Aug 082016
 

ghostwriter5

  58 Responses to “ಪದ್ಯಸಪ್ತಾಹ ೨೧೪: ಚಿತ್ರಕ್ಕೆ ಪದ್ಯ”

  1. ನವ್ಯಕಾವ್ಯಪುರುಷಂ ಲತಾಂಗಿಯಂ
    ನವ್ಯಕಲ್ಪನೆಯನಪ್ಪುತೊಪ್ಪಿದಂ
    ಜೀವ್ಯಸಾರಮೊ ವಿಕಾಸಲಾಸಮೋ
    ಸೇವ್ಯಮಾದುದು ಕವೀಶ್ವರರ್ಕಳಿಂ

    ನವ್ಯಕಾವ್ಯಪುರುಷ ಹೊಸಹೊಸ ಕಲ್ಪನೆಗಳೆಂಬ ಲತಾಂಗಿಯನ್ನು ಅಪ್ಪಿಕೊಂಡಿದ್ದಾನೆ. ಸಾಮಾನ್ಯವಾಗಿ ಇದು ಜೀವನದ ರೂಢಿಯೋ ಅಥವಾ ವಿಕಾಸದ ಹಾದಿಯೋ ಆಗಿರುವಂಥದ್ದು. ಕವಿಗಳಿಂದಲೂ ಒಪ್ಪಿಗೆ ಪಡೆದಿರುವಂಥದ್ದು.

    • ನನ್ನದೂ ’ನವ್ಯಕಾವ್ಯಪುರುಷ’ಕಲ್ಪನೆಯೇ. 3.5 ಪಾದಗಳನ್ನು ಹೊಸೆದು ಕುರ್ಚಿಯಲ್ಲೇ ನಿದ್ರೆಗೆ ಜಾರಿದೆ. ಅಷ್ಟರಲ್ಲಿ ನೀವು ಬರೆದುಬಿಟ್ಟಿರಿ! ನಿಮ್ಮ ಪದ್ಯವು ಚೆನ್ನಾಗಿದೆಯಾದರೂ, ಇದು ಘೋರ ಅನ್ಯಾಯ.
      ನೀವೂ ರಥೋದ್ಧತದಲ್ಲಿಯೇ ಒರೆದಿರುವುದು ಅದೆಂತಹ ಕಾಕತಾಳೀಯ!

      • ಹಹ್ಹಾ, ನೀವು ಮುಚುಕುಂದನಿದ್ರೆಯನ್ನು ಮಾಡಿ ಮುಗಿಸುವಷ್ಟರಲ್ಲಿ ನನ್ನ ಪದ್ಯದ್ವಾಪರ ಕಾಲಿರಿಸಿದರೆ ಅನ್ಯಾಯವೇನು ಬಂತು 🙂

    • ಇದಾವ ಛಂದಸ್ಸು?

      • ರಥೋದ್ಧತ ರೀ!! ಪಾಪ ಪ್ರಸಾದರೂ ಹೇಳಿದ್ದಾರಲ್ಲ…

        • ನಾನು ಪಾಪಪ್ರಸಾದನೆ? ನೀವು ಬಿಡಿಸಿಬರೆದಿದ್ದರೂ, ’ಪಾಪ’ಕ್ಕೆ ಪ್ರತ್ಯಯವಿಲ್ಲದಿರುವುದರಿಂದ ಅದು ಸಮಾಸವೇ!

          • ಪಾಪ ನೀವೇ ಪಾಪ ಇದಕ್ಕೆ ಚತುರ್ಥಿ ವಿಭಕ್ತಿಪ್ರತ್ಯಯ ಹಚ್ಚಿ ಪ್ರತ್ಯಯ ಇಲ್ಲ ಅಂತೀರಲ್ಲ!

