Jan 162017
 

“ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ”

  80 Responses to “ಪದ್ಯಸಪ್ತಾಹ ೨೩೮: ಸಮಸ್ಯಾಪೂರಣ”

 1. ಮೆಲ್ವಾತುಂ ಬಲಭೀಮಕಾಯಮೆಸೆಗುಂ ಸಂವಾಹನವೃತ್ತಿಯೊಳ್
  ಚೆಲ್ವಾದಾಸ್ರ ತರಂಗ ಲಾಸ್ಯರಹಿತಂ ಬೋಳ್ವೋದ ಮೃತ್ಯೋದಧೀ
  ಸಲ್ವನ್ ಶೋಭನ ಪೋಷಣ ಗೃಹದೆ ಥಾಯ್ಹಾಯೆನ್ನಲಾಗ್ರಾಹಕರ್
  ಖಲ್ವಾಟಂ, ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ

  • _/\_ Golden days of padyapaana are back 🙂

  • 1. ‘ಸಂವಾಹನವೃತ್ತಿಯೊಳ್’ ಹಾಗೂ ‘ಪೋಷಣ ಗೃಹದೆ’ ಎಂಬಲ್ಲಿ ನ ಹಾಗೂ ಣ ಅಕ್ಷರಗಳು ಗುರ್ವಕ್ಷರಗಳಾಗವು.
   2. ದಯವಿಟ್ಟು ಭಾವಾರ್ಥವನ್ನೂ ‘ಚೆಲ್ವಾದಾಸ್ರ’ದ ಅರ್ಥವನ್ನೂ ತಿಳಿಸಿ.

   • ಶಿಥಿಲದ್ವಿತ್ತ್ವದ ಗೊಡವೆಗೆ ಹೋಗದೆ ’ಸಂವಾಹನವೃತ್ತಿ’ ’ಪೋಷಣಗೃಹ’ ಎರಡೂ ಸಂಸ್ಕೃತಪದಗಳಾದ್ದರಿಂದ, ಪದ್ಯದ ಲಯಕ್ಕೆ ನ ಣ ಗಳನ್ನು ಗುರ್ವಕ್ಷರವಾಗಿಯೇ ಇಲ್ಲಿ ಸ್ವೀಕರಿಸಿದೆ. ಭಾವ : ಮೆಲುದನಿಯ ಬಲಶಾಲಿಯಾದ (ಆಸ್ರ ತರಂಗ ಲಾಸ್ಯ..ದಧೀ – ನರ್ತಿಸುವ ಕೇಶತರಂಗಗಳಿಲ್ಲದ Dead Sea ಯಂಥ)ಬೋಳುತಲೆಯ head massager ಒಂದು parlor (ಶೋಭನ ಪೋಷಣ ಗೃಹ)ನಲ್ಲಿ ತನ್ನ ಗ್ರಾಹಕರು ಥಾಯ್.. ಹಾಯ್ ಎನ್ನುತ್ತಿರಲು… ತಲೆಗೂಂದಲಂ…

    ಆಸ್ರ (ಕೂದಲು) – ಆಸ್ರ = ಪುಲ್ಲಿಂಗ ಕೂದಲು. ನ.ಪುಂ: ನೆತ್ತರು.

   • 1. ಪ್ರತ್ಯಯವನ್ನುಳಿದು ಇವೆರಡೂ ಶಬ್ದಗಳು (‘ಸಂವಾಹನವೃತ್ತಿಯೊಳ್’ ಹಾಗೂ ‘ಪೋಷಣಗೃಹದೆ’ ನೀವು ಹೇಳಿರುವಂತೆ) ಶುದ್ಧಸಂಸ್ಕೃತದವಾಗಿರುವುದರಿಂದ, ಕನ್ನಡದ್ದಾದ ಶಿಥಿಲದ್ವಿತ್ವ(ತ್ತ್ವx)ಪ್ರಯೋಗವು ಇಲ್ಲಿ ಸಲ್ಲದು.
    2. ಅಲ್ಲದೆ, ಇಲ್ಲಿನ ಪ್ರಯೋಗಕ್ಕೂ ಶಿಥಿಲದ್ವಿತ್ವಕ್ಕೂ ಅಜಗಜಾಂತರ. ಶಿಥಿಲದ್ವಿತ್ವದಲ್ಲಿ ಗುರ್ವಕ್ಷರವನ್ನು ತೇಲಿಸಿ ಲಘುವಾಗಿ ಉಚ್ಚರಿಸುವುದಾಗುತ್ತದೆ. ಇಲ್ಲಾದರೋ ತಾವು ಲಘ್ವಕ್ಷರವನ್ನು ಗುರುವಾಗಿ ಉಚ್ಚರಿಸಿರುವಿರಿ. ಅದು ಅಸಾಧು.
    3. ಮೃತ್ಯೋದಧೀ ~ ಮೃತ್ಯೂದಧಿ ~ ಮೃತೋದಧಿ

    • ಸಂವಾಹನೋದ್ಯೋಗದೊಳ್ ಎಂದೋ ಪೋಷಣಸ್ಥಾನದೊಳ್ ಎಂದೋ ಮಾಡಿದ್ದರೆ ಈಗಿನ ಅರ್ಥಸಂವಹನೆ ಬರುತ್ತಿರಲಿಲ್ಲ. ಇಂಥಹ ಪ್ರಯೋಗಳುಂಟು. ಭೇಟಿಯಾದಾಗ ತೋರಿಸಿಕೊಡುವೆ. ಇಲ್ಲೇ ತೋರಿಸಿ ಕೊಡುವ ಯತ್ನಮಾಡಿದರೆ, ನೀವು ಬಳಸಿರುವ ’ಚೆಲ್ವಸ್ಕಂದ’ ಪದವನ್ನೇ ಉದಾಹರಿಸಬಹುದು. ಗದ್ಯವಾಗಿ ಓದಿದಾಗ ಚೆಲ್ವ ಸ್ಕಂದ ಎಂದಾಗುತ್ತದೆ. ಚೆಲ್ವ(-೧) ಸ್ಕಂದ (-೧), ಶಾರ್ದೂಲದ ಮೊದಲಲ್ಲಿ ಬರಬೇಕಾದದ್ದು ಮೂರು ಗುರುಗಳು. ಇಲ್ಲಿ ಗುರು-ಲಘು-ಗುರು-ಲಗು (ಚೆಲ್ ವ ಸ್ಕಂ ದ) ಆಗಿ ಅಸಾಧುವಾಯಿತೆನ್ನಲಾಗುವುದೇ? ಪದ್ಯದ ಲಯದಲ್ಲಿ ಚೆಲ್ವಸ್ ಸ್ಕಂದ ಎಂದು ಓದಿಕೊಳ್ಳಬೇಕು. ಹಾಗೆಯೇ ಸಂವಾಹನವ್ ವೃತ್ತಿಯೊಳ್ ಮತ್ತು ಪೋಶಣಗ್ ಗೃಹದೆ ಎಂಬ ಪ್ರಯೋಗ.

