Sep 282015
 

“ನೇಹಕ್ಕಿದಯ್ ದರ್ಪಣಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು

  53 Responses to “ಪದ್ಯಸಪ್ತಾಹ ೧೭೦: ಪದ್ಯಪೂರಣ”

  1. ಪುರಮೇ ಸಂದಿರಲೇನು!ಹಂಬಲಿಪರೈ ತಮ್ಮಾಪ್ತರಾ ಸಂಗಮಂ!
    ಬೆರಗೇನೌಷಧಿಯುಂ ದಿಟಂ ರುಚಿಪುದೈ ಸಾಮಿಪ್ಯಮಿರ್ಪಾಗಿವರ್,
    ವರಮಾಧುರ್ಯಮೆ ವರ್ಜ್ಯಮಕ್ಕುಮಲದೇ ದೂರಾದೊಡಂ ನಿಚ್ಚಯಂ!
    ಮರುಳೆಂದೆಂಬರೆ! ಭಾವಘಾತಕರಿದಂ! ನೇಹಕ್ಕಿದಯ್ ದರ್ಪಣಂ!

  2. ಒಡನಾಟಂ ದೃಢಬಂಧಮಪ್ಪುದುಳಿಯಲ್ಕೂರ್ತು ಪ್ರಕಾರಂಗಳೊಳ್
    ಕಡಿಯಲ್ಕೇನಿದನಪ್ಪುದೇಂ ಸುಲಭದೊಳ್ ಬದ್ಧಂಗೊಳಲ್ ಚಿತ್ತಗಳ್!
    ಕೊಡುವೆಂ ಪಟ್ಟವನೆಂದೊಡಂ,ರವಿಸುತಂಗಾ ಕೃಷ್ಣನುಂ ಭೇದದೊಳ್,
    ತೊಡೆದೇಂ ತಾ ಪೊರವಂಟನೇ, ಪೊರೆದನಂ,ನೇಹಕ್ಕಿದಯ್ ದರ್ಪಣಂ!
    (ಪ್ರಕಾರಂಗಳೊಳ್,ಒಡನಾಟಂ ಉಳಿಯಲ್,ಕೂರ್ತು, ದೃಢಬಂಧಮಪ್ಪುದು…)

  3. ವಸನಂ ವಾತವಿಘಾತದಿಂ ವಿಲಯಮಪ್ಪಂತಿರ್ದಪಂ ವೀಥಿಯೊಳ್
    ಬೆಸನಂಬಟ್ಟು ಕುಚೇಲನೆಂಬವನೆ ಸಾರ್ದಂ ಕೃಷ್ಣಸಾನ್ನಿಧ್ಯಕಂ
    ಪುಸಿಯಪ್ಪಂತವನೆಲ್ಲ ಚಿಂತನೆಗಳೀತಂ ಗೆಯ್ದುದಾಶ್ಚರ್ಯಮೇ!
    ಜಸಮೊಂದಿರ್ದಪ ವಾಸುದೇವಚರಿತಂ ನೇಹಕ್ಕಿದೈ ದರ್ಪಣಂ||
    (ಗಾಳಿಯ ಹೊಡೆತಕ್ಕೇ ವಿಲಯವಾಗುವಂತಹ ಬಟ್ಟೆಯನ್ನು ತೊಟ್ಟ ಕುಚೇಲನೆಂಬವನು ಬೀದಿಯಲ್ಲಿ ವ್ಯಸನದಿಂದ ಕೃಷ್ಣನ ಸನ್ನಿಧಾನಕ್ಕೆ ಬಂದ. ಅವನೆಲ್ಲ ಚಿಂತನೆಗಳು ಸುಳ್ಳಾಗುವಂತೆ ಕೃಷ್ಣನು ಮಾಡಿದ್ದೇನು ಆಶ್ಚರ್ಯವೇ! ಜಸವನ್ನು ಹೊಂದಿದ ವಾಸುದೇವನ ಚರಿತೆಯೇ ಸ್ನೇಹಕ್ಕೆ ಆದರ್ಶವಾಗಿದೆ)

  4. ತವರು, ಸಾಕುತಂದೆಯ ಮನೆ, ಸೇರಿದ ಅರಮನೆ ಹಾಗೂ ಶಾಪಗ್ರಸ್ತ ಪಾಂಡುವಿನೊಂದಿಗೆ ಅರಣ್ಯವಾಸ – ಉದ್ದಕೂ ಕುಂತಿಗೆ ಒಬ್ಬಳೇ ಸಖಿ. She was by her side through thick and thin.
    ಪೃಥೆಯೆಂದೆನ್ನಿಸುತಾದಿಯೊಳ್ ಮಗುಳಿನಿಂ ತಾಂ ಕುಂತಿಯೆಂದಾಗೆ ಮೇಣ್
    ಪೃಥಿವೀಪಂ ವರಪಾಂಡುವೇ ದೊರೆತೊಡೇಂ ವೈವಾಹಕಂ ನಂತರಂ|
    ಮಿಥುನಂ ತಪ್ಪಿರೆ ಕಿಂದಮರ್ಷಿಶಪದಿಂ ಆರಣ್ಯಮೇ ಪ್ರಾಪ್ತಿಯೈ
    ಪಥಪಾರಂ ಜೊತೆಯೊರ್ವಳೇ ಸಖಿ ವಲಂ, ನೇಹಕ್ಕಿದಯ್ ದರ್ಪಣಂ||

