Apr 242017
 

  30 Responses to “ಪದ್ಯಸಪ್ತಾಹ ೨೫೨: ಚಿತ್ರಕ್ಕೆ ಪದ್ಯ”

  1. ತಿರಿಯನೆನುತ್ತಮ್ ತನ್ನಂ
    ಭರದಿಂ ಸಾಗಲ್ಕೆ ನೋಂಪಿಗಂ ಯತಿಯಾಗಳ್
    ತ್ವರೆಯಿಂ ಕೃಷ್ಣನ ಮುಡಿಯೊಳ್
    ಗರಿಯಂ ಸಾರಲ್ಕೆ ಪಕ್ಷಿಯಾದುದು ಮಲರೇ//

    ಯತಿಯೋರ್ವ ಹೂವನ್ನು ಕೊಯ್ಯದೆ ಪೂಜೆಗೆಂದು ಗಡಿಬಿಡಿಯಲ್ಲಿ ಹೋದಾಗ ಇನ್ನು ಕಾಯುವುದರಲ್ಲಿ ಅರ್ಥವಿಲ್ಲವೆಂದು ತಾನೇ ಪಕ್ಷಿಯ ರೂಪವನ್ನು ತಾಳಿ ಕೃಷ್ಣನ ಮುಡಿ ಸೇರಲು ಹೊರಟಿದೆ ಈ ಪುಷ್ಪ .

  2. ಅಳಿಯಂ ನೋಡುತೆ, ಹಿಗ್ಗುತೆ,
    ಮಳೆಯೊಳ್ ನಲಿವಿಂ ಮಯೂರಮದುತಾಂ ನಲಿವೊಲ್
    ಕೆಳೆಯಂ ಬಂದಿಹನೆನ್ನುತೆ
    ಬಳಿಗಂ, ಗರಿಯಂ ಸರಕ್ಕೆನುತೆಬಿಚ್ಚಿತೆ ಪೂ?

    ದುಂಬಿ ಹೂವಿಂದ ಆಕರ್ಷಿತವಾಗುವುದು ರೂಢಿ..ಇಲ್ಲಿ,ಹೂವೇ ದುಂಬಿಯಿಂದ ಆಕರ್ಷಿತವಾಗಿ ಅದನ್ನು ಸೇರಲು ಅಣಿಯಾದ ಹಾಗಿದೆ.

    • ತುಂಬ ಸೊಗಸಾಗಿದೆ. ನಲಿವವೊಲ್ ಆಗಬೇಕು. ಮಯೂರಮೊಲ್ದು ನಲಿವವೊಲ್ ಅಂತ ಮಾಡಬಹುದು.

      • ಧನ್ಯವಾದಗಳು _/\_. ನಿಮ್ಮ ಸಲಹೆಯಂತೆ ತಿದ್ದಿದ ಪದ್ಯ ಇಲ್ಲಿದೆ.
        ಅಳಿಯಂ ನೋಡುತೆ, ಹಿಗ್ಗುತೆ,
        ಮಳೆಯೊಳ್ ನಲಿವಿಂ ಮಯೂರಮೊಲ್ದು ನಲಿವವೊಲ್
        ಕೆಳೆಯಂ ಬಂದಿಹನೆನ್ನುತೆ
        ಬಳಿಗಂ, ಗರಿಯಂ ಸರಕ್ಕೆನುತೆಬಿಚ್ಚಿತೆ ಪೂ?

    • ಚೆನ್ನಾದ ಕಲ್ಪನೆ.

  3. ಹೂವನರಳಿಪ ಕಿರಣ ಕೌಶಲ್ಯದೊಳು ಭಾನು-
    ದೇವ ತೋರಿದ ಕರುಣೆ ಹಾರೈಕೆಯೊಳಗೆ!
    ಭಾವನೆಯ ಮೊಗ್ಗರಳಿ ಪೂರ್ಣತ್ವದೆಡೆಗೆ ನಿಜ-
    ಠಾವ ಹುಡುಕುತ ಕುಸುಮ ಹಾರಹೊರಟಿಹುದೆ!

