Mar 212017
 

ದಿನಾಂಕ- ೧೬-೦೨-೨೦೧೪ ಭಾನುವಾರ.
ಆಯೋಜನೆ- ಪದ್ಯಪಾನ
ಸ್ಥಳ- ಮಂಗಳಮಂಟಪ ಎನ್ ಎಂ ಕೆ ಆರ್ ವಿ ಕಾಲೇಜು, ಜಯನಗರ ಬೆಂಗಳೂರು.

*ಆರಂಭದಲ್ಲಿ ಅವಧಾನಿಗಳು ಅವರ ತಾಯಿಯನ್ನು ನೆನೆಸಿಕೊಂಡು ಆಶುವಾಗಿ ಹೇಳಿದ  ಪದ್ಯಗಳು-

ಕಲೆಯಂ ಕಲಿಪುದೆ! ಜೀವನ-
ಕಲೆಯನೆ ನೀಂ ಕಲಿಸಿದಾಕೆ ನಡೆಯಿಂ ನುಡಿಯಿಂ
ಕಲೆ ಮಾಯ್ವುದೆ ಮನ್ಮನದೊಳ್
ಕಲೆಯಲ್ಕನುದಿನದನಂತಸಂಸ್ಮೃತಿ ನಿನ್ನಾ ||

ಧಾರೆಯನೆರೆದೌ ಜೀವನ-
ಧಾರೆಯನೇ ಕ್ಷೀರಧಾರೆಯಿಂ ಮೊದಲಾಗಳ್
ಧಾರಣಮಿತ್ತೌ ಜೀವನ
ಧಾರಣಮೈ ಧೈರ್ಯಧನ್ಯೆ ತಾಯೆ ಅನನ್ಯೇ||

ಇಂದಿನವರೆಗಂ ಪದ್ಯಮ-
ನೊಂದನುಮಂ ನುಡಿಯಲಿಲ್ಲ ನಿನ್ನಯ ಮೇಲಾಂ
ನೊಂದಪೆಯೇಂ ತಾಯೇ ಆ-
ನಂದಾತ್ಮಮನೆಂತು ನುಡಿವುದದ್ವೈತಿ ಗಡಾಂ||

ಮೃಗಮೇಂ ನಗಮೇಂ ನೀಂ ಬರಿ
ಜಗಮೇಂ ಬಡ ದೇವರೇಂ ಕವಿತೆಗೆಟುಕಲ್ ಪೋ
ಬಗೆಯೇ ಬಿಚ್ಚಳಿಸುವ ಸೊಗ-
ದೊಗೆಯೇ ಸೋಲ್ತಸಿದು ಸುಯ್ವ ಸತ್ತ್ವಮಲಾ ತಾಯ್ ||

मातर्मदीयकवितावनितावसन्त-
स्फारॆ वसन्ततिलकोज्वलवृत्तसारॆ।
मत्कावधानकसहस्रकमश्रुजातं
त्वत्कावधानविभवार्चनवारिजातम् ॥

*ಸರಸ್ವತಿಯ ಸ್ತುತಿ, ಅವಧಾನಕಲೆಯ ಪ್ರಶಂಸೆ, ಆಯೋಜಕರಿಗೆ ಅಭಿವಂದನೆಯನ್ನು ಹೇಳುವ ಪದ್ಯಗಳು-

ಅಕ್ಷಯ್ಯಾರ್ದ್ರತೆ ಮೀರಲೆನ್ನ ರಸನಾಸ್ಥಾಲ್ಯಂತದೊಳ್ ಚೆಲ್ಲಿದೀ
ಭಿಕ್ಷಾತಂಡುಲಮುಷ್ಟಿಯಲ್ತೆ ಜನನೀ ನಾಲ್ಕಕ್ಕರಂ ನಿನ್ನದೀ
ಪ್ರೇಕ್ಷಾಸಾಕ್ಷಿಣಿ ಮೇಣಿದರ್ಕೆನಿತೊ ಲೋಕಪ್ರೀತಿ ವಿಖ್ಯಾತಿಯೋ
ದಾಕ್ಷಿಣ್ಯರ್ಥಿಯದೆಂತು ವಂದಿಪುದೊ ಪೇಳ್ ನಿತ್ಯಾಧಮರ್ಣಂ ಗಡಾಂ ||

