Apr 032017
 

“ಬೇಸಿಗೆಯ ಮಳೆ”ಯನ್ನು ವರ್ಣಿಸಿ ಪದ್ಯರಚಿಸಿರಿ

  43 Responses to “ಪದ್ಯಸಪ್ತಾಹ ೨೪೯: ವರ್ಣನೆ”

 1. ಈ ಪದ್ಯವನ್ನು ಹಿಂದೊಮ್ಮೆ ಬರೆದಿದ್ದೆ.

  ಗ್ರೀಷ್ಮಾವಗ್ರಾಹನಿರ್ಧೂತಕೃಷಕಸ್ಯ ಪುರಂಜನಾ ।
  ತಡಿದ್ಗರ್ಭವಿನಿಷ್ಕ್ರಾಂತಾ ವರ್ಷಾ ಹರ್ಷಪ್ರದಾಭವತ್ ॥

 2. ಬಿರುಬೇಸಿಗೆಯೊಳ್ ವಿಶೇಷಮೆಂಬೊಲ್
  ಬರಲೀ ವರ್ಷವು ತಣ್ಪ ನೀಯದಲ್ತು
  ಧರೆಯೋ ಕಾದಿರ್ಪ ಹಂಚಿನೊಲ್ ತುಂ
  ತುರು ನೀರಿಂಧಗೆಯೆನ್ನೆ ಪೆರ್ಚಿಸಿರ್ಕುಂ

 3. ನವಜಾತನಂ ವಸಂತನ
  ಮವನೀ ಶಿಶುವಂ ವಿಶಿಷ್ಟನಂ ಮೀಸಲ್ಕೀ /
  ಶಿವಮಯ ನಿಸರ್ಗಮೀಗಳ್
  ತವೆ ಕರೆದಿರ್ಪುದೆ ಪವಿತ್ರ ಜಲಮಂ ಮಳೆಯೊಲ್//
  ಈಗತಾನೆ ಭೂಮಿಯಲ್ಲಿ ಹುಟ್ಟಿದ ವಸಂತ ಎಂಬ ನವಜಾತ ಶಿಶುವಿಗೆ ಸ್ನಾನ ಮಾಡಿಸಲು ಪ್ರಕೃತಿ ಕರೆದ ಪವಿತ್ರ ಜಲವೇ ಈ ಬೇಸಿಗೆಯ ಮಳೆ.

 4. ಜಗಮನೆ ತೋಷದಿಂ ಋತುನೃಪಂ ಸಲೆ ಕಿರ್ಚಿನ ವರ್ಣಕಾಂತಿಯಿಂ
  ಮಿಗೆ ಪಸರಿರ್ಪನೈ ಕೊನರಿಪಾ ತರುಸಂಕುಲದಗ್ರದೊಳ್ ಜಲಾ
  ತ್ಮಗಮದೊ ಬೆಂಕಿಯೇ ಜನನಿಯಂ ಸುಡುತಿರ್ಪಪಧೈರ್ಯಮಾದುದಾ
  ಶುಗತಿಯೊಳಾಗ ತಾಂ ಕರೆದನಗ್ನಿಯನಾರಿಪ ಶಾಮಕಾಂಬುವಂ//

  ಜಲಾತ್ಮ=ಮೋಡ
  ಮೋಡಕ್ಕೆ ಭೂಮಿಯೇ ತಾಯಿ. ವಸಂತದಲ್ಲಿ ಚಿಗುರುತ್ತಿರುವ ಮರಗಳನ್ನು ನೋಡಿ ತಾಯಿಗೆ ಬೆಂಕಿಹೊತ್ತಿಕೊಂಡಿದೆ ಎಂದು ದಿಗಿಲಿನಿಂದ ಪರ್ವತಗಳ ಮರೆಯಲ್ಲಿ ನಿಂತು ಮೋಡ ಕರೆದ ಬೆಂಕಿಯನ್ನು ಆರಿಸುವ ನೀರೇ ಈ ಬೇಸಿಗೆಯ ಮಳೆ .

  • Ahaaa!! So nice 🙂 ಸುಡುತಿರ್ಪಪ is not a known form. Can you please recheck it? ಜಲಾತ್ಮಗಡರೆ, ನಗಗಳ here we should have a bindu after the noun.

