್ಥಾನ,ನಿನ್ನೀ
  ಯೊಡಲ ಕೂರ್ಮೆಯ ಹಂಚಿ ಕೊಳ್ಳ
  ಲ್ಬಿಡದಲೆರೆದಿರೆ ನಿತ್ಯ ನಿರ್ಮಲ ವಾರಿ ಸಂಪದವ
  ಹಡೆದು ಬಾಳ್ತೆಯ ನೀಳ್ದ ತಾಯಿಗೆ
  ಕಡೆಯೆ ನೀಂ? ದಿಟ ಪೇಳ್ವುದದಕೇ
  ನಡುಕವೀಪರಿಯಿತ್ತು ಕಾಡಿದ ರುದ್ರ ಕಾರಣವ

  • ನಿಮ್ಮ ಈ ಷಟ್ಪದಿಯ ಭಾವ ಸರಿಯಾಗಿ ತಿಳಿಯಲಿಲ್ಲ. ಬಿಡುವಾದಾಗ ಮುಖತಃ ಅರಿಯುವೆ. ಅಂತೆಯೇ ಮೊದಲ ವೃತ್ತದಲ್ಲಿ ಹಲಕೆಲವು ತಿದ್ದುಪಡಿಗಳು ಬೇಕಿವೆ. ಅದನ್ನೂ ಆಗಲೇ ಸೂಚಿಸುವೆ.

   • ಧನ್ಯವಾದಗಳು ಸರ್. ಪದ್ಯಗಳಲ್ಲಿ ಸವರಣೆಗಳನ್ನು ಮಾಡಿರುವೆ .

 4. ಕಾಲಂ ಲೀಲೆಯಿನೂದೆ ಪುಂಗಿಯನಿದೇಂ ಲೋಲಾಪ್ತಿಯಿಂ ಶೇಷನು-
  ದ್ವೇಲಾಭೀಲಫಣಾವಲೀವಲಯಮಂ ಜಾಲಿಪ್ಪವೋಲಾದನೇಂ?
  ಹೇಲಾಕಲ್ಪಿತಗೀತನೃತ್ತನಯದೊಳ್ ಮೇಣಿರ್ವರಾ, ಉರ್ವರಾ-
  ಸ್ಫಾಲಂ ತಂದುದೆ ರುದ್ರಭೀಕರಲಯಪ್ರಸ್ತಾರಮಂ ತಾರಮಂ?

  • ಆಹಾ! ಕಾಲನ ಪುಂಗಿಯೂದುವಿಕೆಗಂ ಶೇಷಂ ವಲಂ ನರ್ತಿಪೀ
   ಮಾಹಾತ್ಮ್ಯಂಬುಗುವಂತೆ ಕಲ್ಪಿಪರೆ ಶ್ರೀರಾಗಾಖ್ಯರೇ ವಂದಿಪೆಂ ||

   • ಸೌಹಾರ್ದಂ ಕವಿತಾಕಲಾರಸಿಕತಾಸೌರಭ್ಯಲಭ್ಯಂ ಸಲಲ್
    ದೌಹದ್ಯಂ ಕವಿಲೋಕಕಲ್ತೆ ದೊರೆಗುಂ ನಿಮ್ಮಂತೆವೊಲ್ ಮೆಚ್ಚಿರಲ್||

   • Completing Koppalatota’s verse:
    ಸ್ವಾಹಾ ಗೈದಿಹುದೆಮ್ಮವೆಲ್ಲ ರಚನಾವೈವಿಧ್ಯಪದ್ಯಂಗಳಂ
    ಹಾಹಾಕಾರಮೆ ಪಾಲಿನೆಮ್ಮಯ ದಶಂ, ವ್ಯಾಪಾರಶೂನ್ಯರ್ ಗಡಾವ್||

    • ಇಷ್ಟು ವರ್ಷ ಮಣ್ಣು ಹೊತ್ತು ಕವಿತಾಕರ್ಮ-
     ಕಿಷ್ಟುಮಾತ್ರವಾದರೂ ಬರೆಯಲು|
     ಕಷ್ಟವಾದರಿನ್ನು ಹೇಗೆನ್ನ ಈ ಬಾಳು?
     ನಷ್ಟವಾಗದೇನು? ಹಾದಿರಂಪ!

    • ಮಣ್ಣ ತೋಡಿ ನೀವು ನಮಗದನೆ ಬೋಧಿಸಿಯೊ,
     ದೊಣ್ಣೆಯಿಂದೆ ಕಲ್ಲನಿನ್ನುಮೆತ್ತೋ (ಎತ್ತಿಯೋ):
     ಅಣ್ಣ, ಗೈವಿರೇನನೆಂಬುsದರಿಂ ನಿಮ್ಮ
     ಪಣ್ಣೊ-ಹೀಚೊ ಬಾಳು ನಿರ್ಣಯವದೈ|| 😉

  • त्वत्काव्यं प्रतिभाविभूतिसदनं पाण्डित्यसंतर्पणम् 🙂

 5. After-shocks ಇನ್ನಾದರೂ ಕಡಿಮೆಯಾಗಲೆಂದು ಪ್ರಾರ್ಥಿಸುತ್ತಾ:

  ಧರಣಿ ದೇವಿಯೆ ನಿನ್ನ ಮಕ್ಕಳ
  ಮರೆತೆಯೇತಕೆ? ನಡುಕವೇತಕೆ?
  ತೊರೆದೆಯೇನಿದು ನಿನ್ನ ಕರುಣೆಯ ಸಹಜ ಗುಣವನ್ನು?
  ತೆರೆದೆಯೇಕೀ ಬಾಯಿ ತುಸುವೂ
  ಮರುಕವಿಲ್ಲದೆ? ಹೊತ್ತಿಯುರಿದರೆ
  ಧರೆಯು ನಿಲುವವರಾರು! ತಾಯೇ ಶಾಂತವಾಗಮ್ಮ !

  • ಎಲುಬಿರದ ನಾಲಗೆಯ ಸತತದೆ
   ಪಲುಕಿಪಳ ಕೇಳುವರೆ ಇಲ್ಲವೆ!
   ಸುಲಭದೊಳು ಶಾಂತಸ್ಥಿತಿಗೆ ಬಹ
   ನೆಲಳಿಗುಪದೇಶಿಪರೆ ಪೇಳ್|| 🙂

 6. ಬ೦ಧುಜನ೦ಗಳೇ೦ ಕುಲಪರ೦ಪರೆಯೇ೦ ಸಖರೇ೦ ತನೂಜರೇ೦
  ಬ೦ಧಮಿದೆಲ್ಲಮೇನೆನೆ ಮನಸ್ಸಮತೋಲನಕ೦ ಸ್ವನಿರ್ಮಿತ೦,
  ಬ೦ಧುರಮೇ೦ ವಿಭಾಗಿಸಿ ವಿಚಾರಿಸಿ ನೋಳ್ಪೊಡೆ, ಕಾ೦ಬುದೆಲ್ಲಮು೦
  ಕ೦ಧರಸ೦ಘಟ೦ ವಿಘಟನ೦ಗೊಳುವ೦ತೆ ಮರುತ್ಪ್ರತಾಪದಿ೦
  (ಕ೦ಧರ – cloud, kam dharateeti)

  ಪೆಸರ೦ ಪೇಳ್ವೊಡನಾರುಮಿಲ್ಲ ಪೆಸರಿ೦ಗಿರ್ಪರ್ ಜನರ್ ಕೇವಲ೦
  ಪಸರಿರ್ಪರ್ ಧರೆಯ೦ಕದೊಳ್ ಕಣಕಣ೦ಗಳ್ಗ೦ ಸಮರ್ ತಾಮೆನಲ್
  ಪುಸಿಯಲ್ತೇ೦ ಜಗಮೆ೦ಬ ಭಾವಮೆರಗಲ್ಕಾಕಾಶಮೇ ಬೀಳ್ವವೊಲ್
  ಕುಸಿದಿರ್ಕು೦ ಬಗೆ ಭೀತಿಯಿ೦ ನಡುನಡು೦ಗಿ ಭ್ರಾ೦ತಿಯೊಳ್ ಸಿಲ್ಕುತು೦

