May 082017
 

ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ

  93 Responses to “ಪದ್ಯಸಪ್ತಾಹ ೨೫೪: ಸಮಸ್ಯಾಪೂರಣ”

  1. ಪೋರಾಡುವ ಗುರಿ ಮುಂದಿರೆ
    ಗುರು ಹಿಂದಿರೆ ದೊರಕಿದ ಫಲಮಲ್ತೇಂ ಪದಕಂ I
    ಪೋರಾಡಿದ ಆ ಕ್ರೀಡಾ
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂII

    ಬೆಳಗಾದಾಗ ವಿದೇಶದಿಂದ ಭಾರತೀಯಕ್ರೀಡಾಳುಗಳು ಪದಕ ಗೆದ್ದುಬಂದಾಗ ಭಾರತೀಯರಿಗೆ ಆಗುವ ಸಂಭ್ರಮ

    • -ಕಿದ ಫಲ- not allowed as the third gaNa in second or fourth line of kandapadya. ಪೋರಾಡಿದ ಆ ಕ್ರೀಡಾ — should be actually ಪೋರಾಡಿದಾ ಕ್ರೀಡಾ-. We can instead make it pOrADirpA kreeDaa-.

      • ಧನ್ಯವಾದಗಳು ನೀಲಕಂಠರೆ .
        ”ಕಿದ ಫಲ- not allowed as the third gaNa in second or fourth line of kandapadya” ಕಂದಪದ್ಯದ ಈ ನಿಯಮವನ್ನು ನನಗೆ ನೆನಪಿರುವಂತೆ ಇಲ್ಲಿವರೆಗೆ ಪಾಲಿಸಿದ್ದೇನೆ . ಪದ್ಯಪಾನದಲ್ಲೇ ತಿಳಿಸಿದಂತೆ ಅದನ್ನು ಪಾಲಿಸಬೇಕಾದ ಉದ್ದೇಶ ಇದು ಅಲ್ಲವೇ …… ”ಇಲ್ಲದಿದ್ದರೆ ಸಾಲಿನಲ್ಲಿ ಯತಿಭಂಗವಾಗಿ ಧಾಟಿಯಲ್ಲಿ ಓದುವಾಗ ತೊಡಕಾಗುತ್ತದೆ. ಜೊತೆಗೆ ಈ ಯೆಡೆಯಲ್ಲಿ ತುಂಬ ಲಘುಗಳು ಬಂದರೆ ಪದ್ಯಬಂಧದ ನಡೆಗೆಡುತ್ತದೆ.” ಮೇಲೆ ನಾನು ಬರೆದ ಮೊದಲ ಎರಡು ಗೆರೆಗಳಲ್ಲಿ ನನಗೆ ಕಂಡು ಬಂದಂತೆ ಅದು ವಾಚನಕ್ಕೆ ತೊಡಕಾಗಲಿಲ್ಲ .ಅದಕ್ಕಾಗಿ ಅದನ್ನು ಆ ರೀತಿಯಲ್ಲಿ ಉಳಿಸಿದೆ . ನಿಮಗೆ ಓದುವಾಗ ತೊಡಕಾದಂತೆ ಅನಿಸಿದೆಯೇ ?
        ತಿಳಿಸಿ

        ಯತಿಭಂಗವಾಗಿ ವಾಚನಕ್ಕೆ ತೊಡಕು ಬರುವುದಾದರೆ ಈ ರೀತಿ ತಿದ್ದಿ ಓದಬಹುದು

        ಪೋರಾಡುವ ಗುರಿ ಮುಂದಿರೆ
        ಗುರು ಹಿಂದಿರೆ ದೊರೆತ ಸುಫಲಮಲ್ತೇಂ ಪದಕಂ I
        ಪೋರಾಡಿರ್ಪಾ ಕ್ರೀಡಾ
        ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂII

        • ಯತಿಪಾಲನೆ, ಶ್ರುತಿಹಿತ ಇತ್ಯಾದಿ ಮೂಲಭೂತ ಆವಶ್ಯಕತೆಗಳು. ಇದರ ಮೇಲೆ ಕಂದಪದ್ಯದ ಲಕ್ಷಣವನ್ನು ಮೀರಬಹುದೋ ಇಲ್ಲವೋ ನನಗೆ ತಿಳಿಯದ್ದು. ಬಲ್ಲವರನ್ನು ಕೇಳಬೇಕು. ನೀವು ಮಾಡಿದ ಪ್ರಯೋಗದ ಆಘಾತ ಏನೆಂದರೆ, ಕಂದಪದ್ಯದ ಯತಿನಿಯಮಕ್ಕೆ ಅನುಸಾರವಾಗಿ ಅದನ್ನು ಓದಿದರೆ …ದೊರಕಿದ ಅಫಲಮಲ್ತೇಂ… ಎಂದಾಗುತ್ತದೆ.

          • ನೀಲಕಂಠರಿಗೆ ಧನ್ಯವಾದಗಳು .

