May 012017
 

ಸತ್ಯಾಗ್ರಹ(strike)ವನ್ನು ಕುರಿತು ಪದ್ಯರಚನೆ ಮಾಡಿರಿ

  45 Responses to “ಪದ್ಯಸಪ್ತಾಹ ೨೫೩: ವರ್ಣನೆ”

  1. ಚಿತ್ತಂ ಬಯಸಲ್ ಸಾನಂ
    ವಿತ್ತಂ ಪೆಸರಿನ ಚಣಿಕ ಶರಧಿಯೊಳ್; ವಧಿಸಲ್
    ಮತ್ತಂ ಮತಿಯಂ, ಸತ್ಯದ
    ಮುತ್ತಿನ ಕವಚಂ ತೂಡಲ್ಕೆ ಶಕ್ಯಂ ಹೃದಯಂ

    (ಮನಸ್ಸು ಸಂಪತ್ತು ಎಂಬ ಕ್ಷಣಿಕವಾದ ಸಾಗರದಲ್ಲಿ ಮೀಯಲು ಬಯಸಿದೆ. ಆದರೆ ಈ ಮತ್ತು ತುಂಬಿದ ಬುದ್ಧಿಯನ್ನು ನಿರ್ನಾಮ ಮಾಡಿದರೆ ಹೃದಯವು ಸತ್ಯವೆಂಬ ಮುತ್ತಿನ ಕವಚವನ್ನು ತೊಡಲು ಸಾಧ್ಯ!)

    ಸತ್ಯಾಗ್ರಹ= ಸತ್ಯವನ್ನು ತೊಡುವುದು

    • ಚೆನ್ನಾಗಿದೆ.
      ಚಣಿಕಶರಧಿ ಅರಿಸಮಾಸ. ಅಷ್ಟಲ್ಲದೇ ಆ ಮಧ್ಯದ ಗಣವೂ ಕಂದಪದ್ಯದ ನಿಯಮಕ್ಕೆ ಹೊಂದಿಲ್ಲ.

      • ಧನ್ಯವಾದಗಳು !
        ಇದು ನನ್ನ ಮೊದಲ ಕಂದಪದ್ಯ. ಹಾಗಾಗಿ ನಿಯಮ ಭಂಗ ಎಲ್ಲೆಂದು ತಿಳಿಯುತ್ತಿಲ್ಲ.
        ಎರಡನೆಯ ಸಾಲನ್ನು-” ವಿತ್ತಂ ಪೆಸರಿನ ಸಮುದ್ರದೂಳಗಂ ವಧಿಸಲ್” ಎಂದು ಬದಲಿಸಬಹುದೇ?

        • ನಿಮ್ಮ ತಿದ್ದುಗೆ ಸರಿಯಾಗಿದೆ. ಇದೇ ತಾಣದಲ್ಲಿರುವ ಕೆಲವು ಮಾಹಿತಿಗಳಿಂದ ನಿಯಮಗಳನ್ನು ಅಭ್ಯಸಿಸಿ.

          • ವಿತ್ತಮೆನಿಪ್ಪಬ್ಧಿವಾರಿಯೊಳಗಂ, …. ಎಂದರೆ ಇನ್ನೂ ಸ್ಪಷ್ಟ, ಸಾಧು.

          • ಈಗ ತಿಳಿಯಿತು

  2. ಜನತಾಮೇರುವೆ ಬಂಧಮಾಗಿ ಬಗೆಯಲ್ ನ್ಯಾಯಾಂಗನಾಗೇಶನಿಂ
    ತೊನೆಯುತ್ತಿರ್ಪುದು ರಾಜಕೀಯಶರಧಿಪ್ರಾಂತoಗಳೊಳ್ ಧೂರ್ತರಾ/
    ಮನದಿಂ ಪೊಣ್ಮುವ ಘೋರಮಿರ್ಪ ಬಿಸಮೇ ಹಾಲಾಹಲಂ ದಾಹಕಂ
    ಕೊನೆಯೊಳ್ ಬರ್ಪುದು ಕಾಮ್ಯವಸ್ತುವದರಿಂ ಸತ್ಯಾಗ್ರಹಂ ಮಂಥನಂ//