   • Thanks. Corrected the problem of bindu. It’s “ಸುಡುತಿರ್ಪ-ಅಪಧೈರ್ಯ “

  • ಈ ಹಿಂದಿನ ಪದ್ಯವನ್ನನುಸರಿಸಿದ್ದರೂ, ಸೂಕ್ಷ್ಮವನ್ನು ಚೆನ್ನಾಗಿ ಗಮನಿಸಿಕೊಂಡಿದ್ದೀಯೆ. ಅಭಿನಂದನೆ.

 5. ಮಡಿಯಲ್ ಲೋಗರ್ಬೇಗೆಯಿ
  ನಡರಲ್ ತಾಪವದವರ್ಕಳತಿಭೋಗಕ್ಕಂ/
  ಸುಡುವೀ ಧರೆಯಂ ಪಾರುತೆ
  ನಡುಗುತೆ ಕಂಬನಿಯ ಧಾರೆ ಗೈದುದು ನಭವೇ//

  ಬೇಸಿಗೆಯ ಮಳೆ ಆಕಾಶದ ಕಣ್ಣೀರು ಎಂಬ ತಾತ್ಪರ್ಯ.

 6. ವಿರಹಾಗ್ನಿಯಲಿ ಬೆಂದು ಬಯಸೆ ಗೆಳತಿಯ ಬರವ,
  ಬಿರಿದ ಮನಸಲಿ ಸುಳಿವ ನೆನಪಂತೆವೋಲ್
  ತರುತೃಣಗಳೆಲ್ಲಮುಂ ಬಳಲಿ ಬಾಡುತಲಿರಲು
  ಸುರಿಯಿತೈ ಬೇಸಿಗೆಯ ಮಳೆಯದೊಮ್ಮೆ..

  ವಿರಹಿಗೆ ಹೇಗೆ ಗೆಳತಿಯನ್ನು ಕಾಣಲಾಗದಿದ್ದರೂ ಅವಳ/ಅವನ ನೆನಪು ಮನಸಲ್ಲಿ ಸುಳಿಯುತ್ತದೆಯೋ ಹಾಗೆಯೇ ಬೇಸಿಗೆಯ ಮಳೆಯೂ ಅಲ್ಲೊಮ್ಮೆ ಇಲ್ಲೊಮ್ಮೆ ಸುರಿದಂತಾದರೂ ಪೂರ್ಣ ಪ್ರಮಾಣದಲ್ಲಿ ಸುರಿಯುವುದಿಲ್ಲವೆಂಬ ಭಾವದಲ್ಲಿ ಬರೆದದ್ದು

 7. ಧಗಧ್ಧಗಧಗಿಲ್ಲೆನುತ್ತುಗಿದ ಭಾಲನೇತ್ರಾಗ್ನಿಯಿಂ-
  ದುಗಾಧಿಪಧರಂ ಮನಃಪ್ರಭವನಂ ಸುಡುತ್ತಾ ಕ್ಷಣಂ
  ದೃಗಂತಕರುಣಾಬ್ಧಿಯಂ ರತಿಯ ಮೇಗಡೋಲಯ್ಸಿದಂ-
  ತಗಾಧಮುದದಾಯಕಂ ಧಗೆಯ ಕಾಲದೀ ವರ್ಷಮಯ್

  ಹಣೆಗಣ್ಣಿಂದ ಉಗಿದ ಬೆಂಕಿಯಿಂದ ಮನ್ಮಥನನ್ನು ಸುಡುತ್ತಲೇ ಶಶಿಧರನಾದ ಶಂಕರನು ತನ್ನ ಕಟಾಕ್ಷದ ಕರುಣಾಜಲಧಿಯನ್ನು ರತಿಯ ಮೇಲೆ ಹರಿಸಿದಂತೆ ಮುದಾವಹವಾಗಿದೆ ಈ ಬೇಸಗೆಯ ಮಳೆ.

