Jun 092017
 

ಸೀ || ಕಡಚಿನ ಯಾಮಿನಿ ಪಿಡುಗುವಡ್ಡ ಸಗಂಬು
ಮಾcಡಿನ ತಲಯೈನ ಮದ್ದಿಚೆಟ್ಟುc
ಬೋಲಿನದಾನಿನಿ, ಮುಂಚೆತ್ತು ವಾನಲು
ಸಗಮುಲೋ ವಚ್ಚಿನಂ ಜಲ್ಲನಾರಿ
ಪೋಯಿನ ಕಾಷ್ಠಂಬುc ಬೋಲಿನ ದಾನಿನಿ,
ಗಹನಂಬುಲೋc ಗುಂಟಗಟ್ಟುಲೋನ
ಮಟ್ಟಲೆಂಡಿ ಜಲಾನ ಮಾcಗಿನ ಚಿಟ್ಟೀತc
ಬೋಲಿನದಾನಿನಿ, ಸೋಲುದಾನಿ

ತೇ|| ನೆಡಪೆಡಗ ವಾಯುವುಲು ವೀವನಿಟ್ಲು ವಚ್ಚು
ವಾಯುವುನ ವಂಗುಚುನು ನಟ್ಲುವಚ್ಚು ವಾಯು
ಪೂರಣಮುನ ನಾcಗುಚು ನಾcಗಿ ಮೊರಯುಚುನ್ನ
ವೇಣುವಲ್ಮೀಕ ಗುಲ್ಮಂಬುc ಬೋನಿದಾನಿ

(ಕಳೆದಿರುಳು ಬಡಿದ ಸಿಡಿಲಿಂಗೆ ಸುಟ್ಟರಬರೆಯೆ
ತಲೆಬಾಡಿದಂತಿರ್ಪ ಮತ್ತಿ ಯಿವಳೋ !
ನೆಲನ ಮುಳುಗಿಪಧಾರೆ ಮಳೆಗೆರೆಯಲಾ ಕಾಷ್ಠ
ಜ್ವಲಿಸುತರ್ಧಕೆ ಬೆಂಕಿಯಾರ್ದುದೇನೋ!
ಒಳಗೆಲ್ಲೊ ಕಾಡುಕುಂಟೆಯದಡದೆರೆಂಕೆಗಳು
ಜಲದಿ ಪಣ್ಣಾಗಿಳಿದ ಗುಜ್ಜೀಚಲೋ
ಸುಳಿಗಾಳಿಯಿರ್ಕಡೆಗೆ ಬೀಸಲತ್ತಿತ್ತಲುಲಿ
ದಲೆವ ವಲ್ಮೀಕವಂಶಮೊ ತಾನಿವಳ್)

( ಕನ್ನಡಕ್ಕೆ ಪದ್ಯಾನುವಾದಮಾಡಲು ತೊಡಗಿದಾಗ, ಭಾವವನ್ನು ಹಿಡಿದಿಡಲು ತೇಟಗೀತಿಯ ಭಾಗದ ಛಂದಸ್ಸು ಹೆಚ್ಚಾಗಿ, ಸೀಸಪದ್ಯವು ಸಾಲದಾಯಿತು ! ಆದರೂ ಸೀಸಪದ್ಯಕ್ಕೇ ಸೀಮಿತಗೊಳಿಸಿದೆ)

ಈ ಪದ್ಯ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ವಿರಚಿತ ಶ್ರೀಮದ್ರಾಮಾಯಣ ಕಲ್ಪವೃಕ್ಷದ್ದು. ನಾಲ್ಕು ಉಪಮಾನಗಳಮೂಲಕ ಯಾರನ್ನೋ ಕವಿ ವರ್ಣಿಸುತ್ತಿರುವಂತಿದೆ.

