Jun 032011
 
ನಿನಗಾಗಿ ನಾ ಪಡುವೆನೆನಲಾದ ಕಷ್ಟಗಳ –
ವೆನಗಾದ ಸಂತೋಷದಣುಮಾತ್ರವು  ||
ನಿನ ಸ್ವಾಗತದ ನಗುವಿನಪ್ಪುಗೆಯ ಸಂತಸಕೆ
ನನ ದುಡಿತದಾ ದುಗುಡ ತೃಣಮಾತ್ರವು  || ೧ ||

ಪೂರಣಿಸಿದೇಯೆನ್ನ ಭಾವಗಳ ನ್ಯೂನತೆಯ
ಸಾರವನು ದೊರಕಿಸಿದೆ ನೀನೀ ಬಾಳಿಗೆ ||
ಬಾರ ಕುಡಿಯೇ ವಂಶ ಸಾರಾಂಶದಾ ಮಿಡಿಯೆ
ತಾರ ಬದುಕಿಗೆ ನೀ ಮಹೋತ್ಸಾಹವಾ || ೨ ||

ಬಾಡಿ ಜ್ವರದಿಂ ನೀನು ನರಳಿದ್ದ ರಾತ್ರಿಯಲಿ
ಮಾಡಿದ್ದ ಸೇವೆಯನೆ ಹಿರಿದೆಂದೆನು ||
ಕಾಡಿರುವ ಸಂಕಟವನಾನನುಭವಿಸುವಾಗ
ನೋಡಿ ನಿನ ಸೈರಣೆಯ ಕಿರಿದಾದೆನು ||‌‌ ೩ ||

ಜೀವನದಲೆಷ್ಟೆಷ್ಟು  ಅಡೆತಡೆಗಳೇ ಬರಲಿ
ನೋವು ಸಾವಿನ ದಡಕೆ ಕರೆದೊಯ್ಯಲಿ ||
ಭಾವನೆಯ ಸೇತುವೆಯ ಕಟ್ಟಿರಲು ನಿನ್ನೊಡನೆ
ಯಾವ ಸೆಡೆಯಿಲ್ಲದೆಯೆಯೆದೆಯೊಡ್ಡುವೆ || ೪ ||

ನನಗಿಂತ ನೀ‌ ಜಾಣ (ಣೆ), ನನಗಿಂತ ನೀ ಶಾಣ (ಣೆ)
ನನಗಿಂತ ನೀ ಚೆಂದ, ನೀ ಚದುರನು (ಚದುರೆಯು) ||
ನಿನ ಪರಿಣಿತಿಗಳಾಟ ಪಾಠಗಳ ವಲಯದಲಿ
ಯೆನಗೇ ಸ್ವತಃ ಸಂದದನುಭಾವವು || ೫ ||

ಒಂದೊಂದರಿಂದೊಂದು ಸುಖ ದುಃಖಗಳು ಬರುವು –
ದೆಂದೆಂಬ ಮಾತುಗಳನಾನೊಪ್ಪೆನು
ಬಂದಿಳಿದೆ ನೀ ಭುವಿಗೆ ಕಾಮದುತ್ತುಂಗದಲಿ
ತಂದಿರುವೆ ಸುಖಗಳ ಪರಂಪರೆಗಳ || ೬ ||

– ರಾಮಚಂದ್ರ

೫ ಮತ್ರಾ ಗಣದ ಛಂದಸ್ಸು  : 
೫ + ೫ + ೫ + ೫
೫ + ೫ + ೫ + ೨

  2 Responses to “ಮಗುವೇ …”

  1. ಬಹಳ ಚೆನ್ನಾಗಿದೆ.

  2. Ram,

    ನನಗೆ ತುಂಬಾ ತುಂಬಾ ಇಷ್ಟಾ ಆಯ್ತು… ಅದರಲ್ಲೂ ಮೊದಲನೇ ಭಾಗವತು ಅದ್ಬುತವಾಗಿದೆ "ಕಷ್ಟಗಳ – ವೆನಗಾದ ಸಂತೋಷದಣುಮಾತ್ರವು " ಮತ್ತು "ನನ ದುಡಿತದಾ ದುಗುಡ ತೃಣಮಾತ್ರವು"

    🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)