Oct 052015
 

ತಮಿಳಿನೊಳಳಲ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ

  43 Responses to “ಪದ್ಯಸಪ್ತಾಹ ೧೭೧: ಸಮಸ್ಯಾಪೂರಣ”

 1. ಸುಮಧುರರೀತಿಯಿಂ ಸಕಲಮಾನವರಂ ಬೆಳಕತ್ತಲೊಯ್ಯುತುಂ,
  ವಿಮಲಸುಶಬ್ದಸಂಕುಲಮನಿತ್ತಿರೆ, ಭಾಷೆಯ ವೃಧ್ಧಿಯಾಗಿರಲ್|
  ತಮಿಳಿನೊಳ್,ಅಳ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ,
  ಶ್ರಮಿಸುತೆ, ಮೆಚ್ಚಿ ಸಂಸ್ಕೃತದ ವಾಙ್ಮಯಮಂ, ರಸಪೂರ್ಣಭಾವದಿಂ ||

  ( ತಮಿಳಿನೊಳಳ್ತಿಯಿಂ=ತಮಿಳಿನೊಳ್, ಅಳ್ತಿಯಿಂ)

  • ಕೀಲಕಪದವನ್ನೇ ಬದಲಿಸಿಬಿಟ್ಟು (ತಮಿಳಿನೊಳಳ್ತಿಯಿಂ) ಚಂಪಕಮಾಲೆಯಲ್ಲಿ ಕವನಿಸಿಬಿಟ್ಟಿರಲ್ಲ! ಸೋಮರು ಸೂಚಿಸಿರುವ ವೃತ್ತವೇ ಬೇರೆ, ಕೀಲಕಪದವೇ ಬೇರೆ – ’ತಮಿಳಿನೊಳಳಲ್ತಿಯಿಂ’ 😉

   • ಸರಿ, ನನ್ನಿಂದ ತಪ್ಪೇ ಆಯಿತು. ಆದರೆ ನೀವಾದರೂ ಸೋಮರು ಸೂಚಿಸಿರುವಂತೆ ಬರೆಯಬಹುದಿತ್ತು. 🙂

    • ಅಷ್ಟರಲ್ಲಿ ನಿಮ್ಮ ಮಾರ್ಗದಲ್ಲಿ ನಡೆಯೋಣ ಎಂದು ಹರಿವಾಯುಗಳ ಪ್ರೇರಣೆಯಾಯಿತು 🙂

  • ಪದ್ಯಶೈಲಿ ಚೆನ್ನಾಗಿದೆ. ಆದರೆ ಪೂರಣದ ತಾತ್ಪರ್ಯವೇ ತಿಳಿಯಲಿಲ್ಲ; ದಯಮಾಡಿ ಹೇಳುವಿರಾ?

   • ಈ ಪದ್ಯವು ಸಂಸ್ಕೃತದ ಕುರಿತಾಗಿಯೇ ಇದೆ. “ಎಲ್ಲಾ ಮಾನವರನ್ನು ಸುಮಧುರರೀತಿಯಿಂದ ಬೆಳಕಿನ ಕಡೆಗೆ ಒಯ್ಯುತಾ, ಪರಿಶುದ್ಧವಾದ ಶಬ್ದಪುಂಜವನ್ನು ನೀಡಿ ತಮಿಳಿನ ಭಾಷಾವೃದ್ಧಿಯಾಗಿರಲು,ಸಂಸ್ಕೃತವಾಙ್ಮಯವನ್ನು ಮೆಚ್ಚಿ , ಭವಭೂತಿಯು ಸಮಗ್ರಕಾವ್ಯವನ್ನು, ಪ್ರೀತಿಯಿಂದ ಶ್ರಮಿಸುತ ರಸಪೂರ್ಣಭಾವದಿಂದ ರಚಿಸಿದನು ” ಎಂಬುದು ಪದ್ಯದ ಅರ್ಥ. (ದ್ರಾವಿಡಭಾಷೆಗಳೆಲ್ಲವೂ ಸಂಸ್ಕೃತದಿಂದ ಪದಗಳನ್ನು ಎರವಲು ಪಡೆದಿವೆಯೆಂಬಂಶದಿಂದ ಮೂಡಿದ ಪೂರಣವಾದರೂ ಹಲವರು ತಮಿಳರು ಇದನ್ನು ತಮಿಳಿನ ಮಟ್ಟಿಗೆ ಅಲ್ಲಗಳೆಯುವುದೂ, ತಮಿಳೇ ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಭಾಷೆಯೆನ್ನುವುದೂ, ನಮಗೆಲ್ಲ ತಿಳಿದೇ ಇದೆ. ಆದರೂ ವಾದವಿವಾದಗಳ ತಪ್ಪೊಪ್ಪುಗಳ ಬಗ್ಗೆ ತಿಳಿಯದೆ ಬರೆದಿದ್ದೇನೆ. ಪದ್ಯದಲ್ಲಿ ದೋಷವಿದ್ದಲ್ಲಿ ದಯಮಾಡಿ ತಿಳಿಸಿರಿ )