  2. Then it was always kAvyakannikA, for the poets were mostly males. Times have changed, and now there are a lot of kavayitri-s. So it is the turn of kAvyaputraka-s.
    ರಥೋದ್ಧತ|| ಭವ್ಯಮಾಗಿಹಭಿಜಾತಕಾವ್ಯದೊಳ್
    ’ಕಾವ್ಯಕನ್ನಿಕೆ’ಯರೆಂತೊ ತಾಮಿಹರ್|
    ನವ್ಯಕಾಲದೊಳು ಪರ್ಯ್ಯಯಂ, ಸುಸಂ- (ಪರ್ಯ್ಯಯಂ=reverse)
    ಭಾವ್ಯರಲ್ತೆ ನರ‘ಕಾವ್ಯಪುತ್ರಕ’ರ್|| (ನರ=male. ಪುತ್ರಕ=lad; not son)

    ’ನರ’ ಹಾಗೂ ’ಪುತ್ರಕ’ಗಳು ಸಮಾನಾರ್ಥಕಗಳು ಎಂಬ ಆತುರದ ಕ್ಲಾಸ್-ರೂಂ ಆಕ್ಷೇಪವು ಸಲ್ಲದು 😉

    • ಪದ್ಯಪೂರ್ವದಲ್ಲೇ ವಿವರಣೆಯನ್ನು ನೀಡಲಾಗಿದೆ. ಈ ವಿವರಣೆಯಲ್ಲಿ ತೋರಿಸಲಾಗಿರುವ ’ಕಾರಣ’ವನ್ನು ಪದ್ಯದಲ್ಲಿ ತೋರಿಸಿಲ್ಲವಾದ್ದರಿಂದ, ಇದನ್ನು ಹೇತೂತ್ಪ್ರೇಕ್ಷಾಲಂಕಾರವೆನ್ನಬಹುದು – ಹೇತು>ಕಾರಣವನ್ನು; ಉತ್>ಮೇಲೆ; ಪ್ರೇಕ್ಷ>ನೋಡಬಹುದು 😀

  3. ಬರೀ ಬರೆಹಮಾಯ್ತು ನಾಯಕನ ಚಿತ್ರಣಂ ಕಾವ್ಯದೊಳ್
    ಶರೀರಮನೆ ಪೊಂದಿತೇನರರೆ ನಾಯಿಕಾಪಾತ್ರಮೀ
    ತೆರಂ ಕವಿಯ ಪಕ್ಷಪಾತಮಿದೊ ಮೇಣಚಾತುರ್ಯಮೋ
    ನಿರಂತರಮನೋಹರಂ ಕೃತಿಗೆ ಪೆಣ್ಗಳೀ ವರ್ಣನಂ!

    ನಾಯಕನ ಪಾತ್ರಚಿತ್ರಣ ಬರೀ ಬರೆಹವಾಯಿತು. ಆದರೆ ನಾಯಿಕೆಯ ಚಿತ್ರಣ ಮಾತ್ರ ಜೀವದುಂಬಿರುವಂತಿದೆ. ಕವಿಯ ಪಕ್ಷಪಾತವೋ, ಅಚಾತುರ್ಯವೋ, ಕಾವ್ಯಗಳಲ್ಲಿ ಹೆಣ್ಣಿನ ವರ್ಣನೆ ಅದೆಷ್ಟು ಮನೋಹರವಾಗಿರುತ್ತದೆ ಯಾವಾಗಲೂ!

    • fine verse. ನೀವು ಪೃಥ್ವೀಪ್ರಿಯರಾದ್ದರಿಂದ (ಆಕಾಶವರ್ಣ)ನೀಲಕಂಠ ಎಂಬುದಕ್ಕಿಂತ (ಪೃಥ್ವಿವರ್ಣ)ಪಿಂಗಲಕಂಠ ಎಂದರೆ ಸರಿಯಾಗುತ್ತದೆ.

      • ಧನ್ಯವಾದಗಳು! ದೂರ ಜಿಗಿದು ಹೋಗಿ ನಿಂತು ನೋಡಿದರೆ ಪೃಥ್ವಿಯೂ ನೀಲಿಯಾಗಿಯೇ ಕಾಣೋದು

  4. ಇಂದ್ರವಜ್ರಂ|| ಪಾಂಗಿಂದೆ ಲೀಲಾವಿವರಂಗಳಿಂದಂ
    ಗುಂಗನ್ನೆ ನಿನ್ನೊಳ್ ಭರಿಸುತ್ತುಮೆಂತೋ|
    ಸಂಗಾತಿ ಸಾಕಾರಮೆ ಆಗುವೊಲ್ ಪೇಳ್
    ಶೃಂಗಾರಕಾವ್ಯಂ ಸೆಳೆದಿರ್ಪುದೇನೌ||

    English translation in same meter (with prAsa)
    Portrayed that he is in a graphical way
    Courts thee desiringly n’(=and) goads (yo)u as well/
    Pert girlie, (you) feel him to be palpable, why!
    Sorts of romantic is for sure the novel//

    • ಒಳ್ಳೆ ಕಲ್ಪನೆ ಮತ್ತು ಪದ್ಯ! ಲೋಲಾವಿವರ ಅಂದರೇನು?

