May 292011
 

ಸುಮಹಿಮಾಲಯ

ದಿವಿಷತ್ತರಂಗಿಣೀ ತೀರ ಸುರಸುಂದರೀ

ಕರಕಂಕಣ ಕ್ವಣ ಕ್ವಣನ ವೀಣಾರಾವ

ಕಲಿತ ಹರವಿಜಯ ಮಂಗಳಗೀತಿಕಾ ಪ್ರತಿ

ಧ್ವನಿತ ಕಂದರನು, ಹಿಮವದ್ಗಿರೀಂದ್ರನೆ ನಾನು


ಬಹುಪುಣ್ಯ ನದನದೀ ಲಹರೀ ಮುಹುರ್ಮುಹುರ್

ಮಹನೀಯದರ್ಶನ ಸ್ಪೃಹಣೀಯನೇ ನಾನು

ಭರತರಾಜ್ಞೀ ಶಿರೋಭಾಸಮಾನ ಮನೋಜ್ಞ

ವಜ್ರಕೋಟೀರ ಹಿಮವದ್ಗಿರೀಂದ್ರನು ನಾನು


ಹರ ಜಟಾಜೂಟಾಗ್ರ ತರುಣೇಂದು ದರಹಾಸ

ಲೀಲಾ ಸಮುಲ್ಲಾಸ ಕೈಲಾಸನೇ ನಾನು

ರಾಜಹಂಸ ವಿಹಾರ ರಮಣೀಯ ರಾಜೀವ

ರಾಜೀ ವಿರಾಜಿ ನವರಸ ಮಾನಸನು ನಾನು


ಉಪನಿಷತ್ ಸುಂದರೀ ಸುಪವಿತ್ರ ಪದಕಂಜ

ಮಂಜು ಮಂಜೀರ ಶಿಂಜಿತವೆ ತುಂಬಿಹುದಿಲ್ಲಿ

ಚೈತನ್ಯವುಕ್ಕಿ ಭೂಮಾತೆ ಗೋಮಾತೆ ಯಾ

ಗುತ್ತಿಲ್ಲಿ ಪೃಥ್ವಿಗೌಷಧಿಗಳನು ಹಿಂಡಿದಳು


ಬಿಲ್ಲಾಗಿ ಮೇರುಪೃಥ್ವೀಧರನ ಬಗ್ಗಿಸುತ

ಫಣಿವಲ್ಲಭನ ಧನುರ್ಗುಣವಾಗಿ ಬಂಧಿಸುತ

ವಿಶಿಖವಾಗಲು ಮಹಾವಿಷ್ಣುವನು ಸಂಧಿಸುತ

ತ್ರಿಪುರಾಸುರರ ಸಂಹರಿಸಿದ ಹರನಿಲ್ಲಿಯೇ


ಕ್ರೋಧದಿಂ ಸಾಧುಗಳ ಬಾಧಿಸುತ ವೇಧಿಸುವ

ಮಹಿಷಾದಿ ಧೂರ್ತ ದುರ್ಮದ ದುಷ್ಟದಾನವರ

ಸಂಹಾರವಂಗೈದು ಸಿಂಹಾಸನವನೇರಿ

ದುರ್ಗಾಭವಾನಿ ಮುಂದಕೆ ಸಾಗಿದೆಡೆಯಿದೇ


ಮುಲ್ಲೋಕಗಳ ನಲ್ಲಕಲ್ಲೋಲ ಗೈವಂಥ

ಧರ್ಮವಿದ್ರೋಹಿ ತಾರಕ ದಾನವನ ಹರಿಸೆ

ಹೊರಟ ತ್ರಿಂಶತ್ಕೋಟಿ ತ್ರಿದಶ ಯೋಧರ ಕೂಡಿ

ಸರ್ವಸೇನಾನಿಯಾದನು ಶಕ್ತಿಧರನಿಲ್ಲಿ


ಅರ್ಧಾಂಗಿ ಪಾಂಚಾಲಿ ಪ್ರಾರ್ಥಿಸಲು ನಿಜಭುಜಾ

ಸ್ಕಂದದೊಳು ಗದೆಯಿರಿಸಿ ಕೌಂತೇಯಮಧ್ಯಮನು

ಯಕ್ಷರಾಕ್ಷಸ ಚಮೂ ವಿಕ್ಷೋಭವನು ಗೈದು

ಸೌಗಂಧಿಕಾಬ್ಜಗಳ ಸಾಧಿಸಿದ ನೀಕೆಲದಿ


ತೊಡೆತಟ್ಟಿ ನೆಗೆದು ಮೇಲ್ಬಿದ್ದು, ತುಳುಕಲು ಶಿರೋ

ಗಂಗೆ, ಮುಕ್ಕಣ್ಣನೊಳು ಸೆಣಸಿ ಸಮರದಿ ಗೆದ್ದು

ಭಾವಿಭಾರತ ರಣಶ್ರೀ ವಿಜೇತ ಕಿರೀಟಿ

ಪಾಶುಪತವಂ ಸಮೋಪಾರ್ಜಿಸಿದ ನಿಲ್ಲಿಯೇ