 8. ನಗುವ ರವಿಯಾ ಕೆಂಪು ಕಿರಣಕೆ
  ಮಗುವ ಮನಸಿನ ಬೆಳ್ಳಿ ಮೇಘಂ
  ಜಗದ ತುಂಬಶ್ರುವನು ಹರಿಸಿತು ಬೆದರಿ ತಾಬೆಂದು
  ಹಗಲಿನಂದವು ಬಹಳ ಹೆಚ್ಚಿತು
  ಧಗಿಪ ಬಿಸಿಲೊಳ್ ವರ್ಷ ಧಾರೆಯು
  ಗಗನದಿಂದಲಿ ವಜ್ರ ತುಂತುರು ಬುವಿಗೆ ಶೃಂಗಾರ

  • Good! some suggestions.. to avoid aa in ರವಿಯಾ, we can use nEsara. ಬೆಳ್ಳಿ ಮೇಘಂ is ari-samaasa. Hence we can use either beLLi-mODavu or rajata-mEghavu. ವಜ್ರ ತುಂತುರು also an ari-samaasa. You may have to see how to correct it 🙂

   • ನಗುವ ಸೂರ್ಯನ ಕೆಂಪು ಕಿರಣಕೆ
    ಮಗುವ ಮನಸಿನ ರಜತ ಮೇಘಂ
    ಜಗದ ತುಂಬಶ್ರುವನು ಹರಿಸಿತು ಬೆದರಿ ತಾಬೆಂದು
    ಹಗಲಿನಂದವು ಬಹಳ ಹೆಚ್ಚಿತು
    ಧಗಿಪ ಬಿಸಿಲೊಳ್ ವರ್ಷ ಧಾರೆಯು
    ಗಗನದಿಂದಲಿ ವಜ್ರ ವರ್ಷವು ಬುವಿಗೆ ಶೃಂಗಾರ

 9. ಧಗೆಯಿಂ ಸುಟ್ಟಿರೆ ಧಾರುಣೀ ತನುವದುಂ ಸೂರ್ಯಾಗ್ನಿಬಾಣಂಗಳಿಂ
  ಜಗಕಂ ಜೀವಮನೀವ ದೇವನವನಂ “ಸ್ನಾನಾಂಬುವಂ ಹಂಡೆಯೊಳ್
  ಸೊಗದಿಂದೀಯುತಲೆನ್ನಕಾಯೊ ವರುಣಾ” ಎನ್ನಲ್ಕವಂ ಧಾರ್ಷ್ಟ್ಯದಿಂ
  ಬಿಗಿಯಿಂ ನೀಡಿರಲೊಂದು ಲೋಟದೊಳದೇ ವರ್ಷಂ ಬಿಸಿಲ್ಬೇಗೆಯೊಳ್

  ಸೂರ್ಯನ ಅಗ್ನಿಬಾಣಗಳ ಧಗೆಯನ್ನು ತಾಳಲಾರದೇ, ಸ್ನಾನ ಮಾಡಲು ಒಂದು ಹಂಡೆ ನೀರನ್ನು ಕೊಡೆಂದು ಧಾರಿಣಿಯು ವರುಣನನ್ನು ಕೇಳಿದರೆ, ಅವನು ದರ್ಪ,ಜಿಪುಣತನದಿಂದ ಒಂದು ಲೋಟ ನೀರನ್ನಷ್ಟೇ ನೀಡಿರಲು, ಅದೇ ಬೇಸಿಗೆಯ ಮಳೆಯಾಯ್ತು ಎನ್ನುವ ಪ್ರಯತ್ನ.

 10. ಯಾಗದಿಂ ಸಂಭವಂ ವರ್ಷಂ
  ಭೋಗದಿಂ ಮತ್ತ ಮಾನವಂ |
  ರಾಗದಿಂದಾತಪಂ ಗೆಯ್ದಂ
  ಮೇಘಗಂ ನೀಡ್ದಪನ್ ಫಲಂ ||

  (ಯಾಗಗಳಿಂದ ಮಳೆ ಬರುತ್ತದೆ. ಆದರೆ ಭೋಗದಾಸೆಯ ಮನುಷ್ಯರು ಯಾಗವನ್ನು ಮರೆತಿದ್ದಾರೆ. ಆದರೂ ಭೂಮಿಯನ್ನು ಉಳಿಸಬೇಕೆಂಬ ಬಯಕೆಯಿಂದ ಸೂರ್ಯನೇ ಯಾಗ ಮಾಡುತ್ತಿದ್ದಾನೆ. ಇಂದ್ರನು ಅದಕ್ಕೆ ಮಳೆಯನ್ನು ಯಾಗಫಲವಾಗಿ ನೀಡಿದ)

  ಮೇಘವಾಹನ=ಇಂದ್ರ=ಮೇಘಗ
  ಬಿಸಿಲು- ಸೂರ್ಯನ ಯಾಗ

  • ಇದು ಒಳ್ಳೆಯ ವೇದಾಂತಮಯ ಕಲ್ಪನೆ..

