May 012016
ಆತ್ಮೀಯ ಪದ್ಯಪಾನಿಗಳೇ ನಿಮ್ಮೆಲ್ಲರ ಸಹಕಾರದಿಂದ ಪದ್ಯಪಾನವು ಇಂದು ಪದ್ಯಸಪ್ತಾಹದ ೨೦೦ನೇ ಸಂಚಿಕೆಗೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲಾ ಪದ್ಯರಸಿಕರಿಗೂ ಹಾರ್ದಿಕ ಧನ್ಯವಾದಗಳು ಹಾಗು ಅಭಿನಂದನೆಗಳು 🙂
ಮೂರನೇ ಶತಕದ ಪದ್ಯಸಪ್ತಾಹದ ಸಂಚಿಕಗಳಿಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಾ ಕೆಳಗಿನ ಸಮಸ್ಯೆಯ ಸಾಲನ್ನು ಬಗೆಹರಿಸಬೇಕೆಂದು ವಿನಂತಿಸುತ್ತೇವೆ.
ಉಭಯಭಾಷಾಕವಿಗಳೂ ಭಾಗವಹಿಸಲೆಂದು, ಕನ್ನಡ ಹಾಗು ಸಂಸ್ಕೃತಗಳೆರಡರಲ್ಲೂ ಸಮಸ್ಯೆಯ ಸಾಲನ್ನು ನೀಡಲಾಗಿದೆ.
ಕನ್ನಡ: ಪದ್ಯಪಾನಮಿದು ಮದ್ಯಪಾನಮೇ
ಸಂಸ್ಕೃತ: ಪದ್ಯಪಾನಮಿತಿ ಮದ್ಯಪಾನಿತಾ
ವದ್ಯಮಪ್ಪ ಪದಬಂಧಮಿಲ್ಲದೇ
ಹೃದ್ಯಮಪ್ಪ ಗತಿಗೀಸು ಸಲ್ಲದೇ
ಸದ್ಯದೊಳ್ ಸುಕವಿ ತಾನೆನಲ್ಕಹಾ
ಪದ್ಯಪಾನಮಿದು ಮದ್ಯಪಾನಮೇ?!
ಅಹುದೆನ್ನುವ ಪದಬಂಧಗಳಿಲ್ಲದೇ (ಅಪ್ಪಂತೆ ಹೆಜ್ಜೆ ಹಾಕದೇ), ಹೃದ್ಗಮವಾದ ಗತಿಯಿಲ್ಲದೇ (ಹಾದಿ ಹಿಡಿಯದೇ) ತಾನೇ ಸದ್ಯಃಕವಿ ಎಂದೆನ್ನಲು ಇದೇನು ಮದ್ಯಪಾನವೇ? ಇದು ಪದ್ಯಪಾನ!
ಒಳ್ಳೇ ಸಮಸ್ಯಾಪಾದವನ್ನು ಕೊಟ್ಟ ಸೋಮರಿಗೆ ಧನ್ಯವಾದಗಳು. ೨೦೦ನೇ ಸಂಚಿಕೆಯ ಸಂದರ್ಭದಲ್ಲಿ ಎಲ್ಲ ಸಹಪದ್ಯಪಾನಿಗಳಿಗೂ ಹಾರ್ದಿಕ ಅಭಿನಂದನೆಗಳು!
ಚೆನ್ನಾಗಿದೆ ನೀಲಕಂಠ
ಈ ಬಾರಿಯ ಸಮಸ್ಯೆಯನ್ನು ಶತಾವಧಾನಿ ಗಣೇಶರು ನೀಡಿದರು, ನಿಮ್ಮ ಧನ್ಯವಾದಗಳನ್ನು ಅವರಿಗೆ ವರ್ಗಾಯಿಸುತ್ತೇನೆ 🙂
ಧನ್ಯವಾದಗಳು!
ಗದ್ಯನೀರವಮನೊತ್ತಿ ತಳ್ಳಿ ತಾಂ
ಹೃದ್ಯಮಾಗಿಸಿರಲೆಲ್ಲರಂ ನಿಜಂ,
ಚೋದ್ಯಮಲ್ತೆ!ನಶೆಯೀದು ಕಾಡಿರಲ್,
ಪದ್ಯಪಾನಮಿದು, ಮದ್ಯಪಾನಮೇ!
ಚೆನ್ನಾಗಿದೆ
ಹ್ಲಾದ್ಯಮಾಗಿಹ ಸಮಸ್ಯೆ-ಚಿತ್ರಗಳ್
ಖಾದ್ಯಮಲ್ತೆ ಕವಿಗಳ್ಗೆ ಮದ್ಯದೊಲ್|
ಚೋದ್ಯದಿಂದಡರಿಕೊಳ್ಳುಗೆಲ್ಲರುಂ
ಪದ್ಯಪಾನಮಿದು ಮದ್ಯಪಾನಮೇ||
ಚೆನ್ನಾಗಿದೆ ಪ್ರಸಾದು
ಸ್ವಲ್ಪ ಹಳಗನ್ನಡದ ಹದ ಹೆಚ್ಚಾಗಬೇಕು.
ಸದ್ಯ!ಕನ್ನಡದ ಕೂರ್ಮೆಯಿಂದೆ ತಾಂ
ಪದ್ಯಶಾರದೆಯೆ ಭಾಗಿಯಾಗುತುಂ
ವಿದ್ಯೆಗಿಂದು ಸೊಡರಾಗಿ ಸಂದಿರಲ್,
ಪದ್ಯಪಾನಮಿದು,ಮದ್ಯಪಾನಮೇ?
