Jun 082015
 

ಮಗುವಿನ ಜನನವನ್ನು ನಿರೀಕ್ಷಿಸುತ್ತಿರುವ ಗರ್ಭಿಣಿಯ ವರ್ಣನೆ ಮಾಡಿರಿ

  62 Responses to “ಪದ್ಯಸಪ್ತಾಹ ೧೫೪: ವರ್ಣನೆ”

 1. ನವಮಾಸಂ ಕಳೆಯುತಿರಲ್
  ನವನವಕಲ್ಪನೆಗಳಲೆಗಳುಯ್ಯಾಲೆಯವೊಲ್|
  ಕುವರಿಯೊ, ಕುವರನೊಮೆನುತುಂ
  ಕಿವಿಯೊಳ್ ಪಿಸುಗುಟ್ಟುತಿರ್ಪುದು ಪ್ರತಿದಿನಮುಂ|

  • ಆಹಾ! ತುಂಬ ಸುಂದರವೂ ಸ್ನಿಗ್ಧವೂ ಆದ ಪದ್ಯ ಚೀದೀ! ಅಭಿನಂದನೆಗಳು.

 2. ಅಡಿಯನಿಡುವೆಡೆ ಚಿತ್ತ ಹೊರಳುತು
  ಮೊಡಲ ಕಂದನ ಜತನ ಬಯಸಿರೆ
  ಪೊಡವಿಯಾಣ್ಮನ ನೆನೆವುದುಂ ಮನ ನಿಮಿಷ ನಿಮಿಷಕೆ ತಾ
  ಜಡದ ಸೋಂಕಿನ ಗಣನೆಯಿಲ್ಲದ
  ಕುಡಿಯ ಪೋಷಣೆ ತಂದ ಕಾತರ
  ವೆಡೆಯ ನೀಳ್ದುದು ಬಗೆಯ ಭಕ್ಷ್ಯದ ವಾಂಛೆ ವಿಭ್ರಮಕೆ

  ಅತ್ತಲಿತ್ತಲೆ ಸರಿದು ಮಿಸುಕುತೆ
  ಹೊತ್ತ ಗರ್ಭದೊಳಾಡುತಿದ್ದಿರೆ
  ಹೊತ್ತು ಹೊತ್ತಿಗೆ ಚಲಿಪ ವಿಸ್ಮಯದೀಕ್ಷೆಯೇ ಮನಕೆ
  ಅತ್ತು ಕೂಗದೆ ತುತ್ತು ಕೇಳದೆ
  ಚಿತ್ತವನೆ ತಾ ತೋಯುತಿರೆ ದಿಟ
  ಮತ್ತನೀದ ಪ್ರೀತಿಕೊಡುಗೆಯ ನೋಡುವಾ ಬಯಕೆ

  • ಹೆತ್ತ ತಾಯಿಯ ಸತ್ಯದನುಭವ
   ಬಿತ್ತ ವಿರದಿರೆ ಚಿತ್ತ ತಳೆವುದೆ
   ಹುತ್ತಗಟ್ಟಿದ ಸ್ತುತ್ಯ ಕಲ್ಪನೆ ಕಾಂಚನೋಚಿತಮೈ

   • ಧನ್ಯವಾದ,ಮೌಳಿಯವರೇ.

   • ತೆತ್ತುಕೊಳ್ಳುತೆ ಕಂದನಳ್ತಿಗೆ
    ಮತ್ತಿತರಸುಖವನ್ನುಳಿಯುತೆದೆ-
    ಗೊತ್ತಿಕೊಳ್ಳುತೆ ಮಾತೃಭಾವವನಿರ್ಪರಂ ಗೆಲಿದಯ್!

    • ಧನ್ಯವಾದಗಳು 🙂

     • ಮೆಚ್ಚಿ ಪಾಡಲು ಮೌಳಿಯವರನು
      ಮೆಚ್ಚಿ ನಿಮ್ಮಯ ಪದ್ಯವನ್ನೇ
      ಹೆಚ್ಚು ನುಡಿದಿಹರೆ೦ದು ಬಗೆದಿರೆ ಕಾ೦ಚನಾ ಮೇಡ೦?! 🙂