    • ಪ್ರಯತ್ನವೇನೋ ಚೆನ್ನಾಗಿದೆ. ಆದರೆ ಮುಗುಳಿನಿಂ ಎಂಬ ಪದದ ಔಚಿತ್ಯವೇನೆಂದು ತಿಳಿಯಲಿಲ್ಲ. ಜೊತೆಗೆ ಅದರ ವ್ಯಾಕರಣರೂಪವೂ ಚಿಂತ್ಯ. ನಂತರ ಎಂಬುದು ಅಪಶಬ್ದ. ಶಪ ಎಂಬುದು ಶಾಪವಾದೀತೇ? ಅಲ್ಲಿಂದ ಮುಂದೆ ಸಂಧಿಯಾಗಿಲ್ಲ. ಇದೂ ಒಂದು ದೋಷ.

    • Thanks for pointing out the errors. Corrected here:
      ಪೃಥೆಯೆಂದೆನ್ನಿಸುತಾದಿಯೊಳ್ ತವರಿನೊಳ್, ತಾಂ ಕುಂತಿಯೆಂದಾಗೆ ಮೇಣ್
      ಪೃಥಿವೀಪಂ ವರಪಾಂಡುವೇ ದೊರೆತೊಡೇಂ ವೈವಾಹಕಂ ನಂತರಂ|
      ಮಿಥುನಂ ತಪ್ಪಿರೆ ಕಿಂದಮರ್ಷಿತಪದಿಂದಾರಣ್ಯಮೇ ಪ್ರಾಪ್ತಿಯೈ
      ಪಥಪಾರಂ ಸಖಿಯೊರ್ವಳೇ ಪೃಥೆಗೆ ತಾಂ, ನೇಹಕ್ಕಿದಯ್ ದರ್ಪಣಂ||

    • ಪ್ರಸಾದು ಕುಂತಿಗೆ ಯಾರು ಸಖಿಯೆಂದು ಸ್ಪಷ್ಟವಾಗಲಿಲ್ಲ ವಿವರಿಸಿ

      • ಹೆಸರು ನನಗೆ ಗೊತ್ತೂ ಇಲ್ಲ, ಅದು ಮುಖ್ಯವೂ ಅಲ್ಲ.

        • ಕುಂತಿ, ಪಾಂಡವರು, ಅರಣ್ಯವಾಸ, ಹೀಗೆ ಎಲ್ಲವೂ ಮಹಾಭಾರತದಿಂದ ತೆಗೆದುಕೊಂಡು, ಒಂದು ಕಾಲ್ಪನಿಕ ಸಖಿಯ ಪಾತ್ರವನ್ನು ಅಳವಡಿಸಿರುವುದೇನೋ ಸರಿ. ಆ ಪಾತ್ರ ನಿಮ್ಮದೇ ಕಲ್ಪನೆಯಾದರೆ, ಅದು ಮುಖ್ಯವಲ್ಲ ಎಂದು ಹೇಗೆ ಹೇಳುತ್ತೀರಿ ? ಸ್ಪಷ್ಟೀಕರಿಸದೆ ಪ್ರಶ್ನೆಯನ್ನೇ ಬದಿಗೊತ್ತುತ್ತಿದ್ದೀರಲ್ಲ ?
          🙂

  5. ಸಪ್ತಾಹಾಂತ್ಯದೊಳನ್ವಹಂ ಗೆಳೆಯರೆಲ್ಲರ್ ಸೇರಿ ವೈನೋದಸಂ-
    ತೃಪ್ತಾತ್ಮರ್ ಲಲಿತಾಶುಕಾವ್ಯಕಥನಕ್ಕೆಂದೊಲ್ದು ಸೇರುತ್ತುಮು-
    ತ್ತಪ್ತಸ್ವರ್ಣಸಮಾನಪದ್ಯಪಥದೊಳ್ ಸಾಗಲ್ಕೆ ಸರ್ವಾತ್ಮನಾ
    ಕ್ಲೃಪ್ತರ್ ಕಾಂಚನ-ರಾಮರೊಪ್ಪಿ ನಡೆಯಲ್ ನೇಹಕ್ಕಿದಯ್ ದರ್ಪಣಂ!

