Mar 202017
 

ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ

ದಿವಾಂಧಂ = ಗೂಬೆ

ಚಿರಾಯು = ಕಾಗೆ

  23 Responses to “ಪದ್ಯಸಪ್ತಾಹ ೨೪೭: ಸಮಸ್ಯಾಪೂರಣ”

 1. ಕಳೆದ ವಾರದ ಗೋಷ್ಠಿಯಲ್ಲಿ ಹೇಳಿದ ಪದ್ಯ-
  ನವೀನರ್ ಕವೀನರ್ ಪಗಲ್ಗಾಣರೊಳ್ಪಂ
  ಸವರ್ ಪೊನ್ನಿಗೆಂದೇ ಬಲಂಗಾಣರೇಗಳ್
  ನವಸ್ನೇಹಮಂ ಪೊಂದಲಿಂತಾದುದಿನ್ನೇಂ
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ||
  (ನವೀನರಾದ- ಕಾವ್ಯಸತ್ತ್ವವಿಲ್ಲದೇ ಬರಿದೇ ಗಲಾಟೆ ಮಾಡುವ ಕವೀಂದ್ರರು ಹಗಲಿನಲ್ಲಿ ಒಳ್ಳೆಯದನ್ನು ಕಾಣದವರು, ಅವರಿಗೆ ಸಮಾನರಾದವರು ಹೊನ್ನಿನ ಆಸೆಯಿಂದ ಬಲವನ್ನು ಕಾಣದವರು. ಎಡಪಂಥೀಯರು. ಅವರಿಬ್ಬರಲ್ಲಿಯೂ ಸ್ನೇಹವುಂಟಾದಾಗ ಹೀಗಾಯಿತಲ್ಲದೇ ಇನ್ನೇನು! ಗೂಬೆಯೂ ಕಾಗೆಗಳ ವಿರೋಧವನ್ನು ತ್ಯಜಿಸಿತು. )

 2. ಯುವಗ್ರೀವಮಂ ದ್ರೋಣಪುತ್ರಂ ಕೊಳಲ್ಕಾ
  ಭವಶ್ರೀವತಿ ದ್ರೌಪದೀ ದುಃಖಮಾಗಳ್ /
  ಶಿವಾಸ್ಯಸ್ಥಿತಾಗ್ನಿ ಪ್ರಕೋಪಕ್ಕೆ ಪೋಗಲ್
  ದಿವಾನ್ಧಮ್ ಚಿರಾಯುರ್ವಿರೋಧಂ ತ್ಯಜಿಪ್ಪಂ //

  ಅಶ್ವತ್ಥಾಮ ಗೂಬೆಗಳಿಂದಲೇ ಪ್ರೇರಿತನಾಗಿ ಉಪಪಾಂಡವರನ್ನು ಹತ್ಯೆಗೈದದ್ದು ಎಂಬುದು ಕಥೆ. ಆತ ಹಾಗೆ ಮಾಡಿದಾಗ ದ್ರೌಪದಿಯ ದುಃಖದ ಅಗ್ನಿಯ ತೀವ್ರತೆಯನ್ನು ಕಂಡು ಗೂಬೆ ಮನನೊಂದು…

 3. ಅದು ’ವಿರೋಧಮಂ’ ಎಂದಾಗಬೇಕಲ್ಲವೆ?

 4. ಅವೇಧ್ಯಂ ನಿಶಾಕಾಲದೊಳ್ ತಾನಿರುತ್ತುಂ
  ದಿವಾರ್ಕಂ ಪ್ರಕಾಶಿಪ್ಪ ಕಾಲಕ್ಕಮೇಕೋ|
  ಪ್ರವಾಸಂ ವನಾಂತರ್ಯದೊಳ್ ಗೈಯುಗೆಂದುಂ
  ದಿವಾಂಧಂ ಚಿರಾಯುರ್ವಿರೋಧಂ(ಧಮಂ) ತ್ಯಜಿಪ್ಪಂ||

