Sep 142015
 

ಕಲಹಂಸದ ಸಮಸ್ಯೆಯನ್ನು ಪೂರಯಿಸಿ

ನರನಪ್ಪುಗೆಯ್ದ ಸತಿಯಂ ಪತಿ ಕಂಡಂ

  128 Responses to “ಪದ್ಯಸಪ್ತಾಹ ೧೬೮: ಸಮಸ್ಯಾಪೂರಣ”

  1. YAmunAchAryaru heluvante Maduveya sandarbha dalli hennannu modalu Indra devarige, Surya devarige, Varuna devarige kottu maduve maadisuvudu untu. Addarinda Para purusharu parigrahisida taruniyannu pati nodiidantaaguttade embudu Ogatina gUDhArtha.

    • While one has to weave a verse here to supplement the phrase, your explanation holds not so good as the deva’s are not nara’s.

  2. YAmunAchAryaru heluvante Maduveya sandarbha dalli hennannu modalu Indra devarige, Surya devarige, Varuna devarige kottu maduve maadisuvudu untu. Addarinda Maduve yalli gandanu Para purusharu parigrahisida taruniyannu nodiidantaaguttade embudu Ogatina gUDhArtha.

  3. ಮರೆತೊರ್ಮೆಯು೦ ಧರಣಿಯಾತ್ಮಜೆಯನ್ಯ-
    ರ್ಗೆರವಾಗಳೆ೦ದು ತಿಳಿದಿರ್ದು ನಿಜಾಜ್ಞಾ-
    ಪರಿಪಾಲನಕ್ಕೆ ಮನವೀಯುತೆ ವೈಶ್ವಾ-
    ನರನಪ್ಪುಗೈದ ಸತಿಯ೦ ಪತಿ ಕ೦ಡ೦

    ಸೀತೆಯ ಅಗ್ನಿಪರೀಕ್ಷೆ…

    • ಚೆನ್ನಾಗಿದೆ ನೀಲಕಂಠರೆ, ಈ ಕೀಲಕದಿಂದಲೆ ಸಮಸ್ಯೆಯನ್ನು ಮೊದಲಬಾರಿಗೆ ಯೋಚಿಸಿದ್ದು 🙂

  4. ಮರೆಯಲ್ಕೆ ಕಷ್ಟಮೆನುತುಂ,ಗತಿಸಿರ್ಪಾ
    ವರಕಾಲಮಂ,ವಿರಹವೇದನೆಯಿಂದಂ
    ಮರುಗುತ್ತುಮಂತೆ ,ಕನಸೊಳ್ನಲವಿಂ ಚಿ
    ನ್ನರನಪ್ಪುಗೈದ ಸತಿಯಂ ಪತಿ ಕಂಡಂ

    (ಮಡಿದ ಪತ್ನಿಯು, ಚಿನ್ನರನ್ನು(ಮಕ್ಕಳನ್ನು) ಪ್ರೀತಿಯಿಂದ ಅಪ್ಪಿಕೊಂಡಿದ್ದನ್ನು ಕನಸಿನ್ನಲ್ಲಿ ಕಂಡನು)

    • ಚೆನ್ನಾಗಿದೆ ಕಾಂಚನಾ.ವಿರಹವೇಧನೆಯು ವಿರಹವೇದನೆಯೆಂದಾಗಬೇಕು.

      • ಅದು ಬರಿಯ ವೇದನೆಯಾಗಿರಲಿಲ್ಲ, ವೇಧನೆಯಾಗಿತ್ತು ಎಂಬುದು ಅವರ ಮತ!

    • ಬಹಳ ಚೆನ್ನಾಗಿದೆ

  5. ಮರದೊಳ್ ಸವಾರಿಯನೆ ಮಾಡುತುಮಾಡಲ್,
    ಧರೆಗಂ ಬಿಳಲ್,ನೆಗೆಯೆ ಚಂಗನೆ ಮಂಗಂ,|
    ತರಕಾರಿಯಂ ತಿನಿಸಿ ಮುದ್ದಿಸಲಾ, ವಾ-
    ನರನಪ್ಪುಗೈದ ಸತಿಯಂ ಪತಿ ಕಂಡಂ ||

  6. ಪರಮಮಂಗಳಕರ ವರಸುಮುಹೂರ್ತದೊಳ್
    ಸುರರಮರೇಂದ್ರರ ಮಧ್ಯದೊಳಿಂದ ಶುಚಿ-
    ವರಸಂಜಾತ ನಿಜಸುತ ಭಕ್ತಜನಹಿತ
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ

    ರಾಮ ಪಟ್ಟಾಭಿಷೇಕದ ಶುಭ ಸಂದರ್ಭದಲ್ಲಿ ಸ್ವರ್ಗದಲ್ಲಿದ್ದ ದಶರಥನು “ನರ”ವ್ಯಾಘ್ರ ರಾಮನನ್ನು ಅಪ್ಪಿಹರಸಿದ ಕೌಸಲ್ಯೆಯ ಸಂತೋಷವನ್ನು ನೋಡಿ ಕೊನೆಗೂ ಸಮಾದಾನ ಹೊಂದಿರಬೇಕು.

    • ದಿಲೀಪರೆ, ಛಂದಸ್ಸು ತಪ್ಪದೆ.. ದಯವಿಟ್ಟು ಸವರಿಸಿ

    • ಪದ್ಯಪಾನದ ಪರವಾಗಿ ದಿಲೀಪಭಟ್ಟರಿಗೆ ಹಾರ್ದಿಕಸ್ವಾಗತ. ದಯಮಾಡಿ ಛಂದಸ್ಸಿನ ಪ್ರಾಥಮಿಕಪಾಠಗಳನ್ನು ಚೆನ್ನಾಗಿ ಮನನಿಸಿಕೊಂಡು ಪದ್ಯರಚನೆಯನ್ನು ಮಾಡಿರಿ.

    • ಪಾನಗೋಷ್ಠಿಗೆ ಸ್ವಾಗತ ದಿಲೀಪರೆ.
      ನರನಪ್ಪುಗೆಯ್ದ = ನರನು+ಅಪ್ಪುಗೆಯ್ದ ಎಂದಾಗುತ್ತದೆ. (ರಾಮ/)ನರ’ನನ್ನು’ ಎಂದಾಗದು. ಈವರೆಗೆ ಸಂದಿರುವ ಪರಿಹಾರಗಳನ್ನು ಗಮನಿಸಿ: ವೈಶ್ವಾನರನು ಮತ್ತು ವಾನರನು; ಚಿನ್ನರನು ಎಂಬಲ್ಲಿ ’ನರ’ ಎಂಬ entity ಇಲ್ಲ.
      ನಿಮ್ಮ ಪದ್ಯಕ್ಕೆ ನೀವು ನೀಡಿರುವ ’ರಾಮನನ್ನು ಅಪ್ಪಿಹರಸಿದ ಕೌಸಲ್ಯೆ’ ಎಂಬ ವ್ಯಾಖ್ಯೆಗೆ ತದ್ವಿರುದ್ಧವಾಗಿ ’ರಾಮನು ಅಪ್ಪಿಹಿಡಿದ ತನ್ನ (ದಶರಥನ) ಕೌಸಲ್ಯೆಯನ್ನು ಕಂಡ’ ಎಂದು ಗ್ರಹಿಸಿ ಹೀಗೆ ತಿದ್ದಬಹುದು:
      ವರಮಂಗಳಾವಸರದೊಳ್ ಸುತರಾಮಂ
      ಧರೆಗೆಲ್ಲ ರಾಜನೆನುತುಂ ಮೆರೆದಾಗಳ್|
      ಸುರಲೋಕದಿಂ ದಶರಥಂ ನಿಜಸಾಮ್ರಾ-
      ಟ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

      • ನನ್ನ ಕೆಲಸವನ್ನು ಹಗುರಾಗಿಸಿದ ಪ್ರಸಾದರಿಗೆ ಧನ್ಯವಾದಗಳು.