ಕಳೆದ ರಾತ್ರಿ, ಮತ್ತಿಮರದಮೇಲೆ ಸಿಡಿಲು ಬಡಿದಿದೆ. ಆದರೂ ಆ ಮರ ಪೂರ್ಣವಾಗಿ ನಾಶವಾಗಿಲ್ಲ. ಅರ್ಧ ಬೆಂದು ಸೀದಿದೆ (ಸಗಂಬು ಮಾcಡಿನ). ಗಂಭೀರವಾದ ಮತ್ತಿಮರ ಅಶನಿಪಾತದಿಂದ ಅರ್ಧಸುಟ್ಟುಹೋಗಿ, ಎಷ್ಟುವಿಕಾರವಾಗಿ ಕಾಣಬಹುದೋ ಅಂಥ ಅವಲಕ್ಷಣ ಅವಳಲ್ಲಿ ಕಾಣುತ್ತಿದೆ. ಎರಡೆನೆಯ ಹೋಲಿಕೆ : ಕಾಡಿನಲ್ಲೋ, ಸ್ಮಶಾನದಲ್ಲೋ ಧಾರಾಕಾರವಾಗಿ ಮಳೆಸುರಿದು, (ಚಿತೆಯಮೇಲೋ, ಕಾಳ್ಗಿಚ್ಚಿನಭಾಗವಾಗಿಯೋ) ಉರಿಯುತ್ತಿದ್ದ ಕಾಷ್ಠ ಅರೆಬರೆಯಾಗಿ ಸುಟ್ಟು, ಅಷ್ಟಕ್ಕೇ ಆರಿನಿಂತಹಾಗೆ (ಜುಗುಪ್ಸಾಕರವಾಗಿ) ಕಾಣುತ್ತಿದ್ದಾಳೆ. ಮೂರನೆಯ ಉಪಮೆ: ಅಡವಿಯಲ್ಲಿ ಅಲ್ಲಲ್ಲಿ ನೀರುನಿಂತ ಕುಂಟೆಗಳಿರುತ್ತವೆ. ಅಂಥ ಕುಂಟೆಯ ದಡದಲ್ಲೊಂದು ಈಚಲು ಮರ. ನೀಳವಾಗಿ ಬೆಳದದ್ದಲ್ಲ. ಪೊದೆಯಂತೆ ಬೆಳೆದ ಗುಜ್ಜಲೀಚು (ಚಿಟ್ಟೀತ), ನೀರಿನಲ್ಲಿ ನೆನೆದು ಮಾಗಿ, ತನ ಒಣಗಿ ಬಗ್ಗಿದ ರೆಕ್ಕೆಗಳಿಂದ ನಿಂತಂತೆ ಇವಳು, ಎಷ್ಟು ಅಸಹ್ಯವಾಗಿ ಕಾಣಬಹುದೋ ಹಾಗೆ ತೋರುತ್ತಿದ್ದಾಳೆ. ನಾಲ್ಕನೆಯ ಹೋಲಿಕೆ : ಕಾಡಿನಲ್ಲೊಂದು ಬಿದುರುಮೆಳೆ. ಹುತ್ತದಮೇಲೆ, ಅಷ್ಟೇನೂ ಎತ್ತರವಲ್ಲದ ಪೊದೆಯಂತೆ ಬೆಳೆದು, ಅಡ್ಡವಾಗಿ ಅತ್ತಲಿಂದ ವೇಗವಾಗಿ ಬೀಸುವ ಗಾಳಿಗೆ ಅತ್ತಕಡೆಗೆ ಬಗ್ಗಿ, ಇತ್ತಲಿಂದ ಬೀಸುವ ಗಾಳಿಗೆ ಇತ್ತಬಗ್ಗಿ, ಪರಸ್ಪರ ಘರ್ಷಣೆಯಿಂದ ವಿಚಿತ್ರ ಶಬ್ದಗಳನ್ನು ಹೊರಡಿಸುತ್ತಾ ಊಳಿಡುತ್ತಿದೆ.(ಅದು ವೇಣುವಲ್ಮೀಕ ಗುಲ್ಮವಾದರೂ ಕಣ್ಣನ್ನು ತಣಿಸುವ ದೃಶ್ಯವೇನಲ್ಲ).

