Oct 232016
 

Book(ಬುಕ್), pen(ಪೆನ್), verse(ವರ್ಸ್), sing(ಸಿಂಗ್) ಪದಗಳನ್ನು ಬಳೆಸಿ ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಶಾಲೆಯ ಪಡ್ಡೆಹುಡುಗರನ್ನು ವರ್ಣಿಸಿ ಪದ್ಯರಚಿಸಿ 🙂

  22 Responses to “ಪದ್ಯಸಪ್ತಾಹ ೨೨೫: ದತ್ತಪದಿ”

 1. ಮಾತೆಂಬುಕ್ಕಿನ ಬಾಣದಿಂ ಪೆರವರಂ ತಾಗುತ್ತೆ ತೂರಾಡುತುಂ
  ನೀತಿ ಭ್ರಾಂತಿಯೆನುತ್ತೆ ಕೂಗಿ ಕುಣಿವರ್ ಕೀಳ್ವಾತೆ ಸೊಂಪೆನ್ನೆ ನ-
  ಲ್ವಾತೆಂಬಂತುಲಿವರ್ಸದಾ ಮೆರೆವರಯ್ ಕಾಸಂತು ವೃಕ್ಷಂಗಳೊಳ್
  ನೇತಾಡಿರ್ಪುದೆನಲ್ಕೆ, ಗ್ರಾಮದೆಡೆಯಾ ಸಿಂಗಂಗಳೆ
  ಂಬಂತೆವೊಲ್

  ಮಾತೆಂಬ ಉಕ್ಕಿನ ಬಾಣದಿಂದ ಇನ್ನೊಬ್ಬರನ್ನು ಚುಚ್ಚುತ್ತಿರಲು, ನೀತಿಯೆಂಬುದು ಭ್ರಾಂತಿಯೆಂದು ಕುಣಿಯುತ್ತ, ಸೊಂಪಾಗಿ ಕೀಳ್ಮಾತುಗಳನ್ನೇ ನಲ್ನುಡಿಗಳಂತೆ ಹರಟುತ್ತ, ದುಡ್ಡು ಮರದಲ್ಲಿ ನೇತಾಡುತ್ತಿದೆಂಬಂತೆ ಮೆರೆವರು, ಗ್ರಾಮಸಿಂಹಗಳ ಹಾಗೆ.

 2. ತುಂಬುಕ್ಕುತಿರ್ಪ ಕಾಂತಿಯೆಸಕಂ ಪಸರಿಸ
  ಲ್ಕಿಂಬರಿಯದಿರ್ಪೆಂಟರಾ ಕಂಗಳೊಳ್!
  ನಂಬುವರ್ ಸಲುವುದೆಲ್ಲಮೆನುತ್ತೆ ತಮ್ಮಗಂ
  ಬೆಂಬತ್ತುವರ್ ಸಿಂಗಳೀಕಮನದೊಳ್!

  ((ಪ್ರೀತಿಯನ್ನರಿಯದ)(ಎಂಟುವರ್ಷದರ ಕಂಗಳಲ್ಲಿ(ಚಿಕ್ಕವರ) ಆಸೆ ಮೂಡಿದಾಗ ಎಲ್ಲವೂ ತಮಗೇ ಸಲ್ಲುವದೆಂದು ಕೋತಿಯಂತೇ ಎಲ್ಲವನ್ನೂ ಪಡೆಯ ಹೋಗುವರು(ಪಡ್ಡೆಹುಡುಗರೆಂದು ಕರೆಯಿಸಿಕೊಂಬರು)

 3. ಮತ್ತಕರಿಗಳೆ ಕಾಂಬುಕಿವರಂ
  ಮುತ್ತುತಿರ್ಪವು ಸಿಂಗಗಳವೋಲ್
  ಚಿತ್ತಗಂಡವ ಸೀಳುವುದಕೆಂ ವಿತ್ತ-ಕಾಮಗಳಾ
  ಕುತ್ತುಗಳ ಧೃತಿಯಿಂದಲೆದುರಿಸಿ
  ಮುತ್ತುಗಳ ಮುದದಿಂದ ವರ್ಷಿಪ
  ಮತ್ತೆ ಸಾಧನೆ ಗಯ್ವ ಯುವಕರೆ ನಮಿಪೆ ನಿಮಗೀಗಳ್ //

