Aug 312015
 

‘ಕಲಿಭೀಮನೆ ಬೆರ್ಚುವಂ ಗಡಾ’ ಎಂಬ ಚಂಪಕ-ಉತ್ಪಲಮಾಲೆಗಳ ಪಾದಾಂತ್ಯಕ್ಕೆ ಹೊಂದುವ ಪೂರಣವನ್ನು ಮಾಡಿರಿ

  87 Responses to “ಪದ್ಯಸಪ್ತಾಹ ೧೬೬: ಪದ್ಯಪೂರಣ”

  1. ಗಾಂಧಾರಿಯು ದುರ್ಯೋಧನನಿಗೆ ಹೇಳಿದ್ದು:
    ಏತಕೊ ಕಾಣೆನಾವಗಮು ನೀಂ ಬೆದರಿರ್ಪೆ ವೃಕೋದರಂಗೆಲೈ
    ಭೀತಿಗೊಳರ್ದೆ ನಿಶ್ಚಯವ ಗೈಯುತೆ ಸಾಧಿಸೆ ಶಕ್ತಿಯನ್ನು ನೀಂ|
    ಜಾತಿಮತಂಗದಾರಕದ ಕೂಡೆ ಹಣಾಹಣೆ ಮಲ್ಲಯುದ್ಧದಿಂ,
    ನೋತು ತದೇಕಚಿತ್ತದಿನೆ ನೀಂ ಕಲಿ, (ಆಗ) ಭೀಮನೆ ಬೆರ್ಚಿಪಂ ಗಡಾ||

  2. ಪುಲ್ಲಿನ ರಾಶಿಯ೦ ನೆಲದ ಭಾರಣೆಯ೦ ಗಣಿಯ ಪ್ರಪಾತಮ೦
    ಜೊಲ್ಲ ಕಡಾಯಿದು೦ಬುವ ತೆರ೦ ಸುರಿಸುತ್ತೆ ಬಹು ಪ್ರತಾಪದಿ೦
    ಸಲ್ಲಲಿತಾ೦ಗಿಕರ್ ನಟನಕೋವಿದಕಾಪುರುಷರ್ ಮಹಾಹಿತರ್ (ಸವರ್ಣದೀರ್ಘಸ೦ಧಿ)
    ಫುಲ್ಲಮಹೋದರಕ್ಕಿಳಿಸಲಾ ಕಲಿಭೀಮನೆ ಬೆರ್ಚುವ೦ ಗಡಾ

    ಫುಲ್ಲಮಹೋದರ – ದೊಡ್ಡದಾಗಿ ಅರಳಿದ ಹೊಟ್ಟೆ 🙂

    • ಬೆರ್ಚಿಪಂ ಎಂದರೆ ಬೆಚ್ಚುವನೆಂದು ಅರ್ಥವಲ್ಲ. ಅಲ್ಲದೆ ವಿಸ್ತರ ಎಂಬುದು ಗ್ರಂಥವಿಸ್ತರಸಂಬಂಧಿತವಾಗಿ ಮಾತ್ರ ಬಳಸಲ್ಪಡಬೇಕಾದ ಪದ. ಉಳಿದಂತೆ ಎಲ್ಲೆಡೆಯಲ್ಲಿಯೂ ಅದು ವಿಸ್ತಾರವೇ.

    • Fine perception

  3. ಬ೦ಡೆಯನು೦ಡನ೦ ಕೆಡಹಿ ಖೂಳ ಹಿಡಿ೦ಬನನೆತ್ತಿ ಮಾಗಧ೦
    ಭ೦ಡತನ೦ಗೊಳಲ್ ಮುರಿದು ಮುಕ್ಕಿಸಿ ಮಣ್ಣ, ಬಕಾನುಜ೦ಗೆ ಮಾ-
    ರ್ತಾ೦ಡಸುತಾಲಯಕ್ಕೆಳಸುವ೦ತನುವಾದ ಗದಾಧರ೦ ಭಲಾ!
    ಪು೦ಡ ಕಪಿಪ್ರಪ೦ಚಕೆಲೆಲೇ ಕಲಿಭೀಮನೆ ಬೆರ್ಚುವ೦ ಗಡಾ!!

    ಸೌಗ೦ಧಿಕಾಹರಣ ಪ್ರಸ೦ಗದಲ್ಲಿ, ಮಾರುವೇಷದ ಹನುಮ೦ತ ಭೀಮನನ್ನು ಬೆದರಿಸಿದಾಗ, ಭೀಮನ ವ್ಯ೦ಗ್ಯದ ನುಡಿಗಳು.

    • ಇಲ್ಲಿಯೂ ಬೆರ್ಚಿಪಂ ಎಂಬುದು ಅಯುಕ್ತವಾಗಿ ಬಳಕೆಯಾಗಿದೆ.

  4. ನಿರ್ಜರಗ೦ಗೆ ಶುದ್ಧಿಯೊಳೆ ನಾಣ್ಚಿರಲಾ ಸ್ವರಶುದ್ಧಿಯಿ೦ದೆ ಮೇ-
    ಣೂರ್ಜಿತವೇಗದೊಳ್ ಗರುಡನೇಗಿದನಾ ಲಯವೇಗದಿ೦ದಮೇ೦
    ಸರ್ಜನಶಕ್ತಿಯೋ! ಗುಡುಗಿನಬ್ಬರಮೇ೦! ಗಮಕ೦ಗಳ೦ಗೊಳಲ್
    ಗರ್ಜನೆ, ಭೀಮಸೇನರವಕ೦ ಕಲಿಭೀಮನೆ ಬೆರ್ಚುವ೦ ಗಡಾ!

    ಪ೦. ಭೀಮಸೇನ ಜೋಶಿಯವರ ಗಾಯನದ ತುಣುಕು ವರ್ಣನೆ… ಅವರ ಸ್ವರಶುದ್ಧಿಗೆ ದೇವಗ೦ಗೆಯೇ ನಾಚುತ್ತಾಳೆ. ಲಯದ ವೇಗಕ್ಕೆ ಗರುಡನೇಗುತ್ತಾನೆ. ಗುಡುಗಿನಬ್ಬರದ ಗಮಕಗರ್ಜನೆಗೆ ಕಲಿಭೀಮನೇ ಬೆಚ್ಚುತ್ತಾನೆ!