ಈ ಕವಿಗೆ ಪದ್ಯನಿರ್ಮಾಣದ ವಿಷಯದಲ್ಲಿ, ಒಂದು ಸೊಗಸಾದ ಪದವನ್ನು ಇಲ್ಲಿತಂದು ಸಿಂಗರಿಸೋಣ ಎಂಬ ನಕಾಸೆಯ ಪ್ರವೃತ್ತಿಯಿಲ್ಲ. “ನನ್ನ ಚೈತನ್ಯ ನಿತ್ಯ ವೇಗಿಯಾದದ್ದು – ಶಬ್ದಗಳನ್ನು ಆಯ್ದು ಕೂರಿಸಲು ಅದು ನಿಲ್ಲದು” ಎಂದು ಕವಿಯೇ ಹೇಳಿಕೊಂಡಿದ್ದಾನೆ (“ನಿತ್ಯವೇಗಿ ನಾ ಚೇತಮು – ಶಬ್ದಮೇರುಟಕು ನಿಲ್ವದು”). ಎದೆಯಾಳದಿಂದ ಭಾವಗಳು ಧುಮುಕಿ ಹರಿದು, ತನ್ನನ್ನೇ ಸೇವಿಸುವ ಛಂದಸ್ಸು, ಆ ಭಾವಗಳನ್ನು ಗಣಗಳ, ಯತಿಪ್ರಾಸಗಳ ಮಧ್ಯೆ ನಿಲ್ಲಿಸಿಕೊಳ್ಳುವ ವಿಶ್ವನಾಥಕವಿತ್ವದಲ್ಲಿ ಪದಶಯ್ಯೆ, ಪದ್ಯಧಾರೆಗಿಂತಲೂ ರಸವೇ ಪ್ರಧಾನವಾಗಿ ಕಂಡುಬರುತ್ತದೆ ಎನ್ನಬಹುದು. ಪದ್ಯಗಳ ಸೊಗಸನ್ನು ಪಕ್ಕಕ್ಕಿಟ್ಟು ಓದುತ್ತಿದ್ದರೆ ಆತನ ಮಹಾದ್ಭುತ ಕಲ್ಪನೆಗಳು ಬಿಚ್ಚಿಕೊಂಡು, ಕಥಾಶಿಲ್ಪನಿರ್ಮಾಣದ ಜಾಣ್ಮೆ ಕಾಣದಿರದು. ಸಂಭಾಷಣೆಗಳಲ್ಲಿನ ವ್ಯಾವಹಾರಿಕ ರೀತಿ ಛಂದೋಬದ್ಧವಾಗಿ ರೂಪುಗೊಳ್ಳುವುದು, ತೆಲುಗರ ಆಚಾರ, ಅಭ್ಯಾಸ, ನುಡಿಗಟ್ಟುಗಳನ್ನು ಪದ್ಯಗಳಲ್ಲಿ ಮೂಡಿಸುವುದು, ಚಿತ್ರವಿಚಿತ್ರವಾದ ಉಪಮಾನಗಳನ್ನು ಸೃಷ್ಟಿಸುವುದು ಈ ಕವಿಯ ಪ್ರತ್ಯೇಕತೆ. ಮೇಲಿನ ಪದ್ಯ ಆ ರೀತಿಯದ್ದೇ. ಈ ಉಪಮಾನ ಪೂರ್ತಿಯಾಗಿ ವಿಶ್ವನಾಥಸೃಷ್ಟಿಯೇ ಹೊರತು ವಾಲ್ಮೀಯದ್ದಲ್ಲ. ಇದು ವಾಲ್ಮೀಕಿ ಪ್ರಯೋಗಿಸಿದ ಒಂದು ಪದವನ್ನು ಹಿಡಿದು ವಿಸ್ತರಿಸಿದ ಕಲ್ಪನೆ.