            ನೀವೆಂದಂತೆ ಯತಿ ನಿಯಮವನ್ನು ಪಾಲಿಸಿ ಓದುವಾಗ , ‘ಆಘಾತ’ ವಾಗುವುದಾದರೆ ಅದು ಓ .ಪಿ ಜೈಷಾಳಿ ( ರಿಯೋ ಒಲಿಂಪಿಕ್ ನಲ್ಲಿ ಭಾರತದ ಮ್ಯಾರಥಾನ್ ಸ್ಪರ್ಧಿಯಾಗಿದ್ದಾಕೆ ) ಗೆ– ಗುರು (coach ) ಹಿಂದೆ ಇದ್ದುದರಿಂದ ಆಗಿದೆ ಎನ್ನಬಹುದು
            ಇದು ಡಾ . ಟಿ .ವಿ .ವೆಂಕಟಾಚಲ ಶಾಸ್ತ್ರಿ ಇವರ ”ಕನ್ನಡ ಛಂದಸ್ಸು” ಎಂಬ ಪುಸ್ತಕದಿಂದ ,ಕಂದ ಪದ್ಯದ ಯತಿನಿಯಮದ ಬಗ್ಗೆ ದೊರೆತ ಮಾಹಿತಿ ….
            ”ಕನ್ನಡದಲ್ಲಿಯತಿನಿಯಮ ಐಚ್ಛಿಕವಾದದ್ದು ಎಂಬ ಕಾರಣದಿಂದ ಅದನ್ನು ಪಾಲಿಸುವ , ಬಿಡುವ ವಿಷಯದಲ್ಲಿ ಆಗಾಗ ಅಲ್ಲಲ್ಲಿಸ್ವಾತಂತ್ರ್ಯವಹಿಸಿರುವುದುಂಟು .ಪ್ರಾಚೀನ ಕವಿಗಳಲ್ಲಿ ಇದು ವಿರಳ ; ಆದರೂ ಅಪವಾದಗಳು೦ಟು ” .

          • ಒಪ್ಪಿದೆ. ಆದರೆ ಅದು (ಈಗ ಆದಂತೆ) ಸಂದಿಗ್ಧಾರ್ಥಗಳನ್ನು ಕೊಡುವಂತೆ ಆದಲ್ಲಿ ಸರ್ವಥಾ ಸಲ್ಲದು 🙂

  2. ನಾರಿಯರ ಹಂಬಲದೊಳೇ
    ನೀರಸಜೀವನಮನೈಯುತುಂ ನೋಂತವಗಂ
    ಬೇರೇಂ! ಕನಸೊಳ್ ಚಿತ್ರದ
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ!

    • aahaa! chennagide 🙂

    • ಕನಸಿದು ಬೀಳದೆ ರಾಮಂ-
      ಗನಿಬರಿಗಾಗಲಿ! ಗಡಿಂತುಮೇಕೆಂಬೆಯೊ ಕೇಳ್|
      ಇನನುದಿಸಲಾಗ ಬೀಳ್ವೀ
      ಕನವರಿಕೆಗಳೆಂತೊ ಘಟಿಪುವಂತೌ (ಶ್ರೀ)ಮತಿಯೇ!!

      • ಇರಲಿ ಬಿಡಿ, ಸಂತಸದಿಂದಿದ್ದರಾಯ್ತಲ್ಲವೇ ಪ್ರಸಾದರೇ! 🙂

  3. ಚಾರುಸುಮ ನೈದಿಲೆಗರರೆ!
    ನೀರಧಿಯ ಸುಪುತ್ರ ಚಂದಿರನ ಬೆಸೆಸುತ್ತುಂ
    ನೀರದಮಂ ಚೆದುರಿಪ್ಪಾ
    ತಾರೆಯರಾಗಮದೆ ,ಬೆಳಗು ಸೊಗಮೆನಿಸಿರ್ಕುಂ
    (ನೈದಿಲೆಗಳಿಗೆ ಚಂದ್ರನೊಡಗೂಡಿ ಬಂದ ತಾರೆಯರ ಆಗಮನದಿಂದ ಬೆಳಗು ಸೊಗಸಾಯಿತು, )

    • ಚೆನ್ನಾಗಿದೆ. ಮೊದಲ ಸಾಲಿನಲ್ಲಿ ಒಂದು ಮಾತ್ರೆ ನುಂಗಿಬಿಟ್ಟೀದ್ದೀರಾ ! 🙂

  4. ಚಿತ್ರತಾರೆಯರ ಕೀಲಕವನ್ನು ನಾನೂ ಯೋಚಿಸಿ, ಪದ್ಯ ಬರೆದು ಪೋಸ್ಟ್ ಮಾಡಲು ಬಂದು ನೋಡಿದರೆ ಕಾಂಚನಾ ಅವರೂ ಅದೇ ಕೀಲಕವನ್ನು ಬಳಸಿಬಿಟ್ಟಿದ್ದಾರೆ 🙁 ಆದರೂ ಪೋಸ್ಟ್ ಮಾಡುತ್ತಿದ್ದೇನೆ.
    ಊರೊಳ್ ಸೇರಿದ ಸಭೆಯೊಳ್
    ನಾರೀಪ್ರಿಯರೆಲ್ಲ ವಂದು ಕೂತಿರಲವರ್ಗ೦/
    ದೂರದೆ ತೋರಲ್ ಸಿನಿಮಾ/ಚಿತ್ರದ
    ತಾರೆಯರಾಗಮದೆ ಬೆಳಗು ಸೋಗಮೆನಿಸಿರ್ಕು೦//
    ಸಭೆಗೆ ಕರೆದ ಸಿನಿಮಾತಾರೆಯರನ್ನು ನೋಡಿ…

    ಮತ್ತೊಂದು:
    ಸಾರುತೆ ಸೂರ್ಯನ ಬಳಿಗ೦
    ಮೀರುತೆ ತತ್ಪ್ರಭೆಯನೆಯ್ದಿ ಕೇತುವೆ ನುಂಗಲ್/
    ಪಾರಲ್ ನಭಮಂ ಗೂಬೆಗೆ
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕು೦//
    ಖಗ್ರಾಸ ಸೂರ್ಯಗ್ರಹಣವಾದಾಗ ಗೂಬೆಗೆ ರಾತ್ರಿಯಾಯ್ತೆಂಬ ಭ್ರಮೆಯಾಗಿ…

  5. ಪೀರಿದ ಮದ್ಯದ ನಶೆಯಿಂ
    ಮೇರೆಯ ಮೀರುತ್ತೆ ಜಗಕೆ ಗುರುವೆನ್ನುವವೊಲ್
    ಚೀರುತುಮಿರ್ದನ ಮತಿಯೊಳ್
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ

  6. ನೀರೆ ರಜನಿ ಬಯಸಲ್ ಚಿ
    ತ್ತಾರಮಮೀಯಲ್ಕೆ ಮೂಡಣದರಸಗಂ ದಲ್ |
    ಪ್ರೇರಕ ಬಿಂದುಗಳರಸಲ್
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ ||

    (ರಜನಿಯು ಸೂರ್ಯನಿಗೆ ಚಿತ್ತಾರವನ್ನು ಕಾಣಿಕೆಯಾಗಿ ಕೊಡಬಯಸಿದಳು. ಅದಕ್ಕಾಗಿ ಮುದವನ್ನು ನೀಡುವ ಚುಕ್ಕಿಯ ರಂಗೋಲಿಗೆ ಹುಡುಕುತ್ತಿದ್ದಳು. ಆಗ ಹೊಳೆವ ತಾರೆಗಳು ಬಂದಾಗ ಆ ತಾರೆಗಳನ್ನೇ ರಂಗೋಲಿಯ ಚುಕ್ಕಿಗಳನ್ನಾಗಿ ಮಾಡಿಕೊಂಡಳು)

    • ಕಲ್ಪನೆ ತುಂಬ ಚೆನ್ನಾಗಿದೆ. ಬಿಂದುಗಳು+ಅರಸಲ್ ಸರಿಯಾಗದು; ಬಿಂದುಗಳnaರಸಲ್ ಎಂದಾಗಬೇಕು (ಆಗ ಮಾತ್ರಾಗಣಿತವನ್ನು ಸರಿಪಡಿಸಬೇಕು).

      • “ಕೋರಿದಳಗಾಧ ನಭಗಂ” ಎಂದು ಬದಲಿಸಬಹುದೇ?
        (ಅಸೀಮ ಆಗಸಕ್ಕೆ ಚುಕ್ಕಿಗಳಿಗಾಗಿ ಕೋರಿಕೆಯಿಟ್ಟಳು…!)

  7. ಮಾರನವೋಲಿರೆ ಚಂದ್ರಂ
    ಸಾರಿರೆ ದಕ್ಷಂ ವಿಶೇಷವಾರ್ತೆಯನಾಗಳ್
    ಬೀರಿದ ಮಂದಸ್ಮಿತದಿಂ
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ

    ಚಂದ್ರ ಮತ್ತು ತಾರೆಯರ ಮದುವೆ ನಡೆದದ್ದು ಬೆಳಗಿನ ಜಾವ ಎಂಬ assumptionನೊಂದಿಗೆ

  8. ತೋರಲ್ ಶಕುನಂಗಳ್ ಕೇಳ್
    ಬೈರಾಗಿಗಳುಂ ಪ್ರಹರ್ಷಿಪರ್, ಲೋಗರುಮೇಂ!
    ಚಾರುಪ್ರಭಾತಸೂಚಕ-
    ತಾರೆ(ಶುಕ್ರಗ್ರಹ)ಯದಾಗಮಿಸೆ ಬೆಳಗು ಸೊಗಮೆನಿಸಿರ್ಕುಂ||
    (ಒಂದೇ ತಾರೆಯ ಪ್ರಸ್ತಾವವಿರುವುದರಿಂದ, ಸಮಸ್ಯಾಪಾದವನ್ನು ಏಕವಚನವಾಗಿಸಿದ್ದೇನೆ)

  9. ಕೀಲಕನಿರ್ವಹಣೆಗಾಗಿ ಪಂಚಮಾತ್ರಕ್ಕೆ ಅಳವಡಿಸಿಕೊಂಡಿದ್ದೇನೆ:
    ಚಾರು ತಾನಲ್ತೆಲಾಗಸದ ಸಂಗತಿಗಳೈ (celestial events)
    ತೋರಲವು ಕಳ್ತಲೊಳ್-ಮುಂಜಾವೊಳೇಂ|
    ಜಾರಿಬರೆ ದೇದೀಪ್ಯಪುಚ್ಛವೊಂದಿಹ ಕೇತು-
    ತಾರೆ(Meteor)ಯಾಗಮದೆ ಸೊಗಮಕ್ಕು ಬಯ್ಗು(dawn)||

  10. A planet is also a ತಾರಾ. The planet mercury(ಬುಧ) is very close to the Sun, and is therefore invisible for it is engulfed by the light of the Sun. We can glimpse it just before sunrise or just after sunset (when the Sun does not blind our sight). In this verse, I am stating that dawn is beautiful for the following have arrived: Messenger/courier (with good news), wife from her natal home, (morning)moon, Sun, friends, a customer (into a Store), a guest and Mercury (alluding the proximate Sun).
    ಆರೇಂ! ದೂತಂ, ನೆಂಟಂ,
    ತೌರಿಂ ಪತ್ನಿಯು ಬರಲ್, ವಿಧು, ಸವಿತೃ, ಮಿತ್ರರ್|
    ಭಾರೀಗಿರಾಕಿ,ಯತಿಥಿಯ,
    ತಾರೆ(ಬುಧ)ಯರಾಗಮದೆ ಬೆಳಗು ಸೊಗಮೆನಿಸಿರ್ಕುಂ||

    • Astronomy ಯಾವಾಗ ಕಲ್ತ್ಕೊಂಡ್ರಿ ಸಾರ್ !

      • ಕಲ್-ತಗಂಡ್ರಿ ಕೈಗೆ! ಅಸ್ಟ್ರಾನಮಿ ಮನೆ ಆಳಾಯ್ತು. ಪದ್ಯ ಎಂಗೈತೆ ಯೋಳಿ ಮಂಜಪ್ಪ.