  ಪಡ್ಡೆ ಎಂದರೆ ಪ್ರಾಯಕ್ಕೆ ಬಂದ ಎಂಬ ಅರ್ಥವನ್ನಾಧರಿಸಿ ಯುವಕರನ್ನು ಕುರಿತು ಬರೆದದ್ದು. ಯುವಕರು ಮದ್ದಾನೆಗಳಂತೆ. ಅವರ ಮನಸ್ಸೆಂಬ ಗಂಡಸ್ಥಲವನ್ನು ಸೀಳಲು ಸಂಪತ್ತು ಆಸೆಗಳೆಂಬ ಸಿಂಹಗಳು ಕಾಯುತ್ತಿದ್ದರೂ ಅವನ್ನು ಎದುರಿಸಿ ಮುತ್ತುಗಳನ್ನು ವರ್ಷಿಸುವ(ಆನೆಯ ಗಂಡಸ್ಥಳದಲ್ಲಿ ಮುತ್ತುಗಳಿರುತ್ತವೆಂಬ ಪ್ರತೀತಿ) ಸಾಧನೆ ಮಾಡುವ ಯುವಕರಿಗೆ ನಮಿಸುತ್ತೇನೆ.
  ಕಾಂಬುಕೆ ಪ್ರಯೋಗ ಸರಿಯೋ ತಪ್ಪೋ ತಿಳಿದಿಲ್ಲ. ದಯವಿಟ್ಟು ತಿಳಿಸಿ ಇನ್ನೂ ತಪ್ಪುಗಳಿದ್ದರೆ ತಿದ್ದಬೇಕು.

  • ಕಾಂಬುಕೆ ಸರಿ ಅಲ್ಲ ಅನಿಸುತ್ತದೆ. ಸೀಳುವುದಕೆಂ ಕೂಡ…

   • ಓಹ್ ! ಹಾಗಾದರೆ ಪದ್ಯದ ಪೂರ್ವಾರ್ಧವನ್ನು
    “ವಿತ್ತವೆಂಬುಕ್ಕಿನ ನಖಂಗಳ
    ಪೊತ್ತ ಕಾಮವು ಸಿಂಗದಂತೆಯೆ
    ಸುತ್ತುತಿರ್ಪುದು ಕರಿಗಳಂತಿಹ ಯುವಕರಂ ಭರದಿಂ /”
    ಎಂದು ತಿದ್ದಿದರೆ ಸರಿಹೋಗಬಹುದೇ?

 4. ಯುನಿವರ್ಸಿಟಿಯ ಬಾಗಿಲಲಿನಿಂತು ಹರಟುತಲಿ
  ಕುಣಿಯುವರು ಸಿಂಗಮೊಗದೋರಿ ಹೊಸಬರಿಗೆ (ragging)
  ಮನವೊಲಿಸೆ ಚುಕುಬುಕ್ಕು ಬಂಡಿಯನ್ನೋಡಿಸುತೆ
  ಕನವರಿಸಿ ಬೀಳುವರು ಧೊಪ್ಪೆನುತಲಿ (ಬದುಕಲ್ಲಿ ಹಾಗೂ ತರಗತಿಯ ಕೊನೆಯ ಬೆಂಚಲ್ಲಿ)

  ಇಲ್ಲಿ ಉಪಯೋಗಿಸಿರುವಂತೆ ಣ,ನ ಕಾರಗಳನ್ನು ಪ್ರಾಸವಾಗಿ(ದಂತೆ) ಉಪಯೋಗಿಸುವುದು,ಯುನಿವರ್ಸಿಟಿ ಅನ್ನುವ ಇನ್ನೊಂದು ಆಂಗ್ಲ ಶಬ್ದವವನ್ನು ಉಪಯೋಗಿಸುವುದು ನಿಯಮಬಾಹಿರವೇ? ಬೇರೇನಾದರೂ ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.

  • ನಿಯಮಬಾಹಿರವೇನೂ ಅಲ್ಲ. ಆದರೆ ಆಂಗ್ಲದತ್ತಪದಕ್ಕೆ ಆಂಗ್ಲಪದವನ್ನೇ ತರುವುದು ಅಷ್ಟೇನೂ ರೋಚಕವೆನಿಸದು. ಏಕೆಂದರೆ ಅದೇ ಭಾಷೆಯ ಗುಣಕ್ಕನುಗುಣವಾಗಿ ಅವು ಸುಲಭವಾಗಿ ದಕ್ಕುತ್ತವೆ. ಕನ್ನಡ /ಸಂಸ್ಕೃತ ಪದಗಳ ಮೂಲಕ ದತ್ತಪದವನ್ನು ತರಲು ಪ್ರಯತ್ನಿಸಿ.