     • ನಮಸ್ಕಾರ. ಪೋಷಣಗೃಹದೆ ಎಂಬುದನ್ನು ಣ ಗುರುವಾಗಿಸಿ ಓದಿದರೆ ಗೃಹವನ್ನು ತಪ್ಪಾಗಿಯೇ ಉಚ್ಚರಿಸಿದಂತಾಗುತ್ತದೆ, ಅಲ್ಲವೇ? ಹಾಗೆಯೇ ಸಂವಾಹನವೃತ್ತಿ. ನನಗೆ ಗೊತ್ತಿರದ ಯಾವುದೋ ಪ್ರಯೋಗಗಳು ಇರಬಹುದೇನೋ. ಆದರೆ ಪದ್ಯಪಾನದಲ್ಲಿ ಬರೆಯುವಾಗ ಮಹಾಕವಿಪ್ರಯೋಗಗಳನ್ನೂ – ಅವು ಅಸಾಧುವಾಗಿದ್ದರೆ – ಅನುಕರಿಸಲಾಗದು ಎಂಬುದು ಆಶಯ. 🙂

     • ನೀಲ ಕಂಠರೆ / ಪ್ರಸಾದರೆ

      ನಾನು ಬರೆದದ್ದೇ ಸಾಧುವೆಂದು ಹೇಳುವ ಅಭಿಪ್ರಾಯವಿಲ್ಲ. ನೀವು ಹೇಳಿದಂತೆ ಮಹಾಕವಿಗಳ ಅಸಾಧುಪ್ರಯೊಗವೂ ಅನುಕರಣೀಯವಲ್ಲದಾಗ ಇದೇ ಸರಿಎಂಬ ಹಠವೇನಿಲ್ಲ, ನನ್ನ ಪದ್ಯಗಳು ಅನುಕರಣೀಯ ಎಂಬ ಭ್ರಮೆಯೂ ನನಗಿಲ್ಲ. ಪದ್ಯದ ಓಟಕ್ಕೆ ಪದಗಳನ್ನು ಲಯಬದ್ದವಾಗಿ ಓದುವ ಕ್ರಮದಲ್ಲಿ ಅಂಥ ಪ್ರಯೋಗಗಳಿವೆ ಎಂದೆ. ಗರ್ಭಗೃಹ ಎಂಬ ಪದದಲ್ಲಿ ಗೃ ನ ಹಿಂದಿನ ಅಕ್ಷರವನ್ನು ಗುರುವಾಗಿಸಿದ, ಪಾಪವೃತ್ತಿ, ಕ್ಷುದ್ರವೃತ್ತಿ ಎಂಬಪದಗಳ ಉಚ್ಛಾರದಲ್ಲೂ ವೃ ನ ಹಿಂದನ ಅಕ್ಷರ ಗುರುವಾಗಿ ರಚಿಸಿದ ಪದ್ಯಗಳನ್ನು ಓದಿದ ನೆನಪಿದೆ. ಒಳ್ಳೆಯ ಸಮಸ್ಯೆಯನ್ನು ಬಹುಕಾಲದ ಮೇಲೆ ಕಂಡು, ಆ ಕ್ಷಣದಲ್ಲೇ ಪೂರಿಸಿದ ಬಂಧದಲ್ಲಿನ ಇಂಥ ಅಸಾಧು ಪ್ರಯೋಗದಿಂದ ಇಷ್ಟು ದೀರ್ಘವಾದ ಚರ್ಚೆಗೆ ಕಾರಣನಾಗಿದ್ದಕ್ಕಾಗಿ ಕ್ಷಮೆಯಿರಲಿ.

     • ತಾವು ಬರೆದದ್ದು ಸರ್ವಥಾ ಸಂತೋಷದಾಯಕ. ಅದರಲ್ಲಿ ಎರಡು ಮಾತಿಲ್ಲ. ನನ್ನರಿವಿನನನ್ನ ಅರೆಬೆಂದದ್ದಾಗಿರುವುದರಿಂದ, ಹಾಗೂ ಇಂಥ ತಾಣಗಳಿಂದಲೇ ಏನೇನು ಸಾಧ್ಯವೋ ಅಷ್ಟು ಕಲಿತುಕೊಳ್ಳುವುದರಿಂದ ಚರ್ಚೆಗೆ ಇಳಿದದ್ದಾಯಿತು. ದಯವಿಟ್ಟು ತಪ್ಪು ತಿಳಿಯಲಾಗದು _/_

     • ತಮ್ಮ ವಿಶದೀಕರಣಕ್ಕಾಗಿ ಧನ್ಯವಾದಗಳು. ’ಚೆಲ್ವಸ್ಕಂದ’ವನ್ನು ಚೆಲ್ವಸ್ ಸ್ಕಂದ ಎಂದು ಓದಿಕೊಳ್ಳಬೇಕು ಎಂದು ಹೇಳಿರುವಿರಿ. ಚಿಲ್ವಸ್ ಕಂಧ ಎಂದು ಓದಿಕೊಳ್ಳಲು ಏನು ಬಾಧಕ?

     • ಹೇಗಾದರೂ ಬಾಧಕವಿಲ್ಲ ಚೆಲ್ವಸ್ಕ್ ಅಂಧ ಅಂದರೂ ಲಯತಪ್ಪದು 🙂

     • ಹಾಗಾದರೆ “ಇಲ್ಲಿ ಗುರು-ಲಘು-ಗುರು-ಲಗು (ಚೆಲ್ ವ ಸ್ಕಂ ದ) ಆಗಿ ಅಸಾಧುವಾಯಿತೆನ್ನಲಾಗುವುದೇ?” ಎಂಬ ನಿಮ್ಮ ಮಾತನ್ನು ನೀವೇ ಖಂಡಿಸಿದಂತಾಯಿತಲ್ಲ?

     • ಪ್ರಸಾದ್

      ಅಸಾಧುವಾಯಿತೆನ್ನಲಾಗುವುದೇ? ಇಲ್ಲ, ಎನ್ನಲಾಗದು ಎಂದು ಅಧ್ಯಾಹಾರವಲ್ಲವೇ. 🙂 ನೀವು ಹುಡುಕುತ್ತಿರುವುದೇನೋ ತಿಳಿಯಲಿಲ್ಲ.

     • ’ವಸ್ತುತಃ ಅದು ಅಸಾಧು. ಆದರೆ ಹಾಗೆನ್ನಲಾಗುವುದೇ’ ಎಂದಾಗುತ್ತದೆ. ನೀವು ಈ ತಕರಾರನ್ನು ಎತ್ತಲಾರಿರಿ ಎಂದುಕೊಂಡಿದ್ದೆ.