    • ಕಲ್ಪನೆ ಚೆನ್ನಾಗಿದೆ. ಶೈಲಿಯೂ ಸೊಗಸಾಗಿದೆ. ಆದರೆ ಬೆರ್ಚಿಪಂ ಎಂದರೆ ಬೆಚ್ಚಿಸುವನೆಂದೇ ಆರ್ಥವಲ್ಲದೆ ಬೆಚ್ಚುವನೆಂದಲ್ಲ!

  5. ಬೆರ್ಚಿಪಂ ಎಂದರೆ ಬೆಚ್ಚಿಸುತ್ತಾನೆ ಎಂದು ತಾನೆ ಅರ್ಥ! ಭೀಮನ ಅನುದಿನದ ಕೆಲಸವೇ ಇದು; ಅಷ್ಟೇಕೆ, ಆತನ ಸ್ವಭಾವವೇ ಇದು: ಭಾಯಯತೀತಿ ಭೀಮಃ ಎಂದಲ್ಲವೇ ಅವನ ಹೆಸರಿನ ನಿರ್ವಚನ! (ಬೆಚ್ಚಿಸುವವನೇ ಭೀಮ). ಹೀಗಾಗಿ ಇಲ್ಲಿ ಸಮಸ್ಯೆಯೇ ಇಲ್ಲ. ಇದು ಕೇವಲ ಪದ್ಯಪೂರಣವೆಂದೇ ತಿಳಿದರೂ ಭೀಮನ ಬೆಚ್ಚಿಸುವಿಕೆಯೆಲ್ಲ ಮಹಾಭಾರತನಿಬದ್ಧವೇ ಆಗಿದ್ದು ಹೊಸಬಗೆಯ ಕಲ್ಪನೆಗೆ ಅವಕಾಶವಿಲ್ಲವೆಂಬಂತಿದೆ. ಆದರೂ ಭೀಮ ಎಂಬ ಹೆಸರುಳ್ಳ ಶಿವನನ್ನು ಆಶ್ರಯಿಸಿ ಪದ್ಯವೊಂದನ್ನು ನಿವೇದಿಸುತ್ತಿದ್ದೇನೆ:

    ಗಿರಿವರಕನ್ಯೆಯಂ ವರಿಸಿ ಮುಗ್ಧಮನೋಹರೆಯಾಕೆಯಂ ಸ್ವಯಂ
    ಸರಸವಿಲಾಸದೊಳ್ ಮೆರೆಯಿಸಲ್ ಸಲೆ ಕೂರ್ತವನಾಗಿಯುಂ ಸದಾ|
    ಕರ-ಭುಜ-ಕಂಠಲಗ್ನಭುಜಗಾವಳಿಯಿಂದೆ ಕಪಾಲಮಾಲೆಯಿಂ-
    ದೆ ರತಿಪತಿಪ್ರಮಂಥನಕಲಾಕಲಿಭೀಮನೆ ಬೆರ್ಚಿಪಂ ಗಡಾ!

    • ಗಣೇಶ್ ಸರ್,

      ಬೆರ್ಚಿಪಂ ಎಂದರೆ ಬೆರ್ಚ್ಚುವಂ ಎಂಬ ಅರ್ಥವನ್ನು ಕೊಡುವುದು ಎನ್ನುವ ಭ್ರಮೆಯಿಂದ ಆದ ದೋಷವಿದು, ದಯವಿಟ್ಟು ಮನ್ನಿಸಬೇಕು

      ಎರಡು ವಿಷಯಗಳಿಗೆ ಧನ್ಯವಾದಗಳು ಸರ್ 🙂
      ೧. ಬೆರ್ಚಿಪಂ ಎಂದಾಗ ಬೆಚ್ಚಿಸುವನು ಎಂದಷ್ಟೇ ಎಂದು ಸ್ಪಷ್ಟೀಕರಿಸಿದ್ದಕ್ಕೆ
      ೨. ಸಮಸ್ಯೆಯಿಲ್ಲದ ಸಾಲಿನಲ್ಲೂ ಭೀಮ ಎಂಬ ಹೆಸರುಳ್ಳ ಶಿವನನ್ನು ಅನ್ವಯಿಸಿ ಚಂದದ ಪದ್ಯ ನೀಡಿದ್ದಕ್ಕೆ

      ಬೆರ್ಚುವಂ ಎಂದು ವಸ್ತುವಿನ ಸಾಲನ್ನು ಸವರಿಸಿದ್ದೇನೆ

      • ಆಹಾ, ನನ್ನ ಪದ್ಯಗಳು ಸಾರ್ಥಕ್ಯವನ್ನು ಹೊ೦ದಿದವು :))

      • ಪಲ್ಲವ|| ಸವರುವುದ ಕೇಳಿಹೆವು ಪದ್ಯವ
        ಸವರುವಿಕೆಯಿಂದಾಯ್ತು ಪ್ರಶ್ನದ
        ಸವರದೆಲೆ ನಮ್ಮೆಲ್ಲ ಪದ್ಯವು
        ಸವಮುಮಾದುದು ಸೋವನೆ 😉 ||

  6. ಸುಲಲಿತಮಾದ ಶಾಂತಸಿತ ಸಾಗರದಿಂ ಪುಟಿದೇಳ್ವ ವೀಚಿಯೋ!
    ಬಲಮಿರದಿರ್ಪ ಕಾನನಮನೆಂದಿಗು ರಕ್ಷಿಪ ದಕ್ಷಸಿಂಹನೋ!
    ನಲುಗುತೆ,ನೀತಿಯೆಂದಿತರ ಪಾಂಡವ ಪುತ್ರರಿರಲ್, ಸಿಟ್ಟಿನಿಂ
    ಖಲ,ರಿಪು, ಕೌರವಾದಿಗಳನೀ ಕಲಿಭೀಮನೆ ಬೆರ್ಚಿಪಂ ಗಡಾ!