        • ನಿಮ್ ಪದ್ಯ ಅಂದ್ಮ್ಯಾಕೆ ಪಸಂದಾಗೇ ಇರುತ್ತೆ ಬುಡಿ…

  11. If eyes are closed, nothing can be seen even if it is daytime.
    ಗೈರೆಲ್ಲಂ – ಪಚ್ಚೆ, ಸುಮಂ,
    ನೀರುಂ, ಮೋಡಂ, ಮಹೋತ್ಸವಂಗಳ್, ಜನಗಳ್|
    ಕೋರಕದೊಲ್ ಕಣ್ಮುಚ್ಚಲ್.
    ತಾರೆ(pupil of the eye)ಯರಾಗಮದೆ(when all eyes arrive at dawn to witness the light and the lighted) ಬೆಳಗು ಸೊಗಮೆನಿಸಿರ್ಕುಂ||

  12. ಕಾರಿರುಳೊಳು ಮಾತ್ರಮದೇಂ
    ಜಾರುಗು ಬುವಿಗುಡುಗಣಂ(Falling stars) ನಯನಮಂ ಬೆಳಗಲ್ (a spectacle)?
    ತೋರುವುದದುಮೇಗಳುಮೈ.
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ||

  13. ಕೋರಲ್ ’ಪರ’ಮಂ ಶಿವನಿಂ
    ಘೋರತಪವ ಮಾಡು ಕಣ್ಣ ಮುಚ್ಚುತ್ತೆಂತೋ|
    ಪೀರಲ್ ’ಇಹ’ಮಂ ಗಡಿಂದುಪ
    ತಾರೆ(Iris of the eye)ಯರಾಗಮದೆ(when all eyes arrive at dawn to witness the light and the lighted) ಬೆಳಗು ಸೊಗಮೆನಿಸಿರ್ಕುಂ||
    The idea is same as in verse No.11. Here it is iris (ಉಪತಾರೆ) instead of pupil (ತಾರೆ). They are complementary organs. Composed this verse just out of greed for marks. Now, don’t call me marksist!

  14. Sirius is the brightest visible star. If you see the constellation it is in, you will know why it is called ‘Dog star’ (ಕುಕ್ಕುರಸಂಜ್ಞಾತಾರೆ). At certain times of the year it appears during morning/daylight. (The brightest visible celestial body is the Venus, but it is a planet. The brightest visible star is Sirius.)
    ಕ್ಷೀರಪಥದವೆನಿತೆನಿತೋ
    ತೋರುವುದುಡುಗಣವು ರಾತ್ರಿವೇಳೆಯೊಳಂತೇ|
    ಸೌರದೆ ಕುಕ್ಕುರಸಂಜ್ಞಾ-
    ತಾರೆಯದಾಗಮಿಸೆ ಬೆಳಗು ಸೊಗಮೆನಿಸಿರ್ಕುಂ||

  15. ಪೌರ್ಣಮಿಯು ಕಳೆದು ಕೃಷ್ಣಪಕ್ಷವು ಕಾಲಿಟ್ಟಾಗ, ಚಂದ್ರಪ್ರಭೆಯು ಕ್ಷೀಣಗೊಂಡಾಗ, ನಕ್ಷತ್ರಗಳ ಬೆಳಕೇ (=ಬೆಳಗು=ಬೆಳಗುವಿಕೆ; not ‘morning’) ಸೊಗ.
    ಚರ್ಚರೀ||
    ಲಯಗೊಂಡಿರೆ ವರಪೌರ್ಣಮಿ ಬರೆ ಕೃಷ್ಣದ ದಿನಮೈ (ಕೃಷ್ಣಪಕ್ಷ)
    ಜಯಿಸುತ್ತಿರಲಮವಸ್ಯೆಯು ದಿನದಿಂ ದಿನದಿನದಿಂ|
    ವ್ಯಯಗೊಂಡಿರಲುಡುಭರ್ತನ ಹರಿಚಂದನ(moonlight)ಮದೊ ತಾ-
    ರೆಯರಾಗಮಿಸೆ ಬೆಳಂಗು ಸೊಗಮೆ ನೋಡದೊ ಸಖನೇ||

    • ಆರಕ್ಕೆರಡನು ಕೂಡಿಸ-
      ಲಾರೆರಡೆ೦ಟಾಗಲೀಗಳೀ ಪದ್ಯದ ಬಾ-
      ನೇ?ರಂಪರ ಕಂದ೦ಗಳ
      ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಮ್ ( ಪಾಶ್ಚಿಮಾತ್ಯರಿಗೆ ಪದ್ಯದ ಬಾನಿನಲ್ಲಿ ರಂಪರ ಕಂದಗಳು —೮ ರಿಂದ ೧೫ ,ತನಕ ತಾರೆಯರಂತೆ ಸೊಗಸಾಗಿ ಕಾಣಿಸಬಹುದು ಎಂಬರ್ಥದಲ್ಲಿ )

      • ಧನ್ಯವಾದಗಳು. ನೀವಿರುವುದು ಪಶ್ಚಿಮದಲ್ಲೇ? ಹಾಗಿದ್ದರೆ, ಸಂ.೧೭ರಲ್ಲಿನ ನನ್ನ ಪದ್ಯವನ್ನು ನೋಡಿ. (ಪಾಶ್ಚಿಮ ಅಥವಾ ಪಾಶ್ಚಾತ್ಯ. ಪಾಶ್ಚಿಮಾತ್ಯ ಅಸಾಧು)

        • ಸಾಧುರೂಪಕ್ಕೆ ಧನ್ಯವಾದಗಳು. ಬೆಂಗಳೂರಿನ ಜನರಿಂದ ಪಶ್ಚಿಮಕ್ಕೂ , ದಕ್ಷಿಣಕ್ಕೊ ಹೌದು 🙂

      • ಆರಕ್ಕೆರಡನು ಕೂಡಿಪ
        ಕ್ರೂರಿಯದೇಕಾದಿರೋ ಕವಿಯೆ ಪೇಳೀಗಳ್?
        ಆರೇ ಕಂದಗಳೆನ್ನವು (8ರಿಂದ 15ರವರೆಗಿನ ಎಂಟು ಪದ್ಯಗಳ ಪೈಕಿ ಒಂದು ಪಂಚಮಾತ್ರಾ ಮತ್ತು ಒಂದು ಚರ್ಚರೀ ಇವೆ)
        ಔರಸರೆಂಟೆಂಬೆ ಏಕೊ? ಸಾಲದೆ ಆರೌ!!