    ಜನತೆ ಎಂಬ ಮೇರುಪರ್ವತವು ಭೀಕರವಾದ ರಾಜಕೀಯ ಸಮುದ್ರದ ಕೇಂದ್ರದಲ್ಲಿ ನ್ಯಾಯಾಂಗ ಎಂಬ ನಾಗೇಶ(ವಾಸುಕಿ)ನಿಂದ ಬಂಧಿತವಾಗಿ ತೊನೆಯುತ್ತಿದೆ.ಆಗ ಕೆಲವು ಧೂರ್ತರು ಕಾರ್ಕೋಟಕದಂತಹ ದಾಹಕ ವಿಷವನ್ನು ಕಾರುತ್ತಾರೆ. ಆದರೂ ಕೊನೆಯಲ್ಲಿ ಕಾಮ್ಯವಸ್ತು(ಹಕ್ಕು, ಬೋನಸ್ ಇತ್ಯಾದಿ) ದೊರಕುವುದರಿಂದ ಸತ್ಯಾಗ್ರಹವು ಸಮುದ್ರಮಂಥನದಂತಹ ಕಾರ್ಯವೇ ಆಗಿದೆ.

    • ನಿಮ್ಮ ಕಲ್ಪನೆ ಅಮೋಘವಾಗಿದೆ.
      ಎರಡನೆಯ ಸಾಲಿನಲ್ಲಿ ‘ಶರಧೀ’ ಪದದ ಸರಿಯಾದ ರೂಪ ‘ಶರಧಿ’ಯಲ್ಲವೇ?
      ಶರಧಿ+ಈ ಎಂದಾದರೆ, ಈ ಎಂಬ ಅವಧಾರಣ Gap filler ಅಂತೆ ತೋರಿದೆ!
      ಇದು ನನ್ನ ಅನಿಸಿಕೆಯಷ್ಟೇ…!

      • ಧನ್ಯವಾದಗಳು. ನಾನು ಬಳಸಿದ್ದು gap filler ನಂತೆ ಅಲ್ಲ. ಗೌರೀಪುತ್ರ, ಪಾರ್ವತೀತನಯ ಇತ್ಯಾದಿಯಾಗಿ ಬಳಸುವಂತೆ “ಶರಧೀಕೇಂದ್ರ” ಎಂದು ಬಳಸಿದ್ದು. ಸಾಧುತ್ವದ ಬಗ್ಗೆ ತಿಳಿದವರು ಹೇಳಬೇಕು.

    • ಅದು ಶರಧಿಕೇಂದ್ರ. ಗೌರೀ, ಪಾರ್ವತೀ ಇತ್ಯಾದಿ ಮೂಲಪದಗಳೇ ಈ ದೀರ್ಘ ಹೊಂದಿವೆ. ಆದರೆ ಶರಧಿ ಹ್ರಸ್ವಾಂತ್ಯ. ಅಂತೆಯೇ ಬಿಸಮೇ, ವಸ್ತುವದರಿಂ ಆಗಬೇಕು. ಕಾರ್ಕೋಟಕ ವಿಷದ ಹೆಸರೇ? ಅದೊಂದು ಸರ್ಪ. ಹಾಲಾಹಲಂ ಅಂತ ಬಳಸಬೇಕಲ್ಲವೇ.

      • ಸ್ಪಷ್ಟನೆಗಳಿಗಾಗಿ ಧನ್ಯವಾದಗಳು ನೀಲಕಂಠರೆ. ನಾನು ಕಾರ್ಕೋಟಕವೆಂಬುದು ವಿಷದ ಹೆಸರೆಂದೇ ತಿಳಿದಿದ್ದೆ. Corrected

        • ನೀನು ಹವ್ಯಕನಲ್ಲವೆ! ಹಾಗಾಗಿ, ’ಕೋಟ’ದವರು ’ಕಾರು’ವುದು ಏನನ್ನು ಎಂದು ನಿನಗೆ ತಿಳಿಯದಿರಲಿಕ್ಕೆ ಸಾಕು!

  3. ಮೋಹನದಾಸ ವೃಕ್ಷದೊಳೆ ಪುಟ್ಟಿದ ಸತ್ಫಲಮಲ್ತೆ ಮತ್ತಮಾ
    ಸಾಹಸದಿಂದಲಾಂಗ್ಲ ಪಶುಸಂಕುಲಘಾತುಕ ಕಯ್ಪದಾಗಿ ಮೇಣ್ /
    ದಾಹಕ ವಹ್ನಿಯoತುರಿದು ತತ್ಕುಲಕೀರ್ತಿಯ ಶುಭ್ರವಸ್ತ್ರಕಂ
    ನೇಹದ ಕರ್ಪನೇ ಭರದೆ ಪೆರ್ಚಿದುದಾಗ್ರಹಮಿಂತು ಲೋಕದೊಳ್//

    ಮೋಹನದಾಸ ಎಂಬ ವೃಕ್ಷದಲ್ಲಿ ಹುಟ್ಟಿದ ಈ ಸತ್ಫಲವು ಬ್ರಿಟಿಷರೆಂಬ ಪ್ರಾಣಿ ಸಂಕುಲಕ್ಕೆ ಕಹಿಯೇ ಆಯಿತು ಮತ್ತು ಅದು ಅಗ್ನಿಯಂತೆ ಉರಿದು ಆಂಗ್ಲರ ಕೀರ್ತಿ ಎಂಬ ಶುಭ್ರ ವಸ್ತ್ರಕ್ಕೆ ಜಿಡ್ಡಿನ ಮಸಿಯನ್ನು ಹಚ್ಚಿತು.