    (ಸೋದರರ ಸವರಣೆಯನ್ನು ನೋಡುವ ಮುಂಚಿತವಾಗಿ ಬರೆದದ್ದು 🙂 )

    • ಮೇಡಮ್, ಎರಡನೆ ಸಾಲಿನ ಛ೦ದಸ್ಸು ಬೆಚ್ಚಿದೆ 🙂

    • ಮೇಡಮ್, ಸುಲಲಿತಮಾರ್ದ್ರ ಆಗಬೇಕಲ್ಲವೇ? ಹಾಗೆಯೇ ನಲುಗುತೆ.
      ಇನ್ನು, ಖಲರಿಪು ಎ೦ದರೆ ಒ೦ದು ರೀತಿ ಕೆಟ್ಟವರ ಶತ್ರು, (ಹರಿಯೊ, ಕೃಷ್ಣನೊ) ಎ೦ದು ಗೊ೦ದಲವಾಗುತ್ತದೆ. ಖಲತತಿ ಕೌರವಾದಿ… ಎನ್ನಬಹುದಲ್ಲವೆ?

  7. “ಬೆರ್ಚಿಪಂ” ಬದಲು “ಬೆರ್ಚುವಂ” ಎಂಬುದನ್ನು ತೆಗೆದುಕೊಂಡು ವಿಯೋಗಿನಿಯಲ್ಲಿ ಒಂದು ಪರಿಹಾರ-
    ಬಲಮಿರ್ದೊಡೆ ಬಾಹುಯುಗ್ಮದೊಳ್
    ಕಲಹಕ್ಕೆಯ್ದೊಡೆ ಬಾಣದಿಂ ಖಲಂ
    ಕಲಿಭೀಮನೆ ಬೆರ್ಚುವಂ ಗಡಾ
    ಸಲುವೀ ಗಾಳಿಮಗಂ ಬೆಮರ್ದಪಂ ||
    (ಭೀಮನ ಬಲವಿದ್ದದ್ದು ಅವನ ತೋಳುಗಳಲ್ಲಿ. ಕಲಹಕ್ಕೆ ಖಲನಾದವನು ಬಾಣದಿಂದ ಪ್ರಾರಂಭಿಸಿದಾಗ ಕಲಿಭೀಮನು ಹೆದರಿದ. ಗಾಳಿಯ ಮಗ ಆದರೂ ಬೆವರಿದ)

  8. ಇದೀಗ ತಿದ್ದಲ್ಪಟ್ಟ ಪಾದಾಂಶವನ್ನೇ ಆಧರಿಸಿ ಮಾಡಿದ ಪೂರಣ:

    ಕೌರವಪಾಂಡವೀಯಪಟುಭಂಡನಪೂರ್ವದೆ ಸಂಧಿಗೆಂದು ಸಂ-
    ಸಾರಹಿತಾವಹಂ ತೆರಳುವಂದು ಬಕಾಸುರವೈರಿ ಸಾಮವಿ-
    ಸ್ತಾರಕೆ ಸಾಧುವಾದಮೆಸಗಲ್, ಹರಿ ಕಯ್ಪರೆಗುಟ್ಟಿ ಗೇಲಿಯಿಂ
    ದೂರುವನಿಂತು “ವಹ್ನಿಸುತೆ! ಕಾಣ್! ಕಲಿಭೀಮನೆ ಬೆರ್ಚುವಂ ಗಡಾ!!”
    (ಭಂಡನ = ಯುದ್ಧ, ಸಾಮ = ಸಂಧಿಯ ಒಂದು ವಿಧಾನ, ಕಯ್ಪರೆಗುಟ್ಟಿ = ಚಪ್ಪಾಳೆತಟ್ಟಿ)

    • ಅಯ್ಯೋ, ತು೦ಬ ಚೆನ್ನಾಗಿದೆ ಸರ್ 🙂

      • ಅಯ್ಯೋ ಪಾಪ 🙁

      • ಅಯ್ಯೋ !! ಎಂಬುದದೇಕೆ ಸಂದುದೆಡೆಯೊಳ್ ಶ್ಲಾಘಿಪ್ಪ ಸತ್ಕಾಲದೊಳ್?
        “ಕುಯ್ಯೋ” ಎಂಬುದನಿನ್ನು ಸೊಲ್ಲಿಸರೆ ಪೇಳಿಂ ಹಾದಿರಂಪರ್ ಸ್ವಯಂ??

        • ಸೊಗಸಾಗಿರ್ಪೆಡೆ ಪೇಳ್ವೆವಾವ್ ಭಳಿರೆ ಆಹಾ ಎ೦ದು ಮತ್ತಷ್ಟು ಬಲ್-
          ಸೊಗಸಿರ್ಪಾದೊಡುಸಿರ್ ನಿಲಲ್ಕೆ ನವೆಯಿ೦ದಯ್ಯೋ ಮಹೋದ್ಗಾರಮ೦

        • ಕಯ್ಯಂ ತಟ್ಟುವ ಕೃಷ್ಣಚಿತ್ರಣಮೆನಲ್ ಸಂಸ್ತುತ್ಯಮೀ ಪೂರಣಂ

    • ಅರ್ಥವನ್ನು ನೋಡುವವರೆಗೆ, ಕೌರವಭಂಡನೋ ಪಾಂಡವಭಂಡನೋ ತಿಳಿಯದಾಗಿತ್ತು!

  9. ಫಲ ಪೋಷಣೆಯಿಲ್ಲದಿರ್ದೊಡಂ
    ಹುಲುಮಾನಸರಿರ್ಪರೆಂತುಟೀ
    ತಿಳಿಯಾಗಿಹ ಸನ್ನಿವೇಶದೊಳ್
    ಕಲಿಭೀಮನೆ ಬೆರ್ಚುವಂ ಗಡಾ!
    (ಹೊಟ್ಟೆಗಿಲ್ಲದ ಈ ಸನ್ನಿವೇಶದಲ್ಲಿ ಕಲಿಭೀಮನೇ ಹೆದರುವಾಗ,ಉಳಿದ ಜನ ಹೇಗಿರುವರೋ!)