        • ಧನ್ಯವಾದಗಳು. ಪದವಿಟ್ಟಳುಪೀ ಅಳುಪೀ ದಾಪುಗಾಲಿಡುವುದಕ್ಕೂ ತಡವರಿಸುತಿರುವ ನನಗೆ, ನಿಮ್ಮೆಲ್ಲರ comments ಆನಂದ ವರ್ಧಿಸಿದ ದಾರಿದೀಪ.

  7. ವರಿಸಿರ್ಪೊಡಂ ನಟನತಾರೆಯನೊಳ್ಪಿಂ,
    ಪರಿಭಾವಿಸುತ್ತುಮೊಳಿತಂ, ಕಲೆಯಂ ಮೇಣ್
    ಪರಿಪೋಷಿಸುತ್ತೆ, ತೆರೆಯೊಳ್ ನಲವಿಂದಂ
    ನರನಪ್ಪುಗೈದ ಸತಿಯಂ ಪತಿ ಕಂಡಂ

    • ಚೆನ್ನಾಗಿದೆ ಕಾಂಚನಾ. “ತೆರೆಯೊಳ್ಗೊಲವಿಂದೇ” ಎಂಬುದನ್ನು” ತೆರೆಯೊಳ್ ನಲವಿಂದಂ “ಎಂದು ಸವರಿದರೆ ಒಳಿತು.

    • ತೆರೆಯಲ್ಲಿ ಎನ್ನುವ ಪೂರಣ ಚೆನ್ನಾಗಿದೆ 🙂

  8. ಹರನಿ೦ ನೆಗಳ್ದ ಶರಮ೦ ಪಡೆದೀಗಳ್
    ಬರುತಗ್ರದೊಳ್ ನಿಜಪದಕ್ಕೆರಗುತ್ತು೦
    ಸಿರಿ ಸಿಕ್ಕ ಹರ್ಷಮನೆ ತೋರುತೆ ನಿ೦ತಾ
    ನರನಪ್ಪುಗೈದ ಸತಿಯ೦ ಪತಿ ಕ೦ಡ೦

    ಪಾಶುಪತವನ್ನು ಪಡೆದು ಬ೦ದ ನರ (ಪಾರ್ಥ) ನನ್ನು ಅಪ್ಪಿದ ದ್ರೌಪದಿಯನ್ನು ಯುಧಿಷ್ಠಿರನು ಕ೦ಡನು.

    • ನೀಲಕಂಠರೆ, ಒಂದು ಸಂದೇಹ. ಸಮಸ್ಯಾಪಾದವು” ನರನ್ ಅಪ್ಪುಗೈದ ಸತಿಯಂ .. ” ಎಂದಲ್ಲವೆ? ” ನರನ ಅಪ್ಪುಗೈದ ಸತಿಯಂ .. ” ಎಂದೂ ಆಗುವುದೆ ? ಹಾಗಿದ್ದಲ್ಲಿ ಅದು “ನರನನಪ್ಪುಗೈದ ಸತಿಯಂ.. ” ಎಂದಿರಬೇಕಿತ್ತಲ್ಲವೆ?

      • Madam, I believe this is fine with vibhakti-pallata. You may please have to confirm. Otherwise, can we take “narana appu” as a kriyaa-naama?
        Even if you take it as naram appugaida, it holds here, as “nintaa naram appugaida satiyam…” etc.

      • ಶಕುಂತಲಾ ಅವರ ಪ್ರಶ್ನೆ ಸಮಂಜಸವಾಗಿದೆ. ಆದರೆ ನೀಲಕಂಠರ ಪದ್ಯದಲ್ಲಿಯೂ ಯಾವುದೇ ದೋಷವಿಲ್ಲ. ಅವರ ಗದ್ಯದಲ್ಲಿರುವ ವಿವರಣೆಯಿಂದಾಗಿ ಪ್ರಾಯಶಃ ಇಂಥ ಸಂಶಯವು ಮೂಡಿರಬಹುದು.

        • ಸಂದೇಹನಿವಾರಣೆಗಾಗಿ ಧನ್ಯವಾದಗಳು ಸಹೋದರರೆ. ನನ್ನ ಸಂಶಯವು ಗದ್ಯದ ವಿವರಣೆಯಿಂದಾಗಿಯೇ ಮೂಡಿದ್ದು.

    • ಚೆನ್ನಾಗಿದೆ, ಇದೇ ಪದ್ಯವನ್ನ ನಾಲ್ಕು ಬಾರಿ ಹೇಳಿ, ನಾಲ್ಕು ಪೂರಣ ಕೊಟ್ಟೆ ಎಂದರೂ ಒಪ್ಪುವಂತಿದೆ 😉

  9. ಪರಡಿರ್ದ ವಾರ್ತೆಗಳನಾಲಿಸುತಂತೇ
    ನರನಪ್ಪುಗೈದ ಸತಿಯಂ ಪತಿ ಕಂಡಂ!
    ವಿರಸಂ ತೊಡಂಗಲವರೊಳ್,ಸುಖದಾಂಪ
    ತ್ಯರಸಾಲಮೇಂ?ಕಡಿದುದಾಗಳೆ ಬಂಧಂ!

    • ಒಳ್ಳೆಯ ಅಭಿರಾಮಪೂರಣ! ಅಭಿನಂದನೆಗಳು

    • ಚೆನ್ನಾಗಿದೆ, ಈ ರೀತಿಯದು ಒಂದು ಪೂರಣ ಬರುವುದೆಂಬ ಬರವಸೆಯಿತ್ತು 🙂

  10. ಸುರಲೋಕಮಂ ವರಕವೀಶ್ವನಯ್ದಲ-
    ಲ್ತ್ವರೆಯಿಂದೆ ವಾಣಿಯೆಡೆ ಧಾವಿಸೆ ಕಣ್ಣೀರ್
    ಪರಿಯಲ್ಕೆ ಮಾತೆ ಸೆಳೆದಳ್ ನಲಿವಿಂದಂ
    ನರನಪ್ಪುಗೈದ ಸತಿಯಂ ಪತಿ ಕಂಡಂ

    ಕಾಳಿದಾಸ ಸರಸ್ವತಿಯನ್ನು ಸ್ವರ್ಗದಲ್ಲಿ ಮೊದಲ ಬಾರಿ ಕಂಡಾಗ

    • aaha, chennagide kalpane!! bhoomiyalliyee aa mahaanubhaava saraswatiyannu eshtu baari kandiddano! 🙂

    • ಸೋಮರೆ, “ವರಕವೀಶ್ವರ”- “ವರಕವೀಶ್ವರಂ ” ಆಗಬೇಕಾದಲ್ಲಿ ಛಂದಸ್ಸು ಕೆಡುವುದು

    • ಇದನ್ನು “ಸುರಲೋಕಮಂ ವರಕವೀಶ್ವರನಯ್ದಲ್…………” ಎಂದು ಸವರಿಸಬಹುದು.