ಮೂಗು ಕಿವಿಗಳನ್ನು ಕಳೆದುಕೊಳ್ಳುವ ಮುನ್ನ  ಶೂರ್ಪಣಖೆಯನ್ನು ವಾಲ್ಮೀಕಿ, – “ದಾರುಣಾ, ವೃದ್ಧಾ, ಭೈರವಸ್ವರಾ, ದುರ್ವೃತ್ತಾ, ಅಪ್ರಿಯದರ್ಶಿನೀ, ಕಾಮಮೋಹಿತಾ, ಅಸತೀಂ, ಅತಿಮತ್ತಾಂ, ಮಹೋದರೀಂ, ರಾಕ್ಷಸೀಂ – ಹೀಗೆ ವರ್ಣಿಸುತ್ತಾರೆ.  “ಉದ್ಧೃತ್ಯ ಖಡ್ಗಂ ಚಿಚ್ಚೇದ ಕರ್ಣನಾಸಂ ಮಹಾಬಲಃ ” ಕುಪಿತನಾದ ಲಕ್ಷಣ ಅವಳ ಮೂಗು ಕಿವಿಗಳನ್ನು ಕೊಯ್ದ. “ನಿಕೃತ್ತಕರ್ಣನಾಸಾ ತು ವಿಸ್ವರಂ ಸಾ ವಿನದ್ಯ ಚ /ಯಥಾಗತಂ ಪ್ರದುದ್ರಾವ ಘೋರಾ ಶೂರ್ಪಣಖಾ ವನಮ್- ಘೋರಳಾದ ಆ ಶೂರ್ಪಣಖೆ ಕರ್ಣನಾಸಛೇದಿತಳಾಗಿ, ವಿಕೃತಸ್ವರಗಳಿಂದ ಅರಚಿಕೊಂಡು ಕಾಡಿನೊಳಕ್ಕೆ ಓಡಿದಳು.

ಸಾ ವಿರೂಪಾ ಮಹಾಘೋರಾ ರಾಕ್ಷಸೀ ಶೋಣಿತೋಕ್ಷಿತಾ
ಸನಾದ ವಿವಿಧಾನ್ ನಾದಾನ್ ಯಥಾ ಪ್ರಾವೃಷಿ ತೋಯದಃ ||

ಸಾ ವಿಕ್ಷರನ್ತಿ ರುಧಿರಂ ಬಹುಧಾ ಘೋರದರ್ಶನಾ
ಪ್ರಗೃಹ್ಯ ಬಾಹೂ ಗರ್ಜನ್ತೀ ಪ್ರವಿವೇಷ ಮಹಾವನಮ್ ||

ವಿರೂಪ ಭಯಂಕರ ರಕ್ತಸಿಕ್ತಳಾಗಿ ಆ ರಕ್ಕಸಿ ವರ್ಷಕಾಲದ ಮೇಘಗಳಂತೆ ಅನೇಕವಿಧವಾದ ಧ್ವನಿಗಳನ್ನು ಹೊಮ್ಮಿಸಿ ಅರಚಿದಳು. ನೋಡಲು ಭಯಂಕರಳಾದ ಅವಳು ಅನೇಕ ವಿಧವಾಗಿ ರಕ್ತವನ್ನು ಸುರಿಸುತ್ತಾ ತೋಳುಗಳನ್ನು ಹಿಡಿದು ಗರ್ಜಿಸುತ್ತಾ ಮಹಾರಣ್ಯವನ್ನು ಪ್ರವೇಶಿದಳು. ವಿಶ್ವನಾಥರೂ ಇದನ್ನು ಹೇಳುತ್ತಾರೆ. ಕುವೆಂಪು ಈ ಸಂದರ್ಭವನ್ನು ” ಸಿಡಿದಳಂಬರಕೊಡನೆ ವರ್ಷಾಭ್ರವೇಷದಿಂ ರೋಷರವದಿಂದಶನಿಘೋಷದಿಂ, ನೆಲಂ ನಡುಗಿ ಗುಡುಗೆ ಗಿರಿಗಹ್ವರಂ” ಎಂದಿದ್ದಾರೆ.