  10. ಭಾರದ ಚಿತ್ತದಿಂದಳುತೆ ಕೀಚಕನಾಟಮನಿಂತುವರ್ಣಿಸಲ್
    ತೋರುತಲಿರ್ಪಳೈ ಪರೆದ ಸೀರೆಯ ತನ್ನಯ ವಲ್ಲಭಂಗೆ, ತಾಂ
    ಘೋರಸುಧೀರ್ಘನಿದ್ರೆಯೊಳಿರಲ್ಕಲುಕಾಡಿಸುತೆದ್ದು ಬಾರೆನಲ್
    ಮಾರಿಯವೋಲು ಕಾಣುತವಳಂ ಕಲಿಭೀಮನೆ ಬೆರ್ಚುವಂ ಗಡಾ

    • ಚೆನ್ನಾಗಿದೆ ಕಲ್ಪನೆ. ಆದರೆ ಇನ್ನೂ ನಿದ್ದೆಬಿಟ್ಟೇಳದ ಭೀಮನಿಗೆ ಅವಳು ಸೀರೆ ತೋರಿಸುತ್ತಿದ್ದುದು ಸರಿ ಕಾಣುತ್ತಿಲ್ಲ. ಹಾಗೆಯೇ ಬೆರ್ಚುವ೦ ಎ೦ಬುದು ಸಾಮಾನ್ಯ ವರ್ತಮಾನ ಅಥವ ಭವಿಷ್ಯತ್ಕಾಲದ ಬಳಕೆ ಅಲ್ಲವೇ? ಬೆಚ್ಚಿದ ಎ೦ದು ನಿರೂಪಣೆ ಮಾಡಲು ಸರಿಯೆ?

      • ಹೇಗೂ ಶುರುಹಚ್ಕಂಡಿದೀರಿ. ಚೀದಿಯನ್ನು ಪೂರ್ತಿ ನಙ್ಗಾ ಮಾಡಿಬಿಡುವ:
        1) ಘೋರಸುಧೀರ್ಘನಿದ್ರೆಯೊಳಿರಲ್ಕಲುಕಾಡಿಸುತೆದ್ದು ಬಾರೆನಲ್: ಇವಳು ಘೋರನಿದ್ರೆಯೊಳಿರಲ್ಕೆ, ಅವನ್ನು ಏಕೆ ಕಾಡಿಸಿ-ಪೀಡಿಸಿ ಎಬ್ಬಿಸಬೇಕಾಗಿತ್ತು?
        2) ಮಾರಿಯವೋಲು ಕಾಣುತವಳಂ: ಮಾರಿಯು ಅವಳನ್ನು ಕಾಣುವಂತೆ ಭೀಮನು ಅವಳನ್ನು ಕಂಡ, ಎಂದರೆ, ಇಲ್ಲಿ ಮಾರಿಯು ಭೀಮನೆಂದಾಯಿತು!

        • ನೀಲಕಂಠ, ಬೆರ್ಚುವಂ ಎಂಬುದನ್ನು ಚೀದಿ ಬಳಸಿದ ಬಗೆ ಸರಿಯಾಗಿಯೇ ಇದೆ. ಇದು ಭೂತಕಾಲದ ಕಥನಕ್ಕೂ ಹೂಂದುತ್ತದೆ. ಇದಕ್ಕೆ ಮಹಾಕವಿಪ್ರಯೋಗಗಳೇ ಪ್ರಮಾಣ. ಇನ್ನುಳಿದ ನಿಮ್ಮ ಆಕ್ಷೇಪಣೆಗಳು ಸಲ್ಲುತ್ತವೆ.
          ಹಾದಿರಂಪರೇ! ನಿಮ್ಮ ಆಕ್ಷೇಪಗಳು ಹಾಸ್ಯದ್ದಾದರೂ ಚೆನ್ನಾಗಿ ಹೊಂದುತ್ತವೆ. :-೦

    • ಸವರಣೆಗಳಿಗೆ ಧನ್ಯವಾದಗಳು… ರಂಪರೇ, ಏನೂ ಉಳಿಯದ ಹಾಗೆ ಮಾಡಿಬಿಟ್ರಲ್ಲಾ… 😐

  11. ವೈರಿಯ ಸೈನ್ಯಮಂ ಚಣದೆ ಛಿದ್ರಿಸುತಿರ್ದಪನಾ ಘಟೋತ್ಕಚಂ
    ಧೀರನವೊಲ್ ಪುಗಲ್ಕೆ ಛಲದಿಂದಭಿಮನ್ಯುವ ಕಂಡು ಭಾಪೆನು-
    ತ್ತೀರಣರಂಗದೊಳ್ ಕುವರರಾ ಮರಣಂಗಳ ವಾರ್ತೆಯಾಲಿಸಲ್
    ದಾರಿಯೆ ತೋರದಾಯ್ತೆನುತಲಾ ಕಲಿ ಭೀಮನೆ ಬೆರ್ಚುವಂ ಗಡಾ

    • ಆಹಾ! ಚೀದೀ! You have struck gold!!….ತುಂಬ ಸೊಗಸಾದ ಸಂದರ್ಭ, ಸುಂದರವಾದ ರಸಪೂರ್ಣಪದ್ಯ!!! ಅಭಿನಂದನೆಗಳು.

    • From Dr. SLB’s Parva:
      ಒರಗಿರೆ ಘಟೋತ್ಕಚಂ ತಡೆಯದೆಲೆ ಗೋಳಿಟ್ಟನೆನಿತೊ ಕಲಿಭೀಮ ತಾಂ ದುಃಖದಿಂದೆ
      ಗರಿಮೆಯಿಂ ಗಾಂಧರ್ವರೀತಿಯಿಂ ವರಿಸಿ ಸಾಲಕಟಂಕಟಿಯಳಿಂದೆ ಸೂತನವನೈ|
      ಮರಣಿಸಲು ಅಭಿಮನ್ಯು ಅತ್ತನಿನಿತರ್ಜುನಂ ಸಂತೈಸಲಾತನನುಮಾರು ಶಕ್ಯರ್
      ದುರುಪತಿಯ ರೀತಿಯಿಂ ಬೇಸತ್ತು (ಸು)ಭದ್ರೆಯೊಳುವಡೆದ ಸಂತಾನಮಾ ವೀರಾಗ್ರಣಿ||
      ಮಡಿಯೆ ಉಪಪಾಂಡವರುಮಾರು ಕಣ್ಣೀರ್ಗರೆದರ್
      ನಕುಲ ಸಹದೇವ ಧರ್ಮಜರೆ? ಭೀಮಾರ್ಜುನರೆ?
      ತಿಳಿವೆ ಅವರಿಂಗೆ ನಿಜಪುತ್ರನಾರುಮೆಂದುಂ?
      ಹಡೆದ ಕೃಷ್ಣೆಯಳು ಮಾತ್ರಮೆ ಗೋಳುಗರೆದಳ್||