 5. ಪೂರಣವನ್ನು ಶಬ್ದಚ್ಚಲವಾಗಿಸಬೇಕೆಂಬ ಜಿದ್ದಿನಿಂದ ಮಾಡಿದ್ದು. For this I had to adapt the samasyApAda(3rd here) to ಶಿಖರಿಣೀ!
  ಕಿಕೀದಿವ=Jay, a bird of the crow family. A certain Jay has lost its eyes in an accident. The common crow being its cousin, there is no enmity between it and the crows, wherefore it lives under the protection of the latter.
  ಸವೈಕಲ್ಯಂ ತಾನೀ ಖಗಮಹುದುಮಾಘಾತವಶದಿಂ
  ಸುವೇಗಂ ಹಾರಾಟಂ ತಗದುಮಿದಕೀಗಿಂತಿರೆ ಕಿಕೀ-
  ದಿವಾಂಧಂ(A blind Jay) ಕಾಣೂಕ(Crow)ಪ್ರತಿಹತಿಯನಾಶಿಪ್ಪುದಹುದೇಂ?
  ವಿವಾದಂ ತಾನಿಲ್ಲಂ (Crow)ಕರಟಕಿದು ಸಾಜಾತ್ಯಮಹುದೈ||

 6. ದಿವೋದೀಪಪುತ್ರಂಗೆ ತಾನಾರೆನುತ್ತುಂ
  ಸುವೇದ್ಯತ್ವಮಿರ್ದುಂ ಖಳರ್ ಕೌರವರ್ಗಂ
  ನವಂ ಸಖ್ಯಮಿತ್ತಂ ಪಗಲ್ಗಂಧನಾದಂ
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ

  ಸೂರ್ಯಪುತ್ರ ಕರ್ಣ ತಾನಾರೆಂದು ತಿಳಿದೂ ವಿರೋಧಿಸಬೇಕಾದವರ ಜೊತೆ ಖಳರಾದ ಕೌರವರ ಸ್ನೇಹ ಮಾಡಿ ಹಗಲುಗುರುಡನಾಗಿ, ಗೂಬೆ ಕಾಗೆಯ ವಿರೋಧವನ್ನು ಬಿಟ್ಟಂತಾಯಿತು.

 7. ಅವಳ್ಕಾಡುಗಪ್ಪಿರ್ಪ ಕನ್ಯಾ ಮಣೀಯಂ
  ತ್ರಿವಾರಂ ಸದಾ ನಿದ್ರೆಗೈವಾತ ಮಂಕಂ
  ಸುವರ್ಣಾವಕಾಶಂ ವಿವಾಹಂಗೊಳಲ್ಕಾo
  ದಿವಾoಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ !!

  ಕಪ್ಪು ಕನ್ಯೆಯ ಒಪ್ಪಿದ ಮಂಕು ವರ – ವಿವಾಹದಲ್ಲಿ ಮುಗಿದ ಪ್ರತಿರೋಧ (ಕಾಗೆ ಗೂಬೆ ಮದುವೆ !!)

 8. ನಾಟಕದಲ್ಲಿ ಕಾಗೆ,ಗೂಬೆಗಳ ವೇಷ ತೊಟ್ಟ ನಟರು ನಾಟಕಾಂತ್ಯದಲ್ಲಿ ವೇಷ ಕಳಚುತ್ತಾ ದ್ವೇಷ ಬಿಡುತ್ತಾರೆಂಬ ಕಲ್ಪನೆ.

  ನವೀನರ್ ನಟರ್ಗಳ್ ಕಥಾಸಾರಮೊಂದಂ
  ಯುವರ್ ಸೇರುತುಂ ನಾಟಕಂಗೈವರೈ ಕೇಳ್
  ವಿವೇಶಂಗೊಳುತ್ತುಂ, ಬರಲ್ಕಾಕಥಾಂತ್ಯಂ
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ

 9. ವಿವಾದಂ ಸಲುತ್ತುಂ, ನರರ್ ಕೂಡುವಂದಂ-
  ನಿವಾರಿಪ್ಪೊಡಂ ವೈರಿಯಂ,ಬಿಟ್ಟು ವೈರಂ!
  ರವಂಗೈದು ಕಾಡಲ್ಕೆ ದುಷ್ಟರ್ ಕೆಲಕ್ಕಂ,
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ

  (ಪರಕೀಯರನ್ನು ಎದುರಿಸುವಾಗ ,ತಮ್ಮ ವೈರವನ್ನೂ ಮರೆತು ಜನರೊಂದಾಗುವಂತೇ, ದುಷ್ಟರು ಬಂದಾಗ(ಮರದಲ್ಲಿ) ಗೂಬೆ ,ಕಾಗೆಗಳೊಂದಾಗುತ್ತವೆ)