ವಿಶ್ವನಾಥರ ನವಸೃಷ್ಟಿ, ಮೂಗು ಕಿವಿಗಳನ್ನು ಕತ್ತರಿಸಿದಮೇಲೆ ಶೂರ್ಪಣಖೆ ಹೇಗೆ ಕಂಡಳು ಎಂಬುದರ ಚಿತ್ರಣ  (ಅರಣ್ಯಕಾಂಡ – ಪಂಚವಟೀ ಖಂಡ).

ಅವಳು ತನ್ನ ಸೋದರ ಖರನ ಬಳಿಗೆ ಹೋದಾಗ, ನಿನ್ನನ್ನು ಹೀಗೆ ವಿರೂಪಗೊಳಿಸಿದವರು ಯಾರು? (ಕೇನ ತ್ವಮ್ ಏವಂರೂಪಾ ವಿರೂಪಿತಾ) ಎಂದ ಖರ, ತನ್ನ ತಪ್ಪನ್ನು ಮುಚ್ಚಿಟ್ಟು ತಂಗಿ ಹೇಳಿದ ವಿಷಯವನ್ನು ಕೇಳಿ, ಹದಿನಾಲ್ಕುಮಂದಿ ಯೋಧರನ್ನು ರಾಮನಮೇಲೆ ಯುದ್ಧಕ್ಕೆ ಹರಿಯಬಿಟ್ಟ. ರಾಮನಿಂದ ಅವರು ಹತರಾದಾಗ, ಶೂರ್ಪಣಖೆ ನೆಲಕ್ಕುರುಳಿದ ಆ ರಾಕ್ಷಸರನ್ನು ನೋಡಿ ಕ್ರೋಧದಿಂದ ಮೂರ್ಛಿತಳಾಗಿ, ಭಯದಿಂದ ನಡುಗುತ್ತಾ ಭೀಕರಧ್ವನಿಗಳನ್ನು ಮಾಡುತ್ತಾ ಬಂದಳು ( ತಾನ್ ದೃಷ್ಟ್ವಾ ಪತಿತಾನ್ ಭೂಮೌ ರಾಕ್ಷಸೀ ಕ್ರೋಧಮೂರ್ಛಿತಾ | ಪರಿತ್ರಸ್ತಾ ಪುನಸ್ತತ್ರ ವ್ಯಸೃಜದ್ಭೈರವಸ್ವನಾನ್ ||), ಹಾಗೆ ಬಂದ ಅವಳನ್ನು ವಾಲ್ಮೀಕಿ ವರ್ಣಿಸುವುದು ಹೀಗೆ :

ಸಾ ನದಂತೀ ಮಹಾನಾದಂ ಜವಾತ್ ಶೂರ್ಪಣಖಾ ಪುನಃ |
ಉಪಗಮ್ಯ ಖರಂ ಸಾ ತು ಕಿಂಚಿತ್ ಸಂಶುಷ್ಕಶೋಣಿತಾ ||
ಪಪಾತ ಪುನರೇವಾರ್ತಾ ಸನಿರ್ಯಾಸೇವ ಸಲ್ಲಕೀ (ಅರಣ್ಯ: ಸ೨೦/ ಶ್ಲೋ೨೨-೨೩)