   • ಧನ್ಯವಾದಗಳು. ನೀವು ಹೇಳಿದಂತೆ ದತ್ತಪದಿಯ ಪದಗಳಲ್ಲಿ ಆಂಗ್ಲ ಪದಗಳನ್ನು ಉಪಯೋಗಿಸದೆ ಇನ್ನೊಂದು ಪ್ರಯತ್ನ ಮಾಡಿದೆ.(ಊನಗಣಗಳಿಲ್ಲವಾದ್ದರಿಂದ ಬಹುಶಃ ಇದು ರಗಳೆ. ದಯವಿಟ್ಟು ತಪ್ಪುಗಳಿದ್ದಲ್ಲಿ ತಿಳಿಸಿ,ತಿದ್ದಿ. ಸುಕುಮಾರ ಬಂಧಗಳು ಬಹಳವಾಗಿವೆ 🙁 ಕಡಿಮೆ ಮಾಡಲು ಮುಂದಿನ ಪದ್ಯಗಳಲ್ಲಿ ಪ್ರಯತ್ನಿಸುತ್ತೇನೆ)

    ಮೆರೆಯುವರ್ ಸಿರಿವಂತಿಕೆಯ ಮದದ ಮತ್ತಿನೊಳ್
    ಹರಿಸುವರ್ ಚುಕುಬುಕ್ಕು ಬಂಡಿಯನೆ ಮಾತಿನೊಳ್
    ವಿರಮಿಸುತೆ ಸಿಂಗದಾ ಮರಿಯವೋಲ್ ಬೆಂಚಿನೊಳ್
    ಮರುಗುವರ್ ಧೊಪ್ಪೆನುತೆ ಬೀಳುತುಂ ಬಾಳಿನೊಳ್

 5. ಹುಕ್ಕ -ಬುಕ್ಕರಾಳಿ ಮೆರದ
  ತಕ್ಕುದಾದ ಕಾಲವನ್ನು
  ಹೆಕ್ಕಿ ಬರೆದು ಕನ್ನಡಾಂಬೆ ವಂದಿಪೆನ್ವರು I
  ನೆಕ್ಕಿ ತಿನಲು ವರಸೆ ಬೇರೆ
  ರೊಕ್ಕ ಬರದು ಸಿಂಗರಿಸಲು
  ಹಕ್ಕು ತಮಗು ಬೇರೆಯಲ್ಲಯೆನುತ ಬಾಳ್ವರು II

  ಹೇಳುವುದೊಂದು ಮಾಡುವುದು ಇನ್ನೊಂದು ಅನ್ನುವ ಸಾರ . ಪರೀಕ್ಷೆಯಲ್ಲಿ ಇಸವಿಗಳನ್ನು ಹೆಕ್ಕಿ ಬರೆದು ಮಾರ್ಕು ಗಿಟ್ಟಿಸಿಕೊಂಡು (ನವಂಬರ್ ೧ ನೇ ತಾರೀಕಿಗೆ ಕನ್ನಡ ಕನ್ನಡ ಎಂದು ಹೇಳುವಷ್ಟು ) ಕನ್ನಡ ನಮ್ಮ ಆಡಂಬರಗಳನ್ನು ಪೂರೈಸಲು ಸಾಲದು ಎನ್ನುತ್ತಾ ಬೇರೆ ದಾರಿ ನೋಡುತ್ತಾರೆ .

  • ಹುಕ್ಕ – as i know it is hakka, not hukka. ವಂದಿಪೆನ್ವರು – should be vandipennuvaru, ವರಸೆ – does not bring in verse, it sounds varas, ಬೇರೆಯಲ್ಲಯೆನುತ – whan we make sandhi, it is bereyallenuta

   • ಧನ್ಯವಾದಗಳು ನೀಲಕಂಠರೆ .

