ಶ್ರೀವಾಣೀ ಗಿರಿಜಾಃ ಚಿರಾಯ ದಧತೋ ವಕ್ಷೋ ಮುಖಾಂಗೇಷು ಯೇ
ಲೋಕಾನಾಂ ಸ್ಥಿತಿಮಾವಹನ್ತ್ಯವಿಹತಾಂ ಸ್ತ್ರೀ ಪುಂಸ ಯೋಗೋದ್ಭವಾಂ
ತೇ ವೇದ ತ್ರಯ ಮೂರ್ತಯಃ ತ್ರಿಪುರುಷಾಃ ಸಂಪೂಜಿತಾಃ ವಃ ಸುರೈಃ-
ಭೂಯಾಸುಃ ಪುರುಷೋತ್ತಮಾಂಬುಜ ಭವ ಶ್ರೀಕಂಧರಾಃ ಶ್ರೇಯಸೇ
ಇದೇನು ! ತೆಲುಗುಪದ್ಯದ ವಿಭಾಗದಲ್ಲಿ ಸಂಸ್ಕೃತ ವೃತ್ತವೇ ? ಹೌದು. ಇದು ಕವಿತ್ರಯರು ತೆಲುಗಿಸಿದ ಮಹಾಭಾರತದಲ್ಲಿನ ಮೊದಲ ಶ್ಲೋಕ. ತೆಲುಗಿನಲ್ಲಿ ಆದಿಕವಿ ನನ್ನಯ್ಯ ತನ್ನ ಮಹಾಭಾರತವನ್ನು ಒಂದು ಸಂಸ್ಕೃತ ಶ್ಲೋಕದಿಂದ ಪ್ರಾರಂಭಿಸಿರುವುದೊಂದು ವಿಶೇಷ. ” ತಲ್ಲಿ ಸಂಸ್ಕೃತಂಬು ಎಲ್ಲ ಭಾಷಲಕುನೂ ( ಅಮ್ಮನೇ ಸಂಸ್ಕೃತವು ನಮ್ಮೆಲ್ಲ ನುಡಿಗಳಿಗೆ) ಎಂಬ ಸಂಪ್ರದಾಯವನ್ನು ಗೌರವಿಸಿ ಕಾವ್ಯಾರಂಭದಲ್ಲೇ ತ್ರಿಮೂರ್ತಿಗಳನ್ನು ಸ್ಮರಿಸಿರುವುದು ಇಲ್ಲಿನ ವಿಶೇಷ. ಈ ಶ್ಲೋಕವಲ್ಲದೆ ಮತ್ತಾವ ಇಷ್ಟದೇವತಾಸ್ತುತಿಯನ್ನೂ ನನ್ನಯ್ಯ ರಚಿಸಿಲ್ಲ. ಅವೆಲ್ಲಾ ಮುಂದೆ ಬೆಳೆದು ಬಂದ ಸಂಪ್ರದಾಯ.
ಶ್ರೀ-ವಾಣೀ- ಗಿರಿಜಾಃ : ಲಕ್ಷ್ಮೀ ವಾಣೀ ಗಿರಿಜೆಯರನ್ನು
ಚಿರಾಯ ದಧತೋ ವಕ್ಷೋ ಮುಖಾಂಗೇಷು – ಅನಾದಿಯಿಂದ ವಕ್ಷಸ್ಥಲದಲ್ಲಿ, ನಾಲಿಗೆಯಮೇಲೆ ಮತ್ತು ಶರೀರಾರ್ಧಭಾಗವಾಗಿ ಧರಿಸಿ,
ಯೇ : ಯಾರು,
ಸ್ತ್ರೀ ಪುಂಸ ಯೋಗೋದ್ಭವಾಂ – ಲೋಕಾನಾಂ ಸ್ಥಿತಿಮ್ ಅವಿಹತಾಂ ಆವಹಂತಿ : ಸ್ತ್ರೀ ಪುರುಷ ಸಂಯೋಗದಿಂದ ಉದ್ಭವಿಸುವ ಲೋಕಗಳ ಸ್ಥಿತಿಯನ್ನು ಅವಿಚ್ಛಿನ್ನವಾಗಿ ನಿರ್ವಹಿಸುತ್ತಿದ್ದಾರೋ,
ತೇ ವೇದತ್ರಯ ಮೂರ್ತಯಃ ತ್ರಿಪುರುಷಾಃ – ಆ ವೇದತ್ರಯ ಮೂರ್ತಿಗಳಾದ, ತ್ರಿಮೂರ್ತಿಗಳು
ಪುರುಷೋತ್ತಮ-ಅಂಬುಜ ಭವ-ಶ್ರೀಕಂಧರಾಃ – ವಿಷ್ಣು, ಬ್ರಹ್ಮ, ಪರಮೇಶ್ವರರು
ಸುರೈಃ ಪೂಜಿತಾಃ – ದೇವತೆಗಳಿಂದ ಪೂಜೆಗೊಳ್ಳುತ್ತಿರುವ ಅವರು
ವಃ ಶ್ರೇಯಸೇ ಭೂಯಾಸುಃ : ನಿಮಗೆ ಶ್ರೇಯಸ್ಸನ್ನು ಉಂಟುಮಾಡಲಿ.