ಬಹಳ ಚೆನ್ನಾಗಿದೆ ಭಾವ
स्मेरपूर्णवदने सदा सवः (सदासवः)
नित्यकार्यपरिवञ्चनं तथा ।
पादमार्गपरिशीलने रतिः (परिशीलनेऽरतिः)
पद्यपानमिति मद्यपानिता ।।
ಮುಗುಳುನಗೆಯಿಂದ ಕೂಡಿದ ಮುಖದಲ್ಲಿ ನಡೆಯುವ ಯಜ್ಞ (ಸದಾ ಆಸವ – ಮದ್ಯಭರಿತವಾದ ಮುಖ, ಬಾಯಿ) ನಿತ್ಯಕಾರ್ಯಗಳಲ್ಲಿ ವಂಚನೆ, ಪಾದ, ಅದರ ಗತಿ ಇವುಗಳಲ್ಲಿಯೇ ಮನಸ್ಸುಳ್ಳವನು (…ಪರಿಶೀಲನೇ ಅರತಿಃ – ನಡೆಯುವ ಹಾದಿಯ ಕಡೆ ಮನಸ್ಸಿರದವನು), ಇದು ಪದ್ಯಪಾನವೆಂಬ ಮದ್ಯಪಾನ!
ಚೆನ್ನಾಗಿದೆ ನೀಲಕಂಠ
ಪದ್ಯವಾಹಿನಿಯ ಸಂಗದಿಂದಹಾ!
ಮದ್ಯಶೀಷೆಗೆ ವಿದಾಯಮಂ ದಿಟಂ
ಸದ್ಯಮಿಂದು ಯುವವೃಂದಮಿತ್ತಿರಲ್!
ಪದ್ಯಪಾನಮಿದು ,ಮದ್ಯಪಾನಮೇ?
ಇದೇನು ಸೋದರಿ, ‘ಇಂದು ವಿದಾಯಮಂ ಇತ್ತರು’ ಅಂದುಬಿಟ್ಟಿರಿ ಮದ್ಯದ ಶೀಶೆಯನ್ನು ಎಂದೆಂದೂ ಎಡಗೈಯಲ್ಲಿ ಕೂಡ ಮುಟ್ಟಿಲ್ಲ ಈ ಯುವವೃಂದದ ಎಷ್ಟೋ ಜನರು, ಪದ್ಯವೇ ಸಾಕು 🙂
🙂
ಅವರಿಗೆ ತುಂಬಾ ಹತ್ತಿರದವರೂ ಪದ್ಯಪಾನಿಗಳೂ ಆದವರ ಬಗ್ಗೆ ಬರೆದಿರಬೇಕು ಬಿಡಿ, ಸೋಮರೇ! 🙂
ರಾಮ ರಾಮಾ 😉
ಶಿವ ಶಿವಾ!ಇದು ಪದ್ಯಲೋಕವೆಂಬುದನ್ನೇ ಮರೆತು, ಒಬ್ಬರನ್ನೊಬ್ಬರು ಸಂತೈಸಿಕೊಂಡದ್ದರಿಂದೀಗ…..
ಅದಲುಬದಲಾಯ್ತೀಗಳುದ್ಗಾರ ನಿಮ್ಮೊಳಗೆ
ಮುದದಿ ನೀಮೆನ್ನುಗುಂ ’ರಾಮರಾಮ’|
ನದಿಯ ಶಿರದೊಳ್ ಪೊಂದಿದಂ (ಸೋಮ) ತಾನೆನಲುಬೇಕು
ಹದದಿಂದೆ ’ಶಿವಶಿವ’ವೆನುತ್ತಲೆಂದುಂ||
ಗದ್ಯಮಾರ್ಗಸಹಚಾರಿಗಿಂದಮಾ!
ಖಾದ್ಯನಿಂದೆಯನೆ ತಿಂದು ತೇಗುವೊಲ್,
ಪದ್ಯಮೊಂದು ಚಟದಂತೆ ಕಾಡಿರಲ್!
ಪದ್ಯಪಾನಮಿದು ಮದ್ಯಪಾನಮೇ?
ಚೆನ್ನಾಗಿವೆ. ಮೇಲಿನೆರಡರಲ್ಲೂ ಪ್ರಾಸ ತಪ್ಪಿವೆ.
ಧನ್ಯವಾದಗಳು ,ಸವರಿದ್ದೇನೆ
ಹಾ ಈ ಚಟಮಿರ್ಕುಮೆಮಗಂ
ಪದ್ಯ ಚೆನ್ನಾಗಿದೆ
“ಪದ್ಯಮಂ ರಚಿಸಿ ಛಂದಬಂಧದಾ
ಸ್ವಾದ್ಯಮೆಂಬರಿದನಿದ್ದು ಕೂಪದೊಳ್!
ಹೃದ್ಯನಾಕಮನಿದೆಂತು ತೋರ್ಪುದೈ!
‘ಪದ್ಯಪಾನಮಿದು,ಮದ್ಯಪಾನಮೇ?’ ”
(ಪದ್ಯಪಾನವನ್ನು ಹಳಿದಾಡಿದ್ದು)
ನವ್ಯರ ಮೂದಲಿಕೆಯನ್ನೂ ಛಂದಸ್ಸಿನಲ್ಲಿ ಅಳವಡಿಸಿ ಬರೆದಿರುವ ಪದ್ಯ ಚೆನ್ನಾಗಿದೆ
.