    • ಯಾವುದು ಅಸಾಧು, ಪ್ರಸಾದು?
     ಏನಿದು ಯಾವ ಹೊತ್ತೂ
     ನಾನು ತೆಗೆಯದ ತಕರಾರಿನ ಬಾಬತ್ತು?
     ಅದೆಲ್ಲಿಂದ ಬಂದು ನಿಮ್ಮಲ್ಲಿ ಬಿತ್ತು?

  • ನಮಸ್ತೇ ಚಂದ್ರಮೌಳೀ ಸರ್, ಪದ್ಯದ ಆಶಯ ಚೆನ್ನಾಗಿದೆ, ಪದ್ಯಪಾನದಲ್ಲಿ ಭಾಗವಹಿಸುತ್ತಿರಬರೆಕೆಂದು ಕೋರಿಕೊಳ್ಳುತ್ತೇನೆ _^_

   • ನಮಸ್ತೇ ಸೋಮಶೇಖರ್. ಬಹಳ ಕಾಲವಾಗಿತ್ತು. ಹೌದು. ಸಾಧ್ಯವಾದಾಗ, ಆಗಾಗ್ಗೆ ಭಾಗವಹಿಸುತ್ತೇನೆ. ಬಹಳ ಚೆಂದದ ಸಮಸ್ಯೆಯನ್ನಿತ್ತಿದ್ದೀರ, ನಿಮ್ಮ ಬರೆಹವೂ ಪಳಗಿದೆ. ಧನ್ಯವಾದಗಳು.

    • _^_

     ಸಮಸ್ಯೆಯನ್ನು ಶತಾವಧಾನಿಗಳು ಗೋಷ್ಠಿಯಲ್ಲಿ ಕೊಟ್ಟಿದ್ದರು ಸರ್, ಇಲ್ಲಿ ಬಳೆಸಿಕೊಂಡೆ

     • ಓ ಹಾಗೋ ! ಆ ಕೆಲವು ಆಯ್ದ ಪೂರಣಗಳನ್ನೂ ಇಲ್ಲಿ ಹಾಕಿದರೆ ಓದಿ ಸಂತೋಷಪಟ್ಟೇವು.

     • ಸರ್, ನನ್ನ ಪೂರಣ ಗೋಷ್ಠಿಯದೇ, ಉಳಿದವರು ಪೋಸ್ಟ್ ಮಾಡುತ್ತಾರೆ

  • ಸರ್, ತುಂಬಾ ಚೆನ್ನಾಗಿದೆ ಹಳಗನ್ನಡ. ಆದರೆ ವ್ಯಾಖ್ಯಾನವಿಲ್ಲದೆ ತಿಳಿಯುವುದು ಕಷ್ಟವೆನಿಸಿತು. ನಿಮ್ಮ ಪ್ರಸಾದರ ನೀಲಕಂಠರ ಚರ್ಚೆಗಳನ್ನು ಗಮನಿಸಿ, ನಾನು ಕಲಿಯುವುದು ಎಷ್ಟಿದೆ ಎಂದರಿವಾಯ್ತು. ಸಂತೋಷದ ಸುದ್ದಿ ಎಂದರೆ, ತಿಳಿದವರ ಸಹಾಯವಿರುವುದು!

 2. ಕೊಲ್ವಾತಂ ಅತಿವೇಗದಿಂ ಅರಿಗಳಂ ತುಪ್ಪಾಕಿಗುಂಡುಂಗಳಿಂ
  ಬೋಳ್ವೋದಂ ಯುವಸೈನಿಕಂ ಸಮರದಿಂ ವಹ್ನಿಜ್ವಲಾಸ್ಫೋಟದಿಂ
  ನಾಳ್ವೋಗಲ್ ಸಕುಟುಂಬಕಂ ನೊಗವೊರಲ್ ನಾಯಿಂದನಾಗಿದ್ದುನುಂ
  ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ
  ——

  ಸೈನಿಕನೊಬ್ಬ ಯುದ್ಧದ ಆಸ್ಪೋಟದಲ್ಲಿ ಬೋಳಾದ. ಈಗ ಕ್ಶೌರಿಕನಾಗಿರುವ ಇವನು …ಖಲ್ವಾಟಂ

  • fine idea

  • ವಹ್ನಿಜ್ವಾಲಾ, ಗುಂಡುಗಳ್ ಆಗಬೇಕಲ್ಲವೇ? ಕಲ್ಪನೆ ಚೆನ್ನಾಗಿದೆ

  • ಚೆನ್ನಾಗಿದೆ. ವಿಸಂಧಿದೋಷಗಳಾಗಿವೆ. ಉಳಿದ ದೋಷಗಳನ್ನೂ ತಿದ್ದಬೇಕು ಸೋಮರೆಂದಂತೆ.

   • ಧನ್ಯವಾದಗಳು, ಸೋಮಶೇಖರ್ ಮತ್ತು ನೀಲಕಂಠರಿಗೆ.
    ವಿಸಂಧಿ ದೋಷಗಳನ್ನು ಮರೆತಿದ್ದಕ್ಕೆ ಕ್ಶಮಿಸಿ. ಮೊದಲ ಸಾಲಿನಲ್ಲಿ ಎರಡಿತ್ತು. ಇನ್ನು ಯಾವುದೂ ಇಲ್ಲವೆಂದು ಭಾವಿಸಿದ್ದೇನೆ.
    ವಹ್ನಿಜ್ವಲಾ ವನ್ನು ಭೂಮದ್ದಿನಾ ಅಂತ ಬದಲಿಸಿದ್ದರಿಂದ ಇನ್ನೂ ಹೆಚ್ಚು ಸಮಂಜಸವಾಯ್ತೇನೋ ಅರ್ಥ (ಯಾವುದೊ ಬೆಂಕಿ ಜ್ವಾಲೆ ಅನ್ನುವ ಬದಲು).

    ಹಳಗನ್ನಡದಲ್ಲಿ ಈ ಸ್ಥಳಗಳಲ್ಲಿ ಒಂದು ಹೆಚ್ಚು ಅನುಸ್ವಾರ ಪ್ರಯೋಗ ಗಮನಿಸಿ, ಗುಂಡುಂಗಳ್ ಎಂದು ಉಪಯೋಗಿಸಬಹುದೆಂಬ ತಲೆಹರಟೆ (ಆ ಕಾಲಕ್ಕೆ ಗುಂಡುಗಳು ಈಗಿರುವಂತೆ ಇಲ್ಲದ್ದರಿಂದ ).

