Apr 252016
 

“ಸುಡುಬೇಸಿಗೆ ಬೆಂಗಳೂರಿನೊಳ್” ಎಂಬ ಚಂಪಕ-ಉತ್ಪಲಮಾಲೆಗಳ ಪಾದಾಂತ್ಯಕ್ಕೆ ಹೊಂದುವ ಪೂರಣವನ್ನು ಮಾಡಿರಿ

  43 Responses to “ಪದ್ಯಸಪ್ತಾಹ ೧೯೯: ಪದ್ಯಪೂರಣ”

  1. ಬೆಂಕಿಯನೌಂಕಿ ನೂಂಕಿದನೊ ಶಂಭು ಲಸನ್ನಿಟಿಲಾಕ್ಷಿಯಿಂ, ಕ್ಷಯಂ
    ಧೀಂಕಿಡುತಂಕಿಸಿರ್ಪುದೊ ಹಿಮೋಪಮವಾತದ ಮೇಲೆ, ಮೇಲಿನಿಂ
    ಝಂಕಿಪ ಗೌಜುಗದ್ದಲಮದುರ್ಕುವ ನಾಗರಸಂಭ್ರಮಭ್ರಮಂ,
    ಬಿಂಕಕೆ ನೀರ ಹೊಯ್ದಿರೆ ಬೆಮರ್, ಸುಡುಬೇಸಿಗೆ ಬೆಂಗಳೂರಿನೊಳ್

    • ನೀಲಕಂಠರೆ, ಮೂರನೇ ಪಾದದಲ್ಲಿ ಛಂದಸ್ಸು ತಪ್ಪಿದೆ. ಪದ್ಯದ ಅರ್ಥವನ್ನೂ ಒದಗಿಸಿದಲ್ಲಿ ಪೂರ್ಣವಾಗಿ ತಿಳಿಯಲು ಅನುಕೂಲವಾಗುವುದು.

      • ಧನ್ಯವಾದಗಳು, ತಿದ್ದಿದ್ದೇನೆ. ಶಿವನು ಲಲಾಟಾಕ್ಷದಿಂದ ಬೆಂಕಿಯನ್ನು ಈ ಕಡೆಗೆ ನೂಕಿದನೋ, ತಂಪಾದ ಗಾಳಿಗೆ ಕ್ಷಯ ಬಡಿಯಿತೋ ಎಂಬಂತಹ ಉರಿಬಿಸಿಲು. ಇದರ ಮಧ್ಯೆ ನಾಗರಿಕ ಸಂಭ್ರಮದ ಭ್ರಮೆಯ ಗಿಜಿಬಿಜಿ. ನಾವು ಎಷ್ಟೇ ಬಿಂಕದಿಂದಿರಲು ಯತ್ನಿಸಿದರೂ ಬೆವರು ಆ ಬಿಂಕಕ್ಕೆ ನೀರೆರೆಯುತ್ತದೆ.

        • ಚೆನ್ನಾಗಿದೆ. “ಝಂಕಿಪ”- ” ಜಂಕಿಪ” ಆಗಬೇಕೆ ?

          • ಹೌದು; ಜಂಕಿಪ ಎಂಬುದೇ ಸರಿ. ಪದ್ಯಭಾವವೂ ಶೈಲಿಯೂ ತುಂಬ ಸೊಗಸಾಗಿವೆ.

        • Thank you sir! Thanks madam for correction.

  2. ಉದರಬುಭುಕ್ಷೆಯಿಂ ಸಿಡಿದು ರೋಸಿದ ರಕ್ಕಸನೊರ್ವ ರೋಷಮಂ
    ಕುದಿಕುದಿಸುತ್ತೆ ನಾಸಿಕದ ಹೊಳ್ಳೆಗಳೊಳ್ ಪೊಗೆಯಂತುಗುಳ್ದು ಮೇಣ್
    ನದಿಕೊಳನೆಲ್ಲಮಂ ಕುಡಿದು ಬಾಡಿಸಿ,ಲೋಗರನೆಚ್ಚೆ ಸಾರ್ದವೊಲ್,
    ಬೆದರಿಸುತಿಂದು,ಹಾ!ಮೆರೆದುದೈ ಸುಡುಬೇಸಗೆ ,ಬೆಂಗಳೂರಿನೊಳ್!!