ಅವಧಾನದ್ರುಮದಾಲವಾಲವಲಯಂ ಸಭ್ಯಾಂತರಾಲಂ ರಸ-
ಪ್ರವಣಂ ಸಲ್ವುದು ಕಂಟಕಾವರಣಮೀ ಪ್ರಷ್ಟೃಪ್ರಪಂಚಂ ಗೆಲಲ್
ಶಿವಸಂಸ್ಫೂರ್ತಿಕರಂ ಕವಿತ್ವಸುಮನೋರಕ್ಷಾವ್ರತಿಷ್ಠಂ ಸಲಲ್
ತವೆ ನೈರ್ಭರ್ಯದಿನೋತು ಪಾಡುವೆನಿದೋ ನಾಂ ಪಕ್ಕಿವೊಲ್ ಸರ್ವಥಾ ||

ಪದ್ಯಪಾನದವಯಸ್ಯವೃಂದಕಿಂ-
ದುದ್ಯತಾಂಸನಭಿವಂದಿಪೆಂ ಹೃದಾ-
ವೇದ್ಯಗೌರವಮನೆಂತು ಪೇಳ್ವುದೋ
ಪದ್ಯದೊಳ್ ಲಘುವಿನೋಘಮುಂ ಪುಗಲ್ ||

ಅವಧಾನಾಂಗಗಳು- ಪದ್ಯಗಳು-

*ಅಪ್ರಸ್ತುತಪ್ರಸಂಗ- ಪೃಚ್ಛಕರು ಶ್ರೀ ಸೂರ್ಯಪ್ರಕಾಶ ಪಂಡಿತ್
*ಸಂಖ್ಯಾಬಂಧ-
ಪೃಚ್ಛಕರು– ಶ್ರೀ ಸುಧಾಕರ್ ಜೋಯಿಸ್
*ಘಂಟಾವಾದನ-
ಪೃಚ್ಛಕರು– ಶ್ರೀ ಗೌತಮ ರಾಮಮೂರ್ತಿ
*ಕಾವ್ಯವಾಚನ-
ಪೃಚ್ಛಕರು- ಶ್ರೀ ಚಂದ್ರಶೇಖರ ಕೆದಿಲಾಯ (ಕನ್ನಡ), ವಿ|ರಂಜನಿ ವಾಸುಕಿ (ಸಂಸ್ಕೃತ)

*ನಿಷೇಧಾಕ್ಷರಿ-
ಪೃಚ್ಛಕರು– ಡಾ||ಎಸ್ ರಂಗನಾಥ.
ವಸ್ತು- ಸೂರ್ಯಸ್ತುತಿ, ವೃತ್ತ- ರಥೋದ್ಧತಾ, (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು-ಕೊನೆಯ ಪಾದದಲ್ಲಿ ನಿಷೇಧಿಸಲಿಲ್ಲ)
(ಸ)ಶ್ರೀ(ರ)ಮ(ಕ)ಹ(ರ)ಸ್ವಿ (ದ)ನಿ (ತ) ನ(ನ)ತಿ(ವ)ರ್ಮ(ವ)ಮಾ(ರ)ಸ್ತು(–)ಚಿ-
(ತ)ದ್ಧಾ(ರ)ಮ್ನಿ (ಕ)ಸ(ರ)ಪ್ತ(ಸ)ಕ(ರ)ಮ(ನ)ಹಿ(ಮ)ಷ್ಠ (ತ) ಭೂ(ಮ)ತಿ(ನ)ಷು
(ಮ)ಸಾ(ರ)ಮ್ನಿ (ವ)ಚಾ(ರ)ನಿ(ಕ)ಲಿ(ಪ)ಗು(ಪ)ರೌ(ವ) ಜ(ರ)ಲೇ(ಕ)ಜಿ(ತ)ನಿ
ಪ್ರೇಮ್ನಿ ಕೋಟಿಶತಕೋಟಿಧಾಮನಿ ||

श्रीमहस्विनि नतिर्ममास्तु चिद्धाम्नि सप्तकमहिष्ठभूतिषु|
साम्निचानिलिगुरौजलेजिनि प्रेम्नि कोटिशतकोटिधामनि ||

