Jan 102016
 

ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪೂರಯಿಸಿ

“ವಿಧುವಿಧುಂತುದಸಖ್ಯಮಿದೊಪ್ಪುಗುಂ”

ವಿಧು = ಚಂದ್ರ

ವಿಧುಂತುದ = ಚಂದ್ರನ್ನು (ಗ್ರಹಣದಲ್ಲಿ) ಕಬಳಿಸುವವನು

  115 Responses to “ಪದ್ಯಸಪ್ತಾಹ ೧೮೪: ಸಮಸ್ಯಾಪೂರಣ”

  1. ನಿಧಿಯನಿಚ್ಛಿಸಿ ಹೋರುತುಮಿರ್ದೊಡಂ
    ಬುಧರವೊಲ್ ಸಖರಂತರೆ!ಬಾಳರೇಂ?
    ವಿಧುರಕಾಲವು ಬಂದೊಡೆ,ಸೋದರರ್!
    ವಿಧುವಿಧುಂತುದ ಸಖ್ಯಮಿದೊಪ್ಪುಗುಂ!

    (ನಿಧಿಗಾಗಿ ಬಧ್ಧವೈರಿಗಳಾದವರೂ,ಪ್ರತಿಕೂಲ ಕಾಲಬಂದಾಗ,ಒಂದಾಗರೇಂ!)

  2. ಮಧುಪನಯ್ದಿರೆ ಕರ್ಪಿನ ಗೇಹದಿಂ
    ಸುಧೆಯ ಬಣ್ಣದ ಪಾಂಗಿನ ಪೂವಿನೊಳ್
    ಮಧುರಸಾಮ್ಯದ ಪೋಲಿಕೆ ತೋರ್ಪುದಯ್
    ವಿಧುವಿಧುಂತುದಸಖ್ಯಮಿದೊಪ್ಪುಗುಂ

    • ಸೋಮ, ಅದೇಕೋ ಪೂರಣವು ಅಷ್ಟಾಗಿ ಹಿತವೆನಿಸಲಿಲ್ಲ. ಆದರೆ ಕಲ್ಪನೆ ಮಾತ್ರ ಸ್ವೋಪಜ್ಞವಾಗಿದೆ.

      • ಗಣೇಶ್ ಸರ್, ಮೂರನೇ ಪಾದ ನನಗೇ ಸ್ವಲ್ಪವೂ ಹಿಡಿಸಲಿಲ್ಲ, ಮತ್ತೆ ಪ್ರಯತ್ನಿಸುತ್ತೇನೆ 🙂

  3. ಕಾಳಿಂಗಮರ್ದನ:
    ಅಧರವಂಶಿಯು(Krishna) ಪನ್ನಗಮರ್ದದೊಳ್
    ವಿಧದ ಲೀಲೆಯ ತೋರಿರೆ ಮೋದದಿಂ|
    ಬುಧರು ಮೆಚ್ಚುತೆ ಕಾವ್ಯದೆ ಪೇಳರೇಂ:
    ವಿಧು(Krishna)ವಿಧುಂತುದ(rAhu=sarpa)ಸಖ್ಯಮಿದೊಪ್ಪುಗುಂ||

  4. ರುಧಿರಮಂ ತವೆ ಪೀರುತೆ ನಲ್ಮೆಯಿಂ
    ಮಧುರನೇಹದ ಸೋಗಿನೊಳಂಬುಳಂ,
    ಕ್ಷುಧೆಯ ತೃಪ್ತಿಗೆ ತೋರಿರೆ ಬಟ್ಟೆಯಂ!
    ವಿಧುವಿಧುಂತುದ ಸಖ್ಯಮಿದೊಪ್ಪುಗುಂ!

    (ನೇಹದ ಸೋಗಿನಲ್ಲಿ ಅಂಟಿಕೊಂಡು,ರಕ್ತವನ್ನು ಹೀರಿ,ಹಸಿವನ್ನು ಹಿಂಗಿಸಿಕೊಳ್ಳುವ ದಾರಿಯನ್ನು ಅಂಬುಳ(ಜಿಗಣೆ)ತೋರಿರುವಾಗ,ರಾಹುವಿನ ಸಖ್ಯವೂ ಸರಿಯಾಗೇ ಇದೆ!)

    ಕ್ಷುಧೆಯ ತೃಪ್ತಿಗೆ ಸಲ್ವೊಡೆ ಲೋಕದೊಳ್
    ಮಧುರನೇಹದ ಸೋಗಿನ ನೇಹಿಗರ್
    ರುಧಿರಮಂ ತವೆ ಪೀರುತೆ ಕೀಟದೊಲ್,
    ವಿಧುವಿಧುಂತುದ ಸಖ್ಯಮೊಪ್ಪುಗುಂ!

  5. “ವಿಧುವಿಧುಂತುದ ಸಖ್ಯಮಿದೊಪ್ಪದೈ”
    ಬುಧರು ಪೇಳಿದ ವಾಕ್ಯಮನಾಲಿಸಾ
    ಬಧಿರಬಾಲಕನೆಂದನು ಶೀಘ್ರಮೇ
    “ವಿಧುವಿಧುಂತುದ ಸಖ್ಯಮಿದೊಪ್ಪುಗುಂ!”
    ——
    “ವಿಧುವಿಧುಂತುದ ಸಖ್ಯಮಿದೊಪ್ಪದೈ”-
    ಬುಧರ ವಾಕ್ಯಮನಾಲಿಸಿ, ಬಾಲಕಂ
    ಬಧಿರನಾಗಿರಲಲ್ಪಮೆ,ಪೇಳ್ದನೈ-
    “ವಿಧುವಿಧುಂತುದ ಸಖ್ಯಮಿದೊಪ್ಪುಗುಂ”

    (ಬಧಿರ=ಕಿವುಡ)

    • ನಿಮ್ಮ ಮೊದಲ ಪೂರಣ ಚೆನ್ನಾಗಿದೆ. ಆದರೆ ಉಳಿದೆರಡು ಪದ್ಯಗಳಲ್ಲಿ ಪೂರಣಸ್ವಾರಸ್ಯವೂ ಭಾಷಾಪಾಟವವೂ ತಗ್ಗಿವೆ.

      • ಧನ್ಯವಾದಗಳು.ಎರಡೂ ಪೂರಣಗಳನ್ನು ತಿದ್ದಲು ಪ್ರಯತ್ನಿಸಿರುವೆ.

  6. ಸ್ಯಮಂತಕಮಣಿಯಿಂದಾಗಿ ಕೃಷ್ಣನಿಗೆ ಅಪಕೀರ್ತಿ… ಸತ್ರಾಜಿತ, ಪ್ರಸೇನ, ಸಿಂಹ, ಜಾಂಬವಂತರನ್ನು ಅನುಸರಿಸಿ… ಜಾಂಬವಂತನಿಗೆ ರಾಮನಾಗಿ ಶೀಕೃಷ್ಣ ಕಂಡುಬಂದ…
    ಉತ್ಪಲಮಾಲಾ|| ಗಾಥೆಯ ನೀಂ ಸ್ಯಮಂತಕದ ಬಲ್ಲಿರ ಕೃಷ್ಣಗೆ (Blame)ದುಷ್ಟಿದಾಯಕಂ
    (Epic)ಕಾಥಿಕದೊಳ್ ಪ್ರಸೇನ-ಹರಿ-ಜಾಂಬವರನ್ನನುವರ್ತಿಸುತ್ತೆ(follow) ಗೋ-|
    ನಾಥನು(Krishna)ವಚ್ಛನೊಳ್(ಅಚ್ಛ=Bear) ಸತತಯುದ್ಧದನಂತರದೊಳ್ ಸ್ವರೂಪಮಂ
    ನಾಥನ* ತೋರಿದಂ. ವಿಧು(Krishna)ವಿಧುಂತುದ(jAmbavanta)ಸಖ್ಯಮಿದೊಪ್ಪುಗುಂ ವಲಂ||
    —————
    * ಗೋನಾಥನು ಜಾಂಬವಂತನ ನಾಥನ (ಅರ್ಥಾತ್ ತನ್ನದೇ) ಸ್ವರೂಪವನ್ನು ತೋರಿದನು