     • ಇಲ್ಲ ನೀಲಕಂಠರೇ, ಹೆತ್ತತಾಯಿಯ ಧನ್ಯತಾಭಾವವೇ ಅದು. ಅವರು ಅದನ್ನು ಸಲ್ಲಿಸಿದ್ದು ನನ್ನ ಮುಖಾಂತರವಷ್ಟೇ 🙂
      ಅದೇಕೋ ನಿಮ್ಮ ಪ್ರತಿಸ್ಫರ್ಧಿ ರಂಪರು ಕಾಣೆಯಾಗಿರುವದು ಬೇಸರವುಂಟುಮಾಡಿದಂತಿದೆ! 🙂

     • ಹೌದು ಮೇಡಮ್, ಅವರೊಬ್ಬರೇ ಏಕೆ, ಬಹುಶಃ ಎಲ್ಲರೂ ಕಣ್ಮರೆಯಾಗಿದ್ದಾರೆ. ನಾನೊಬ್ಬನೇ ಬೇತಾಳನ೦ತೆ… ಇನ್ನು ಆವಾಗೀವಾಗ ನೀವು, ಉಷಾ ಮೇಡಮ್ 🙁

 3. ಪೊತ್ತಿರ್ಪೆ ನಾನಿವನ ಸೊತ್ತಿವನು ಕಾಣವ್ವ
  ಮುತ್ತುಗಳ ಹೊಳಪ ತಾಳ್ದವನು | ಬಾಳ್ವವನು
  ಕುತ್ತುಗಳ ಸರವ ಕಳೆಯುತ್ತ

  ಆವಾವ ಜನ್ಮದಲಿ ಭಾವಗಳ ಬೆಸುಗೆಯಲಿ
  ನಾವಿಬ್ಬರೊ೦ದು ಮರದಲ್ಲಿ | ಸರಗೂಡಿ
  ಆವಾವ ರಾಗ ಹಾಡೇವೊ

  ಇ೦ದೀಗ ನನ್ನಿವನ ಒ೦ದಾದ ಉಸಿರಾಟ
  ಚೆ೦ದಾದ ಹಾಡ ಯುಗಳsವ | ಹಾಡಿತ್ತು
  ನ೦ದsದೆ ದೀಪ ಉರಿಧs೦ಗೆ

  ನಾನಿವನ ಕ೦ಡಿಲ್ಲ ತಾನೆನ್ನ ತಿಳಿದಿಲ್ಲ
  ಕಾಣುವೊಡೆ ಕಣ್ಣು ಬೇಕಿಲ್ಲ | ಸಾಕಲ್ಲ
  ಜಾಣಾದ ಹೃದಯ ನಮ್ಮೊsಳು

  ನೋಡುವೆನು ನಾನಿನ್ನು ಪಾಡುತಲಿ ಸೊಗಸಿವನ
  ಬೇಡುತ್ತ ಶಿವನನೆ೦ದಿsಗು | ಇನ್ನಿವನ
  ಪಾಡನ್ನ ನೋಡಿಕೊಳ್ಳೆ೦ದು

  ಇನ್ನೇನು ತಡವಲ್ಲ ಚೆನ್ನಾದ ದಿನದಲ್ಲಿ
  ಚಿನ್ನಕ್ಕೆ ಪುಟವನಿಟ್ಟ೦ತೆ | ಹೊಳಪನ್ನ
  ಕೊಟ್ಟಾನು ನನ್ನ ಕಣ್ಣಿsಗೆ

  ನನ್ನೆರಡು ಕಣ್ಣುಗಳು ಪನ್ನೀರ ಕಲಶಗಳು
  ಹೊನ್ನ೦ತೆ ಹೊಳೆವ ಕ೦ದನ್ನ | ಮುಖಬಿ೦ಬ
  ಚಿನ್ನsದ ಕೊಡವ ಬೆಳಗಿತ್ತ

  ಚ೦ದಿsರ ತಾನವ್ವ ತ೦ದಾನ ಹುಣ್ಣಿಮೆಯ
  ಕ೦ದಿರ್ದ ಎನ್ನ ಹೃದಯsದ | ಕಡಲಿsಗೆ
  ಬ೦ದಿತ್ತು ಭರತ ತಾನುಕ್ಕಿ

  ಕೃತ್ತಿsಕೆ ಸತಿಯರ್ಗೆ ಮೊತ್ತsದ ಆನ೦ದ
  ಇತ್ತsವ ಕಾರ್ತಿಕೇಯsನು | ಕೊಡಲೆನ್ನ
  ಗತ್ತಿsನ ಸುತಗೆ ಬಲವನ್ನ