    • ನಿಮ್ಮ ವಿವರಣೆ ಚೆನ್ನಾಗಿದೆ ಹಾಗೂ ಯಥಾರ್ಥವನ್ನೇ ಹೇಳಿದೆ. ಸಂಸ್ಕೃತದಿಂದ ಎಲ್ಲ ದೇಶಭಾಷೆಗಳೂ ಸ್ಫೂರ್ತಿಯನ್ನೂ ಪದಸಂಪದವನ್ನೂ ಗಳಿಸಿರುವುದು ಸತ್ಯ. ಆದರೆ ಇಂತಿದ್ದರೂ ಪ್ರಕೃತದ ಸಮಸ್ಯಾಪೂರಣಕ್ಕೆ (ಭವಭೂತಿಯು ತಮಿಳಿನಲ್ಲಿ ತನ್ನ ಕೃತಿಗಳನ್ನು ರಚಿಸಿದನೆಂಬಂತೆ) ಈ ಯುಕ್ತಿಯನ್ನು ಅನ್ವಯಿಸಲಾಗದೆಂದೇ ತೋರುತ್ತದೆ. ಇರಲಿ; ಮತ್ತೂ ಹೊಸ ಹೊಸ ಪೂರಣಗಳನ್ನು ರಚಿಸುವ ಸಾಮರ್ಥವು ನಿಮಗೆ ಅಶಕ್ಯವಲ್ಲ, ಅನಪೇಕ್ಷಿತವೂ ಅಲ್ಲ:-)

     • ಧನ್ಯವಾದಗಳು ಸಹೋದರರೆ. ಸಮರ್ಪಕವಾದ ಪೂರಣವನ್ನು ರಚಿಸುವ ಪ್ರಯತ್ನವನ್ನು ಮಾಡುತ್ತೇನೆ. ಇದೇ ಪೂರಣವನ್ನು,
      “……., ಅಳ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ,
      ಶ್ರಮಿಸುತೆ ಹೃದ್ಯಸಂಸ್ಕೃತದ ವಾಙ್ಮಯದೊಳ್ ರಸಪೂರ್ಣಭಾವದಿಂ ||”
      ಎಂದು ತಿದ್ದಿದಲ್ಲಿ ಸರಿಯಾಗುವುದೆ ?
      (ಶೀಘ್ರದಲ್ಲೇ ಒಂದೆರಡು ವಾರಗಳ ಕಾಲ ಪ್ರವಾಸದಲ್ಲಿರುವಾಗ ಪದ್ಯಪಾನದಲ್ಲಿ ಪಾಲ್ಗೊಳ್ಳುವುದು ನನಗೆ ಸಾಧ್ಯವಾಗದಿರಬಹುದು.)

 2. ಪ್ರಿಯಸೋಮ,
  ಭವಭೂತಿ ಎಂಬ ಪದವನ್ನು ಪ್ರತ್ಯಯರಹಿತವಾಗಿಸಿರುವುದು ಅನುಕೂಲವಾಯಿತು.
  ಅನ್ಬಿಲನೆಂಬ ಕವಿಯೊಬ್ಬನು ಭವಭೂತಿಯ ಎಲ್ಲ ಕಾವ್ಯಗಳನ್ನೂ ತಮಿಳಿಗೆ ಅನುವಾದಿಸಿದ:
  ಅಮರಮೆನಿಪ್ಪ (ಉತ್ತರ)ರಾಮಚರಿತಂ ಸಲೆ ಆರನು ಕರ್ಷಗೈಯದೈ
  ಗಮನಿಸೆ ದೇಶಭಾಷೆಗಳಿಗೆಲ್ಲಮನೂದಿಸಿಹರ್ ಕವೀಶ್ವರರ್|
  ರಮಿಪೊಲು ಕಬ್ಬಮನ್ನಿದನು ಮಾಲತಿಮಾಧವಮನ್ನುಮನ್ಬಿಲಂ
  ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿಸಮಗ್ರಕಾವ್ಯಮಂ||