    ನಿರತ ಸಾಧನೆಯೊಳಗೆ ತನ್ನದೇ ದಳಗಳನು
    ಹುರಿಗೊಳಿಸಿ ರೆಕ್ಕೆಯನ್ನಾಗಿಸಿತೆ ಸುಮವು!
    ಸರಿವ ಕಾಲದಿ ಬಾಡಿ ಉದುರಿಹೋಗುವ ಮುನ್ನ
    ಅರಿವ ನಭದೆಡೆ ನೆಗೆಯಲೆಳೆಸಿಹುದೆ ಮನವು!

    ರೆಕ್ಕೆ ಪುಕ್ಕಗಳೆಲ್ಲ ಅಳಿದು ಹೋಗುವ ಮುನ್ನ
    ದಕ್ಕಿಹೋಗಲಿಯೊಮ್ಮೆ ಅಳಿವಿರದ ರಾಜ್ಯ!
    ಸಿಕ್ಕಿದವಕಾಶದಲಿ ಪೂರ್ಣವಾಗಲಿ ಬದುಕು
    ದಿಕ್ಕು ತೋರಲಿ ಹರಿಯು ಸೇರಲವಿಭಾಜ್ಯ!
    ಕೃಷ್ಣಪ್ರಸಾದ್

    • chennaagide padypunja! 🙂 ನಿಜಠಾವ – is ari-samaasa. And also there are few visandhi’s.

      • ಹೂವನರಳಿಪ ಕಿರಣ ಕೌಶಲ್ಯದೊಳು ಭಾನು-
        ದೇವ ತೋರಿದ ಕರುಣೆ ಹಾರೈಕೆಯೊಳಗೆ!
        ಭಾವನೆಯ ಮೊಗ್ಗರಳಿ ಪೂರ್ಣತ್ವದೆಡೆಗೆ ದಿಟ-
        ಠಾವ ಹುಡುಕುತ ಕುಸುಮ ಹಾರಹೊರಟಿಹುದೆ!

        ನಿರತ ಸಾಧನೆಯೊಳಗೆ ತನ್ನದೇ ದಳಗಳನು
        ಹುರಿಗೊಳಿಸಿ ರೆಕ್ಕೆಯನ್ನಾಗಿಸಿತೆ ಸುಮವು!
        ಸರಿವ ಕಾಲದೊಳುದುರಿ ಬಾಡಿ ಹೋಗುವ ಮೊದಲಿ-
        ಗರಿವ ನಭದೆಡೆ ನೆಗೆಯಲೆಳೆಸಿಹುದೆ ಮನವು!

        ರೆಕ್ಕೆ ಪುಕ್ಕಗಳೆಲ್ಲವಳಿದು ಹೋಗುವ ಮುನ್ನ
        ದಕ್ಕಿಹೋಗಲಿಯೆಮಗದಳಿವಿರದ ರಾಜ್ಯ!
        ಸಿಕ್ಕಿದವಕಾಶದಲಿ ಪೂರ್ಣವಾಗಲಿ ಬದುಕು
        ದಿಕ್ಕು ತೋರಲಿ ಹರಿಯು ಸೇರಲವಿಭಾಜ್ಯ!
        ಕೃಷ್ಣಪ್ರಸಾದ್

    • ನಿರತ – it should be niruta?

  4. ಅನಂತಗಗನಾಂತಮಾಂತವಿರಲಪ್ರಭಾಲಾಸದಿಂ
    ಮನೋಮಿತಿಯ ಸಾಂತದೊಳ್ ಮಿನುಗಿ ಮಾಯವಾಗುತ್ತೆ ಕ-
    ಲ್ಪನಾವಿಹಗಮಿಂತಿದೋ ಕವಿಯಚಿಂತಿತಸ್ಫೂರ್ತಿಯೆಂ-
    ಬಿನೀ ಲತೆಯ ಪಿಂಜರಕ್ಕೆರಗಿ ಬದ್ಧಮಾಗಿರ್ದುದೇಂ!