      • ಪದ್ಯದ ಭಾವವೇನೋ ಚೆನ್ನಾಗಿದೆ. ಆದರೆ ಸುಮಾರು ಕಡೆ ವಿಸಂಧಿದೋಷವಾಯಿತಲ್ಲಾ!
        ಈ ವಿರಳಪ್ರಚುರವೃತ್ತದ ಬಳಕೆಗಾಗಿ ಅಭಿನಂದನೆಗಳು. ಆದರೆ ಇಲ್ಲಿಯ ಪೂರ್ವೋತ್ತರಾರ್ಧಗಳಲ್ಲಿ ಸಮತ್ವವಿಲ್ಲ; ಮತ್ತೆ ಪರಿಶೀಲಿಸಿ ನೋಡುವುದು. ಉತ್ತರಾರ್ಧವಂತೂಸೊಗಸಾದ ಮಾತ್ರಾತೇಟಗೀತಿಯೂ ಆಗುತ್ತದೆ. ಪೂರ್ವಾರ್ಧದಲ್ಲಿ ಒಂದು ಗುರುವನ್ನು ತೆಗೆದರೆ ಅದೂ ಹೀಗೆಯೇ ಆಗುವುದು. ಯಾವುದು ಈ ವೀರಾಗ್ರಣಿ ವೃತ್ತದ ಸರಿಯಾದ ಲಕ್ಷಣ? ದಯಮಾಡಿ ತಿಳಿಸಿರಿ.

      • ೧) ‘ವಿರಳಪ್ರಚುರವೃತ್ತ’ ಎಂದಿರಿವಿರಿ. ಯಾವ ವಿಪರೀತದೋಷಗಳನ್ನು ಮಾಡಿ ಈ ’ಅಂಶ’(ಸೀಸ)ವನ್ನು ಯಾವ ’ವೃತ್ತ’ಕ್ಕೆ ಹತ್ತಿರತಂದಿರುವೆ ಎಂಬುದನ್ನು ದಯವಿಟ್ಟು ತಿಳಿಸಿ 🙁
        ೨) ವಿಸಂಧಿಗಳು: ’ಮರಣಿಸಲು ಅಭಿಮನ್ಯು ಅತ್ತನಿನಿತರ್ಜುನಂ’ ಎಂಬುದು ಉಚ್ಚಾರಣೆಯಲ್ಲಿ ’ಮರಣಿಸಲುವಭಿಮನ್ಯುವತ್ತನಿನಿತರ್ಜುನಂ’ ಎಂದಾಗುತ್ತದೆ; ಅಂತೆಯೇ, ’ಮಡಿಯೆ ಉಪಪಾಂಡವರು’ ಎಂಬುದು ’ಮಡಿಯೆ ವುಪಪಾಂಡವರು’ ಎಂದೂ ’ತಿಳಿವೆ ಅವರಿಂಗೆ’ ಎಂಬುದು ’ತಿಳಿವೆಯವರಿಂಗೆ’ ಎಂದಗುತ್ತವೆ ಎಂಬುದು ನನ್ನ ಗ್ರಹಿಕೆ. ದಯವಿಟ್ಟು ವಿಶದಪಡಿಸಿ.
        ೩) ತಮ್ಮ ಸ್ವಂತಪತ್ನಿಯರಲ್ಲಿ ಪಡೆದ ಘಟೋತ್ಕಚ-ಅಭಿಮನ್ಯುಗಳು ಮಡಿದಾಗ ಅನುಕ್ರಮವಾಗಿ ಭೀಮಾರ್ಜುನರು ದುಃಖಿಸಿದರು, ಉಪಪಾಂಡವರಪೈಕಿ ತಮಗೆ ಹುಟ್ಟಿದವರಾರು ಎಂಬ ಸಂದಿಗ್ಧವಿರುವುದರಿಂದ ಯಾವ ಪಾಂಡವನೂ ಅಳಲಿಲ್ಲ, ಅವರೈವರನ್ನೂ ಹೆತ್ತ ದ್ರೌಪದಿಯು ಮಾತ್ರ ಅತ್ತಳು ಎಂಬುದು ಪದ್ಯದ ಭಾವಾರ್ಥ. ’ಪೂರ್ವೋತ್ತರಾರ್ಧಗಳಲ್ಲಿ ಸಮತ್ವವಿಲ್ಲ’ದಿರುವುದಕ್ಕೆ catch ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸಿ.

        • I am very sorry! it is big comedy of errors…:-( I made a mistake in reading the verse. But in spite of my error and confusion, some of observations are true!!! 🙂 What a strange thing to happen!!!!!….. Let me explain it in person.

      • ಮರಣಿಸಲಭಿಮನ್ಯು… ಮಡಿಯಲುಪಪಾ೦ಡವರು…

  12. ಯುಧಿಷ್ಠಿರನಿಗೆ ಧೈರ್ಯ ಹೇಳುವ ಕೃಷ್ಣನ ನುಡಿಗಳು –
    ಗಂಗೆಯಿರಲ್ಕೆ ಶುದ್ಧಿಗೆ ಗವೇಷಣಮನ್ಯಪದಾರ್ಥದಕ್ಕುಮೇಂ ?
    ಸಂಗಮಿರಲ್ಕೆ ಸತ್ಯದ ಭವಾಬ್ಧಿಯ ದಾಂಟಲದೆಂತು ಭೀತಿ ? ಮಾ-
    ತಂಗಸಹಸ್ರಬಲಿ ಭೀಮನಿರಲ್ ಜಯಮೆಂತು ದುರ್ಲಭಂ ?
    ಸಂಗರದಾಣದೊಳ್ ರಿಪುಗಳಂ ಕಲಿಭೀಮನೆ ಬೆರ್ಚಿಪಂ ಗಡಾ !

    • ಪದ್ಯದ ಆಶಯ ಮತ್ತು ಶೈಲಿ ಎಲ್ಲಾ ಚೆನ್ನಾಗಿದೆ. ಆದರೆ ಸ್ವಲ್ಪ ಹಳಗನ್ನಡದ ಪ್ರತ್ಯಯಗಳು ಸೊರಗಿವೆ. ಅಲ್ಲದೆ ಮೂರನೆಯ ಪಾದದ ಮೊದಲಲ್ಲಿ ಛಂದಸ್ಸು ಜಾರಿದೆ. ದಯಮಾಡಿ ಸವರಿಸಿಕೊಳ್ಳಿರಿ.