  ದೇವರ್ಗೆ ಸೇನಾನಿ, ಕಾವ೦ಥ ಗ೦ಡಾನಿ
  ಸಾವಿsಗು ಹೆದರದಿರುವ೦ಥ | ಮಗನಾಗೆ
  ಪಾವsನ ಗ೦ಗೆ ಬದುಕೆನ್ನ

  (garbhiNiya swagata; huTTuvudu ganDu emba ooheyanniTTukonDu :))

  • awesome sir 🙂 kavi neevu 🙂

   • ಕವಿಯ ಕವನವೆ೦ಬ ಶಿವನ ಕ೦ಠದಲ್ಲಿ ಮೂರು ಮಾತ್ರೆ ಗಣದ ಗುಣವು ತಪ್ಪಿ ಹೋದ ವಿಷದ ಕಲೆಯು ಕಿಲುಬುಗಟ್ಟಿ ನೀಲಕ೦ಠನಾದೆನಲ್ತೆ!

    • ಪ್ರಿಯ ನೀಲಕಂಠರೇ! ನೀವು ಮಾತ್ರಾಗಣಘಟಿತವಾದ ತ್ರಿಪದಿಯಲ್ಲಿ ಈ ಕವಿತೆಯನ್ನು ರಚಿಸಿದಂತಿದೆ. ಅಡ್ಡಿಯಿಲ್ಲ; ಕವಿತಾಭಾವ ಮಾತ್ರ ಸೊಗಸಾಗಿದೆ.

     • Yes sir. Came to know about distinction between maatra-gana-tripadi and amsha-gana-tripadi, while checking with Koppalatota. Will keep in mind and will try to understand better the amsha-ganas.

  • Fourth verse is the best. The rest are better. Thanks for a good nILgavana.

  • ತ್ರಿಪದಿಗಳು ಬಹಳ ಇಷ್ಟವಾದವು ನೀಲಕಂಠ, ನನ್ನ ಮಗಳಿಗೆ ಹಾಡಿಕೇಳಿಸಿ ಆನಂದಿಸಿದೆ. ಧನ್ಯವಾದಗಳು.
   (ಅಂಶಗಣದ ಬಗ್ಗೆ ನನಗೂ ಮತ್ತಷ್ಟು ತಿಳಿಯಬೇಕಿದೆ.)

   • 🙂 ಧನ್ಯವಾದಗಳು. ಪಾದವೊ೦ದರಿ೦ದೀ ಭವ್ಯಸ೦ಸಾರವನ್ನೂ, ಇನ್ನೊ೦ದರಿ೦ದ ದಿವ್ಯಮಾರ್ಗವನ್ನೂ ಅಳೆವ, ಮೂರನೆಯ ಪಾದದಿ೦ದ ಅನಿಷ್ಟಗಳನ್ನು ತುಳಿವ ತ್ರಿಪದವಿಕ್ರಮನಾದ (ವಿಕ್ರಮೆಯಾದ) ಮೊಮ್ಮಗು ನಿಮಗೆ ದೊರೆಯಲಿ 🙂

 4. ತು೦ಬಿರ್ದ೦ತು ಮೊಗ೦ ಸೊಗ೦ಗುಡುತೆ ಕಣ್ನೋಟಕ್ಕಮಿ೦ತು೦ ಭವಿ-
  ಷ್ಯಾ೦ಬುವ್ರಾತಸುಧಾ೦ಶುವನ್ನುದರದೊಳ್ ಪೊತ್ತಿರ್ದು ಶೀತಾ೦ಶುಮ-
  ದ್ಬಿ೦ಬ೦ ಪಿ೦ತಿರಲೆ೦ತುಮಬ್ದನಿವಹ೦ ವಿದ್ಯುಲ್ಲತಾಪೀಡಮೆ೦-
  ದೆ೦ಬ೦ದ೦ ಪೊಸತಪ್ಪ ಜೀವಮನೆ ತಾ೦ ತ೦ದೀವವೊಲ್ ಧಾತ್ರಿಗ೦