ಮೂಗು ಕಿವಿಗಳು ಕೊಯ್ದು ಸುರಿಯುತ್ತಿದ್ದ ರಕ್ತ ಸ್ವಲ್ಪ ಒಣಗಿ, ಗಾಯ ಕರಕಲಾಗಿ, ಅಂಟಿನಿಂದ ಕೂಡಿದ ಸಲ್ಲಕೀ ಮರದಂತೆ (ಸ ನಿರ್ಯಾಸ ಇವ ಸಲ್ಲಕೀ) ಖರನಮುಂದೆ ಬಂದು ನೆಲಕ್ಕುರುಳಿದಳಂತೆ. “ಸನಿರ್ಯಾಸೇವ ಸಲ್ಲಕೀ” – ಅಂಟಿನಿಂದ ಕೂಡಿದ ಸಲ್ಲಕೀ ಮರ ( Strychnos potatorum, ಚಿಲ್ಲ, ಚಿಲದೇಮರ,ನಿರ್ಮಾಲಿ ಮರ) ಎಂಬ ಪದವನ್ನು ಹಿಡಿದು, ವಿಶ್ವನಾಥರು ಒಂದು ಅಪೂರ್ವ ಕಲ್ಪನೆಯನ್ನುಇಲ್ಲಿ ಮಾಡಿದ್ದಾರೆ. ಈ ಸೀಸಪದ್ಯ ಕರ್ಣನಾಸಿಕಾಚ್ಛೇದದನಂತರ ಶೂರ್ಪಣಖೆಯ ಆಗಿನ ಸ್ಥಿತಿಯ ಛಾಯಾಚಿತ್ರವನ್ನು ತೆಗೆದಿದೆ. ಘೋರವಾದ ಸಿಡಿಲು ಬಡಿದು ಅರ್ಧಸುಟ್ಟ ಮತ್ತಿಮರ, ಅರೆಬರೆ ಸುಟ್ಟ ಮರದ ದಿಮ್ಮಿ, ರೆಕ್ಕೆಯೊಣಗಿ ಕುಂಟೆಯತ್ತ ಬಗ್ಗಿ, ಹಣ್ಣಾದ ರೆಕ್ಕೆಗಳ ಗುಜ್ಜು ಈಚಲು, ಹುತ್ತದಿಂದ ಹೊರಬಂದು ಗಾಳಿಗೆ ಊಗುತ್ತಾ ಕಿವಿಗೆ ಅಹಿತವಾದ ಶಬ್ದಗಳನ್ನು ಮಾಡುವ ಬಿದರಮೆಳೆ, ಎದೆ ಝಲ್ಲೆನುವ ಈ ಉಪಮಾನಗಳು ವಿಶ್ವನಾಥರ ಅಪೂರ್ವ ಕಲ್ಪನೆ ! ಮೂಲದ ರಸದೃಷ್ಟಿಗೆ ಕುಂದುಬರದಂತೆ ಅದರ ಒಂದು ಕಿರುನುಡಿಯನ್ನೇ ಹಿಡಿದು, ತನ್ನದೇ ಪ್ರತ್ಯೇಕ ಕಲ್ಪನೆಯಾದರೂ ಮೂಲದ ಆಶಯವನ್ನು ಅಲಂಕರಿಸಿ ವಿಸ್ತರಿಸಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ತನ್ನ ಕಲ್ಪನಾದೃಷ್ಟಿ ಪ್ರಸರಿಸದ ಪ್ರಪಂಚವೇ ಇಲ್ಲವೆನ್ನುವಷ್ಟರ ಮಟ್ಟಿಗೆ ವಿಶ್ವನಾಥರ ಬಹುಮುಖ ವೈದುಷ್ಯ, ವಿಸ್ತೃತಿ ಮತ್ತು ಸಾಮರ್ಥ್ಯ ಅವರ ಕೃತಿಗಳಲ್ಲಿ ಕಾಣುತ್ತದೆ. “ವೇದಗಳಲ್ಲಿನ ವಿಮಲಾರ್ಥಚಯವನ್ನು ವಾದಿಸುವುದೇ ನನ್ನ ಕವಿತೆ – ಅದರ ಶತ್ರುವಾಗಿ ಅರಚುವುದೇ ಈ ಜಗತ್ತು (“ವೇದಮುಲಲೋನಿ ವಿಮಲಾರ್ಥ ಚಯಮು ವಾದಿಂಚು ನಾ ಕೈತ – ದಾನಿ ಶತ್ರುವೈ ವರಲು ನೀ ಜಗಮು”) ಎಂದು ತನ್ನ ಪ್ರಾಥಮ್ಯವನ್ನು ಸ್ಪಷ್ಟಪಡಿಸಿದವರು. “ಶ್ರೀಮದ್ರಾಮಾಯಣ ಕಲವೃಕ್ಷಮು”, ವಾಲ್ಮೀಕಿಯನ್ನು ಅನುಸರಿಸಿ ಬರೆದ ರಾಮಕಥೆಯಾದರೂ, ಹಲವೆಡೆಗಳಲ್ಲಿ ಸ್ವೋಪಜ್ಞೆತೆಯಿಂದ ಕವಿ ಮಾರ್ಪಾಡುಗಳನ್ನು ಮಾಡಿದ್ದಾನೆ. ವಾಲ್ಮೀಕಿಯ ಕೈಕೆ ತನ್ನ ಮಗನಿಗೇ ರಾಜ್ಯವನ್ನು ಕೊಡಿಸಲು, ಅದಕ್ಕಾಗಿ ಏನನ್ನಾದರೂ ಮಾಡಲು ಯತ್ನಿಸುವ ಸಾಮಾನ್ಯ ಸ್ವಾರ್ಥಮಾತೆಯಾದರೆ, ವಿಶ್ವನಾಥಸೃಷ್ಟಿಯ ಕೈಕೆ ರಾಮನಿಂದ ಧರ್ಮರಕ್ಷಣೆ ಮತ್ತು ರಾಕ್ಷಸ ಸಂಹಾರ ಮಾಡಿಸುವ ಪರಮಾರ್ಥಕ್ಕಾಗಿ ಸ್ವಬುದ್ಧಿಯಿಂದಲೇ ಅಪಕೀರ್ತಿಯನ್ನು ತಲೆಯಮೇಲೆ ಹೊತ್ತವಳು. ಈ ರಹಸ್ಯ ಅವಳಿಗೆ ಮತ್ತು ರಾಮನಿಗೆ ಮಾತ್ರ ತಿಳಿದಿತ್ತಂತೆ! ಹಾಗೆಯೇ ವಾಲ್ಮೀಕಿಯಲ್ಲಿ ಪರಶುರಾಮ ಗರ್ವಭಂಗ ಸೀತಾರಾಮರ ಕಲ್ಯಾಣಾನಂತರ ನಡೆದರೆ, ವಿಶ್ವನಾಥರು, ಪರುಶುರಾಮನನ್ನು ಕಲ್ಯಾಣಾತ್ಪೂರ್ವವೇ ಪ್ರವೇಶಗೊಳಿಸುತ್ತಾರೆ. ಪರಶುರಾಮನ ಶೃಂಗಭಂಗ ನಡೆದು, ತನ್ನ ಪೂರ್ವಾವತಾರವನ್ನು ಪೂರ್ಣವಾಗಿ ಮುಗಿಸಿ, ಅವನಲ್ಲಿನ ವೈಷ್ಣವಾಂಶವನ್ನು ಶ್ರೀರಾಮ ಪೂರ್ಣವಾಗಿ ತನ್ನಲ್ಲಿ ಆವಾಹನೆ ಮಾಡಿಕೊಂಡನಂತರವೇ ಸೀತಾವಿವಾಹ ಯೋಗ್ಯತೆಯನ್ನು ಪಡೆದಂತೆ ಚಿತ್ರಿಸಲಾಗಿದೆ. ಹೀಗೆ ಎಷ್ಟೋ ಬದಲಾವಣೆಗಳು ಅವಾಲ್ಮೀಕವಾದರೂ ಅನೌಚಿತ್ಯದೋಷದಿಂದ ಮುಕ್ತವಾಗಿವೆ.

