Nov 282015
 

ದೃತವಿಲಂಬಿತದ ಈ ಸಮಸ್ಯೆಯನ್ನು ಪೂರಯಿಸಿ

“ಬಳೆಗಳೇ ಭವರಂಗೆ ವಿಭೂಷಣಂ”

ಭವರ – ವೀರ

  118 Responses to “ಪದ್ಯಸಪ್ತಾಹ ೧೭೯: ಸಮಸ್ಯಾಪೂರಣ”

 1. ಆವ ಕೈ ಅಗ್ನಿಪ್ರಸಾದಿತವಾದ ಗಾಂಡೀವವನ್ನು ಧರಿಸಿ ಮೆರೆಯುತ್ತಿದ್ದಿತೋ, ಕಾಲಾನುಕ್ರಮದಲ್ಲಿ ಅದೇ ಕೈ ಬಳೆಗಳನ್ನು ತೊಟ್ಟು ಊಳಿಗವನ್ನು ಮಾಡಬೇಕಾಯ್ತು..

  ತಳಮದಗ್ನಿಧನುರ್ಪ್ರಖರಾಭದಿಂ
  ಬೆಳಗುತಿರ್ದುದಲಾ ವರಪಾರ್ಥನೊಳ್
  ತಳರ್ಪ ಕಾಲದೊಳೂಳಿಗದಿಂ ಗಡಾ
  ಬಳೆಗಳೇ ಭವರಂಗೆ ವಿಭೂಷಣಂ

  ಪರಮತೀಯರ ಆಕ್ರಾಂತಿಯಿಂದ ನೆಲವನ್ನು ಕಾಯಲೆಂದೇ ಉದಯಿಸಿದ ಪಂಥ, ಸಿಕ್ಖರ ಖಾಲ್ಸಾ ಪಂಥ. ಗುರುಗೋವಿಂದಸಿಂಹರ ಆಣತಿಯಂತೆ ಇವರು ಕೈಯಲ್ಲಿ ಉಕ್ಕಿನ ಬಳೆಯನ್ನು ಧರಿಸುವುದುಂಟು…

  ಇಳೆಯನನ್ಯಮತೋಪಹತಿಕ್ರಿಯಾ
  ವಳಯದಿಂ ಪೊರೆಯಲ್ಕೆ ತೆರಳ್ದು ತಾ
  ವಳವನಾಂತವರ್ಗಂ ದಿಟದುರ್ಕಿನಾ
  ಬಳೆಗಳೇ ಭವರರ್ಗೆ ವಿಭೂಷಣಂ

  • ತು೦ಬ ಚೆನ್ನಾಗಿದೆ ಮೌರ್ಯರೆ. ಧನುರ್ಪ್ರಖರ.. ಧನು:ಪ್ರಖರ ಆಗಬಏಕಲ್ಲ..

   • ನನಗೂ ಈ ವಿಷಯದಲ್ಲಿ ಕೊಂಚ ಸಂದೇಹವಿತ್ತು.. ಆದರೆ ಸವರಿಸುವುದು ಹೇಗೆಂದು ನನಗೆ ತಿಳಿದಿಲ್ಲವಲ್ಲ ಆರ್ಯರೇ!

    • ಸವರಿಸುವುದರಲ್ಲಿ ಏನು ತೊ೦ದರೆ? ಮಾತ್ರಾವ್ಯತ್ಯಾಸ ಏನೂ ಆಗುವುದಿಲ್ಲವಲ್ಲ…

     • I meant technical problems.. ಈ ಜಾಲತಾಣದಲ್ಲಿ re-edit ಮಾಡುವುದು ಹೇಗೆಂದು ನನಗೆ ತಿಳಿದಿಲ್ಲ..

     • ಹಿಹಿ.. ನಿಮ್ಮ ಖಾತೆಯಿ೦ದ ಸ೦ಪ್ರವೇಶ ಮಾಡಿದರೆ ಅದು edit ಆಯ್ಕೆಯನ್ನು ಕೊಡುತ್ತದಲ್ಲ. ನೀವು ಅನಾಮಧೇಯವಾಗಿ ಪ್ರಕಟಿಸುತ್ತೀರೋ?

     • ಇಲ್ಲಿ ನನ್ನ ಖಾತೆಯೇ ಇಲ್ಲ… ನನ್ನ ಬುದ್ಧಿಗಿಷ್ಟು… ಎರಡು ವರ್ಷಗಳನ್ನು ಹೀಗೇ ಕಳೆದುಬಿಟ್ಟೆ… ಮೊದಲು ಒಂದು ಖಾತೆಯನ್ನು ತೆರೆಯಬೇಕು

     • ಈಗ ಎಲ್ಲವೂ ಸರಿಯಾಯಿತು..

     • ನೀವು ನಿಜವಾದ ಹಾದಿರ೦ಪರು! ! 🙂

     • ಮೌರ್ಯನು ನಿಜವಾದ ಹಾದಿರಂಪನೆಂದಾದರೆ, ನಾನೇನಾದಂತಾಯಿತು?

     • ಮೌರ್ಯರು ಸತ್ಯದ ಹಾದಿರ೦ಪರು, ನೀವು ಋತದ ಹಾದಿರ೦ಪರು!

     • ಜಗನ್ನಾಥಾ! ಜಗನ್ನಾಥಾ! ನಾನಾವೆಡೆಯಲ್ಲಿ ರಂಪವನ್ನು ಮಾಡಿರುವೆನೆಂದು ನನ್ನ ಮೇಲೆ ಈ ಆಪಾದನೆ?:೦

   • ನಾನು ಹಾದಿರಂಪನು ಹೇಗಾದೆನೆಂದು ತಿಳಿಸುವಿರಾ ನೀಲಕಂಠರೇ?

    • ಖಾತೆ ಇಲ್ಲದೇ ಹಾದಿ ಬೀದಿ ತಿರುಗುತ್ತ ಪದ್ಯಗಳನ್ನು ಇದರಲ್ಲಿ ಪೋಸ್ಟ್ ಮಾಡುತ್ತೀರಲ್ಲ … 🙂

     • ಅಬ್ಬ… ಅದೇನನ್ನೋ ಶಾಲಲ್ಲಿ ಸುತ್ತಿ ಹೊಡೆದಂತಾಯ್ತು…ಪರಶಿವನ ಹೆಸರಿರುವ ಮಾತ್ರಕ್ಕೇ ನಿಮ್ಮ ವಾಕ್ಶೂಲದಿಂದೆನ್ನ ಇರಿಯುವುದೇ? ಅಕಟಾ!

     • ಶೂಲವು ನನ್ನನ್ನೂ ಹಾಯಿತು – ಹಾಯ್ ಹಾಯ್

 2. ಪೊಳೆವ ವಜ್ರಮಿರಲ್ಕೆ ಕಿರೀಟದೊಳ್
  ಸೆಳೆವುದೆಲ್ಲರ ಕಂಗಳನಾದೊಡೇಂ
  ಕಳೆಯ ಪೆರ್ಚಿಸುತಿರ್ಪುದುದಲ್ತೆ ಕಾಲ್
  ಬಳೆಗಳೇ ಬವರಂಗೆ ವಿಭೂಷಣಂ

 3. ‌ಕಳೆದ ರಾಜ್ಯದ ಲಕ್ಷ್ಮಿಯ ಬಲ್ಮೆಯಂ
  ಪೊಳೆವ ವೈರಿಯ ಶೌರ್ಯದ ಗಾಥೆಯಂ
  ಪಿಳಪಿಳಂಗೊಳಿಪಕ್ಷಿಯಿನೀಕ್ಷಿಪಂ
  ಬಳೆಗಳೇ ಭವರಂಗೆ ವಿಭೂಷಣಂ

 4. ವಿಳಸಿತಾಕೃತಿಗಂ ಸಹಜತ್ವದಿಂ
  ಕಳೆಯ ಪೆರ್ಚುಗೆಯಾವುದರಿಂದಮುಂ |
  ಕೆಳೆಯ ಕಾಣ್ ನಭದೊಳ್ ಪೊಳೆವಾ ಮುಗಿಲ್-
  ಬಳೆಗಳೇ ಭವರಂಗೆ ವಿಭೂಷಣಂ ||

 5. ಕಳೆಯೆ ಕಳ್ತಲೆಯಂ ಮಿಗೆ ಬರ್ಪೊಡ
  ನ್ಕಿಳೆಗೆ ಸಪ್ತಹಯಂಗಳ ತೇರಿನೊಳ್,
  ಪೊಳೆದು ಭಾಸಿಪ ಪೊನ್ನಿನ ಕಾಂತಿಯಾ
  ಬಳೆಗಳೇ ಬವರಂಗೆ ವಿಭೂಷಣಂ
  (ಕತ್ತಲೆಯನ್ನು ಕಳೆಯಲು ಇಳೆಗೆ ಬರುತ್ತಿರುವ ಸೂರ್ಯನಿಗೆ ಹೊಳೆವ ಕಾಂತಿಯ ಬಳೆಗಳೇ..)

