Jun 122017
 

ಮಂಡೋದರಿಯನ್ನು ಕುರಿತು ಮಹಾಭಾರತದ ಪಾತ್ರಗಳಾದ ಕುಂತಿ, ಶಂತನು, ಉತ್ತರ, ಕಂಸ ಎಂಬ ಪದಗಳನ್ನು ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಬಳೆಸಿ ಪದ್ಯ ರಚಿಸಿರಿ.

  20 Responses to “ಪದ್ಯಸಪ್ತಾಹ ೨೫೯: ದತ್ತಪದಿ”

  1. ಪತಿಗಂ ವೇ‌ಳ್ಕುಂ ತಿರೆವಗ-
    ಳತಿಶಯಪಾಶಂ ತನುಪ್ರಕೃತ್ಯಾಕರ್ಷಂ
    ಕೃತಪಾಪಕ್ಕುತ್ತರಮಾ
    ಸತಿಗುಂ ವೈಧವ್ಯಕಂ ಸತತಮೈತ್ರಿಯೆ ದಲ್

    • ಪದ್ಯ ತುಂಬ ಚೆನ್ನಾಗಿದೆ!
      ಆದರೆ ಮೂರನೆಯ ಪಾದದ ಅಂತ್ಯದಲ್ಲಿ ಒಂದು ಮಾತ್ರೆ ಕಡಿಮೆಯಾಗಿದೆ ?!

    • ಆಹಾ! ಸೊಗಸಾಗಿದೆ 🙂
      ತಿರೆವಗಳ ಅಂದರೇನು?

  2. ದೋಧಕ|| ಶಂತನು, ಉತ್ತರ(ಕುಮಾರ), ಕಂಸರುಮೆಲ್ಲರ್
    ಸಂತರೊ, ದುಷ್ಟರೊ – ಗಂಡಸರೈ ಕೇಳ್|
    ಕಾಂತೆಯನಲ್ಲದೆ(Say, Mandodari) ರೂಕ್ಷರ(Rustic men) ತಾನುಂ
    (Pierce)ಕಂತುವುದೇನು ಶಕುನ್ತಿಕಕೀಟಂ(Bee)||

  3. ಈಶಂ ತನುತನುವಂ(soft/ಮಂದೋದರ) ಮಾತ್ರಮನ್ನೀಯೆ ಲಂ-
    ಕೇಶಸತಿಗೊಲಿವನೇಂ ಕಂಸತುಲ್ಯಂ(ರಾವಣಂ ಬಹುವಲ್ಲಭಂ)!
    ಕೇಶರಾಶಿಯನು, ವೇಳ್ಕುಂ ತಿಗ್ಮಮೆಂದಿತ್ತ (ಮುಖಕಾಂತಿ),
    ಕೌಶೇಯಗಳಮುತ್ತರತರಂಗಳಂ||

    • ಪದ್ಯದ ಮೊದಲ ಪಾದದಲ್ಲಿ ಒಂದು ಮಾತ್ರೆ ಕಡಿಮೆಯಾಗಿದೆಯಲ್ಲವೇ ?

  4. ಮನ್ನಿಕುಂ ತಿರೆ!ಯಸುರರಾವಣನ ಪತ್ನಿಯಂ
    ನನ್ನಿಯಿಂದನಿಶಂ,ತನೂದರಿಯನಾ
    ತನ್ನಯಾಶೋತ್ತರಮನವಗಣಿಪನೊಳಗಂದು
    ಸನ್ನಡತೆಯೆಸಕಂ ಸಮನಿಸಿರಲ್ ಮೇಣ್!

  5. ಕುಮತೀಶಂ ತನುಪವನಂ
    ವಿಮಲೆಯ ಲೋಕಂ ಸಹಸ್ರನೇತ್ರಜಿತಂ ದಲ್ |
    ಸುಮಕಿರ್ಕುಂ ತಿಥಶಾಖಂ
    ಕಮಲೋದರಿ ಮರಣದುತ್ತರದೆ ಬದುಕಿರ್ಪಳ್ ||

    [ದುರ್ಮತಿಗೊಡೆಯನಾದ ರಾವಣನೇ ದೇಹದ ಉಸಿರಾಗಿರುವ, ಇಂದ್ರಜಿತನೇ ಪ್ರಪಂಚವಾಗಿರುವ ಹೂವಿಗೆ ಬೆಂಕಿಯ ಶಾಖ ತಟ್ಟಿತು. ಹೀಗಿದ್ದರೂ ಆಕೆ ಸತ್ತಮೇಲೂ ಬದುಕಿದ್ದಾಳೆ]

    (ಪಂಚ ಮಹಾಪತಿವ್ರತೆಯರಲ್ಲಿ ಮಂದೋದರಿಗೂ ಸ್ಥಾನವಿದೆಯಲ್ಲವೇ?!)