  ಋತಮೆ೦ಬರ್ ಪರಸತ್ಯಮೆ೦ಬರದರಿ೦ದೆ೦ಬರ್ ಜಗ೦ ಬ್ರಹ್ಮನಿ-
  ರ್ಮಿತಿಯಿರ್ಕು೦ ಸಲೆ ತನ್ಮಹತ್ತಿನೊಳೆ ಕಾಣ್ ಮಾಣೆ೦ಬರೈ, ಮಾಣ್ದೊಡೇ೦
  ಸ್ಥಿತಿಗೇ೦ ಮೇಣ್ ಗತಿಗೇ೦ ಕ್ಷಣಕ್ಷಣಕುಮಾ ಜ್ವಾಲಾಕುಲ೦ ಪೆರ್ಚುವ೦
  ವ್ಯತಿರೇಕ೦ ಗಡಮೀ ಗುರುತ್ವಮೆನುತು೦ ಪೃಥ್ವಿ ಸ್ವಯ೦ ಕ೦ಪಿಪಳ್
  (ವ್ಯತಿರೇಕ೦ ಗಡಮೀ ಗುರುತ್ವ೦ – the gravitational force is also an illusion created because of curved nature of space and movement caused thereby, and so is not absolutely existing; so not sure about the systematic binding between celestial bodies :))
  (ಜ್ವಾಲಾಕುಲ – the sun?, increasing in volume gradually)

  ತಾಯೆ ಮರೆಯದಿರ್ ನಿನ್ನೀ
  ಮೈಯೊಳ್ ನೆಲೆನಿ೦ದಿರಲ್ ಸುತರ್ ನಾವಲ್ತೇ೦
  ಕಾಯೌ ನೋಯಿಸದೆಮ್ಮ೦
  ಹಾ’ಯೆನಿಸದಿರೌ ಸ್ಭಕೀಯಭಯಮ೦ ಮರೆಯೌ

  • ವೇದಾಂತ ಹೆಚ್ಚಾಗಿ, ಮೋದಾಂತ ಮಿಗಿಲಾಗಿ|
   ಸೀದಿತ್ತು ಕಾವ್ಯಪರಮಾನ್ನ| ಉಪವಾಸ-
   ವಾದತ್ತು ನನ್ನಂಥ ಜನಕ್ಕೆ||

 7. ಮೀರುವಿರೇಂ ಭೂ ಬಲಮನ-
  ದಾರುಂ ಮೀರಿರಿ ಬಲಿಷ್ಟವದು ಭೂ ನಿಯಮಂ
  ಭೂರಮೆಸೈರಿಸಳೆಂದುಂ
  ಭಾರಮನಂ;ದುರ್ಜನಂಗಳೆಸಗಿದ ಕೇಡಂ.

  ಕೊಡಹಿತೆ ತೋಳ್ಗಳಮ್ಮುಳಿಸಿನೆೞ್ಚರಿಪಂ ಮರಸುಂದಿದಾಳ್ಗಳಂ
  ಕಿಡುಯಿಸುವಂ ಗಡಂ ನೆಱೆದ ಬೌದ್ಧರ ನಲ್ಮೆಯ ಪೂರ್ವರಾಷ್ಟ್ರಮಂ
  ಬಿಡದೆನುತಂ ಧರಾಫಲಕಗಳ್ಕುಸಿದಿರ್ಪವೊ ಮೇಣದಿರ್ಪುವೇಂ
  ಗಡಗಡವೆಂದುಘರ್ಜಿಸಿದವೆಂಬಿನವೊಲ್ ಬಿರಿದಿತ್ತು ಭೂಮಿ ದಲ್.

  (ಮೀರುವಿರೇಂ ಭೂ ಬಲಮನ್ ? ಅದಾರುಂ ಮೀರಿರಿ ಬಲಿಷ್ಟವದು ಭೂ ನಿಯಮಂ, ಭೂರಮೆ ಸೈರಿಸಳೆಂದುಂ ಭಾರಮನಂ;ದುರ್ಜನಂಗಳೆಸಗಿದ ಕೇಡಂ.

  ಕೊಡಹಿತೆ ತೋಳ್ಗಳಂ ಮುಳಿಸಿನ್ ? ಎೞ್ಚರಿಪಂ ಮರಸುಂದಿದಾಳ್ಗಳಂ, ಕಿಡುಯಿಸುವಂ ಗಡಂ! ನೆಱೆದ ಬೌದ್ಧರ ನಲ್ಮೆಯ ಪೂರ್ವರಾಷ್ಟ್ರಮಂ ಬಿಡದೆನುತಂ ಧರಾಫಲಕಗಳ್ ಕುಸಿದಿರ್ಪವೊ ಮೇಣ್ ಅದಿರ್ಪುವೇಂ ? ಗಡಗಡಮೆಂದು ಘರ್ಜಿಸಿದವೆಂಬಿನವೊಲ್ ಬಿರಿದಿತ್ತು ಭೂಮಿ ದಲ್.)

  • ಒಳ್ಳೆಯ ಪದ್ಯರಚನೆ….ಅಭಿನಂದನೆಗಳು. ಹೃದಯರಾಮರೇ! ಬಹುದಿನಗಳ ಬಳಿಕ ಕಾಣಿಸಿಕೊಳ್ಳುತ್ತಿದ್ದೀರಿ; ಕುಶಲವಷ್ಟೇ?
   ಭಾರಮನಂ ಎಂಬುದಕ್ಕೆ ಭಾರವಾದ ಮನಸ್ಸೆಂಬ ಅರ್ಥ ಬರುತ್ತದೆ. ಭಾರವನ್ನು ಎಂಬ ಅರ್ಥ ನಿಮ್ಮ ಮನದಲ್ಲಿದ್ದರೆ ಆಗ ಈ ಪದವು ಭಾರಮನ್ ಎಂದಾಗಬೇಕು.

   • ಸ್ವಲ್ಪ ಕೆಲಸದ ಒತ್ತಡದ ಕಾರಣ ಬಿಡುವಿರಲಿಲ್ಲ ಸರ್.. ಪದ್ಯದಲ್ಲಿನ ನೀವು ಹೇಳಿದ ದೋಷವನ್ನು ತಿದ್ದಿಕೊಳ್ಳುತ್ತೇನೆ.

 8. ಮೈಯ ಕೊಡವಿದೆಯೇಕೆ? ಸಾಸಿರ ಜೀವತೆಗೆದಿಹೆಯೇಕೆ ನೀ?
  ತಾಯ ಬುದ್ಧಿಯ ಮರೆತೆಯೇತಕೆ? ತರವೆ ತರುವುದು ಸಂಕಟ?
  ಮಾಯಗಾತಿಯೆ! ಬಲಿಯಕೊಂಡೆಯ ತಾಳ್ದು ಮಾರಿಯ ರೂಪವ?
  ಸಾಯ ಬಿಡುತಲಿ ನಿನ್ನ ಮಕ್ಕಳನೆಂತು ನೆಮ್ಮದಿ ಹೊಂದುವೆ?

  • ಯಾವ ಛ೦ದಸ್ಸು?

   • ಗುರುಹತ್ಯಾಭೂಯಿಷ್ಠಮಲ್ಲಿಕಾಮಾಲೆ 😉 (ಹಲವಾರು ಗುರ್ವಕ್ಷರಗಳನ್ನು ಎರಡು ಲಘುಗಳಾಗಿ ಒಡೆದಿರುವುದು)

    • ಅಯ್ಯಯ್ಯೋ 🙂 ಶಪಿಸುವುದೇಕೆ! ಮಾತ್ರಾ ಮಲ್ಲಿಕಾಮಾಲೆ ಅಂದುಕೊಂಡಿದ್ದೆ, ಇನ್ನೂ ಡಿಸ್ಕ್ರಿಪ್ಟಿವ್ ಹೆಸರು ಸಿಕ್ಕಿದೆ ಎಂದು ಸಂತೋಷವೇ ಆಗಿದೆ 😉

  • ನಿರುತ ಹಂಸಾನಂದಿಯೆನಿಸುವ
   ಶರದದಂದದೆ ನಿಮ್ಮ ಕವಿತೆಯ
   ಸರಣಿ, ತಿಳಿಗೊಳದಂತೆ ತಿಳಿನುಡಿ-ನಡೆಗಳಾಗರವಯ್!
   ಸರಸತರವಾಸಂತಕೊಪ್ಪುವ
   ಪರಿಮಳಿಪ ಮಲ್ಲಿಕೆಯ ಮಾಲೆಯು
   ಬರುವುದೆಂತಯ್ ಋತುಶರತ್ತಿನೊಳೆಂದು ವಿಸ್ಮಿತನಾಂ||

 9. ಭ್ರಮೆಯೊಲ್ ಪಾಳ್ದಸೆ ಸುತ್ತಮುತ್ತಿ ಬರುತುಂ ತೀವಲ್ ಮಹಾಸಂಕಟಂ
  ಕ್ರಮದೊಳ್ ಚೆಲ್ವಿನ ತಾಣಮಾಯ್ತೆ ನರಕಂ, ನಿಷ್ಪಾಪರಾರ್ತರ್ ಗಡಾ
  ಕ್ಷಮೆಗೆಂದನ್ವಯಳಾದ ತಾಯೆ ನಿನಗಿಂದೇಕೌ ಕಠೋರಾನನಂ
  ಯಮಗಂ ಬಾರೆನುತೀವುದೌತಣಮಿದೇಂ ಮುಗ್ಧಾತಿ ಜೀವರ್ಕಳಾ

  • ಚೆಲ್ವಾದತ್ತು ಕವಿತ್ವಮೀ ರಚನೆಯೊಳ್ ಮೇಣ್ ಭಾಷೆಯುಂ ಸುಂದರಂ

   • ದಲ್ ವೈಕಟ್ಯದ ಚಿತ್ರಮುಂ ಸೊಗಮದಾಯ್ತೀ ಪದ್ಯದೊಳ್ ಹೃದ್ಯದೊಳ್|

  • ಸು೦ದರತಾಣ – ಅರಿಸಮಾಸ? ಚೆಲ್ವಿನ ತಾಣ, ನ೦ದನವಾಟಿ,….
   ಕಠೋರಾನನ?