      • ಧನ್ಯವಾದ ಸರ್.
        ಮೂರನೆಯ ಪಾದ –
        ತಂಗಸಹಸ್ರವಿಕ್ರಮನಿರಲ್ ನಿಮಗಂ ಜಯಮೆಂತು ದುರ್ಲಭಂ ?

  13. ಮೊದಲಿನ ಪದ್ಯ ಪೂರಣಕ್ಕಾಗಿ ಬರೆದದ್ದು

    ಅರಗಿನ ಮಾಡವೊನ್ದರಲಿ ಸಿಲ್ಕಿದ ಐವ್ರ ಸುಕ್ಷೇಮ ಕಂಡವಂ
    ಉರಗಪತಾಕನ್ ಮಾನಿನಿಯ ಮಾನಕೆ ಕೈಯಿಡಲೈದೆ ಭಂಡನಂ
    ಕುರುಪತಿಯಂ ಸರಸ್ಸಿನ ದಡಕ್ಕೊಯ್ದು ಕೊಂದನ್ ಗದಾ ಆಘಾತದಿಂ
    ಮರುತ ತನೂಜನ್ ಕುಂತಿ ಸುತನೈ ಕಲಿಭೀಮನೆ ಬೆರ್ಚಿಪಮ್ ಗಡಾ

    • ಛ೦ದಸ್ಸನ್ನು ಪಾಲಿಸಿಲ್ಲ. ವ್ಯಾಕರಣಶುದ್ಧಿ ಇಲ್ಲ. ಅರ್ಥಸ್ಪಷ್ಟತೆ ಇಲ್ಲ. ಕೆಲ ಕಲ್ಪನೆಗಳೂ ವಾಸ್ತವ ಕಥೆಯಿ೦ದ ದೂರವಾಗಿವೆ.

      • ಸತ್ಯನಾರಾಯಣಮೂರ್ತಿಗಳಿಗೆ ಪದ್ಯಪಾನದ ಸ್ವಾಗತ. ದಯಮಾಡಿ
        ಮಿತ್ರ ನೀಲಕಂಠರು ತಿಳಿಸಿದ ಸವರಣೆಗಳನ್ನು ಮಾಡಿಕೊಳ್ಳಿರಿ. ಮತ್ತೆ ಮತ್ತೆ ಇಲ್ಲಿಯ ಛಂದಸ್ಸಿನ ಪಾಠಗಳನ್ನೂ ಚರ್ಚೆಗಳನ್ನೂಹಳೆಯ ಸಂಚಿಕೆಗಳ ಪದ್ಯ ಮತ್ತು ವಿಮರ್ಶೆಗಳನ್ನೂ ಗಮನಿಸಿರಿ. ಜೊತೆಗೆ ಮಹಾಕವಿಗಳ ಕಾವ್ಯಗಳನ್ನೂ ಕನ್ನಡಕೈಪಿಡಿ ಮುಂತಾದ ಪುಸ್ತಕಗಳನ್ನೂ ಓದಿಕೊಳ್ಳಿರಿ. ಹೀಗೆಯೇ ಬರೆದು ಬರೆದು ಹದವಾಗಬೇಕು:-)

    • You have achieved AdiprAsa. Nevertheless Neelakanth’s observations stand. I will give a practical suggestion from my experience: Forget AdiprAsa for now. Adhere to the other rules viz., AdyakSharaprAsa, gaNagaNita. You will learn effectively and quickly this way. Give it a serious try. You will soon discover that you have graduated to AdiprAsa by default!

  14. ಬೆರಗಿನ ಕಬ್ಬಮೆರ್ಚಿಪುದು ಸತ್ಯಮಲಂಕೃತಮಾಗೆ ಚಂದದಿಂ
    ದೊರೆದಪ ಸತ್ಕವೀಶ್ವರರ ಸಾಲ್ಗಳೊಳೋಘಮುಮಂ, ವೃಕೋಧರಂ
    ಕುರುಜನರಂತ್ಯಮಂ ಬಗೆದ ಪಾಂಗಿನ ಬೀರಮುಮಂ ಮಗುಳ್ದು ಭೀ-
    ಕರಮುಮನೋದೆ ಬಣ್ಣನೆಗಳಿಂ ಕಲಿಭೀಮನೆ ಬೆರ್ಚುವಂ ಗಡಾ

    ತಾನೇ ಹೋರಾಡಿದ ಯುದ್ಧದ ಬಗ್ಗೆ ಕವಿಗಳ ಕಲ್ಪನಾವಿಲಾಸವನ್ನು ಓದಿ ಬೆರಗಾಗಿ ಬೆಚ್ಚಿದ ಭೀಮ

    • aahaaaa, tumba chennaagide 🙂

    • ಆಹಾ! ಸೊಗಸಾದ ಕಲ್ಪನೆ. ಆದರೆ ಚಂಪಕಮಾಲೆಯನ್ನು ನಿರ್ವಹಿಸಲು ಸ್ವಲ್ಪ ತ್ರಾಸವಾದಂತಿದೆ; ಅಲ್ಲಲ್ಲಿ ವೃತ್ತನಿರ್ವಾಹಕ್ಕಾಗಿ ಸ್ವಲ್ಪ ಹೂಸಿಕೆಗಳಿವೆ. ಈ ಹೆಣಗಾಟವು ಇಂಥ ವೃತ್ತನಿರ್ವಾಹದಲ್ಲಿ ಅನಿವಾರ್ಯ. ಪಂಪ-ರನ್ನ-ನಾಗವರ್ಮ-ನಾಗಚಂದ್ರ-ನೇಮಿಚಂದ್ರ-ಷಡಕ್ಷರದೇವ ಮುಂತಾದ ಪೂರ್ವಕವಿಗಳ ಪದ್ಯವ್ಯಾಸಂಗವೇ ಶರಣ್ಯ.