        • ಅದು ಗದ್ಯವೋ , ಪದ್ಯವೋ ಒಂದೂ ತಿಳಿಯದಾಗಿ .
          ಆ ರೀತಿಯಲ್ಲಿ ಕಂಗ್ಲಿಷ್ ಪ್ರಯೋಗದ ಪದ್ಯಗಳು ಓದಲು ಕಷ್ಟಕರವಾಗುತ್ತದೆ . ಮಾತ್ರವಲ್ಲ ಹಿರಿಯಕ್ಕನ / ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ ಅನುಕರಿಸಲು ಯೋಗ್ಯವಲ್ಲದಿದ್ದರೂ , ಕಿರಿಯರೂ ಅದನ್ನೇ ಅನುಸರಿಸುತ್ತಾರೆ .

  16. ಆರಿದ್ರೆ ಜತೆಯೊಳಿಪ್ಪ-
    ತ್ತಾರಿರ್ಪಂತುಡುಗಣಂ ಸರದಿಯೊಳ್ ನಿತ್ಯಂ
    ತೋರುತಿರಲ್ ವಯ್ಯಾರಂ
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ !!

    ದಿನಕ್ಕೊಂದರಂತೆ ಬರುವ “ಇಪ್ಪತ್ತೇಳು” ನಕ್ಷತ್ರಗಳ ಬೆಡಗಿನಿಂದ ಬೆಳಗುವ ಬೆಳಗಿನ ಕಲ್ಪನೆ !!

    • Fine imagination. ಇಪ್ಪತ್ತೇಳನ್ನು ವಿಭಾಗಿಸಿ ಪ್ರಾಸಕ್ಕೆ ಅನುವಾಗಿಸಿಕೊಂಡಿರುವುದು ಚೆನ್ನಾಗಿದೆ. (ಆರಿದ್ರೆಯೊಂದಿಗಿಪ್ಪ-ತ್ತಾರಿನ್ನಿರ್ಪುಡುಗಣಂ…)

      • ಧನ್ಯವಾದಗಳು ಪ್ರಸಾದ್ ಸರ್,
        “ಆರಿದ್ರೆಯೊಡನಿನ್ನಿಪ್ಪತ್ತಾರ” ಸೇರಿಸಲು ತುಂಬಾ ಕಷ್ಟಪಟ್ಟಿದ್ದೆ !!

        ಆರಿದ್ರೆಯೊಡಿಂತಿಪ್ಪ-ತ್ತಾರು / ಆರಿದ್ರಂ ಮತ್ತಿಪ್ಪ- ತ್ತಾರು – ಎಂದೆಲ್ಲ ಯೋಚಿಸಿದ್ದೆ.
        ಇದು ಈಗ ಸರಿಯಾಯಿತು. ತಿದ್ದಿದ ಪದ್ಯ:

        ಆರಿದ್ರೆಯೊಂದಿಗಿಪ್ಪ-
        ತ್ತಾರಿನ್ನಿರ್ಪುಡುಗಣಂ ಸರದಿಯೊಳ್ ನಿತ್ಯಂ
        ತೋರುತಿರಲ್ ವಯ್ಯಾರಂ
        ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ !!

  17. ಬೀರಿರೆ ಸೂರ್ಯನುಮೋಜೆಯ
    ದೂರದುದೀಚ್ಯಾರ್ಧಗೋಲದಾದ್ಯಂತವರಂ(Northern Hemisphere)|
    ಬಾರೈ, ಅವಾಚಿಯೊಳು(Southern Hemisphere) ಕಾಣ್
    ತಾರೆಯರಾಗಮದೆ ಬೆಳಗು(ವಿಕೆ) ಸೊಗಮೆನಿಸಿರ್ಕುಂ||

  18. 10ನ್ನು ಮಾಡಿಬಿಡೋಣ ಎಂದು ಈ ಸುಲಭೋಪಾಯ…
    ಕಾರಿರುಳೊಳು ಮಿಂಚಿಪುವೇಂ?1
    ಆರಾಧನರೀತಿಗಳ್ ಗಡೆಲ್ಲಿ?2(ಇ)ರುಳುರುಳಲ್?3|
    ಭೋರೆನ್ನೆ ಮಳೆಯು ತಪದೊಳ್(summer)?4
    1ತಾರೆಯರ್. 2ಆಗಮದೆ. 3ಬೆಳಗು. 4ಸೊಗಮೆನಿಸಿರ್ಕುಂ||

  19. India launches record-breaking 104 satellites from a single rocket for several countries.
    ಭಾರತವುಡ್ಡಯಿಸಿಹುದೈ
    ನೂರರುಪಗ್ರಹಗಳನ್ನೆನಿತೊ ದೇಶಕ್ಕಂ|
    ಹಾರುತೆ ಬಳಸಿರ್ಪೊಂದೇ
    ತಾರೆ(Rocket)ಯದಾಗಮಿಸೆ ಬೆಳಗು(ಭಾರತದ ಉಜ್ಜ್ವಲತೆ) ಸೊಗಮೆನಿಸಿರ್ಕುಂ||
    (ಬಳಸಿರ್ಪ ಒಂದೇ ತಾರೆಯು(Rocket) ಹಾರುತೆ ಆಗಮಿಸೆ…)

    • upagraha emba padadalli shithila-dvitva maadalu saadhyavillavalla. adondu poorNavaada sanskruta pada.