    • ಆಹಾ! ಉತ್ಪಲಮಾಲೆಯಲ್ಲಿ ದ್ರುತವಿಲಂಬಿತವೃತ್ತವನ್ನು ಗರ್ಭೀಕರಿಸಿದ ನಿಮ್ಮ ಜಾಣ್ಮೆ ಮೆಚ್ಚುವಂತಿದೆ. ಆದರೆ ವೃಥಾ ನೈಘಂಟುಕಪದಗಳನ್ನೂ ದುರೂಹ್ಯಾರ್ಥಗಳನ್ನೂ ಬಳಸುವ ಪರಿ ಮಾತ್ರ ಸ್ವಲ್ಪ ಅಹಿತಕಾರಿ. ವಿಶೇಷಾರ್ಥ-ವಿಶಿಷ್ಟಸಂದರ್ಭಗಳ ಅನನ್ಯಪ್ರಯೋಜನವಿದ್ದಾಗ ಮಾತ್ರ ಅಪ್ರಸಿದ್ಧಪದಗಳ, ಅಪ್ರಸಿದ್ಧಾರ್ಥಗಳ ಬಳಕೆ ಯುಕ್ತ. ಇರಲಿ, ಪದ್ಯಪಾನಿಗಳ ವ್ಯುತ್ಪತ್ತಿಗೆ ನಿಮ್ಮ ಈ ಪ್ರಯೋಗಗಳು ನೆರವಾದಾವು.

      • ಸಲಹೆಗಳನ್ನು ಗಮನಿಸಿಕೊಳ್ಳುತ್ತೇನೆ. ಧನ್ಯವಾದಗಳು.

    • ಉತ್ಪಲಮಾಲೆಗೆ ಹೊಂದಿಸುವ ಐಡಿಯಾ ಚೆನ್ನಾಗಿದೆ ಪ್ರಸಾದು

  7. ಕಿರಾತಾರ್ಜುನೀಯಮ್:
    ವಿಧದ (penance)ಕೃಚ್ಛ್ರಕಮಿತ್ತ ಕಪಾಲಿ ತಾಂ
    ನಿಧಿಯನೇ ವರರೂಪದೆ ಪಾರ್ಥಗಂ|
    (war)ಮೃಧದ ವ್ಯಾಜದೆ ಪಾಶುಪತಾಸ್ತ್ರಮಂ
    ವಿಧು(Shiva)ವಿಧುಂತುದ(Arjuna)ಸಖ್ಯಮಿದೊಪ್ಪುಗುಂ||

  8. ನಿತ್ಯಪೂಜೆ:
    ಅಧಮರೆಂತೊ ಸುಶಾಂತಿಯ ಪೊಂದೆ ತಾಂ
    ವಿಧದೊಳರ್ಚಿಸುತಂತ್ಯದೊಳಾ *ಮಹೋ-
    ದಧಿವಿರಾಜನಿಗಾರತಿಗಾದುದೈ
    ವಿಧು(Camphor)ವಿಧುಂತುದ(Fire)ಸಖ್ಯಮಿದೊಪ್ಪುಗುಂ||
    *ಮಹೋದಧಿವಿರಾಜ=ಕ್ಷೀರಸಾಗರಶಯನ

    • ಬೆಂಕಿ ಹಾಗೂ ಕರ್ಪೂರದ ಅರ್ಥಗಳು ಎಲ್ಲಿಂದ ಸಿಕ್ಕಿದವು? ಹಾಗೆಯೆ ಅರ್ಜುನ?
      ಇವೆಲ್ಲಾ ಅರ್ಥಗಳು ಸಾಧುವಾಗಿದ್ದರೆ, ಪೂರಣ ವಿಧಿಗಳು ಚೆನ್ನಾಗಿವೆ. ಈ ಪದ್ಯದಲ್ಲಿ, ಮೊದಲೆರಡು ಪಾದಗಳನ್ನು ಇನ್ನೂ ಚೆನ್ನಾಗಿಸಬಹುದೇನೋ ಅನ್ನಿಸುತ್ತದೆ.

      • ವಿಧು:ಶಬ್ದಕ್ಕೆ ಬ್ರಹ್ಮ, ವಿಷ್ಣು, ಕೃಷ್ಣ, ಶಿವ, ಕರ್ಪೂರ ಎಂಬ ಅರ್ಥಗಳು (http://dsalsrv02.uchicago.edu/cgi-bin/philologic/getobject.pl?c.5:1:2344.apte) ಹಾಗೂ ತುದಶಬ್ದಕ್ಕೆ Striking, tormenting ಎಂಬ ಅರ್ಥಗಳು ಆಪ್ಟೆ ನಿಘಂಟುವಿನಲ್ಲಿದೆ.
        ಕರ್ಪೂರ(ವಿಧು)ವನ್ನು ಜ್ವಲಿ(ತುದ)ಸುವದು ಎಂಬ ಅರ್ಥದಲ್ಲಿ ಬೆಂಕಿಯು ವಿಧುಂತುದ. ಕಿರಾತಾರ್ಜುನೀಯದಲ್ಲಿ ಅರ್ಜುನನಿಗೂ ಶಿವನಿಗೂ ಯುದ್ಧವಾಗುತ್ತದಲ್ಲವೆ? ಹಾಗಾಗಿ ಶಿವ(ವಿಧು)ನನ್ನು ಘಾತಿಸುವನು ಎಂಬರ್ಥದಲ್ಲಿ ಅರ್ಜುನನು ವಿಧುಂತುದ.
        ನಲ್ನುಡಿಗಾಗಿ ಧನ್ಯವಾದಗಳು. ನಿಮ್ಮ ತಿದ್ದುಗೆಯನ್ನು ದಯವಿಟ್ಟು ತಿಳಿಸಿ.
        In the above link, more meanings are available for vidhuH: Demon/fiend, an expiatory oblation, wind and war/battle. My imagination has forfeited its elasticity short of them! Try using them.

  9. Diamond ring effect during solar eclipse
    ವಿಧದೆ ಭಾಸ್ಕರಗಡ್ಡಿಯನೊಡ್ಡುತೆಂ-
    ತೊ ಧರೆಯಿಂದದನೀಕ್ಷಿಪರಿಂಗೆ ಮೀ-
    ರಿ ಧಗಿಪುಂಗುರದೋರೆ ಮಹೋನ್ನತಂ
    ವಿಧು(Moon)ವಿಧುಂತುದ(Sun)ಸಖ್ಯಮಿದೊಪ್ಪುಗುಂ||
    (The logic is very very tangential here. It is actually the moon(ವಿಧು) that eclipses(ತುದ) the sun. Please understand it this way: The sun is troubling(ತುದ) the moon(ವಿಧು) by merely participating in the eclipse 😉 )

    • ನಿಮ್ಮ ಈ ಪರಿಹಾರಗಳಲ್ಲಿಯೂ ನಾನು ಹಿಂದೆ ಹೇಳಿದ ಕ್ಲೇಶವೇ ಕಾಣುತ್ತಿದೆ. ಆದರೆ ಪೂರಣದ ನಾವೀನ್ಯವನ್ನು ಮಾತ್ರ ಅಲ್ಲಗೆಳೆಯಲಾರೆ. ಒಂದು ಮಾತು; ನೀವು ಆನ್ ಲೈನ್ ಡಿಕ್ಷ್ಣರಿಯನ್ನು ನೋಡದೆಯೇ ಪೂರಣಕ್ಕೆ ಯತ್ನಿಸಿರಿ:-)

      • ಪ್ರಸಾದು “ವಿಧು (Moon)” ಎಂದದ್ದಕ್ಕೆ, ಸಂತಸವಾಗುತ್ತಿದೆ :), ಮುಂದುವರೆಸಿ ಪ್ರಸಾದು

      • ಧನ್ಯವಾದಗಳು. ಆಪ್ಟೆಯವರ ಹಾರ್ಡ್‍ಕಾಪಿ ನಿಘಂಟುವನ್ನು ನೋಡಲಾದರೂ ಅನುಮತಿಯನ್ನು ನೀಡಿ. ಅದರಲ್ಲಿ ‘search’ ಅನುಕೂಲವಿಲ್ಲದಿರುವುದರಿಂದ, ಇಂತಹ ಯಾವುದ್ಯಾವುದೋ ಶಬ್ದಗಳೆಲ್ಲೆ ಕಣ್ಣಮುಂದೆ ಬಂದು ನಿಲ್ಲೋಲ್ಲ. ಎಷ್ಟೋ ವಾಸಿ.