 10. ಹೀಗೊಂದು ಆಂಗ್ಲಭಾಷೆಯ ಅಕ್ಷರಗಳಲ್ಲಿ CO- existence ಪದ್ಯ:

  ಕವಂ ಕಾಗ ಕ್ರೋವಾಗೆ ಸೀಯಿಂದೆ ತಾಂ ಮೇಣ್
  ಸವಂ ಗೂಬೆ ಔಲಾದುದೋಯಿಂದಲಿಂಗ್ರೇ-
  ಜಿ ವರ್ಣಂಗಳೊಳ್ “ಕೋ”ಮದೌ ಸಾಮರಸ್ಯo
  ದಿವಾoಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ !!

  ಕವ = ಕ್ರಮ , ಸವ = ಜೊತೆ , ಇಂಗ್ರೇಜಿ = ಆಂಗ್ಲಭಾಷೆ
  (“C”=ಸೀ for ಕ್ರೋ / “O”=ಓ for ಔಲ್ / “CO”=ಕೋ for Together)

 11. ಸುವಾಸಂಗಳಿಂ ನಿದ್ರೆಯಂ ಭಂಜಿಸಿರ್ಪಾ
  ಸವಿಸ್ತೋಮ ಭಕ್ಷಂಗಳಂ ಪೊಂದಲೆಂದುಂ
  ಕವಿಸ್ತೋತ್ರನೈಪುಣ್ಯದಿಂ ಕೀರ್ತಿಸುತ್ತುಂ
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ!

  • Fine. ಕಾಗೆಯು ಹೇಗೂ ಹಂಚಿಕೊಂಡು ತಿನ್ನುತ್ತದೆ. ತನಗೂ ಪಾಲನ್ನು ಕೇಳುತ್ತಿದೆ ಗೂಬೆ!

  • ಸವಿಸ್ತೋಮ ಅರಿಸಮಾಸ 🙂

 12. ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ
  ಸವಿಗ್ರಾಸಮನ್ನುಂಬ ವಿಶ್ವಾಸದಿಂದಂ!
  ಶಿವಾ! ವಾಯಸಂ ತನ್ನವರ್ಗೆಂದೆ ಕೂಳಂ
  ದಿವಂರಾತ್ರಿ ಕಾಯ್ದಿರ್ಪುದಂ ಕಂಡರೆಂತುಂ!!

  (ಕಾಗೆಯು ತನ್ನವರಿಗಾಗೇ ಕೂಳನ್ನು ಕಾಪಿಡುವದನ್ನ ಕಂಡಿದ್ದರೆ ಪ್ರಯೋಜನವೇನು! ತನಗೂ ಕೊಂಚ ಸಿಗಬಹುದೆಂಬ (ಹುಂಬು)ವಿಶ್ವಾಸದಿಂದ ವಿರೋಧವನ್ನು ತ್ಯಜಿಸುತ್ತದೆ)(ಪಕ್ಷಾಂತರಿಗಳ ಸ್ಥಿತಿ)

 13. “ಇವನ್ ಕರ್ಪಿದುಂ, ಕಾಂತಿಯುಕ್ತಂ,ವಿಶೇಷಂ!
  ಶಿವಪ್ರೇಷಿತಂ,ಪೊಂದಲೆನ್ನುತ್ತೆ ಬಾಳಂ”
  ನವಾಯತ್ತಚೈತನ್ಯದಿಂ ಬೀಗುತುಂ ಹಾ
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ!

  (ಕತ್ತಲೆಯೇ ಗೂಬೆಗೆ ವಿಶೇಷಮಲ್ತೇ?? ಅದಕ್ಕೆ ಕಾಗೆಯ ಕಪ್ಪಿನಿಂದ ತೋಷಗೊಂಡು …..)