    • ಭೀಮನದನೋದಿದುದು ತನ್ನ ಇಳಿವಯಸಿನಲಿ
      ಕೌಮಾರ್ಯ-ಪ್ರೌಢತ್ವಗಳು ಸಂದಿರಲ್|
      ತೇಮಾನಗೊಂಡಿರಲು ಕಸುವು-ನೆನಪುಗಳಾಗ
      ಸೋಮ ಪೇಳೈ ಮುದುಕ ಬೆಚ್ಚದಿಹನೆ||

  15. ಸೆಳೆಯುತುಮಿರ್ದೊಡಂ ಪ್ರಿಯೆಯ ಶಾಟಿಕೆಯಂ ,ಕರಮಿತ್ತು ಕಾಯದೇ
    ಕೆಲದೊಳೆ ಸಂದು, ಕೋಪಮನವುಂಕಿ ಪಿಡಿರ್ದ ಮಹಾಪ್ರಚಂಡರಂ
    ಸುಲಭದೊಳಾಡುತುಂ ಪ್ರಜೆಗಳೆಂದರಿದಂ”ಛೆ!ಛೆ!ಧರ್ಮನಾಜ್ಞೆಗಂ,
    ಕುಲ,ಸಮುದಾಯಕಂ ಬರಿದೆಯೀ ಕಲಿಭೀಮನೆ ಬೆರ್ಚುವಂ ಗಡಾ!”
    (ದ್ರೌಪದಿಯ ವಸ್ತ್ರಾಪಹರಣದ ಸುದ್ದಿಯನ್ನು ತಿಳಿದ ಜನತೆಯ ಅನಿಸಿಕೆ)

  16. ಸಮನಿಸೆ ತನ್ನೊಳುದ್ಧಟತನಕ್ಕೆ ಹಿಡಿ೦ಬಿ ರತಿಪ್ರಪ೦ಚದೊಳ್
    ರಮಿಸಿದೆನಾಗಳಾ ಸತಿಯೊಳಾ೦ ವನದೊಳ್, ದ್ರುಪದಾತ್ಮಸ೦ಭವೆ
    ಪ್ರಮದೆಯಿವಳ್ ಲತಾ೦ಗಿ ಲತೆ ನಾಣ್ಚುವ ಕೋಮಲತೆ ಪ್ರಮೋದಮೇ೦?
    ಭ್ರಮೆಯಿವಳೊಟ್ಟಿಗಿರ್ಪುದೆನುತು೦ ಕಲಿಭೀಮನೆ ಬೆರ್ಚುವ೦ ಗಡಾ!

    ಭೈರಪ್ಪನವರ ಪರ್ವದಲ್ಲಿ ಹಿಡಿ೦ಬಿ, ದ್ರೌಪದಿಯರ ನಡುವೆ ಭೀಮನ ನಡಾವಳಿಯ ಬಗ್ಗೆ ಬ೦ದಿರುವ ಲಲಿತ ವಿವರಣೆಯನ್ನು ಆಧರಿಸಿ… 🙂

  17. ಸವಿಯನುಣಲ್ಕೊಡಂಬಡುತಲವ್ವೆಯೊಡಂ ತಡಕಾಡುತುಂ ಕಾಡುತುಂ
    ಪವಡಿಸುತುಂ ಪುನಃ ಪುರಿಯುತುಂ *ಮಗರಾಮನು ಪೆರ್ಚುತಿರ್ಪ ಮೇಣ್ !
    ಅವಿರತವುಂ ಕರಂಗಳಿನೆ ತಾಂ ತೊಡೆತಟ್ಟುತೆ ಮಲ್ಲಗಾಳಗಂ
    ಕವಿವೊಡೆ, ತೊಟ್ಟಿಲೊಳ್ ಮಿಸುಕುತುಂ ಕಲಿಭೀಮನೆ ಬೆರ್ಚುವಂ ಗಡಾ !!

    * ಮೊಮ್ಮಗ !!

    • ಆಹಾ, ತಮ್ಮ೦ಥ ಕವಯಿತ್ರಿಯ ಮೊಮ್ಮಗ ತೋಳ್ತಟ್ಟಿ ತೊಡೆತಟ್ಟಿ ಪದ್ಯಪಾದಗಳ ಧಟ್ಟಣೆಯಿ೦ದ ಕವಿತಾರಚನಾದ್ವ೦ದ್ವಯುದ್ಧಕ್ಕೆ ಆಹ್ವಾನವನ್ನಿಟ್ಟರೆ, ಪಾಪ ಆ ಭ೦ಡತನದುದ್ದ೦ಡ ಭೋಳೆ ಭೀಮ ಬೆರ್ಚದಿರ್ಪನೇ?!!

    • ಮೊಮ್ಮಗನಿಂದ ಪದ್ಯಕ್ಕೆ ಒಳ್ಳೆಯ ಸ್ಫೂರ್ತಿ 🙂 ಆದರೆ ಮೊದಲ ಪಾದನ್ಯಾಸ ಸರಿಯಾಗಿ ಆಗಲಿಲ್ಲ ನೋಡಿ 😉

  18. ಅಕುಟಿಲಪಾಂಡುಪುತ್ರಸುಮಪಂಚಕಸೂತ್ರಿತಸೂತ್ರರೂಪೆ ಸಾ
    ತ್ತ್ವಿಕಗುಣಮೂರ್ತಿ ಕೋಪತಿಲಕೇಕ್ಷಣದೋಹದಸಕ್ತವಾಮೆ ಮೌ
    ನಕೃತಿವಿಚಾರಚಾರುಚರಿತಪ್ರಕಟೀಕೃತಭಾವನಾಜಗ
    ದ್ವೃಕಜಠರಪ್ರಿಯಾತ್ಮೆ ನುಡಿಯಲ್ ಕಲಿಭೀಮನೆ ಬೆರ್ಚುವಂ ಗಡಾ||
    (ಬರಿಯ ಶಬ್ದಾಡಂಬರದಿಂದ ಒಂದು ಚಂಪಕಮಾಲೆ-
    ಅಕುಟಿಲರಾದ ಪಾಂಡುಪುತ್ರರೆಂಬ ಹೂವುಗಳನ್ನು ಸೂತ್ರಿಸಿದ ಸೂತ್ರರೂಪೆಯಾದ, ಸಾತ್ತ್ವಿಕಗುಣದ ಮೂರ್ತಿಯಾದ, ಕೋಪವೆಂಬ ತಿಲಕವೃಕ್ಷಕ್ಕೆ ನೋಡುವುದರಲ್ಲೇ ದೋಹದವನ್ನು ಮಾಡುವುದರಲ್ಲಿ ಸಕ್ತಳಾದ ಸುಂದರಿಯಾದ, ಮೌನಕೃತಿಯ ವಿಚಾರದ ನಡತೆಯಿಂದಲೇ ತನ್ನ ಭಾವನಾಜಗತ್ತನ್ನು ಪ್ರಕಟೀಕರಿಸಿದ ವೃಕೋದರನ ಪ್ರಿಯೆ “ನುಡಿದಾಗ” ಕಲಿಭೀಮನೂ ಹೆದರುತ್ತಾನೆ 😉 )