      • ಎಷ್ಟು ಹುಷಾರಿನಿಂದಿದ್ದರೂ ಎಡವುತ್ತೇವೆ. ನೀವಲ್ಲದಿದ್ದರೆ ನಮ್ಮನ್ನು ಕೈಹಿಡಿದೆತ್ತುವವರೇ ಇಲ್ಲ. ಧನ್ಯವಾದಗಳು. ಸರಿಪಡಿಸಿದ್ದೇನೆ.

        • adEke hiDidettuvudu?! neevu bidde illa. shithila-dvitva maadikonDu tElaaDataa iddiri 🙂

          • ಇದ್ದೆ. ನೀವು ಮುಳುಗಿಸಿಬಿಟ್ಟಿರಲ್ಲ!

  20. ತಾರೆಯೆನಿಸಿಹರ್ ಸಾಧಿಸಿ
    ಕೇರಿಗುಪಕರಿಸುತ ಬೆಳಕ ಚೆಲ್ಲಿರೆ ಸೊಗದಿಂ ( ಕೇರಿಗುಪಕರಿಸುತ ಎನ್ನುವುದು ಅರಿ ದೋಷವೇ?)
    ಊರಿನ ಜನಗಳ್ ಪೇಳ್ದರ್
    “ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ”

  21. ನೀರಸಮಿರುಳಿನ ಕಾಲಂ
    ಸೂರೆಯ ಗೊಳಿಸಲ್ಕೆ ವಿಫಲಮಾಯ್ತು ನಿಸರ್ಗಂ |
    ಸಾರಪನಿಂ ತುಂಬಿಪ್ಪ ಸು-
    -ತಾರೆಯ ರಾಗಮದೆ ಬೆಳಗು ಸೊಗಮೆನಿಸಿರ್ಕುಂ ||

    (ರಾತ್ರಿಯು ನೀರಸವಾಗಿದೆ. ಆದರೆ ದೇವರು ಪ್ರಕೃತಿಯಲ್ಲಿ ತುಂಬಿದ ಸಂದರ, ಉತ್ಕೃಷ್ಟ ಬಣ್ಣಗಳಿಂದ ಹಗಲು ಸೊಗಮೆನಿಸಿದೆ)

  22. ನೂರಿರೆ ಬಾಳೊಳ್ ಕಷ್ಟಂ
    ಮೋರೆಯ ಪೂ ಬಾಡಿ ಪೋಗೆ ದುಗುಡಬಿಸಿಲಿನಿಂ
    ಕಾರಿರುಳೊಳೆ ಕಣ್ ಕಂಡಾ
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ

    ಕಾರ್ಗತ್ತಲನ್ನು ಮರೆಮಾಚಿದ ನಕ್ಷತ್ರಗಳು, ಬಾಳಲ್ಲಿ ಕಷ್ಟಗಳಿಂದ ಕಂಗೆಟ್ಟವನೊಬ್ಬನಿಗೆ ಆಶಾಭಾವವನ್ನು ಉಂಟುಮಾಡಿದವು ಎನ್ನುವ ಪ್ರಯತ್ನ

  23. ಕಾರಿರುಳೊಳು ಸಂಗೀತ ಕ
    ಛೇರಿಯೊಳತಿಮಧುರವಾಗಿ ನುಡಿಸಿದ ಸವಿ ಝೇಂ|
    ಕಾರಮಮಾಸ್ವರದರಸ; ಸಿ
    ತಾರೆಯ ರಾಗಮದೆ ಬೆಳಗು ಸೊಗಮೆನಿಸಿರ್ಕುಂ||

    (ಅಹೋರಾತ್ರಿ ಸಂಗೀತದಲ್ಲಿ ಸಿತಾರ್ ವಾದನದ ಕಲ್ಪನೆ)

    • olleya kalpane.
      aadare ಸಿತಾರೆಯ ರಾಗಮದೆ ಬೆಳಗು ಸೊಗಮೆನಿಸಿರ್ಕುಂ – embudakke vyaakaraNa reetyaa sariyaada artha koDuvudakke kaShTa allave?

      • “ಸಿತಾರದ ರಾಗವೂ, ಅದೇ ದಿನದ ಹಗಲು ಎರಡೂ ಸುಖವಾಗಿ, ಮುದ ತರುವಂತಿತ್ತು”- ಎಂದು ಅರ್ಥೈಸಬಹುದು.
        ಇಲ್ಲಿವೇ,
        “ಸಿತಾರದ ರಾಗವೇ ವಾದಕನ ಬದುಕಿಗೆ ಬೆಳಕಾಯಿತು” ಎಂದೂ ಮಾಡಿಕೊಳ್ಳಬಹುದು !

  24. ಕಾರಿರುಳು ಸರಿದು ತೂರಲ್
    ಸೂರಂ ಕೆಂಗದಿರ ಸೂರ ಕಂಡಿಗಳೊಳ್ ಮೇಣ್
    ಬೀರಲ್ ಚುಕ್ಕಿ ಚಮಕನುಂ,
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ !!

    ಕೆಂಗದಿರ್ = ಕೆಂಪುಕಿರಣ
    ಬೆಳಗಿನಲ್ಲಿ ಹೆಂಚಿನಮನೆಗಳಲ್ಲಿ (ಸೂರ ಕಂಡಿಯಲ್ಲಿ) ಕಾಣಸಿಗುವ ದೃಶ್ಯ !!