   • ಧನ್ಯವಾದಗಳು!
    ಏನಾದರೂ ವ್ಯಾಕರಣ ದೋಷವಿದ್ದರೆ ತಿಳಿಸಿ. ಹೊಸಬನಾದ್ದರಿಂದ ತಪ್ಪು ತಿದ್ದಿಕೊಳ್ಳಬೇಕು

  • ಯಾವ ಛಂದಸ್ಸು? ಕೊನೆ ಸಾಲಿನ ಪ್ರಾಸವು ತಪ್ಪಿದೆ. ನೀಳ್ದಪಂ ಆಗಬೇಕು.

 11. ಮೊದಮೊದಲ ವೈದ್ಯೋಪಚಾರದಿಂದ ರೋಗಲಕ್ಷಣಗಳು ತುಸು ಉಲ್ಬಣಿಸಲೇಬಹುದು!
  ಬೇಸಗೆಯ ಮೊದಲಮಳೆ, ಹಾತೊರೆಯುವಿಕೆಗಷ್ಟೆ
  ಆಸರೆಯನೀಯುವುದು, ತಣಿಸದೇನಂ|
  ತಾಸಷ್ಟೆ ತಂಪೆಂಬ ಭ್ರಾಂತಿಯನು ನೀಡುವುದು
  ಸೂಸುವುದು ಧಾರಿಣಿಯು ಬಿಸಿಯ ಹಬೆಯಂ||

 12. ಹರೆಯದ ತಾಪಕಂ ಸರಸಪೂರಿತವಾಕ್ಕಿನಹೊಯ್ಲಿನಂತಿದೇಂ!
  ಜರೆಯೊಳೆ ಸೋಲ್ತ ಚಿತ್ತಕೆನೆ ಸಲ್ಲಿಪ ಸಾಂತ್ವನಸೂಕ್ತಿಸಾಮ್ಯಮೇಂ!
  ನರಕುಲದಂತರಂಗದುರಿಯಾರಿಪ ತಂಪಣ ದೇವದೃಷ್ಠಿಯೇಂ!
  ಧರಣಿಯ ತಾಳ್ಮೆಯೇ ಗೆಲಿದ ಬಲ್ಮೆಯ ಚೆಲ್ವಿನ ಪಾರಿತೋಷಮೇಂ!!

 13. ಬುವಿಯ ಮೇಲ್ ಮುಳಿದು ರವಿತಾ ಕೆಂಡ ಕಾರುತಿಹ
  ಶಿವನು ರಕ್ಷಿಸನೀಗಳುರ್ವಿಯನು ತಾ
  ಬವಣೆ ಸಹಿಸದೆ ಧರಣಿ ದುಃಖಿಸಲ್, ಮುಗಿಲಡರು-
  -ತವಸರಿಸಿ ಮಳೆಗೈದು ತಣಿಸಿತಿಳೆಯ

  • ಶಿವನು ಬಂದೊಡೆ ಬಿಡನೆ ಮೂರನೆಯ ಕಣ್ಣನ್ನು!
   ಕವರುವುದು ಮತ್ತಷ್ಟು ಶಾಖಮಾಗಳ್|
   ತಿವಿವ ಜ್ವರವು ಕಾಡೆ ಕುಡಿಯಿರೈ ಬಿಸಿಬಿಸಿಯ
   ದ್ರವಣಮಾ ಕಾಫಿಯನ್ನೆಂಬೆಯೇಂ ನೀಂ||

 14. (ಕಳೆದ ವರ್ಷ ಬಂದ ಮಳೆಯಿಂದಾದ ನನ್ನ ಪಾಡನ್ನೇ ಹಾಡಾಗಿ ಬರೆದಿರುವೆ)