    ಅನಂತಗಗನದಲ್ಲಿ ತನ್ನ ಅವಿರಲವಾದ ಪ್ರಭಾಲಾಸದಿಂದ ಹರಡಿ, ಮನಸ್ಸಿನ ಸಾಂತದಲ್ಲಿ ಮಿನುಗಿ ಮಾಯವಾಗುವ ಕಲ್ಪನಾಪಕ್ಷಿ, ಇದೋ, ಕವಿಯ ಅಚಿಂತ್ಯವಾದ ಸ್ಫೂರ್ತಿಯೆಂಬ ಬಳ್ಳಿಯ ಪಂಜರದಲ್ಲಿ ಸಿಕ್ಕಿಹಾಕಿಕೊಂಡಿದೆ.

  5. ಮುಕುಲಿತ ಮಂದಹಾಸ ಪಸರಂಬಡೆಯಲ್ ಪಸೆ ಸಂದ ಮಾತ್ರದಿo
    ಮಕರಿಸುತುಂ ಭಲಾ ಪಸಿರದೊತ್ತುತಲೆತ್ತಿಹ ಪುಷ್ಪಪಾತ್ರೆಯೊಳ್
    ವಿಕಸಿತ ಬೆಳ್ಪು ಬೆಳ್ಕರಿಸೆ ಮೈದಳೆದಂದದ ಪಕ್ಷ್ಮಪಾತ್ರದೀ
    ಸಕಲಕಲಾ ವಿಧಂ, ಜಗದೆ ಮಂಗಳಕಾರಣ ಜೀವಜಾತ್ರೆಯೇo ?!!

    ಮುಕುಲಿತ = ಮೊಗ್ಗಾದ, ಪಸರಂಬಡೆ = ಬಿಚ್ಚಿ ಹರಡು,ಪಸೆ = ತೇವ / ಸತ್ತ್ವ, ಮಕರಿಸು = ಗಾತ್ರ ಹೆಚ್ಚಾಗು, ಬೆಳ್ಪು = ಕಾಂತಿ, ಬೆಳ್ಕರಿಸು = ಬಿಳಿಯ ಬಣ್ಣ ಹೊಂದು, ಪಕ್ಷ್ಮ = ರೆಕ್ಕೆ / ಹೂವಿನ ಕೇಸರ

    ಚಿತ್ರದಲ್ಲಿ ಕಂಡ – ಹಸಿರು ಪುಷ್ಪಪಾತ್ರೆ / ಜಗದ ಜೀವಜಾತ್ರೆ – ಬಗೆಗಿನ “ಚಂಪಕಮಾಲೆ” !!

    • aahaa! sogasaada kalpane mattu padya 🙂 allalli haLagannaDada paddhati tappide.

      • ಧನ್ಯವಾದಗಳು ನೀಲಕಂಠ, ದಯವಿಟ್ಟು ಪದ್ಯವನ್ನು ತಿದ್ದಲು ಸಹಾಯಮಾಡು.

  6. ಹಾರಿ ಪರಮಾತ್ಮನನ್ನು ಸೇರಲು ಬರಿಯ ಎರಡು ರೆಕ್ಕೆಗಳಿದ್ದರೆ ಸಾಕೆ ಆತ್ಮನಿಗೆ? (ಕಾಂಡ/)ಭವದಿಂದ ಬಿಡಿಸಿಕೊಳ್ಳದೆ ಬರಿದೆ ಭೋರೆಂದು ರೆಕ್ಕೆಯ ಬೀಸಿ ಪ್ರಯೋಜನವೇನು?