  10. ಸುಧೆಯನೀಂಟೆನೆಬಂದೊಡನಳ್ತಿಯಿಂ
    ಮಧುಕರಂ ಕುಸುಮಕ್ಕರಿಯಲ್ತು ಕೇಳ್
    ಮಧುರಮಾರ್ದ್ರರಸಸ್ಪೃಶಮಾದೊಡಂ
    ವಿಧು ವಿಧುಂತುದ ಸಖ್ಯಮಿದೊಪ್ಪುಗುಂ

    • ರಾಮಣ್ಣಂ ಇದೇ ಜಾಡಿನಲ್ಲಿ ನಾನು ಪ್ರಯತ್ನ ಪಟ್ಟೆ , ಅದರೆ ನಿಮ್ಮ ಪದ್ಯ ನನ್ನದಕ್ಕಿಂತ ಚೆನ್ನಾಗಿ ಮೂಡಿತು 🙂

  11. ವಿಧಿವಿಲಾಸವಿನೋದವದದ್ಭುತಂ
    ದಧಿಯು ಪಾಲೊಡೆ ಕೂಡುವ ಪಾಲೊಡಗೂಡುವ ಪಾಂಗಿನೋಲ್
    ಮಧುರಪಾಕದೊಳಾಮ್ಲತೆ ಸಲ್ವವೋಲ್
    ವಿಧು ವಿಧುಂತುದ ಸಖ್ಯಮಿದೊಪ್ಪುಗುಂ

  12. Pleased at his penance, Brahma as usual grants a boon to tAlAsura that he shall beget death from an elephant only, not from Gods or humans. Eventually when the rAkShasa goes bananas, Brahma pleads with Shiva to intervene. Shiva deputes his son Ganesh for the job of eliminating tAlAsura.
    ಅಧಮತಾಲಪಿಶಾಚಗೆ ಬ್ರಹ್ಮ ತಾಂ
    (ತುಟಿಮೀರಿ)ಅಧರಭಂಜನದಿಂದೆ ಪ್ರಸಾದಿಸಲ್!
    ವಧೆಯನಾತನ ಗೈಯೆ ಗಣೇಶನಿಂ
    ವಿಧು(Brahma)ವಿಧುಂತುದ(Ganesha, the moon-tormentor)ಸಖ್ಯಮಿದೊಪ್ಪುಗುಂ||

  13. ಮಧುರರಾತ್ರೆಯೊಳಾಣ್ಮವಿಸಂಧನೈ
    ವಿಧವೆಯೋಲಭಿಸಾರಿಕೆ ನೊಂದಿರಲ್
    ಸುಧೆಯ ಪೂರ್ಣಿಮ ತಾಪದೊಳಾಕೆಗಂ
    ವಿಧು ವಿಧುಂತುದ ಸಖ್ಯಮಿದೊಪ್ಪುಗುಂ

  14. ಮಧುವನುಣ್ಣುತೆ ಸಂತಸದಿಂದಿರಲ್
    ಮಧುಪಪುಷ್ಪದೆರಾಗಮದೊಪ್ಪುಗುಂ!
    ಸುಧೆಯನೆಂದಿಗು ಚೆಲ್ಲಿರಲಂದದಿಂ
    ವಿಧುವಿಧುಂತುದ ಸಖ್ಯಮದೊಪ್ಪುಗುಂ!

    • ಕಾಂಚನಾ ಅವರೆ, ಮಂಗಳವಾರಕ್ಕೇ ೫ – ೬ ಪದ್ಯ ಕೊಟ್ಟಿದ್ದೀರಿ 🙂 ಮುಂದುವರೆಯಲಿ…

  15. ವಿಧುಮುಖಸ್ಮಿತಸುಂದರಿಚಿತ್ರದೊಳ್
    ವಿಧುಶಿಖಾರಿವಶೀಕೃತಪಾನಿತಾ
    ನಧರಚುಂಬಿಸಲೆತ್ನಿಪ ವೈಖರೀ
    ವಿಧು ವಿಧುಂತುದ ಸಖ್ಯಮದೊಪ್ಪುಗುಂ
    ವಿಧು ಶಿಖ ಅರಿ =ಕಾಮ
    ಪ್ರಪ್ರಥಮ ಪದ್ಯ
    ವಿಧುವೂ ವಿಧಿವಶವೇ ತಾನೆ

    • ರಮೇಶರೆ, ಬಹಳ ಸೊಗಸಾದ ಪದ್ಯ ಪೂರಣ. ಪದ್ಯಪಾನಕ್ಕೆ ಸ್ವಾಗತ. ಇನ್ನು ಮುಂದೆಯೂ ಸಕ್ರಿಯವಾಗಿ ಭಾಗವಹಿಸುವುರೆಂದು ಆಶಿಸುತ್ತೇನೆ

      • ಧನ್ಯವಾದಗಳು , ಪ್ರಥಮ ಚುಂ… ಭಗ್ನವಾಗಲಿಲ್ಲ !

        • ಸಮಸ್ಯೆಯ “ವಿಧು” ಕೊಂಬು ಕಳೆದು “ವಿಧಿ”ಯಾಗಿದೆಯಲ್ಲ !!
          ಪದ್ಯಪಾನಕ್ಕೆ ಸ್ವಾಗತ. ಸೊಗಸಾದ ಪೂರಣ. ನಿಮ್ಮ ಪ್ರಥಮ ಪದ್ಯಕ್ಕೆ (ಅದೂ ವೃತ್ತದಲ್ಲಿ) ಅಭಿನಂದನೆಗಳು.

          • ಕೇವಲ ಚಪಲದಿಂದ ಪ್ರಯತ್ನಿಸಿದ ಪದ್ಯ
            ಐವತ್ತು ವರ್ಷಗಳಹಿಂದೆ ಓದಿದ ಛಂದಸ್ಸು
            ಸಾಧ್ಯವಾದಷ್ಟು ಶುದ್ಧತೆಗೆ ಪ್ರಯತ್ನಿಸೋಣ
            ಸಲಹೆಗೆ ಧನ್ಯವಾದಗಳು

          • ರಮೇಶರೆ, ಸಲಹೆಯಲ್ಲ (ಟೈಪೋ ಎಂದು ತಿಳಿದಿತ್ತು), ನೀವು “ದಂತ ಭಗ್ನ ವಾಗಲಿಲ್ಲ” ವೆಂದುದಕ್ಕೆ ವಿನೋದವಾಗಿ ಹೇಳಿದ್ದು !!. ನಿಮ್ಮ ಮುಂದಿನ ಪ್ರಯತ್ನಕ್ಕೆ ಶುಭ ಹಾರೈಕೆಗಳು.