    • 🙂 dhanyavaadagaLu _/\_

    • _/\_
      ವರಕಾವ್ಯಂಗಳ ಬಾಳೆಪಣ್ಣ ಸುಲಿದಂತೀವನ್ ವಿನಾಪೇಕ್ಷೆಯಿಂ
      ಸರಸಾಮೋದದೊಳಾಶುಪದ್ಯರಚನಾ ಸಾಮರ್ಥ್ಯಮಂ ನೀಡಿದನ್
      ಪರಿಯೂಳ್ ಸಂಗಕೆ ಬರ್ಪ ಮೃಚ್ಛಕಟಿಕರ್ ತಾವಾಗೆ ಪೊನ್ನಾನ್ವಿತರ್
      ಪರಮಾಪ್ತಂ ಕುಡುತಿರ್ಪ ಸೌಖ್ಯಮಮಿತಂ ನೇಹಕ್ಕಿದಯ್ ದರ್ಪಣಂ

  6. ತನ್ನೊಳ್ ಸೇರಿದ ತೈಲಮಂ ಸುಡುತಿರಲ್ ವಹ್ನಿ ಪ್ರತಾಪೋತ್ಕಟಂ,
    ಭಿನ್ನಂಗೊಳ್ಳದೆ ಬತ್ತಿ ನೈಜತನುವಂ ಮೇಣೀಯುತುಂ ಬೆಂಕೆಗಂ,
    ಖಿನ್ನಂಗೊಳ್ಳದೆ ತನ್ನ ಮೋರೆಗೆರಚಿರ್ಪಾ ಕರ್ಪನುಂ ತಾಳುತುಂ
    ಬನ್ನಂಬಟ್ಟುರೆ ಕಾಯ್ವುದಯ್ ಕೊನೆವರಂ ನೇಹಕ್ಕಿದೇ ದರ್ಪಣಂ!

    • ಪದ್ಯಂಗಳ್ ಸೊಗಸಾದುವಿಂತೆರಡು ಮಾರ್ಗಂಗಳ್ ತಗುಳ್ಚುತ್ತೆ ಮೇಣ್
      ಹೃದ್ಯಾಂತ್ಯಂಗಳನೆಂತುಟೋ ರಸಿಕಹೃಚ್ಚೌರ್ಯಕ್ಕೆ ನೋಂತಂದದಿಂ|

  7. ಮುದದಿಂದಾಡುತೆ ಬಾಲರುಂ ಬೆಳೆಯುತೊಟ್ಟೊಟ್ಟಿಗಿಂತಿರ್ವರಂ-
    ದದುಮೆಂತೋ ಶಿರಮಂಡನಕ್ಕೆ ಹಟಗೈದಿರ್ದಂ ಗಡಾ ತಾನದ-
    ರ್ಬುದರೋಗಂ ಬಡಿದೆನ್ನಯಾ ಕೆಳೆಯಗಂ ಕೇಶಂ ಜಗುಳ್ದಿರ್ದಿರಲ್,
    ಬಿದಿಯಾಟಂ ಬಲು ಘೋರಮಿಂತದಕಟಾ ! ನೇಹಕ್ಕಿದಯ್ ದರ್ಪಣಂ ।।

    (ಕೀಮೋ ಥೆರಪಿಯ ನಂತರ ತಲೆಗೂದಲನ್ನು ಕಳೆದುಕೊಂಡು ನೊಂದಿದ್ದ ತನ್ನ ಸ್ನೇಹಿತನಿಗಾಗಿ, ತನಗೂ ತಲೆ ಬೋಳಿಸುವಂತೆ ಹಟಮಾಡಿದ ಬಾಲನ ಕಥೆ – ಆಧಾರಿತ.
    ಪೂರ್ಣ ಕಥೆಯನ್ನು ಪದ್ಯದಲ್ಲಿ ತರಲಾಗಲಿಲ್ಲವೆನಿಸುತ್ತಿದೆ.)

  8. ಮುನಿದುಂ ಕೂರ್ಮೆಯನೀವುದಕ್ಕೆ ಮೊದಲೊಂದಂತಿಪ್ಪ ವಿಶ್ವಾಸಕೊಂ
    ದೆನೆ ದುಃಖಂಗಳನೊಂದು ಕೂಡಿ ಸಹಿಸುತ್ತಿರ್ಪಾಗಳಿನ್ನೊಂದು ಮೇಣ್
    ಮನಕೊಪ್ಪಿರ್ಪ ವಿಚಾರಕೊಂದು ಕಳೆಯುತ್ತುಂ ಬೇಸರಂ ಗೆಯ್ವ ಜ
    ಲ್ಪನಕಿನ್ನೊಂದೆನಲಿಂತು ಸಲ್ಗೆ ನತಿಗಳ್ ನೇಹಕ್ಕಿದೈದರ್ಪಣಂ!!
    (ಸ್ವಲ್ಪ ದೂರಾನ್ವಯವಾದರೂ ವಿನೂತನ ಬಗೆಯ ಪೂರಣವಾದೀತೆಂದು ಹೀಗೊಂದು ರೀತಿಯಲ್ಲಿ-
    ಸಿಟ್ಟಾಗಿಯೂ ಪ್ರೀತಿ ತೋರುವುದಕ್ಕೆ ಮೊದಲು ಒಂದು, ವಿಶ್ವಾಸಕ್ಕೆ ಒಂದು, ದುಃಖಗಳನ್ನು ಒಂದಾಗಿ ಸಹಿಸುತ್ತಿರುವುದಕ್ಕೆ ಒಂದು,ಮನಸ್ಸಿಗೆ ಒಪ್ಪುವ ವಿಚಾರಕ್ಕೆ ಒಂದು,ಬೇಸರನ್ನು ಕಳೆಯಲು ಹರಟುವುದಕ್ಕೆ ಒಂದು, ಹೀಗೆ ಆ ಸ್ನೇಹಕ್ಕೆ ಐದು ವಂದನೆಗಳು ಅರ್ಪಣವು (ನೇಹಕ್ಕಿದೈ ದರ್ಪಣಂ ಎಂಬುದನ್ನು ನೇಹಕ್ಕೆ+ಇದು+ಐದು+ಅರ್ಪಣಂ ಎಂದು ವಿಭಜಿಸಿಕೊಂಡು ಪರಿಹರಿಸಿದ್ದೇನೆ.) ಅರ್ಪಣಂಗಳ್ ಎಂದಾದಲ್ಲಿ ಹೆಚ್ಚು ಸಾಧುವಾಗುತ್ತಿತ್ತೇನೋ! )