  3. ಮಸಣದ ಮೌನಮಾಗಸವು ಬೀರುತಿರಲ್ ಧಗೆಯನ್ನು ಪೆರ್ಚಿಸಲ್ 
    ಪೊಸಚಿಗುರೆಲ್ಲುಮಿಲ್ಲದಿರದೀ ಧರೆಯಗ್ನಿಯ ಕುಂಡದಂತಿರಲ್
    ಪಸಿರುಸಿರಾಡದಾಮ್ಲಜನಕಂ ಮರೆಯಾಗೆ ವಿಷಾನಿಲಂಗಳು
    ರ್ಕಿಸುತಿರಲಾಗದಾಗದಮಮಾ(ದಕಟಾ)! ಸುಡುಬೇಸಿಗೆ ಬೆಂಗಳೂರಿನೊಳ್

  4. “ಗದ್ದುಗೆ ಸಂದ ವಾರದೊಳೆ,ಕಾಲೆಳೆಯುತ್ತಿರೆ ರಾಜಕೀಯದೊಳ್!
    ಪೆದ್ದರೆ ನಾಮಹಾ! ಬಿಡಲು ತಂಪಿನ ಕಾಲಕೆ ದೀರ್ಘಭಾಗ್ಯಮಂ?”
    ಸದ್ದಿರದಿಂತು ಹೋರುತಿರೆ ದೂಷಣೆ,ಶೋಷಣೆಯಿಂದೆ ತೂರಿ ತಾಂ
    ಗೆದ್ದಿತೆ ತಂಪನುಂ,ಕುದಿಯುವೀ ಸುಡುಬೇಸಗೆ ಬೆಂಗಳೂರಿನೊಳ್!!

    (ಗದ್ದುಗೆ ಸಿಗುತ್ತಿದ್ದಂತೆಯೇ ಪ್ರತಿಪಕ್ಷಗಳಿಲ್ಲಿ ಕಾಲೆಳೆಯುತ್ತಿರುವಾಗ, ಬೆಂಗಳೂರನ್ನು ತಂಪಿಗೇ ಬಿಡಲೊಲ್ಲದ ಬೇಸಗೆಯು ತನ್ನ ವಶಕ್ಕೇ ಈ ಊರನ್ನು ತೆಗೆದುಕೊಂಡಿತೇ?:-))

    • ಕಾಂಚನಾ, ಪದ್ಯವು ಚೆನ್ನಾಗಿದೆ. ದೀರ್ಘವಾಳ್ತೆ- ಅರಿಸಮಾಸವಾಗುವುದಿಲ್ಲವೆ ?” ತೂರ್ದು”- “ತೂರಿ” ಆಗಬೇಕೆನಿಸುತ್ತದೆ. “ದುರುಳದೀ” ಎಂಬ ಪ್ರಯೋಗವು ಸರಿಯಿರಲಾರದೆನಿಸುತ್ತದೆ.

      • ಧನ್ಯವಾದಂ,ತಿದ್ದುವೆನಿದಂ ಶೀಘ್ರದೊಳಾಂ

        • “ಏರ್ದ” ಎಂಬುದು “ಏರಿದ” ಆಗಬೇಕೆನಿಸುತ್ತದೆ. ಛಂದಸ್ಸಿಗಾಗಿ , “ಗದ್ದುಗೆಯೇರಿ” ಎಂದು ಮಾಡಬಹುದೇನೋ. ( ತುಂಬ ಸರಿಯಾಗಲಾರದು )

          • ಹೌದು, ಧನ್ಯವಾದಗಳು,ಶಕುಂತಲಾ.

          • ಶಕುಂತಲಾ ಅವರ ತಿದ್ದುಗೆಗಳು ಚೆನ್ನಾಗಿವೆ. ಅಂತೆಯೇ ತಂಪಿನ ಎಂಬುದು ತಂಪಣ ಎಂಬ ಪ್ರಯೋಗಕ್ಕಿಂತ ಉತ್ತಮವಾದುದು.

  5. ಬತ್ತಿದ ಪುಷ್ಕರಂಗಳನೆ ತುಂಬುವವೊಲ್ ಬೆಮರಾಯ್ತೆ? ಸೂರ್ಯನಂ
    ನೆತ್ತಿಯ ಶಾಖದಿಂದೆ ತಪಿಸಲ್ಕಣಿವಾದುವೆ ಜೀವಸಂಕುಲಂ?
    ಮತ್ತುಗಿಯಲ್ಕೆ ನಿಟ್ಟುಸಿರಿನಾದುದೆಯಭ್ರಮೆ ಶುಷ್ಕಮೆಂಬುವೊಲ್?
    ಬಿತ್ತರಿಸಿರ್ಪುದಾರ್ತತೆಯ ಬಾಳ್ ಸುಡುಬೇಸಿಗೆ ಬೆಂಗಳೂರಿನೊಳ್

    • ಪದ್ಯವೂ ಕಲ್ಪನೆ ಮತ್ತು ಭಾಷೆಗಳೂ ಸೊಗಸಾಗಿವೆ. ಆದರೆ “ತಪಿಸಲ್ಕನುವಾದುದೆ” ಎಂಬ ಸವರಣೆ ಮಾಡಿಕೊಂಡಲ್ಲಿ ಒಳಿತು.

  6. ತರುಗಳ ಹತ್ಯೆಗೈದದನೆ ಪೇರಿಸಲೇರಿಸೆ ಕಟ್ಟಡಂಗಳಂ
    ಮೊರೆಯಿಡೆ ವಾಹನಂಗಳಿಗೆ ಕಾರ್ಪೊಗೆಯಾವರಿಸಲ್ಕೆ ಮಾನವರ್
    ಪರಿತಪಿಸಲ್ಕೆ ದೂಷಿಪರು ಸೂರ್ಯನ, ದೈವವ, ಕೋಪದಿಂದೆ ದುಷ್-
    ಕರತೆಯ ಕಾರ್ಯದಿಂದಲೆ ಕಣಾ ಸುಡುಬೇಸಿಗೆ ಬೆಂಗಳೂರಿನೊಳ್

    • ಪ್ರಿಯ ಚೀದಿ, ಕಲ್ಪನೆ ಚೆನ್ನಾಗಿದೆ. ಆದರೆ ಸ್ವಲ್ಪ ಹಳಗನ್ನಡದ ಹದ ಬೇಕಿತ್ತು.

  7. ತಪನನ ತೃಷ್ಣೆಯಂ ತಣಿಸಲಪ್ಪುದು ಮಾರುತನೀಂಟೆ ಸಾಗರ-
    ಕ್ಕುಪಮೆಯ ತೋಯಮಂ ತಣಿಸಲಪ್ಪುದು ಧಾತ್ರಿಗೆ ತನ್ನ ಮಕ್ಕಳೇ
    ಉಪಟಳಮೊಡ್ಡೆ ನಾಗರಿಕರಾವೆನೆ ಬೀಗುತೆ ತಾಳೆನೆನ್ನುತುಂ
    ಶಪಿಸಿದವೋಲೆ ಭಾಸಿಕುಮಲಾ ಸುಡುಬೇಸಿಗೆ ಬೆಂಗಳೂರಿನೊಳ್