  • Good one Ram. Diction is both compact and clear.

  • ಮೆಚ್ಚುಗೆಗೆ, ದೋಷಪರಿಹಾರಕ್ಕೆ ಧನ್ಯವಾದಗಳು
   _/\_

 10. ನೋಡುತೀ ಬಗೆಯ ದುಷ್ಟರನಿಂದುಂ
  ಬಾಡಿತೇನು ಮನ ತಾಳದೆ ಕಷ್ಟಂ?
  ಬೇಡಿತೇಂ ಸುರೆಯ ಪಾನದ ಮತ್ತಂ?
  ಆಡಿಸುತ್ತಲೊಲೆದಾಡಿತೆ ಕಾಯಂ?
  (ಪೃಥ್ವಿಯು ಬೇಸತ್ತು ಸುರಾಪಾನ ಮಾಡಿದ್ದರಿಂದ..)

 11. ಇಲಾತಲದೆ ಪೆರ್ಚೆ ದುರ್ಜನರೆನಲ್ಕೆ ಕಜ್ಜಮುಂ
  ಖಲತ್ವಯುತಮಾಗಿರಲ್ ಜವನ ದೂತರೆಯ್ದಿರಲ್
  ಕೊಲಲ್ಕೆ ಬಹುಕಷ್ಟಮೆಂದೊಡನದೊರ್ಮೆ ಮೇದಿನೀ-
  ತಲಂ ಜಗುಳ್ದು ಕಂಪಿಸಲ್ ಮೃತರೆ ಸಜ್ಜನರ್ಕಳುಂ ||
  (ಭೂಮಿಯಲ್ಲಿ ದುರ್ಜನರು ಹೆಚ್ಚಾಗಿರಲು, ಅವರ ಕಾರ್ಯಗಳೂ ಖಲತ್ವದಿಂದ ಕೂಡಿರಲು, ಯಮದೂತರು ಬಂದು ಕೊಲ್ಲುವುದು ಬಹುಕಷ್ಟ ಎಂದಾಗ ಮೇದಿನೀತಲ ಕಂಪಿಸಿತು, ಆದರೆ ಸಜ್ಜನರೂ ಮೃತರಾದರೇ!)
  ಈ ಪದ್ಯದಲ್ಲಿ ಮುದ್ರಾಲಂಕಾರವಿದೆ 😉

  • ತುಂಬುಗನ್ನಡ ಶತಾವಧಾನದ ನಾಂದೀಪದ್ಯನಿವೇದನಕಾಲದಲ್ಲಿ “ಆಕಸ್ಮಿಕ”ವಾಗಿ ಹುಟ್ಟಿದ “ಮೇದಿನೀವೃತ್ತ”ವಿದು ಪೃಥ್ವೀವೃತ್ತದ ಅನುಜ. ಇದನ್ನು ಬಳಸುವ ಆಸ್ಥೆತೋರಿದ ಕೊಪ್ಪಲತೋಟರಿಗೆ ಧನ್ಯವಾದ.

 12. ರಂಗಿನಾ ಜೀವನಂ, ನೇಹಮಂ, ಭೂಮಿಗಂ-
  ಸಂಗಿಯಾದಂಬರಂ ನೀಡದೇ ಸಂದಿರಲ್
  ಭಂಗ ಮುಂದಾದುದೇಂ ಕಲ್ಪಿತಾಮೋದಕಂ?
  ನುಂಗುತುಂ ಶಾಂತಿಯಂ ಕಾರಿತೇಂ ಕ್ರೋಧಮಂ?

 13. ಹರಸುತೆತಾಂ ದಿನಂ ಭುವಿಯ ತೊಟ್ಟಿಲೊಳಿಟ್ಟವೊಲೆಮ್ಮ ತೂಂಗಿರಲ್
  ಹರನದನುಗ್ರಹಂ, ಮನುಜತಾಂ ಬದುಕಲ್ ಭವ ಭಾವಸಂಗದೊಳ್
  ಜರುಗಿರಲಂತರಂಗ ಪದರಂ, ನಡುಗಲ್ ಗ್ರಹಚಾರದಾಬಲಂ
  ಬಿರಿದಿರೆ ಭೂಮಿ ಮೇಣ್ ಶವದ ಪೆಟ್ಟಿಗೆಯಾದುದೆ ಜೀವ ನುಂಗುತುಂ ।।

 14. ಮುಚ್ಚಿರ್ದಕಣ್ಣುತೆರೆಯದೆ
  ಮುಚ್ಚಿರ್ದು ಭುವಿಯೊಳಡಂಗಿ ಭೂಸಮವಾದುವ್
  ನೆಚ್ಚಿದ ಬಾಂಧವರಂ ಯಮ-
  ನಿಚ್ಛೆಯು ಕೊಂಡುದುದನೇಖ ಭೂಕಂಪನದೊಳ್

  ಶಿರವೊಡೆದಿರುವರ ಕೈಮುರಿ-
  ದಿರುವರ ಕಾಲ್ಕಳೆದುಕೊಂಡ ಪಲಬರ ಕೂಗಿಂ
  ದರೆಜೀವರ ಬೆನ್ನೋವಿಂ
  ಧರೆಕಣ್ಣೀರಿಟ್ಟುದಂದು ಶೋಕಾರ್ಣವದೊಳ್

  ಫಲಕಂ ಪಲ್ಲಟವಾದುದುರ್ವಿಯೊಳು ಮುನ್ನಂಕಂಡರೇ ಜ್ಞಾನಿಗಳ್?
  ನೆಲದೊಳ್ ಪೂತಶವಂಗಳಂ ಬಿಡಿಸಿ ಸುಟ್ಟರ್ ಬೆಂಕಿಯೊಳ್ ಜ್ವಾಲೆಯಿಂ
  ಪಲರಂಕೊಂಡುದು ಮೃತ್ಯುಸೂಳ್ಪಡೆದು ಸತ್ತರ್ ಸಾಸಿರಾರ್ಮಂದಿ, ವ್ಯಾ-
  ಕುಲರಂ ಮುಟ್ಟಿತು ಶೋಕ ಬಂಧುಗಳ ಚಿತ್ತಂಸೋತುದಾದೇವಗಂ

  • ತಮ್ಮ ಮತ್ತೇಭ ತು೦ಬ ಹಿಡಿಸಿತು. ಒ೦ದೆರಡು ತಿದ್ದುಗೆಗಳು ಆಗಬಹುದೇನೊ.. ಮೂರನೆ ಪಾದದ ಕೊನೆಯಲ್ಲಿ ಎರಡು ಗುರುಗಳು ಬ೦ದಿವೆ.
   ಮುಟ್ಟಿತು ಶೋಕ ಎ೦ದು ಹೊಸಗನ್ನಡದ ರೂಪಕ್ಕೆ ಬದಲು ಶೋಕಮದಪ್ಪಿ ಎನ್ನಬಹುದು
   ಕೊನೆಗೆ ಚಿತ್ತ೦ ಸೋಲ್ತುದಾ ದೇವಗ೦ ಮಾಡಬಹುದು.

   • ಧನ್ಯವಾದ ನೀಲಕಂಠರೇ, ತಿದ್ದಿಕೊಂಡಿದ್ದೇನೆ..