    ದಯವಿಟ್ಟು ಇದು ಸರಿಯಿದೆಯೇ ತಿಳಿಸಿ:

    ಕೊಲ್ವಾತಂ ಶರವೇಗಮಾಗರಿಗಳಂ ತುಪ್ಪಾಕಿಗುಂಡುಂಗಳಿಂ
    ಬೋಳ್ವೋದಂ ಯುವಸೈನಿಕಂ ಸಮರದಿಂ ಭೂಮದ್ದಿನಾಸ್ಫೋಟದಿಂ (landmine)
    ನಾಳ್ವೋಗಲ್ ಸಕುಟುಂಬಕಂ ನೊಗವೊರಲ್ ನಾಯಿಂದನಾಗಿದ್ದುನುಂ
    ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ

    • ಮನ್ನಿಸಬೇಕು, ತಲೆಹರಟೆಯ ವ್ಯಾಕರಣ ಸಲ್ಲದು 🙂
     ಭೂಮದ್ದು ಅರಿಸಮಾಸವಾದ್ದರಿಂದ ಸಲ್ಲದು. ಆಗಿದ್ದುನುಂ ಇದು ಯಾವ ಪ್ರಯೋಗ? ತುಪ್ಪಾಕಿಕಲ್ಗುಂಡಿನಿಂ ಎಂದೇನೋ ಮಾಡಬಹುದು. ನಾಳ್ವೋಗು ಅಂದರೇನು?

     • ಸಮಯಾವಾಭಾವದಿಂದ ನಿಮ್ಮ ತಿದ್ದುಗಳನ್ನು ಇನ್ನೂ ಅಳವಡಿಸಿಲ್ಲ. ಕ್ಶಮಿಸಿ.

      ನಾಳ್ + ಪೋಗಲ್ – ನಾಳ್ವೋಗಲ್ (ದಿನ ಕಳೆಯಲು)… ತಪ್ಪಾದರೆ ಕ್ಶಮಿಸಿ. ಒಂದೆರಡು ಈ ರೀತಿ ಸಂಧಿಯನ್ನು ಓದಿದ್ದೆ ಎಂದು ನೆನಪು. ಮೊದಲಿನಿಂದ ವ್ಯಾಕರಣ ಕಲಿಯುವ ಪ್ರಯತ್ನ ನಡಿಯುತ್ತಿದೆ. ಆದರೆ ಕೆಲಸದ ಏರುಪೇರುಗಳಿಂದ ಸರಿಯಾಗಿ ಮುಂದುವರೆದಿಲ್ಲ. ಕ್ಶಮಿಸಬೇಕು.

      ಅರಿಸಮಾಸಕ್ಕೆ ಪರ್ಯಾಯ ಹೊಳೆದಿಲ್ಲ.

      ಆಗಿದ್ದನುಂ ಎಂದು ಬರೆದಿದ್ದೆ. ಅದೂ ತಪ್ಪು ಪ್ರಯೋಗವೇ?

      (ಪದ್ಯ ಬರೆಯಬೇಕೆಂಬ ಆಸೆ ಇದೆ. ಕೃಷಿ ಮಾಡಲು ಆಗುತ್ತಿಲ್ಲ. ಇಲ್ಲಿ ಬರೆಯಲೋ ಬೇಡವೋ ಎಂಬ ದ್ವಂದ್ವ ಯಾವಾಗಲೂ ಕಾಡುತ್ತದೆ.)
      ಧನ್ಯವಾದಗಳು.

 3. ಪೋಲ್ವಂತಾದುದು ಮಸ್ತಕಂ ಮುಕುರಮಂ ಮೂವತ್ತರಾಯುಷ್ಯದೊಳ್
  ಚೆಲ್ವಂ ಮೈದಳೆದಿರ್ದನಂ ರುಗುಣಮೇ ಕಾಡಿರ್ಪೊಡಂ, ಪುತ್ರಿಯೊಳ್
  ಸಲ್ವಂತಾದೊಡದೆಂಬ ಭೀತಿಯಿನೆ ತಾಂ ಕಾಪಿಟ್ಟದಂ ಪೋಷಿಸಲ್
  ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ!

  (ಮೂವತ್ತನೇ ವಯಸ್ಸಿಗೇ ರೋಗಪೀಡಿತನಾಗಿ ಕೂದಲನ್ನು ಕಳೆದುಕೊಂಡ ಜವಾಬ್ದಾರಿಯುತ ತಂದೆಯು ತನ್ನ ಮಗಳ ಕೂದಲನ್ನು ಕಾಪಾಡಲೋಸುಗ ಈ ರೀತಿ ಮಾಡಿದ)

 4. ಯಾವುದೇ ವಸ್ತುವು ಬಾಹುಳ್ಯದಿಂದಿದ್ದರೆ, ಅದರ ಅರ್ಧದಷ್ಟು ಲುಪ್ತವಾದರೂ ಚಿಂತಿಲ್ಲ. ಉಳಿದ ಅರ್ಧವು ಸಾಕುಸಾಕಾಗುವಷ್ಟಿರುತ್ತದೆ. ಆದರೆ ಯಾವುದೇ ವಸ್ತುವು ಒಂದೇಒಂದು ಮಾತ್ರವಿದ್ದರೆ ಅದನ್ನು ಜತನದಿಂದ ರಕ್ಷಿಸಬೇಕು!

  ಬಿಲ್ವಸ್ಕಂಧಿ(tree)ಯೊಳಿದ್ದಿರಲ್ ದಲಗಳುಂ ಮೂರೆಂಬಿನಿಂ ಸಾಸಿರಂ
  (Fodder for a sheep herd)ಮೆಲ್ವಾಗೇನಜವೃಂತಕಂ, ಕಡಿದೊಡೇಂ ಕುಂಬಾರನಾಪಾಕಕಂ (firewood for a potter’s oven)|
  ಚೆಲ್ವಸ್ಕಂದಗುರು(ಶಿವ)ಪ್ರಸೀದಕಿಹುದೈ ಪೂಜಾರ್ಥಬಾಹುಳ್ಯದಿಂ
  ಆದರೆ…
  ಖಲ್ವಾಟಂ ತಲೆಗೂಂದಲಂ(the single strand that he possesses*) ಸವರುವಂ ತೈಲಾನುಲೇಪಂಗಳಿಂ||
  *He was christened Iqbal (ಇಕ್ ಬಾಲ್)!

 5. ಸಲ್ವಂ ಸಂತತ ಕೇಶಮುಂಡನಕವಂ ಕೈಕೂಲಿಕಾರಂಗಡಾ
  ಪೊಳ್ತುಂಪಾಗದಲಲ್ಲಕಲ್ಲೊಳು, ನಿಮಿತ್ತಂ ನಾಪಿತಂತಾನಲಾ
  ಖಲ್ವಾoಟಂ! ತಲೆಗೊಂದಲಂ ಸವರುವಂ ತೈಲಾನುಲೇಪಂಗಳಿಂ
  ಅಲ್ಲಾಟಂಗುಡುತಿರ್ಪ ಶಿರಕಂ ನುಣ್ಪೀವನೀತಂ ವಲಂ !!

