Mar 292017
 

ದಿನಾಂಕ- ೦೮-೦೧-೨೦೧೭.
ಆಯೋಜನೆ- ಟೂಲ್ ರೂಮ್ಸ್ ಬೆಂಗಳೂರು
ಸ್ಥಳ- ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಬೆಂಗಳೂರು.

ಅವಧಾನಾಂಗಗಳು- ಪದ್ಯಗಳು-

*ಅಪ್ರಸ್ತುತಪ್ರಸಂಗ- ಪೃಚ್ಛಕರು ಶ್ರೀ ಸಂದೀಪ ಬಾಲಕೃಷ್ಣ
*ಕಾವ್ಯವಾಚನ-
ಪೃಚ್ಛಕರು- ಶ್ರೀ ಉಲ್ಲಾಸ ಹಾರೀತಸ
*ನಾಟಕವಾಚನ-
ಪೃಚ್ಛಕರು– ಶ್ರೀ ಶಶಿಕಿರಣ ಬಿ ಎನ್
(ನಾಟಕವಾಚನದಲ್ಲಿ ಪೃಚ್ಛಕರು ಸಂಸ್ಕೃತನಾಟಕವೊಂದರ ಭಾಗವನ್ನು ಆರಿಸಿ ಓದಿದಾಗ ಅವಧಾನಿಗಳು ಅದನ್ನು ಗುರುತಿಸಿ ಹೇಳುವುದರ ಜೊತೆಗೆ ಅದನ್ನು ನಾಟಕೀಯವಾಗಿ ಅಲ್ಲಿಯೇ ಗದ್ಯಪದ್ಯಗಳಲ್ಲಿ ಆಶುವಾಗಿ ಅನುವಾದಿಸಿ ಓದುತ್ತಿದ್ದರು)

*ನಿಷೇಧಾಕ್ಷರಿ-
ಪೃಚ್ಛಕರು– ಶ್ರೀ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ
ವಸ್ತು- ವೃದ್ಧಾಶ್ರಮ, ಛಂದಸ್ಸು-ಚೌಪದಿ, (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು-ಕೊನೆಯ ಪಾದದಲ್ಲಿ ನಿಷೇಧಿಸಲಿಲ್ಲ)
(ದೀರ್ಘಾಕ್ಷರ) ಸ (ಗ) ಞ್ಜೆ (-)ಗ (ನ)ಬ್ಬ(ದ)ಕೆ(ದ)ಸ(ರ)ನ್ದ(ಮ)ಸ(ಶ)ರ್ಗಾ(ತ)ವ(ಧ)ಗಾ(ಹ)ನ(ಕ)ಮೇಂ
(ನ)ಬಿಂಜ(ಕ)ಮೇ(ದ)ನೈ(ರ) ಮ(ಜ)ರ್ತೆ(ಗ)ಸೂ(ಕ)ರ(ಪ)ನೇ(-)ಳ್ವಂ
(ಮ)ಕಂಜ(ಮ)ಹಾ(ಸ)ವ(ಕ)ಮೆ(ಸ)ನ(ರ)ಲ್ಮೆ(ಬ)ಸ(ರ)ಯ್ಪು(ನ)ವ(ಕ)ಡ್ಡ(ರ)ವ(ಗ)ನೆ(ಕ)ತಾಂ
ನಂಜುನುಡಿಯೇಕೆ ಮುದುಪರ್ಗೆ ಮಕ್ಕಳ್ಗೆ|

ಸಂಜೆಗಬ್ಬಕೆ ಸಂದ ಸರ್ಗಾವಗಾನಮೇಂ
ಬಿಂಜಮೇನೈ ಮರ್ತೆ ಸೂರನೇಳ್ವಂ
ಕಂಜಹಾವಮೆ ನಲ್ಮೆ ಸಯ್ಪು ವಡ್ಡವನೆ ತಾಂ
ನಂಜುನುಡಿಯೇಕೆ ಮುದುಪರ್ಗೆ ಮಕ್ಕಳ್ಗೆ||