      • ತಮ್ಮ ಚಿತ್ತಕ್ಕೆ ಬರಲಿಲ್ಲವೆಂದಮೇಲೆ ಆ ಪದವನ್ನು ಬದಲಿಸುವುದು ಒಳ್ಳೆಯದು.

  5. ಈತ ತಾನಲ್ತೆಲಾಧುನಿಕಕಾವ್ಯಕುವರಂ
    ಪ್ರೀತಮಿವಗಾಧುನಿಕ ವಸ್ತ್ರಭೂಷಂ|
    ಬೇತುಕೊಂಬನೆ ಇಂತೆ ತೊಟ್ಟಿರಲುಮಾ ಪೆಣ್ಣು
    ಪೀತಶಾಟಿಯನು ಮೇಣ್ ಕುಪ್ಪುಸಮನುಂ|| 😉

  6. ಪಿರಿದಲ್ತು ನೀನಿಂತುಮಪ್ಪುವುದುಮೀತನ-
    ನ್ನೆರಕಗೈಯ್ಯುತ್ತೆ ನಿಜಕೊಪ್ಪುವೊಲ್ ಕಾಣ್|
    ಬರೆಹ ಬೊಮ್ಮನದುಮೆಂತಿರ್ಪುದೋ ಅಂತೆಯೇ
    ವರಿಸುವೆಯ ನೀನಾತನಂ ಬಾಲೆ ಪೇಳ್||

  7. Next…
    ಆಹ! ನೀನೆಂಥ ಮಾತಿದನು ಪೇಳಿದೆ ಚೆಲುವೆ
    ಊಹೆಗೂ ಮೀರಿರ್ಪ ಕಲ್ಪನೆಯನುಂ|
    ಈಹೆ ತಣಿದಿರ್ದೊಡಿನ್ನತ್ತ ಸರಿ, ನೋಡಲ್ಲಿ
    ಬಾಹುವಂ ಚಾಚಿಹನ್ಯಾಧ್ಯೇತಳಂ(another of the readers)!! 😉

  8. ಪ್ರಿಯತಮನಿಂದೆ ಬಂದುದಲೆ ಪತ್ರಮಿದೋದುತುಮಿರ್ದೊಡಂ ನಿರಾ-
    ಮಯತೆಯೊಳೆನ್ನನೆತ್ತರದೆ ಮೀರ್ದುದು ನೋಡಿದರೊಲ್ವ ಪೆರ್ಚನಂ
    ನಯಮಿದು ಕಾಂಬೊಡಂ ಮಧುರಬಂಧಮೆ ವ್ಯಕ್ತಿಯನಾಳ್ದು ನಿಂದುದೌ
    ಪ್ರಿಯನಯದಿಂದಲಪ್ಪಿದೆನಿದೋ ಬಗೆಗಂಡ ಮದೀಯಕಾಂತನಂ

    ನನ್ನ ಪ್ರಿಯತಮನಿಂದ ಬಂದ ಪತ್ರ. ಓದುತ್ತಿರುವಂತೆಯೇ ನನಗಿಂತಲೂ ಅದು ಎತ್ತರಕ್ಕೆ ಬೆಳೆಯಿತು. ಇದೇ ಅಲ್ಲವೇ ವ್ಯಕ್ತಿಯನ್ನು ಮೀರಿಸುವ ಪ್ರೇಮದ ಹೆಚ್ಚುಗಾರಿಕೆ. ಅಲ್ಲೇ ಎನ್ನ ಹೃದಯ ಕಂಡ ಕಾಂತನನ್ನಪ್ಪಿದೆ.