  8. ಪೊಸತರೊಳಾಸೆಯಂ ತಳದ ನಾಗರಿಕರ್ಗರೆ ನೀಳುತಿರ್ಪುದೇ
    ನೆಸೆವ ಬೆಮರ್ ಸರಂ,ಗರಮಿಯೌತಣ,ಮಾಗಸದಿಂದೆ ತೂಂಗುತಿ
    ರ್ಪಸಿಗಿರಣಂಗಳಂ,ಮದದೆ ತನ್ನಯ ಶಕ್ತಿಯ ತೋರ್ಕೆಗೆಂದಿವರ್
    ಬಸವಳಿಗೆಂಬುದಂ ಗಣಿಸದೇ,ಸುಡು ಬೇಸಗೆ ಬೆಂಗಳೂರಿನೊಳ್!!
    (ಹೊಸ ವಸ್ತುಗಳಲ್ಲಿ ಹೆಬ್ಬಯಕೆಯನ್ನು ತಳೆದ ಬೆಂಗಳೂರಿನ ನಾಗರಿಕರಿಗೆಂದೇ, …..ಈಎಲ್ಲವನ್ನೂ ಬೇಸಗೆಯು ನೀಡುತ್ತಿದೆಯೇ?)

  9. ಚಳಿಯನೆ ತಾಳಂದಂತ ದಿನಗಳ್ ಮರೆಯಾದುದೆ ಬೆಂಗಳೂರಿನೊಳ್!
    ಮಳೆಯೊಳು ನೆಂದ ಚೆಂದನೆನಪೇ ಕನಸಾಗಿರೆ ಬೆಂಗಳೂರಿನೊಳ್
    ಸುಳಿವಿರದಾಯ್ತೆ ತಣ್ಪನೆರವಾ ತರುವೃಂದಮೆ ಬೆಂಗಳೂರಿನೊಳ್
    ಉಳಿದಿರಲೊಂದೆ ಜೀವ ತೆಗೆವೀ ಸುಡುಬೇಸಿಗೆ ಬೆಂಗಳೂತಿನೊಳ್

    ನೆಳಲನೆ ನುಂಗಿಬೆಂಕಿಯುಗುಳುತ್ತಿನನಾವರಿಸಿರ್ಪನಾಗಸಂ
    ಮಳೆಯೊಡೆಯಂ ಭಯಂಗೊಳುತಲೆತ್ತಲೊ ಪೋಗಿರಲಿತ್ತಲಿಂದುವುಂ
    ಕೆಳೆಯನದರ್ಪಕಳ್ಕಿ ಮರೆಯಾಗಿರೆ ತಾಪಮೆ ರಾತ್ರಿಯುಂ, ದಿನಂ-
    ಗಳ ಕಳೆಯಲ್ಕಸಾಧ್ಯಮಕಟಾ ಸುಡುಬೇಸಿಗೆ ಬೆಂಗಳೂರಿನೊಳ್

  10. ದಿನಪನಹಾ! ಧರಾಂಗನೆಯೊಳುರ್ಕಿದ ರಾಗದಿನಿತ್ತ ಸಾರ್ದೊಡಂ,
    ಮನುಜರ ಸಂಗದಿಂ ನುಲಿದು ಗಿರ್ರ್ರನೆ ವಾಯುವದೃಶ್ಯನಾದೊಡಂ
    ವನಗಳೆ ನಾಶನಂಗೊಳುತಿರಲ್, ಘನನೆಂದು ಕರಂಗೆನೆಂದೊಡಂ
    ಕೊನರಿತೆ ಸಾಜದಿಂ ಬೆಮರಿಪೀ ಸುಡುಬೇಸಗೆ ಬೆಂಗಳೂರಿನೊಳ್”!