  • ಪೂರಣವು ನಿಜಕ್ಕೂ ಸಂಶೋಧನಸಮುದ್ಭೂತವಾಗಿದ್ದು ನಿಮ್ಮ ಮನೋಧರ್ಮಕ್ಕೆ ತಕ್ಕಂತೆ ರೂಪುಗೊಂಡಿದೆ:-) ಅಭಿನಂದನೆಗಳು.
   ಆದರೆ ಕೆಲವೆಡೆ ಹಳಗನ್ನಡದ ವ್ಯಾಕರಣಶುದ್ಧಿ ಸಡಲಿದೆ. ಇಲ್ಲಿ ನಾನು ಸರಿಯಾದ ರೂಪಗಳನ್ನಷ್ಟೇ ನಿವೇದಿಸುವೆ. ಎಲ್ಲರೂ ಹೋಲಿಸಿ ನೋಡಿಕೊಳ್ಳಬಹುದು.
   ಕರ್ಷಂಗಯ್ಯದಯ್, ಅನೂದಿಸಿರ್ಪರ್, ರಮಿಪವೊಲ್, ಕಬ್ಬಮನಿದಂ, ಮಾಲತಿಮಾಧವಮಂ.

   • Thanks for the appreciation and suggestions. Here is the rectified verse. Hope the language dating is consistent here:
    ಅಮರಮೆನಿಪ್ಪ (ಉತ್ತರ)ರಾಮಚರಿತಂ ಸಲೆ ಆರನು ಮೋಹಿಸರ್ದೊ ಪೇಳ್
    ಗಮನಿಸೆ ದೇಶಭಾಷೆಗಳಿಗಂ ಕವಿವರ್ಯರನೂದಿಸಿರ್ಪರೈ|
    ರಮಿಪವೊಲನ್ಬಿಲಂ ಕಥನಮನ್ನಿದ ಮೇಣಿತರೆಲ್ಲಮಂ ವಲಂ
    ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿಸಮಗ್ರಕಾವ್ಯಮಂ||

    • ಸೊಗಸಾಗಿದೆ, ಸುಲಭವಾಗಿದೆ. ಸಂತೋಷವಾಯಿತು.

    • ಇದೀಗ ಪದ್ಯಬಂಧವು ಸಾಕಷ್ಟು ಸೊಗಸಾಯಿತು. ಆದರೂ ಕೆಲವೊಂದು ಸಣ್ಣ ಪುಟ್ಟ ಲೋಪಗಳಿವೆ. ಅವನ್ನು ಮುಖತಃ ವಿವರಿಸಿ ಸವರಿಸುವೆ.