*ಸಮಸ್ಯಾಪೂರಣ
ಪೃಚ್ಛಕರು- ಶ್ರೀ ಶಂಕರನಾರಾಯಣ ಉಪಾಧ್ಯಾಯ
ಸಮಸ್ಯೆ- ಅಂಡರ್ವೇರಿನ ಗಣೇಶಗಾರತಿಗೈದರ್||
ಕಂದಪದ್ಯ||
ಪಾಂಡಿತ್ಯದ ಪೇಶಲತೆಯ
ಚಂಡೇತರ ಭಾವಮಿರ್ಪ ವಾಗುದ್ದಂಡರ್
ಕಂಡರ್ ಪೂಜಿಪ ಕವಿಮಾ-
ರ್ತಂಡರ್ ವೇರಿನ ಗಣೇಶಗಾರತಿಗೈದರ್

*ದತ್ತಪದಿ-
ಪೃಚ್ಛಕರು- ಶ್ರೀ ಬಿ ಆರ್ ಪ್ರಭಾಕರ್
ವಸ್ತು-ಅವಧಾನಕಲೆಯ ಪ್ರಶಂಸೆ, ದತ್ತಪದಗಳು- ಸಾವಿರ, ಹಜಾರ್, ಸಹಸ್ರ, ಸಾಸಿರ,
ವಸಂತತಿಲಕ||
ನಿರ್ಮಾಣಮಲ್ತೆ ನುಡಿ ಸಾವಿರದಂತೆ ಸಾಗಲ್
ನಿರ್ಮೋಹಜಾರಿಣಿಸಮಿದ್ಧಹುತಾಶದೀಪ್ರಂ
ಕರ್ಮೀಣಮೋಕ್ಷದ ವಿರುದ್ಧ ಸಹಸ್ರಧಾರಾ
ಮರ್ಮಜ್ಞಮಾರ್ಗಮರಸಾ! ಸಿರಮೊಗ್ಗಿ ಕೇಳಲ್

*ಚಿತ್ರಕವಿತೆ
ಪೃಚ್ಛಕರು- ಡಾ|| ಶಂಕರ್ ರಾಜಾರಾಮನ್
ವಸ್ತು- ಶಾರದಾಸ್ತುತಿ
೧.ಪುಷ್ಪಗುಚ್ಛಬಂಧ , ಶ್ಲೋಕ||

pushpaguchha

೨.ಕುಂಡಲಿತನಾಗಬಂಧ, ಚಂಪಕಮಾಲೆ||

kundalita1000

೩.कवि-बन्ध-नामगर्भीकृतमहापद्मबन्ध- स्रग्धरा||padmabandha

*ನೃತ್ಯಕ್ಕೆ ಕಾವ್ಯ-
ಪೃಚ್ಛಕರು- ಶ್ರೀಮತಿ ನಿರುಪಮಾ ರಾಜೇಂದ್ರ
ವಸ್ತು- ವಿಶ್ವಾಮಿತ್ರ ಮೇನಕೆಯರ ಕಥಾನಕ.
ಹರಿಣಿ||
ಕರಣಹರಿಣಪ್ರಾಣಾಹಾರಂ ನಿಜಾಂಗದನಾದಮಾ-
ಗಿರೆ ಮದನನೇ ಮೇನಾಮಾನಕ್ಕೆ ತೂಗಿರೆ ಕೋಲ್ಗಳಂ
ಧರಣಿಸುರತಾವಾಪ್ತಿಪ್ರೀತಂಗೆ ಪಾಡಿಸಿ ಮಂಗಳಂ
ತೊರೆದು ಶಿಶುವಂ ಪಾವಿಂಗೆತ್ತಾಕೆ ಸಾರ್ವಳದೋ ಸ್ವರಂ||