*ಸಮಸ್ಯಾಪೂರಣ-
ಪೃಚ್ಛಕರು– ಶ್ರೀ ಗಣೇಶ ಭಟ್ಟ ಕೊಪ್ಪಲತೋಟ
ಸಮಸ್ಯೆ- ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ
ಮತ್ತೇಭವಿಕ್ರೀಡಿತ||
ಚತುರಾ! ಪೃಚ್ಛಕವರ್ಯ! ಪೇಳ್ವುದಿದಕೇಂ ಬಾನತ್ತಲೀಕ್ಷಿಪ್ಪೆಯೇಂ
ಸ್ತುತವಾರಾಂನಿಧಿ ನೀರಮಲ್ತೆ ಮುಗಿಲೇ ತತ್ಪುತ್ರನೆಂದೊಪ್ಪಿರಲ್
ಸತಿವಿದ್ಯುನ್ನಟಿ ಮಿಂಚಿರಲ್ ಮಲೆತಿರಲ್ ವರ್ಷಾಗಮಂ ಭಾಗ್ಯಮೇ
ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ ||

*ದತ್ತಪದಿ-
ಪೃಚ್ಛಕರು– ಶ್ರೀ ಶ್ರೀಧರ ಸಾಲಿಗ್ರಾಮ
ವಸ್ತು- ಕಳ್ಳ ಸಂನ್ಯಾಸಿ ದತ್ತಪದಗಳು- ರಂ, ಜಿನ್, ವೈನ್, ಬೀರ್
ರಥೋದ್ಧತಾ||
ರಾಗರಂಜಿತಭರಂ ಜಿತಸ್ಮರಾ
ವೇಗವಂಚಿತನಜಿನ್ಮನೋಮಥಂ
ಭಾಗಿಯಾಗಿರೆ ನವೈನಸಕ್ಕನು-
ದ್ವೇಗಮೆಲ್ಲಿ ರತಿ ಬೀರಿರಲ್ ರಸಂ||

*ಉದ್ದಿಷ್ಟಾಕ್ಷರಿ-
ಪೃಚ್ಛಕರು– ಶ್ರೀಮತಿ ಕಾಂಚನಾ
ವಸ್ತು-ಮಕರಂದ. (ಇದು ಉದ್ದಿಷ್ಟಾಕ್ಷರಿಗೆ ರಚಿಸಿದ್ದಾದರೂ ಅವಧಾನಿಗಳು ಗೋಮೂತ್ರಿಕಬಂಧವನ್ನೂ ಮಾಡಿದ್ದಾರೆ. ಮೊದಲ ಪಾದ ಹಾಗೂ ಎರಡನೇ ಪಾದಗಳು, ಮೂರನೇ ಪಾದ ಹಾಗೂ ನಾಲ್ಕನೇ ಪಾದಗಳು ಪರಸ್ಪರ ಗೋಮೂತ್ರಿಕಬಂಧದಲ್ಲಿ ಅಡಕವಾಗಿವೆ)
ಸುಮನೋಜನಸಂಸಾರಂ
ಕಮಲಾಜಯಸಂಗರಂ |
ಭ್ರಮರೀಯರಸಾಸಾರಂ
ಕಮನೀಯಲಸಾಕರಂ ||

*ಆಶುಕವಿತೆ-
ಪೃಚ್ಛಕರು– ಶ್ರೀ ಸೋಮಶೇಖರ ಶರ್ಮ
೧.ವಸ್ತು- ಹರಳೆಣ್ಣೆಯ ಸ್ನಾನ
ಇಂದ್ರವಂಶಾ||
ಏರಂಡತೈಲೋರ್ಜಿತಮಜ್ಜನಂ ವಲಂ
ಶ್ರೀರಂಗಧಾಮಂಗೆ ಹಿತಾವಹಂ ಸದಾ
ಸಾರೈ ಕುವೆಂಪೂದಿತಗದ್ಯಬಂಧದೊಳ್
ಪಾರಮ್ಯಮಂ ವರ್ಣಿಪುದೆಂತು ಕಬ್ಬದೊಳ್||