 15. Subterranean sliding of India into Nepal caused the earthquake
  ಭಾರತಿ ಸನಾತನಳುಮಂತೆ ನೇಪಾಳದೇಶಂ
  ಪೇರೊಲುಮೆಯಿಂದೆ ಬಳಿಸಾರೆ ಕೋಲಾಹಲಂ ದಲ್|
  (ಭಾರತವು) ಸೇರಲೆಳೆಸಲ್ ಪಗೆಯ ಕಾರ್ವ ದೇಶಂಗಳಂ ಪೇಳ್
  ಘೋರಮೆನಿತಿನ್ನು ಸಲೆ ವಿಪ್ಲವಂ ತೋರ್ವುದಾಗಳ್||
  Please let me know the name of this meter – ನಾನ, ನನನಾನ, ನನನಾನ, ನಾನಾನನಾನಾ|

  • ಭ-ಜ-ಸ-ಯ-ಯ ಎಂಬ ಗಣವಿನ್ಯಾಸದ ಈ ಸರ್ವಸಮವೃತ್ತದ ಹೆಸರು ಲಕ್ಷಣಗ್ರಂಥಗಳಲ್ಲಿಲ್ಲ. ಇದಕ್ಕೆ ವಿಧಾತರಾದ ನೀವೇ ನಾಮಕರಣವನ್ನು ಮಾಡಬಹುದು. ಆದರೆ ಇದು ಇಂದುನಂದನವನ್ನು ತುಂಬ ಹೋಲುತ್ತದೆ (ನಾನನನ-ನಾನನನ-ನಾನನನ-ನಾನಾ). ಅಲ್ಲದೆ ಪಂಚಮಾತ್ರೆಗಳ ನಾಲ್ಕು ಗಣಗಳೂ ಕಡೆಗೊಂದು ಗುರುವೂ ಇರುವ ಚೌಪದಿಯು ಇದರ ಅಕ್ಷರಶಃ ಸಂವಾದಿಯಾದ ಮಾತ್ರಾಜಾತಿ ರೂಪ. ಈ ಪ್ರಕಾರವನ್ನೇ ಡಿವಿಜಿ ತಮ್ಮ ಸೀಸಪದ್ಯಗಳ ಕಡೆಯ “ಎತ್ತುಗೀತಿ”ಗಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಲಯಾನ್ವಿತವಾದ ಈ ವರ್ಣವೃತ್ತವನ್ನು ಸೃಜಿಸಿ ನಿರ್ವಹಿಸುವುದಕ್ಕಿಂತ ಇದರ ಸುಲಭವೂ ಸಹಜವೂ ಆದ ಮಾತ್ರಾಬಂಧರೂಪವನ್ನೇ ಬಳಸಿಕೊಳ್ಳಬಹುದು.

   • dhanyavAdagaLu.

   • ಯಾವನೋ ಮಾನವಿರದವನು ಮಾಡಿರುವ ಈ ಛಂದಸ್ಸನ್ನು ’ಮಾನೇತರ’ ಎನ್ನಬಹುದು – ಇದರಲ್ಲಿ ಮ, ನ, ತ, ರ ಬಿಟ್ಟು ಉಳಿದೆಲ್ಲ ಗಣಗಳೂ ಇವೆ 😉

    • u — — — u — u u u —
     ಯಮಾತಾರಾಜಭಾನಸಲಗಂ – ನೆನಪಾಯಿತು !!

 16. ಸೀಸ||
  ಬಲಿಯನೊತ್ತಿದುದೀಗ ನೆನಪಾಗೆ ತಳ್ಳಿದನೇನ್ ವಿಷ್ಣು ಧರಿತ್ರಿಯಂ ಪಾದದಿಂ
  ಸಲುಗೆಯಂ ತೋರುತ್ತೆ ಬೀಸಿದನೇನಿಂದ್ರ ವಜ್ರಾಯುಧಂ ಹಿಮವಂತನೆಡೆಗಂ|
  ನಲಿವಿಂದಲೀಶನು ತಾಂಡವಮಧ್ಯದೊಳ್ ಹೆಜ್ಜೆಯನಪ್ಪಳಿಸಿರ್ದ ಪರಿಯೋ
  ನೆಲನೊಂದು ಕೊಂಡಿತೋ ತಿಳಿಯುವ ಮೊದಲಿದೋ ಭೂಕಂಪನಾರ್ಭಟದಿಂದೆ ತಿವಿದಂ||

  ಕಟ್ಟಡಂ ಬಾಗಿ ಗಿಡಮರಂ ತೂಗಿ ನಮಿಸಲ್
  ನಿಟ್ಟುಸಿರಿದೇಂ ಗಾಳಿ ಧೂಳನೆತ್ತಿ ಮೊಗೆಯಲ್|
  ದಟ್ಟಿಯಂ ತೋರಿ ಮರೆಯಾಗಲುಳಿದುದೇಂ ದಲ್
  ದಟ್ಟಮೌನದೊಳ್ ಪುಗಿದ ಬಿಕ್ಕುಳಂ ವಲಂ||

  • ಒಳ್ಳೆಯ ಕಲ್ಪನೆಗಳ್ ದಲ್
   ಹೊಳ್ಳರೆ ನಿಮ್ಮಿಂದ ಬಂದುದಿಂದೀ ತೆರದಿಂ
   ಬೆಳ್ಳಿಯ ಶೀರ್ಷಕದಂದಂ
   ಕುಳ್ಳಿರಲೊದವಿತ್ತು ಸಂದೆಯಂ ಕಲೆಯೆಂಬೊಲ್||
   ಸಂದೇಹವೇನೆಂದರೆ- ಗೀತಭಾಗದಲ್ಲಿ ಯಾವ ವಿನ್ಯಾಸವಿದೆ ಎಂದು ಗೊತ್ತಾಗಲಿಲ್ಲ. ಹಾಗೇ ಸೀಸದ ಮೊದಲ ಸಾಲು “ವಿಷ್ಣು ಧರಿತ್ರಿಯಂ ಪಾದದಿಂ ” ಎಂಬಲ್ಲಿ ಗಣ ಸರಿಯಾಗಿ ವಿಭಾಗವಾಗುತ್ತಿಲ್ಲ 🙁

   • ಕೊಪ್ಪಲತೋಟರೆ,
    ಗೀತಭಾಗದಲ್ಲಿ ತೇಟಗೀತಿ: ಬ್ರ ವಿ ವಿ ಬ್ರ ಬ್ರ
    ಕಟ್ಟ|ಡಂ ಬಾಗಿ| ಗಿಡಮರಂ| ತೂಗಿ| ನಮಿಸಲ್|
    ಮೊದಲ ಸಾಲಲ್ಲಿ:
    ಬಲಿಯನೊ|ತ್ತಿದುದೀಗ| ನೆನಪಾಗೆ| ತಳ್ಳಿದ|ನೇನ್ ವಿಷ್ಣು| ಧರಿತ್ರಿ|ಯಂ ಪಾ|ದದಿಂ|
    ನಿದ್ದೆಯ ಮೇಲೆ ಪದ್ಯ ಬರೆದು ರಾತ್ರಿ ಜಾಗರಣೆಯೋ 🙂

    • ಹೊಳ್ಳರೇ! ನಿಮ್ಮ (ಪ್ರಾಯಶಃ ಮೊದಲ)ಸೀಸಪದ್ಯಕ್ಕಾಗಿ
     ಅಭಿನಂದನೆಗಳು. ಆದರೆ ಕೊಪ್ಪಲತೋಟನೆಂದಂತೆ ಸೀಸದ ಮೊದಲ ಪಾದದಲ್ಲಿ ಹಾಗೂ ಗೀತಿಯ ಹಲವೆಡೆ ಛಂದಸ್ಸು ಎಡವಿದೆ.

    • ಗಣೇಶರೆ, ಹೌದು. ಇದು ಪ್ರಥಮಚುಂಬನ :). ಕಾವ್ಯಕಲ್ಪವನ್ನು ಮಗುಚಿದ ಮೇಲೆ ಅರ್ಥವಾಯಿತು. ಸರಿಪಡಿಸುತ್ತೇನೆ.

 17. ಚಟುಲತೆಯ ಸಂಚಲನದಿಂ
  ಘಟಿಸುತಿರಲ್ ಪಂಚಭೂತದೀ ವೈರೂಪ್ಯಂ ।
  ಅಟಕಟಿಸಿರುದಿಳೆಯಕಟಾ !
  ಎಟುಕದು ವಿಜ್ಞಾನ ಸೂತ್ರಕೀ ವೈಚಿತ್ರಂ ।।

  *ಅಟಕಟಿಸು = ರೌದ್ರಾವತಾರ ತೋರು

  • “ಅಟಕಟಿಸಿದೆಯಿಳೆಯಕಟಾ” ಎಂದು ಸವರಿಸಿದರೆ ಉತ್ತಮ. ನಿಮ್ಮ ಪದ್ಯಶೈಲಿ ತುಂಬ ಸೊಗಸಾಗಿದೆ. ಧನ್ಯವಾದ.