  ಕೊನೆಯ ಚಳಿಗಾಲದಿ ಮನೆಮಾಡ ಬಿಚ್ಚಿದರು
  ಮನೆಯ ಸೂರಿನ ಸಿದ್ಧಕ್ಕೆ-ಅಣಿಯಾಗೆ
  ಮನದೊಳಗಿತ್ತು ಸಂತಸ

  ಉರಿಯುವ ಹಂಚನು ಭರದಲ್ಲಿ ಇಳಿಸಿಹರು
  ಸರಸರನೆ ಗಳವ ಕೆಳಗಡೆ- ಹಾಕಿದರು
  ಶಿರದ ಮೇಲಿದ್ದ ಸೂರ್ಯನು

  ಅಳಿಯದ ಸಂತಸ ಮನದಲ್ಲಿ ಮೂಡಿತ್ತು
  ಫಳಫಳ ಮನೆಯಾಗುವುದೆಂದು– ನಂಬಲು
  ಮಳೆಮೋಡ ಬಂತು ಗಗನದಿ

  ಮನೆಯವರ ಸಂಭ್ರಮ ಕಣವಾಗಿ ಕರಗಿತು
  ಹನಿಸಿತು ಕಣ್ಣು ಅಶ್ರುಗಳ-ಧಾರೆಯ
  ತನುಮನದ ಶಕ್ತಿಯುಡುಗಿತ್ತು

  ದೂರದಾಕಾಶದಲಿ ಭಾರೀಯಾಕಾರದಲಿ
  ಮಾರನ ಬಿಲ್ಲು ಮೂಡಿತ್ತು-ಪಡುವಣದಿ
  ಹಾರಿತ್ತು ಮನದ ಚಿತ್ತಾರ

  ಬಿಚ್ಚಿದ ಮನೆಯನ್ನು ಮುಚ್ಚುವುದು ಹೇಗಯ್ಯ
  ಹುಚ್ಚರಾದೆವು ನಾವಾಗ- ಹೀಗಿರಲು
  ಚುಚ್ಚುವರು ಜನರು ನಮ್ಮನ್ನು

  ದವಸದ ನಾಶಕೆ ಹವಣಿಸಿ ಮಳೆಯುತಾ
  ಬುವಿಗಿಳಿಯಿತಿಂತು ಹಿಂಸಿಸುತ-ನಮ್ಮನ್ನು
  ಭವದೊಳಗಾರೆಮ್ಮ ರಕ್ಷಿಪರು

  ಶಾಲೆಯ ಪುಸ್ತಕ ಹಾಳಾಗಿ ಹೋಯ್ತಲ್ಲ
  ಬಾಳಲಿ ಹೇಗೆ ಮುಖವೆತ್ತಿ-ಬದುಕಲಿ
  ಗೋಳಾಯ್ತು ಬದುಕು ಮಳೆಯಿಂದ

  ಧರಿಸಿಹ ಬಟ್ಟೆಬರೆಯೆಲ್ಲ ತೊಯ್ದಿರೆ
  ಬರಿಕೆಮ್ಮು ನೆಗಡಿ ನನಗಾಯ್ತು-ಆಕ್ಷಣದಿ
  ಧರೆಗಿಳಿದ ಮಳೆಗೆ ತೃಪ್ಪಿಯೇಂ?

 15. ಪದ್ಯದಲ್ಲಿ technical errors ಇರಬಹುದಾದರೂ ಚಿತ್ರಣ ಮನೋಜ್ಞವಾಗಿದೆ ಎನ್ನಿಸಿತು

 16. ವೇಸಿಗೆಯ ವರ್ಷವು ನೀರಲ್ತು ಕೆಳೆಯರೆ
  ಮೋಸಹೋದೀರದ ಪೀರ್ದು|
  ನೇಸರನ ರಥವನ್ನೆಳೆಯುವ ಹಯವ್ರಾತ
  ವೇ ಸುರಿಸುತ್ತಿರ್ಪ ಬೆವರು|| 😉

  • We are saved 🙂
   Since it is only bevaru

  • As I said earlier, fine imagination. But make it ರಥವನೆಳೆವ (ರಥವೆಳೆವ = ರಥವು + ಎಳೆವ)

   • Thank you sir. Corrected in the original post itself.