*ಚಿತ್ರಕ್ಕೆ ಪದ್ಯ-
ಪೃಚ್ಛಕರು- ಶ್ರೀ ರಾಘವೇಂದ್ರ ಹೆಗಡೆ
ವಸ್ತು-(ಚಿತ್ರ ಪ್ರತಿಯೊಂದು ಸುತ್ತಿನಲ್ಲೂ ಬದಲಾಯಿಸಲ್ಪಡುತ್ತಿತ್ತು)
ಮೊದಲ ಸುತ್ತಿನಲ್ಲಿ- ಎಲೆಗಳು ಉದುರಿದ ಮರ
ಎರಡನೇ ಸುತ್ತಿನಲ್ಲಿ-ಹಸಿರು ಎಲೆಗಳಿಂದ ತುಂಬಿದ ಮರ
ಮೂರನೇ ಸುತ್ತಿನಲ್ಲಿ- ಅದು ಮನುಷ್ಯನೊಬ್ಬನ ತಲೆಯಲ್ಲಿರುವಂತೆ ಬದಲಾವಣೆ
ಮಲ್ಲಿಕಾಮಾಲೆ||
ಕಾಲಕಾಂತನಿಗೋಲೆಯಂ ಬರೆಯಲ್ಕೆ ಪತ್ರಮನೆಲ್ಲಮಂ
ಜಾಲಿಸಿರ್ದಮಹೀರುಹಾಂಗನೆಯಿಂದು ಸುಗ್ಗಿಗೆ ತಾನೆನಲ್
ಲೀಲೆ ತಾನಿದು ಚಿತ್ತದೊಳ್ ನೆಲೆಯಾಗೆ ಮಾನವರೆಲ್ಲರಾ
ಕ್ಷ್ವೇಲಸಂಭವದಂತ್ಯದೊಳ್ ಸುಧೆ ಬಂದವೊಲ್ ನೆರೆ ತೋರುಗುಂ||

*ಆಶುಕವಿತೆ-
೧. ಪೃಚ್ಛಕರು-ಶ್ರೀ ಗಣೇಶ ಭಟ್ಟ ಕೊಪ್ಪಲತೋಟ
ವಸ್ತು- ಈಚಲು ಮರದ ಬಗ್ಗೆ ಅನ್ಯೋಕ್ತಿ
ಸಾಂಗತ್ಯ||
ತೆಂಗಿನ ಮರಗಳ ಸಂಗಾತಿ ನೀನಾಗಿ
ಗಂಗೆಯ ನೀಡದೆ ಹೋದೆ|
ಮಂಗಲತಾಲಸರಸ್ವತಿ ದೂರಾಗೆ
ಪೊಂಗುವ ನೀಪವೆ ಜೋಕೆ||

೨. ಪೃಚ್ಛಕರು-ಶ್ರೀ ರಾಘವೇಂದ್ರ ಜಿ.ಎಸ್
ವಸ್ತು-ಮಹಾಕವಿಯ ಉತ್ತಮೋತ್ತಮ ಪದ್ಯವನ್ನು ಓದಿದಾಗ ಆಗುವ ಭಾವ-
ಸೀಸಪದ್ಯ||
ಆನಂದಭಾಷ್ಪಸಂತಾನಮೇ ನೇತ್ರಯುಗದಂಪತೀಹೃದಯಾಂತರಾಳಮೊಗಿಸಲ್
ಕವಿತೆಯೊಳಗೇನೇನದಿರ್ಪುದೋ ನಾಂ ತಿಳಿಯವೇಳ್ಕುಮೆಂದೀ ಧೀರಭಾವಮುರ್ಕಲ್
ಇಂತಪ್ಪ ಪದ್ಯಮಂ ಬರೆಯಲಾನಿಲ್ಲೆಂದು ಖೇದಪ್ರಪಂಚಮೇ ಧೀಂಕಿಡಲ್ಕೆ
ಯಾಕಾಗಿ ಪುಟ್ಟಿದೆಂ ಕವಿಯೀತನೀಕಾವ್ಯಮೇಕಾದುದೋ ಎನಲ್ ಪೊಡೆಯಕಿರ್ಚು
ಅಂತು ಇಂತೊ ಮತ್ತೆಂತೊ ನಾಂ ಕಲಿತೆನಲ್ತೆ
ಭಾಷೆಯಿದನಂತೆ ಸತ್ಕಾವ್ಯರೀತಿನೀತಿ
ಜಾಡದೆನ್ನುತ್ತೆ ನಾಂ ಕೃತಾರ್ಥಾತ್ಮದಿಂದಂ
ಮತ್ತೆ ಸಾಗುವೆಂ ಬೆಂಬತ್ತೆ ಬೆಳಕನೆಂದುಂ||

೩. ಪೃಚ್ಛಕರು-ಶ್ರೀ ಮಹೇಶ ಭಟ್ಟ ಹಾರ್ಯಾಡಿ
ವಸ್ತು- ಚಂದ್ರೋದಯ
आर्या||
वक्रोक्तिरिव वरकवॆर्बालेन्दुकला विभाति गगनतले
सोमचमसरूपायां तस्यां जगदाशु पिबति रसनवकम्॥