ಆಡಿದರು ಆಮ್ನಾಯ ಬಾಲಿಕೆಯರೀಕೆಲದಿ

ಯುಗವೀಥಿಗಳಲಿ ನಾಲಕ್ಕು ಕಂಬಗಾಳಾಟ

ಹಾಡಿದರು ಬ್ರಹ್ಮರ್ಷಿಗಳು ವೇದಗಳನಿಲ್ಲಿ

ಗಂಗಾ ತರಂಗಿಣೀ ಗತಿಗಳಲಿ ಶೃತಿಕಲೆತು


ನರನ ನಾರಾಯಣನ ಚರಣ ವಿನ್ಯಾಸದಿಂ

ಭೂದೇವಿ ತನುವೆಲ್ಲ ಪುಲಕಗೊಂಡುದುಯಿಲ್ಲೆ

ಜೈಮಿನೀ ಪೈಲ ವೈಶಂಪಾಯನ ಸುಮಂತ

ರಿಗೆ ಚತುರ್ವೇದಗಳ ವ್ಯಾಸ ಪ್ರಕಟಿಸಿದ ನೆಲ


ಕಾಳಿದಾಸ ಕವೀಂದ್ರ ಕವಿತಾಕುಮಾರಿಯೀ

ಶಿಖರಾಂಚಲಗಳಲ್ಲಿ ಸ್ವೇಚ್ಛೆಯಿಂ ತಿರುಗಿದಳು

ಕಂದಿಕುಂದುವ ಯಕ್ಷಸುಂದರಿಗೆ ತಣ್ಪಾಗಿ

ತಲುಪಿ ಸಂದಿತು “ಮೇಘಸಂದೇಶ” ವಿಲ್ಲಿಯೇ


ಕಾಳಿದಾಸ ಕವೀಂದ್ರ ಕವಿತಾಕುಮಾರಿ ನ-

ಮ್ಮಗಜೆಪದಕಂಗಾರ ಶೃಂಗಾರಗೈದಿದ್ದು

ತಳುಕು ವಾಲ್ಗಣ್ಣ ಕಜ್ಜಲರೇಖೆಯಿಂ ರಚಿಸಿ

ಅಲಪಿಂದ ಕಲ್ಯಾಣ ತಿಲಕವನು ತಿದ್ದಿದ್ದು


ಇದೆ ತಪೋಭೂಮಿ ನನ್ನಯ ಮಹಾಭೂಮಿಯಿದೆ

ಬದರೀ ಮಹಾಕ್ಷೇತ್ರ ಪರಮಪಾವನ ಭೂಮಿ

ಸತ್ಯ ಧರ್ಮಗಳಿಗಾಶಾಜ್ಯೋತಿಯೀಭೂಮಿ

ಶೌರ್ಯಧೈರ್ಯಗಳು ಸ್ವೇಚ್ಛೆಯಿನೆಳೆದ ಗೆರೆ, ಭೂಮಿ


ವಿಶ್ವವಿಖ್ಯಾತವೀ ವೀರಭಾರತಭೂಮಿ

ವೇದಪ್ರಪೂತ ವೀ ವಿಜಯಭಾರತಭೂಮಿ

ಈ ಬುವಿಯಮೇಲೆ ದಂಡೆತ್ತಿ ಬಂದವರಾರು?

ಈ ನೆಲದಮೇಲೆ ಕೊಬ್ಬೇರಿ ನಿಂತವರಾರು?


ಯಾವನೋ ನಮ್ಮಗೋಡೆಯ ಹತ್ತ ಬಂದವನು?

ಯಾವನೋ ನಮ್ಮ ಮನೆಯೊಳಗೆ ಸುಳಿಯುವ ಕಳ್ಳ?

ನೂರಾರುಕೋಟಿ ವೀರಾಗ್ರಣಿಗಳೇಕವೈ !

ಭರತಪೌರುಷರೇಖೆ ಪರದುರಾಲೋಕವೈ!


ನರರಾಗಿ ಗಾಂಡೀವ ಧರರಾಗಿ ನಿಂತಿರಲು

ಹರರಾಗಿ ತ್ರಿಪುರಸಂಹರರಾಗಿ ಕಾಣಿಸಲು

ಭೀಮರಾಗಲು ಸಮರಭೀಮರಾಗಲು ಹೋರಿ

ದುರ್ಗವಾಗುತ ವಿಜಯಸಂಸರ್ಗರೆನೆ ಬರಲು


ಓಟಕೀಳರೆ ಖಳರು ಗರ್ವಾಂಧ ಸೈಂಧವರು !

ಸೊರಗಿ ಸೊಪ್ಪಾಗರೇಂ ಕುಟಿಲಕಾಮಾಂಧಕರು !

ತೊಲಗಿ ಮರೆಯಾಗರೇಂ ಧೂರ್ತ ದುಶ್ಯಾಸನರು !

ಮುರಿದು ಮುಕ್ಕಾಗರೇಂ ಕ್ರೂರ ಮಹಿಷಾಸುರರು !