      • ಧನ್ಯವಾದಗಳು ಗಣೇಶ್ ಸರ್, ನೀಲಕಂಠ, ಶಕುಂತಲಾ ಅವರೆ,
        ಸವರಿಸಿದ್ದೇನೆ

  11. ಸುರಲೋಕದೊಳ್ ಸುಧೆಯ ಪೀರ್ದವೊಲೆಲ್ಲುಂ
    ಮೆರೆಯುತ್ತಲಿರ್ಪ ಪುರುಷರ್ಕಳು ಮೋಜಿಂ
    ದಿರಲೊರ್ವಳಳ್ಕದೆಯೆ ಬಾರೆನುತುಂ ಕಿ-
    ನ್ನರನಪ್ಪುಗೈದ ಸತಿಯಂ ಪತಿ ಕಂಡಂ

  12. ಮೂಲತಃ ಈ ಸಮಸ್ಯೆಯನ್ನು ಸೋಮಶೇಖರಶರ್ಮಾ ನನ್ನ ಶತಾವಧಾನದಲ್ಲಿ ಒಡ್ಡಿದ್ದು. ಇದಕ್ಕೆ ಆತನು ಮಾಡಿಕೊಂಡ ಪರಿಹಾರದ ಹಾದಿಯನ್ನೇ ಸ್ವಪ್ರತಿಭೆಯಿಂದ ನೀಲಕಂಠರೂ ಹಿಡಿದಿದ್ದಾರೆ(ವೈಶ್ವಾ-ನರ….). ನಾನು ಅಂದಿನ ಅವಧಾನದಲ್ಲಿ ಪೂರಯ್ಸಿದ ಪರಿಯನ್ನೇ ಸೋದರಿ ಶಕುಂತಲಾ ಅವರು ತಮ್ಮ ಕಲ್ಪನೆಯಿಂದ ಕಂಡು ಪರಿಹಾರವನ್ನು ನೀಡಿದ್ದಾರೆ (ವಾ-ನರ……). ಇದಲ್ಲದೆ ನೀಲಕಂಠ, ಕಾಂಚನಾ(ಇವರ ಬಗೆಬಗೆಯ ಪೂರಣಗಳು ತುಂಬ ಸೊಗಸಾಗಿವೆ; ಮುಖ್ಯವಾಗಿ “ಚಿನ್-ನರ……” ಬಲು ಚೆನ್ನಾಗಿದೆ), ಚೀದೀ, ಸೋಮರೆಲ್ಲ ಬಹುರಮಣೀಯಪೂರಣಗಳನ್ನು ನೀಡಿ ನನ್ನ ಪಾಲಿಗೆ ಏನನ್ನೂ ಉಳಿಯದಂತೆ ಮಾಡಿದ್ದಾರೆ! ಹಾರ್ದಿಕಾಭಿನಂದನೆಗಳು
    ವಿಭಕ್ತಿಪಲ್ಲಟವು ಅಂಗೀಕೃತವೇ ಆದರೂ ಮುಖ್ಯಾರ್ಥಕ್ಕೆ ಬಾಧೆಯು ಬರದಂತಿದ್ದಲ್ಲಿ ಒಳಿತು.
    ಅಲ್ಲದೆ ಹಳಗನ್ನಡದಲ್ಲಿ ಬಿಂದುರಹಿತವಾದ ದ್ವಿತೀಯವಿಭಕ್ತಿ ಸರಿಯಾಗದು.

    • ಮೆಚ್ಚುಗೆಗೆ ಹಾಗು ವಿವರಣೆಗೆ ಧನ್ಯವಾದಗಳು ಸರ್.

    • ಧನ್ಯವಾದಗಳು 🙂

    • ಶತಾವಧಾನದಲ್ಲಿ ಗಣೇಶರು ಮಾಡಿದ ಪರಿಹಾರ ಹೀಗಿದೆ-
      ವರಣೀಯಮಪ್ಪ ವನದೊಳ್ ನಲವಿಂದಂ
      ತಿರುಗುತ್ತಲಲ್ಲಿ ತರುಗುಲ್ಮಲತಾಂತ
      ಸ್ಥಿರಮಪ್ಪುದಂ ಕೆಣಕೆ ಕೋಡಮನಾ ವಾ-
      ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||
      (ಸತಿ-ಪತಿಗಳು ವನವಿಹಾರ ಮಾಡುತ್ತಿದ್ದರು. ಆಗ ಹೆಂಡತಿಯು ಪೊದೆಗಳ ನಡುವೆ ಹುದುಗಿದ್ದ ಕಪಿಯೊಂದನ್ನು ಕೆಣಕಿದಳು. ಕಂಗೆಟ್ಟ ಮಂಗ ಅವಳನ್ನು ಅಪ್ಪಿ ಹಿಡಿಯಿತು. ಈ ದೃಶ್ಯವನ್ನು ಪತಿ ಕಂಡನೆಂಬುದಾಗಿ ಪರಿಹಾರ)

    • ಗಣೇಶ್ ಸರ್, ಈ ಸಮಸ್ಯೆಯನ್ನು ಕೊಡುವಾಗ ಶತಾವಧಾನದ ಸಂಭ್ರಮ ನೆನಪಿಗೆ ಬಂತು, ಅಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ನನ್ನ ಇಡೀ ಜೀವನದಲ್ಲಿ ಒಂದು ಮಹತ್ತರವಾದ ಘಟನೆ. ಆ ಮೂರು ದಿನಗಳು ಮೂರು ನಿಮಿಷದಂತೆ ಕಳೆದೆ, ಶತಾವಧಾನ ಮುಗಿದಾಗ ಅಯ್ಯೋ ಮುಗಿದೇ ಹೋಯಿತಲ್ಲ ಎನಿಸಿತ್ತು. ಪೃಚ್ಛಕ, ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಜಯಭೇರಿಯನ್ನು ಬಾರಿಸಿದಿರಿ, ಆಶು, ಸಮಸ್ಯೆ, ದತ್ತಪದಿ, ಚಿತ್ರ, ಸಂಖ್ಯೆ, ಅಪ್ರಸ್ತುತವನ್ನು ನೀವು ಎದುರುಸಿದ ರೀತಿ ಮೈ ನವಿರೇಳುವಂತೆ ಮಾಡುತ್ತದೆ.
      (ಸೇಡಿಯಾಪ್ಪು ಅವರ ಕೃತಿ) ಕಾವ್ಯವಾಚನವನ್ನು ಪೂರಣ ಮಾಡಿದ ಓಘಕ್ಕೆ ಎಲ್ಲರೂ ಎದ್ದು ನಿಂತು ನಿಮಿಷಗಟ್ಟಲೆ ಕರತಾಡನ ಮಾಡಿದ್ದು… ಶತಾವಧಾನ ಸಂಪೂರ್ಣವಾದಾಗ ಪುಷ್ಪವೃಷ್ಟಿ, ಅದೆಷ್ಟು ಜನರ ಕಣ್ಣಿನಲ್ಲಿ ಆನಂದಬಾಷ್ಪ… ಕಾರ್ಯಕ್ರಮಮುಗಿದು ಘಂಟೆಯಾದರೂ ಕಿಕ್ಕಿರಿದು ನೆರೆದ ಪ್ರೇಕ್ಷಕರು…

      ಮತ್ತೆ ಈ ಅವಕಾಶವನ್ನು ನಮಗೆ ಕರುಣಿಸಬೇಕು ನೀವು ಸರ್ 🙂

      • ಪ್ರಿಯ ಸೋಮಾ! ನಿಜಸೌಹೃದಪ್ರಕಟಿತಪ್ರೇಮಾದರಾರಾಮ! ವಿ-
        ಸ್ಮಯಭೂಮಾನುಭವಪ್ರಭಾವರಸಿಕಸ್ಥೇಮಾ! ಸ್ವಧಾಮಾರ್ಜಿತಾ-
        ದ್ವಯಧೀಮಾನ! ಕೃತಜ್ಞತಾಂಜಲಿಯಿದೋ ಕೊಳ್ಳಯ್! ಭವತ್ಸನಿಭೋ-
        ಚ್ಛ್ರಯಸನ್ಮಿತ್ರರಿರಲ್ಕೆ ಕಷ್ಟಕರಮೇಂ? ನಾನಾವಧಾನಂಗಳುಂ?