    • ಕೊನೆಯ ಸಾಲು ತಪ್ಪಿದೆ. ವಹ್ನಿಯವೋಲುರಿದು. ವಹ್ನಿಯಂತುರಿದು ಮಾಡಬಹುದು. ಒಳ್ಳೇ ಕಲ್ಪನೆ.

  4. ಪಯೋಧಿಭವಗಂ ದಿಟಂ ಪ್ರಬಲಮಾಯುಧಂ ಗಾಂಧಿಗಂ |
    ಸುಯೋಗಖನಿಜಂ ನಿಜಂ ಭರತದೇಶದೊಳ್ ದೇವಸ ||
    ತ್ಯಯೋಗಿ ತೆರಳಲ್ ಪಿತಂ ಬರಿಯ ಹಾಳೆಯೊಳ್ ಚಿತ್ರಿತಂ |
    ಮಯೂಖಮುಡುಗಲ್ ವಶಂ ಕುಪತಿ ಮೋದಿಯಿಂ ಚಿತ್ತರಂ ||

    (ಉಪ್ಪಿಗಾಗಿ ಗಾಂಧಿಗೆ ಸತ್ಯವೇ ಆಯುಧವಾಗಿತ್ತು. ಸುಯೋಗದ ರತ್ನದಂತೆ ಇದ್ದ ಅವರು ನಿಜಕ್ಕೂ ಭಾರತದ ದೇವರು. ಈ ಸತ್ಯಯೋಗಿಯು ತೀರಿಕೊಂಡಾಗ ಜನರು ಆ ಹೋರಾಟವನ್ನು ಕಾಗದದ ಮೇಲೆ ಚಿತ್ರಿಸಿದರು. ಆದರೆ ಧರ್ಮದ ಬೆಳಕು ಕ್ಷೀಣಿಸಿದಾಗ ಭಾರತದ ರಾಜ ಮೋದಿಯು ಆ ಚಿತ್ರವನ್ನೂ ಅಮಾನ್ಯ ಮಾಡಿದರು)

    ಹಳೆಯ 500 ರೂಪಾಯಿ ನೋಟು ಅಮಾನ್ಯವಾದ ಪ್ರಸಂಗ!

  5. What has been the result of the various satyaagraha-s? Strike camps, fasting dramas, slogans – nothing more. What is right for the nation are the policies of Krishna and Chanakya.
    ಭುಜಂಗಪ್ರಯಾತ|| ಗಡೇನೆಂಬೆ ಸತ್ಯಾಗ್ರಹಪ್ರತ್ಯಯಂ(effect) ತಾಂ
    (Tent)ಗುಡಾರಂ-ನಿರಾಹಾರ-ಘೋಷಂ(slogan)ಗಳಂತೇ!
    ಗುಡಾಕೇಶನಾಚಾರ್ಯ(Krishna)-ಚಾಣಕ್ಯಕಾರ್ಯಂ
    ಜಡೀಭೂತರಾಷ್ಟ್ರಕ್ಕಹೋ ರಾಮಬಾಣಂ||

  6. ಸತ್ಯಮಮ್ ಮೆಚ್ಚುವರ್ ಸಂದೊಡಂ ಬಹುಮಂದಿ
    ನಿತ್ಯಮಾಚರಣೆಯಿಂ ಪಾಲಿಪರದೆಷ್ಟು?
    ದೌತ್ಯರೆಂಬೊಲ್ ನಟಿಸೆ ಸತ್ಯಸಾಮ್ರಾಜ್ಯದಾ
    ಸ್ತುತ್ಯಮಪ್ಪುದೆ ಸುಲಭವೆಂಬುವರದೆಷ್ಟು!!