೪. ಪೃಚ್ಛಕರು-ಶ್ರೀ ವಾಸುಕಿ ಎಚ್.ಎ
ವಸ್ತು- ಏಕಲವ್ಯನ ಮಹಾಭಾರತಯುದ್ಧವನ್ನು ಕಂಡು ಆಗುವ ಭಾವನೆ
ಚೌಪದಿ||
ವಿಜಯಲಕ್ಷ್ಮಿಯಗಣನೆಗೆಲ್ಲ ವೀರರ್ ಸಂದು
ಸ್ರಜೆಯನೇ ಧರಿಸುತ್ತೆ ದಿವಮಡರ್ದರ್
ನಿಜಗಣನೆಯಾಗದೇಂ ಕುರುಭೂಮಿ ರಣದಲ್ಲಿ
ಭಜಿಸಿದೆಂ ಗಡ ಮೊದಲ್ವೆರಲನಿತ್ತಾಂ ||
ಕಂದ||
ಬರೆದೆಂ ವೆರಲೊಂದರಿನೇ
ಪರಿಪೂರ್ಣಮಹೀಯಮಪ್ಪ ಬೀರರ ಕಬ್ಬಂ
ಬರೆಯಲ್ಕಾರ್ಪನೆ ಸಾಸಿರ
ಮಿರಲುಂ ಕರರಾಜಿ ಭಾನುವವನಾ ಜಸಮಂ||

೫ ಪೃಚ್ಛಕರು-ಶ್ರೀ ಸೋಮಶೇಖರ ಶರ್ಮ
ವಸ್ತು- ನಟಿಯೊರ್ವಳ ಪ್ರಸಾಧನ ಕಲಾವಿದನ ಮೂಕಪ್ರೇಮ
ಭಾಮಿನಿ||
ಕನ್ನಡಿಯ ಕದಪುಗಳ ಮೇಗಡೆ
ಚೆನ್ನೆನಲ್ ಕೆಂಪನ್ನು ಲೇಪಿಪ
ಪನ್ನತಿಕೆ ತಾನಿರ್ದೊಡಂ ಲಜ್ಜೆಯನು ತರಿಸದಿಹೆಂ
ಸೂನ್ನತಾಧರಬಿಂಬಕಂ ಸಂ
ಪನ್ನತೆಯ ತಂದೀವೆನಾದೊಡ-
ಮಿನ್ನುಮದರೊಳ್ ನಿಜದೊಲವನೇ ಉಸಿರದಿಹೆನಲ್ತೇ

೬. ಪೃಚ್ಛಕರು-ಶ್ರೀ ರಾಮಚಂದ್ರ ಕೆ.ಬಿ.ಎಸ್
ವಸ್ತು- ಅರ್ಧನಾರೀಶ್ವರತತ್ತ್ವ
ಮತ್ತೇಭವಿಕ್ರೀಡಿತ||
ಶ್ರುತಿಯೇ ರೂಪಿಸಿಕೊಂಡತತ್ತ್ವಮಮಲಂ ವಾಗ್ವ್ಯಕ್ತಿಲೋಕಾನುಭೂ-
ತ್ಯತಿಮಾತ್ರಂ ಕವಿಕಾಲಿದಾಸಕವನಕ್ಕಾಧಾರಮಾಯ್ತಾದಿಯೊಳ್
ಪತಿಪತ್ನೀಸ್ಥಿತಿ ವರ್ತಮಾನಜಗದೊಳ್ ಸಾಗಲ್ಕಿದಾದರ್ಶಮೆಂ-
ದತಿಮಾತ್ರಂ ನುಡಿಯಲ್ಕೆ ಸಲ್ವುದೆ ಬುಧಾ! ಮಾಡರ್ನ್ ಪೊಯೆಟ್ರೀ ಬರಲ್||