 3. ಸುಮಾರು ಮೂರು ತಿಂಗಳುಗಳ ಹಿಂದೆ ಆಶುಕವಿತಾಗೋಷ್ಠಿಯಲ್ಲಿ ಶತಾವಧಾನಿಗಳು ನೀಡಿದ ಈ ಚಂಪಕಮಾಲಾವೃತ್ತದ ಸಮಸ್ಯೆಗೆ ನನ್ನ ಅಂದಿನ ಪರಿಹಾರದ ಮಾರ್ಗ ಹೀಗಿತ್ತು-
  ಚಂ|| ರಮಣಿಯ ದೂತಿಯೇಕೆ? ಕವಿತಾಸಖಿಯಿರ್ದೊಡೆ ಸಲ್ವನೊರ್ವನೇ
  ಗಮನಿಸಿ ಚಿತ್ತದೊಳ್ ನುಡಿವೆನೆಂದುರೆ ನೋಂತಿರೆ ಲೇಖನಲಕ್ಕಿರಲ್
  ಕ್ರಮದೆ ವಿಲೇಖಿಸಲ್ಕವರೆ ಮೇಣ್ ಲಿಪಿಕಾರರೆ ತಾಳಪತ್ರದೊಳ್
  ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿ ಸಮಸ್ತಕಾವ್ಯಮಂ||
  (ಇಲ್ಲಿ ತೆಲುಗಿನ ಅಲ್ಲಸಾನಿ ಪೆದ್ದನನ “ನಿರುಪಹತಿಸ್ಥಲಂಬು ರಮಣೀಪ್ರಿಯದೂತಿಕ ತೆಚ್ಚಿಯುಚ್ಚಿ…” ಪದ್ಯದ ಸಾಲಿಗೆ ಉತ್ತರವೆಂಬಂತೆ ಮೊದಲ ಸಾಲಿನಲ್ಲಿ “ಕವಿತೆಯೆಂಬ ಸಖಿ ಜೊತೆಗಿರುವಾಗ ರಮಣಿಯ ದೂತಿಯೇಕೆ? ” ಎಂದು ಪ್ರಾರಂಭಿಸಿ “ಚಿತ್ತದಲ್ಲಿ ಗಮನಿಸುತ್ತಾ ಪದ್ಯವನ್ನು ಹೇಳುತ್ತಾ ಸಲ್ಲುವವನು ಪದ್ಯವನ್ನು ಹೇಳುವ ವ್ರತ ತೊಟ್ಟಾಗ ಲೇಖನಕ್ಕೆ ಲಿಪಿಕಾರರು ಕ್ರಮವಾಗಿ ಅವನು ಹೇಳಿದ್ದನ್ನೆಲ್ಲಾ ತಮಿಳಿನಲ್ಲಿ ತಾಳಪತ್ರದಲ್ಲಿ ವಿಲೇಖಿಸುತ್ತಿರಲು ಭವಭೂತಿ ಅಳ್ತಿಯಿಂದ ಸಮಸ್ತಕಾವ್ಯವನ್ನೂ ರಚಿಸಿದ” ಎಂದು ಪೂರಣ ಮಾಡಲಾಗಿದೆ. ಹಾಗಾಗಿ ಭವಭೂತಿ ತಮಿಳಿನಲ್ಲಿ ರಚಿಸಿದ್ದಲ್ಲ. ಲಿಪಿಕಾರರು ತಮಿಳಿನಲ್ಲಿ ಬರೆದುಕೊಳ್ಳುತ್ತಿರುವಾಗ ಭವಭೂತಿ ಸಮಸ್ತಕಾವ್ಯವನ್ನೂ ರಚಿಸಿದ ಎಂದು ತಾತ್ಪರ್ಯ. 😉 😛 )

  • ಪರಿಹಾರ-ಕವಿತ್ವಗಳೆಲ್ಲ ಸಲೆಸೊಗಸಾಗಿವೆ. But your Bhavabhuti’s act is a bit far-fetched! Here is proof from SLB’s ನಾನೇಕೆ ಬರೆಯುತ್ತೇನೆ (translated by me):
   Once I tried dictating a novel. I couldn’t go through even one page. In an arena where characters other than those that bloom in my imagination are not to be present, the alien calligraphist seated opposite of me caused the characters to thaw. ‘Sir, what did you say… Please repeat that sentence… At the end, is it a full stop or a question mark… Slow down please…’ Even such small thorns would deflate the balloon of my creativity and send it plummeting. And as I dictate, the decibels, no, the sound, no, the noise in my voice was ample enough to douse the voice deep within the character or situation and render the entire script at par with the tenor of company meeting reports, sans connotative, suggestive and private meanings. Realizing that the characters would not stomp in my imagination unless I carted this person out, I relieved him. I should do it myself. The rhythm of prose that surges silently within me should be audible just to my inner ears.