  ಚ೦ದ್ರಬಿ೦ಬವನ್ನು ತನ್ನ ಹಿ೦ದೆ ಬಚ್ಚಿಟ್ಟುಕೊ೦ಡು ವಿದ್ಯುಲ್ಲತೆಗಳಿ೦ದ ಅಲ೦ಕೃತಗೊ೦ಡು ತು೦ಬಿಬ೦ದಿರುವ ಮೋಡಗಳು ಈಗಲೋ ಆಗಲೋ ಧರೆಗೆ ಹೊಸ ಜೀವವನ್ನು ತರುವುವು (ಜೀವಪೋಷಕವಾದ ಮಳೆಯನ್ನು ತರುವುವು) ಎ೦ಬ೦ತೆ ದಿನತು೦ಬಿದ ಗರ್ಭಿಣಿಯ ಮುಖವು ತನ್ನುದರದಲ್ಲಿ ಭವಿಷ್ಯವೆ೦ಬ ಕಡಲಿಗಿರುವ ಚ೦ದ್ರನನ್ನು ಹೊತ್ತು ಈಗಲೋ ಆಗಲೋ ಭೂಮಿಗೆ ಹೊಸ ಜೀವವನ್ನು ತರುವಳು ಎ೦ಬ೦ದ ಕಣ್ಣುಗಳಿಗೆ ಸುಖ ಕೊಡುತ್ತಿತ್ತು.
  “ಪೊಸತಪ್ಪ ಜೀವಮನೆ ತಾ೦ ತ೦ದೀವವೊಲ್ ಧಾತ್ರಿಗ೦” ಇದು ಶ್ಲೇಷೆಯಲ್ಲಿದೆ, ಮೋಡ ಮತ್ತು ಗರ್ಭಿಣಿಗೆ ಅನ್ವಯಿಸುವ೦ತೆ.

  • ಪದ್ಯ ಚೆನ್ನಾಗಿದೆ. ಆದರೆ ಸಮುದ್ರಕ್ಕೆ ಅಂಬುವ್ರಾತ ಎಂಬ ಪದವು ಇಡಿಯ ಪದ್ಯದ ಶೈಲಿಯ ದೃಷ್ಟಿಯಿಂದ ಸ್ವಲ್ಪ ವಿಜಾತೀಯವಾಯಿತೇನೋ. ಆದರೂ ಇಂಥ ವಿಶಿಷ್ಟಪದಪ್ರಯೋಗಗಳಿಂದಲೇ ಕಾವ್ಯಕೌಶಲಕ್ಕೆ ವಿಲಕ್ಷಣತೆ ಬರುವುದು.

   • ಧನ್ಯವಾದಗಳು ಸರ್. ಗಣ, ಪ್ರಾಸಗಳ ಆವಶ್ಯಕತೆಗೆ ಕಟ್ಟುಬಿದ್ದು ಆ ವಿಲಕ್ಷಣವಾದ ಸಮುದ್ರವನ್ನು ಸೃಷ್ಟಿಸಬೇಕಾಯಿತು 🙂

    • ಎಲವೊ ಅಭಿನವಾಗಸ್ತ್ಯನೆ,
     ವಿಲಕ್ಷಣಮೆ ನೀಂ ಪ್ರಕಲ್ಪಿಸಿರ್ಪ ಸಮುದ್ರಂ?
     ನುಲಿದಿರ್ಪುದು ಉಷ್ಣವುಮದು
     ಮಲೆಯದವೋಲ್ವೈದ್ಯರಂ ಮೊರೆವೊಗುವುದುಚಿತಂ|| 😀

 5. ಪೊಸಕಂದನ ಧಾರಣೆಯಿಂ
  ದೆಸೆವಳಹ! ಸುಗಂಧ ಭರಿತ ಪುಷ್ಪದವೋಲೇ|
  ಒಸಗೆಯೊಸರೆ ಮೈ ಮನದೊಳ್,
  ಕುಸುಮಿತ ನವಕಾಂತಿಯಿಂಸೊಗಸುವಡೆಯುತೆತಾಂ||

  • Chennagide..
   posajeeva – arisamasa. Can we rephrase it like this?
   “posatappa jeevamankuri-
   sesevaLaha! …………………………”

   • ಧನ್ಯವಾದ . ಸರಿಪಡಿಸಿದ್ದೇನೆ 🙂

    • ಅಯ್ಯೋ ಮೇಡಮ್, ಪೊಸಶಿಶು ಕೂಡ ಅರಿಯೇ! 🙂

     • ಎಲ್ಲಾ ಪದಗಳೂ ಸಂಸ್ಕೃತದವೇ ಆದೊಡನೇನ ಮಾಡಲಿ? ಈಗ ಸರಿಯೇ?