    • ಪದ್ಯಪಾನಕ್ಕೆ ಸ್ವಾಗತ ಸೊಗಸಾದ ಪೂರಣ

    • ರಮೇಶರೆ, ಸ್ವಾಗತ.ಮೂರನೇ ಪಾದವನ್ನು – “ನಧರಚುಂಬನಯತ್ನಮನೊಂದಿರಲ್” ಅಥವಾ “ನಧರಚುಂಬನಕೆತ್ನಿಪ ರೀತಿಯೊಳ್”ಎಂದು ಸವರಿದರೆ ಒಳಿತೆನಿಸುತ್ತದೆ. “ಅಧರಚುಂಬಿಸಲೆತ್ನಿಪ “-ಎಂಬಲ್ಲಿ,ವಿಭಕ್ತಿಪ್ರತ್ಯಯವು (ಅಧರಮಂ) ಇಲ್ಲದಾಗಿದೆ.”ವೈಖರೀ” -ಎಂಬಲ್ಲಿ, ದೀರ್ಘಾಂತ್ಯವು ಸರಿಯಾಗಲಾರದು ಅಲ್ಲವೆ ?

    • ರಮೇಶಣ್ಣ,
      ದಯವಿಟ್ಟು ಅದನ್ನು ಬಿಡಿಸಿ ತಿಳಿಸಿ.
      ಧನ್ಯವಾದಗಳು.

      • ಆನೊರ್ವನೇ ಮೆರೆದಿರುತು-
        ಮೈನಾತಿಪೆಸರಿದರಿಂದಲಿನ್ನೆಗಮೀಗಳ್|
        ನೀನಾರ್? ಬಂದಪೆ ಎಲ್ಲಿಂ?
        ಸ್ವಾನುಭವಮನೆಲ್ಲಮಂ ತಿಳಿಸುಗೆಮಗೀಗಳ್||
        Welcome to padyapaana

    • ರಮೇಶಣ್ಣ ಹಾಗೂ Prasad ರ ಬಗ್ಗೆ ಸಂದೇಹವಾಗುತ್ತಿದೆ. ಅಂದ ಹಾಗೆ ನೀಲಕಂಠರೆಲ್ಲಿ ?! 🙂

      • ಇದ್ದೇನೆ ಮೇಡಮ್ ಇಲ್ಲೇ 🙂 ಮೈತುಂಬ ಕೆಲಸ, ತಲೆತುಂಬ ನೋವು… ನನ್ನ ಕವನಿಕೆಯ ವಿಧುವಿಗೆ ಕೆಲಸದ ವಿಧುಂತುದ ಗಂಟುಬಿದ್ದಿದೆ 🙂 ಅದೇಕೆ ನನ್ನ ನೆನಪಾದದ್ದು?!!

    • ವೈಖರೀ ಎಂಬ ಶುದ್ಧಸಂಸ್ಕೃತಶಬ್ದವನ್ನು ಕನ್ನಡದಲ್ಲಿ ಅಂತೆಯೇ ಉಳಿಸಿಕೊಳ್ಳುವಂತಿಲ್ಲ. ’ರೀತಿಯಿಂ’ ಎಂದು ಸವರಬಹುದು. ಪದ್ಯಪಾನಕ್ಕೆ ಸ್ವಾಗತ. ಪದ್ಯರಚನೆಯಲ್ಲಿ ನಿಯತವಾಗಿ ತೊಡಗಿಕೊಳ್ಳಿ. ಈ ಪುಟದ ಮೇಲ್ಭಾಗದ ’Learn Prosody’ linkಲ್ಲಿ ಛಂದಸ್ಸು-ಅಲಂಕಾರಗಳನ್ನು ಕುರಿತು ಶ್ರೀ ಗಣೇಶರ ವಿಡಿಯೊಪಾಠಗಳಿವೆ. ಗಮನಿಸಿಕೊಳ್ಳಿ.

  16. ಶಿವನ ಜಟೆಯಲ್ಲಿ ಚಂದ್ರಸರ್ಪಸಂಗಮ
    ವಧೆಯ ಕಾವನ ಗೈದನ ಶೀರ್ಷದೊಳ್
    ಮಧುರಸಖ್ಯದೆ ತಳ್ತಿರೆ ಚಂದ್ರನುಂ|
    ಬಧಿರಪನ್ನಗನುಂ, ಕವಿಯೆಂದನೈ
    ವಿಧು(Moon)ವಿಧುಂತುದ(rAhu=snake)ಸಖ್ಯಮಿದೊಪ್ಪುಗುಂ||

  17. Chandra and rAhu coexist in all navagraha temples.
    ಬುಧನು ಚಂದ್ರನು ರಾಹುವು ಮೇಣಿನಿಂ
    ದಧಿಯೊಳರ್ಚನೆಗೊಂಬ ಗುರುಗ್ರಹಂ
    ವಿಧದಿ ತಳ್ತಿರೆ ಮಂದಿರದೊಳ್ ವಲಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

  18. Moon and Rahu conjunction in kuNDali makes a person characteristic of great anger, fear of unknown, unexplained aggression, scary dreams, financial problems, mental agony…
    ರುಧಿರಮೇ ಗತಿ ಜಾತಕದೊಳ್ ಮಹೋ-
    ದಧಿಯ ಪುತ್ರನು ಸೇರಿರೆ ರಾಹುವಂ!
    ವಿಧಿಯಿದಿಂತಿರೆ ಹೇಗೆನುತೆಂಬುದೋ
    ’ವಿಧುವಿಧುಂತುದಸಖ್ಯಮಿದೊಪ್ಪುಗುಂ’??

  19. ಮಧುರ ಮೈತ್ರಿಯ ಸೂತ್ರಮಿದಂದು ಕಾಣ್
    ವಿಧಿ ವಿಧೇಯಕ ಸಂಕ್ರಮದೊಳ್ ಗಡಾ
    ವಿಧ ವಿರೂಪಮ ತಾಳ್ದುರೆ ಪೂರ್ಣತಾಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ ||

    *ವಿರೂಪ = ಸ್ವಾಭಾವಿಕವಲ್ಲದ ರೂಪ ತಾಳುವ ವಿಶೇಷವಾದ ಚಂದಿರ !!
    ಪೂರ್ಣಿಮೆಯ ಚಂದ್ರ ಗ್ರಹಣದ ಚಿತ್ರಣ.

    • ಉಷಾ ಅವರೆ, ದಯಮಾಡಿ ಪದ್ಯದ ಅರ್ಥವನ್ನೂ ತಿಳಿಸುವಿರಾ ?

  20. ಮಿಂಚುಗಳೆಂಬ ಹಾವುಗಳು ಚಂದ್ರನೊಡನೆ ಕಣ್ಣುಮುಚ್ಚಾಲೆಯಾಡಿ…
    ವಿಧದ (lightning)ಹ್ಲಾದಿನಿಸರ್ಪಗಳಬ್ಜನೊಳ್ (ಅಬ್ಜ=ಚಂದ್ರ)
    ಮಧುರಮೈತ್ರಿಯ ಕಣ್ಣೆವೆಯಾಟಮಂ (Hide & Seek)
    ಬುಧರಿಗೊಪ್ಪುವೊಲಾಡಿರೆ ವ್ಯೋಮದೊಳ್
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

  21. The snake-charmer’s name is abja (ವಿಧು)
    ಬಧಿರಪನ್ನಗಮಂ ಪಿಡಿದಬ್ಜ ತಾಂ
    ಅಧರಗರ್ಭದೊಳಿಂ ತೆಗೆದಂ ವಲಂ
    ರುಧಿರಕಾರಕ (poisonous)ಜಾಂಗುಲದಂಷ್ಟ್ರಮಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