 6. ಕಲೆತ ವಂಶದ ಕೀರ್ತಿಯನಾರ್ಪಿನಿಂ
  ದುಳಿಸಲಾರದೆ ಪೋದೊಡನೀದು ತಾಂ
  ಹಲವು ಭೋಗದ ಬೊಂತೆಗಹಾ!ದಿಟಂ
  ಬಳೆಗಳೇ ಬವರಂಗೆ ವಿಭೂಷಣಂ
  (ವಂಶದ ಕೀರ್ತಿಯನ್ನು ಭೋಗಿಯಾಗುತ್ತಲೇ ಕಳೆವ ವೀರನಿಗೆ ಬಳೆಗಳೇ ವಿಭೂಷಣಂ)

 7. Warriors are entitled to alcohol and other perks.
  ಮೊೞಗೆ ಯುದ್ಧದೆ ಜೈತ್ರಸುಘೋಷಮೈ
  ಪುಳಕಗೊಳ್ಳುತೆ ಯೋಧಧುರೀಣರೈ|
  ಪಳೆಯ ವಾರುಣಿ, ಮದ್ಯ, ಸುರಾಗಳೆಂ-
  ಬಳೆಗಳೇ ಭವರಂಗೆ(/ರರ್ಗೆ) ವಿಭೂಷಣಂ||
  (ಅಳೆ>ಅರಿಷ್ಟ>ಮದಿರಾ=liquor)

 8. ಸುಲಭದಿಂದಲೆ ಪಟ್ಟಮನೇರ್ದು ಮೇಣ್
  ಸಲಹುತಿರ್ಪೊಡನೆಲ್ಲರನಿಚ್ಛೆಯಿಂ,
  ಬಲಮನೀವವೊಲೇ ಸೊಗಯಿಪ್ಪ ತೋಳ್
  ಬಳೆಗಳೇ ಬವರಂಗೆ ವಿಭೂಷಣಂ
  (ಪ್ರಜೆಗಳನ್ನು ಕಾಪಾಡಲು ಬಲವನ್ನು ಕೊಡುವಂತೆಯೇ ಸೊಗಯಿಸುವ ತೋಳ ಬಳೆಗಳೇ ಭವರಂಗೆ ವಿಭೂಷಣಂ)

 9. ತೊಲಗಿ ಪೋಗಿರೆ ಪಿಂದಣ ಭೇದಮೇ,
  ಉಲಿಯಲೆಂತುಟೆ ತಪ್ಪಿದನೆಂಬರೈ-
  “ಲಲನೆಗೊಪ್ಪುತುಮೆಂದಿಗು ಸಂದ, ಚೆಲ್
  ಬಳೆಗಳೇ ಬವರಂಗೆ ವಿಭೂಷಣಂ”
  (ಸಮಾನತೆಯಿರುವ ಇಂದಿನ ಕಾಲದಲ್ಲಿ ,ಬಳೆಗಳೇ ಭವರಂಗೆ ಭೂಷಣವೆಂದೆನ್ನುವದರಲ್ಲಿ ತಪ್ಪು ಇಲ್ಲ)

  • ಚೆನ್ನಾಗಿದೆ ಮೇಡಮ್! ಮೊದಲ ಸಾಲ ಕೊನೆಯಲ್ಲಿ ಸ೦ಧಿಯಾಗಿ ಮಾತ್ರಾವ್ಯತ್ಯಾಸ ಆಗುತ್ತದೆ.

 10. ಪೊಳೆವ ದುರ್ಗ-ಗೃಹಂಗಳೆ ಭೂಷಣಂ
  ತೊಳಗುಮಿಂಚಿನ ಕಾಲ್ಬಳೆ*-ತೋರದೋ-
  ಳ್ಬಳೆ*ಗಳೇ? ಭವರಂಗೆ ವಿಭೂಷಣಂ
  ಮೊೞಗೆ ಧರ್ಮವದಾಳುವ ಪಾಟವಂ||
  * With apologies to Cheedi (No.2 above) and Smt. Kanchana (No.8) resp. 😉

  • ಪ್ರಸಾದ ಸರ್, ಕೋಟೆಗೃಹಗಳು ಅರಿಯ ಉಪಟಳಕ್ಕೊಳಗಾದವು. ದುರ್ಗಗೃಹ೦ಗಳಾದರೆ ಸರಿ.

   • 🙂 ಧನ್ಯವಾದಗಳು. ಇದು ನನ್ನ ಗಮನಕ್ಕೆ ಬರಲಿಲ್ಲ – ಹೈಫನ್ ಹಾಕಿದ್ದರಿಂದ ಇರಬಹುದು. ಮೂಲದಲ್ಲೇ ತಿದ್ದಿದ್ದೇನೆ.
    ದುರ್ಗಗೃಹ೦ಗಳು ಶತ್ರುಗಳ ಪಾಲಾದರೆ ಸರಿ, ಕೋಟೆಯು ಶತ್ರುಗಳ ಪಾಲಾಗುವುದು ಅನ್ಯಾಯ ಎಂಬುದೆ ತಮ್ಮ ಮತ? 😉
    ಎಲ್ಲಿ ’ಮೊಳಗುಧರ್ಮ’ದಲ್ಲಿನ ಅರಿಸಮಾಸದ ಬಗೆಗೆ ಯಾರಾದರೂ ಚಕಾರ ನುಡಿವರೋ ಎಂದು ಅದನ್ನು ತಿದ್ದಿದೆ; ಇದನ್ನು ಗಮನಿಸದೆಹೋದೆ.

 11. ದಯವಿಟ್ಟು ಎಲ್ಲರೂ ತಾತ್ಪರ್ಯ ಕೊಡಿ 🙂

  • “ತಾತ್ಪರ್ಯವು ಅಗತ್ಯವಿರದ ರೀತಿಯಲ್ಲಿ ಕವನಿಸಿರಿ” ಎಂದರೆ ಮೇಲಲ್ಲವೆ? “ಅರ್ಥವಾಗುವಂತೆ ಕವನಿಸಿ” ಎಂದು ಸರಳವಾಗಿಯೂ ಹೇಳಬಹುದು. ’ಪರಂಧಾಮಮನ್ನೈದಿರ್ಪಂ’ ಎಂದರೂ ಅದೇ, ’ನೆಗ್‍ದ್‍ಬಿದ್ದ’ ಎಂದರೂ ಅದೇ!