    • ಈ ರೀತಿಯ ಕೀಲಕವಿಭಜನೆಯನ್ನು ನಾನೂ ಮಾಡಿಟ್ಟುಕೊಂಡಿದ್ದೆ. ಪದ್ಯರಚನೆಯಲ್ಲಿ ನೀವು ಮುಂದಾದಿರಿ. ಕಲ್ಪನೆ ಚೆನ್ನಾಗಿದೆ.

      • ಧನ್ಯವಾದಗಳು. ನೀವು ಮಾತ್ರ ಈ ರೀತಿ ಕೀಲಕವಿಭಜನೆ ಮಾಡಬಲ್ಲವರೆಂದು ಗೊತ್ತಿತ್ತು. 🙂 😉

  9. ಕರೆಯಲ್ ಕೃಷ್ಣೆಯು, ಕೃಷ್ಣನೆಂದೊಡನೆ ತಾನ್ ಇತ್ತಂ ಕಣಾ ರಕ್ಷೆಯಂ 
    ಮರೆಯಿಂ ಪಾಂಡವರೈವರೇಳಿಗೆಯನೇ ಕೋರುತ್ತಲಿರ್ಪಂ ಸದಾ
    ತ್ವರೆಯಿಂದಂ ರಣರಂಗದೊಳ್ ಸತತಮುಂ ತನ್ನಾಪ್ತರಂ ರಕ್ಷಿಪಂ
    ಕರಮಂ ಜೋಡಿಸೆ ಪೇಳ್ವರೆಲ್ಲರಿವನಾ ನೇಹಕ್ಕಿದೇ ದರ್ಪಣಂ

  10. ಬಳಸಿರ್ಪ ಲತೆಯೊಂದು ಕುಸುಮಿಸಲ್,ವೃಕ್ಷಮಹ!
    ನಳನಳಿಪವೊಲ್,ಪದ್ಮಮರಳರ್ದೆಯೆ
    ಕೊಳನೆಲಾ! ಖಿನ್ನಮಾಗಲ್ಕೇನದಾಶ್ಚರ್ಯಮೇ!
    ಕೊಳೆಯಿರದ ನೇಹಕ್ಕಿದಯ್ ದರ್ಪಣಂ!
    (ಬಳಸಿದ ಬಳ್ಳಿಯು ಹೂಬಿಟ್ಟಾಗ ಮರವೂ ನಗುತ್ತದೆ, ಕಮಲವು ಅರಳದಿರಲು ಕೊಳವೂ ಖಿನ್ನಗೊಳುತ್ತದೆ,ಇದು ಅಪ್ಪಟ ನೇಹವು)

  11. ಹರಿಪತ್ಪಾ೦ಸುವಿದೋ ಮಗುಳ್ ಪುಲಿನಮೋ ತ೦ಗಾಳಿ ತೀಡಿರ್ದುದೋ
    ವರಗೋಪೀಜನರ೦ದಮಪ್ಪ ಸುಳಿವೋ, ಪುಷ್ಪ೦ಗಳೋ ಬೀರ್ದ ಬ೦-
    ಧುರಹಾಸ೦ಗಳಿವೋ ಮಗುಳ್, ತೆರೆಗಳೋ ಮೇಣ್ ಶೌರಿಸ೦ಗಕ್ಕೆ ಹಾ-
    ತೊರೆಯುತ್ತಿರ್ಪ ಮನ೦ಗಳಾತುರಮಿದೋ, ಕಾಲಿ೦ದಿಯಿ೦ತಿರ್ದು ನೋ-
    ಳ್ವರೆ ನೀರ್ ಮಾರ್ಪೊಳೆಯಲ್ಕೆ ಗೋಪಿಕೆಯರಾ ನೇಹಕ್ಕಿದಯ್ ದರ್ಪಣ೦