    ಹಿತವಿಲಂಬಿತ|| ಪಾರುಗಾತ್ಮಕಮೀರಿರೆ ರೆಂಕೆಗಳ್ (ಪಾರುಗೆ ಆತ್ಮಕಂ ಈರ್/2 ಇರೆ)
    ಸೇರಲಾಪುದೆ ತಾಂ ಪರಮಾತ್ಮನಂ?
    ಭೋರಿನೇಂ ಗಡ ಬೀಸೆ ಪತತ್ರಮಂ,
    ವೇರೆಯಾಗದಿರುತುಂ ಭವಲೇಪದಿಂ(ಅಂಟು)??

  7. ಕೊರೆವಾ ಹಿಮಂತನವಧಿಂ ನಿರುತ್ಸುಕಂ,
    ಮರೆತೆಲ್ಲ ಕಜ್ಜಮಸೊಗಂ; ಬರಲ್ಕೆ ಭಾ
    ಸ್ಕರನೊಲ್ ವಸಂತಮರಸಂ ಸುಮಂ ಮುದಂ!
    ಸ್ವರಮಾಲಿಸಿರ್ಪ ಖಗದಂತೆ ಪೂ ಮನಂ

    (ಚಳಿಗಾಲದಲ್ಲಿ ನಿರುತ್ಸಾಹದಿಂದ ಕೆಲಸವಿಲ್ಲದೇ ಅಸುಖವೇ ತುಂಬಿದೆ. ಇಂತಹ ಕಾಲದಲ್ಲಿ ಋತುರಾಜ ವಸಂತನು ಭಾಸ್ಕರನಂತೆ ಬಂದಾಗ ಹೂಗಳ ಮನಸ್ಸು ಹಾಡು ಕೇಳಿದ ಹಕ್ಕಿಯಂತೆ ಮುದದಿಂದ ಹಾರಿದೆ.)

    • ಕಲ್ಪನೆ ಚೆನ್ನಾಗಿದೆ. ಕೊರೆವಾ is not = ಕೊರೆವ. ಅವಧಿಂ ಅಸಾಧುಪ್ರಯೋಗ. ಭಾಸ್ಕರನೊಲ್ ಎಂದಾಗಬೇಕು. ಬರೆದಂತೆ/ ಸವರಿದಂತೆ ಕವನಿಕೆ ಸುಧಾರಿಸುತ್ತದೆ. ಹೆಚ್ಚುಹೆಚ್ಚು ತೊಡಗಿಕೊಳ್ಳಿ.

      • ಸಲಹೆಗಳಿಗೆ ಧನ್ಯವಾದಗಳು! ಕೊರೆವಾ ಹಿಮಂತ=ಕೊರೆವ+ಆ ಹಿಮಂತನ ಅಸಾಧು ಪ್ರಯೋಗ ಎಂದರೇನು? ಅದನ್ನು ಗುರುತಿಸುವುದು ಹೇಗೆ? ಪ್ರತಿ ಸಪ್ತಾಹಕ್ಕೂ ಪದ್ಯ ರಚಿಸುತ್ತಿದ್ದೇನೆ. ಪ್ರಮಾಣ ಹೆಚ್ಚು ಮಾಡಿಕೊಳ್ಳಬೇಕು.

      • ’ಆ’ ಎಂಬ ಅವಧಾರಣ ಇಲ್ಲಿ ಅನಾವಶ್ಯಕ. (ಅಸಾಧು=incorrect)

        • “ಅವಧಿ” ಪದದ ಹಳಗನ್ನಡ ರೂಪವೇನು?

          • ಅವಧಿ. “ಇ” ಕಾರಾಂತ ಶಬ್ದಗಳೆದುರು ಬಿಂದು ಬರುವುದಿಲ್ಲ. “ಅ ” ಕಾರಾಂತ ಶಬ್ದಗಳೆದುರು ಪ್ರಥಮಾ ವಿಭಕ್ತಿಯಲ್ಲಿ ಬರುತ್ತದೆ. ಮುದಂ,ರಾಮಂ
            ಇತ್ಯಾದಿ.