   • ಶಾ೦ತ೦ ಪಾಪ೦ ಶಾ೦ತ೦ ಪಾಪ೦!! ತಮ್ಮ೦ಥ ಪ೦ಡಿತಮ೦ಡಲಿಯೊಳಹೊಕ್ಕ ನನ್ನ೦ಥ ಪಾಮರನೊರ್ವನ ಸಹಜವಿನ೦ತಿ, ಅಷ್ಟೆ…

    • ’ಒರ್ವ’ ಎಂದರೆ? ತಮ್ಮಂಥವರು ಇನ್ನೂ ಹಲವರು ಇಲ್ಲಿದ್ದಾರೆ ಎಂದೆ? 😉

     • ಜಗತ್ತಿನಲ್ಲಿರುವ ಅನೇಕರಲ್ಲಿ ನಾನೊರ್ವ ಇಲ್ಲಿ ಹೊಕ್ಕಿದ್ದೇನೆ. 🙂

 12. ಭಳಿರೆನುತ್ತೆ ಮನ೦ಬುಗೆ ಮೋದಮೀ-
  ವಳೆನೆ ಮೈದಡವುತ್ತಿರೆ ಮೆಚ್ಚಿನಿ೦
  ಮೊಳಗುತಿರ್ಪ ಜಯಾ೦ಬಿಕೆಯೊಲ್ದ ಕೈ-
  ಬಳೆಗಳೇ ಬವರ೦ಗೆ ವಿಭೂಷಣ೦

  ಜಯಶ್ರೀಮಾತೃಕೆಯು ಮೆಚ್ಚಿನಿ೦ದ ವೀರಯೋಧನ ಮೈದಡವುತ್ತಿರುವಾಗ ಸದ್ದುಮಾಡುವ ಆಕೆಯ ಕೈಬಳೆಗಳೇ ಇವನಿಗೆ ಭೂಷಣವಾಯಿತು.

  • Wah!
   Adapted with permission:
   ಘಳಿರೆನುತ್ತೆ ಮನ೦ಬುಗೆ ಮೋದಮೀ-
   ವಳಲೆ ಮೈದಡವುತ್ತುರೆ ಶಕ್ತಿಯಂ|
   ತಳೆವವೋಲು ಸುಯೋಧನನಬ್ಬೆಕೈ- (ಸುಯೋಧನನು+ಅಬ್ಬೆ)
   ಬಳೆಗಳೇ ಭವರ೦ಗೆ ವಿಭೂಷಣ೦||

   ಆದರೆ ಇದೇನು, ವೀರ(ಭವರ)ನನ್ನು ದುಂಬಿ(ಬವರ)ಯಾಗಿಸಿರುವಿರಿ?

   • ಧನ್ಯವಾದಗಳು! ಏನೂ ಹೊಳೆಯುತ್ತಿಲ್ಲವಲ್ಲ ಎ೦ಬ ಬೇಸರದಿ೦ದಲೇ ಏನೋ ಬರೆದ೦ಟಿಸಿದೆ 🙂

    • ’ಹೊಳೆಯುತ್ತಿಲ್ಲ’ ಎನ್ನಲೇಕೈ? ನೀಂ ಆಡಿಸಿದ ಕೈಬಳೆಗಳ್ ಹೊಳೆದುವಲ್ತೆ!

  • ನೀಲಕಂಠರೆ , ಕಲ್ಪನೆ ತುಂಬ ಚೆನ್ನಾಗಿದೆ. ಆದರೆ “‘ಜಯಾಂಕಿತೆ ತಾಯ” ಅರಿಸಮಾಸವಾಗುವುದಿಲ್ಲವೆ ?

   • ಹೌದು ಮೇಡಮ್, ತಿದ್ದಿದ್ದೇನೆ. ಧನ್ಯವಾದಗಳು.

   • ಇಲ್ಲಿ ಸಮಾಸವೇ ಆಗಿಲ್ಲವೇನೋ. ’ತೆ’ ಇಂದಾಗಿ ‘ಜಯಾಂಕಿತೆ’ ಎಂಬುದು ಕನ್ನಡಪದವಾಗಿದೆ. ಅವನ್ನು ವಿವಿಕ್ತಪದಗಳನ್ನಾಗಿ ಉಳಿಸಿಕೊಳ್ಳಬಹುದೇನೋ. I am not sure. Look fwd to clarification.

 13. ಪಳಿಯುತುಂ ವಧಿಸುತ್ತಿರೆ ವೈರಿಯಂ,
  ಕಳೆಗಳಂ ಕೆಡೆವಂತೆ ಪೊಲಂಗಳೊಳ್, |
  ಬಿಳಿಯ ಕೈಯೊಳೆ ರಕ್ತದೆ ಸಂದ ಕೆಂ-
  ಬಳೆಗಳೇ ಬವರಂಗೆ ವಿಭೂಷಣಂ ||

 14. ಇಳೆಯೊಳುಂ ನರನೇಳ್ಗೆಗೆ ನಾರಿ ಕೋ-
  ಮಳೆಯ ಕೈಯಿಹುದೆಂಬುವ ಸತ್ಯವಂ
  ತಿಳಿದವಂ ತೊಡೆ ಕಂಕಣವಂ ಗಡಾ-
  ಬಳೆಗಳೇ ಬವರಂಗೆ ವಿಭೂಷಣಂ ।।

  ನಾರಿ ಕೋಮಲೆಯ ಕೈ = ಬಳೆಯಿರುವ ಕೈ

  (“ಪುರುಷನ ಯಶಸ್ಸಿನ ಹಿಂದೆ ಮಹಿಳೆಯಿರುವಳು” ಎಂಬ ಸತ್ಯವನ್ನು ಪ್ರತಿಪಾದಿಸುವ ಪದ್ಯ !!)

  • ‘ಕೋಮಳೆ’ಯಾದ ನಾರಿಯ ವಿಷಯವು ಇಂತು, ಇತರ ನಾರಿಯರದಲ್ಲ ಎಂದು ತಾವು ಹೇಳಿರುವುದು ಸರ್ವಥಾ ಸಾಧು. ಇದಕ್ಕೆ ಸಂವಾದಿಯಾಗಿ ಕೆ.ಎಸ್.ನ.ರ ಘೋಷಣೆಯಿದೆ: ಹೆಂಡತಿಯೊಬ್ಬಳು ಮನೆ’ಯೊಳಗಿ’ದ್ದರೆ ನನಗದೆ ಕೋಟಿ ರುಪಾಯಿ. 😀

   • ಹೌದು ಪ್ರಸಾದ್ ಸರ್,
    “ಹೆಂಡತಿ ಬಳೆಗಳ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ !!”
    ಪೂರಣಕ್ಕೆ ಪುಷ್ಟಿ ಕೊಟ್ಟಿದಕ್ಕೆ ಧನ್ಯವಾದಗಳು.

    • ಈ ಪ್ರಶ್ನೆಯೇ ಏಳುವುದಿಲ್ಲ. ಕಷ್ಟಕಾಲ ಬಂದಾಗ ’ಬಳೆಗಳ ಭಾಗ್ಯ’ವನರಿಯದ ಗಂಡನಾರು? 😀

 15. ಬಲದಿನೊಪ್ಪುವ ಸಾಧನೆ ಗೈದು ಮೇಣ್
  ನೆಲದ ಕೀರ್ತಿಯನುಣ್ಮಿಸುತಿರ್ದಿರ
  ಲ್ಕೊಲವಿನಿಂದುರೆ ಭೂಭುಜನಿತ್ತ ಹೊಂ
  ಬಳೆಗಳೇ ಬವರಂಗೆ ವಿಭೂಷಣಂ
  (ಶೌರ್ಯವನ್ನು ಮೆರೆದು,ರಾಜನ ಪ್ರೀತಿಯನ್ನು ಪಡೆದು,ಆತನಿಂದ ಪಡೆದ ಹೊನ್ನ ಬಳೆಗಳೇ ವೀರನಾದವನಿಗೆ ಭೂಷಣವು)

 16. ಭಳ! ಗಜಾಸುರಘಾತಕಶರ್ವನೊಳ್
  ವಿಳಸಿತಂ ಜಟಮಂಡಲವಿಸ್ತರಂ
  ಬಿಳಿಯ ಬಸ್ಮವಿಲಿಪ್ತವಿಷಾಲುವೊಲ್
  ಬಳೆಗಳೇ ಬವರಂಗೆ ವಿಭೂಷಣಂ

  ಬಸ್ಮವಿಲಿಪ್ತವಿಷಾಲುವೊಲ್ ಬಳೆಗಳೇ -> ಬೂದಿಯಿಂದ ಲೇಪಿಸಲ್ಪಟ್ಟ ಹಾಲಾಹಲವೆಂಬ ಬಳೆಗಳೇ -> ಹಾವಿನ ಬಳೆಗಳೇ

  ಗಜಾಸುರಸಂಹಾರವನ್ನು ಕುರಿತ ಶಿವನ (ಬಿರಿದ ಜಟೆ, ನಾಗಾಭರಣ, ಬಸ್ಮಧಾರಣೆ ಮುಂತಾದವುಗಳಿಂದ) ಶೌರ್ಯವನ್ನು ಬಿಂಬಿಸುವ ಶಿಲ್ಪಗಳಿಂದ ಪ್ರೇರಿತವಾದ ಪೂರಣ

  • ಸೋಮರೇ, ಜಟಾಮ೦ಡಲ ಅಲ್ಲವೆ? ಜಟ ಎ೦ಬುದೂ ಸಾಧುವೇ?