    • ನಿಮ್ಮ ಪರಿಹಾರಪುಷ್ಕಲತೆಯೂ ಅಲ್ಲಿಯ ನಾವೀನ್ಯವೂ ವಿಸ್ಮಯಾವಹ. ಸ್ತವನೀಯ. ಆದರೆ ಹಲವುಬಾರಿ ಇಲ್ಲಿ ನಾನು ಮೊದಲೇ ಹೇಳಿದ ದೂರಾನ್ವಯ, ದುರೂಹಪದಪ್ರಯೋಗ ಹಾಗೂ ದುರ್ಬೋಧತೆಗಳು ತಲೆದೋರುತ್ತವೆ.
      ಪ್ರಕೃತಪದ್ಯದಲ್ಲಿ ನೀವು ವಹಿಸಿದ ನಿಲವನ್ನು ವಿವೇಚಿಸುವುದಾದರೆ ಹಾವಾಡಿಗನಿಗೆ ಅಬ್ಜ ಎಂಬ ಹೆಸರಿದೆ, ಅಂತೆಯೇ ಚಂದ್ರನಿಗೆ ಅಬ್ಜ ಎಂಬ ಅಂಕಿತವಿದೆ; ಹೀಗಾಗಿ ಹಾವಾಡಿಗನೂ ಅಬ್ಜ ಎಂಬ A = B and B = C, therefore A = C ಎಂಬ ಗಣಿತೀಯಸಮೀಕರಣದಂತೆ ಪದಪ್ರಯೋಗವು ಸಾಗಿದೆ. ಇದು ಸರ್ವಥಾ ಅಶಾಸ್ತ್ರೀಯ ಮತ್ತು ಭಾಷಾಪ್ರಪಂಚಕ್ಕೆ ಅಸಮ್ಮತ. ಏಕೆಂದರೆ ಜೀವನ ಎಂದರೆ ನೀರು ಎಂದೂ ಅರ್ಥವಿದೆ, ನೀರನ್ನು ವಾರಿ ಎಂದೂ ಹೇಳುವರು; ಹೀಗಾಗಿ ಬದುಕು ಎಂಬ ಅರ್ಥದಲ್ಲಿ ವಾರಿ ಎನ್ನುವ ಪದವನ್ನು ಬಳಸಬಹುದು ಎಂದಾದೀತು.

      • ಹಾವಾಡಿಗನನ್ನು ಹುಟ್ಟಿಸಿದವನು ನಾನೇ. ಅವನಿಗೆ ವಿಧು ಎಂದು ಹೆಸರಿಡದೆ ಅಬ್ಜ ಎಂದಿಟ್ಟು ಎರಡನೆಯ ತಪ್ಪನ್ನೂ ಮಾಡಿದ್ದೇನೆ! ಅಂತೂ ಇದೊಂದು ವಿಷಯವನ್ನು ಸ್ಪಷ್ಟವಾಗಿ ಅರಿತಂತಾಯಿತು. ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.

  22. There is the possibility of a Chandra and a Subrahmanya (snake-god) being classmates.
    ಉಧೊ-ಉಧೋಯೆನಿರೈ ನಿಜಕೂಟಕಂ (classroom)
    ಮಧುರಮೈತ್ರಿಯ ಕಾಣುತುಮೆಲ್ಲರೊಳ್|
    ನಿಧಿಗಳೇ ಕೆಳೆಯೊಳ್ ಗಡಮೀರ್ವರೈ
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

  23. Names of everyone in our common friend Sri Vasuki’s family is serpens. There are those young twin moons amongst them!
    ನಿಧಿಗಳೈ ಸ್ವರದೊಳ್ ಕುಲದರ್, ಪೆಸರ್
    ಬುಧರದೆಲ್ಲಮಿರಲ್ ಫಣಿಮೂಲಮೈ|
    ಮಧುರನೇತ್ರಗಳಾ ಯಮಳರ್ ಸುತರ್
    ವಿಧು(kids)ವಿಧುಂತುದ(others)ಸಖ್ಯಮಿದೊಪ್ಪುಗುಂ||

  24. ’ದುಷ್ಟಾಹಿಘೋರತರ ವಿಷವದನದಿಂದೆ ಸಂ-
    ದಷ್ಟಮಾಗಿರುತಿರ್ದೊಡಂ’, ದೋಷಮಿರ್ದೊಡಂ,
    ನಷ್ಟಕಲೆಯಾದೊಡಂ, ಚಂದ್ರನಂತೆನ್ನ ಕಾವ್ಯದರಸಂ ಸುಮನಸರ್ಗೆ
    ಇಷ್ಟಮಾಗದೆ ಮಾಣದಿನ್ನಾವನಾದೊಡಂ
    ದುಷ್ಟಿಯಂ ಬಗೆವವಂ ಚೋರಂಗೆ ವಿರಹಿಗಂ
    ದೃಷ್ಟಾಂತಮಾಗಿ ಸಲ್ವನ್…….
    ಅಹಿ(ರಾಹು)ಯಿಂದ ಹಿಡಿಯಲ್ಪಟ್ಟಿದ್ದರೂ (eclipse), ದೋಷವಿದ್ದರೂ (spots), ನಷ್ಟಕಲೆಯಾದರೂ (waning) ಚಂದ್ರನು ಎಲ್ಲರಿಗೂ ಇಷ್ಟವಾಗುತ್ತಾನೆ. ಅವನನ್ನು ಇಷ್ಟಪಡದವರೆಂದರೆ ಕಳ್ಳ ಹಾಗೂ ವಿರಹಿ – ಜೈಮಿನಿಯಲ್ಲಿ ಲಕ್ಷ್ಮೀಶಕವಿ.
    ಅಧಮಚೋರನು ಮೇಣ್ ವಿರಹಕ್ಲಿದರ್
    ರುಧಿರಚಿತ್ತರುಮನ್ಯರಿರರ್(ರುಧಿರಚಿತ್ತರ್), ಮಹೋ-
    ದಧಿಸುತಂ ಭುಜಗಗ್ರಹಿಯಿದ್ದೊಡಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

  25. ಚಂದ್ರನು ಹಗಲಲ್ಲಿ ಭೂಮಿಯಿಂದ ಮರೆಯಾಗಿ, ಭೂಮಿಯನ್ನು ಹೊತ್ತಿರುವ ಆದಿಶೇಷನನ್ನು ಕಂಡು, ಮಾತನಾಡಿಸಿ, ತನ್ನ ಅಂದಿನ ನಿಶಾಗಾಥೆಯನ್ನು ಸಂತಸದಿಂದ ಅರುಹಿ, ರಾತ್ರಿಯಲ್ಲಿ ಉದಯಿಸುತ್ತಲಿರುವನು.
    ಬುಧನುಮಾಗಿಹ ಮಿತ್ರವಿ’ಶೇಷ’ನೊಳ್
    ಮಧುರಭಾಷವ ಗೈಯುತೆ ಪ್ರತ್ಯಹಂ|
    ಸುಧೆಯನೀವನು(ಸುಧಾಕರನು) ಕಳ್ತಳನೌಂಕಿರಲ್
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

  26. Lakshmi and Chandra are siblings born to samudrarAja. At her wedding, she introduces her brother to her husband, and AdishESha to her brother.
    ವಿಧಿಯ ನಿರ್ವಹಿಪಾತನ ಪತ್ನಿ ತಾಂ
    ವಿಧವಿವಾಹದೆ* ಭರ್ತಗೆ ತಮ್ಮನಂ|
    ಮಧುರೆ ತೋರಿರೆ ತಮ್ಮಗೆ ಶೇಷನಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ||
    *one among the 8 types of marriages – brahma, daiva, Arsha, prAjApatya, gAndharva, Asura, rAkShasa and paishacha

  27. ಕ್ಷುಧೆಗೆ ರಾಗಿಯ ರೋಟಿಯ ಬಾನಿನೊಳ್
    ವಿಧುವಿನೊಲ್ ನವನೀತಮೆಯುಷ್ಣಕಂ
    ಮಧುರಗಂಧಮನೆರ್ಚುತೆ ಕುಗ್ಗಿರಲ್
    ವಿಧುವಿಧುಂತುದಸಖ್ಯಮಿದೊಪ್ಪುಗುಂ

  28. ಪ್ರಸಾದ್ ಸರ್ ರವರು 3 ನೆಯ ಅಂಕಣದಲ್ಲಿ ವಿಧು ಎಂದರೆ ಕೃಷ್ಣ ಎಂಬರ್ಥ ತಿಳಿಸಿರುವುದನ್ನು ಓದಿ ಹೀಗೆ ಬರೆದಿರುತ್ತೇನೆ.