  9. ಬರೆಹ ಮಾತ್ರಮದಿಲ್ಲ ಫಣೆಯ ಮೇಲಾತನಂ
    ಕೊರೆದಿಹನು ಬೊಮ್ಮನಂಗಾಂಗದೊಳ್ ಕಾಣ್|
    ಒರೆಹಚ್ಚಿ ನೀನೋಡುಮಾ ಎಲ್ಲಮುಂ ಸ್ಫುಟದೆ
    ಪಿರಿಪಿರಿಯುಮೇನಿರದೆ ಮೇಳಮೆಂದೇಂ||

    ಹಣೆಮೇಲೊಂದು ನೆಣೆಮೇಲೊಂದು ಬರೆದಿದ್ದರೆ 😀

  10. ಸಂದಾಯ್ತುಮಪ್ಪುಗೆಯುಮುತ್ಕಂಠೆ ನೀನಿನ್ನು
    ದಂದುಗಮದೇನೆಂದು ಬಿಡಿಸಿ ಪೇಳೌ|
    ಒಂದೇನಖಂಡದಿಂ ನೀನೋದುತಿರ್ಪ ಕತೆ?
    ಮುಂದಿಹವೆ ಹಲವಾರು ನೀಳ್ಗತೆಗಳೌ??
    (In which case, there will be as many heroes!)

  11. ನ್ಯಾಯೋಚಿತಮಿದಲ, ಬದುಕಿ-
    ನಾಯಾಮದೆ ಪೆಣ್ಣು ನರನ ತಾನಾಶ್ರಯಿಸಲ್ ।
    ಕಾಯಾ-ವಾಚಾ-ಮನಸಾ
    ಸ್ತ್ರೀಯಂ ಕಾಪಿಡುವ ಪುರುಷನಕ್ಷರನುಂ ಕಾಣ್ ।।

    (ಚಿತ್ರದ 3 – Dimensional View !! )

    • ಒಳ್ಳೆಯ ಚಾತುರ್ಯ ತೋರಿದ್ದೀರಿ ಪುರುಷನಕ್ಷರದಲ್ಲಿ 🙂 ಆದರೆ ಪದ್ಯಭಾವದ ಔಚಿತ್ಯ ಎಷ್ಟರ ಮಟ್ಟಿಗೆ ಎಂಬುದು ವಿಚಾರಣೀಯ. ಭಗವದ್ಗೀತೆಯ ವಾಕ್ಯಗಳ ನೆನಪಾಗುತ್ತದೆ, ಅಕ್ಷರನಾದ ಪುರುಷ ಇತ್ಯಾದಿ. ಆದರೆ ಅಲ್ಲಿ ಪುರುಷ ಎಂದರೆ ಗಂಡಸು ಅಷ್ಟೇ ಅಲ್ಲ!

      • ಧನ್ಯವಾದಗಳು ನೀಲಕಂಠ. 3-D ಚಿತ್ರವನ್ನು ತದೇಕಚಿತ್ತದಿಂದ ನೋಡಿದಾಗ “ಆಕೃತಿ”ಯೊಂದು ಎದ್ದುತೋರುವ ವಿಸ್ಮಯದ ಕಲ್ಪನೆಯಲ್ಲಿ ಬರೆದ ಪದ್ಯ. “ಪುರುಷನಕ್ಷರನೇಂ ತಾಂ” ಎಂಬ ಜಿಜ್ಞಾಸೆ ಸರಿಯಾದೀತು?

  12. ನಿದ್ದೆಬರಿಸುವ ನನ್ನ ಬೋಳುಬರಹದ ಪುಟಕೆ
    ಚೆಲುವೆ ನಿನ್ಹೆಸರಿರಲು ಶೋಭೆ ಬಂತು
    ಬರಹಸಾಗರ ದಾಟಿ ಸೇರಿವೆನು ಆ ತಟಕೆ
    ನೀನಿರಲು ಬರೆವೆ ನೂರಾರು ಕಂತು

    • ಸಖ್ಯಮೇಧರೆ, ಪದ್ಯಪಾನಕ್ಕೆ ಸ್ವಾಗತ… ಪ್ರಯತ್ನ ಚೆನ್ನಾಗಿದೆ. ದಯವಿಟ್ಟು ಪದ್ಯವಿದ್ಯೆಯಲ್ಲಿ ಕಲಿಕಾಸಾಮಗ್ರಿಳನ್ನು ನೋಡಿ ಪುನಃ ಛಂದೋಬಾದ್ಧವಾಗಿ ಬರೆಯಲು ಯತ್ನಿಸಿ..