   • ನೀಲಕಂಠ, ಜಟಾ, ಜಟ ಎರಡೂ ಆಗಬಹುದೆಂದು ಆಪ್ಟೆ ಕೋಶ ಹೇಳುತ್ತದೆ, ಛಂದಸ್ಸಿಗೆ ಅನುಕೂಲವಾದದ್ದನ್ನು ಆಯ್ದೆ 🙂

    search `jaTa’ in `Apte Dic’
    meanings of “jaTa”
    a.{a-stem}
    1.wearing twisted locks of hair
    #22259

 17. ಗೆಲುವನೊಂದುತೆ ಪೀಠಮನೇರಿರಲ್,
  ಚೆಲುವಿನಂಬರ,ಕುಂಡಲ,ಮೌಳಿ ಮೇಣ್
  ಹೊಳೆವ ರನ್ನದ ಹಾರದೊಡಂ ದಿಟಂ
  ಬಳೆಗಳೇ ಬವರಂಗೆ ವಿಭೂಷಣಂ!

 18. ಕೆಳದಿ ಕೇಳ್ ನರಲಕ್ಷಣವಂ ಗಡಾ
  ತಿಳಕ ಶೋಭಿಸುದೌ ನಿಜಭಕ್ತಗಂ
  ಹಳುಕುದೊಂಟಿಯು ಪಂಡಿತಗೊಪ್ಪುದೌ
  ಬಳೆಗಳೇ ಭವರಂಗೆ ವಿಭೂಷಣಂ ।।

  ಒಂಟಿ = ಕಿವಿಯ ಆಭರಣ

 19. ನಮಸ್ಕಾರ,
  ಪದ್ಯ ಪಾನಕ್ಕೆ ನನ್ನ ಮೊದಲ ನಿವೇದನೆ.
  ನಾನು ಏಳನೇ ತರಗತಿ ವಿದ್ಯಾರ್ಥಿನಿ. ದಯವಿಟ್ಟು ಪದ್ಯದಲ್ಲಾದ ದೋಷಗಳನ್ನು ತಿಳಿಸಿ ಕೊಡಿ.
  ಸವರಿಸಲು ಪ್ರಯತ್ನಿಸುತ್ತೇನೆ.

  ಒಲವದಿರ್ಪವಧಾನಿಗೆ ಸರ್ವರುಂ
  ಹೊಳೆಯುವಾ ಬಳೆಯನ್ನು ತೊಡೆಂದರೈ
  ಬಳೆಯದೇಕೆನೆ, ಆ ಜನರೆಂದರೈ
  ಬಳೆಗಳೇ ಭವರಂಗೆ ವಿಭೂಷಣಂ

  ( ಶತಾವಧಾನಿಯವರಿಗೆ ತುಂಬುಗನ್ನಡ ಶತಾವಧಾನದಲ್ಲಿ ಕಡಗ ತೊಡಿಸಿದ್ದನ್ನು ನೆನಪಿಸಿಕೊಂಡು ಈ ರೀತಿ ಗಣೇಶ ಸ್ತುತಿ ಬರೆದಿದ್ದೇನೆ.)

  • ಆಹಾ!! ಬಹಳ ಸೊಗಸಾಗಿದೆ,ಅಂಕಿತಾ! ಶತಾವಧಾನಿಗಳಿಗೊಪ್ಪುವ ಪದ್ಯವನ್ನು ಬರೆದ ನಿನಗೆ ಧನ್ಯವಾದಪೂರಿತ ನಲ್ಮೆಯ ಸ್ವಾಗತ .

  • ಆಹಾ, ನಿನ್ನಷ್ಟು ಚಿಕ್ಕವಳು ಬರೆಯುವುದು ತು೦ಬ ಸ೦ತಸದ ಸ೦ಗತಿ. ಪದ್ಯಪಾನಕ್ಕೆ ನಿನ್ನಕ್ಕರೆಯಕ್ಕರ೦ಗಳ ಬಳೆಗಳೇ ವಿಭೂಷಣ೦!! 🙂

  • ದೋಷಗಳೇನೂ ಇಲ್ಲ. ಇದ್ದರೂ ಗೋಚರಿಸದಷ್ಟು ಚೆನ್ನಾಗಿದೆ ಕಲ್ಪನೆ ಮತ್ತು ಕವನಿಕೆ. ನಮ್ಮಗಳ ಮೊದಲ ಪದ್ಯಗಳನ್ನು ದಯವಿಟ್ಟು ನೋಡಬೇಡ 🙁
   ನಿನ್ನ ಮುಂದಿನ ಪದ್ಯಗಳನ್ನು ನೋಡುವ ತವಕವಿದೆ. ಸದಾಶಯಗಳು.

  • ಅಂಕಿತಾ ಪುಟ್ಟಿ,, ಕಂದಾ 🙂

   ನೀನು ಈಗ ೭ನೇ ತರಗತಿ ಅಂದರೆ ಶತಾವಧಾನದ ಸಮಯದಲ್ಲಿ ನೀನು ೪ನೇ ತರಗತಿಯಲ್ಲವೇ? ಅತ್ಯದ್ಭುತ!!!
   ಇಷ್ಟು ಚಿಕ್ಕವಯಸ್ಸಿನಲ್ಲಿ ಛಂದಸ್ಸಿನ ಪದ್ಯ ರಚನೆ ಮಾಡುತ್ತೀಯಲ್ಲ, ಬಹಳ… ಬಹಳ… ಸಂತೋಷ…
   ನೋಡು, ಒಂದು ಮಾತು ಹೇಳ್ತೀನಿ, ಪ್ರತೀವಾರ ಪದ್ಯಪಾನದಲ್ಲಿ ಭಾಗವಹಿಸು. ಪದ್ಯಪಾನದ ಕಲಿಕಾಸಾಮಗ್ರಿಯ ಬಗ್ಗೆ ಪರಿಚಯವಿದೆಯೇನು ನಿನಗೆ?

   • ನಮಸ್ಕಾರ ಸರ್,
    ಶತಾವಧಾನದ ಡಿವಿಡಿಗಳನ್ನು ಇತ್ತೀಚೆಗೆ ನೋಡಿದೆ.
    ಸ್ವಲ್ಪ ಸ್ವಲ್ಪವಾಗಿ ಕಲಿಕಾ ಸಾಮಗ್ರಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದೇನೆ.

    • ಬಹಳ ಸಂತೋಷ ಕಂದಾ

    • ಅಬ್ಬ, ಇವಳನ್ನು ನೆನೆಸಿಕೊ೦ಡರೆ “ಮನುಷ್ಯಾಣಾ೦ ಸಹಸ್ರೇಷು …” ಶ್ಲೋಕ ನೆನಪಾಗುತ್ತಿದೆ 🙂

  • ಪದ್ಯಪಾನದಲ್ಲಿ ಇದುವರೆವಿಗೂ ನಾನು ಅತ್ಯಂತ ಕಿರಿಯವನಿದ್ದೆ. ಈಗ ಆ ಸ್ಥಾನವನ್ನು ತುಂಬಿ, ನಮ್ಮೆಲ್ಲರ ಸಂತಸದ ಕೊಡವು ತುಂಬಿ ತುಳುಕಾಡುವಂತೆ ಉತ್ತಮವಾದ, ಕಲ್ಪನಾಭೂಯಿಷ್ಠವಾದ ಛಂದೋಪದ್ಯರಚನೆಯ ಮೂಲಕ ಪದ್ಯಪಾನಾಂಗಣಕ್ಕೆ ಅಡಿಯಿಟ್ಟಿರುವ ಭಗಿನಿ ಅಂಕಿತಾರಿಗೆ ಪದ್ಯಪಾನಕ್ಕೆ ಓಂಕಾರಪುರಸ್ಸರವಾದ ನಲ್ಬರವು….ಜಗನ್ನಾಥನು ಭವದೀಯ ಕಾವ್ಯರಚನಾಪಥಕ್ರಮಣದಲ್ಲಿ ಸರ್ವದಾ ಮಂಗಳವನ್ನುಂಟುಮಾಡಲಿ… ಸುಸ್ವಾಗತ ‍!