          • ವರಮಲ್ತು ಹೈಮಸಮಯಂ ನಿರುತ್ಸುಕಂ|

            ಮೊದಲ ಪಾದ ಹೀಗೆ ಮಾಡಬಹುದೇ?

  8. ಚಣಕಾಲಮಷ್ಟೆ ಕಾಣ್ಕೆಯನುಮೀವನು ದೇವ
    ಹೆಣೆಯಬೇಕದಕಲ್ಲೆ ದರ್ಶನಮನುಂ|
    ಪ್ರಣಮಿಸದ ಶಾಶ್ವತವಗೈದ ಛಾಯಾಗ್ರಾಹ-
    ನೆಣೆಮೀರಿರುವ ಕೌಶಲಕೆ ಕವಿಗಳೆ||

  9. ಹೊತ್ತ ರೆಂಕೆಯ ಹರಡಿ
    ಕತ್ತೆತ್ತಿ ಹಾರುವೊಲು
    ಗತ್ತಿನಿ೦ದೇರಲಿದು ವಿಹಗವೇನು!?
    ಕತ್ತಲೆಯ ಭಿತ್ತಿಯೊಳು
    ಮೆತ್ತಿ ತಾರೆಯ ಹೊಳಪ
    ಕೆತ್ತಿ ತೀಡುತಬರೆದ ಚಿತ್ರವೇನೋ !?

  10. ಅಡಿಯನಿರಿಸಿರೆ ಹರೆಯ, ಹಸುರದು-
    ವೊಡನೆ ಬಯಸಿರೆ ಮುಗುಳ ಮುಂಗುಡಿ
    ಉಡಿಲು ತುಂಬುತಲಡರಿ ಪಕ್ಕಿಯು ತಡೆದ ಧಾವಂತಂ ।
    ತಡವಿ ತೊನೆಯುತ ಬಳ್ಳಿ ಬಗೆಯಿಂ
    ಮುಡಿಸಿ ಬೆಳ್ಳಂಬೆಡಗಿ ಬಸುರಿಗೆ
    ಮಡಿಲುದುಂಬಲು ಪಸಿರನುಡಿಸಿರೆ ನಡೆದ ಸೀಮಂತಂ ।।

    ಬಳ್ಳಿಗೆ ಕಳೆದ ಧಾವಂತ / ಹಕ್ಕಿಗೆ ನಡೆದ ಸೀಮಂತ !!

  11. ಶಾಪಗ್ರಸ್ತಖಗೇಂದ್ರನೊರ್ಮೆ ಬುವಿಯೊಳ್ ಪೂವಾಗುತುಂ ಪುಟ್ಟಿರ
    ಲ್ಕಾಪತ್ಕಾಲದೊಳಾಣ್ಮನಂ ನೆನೆದಿರಲ್ ಕ್ಷೀರಾಬ್ಧಿವಿಶ್ರಾಂತನಂ
    ಕೋಪಾವೇಶವಿಲಾಪಹಾರಿ ಹರಿಯಂ ಮುಕ್ತಿಪ್ರದಾತಾರನಂ
    ರೂಪಂದೋರುತೆ ಪಾಪಮಂ ಕಳೆದನಾ ಸತ್ಪಾತ್ರರುದ್ಧಾರಕಂ

    ಶಾಪಗ್ರಸ್ತನಾಗಿ, ಹೂವಾಗಿ ಹುಟ್ಟಿದ ಗರುಡನಿಗೆ ವಿಷ್ಣು ಪ್ರತ್ಯಕ್ಷನಾಗಿ ಶಾಪವಿಮೋಚನೆಗೈದ ಅನ್ನುವ ಕಲ್ಪನೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)