    ವಿಧುಮೊಗಂ ಪಡೆದಿರ್ಪ ವಿಧೇಯಗಂ
    ಸುಧೆಯವರ್ಣವದೈ ಮರೆಯಾಗಿರಲ್
    ವದನ ವರ್ಣವು ಕೃಷ್ಣವದಂತಿಹಾ
    ವಿಧುವಿಧುಂತುದ ಸಖ್ಯಮಿದೊಪ್ಪಗುಂ

    • ಅಲ್ಲಿಗೇ ನಿಂತುಬಿಟ್ಟೆಯಾ? ಮುಂದಕ್ಕೆ ನೋಡಲಿಲ್ಲವೆ, ಅಪ್ರಸಿದ್ಧಾರ್ಥಗಳಲ್ಲಿ ಆ ಶಬ್ದವನ್ನು ಬಳಸಿದ್ದಕ್ಕಾಗಿ ನಾನು ಟೀಕೆಗೊಳಗಾದದ್ದು? 🙂 ಪ್ರಚುರಾರ್ಥಗಳಲ್ಲಿಯೇ ಬಳಸುವುದೊಳಿತು.

      • ಮಗೂ ಅಂಕಿತಾ, ನಿನ್ನ ಪದ್ಯದ ಕಲ್ಪನೆ ಚೆನ್ನಾಗಿದೆ. ಪ್ರಸಾದ್ ಅವರು ಹೇಳಿದ ಎಚ್ಚರಿಕೆ ಗಮನಕ್ಕೆ ಬಂದಿರಬಹುದಲ್ಲವೇ! ಆದರೂ ಸದ್ಯಕ್ಕೆ ಅಡ್ಡಿಯಿಲ್ಲ. ಆದರೆ ವಿಧುಮೊಗ ಎಂದರೆ ಅರಿಸಮಾಸವಾಗುವುದು. ಅದನ್ನು ವಿಧುಮುಖಂ ಎಂದು ತಿದ್ದಿದರೆ ಸರಿ. ವದನ ಎಂದು ಮೂರನೆಯ ಪಾದವನ್ನು ಮೊದಲುಮಾಡುವಾಗ ಪ್ರಾಸವು ಸ್ವಲ್ಪ ಎಡವಿದೆ. ಇರಲಿ, ಅದನ್ನು “ಮಧುರವಕ್ತ್ರಮದೇ ಕರಿದಾಗಿರಲ್” ಎಂದು ತಿದ್ದಿಕೊಳ್ಳಬಹುದು.

  29. Astronomically Rahu is not a planet. It denotes the point of intersection (the north lunar node) of the paths of the Sun and the Moon as they move on the celestial sphere.
    ವಿಧದೆ ಸಾಗುತೆ ತಮ್ಮದೆ ಮಾರ್ಗದೊಳ್
    ವಿಧುವು ಸೂರ್ಯನು ಸಂಧಿಸುದೀಚಿಯೊಳ್(north)|
    ಮಧುರರಾಹುವ ಚಿನ್ಹಿಸೆ ವ್ಯೋಮದೊಳ್
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

    • ಪರಿಹಾರದ ನೂತ್ನತೆ ಸ್ತುತ್ಯ. ಆದರೆ ಸುದೀಚಿ ಎಂದರೆ ಸು+ಉದೀಚಿ ಎಂಬ ಸಂಧಿಯಾಗದು; ಅದು ಸೂದೀಚಿ ಎಂದಾಗುವುದು, ಆಗ ಛಂದಸ್ಸು ಕೆಡುವುದು.ರಾಹುವಿಗೆ ಮಧುರ ಎಂಬ ವಿಶೇಷಣವು ಹೃದ್ಯವಾಗದು. ಇದು ಪ್ರಾಸಕ್ಕಾಗಿ ಮಾಡಿಕೊಂಡ ಸವರಿಕೆಯಾದೀತು. ಭಿಧುರ ಎಂದರೆ ಸ್ವಲ್ಪ ಯುಕ್ತ. ರಾಹುವು ಬೇಗ ಅಳಿಯುವ, ಇಲ್ಲವಾಗುವ ಪರಿಣಾಮ ತಾನೆ!

      • ಅದು ಸಂಧಿಸಿ/ಸೆ+ಉದೀಚಿಯೊಳ್ ಎಂದಾಗದೆ?
        ನನ್ನ online ನಿಘಂಟುಶೋಧಕ್ಕೂ ಸಿಗದಿದ್ದ ಭಿಧುರಶಬ್ದವನ್ನು ತಿಳಿಸಿಕೊಟ್ಟುದಕ್ಕಾಗಿ ಧನ್ಯವಾದಗಳು. ಇಲ್ಲಿ ರಾಹುವು ಸುಖಾರ್ಥದಲ್ಲಿ ಇರುವುದರಿಂದ ಮಧುರ ಎಂದು ಬಳಸಿದೆ.

        • ಪ್ರಸಾದರೆ, ನಿಮ್ಮ ಸಂಧಿಪ್ರಯೋಗ ಸಂಧಿಸೆಯುದೀಚಿ ಆಗುತ್ತದೆ ಹೊರತು ಸಂಧಿಸುದೀಚಿ ಆಗುವುದಿಲ್ಲ. ಇದು ಯಾವ ನಿಯಮದ ಮೇಲೆ ಎಂಬ ಸೂಕ್ಷ್ಮ ಗೊತ್ತಿಲ್ಲ, ಆದರೆ ಅದು ಹೀಗೆಯೇ ಆಗುವುದು.

          • ಧನ್ಯವಾದ. ಕೂಡುತುದೀಚಿಯೊಳ್ ಎಂದರೆ ಸರಿಯೆ?

  30. ರಾತ್ರಿತಮಸ್ಸೇ ಸರ್ಪ, ಚಂದ್ರನೇ ಅದರ ಫಣೆಮಣಿ
    ಮಧುರರಾತ್ರಿಯೆ ಸರ್ಪದವೋಲಿರಲ್
    ನಿಧಿಯ ರೂಪಿನ ರತ್ನವು ಶೀರ್ಷದೊಳ್|
    ಸುಧೆಯನೀವನೆ(ಸುಧಾಕರ) ಆಗಿರೆ ಪಾಂಗಿನಿಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ||

    • ಪರಿಹಾರದ ನವ್ಯತಾಯತ್ನವು ಸ್ತುತ್ಯ. ಆದರೆ ರಾತ್ರಿಯನ್ನು ಸರ್ಪಕ್ಕೆ ಹೋಲಿಸಲು ಇರುವ ಸಮಾನಧರ್ಮವಾದರೂ ಯಾವುದೆಂಬುದು ಸ್ಪಷ್ಟವಾಗುತ್ತಿಲ್ಲ.

  31. ಸುಧೆಯನೀವ ಕರಂಗಳ ಚಂದ್ರನಿಂ
    ಸುಧೆಯನೊಯ್ಯಲಿವಂ ಬರುತಿರ್ಪವೋಲ್
    ಬುಧಜನಂ ಕುಹಕೋಕ್ತಿಯೊಳೆಂದುದಯ್
    ವಿಧುವಿಧುಂತುದಸಖ್ಯಮಿದೊಪ್ಪುಗುಂ

    ಆವಾಗಾವಾಗ ರಾಹು ಚಂದ್ರನಿಗೆ ಮೆಟ್ಟಿಕೊಳ್ಳುವುದನ್ನು ಕಂಡು ಪಂಡಿತಜನ ಕುಹಕದಿಂದ, ಈತ ಸುಧಾಕರ, ಆತ ಸುಧಾರ್ತಿ, ಇವರಿಬ್ಬರ ಸಖ್ಯ ನೋಡು ನೋಡೆಂದಾಡಿಕೊಂಡರು.