    • Good effort. Keep composing verses. You will improve gradually. Here is your verse recomposed:
      ನಿದ್ದೆಗೊಯ್ಯುವ ನನ್ನ ಬೋಳುಬರೆಹಕೆ ನಿನ್ನ
      ಮುದ್ದುಪೆಸರನ್ನಿರಿಸೆ ಶೋಭೆಯಾಯ್ತೌ|
      ಒದ್ದೆಯಾಗದೆ ಹಾಯ್ದು ಪದ್ಯಸಾಗರವನ್ನು
      ಕದ್ದುಸೇರುವೆ ನಿನ್ನನಾ ದಡದೆ ಕೇಳ್||

  13. ಸಾಗರನಪ್ಪಿದ ತೀರಕೆ
    ನಾಗಮಣಿಯೊಳಿರದವೊಲ್ ಬಯಕೆ ಸಾಜದೆ,ಸಂ
    ಯೋಗಗೊಳೆ ಕಬ್ಬದೊಳ್ ವೈ
    ಭೋಗದ ಬಾಳ್ತೆಯನಪೇಕ್ಷಿಸುವುದೇಮ್ ಲೋಕಂ!!
    [ಸಾಗರದಲ್ಲಿಯೇ ರತ್ನಗಳು ಹೇರಳವಾಗಿ ಸಿಗುವಾಗ, ತೀರಕ್ಕೆ ನಾಗಮಣಿಯೂ ಕೇವಲವಾಗುವಂತೆ,ಕಾ ವ್ಯ ದೊಡೆ ಸಂಯೋಗಗೊಂಡಿರೆ ವೈಭೋಗವು ನಗಣ್ಯವಾಗುವುದು]

  14. ಪ್ರಿಯರೆ,
    ಇದು ಪದ್ಯಪಾನದಲ್ಲಿ ನನ್ನ ಮೊದಲ ಪ್ರಯತ್ನ. ನನ್ನ ಹಳಗನ್ನಡ, ನಡುಗನ್ನಡಗಳ ಜ್ಞಾನ ಅಲ್ಪವಾದ್ದರಿಂದ ಹೊಸಗನ್ನಡದಲ್ಲಿಯೇ ಈ ಪದ್ಯವನ್ನು ಬರೆದಿದ್ದೇನೆ. ಈ ಚಿತ್ರದಲ್ಲಿರುವ ಕಾವ್ಯ ಪುರುಷನನ್ನು ಪುಸ್ತಕವೆಂದು ಭಾವಿಸಿ ಪಂಚಮಾತ್ರಾ ಚೌಪದಿಯಲ್ಲಿ ಬರೆಯಲು ಯತ್ನಿಸಿದ್ದೇನೆ. ತಪ್ಪುಗಳನ್ನು ತಿಳಿಸಿ ತಿದ್ದುವ ಭಾರ ನಿಮ್ಮದು.

    ಇನಿಯನಂದದಿ ಮನದ ಬೇಸರವ ಕಳೆಯುತಲಿ
    ಜನಕನಂದದೆ ಹೊಸದು ಪಾಠವನು ಕಲಿಸಿ
    ಅನುದಿನವು ಸನಿಹದಲೆ ಇರುತಲಿಹ ಹೊತ್ತಗೆಯೆ
    ನಿನಗಪ್ಪುಗೆಯನಲ್ಲದೀವೆನೇನಂ

    • ಹಾರ್ದಿಕ ಸ್ವಾಗತ. ಕಲ್ಪನೆ, ಪದ್ಯ ಎರಡೂ ಚೆನ್ನಾಗಿವೆ. ದಯವಿಟ್ಟು ಸಂಧಿನಿಯಮಗಳ ಬಗ್ಗೆ ಗಮನ ಕೊಡಿ. ಹೀಗೆಯೇ ಬೇರೆ ಛಂದಸ್ಸುಗಳ ಬಗ್ಗೆ ಇದೇ ತಾಣದಲ್ಲಿರುವ ಕಲಿಕೆಯ ಸಾಮಗ್ರಿಗಳ ಮೂಲಕ ಅಭ್ಯಾಸ ಮಾಡಿ.

      • ಧನ್ಯವಾದ ನೀಲಕಂಠ ಅವರೆ. ಖಂಡಿತ ಅಭ್ಯಾಸ ಮಾಡುತ್ತೇನೆ.