        ನಾಲ್ಕೈದು ದಿನಗಳ ಅವಧಿಯಲ್ಲಿ ಅಡಕವಾಗುವಂತೆ “ಸಹಸ್ರಧಾರೆ” ಎಂಬ ಸಾವಿರ ಪದ್ಯಗಳ ಸಾಹಸವನ್ನು ಹೀಗೆಯೇ ನಾನಾಶಾಸ್ತ್ರ-ಕಲಾ-ವಿದ್ಯಾವಿನೋದಗಳೊಡನೆ ಮಾಡಬೇಕೆಂಬ ಆಶಯವಿದೆ.
        ಅದು ಭಗವದಿಚ್ಛೆಯೂ ಆಗಿದ್ದಲ್ಲಿ ನೆರವೇರುವುದು. ಇಲ್ಲವಾದಲ್ಲಿ ಬೇಸರವೇನಿಲ್ಲ. ನಾವೆಲ್ಲ ಒಟ್ಟಾಗಿ ಸೇರಿ ಮಾಡಿಕೊಳ್ಳುವ ಆಶುಕಾವ್ಯಗೋಷ್ಠಿಯು ನನಗೆ ಅಷ್ಟೇ ಸಂತಸವನ್ನೀಯುತ್ತದೆ. ನಿನ್ನಂಥ ಕಾವ್ಯರಸಿಕರೂ ಜೀವನರಸಜ್ಞರೂ ಆದ ಸನ್ಮಿತ್ರರೊಡನೆ ಸಾಗಿಸುವ ಎಂಥ ವಿದ್ಯಾವಿನೋದಗೋಷ್ಠಿಯಾಗಲಿ ಸೊಗಸೇ. ಸತ್ಕಾವ್ಯ-ಕಲೆ-ಸ್ನೇಹ-ಸ್ವಾರಸ್ಯಗಳೇ ನನ್ನ ಬಾಳಿನ ಭಾಗ್ಯ. ಇದಕ್ಕಿಂತ ಮೋಕ್ಷವೂ ಮಿಗಿಲಲ್ಲವೇನೋ? ಅಥವಾ ನನ್ನ ಯೋಗ್ಯತೆಗೆ ಇದೇ ಸಾಕೇನೋ!

        • ಒಳ್ಳೆಯದು ಸರ್ ಗೋಷ್ಠಿಯಲ್ಲಿ “ಸಹಸ್ರಧಾರೆ”ಯ ಬಗ್ಗೆ ಮಾತಾಡೋಣ ಸರ್ 🙂

        • ಈಟೇನೆ ಕಣ್ರೆನ್ನ ಪಾಟವವೆಂಬಿರಿ,
          ಕೋಟಿಗೊಬ್ಬರು ನೀಮೆಂಬುವುದ| ಬಲ್ಲೆವು
          ಸಾಟಿ ಯಾರುಂಟೋ ನಿಮಗಯ್ಯ||

          “ಇದೇ ಸಾಕೇನೋ” ಅಂದ್ರ?
          ಆಟಿಸಿದಂಗೆ ನೀ ಮೀಟಿದೆವ್ ನಾಮೆಲ್ಲ
          ನಾಟದೆ ಓಗಿ ಪಾಠಗಳು| ಹಿಂದ್ಬಿದ್ದಿ
          ಖೋಟವಾಗೆಲ್ರೂ ನಿಂತೋದೋ||

  13. ಇರಲೀ ನಿಜಾನುಜರ ರೂಪಗಳೊಂದೇ
    ಬರಲತ್ತ ಮೈದುನನೆ ತನ್ನವನೆಂದೀ
    ನರನಪ್ಪುಗೈದ ಸತಿಯಂ ಪತಿ ಕಂಡಂ
    ಮರೆಯಿಂದ ಘೊಳ್ಳನುತೆ ತಾಂ ನಗುತಿರ್ಪಂ

    • ತುಂಬ ವಿನೋದಾತ್ಮಕವಾದ ಸೊಗಸಾದ ಪರಿಹಾರ, ಚೀದಿಯವರೆ. ‘…. ನಿಜಾನುಜರ ರೂಪಗಳೊಂದೇ” ಎಂಬಲ್ಲಿ”… ರೂಪಂಗಳ್….”,ಯುಕ್ತವಾದುದು. ಆದರೆ ಛಂದಸ್ಸಿಗಾಗಿ “…. ನಿಜಾನುಜರ ರೂಪದೆ ಸಾಮ್ಯಂ ” ಎಂಬುದಾಗಿ ಸವರಬಹುದು. ಮರೆಯಿಂದ- ಮರೆಯಿಂದೆ ಆದರೆ ಒಳಿತು. ( ಸಹೋದರರಿಬ್ಬರಿಗೂ 24/7, ಗುರುತಿನ ಚೀಟಿಯ ಧಾರಣೆಯನ್ನುಕಡ್ಡಾಯವಾಗಿಸಿದರೆ ಇಂತಹ ಸಮಸ್ಯೆ ಸಂಭವಿಸದಾದರೂ, ಪದ್ಯಪಾನದ ಸದ್ಯದ ಸಮಸ್ಯಾಪೂರಣವು ಈ ರೀತಿಯಲ್ಲಿ ಆಗಲಾರದು 🙂 )

      • ಪೂರಣ ಬಲುಸೊಗಸಾಗಿದೆ. ಅಭಿನಂದನೆಗಳು. ಅಂತೆಯೇ ಸವರಣೆಯೂ ಸರಿಯಾಗಿದೆ.ಶಕುಂತಲಾ ಅವರಿಗೆ ಧನ್ಯವಾದ.

    • ಚೆನ್ನಾಗಿದೆ ಚೀದಿ

  14. ನರನಪ್ಪುಗೈದ ಸತಿಯಂ ಪತಿ ಕಂಡಂ-
    ಬರಮೇ ಕೆಳಕ್ಕಿಳಿದವೊಲ್ ಮಿಡುಕುತ್ತುಂ
    ಬರೆ,ಪುತ್ರನಾಗಮನದಿಂ ನಲವುಂಡಾ
    ವರಮಾತೆಯೊಳ್ ಬಗೆಯನೇ ಬೆಸೆದಂ ತಾಂ!

    • ನಿಜಕ್ಕೂ ತುಂಬ ಸೊಗಸಾಗಿದೆ. ಇಂತಹ ಹಲವು ಸಾದ್ಯತೆಗಳು ನಿಮಗೆ ಹೊಳೆಯುತ್ತಿರುವುದು ತುಂಬ ಸಂತೋಷ. ಧನ್ಯವಾದಗಳು ಕಾಂಚನಾ.

      • ಧನ್ಯವಾದ ಹಾಗೂ ಎಲ್ಲರಿಗೆ ಹಬ್ಬದ ಶುಭಾಶಯಗಳು.
        ಇನ್ನೊಂದು ಪೂರಣ(ಹೊಸ ಜಗತ್ತಿನದು 🙂 )

        ನೆರೆದಿರ್ದ ಕೂಟದೊಳೆ ದಂಪತಿಯರ್ ತಾಮ್
        ಪರಿಪಾಟದಿಂ ಕೆಳೆಯರೊಳ್ ಕುಸಿವೊಂದಲ್
        ನರನಪ್ಪುಗೈದ ಸತಿಯಂ ಪತಿ ಕಂಡಂ,
        ಹುರುಪಿಂದೆ ನೇಹಕೆನೆ ಕೈಬೆಸೆಸುತ್ತಂ

        • ಚೆನ್ನಾಗಿದೆ.ಕೆಲವು ಸವರಣೆಗಳನ್ನು ಮಾಡಿದ್ದೇನೆ. ತಿಳಿದವರಿಂದ ತಪ್ಪೊಪ್ಪುಗಳನ್ನು ಅರಿಯಿರಿ.