  12. ಪದವಿಯಂ ಪಡೆದೊ೦ದು ಸುದಿನದೊಳ್ ವಸತಿಯಿ೦
    ಮುದದಿ ಬೀಳ್ಗೊಂಡು ತಾವ್ ತೆರಳುತ್ತಲಂದು I
    ಚದುರೆಯರ್ ಪರಸ್ಪರರೊಳ್ ಕಾಣ್ಕೆ ಕುಡುತಲಾ
    ಡಿದರಲ್ಲಿ “ನೇಹಕ್ಕಿದಯ್ ದರ್ಪಣಂ” I

    ವಿದ್ಯಾಭ್ಯಾಸ ಮುಗಿಸಿ ಹಾಸ್ಟೆಲಿನಿಂದ ತಮ್ಮ ಮನೆಗೆ ತೆರಳುವ ಗೆಳತಿಯರಿಬ್ಬರು ನಮ್ಮ ಸ್ನೇಹಕ್ಕೆ ಈ ದರ್ಪಣವೇ ಕಾಣಿಕೆಯೆಂದು ಕನ್ನಡಿಯನ್ನು ಬದಲಿಸಿಕೊಂಡರು .

    • ಭಾಗ್ಯಲಕ್ಷ್ಮಿಯವರೆ, ನಿಮ್ಮ ಕಲ್ಪನೆ ಚೆನ್ನಾಗಿದೆ. ಕೆಲವು ಸವರಣೆಗಳನ್ನು ಹೀಗೆ ಮಾಡಬಹುದು:

      ಪದವಿಯಂ ಪಡೆದಿರ್ದು,ವಿದ್ಯಾರ್ಥಿನಿಲಯದಿಂ
      ಮುದದೆ ಬೀಳ್ಕೊಂಡು ನಿಜಗೃಹಕೈದುತುಂ,|
      ಚದುರೆಯರ್ ಕಾಣ್ಕೆಯಂ ವಿನಿಮಯಂಗೈಯುತಾ-
      ಡಿದರಲ್ತೆ,” ನೇಹಕ್ಕಿದೈ ದರ್ಪಣಂ ” ||

      • ಶಕುಂತಲಾ ಅವರಿಗೆ ಧನ್ಯವಾದಗಳು .

      • ಶಕುಂತಲಾರವರೆ,
        ಭಾಲಪದ್ಯವ ತಿದ್ದುವಾತುರದೆ ಮರೆತಿರೌ
        ಶೀಲಮಂ ವ್ಯಾಕರಣನಿಯಮದೊಳ್ ನೀಂ|
        ಬಾಲೆಯರ ನಡುವಣದ ಸಂಬೋಧನೆಯೊಳಿರಲು
        ಸ್ತ್ರೀಲಿಂಗ, ನೇಹಕ್ಕದೌ(ದೈx) ದರ್ಪಣಂ|| 😉

        • ಪ್ರಸಾದರೆ, ನಿಮ್ಮ ಅಭಿಪ್ರಾಯದ ತಪ್ಪೊಪ್ಪಿನ ಬಗೆಗೆ ನನಗೆ ತಿಳಿದಿಲ್ಲ. ಹಾಗಿದ್ದಲ್ಲಿ, ಪದ್ಯಪಾನದ ಈ ಪಾದಾಂತ್ಯವು ಸರ್ವರಿಗೂ ಆಗಿರದೆ ಕೇವಲ ಪುರುಷರನ್ನು ಮಾತ್ರ ಸಂಬೋಧಿಸಿರುವಂಥದ್ದೆ ?

        • ಹಾಗೇನೂ ಇಲ್ಲ; ಸಾಮಾನ್ಯಾರ್ಥದಲ್ಲೂ ಬಳಸಬಹುದು. ಆದರೆ ನೀವು ನಿರ್ದಿಷ್ಟವಾಗಿ quotes (direct speech) ಬಳಸಿ ಮಹಿಳೆಯಿಂದ ಮಹಿಳೆಗೆ ಹೇಳಿಸಿರುವುದರಿಂದ ’ಔ’ಕಾರವು ಉಚಿತ.

          • ಪ್ರಸಾದರೆ, ವಿವರಣೆಗಳಿಗಾಗಿ ಧನ್ಯವಾದಗಳು. ಪದ್ಯವನ್ನು ತಿದ್ದಿ ಜನರಿಂದ ಪಾದಾಂತ್ಯವನ್ನು ಹೇಳಿಸಿದ್ದೇನೆ. ತಿದ್ದಿದ ಪದ್ಯ:

            ಪದವಿಯಂ ಪಡೆದಿರ್ದು,ವಿದ್ಯಾರ್ಥಿನಿಲಯದಿಂ
            ಮುದದೆ ಬೀಳ್ಕೊಂಡು ನಿಜಗೃಹಕೈದುತುಂ,|
            ಚದುರೆಯರ್ ವಿನಿಮಯಂಗೈಯೆ ನೋಡಿದ ಜನರು-
            ಲಿದರಲ್ತೆ , “ನೇಹಕ್ಕಿದಯ್ ದರ್ಪಣಂ ” ||