  ಪೊಳ್ತುಂಪಾಗದಲೆ = ಬೇಸರಗೊಳ್ಳದೆ
  ಅಲ್ಲಕಲ್ಲೊಳ್ = ಸಂಭ್ರಮದಿಂದ
  ಅಲ್ಲಾಟಂಗುಡು = ತಲ್ಲಣಗೊಂಡ
  ನುಣ್ಪು = ಹಿತ

  (ಠoಡ ಠoಡ — ಕೂಲ್ ಕೂಲ್ – “ನವರತ್ನ” ಕೇಶತೈಲದ ಜಾಹಿರಾತಿನ ಕಲ್ಪನೆ !!)
  ಸಮೀಪ ಪ್ರಾಸಕ್ಕೆ ಕ್ಷಮೆಯಿದೆಯಲ್ವೇ ?!!

 6. ಗೆಲ್ವೆಂ ಚೆಲ್ವೆಯನೆಂದೆ ತಾಂ ಕುಸುಮದಿಂ ಭಕ್ಷ್ಯಂಗಳಿಂ ಸೇವಿಪಂ
  ನಲ್ವಾತೊಳ್ ಪೊರೆಯುತ್ತುಪೇಕ್ಷೆಯುಳಿವಂ ಕೈಂಕರ್ಯಮಂ ಗೆಯ್ಯುವಂ
  ಖಲ್ವಾಟಂ, ತಲೆಗೂಂದಲಂ ಸವರುತುಂ ತೈಲಾನುಲೇಪಂಗಳಿಂ
  ಪೋಲ್ವೆಂ ಮಾರನನೆಂದೆ ಪೇಳಲೊಳಿದಳ್ ಮತ್ತೊರ್ವಗಂ ಹಾ ವಿಧೀ

 7. ನಲಿದು ಕನಸಿನೊಳು ಖಲ್ವಾಟಂ
  ತಲೆಗೂಂದಲಂ ಸವರುವಂ |
  ತೈಲಾನು ಲೇಪಂಗಳಿಂ
  ದಂ
  ಬಾಲೆಯರ್ ನೇವರಿಸುವರ್ || 🙂

  ಮಾತ್ರಾಗಣ ಬಂಧದಲ್ಲಿ ಶಾರ್ದೂಲದ ಚರಣ:

  ಪಂಕ್ತಿ: ೧: ಪಂಚಮಾತ್ರಾಗಣಗಳು ಎರಡು + ಒಂದು ಚತುರ್ಮಾತ್ರಾಗಣ =೧೪ ಮಾತ್ರೆಗಳು
  ಪಂಕ್ತಿ: ೨: ಪಂಚಮಾತ್ರಾಗಣಗಳು ಎರಡು + ಒಂದು ಗುರು= ೧೨ ಮಾತ್ರೆಗಳು
  ಪಂಕ್ತಿ: ೩: ಪಂಚಮಾತ್ರಾಗಣಗಳು ಎರಡು + ಒಂದು ಚತುರ್ಮಾತ್ರಾಗಣ =೧೪ ಮಾತ್ರೆಗಳು
  ಪಂಕ್ತಿ: ೪ : ಪಂಚಮಾತ್ರಾಗಣಗಳು ಎರಡು + ಒಂದು ಗುರು =೧೨ ಮಾತ್ರೆಗಳು

 8. ಸಲ್ವಂತಿರ್ಪ ಸುಕೇಶವರ್ಧಿನಿಯೆನುತ್ತುಂ ವಿಕ್ರಯಂಗೈದಪಂ
  ನಲ್ವಾತಿಂ ಪೊಗಳಿರ್ಪುದಂ ನೆನೆಯುತುಂ ಬಹ್ವೌಷಧಾನೀಕದಿಂ
  ಚೆಲ್ವಂದಾಳ್ವೆನೆನುತ್ತೆ ಹರ್ಷಭರದಿಂದೆಂತೋ ದಿವಾಸ್ವಪ್ನದೊಳ್
  ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ

 9. ವಿನೋದವಾಗಿ !!

  ಚೆಲ್ವಾoಗಂ ಹರತಾಂ ಜಟಾಧರನಲಾ ಕೈಲಾಸವಾಸಂ ಭಲಾ
  ಖಲ್ವಾಟಂ ಗಡ ಲಿಂಗರೂಪಮವಗೈ ಪೂಜಾವಿಧಾನಂ ತಥಾ
  ಬಿಲ್ವಂ ಭಸ್ಮದೊಳರ್ಚಿಸುತೆ, ಮೇಣ್ ಪೂಜಾರಿಯುಂ ತಾನುವುಂ
  ಖಲ್ವಾಟಂ ! ತೆಲೆಗೊಂದಲಂ ಸವರುವಂ ತೈಲಾನುಲೇಪಗಳಿಂ !!

  “ಬಕ್ಕತಲೆ” ಅರ್ಚಕನಿಂದ “ಬೋಡುತಲೆ” ಶಿವಲಿಂಗಕ್ಕೆ ಅಭ್ಯಂಗನ !!

  • ಮೆಚ್ಚಿದ ಜಟಾಧರ!

  • ಹಹ್ಹಾ ಚೆನ್ನಾಗಿದೆ! ಚೆಲ್ವಂಗಂ. ಹರಂ ತಾಂ. ಜಟಾಧರ ಎಂದಂದು ಖಲ್ವಾಟ ಎಂದರೆ ಅದೆಂತು? 🙂 ಹರನದ್ರಿಜಾಭವನಲಾ ಎಂದೇನಾದರೂ ಮಾಡಿದರೆ ವ್ಯಾಕರಣ ಮತ್ತು ಅರ್ಥ ಇವೆರಡರ ದೋಷವೂ ಸರಿಯುತ್ತದೆ. ರೂಪನವಗಯ್.. ಅವಂಗಯ್. ತಥಾ ಎಂದೆಲ್ಲ ಬರುವಂತಿಲ್ಲ. ಕನ್ನಡದ್ದೇ ಆದ ವಲಂ ಮಗುಳ್ ಸಲಲ್ ಇತ್ಯಾದಿ ಇವೆಯಲ್ಲ..ಮೂರನೇ ಸಾಲು ಛಂದಸ್ಸುದಪ್ಪಿದೆ. ಬಿಲ್ವಂ ಭಸ್ಮಮುಮರ್ಚನಾವಿಧಿಗೆ ಮಾಡಬಹುದು. ಪೂಜಾರಿಯುಂ ತಾನಿರಲ್.