          “ತೆರಳಿರ್ದ ಕೂಟದೊಳೆ ದಂಪತಿಯರ್ ತಾವ್”- ” ನೆರೆದಿರ್ದ ಕೂಟದೊಳೆ ದಂಪತಿಯರ್ ತಾಮ್ ”
          “ಪರಿಪಾಠದೊಲ್ ಕೆಳೆಯರೊಳ್ ಮುದಮಾಡಲ್”- “ಪರಿಪಾಠದಿಂ ಕೆಳೆಯರೊಳ್ ಕುಸಿವೊಂದಲ್”
          “ಹುರುಪಿಂದೆ ನೇಹಕೆನೆ ಕೈಬೆಸೆದುಂ ತಾನ್”- “ಹುರುಪಿಂದೆ ನೇಹಕೆನೆ ಕೈಬೆಸೆಯಲ್ ತಾನ್”

          • ಕಾಂಚನಾ ಅವರು ತುಂಬ ಒಳ್ಳೆಯ ಪೂರಣಗಳನ್ನು ಕೂಡುತ್ತಿದ್ದಾರೆ; ಧನ್ಯವಾದ. ಅಂತೆಯೇ ಶಕುಂತಲಾ ಅವರ ಸವರಣೆಗೂ ಸೊಗಸಾಗಿವೆ.
            ಪರಿಪಾಠ ಎಂಬುದು ಅಸಾಧುಶಬ್ದ. ಇದು ಪರಿಪಾಟಿ ಎಂದಾಗಬೇಕು.ತುಂಬ ದೊಡ್ಡ ದೊಡ್ಡ ವಿದ್ವಾಂಸರೂ ಇದನ್ನು ತಪ್ಪಾಗಿ ಬಳಸುತ್ತಾರೆ:-(

          • ಧನ್ಯವಾದಗಳು, ತಪ್ಪುಗಳನ್ನು ತಿದ್ದಿರುವೆ 🙂

          • ಅಂತೂ ನಾನೂ ಘನವಿದ್ವಾಂಸನೆನಿಸಿದೆ (ಪರಿಪಾಠ).
            ದೊಡ್ಡವಿದ್ವಾಂಸ – ಇದು ಅರಿಸಮಾಸವಲ್ಲವೆ?

    • ಆಹಾ ಬಹಳ ಚೆನ್ನಾಗಿದೆ

  15. ತೆರೆಯೊಳ್ ಬರಲ್ಕಿನಿಯನಂ  ಕರೆಯುತ್ತುಂ
    ಮರುಮಾತನಾಡದೆಯೆ ಕೈ ಪಿಡಿಯುತ್ತುಂ
    ನರನಪ್ಪುಗೈದ ಸತಿಯಂ ಪತಿ ಕಂಡಂ
    ದುರುಗುಟ್ಟಿ ಕೋಪದೊಳು ಕಣ್ತೆದಿರ್ಪಂ

  16. ಜ್ವರತಾಪದಿಂದೆ ನರಳಿರ್ದವಳಂ ತಾಂ
    ಕರೆದೊಯ್ದಿರಲ್ ಸರಿ ತಪಾಸನೆಗೆಂದುಂ ।
    ತೆರಳಂತೊಳಂಗೊಳಲವಳ್, ಮರೆಯಿಂ ಸ್ಕಾ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ ।।

    ಕಲಹಂಸ ಜ್ವರಕ್ಕೆ CT ಸ್ಕಾನಿಂಗ್ – ಪದ್ಯಪಾನದ ಡಾಕ್ಟರ್ ಗಳು ಒಪ್ಪುವರೇ ?!!

    • Super Cheedi. aadre scanner na aptaara???

    • ಆಹಾ! ಒಳ್ಳೆಯ ಊಹಾತೀತವಾದ ಕೀಲಕ!!! ಅಭಿನಂದನೆಗಳು.
      ಸಿ.ಟಿ. ಸ್ಕ್ಯಾನರ್ ತಾನೇ ಸತಿಯನ್ನು ಆವರಿಸಿತ್ತೆಂಬ ಅಭಿಪ್ರಾಯ ತಕ್ಕಮಟ್ಟಿಗೆ ಸ್ಫುಟವಾಗಿಯೇ ಇದೆ. ಹೀಗಾಗಿ ಇದಕ್ಕೆ ಅಡ್ಡಗಾಲು ಹಾಕುವಂತಿಲ್ಲ.

      • ಇದು ಉಷಾರವರು ಮಾತ್ರವೇ ಊಹಿಸಬಹುದಾದ ಕೀಲಕವೇ ಹೌದು! ತುಂಬಾ ಚೆನ್ನಾಗಿದೆ, ಉಷಾ 🙂

    • Thank U all Doctors !!

      Dr. ಶ್ರೀಶ, ಅದು Dr.ನೀಲಕಂಠ(E&T ತಜ್ಞ) ಅವರು ಹೇಳಿರುವಂತೆ TIMING !! ಅಷ್ಟೆ.
      ಹೆಂಡತಿ checkupಗೆ ಅಂತ ಒಳಗೆ ಹೋಗಿದ್ದಾಗ,ಗಂಡ ಮರೆಯಲ್ಲಿ ಇಣುಕಿ ನೋಡಿದಾಗ ಸ್ಕ್ಯಾನರ್ (ಡಾಕ್ಟರ್ ಅಲ್ಲ!!) ಅಪ್ಪಿದಂತೆ ಕಂಡದ್ದು !!

      ಚೇದಿ, ಅದನ್ನ ದೀದಿ ಮಾಡಿಬಿಡೋಣ ಬಿಡು !!

      • ೧) ಹ್ಹಹ್ಹಹ್ಹಹ್ಹ….. wonderful comment. I can’t stop laughing.
        ೨) ದೀದಿ ಮಾಡಿಬಿಡೋಣ ಬಿಡು – Rush Hour 2 ಎಂಬ ಚಲಚ್ಚಿತ್ರದಲ್ಲಿ ಈ ಸಂಬಂಧವಾದ ಒಂದು ಮಾತು ಇದೆ. ವಿಪರೀತ ಹಾಸ್ಯಮಯವಾಗಿದೆ. ತಪ್ಪದೆ ನೋಡಿ.
        ೩) Exception: There is the possibility of there being a doctor called Dr. Skanner!
        ೪) ಹೆಂಡತಿಯು checkupಗೆ ಅಂತ ಒಳಗೆ ಹೋಗಿದ್ದಾಗ: ಗುರುರಾಜ ಹೊಸಕೋಟಿಯವರು ಹಾಡಿರುವ ’ಸಂಗವ್ವಕ್ಕನ ಮುದ್ದಿನ ಸೊಸಿಯು ಬಸುರಾದ ಸುದ್ದಿ…’ ಹಾಡಿನಲ್ಲಿ ಈ ಸಾಲುಗಳಿವೆ:
        ಹುಡುಗಿನ ಒಳಗೆ ಕರೆದ ಡಾಕ್ಟರ ತಪಾಸು ಮಾಡಿದ್ದ
        ಒಳಗೆ ಹುಡುಗಿನ ಕರೆದ ಡಾಕ್ಟರ ಟೆsssಸ್ಟ ಮಾಡಿದ್ದ!