೨.ತಂಬೂರಿಯ ಜೀವ(ಕುದುರೆ ಮತ್ತು ತಂತಿಯ ನಡುವೆ ಇರುವ ನೂಲು)
ಕಂ||
ತುಂಬಿದ ತುಂಬೀಫಲಮುಂ
ಲಂಬೋಜ್ವಲಮಸ್ಕರಮುಮೆ ತಾಮಿರ್ಕೆ ಸದಾ
ಇಂಬಾಗದು ಗುಣಮಿರದಿರೆ
ಸಂಬರಮೇ ಸರಿಗಪದನಿ ನಾದಕೆ ನುಡಿಯೊಳ್ ||

೩.ಹೆಂಗಸರ ಹರಟೆ
೧. ನಂದಕವೃತ್ತ||
ಊರ್ಣನಾಭನೇ ಪೂರ್ಣಮಾಗಿಯೀ
ಕರ್ಣಧಾರತಾಭ್ಯರ್ಣವಂ ಗಡಾ||
೨. ದ್ರುತವಿಲಂಬಿತ||
ದ್ರುತವಿಲಂಬನಮಲ್ತೆ ವಿಭಾವಿಸಲ್
ಹಿತಕರಂ ಕಥೆ ಜಲ್ಪನಮೇಗಳುಂ
ಸತಿಯರಾ ಪರಮಾರ್ಥದೆ ಕೌನ್ಸಿಲಿಂಗ್
ಕ್ಷತಿಯದಿಲ್ಲದೆ ಕಾಂತರುಮಿರ್ಪರೈ||

(ಪ್ರೇಕ್ಷಕರೊಬ್ಬರು ಗಂಡಸರ ಬೊಗಳೆಯ ಬಗ್ಗೆಯೂ ಪದ್ಯ ಹೇಳಬೇಕೆಂದು ಕೇಳಿದಾಗ ಹೇಳಿದ ಪದ್ಯ)
ಬೊಗಳೆಯೊಂದಿರೆ ಬಾರಿಗೆ ಸಾಗರೈ
ಬೊಗಳೆಯೊಂದಿರೆ ಬೀಡಿಗೆ ಮಾಗರೈ
ಬೊಗಳೆಯೊಂದಿರೆ ಮಾನಿನಿಗಾಗರೈ
ಬೊಗಳೆಯೇ ನಿಗಳಂ ಗಡ ಗೇಹಕಂ||

೪. ಮಗಳನ್ನು ಧಾರೆಯೆರೆಯುತ್ತಿರುವ ತಾಯಿ
ಸಾಂಗತ್ಯಮಾಲಿಕೆ-
ಜಾತಕ ಹೊಂದಿಸಿ ಛತ್ರವ ಹುಡುಕುತ
ಸೋತೆನೆಲ್ಲವ ನಾನು ಗೆಯ್ದು
ಈತನೊ ಧಾರೆಯ ಹೊತ್ತಿಗಾದರು ಬರ್ಕೆ
ಮಾತಂತೆ ನಿಲ್ಲಲೆಂದೆನುವಂ||
ಮಗಳನ್ನು ಕೊಡುವಾಗ ಕೈಗಳ ಜೋಡಿಸಿ-
ಯಗಲವು ಸಮ್ಮುದವಲ್ತೇ
ನಗದಂತೆ ಬೀಗರು ಸುತೆಯ ಕಂಬನಿಯನ್ನು
ಮಿಗದಂತೆ ಮಾಡಲಿ ಪತಿಯು||
ಪುಸ್ತಕಕೀಲಿತಮತಿಯು ಮಹತ್ತರ
ಶಸ್ತಶ್ರೀ ಕೃಷ್ಣಮೂರ್ತಿಗಳು
ಸುಸ್ತಾಗದಂತೆ ಸರೋಜಮ್ಮನವರಲ್ಲಿ
ವಿಸ್ತರಿಸಿದ ಪರಿಯಿದುವೆ||

 

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)