   • ಭವಭೂತಿಯೂ ಭೈರಪ್ಪನನವರೂ ಇಬ್ಬರೂ ಒಬ್ಬರೇ ಅಲ್ಲವಲ್ಲ ಸರ್! (ಇನ್ನೂ ವಿಸ್ತಾರವಾಗಿ ಹೇಳುವುದಿದ್ದರೆ ಬಹಳಷ್ಟು ಕವಿಗಳು ಉಕ್ತಲೇಖನ ಬರೆಸುತ್ತಿದ್ದರೆಂಬುದು ಆ ಕಾಲದಿಂದ ಈ ಕಾಲದವರೆಗೂ ಕಂಡುಬರುವ ಅಂಶವೇ ಆಗಿದೆ. ಅದಕ್ಕೆ ಮೇಲೆ ಉಲ್ಲೇಖಿಸಿದ “ನಿರುಪಹತಿಸ್ಥಲಂಬು…” ಪದ್ಯದಲ್ಲಿಯೇ “ರಸಜ್ಞುಲೂಹ ತೆಲಿಯಂಗಲ ಲೇಖಕವಾಚಕೋತ್ತಮುಲ್ ದೊರಕಿನ ಗಾಕ ಯೂರಕ ಕೃತುಲ್ ರಚಿಯಿಂಪುಮನಂಗ ಶಕ್ಯಮೇ!” ಎಂಬ ಪೆದ್ದನನ ವಾಕ್ಯವೊಂದೇ ಸಾಕು. ನರಸ ಎಂಬಾತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದು “ಇಲ್ಲಿನ ಕವಿಗಳು ಹೇಳಿದ್ದ ಪದ್ಯವನ್ನು ತತ್ಕ್ಷಣದಲ್ಲೇ ಬರೆದು ತಪ್ಪುಗಳನ್ನೂ ಹುಡುಕಬಲ್ಲೆ” ಎಂದು ಹೇಳಿದ್ದೂ ತೆನಾಲಿ ರಾಮಕೃಷ್ಣನು ಅವನಿಗೆ ಪಾಠಕಲಿಸಿದ ಕಥೆಯನ್ನೂ ಕೇಳಿಯೇ ಇದ್ದೇವೆ. ಅಷ್ಟೆಲ್ಲ ಹಿಂದೇಕೆ? ಮಾನ್ಯರಾದ ಡಿ.ವಿ.ಜಿ ಅವರೇ ಎಸ್ ಆರ್ ರಾಮಸ್ವಾಮಿಯವರ ಬಳಿ ಬರೆಸುತ್ತಿದ್ದುದನ್ನು ನಾವೆಲ್ಲ ಕೇಳಿದ್ದೇವೆ. ಅಲ್ಲದೇ ಅವಧಾನದಲ್ಲಿ ಕೂಡ ಅವಧಾನಿಗಳು ಪದ್ಯವನ್ನು ಹೇಳಿದರೆ ಪೃಚ್ಛಕರು ಬರೆದುಕೊಳ್ಳುತ್ತೇವಲ್ಲ! ಅಲ್ಲಿ ಕೂಡ ಕಾವ್ಯರಚನೆ ತಾನೇ ನಡೆಯುತ್ತಿರುವುದು! ಭವಭೂತಿ ಕೂಡ ಹೀಗೆ ಹೇಳಿ ಬರೆಸುತ್ತಿದ್ದಿರಬಹುದು! ಇದಕ್ಕೆ ಭೈರಪ್ಪನವರು ಅಪವಾದವಾಗಬಹುದು. ಇನ್ನೂ ಹಲವರಿರಬಹುದು. ಆದರೆ ನನಗೆ ಸಮಸ್ಯೆ ಪೂರಣವಾಗಬೇಕಿತ್ತಷ್ಟೆ 😉 ನನ್ನ ಸಮಸ್ಯಾಪೂರಣದಿಂದ ನಿಮಗೆ ಹೊಸ ಸಮಸ್ಯೆ ಉದ್ಭವಿಸಿದರೆ ನಾನು ಜವಾಬ್ದಾರನಲ್ಲ 😉 😛 )

    • ಭೂತ-ಭೈರವಗಳ ಸಾಮ್ಯವಿದೆಯಲ್ಲ! ಅದಂತಿರಲಿ, ನಿಮ್ಮ ಬಿನ್ನಹದ ಅಂತ್ಯಪೂರ್ವ (penultimate) ವಾಕ್ಯಕ್ಕಾಗಿ ಧನ್ಯವಾದಗಳು. 😉

     • ಅತ್ಯಂತ ಸುಂದರಚರ್ಚೆ!!…..ನಿಜಕ್ಕೂ ಪದ್ಯಪಾನದಲ್ಲಿ ಈ ಪರಿಯ ಸರಸ-ಸುಂದರಚರ್ಚೆಗಳಾಗಿ ಅದೆಷ್ಟು ದಿನಗಳಾಗಿದ್ದುವೋ!…..ಪ್ರಸಾದು ಮತ್ತು ಕೊಪ್ಪಲತೋಟರಿಬ್ಬರಿಗೂ ಧನ್ಯವಾದಗಳು.