  • ಪುಟ್ಟ ಅಂಕಿತಾಳಿಗೆ ಪದ್ಯಪಾನಕ್ಕೆ ಸ್ವಾಗತ. ನಿನ್ನ ಪದ್ಯ ಬಹಳ ಇಷ್ಟವಾಯಿತು. ವೃತ್ತದಲ್ಲಿ ನಿನ್ನ ಪದ್ಯ ರಚನೆ ಆಶ್ಚರ್ಯ ಮತ್ತು ಆನಂದ ತಂದಿದೆ. ಮೂರು ವರ್ಷಗಳ ಹಿಂದೆ (ಕಾಕತಾಳೀಯವಾಗಿ ಇದೇ ದಿನ 2/12/2012ರಂದು)ನಡೆದ ಅದ್ಭುತವನ್ನು ಕಥಾನಕದ ರೂಪದಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದೀಯೆ. ಬಿಡದೆ ಬರೆಯುತ್ತಿರು. ನಿನ್ನ ಮುಂದಿನ ಎಲ್ಲ ಸಾಧನೆಗಳಿಗೆ ಶುಭ ಹಾರೈಕೆಗಳು.

   • ಚಿ|| ಅಂಕಿತೆಗೆ ಪದ್ಯಪಾನದ ಪರವಾಗಿ ಸ್ವಾಗತ.
    ಮಗೂ! ನಿನ್ನ ಬಗೆಗೆ ಗೆಳೆಯ ಕೊಪ್ಪಲತೋಟನು ಹೇಳಿದಾಗ ತುಂಬ ತುಂಬ ಸಂತಸವಾಯಿತು. ಇದೀಗ ಈ ಪರಿಯ ಸಮಸ್ಯಾಪೂರಣವನ್ನು ಕಂಡು ಮೆಚ್ಚುಗೆಯ ಬೆರಗಾಗುತ್ತಿದೆ. ನಿನ್ನ ಪ್ರಸ್ತುತಪದ್ಯದ ಗುಣಮಟ್ಟ ಚೆನ್ನಾಗಿಯೇ ಇದೆ. ಆದರೂ ನೀನೇ ಕೇಳಿದ ಕಾರಣ ಸ್ವಲ್ಪ ಸವರಣೆಗೆ ತೊಡಗಿದ್ದೇನೆ:

    ಒಲವದಿರ್ಪವಧಾನಿಗೆ ಸರ್ವರುಂ
    ಪೊಳೆಯುವೀ ಬಳೆಯಂ ಧರಿಸೆಂದಿರಲ್ | (ಧರಿಸೆಂದರಯ್ |)
    ಬಳೆಯದೇಕೆನಲ್, ಆ ಜನರೆಂದಪರ್:
    ಬಳೆಗಳೇ ಬವರಂಗೆ ವಿಭೂಷಣಂ||

    ನಿನ್ನ ಪದ್ಯರಚನಾಕೌಶಲಕ್ಕಾಗಿ ನನ್ನೊಂದು ಮೆಚ್ಚುಗೆಯ ಪದ್ಯ:

    ಬಳೆಗಳಂ ತುಡುವೀ ಕಿರುಕಯ್ಗಳೇ
    ಬಳೆಗಳಂ ತುಡುವಂತೆನಗಾಗಿಸಲ್|
    ಭಳಿರೆ! ಕಬ್ಬದ ಕೊಳ್ಗುಳಿಗಂ ಗಡಾಂ
    ಬಳೆಗಳೇ ಬವರಂಗೆ ವಿಭೂಷಣಂ||

    ಇದರ ತಾತ್ಪರ್ಯವಿಂತಿದೆ: ಬಳೆಗಳನ್ನು ತೊಡುವ ಈ ಪುಟ್ಟಕೈಗಳ ಬಾಲೆಯು ನನಗೆ ಬಳೆಗಳನ್ನು ತೊಡುವಂತೆ ಮಾಡಿರಲು (ಈ ಸಮಸ್ಯಾಪೂರಣದ ಮೂಲಕ, ಶತಾವಧಾನದ ಕಂಕಣಧಾರಣೆಯನ್ನು ಪ್ರಸ್ತಾವಿಸಿ) ಆಹಾ! ಅವಧಾನಕಲೆಯ ಸ್ಪರ್ಧಾಕಾವ್ಯರಚನೆಯ ಜಿದ್ದಿನ ಯುದ್ಧದಲ್ಲಿ (ಕೊಳುಗುಳ >ಕೊಳ್ಗುಳ) ನುರಿತ ಸೈನಿಕ(ಕೊಳ್ಗುಳಿಗ)ನಾದ
    ನಾನು ವೀರನಿಗೆ (ಬವರನಿಗೆ) ಬಳೆಯೇ ಭೂಷಣವೆಂದು ಒಪ್ಪುವಂತಾದುದು ಅನಿವಾರ್ಯವಲ್ಲವೇ! 🙂

    ಅವಧಾನಕಾವ್ಯಕಲೆಗಂ
    ಸ್ತವನೀಯತರಾಭಿಜಾತಕವಿತೆಯ ನೆಲೆಗಂ|
    ಧ್ರುವಮಂಕಿತಮೆನೆ ನಿನ್ನಯ
    ನವಲೋಜ್ಜ್ವಲಜೀವನಂ ಸೊಗದೆ ನೀಂ ಬಾಳೌ||

  • Very nice Ankitha, 🙂 keep it up

  • ನಿನ್ನ ಸಮಸ್ಯಾಪೂರಣವು ತುಂಬಾ ಚೆನ್ನಾಗಿದೆ, ಮುದ್ದು ಅಂಕಿತಾ. ಅಭಿನಂದನೆಗಳು.ನಮ್ಮೊಡನೆ ಪದ್ಯಪಾನದಲ್ಲಿ ಯಾವಾಗಲೂ ಕವನಿಸುತ್ತಿರು. ವಿಜಯದ ಸಂಕೇತವಾಗಿ ಬಳೆಗಳನ್ನು ತೊಡಿಸಿಕೊಳ್ಳುವಂಥ ನಿನ್ನ ಭವಿಷ್ಯದ ಸಾಧನೆಗಳಿಗಾಗಿ ನನ್ನ ಶುಭಹಾರೈಕೆಗಳು. 🙂

  • ಪುಟ್ಟ ಅಂಕಿತಾ, ಗಣೇಶ ಭಟ್ಟ ಕೊಪ್ಪಲತೋಟನಿಂದ ಈಗ ೧೫ ದಿನಗಳ ಹಿಂದೆಯೇ ನಿನ್ನ ಬಗ್ಗೆ ತಿಳಿಯಿತು. ಈಗಾಗಲೇ ಅವಧಾನಕ್ಕೂ ಪ್ರಯತ್ನಿಸುತ್ತಿರುವ ನಿನಗೆ ನಮ್ಮೆಲ್ಲರ ಶುಭ ಹಾರೈಕೆಗಳು. ಕನ್ನಡದ ಮೊತ್ತ ಮೊದಲನೆಯ ಮಹಿಳಾ(ಬಾಲಕಿ) ಅವಧಾನಿನಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿರುವ ನಿನ್ನ ಪದ್ಯವೂ ಸುಂದರವಾಗಿದೆ. ಉತ್ತಮ ಭವಿಷ್ಯಕ್ಕೆ ನಮ್ಮೆಲ್ಲರ ಸ್ನೇಹಿತ, ಗುರು ಶತಾವಧಾನಿ ಗಣೇಶರೇ ನಿನಗೆ ಆದರ್ಶ, ಮಾರ್ಗದರ್ಶಕರು..ನಿನ್ನನ್ನು ಪ್ರೋತ್ಸಾಹಿಸುತ್ತಿರುವ ನಿನ್ನ ತಾಯಿ ತಂದೆಗಳಿಗೂ, ಶಾಲೆಯ ಶಿಕ್ಷಕವರ್ಗಕ್ಕೂ ಅಬಿನಂದನೆಗಳು.