  13. ಅರಿಸೈನ್ಯದೈವರಿವನನುಜರೆಂದುಂ ತಿಳಿದು
    ಕುರುರಾಜನಿಂಗಿನಜನಿತ್ತ ನೆರವಂ|
    ಮರಣಕುಂ ಸಿದ್ಧನಾಗಿರೆ ಕೆಳೆಯಗೊಳ್ಳಿತಂ
    ಹರಸುವನ ನೇಹಕ್ಕಿದೇ ದರ್ಪಣಂ|

  14. ಬಾಗಲ್ ಬಾನದು ಮುಟ್ಟಲುಂ ನೆಲವನುಂ ತಾನಿಂತು ಮುಂದಾಗಿರಲ್
    ತಾಗಲ್ ಬಾನನು ಭೂಮಿತಾಂ ನಲವಿನಿಂದುಬ್ಬಿರ್ದುದೈ ನೋಡದಂ ।
    ತೂಗಾಡಲ್ ಮಳೆಬಿಲ್ಲುತಾಂ ನಡುವೊಳುಂ ವರ್ಣಂಗಳಿಂ ತಟ್ಟುತುಂ
    ಕೈಗೂಡಲ್ಕದೊ ಕಾಣ್ ದಿಗಂತಮ ಗಡಾ ! ನೇಹಕ್ಕಿದಯ್ ದರ್ಪಣಂ ।।

  15. ಇಲ್ಲಮಿನ್ನೇನುಮೊಂದುಳಿದು ತೈಲವ ನೋಡೆ
    ಕೊಲ್ಲಿಯೊಳ್, ಪೆಟ್ರೊಡಾಲರಿಗಂ ಸಮಂ|
    ಝಲ್ಲೆನುವ ಡಾಲರಿನ್ನುಂಟೆ ವಿಶ್ವದೊಳೆಲ್ಲು
    ಮುಲ್ಲಾನ ನೇಹ(=ಸ್ನೇಹ=ತೈಲ=petrol)ಕ್ಕಿದಯ್ ದರ್ಪಣಂ(=ದರ್ಪಗಾರಿಕೆ)||

  16. ಸಮ್ಮಾನಂಗಳನಿತ್ತು ಪಿಂತಿನವರಾ ದೌಷ್ಟ್ಯಂಗಳಂ ಮನ್ನಿಸು-
    ತ್ತೆಮ್ಮೊಳ್ ನೇಹಮೆ ಚೆನ್ನಮೆಂದು ನುಡಿದೈತಂದಿರ್ದೊಡಂ ನಾಯಕರ್ |
    ಹಮ್ಮಿಂ ನಮ್ಮನೆ ಗುಂಡಿನಿಂ ಸುಡುತೆ ವರ್ಪರ್ ದುಟ್ಟರಾ ಪಾಕಿಗಳ್
    ನೆಮ್ಮಲ್ಕೆಂದುಮಯೋಗ್ಯಮಪ್ಪ ಖಳರ ಸ್ನೇಹಕ್ಕಿದಯ್ ದರ್ಪಣಂ ||

  17. ಎತ್ತಲಿಂದೆತ್ತ ಸಂಬಂಧ! ಪಿತೃ ಪಕ್ಷದೊ-
    ಳ್ಗಿತ್ತಿರಲ್ ಸ್ನೇಹಿತರ್ಗುಂ ತರ್ಪಣಂ ।
    ಬತ್ತದದು ಸತ್ತ ಸನ್ಮಿತ್ರರಾ ನೆನಪಲ್ತೆ,
    ಒತ್ತಾದ ನೇಹಕ್ಕಿದಯ್ ದರ್ಪಣಂ ।।

  18. ಖಿನ್ನಂ ನೇಸರನಾತಪದ್ದ್ಯುತಿಗಳಿಂ ಖಲ್ವಾಟನೊರ್ವಂ ತರು-
    ಚ್ಛನ್ನಸ್ಥಾನಮನೀಕ್ಷಿಸುತ್ತೆ ನಡೆದಂ ತಾಲದ್ರುಮಚ್ಛಾಯೆಗಂ |
    ಭಿನ್ನಂಗೊಂಡುದು ಶೀರ್ಷಮಲ್ಲಿಯುಮಲಾ ! ಬಿದ್ದಿರ್ದ ಹೆಬ್ಬಣ್ಣಿನಿಂ
    ಬನ್ನಂ ಬೆಂಬಿಡದಿರ್ಪ ಭೂರಿವಿಕಟಾನೇಹಕ್ಕಿದಯ್ ದರ್ಪಣಂ ||
    ಭೂರಿ ವಿಕಟ ಅನೇಹ = ಅತಿ ಕಷ್ಟ ಕಾಲ.
    ಖಲ್ವಾಟೋ ದಿವಸೇಶ್ವರಸ್ಯ ಎಂಬ ಪ್ರಸಿದ್ಧ ಸುಭಾಷಿತದ ಭಾವವಿಲ್ಲಿದೆ.