    • ಕಲ್ಪನೆಯು ಚೆನ್ನಾಗಿದೆ. ಎರಡು ಸವರಣೆಗಳು:
      ೧) ಜನಕನಂದದೆ ಹೊಸದು ಪಾಠವನು ಕಲಿಸಿ
      ೨) ನಿನಗಪ್ಪುಗೆಯನಲ್ಲದೀವೆನೇನಂ (ಒಂದು ಮಾತ್ರೆ ಹೆಚ್ಚು ಇತ್ತು)

      • ಧನ್ಯವಾದಗಳು ಪ್ರಸಾದು ಸರ್ _/\_. ನಿಮ್ಮ ಸಲಹೆಯಂತೆ ಪದ್ಯವನ್ನು ತಿದ್ದಿದ್ದೇನೆ.

  15. ಬರೆಯುತಿರಲಿನಿಯಂಗೆ ಪತ್ರವ
    ಮರುಕಳಿಸೆ ಸವಿನೆನಪನೆಲ್ಲವ
    ನಿರತ ನೆನೆನೆನೆಯುತಿರಲರೆ ಚಣಮುಂ ವಿಚಲಳಾಗಿ|
    ವಿರಹಿಯಿವಳವನಿದಿರುಗೊಳ್ಳುತ
    ಲಿರಲು ಮತ್ತೆದೆ ಪುಟವನೋದುತ
    ಮರುಳಿನಂತದನಪ್ಪುತದರೊಳಗವನ ಕಂಡಂತೆ|

    • fine imagination.
      1) ಸವಿನೆನಪದೆಲ್ಲವು – Else it will mean ‘giving back the memories’, ಏಕೆಂದರೆ ಅವಧಾರಣವು ’ನೆನಪಿ’ಗಲ್ಲದೆ ’ವ್ಯಕ್ತಿ’ಗಾಗುತ್ತದೆ.
      2) ಅರೆ ಚಣಮುಂ ವಿಚಲಳಾಗಿ – calls for a bit more clarity
      3) ’ವಿರಹಿಯಿವಳು ಅವನು ಎದುರುಗೊಳ್ಳುತ’ ಎಂದು ವಿಭಕ್ತವಾಗುತ್ತದೆ – ’ಅವನನ್ನು’ ಎಂಬುದು ನಿಮ್ಮ ಆಶಯವೆ?
      4) ಕೊನೆಯ ಪಾದವು ಚೆನ್ನಾಗಿರುವುದರಿಂದ ಲಘುಬಾಹುಳ್ಯವು ತೊಡಕಾಗದಿದೆ.

  16. ಶಿಲ್ಪಿಗಳ ಮಾಯೆಯಿಂ ಪಡೆದು ಜೀವಮನಂತೆ
    ಕಲ್ಪಂಗಳಿಂ ನಿಂದ ಮೂರ್ತಿಯೋಲೇ,
    ಕಲ್ಪನೆಯ ಶಿಲ್ಪದೀ ಕಾವ್ಯಮಿದು ಜಗದೊಳಗೆ
    ಬಲ್ಪಿಂದೆ ಬಾಳಿರ್ಕೆ ಜನರ ಮನದೇ!!

    • ಚೆನ್ನಾಗಿದೆ. ಮೂರ್ತಿಯೋಲೇ ಅಷ್ಟೊಂದು ಸರಿ ಅಲ್ಲ. ವಿಗ್ರಹದವೊಲ್ ಮಾಡಬಹುದು. ಶಿಲ್ಪದೀ ಕಾವ್ಯಮಿದು ಎಂಬಲ್ಲಿ ಎರಡು ಬಾರಿ ನಿರ್ದೇಶನ ಬಂದಿದೆ, ಈ ಇದು ಎಂಬುದಾಗಿ. ನಿರ್ದೇಶಿಸಲೇಬೇಕಾದಲ್ಲಿ ಶಿಲ್ಪದೀ ಕಾವ್ಯಂ ಧರಿತ್ರಿಯೊಳ್ ಅಂತೇನಾದರೂ ಮಾಡಬಹುದು. ಬಾಳಿರ್ಕೆ? ಬಾಳ್ದಿರ್ಕೆ ಆಗಬೇಕಲ್ಲವೇ? ಜನರ ಮನದೊಳ್ ಆಗಬಹುದಲ್ಲ.