ಚೀದಿ ಏನ್ ಬರ್ಯಕ್ ಹೋಗಿದ್ಯಪ್ಪಾ
ಚೀದಿ ಈಗ ಬರೆಯುವ ಸ್ಥಿತಿಯಲ್ಲಿಲ್ಲ ಮಾತ್ರವಲ್ಲ, ಕೇಳಿಸಿಕೊಳ್ಳುವ ಸ್‍ಥ್‍ಇತ್‍ಇಯ್‍ಅಲ್‍ಲ್‍ಊ ಇಇಇಲ್‍ಲ್‍ಲ್ಲ್ಲ
ಹಯ್ಯೋ, ಯೇನೋ ಬರೆಯಕ್ಕೆ ಹೋಗಿ ಇನ್ನೇನೋ ಆಗಿ ಬರೀ ಒಂದು ಚುಕ್ಕಿ ಇಡಲೇ ಬೇಕಾಯ್ತು
ಪದ್ಯಮಂ ಭಜಿಪನ(ಳ)ಲ್ತೆ ಸಂತತಂ,
ವೇದ್ಯಮಾಗದಿವನಿಂ(ಳಿಂ)ಗೆ ಬೈಯೆ, ನೈ-
ವೇದ್ಯಮಂ ಕುಡುವೆ ವಾಣಿಗೆಂಬುವಂ(ವಳ್)
ಪದ್ಯಪಾನಮಿದು ಮದ್ಯಪಾನಮೇ
ಪದ್ಯಪಾನಿಯ ಮಡದಿ/ಗಂಡ ಹೀಗೆ ಹೇಳಬಹುದೆನಿಸುತ್ತದೆ 😉
ಅದ್ಯಮೆಂದೆನಲದವ್ಯಯಂಬೆನಲ್
ಭೇದ್ಯಮೆಂದುಲಿಯೆ ಪ್ರಾಸಕೆಂಬುವಂ(ವಳ್)
ವೇದ್ಯಮಾಗದೆನಗೇನ ಪೇಳ್ದಪಂ(ಪಳ್)
ಪದ್ಯಪಾನಮಿದು,ಮದ್ಯಪಾನಮೇ
ಇನ್ನೊಂದು ಪದ್ಯಪಾನಿಯ ಮನೆಯವರ ಅಳಲು 🙂
ಪದ್ಯಗೋಷ್ಠಿಯಿನೆ ರಾತ್ರಿಯಕ್ಕುಮಯ್
ಪದ್ಯಚಿಂತನೆಯಿನೆಳ್ಚರಂ ಗಡಂ
ಪದ್ಯವಿದ್ಯೆದಿವಸಕ್ಕೆನಲ್ಕೆ ಕೇಳ್
ಪದ್ಯಪಾನಮಿದು ಮದ್ಯಪಾನಮೇ
ಆಹಾ, ಚೆನ್ನಾಗಿದೆ 🙂
ಧನ್ಯವಾದ
ಠೀದ್ಯ ಠೂದ್ಯಮನೆ ಠೃದ್ಯಮಂಗಳಂ
ಠೇದ್ಯ ಠೈದ್ಯಮನೆ ಠೋದ್ಯಮಂಗಳಂ
ಠೌದ್ಯಮಂ ಗಣಿಪುದಲ್ತೆ ಪ್ರಾಸಕಂ
ಪದ್ಯಪಾನಮಿದು ಮದ್ಯಪಾನಮೇ
ಪದ್ಯಮಂ ರಚಿಪುದಲ್ತೆ ಸಂತತಂ
ಹೃದ್ಯಮಾಯ್ತೆ ರಸಿಕರ್ಗೆನುತ್ತೆ ನೈ-
ವೇದ್ಯಮಂ ಪಿಡಿದ ಭಕ್ತನೊಲ್ ಮನಂ
ಪದ್ಯಪಾನಮಿದು ಮದ್ಯಪಾನಮೇ
ಪದ್ಯಕೆಂದೆ ಪಳವಾತಿನಾಶ್ರಯಂ
ಗದ್ಯಮೆಂದುಲಿಯೆ ವೇಡಮೆಂದೆ ತಾಂ
ವೈದ್ಯನೊಲ್ ಪರರ ದೋಷಮೀಕ್ಷಿಸಲ್
ಪದ್ಯಪಾನಮಿದು ಮದ್ಯಪಾನಮೇ
ಕ್ಷುದ್ರಪೂರ್ವ ಕವಿಯಾ ಪ್ರಯೋಗ ಕಾಣ್
ಸಾಧ್ಯಮಂ ಸನಿಹಪ್ರಾಸಮೆನ್ನುತುಂ
ಸದ್ಯದೊಳ್ ಒರೆದುದಂ ಸಮರ್ಥಿಸಲ್
ಪದ್ಯಪಾನಮಿದು ಮದ್ಯಪಾನಮೇ
ಸುಮ್ಮಸುಮ್ಮನೆ ದೀರ್ಘಾಕ್ಷರ, ಶಿಥಿಲದ್ವಿತ್ವ, ಅರಿಸಮಾಸ, ವಿಭಕ್ತಿಪಲ್ಲಟ, ಸುಮ್ಮಸುಮ್ಮನೆ ಕಾಣ್ ಬಳಕೆ, ಪ್ರಾಸದಲ್ಲಿ ಸಡಲಿಕೆ, ವಿಸಂಧಿದೋಷಗಳನ್ನು ಬೇಕೆಂದೇ ಹಾಸ್ಯಕ್ಕೆ ಬಳೆಸಿದ್ದೇನೆ (ಪೂರಣದ ಸಮರ್ಥನೆಗೆ) 😉
ಹೃದ್ಯಭಾವಗಳ ನೈಜಚಿತ್ರಣಂ
ಗದ್ಯಭೋಜನಕೆ ಸೇವ್ಯಪಾನಮಂ
ವದ್ಯಕಾವ್ಯಗಳ ಛಂದವಂದದಿಂ
ಪದ್ಯಪಾನಮಿದು ಮದ್ಯಪಾನಮೇ
fbಯಲ್ಲಿ ಪದ್ಯಗಳನ್ನು ಬರೆಯುತ್ತಾರೆ, ಇಲ್ಲೇಕೆ ಬರೆಯರು ಎಂದುಕೊಳ್ಳುತ್ತಿದ್ದೆ ನಿಮ್ಮ ಬಗೆಗೆ. ನಿಯತವಾಗಿ ಇಲ್ಲಿ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ.