 14. ಇದು ಸಮಸ್ಯಾಪೂರಣವಲ್ಲ. ಕಾಗೆ-ಗೂಬೆಗಳ ನಡುವಿನ ವ್ಯತ್ಯಾಸದ ಒಂದು ಮುಖ. ಸತ್ತವರು ಪುಣ್ಯವಂತರು, ಅಬ್ದೀಕದಂದು ಕಾಕರೂಪದಲ್ಲಿ ಸ್ವಗೃಹಕ್ಕೆ ಬಂದು ಪೂಜೆಗೊಳ್ಳುತ್ತಾರೆ. ಬದುಕಿರುವವರಾದರೋ (ಇನ್ನೂ ’ಶಿವಾ’ ಎನ್ನದಿರುವವರು), ಆಗಾಗ ವಿನಾಕಾರಣ ’ಏ ಗೂಬೆ!’ ಎಂದು ಬೈಸಿಕೊಳ್ಳುತ್ತಾರೆ!
  (Hell)ಅವೀಚಿ-(Heaven)ದ್ಯುಲೋಕಕ್ಕಮೈದಿರ್ಪರೆಲ್ಲರ್
  ನಿವಾಸಕ್ಕಮಬ್ದೀಕದಂದೈದೆ ಪೂಜ್ಯರ್|
  ’ಶಿವಾ’ ಎನ್ನದಿರ್ಪಾತನಂ ಬೈಯುವರ್ ಕೇಳ್
  ’ದಿವಾಂಧಂ’ ಗಡೆಂದುಂ ವಿನಾಕಾರಣಂ ಧಿಕ್||

 15. ವಿವಾದಾಂತ್ಯದೊಳ್ ತಾಂ ವಿಷಾದಂಗೊಳುತ್ತುಂ
  ಸುವೇದ್ಯಂ, ಮದೋನ್ಮತ್ತ ಭೀಮಂ, ಸಖೇದಂ
  ಸುವೀರಂ ಸಮೀರಾತ್ಮಜಂ, ಭ್ರಾತೃಭಕ್ತಂ
  ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ

  ಮಹಾಭಾರತದಲ್ಲಿ ಬರುವ ಭೀಮಾಂಜನೇಯರ ಕಥೆಯನ್ನಾಧಾರಿಸಿ ಬರೆಯಲು ಯತ್ನಿಸಿದ್ದೇನೆ..ಮದೋನ್ಮತ್ತನಾದ ಭೀಮನು ಹಗಲುಗುರುಡನಾಗಿ(ಮದದಿಂದ) ಚಿರಾಯುವಾದ ಅಣ್ಣ ಆಂಜನೇಯನೆಂಬುದನ್ನು ತಿಳಿಯದೆ ಅಹಂಕಾರ ತೋರಿಸಿ ಕೊನೆಗೆ ಅಹಂಕಾರವನ್ನೂ,ವಿರೋಧವನ್ನೂ ತ್ಯಜಿಸಿದ(ಕಥೆ ಹೇಳುವಾಗ ತ್ಯಜಿಸುತ್ತಾನೆ ಎಂದೂ ಹೇಳಬಹುದಲ್ಲವೆ?)

  • ಪದ್ಯದಲ್ಲಿ ಅರ್ಥ ಸ್ಪಷ್ಟವಾಗಿ ಬಂದಿಲ್ಲ. ಅಲ್ಲದೆ ಭೀಮನಿಗೆ ಹನುಮಂತನ ಗುರುತು ಇರಲಿಲ್ಲವಾದ್ದರಿಂದ ದಿವಾಂಧ ಎನ್ನುವುದು ಸೂಕ್ತವಾಗದು.

   • ಧನ್ಯವಾದಗಳು _/\_. ದಿವಾಂಧನೆಂದದ್ದು ಅಹಂಕಾರದಿಂದಾಗಿ ಹಗಲಲ್ಲೂ ಮೆರೆದಾಡಿದ್ದಕ್ಕೆ.. ಪದ್ಯ ಬರೆದಾಗಲೇ ಬೇರೆಯವರಿಗೆ ಅರ್ಥವಾಗಲಿಕ್ಕಿಲ್ಲವೆಂಬ ಸಂಶಯವಿತ್ತು.. ಭುಜಂಗಪ್ರಯಾತದ ಗತಿಗೆ ಹೊಂದಿಕೊಂಡ ಖುಶಿಯಲ್ಲಿ ಪೋಸ್ಟ್ ಮಾಡಿಬಿಟ್ಟೆ 🙁

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)