     • ಆ ಶಿಶು ಬೆಳೆದು ಮಾತಾಡಲು ಆರಂಭಿಸಿ ಭಿನ್ನಾಭಿಪ್ರಾಯಗಳು ತೋರಿಕೊಳ್ಳುವ ತನಕ ಅದು ಅರಿಯಾಗಲಾರದು

    • tanu idoo kooDa sanskrutve!!
     naanu savarisiddannu oppikolluvudu saadhyavillave?!! 🙂

  • ಸ್ವಲ್ಪ ಅರಿಸಮಾಸಗಳ ಹಾವಳಿಯಾಯಿತಲ್ಲಾ!

   • ಅರಿಯ ನಾಶವಾಗಿದೆಯೆಂದು ತಿಳಿದಿರುವೆ 🙂

    • ariyaDagirpam gaDa posakAntiyoL 🙂

    • ಕೀಲಿಮಣೆಯ ನೆತ್ತಿ ಮೇಗಡೆ ಟಪಟಪನೆ ಬಡಿಯುತ್ತೆ ಹೊಡೆದೋಡಿಸಿದಳೆಲ್ಲ ಅರಿಗಳನೀ ಛ೦ದೋದುರ್ಗದ ಒನಕೆ ಓಬವ್ವ 🙂

     • ನನಗೆ ತಿಳಿದಂತೆ, ಕಾಂಚನರವರು ಕಾಗದದಲ್ಲಿ ಪದ್ಯಗಳನ್ನು ಬರೆದು ಅದನ್ನು ಟಂಕಿಸಲು ರಾಮಚಂದ್ರರಿಗೆ ಕೊಡುವುದು ವಾಡಿಕೆ.

     • ಹಹ್ಹ, ಒನಕೆಯನ್ನು ರಾಮಚ೦ದ್ರರಿಗೆ ಕೊಟ್ಟು ತಾವು ಲಟ್ಟಣಿ ಹಿಡಿದುಕೊ೦ಡು ಹಿ೦ದೆ ನಿಲ್ಲುತ್ತಾರೇನೋ ….

 6. ಜೀವದೆ ತಳೆದಿನ್ನೊಂದ,
  ನ್ಭೂವನಿತೆಯ ತೆರದೆ ತೋಷಗೊಂಡಿರ್ಪಳಿವಳ್!
  ಸೋವಂ ನೀಳುತಲೇಕತೆ
  ಯೀದುಂ,ನಲಿವೊಂದನೇ ಪೊರೆಗುಮೆಂಬಂತಾ!

  ಅನ್ವಯ: ಏಕತೆಯು ಈದುಂ, ನಲಿವೊಂದನೇ, ಪೊರೆಗುಮೆಂಬತಾ ಸೋವಂ ನೀಳುತಲ್,ಜೀವದೆ ತಳೆದಿನ್ನೊಂದಂ ಭೂವನಿತೆಯ ತೆರದೆ ತೋಷಗೊಂಡಿರ್ಪಳಿವಳ್

  • ಅರ್ಥ ಆಗಲಿಲ್ಲ 🙁

   • “ಏಕತೆ” ಇದು ಒಂದಾಗಿರುವುದು ಎಂಬ ಅರ್ಥವನ್ನು ಕೊಡುತ್ತದೆ, ಎಂದುಕೊಂಡೆ. ಆದರೆ ನನಗೆ ಈಗ ಸಂದೇಹವಾಗುತ್ತಿದೆ! :-)ತಿಳಿಸಿ

    • adu sari. aadare illi Ekate Eke bantu? yaavudara Ekate?

     • ತಾವಿಬ್ಬರೂ ಬೇರೆಯಲ್ಲ,ಒಂದೇ ಎಂಬ ಭಾವ (,ತಾವಿಬ್ಬರೂ ಒಂದೇ ಜೀವದಂತಾದಾಗ ,ತಾಯಿಗೆ ಸಂತಸವೂ ಆಗುತ್ತಿದೆ,ಅಲ್ಲವೇ?)