ಸಾಟಿಯಿಲ್ಲದ ವಿಶ್ವ ವೈತಾಳಿಕನು ನಾನು

ಅನುಪಮ ವಿಖ್ಯಾತ ಹಿಮವದ್ಗಿರೀಂದ್ರ ನಾನ್

ಚಂಡಪ್ರಚಂಡಮಾರ್ತಾಂಡ ಕಿರಣಗಳು ನೀವ್

ಏಳಿ ಪ್ರಜೆಗಳೆ ನನ್ನ ಸೋದರರೆ ಎದ್ದೇಳಿ


ರೋಷಂಗಳನು, ಕುಲದ್ವೇಷಂಗಳನು, ಚೋರ

ವೇಷಂಗಳನು, ಸ್ವಾರ್ಥದೋಷಂಗಳನು ಬಿಟ್ಟು

ಸತ್ಯವಾಗುತ ಐಕಮತ್ಯವಾಗುತ ಜಯೌ

ನ್ನತ್ಯವಾಗುತ ಜನಸ್ತುತ್ಯವಾಗುತ ಬನ್ನಿ


ಪ್ರಳಯಕಾಲಮಹೋಗ್ರ ಭಾನುಕಿರಣಗಳಾಗಿ

ದಿಗ್ದಿಗಂತಗಳಲ್ಲಿ ನವದೀಪ್ತಿ ಹೊಮ್ಮಿಸುತ

ಕಲ್ಪಾಂತ ಕುಪಿತ ಸಾಗರ ತರಂಗಗಳಾಗಿ

ವೈರಿರಾಜನ್ಯ ಸೈನ್ಯಗಳ ಮುಳುಗಿಸಿನೆಡುವ


ವಿಲಯ ರುದ್ರ ಕರಾಳ ವಿಕಟ ಘರ್ಜನೆಯಿಂದ

ದಿಗ್ಗಜೇಂದ್ರಗಳು ಕಿವುಡಾಗಿ ಕೆಳಬೀಳ್ವಂತೆ

ಸಂವರ್ತ ಸಮಯ ಝಂಝಾಮಾರುತಗಳಾಗಿ

ವಿಮತವೈರಿಗಳ ಶೀರ್ಷಗಳ ತೆಗೆಯಿರಿಚಿಮ್ಮಿ


ಭಾವಿಭಾರತ ನಿರಭ್ಯಂತರಾಭ್ಯುದಯ ಸಂ

ಭಾವನಾಹ್ಲಾದ ಭರ ಪಾರವಶ್ಯನು ನಾನು

ಆರ್ದ್ರ ಮಾನಸ ಪುಲಕಿತಾಂತರಾನಂದಾಶ್ರು

ವಾಹಿನೀ ಭರಿತ ಹಿಮವತ್ಪರ್ವತವೆ ನಾನು

(ಮೂಲ: ’ಸುಮಹಿಮಾಲಯಂ” ಡಾ.ಕರುಣಶ್ರೀ ವಿರಚಿತ “ಉದಯಶ್ರೀ” ಭಾಗ ೪)

  2 Responses to “ಸುಮಹಿಮಾಲಯ”

 1. ಮೌಳಿಯವರೇ,

  ಬಹಳ ಚೆನ್ನಾಗಿದೆ. ಉತ್ಸಾಹ, ಪ್ರೋತ್ಸಾಹ ಪೂರಿತವಾಗಿದೆ. ಕೆಲವೊಂದು ಸಾಲುಗಳಂತೂ ಅತಿ ಸುಂದರ ::

  ಹಾಡಿದರು ಬ್ರಹ್ಮರ್ಷಿಗಳು ವೇದಗಳನಿಲ್ಲಿ
  ಗಂಗಾ ತರಂಗಿಣೀ ಗತಿಗಳಲಿ ಶೃತಿಕಲೆತು

  ಭಾವಿಭಾರತ ನಿರಭ್ಯಂತರಾಭ್ಯುದಯ ಸಂ
  ಭಾವನಾಹ್ಲಾದ ಭರ ಪಾರವಶ್ಯನು ನಾನು

  ಆರ್ದ್ರ ಮಾನಸ ಪುಲಕಿತಾಂತರಾನಂದಾಶ್ರು
  ವಾಹಿನೀ ಭರಿತ ಹಿಮವತ್ಪರ್ವತವೆ ನಾನು

  ಈ ತರಹದ ಸುಂದರ ಕೃತಿಗಳನ್ನು ನಮಗೆ ಪರಿಚಯಿಸುತ್ತಿರುವುದಕ್ಕೆ ಧನ್ಯವಾದಗಳು
  – ರಾಮಚಂದ್ರ

 2. ಮೌಳಿಯವರೇ,

  ತುಂಬಾ ಚೆನ್ನಾಗಿದೆ, ಪರಿಚಯಿಸಿದ್ದಕ್ಕೆ ಧನ್ಯವಾದಗಳು 🙂
  ಹಿಮಾಳಯದೊಡನೆ ಎಷ್ಟೆಲ್ಲಾ ಭಾವನೆಗಳು ತುಂಬಿದೆ…

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)