  • ನೀಲಕಂಠ,ಶ್ರೀನಾಥರಿಗೆ ಧನ್ಯವಾದಗಳು.
   ಕೈಲಾಸವಾಸಿ “ಜಟಾಧರ” ಹರನ ಸ್ಮರಣೆಯಲ್ಲಿ – (ಖಲ್ವಾಟ)ಶಿವಲಿಂಗಕ್ಕೆ, (ತಾನೂ ~ ತಾನುವುಂ)ಖಲ್ವಾಟ ಅರ್ಚಕನಿಂದ (ಪೂಜಾಸಮಯದಲ್ಲಿ) ಸಂದ ತೈಲಲೇಪನ – ಎಂಬ ಸ್ವಾರಸ್ಯವನ್ನು ಭರಿಸುವ ಪ್ರಯತ್ನವಾಗಿತ್ತು. ಪೂರ್ಣವಾಗಿ ಪದ್ಯದಲ್ಲಿ ತರಲಾಗಲಿಲ್ಲವೆನಿಸುತ್ತಿದೆ. ತಿದ್ದಿದ ಪದ್ಯ :

   ಚೆಲ್ವಂಗಂ ಹರನುಂ ಜಟಾಧರನಲಾ ಕೈಲಾಸವಾಸಂ ಭಲಾ
   ಖಲ್ವಾಟಂ ಗಡ ಲಿಂಗರೂಪಮವಗೈ ಪೂಜಾವಿಧಾನಂ ಸಲಲ್
   ಬಿಲ್ವಂ ಭಸ್ಮದೊಳರ್ಚನದೆ, ಮೇಣ್ ಪೂಜಾರಿಯುಂ ತಾನುವುಂ
   ಖಲ್ವಾಟಂ ! ತೆಲೆಗೊಂದಲಂ ಸವರುವಂ ತೈಲಾನುಲೇಪಗಳಿಂ !!

 10. The lengthy hair of females is traded, and fetches quite some money – whether harvested at Tirupati or from home-dirt (ಮನೆಕಸ)! A bald man is an employee in a firm that is engaged in the activity of converting such hair into wigs/ಚವರಿ. He processes it well.
  ಬಲ್ಪಿಂದಿರ್ಪುವು ವಿಕ್ರಯ-ಕ್ರಯಗಳುಂ ಸ್ತ್ರೀದೀರ್ಘಧಮ್ಮಿಲ್ಲ(ಜೆಡೆ)ದೊಳ್
  ಸಲ್ವಾಗಳ್ ತಿರುಭರ್ತನಾಲಯದೆ ಮೇಣ್ ಸಂವಾಸಮಾಲಿನ್ಯದೊಳ್|
  ಚೆಲ್ವಿಂದಾ ಕಚಮನ್ನು ನೇರ್ಪಿಡಿಯುವೀ ಚಾಣಾಕ್ಷರೊಳ್ವೊರ್ವನುಂ
  ಖಲ್ವಾಟಂ. ತಲೆಗೂಂದಲಂ(ಚವರಿ) ಸವರುವಂ ತೈಲಾನುಲೇಪಂಗಳಿಂ||

  • ಚವರಿ ಚೆನ್ನಾಗಿ ಸವರಿದ್ದೀರಿ !

   • ನನ್ನ ಪದ್ಯವು ನಿಮಗೆ ಅರ್ಥವಾಯಿತು ಎಂಬುದೇ ಧನ್ಯತೆ.

  • ಅಯ್ಯೋ ಪಾಪ 🙂
   …ಕ್ರಯಂಗಳುಂ ಆಗಬೇಕಾದ್ದರಿಂದ, …ರ್ಪುದು ವಿಕ್ರಯಕ್ರಯವಿಧಂ ಎಂದು ಸವರಬಹುದು. ಲಂಬಾಂತಸ್ತ್ರೀ ಅಂದರೇನು? ಪೂರ್ತಿ ಸಂಸ್ಕೃತವಾದರೆ ಶಿಥಿಲದ್ವಿತ್ವವೂ ಕೈಕೊಡುತ್ತಲ್ಲ..! ಕಚರಾಶಿಯಂ ಪಿಡಿಯುವೀ… ಹೊಸಗನ್ನಡ ತಪ್ಪಿಸಲು. ಚಾಣಾಕ್ಷರೊಳೊರ್ವ.. ಚಾಣಾಕ್ಷರಲ್ಲೊರ್ವ.

   • ಪಾದ ೧: ನೀವು ಸಿಂಗುಲರ್ (….ರ್ಪುದು….. ವಿಧಂ) ಸೂಚಿಸಿದ್ದೀರಿ. ನಾನು ಪ್ಲೂರಲ್ ಮಾಡಿದ್ದೇನೆ (….ರ್ಪುವು….. ಗಳಿಂ). ಎರಡೂ ಸಾಧು.
    ಪಾದ ೧: ಲಂಬಾಂತಸ್ತ್ರೀ’ಕೇಶ’. ಇಲ್ಲಿ ಅವಧಾರಣ ಕೇಶಕ್ಕೆ, ಸ್ತ್ರೀಗಲ್ಲ! ಲಂಬಾಂತ=ಉದ್ದನೆಯ. ಆದರೂ ನೀವು ಹೇಳಿದ ಶಿ.ದ್ವಿ. ದೋಷವಿದೆ. ಸರಿಪಡಿಸಿರುವೆ. ಧನ್ಯವಾದಗಳು.
    ಪಾದ ೩: ಅಲ್ಲಿ ’ನೇರ್ಪು’ ಎಂಬರ್ಥದ ಪದ ಬೇಕು, (ಕೂದಲಿಂದ ಚವರಿಯನ್ನು) ’ತಯಾರಿಸುವ’ ಎಂಬ ಅರ್ಥದಲ್ಲಿ.
    ಪಾದ ೩: ಚಾಣಾಕ್ಷರೊಳ್+ಒರ್ವನುಂ ಸಾಧುವಲ್ಲವೆ? ನಿಮ್ಮ ಸಲಹೆಯಲ್ಲಿನ ’ಚಾಣಾಕ್ಷರಲ್ಲಿ’ ಎಂಬುದರ ಪ್ರತ್ಯಯವು ಹೊಸಗನ್ನಡವಲ್ಲವೆ?