    • Ok, arthavayitu 🙂 thanks

     • ನಾಲ್ಕನೆಯ ಸಾಲಿನಲ್ಲಿ ಪ್ರಾಸವು ತಪ್ಪಿತಲ್ಲಾ!

     • ಪ್ರಾಸವೇ ತಪ್ಪಿದ್ದರಿಂದ, ಪದ್ಯದ ಸಾಲನ್ನೇ ತಿದ್ದಬೇಕಾಯಿತು. ಸರಿದಾರಿಯನ್ನು ತೋರಿದ ತಮ್ಮಿಬ್ಬರಿಗೂ ಧನ್ಯವಾದಗಳು.

 7. ಆಡಿಸಿ ಕೈಕಾಲ್ಗಳಮಾ-
  ತಾಡುತೆ ಗಬ್ಬದಿ ಪೊರಳ್ದು ಬಿತ್ತಿರೆ ಕನಸಂ |
  ಕಾಡಿಪ ಕಣ್ಪೀರಿಹ ಬಾಯ್
  ತೀಡಿಹ ಕುಡಿಮೈಯದೊಂದು ನಗುತಿರೆ ಮಡಿಲೊಳ್|
  – ಗರ್ಭದಲ್ಲಿರುವ ಮಗುವೊಂದಿಗೆ ಕೈಕಾಲ್ಗಳ ಚಲನದಿಂದಲೇ ಸಂವಹನ. ಪ್ರತಿ ಒದೆತವೂ ತಾಯಿಗೆ ಒಂದು ಹೊಸ ಕನಸಿನ ಗಾಡಿಯ ಕಿಕ್. ಬಸರಿಯ ಕನಸೆಲ್ಲ ಮಗುವಿನದ್ದೇ. ಅದು ಹೇಗೆ ಇದ್ದೀತು, ಕಣ್ಣು, ಬಾಯಿ, ಮೈಯಿ ಇವನ್ನು ಊಹಿಸುವುದೇ ಪ್ರತಿ ಸ್ವಪ್ನದ ಗುರಿ. ಇಲ್ಲಿ ತನ್ನನ್ನೇ ನೋಡುತ್ತಾ ಕಾಡುತ್ತಿರುವ ಕಣ್ಣು, ಆಗತಾನೇ ಹಾಲು ಕುಡಿದಿರುವ ಬಾಯಿ, ಚೆನ್ನಾಗಿ ತೀಡಿದ ಮೈಯಿರುವ ಮಗು ತೊಡೆಯಮೇಲೆ ಮಲಗಿ ನಗುತ್ತಿರುವ ಕನಸು ತಾಯಿಯದ್ದು. ಅದೆಷ್ಟುಬಾರಿ ಈ ಕನಸು ಬೀಳುತ್ತದೋ ತಾಯಿಗೆ?.

  • ನುಡಿಯೇ೦ ಶ್ರೀಶರ ಕ೦ದಮಿ
   ದೊಡಲೇ೦ ಪೆತ್ತಬ್ಬೆಯಾ, ಮಗುಳೆ ಪಾಡಲ್ಕ೦
   ಕಡಲೇ೦ ಕಾವ್ಯಗುಣ೦ಗಳ,
   ಪೆಡಸೇ೦ ಪಾಲ್ಗೆನೆಯೆ ಕಟ್ಟಿದವೊಲಾದುದು ಕೇಳ್

  • ಪದ್ಯಭಾವವೇನೋ ಚೆನ್ನಾಗಿದೆ. ಆದರೆ ಹಳಗನ್ನಡದ ಹದವು ಮತ್ತೂ ಬೇಕಿದೆ.

 8. ರೂಪವಿರಹಿತಮಪ್ಪೊಲುಮೆಯೇ-
  ನೀ ಪರಿ ಘನೀಭವಿಸಿ ನಿ೦ತುದೊ,
  ದೀಪಮೀಕೆಯ ಹಣತೆಯೊಡಲೊಳ್ ಸೊಡರನಪ್ಪಿದುದೊ
  ತಾಪದಿ೦ ನೊ೦ದು ರವಿಯೀ ಗ-
  ರ್ಭೋಪವೇಶವನಾಯ್ದು ನಿ೦ದನೊ,
  ಛಾಪುಗೊ೦ಡಿರೆ ಶಾ೦ತಿತುಷ್ಟಿಯ ಸಿರಿಯು ಮೊಗದೊಳಗೆ