ಖಂಡಿತ ಪ್ರಸಾದು ಸರ್. ಧನ್ಯವಾದಗಳು ನಿಮ್ಮ ಪ್ರೋತ್ಸಾಹ ನುಡಿಗಳಿಗೆ.
ದತ್ತ, ಚೆನ್ನಾಗಿದೆ ಹೀಗೆ ಪದ್ಯರಚನೆಯಲ್ಲಿ ಭಾಗವಹಿಸು, ವಂದ್ಯ ಪ್ರಾಸಕ್ಕೆ ಹೊಂದುವುದಿಲ್ಲ ಗಮನಿಸು
ಸವರಿದ್ದೇನೆ ಸೋಮಣ್ಣ. ದಯವಿಟ್ಟು ಪರಿಶೀಲಿಸಿ ಧನ್ಯವಾದಗಳು.
ಪದ್ಯಪಂಕ್ತಿಯನೆ ಪೀರುತಿರ್ದೊಡಂ
ಮದ್ಯದಂತೆ ಬರಿದಾಗಿ ಪೋಕುಮೇ!
ಹೃದ್ಯ ಭಾವದಿನೆ ತಜ್ಞರಿತ್ತ ಸತ್
ಪದ್ಯಪಾನಮಿದು!ಮದ್ಯಪಾನಮೇ?
ಚೆನ್ನಾದ ಕಲ್ಪನೆ. ಪದ್ಯಸಾಲ್ ಅರಿಸಮಾಸ. ನಿತ್ಯಂ ಆಗಬೇಕು.
ಮದ್ಯದಂತೆ ಬರಿದಾಗದೌ ದಿಟಂ, ಚೆನ್ನಾಗಿದೆ 🙂
ಸವರಿದ್ದೇನೆ, ಧನ್ಯವಾದಗಳು.
ಚೋದ್ಯಮೈ!ಪಣಕದೆಂದು ಪೋಗದೇ,
ಸದ್ಯ!ಬೊಕ್ಕಸಮನೆಂದು ಬಿಚ್ಚದೇ,
ಹೃದ್ಯಲೋಕಮಹ!ಮೆಚ್ಚಿ,, ಕೊಳ್ಳುವಾ
ಪದ್ಯಪಾನಮಿದು!ಮದ್ಯಪಾನಮೇ?
ವೇದ್ಯಮಾಗದ ವಿಕಾರಭಾವಮೇ,
ಪದ್ಯದಂಗಳದೆ ನರ್ತಿಸುತ್ತಿರಲ್,
ಮದ್ಯಪಾನಕಿದು ಭಿನ್ನಮಪ್ಪುದೇಂ!
ಪದ್ಯಪಾನಮಿದು ಮದ್ಯಪಾನಮೇ.
ಚೆನ್ನಾಗಿದೆ ಕಾಂಚನಾ. “ವಿಕಾರಭಾವಗಳ್”- “ವಿಕಾರಭಾವಂಗಳ್” ಆದಲ್ಲಿ ಒಳಿತು. ಛಂದಸ್ಸಿಗಾಗಿ, “ವಿಕಾರಭಾವಮೇ” ಎಂದು ಸವರಬಹುದೆ ?ಅಂತೆಯೇ, “ವೇದ್ಯಗೊಳ್ಳದ”-“ವೇದ್ಯಂಗೊಳ್ಳದ” ಆದಲ್ಲಿ ಹೆಚ್ಚು ಸರಿಯೆನಿಸಬಹುದು. “ವೇದ್ಯಮಾಗದ” ಎಂದು ಸವರಿದರೆ ಸರಿಯೆ ?
ಹಳಗನ್ನಡೀಕರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಶಕುಂತಲಾ,
ಆಹಾ! ಕಾಂಚನಾ, ನೀಲಕಂಠ ಮತ್ತು ಸೋಮರ ಪದ್ಯನಿರ್ಮಾಣವೇಗ, ಲಾಗು, ಓಘ ಎಲ್ಲ ಚೆನ್ನಾಗಿದೆ. ಅಭಿನಂದನೆಗಳು. ಗುರುದತ್ತರಿಗೆ ಸ್ವಾಗತ. ಹಾದಿರಂಪರ ಹಾರ್ದಿಕಸಾಹ್ಯಕ್ಕೂ ಧನ್ಯವಾದ.