   • ಧನ್ಯವಾದಗಳು ಗಣೇಶ್ ಸರ್ ,
    ಇದೀಗ ಸ್ಪಷ್ಟವಾಯಿತು.

    ಚಟುಲತೆಯ ಸಂಚಲನದಿಂ
    ಘಟಿಸುತಿರಲ್ ಪಂಚಭೂತದೀ ವೈರೂಪ್ಯಂ ।
    ಅಟಕಟಿಸಿದೆಯಿಳೆಯಕಟಾ !
    ಎಟುಕದು ವಿಜ್ಞಾನ ಸೂತ್ರಕೀ ವೈಚಿತ್ರಂ ।।

 18. ಮರೆಯಾಗಿರ್ಪನಲಾ ಶಿವ೦ ವೃಷಭನತ್ಯಾಕ್ರೋಶದಿ೦ ಘೂರ್ಣಿಸಲ್
  ಧರೆ ಬೆರ್ಚಿರ್ಪಳೆ, ಗ೦ಗೆಯುರ್ಬಟೆಯೊಳು೦ ಮೇಣ್ ತಲ್ಲಣ೦ಗೊ೦ಡಳೇ೦
  ಥರಗುಟ್ಟುತ್ತುಮಿರಲ್, ಹಿಮಾ೦ಶು ನೆಲೆಗೆಟ್ಟಿರ್ಪ೦ ಕಿಡಲ್ ಶಾ೦ತಿಯಾ-
  ಕರಮೌನ್ನತ್ಯದಿನಾ ಹಿಮಾದ್ರಿ ಕುಸಿದಿರ್ಕು೦, ಮಾನಿಸರ್ ಬಾಳ್ದರೇ೦?!

  • ಸೊಗಸಾದತ್ತಿದು ಪದ್ಯಮೀಗಳಹಹಾ! ಶ್ರೀನೀಲಕಂಠಾ! ಸಖಾ!
   ಮುಗುಳೊಪ್ಪಲ್ ನವಕಲ್ಪನಪ್ರಕರದಾ ಚೆಲ್ವಾಯ್ತು ಪದ್ಯದ್ರುಮಂ:-)

   • ಚಿಗುರಿರ್ಕು೦ ಭವದೀಯ ಬಾಣರಸದಾಸ್ವಾದಕ್ಕಮಿ೦ದಾ೦ ಮನ೦-
    ಬುಗಿಸಲ್ ಕಲ್ಪನೆಯಿನ್ನು ನಿಮ್ಮುದರಮೇ೦ ತು೦ಬಿರ್ದುದೀ ಪದ್ಯದಿ೦? 🙂

 19. ಮತ್ತಕೋಕಿಲ/ ಪ್ರಿಯಂವದಾ||
  ನಿತ್ಯಲಯ:
  ಉಣುವವೋಲ್ ನಿಯತಮಾಗಿ ಮಾನವರ್
  ನೊಣೆಯುವಳ್ ಮಡಿದರನ್ನು ಮೇದಿನೀ|
  ಪ್ರಕೃತಿಪ್ರಕೋಪ:
  ತುಣುಕುತಿಂಡಿಗಳನಾವು ಮುಕ್ಕುವೊಲ್
  ಹೆಣವನಾಗಿಪಳು ಮುಷ್ಟಿಮಾತ್ರಮಂ(ರಂ)||

  • ಪದ್ಯ ಚೆನ್ನಗಿದೆ. ಇಂಗಿತವೂ ಸೊಗಸಾಗಿದೆ. ಆದರೆ ಮೇದಿನೀ ಎಂದು ಹಳಗನ್ನಡ/ಹೂಸಗನ್ನಡಗಳಲ್ಲಿ ದೀರ್ಘಾಂತ್ಯವಾಗಿ ಹೇಳಲಾಗದು. ಅದು ಮೇದಿನಿ ಮಾತ್ರ. ಸಮಾಸದ ನಡುವೆ ಬಂದಾಗಲಷ್ಟೇ ದೀರ್ಘವಾಗುವುದು. ಇದು ಎಲ್ಲ ಸ್ತ್ರೀಲಿಂಗದಲ್ಲಿರುವ ದೀರ್ಘಸ್ವರಾಂತ್ಯಸಂಸ್ಕೃತಪದಗಳಿಗೂ ಸಮಾನವಾಗಿ ಕನ್ನಡದಲ್ಲಿ ಅನ್ವಯಿಸುತ್ತದೆ. ಅಲ್ಲದೆ ಕನ್ನಡದಲ್ಲಿ ವೃತ್ತ-ಕಂದಗಳನ್ನು ರಚಿಸುವಾಗ ಸಂಸ್ಕೃತದಲ್ಲಿರುವಂತೆ ಸಮಪಾದಾಂತ್ಯದಲ್ಲಿ ಲಘುವೂ ತಾನಾಗಿ ಗುರುವೆಂಬಂತೆ ಪರಿಗಣಿಸಲ್ಪಡುವ ನಿಯಮವಿಲ್ಲ. ಇದೇನಿದ್ದರೂ ಚೌಪದಿ, ಷಟ್ಪದಿ, ಸಾಂಗತ್ಯ, ತ್ರಿಪದಿ ಮುಂತಾದುವಕ್ಕೆ ಅನ್ವಯಿಸುತ್ತದೆ. ಹೀಗಾಗಿ “ಮೇದಿನಿ” ಎಂದು ತಿದ್ದಿದಾಗ ವ್ಯಾಕರಣ ನೆಟ್ಟಗಾದರೂ ಛಂದಸ್ಸು ಸೊಟ್ಟಗಾಗುತ್ತದೆ. ಆದುದರಿಂದ “ಭೂಮಿಯೇ” ಅಥವಾ ”ಭೂಮಿ ದಲ್ ” ಎಂದು ಸವರಿಸಿಕೊಳ್ಳಬೇಕು.

   • ಅರೆಮನಸ್ಸಿನಿಂದಲೇ ದೀರ್ಘವೆಳೆದಿದ್ದೆ. ತಿದ್ದುಗೆಗೆ ಧನ್ಯವಾದಗಳು.

 20. स्मृत्वा कदाचिदवनिः कनकाक्षदैत्य-
  स्वैरप्रवृत्तिमघजां च पुनःपुनस्ताम् |
  स्वप्ने प्रबुद्धसमयेऽपि भयात्खलस्य
  प्राप्नोति कम्पमधुनेति मतिर्ममैषा ||

  waiting for corrections 😛

  • ರಾಘವೇ೦ದ್ರರೆ, ಸ೦ಸ್ಕೃತದಲ್ಲಿ ಪ್ರತಿಪಾದಾ೦ತ್ಯವೂ ಯತಿಯುಕ್ತವಾಗಿರಬೇಕಲ್ಲವೇ…?
   ಕನಕಾ೦ಬಕಸ್ಯ ಎ೦ದು ತಿದ್ದಬಹುದೆ? ನಿಮಗೆ ದೈತ್ಯ ಬೇಕೆ ಬೇಕು ಎ೦ದರೆ ಬೇರೆ ಹೇಗಾದರೂ ತಿದ್ದಿಕೊಳ್ಳಿ 🙂

   • ರಾಘವೇಂದ್ರ! ಪದ್ಯವು ಸರ್ವವಿಧಗಳಿಂದಲೂ ಅನವದ್ಯ, ಹೃದ್ಯ. ಒಳ್ಳೆಯ ಸ್ವೋಪಜ್ಞಕಲ್ಪನೆಯೇ ಇಲ್ಲಿದೆ. ಅಭಿನಂದನೆಗಳು.