    • When there is a forthcoming donor, a beneficiary should be around. Interpreting eclipse as a simple concept of give and take is very fine. It need not be kuhakOkti. ಬುಧರ್ ಒಮ್ಮೊಮ್ಮೆ ಏನೇನೋ ಪಲುಕಿಬಿಡುತ್ತಾರೆ!

      • ನನ್ನ ಉದ್ದಿಷ್ಟಾರ್ಥಕಿಂತ ನೀವು ಭಿನ್ನವಾಗಿ ಅರ್ಥಯಿಸಿಕೊಂಡಿದ್ದೀರೇನೋ. ನಾನು ಇಲ್ಲಿ ಗ್ರಹಣವನ್ನು give and take ಅರ್ಥದಲ್ಲಿ ಹೇಳಿದ್ದಲ್ಲ, ಅದು ಪಂಡಿತರ ಕುಹಕೋಕ್ತಿ ಎಂಬಂತೆ ಹೇಳಿದ್ದು.

  32. ವಧೆಗಮರ್ಹನವಂ, ಸ್ವಕುಲಕ್ಕೆ ನೀಂ
    ವಿಧು, ವಿಧುಂತುಗಸಖ್ಯಮಿದೊಪ್ಪುಗುಂ
    ರುಧಿರಸಕ್ತರೊಳಯ್, ಬಿಡು ಸಂಧಿಯಂ,
    ವಿಧಿಯಿದೆಂದೊರೆದಂ ಹರಿ ಧರ್ಮಗಂ

    ಯುಧಿಷ್ಠಿರನಿಗೆ ಕೃಷ್ಣ ಹೇಳಿದ, “ಅವನು (ದುರ್ಯೋಧನ) ವಧೆಗರ್ಹನೊ, ಸಖ್ಯಕ್ಕಲ್ಲ. ನೀನೋ ಕುರುಕುಲಕ್ಕೆ ಚಂದ್ರನಂತಿರುವಾತ, ಅವನೋ ರಾಕ್ಷಸೋಪಮನಾದ ರಾಹು. ಅವನ ಸಖ್ಯ ಒಪ್ಪುವುದು ರಾಕ್ಷಸರೊಳಗೇ. ಬಿಡು ಸಂಧಿಯ ಮಾತನ್ನು. ಇದೇ ವಿಧಿ.”

  33. ರುಧಿರಮೇ ಕುದಿವಂತಿನಶಾಖಮಿ-
    ರ್ಕೆ ಧರೆಯಿಂತು ನೆಳಲ್ಗುಡೆ ಚಂದ್ರಗಂ
    ವಿಧದೊಳಿಂತಸುರಂಗಿದು ಪೋಲ್ತೊಡೇಂ
    ವಿಧುವಿಧುಂತುದಸಖ್ಯಮಿದೊಪ್ಪುಗುಂ

    ಕಲ್ಪನೆ ಅಷ್ಟೊಂದು ಸ್ಫುಟವಾಗಿ ಪ್ರಕಟವಾಗಲಿಲ್ಲ…
    ವಿಪರೀತ ಶಾಖದಿಂದ ಚಂದ್ರನನ್ನು ಕಾಯಲು ಧರೆ ನೆರಳನ್ನು ಅವನಿಗೆ ಕೊಟ್ಟಳು ಸ್ವಲ್ಪಕಾಲ. ಆ ನೆರಳೇ ರಾಕ್ಷಸನಂತೆ ಕಂಡಿತು. ಆದರೇನು ಅದರ ಆಶ್ರಯದಲ್ಲಿ ಚಂದ್ರ ತಂಪಿನ ಸುಖಪಟ್ಟ. ಇದೇ ಚಂದ್ರನ, ಹಾಗು ನೆಳಲಿನ ರೂಪದ ರಾಕ್ಷಸನ ಸಖ್ಯ!

  34. ಸುಧೆಯನುಣ್ಣೆ,ವಿಧುಂತುದ ಕಾವುದಂ
    ಬುಧಜನರ್ಕಳೆ ಕಂಡಿರೆ ಪಿಂದಿನಿಂ,
    ವಧಿಸಿ ಸತ್ಯಮನೆಂತುಟೆ ಪೇಳ್ವರೈ
    “ವಿಧುವಿಧುಂತುದ ಸಖ್ಯಮಿದೊಪ್ಪುಗುಂ”!

    • ಕಾಂಚನಾ , ಎರಡನೇ ಪಾದದಲ್ಲಿ ಛಂದಸ್ಸು ತಪ್ಪಿದೆ ಹಾಗೂ ಅರಿಸಮಾಸವಾಗಿದೆ. ಬುಧರು- ಹಳಗನ್ನಡವು ಇಲ್ಲದಾಗಿದೆ.ಮೂರನೇ ಪಾದದ ಅರ್ಥ ತಿಳಿಯಲಿಲ್ಲ.

      • ಹಿಂದಿನಿಂದಲೂ ಸುಧೆಯನ್ನುಣ್ಣಲು ಹೊಂಚಿ ಕಾವ ವಿಧುಂತುದವನ್ನು ನೋಡುತ್ತ ಬಂದಿರುವಾಗ(ವೈರಿಯಾಗಿ,ಗ್ರಹಣದಲ್ಲಿ..),ಆಸತ್ಯವನ್ನು ಕೊಂದು,ಈಗ ಹೇಗೆ ಅವರಬ್ಬರಲ್ಲೂ ಗೆಳೆತನವನ್ನು ಬಯಸುತ್ತಾರೆ!

  35. ಮಧುರಮಂಜುಲಗಾನಮನಾಲಿಸಲ್,
    ವಧಿಸೆ ರಂಜನೆಯಂ ಕಟುಕರ್ಕಶಂ,|
    ವಿಧಿವಶಂಗೊಳೆ ಸೌಖ್ಯದ ಮಾರ್ದವಂ,
    ವಿಧುವಿಧುಂತುದಸಖ್ಯಮಿದೊಪ್ಪುಗುಂ ||

    • ಏನರ್ಥ ಮೇಡಮ್?

      • ನೀಲಕಂಠ, ದಯವಿಟ್ಟು ಬೇಂದ್ರೆಯವರನ್ನು ಓದಿಕೊಳ್ಳಿ 😉

        • ಪ್ರಸಾದರೆ, ಯಾಕೆಂದು ತಿಳಿಯಲಿಲ್ಲ.

          • ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ…ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ… 🙂

          • ಮಧುರ ನಾದಮಿದೈ ನವನೀತವುಂ
            ವಿಧದ ಚಂದಿರನೋಲ್ ಪದಪಾದದೊಳ್
            ಬುಧಜನಂ ಗಡ ನಾದಿಹ ರಾಹುತಾಂ,
            ವಿಧುವಿಧುಂತುದಸಖ್ಯಮಿದೊಪ್ಪುಗುಂ ||

            ಮಾತು ಮಾತು ಮಥಿಸಿ ಬಂದ ನಾದದ ನವನೀತ – ನಾದುವ ನೀತ !!