ಧನ್ಯವಾದಗಳು
ಧನ್ಯವಾದಗಳು
Thank you sir 🙂
dhanyavada sir
ಪದ್ಯಪಾನಮಿದು ಮದ್ಯಪಾನಮೇ ,
ವದ್ಯದೊಳ್ ತೊದಲೆ ಮತ್ತನಾಗುತುಂ(ಮತ್ತೆಯಾಗುತುಂ)? |
ವಿದ್ಯೆಯೈ ಲಲಿತರಾಗಛಂದದಿಂ
ಹೃದ್ಯಮಪ್ಪ ಪರಿಯಿಂದೆ ಸೇವಿಸಲ್ ||
ಚೆನ್ನಾಗಿದೆ ಮೇಡಮ್. ಲಲಿತರಾಗಛ್ಛಂದದಿಂ ಆಗಬೇಕಲ್ಲವೇ? ವಿಸಂಧಿದೋಷ ಆಗುವುದಲ್ಲ…
ಧನ್ಯವಾದಗಳು ನೀಲಕಂಠರೆ. “ಲಲಿತರಾಗಛಂದ”ವು ಸಮಾಸವಾಗಬಹುದೆಂದುಕೊಂಡೆ. ಅರಿಸಮಾಸವೋ ಅಥವಾ ನೀವೆಂದಂತೆ ವಿಸಂಧಿದೋಷವೋ ಇರಬಹುದೇನೋ. ತಪ್ಪೊಪ್ಪುಗಳ ಬಗ್ಗೆ ತಿಳಿದಿಲ್ಲ. ತಪ್ಪಿದ್ದಲ್ಲಿ, “ಲಲಿತರಾಗತಾಲದಿಂ” ಅಥವಾ “ಲಲಿತರಾಗಬಂಧದಿಂ” ಎಂದು ಸವರಬಹುದೆನಿಸುತ್ತದೆ.
It is shuddha-samaasa only, but we have to make sandhi.
ಆದ್ಯೆ ಶಾರದೆಯ ಶೌಂಡಿಕೀಕಲಾ-
ಮಾದ್ಯಕೇಳಿ ಸೊಗಸಾಗೆ ಸರ್ವಥಾ|
ವೇದ್ಯಮಲ್ತೆ ನಿಜಭಾವಕಂ ಲಸ-
ಪದ್ಯಪಾನಮಿದು ಮದ್ಯಪಾನಮೇ!
ಪಾದ್ಯಮರ್ಘ್ಯಮೆನುತೆಲ್ಲಮುಂ ಸದಾ-
ಸ್ವಾದ್ಯಸದ್ರಸಕವಿತ್ವಮೊಪ್ಪಿರಲ್|
ಚೋದ್ಯಮೆಂತೊ? ಕವಿವರ್ಗಕಾವಗಂ
ಪದ್ಯಪಾನಮಿದು ಮದ್ಯಪಾನಮೇ!
ಎರಡೂ ಪದ್ಯಗಳು ತುಂಬಾ ಚೆನ್ನಾಗಿದೆ ಸರ್!!!
ಮೊದಲನೇ ಪದ್ಯದ 3ನೇ ಸಾಲಿನ, ಕಡೆಯ ಪದ ‘ಲಸ’ ಎಂದರೆ ಏನು ಸರ್, ಅರ್ಥ ಆಗ್ಲಿಲ್ಲ. ಇಲ್ಲಿ ‘ಲಸ’ ದಲ್ಲಿನ ‘ಸ’ ಪ್ಲುತದಿಂದ ಗುರುವಾಗುವುದಾ? ದಯವಿಟ್ಟು ತಿಳಿಸುವಿರಾ..
ಅದು ಲಸತ್ಪದ್ಯಪಾನ… ಆಗಬೇಕು. ಟೈಪೋ ಆಗಿರಬಹುದು.
ಕ್ಷಮಿಸಿ ತಿಳಿಯಲಿಲ್ಲ. ಸ್ಪಷ್ಟನೆಗೆ, ಧನ್ಯವಾದಗಳು ನೀಲಕಂಠರೇ..
ಧನ್ಯವಾದ ನೀಲಕಂಠ! ಹೌದು, ಅದು “ಲಸತ್ಪದ್ಯಪಾನ……” ಕೈತಪ್ಪಿನಿಂದ ಪ್ರಮಾದವಾಗಿದೆ.
ಕೈಗಮೀಯಲದು (ಅರ್ಘ್ಯರೂಪಿಮದ್ಯ) ಪ್ರಾಪ್ತಮಪ್ಪುದೈ
ಮೈಗೆ, ನಂತರದೆ ನೆತ್ತಿಗೇರ್ವುದೈ|
ನೀಗೆ ಮದ್ಯವನು ಕಾಲಮೇಗಳೊಳ್ (ಪಾದ್ಯರೂಪಿಮದ್ಯ)
ರಾಗ, ಚರ್ಯೆಯಿದು ನ್ಯಾಯಮೇನು ಪೇಳ್||
ಚೆನ್ನಾಗಿದೆ ಸರ್
ವೇದ್ಯಮಾದ ಘನಛಂದ ಕುಂಭದೊಳ್,
ಹೃದ್ಯಭಾವಮನೆ ಹಿಂಡುತೆಂದು,ನೈ-
ವೇದ್ಯದೊಲ್ ರಸಿಕರ್ಗೆ ನೀಡುವಾ,
ಪದ್ಯಪಾನಮಿದು!ಮದ್ಯಪಾನಮೇ?
(ಸೋಮಣ್ಣರ ಪದ್ಯವೊಂದರ ಆಧಾರದಿಂದ 🙂 )
ಸರಿಯಾಗಿ ಸಾಗಬೇಕಾದರೆ ಪಾನಿಗೆ ಯಾವುದಾದರೊಂದರ ಆಧಾರ ಬೇಕೇಬೇಕು 😉
ನಿಲ್ಲಲಾರದೆ ತಟ್ಟಾಡುತ್ತಿದ್ದ ಕುಡುಕ: ಮೈ ಎಲೆಕ್ಶನ್ ಮೆ ಖಡೇ ಹೋ ಜಾಊಂಗಾ.