    • ಚಾಣಾಕ್ಷರೊಳೊರ್ವ ಆಗುತ್ತದೆ. ಒತ್ತಕ್ಷರ ಬರುವುದಿಲ್ಲ. ಅಲ್ಲಿ ಎಂಬ ಪ್ರತ್ಯಯ ಪಂಪನ ಪ್ರಯೋಗದಲ್ಲೂ ಇದೆ, ಸಾಧು ಎಂದು ಸರ್ ತಿಳಿಸಿದ್ದರು.
     ಕ್ರಯಂಗಳ್ ಎಂದು ಬಿಂದುಯುತವಾಗಿ ಬರುವುದು ಸಾಧು. ಅದಕ್ಕಾಗಿ ಸವರಿ ವಿಧ ಸೇರಿಸಿ ಏಕವಚನ ಮಾಡಿದ್ದೆ. ಬೇಕಿದ್ದರೆ ವಿಕ್ರಯಕ್ರಯಚಯಂ ಎಂದು ಸಮೂಹಾರ್ಥ ಬಳಸಬಹುದು.

     • ಚಾಣಾಕ್ಷರೊಳೊರ್ವ ಎಂಬಲ್ಲಿ ರೊ ಗುರುವಾಗದು.

 11. ಕೂಲ್ ವೇಣೀಯೆನುವೊಂದು ತೈಲಮದರಿಂ ಬೋಳ್ಮಂಡೆಕಾಡಾಗುತುಂ
  ನೂಲ್ವೋಲಾಗುತುಮೊಮ್ಮೆಗೇ ಬೆಳೆವುದೈ ನಾಂಪೇಳ್ವುದಂ ನಂಬುನೀಂ
  ಚೆಲ್ವಾಗಲ್ ತಲೆ ನಾಕುಕೂದಲದುವೇ ನೂರಾಗುಗುಂಬೆನ್ನುತುಂ
  ಖಲ್ವಾಟಂ ತಲೆಗೂದಲಂ ಸವರುವಂ ತೈಲಾನುಲೇಪಂಗಳಿಂ

  ದಯವಿಟ್ಟು ತಪ್ಪುಗಳನ್ನು ತಿಳಿಸಿ,ತಿದ್ದಿ.‌.ಬೋಳುತಲೆಯವನೊಬ್ಬ ತನ್ನ ನಾಲ್ಕು ಕೂದಲಿಗೇ cool ವೇಣಿ ಎನ್ನುವ ತೈಲ ಹಚ್ಚಿಕೊಂಡು ಹೀಗೆಲ್ಲ ಹೇಳಿದ ಅಂದುಕೊಳ್ಳಬಹುದು..ಬೋಳುತಲೆಯ ಕ್ಷೌರಿಕ(ಪದ್ಯದಲ್ಲಿ ಧ್ವನಿತವಾಗದಿದ್ದರೂ,) ಗಿರಾಕಿಯೊಬ್ಬನಿಗೆ ಹೀಗೆ ಹೇಳಿದ ಎಂದೂ ತಿಳಿಯಬಹುದು

 12. ಸೋಲ್ವಾತಂ ಮನದೊಳ್ ವಿಷಾದಮನೆ ಪೊಂದಿರ್ಪಂಥ ಸಂದರ್ಭದೊಳ್,
  ಗೆಲ್ವಂ ಭಾವಿಸಿ ತೋಷಮಂ ಪಡೆವವೊಲ್ ಸಂಕಲ್ಪಿತಾರ್ಥಂಗಳಿಂ ,|
  ಚೆಲ್ವಿಂದಿಲ್ಲದೆ ನೊಂದಿರಲ್, ಭ್ರಮಿಸುತುಂ ಕೇಶಪ್ರಪೂರ್ಣಾತ್ಮನಂ,
  ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ ||

  • ಆಹಾ! ಸುಂದರವಾದ ಪೂರಣ 🙂

   • ಧನ್ಯವಾದಗಳು ನೀಲಕಂಠರೆ. ನಿಮ್ಮ ಪದ್ಯ, ಪ್ರತಿಕ್ರಿಯೆಗಳಿಲ್ಲದೆ ಪದ್ಯಪಾನ ಸೊರಗಿತ್ತು. ಕ್ಷೇಮವಷ್ಟೆ ? ನೀವು, ಕಾಂಚನಾ ಹಾಗೂ ಪ್ರಸಾದರು ಪದ್ಯಪಾನನಿಲಯಕಲಾವಿದರೆಂದೇ ಭಾವಿಸಿದ್ದೆ . 🙂

    • ನೀವು ಹೇಳಿದ ಪದ್ಯಪಾನನಿಲಯವು ಯಾವುದೇ ಕಟ್ಟಡದಲ್ಲಿ ಇಲ್ಲ. ಅದು apparition ಅಷ್ಟೆ; ವ್ಯೋಮನಿವೇಶನದಲ್ಲಿ ತೇಲಾಡಿಕೊಂಡಿರುತ್ತದೆ. ನಮ್ಮನ್ನು ತ್ರಿಶಂಕುಗಳು ಅಥವಾ ಪ್ರೇತಗಳು ಎಂದು ಪರೋಕ್ಷವಾಗಿ… ಅಲ್ಲ ಅಲ್ಲ, ನೇರವಾಗಿಯೇ ಹೇಳಿದಂತಾಯಿತು! ಯಾರ್ಯಾರು? ನಾನು, ನೀಲಕಂಠ, ಕಾಂಚನಾ! ರಾಮರಾಮಾ!

     • ನನ್ನ ಪಟ್ಟಿಯಲ್ಲಿ ರಾಮಚಂದ್ರರು ಇಲ್ಲ! ನೀವು, ಕಾಂಚನಾ ಹಾಗೂ ನೀಲಕಂಠರು Padyapana.comನ staff artists ಎಂದು ಭಾವಿಸಿದ್ದೆನೆಂದು ನಾನು ಸ್ತುತಿಸಿರುವುದು !! 🙂

    • 🙂 ಏಕೋ ದೂರವಾಗಿದ್ದೆ. ಬಂದದ್ದಾಯಿತು! ಹೌದು ನಾನಂತೂ ನಿಲಯಕಲಾವಿ. ನಿಲಯದಲ್ಲಿ ಕೂತು ಬರೆಯುವರು. ವೇದಿಕೆಯ ಮೇಲೆಲ್ಲ ಆಗದು :))

 13. ನಲ್ವಿಂ ಕಾಸನು ಕೂಡುತುಂ,ಬೆಳೆಸುತುಂ ನಿಶ್ಚಿಂತನಾಗಿರ್ಪೊಡಂ
  ಖಲ್ವಾಟಂ! ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ
  ಚೆಲ್ವಂ ವರ್ಧಿಸುತುಂ ಮಗಂ ವ್ಯಯಿಸುತಾಲಂಕಾರದುತ್ಪನ್ನಕಂ
  ಚೆಲ್ವಂ ನೀರಿನವೊಲ್ ಪಣಂ ಸಹಜದಿಂ ಮಾರನ್ನೆ ತಾಂ ಮೀರಿಸಲ್!!