  7. ಕೆಲವರ್ ದೇಶದ ಪೆರ್ಮೆಯಂ ಪೆರ್ಚಿಸಲ್ ಕೈದೆನ್ನುವೊಲ್ ಕಂಡಿರಲ್
    ಪಲವರ್ಗಾಗಿರೆ ಸ್ವಾರ್ಥಸಾಧನಮಿದಾ ದೈತ್ಯರ್ಗೆ ಧೀಶಕ್ತಿಯೊಲ್
    ಕಲಹೋಲ್ಲಾಸವಿಲಾಸಿಗಳ್ಗಮಿದು ಮೇಣ್ ಕ್ಷಿಪ್ರಪ್ರಚಾರಾತ್ಮಕಂ
    ನೆಲಮಂ ನಂಬಿದ ಮುಗ್ಧಜೀವಿಗಳಿಗಂ ವಜ್ರಾಯುಧಾಘಾತಮಯ್

    ಕೆಲವರು ಇದನ್ನು ದೇಶೋದ್ಧಾರಕ್ಕಾಗಿ ಆಯುಧದಂತೆ ಉಪಯೋಗಿಸುತ್ತಾರೆ.
    ಇನ್ನು ಹಲವರು ಸ್ವಾರ್ಥ ಸಾಧನೆಗಾಗಿ (ದೈತ್ಯರು ತಮ್ಮ ಬುದ್ಧಿಯನ್ನು ಉಪಯೋಗಿಸುವಂತೆ) ಇದನ್ನು ಉಪಯೋಗಿಸುತ್ತಾರೆ(ಕನ್ಹಯ್ಯ ಕುಮಾರ್)
    ಇನ್ನೂ ಕೆಲವರು ರಾಜಕಾರಣಿಗಳು ಶೀಘ್ರ ಪ್ರಸಿದ್ಧಿಗಾಗಿ,ಇನ್ನೊಬ್ಬರನ್ನು ನಿಂದಿಸಲು ‌ಇದನ್ನು ಉಪಯೋಗಿಸುತ್ತಾರೆ(ಕೇಜ್ರಿವಾಲ್). ಆದರೆ ಸಾಮಾನ್ಯ ಜನರಿಗೆ ಇದು ತೊಂದರೆಯನ್ನೇ ಉಂಟುಮಾಡುತ್ತದೆ.

  8. (ಸಾಂಗತ್ಯ ಬರೆಯುವ ಯತ್ನ ಮಾಡಿದ್ದೇನೆ)

    ಯುವಯೂಥಂ ಕರುನಾಡೊಳಾಗ್ರಹಂ ಗೈವರ
    ನವರತ ಯುದ್ಧೋತ್ಸಾಹದಲಿ|
    ನೆವಮೇಮೆಂದವರನುಂ ಕೇಳಲ್ ನುಡಿಯುವರ್ ಹು
    ಳಿವಿಗಾಗಿ ವೋರಾಟಮೆಂದು ||

    [ಇಂದಿನ ಯುವಜನತೆ ಹೋರಾಟ ಮಾಡುತ್ತಾರೆ. ಕಾರಣ ಕೇಳಿದಾಗ “ಕನ್ನಡದ ಹುಳಿವಿಗಾಗಿ ವೋರಾಟ” ಎಂದು ಹೇಳುತ್ತಾರೆ.
    ಭಾಷೆಯೇ ತಪ್ಪು ಮಾತನಾಡುತ್ತಾ ಭಾಷೆಯ ಉಳಿವಿಗೆ ಹೋರಾಡುವವರ ಪರಿಸ್ಥಿತಿ]

    ಸಾಂಗತ್ಯದ ಬಗೆ:

    ಯುವಯೂಥಂ| ಕರುನಾಡೊs| ಳಾಗ್ರsಹಂ|ಗೈವsರs |
    ನವರsತs | ಯುದ್ಧೊತ್ಸಾ| ಹದಲಿs
    ನೆವಮೇಮೆಂ| ದವರsನುಂ| ಕೇಳಲ್ ನುs| ಡಿಯುವರ್ ಹುs|
    ಳಿವಿಗಾಗಿs| ವೋರಾಟs| ಮೆಂದುs

  9. ಸಾವಂ ಗೆಲ್ಡಿರೆ ಸತ್ಯಂ,
    ನೋವನ್ನಿತ್ತೊಡನುಮೀದಿರುತ್ತುಂ ಜಸಮಂ,
    ಭೂವಾರಿಧಿಯೊಳ್ ಸುಜನರ್
    ಕಾವರಿದಂ ಹೋರುತಾಗ್ರಹಿಸುತುಂ ,ಗೆಲುತುಂ!