    ತನುವಂ ನೆಟ್ಟಗಿಡಲ್ಕೆ ಧಾತ್ರಿಯೊಳನೀಶಂ ರೋಗದಿಂ ಮುಪ್ಪಿನುಂ
    ಮನೆವಾಳ್ ಭಾರ್ಯೆಯ ಮೂಗ ನತ್ತನೆಳೆದೊಯ್ದಂ ಹೆಂಡಕಂ ಮರ್ತೆಯಾ |
    ಧನದಿಂದಾಗಲಮೀಂಟಿ ಬಿದ್ದನಿಳೆಯೊಳ್ ಮತ್ತೇಳ್ಗೆಯೆಂತಾತಗಂ ?
    ಜನರಂ ದುರ್ಗತಿಗೊಯ್ವ ಮದ್ಯರಸಪಾನೇಹಕ್ಕಿದಯ್ ದರ್ಪಣಂ ||
    ಮದ್ಯರಸಪಾನ ಈಹಕ್ಕೆ

    ಈ ಪದ್ಯಗಳ ಸಾಧುತ್ವವಿಷಯದಲ್ಲಿ ಜಿಜ್ಞಾಸೆಯಿದೆ. ಸಹೃದಯರೇ ಪ್ರಮಾಣ.

    • ಕೀಲಕನಿರ್ವಹಣೆಯು ಎರಡರಲ್ಲೂ ಚೆನ್ನಾಗಿದೆ. ’ಅನೀಶಂ ರೋಗದಿಂ ಮುಪ್ಪಿನುಂ’ – ದಯವಿಟ್ಟು ಇದನ್ನು ವಿವರಿಸಿ ಹೇಳಿ.

      • ರೋಗದಿಂದ ಮತ್ತು ಮುಪ್ಪಿನಿಂದ ತನುವಂ ಧಾತ್ರಿಯೊಳ್ ನೆಟ್ಟಗಿಡಲ್ಕೆ ಅನೀಶನ್.
        ಅನೀಶನ್ = ಅಸಮರ್ಥನ್.
        ಮೆಚ್ಚುಗೆಗೆ ಧನ್ಯವಾದ.

  19. ಕರಿಗಳ್ ಚಂದದೆ ಮೇವನುಂಡ ತಿರೆಯೇ ಪೋತಂಗಳಂ ಪೋಷಿಪಾ
    ತಿರೆಯೇ ಕ್ಷಾಮಮನಾಂತು ಮೃತ್ಯವೆಸೆಗಲ್ ಹಾ ಹಾ ಪ್ರಲೀನಾಪ್ತುವೀ
    ಕರಿಡಿಂಬಂ ಬಿಡೆನೆನ್ನುತಿರ್ಪ ಗಜಿಯಂ ಯೂಥ್ಯಾಳಿಯಾಶ್ವಾಸಮಿ-
    ತ್ತುರೆ ಕಾಯ್ಗುಂ ಪಸಿವಿಂಗುಮಳ್ಕದೆ ಗಡಂ ನೇಹಕ್ಕಿದಯ್ ದರ್ಪಣಂ

    ಪೋತ = ಮರಿಆನೆ
    ಪ್ರಲೀನಾಪ್ತು = ಕೆಲದಿನ ಹಿಂದೆಯೆ ಮಡಿದು ಜೀರ್ಣವಾಗುತ್ತಿರುವ ಕಳೇಬರ

    ಬರಗಾಲದಿಂದ ಸತ್ತು ಜೀರ್ಣವಾಗುತ್ತಿರುವ ಮಗುವಿನ ಕಳೇಬರದ ಮುಂದೆ ಶೋಕಿಸುತ್ತಿಸುವ ತಾಯಿಯೊಡನೆ ಮಿಕ್ಕ ಹಿಂಡು ದಿನಗಟ್ಟಲೆ ಕಾಯುವ ಪ್ರಸಂಗ

  20. ಕರಿಮೋಡದೊಲ್, ಧರಣಿಯಾಗಸಂಗಳ ಮಧ್ಯೆ
    ವರವಧುವಿನಂತರಕ್ಕಂತ:ಪಟಂ!
    ಇರುವುದೇಂ? ಸರಿವುದೈ ,ಬಂಧಮಂ ಬೆಸೆಯುತ್ತೆ,
    ತೆರೆಯಿರದ ನೇಹಕ್ಕಿದಯ್ ದರ್ಪಣಂ!