  • ಅವಧಾನಿಗಳು ಹೇಳಿರುವಂತೆ ನಿನ್ನ ಪದ್ಯವು ಚೆನ್ನಾಗಿಯೇ ಇದೆ. ಇತರರ ಕವನಿಕೆ ಯಾವರೀತಿ ಇರುತ್ತದೆ ಎಂಬ ವೈವಿಧ್ಯಪರಿಚಯಕ್ಕಾಗಿ ಈ ಸವರಣೆ:
   ಒಳಿತ ಕೋರಿ ವಧಾನಿಗಮೆಲ್ಲರುಂ
   ಪೊಳೆವ ಕಂಕಣಮಂ ತೊಡಿಪಾಗವರ್|
   ಬಳೆಯಿದೇಕೆನಲಾ ಜನಮೆಂದಿತೈ
   ’ಬಳೆಗಳೇ ಭವರಂಗೆ ವಿಭೂಷಣಂ’||

   ಶತಾವಧಾನದಲ್ಲಿ ವಧಾನಿಗಳಿಗೆ ಕಂಕಣವನ್ನು ತೊಡಿಸಿದ ಸಂದರ್ಭವನ್ನು ಕುರಿತು:
   ’ಬಳೆಗಳೇ ಭವರಂಗೆ ವಿಭೂಷಣಂ’
   ತಿಳಿಯರೇನವಧಾನಿಗಳೀ ಸೊಗಂ!
   ತಳೆಯೆ ಕಂಕಣಮಂ ಕರಮಿತ್ತರೌ
   ಬಳಿಕಮಿಂತೆನುತೆಮ್ಮೊಳು ಪೇಳ್ದರೌ||

   “ಬಳೆಗಳೀಪರಿ ಮೂರಿಹವಿನ್ನು ಕೇಳ್
   ಕೊಳೆಯುತಿರ್ಪುವು ಗೇಹದೆ, ಧಾರಿ ಆರ್? (ತೊಡುವವರಿಲ್ಲ)
   ಕೊಳಿರಿ, ಮಾರಿರಿ, ದುಡ್ಡನುಮೆಲ್ಲಮಂ
   ಬಳಸಿ ತಿನ್ನೆ ಮಸಾಲೆಯ ದೋಸೆಯಂ||”

  • ಅಂಕಿತಾ,
   ಆಶುಕವಿತಾಗೋಷ್ಠಿಯಲ್ಲಿ ಕೊಪ್ಪಲತೋಟನಿಂದ ನಿನ್ನ ಬಗ್ಗೆ ನಮಗೆಲ್ಲ ತಿಳಿಯಿತು. ಈಗ ಈ ಸಮಸ್ಯಾಪರಿಹಾರಪದ್ಯದಿಂದ ಪರಿಚಯವಾಯಿತು. ನಿನ್ನಂತಹ ಎಳೆಯರು ಛಂದೋಬದ್ಧಪದ್ಯರಚನೆಯಲ್ಲಿ ತೊಡಗುತ್ತಿರುವುದು ಸಂತಸದ ಸಂಗತಿಯೇ ಸರಿ. ನಿನ್ನ ಪ್ರತಿಭೆ ಮತ್ತು ಪಾಂಡಿತ್ಯ ಎರಡು ಸರ್ವದಾ ವೃದ್ಧಿಯನ್ನೇ ಪಡೆಯಲಿ. ಎಲ್ಲರ ಹಾರೈಕೆಯ ಸಾಗರಕ್ಕೆ ನನ್ನದೊಂದೆರಡು ಹನಿಗಳು.

   ಆದಿಮಪದ್ಯಂ ಹೃದ್ಯಂ
   ಮೋದಕರಂ ಪದ್ಯಪಾನಸಹೃದಯಹೃದಯಾ-
   ಸ್ವಾದಿತಮಮಲಂ ಸುಭಗಂ
   ವೇದಿತಕರ್ಣಾಟವಾಣಿ! ಕೀರ್ತಿಯ ಪಡೆಯೌ ಕೀರ್ತಿಯನೊಂದೌ

   P.S ಪದ್ಯದಲ್ಲಿ ದೋಷಗಳಿರಬಹುದೇನೋ. ಸಹೃದಯರೆಲ್ಲರೂ ಮನ್ನಿಸಬೇಕು.

  • ಎಳವೆಯ ಕಾವ್ಯಪ್ರೀತಿಯೊ
   ಳಳವಂ ಮೀರಿರ್ಪ ತೆರದೆ ಬರೆಯುತ್ತಿರ್ಪಳ್
   ಕಳೆಗೊಂಡುದನೀಕ್ಷಿಪೊಡಂ
   ಬಳೆಯುವ ಸಿರಿ ಮೊಳಕೆಯೊಳಗೆನಿಪ್ಪುದು ಕಾಣ್ಗುಂ||
   ನಿನ್ನೀ ಪದ್ಯಪ್ರೀತಿಯ
   ಚೆನ್ನಾಗಲ್ಕೆಂದು ಪೋಷಿಸಿರ್ಪೆಲ್ಲರುಮಂ
   ಸನ್ನುತಪಾಲಕಶಿಕ್ಷಕ
   ರನ್ನಾನೀ ಪದ್ಯದಿಂದಮಭಿವಂದಿಪೆನೌ||

 20. ಈ ಬಾರಿಯ ಸಮಸ್ಯಾಪೂರಣವು ಒಳ್ಳೆಯ ರೀತಿಯಿಂದ ಉಡ್ಡಯನಗೊಂಡಿದೆ. ಎಲ್ಲರ ಪದ್ಯಗಳೂ ಸೊಗಸಾಗಿವೆ; ಪೂರಣಕ್ರಮಗಳೂ ನವೀನವಾಗಿವೆ. ಇದಕ್ಕೆ ಹೆಚ್ಚಿನ ಧನ್ಯವಾದಗಳನ್ನು ಪದ್ಯಪಾನಿಗಳಿಗೆ ಸಲ್ಲಿಸಬೇಕೇ ಅಥವಾ ಸರಳಸುಂದರವೂ ಸುಲಭಲೋಭಕವೂ ಆದ ದ್ರುತವಿಲಂಬಿತವೃತ್ತಕ್ಕೆ ಹೆಚ್ಚಿನ ಮನ್ನಣೆ ಸಲ್ಲಿಸಬೇಕೇ? 🙂 🙂

  • ಗಣೇಶ್ ಸರ್, ದೃತವಿಲಂಬಿತದ ಸರಳಸುಂದರತೆಯೇ ಕಾರಣವೆನಿಸುತ್ತದೆ, ನೀವೇ ಹೇಳುವ ಹಾಗೆ ದೃತವಿಲಂಬಿತಮಲ್ತೆ ಮನೋಹರಂ

  • ದ್ರುತ ಹಾಗೂ ವಿಲಂಬಿತ ಎಂಬ ವಿರೋಧದ್ಯೋತಕಪದಗಳನ್ನು ಹೊಂದಿರುವ ಹೆಸರೇ ಈ ವೃತ್ತದ ವ್ಯಾಪ್ತಿಯನ್ನು (range) ಸೂಚಿಸುತ್ತದೆ.