  (ಬೋಳಾದ ತಲೆಯನ್ನೂ ಗಮನಿಸದೇ, ಕಾಸನ್ನು ಕೂಡುತ್ತಿರುವ(& ಬೆಳೆಸುತ್ತಿರುವ) ತಂದೆಯ ವಿರುಧ್ಧವಾಗಿ ಮಗನು ವಿವಿಧ ಅಲಂಕಾರಿಕ ಸಾಮಗ್ರಿಗಳಿಗೆ ಕೂಡಿಟ್ಟದ್ದನ್ನು ವ್ಯಯಿಸುತ್ತಾ ಇದ್ದಾನೆ :-))
  ಚೆಲ್ವಂ=ಚೆಲುವ,ಚೆಲ್ಲುವ(ಗೊತ್ತಿಲ್ಲ ,೨ ಅರ್ಥದಲ್ಲಿ ಬಳಸಬಹುದೋ ಎಂದು)

  • Hahhaa.. chennagide! ಮೀರ್ವನ್ನೆಗಂ ಮಾರನಂ. ಮಾರನ್ನೆ ಸರಿಯಾಗದು.

 14. ನಾನು ಗೋ‍ಷ್ಠಿಯಲ್ಲಿ ಹೇಳಿದ ಪದ್ಯ (ಪೂರ್ಣ ಪದ್ಯ ಸರಿಯಾಗಿ ನೆನಪಿನಲ್ಲಿಲ್ಲವಾದ ಕಾರಣ ಅಲ್ಪ ಸ್ವಲ್ಪ ಬದಲಾಯಿಸಿ ಹಾಕುತ್ತಿರುವೆ)-
  ಸೋಲ್ವರ್ಗಾವಗಮೀವುದಲ್ತೆ ಪೊಸತುತ್ಸಾಹಂಗಳಂ ಬಿನ್ನಣಂ
  ದಲ್! ವಿಶ್ವಾಸದೆ ಪೋದನೊರ್ವನೊಲವಿಂದಂ ವೈದ್ಯರಂ ಕಂಡಿರಲ್
  ಚೆಲ್ವಿಂದಂ ಮೊಳೆತಿರ್ದುವಲ್ತೆ ಕಸಿಯಿಂ ಸಂತೋಷದಿಂದಾಗಳೇ
  ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ||

  • ಏನು? ನಿನಗೀಗಾಗಲೇ ಮೊಳಕೆಯೊಡೆಯುತ್ತಿದೆ ಕೂದಲು ಎಂದು ವೈದ್ಯ ಹೇಳಿದನೇ?

   • No. He is talking about hair transplantation. ಕಸಿ means grafting. But it can be taken to mean transplantation.

 15. ಚೆಲ್ವoಗಂ ಬಲುವೇ ಕಲಾವಿದ ದಿಟಂ ತೆಳ್ವಾಳವಂ ಕೋಮಳಂ
  ಸಲ್ವಂ ನಾಟಕದೊಳ್ ಸದಾ ಹಲಬಗೆಯ ಸ್ತ್ರೀವೇಷ ಪಾತ್ರಂಗಳೊಳ್
  ನಲ್ವಚ್ಚoತುಡೆ ಕೇಶಮಂಡನಕೆನಿಲ್ವಾಗಲ್ ಗಡಾ, ಮೇಣವಂ
  ಖಲ್ವಾಟo ! ತಲೆಗೊಂದಲಂ ಸವರುವಂ ತೈಲಾನುಲೇಪಂಗಳಿಂ ।।

  *ಕೇಶಮಂಡನ = ಕೇಶಾಲಂಕಾರ
  ಸ್ತ್ರೀ ವೇಷದಲ್ಲಿ ಖಲ್ವಾಟ !! (ಪ್ರಸಾದ್ ಸರ್ ಬಳಸಿರುವ “ಚೌರಿ”ಯಿಂದ ಪ್ರೇರೇಪಿತ !!)

 16. ಬಲು ದಿನಗಳ ಬಳಿಕ ಇಲ್ಲಿ ಬರೆಯುತ್ತಿದ್ದೇನೆ

  ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ |
  ನಲ್ವಾತಂ ಬೆಳಸುತ್ತ ನೀರನೆರೆವರ್ ರಂಭಾದಿಯರ್ ರಾಚಿ ತಾಂ |
  ಚೆಲ್ವಾದೀಪರಿಗೂರೆ ಚಾಂಗೆನುತಿರಲ್ ಚೆಂಬಿಂ ಜಲಂ ಚೆಲ್ಲಿದಳ್ |
  ಪಲ್ವಾತಿಂ ಜರೆಯುತ್ತ ಪತ್ನಿ ಕನಸಂ ಪಾಳ್ಗೈದಳಾ ಅಕ್ಕಟಾ ||

  • ನಿಮಗೆ ’ದಿನ’ಕ್ಕೂ ’ವರ್ಷ’ಕ್ಕೂ ವ್ಯತ್ಯಾಸ ತಿಳಿಯದೆ 😉

   ಸ್ವಲ್ಪ ಕನ್ಫ್ಯೂಶನ್ ಇದೆ: ರಂಭಾದಿಯರ್ ನೀರನೆರೆವಾಗ ಖಲ್ವಾಟನು ತನ್ನ ತಲೆಗೂದಲನ್ನು ಸವರಿಕೊಂಡನೋ ಅಥವಾ ಅವನು ರಂಭಾದಿಯರ ತಲೆಗೂದಲನ್ನು ಸವರಿದನೋ?

  • ನಮಸ್ತೇ ಶ್ರೀಕಾಂತರೆ, ನೀವು ಈ ಬಾರಿಯ ಪದ್ಯಸಪ್ತಾಹದಲ್ಲಿ ಭಾಗವಹಿಸಿದಿರಿ, ಬಹಳ ಸಂತೋಷ
   ತಾಣದಲ್ಲಿ ಹೀಗೆ ಭಾಗವಹಿಸುವಿರೆಂದು ಭಾವಿಸುತ್ತೇನೆ 🙂

 17. ಚೆಲ್ವಾದತ್ತು ವಿಲಾಸದೋರೆನಡೆಯಿಂದಾಜಾನುಕೇಶಂ ಸೊಗಂ
  ನಲ್ವಿಂ ನೋಟವ ನೆಟ್ಟು ಮೈಯ ಮರೆವಂ ಪ್ರೇಮಾನುರಕ್ತಂ ವರಂ
  ಸೋಲ್ವಂ ತಾನನುರಾಗದಿಂ ಪದಪಿನಿಂ ಸಂತೈಸುತಾ ರಾಜ್ಞಿಯಂ
  ಖಲ್ವಾಟ೦ ತಲೆಗೂ೦ದಲಂ ಸವರಿಪ೦ ತೈಲಾನುಲೇಪ೦ಗಳಿ೦

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)