೭. ಪೃಚ್ಛಕರು-ಶ್ರೀ ಸುಧೀರ್ ಕೃಷ್ಣಸ್ವಾಮಿ
ವಸ್ತು- ವಿದೇಶ ಪ್ರವಾಸ
ಸಂತುಲಿತಮಧ್ಯಾವರ್ತಗತಿ||
ಬಾಲ್ಯದಲ್ಲಿ ಭೂಗೋಳದಲ್ಲಿ ಬೆರಳಿಟ್ಟು ಸುತ್ತಮುತ್ತ
ಕಲ್ಯವರ್ತಮಿತಮಾತ್ರನಾಗಿ ನೋಡಿದ್ದೆ ಜಗವನಿತ್ತ
ಮಧ್ಯದಲ್ಲಿ ಅಷ್ಟಿಷ್ಟು ಹಾರಿ ಹೌಹಾರಿ ಕಂಡೆ ಜಗವ
ವೇಧ್ಯಮಾಯ್ತು ಸಂವೇದ್ಯಮೀಗ ಗಣಪತಿಯ ಜಾಣ್ಮೆ ನಗುವ

೮. ಪೃಚ್ಛಕರು-ಶ್ರೀ ರಂಗನಾಥ ಪ್ರಸಾದ
ವಸ್ತು- ಯೌವನ ಕೆಟ್ಟದ್ದು ಎನ್ನುತ್ತಾರೆ. ನೀವೇನು ಹೇಳುವಿರಿ
ಸ್ವಾಗತ||
ಯೌವನಂ ದುರಿತಮೆಂಬುದು ತಥ್ಯಂ
ಪಾವನಂ ಗಡ ಕಲಾಮಯಮಾಗಳ್
ಗೋವು ಪಾಯ್ವುದೆನೆ ಕೊಲ್ಲುವುದೇನೈ
ತೀವಿರೈ ಕರೆದು ದುಗ್ಧಮನೆಲ್ಲರ್||

೯. ಪೃಚ್ಛಕರು-ಶ್ರೀ ಎಂ.ಆರ್ ಚಂದ್ರಮೌಳಿ
ವಸ್ತು-ಪಾರ್ಥೇನಿಯಂ ಗಿಡದ ಬಗ್ಗೆ
ಶ್ಲೋಕ||
ಪಾರ್ಥನಕ್ಷಯತೂಣೀರಂ ನಿನಗಾದುದೆ ಪುಟ್ಟಿಗಂ
ಪಾರ್ಥೇನಿಯಂ ಪರಾಕ್ರಾಂತಿಪ್ರೀತಿ ನಿನ್ನದು ಭಾವಿಸಲ್ ||
ಚೌಪದಿ||
ಪರದೇಶದಿಂ ಬಂದು ನಮ್ಮ ನೆಲದೊಳ್ ನಿಂದು
ಮರುಭೂಮಿಯಾಗಿಸುತೆ ವನಗಳನ್ನು
ಮೆರೆದುಬ್ಬಸಂದರ್ಪ ಪಾರ್ಥೇನಿಯಂ ನಿನಗೆ
ಗುರುವಾರೊ ಕಾಣೆನಾಂ ಲೋಕದಲ್ಲಿ||

೧೦-ಪ್ರೇಕ್ಷಕರೊಬ್ಬರು ದ್ರೌಪದಿಯನ್ನು ಕಂಡು ಕೃಷ್ಣನಿಗೆ ಏನೆನ್ನಿಸಿತು ಎಂದು ಪ್ರಶ್ನೆಯನ್ನು ಕಳಿಸಿದಾಗ ಹೇಳಿದ ಪದ್ಯ
ಕಂದ||
ಪಾಂಡವರೈವರ್ಗೊರ್ಕ-
ಟ್ಟಂಡಲೆಯುವ ಕಾಲದಲ್ಲಿಯುಂ ಸಲ್ಲಲ್ಕಂ
ಪಾಂಡಿತಿಯಿರ್ಪೀ ತರುಣಿಯೆ
ಪೆಂಡತಿ ದಲ್ ಯಾಜ್ಞಸೇನಿ ಮತ್ಕಾರ್ಯಾರ್ಥಂ ||

  2 Responses to “ಶತಾವಧಾನಿ ಡಾ|| ಗಣೇಶರ ಸಾವಿರದ ಅವಧಾನದ ಪದ್ಯಗಳು”

  1. ನನಗ೦ತೂ ಇವು ಕಡಲೆಕಾಳುಗಳೇ ಆಗಿವೆ!! ಆದರೂ ಓದಿ ಜೀರ್ಣಿಸಲು ಪ್ರಯತ್ನ ಪಡುವುದು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)