 21. ಕಲೆಯ ಪರ್ವದಿ ಎಳೆಯ ಮಗು ನಾ
  ಒಲವ ಕಬ್ಬವ ರಚಿಸ ತೊಡಗಿರೆ
  ಹಲವು ಕವಿಗಳು ಪದ್ಯಪಾನದಿ ಎನ್ನ ಹರಸಿದಿರಿI
  ಎಳೆಯ ಕಂದನು ಪದವ ನಿಡುತಿರೆ
  ಪುಳಕಗೊಳ್ಳುವ ಜನನಿ ತೆರದಲಿ
  ಒಲವ ತೋರಿದ ತಮಗೆ ಗೈಯ್ಯುವೆ ನೂರು ನಮನಗಳI

  • ಎಳೆಯ ಕ೦ದನು ಪದವನಿಡುತಿರೆ
   ಪುಳಕಗೊಳ್ಳುವುದುಚಿತಮಾದೊಡೆ
   ಬೆಳೆದುಪೇ೦ದ್ರನ ತೆರದಿ ನೀ೦ ವಿಕ್ರಮವಗೈಯಲ್ಕೆ
   ಅಳವದಲ್ಲೆಮ್ಮೆದೆಗೆ, ನಿನ್ನೊಡ-
   ನುಳಿದು ನಿನ್ನೆತ್ತರವ ಕಾ೦ಬೊಲು
   ಬೆಳೆಸಲೆಮ್ಮನು ದೇವದೇವನು ತನ್ನ ಮಹಿಮೆಯೊಳು! 🙂

  • ಮೊನ್ನೆಯನ್ನೆಗು ಪಾಲನೂಡುತೆ
   ತನ್ನ ಹಿರಿಯರ ತೋಳಲಾಡಿದ
   ಚೆನ್ನ ಸೊಲ್ಲಿನ ದಿಟ್ಟ ಪದಗಳ ಬಾಲಿಕೆಯ ಪೊತ್ತು
   ಪೊನ್ನ ಬಟ್ಟಲ ಕ್ಷೀರದನ್ನವ (ಶಿ.ದ್ವಿ)
   ಜೊನ್ನಿನಂಗಳದಲ್ಲಿ ತಿನ್ನಿಸೆ
   ಕನ್ನಡಾಂಬೆಯೆ ತಂದವೋಲಿಂದೆನಗೆ ಭಾಸಿಪುದು

  • ಕಲೆಯ ಪರ್ವದಿ ಎಳೆಯಳೇಂ? ಕೇ-
   ವಲದ ವರ್ಷಂಗಳ ಗಣಿಕೆಯೊಳ್
   ಲಲಿತೆಯಹೆ ನೀಂ, ಬಲಿತರಹೆವಾಮಿಂತೆ ವ್ಯತ್ಯಾಸಂ| 😉
   ಹಳಬಳಾಗಿಹೆಯಾಗಲೇ ನೀಂ
   ಕೆಳೆಯ ಕಲಹಕೆ ಸಿದ್ಧಳಾಗೌ
   ನಲುಗುಗಬ್ಬಗಳಂ ಪರಸ್ಪರರಿನ್ನು ತಿದ್ದೋಣು|| 🙂

   ಜನನಿ ತೆರದಲಿ:
   ೧) ಈ ಶಬ್ದಗಳನ್ನು ಹೀಗೆ ಬಿಡಿಸಿಬರೆದರೂ, ’ಜನನಿ’ ಶಬ್ದಕ್ಕೆ (ಯ, ಯನ್ನು, ಗಾಗಿ, ಯಲ್ಲಿ ಇತ್ಯಾದಿ) ಪ್ರತ್ಯಯವಿಲ್ಲದಿರುವುದರಿಂದ, ’ಜನನಿತೆರದಲಿ’ ಎಂದು ಸಾಮಸಿಕವಾಗಿ ಗ್ರಹಿಸಲಾಗುತ್ತದೆ.
   ೨) ಆದರೆ ಹೀಗೆ ಸಂಸ್ಕೃತಪದದೊಂದಿಗೆ ಕನ್ನಡಪದವನ್ನು ಸಮಾಸಗೈದರೆ ಅರಿಸಮಾಸವೆನಿಸುತ್ತದೆ; ಸಾಧುವಲ್ಲ. ’ಜನನಿ’ಶಬ್ದಕ್ಕೆ ಪ್ರತ್ಯಯವನ್ನು ಸೇರಿಸಿ ಕನ್ನಡವಾಗಿಸಿ ಕನ್ನಡಪದದೊಂದಿಗೆ ಸಂಧಿಯನ್ನು ಮಾಡಬಹುದು. ಉದಾ: ಜನನಿಯ+ಅಂದದೆ = ಜನನಿಯಂದದೆ. (ಸಂಸ್ಕೃತಪದದೊಂದಿಗೂ ಸಂಧಿಗೈಯಬಹುದು. ಉದಾ: ಜನನಿಯ+ಆಶಯ=ಜನನಿಯಾಶಯ)
   ೩) ’ನೂರು ನಮನ’ವೂ ಬಹುಶಃ ಅರಿಸಮಾಸವೇ.

   ಕಲೆಯ ಪರ್ವದೊಳೆಳೆಯ ಮಗುವಾ-
   ನೊಲಿದು ಕಬ್ಬವ ರಚಿಸತೊಡಗಿರೆ
   ಪಲವು ಕಬ್ಬಿಗರಾದರಿಸಿದಿರಿ ಪದ್ಯಪಾನದೊಳು|
   ಎಳೆಯ ಕಂದನು ಪದವನಿಡುತಿರೆ
   ಪುಳಕಗೊಳ್ಳುವ ಜನನಿಯಂದದೊ-
   ಳೊಲವ ತೋರಿದರೆಲ್ಲರಿಂಗಿದೊ ನಮನಶತಕಂಗಳ್||

   • ಹಳೆಯ ಹುಲಿಗಳು ಮೆರೆವ ಕಾಡಿನೊ –
    ಳಳುಕದೆಯೆ ಪದವಿಟ್ಟ ಹುಲ್ಲೆಗೆ
    ಕಲಿಪ ನೆಪದಲೆ ಕಲಹಕೆಳಸುವುದೇಕೆ ಪ್ರಸ್ಸಾದು?

    • ಹಳೆಯ ಹುಲಿಗಳು ಮೆರೆವ ಕಾಡಿನೊ–
     ’ಳಳುಕದೆ’ಯೆ ಪದವಿಟ್ಟ ಹುಲ್ಲೆಯ
     ಕೆಳೆಯ ಬಯಸುತೆ ಮೆಚ್ಚಿ ಸಹಪಙ್ತಿಯನು ನೀಡಿಹೆನು|
     ಹಳೆಯ ಹುಲಿಗಳಿವೆಂತೊ ಎನ್ನು-
     ’ತ್ತಳುಕುತ’ಲಿ ಸುಳಿದಿರ್ದೊಡಾಗಳ್
     ಕಳೆಸೆ ಮುಜುಗರಮನ್ನುಮೆಳಸದೆಲಿರ್ಪೆನೇಂ (ಪದ್ಯ)ಪಾನಿ||

  • ಕಿರಿದದಲ್ಲವೆ ಗಿರಿಯನೆತ್ತಿದ
   ಕಿರುವೆರಳು? ತನ್ನವ್ವೆಗಜಕೃತ
   ವಿರಚನಾದ್ಭುತದರ್ಶನವ ಕರುಣಿಸಿದ ಬಾಯ್ ಪಿರಿದೇಂ?
   ಕಿರಿದು ಕಿರಿದೆಂದಲ್ಲಗಳೆಯುತ
   ಪಿರಿಯ ಕಜ್ಜವ ಕಾಣದಿಹ ತ
   ನ್ನರರ ಮನವದು ಕಿರಿಯದೀ ಜಗದೊಳಗೆ ಹರಿಸಾಕ್ಷಿ!

  • ಎಳೆಯ ಕಂದನ ಪದದ ಪದದಿಂ
   ಗೆಳೆಯರೆಲ್ಲರು ತೋಷಗೊಂಡಿರ –
   ಲಳೆಯಬಹುದೇಂ ? ನಮ್ಮ ಸಂತಸವನ್ನು ಪದಗಳಲೀ ?