     • ಒಂದೊಮ್ಮೆ ನಾವು ಪರಸ್ಪರ ದೂಷಣಭಾವದಿಂದಲೇ ಇದ್ದೆವೆನ್ನಿ. ತಮ್ಮಂತಹ ಸಮನ್ವಯಸಾಕ್ಷಿಗಳು ಹೀಗೆ ಸಾರ್ಥಕ್ಯವನ್ನು ಕಲ್ಪಿಸಿದಾಗ, ಆ ಪ್ರಶಸ್ತಿಯಲ್ಲಿ ಮೀಯುತ್ತೇವೆ.

 4. ಶ್ರಮಮಯ ಲೋಕಜೀವನಕೆ ,ರಂಜಿಪ ಭಾವುಕಕಾವ್ಯಮೀವೆನೆಂ
  ಬಮಿತಮನಂ ದಿಟಂ ವರಕವಿತ್ವಕಲಾವಿದಗಾಗೆ,ಕಾಲದೊಳ್
  ಸುಮಮಯ ದೇವವಾಣಿಯೊಲಿದಾ ಸೊಬಗಂ ಮನಗೊಳ್ಳದಂದದಿಂ
  ತಮಿಳಿನೊಳ್,ಅಳ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ

  • ಆರಿಸಮಾಸಗಳು ತುಂಬ ಹೆಚ್ಚಾಗಿವೆ; ಪದ್ಯದ ಅರ್ಥವೂ ಸ್ಪಷ್ಟವಾಗುತ್ತಿಲ್ಲ. ಮುಖತಃ ಕಂಡಾಗ ತಿದ್ದುಗೆಗಳನ್ನು ಸೂಚಿಸುವೆ.

   • ಆಗಬಹುದು,ಧನ್ಯವಾದಗಳು.

    • ’ಆರಿಸಮಾಸಗಳು ತುಂಬ ಹೆಚ್ಚಾಗಿವೆ’ ಎಂದು ಅವರು ಹೇಳಿದರೆ, ನೀವು ’ಆಗಬಹುದು’ ಎನ್ನುವಿರಲ್ಲ!

     • ನೋಡಿ! ಹೇಳಿದ್ದೇನೇ ಆದರೂ ,ಪದ್ಯಕ್ಕೆ ಸವರಣೆಯಂತೂ ದೊರಕಿದೆ !

 5. ಹಿಮಗಿರಿಯ೦ದದಿ೦ ತೊಳಗುತುತ್ತರರಾಮಚರಿತ್ರೆಯೊ೦ದಿರಲ್
  ತಮತಮಗೆ೦ದೆನುತ್ತೆ ಕವಿಗಳ್ ಸ್ವಕಮಪ್ಪ ವಚೋವಿಧ೦ಗಳೊಳ್
  ಸಮನಿಸೆ ಭಾವದೊಳ್ ಬರೆದರಿ೦ತು, ತಮಿಳ್ನುಡಿಗಬ್ಬಿಗ೦ ಮಗುಳ್
  ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿ-ಸಮಸ್ತ-ಕಾವ್ಯಮಂ

  ಭವಭೂತಿ-ಸಮಸ್ತ-ಕಾವ್ಯಮಂ ಎ೦ದು ಸಮಸ್ತ ಪದವನ್ನಾಗಿಸಿ, ಆತನ ಕಾವ್ಯವೆಲ್ಲವನ್ನೂ ತಮಿಳು ಕವಿಯೊರ್ವ ಪುನಾರಚಿಸಿದ ಎ೦ದು ತಾತ್ಪರ್ಯ.
  Did in aashukashthi vitago around 2 months back.

  • Though the idea matches mine, your diction is good. Also, such versification is helpful in learning how a similar topic is handled by others.
   ತಮಿಳುಕಬ್ಬಿಗನು ತಮಿಳಿನಲ್ಲಿ ರಚಿಸಿದ ಎಂಬ ಪುನರುಕ್ತಿಯನ್ನು ತೊಡೆದರೆ ಶುದ್ಧವಾಗುತ್ತದೆ. ಈ ಕಾರಣಕ್ಕಾಗಿಯೇ ನಾನು ’ಅನ್ಬಿಲ’ನನ್ನು ತಂದದ್ದು.
   The word VITAGO is not listed in http://www.dictionary.com. What does it mean?