    ನೀಲಕಂಠರೇ! ನೀವು ತಿಳಿದಂತೆ ಇಲ್ಲಿ ಯತಿಭಂಗವಾಗಿಲ್ಲ. ಯಾವುದೇ ಸಂಸ್ಕೃತಪದ್ಯದಲ್ಲಿಯೂ ವಿಷಮಪಾದಾಂತ್ಯದಲ್ಲಿ ಪದವು (ದಿಟವಾಗಿ ಹೇಳಬೇಕೆಂದರೆ ಪ್ರಾತಿಪದಿಕವು) ಮುಗಿದಿದ್ದರೆ ಸಾಕು, ಸಮಾಸವು ಮುಂದುವರಿದರೂ ಅಡ್ಡಿಯಿಲ್ಲ. ಆದರೆ ಸಮಪಾದಾಂತ್ಯದಲ್ಲಿ ಮಾತ್ರ ಪದವು ಪ್ರತ್ಯಯಪುರಸ್ಸರವಾಗಿಯೇ ಮುಗಿದಿರಬೇಕು; ಸಮಾಸವಿದ್ದಲ್ಲಿ ಅದೂ ಮುಗಿದಿರಬೇಕು. ಕನ್ನಡ-ತೆಲುಗು ಮುಂತಾದ ನುಡಿಗಳಲ್ಲಿ ಈ ನಿಯಮವೂ ವೃತ್ತಗಳ ಮಟ್ಟಿಗೆ ಇಲ್ಲ; ಕಡೆಯ ಪಾದದಲ್ಲಿ ಪದವು ಮುಗಿದಿದ್ದರೆ ಸಾಕು. ಆದರೆ ಎಲ್ಲ ಅಂಶಗಣಗಳಲ್ಲಿ, ಷಟ್ಪದಿ, ಚೌಪದಿ, ಕಂದ ಮುಂತಾದ ಬಂಧಗಳಲ್ಲಿ ಸಮಪಾದಾಂತ್ಯಗಳಲ್ಲಿ ಪದ/ಸಮಾಸವೆಲ್ಲ ಮುಗಿದಿರಬೇಕು. ಆದರೆ ವಿಷಮಪಾದಾಂತ್ಯಗಳಲ್ಲಿ
    ಪದವೂ ಛೇದಗೊಳ್ಳಬಹುದು (ಆಗ ಖಂಡಪ್ರಾಸಕ್ಕೆ ಆಸ್ಪದವಾಗುವುದು), ಅಥವಾ ಅದು ಪ್ರಾತಿಪದಿಕರೂಪದಲ್ಲಿ ಮುಗಿದಿದ್ದು ಸಮಾಸವು ಮತ್ತೆಯೂ ಮುಂದುವರಿಯಬಹುದು.
    ಒಟ್ಟಿನಲ್ಲಿ ಸದ್ಯದ ಪದ್ಯದಲ್ಲಿ ರಾಘವೇಂದ್ರನದು ನಿರ್ದುಷ್ಟಪದ್ಯ. ಆದರೆ ನಿಮ್ಮ ಈ ಜಿಜ್ಞಾಸೆಯ ಕಾರಣ ಕೆಲವೊಂದು ವಿಷಯಗಳನ್ನು ನಾನು ಎಲ್ಲ ಗೆಳೆಯರೊಡನೆ ಹಂಚಿಕೊಳ್ಳಲು ಅವಕಾಶವಾಯಿತು; ಧನ್ಯವಾದಗಳು.

    • ಷಟ್ಪದಿಯ ಮಟ್ಟಿಗೆ ಹೇಳುವುದಾದರೆ ಪದ ಮುಗಿಯಬೇಕಿರುವುದು ಮೂರು ಮತ್ತು ಆರನೆಯ ಪಾದಕ್ಕೆ, ಅಲ್ಲವೆ ಸರ್?

   • ಧನ್ಯವಾದಗಳು ಸರ್. ರಾಘವೇ೦ದ್ರರು ನನ್ನ ಅಧಿಕಪ್ರಸ೦ಗವನ್ನು ಮನ್ನಿಸಬೇಕು…

    • @ganesh sir,
     Thanks for the support and appreciation, and a tutorial on yati once again 🙂

     @neelakantha,
     We need not be so formal amongst ourselves 🙂

 21. ಅಲೆಪಿನ ಲಾಸ್ಯಮಿರ್ದುದು ಹರಿದ್ವಸನಂಗಳ ಸೌಮ್ಯಶಾಟಿಯೊಳ್
  ವಿಲಸಿತ ಕಾಂತಿಯಿಂ ಬಿರಿತಮಂ ಕಂಡುದು ಮುಡಿರ್ದ ಪುಷ್ಪ ಮಾಲೆಗಳ್
  ಕಲಕುವ ರಾಗವರ್ಣ ಪರಡಿರ್ದುದು ಹೃತ್ಸರಶಾಂತ ತಾಣದೊಳ್,
  ಕಲುಷಿತಮಾದೊಡಂ ಧರಣಿ ಪೊಂದಿದಳೇಂ ದಿಟ ವೈಪರಿತ್ಯಮಂ!

  (ಸಿಟ್ಟಿನಿಂದಾಗಿ ಭುವಿಯಲ್ಲಿ ಈಗ ನಡುಕ,ಬಿರಿತ, ಕೆಂಪುಬಣ್ಣ(ರಕ್ತದ ಕೋಡಿಯ)-ಕಾಣುತ್ತಲಿವೆ, ಮೊದಲಾದರೋ ಅವಳ ವಸನದಲ್ಲಿ ಕುಣಿತವಿತ್ತು,ಮುಡಿದ ಹೂವಿನಲ್ಲಿ ಬಿರಿಯುವಿಕೆಯಿತ್ತು,ಅಂತರಂಗದಲ್ಲಿ ಕೆಂಬಣ್ಣವಿತ್ತು(ಪ್ರೀತಿ))

  • ಅಹಹ! ಬಾಣಭಟ್ಟನ ಕೃಪೆ ಆತನ ಕಾದ೦ಬರೀ ರಸಾಸ್ವಾದಕರಾದ ನಮಗೆಲ್ಲ ಚಹಾ ಕಾಫೀ ತ೦ದೀಯ್ವ ತಮಗಲ್ಲದೆ ಮತ್ತಿನ್ನಾರಿಗೆ ದೊರೆಯಬೇಕು?! 🙂

   • ಕಂಚುಗೊರಳೊಳೊಳ ಸಂಚೇಂ ?
    ಕಾಂಚನಚಾಯ ಪೊಗಳಿದುದು ಬಾಣಸಿಗಲೆನಲ್ !!

    • ವ೦ಚನೆಯಲ್ಲವು, ಸಲ್ವುದು
     ಚು೦ಚಿಗೆ ಚೆಲ್ವಾದ ಟೀ ಪೊಗಳ್ದೊಡಮಲ್ತೇ೦? 😉

  • ಕಾ೦ಚನ ಮೇಡಮ್,
   ಪಸಿರ್ವಸನ ಅರಿಸಮಾಸ, ಹರಿದ್ವಸನ ಆಗಬಹುದು.
   ಹಾಗೆಯೇ ಸೌಮ್ಯಶಾಟಿ ಆಗಬಹುದು.
   ರಾಗಮೆಲ್ಲೆಡೆರಚಿರ್ದುದು… ಎ೦ದರೆ ಹೇಗೆ?
   ಹೃತ್ಸರಶಾ೦ತ… ಅರ್ಥ ತಿಳಿಯಲಿಲ್ಲ.

   • ಧನ್ಯವಾದಗಳು . ಅರಿಸಮಾಸಗಳನ್ನು ತಿದ್ದಿರುವೆ.

 22. ದೈತ್ಯ ಹಿಮಪರ್ವತವು ಥರಥರನೆ ನಡುಗಿದುದು
  ಶೈತ್ಯದಿಂದಲ್ಲ ಮೇಣ್ ಶೈಧಿಲ್ಯದಿಂ ।।
  ನಿತ್ಯ ತಿರುಗುವ ತಿರೆಯು ತಿರುತಿರುಗಿ ಜರುಗುದುದು
  ನೃತ್ಯವಲ್ಲವದು ಕಾಣ್ ವ್ಯತಿರಿಕ್ತವಂ ।

  • *ಶೈಥಿಲ್ಯ (typo) ಪದವೇ ಶಿಥಿಲವಾಗಿಬಿಟ್ಟಿದೆ !!

  • ಆಹಾ! ತುಂಬ ಸೊಗಸಾದ ಕಲ್ಪನೆಯನ್ನು ಅದೆಷ್ಟು ಚೆನ್ನಾದ ಪದಚಮತ್ಕಾರದ ಮೂಲಕ ಹೊಮ್ಮಿಸಿದ್ದೀರಿ! ಅಭಿನಂದನೆಗಳು!!