    • 🙂 🙂

  17. ಪರಮೋಚ್ಚಭಾವನೆಯನೈದಿರೆ ನಿಚ್ಚಂ,
    ಸಿರಿಯಿಂ ಸಹಾಯಮನೆ ಗೈಯುತೆ ಕಾಯಲ್,|
    ಹರಿಯಂತೆ ಕಂಡು ಕೃಪೆಯಿಂ ಸಲಪಲ್,ದೀ-
    ನರನಪ್ಪುಗೈದ ಸತಿಯಂ ಪತಿ ಕಂಡಂ ||

    • ಶಕುಂತಲಾ, “ಭಾವನೆಯನಪ್ಪಿಯೆ” ಮಾಡಿದರೆ ಅಥವಾ ನಿಮಗೆ ತೋಚಿದ ಸವರಣೆಯನ್ನು ಮಾಡಿದರೆ, ಬಿಂದುವನ್ನು ತರಬಹುದಲ್ಲವೇ?

      • “….ಭಾವನೆಯ ಪೊಂದಿರೆ …” ಎಂಬುದನ್ನು “…. ಭಾವನೆಯನೈದಿರೆ .. ” ಎಂದು ಸವರಿದ್ದೇನೆ. ಬಿಂದುಯುಕ್ತವಾಗಿಸುವ ನಿಮ್ಮ ಸಲಹೆಯು ಸಮರ್ಪಕವಾಗಿದೆ. ಆ ಬಗ್ಗೆ ಯೋಚಿಸಿರಲಿಲ್ಲ. ಧನ್ಯವಾದಗಳು.

    • ದೀನರ ಚೆನ್ನಾಗಿದೆ ಕೀಲಕ

  18. “ಮರೆಯೆನ್!ಮಹಾ ನಟನಕೌಶಲಮಂ ಮೇಣ್
    ಸಿರಿಗನ್ನಡಾಂಬೆಯ ಸುಪುತ್ರನ”ನೆಂದೇ
    ಪರಲೋಕಮಂ ಪುಗುತೆ,ವಿಗ್ರಹಮಾದಾ
    ನರನಪ್ಪುಗೈದ ಸತಿಯಂ ಪತಿ ಕಂಡಂ!

    • ಅರ್ಥವಾಗಲಿಲ್ಲ ‘ಸಾಸೋ’ :), ವಿವರಿಸಿರಿ

      • ಅರ್ಥಸ್ಪಷ್ಟವಾಗದ ಕಾರಣವನ್ನು ಶಂಕಿಸಿ, ೩ನೇ ಪಾದವನ್ನು ಕೊಂಚ ಬದಲಿಸಿದೆ,ಸೋಸೋ 🙂
        (ಪರಲೋಕಮಂ ಪುಗುತುಮಿಲ್ಲರೆಯಾದಾ–>ಪರಲೋಕಕ್ಕೆ ಹೋಗಿ ,ಇಲ್ಲಿ ಕಲ್ಲೇ ಆದ;ಎಂತಲೂ ೩ನೇ ಸಾಲನ್ನು ಮಾಡಬಹುದು)
        —> ಓಹೋ!! ನಾ ಮರೆಯೆನು!ಕನ್ನಡಾಂಬೆಯ ಪುತ್ರನನ್ನೂ,ಹೆಚ್ಚಿನ ನಟಿಸುವ ಕೌಶಲವನ್ನೂ ಎನ್ನುತಾ,ಈ ಲೋಕವನ್ನು ಬಿಟ್ಟು ವಿಗ್ರಹರೂಪವನ್ನು ತಳೆದ ನರನನ್ನು(ರಾಜಕುಮಾರ,ವಿ.ವರ್ಧನ…?),ಸತಿಯು ತಬ್ಬಿಕೊಳುತ್ತಿರುವದನ್ನು ಪತಿಯು ಕಂಡಂ 🙂
        (ಸೂಚನೆ : ಪತಿಯ ಲೆಕ್ಕದಲ್ಲಿ ಆ ನಟನೂ , ಒಬ್ಬ ಜನಸಾಮಾನ್ಯನೇ)

  19. Inspired by the English keelaka in No.16 by Smt. Usha:
    ಗುರಿಮುಟ್ಟುತೋಟದೊಳು ಪುತ್ರನು ಗೆಲ್ಲಲ್
    ತರಳಂ ಗಡಾ ಪಿರಿದ ಪೊಂದಿದನೆಂದುಂ|
    ಹರಸುತ್ತೆ ಮೈದಡವೆ ತಾಯಿಯನಾ ವಿ-
    ನ್ನರ(winner)ನಪ್ಪುಗೆಯ್ದ ಸತಿಯಂ ಪತಿ ಕಂಡಂ||
    ——-
    ಒರುವಾತನಿಂ ಸತಿಯು ಬೇರ್ಪಡೆಗೊಂಡುಂ
    ಮರುವೊರ್ವನಂ ವರಿಸಿ ಬಾಳುತಲಿರ್ದಳ್|
    ಪರಿಹಾರಮನ್ನೆನಿತೊ ಕೋರುತೆ ಕೋರ್ಟಂ
    ಮೊರೆಯಿಟ್ಟಿರಲ್ ಸಫಲಮಾದುದು ಕೇಸೈ||
    On the day of decree:
    ಅರೆ! ಗೆದ್ದೆನೆಂದೆನುತೆ ಮಾಜಿಯು ಬೀಗಲ್
    “ಕುರಿ ನೀಂ ಗಡೀಗೆ”ನುತುಮಾಕೆಯ ಭರ್ತಂ-|
    ಗುರಿಸುತ್ತೆ ಮೇಣ್ ಕೊನೆಯ ಬಾರಿಗೆ ಮೇಂಟೇ-
    ನರ(maintainer)ನಪ್ಪುಗೆಯ್ದ ಸತಿಯಂ ಪತಿ ಕಂಡಂ|| Congratulatory embrace
    ——–
    ಗುರುವಾಗೆ ಕಾಯವದು ಚಿಂತಿಸುತೆಂತೋ
    ಕರಗಿಪ್ಪೆನೆಂದು ಸತಿ (gym)ಜಿಮ್ಮನು ಸೇರಲ್|
    ತ್ವರೆಯಿಂದೆ ಶಿಕ್ಷಣವ ನೀಡುತುಮಾ ಟ್ರೇ-
    ನರ(trainer)ನಪ್ಪುಗೆಯ್ದ ಸತಿಯಂ ಪತಿ ಕಂಡಂ||
    (ಟ್ರೇನರನಪ್ಪುಗೆಯ್ಯೆ ಸತಿಯಂ ಪತಿ ಕೆಂಡಂ!!)
    ———-
    ಇರಲೀಜುಬಾರದಿಹ ಗಂಡನು ತಾನುಂ
    ಕರೆಮೇಲೆ, ಆತನ ಸತೀಮಣಿ ತಾನುಂ|
    ಭರದಿಂದಲೀಜಿರಲು, ಗಾಬರಿಯಿಂ ಡ್ರೌ-
    ನರನ್(drowner-ಮುಳುಗುತ್ತಿದ್ದವನೊಬ್ಬ “ಇದ್ಯಾವ್ದೋ ಉಲ್ಕಡ್ಡಿಗಿನ್ನ ವೈನಾಗೇ ಐತಲಾss” ಎಂದು) ಅಪ್ಪುಗೆಯ್ದ ಸತಿಯಂ ಪತಿ ಕಂಡಂ||

    • ತುಂಬ ಸೊಗಸಾದ ಪೂರಣಗಳು. ಅಭಿನಂದನೆಗಳು. ಆದರೆ ಹಲವೆಡೆ ಹಳಗನ್ನಡದ ಹಾಗೂ ಸಾಮಾನ್ಯವ್ಯಾಕರಣದ ಉಲ್ಲಂಘನೆಯಾಗಿದೆ. ಉದಾ: ಸ್ತ್ರೀಯಳ್, ಕಣೀಗೆ ಇತ್ಯಾದಿ..