ಪತ್ರಕರ್ತ: ಕೈಸೆ?
ಕುಡುಕ: ಸಪೋರ್ಟ್ ಸೆ!
ಹೌದು !
ಸದ್ಯ! ವಾಸ್ತವಮನಿಂದು ಪೇಳ್ದಿರೈ!
ಪದ್ಯಪಾನಿಗಳ ಬೆನ್ನಿಗಂ ,ನಿಜಾ
ಸ್ವಾದ್ಯಚೇಷ್ಟೆಗಳೆ ನಿಂತು,ಕಾಪಿಡಲ್!
ಪದ್ಯಪಾನಮಿದು ಮದ್ಯಪಾನಮೇ.
🙂
ಸ್ವಾದ್ಯಕಲ್ಪನೆಗೆ ಪುಷ್ಟಿ ನೀಡುವಾ
ಹೃದ್ಯಶಾರದೆಗೆ ಕಾವ್ಯಪುಷ್ಪನೈ-
ವೇದ್ಯಮಂ ಕುಡುವ ಸತ್ಕವೀಂದ್ರಗಂ
ಪದ್ಯಪಾನಮಿದು ಮದ್ಯಪಾನಮೇ !
ಚೆನ್ನಾಗಿದೆ ಗುರುದತ್ತರೆ.
ಧನ್ಯವಾದಗಳು ಶಕುಂತಲಾರವರೆ.
ನಮ್ಮ ಪದ್ಯಪಾನದ ಮೇಷ್ಟ್ರು ಹಾದಿರಂಪರ ಸಲಹೆ, ಸವರಣೆಗೆ ಧನ್ಯವಾದಗಳು!!!
ಬರಿಯ ಪದವಿಮನ್ನಣೆ ನನಗೆ ಬೇಕಿಲ್ಲ. ಫೀ ಕೊಡುವುದಾದರೆ ಕೊಡಿ. ಅದನ್ನು ಎಲ್ಲರಿಗೂ ಶ್ರುತಪಡಿಸಬೇಕಾಗಿಲ್ಲ ಮತ್ತೆ!
ಹಹ… :-).. ಖಂಡಿತ ಕೊಡುತ್ತೇನೆ..
good datta
Thank you Soma..
ವಿನೋದವಾಗಿ !!
ಪದ್ಯಪಾನದೊಳು ವೃತ್ತಮೊಪ್ಪೊಡಂ
ಮದ್ಯಪಾನದಿನೆ ಗುಂಡನಿಕ್ಕುದೈ !
ವಿದ್ಯಮಾನಮಿದು ಸೀಸಗತ್ತು ಮೇಣ್
ಪದ್ಯಪಾನಮಿದು ಮದ್ಯಪಾನಮೇ ?!
ಗುಂಡು = ವೃತ್ತ , ಸೀಸಗತ್ತು = bottleneck / ಶೀರ್ಷಕಂಠ ?!!
ಹೌದಲ್ಲವೆ ಉಷಾ ಅವರೆ. 🙂 ಚೆನ್ನಾಗಿದೆ.
ಮೊದಲೆರಡು ಪಾದಗಳಿಗೆ ಸವರಣೆಗಳು ಬೇಕಾಗಿವೆಯೆ ?(ಪದ್ಯಪಾನದೊಳು,ವೃತ್ತಮೊಪ್ಪೊಡಂ,ಗುಂಡನಿಕ್ಕುದೈ)
Ohh, nice one madam! 🙂
ತುಂಬಾ ಚೆನ್ನಾಗಿದೆ ಕಲ್ಪನೆ ಉಷಾರವರೆ.. 🙂
chennagide usha avare
ಧನ್ಯವಾದಗಳು ಶಕುಂತಲಾ, ನೀಲಕಂಠ, ಗುರುದತ್ತ, ಸೋಮ
ವಾರದಂತ್ಯಕೆನೆ ಕಾಯ್ವರೆಲ್ಲ ಸಂ
ಸಾರ ಸಾಗರಾದೆ ವಸ್ತುವೆಂಬ ಈ
ಭಾರಿ ನೆಂಟನಿಗೆ ಪದ್ಯಗುಚ್ಛದಾ
ಹಾರಮಂ ಸಲಿಸೆ ಪಾದ್ಯವೀವರೈ
ಚಾರು ಸೊಲ್ಗಳನು ಕಬ್ಬಮಾಗಿಸಲ್
ಧಾರೆಯಿಂ ರಚಿಸುತಿರ್ಪಲ್ತೆ ವಿ-
ಸ್ತಾರಮಾಗದರೊಳರ್ಥಮೆಲ್ಲ ನೂ-
ರಾರು ಸಾಲ್ಗಳೊಳು ಟಂಕಿಸಿರ್ಪರೈ
ಆವ ದತ್ತಪದ, ಚಿತ್ರಮಾದೊಡಿ
ನ್ನಾವ ಕಷ್ಟದ ಸಮಸ್ಯೆಯಾದೊಡಿ
ನ್ನಾವ ವಸ್ತುವಿಗು ಪೂರಣಂಗಳ-
ನ್ನೀವುತುಂ ಸುಲಭಮಾಗಿಸಿರ್ಪರೈ
chiidi good, but puraNa elli?