   • ಧನ್ಯವಾದಗಳು ಗಣೇಶ್ ಸರ್,
    ನನಗೂ ಈ ಕಲ್ಪನೆ ಪುಳಕ ಕೊಟ್ಟಿತ್ತಾದರೂ, ಭೂಕಂಪದಂತ ದುರಂತದ ಸಂದರ್ಭಕ್ಕೆ ಇದು ಸೂಕ್ತವೇ ಎಂಬ ಜಿಜ್ಞಾಸೆ ಕಾದಿದ್ದು ನಿಜ. ದಯವಿಟ್ಟು ಬಗೆಹರಿಸಿ.

    • ಅಡ್ಡಿಯಿಲ್ಲ, ನಿಮ್ಮ ಕಲ್ಪನೆ ಮತ್ತು ಪದ್ಯಗಳೆರಡೂ ಔಚಿತ್ಯಯುತವಾಗಿವೆ.

 23. ಬಾ೦ದಳಮ೦ ನಲು೦ಗಿಸುವವೊಲ್ ಜಲದ೦ಗಳೆರ೦ಗಿ ಘಟ್ಟಿಸಲ್
  ಚೆ೦ದದಿನಲ್ತೆ ತಣ್ಪನಿಗಳಾಗಸದಿ೦ದುದುರಿರ್ಪುವೈ, ಮಹಾ-
  ಕ್ರ೦ದನಮೆಲ್ಲೆಯ೦ ಕ್ಷಣದೆ ಮೀರಿರೆ ಕಣ್ಪನಿಯಬ್ಧಿಯೊಳ್ ಜನ೦
  ಮಿ೦ದಳಿದರ್ಗೆ ತರ್ಪಣಮನೀವರಲಾ, ತಿರೆ ಕ೦ಪಿಸಲ್ ಗಡಾ

  • ನೀಲಕಂಠರೆ,”ತರ್ಪಣಮನೀವರಲಾ” ಎಂಬಲ್ಲಿ ಬಹುವಚನವಿರುವುದರಿಂದ, “ಜನಂ ಎಂಬುದು “ಜನರ್ ” ಎಂದಾಗಬೇಕೆ ?

   • ಹೌದೇನೊ.. ನನಗೂ ಅದೇ ಸ೦ಶಯ ಬ೦ದಿತ್ತು, ಆದರೂ ಹಾಗೆಯೇ ಬಿಟ್ಟೆ. ಧನ್ಯವಾದಗಳು, ತಿದ್ದಿಕೊಳ್ಳುತ್ತೇನೆ..

 24. ಖಂಡತುಂಡಾಗಿಹುದು ಭೂಗೋಳ ನಕ್ಷೆಯೊಳ್
  ಕಂಡಿಹುದು ನದಿಪಾತ್ರ ಸೀಳವೋಲ್ ತಾಂ ।
  ಚಂಡ ಭೂಕಂಪದಿಂ ತಿರುಗಿ ತಾನಿಳೆ ಬಿರಿದು-
  ಕೊಂಡುದಕೆ ಕಾಣನೆಲೆ ಮಾನದಂಡಂ ।।

  ಆಗಲೇ ಹಲವಾರು ರೀತಿಗಳಲ್ಲಿ ಬಿರುಕು ಗೊಂಡಿರುವ ಭೂಗೋಳ, ಭೂಕಂಪದಿಂದ ಮತ್ತೆ ಸೀಳಿದುದದೆಂತೋ ?!

 25. ಉಷಾ ತಾಯ ಮಾನದ೦ಡ ಪದ ಕಾಳಿದಾಸನ ನೆನಪನ್ನು ತ೦ದಿತು 🙂

  ಭಾರತಮಾನದ೦ಡದವೊಲಿರ್ಪ ಹಿಮಾಲಯಮಿ೦ದು ಸಲ್ಗುಮೀ
  ಘೋರವಿನಾಶಕ೦ ವಿಕೃತಿಗ೦ ವಿಪದಾಕರಕ೦ ವಿಲಾಪಕ೦
  ಮೇರೆಯನೊದ್ದ ಮೃತ್ಯುವಿನ ನರ್ತನಕ೦, ಘನಕ೦ಪನೋತ್ಕರ೦
  ಧಾರುಣಿಯ೦ ನಲು೦ಗಿಸಿದೊಡ೦, ಮಿತಿಮಾನಕದೊಲ್ ವಿಡ೦ಬನ೦!

  ಭಾರತದ ಮಾನದ೦ಡದ೦ತಿರ್ದ ಹಿಮಾಲಯಮಿ೦ದು ಭೂಕ೦ಪನದಿ೦ದಾದ ವಿಪದಾವಳಿಗಳ ಅಳತೆಗೋಲಾಗಿರ್ಪುದು ವಿಡ೦ಬನ೦!

  • ನೀಲಕಂಠರೆ, ಒಂದೆರಡು ಸಂದೇಹಗಳು. “ಸಲ್ದುದೀ” ಎಂಬುದು “ಸಲ್ಗುಮೀ” ಹಾಗೂ “ಮಿತಿಮಾನಕದೊಲ್” ಎಂಬುದು “ಮಿತಿಮಾನಕದವೊಲ್” ( ಛಂದಸ್ಸು ಕೆಡುವುದು)ಎಂದಾಗಬೇಕಲ್ಲವೇ?

   • ವೊಲ್, ಒಲ್ ಎರಡೂ ರೂಪಗಳಿವೆಯಲ್ಲವೆ?
    ಸಲ್ಗುಮೀ ತಿದ್ದಿದ್ದೇನೆ.

    • ಒಲ್ ಮತ್ತು ವೊಲ್ ಎಂಬೆರಡು ರೂಪಗಳಿವೆಯೆಂಬುದೇನೋ ಸರಿ. ಆದರೆ ಶಕುಂತಲಾ ಅವರ ಅಭಿಪ್ರಾಯ ಸರಿ.

 26. ( ಪಂಚಮಾತ್ರಾಚೌಪದಿ,ಭಾಮಿನಿಷಟ್ಪದಿ, ಕಂದಪದ್ಯ,ಮಂದಾಕ್ರಾಂತಾವೃತ್ತ,ಕುಸುಮಾಂಘ್ರಿಪವೃತ್ತ)

  ಬಗೆ ಬಗೆಯ ಪೂಗಳಿಂ ಶೋಭಿಪುದ್ಯಾನದಿಂ,
  ಖಗಮೃಗಂಗಳ ಕಾಡ ಸೊಬಗ ನಾಡಿಂ,|
  ಮುಗಿಲ ಚುಂಬಿಪ ದೈತ್ಯಗಿರಿಗಳಿಂ ಮೆರೆಯುತುಂ,
  ಬಗೆಗೊಳಿಸದಿರ್ಕುಮೇಂ,ಬುವಿಯೆಲ್ಲರಂ ? ||

  ಪಸಿರ ಸೀರೆಯನುಟ್ಟ ಭೂರಮೆ,
  ನಸುನಗುವ ಜಲಧಾರೆಯಿಂದಿರೆ,
  ನೊಸಲಿಗಿಟ್ಟು ಗುಲಾಬಿಗಳ ನಲ್ಗೆಂಪ, ತಿಲಕದವೊಲ್ ,|
  ಬಿಸಜಸುಂದರಿ ಮಧುರಗಾನದಿ-
  ನೆಸೆಯೆ ಕೋಕಿಲರವದೆ ನಿಚ್ಚಂ,
  ಪೊಸಕಿದುದು ತೀವ್ರತೆಯ ಕಂಪಂ ಮಂಗಲಾಂಬಿಕೆಯಂ ||

  ನಡುಗುತೆ ಗಡಗಡನೆಲ್ಲಮ-
  ನಡಿಯಿಂ ಮುಡಿ ವರೆಗೆ ಕಂಪಿಸಲ್ ನೀಂ ತಾಯೇ, |
  ನಡು ಮುರಿದುರುಳ್ದ ಮಕ್ಕಳ
  ಗಡಣದ ಬಾಳಾಯ್ತು,ಮಿಳ್ತುವಪ್ಪಲ್ ಭಗ್ನಂ ||

  ಬೀಳಲ್ಜೀವರ್ ಧರೆಗಳಲುತುಂ, ರಕ್ತದಿಂ ಮೂಡೆ ಪಳ್ಳಂ ,
  ಜೋಳಂ ಭತ್ತಂ ನಶಿಸಿ ಕೃಷಿಭೂನಷ್ಟದಿಂದಾಗೆ ಕಷ್ಟಂ,|
  ಕೂಳಂ ತಿನ್ನಲ್ ಪರಿತಪಿಸುತುಂ ಶೋಷಿತರ್ ನೋವನುಣ್ಣಲ್,
  ಪಾಳುಂಟಾಗಲ್,ಜನನಿಯ ಮನಂ ಶೋಕದಿಂ ಶೂನ್ಯಮಕ್ಕುಂ ||