      • ಧನ್ಯವಾದಗಳು. ಹಳಗನ್ನಡಕೊರತೆಯಂತೂ ಇದೆ.
        ೧) ಅದು ಸ್ತ್ರಿಯಳ್ ಎಂದಾಗಬೇಕೆ?
        ೨) ಕಣೀಗೆನುತುಮಾಕೆಯ=ಕಣಾ+ಈಗ+ಎನುತುಂ+ಆಕೆಯ

        • ಸ್ತ್ರೀ ಎಂದಷ್ಟೇ ಆಗುತ್ತದೆ. ಉದಾ ಗೌರೀ; ಇದೇನೂ ಗೌರಿಯಳ್ ಎಂದಾಗದಲ್ಲವೇ!
          ಉದ್ಗಾರಸೂಚಕವೂ ಸಂಬೋಧನಸೂಚಕವೂ ಆದ ಪದಗಳ ಬಳಿಕ ಬರುವ ಸ್ವರಾದಿಗಳೊಡನೆ ಸಂಧಿಯಾಗದು. ಉದಾ:
          ಹಾ! ಎಲ್ಲಿಗಂ ಪೋದೆಯಯ್?
          ಬಾರೌ! ಉತ್ತಮಕವಿತೇ!
          ಶ್ರೀರಾಮ! ಅಂಜಿಕೆಯನೇ ಕಳೆದಿರ್ಪೆಯಲ್ತೇ!
          ಎಲಗೇ! ಆಸೆಯನೇಕೆಗೆಯ್ವುದಕಟಾ!

    • ಪ್ರಸಾದು ಇಂಗ್ಲೀಷ್ ಕೀಲಕದ ಪೂರಣಗಳು ಸೊಗಸಾಗಿವೆ

  20. ನರಜನ್ಮದೊಳ್ ಋಣದ ಲೆಕ್ಕಮಿದಂ ಮೇಣ್
    ಜರದೊಳ್ ನಿಜಾಶ್ರಯವದಾಶ್ರಮಕೆಂದುಂ
    ತೆರಳಿರ್ದವಳ್ ಕರುಣದಿಂ ಬಳಿಸಾರ್ಚೂ-
    ನರನಪ್ಪುಗೈದ ಸತಿಯಂ ಪತಿ ಕಂಡಂ ।।

    ವೃದ್ಧಾಶ್ರಮಕ್ಕೆ ತೆರಳಿ ಊನರ ಅಪ್ಪಿ ಸಂತೈಸಿದ ಕರುಣಾಮಯಿ ಮಡದಿಯನ್ನು ಪತಿ ಕಂಡನು. .

    • ಚೆನ್ನಾದ ಕೀಲಕ

      • ಪೂರಣ ಚೆನ್ನಾಗಿದೆ. ಆದರೆ ಸಾರ್ಚಿ+ಊನರ ಎಂಬ ಸಂಧಿಯು ಸಾರ್ಚಿಯೂನರ ಎಂದಾಗುವುದಲ್ಲದೆ ಸಾರ್ಚೂನರ ಎಂದಾಗದು. ದಯಮಾಡಿ ತಿದ್ದಿರಿ.

        • ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್,
          “ಊನರ” ಪದ ಬಳಕೆಯ ಬಗ್ಗೆಯೇ ಅನುಮಾನವಿತ್ತು.
          “ತೆರಳಿರ್ದವಳ್ ಕರುಣದಿಂ ತಡವಿಂತೂ-
          ನರನಪ್ಪುಗೈದ ….. ” ಎಂದು ತಿದ್ದಿದರೆ ಸರಿಯಾಗುದಲ್ಲವೇ? .

        • “… ಸಾರ್ದೂನರನಪ್ಪುಗೈದ.. ” ಎಂದು ಸವರಬಹುದಲ್ಲವೆ ?

          • ಹೌದು, ‘ಸಾರ್ದೂನರ’ ಎಂದು ಮಾಡಿರಿ ಕೀಲಕ ಚೆನ್ನಾಗಿದೆ

          • ಧನ್ಯವಾದಗಳು ಶಕುಂತಲಾ,ಸೋಮ.
            “ಸಾರ್ದು” ಸರಿಯಾಯಿತು,
            ನರಜನ್ಮದೊಳ್ ಋಣದ ಲೆಕ್ಕಮಿದಂ ಮೇಣ್
            ಜರದೊಳ್ ನಿಜಾಶ್ರಯವದಾಶ್ರಮಕೆಂದುಂ
            ತೆರಳಿರ್ದವಳ್ ಕರುಣದಿಂ ಬಳಿಸಾರ್ದೂ-
            ನರನಪ್ಪುಗೈದ ಸತಿಯಂ ಪತಿ ಕಂಡಂ ।। .

  21. At a convention of dwarfs…
    ಒರುವಳ್ ನಟೀಮಣಿಯು ಭಾಗಿಯಿರುತ್ತುಂ
    ಕಿರುಗಾತ್ರರಿರ್ಪರ ಮಹಾಸಭೆಯೊಳ್ ತಾಂ
    ನೆರವಾನುವಾಗುವೆನೆನುತ್ತಲಿ ಆ ಗೂ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  22. A social worker…
    ಒರುವಳ್ ಸಮಾಜಭೃತಕಳ್ ಮುದದಿಂ ತಾ-
    ನೊರೆಸುತ್ತೆ ಕಣ್ಣ ಹತಭಾಗ್ಯರ “ನಾನಾ-
    ಸರೆಯಾಗಿ ನಿಲ್ಲುವೆ”ನೆನುತ್ತಲಿ ಆ ದೀ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  23. Sumo wrestlers and a female referee:
    ಒರುವಳ್ ಸಮನ್ವಯಧುರೀಣಳು ಮುನ್ನಂ
    ಮರಣಾಂತಮಲ್ಲವನು ಗೈಯೆ ಸುಮೋಗಳ್
    ಹುರಿಗೈಯೆ ಬೆನ್ನನವರೀರ್ವರದಾ ಪೀ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ|| (ಪೀನರನು=fleshyಯಾಗಿರುವವರನ್ನು)
    This is a solution of the type ’ಚಿನ್ನರನು’ wherein there is no ‘ನರ’ entity.

  24. Bravery awards…
    ತರಳರ್ ಪರಾಕ್ರಮವ ತೋರ್ದುದರಿಂದಂ
    ಹರಸಿ (ಮಹಿಳಾ)ಪ್ರಧಾನಿಯು ಕಿಶೋರರ ಸಯ್ಪಿಂ
    “ಸರಹದ್ದಿನೊಳ್ ದುಡಿಯಿರೆ”ನ್ನುತೆ ಸಮ್ಮಾ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||
    This is also similar to ಚಿನ್ನರನು (No ನರ)

  25. At an home for the deaf/dumb:
    ಅರಿಯರ್ ಗಡಾ ಧ್ವನಿಯನೊಂದನು ಮೂಕರ್
    ಪರಿ ಏನಿದೀ ಶಿಶುಗಳೆಲ್ಲರ ಭಾಗ್ಯಂ!
    ಕರುಣಾಮಯಳ್ (a donor) ಕರಗುತುಂ ಮುದದಾ ಮೌ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  26. Journey into Space:
    “ಮರಳರ್ ನೆಲಕ್ಕೆ ಮಗುಳೆಂದುಮಿವರ್ಗಳ್
    ಪರಲೋಕಯಾತ್ರೆಯನು ಗೈದವೊಲೇ ಧಿಕ್!”
    ಸೆರೆಯುಕ್ಕಿ ದುಃಖದೆ ಸಕಾರ್ಮಿಕಳುಂ ಯಾ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

    • ಆಹಾ! ಎಲ್ಲ ಹೊಸಬಗೆಯ ಒಳ್ಳೊಳ್ಳೆಯ ಪೂರಣಗಳು!!!….ಈ ಬಾರಿ ಪ್ರಸಾದು ಅವರ ನಾಲಗೆಯ ಮೇಲೆ ವಾಗ್ದೇವತೆಯ ಪ್ರಸಾದವು ನಲಿದಾಡುತ್ತಿದೆ.