  9 Responses to “ವಿಶ್ವನಾಥ ಸತ್ಯನಾರಾಯಣರ ವಿಶಿಷ್ಟ ಪದ್ಯಗಳು – ೧”

 1. ಈ ಪದ್ಯ ನನ್ನ ಗಮನವನ್ನು ಸೆಳೆದದ್ದು ಶ್ರೀ ಚೀಮಲಮರ್ರಿ ಬೃಂದಾವನರಾವು ಅವರ ಒಂದು ಲೇಖನದಿಂದ

 2. ಬಹಳ ಚೆನ್ನಾಗಿದೆ ಚಂದ್ರಮೌಳಿಯವರೇ, ಶೂರ್ಪಣಖೆಯ ವರ್ಣನೆಯ ಪ್ರಸಂಗದ ಉದಾಹರಣೆಯಿತ್ತು ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರು ಎದೆ ಝಲ್ಲೆನ್ನಿಸುವ ಉಪಾಮಾನವನ್ನು ಮತ್ತು ಮೂಲದಿಂದ ಬದಲಾದರೂ ಅನೌಚಿತ್ಯದೋಷದಿಂದ ಮುಕ್ತವಾಗಿ ರಚಿಸುವ ಕವಿಸಾಮ್ರಾಟರ ಕವಿಹೃದಯವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

 3. ಪ್ರಿಯ ಸೋಮಶೇಖರ್,

  ಧನ್ಯವಾದಗಳು. ತೆಲುಗಿನ ಪದ್ಯಸ್ವಾರಸ್ಯಗಳಬಗ್ಗೆ ಲೇಖನವನ್ನು ಮುಂದುವರಿಸಲು ಒಬ್ಬಿಬ್ಬರು ಕೇಳಿದ್ದರಿಂದ , ಮತ್ತು ಅದು ನನಗೆ ಸಂತೋಷಕಾಯಕವಾದ್ದರಿಂದ ಪದ್ಯಪಾನದಲ್ಲಿ ಇದನ್ನು ಹಾಕಿದ್ದಾಯಿತು. ನಿಮಗೆ ಇಷ್ಟವಾಯಿತೆಂದು ತಿಳಿದು ಆನಂದವಾಯಿತು. ಎಂದಿನಂತೆ ನಿಮ್ಮ ಸ್ಪಂದನೆ, ನಿಮ್ಮ ಸಾಹಿತ್ಯ ಪ್ರತಿಭೆ, ಅಭಿರುಚಿ ಮತ್ತು ವಿಶ್ವಾಸಕ್ಕೆ ತೋರುಗನ್ನಡಿಯಾಗಿದೆ. ವಂದನೆಗಳು.

  • ಚಂದ್ರಮೌಳಿ ಸರ್, ನಿಮ್ಮ ಲೇಖನಗಳು ಬಹಳ ಚೆನ್ನಾಗಿ ಮೂಡಿಬರುತ್ತಿದೆ, ದಯವಿಟ್ಟು ತೆಲುಗಿನ ಪದ್ಯಸ್ವಾರಸ್ಯಗಳಬಗ್ಗೆ ಲೇಖನವನ್ನು ತಾವು ಹೀಗೆ ಮುಂದುವರಿಸಬೇಕಾಗಿ ಪ್ರಾರ್ಥನೆ _/\_

   • ಪ್ರಿಯ ಸೋಮಶೇಖರ್,

    ಖಂಡಿತವಾಗಿಯೂ ಮುಂದುವರೆಸುತ್ತೇನೆ. ನಮಸ್ಕಾರ.

 4. Thanks for Posting this beautiful poem sir. Please continue _/\_

 5. Nice one sir, thak you

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)