  ನಡೆದ ಭೀಕರಕೃತ್ಯಕೆ ದಿಗಿಲಾಗುತುಂ,
  ಪಡುತೆ ದುಃಖವ,ಬಾಯನೆ ತೆರೆದಿಟ್ಟಿರಲ್ ,|
  ಪಿಡಿದು ರಕ್ಷಿಪ ಮಾನ್ಯರ,ತಿರೆಯಿಚ್ಛಿಸಲ್,
  ಬಿಡದೆ ಯಾಚಿಸುತಿರ್ಕುಮೆ ಮಹದಾತ್ಮರಂ ? ||

  • ಚೆ೦ದದ ಛ೦ದೋಮಾಲಿಕೆ-
   ಯೆ೦ದಿಗುಮಾನ೦ದಮ೦ ನಲಿವಿನಿ೦ದೀಯಲ್
   ಕು೦ದದ ಕು೦ದಣದ೦ದದಿ
   ಕ೦ದಮಿರಲ್ಕ೦ದದಿ೦ ಮನ೦ಗೊಳುತಿರ್ಕು೦

   • ಹೌದು, ರಾಗಮಾಲಿಕೆಯಂತೆಯೇ ತುಂಬ ಸೊಗಸಾದ ಛಂದೋಮಾಲಿಕೆ.

    • ಸಹೋದರರೆ, ನಿಮ್ಮ ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು. ಪದ್ಯಪಾನಿಗಳೆಲ್ಲ ಮತ್ತೆ ಮತ್ತೆ ಬರೆಯುವುದಕ್ಕೆ ಇದೇ ಕಾರಣ:-)

   • ಸುಂದರಪದ್ಯದೆ ನಲವಿಂ-
    ದೆಂದಿರೆ ಸೊಗಸಾದ ರಚನೆಯೆಂದಾಂ ಮುದದಿಂ |
    ಕಂದಿರ್ಪೀ ರಸಮಿಲ್ಲದ
    ಕಂದದೆ ವಂದನೆಯ ನೀಲಕಂಠರ್ಗೊರೆವೆಂ ||

   • ನೀಲಕಂಠರೆ, ನಿಮ್ಮ ಪದ್ಯದಲ್ಲಿ “ಕುಂದಣದಂದದಿ” ಎಂಬ ಬದಲಾಗಿ” ಕುಂದಣದಂದದೆ ” ಎಂಬುದು ಒಳಿತಲ್ಲವೆ ?

 27. ಹಣ್ಣುಹಂಪಲಮಿತ್ತು ತಂಬೆಲರ ಮುದಮಿತ್ತು
  ಚಿಣ್ಣರೆಂದೆಮ್ಮಗಳ ಪೊರೆದ ತಾಯೇ!
  ಉಣ್ಣಿಸುತ್ತೀ ಪರಿಯ ನೋವು ತಾಪಂಗಳಂ
  ಬಣ್ಣ ಮನದಿರ್ಬಗೆಯ ತೋರ್ದೆಯೇನೌ!

 28. ಪಸಿದ ಜೀವಕೆ ಪಸೆಯ ನೀಡೆನೆ
  ಪಸಿರ ಪಸರಿಸೆ ನಿನ್ನ ಕಸುವಿಂ
  ನಸುವೆ ಬಿರಿಯುತೆ ಮಂದಹಾಸವ ಸೂಸು ಧಾರಿಣಿ ನೀಂ ।
  ಅಸುರ ಜೀವರು ಬಸಿರ ಬಗೆದಿರೆ
  ಕುಸಿಯುತಾಳದಲೊಳಗೆ ಮುಸುಗುಡೆ
  ಹಿಸಿದು ಹೊಮ್ಮುಲುವಟ್ಟಹಾಸದ ನಗೆಯ ಬೀರದಿರೈ ।।

  “ಭೂಮಿ” ನೀ ಬಿರಿಯದೆ ಬೆಳೆಯಿಲ್ಲ / ಬಾಳಿಲ್ಲ. ಹಾಗಾಗಿ ತುಸು ಬಿರಿ – ಮಂದಹಾಸ ಬೀರು. ಆದರೆ ಈ “ಬಿರುನಗೆ” (ಭೂಕಂಪ) ಬೇಡ ಎಂಬ ಕೋರಿಕೆಯ ಪದ್ಯ

  • ಕಲ್ಪನೆ-ರಚನೆಗಳು ಚೆನ್ನಾಗಿದೆ. ’ಸ’ಕಾರವನ್ನು ಅಧಿಕವಾಗಿ ಬಳಸಿರುವುದೂ ಚೆನ್ನಾಗಿದೆ.

  • ಉಷಾ ಮೇಡಮ್, ಹೊಮ್ಮಲುವಟ್ಟಹಾಸ ಸಾಧುವೆ? ಅದು ಲೋಪಸ೦ಧಿಯಾಗಿ ಹೊಮ್ಮಲಟ್ಟಹಾಸ ಆಗಬೇಕಲ್ಲ…

   • ನನಗೂ ಅನುಮಾನವಾಗಿದೆ ನೀಲಕಂಠ. (ಹಾಗೆ ಸಹಜವಾಗಿ ಬಂದದ್ದು)
    ಹೊಮ್ಮಲು – ಹೊಮ್ಮಲಿಕೆ – ಹೊಮ್ಮಲುವೆ + ಅಟ್ಟಹಾಸ – ಎಂದಾಗುವುದೇ ?

 29. Per Greek mythology, Gaia/earth’s husband is Ouranos/Uranus. (Incidentally, Ouranos is Gaia’s son also: Being the primordial mother, she had created him to guard her.) She conceived three monstrous boys from him. When she was ready to bring forth these boys, Ouranos pushed them back into Gaia’s womb, for he feared the boys’ power and beauty.
  Gaia later bore Ouranos twelve children. They were called Titans, one of whom was Kronos. Still simmering from the forestalling of the delivery of her earlier three giants, Gaia sought Titans’ help. Only Kronos was willing to confront his father, for he reasoned that Ouranos had acted shamefully.
  Is this quake caused by Kronos assisting his mother to deliver his elder brothers?
  ಜಾತರಾದೊಡನೆ ಈ ಘೋರತ್ರಯರುಮೆಂತೊ
  ಘಾತಿಗೊಳಿಪರು ಲೋಗರನ್ನುಮೆಂಬ|
  (father)ತಾತನಾತಂಕವದು ಗಣ್ಯಮಾಗದೆಯುಳಿದು
  ಮಾತೃಭಕ್ತ್ಯೈಕಲಕ್ಷ್ಯಮೆ ಸಂದುದೇಂ?

 30. ಅಕ್ಷಯ ಪ್ರೀತಿಯಿಂದೆಲ್ಲರಂ ಸಲಹುತುಂ
  ದಕ್ಷಮಾತೆಯ ಪಟ್ಟವೊತ್ತ ತಾಯ್ಗಂ,
  ವಿಕ್ಷಿಪ್ತ ಲಹರಿಯೊಳ್ ಕಂದರಂ ಕಂಡೊಡಂ
  ಶಿಕ್ಷೆಯಂ ನೀಳ್ವುದಕೆ ಮನಮಾದುದೇಂ!

 31. ವಿಪರೀತಮಾಯ್ತೆಲೆ, ಭುವಿ
  ಹಪಹಪಿಸುತಲಿಂತು ಕಂಪಿಸುದು ಲೇಸಲ್ಲಂ ।
  ಉಪಟಳಮೀಯಲ್ ನೀಂ ಜನ-
  ರುಪಕ್ರಮಿಪರೆಲ್ಲರಗ್ರಜ ಕುಜನ ಗೃಹಕಂ !!

  (ಅಮ್ಮಾ… ಭೂಮಿ ನೀನೀಪರಿ ಹಿಂಸಿಸಿದರೆ, ಜನರೆಲ್ಲ ನಿನ್ನತೊರೆದು, ಅಣ್ಣ !! ಮಂಗಳನ (ಭೂಮಿಪುತ್ರ) ಮನೆಗೆಹೋಗಿಬಿಡುವರು, ಎಂಬ ಬೆದರಿಕೆಯ ಪದ್ಯ)

  • ಉಪಟಳಮೀಯಲ್ ನೀಂ ಕಾ-
   ಣುಪಕ್ರಮಿಪೆವೆಲ್ಲ ಚಂದಮಾಮನ ಮನೆಗಂ !!

   ಎಂದೂ ಬೆದರಿಸಬಹುದು ಅಲ್ಲವೇ ?!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)