  27. ತರಳರ್ ಮನೋಹರವದಿರ್ದಿಹ ಪಾಡ-
    ನ್ನುರುಕಂಠದಿಂದೆ ನುಡಿಯುತ್ತಿರಲಾಗಳ್|
    ಕರಸಂತಸಂಗೊಳುತೆ ಮಾತೆಯು ತಲ್ಲೀ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  28. “ಸರಿದಾರಿಗೀಗಳೆಳೆದೊಯ್ಯುವೆ ನಾನುಂ
    ತೊರೆಯುತ್ತೆ ಧರ್ಮಪಥಮಂ ನಡೆದೇಂ ನೀಂ”
    ಹರಿಸುತ್ತೆ ಪ್ರೀತಿಯ ಪ್ರಸಕ್ತರೊಳುಂ (drug addicts) ಹೀ-
    ನರನಪ್ಪುಗೆಯ್ದ ಸತಿಯಂ (Counselor) ಪತಿ ಕಂಡಂ||

  29. Of trapped mines, a female rescue expert and a miner happily emerging from within the earth…
    (Mine)ಸಿರಿರಾಶಿಯುಂ ಕುಸಿದು ಖಾತಕರೆಂತೋ(miners)
    ಎರವಿಂದೆ ಬಂಧರಿರೆ, ತಂತ್ರವ ಗೈದಾ,
    ಪೊರಮಟ್ಟು ಸಂತಸದೆ ಮೋಚಕಳಂ (rescue expert) ಮೈ-
    ನರ(miner)ನಪ್ಪುಗೆಯ್ದ ಸತಿಯಂ ಪತಿ ಕಂಡಂ||

  30. “(non-contagious) ಹರಡರ್ದೆಲಿರ್ಪುದಿದು ಕುಷ್ಠವು ಬನ್ನಿಂ
    ನೆರವಾಗಲೆಲ್ಲರು ನಿವಾರಿಸೆ ಶಕ್ಯಂ|”
    ಸರಿಸುತ್ತುಮಂಕ(stigma)ಮನು ದಾದಿಯುಮಾ ತೊ-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  31. Angela Merkel welcoming refugees from IS
    ನರಮೇಧಮಂ ಮೆರೆಯೆ ಲಿಬ್ಯವು ಅಲ್ಲಿಂ
    ಪೊರಮಟ್ಟು ಪಶ್ಚಿಮಕೆ ಪೋಗಿರೆ ತ್ರಸ್ತರ್
    ತೆರೆ-ದೋಳಿನೇಂಜೆಲಳು ಸಂತಸದಿಂ ಬ-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  32. Ajit Doval’s wife congratulates his young teammates on their mission de rescue of nurses from Syria
    😀 ನರಸಮ್ಮರಂ ಸಿರಿಯದಿಂ ಪೊರಗೊಯ್ದಾ
    ಪರಿಯನ್ನು ಕಂಡು, ನಿಜಭರ್ತನ ಸಾರ್ಧರ್
    ತೊರೆಯುತ್ತೆ ಭೀತಿಯನು ಹೋರಿರಲಾ ಛ-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||
    ಛನ್ನರು = (young) spies

    • ಪ್ರಸಾದು ಈ ಬಾರಿ ಗಣೇಶನ ಕಡುಬಿನ ಮಾಹಾತ್ಮ್ಯೆಯೆನಿಸುತ್ತದೆ, ಗಣೇಶನ ಅನುಗ್ರಹ ಬಹಳವೇ ಇದ್ದಂತಿದೆ 🙂
      ಈ ಬಾರಿ ೪ – ೫ ಪೂರಣಗಳ ಮೇಲೆ ಬರದೇ ಇರಬಹುದೇನೋ ಎಂಬ ಭ್ರಮೆಯಲ್ಲಿದ್ದೆ… ನೀವೊಬ್ಬರೆ ೧೦ – ೧೫ ಪೂರಣಗಳನ್ನು ಕೊಟ್ಟಿರಲ್ಲ… ಇನ್ನು ೨ ದಿವಸ ಇದೆ 😉

  33. ಶರಸ೦ಕುಲೋದ್ಭವೆಯಿರ್ದು ನಿಜೋಚ್ಚ-
    ಸ್ತರದೊಳ್ ನಿಲಲ್ಕೆ ತಿಳಿದಿಲ್ಲೆನುತಾಗಳ್
    ಮರೆಯಿ೦ದೆ ಪೊಕ್ಕು ಸರಕಾರದ ಕಾರ್ಕೂ-
    ನರನಪ್ಪುಗೆಯ್ದ ಸತಿಯ೦ ಪತಿ ಕ೦ಡ೦

    Lakshmiya bagge

  34. ತೊರೆಯಲ್ ಭವಾಬ್ಧಿಯನು ಅಕ್ಕನ ಗಂಡಂ
    ಪರಿಯಿಂದೆ ನೊಂದಿರಲು ಮಕ್ಕಳುಮನ್ಯರ್|
    ಕರಗುತ್ತೆ ದುಃಖಿಸುತೆ ತಂಗಿಯುಮಾ ಖಿ-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  35. ಇರುವರ್ ವಲಂ ಜವಳಿಮಕ್ಕಳು ಬಲ್ಪಿಂ
    ಬಿರುಸಿಂದೆ ಸ್ಪರ್ಧೆಯನು ಗೈಯುತುಮೋದು-
    ತ್ತೊರುವಂಗಿನೊರ್ವನಿರೆ ಏಳಿಗೆಯಿಂ ಘ-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  36. ನಿರುತಂ ವನಾಂತರದೆ ಓಡುತಲಿರ್ದುಂ
    ಚುರುಕಾಗಿಸುತ್ತೆ ಪದಮಂ ಸುತರೀರ್ವರ್|
    ಗುರುವಿಂದೆ ಗೆಲ್ಲೆ ಬಹುಮಾನವನಾ ಮು-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  37. ಪರಮಾತ್ಮನನ್ನು ಭಜಿಸುತ್ತಲಿ ಪೊಂದಲ್
    ವರವನ್ನು ಮುಟ್ಟಿದುದು ಚಿನ್ನವದಾಗಲ್|
    ಮರೆವಿಂದೆ ಮುಟ್ಟಿ ಸುತರಂ ಬಳಿಕಾ ಪೊ-
    ನ್ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

  38. ಎರಡೂವೆ ಕಿಡ್ನಿಗಳು ಗಂಡನವಿಂಗಲ್
    ವರದಾನಿಯೊರ್ವ”ನಿದೊ ಪಿಂಡಮನೆನ್ನಲ್”|
    ಹರುಷಾತಿರೇಕದಿನೆ ರೋದಿಪಳಂ (Donor)ಡೋ-
    ನರನಪ್ಪುಗೆಯ್ದ ಸತಿಯಂ ಪತಿ ಕಂಡಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)