-::-
ವೇಂಕಟರಾಮಕೃಷ್ಣ ಎಂಬ ಕವಿಯೊಬ್ಬರು, ಈ ಶ್ಲೋಕವನ್ನು ವ್ಯಾಜನಿಂದೆಯ ಪದ್ಯದ ಮೂಲಕ ಆಕ್ಷೇಪಿಸಿದ್ದಾರೆ !
“ಆಂಧ್ರ ಲೋಕೋಪಕಾರಮ್ಮು ನಾಚರಿಂಪ
ಭಾರತಮ್ಮುನು ನನ್ನಯ ಭಟ್ಟು ತೆಲುಗು
ಚೇಯುಚುನ್ನಾಡು ಸರಿಯೆ, ಬಡಾಯಿಗಾಕ
ತೊಲುತ ಸಂಸ್ಕೃತ ಪದ್ಯಮೆಂದುಲುಕು ಚೆಪುಡಿ?”
ಆಂಧ್ರಲೋಕೋಪಕಾರವನ್ನಾಚರಿಸಲು
ಭಾರತವನಿಂತು ನನ್ನಯ್ಯಭಟ್ಟ ತೆಲುಗು
ಗೈಯಲುದ್ಯುಕ್ತನೈ ಸರಿ ಬಡಾಯಿ ಯಲ್ತೆ
ಮೊದಲು ಸಂಸ್ಕೃತವೃತ್ತವೇಕೊದಗಿಬಂತೈ?
चिरायु -> चिराय
Thanks. Corrected
ಚಂದ್ರಮೌಳಿ ಸರ್, ಈ ಮೂಲಕ ತಮ್ಮಲ್ಲೊಂದು ಪ್ರಾರ್ಥನೆ. ವಿಶ್ವನಾಥ ಸತ್ಯನಾರಾಯಣರ “ರಾಮಾಯಣ ಕಲ್ಪವೃಕ್ಷ”ದ ಪದ್ಯಗಳನ್ನು ದಯವಿಟ್ಟು ಹಂಚಿಕೊಳ್ಳಿ. ಬಹಳ ಅದ್ಭುತವಾಗಿವೆ(ಅರ್ಥಸಹಿತ 🙂 )
ನಿಜ ಮಂಜರೇ, ಕೆಲವನ್ನು ಪರಿಚಯಿಸುವ ಯತ್ನಮಾಡೋಣ.
_/\_
ಚಂದ್ರಮೌಳಿಯವರೇ, ಬಹಳ ಚೆನ್ನಾಗಿದೆ ಧನ್ಯವಾದ, ಆಂಧ್ರಸಾಹಿತ್ಯದ ಅಧ್ಯಯನದಲ್ಲಿ ನಿಮ್ಮ ಅಭಿರುಚಿ ನಮ್ಮೆಲ್ಲರಿಗೂ ತಿಳಿದೇಯಿದೆ. ವೇಂಕಟರಾಮಕೃಷ್ಣಕವಿಯ ಪದ್ಯವನ್ನು ಭಾಷಾಂತರಿಸಿರುವ ಪದ್ಯವೂ ಚೆನ್ನಾಗಿದೆ. ತೆಲುಗಿನ ಸಂಪ್ರದಾಯದ ಮತ್ತು ರಸಪದ್ಯಗಳ ಸವಿಯನ್ನು ಹೀಗೆ ನಮ್ಮೊಡನೆ ಹಂಚಿಕೊಳ್ಳಬೇಕಾಗಿ ವಿನಂತಿ.
_/\_
ಧನ್ಯವಾದ.
_/\_