  21. ಸಮ ದೃಷ್ಟಿಕೋನದೊಳ್ ಬಿಂಬದಿಂ ಪ್ರತಿಬಿಂಬ
    ಯಮನಿಯಮ ಬದ್ಧದಾ ಪ್ರತಿಫಲನ ಕಾಣ್ ।
    ಸಮರಸದ ತಿಳಿಮನದೊಳಾವರ್ತಗೊಳುದಿಂತು
    ಗಮನೀಯ ನೇಹಕ್ಕಿದಯ್ ದರ್ಪಣಂ ।।

    ಸ್ನೇಹಿತರ – ಸಮಾನಾಂತರ ಹೃದಯ ಕನ್ನಡಿಯ ನಡುವೆ ಪರಾವರ್ತಿತ ಪ್ರತಿಫಲನಗೊಳುವ (ನಿಯಮ ಮೀರದ) “ಸ್ನೇಹ”ದ ವರ್ಣನೆ
    ಚೌಪದಿಯಲ್ಲಿ “ಪ್ರತಿಫಲನ”ದ ನಿಯಮಗಳನ್ನು( ಕನ್ನಡಿಯ ಒಳಹೊರಗು – ಸಮದೂರ/ಸಮಗಾತ್ರ / ಕಂಡರಿಯದ ಎಡಬಲದ ಸ್ಥಾನಪಲ್ಲಟ / ಬಿಂಬಗಳ ಅನಂತತೆ …. )ಸ್ಪಷ್ಟ ತರಲಾಗಲಿಲ್ಲ. ವೃತ್ತದಲ್ಲಿ ಪ್ರಯತ್ನಿಸಬೇಕು.

  22. ಮನೆಗಂ ಪೊತ್ತನು ಮೀರಿ ಬಂದ ಮಗನಾ ಸಂಗಾತರಂ ಕೇಳ್ದೊಡಂ
    ಮನೆಗೆಂದೀಗಳೆ ಪೋದನೆನ್ನುತೆ ಪಲರ್ ಪೇಳ್ದರ್ ಗಡಾ ಫೋನಿನೊಳ್
    ಸನಿಹಕ್ಕಿರ್ಪನಮೀಗಳೇ ಕಳುಹಲೇಮೆಂದಿರ್ಕೆ ಮತ್ತಂಗೆಲರ್
    ತನುಜಂಗೀವೆನು ಫೋನನೆಂಬರಕಟಾ ನೇಹಕ್ಕಿದಯ್ ದರ್ಪಣಂ

    Son comes home late. The parent calls many of his friends. Most of them say he just left here. Some said he is here, I’ll send him home. Few also said he is here, I’ll give him the phone 🙂

    • ಇಷ್ಟೆಲ್ಲ ನಾಟಕಕ್ಕೆ ಆ ’ಮಗ’ನನ್ನೇ ಸಾಕ್ಷಿಯಾಗಿಸಿದ ಬಗೆ ಚೆನ್ನಾಗಿದೆ.

  23. ಗುಟ್ಟಿನಿಂ ಬಚ್ಚಿಟ್ಟ ಧನಕನಕಮೆಲ್ಲಮಂ
    ಕಟ್ಟಕಡೆಗುಂ ಕಾಯ್ವುದೈ ಸ್ಯೂತವು!
    ಇಟ್ಟಿರಲ್ ನಂಬಿಕೆಯನಂತೆತಾಂ,ಬಾಳ್ವರೇಂ
    ಬಿಟ್ಟಿದಂ!ನೇಹಕ್ಕಿದಯ್ ದರ್ಪಣಂ!

  24. ಉಲಿಗಳ್ ನಿತ್ಯರಸಾರ್ದ್ರಕಾವ್ಯತತಿಗಳ್ ಕೋಶಾನಪೇಕ್ಷಂಗಳಯ್
    ಬಲವದ್ಬಂಧುರಭಾವಬಂಧಭವನಂ ಜ್ಯೋತ್ಸ್ನಾಸಮಂ ಬೇಗೆಯೊಳ್
    ಸಲಿಲಾಪಾನಸಮಾನವ್ಯಾಪೃತಿಯಿದೋ ದುಃಖಾಕುಲಂ ಜೀವನಂ
    ಕೆಲದೊಳ್ ಮಿತ್ರನಿರಲ್ಕೆ ತೋರ್ಕುಮಿಳೆಯೊಳ್ ನೇಹಕ್ಕಿದಯ್ ದರ್ಪಣಂ ||

    ಕೋಶಾನಪೇಕ್ಷಂಗಳಯ್ – ಕೋಶಾದಿಗಳ ಅಗತ್ಯವಿಲ್ಲದೇ ಸುಗಮವಾಗಿ ಅರ್ಥವಾಗುವ ರಸಾರ್ದ್ರಕಾವ್ಯಗಳಂತೆ ಮತ್ತು ಇಂಥ ಮೋದಾವಹವಾದ ಮಾತುಗಳು ಯಾವುದೇ ಕೋಶದ (ಧನದ) ಅಪೇಕ್ಷೆಯಿಲ್ಲದೇ (ನಿಷ್ಕಪಟ ಪ್ರೀತಿಯಿಂದ) ಬಂದಂಥವುಗಳು..

Leave a Reply to ಚೀದಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)