          • ಪ್ರಸಾದರು ಹಾಗೂ ಉಷಾ ಅವರು ನನ್ನ ಪದ್ಯವನ್ನು ಹೊಗಳಿದ್ದೋ ಅಥವಾ ತೆಗಳಿದ್ದೋ ಎಂದು ತಿಳಿಯುವುದಿಲ್ಲ. ಏನೇ ಆದರೂ ಧನ್ಯವಾದಗಳು ! 🙂

      • ಮಧುರಮಂಜುಳವಾದ ಗಾನವನ್ನುಆಲಿಸುವಾಗ, ಕಟುವಾದ ಕರ್ಕಶವು ರಂಜನೆಯನ್ನು ವಧಿಸಿ, ಸೌಖ್ಯವನ್ನು ನೀಡುವ ಮಾರ್ದವವು ಇಲ್ಲವಾಗುವುದು, ವಿಧುವಿಧುಂತುದಸಖ್ಯದಂತೆ ಇದೆ-ಎಂಬುದು ಪದ್ಯದ ಅರ್ಥ ನೀಲಕಂಠರೆ. (ಉದಾಹರಣೆಗೆ, ಅತಿಮಧುರವಾದ ಸಂಗೀತಕಾರ್ಯಕ್ರಮಗಳು, ಗಾಯಕನ ಮಿತ್ರನಾದ ಮೈಕಾಸುರನ ಹಾವಳಿಯಿಂದಾಗಿ ರಂಜಿಸದಿರುವುದು ) ನೀಡಿರುವ ಸಮಸ್ಯೆಗೆ ನನ್ನ ಪೂರಣವು ಹೊಂದಿಕೆಯಾಗದಿದ್ದಲ್ಲಿ ತಿಳಿದವರು ದಯಮಾಡಿ ,ನಿರ್ದಾಕ್ಷಿಣ್ಯವಾಗಿ ತಿಳಿಸಿರಿ.

        • Ok madam… ಇದರ ಕಟುವಾದ ವಿಮರ್ಶೆಗೆ ಪ್ರಸಾದರೇ ಶಕ್ತರು 🙂

  36. ಪುರೂರವ ಮತ್ತು ಅಲೆಕ್ಸಾಂಡರ್ ರವರ ಪಾಠ ಓದಿ ನೆನಪಿಗೆ ಬಂದ ಶಬ್ದಗಳನ್ನು ಜೋಡಿಸಿ ಇಟ್ಟಿದ್ದೇನೆ. ಈ ಪದ್ಯ ಪಾನಮಾಡಲು ಕಷ್ಟವಾದೀತು!!

    ಸುಧೆಯು ನಮ್ಮಯ ವಜ್ರ ಪುರೂರವಂ
    ಮದ ವಿದೇಶದ ರಾಜಗೆ ಕೋಪವಂ (ಪ್ರಾಸದ ಪ್ರಾಣ ಹೋಗಿದೆ)
    ಸುಧೆವಿಷಗಳ ನೇಹವು ಸುಂದರೌ
    ವಿಧುವಿಧುಂತುದ ಸಖ್ಯಮಿದೊಪ್ಪುಗುಂ

    • ಪದ್ಯವಂತಿರಲಿ, ’ನೆನಪಿಗೆ ಬಂದ ಶಬ್ದಗಳನ್ನು ಜೋಡಿಸಿ ಇಟ್ಟಿದ್ದೇನೆ’ ಹಾಗೂ ’ಪ್ರಾಸದ ಪ್ರಾಣ ಹೋಗಿದೆ’ ಎಂಬ ಉಕ್ತಿಗಳೇ ಸಖತ್ ಕಾವ್ಯಮಯವಾಗಿವೆ. 🙂
      ಮಧುರ ಮೇಣ್ ಕಟುಶಬ್ದಗಳಂ ವಲಂ
      ವಿಧದೆ ಸೇರಿಸಿ ಪೇರಿಸಿ ಲೇಖಿಸಲ್|
      ಮಧುವಿನೊಂದಿಗೆ ಉಪ್ಪಿರೆ ಸಾರ್ಥದಿಂ (ಮಧು ಹಾಗೂ ಉಪ್ಪು ಎಂಬ ಶಬ್ದಗಳು)
      ವಿಧುವಿಧುಂತುದಸಖ್ಯಮಿದೊಪ್ಪುಗುಂ||

  37. ವಿನೋದವಾಗಿ :
    ಕಣಕವದಂತುತಾಂ ಜರುಗುತುಂ ಸರಿ ಸಾವರಿಸಿಂ ಸಮಾನ ಪೂ-
    ರಣವನೆ ಪೂರ್ಣವಾವರಿಸುತುಂ ವರಿಸಿಂ ಸರಿಕಾಯಲೆಣ್ಣೆಯೊಳ್,
    ಅಣಕಮಿದಿಂತು “ಮೋದಕ” ಪರಿಗ್ರಹಣಂ, ಅಪರೂಪ ಧಾರಣಂ,
    ಗಣಪನಿಗುಂ ಪ್ರಿಯಂ, “ವಿಧುವಿಧುಂತುದ ಸಖ್ಯಮಿದೊಪ್ಪುಗುಂ” ಗಡಾ !!

    • ಉಷಾ ಅವರೆ, ಸಾವರಿಸಿ, ವರಿಸಿ – ಸಾಧುರೂಪಗಳು. ಬಿಂದು ಬೇಕಿಲ್ಲ. ಪದ್ಯದ ತಾತ್ಪರ್ಯ ತಿಳಿಯಲಿಲ್ಲ.

  38. ಮಧುಮೊಸರ್ಫಲಪಾಲ್ಘೃತಬೆಲ್ಲಮುಂ
    ವಿಧಿಗೆಪಂಚಪಿಯೂಷಸುಗವ್ಯಮುಂ
    ಬುಧರುಗೈವಪವಿತ್ರಕೆ ಪ್ರಾಶನಂ
    ವಿಧಿ ವಿಧುಂತುದ ಸಖ್ಯಮದೊಪ್ಪುಗುಂ
    ಹೋಮಗಳಲ್ಲಿ ಆತ್ಮ ದೇಹಶುದ್ಧಿಗೆ ಪಂಚಾಮೃತ
    ಪಂಚ ಗವ್ಯದ ಸೇವನೆ

    • ರಮೇಶರೆ, ಮೊದಲನೇ ಸಾಲು ಒಂದು ದೊಡ್ಡ ಅರಿಸಮಾಸವಾಗಿದೆ. ಪೀಯೂಷ ಸರಿ, ಪಿಯೂಷ ಅಲ್ಲ. ಸುಮ್ಮಸುಮ್ಮನೆ ಸು ಸೇರಿಸುವುದು ಸಲ್ಲ. (ಸುಗವ್ಯ). ಪವಿತ್ರಕೆ ಪ್ರಾಶನಂ ಇಲ್ಲಿ ಪ್ರಾಶನದಿಂದ ಛಂದಸ್ಸು ತಪ್ಪಿದೆ. ವಿಧುವಿಗೆ ವಿಧಿಪಟ್ಟ ದಕ್ಕಿತೆ? 🙂

  39. ಇಂದು ಮುಂಜಾನೆ ನಾಗದೇವತಾಪೂಜಾಸಮಯದಲ್ಲಿ ರಾಹ್ವಷ್ಟೋತ್ತರವನ್ನು ಪಠಿಸಿದೆ. ಅದರಲ್ಲಿ ಒಂದು ’ಓಂ ವಿಧುಂತುದಾಯ ನಮಃ’. ಈ ಸಮಸ್ಯಾಪಾದವು ನೆನಪಾಯಿತು, ಎಲ್ಲ ದೇವರುಗಳ ಅಷ್ಟೋತ್ತರವನ್ನು ಭಾಷಾಪ್ರಯೋಗವೆಂದಭ್ಯಸಿಸುವುದು ಒಳ್ಳಿತೆಂದೆನಿಸಿತು.

    • ನಿಜ ಪ್ರಸಾದ್ ಸರ್ , “ಸುಬ್ರಹ್ಮಣ್ಯ ಭುಜಂಗ ಸ್ತೋತ್ರ”ವೂ ಅಷ್ಟೇ ಆನಂದ ತಂದಿತು !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)