    • 1) ವೇಸಗೆಯ is better.
     2) ನೇಸರನಾ is not ನೇಸರನ. Have it as ನೇಸರನಽ.
     3) Though you can claim it as ಶಿಥಿಲದ್ವಿತ್ವ, it is better not to deploy it in ಲಗಾದಿ – as in ಹಯವ್ರಾತ. Suggestion: ನೇಸರನ/ ರಥವನ್ನೆ/ಳೆಯುವ ಹ/ಯವ್ರಾತ

 17. 🙂

 18. ಮೇಗಳ ರವಿತೇಜನುಳುವ-
  ಯೋಗಿಯವಂ ಭಾಗಿದಾರನುಂ ವರ್ಷಣಕಂ ।
  ಆಗಸದೆ ಬಿತ್ತೆ ಮೋಡವ
  ಬೇಗೆಯೊಳುಳುತಿರ್ಪುವಾಗೆ ಬೆಮೆತಿರ್ಪo ತಾಂ ।।

  (ಮುಂಬರುವ ಮಳೆಗಾಲಕ್ಕೆ) ಬೇಸಗೆಯ ಧಗೆಯಲ್ಲಿ ಬೆವರು ಸುರಿಸುತ್ತಾ – ಆಕಾಶವನ್ನು ಉತ್ತು ಮೋಡಬಿತ್ತನೆ ಮಾಡುತ್ತಿರುವ (ಮಳೆಯ ಕಾರಣಕರ್ತ) “ರೈತ” ರವಿಯ ಕಲ್ಪನೆಯ ಪದ್ಯ !!

 19. ಉರಿಯುವ ಗ್ರೀಷ್ಮದಿ
  ಧರಣಿಯ ರೂಪವು
  ಚುರುಚುರು ಕಾವಲಿಯಾಗಿಹುದು |
  ಪರಿಪರಿ ಹೂಗಳ
  ಸುರರುಚಿ ದೋಸೆಗೆ
  ಸುರಪತಿ ಚಿಮುಕಿಸಿದಾಪವನು ||

  (ಬೇಸಿಗೆಯಲ್ಲಿ ಭೂಮಿ ಕಾದ ಕಾವಲಿಯಂತಾಗಿದೆ. ಇದರ ಮೇಲೆ ವಸಂತದ ಹೂಗಳೆಂಬ ರುಚಿಯಾದ ದೋಸೆ ಮಾಡಲು ಇಂದ್ರನು ಮೊದಲು ನೀರು ಚಿಮುಕಿಸಿದನು)
  (ಬೇಸಿಗೆಯ ಮಳೆ ಸ್ವಲ್ಪ ಪ್ರಮಾಣದಲ್ಲಿ ಬರುವ ಕಾರಣ ಶರ ಷಟ್ಪದಿಯಲ್ಲಿ ಈ ನನ್ನ ಕಲ್ಪನೆ)

 20. ಸಾಕಾರದೆ ಚೈತ್ರದೆ ವೈ-
  ಸಾಕದೊಡೈದಿಹ ವಸಂತನಾಗಮನವದಂ
  ಲೋಕಾರ್ಪಣಂ ಕೊಳಲ್ ಭುವಿ
  ಸೋಕುತಲಿರ್ಪ ಜಲ ಪ್ರೋಕ್ಷಣಂ ಕಾಣ್ ವರ್ಷo ।।

  ಸುಂದರ “ವಸಂತ”ವನ್ನು ಲೋಗರಿಗೆ ನಿವೇದಿಸೆ ಚುಮುಕಿಸಿದ ನೀರು – ಬೇಸಗೆಯ ಮಳೆ !!

 21. ಜಲಜನಕ ಮೇಘವದು
  ಬಲುದೂರದೊಳು ಬೆಸೆಯು-
  ತಲಿ ಹೀಲಿಯಂ ಬೂದಿಯೆನಿಪ ರವಿ ಲೀಲೆ!
  ಕಳೆದ ದ್ರವ್ಯವು ಶಕ್ತಿ-
  ಸೆಲೆಯಾಗಿ ಸುರಿಯಿತದೊ
  ಇಳೆಯೊಳಗೆ ಬೇಸಿಗೆಯ ಉರಿಬಿಸಿಲ ಧಾರೆ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)