  11. ಅಟಕಟಿಸಿರ್ಪರಿಂತುಗಡ ಪೇಟೆಯ ಮಂದಿ ಬಿಸಿಲ್ಗೆ ಬಾಡುತುಂ
    ಪುಟಗೊಳುತುರ್ಬುತುಬ್ಬೆಮನೆಯೊಳ್ ತಟಗುಟ್ಟಿ ಬೆಮರ್ದ ರೀತಿ ಕಾಣ್
    ತಟವಟಗಾರ ನೇಸರನ ನೆಟ್ಟನೆ ನೋಟದೊಳಟ್ಟಹಾಸವೇಂ
    ದಿಟಮಿದು ಬೆಂದಕಾಳನೆಲೆಯೂರ್, ಸುಡು ಬೇಸಗೆ ಬೆಂಗಳೂರಿನೊಳ್ !!

    ಅಟಕಟಿಸು = ಬಳಲು, ತಟಗುಟ್ಟು = ಹನಿಹನಿಯಾಗಿ ಬೀಳು, ತಟವಟಗಾರ = ಮಾಯಗಾರ

  12. ಬೇರೆಯ ನಾಡಿನಿಂ ಬರುವರೆಂದೊಡನಾದರದಿಂದೆ ಕಾಂಬರಂ,
    ಸೂರನು ನೀಡಿ ಮೇಣ್ ಕಲಿತು ಭಾಷೆಯನೊಂದೆನುವಂತೆ ಬಾಳ್ದರಂ,
    ಸೇರುವೆನೆಂದಿಗುಂ,ಸಲುವೆನಲ್ಲಿಯೆ,ನೇಹಕೆ ಬಾಗಿ,ಎನ್ನುತುಂ
    ಜಾರಿತೆ!ಮೆಲ್ಲ ತಾಂ ಪರರವೊಲ್ ಸುಡುಬೇಸಗೆ ಬೆಂಗಳೂರಿನೊಳ್!!

    (ಪರರಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಆದರವಿದೆಯೆಂದು, ತಾನೂ ಇಲ್ಲಿಯೇ ವಾಸಿಸಲು ಬಯಸಿತೇನು,ಈ ಸುಡುಬೇಸಗೆ!)

  13. ರಾಮನಯೋಧ್ಯೆಯಂ ದುರುಳರಾವಣನಾಳಲು ಬಂದವೊಲ್,ಸುಖ
    ಸ್ತೋಮದ ನಿದ್ರೆಯೊಳ್ಗಿಣುಕಿ ಕಾಡುವ ಕೂರ್ಗನಸೆಂಬವೊಲ್,ಸದಾ
    ಪ್ರೇಮವನುಂಡ ಸೊಂಪು ಬದುಕೊಳ್ ಬಿರುಕೊಂದರೆ!ತೋರಿಕೊಂಡವೊಲ್,
    ತಾಂಮೆರೆದಿರ್ಪುದೈ!ನಿಜಕುಮೀ ಸುಡುಬೇಸಗೆ ಬೆಂಗಳೂರಿನೊಳ್!

    (ತಂಪು ತಂಪಾದ ಬೆಂಗಳೂರು ಬದುಕಿನ ವೈರಿಯಾಗಿ,ಬೇಸಗೆ ಬಂದಿದೆ)

  14. ಎತ್ತರಸೀಮೆಯೊಳ್ ನಗರವಿರ್ಪುದಿದೈ ತಣುವಿಂ ಸುಖಿಪ್ಪುದೈ
    ಅತ್ತಲು ಮಂಡ್ಯದೊಳ್ ಮಿಗೆ ಹೊಸೂರೊಳು ಮೇಣ್ ತುಮಕೂರಿನಾಚೆಯೊಳ್|
    ಸುತ್ತಲುಮೆಲ್ಲು ಬಾಡಿಸುಗುಂ ಸುಡುಬೇಸಿಗೆ. ಬೆಂಗಳೂರಿನೊಳ್
    ಮುತ್ತುತೆ ದೇಶದೇಶದವರಾಗಿಹುದೀ ನೆಲಮೈ ಮರುಸ್ಥಲಂ||

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)