 6. ಸಮಮನಮಂ ಪೊಣರ್ದ ರಘುರಾಮ ಕಥಾನಕಮಿಲ್ಲದಿರ್ಪೊಡಂ,
  ಸಮೆವುದು ಭಾಷೆ,ಮೌಲ್ಯಮೆನುತಂತೆಯಿದಂ ,ಕವಿಕಂಬನೆಂಬವಂ
  ತಮಿಳಿನೊಳಳ್ತಿಯಿಂ ರಚಿಸಿದಂ,ಭವಭೂತಿ ಸಮಗ್ರಕಾವ್ಯಮಂ
  ಸಮನಿಸದಿರ್ದೆಯೇ,ರಸಿಕರಂ ಸೆಳಗೊಂಡದನೀಕ್ಷಿಸುತ್ತೆ ತಾಂ

 7. ಅಮಮಮಮೇನಿದೀ ಪುಟಗಳೊಳ್ ಸ್ಫುಟಮಾದುದನೆಲ್ಲು ಕಾಣ್ಬೆ ನಾಂ
  ಗಮನಿಸರೇತಕೈ ಮಹಿಮರಿಂತಹ ತಪ್ಪುಗಳನ್ನೆ ಲೆಕ್ಕಿಸಲ್
  ಕ್ರಮದೊಳುಮೆಲ್ಲ ಮುದ್ರಿಕೆಯೊಳೀ ತೆರದೊಳ್ ಪದಪಂಙ್ತಿ ಇಂತಿರಲ್
  ತಮಿಳಿನೊಳಳ್ತಿಯಿಂ ರಚಿಸಿದಂ,ಭವಭೂತಿ ಸಮಗ್ರಕಾವ್ಯಮಂ

  • ಪಂಕ್ತಿ ಅಥವ ಪಙ್ತಿ

  • ಪೂರಣದ ನಾವೀನ್ಯ ತುಂಬ ಸೊಗಸಾಗಿದೆ. ಭಾಷೆಯಲ್ಲಿ ಮಾತ್ರ ಹಳಗನ್ನಡದ ಘಮಲು ಹೆಚ್ಚಬೇಕಿದೆ.

 8. “ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ”
  ತಮಗನಿಸಿಪ್ಪುದಂ ನುಡಿಯಲೆಂತಿದು ಸೋಜಿಗಮಕ್ಕು ಕಾಣೆನೈ!
  ದ್ಯುಮಣಿಯ ಕಾಂತಿಯಿಂ ಸಕಲಜೀವಕುಲಂ ಬದುಕಿರ್ಪೊಡಂ ದಿಟಂ
  ತಮಮಳಿಗೆಮ್ಮ ಕಾರಣದಿನೆಂಬವರಿಂದೆಯೆ ಧಾತ್ರಿ ತುಂಬಿರಲ್!

  (ತಮ್ಮಿಂದಲೇ ಎಲ್ಲವೂ ಎಂದೆಂಬವರಿರುವಾಗ, ತಮಿರು(ಕನ್ನಡವನ್ನೂ ಬಲ್ಲವರೆಂದು ತಿಳಿದರೆ ,ಒಳಿತು 🙂 ), “…” ಇದನ್ನು ಹೇಳಿಕೊಂಡಿದ್ದರಲ್ಲಿ ಸೋಜಿಗಪಡುವಂತದ್ದಾದರೂ ಏನು!)

  • ಆಹಾ! ಅತ್ಯದ್ಭುತಪರಿಹಾರ!!……ಇದನ್ನು ಯಾವುದೇ ತಮಿಳನೂ ಮೆಚ್ಚುವಷ್ಟು ಹಾಸ್ಯಪ್ರವೃತ್ತಿ ಇರುವುದೆಂದು ಭಾವಿಸುವೆ. ಇದಕ್ಕೆ ಆರುನೂರುವರ್ಷಗಳ ಮುನ್ನ ತಮಿಳನಾಗಿದ್ದ ನಾನೇ ಸಾಕ್ಷಿ:-)

   • ಪದ್ಯದ ಮೆಚ್ಚುಗೆಗಾಗಿ ತುಂಬಾ.. ಧನ್ಯವಾದಗಳು.