    • Fine imagination

    • aahaa! chennagide 🙂

    • ಕೆಂಗದಿರು aagabeku. ಕೆಂಗದಿರ andare shashThi vibhakti aaguttade. But ಕೆಂಗದಿರು will be hosagannada form. ಕಂಡಿಗಳೊಳ್ ಮೇಣ್ – kanDigaLindam endu maadabahudu.

    • ಧನ್ಯವಾದಗಳು ಪ್ರಸಾದ್ ಸರ್, ನೀಲಕಂಠ

      ಅಂದರೆ, ಕೆಂಗದಿರ =ಸೂರ್ಯ ಎಂದೇ ಆಗುವುದೇ?

      ಕಾರಿರುಳು ಸರಿದು ತೂರಲ್
      ಸೂರಂ ಕೆಂಗದಿರ ಸೂರ ಕಂಡಿಗಳಿಂದಂ
      ಬೀರಲ್ ಚುಕ್ಕಿ ಚಮಕನುಂ,
      ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ !!

  25. ಸ್ಮಾರಣೆಯಿಂ ಪಠಿಸುತ್ತಿರೆ
    ಧೀರೋದಾತ್ತರನೆ, ಚಿತ್ತದೊಳ್ ಸಾಧ್ವೀ ಸ್ತ್ರೀ
    ಶ್ರೀರಾಮಸತಿಯಹಲ್ಯಾ
    ತಾರೆಯರಾಗಮದೆ, ಬೆಳಗು ಸೊಗಮೆನಿಸಿರ್ಕುಂ

    (ಸ್ತುತಿಸುತ್ತಿರುವಾಗ(ದೇವರನ್ನು) ಚಿತ್ತದಲ್ಲಿ ತಳೆದ ಸಾಧ್ವಿಯರ ನೆನಪು ಬೆಳಗನ್ನು ಸೊಗಯಿಸಿತು)

  26. ಆರಾತೀಯಕಲಿಧ್ವಂ-
    ಸಾರಕ್ತಿಶ್ರಾಂತನಪ್ಪ ಸುಗ್ರೀವಂಗಂ
    ಹಾರೈಸುತೆ ಬಪ್ಪ ರುಮಾ-
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ

    • Nice 🙂

    • ಮೊದಲೇ ಕೋತಿ! ಹ್ಹಹ್ಹ ಕಲ್ಪನೆ-ಭಾಷೆ ಚೆನ್ನಾಗಿವೆ.

      • yaarreee koti? baredavaraaa??!!

        • ನೀವಲ್ಲ ಸ್ವಾಮಿ. ಸುಗ್ರೀವ. ಕುಡಿದಿರುತ್ತಾನೆ ಕೂಡ. ಇನ್ನು ಅವನಿಗೆ ಎರಡು ಹೆಣ್ಣುಗಳನ್ನು ಕೊಟ್ಟರೆ, ಆ ವಿಡಿಯೋವು ಕಲ್ಪನೆಯಲ್ಲೇ ಅಸಹ್ಯವನ್ನುಂಟುಮಾಡುತ್ತೆ!

          • hahhaa.. kuDida amalinalli hagalaavudu iruLaavudu gottagade aata, ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ ennuvavane 🙂

          • ಅಂಥವಳು ಸಿಕ್ಕುವುದಾದರೆ, ಬೆಳಗೇನು, ಅವನಿಗೆ ವೇಸಗೆಯ ಮಟಮಟಮಧ್ಯಾಹ್ನವೂ ಲೇಸೈ! ಕಪಿಯಲ್ಲವೆ?

  27. ಭೂರಿಶ್ರಮದಿಂ ವೈದ್ಯರ್
    ಪೋರಂಗಳವಡಿಸೆ ಶಸ್ತ್ರಿಸುತೆ, ಸತ್ತವನಿಂ,|
    ಸಾರಸದಲದಂಥ ನಯನ-
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ ||

    • Nice one! nayanataaregaLaagamade endiddare chennagi opputtittu 🙂

      • ಧನ್ಯವಾದಗಳು ನೀಲಕಂಠರೆ. ನನಗೂ ಹಾಗೇ ಅನಿಸಿತು. ಆದರೆ ಸಮಸ್ಯಾಪಾದದಲ್ಲಿ ತಾರೆಗಳು ಎಂಬರ್ಥದಲ್ಲೇ ತಾರೆಯರು ಬಂದಿದೆಯೆಂದು ಭಾವಿಸಿ ಹಾಗೇ ಬರೆದೆ. ಸಮಸ್ಯೆಯಲ್ಲಿರುವ ತಾರೆಯರು ನಕ್ಷತ್ರಗಳಲ್ಲವೆ ? 🙂

    • ನಯನಮಂ ~ ಸಾರಸದಲದವೊಲಕ್ಷಿಯ

      • ಸಾರಸದಲದವೊಲಕ್ಷಿಯ ಎಂದು ಬರೆದರೆ ಸಾರಸದಲದಂತೆ ಅಕ್ಷಿಯ ಎಂದಾಗಿ ಅನರ್ಥವಾಗುವುದಲ್ಲ ಹಾದಿರಂಪರೆ ! 🙂

        • ಹೌದು. ’ದಲದವೊಲ ಅಕ್ಷಿಯ’ ಎಂದೂ ಆಗದೆ? ವಿಚಾರಿಸಿ ತಿಳಿದುಕೊಳ್ಳುತ್ತೇನೆ.

          • ಸಾರಸದಲದಂಥ ನಯನತಾರೆ- ಸರಿಯಾಗಿಯೇ ಇದೆಯಲ್ಲ …

          • ಇಡಿಯ ಕಣ್ಣು ಕಮಲದಳದಂದಿರುತ್ತದೆ (oval). ನಯನತಾರೆಯು (pupil) ದುಂಡಗಿರುತ್ತದೆ.