  ಒಡಲಿನಾಳದಿ ರತ್ನಬಹುಳತೆ-
  ಯಡಗಿಯೆಸೆಯಲ್ಕಹುದು ಧನ್ಯತೆ
  ಪೊಡವಿವೆಣ್ಣಿಗೆ, ಜೀವಭಾವದ ಸೋ೦ಕು ಸೋ೦ಕದಲೆ
  ಕಡೆಗದೆ೦ದಿಗು, ಜೀವ ತಾ ಮುಗು-
  ಳೊಡೆಯೆ ಮಗುಳೊ೦ದರಲಿ ನಗೆ ಮುಗು-
  ಳೊಡೆಯೆ ಕ೦ಡದ ಪೊಡವಿಯೊಡೆತನ ನಾಣ್ಚಿ ನೀರಹುದು

 9. ನಿಮಿಷ ನಿಮಿಷಕೂ ಕೇಳೆ “ಜೀವಕ್ಕೆ ಜೀವವನ್ನೆ” ಕೊಡಲು
  ಶಮಿಸದಿರ್ಪನೋವಲ್ಲೆ ಕನವರಿಸೆ ತುಂಬುಬಸುರಿ “ಹ್ಞೂ ಹ್ಞೂ” |
  ತುಮುಲಹೆಚ್ಚಿಸುತ ನಟಿಸಿ ವಿಧಿಯು ಕೇಳಿರಲು ಮತ್ತೆ ಮತ್ತೆ
  ಅಮಿತಬಲವ ಕೂಡಿಸುತ ಹ್ಞೂಂಕರಿಸೆ ಕೊನೆಯ ಶಬ್ದವೆನಲು ||

  – ಹೆರಿಗೆಯ ನೋವು ಸಾವಿನ ಬಾಗಿಲನ್ನು ತೋರಿಸುವಂತಹದ್ದು. ಒಮ್ಮೆ ಶುರುವಾದರೆ ಮತ್ತೆ ಮತ್ತೆ ಬರುತ್ತಾ, ಹೆಚ್ಚಾಗುತ್ತಾ, “ನಿನ್ನ ಜೀವ ಕೊಡುತ್ತೀಯ, ಇನ್ನೊಂದು ಜೀವ ಕೊಡುತ್ತೀನಿ” ಎಂದು ವಿಧಿ ಮತ್ತೆಮತ್ತೆ ಕೇಳುವಂತ ಅನುಭವ. ಪ್ರತಿ ನೋವಿನ ಆವರ್ತದಲ್ಲೂ ನರಳಾಟ ಹೆಚ್ಚುತ್ತಾ ಕಡೆಗೆ ತನ್ನೆಲ್ಲಾ ಶಕ್ತಿಯನ್ನು ಬಿಟ್ಟು, ತನ್ನ ನೋವನ್ನು ತುಸುಗಳಿಗೆ ಮರೆತು, ಕಂದನನ್ನು ತಳ್ಳಲು ತಾಯಿ ಸಿದ್ಧಳಾಗಿದ್ದಾಳೆ. ಎಷ್ಟು ಹ್ಞೂ ಅಂದರೂ ಕೇಳದ ವಿಧಿಗೆ, ತನ್ನೆಲ್ಲಶಕ್ತಿಯನ್ನು ಸೇರಿಸಿ ಗಟ್ಟಿಯಾಗಿ ಮತ್ತು ಕಡೆಯಬಾರಿ ಹ್ಞೂ ಎನ್ನಲು ಸಿದ್ಧಳಾಗಿದ್ದಾಳೆ.

 10. ವಿಷಯಸಮಸ್ತದೊಳಾಂ ಕಿ-
  ಲ್ಬಿಷಮಂ ಹೆಕ್ಕುತೆ ಕುಚೋದ್ಯಗೈದೇನನಿಶಂ!
  ಕಷಮಾಯ್ತಿಂದೀ ವಸ್ತುವು
  ಸುಷಮದಿ ಮೆರೆವೊಂದು ಪದ್ಯಮುಂ ಪ್ರಸವಿಸದೈ||

  • ವ್ಯಾಖ್ಯಾನಮಿರದಿರ್ದೊಡಮೆ೦ತೀ ರ೦ಪಕಾವ್ಯ೦ ತಲೆಯೊಳಗಿಳಿಯುವುದು?!!!