ಅಯ್ಯೋ, ಪೂರಣ ಪದ್ಯ ಬಿಟ್ಟಿದ್ದೆ
ವಿದ್ಯೆಯಂ ಕಲಿಸು ತಿರ್ಪುದಳ್ತಿನಿಂ
ಹೃದ್ಯಮಲ್ತರಿಯಲಾರ್ತಭಾವಮಂ
ವೇದ್ಯಮಲ್ತೆ ನುಡಿವೆಣ್ಣಿಗೆಲ್ಲಮುಂ
ಪದ್ಯಪಾನಮಿದು ಮದ್ಯಪಾನಮೇ
“ದ್ಯ” ಎಂಬ ಪ್ರಾಸಕ್ಕಾಗಿ ಎಲ್ಲರಿಗೂ ಈ ಹೊತ್ತಿಗಾಗಲೇ ಪರದಾಡುವ ಪರಿಸ್ಥಿತಿ ಬಂದಿರಬಹುದು. ಇದನ್ನು ತಪ್ಪಿಸಲೆಂದು ಹೊಸತೊಂದು ಹಂಚಿಕೆಯನ್ನು ಹೂಡಿ ಮಾಡಿದ ಪದ್ಯವಿಂತಿದೆ:
ಶಿವ-ಸತ್ಯ-ಸುಂದರ-ಸುಧಾನಿಬಂಧನಂ
ಸ್ತವನೀಯಮಾರ್ಷಮನಪೇತಮಾದ್ಯಮು-
ತ್ಸವಕಾರಣಂ ರಣದಮೋಘನಿಸ್ವನಂ
ನವಪದ್ಯಪಾನಮಿದು, ಮದ್ಯಪಾನಮೇ?
ರಥೋದ್ಧತಾವೃತ್ತವನ್ನು ಪಾದಾದಿಯಲ್ಲಿ ಎರಡು ಲಘುಗಳನ್ನು ಹಾಕುವ ಮೂಲಕ ಮಂಜುಭಾಷಿಣಿಯನ್ನಾಗಿಸಿದ್ದೇನೆ. ಈ ಮೂಲಕ ಪ್ರಾಸದ ಏಕತಾನತೆ ಹಾಗೂ ತೊಡಕು ತಪ್ಪಿದೆಯಲ್ಲವೇ! ನೀವೂ ಯತ್ನಿಸಬಹುದು; ಅದೂ ವಿಭಿನ್ನಪ್ರಾಸಗಳ ಮೂಲಕ!!
ಓಹ್ ಚೆನ್ನಾಗಿದೆ ಸರ್.. ಹೊಸ ರೀತಿಯಲ್ಲಿ ಯತ್ನಿಸಬಹುದು..
ಮದ್ಯ ಸೇವಿಸಿರೆ ಮತ್ತು ಮತ್ತದುಂ
ಸದ್ಯಮೇರ್ದಮಲು ಜಾರುದುಂ ಗಡಾ
ಪದ್ಯ ಸೇರಿಸಿರೆ ಪತ್ತು ಪತ್ತುದೈ
ಪದ್ಯಪಾನಮಿದು ಮದ್ಯಪಾನಮೇ !!
“ಮ”ದ್ಯಪಾನದಿಂದ “ಮ”ತ್ತು ( ಹತ್ತಿ ಇಳಿಯುವಂತದ್ದು)
“ಪ”ದ್ಯಪಾನದಿಂದ “ಪ”ತ್ತು (=ಘನತೆ) (ಹತ್ತಿ ಉಳಿಯುವಂತದ್ದು)
ಪರಿಪಾಟಮೆನ್ನದಿದು ಪದ್ಯ ಸೇವೆಗಂ
ಸರಿರಾತ್ರಿ ಸಂದಿರೆ ದಿನಂಪ್ರತೀ ಗಡಾ
ಪರದಾಟಕೆನ್ನ ಪತಿರಾಯರೆಂದರೌ
ಖರೆ! ಪದ್ಯಪಾನಮಿದು ಮದ್ಯಪಾನಮೇ !!
ಸಾಮಾನ್ಯವಾಗಿ ರಾತ್ರಿವೇಳೆಯೇ ಮದ್ಯಪಾನವಲ್ಲವೇ ?!!
ಆಹಾ! ಒಡೆನೆಯೇ ಹೊಸ ಪ್ರಯೋಗವನ್ನು ಮಾಡಿದ ಉಷಾ ಅವರಿಗೆ ಧನ್ಯವಾದ
like
ಪದ್ಯಪಾನವೆನಗೆ “ಮಹಾಪ್ರಾಣ”ದ “ಮದ್ಯಪಾನ” – ಅಂದರೆ “ಮಧ್ಯ ಪಾನ” !!
ಭರದಿಂದೆ ಸಾಗುತಿಹ ಬಾಳ ಬೇಗೆಯೊಳ್
ಪರಿ ಪದ್ಯಪಾನಮನುಭಾವಕಂ ಗಡಾ
ಪರಮಪ್ರಮಾಣಮಿದು “ಮಧ್ಯ”ಮೆನ್ನಗಂ
ವರಪದ್ಯಪಾನಮಿದು ಮದ್ಯಪಾನಮೇ !!
*ಪರಮಪ್ರಮಾಣ ~ ಮಹಾಪ್ರಾಣ
ಧನ್ಯವಾದಗಳು, ಗಣೇಶ್ ಸರ್, ಪ್ರಸಾದ್ ಸರ್ .
ಪ್ರತಿವಾರದಾಶು ಕವಿತಾ ಸುಘೋಷ್ಠಿಯೊಳ್
ಮತಿಗೆಟ್ಟು ಪೀರಿ ರಸಕಾವ್ಯಮಂ ಗಡಾ
ಸ್ತುತಿಸಲ್ಕೆ ಮತ್ತದನೆ ಪದ್ಯಪಾನ ಸಂ
ತತಿ ಪದ್ಯಪಾನಮಿದು ಮದ್ಯಪಾನಮೇ
nice
ಒಳ್ಳೆಯ ಪದ್ಯ!