          • ನಯನತಾರೆಯನ್ನು ಕಣ್ಣಿನ ಕಾಂತಿಗೆ ಸಂಬಂಧಿಸಿದಂತೆ ಬಳಸಿದ್ದೇನೆ.ಕಮಲದಲದಂಥ ,ತಾರೆಗಳ ಹೊಳಪುಳ್ಳ ಕಣ್ಣುಗಳು ಎಂಬರ್ಥವಿದೆ. ( ನಯನತಾರೆಯೆಂದರೆ ಕಣ್ಣಿನ ಭಾಗವಾದ Iris ಎಂಬ ಇನ್ನೊಂದು ಅರ್ಥವೂ ಇದೆ. ಆದರೆ ನನ್ನ ಪದ್ಯದಲ್ಲಿ ಈ ರೀತಿಯಾಗಿ ಇಲ್ಲ. )

  28. ಓರೆನಿಲುವಿನೊಳಗೋಲೆಯು
    ತೋರಲ್ ಸಪ್ತರ್ಷಿಮಂಡಲದ ಬಿನ್ನಾಣo ।
    ನೀರೆಗೆ ಕಿವಿಹಾಲೆಯ ಮೇಲ್
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ ।।

    ಏಳುಕಲ್ಲಿನ ವಜ್ರದ ಬೆಂಡೋಲೆ ಧರಿಸಿದ ನೀರೆಯ ಕಲ್ಪನೆಯಲ್ಲಿ !!

    • ಓಲೆ ವಿಲಕ್ಷಣಮಿಹುದೌ
      ಹೋಲಿಕೆ ಸಪ್ತರ್ಷಿಮಂಡಲಕೆ ಗೈದುದರಿಂ|
      ಮೇಲಲ್ಲಿ ಧೃವ(ನಕ್ಷತ್ರ)ದ ಬಳಿಯೊಳ್
      ಹೋಲುತ್ತಿರ್ಪುದದೊ ಸಟ್ಟುಗವನುಂ ಕಾಣೌ||
      http://media.buzzle.com/media/images-en/gallery/astronomy/450-100821970-big-dipper.jpg

      • ಉತ್ತರದೆ ತೋರಿರುವಿರೋಲೆಯಾ ಸಟ್ಟುಗವ (ಅಳತೆ!)
        ಉತ್ತಾನಪಾದರಾಯರೆಲೆನೀಂ ಮೇಣ್
        ಸುತ್ತುದದು(ಮಂಡಲ) ಸೊಟ್ಟ(bendಓಲೆ!) ಕಂಡುದು ಸೆಟೆದು ಸಟ್ಟುಗವ-
        ದೊತ್ತರಿಸಲೋರೆಯಿಂ ನೀರೆತಾನುಂ !!

  29. ಮೂರು ಮಡಿಸಿರ್ಪ ಮಲ್ಲಿಗೆ
    ನೂರಾಗಿ ನಸುಕಲಿ ಬೀಗಿ ನಕ್ಷತ್ರದವೋಲ್-
    ತೋರಲ್ ಪಸಿರಂಗಳದೊಳ್
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ !!

    ಅರಳಿದ ನೂರಾರು “ಮೂರುಸುತ್ತಿನ ಮಲ್ಲಿಗೆ” ಹೂಗಳು ಹಸಿರಿನಂಗಳದ ನಕ್ಷತ್ರಗಳಂತೆ ಕಂಡ ಕಲ್ಪನೆಯಲ್ಲಿ !!

  30. ಆರೋಹಿಸುತಾರಿಂ ಹದಿ-
    ಮೂರರ ವರೆಗಿಟ್ಟ ಚಿಕ್ಕಿ ಹಾಸೊಳು ಹಸೆಯಂ
    ಪೂರಯಿಸಿರಲಂಗಳದೊಳ್
    ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ !!

    ಮನೆಯಂಗಳಲ್ಲಿ ಮುಂಜಾವಿನಲ್ಲಿ ಇಡುವ ರಂಗೋಲಿ – ೧೩-ರಿಂದ ೬-ರ ವರೆಗಿಟ್ಟ ಚುಕ್ಕಿ ಹಸೆಯಲ್ಲಿ “ನಕ್ಷತ್ರಗಳು” ಮೂಡಿಬಂದ ಕಲ್ಪನೆಯಲ್ಲಿ !!

  31. ಇಂತಹ ಜಾಲತಾಣಗಳು ಭಾರತವು ಇನ್ನೂ ಶೋಭಿಸುತ್ತಲೇ ಇದೆ..
    ಪ್ರತಿಭಾಶಾಲಿಗಳು ನಮ್ಮ ಭಾಷೆಯನ್ನು ಸುಂದರವಾಗಿ ಜೀವಂತವಾಗಿಡುತ್ತಿದ್ದಾರೆ ಎಂಬ ಆತ್ಮಶಾಂತಿಯನ್ನೂ ಆತ್ಮಶಕ್ತಿಯನ್ನೂ ನೀಡುತ್ತದೆ. ಧನ್ಯವಾದಗಳು.

    • ಧನ್ಯವಾದ. ನೀವೂ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ. ಈ ಪುಟದ ಮೇಲ್ಭಾಗದಲ್ಲಿ ’Learn Prosody’ ಎಂಬ ಲಿಂಕ್ ಇದೆ. ಅಲ್ಲಿ ಚಿಕ್ಕಚಿಕ್ಕ ವಿಡಿಯೊಪಾಠಗಳಿವೆ. ದಿನಕ್ಕರ್ಧಗಂಟೆ ತೊಡಗಿಕೊಂಡರೆ ಆರು ತಿಂಗಳು ಸಾಕು. ಸ್ವಾಗತ.

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)