    ಭೋಗ ಷಡ್ಪದಿಯಲ್ಲಿ ತೇಪೆ ಹಾಕಿದರೆ ಸರಿ ಹೋಗುವುದಿಲ್ಲ ಅನ್ನಿಸುತ್ತದೆ ಅದಕ್ಕಾಗಿ ಒಂದಿಷ್ಟು ಹಳೆಗನ್ನಡದೊಂದಿಗೆ ಅದನ್ನು ಭಾಮಿನಿಗೆ ಅಳವಡಿಸಿದ್ದೇನೆ . ಸರಿಯಾಗಿದೆ ಎಂದು ಹೇಳಿಬಿಡಿ 🙂

    ಹಕ್ಕ -ಬುಕ್ಕರು ಮೆರೆದು ಬದುಕಿದ
    ತಕ್ಕ ಕಾಲವದಾವುದೆ೦ದೇ
    ಹೆಕ್ಕಿ ತೋರುತ ಕನ್ನಡಾಂಬೆಗೆ ವಂದಿಪೆನೆನುವರು I
    ನೆಕ್ಕಿ ತಿನ್ನುವವರ್ ಸಮರ್ಥರ್
    ರೊಕ್ಕ ಬಾರದು ಸಿಂಗರಕೆಮಗೆ
    ಹಕ್ಕು ಬೇರೆಯದಿಲ್ಲವೆಂದಾಘೋಷಣೆಯ ಮೊರೆದು II

 6. ಶಿರದೆ ಮೂಡಿರೆ ಕೊಂಬು,ಕನ್ನಡಕದಿಂ ಕಣ್ಣು
  ನಿರುತವುಂ ಪೆಣ್ಗೂಸನನುಸರಿಸಿರಲ್!
  ಬರಿದೆ ಕಳೆವರ್ ಸಮಯಮಂ,ಪಿಡಿದು ಪೊತ್ತಗೆಯ
  ನರೆರೆ!ಸಿಹಿ ಸಿಂಗರದ ಕನಸನುಂಡು!!

 7. (Jackal)ಜಂಬುಕದೊಲೂಳಿಡುತುಮಾವಗಂ ಛೇಡಿಸುವ-
  ನಂಬುಜಾನನೆಯರಂ ಬೇವರ್ಸಿ ತಾಂ|
  ಹುಂಬನಿವನಿಂಗೆ ಸಿಂಗರವೆ ಬಂಡವಳವಲೆ
  “ಕಂಬಿಯೆಣಿಪೆನು”ಮೆಂಬುದಂ ಕಾಣನೈ||

 8. ಉಂಬು ಕುವರನೆ ಹೋಮುವರ್ಕನು
  ಶಂಭುವಿನ ಜೊತೆಗೂಡಿ ಮಾಳ್ಪೆನ್
  ನಂಬುವರ್ ಸಿದ್ದಣ್ಣ ಮಾಸ್ತರು ನೀನೆ ಬರೆದುದೆಂದು
  ಅಂಬೆ ಸಿಂಗರಗೊಂಡು ಬರ್ಪೆನು
  ತುಂಬ ಚಿತ್ತಿರದಂತೆ ಬರೆಯೈ
  ಕೊಂಬು ದಿರ್ಘವನೊತ್ತ ಗಮನಿಸಿ ನೀಡೆನಗೆ ಬರೆದು

  • ೧) ಬರೆದುದೆಂ – ಒಂದು ಮಾತ್ರೆ ಹೆಚ್ಚು ಇದೆ.
   ೨) ಪೂರ್ವಾರ್ಧವನ್ನು ನೀವು ಹೇಳಿದಂತೆ, ಉತ್ತರಾರ್ಧವನ್ನು ನಿಮ್ಮ ಕುವರನು ಹೇಳಿದಂತೆ ಕಲ್ಪಿಸಿಕೊಂಡರೂ, ಅಂಬೆ/ಸಿಂಗಾರಗಳ ಪಾತ್ರವೇನೆಂದು ತಿಳಿಯದಾಗಿದೆ.

   • ಧನ್ಯವಾದಗಳು ಸರ್
    ಮಾಸ್ತರುವನ್ನು ಮೇಷ್ಟ್ರು ಮಾಡಿದರೆ ಸರಿಯಾಗುವುದಲ್ಲವೆ?
    ಶಾಲೆಯಿಂದ ಮನೆಗೆ ಬಂದ ಮಗಳು ಅಂಬೆಗೆ – ಅಮ್ಮನಿಗೆ; ಸಮವಸ್ತ್ರ ತೆಗೆದಿರಿಸಿ ಸಿಂಗರಿಸಿಕೊಂಡು ಬರುವೆನೆಂದು ಹೇಳುವುದು ನನ್ನ ಮನದಲ್ಲಿದ್ದುದು. ವ್ಯಕ್ತವಾದಂತಿಲ್ಲ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)