    • ತಮ್ಮ ಈ ಚ೦ಪಕಮಾಲೆಯ೦ತೆಯೇ ಅವಳೂ ನುಡಿದಿರಬೇಕು, ಅದಕ್ಕೆಯೇ ಬೆಚ್ಚಿರುವುದು ಭೀಮ! 🙂

    • real good saabhipraaya-viSESahaNa-s with lot of Ojas….thanks a lot for this wonderful verse. Speacially liked the introduction of dOhada concept here!!!

  19. ಸಲಿಲಮನಂದು ತರ್ಪೆವೆನುತುಂ ತೆರಳಿರ್ಪರನಂತೆ ಶೋಧಿಸ
    ಲ್ಕೆಳಸುತೆ,ತಾನು ಸೋದರರನೀಕ್ಷಿಪೆನೆಂದಡಿಯಿಟ್ಟು ಕಾಡಿನಾ
    ಕೊಳನೆಡೆ ಪೋಗಿ ಬಾರದಿರಲಾ ಕಲಿಭೀಮನೆ,ಬೆರ್ಚುವಂ ಗಡಾ,
    ತಳಮಳಗೊಂಡು ಮೇಣನುಜರಂ ನೆನೆಯುತ್ತೆದೆಗುಂದಿ ಧರ್ಮಜಂ
    (ನೀರನ್ನು ತರಲು ಕೊಳಕ್ಕೆ ತೆರಳಿದವರನ್ನು ಅರಸುತ್ತ ,ಹೋದ ಭೀಮನೂ ಮರಳದಿರಲು, ಧರ್ಮಜನು ಬೆಚ್ಚಿದನು)

  20. ಸಾಗುತೆ ನಾಕಮಂ ತಲುಪಲಣ್ಣನ ಪಿಂತಿರೆ ಪರ್ವತಾಗ್ರದೊಳ್,
    ಬಾಗುತೆ ಸೋಲ್ತು ಬೀಳುತಿರೆ, ಜೀವನದಂತಿಮಕಾಲಮಾಗಿರಲ್,|
    ಮಾಗಿದ ಶೌರ್ಯದಿಂ ರಿಪುಗಳಂ ವಧಿಸಿರ್ದ ಪರಾಕ್ರಮೋನ್ನತಂ ,
    ಕೂಗುತೆ,ಸಾವನೊಲ್ಲದ ಮಹಾಕಲಿಭೀಮನೆ ಬೆರ್ಚುವಂ ಗಡಾ ||

    • Very good verse and still greater idea… kudos!!

      • ಪದ್ಯವ ಮೆಚ್ಚೆ ನೀಂ ಸಲಿಪೆನಳ್ತಿಯ ವಂದನೆಯಂ ವಿನೀತಿಯಿಂ .

  21. ಕೇಳಲು ಪತ್ನಿ ತಾ ಎನೆ ಸುಗಂಧದ ಪುಷ್ಪಮನೀತ ಪೋಗಿರಲ್
    ಬೇಲಿಯವೊಲ್ ಪ್ರವೇಷಮನು ತಾಂ ತಡೆಯುತ್ತಿರೆ ವೃಧ್ಧವಾನರಂ
    ಬಾಲಮನೆತ್ತಲಾಗದಿರಲೀತನೆ ಮಾರುತಿಯೆನ್ನುತಣ್ಣನೀ
    ಜಾಲಮ ನೋಡುತಚ್ಚರಿಯೊಳಿಂ ಕಲಿ ಭೀಮನೆ ಬೆರ್ಚುವಂ ಗಡಾ

  22. ’ಪರ್ವ’ದಲ್ಲಿ ಭೀಮ: ಚಕ್ರವ್ಯೂಹವಂತೆ! ಅವನ ವ್ಯೂಹದಂತೆ ನಾವೇಕೆ ಸಾಗಬೇಕು? ಒಂದು ಕಡೆಯಿಂದ ಚಚ್ಚಿಕೊಂಡುಹೋದರಾಯಿತು.
    ವ್ಯೂಹಮೆ? ನೇಮಮೆ (rules of game)? ಮೇಣಿಂ-
    ದಾಹವದೊಳ್ ವೇರೆ ಧರ್ಮಮೆಯುಳಿದು ಬಿಜಯಂ?
    ಬಾಹುಬಲಮೊಂದೆ ನೇಮಂ
    ಹಾಹಾ! ಚಚ್ಚೆ ಕಲಿಭೀಮ, ಬೆಚ್ಚುವರೆಲ್ಲರ್||
    (samasyApAda rephrased to suit kaMda structure – ಕಲಿಭೀಮ ಬೆಚ್ಚುವ)

    • Hehhee chennagide! !

        • ಏನಿದು ಒ೦ದೇ ಕೈಯಿ೦ದ ನಮಸ್ಕಾರ? ಇಷ್ಟೇಯೋ ನನ್ನ ಮರ್ಯಾದೆ?!! ನಿಮ್ಮ ಮು೦ದಿನ ಪದ್ಯಗಳನ್ನು ಮೆಚ್ಚಬೇಕೋ ಬೇಡವೋ?

        • Palm ಒಂದೇ ಇದೆ. ಆದರೆ armಗಳು ಎರಡು ಇವೆ ಅಲ್ಲವೆ? ನಿಮ್ಮ ಪದ್ಯಗಳಿಗೆ ಚಪ್ಪಾಳೆ ತಟ್ಟಿ ತಟ್ಟಿ ಒಂದು palm ಮುರಿದುಹೋಯಿತು 🙁
          (ವಾಸ್ತವವಾಗಿ, ಅದು ಎಷ್ಟು ಟಂಕಿಸಿದರೂ ಮಾಯವಾಗುತ್ತಿದೆ. ಯಾಕೋ ಗೊತ್ತಿಲ್ಲ.)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)