    ತಿಥ=ಅಗ್ನಿ

  6. ಅಂತಕನ ಪಾಶಂ ತನುಜರಿರ್ವರಂ ಸೆಳೆಯೆ
    ಶಾಂತಿಯಂ ಕದಡೆ ಬೆಳಕುಂ ತಿಮಿರಮುಂ
    ಎಂತು ಮಾರುತ್ತರವನಿತ್ತಿವನ ಬೆಸಗೊಳ್ವೆ
    ನಿಂತು ನೆನೆಯುತೆ ಕಂಸವನ್ನೆತ್ತಿದಳ್

    ಮಕ್ಕಳಿಬ್ಬರೂ ಸತ್ತಾಗಲೂ ಗಂಡನಿಗೆ ಬುದ್ಧಿ ಬರದಿರಲು, ಹಗಲು ರಾತ್ತಿಗಳೆರಡರಲ್ಲೂ ಸಮಾಧಾನವಿಲ್ಲದಾಗಿ ಯಾವ ಪ್ರತ್ಯುತ್ತರವನ್ನಿತ್ತು(ವಾದದಲ್ಲಿ) ಇವನ ಮನಸ್ಸನ್ನು ಬದಲಾಯಿಸಲಿ? ಎಂದು(ನೀರು ಅಥವಾ ಇನ್ನೇನಾದರೂ ತುಂಬಿದ) ಲೋಟ(ಕಂಸ) ವನ್ನೆತ್ತಿ ಯೋಚಿಸಿದಳು ಅನ್ನುವ ಪ್ರಯತ್ನ

    • ನಾಕು ಮಾತಿಂದೇನು ವಿಷಯಮಿಹುದತಿಸರಳ-
      ಮೇಕಾಕೆ ನರಳಬೇಕೋ ಕಾಣೆನಾಂ|
      ಆ ಕಂಸದಿಂದುದಕಮನ್ನುಳಿದು ಕುಡಿದೊಡಂ
      ಠೀಕುಹೆಂಡಮನೆಲ್ಲಮಾಗ ಶಾಂತಂ||

  7. ಬೆಳಕುಂ ತಿಮಿರಂ ಸೇರ್ದೊಲ್!
    ಹೊಳೆಹೊಳೆವಾಗಸದೆ ಕಲ್ಮಶಂ ತನುಗೊಂಡೊಲ್!
    ಕುಲಕಂ ಸತಿಯಾದೊಡಿವಳ್-
    ಖಳರಾವಣನಾ!!ನಿರುತ್ತರನನಂಗಂ ಹಾ!

  8. ಹತ್ತುತಲೆ ರಾಯನೊಡೆ ಕುಂತಿರ್ದ ಮಾಸತಿಯ-
    ನೆತ್ತರದೆ ಸಂಕಾಶ ಕಂಡು ।
    ಸುತ್ತುತಲಿ ವಾನರನು ಬೇಶಂತ ನುಲಿದಿರ್ದ-
    ನುತ್ತರದಿ ಕಂಸಾಳೆ ಕೊಂಡು !!

    *ಬೇಶ್ + ಅಂತ = ಬೇಶಂತ

    (ದತ್ತಪಗಳು ಒದಗಿಬಂದ “ಕಂಸಾಳೆಪದ” – ಒಪ್ಪಿಸಿಕೊಳ್ಳುವಿರಾ?!!)

    • ಕ್ಷಮೆ ಕೋರಿ 🙂
      ಹತ್ತುಽತಲೆಽ ರಾಯನ ಬಳಿಽ ಮಾಸತಿಯನ್ನು ಕುಂಡ್ರಿಽಸಿಽ
      ರಾಮನ ಭಕ್ತಽ ಹನುಮಂತ ತಾನುಽ ಅದನು ನೋಡಿಽ ಜೃಂಬಿಸಿಽ
      ಭೇಷಾಯಿತೋ ಪದ್ಯ ವೈನಾಯಿತೋ
      ಶರಣೆಂದೆವೋ ನಾವು ಶರಣೆಂದೆವೋ

      (ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡವ್ರೇ….
      ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ…. ಈ ಹಾಡಿನ ಧಾಟಿಯಲ್ಲಿ)

      • ಧನ್ಯವಾದಗಳು ಪ್ರಸಾದ್ ಸರ್, ಸ್ವಾರಸ್ಯವೆಂದರೆ
        “ಹತ್ತುತಲೆ ರಾಯನೊಡೆ ಕುಂತಿರ್ದ ಮಾಸತಿ” ಎಂದರೆ “ಮಂಡೋದರಿ”ಯನ್ನು ಕುರಿತಾದರೆ
        “ಹತ್ತುತಲೆ ರಾಮನೆಡೆ ಕುಂತಿರ್ದ ಮಾಸತಿಯ” ಎಂದರೆ “ಸೀತೆ”ಯ ಬಗೆಗಿನ ಪದ್ಯವಾಗಿಬಿಡುತ್ತದೆ ಅಲ್ಲವೇ ?!!

        *ಹತ್ತುತಲೆ = ೧೦ತಲೆ / ವ್ಯಾಪಿಸುತ್ತಾ

        • ಅಶೋಕವನದಲ್ಲಿ ರಾವಣ-ಸೀತೆಯರನ್ನು ಹನುಮಂತನು ಕಂಡು ಹಿಗ್ಗಿದ ಎಂದು presumeಮಾಡಿ ಹಾಗೆಂದೆ 😉 ನಿಮ್ಮ ಪದ್ಯವು ಚೆನ್ನಾಗಿಯೇ ಇದೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)