  10. ಒದಗಿ ಬಂದಿಹ ಜನನ ಹುದುಗಿ ಕುಳಿತಿಹ ಮರಣ
    ಹದುಳಕಿರೆ ಮನುಜರಲೆ ತಾರತಮ್ಯo ।
    ಕದಲುಗೊಂಡಿಹ ಮನವು ಹುಡುಕಲುತ್ತರವದಕೆ
    ಬದುಕೆ ಸತ್ಯಾಗ್ರಹದ ಧರ್ಮಯುದ್ಧo ।।

    • ಪದ್ಯ ಸೊಗಸಾಗಿದೆ! ಆದರೆ ಯಾವ ಛಂದಸ್ಸು? ತಿಳಿಯಲಿಲ್ಲ.

      • ಪಂಚಮಾತ್ರಾ ಚೌಪದಿಯಲ್ತೆ?

      • ಹೌದು, “ಬದುಕೆ ಸತ್ಯಾಗ್ರಹವು ಮಂಕುತಿಮ್ಮ” – ಅಂದುಕೊಂಡು ಕಗ್ಗದ “ಮಾದರಿ”ಯಲ್ಲಿ ಬರೆದ ಪದ್ಯ !! ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಚೇತನ್ & ಅನಂತ್.
        ಇತ್ತೀಚೆಗೆ ಪದ್ಯಪಾನದಲ್ಲಿ ನಿಮ್ಮಮತ್ತು ಮಂಜುನಾಥ್, ಕೃಷ್ಣಪ್ರಸಾದರ ಬಹಳ ಸೊಗಸಾದ ಪದ್ಯಗಳು ಮೂಡಿಬರುತ್ತಿದ್ದು ಬಹಳ ಸಂತೋಷ ತಂದಿದೆ. ಎಲ್ಲರಿಗೂ ನನ್ನ ತುಂಬು ಹೃದಯದ ಅಭಿನಂದನೆಗಳು.

  11. ಅಡಿಗೆಯೊಳು ಲವಣವನ್ನಧಿಕಗೊಳಿಸಿದ ಸತಿಯು
    ಬಡಿಸುತಲೆ ಬಿಗುಮುಖದಿ ತನ್ನ ಪತಿಗೆ!
    ಮಡದಿ ಹೂಡಿದ “ಲವಣ ಸತ್ಯಾಗ್ರಹ”ಕೆ ಮಣಿದು
    ತೊಡಿಸಿದನು ಪತಿರಾಯ ಮೊಳ ಮಲ್ಲಿಗೆ!
    ಕೃಷ್ಣಪ್ರಸಾದ್

    • ಕವನ ಮಲ್ಲಿಗೆಯ ಕಂಪು ಮನೋಹರವಾಗಿದೆ!

    • ಪದ್ಯವು ಸರಳಸುಂದರವಾಗಿದೆ.
      ಈ ಪರಿಯ ಲವಣಸತ್ಯಾಗ್ರಹವ ಮಡದಿಯರು
      ಮೋಪಾಗಿ ಮಾಡದಿರ್ಪುದು ಒಳ್ಳಿತು|
      ಕೋಪಮೇರ್ದೊಡಮವಗೆ ರಕ್ತದೊತ್ತಡದಿನಿಂ
      ಔಪಚಾರ್ಯರುಮಾಗಳದಲುಬದಲು||

      • ಸತಿಯು ಮುನಿಸನು ತೋರೆ ಪತಿಯು ಸಂತೈಸುವನು
        ಪತಿಯು ಮುನಿದಂದಿಗದು ಸತಿಯ ಪಾಳಿ!
        ಮತಿಯೊಳಿರಿಸಲು ಸಹನೆ, ಸತ್ಯಾಗ್ರಹಂಗಳೊಳು
        ಸತಿಪತಿಯರಾದರ್ಶರೆನಿಸುವರು ಬಾಳಿ!
        ಕೃಷ್ಣಪ್ರಸಾದ್

        • ಚೆನ್ನಾಗಿದೆ. (ಕೊನೆಯ ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚು ಇದೆ – ಸತಿಪತಿಯರಾದರ್ಶರೆಂದೆನಿಸುವರ್ ಎಂದು ಸವರಬಹುದು)

      • ಧನ್ಯವಾದಗಳು

      • ಕೃಷ್ಣ /ರಂಗ.. …ರ – ಪುರುಷ ಸೂಕ್ತ / ಸ್ತ್ರೀ ಸೂಕ್ತಗಳು ಮನೋಹರವಾಗಿವೆ !!
        ಪದ್ಯಪಾನದಲೆಂತುವೀಬಗೆಯ ಲವ-ಲವಣ-ಲಾವಣ್ಯ-ಲಾಸ್ಯ ?!!

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)