   • ಪದ್ಯವು ತುಂಬ ಚೆನ್ನಾಗಿದೆ. ಆದರೆ ಶ್ರೀ ಗಣೇಶರ ಮಾತಿನಲ್ಲಿ ನನಗೆ ವಿಶ್ವಾಸವಿಲ್ಲ. ಇದು ಬಿ.ಜಿ.ಎಲ್. ಸ್ವಾಮಿಯವರ ಜಾಡಿನ ವಕ್ರೋಕ್ತಿ. ಇದರ ತಮಿಳು-ಅನುವಾದಕ್ಕೆ ಚಂಗಕಾಪ್ಪಿಯಕಟ್ಟಾಳುಗಳ ಪ್ರತಿಕ್ರಿಯೆಯು ಏನಿರುತ್ತದೆ ಎಂಬ ಕುತೂಹಲ ನನಗೆ!

 9. “ಭವಭೂತಿ”ಯ ಹೆಸರಿನಲ್ಲಿ, ವಿನೋದಾಗಿ !!

  ಯಮ ಸುಕುಮಾರ ಬಂಧದೊಳು ಚಾತುರ ಚೋರರ ರಾಜಕಾರ್ಯವಂ
  ಸಮ ಲಲಿತಬ್ಬೆಯಾ ರಗಳೆ ಮೇಣ್ ಜಯಮೇಜಯ ಕಾರ್ಯಭಾರವಂ
  ಮಮ ಪಳನೀ ವಿಭೂತಿ ಪುರುಷಂ ಬಗೆದೆನ್ನದೆ ರೀತಿನೀತಿಯೊಳ್
  ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ ।।

  ಸುಕು”ಮಾರ” ಬಂಧದ “ಲಲಿತ ರಗಳೆ”ಯಲ್ಲಿ, “ರಾಜ”ಕಾರ್ಯವನ್ನು – “ಭವಭೂತಿ” = ಪಳನಿಯ ವಿಭೂತಿ ಪುರುಷ ?! ತನ್ನದೇ ಧಾಟಿಯಲ್ಲಿ (ತಮಿಳಿನಲ್ಲಿ) ಮಹಾಕಾವ್ಯವಾಗಿಸಿದನು !!

 10. ಭವ=worldly, ಭೂತಿ=existence, ಭವ-ಭೂತಿ-ಸಮಗ್ರಕಾವ್ಯ=An extensive story of worldly existence
  ತಿಮಿರಮನಿಂಗಿಪೋಲನಿಬರಿಂಗೊರೆಯಲ್ ಜನಜೀವನಾಧ್ವಮಂ
  ಸಮರ-ಸಮನ್ವಯಂಗಳನುರಾಗಮಸೂಯೆಗಳೆಂದಿಗುಂ ವಲಂ
  ದಮನಕಸಾಧ್ಯಮೆನ್ನುತಲಿ ಸಾರ್ಚಿಹ ರಾಮಸುಗಾಥೆಯನ್ನಿವಂ (ಕಂಬನ್)
  ತಮಿಳಿನೊಳಳ್ತಿಯಿಂ ರಚಿಸಿದಂ ಭವ-ಭೂತಿ-ಸಮಗ್ರ-ಕಾವ್ಯಮಂ||

 11. ಗಮನಿಸುತುಂ ತಮಿಳ್ ಚಲನಚಿತ್ರಗಳೊಳ್ ಬಗೆ ವೈಪರೀತ್ಯದಾ
  ಭ್ರಮಮರಿತಂತು, ಭಾವ ಮಿಗಿಲಾದುದು ಭಾಷೆಯದಲ್ಲವೆಂದವಂ
  ಸಮನಿಸುತೆನ್ನ ನಾಟಕಮ “ಮಾಲತಿಮಾಧವ” ಚಿತ್ರಮಾಗಿಸಲ್
  ತಮಿಳಿನೊಳಳ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ ।।

  ತನ್ನ “ಮಾಲತಿಮಾಧವ” ನಾಟಕವು ತಮಿಳಿನಲ್ಲಿ ಚಿತ್ರೀಕರಿಸುವುದಕ್ಕೆ ಸೂಕ್ತವೆಂದರಿತ ಭವಭೂತಿ, ಅದನ್ನು ಸಂಪೂರ್ಣವಾಗಿ ತಮಿಳಿನಲ್ಲಿ ರಚಿಸಿದನೇ ?!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)