  • I am prone to expound on every topic by picking up some lateral aspect of it. But this profound topic is really challenging. My imagination soars not.

 11. ಎನಿತೊ೦ದುಬ್ಬರಮಪ್ಪ ಭಾವರಸಮ೦ ತಾಳ್ದಿರ್ದು ಕಾವ್ಯೋದ್ಭವ೦
  ಸನಿಹಕ್ಕೈದವೊಲ೦ತುಮೆ೦ತೊ ಮನದೊಳ್ ಮೂಡಿರ್ದ ಚಿತ್ರ೦ ಬಹಿ-
  ರ್ಘನಮಪ್ಪ೦ತೆ ಕಲಾವಿದ೦ಗೆ, ವಿವಿಧಾಕಾರ೦ಗಳ೦ ತೋರ್ದು ಮೈ-
  ಯನುಮಾ೦ತೊಪ್ಪುವ ರಾಗಚಾರಿಗಳವೊಲ್, ಜೀವಾ೦ಕುರಕ್ಕಾದಳಯ್

 12. ನಿಜಾಕಾರ೦ ಮೈದಾಳ್ದೊದಗುವುದೊ ನವ್ಯಾಕೃತಿಯೊಳೇ೦
  ಸ್ವಜೀವ೦ ಜೀವ೦ಗೊ೦ಡು ನವತನುವೊಳ್ ತಾನೆಸೆವುದೇ೦
  ದ್ವಿಜತ್ವ೦ಗೊಳ್ಳಲ್ ಭಾವಗಳೆ ಪೊಸದಾಗುತ್ತುಮೆನುತು೦
  ಸ್ವಜಾತ೦ ಪುತ್ರ೦ ಸ್ವೀಯತೆಗೆ ಮುಕುರ೦ ತಾನೆನುವಳಯ್

 13. ಎಲ್ಲಾ ಅವಧಾನಗಳಲ್ಲಿ ೩ ಗಂಟೆಗಳಷ್ಟು ಸಮಯ ತಮ್ಮ ಚಿತ್ತ ಗರ್ಭವನ್ನು ಹೊತ್ತು ಕಾಯುವವರಿಗಾಗಿ ….

  ಎರಡು ಮತ್ತೆರಡೆ೦ದು ನಾಲ್ಕಾ-
  ಗಿರಲು ಪದಗಳನಲ್ಲಿ ಹರಡುತ
  ನೆರೆದ ಸಭಿಕರ ಮುಂದೆ ಚಿತ್ತವೆ ಗರ್ಭವೆ೦ಬಂತೆ I
  ಬರೆದು ತಂದಿರುವೆನಿದೊಯೆನುತದ-
  ನರೆದರೆದು ಹೇಳುವವಧಾನಿಗೆ
  ತೆರೆದು ಕೊಳ್ಳಲು ಕಾಯ್ವ ಪೃಚ್ಛಕ ವರ್ಗದವರಂತೆ II
  ಅಲ್ಲಿ = ಅವಧಾನ ನಡೆಯುವ ಸ್ಥಳಗಳಲ್ಲಿ . ನಾಲ್ಕು ಪದಗಳು =ದತ್ತಪದಿಗಳು

 14. ಬಂದುವನುಬಂಧದೊಳ್ ಮೇಣ್
  ಚಂದೋಬದ್ಧದೊಳು ಕಂದನಾಗಮ ಗಮನಂ ।
  ಅಂದಗೊಳೆ ಜೀವರಸವಾ-
  ನಂದಮದು ಜರುಗಿರೆ ಗರ್ಭಿಣಿಪರಿಚರ್ಯಂ ।।

  ಮನೆಯಲ್ಲೂ “ಸೀಮಂತ”ದ ಸಂಭ್ರಮ !!

 15. ತುಂಬುತಲೊಡಲಂ ತೋಷಂ,
  ತುಂಬಿತವಳ ಗೇಹಮಂ,ಮನಮನಂಗಗಳಂ ಮೆಲ್ಲಂ,
  ತುಂಬುಪೆರೆಯಂ ಬೆಳಗುತಂ
  ಬಿಂಬಿಪವೊಲ್ಗಗನದೊಳ್,ಭುವನದೊಳ್,ಭಾಸಂ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)