   ಕಳೆಯು ಹಬ್ಬದ ಮೊಳೆಯೆ ತಾಣದಿ
   ಕಳಿತ ಕೈಗಳ ನಡುವೆ ಕವನಿಸೆ
   ಬೆಳೆಯುತಲಿನೀ ಸ್ಪೂರ್ತಿಯಾಗಿರು ಪದ್ಯಪಾನಿಗಳ ।।

   ನೆಮ್ಮದಿಯ, ಆಶ್ಚರ್ಯದ , ತುಂಬು ಸಂತಸವಾಗಿದೆ .
   ಶುಭ ಹಾರೈಕೆಗಳು

 22. ಶನಿಗ್ರಹದ ಸುತ್ತಲಿನ “ಬಳೆ”ಗಳ ಬಗ್ಗೆ :

  ಇಳೆಯೊಡಂ ಗ್ರಹಚಾರದೆ ಸೌರಮಂ-
  ಡಲದೊಳುಂ ಗುರು,ಶುಕ್ರ,ಬುಧಂ ಚ ಮಂ-
  ಗಳ ಗಡಾ ರವಿಪುತ್ರ ಶನೈಶ್ಚರಂ,
  ಬಳೆಗಳೇ ಭವರಂಗೆ ವಿಭೂಷಣಂ !!

  “ಗ್ರಹಚಾರ” ಕಾರಕ ಶನಿಯು ~ ಗುರುವು, ಶುಕ್ರನು, ಬುಧನು, ಮಂಗಳನು ~ ವೀರನು.
  ಅವನಿಗೆ ಬಳೆಗಳೇ ಅಲಂಕಾರ !!

  • ಶನಿಯಲ್ಲದೆಲೆಮಿನ್ನುಮಿಲ್ಲಮೇಂ ವ್ಯೋಮದೊಳ್
   ತೊನೆವ ಬಳೆಗಳ ಕೊಂಡ ಗ್ರಹಗಳೆಂತೋ?
   ಮಿನುಗೆ ಸಂಶೋಧವೀಚೆಗೆ ಗುರ್ತಿಸಿರ್ಪರೆಂ-
   ಬೆನವೇ ಯುರೇನಸ್ನೆಪ್ಚೂನ್ಜೂಪಿಟರ್|| (ಪ್ಚೂ – ಶಿ.ದ್ವಿ)

   • ಅಯ್ಯೋ, ಸುಮ್ಮನಿರಿ ಪ್ರಸಾದರೇ! ಶನಿಯನ್ನು ಹೊಗಳುವಾಗ ಮಧ್ಯೆ ಬಾಯಿ ಹಾಕಬೇಡಿ…

    • ಬಳೆತೊಡಿಸಿಕೊಳ್ಳುವಿಕೆಯನ್ನು ಯಾವ’ನು’ ತಾನೇ ಹೊಗಳಿಕೆ ಎಂದು ಬಗೆದಾನು?

     • ಹೌದು… ನಾವು ಬಗೆಯದಿದ್ದರೂ ಶನಿ ಬಳೆತೊಟ್ಟುಕೊ೦ಡದ್ದನ್ನು ನೋಡಿ ಉಷಾ ಮೇಡಮ್ ನಲಿದಾಡುತ್ತದ್ದಾರಲ್ಲ 🙂

   • “ವೀರ” ನೀಲನ ಸುಂದರ ಬಳೆಗಳನ್ನು ಕಂಡು ನಲಿದರೆ ರಾಹು-ಕೇತುಗಳಿಗೆ ಹೊಟ್ಟೆಕಿಚ್ಚಾದೀತೆ ?!
    ಗ್ರಹಗತಿ ಹೇಗೇ ಇರಲಿ, ನನ್ನ ಪದ್ಯಗತಿ ಎಂತಾಯಿತೆಂದು ಚಿಂತೆಯಾಗಿದೆ !!

    • ಅಯ್ಯೋ ದೇವರೆ, ನೀಲನ ಕುತ್ತಿಗೆಗೇ ಬ೦ತಲ್ಲಪ್ಪ…
     ಮೇಡಮ್, ಚ ಎ೦ದೇಕೆ ಬಳಸಿದ್ದೀರಿ? ಸ೦ಸ್ಕೃತಾವ್ಯಯ!!

     • ಅವರ ಪದ್ಯವನ್ನು ಕುರಿತು ನಾನು ನೀವು ವಿಮರ್ಶಿಸುವ ಅಗತ್ಯವೇ ಇಲ್ಲ. ಅವರ ಪದ್ಯದ ಬಗೆಗೆ ಅವರೇ ’ತ್ಚ ತ್ನ ತ್ಚ’ಕಾರವೆತ್ತಿದ್ದಾರೆ!

    • “ಚ”ಕಾರವೆತ್ತಿದ್ದು ತಪ್ಪಾದರೆ, ಬುಧ-ಮಂಗಳರ ಮಧ್ಯದ ಛಂದಸ್ಸು ಸರಿಪಡಿಸಿಕೊಡಿ, ಪ್ಲೀಸ್ …

 23. ಇದೀಗ ತುಂಬ ದಿನಗಳ ಬಳಿಕ ಪದ್ಯಪಾನದಲ್ಲಿ ಬರಿಯ ಪದ್ಯಗಳಲ್ಲದೆ ಪರಸ್ಪರ ವೈನೋದಿಕ ಸಂವಾದಗಳು, ಹಾರ್ದಿಕವಾದ ಮೆಚ್ಚುಗೆ-ತಿದ್ದುಗೆಗಳು ಹಾಗೂ ಸೊಗಸಾದ ಪ್ರಕರಣೇತರಪದ್ಯಗಳು (off beat verses) ಸೇರಿ ಎಲ್ಲವೂ ಒಂದು ಹಬ್ಬದ ಸಂಭ್ರಮವನ್ನು ಕಲ್ಪಿಸಿವೆ. ಇದು ನಿಜಕ್ಕೂ ಮುದಾವಹ; ಎಲ್ಲರಿಗೂ ಮತ್ತೆ ಮತ್ತೆ ಆಭಿನಂದನೆಗಳು.

 24. ಎಲ್ಲ ಮುಗಿದಮೇಲೂ ನನ್ನದೊಂದು ಸಣ್ಣ ಪದ್ಯವಿರಲೆಂದು (ಅಶುಕವಿತೆಯಲ್ಲಿ ರಚಿಸಿದ್ದು) ::
  ಸುಳಿದಿರಲ್ ರತಿಕಾಮನೆ ಸಂಗದಿಂ
  ಬಳುಕುವಾ ನಡುವಂ ಪಿಡಿದಿರ್ದೊಡಂ
  ಬಳಸಿದಾಕೆಯ ತೋಳ್ಗಳು ಚೆಲ್ಲಿದಾ
  ಬಳೆಗಳೇ ಬವರಂಗೆ ವಿಭೂಷಣಂ

  • ಆಹಾ, ಚೆನ್ನಾಗಿದೆ 🙂

  • ನೀವು ವೀರರಲ್ಲವೆ? ’ಬಳಸಿದೀಕೆಯ’ ಎಂದು ನಿಸ್ಸಂದಿಗ್ಧವಾಗಿಯೇ ಹೇಳಬಹುದಾಗಿತ್ತು. ಇರಲಿ!

 25. ಎಳೆಯ ಗಟ್ಟಿಗನೆಮ್ಮಯ ಕಂದ ತಾಂ
  ಕಲಿತುಮಿಟ್ಟೊಡೆ ಪಟ್ಟನು ಜಟ್ಟಿಯೋಲ್ ।
  ಹೊಳೆವ ಬೆಟ್ಟಿನದುಂಗುರ, ಕಟ್ಟಿದಾ
  ಬಳೆಗಳೇ ಭವರಂಗೆ ವಿಭೂಷಣಂ ।।

  ಮೂರುತಿಂಗಳ ಮೊಮ್ಮಗ – ವೀರೂಗೆ ಬಳೆ ತೊಡಿಸಿದ ಸಂಭ್ರಮ !!

 26. (ಒನಕೆಯ) ಓಬವ್ವ>ಓಬಳವ್ವ>ಓಬಳೆ
  ಉಳಿಸೆ ದುರ್ಗದ ಮಾನವ ಹೋರಿದಳ್
  ಸುೞಿವ ಹೈದರಸೈನ್ಯಮನೋರ್ವಳೇ|
  ಭಳಿರೆ! ಈ ಪರಿ ಶಕ್ತಿಯನುಳ್ಳ ಓ-
  ಬಳೆಗಳೇ(ಯರೇ) ಭವರರ್ಗೆ ವಿಭೂಷಣ೦||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)