ಅರೆ, ಕಾವ್ಯಮಂತೆ.. ರಸಗಬ್ಬಮಂತೆ.. ಹಹ್
ಚಿರಕಾಲ ಸಂತಸವನೀವುದಂತೆ.. ಹಾ!
ಮರೆಸಲ್ಕೆ ಸಾಧ್ಯಮೆ ಸಮಸ್ತ ದುಃಖಮಂ
ಬರಿ ಪದ್ಯಪಾನಮಿದು! ಮದ್ಯಪಾನಮೇ??
ಮೇದಿನೀ|| ಸದಾ ಚಟಕೆ ಸಿಲ್ಕಿದಂ ಕೊಡವಿಕೊಂಬನೇನದಂ
ಮುದಾವಹದ ಪಾನಮೈ ಚಟಗಳೊಳ್ ಪರಾತ್ಪರಂ|
ಪದಾರ್ಥವದು ಮದ್ಯಮೇನಿರಲು ಪದ್ಯಮೇಂ ವಲಂ (ಯಾವುದಾದರೇನು?)
ಸುದೀರ್ಘವಿರೆ ಪದ್ಯಪಾನಮಿದುಮದ್ಯಪಾನಮೇ??
ಪದ್ಯಪಾನಮಿದುಮದ್ಯಪಾನಮೇ = ಪದ್ಯಪಾನಮಿದುಂ ಅದ್ಯಪಾನಮೇ. ಅದ್ಯ=ಈವರೆಗೆ. ಪದ್ಯಪಾನವನ್ನು ಇಗೋ ಇಂದಿಗೆ ನಿಲ್ಲಿಸಲಾಗುವುದೆ? ಇಲ್ಲ, ಅದು ಮದ್ಯಪಾನದಂತೆ ಸುದೀರ್ಘವೇ.
ಆಹಾ! ಹಾದಿರಂಪರೇ! ನಿಮ್ಮ ಛಂದಃಪ್ರಜ್ಞೆ ನಿಜಕ್ಕೂ ಮುದಾವಹ!!
ಧನ್ಯವಾದಗಳು. ನೀವು ಗಮನಿಸದೇ ಹೋದೀರೇನೋ ಎಂಬ ಆತಂಕವಿತ್ತು. ಮತ್ತೆ ಧನ್ಯವಾದಗಳು.
೨೦೦ ನೇ ಸಂಚಿಕೆಗೆ ಅನಿಸಿಕೆಗಳನ್ನು ನೂರ್ಮಡಿಸುವ ಪ್ರಯತ್ನ !!
ಕುಡಿದಿರ್ಪ ಪೂರಯಿಸಲುಂ ಸಮಸ್ಯೆಯಂ
ಬಡಪಾಯಿ ತಾಂ ಕುಡುಕ ಲೆಕ್ಕ ತಪ್ಪಿರಲ್
ಕಡೆದಿರ್ಪನೈ ಕವನ ಲಕ್ಕವಿಟ್ಟವಂ
ಗಡ! ಪದ್ಯಪಾನಮಿದು ಮದ್ಯಪಾನಮೇ !!
ಮದ್ಯಪಾನದಲ್ಲಿ ಲೆಕ್ಕತಪ್ಪಿದರೂ, ಪದ್ಯಪಾನದಲ್ಲಿ ತಪ್ಪಲಾದೀತೇ ?!!
ಆಹಾ! ಸೊಗಸಾದ ಕಲ್ಪನೆ!!
ಧನ್ಯವಾದಗಳು ಗಣೇಶ್ ಸರ್, ಲೆಕ್ಕವಲ್ಲದ ಲೆಕ್ಕವನ್ನು ಲಕ್ಕಿಸಿದ್ದಕ್ಕೆ !!
ಪ್ರತಿ ಪದ್ಯದೊಳ್ಗೆಣಿಸಿ ಪಾದಪಾದವಂ
ಗತಿಶೀಲ ಮಿತ್ರರೊಡಗೂಡುತುಂ ಗಡಾ
ಮತಿವಂತ ಪೀರುತಿರೆ ಮಧ್ಯಸಾರವಂ
ಇತಿ ಪದ್ಯಪಾನಮಿದು ಮದ್ಯಪಾನಮೇ !!
ಗೆಳೆಯರೊಡನೆ – ಎಣಿಸಿ ಪಾದಪದವಂ ~ quarter by quarter, ಮ(ಧ್ಯ)ದ್ಯಸಾರ ~ alcohol ಹೀರುತ್ತಿರುವ ಗೋಷ್ಠಿಯ ಚಿತ್ರಣ !!
ಪದ್ಯಪಾನವೋ /ಮದ್ಯಪಾನವೋ ?!!
ಪಾದ=quarter. ಚೆನ್ನಾದ ಕಲ್ಪನೆ. ನನಗೆ ಹೊಳೆಯಲೇ ಇಲ್ಲ! ಅದಕ್ಕೇ ನೋಡಿ ಎಲ್ಲ ವಿದ್ಯೆಗಳನ್ನೂ ಕಲಿಯಬೇಕು ಎನ್ನುವುದು 😉
ಹಾದಿರಂಪಕ್ಕೆ ಪಾದ (=quarter)ವೆಲ್ಲಿ ಸಾಲುವುದು ಪೂರ್ತಿ ಸೀಸ (=bottle / ಶಿರ )ವೇ ಬೇಕು !!