    • fine

  17. ಅಕ್ಕರದೊಡಕ್ಕರದೆ । ಅಕ್ಕರದೊಳಕ್ಕರೆಯೊ
    ಕ್ಲಿಕ್ಕಿಸಿಹ ವರ್ಡ್ಸವರ್ತನಾ । ಸಾನೆಟ್ಟೊ
    ತಕ್ಕುದಿದು “ಸೆಲ್ಫಿ” ಸಹವಾಸ ।।

    ಅಕ್ಷರದ ಪ್ರೀತಿ – ಅಕ್ಷರದಲ್ಲಿ ಪ್ರೀತಿ !! – Romantic Poet “Wordsworth”ನ ನೆನಪಿನಲ್ಲಿ

  18. ಕಾದಂಬರಿಯದನೊಂದಂ
    ಸ್ವಾದಮದಿಲ್ಲದೆ ಪಿಡಿದವಳೀಗಳದೇಮ /
    ತ್ಯಾದರದಿಂ ತಬ್ಬಿಹಳಾ
    ಕಾದಂಬರಿ ಸಂತೆಶಿವರದರೆ ಬರೆದಿರ್ಕುಂ //

    ನನ್ನ ಇಷ್ಟದ ಲೇಖಕರಾದ್ದರಿಂದ ಭೈರಪ್ಪರ ಕುರಿತು ಬರೆದಿದ್ದೇನೆ ಅಷ್ಟೇ. ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ.

    • ಅರ್ಥ ಸ್ಪಷ್ಟತೆ ಕಾಣುತ್ತಿಲ್ಲ. (ಅರ್ಥವಾಗುತ್ತಿಲ್ಲ). ಸಂತೆಶಿವರದರೆ ಅಂದರೆ ಏನು? ಕಂದಪದ್ಯದ ಛಂದಸ್ಸು ಪಾಲಿತವಾಗಿಲ್ಲ. ದಯವಿಟ್ಟು ತಾಣದ ಪಾಠಗಳನ್ನು ನೋಡಿ.

      • ಸಂತೆಶಿವರದರೆ ಅಂದರೆ ಸಂತೆಶಿವರದವರು ಎಂದಾಗದೇ ? ಛನ್ದಸ್ಸು ಎಲ್ಲಿ ತಪ್ಪಿದೆ ಎಂದು ತಿಳಿಯುತ್ತಿಲ್ಲ .

        • ಏನದು ಸಂತೆಶಿವರ? ಭೈರಪ್ಪನವರ ಊರೇ? ನನಗೆ ಗೊತ್ತಿಲ್ಲ. ಕಂದದಲ್ಲಿ ಮೂರು ನಾಲ್ಕನೇ ಸಾಲಿನ ಮಧ್ಯದ ಗಣ ಜಗಣವಾಗಿರಬೇಕು ಇಲ್ಲ ಮೊದಲ ವರ್ಣ ಯತಿಯುಕ್ತವಾಗಿ ಸರ್ವಲಘುವಾಗಬೇಕು. ಅದಿಲ್ಲಿ ಸಂದಿಲ್ಲ. ಅದಲ್ಲದೇ ಸಾಮಾನ್ಯದೃಷ್ಟಿಯಿಂದ, ಕಾದಂಬರಿ ಪದ ಪುನರುಕ್ತವಾಗಿದೆ.

          • ಹೌದು. ಸಂತೆಶಿವರ ಭೈರಪ್ಪನವರ ಊರು. ಕಂದದ ಮೇಲಿನ ನಿಯಮ ನನಗೆ ತಿಳಿದಿರಲಿಲ್ಲ. ಮುಂದೆ ಖಂಡಿತವಾಗಿಯೂ ಪಾಲಿಸುತ್ತೇನೆ. ಮಾಹಿತಿಗಾಗಿ ಧನ್ಯವಾದಗಳು ನೀಲಕಂಠರೆ.

    • ಹೀಗೊಂದು ಸವರಣೆ:
      ಕಾದಂಬರಿಯನ್ನಿದನ-
      ತ್ಯಾದರದಿಂದೀಕೆ ತಬ್ಬಿಪಿಡಿದಿರಲಿಂತುಂ|
      ಸ್ವಾದಮಿಹುದಲ್ತತಿಶಯಂ!
      ಹೌದಿದು ಭೈರಪ್ಪಸೃಷ್ಟಿ ನಿಸ್ಸಂದೇಹಂ||

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)