Jun 192017
 

  36 Responses to “ಪದ್ಯಸಪ್ತಾಹ ೨೬೦: ಚಿತ್ರಕ್ಕೆ ಪದ್ಯ”

  1. ಸುಟ್ಟರೆ ಬರಿದೇ ಕಾಷ್ಟವ ಸೇರ್ವುದೆ
    ನೆಟ್ಟಗೆ ದೇವಗೆ ಬೇಡಿಕೆಯು|
    But…
    ಥಟ್ಟನೆ ತಣಿಯುವುದೆನ್ನಯ ಪಸಿವೈ
    ಕೊಟ್ಟರೆನಗಮಾ ಬಾಳೆಯನು||

    • ನಮಸ್ಕಾರ ಪ್ರಸಾದು, ಪದ್ಯ ಚೆನ್ನಾಗಿದೆ. ಒಂದು ಗಮನಿಸಬೇಕಾದ ಅಂಶ- ಅನ್ವಯದೋಷದ ಕುರಿತು. ನಿಮ್ಮ ಪ್ರಕಾರ- “ಕಾಷ್ಟವ ಬರಿದೇ ಸುಟ್ಟರೆ ದೇವಗೆ ನೆಟ್ಟಗೆ ಬೇಡಿಕೆಯು ಸೇರ್ವುದೇ?” ಎಂದಾಗಬೇಕು. ಆದರೆ ಮೊದಲು ಓದಿದಾಗ “ಬರಿದೇ ಸುಟ್ಟರೆ ಕಾಷ್ಟವನ್ನು ಸೇರ್ವುದೇ” ಎಂಬ ಅರ್ಥ ಸ್ಫುರಿಸಿಬಿಡುತ್ತದೆ. ಹಾಗಾಗಿ ಆ ಅನ್ವಯಕ್ಲೇಶವನ್ನು ಪರಿಹರಿಸಿಕೊಳ್ಳಬೇಕು. ಆಮೇಲೆ “ಪಸಿವೈ” ಎಂಬುದು ಅಷ್ಟಾಗಿ ಸಾಧುವಲ್ಲ! ಏಕೆಂದರೆ “ಐ”ತ್ವ ಮತ್ತು “ಔ”ತ್ವಗಳು ಸಂಬೋಧನಾರ್ಥವಾಗಿ ನಾಮಪದಕ್ಕೆ ಬರುವುದಿಲ್ಲ. ಕ್ರಿಯಾಪದಕ್ಕೆ ಮಾತ್ರ ಬಳಸಬಹುದು.

      • ಸಲಹೆಗಳಿಗಾಗಿ ಧನ್ಯವಾದಗಳು. ಸರಿಪಡಿಸುತ್ತೇನೆ.

  2. ಬೆಂಕಿಯ ಮುಂದಿರ್ಪ ಮುನಿಯೊ
    ಳಂಕೆಯ ಶಂಕಿಸಿ ರಮೇಶಮವತರಿಸಿರ್ಪಂ |
    ಜಿಂಕೆಯ ರೂಪದೆ ಬಂದೊಡೆ
    ಪಂಕದ ಚಿತ್ತದೊಳು ತಿರುಳು ಬಯಸಿರ್ದಂ ತಾಂ ||

    (ಯಾಗ ಮಾಡದೆ ಕೇವಲ ಬೆಂಕಿಯ ಮುಂದೆ ಕುಳಿತಿದ್ದ ಮುನಿಯಲ್ಲಿ ಮನೋನಿಗ್ರಹವನ್ನು ಶಂಕಿಸಿ ನಾರಾಯಣನು ಜಿಂಕೆಯ ರೂಪವನ್ನು ಧರಿಸಿ ಬಂದನು. ಹಾಗೆ ಬಂದಾಗ ಕೆಸರಿನಂಥ ಕಲ್ಮಶವಾದ ಮನಸ್ಸಿನಲ್ಲಿ ಮಾಂಸವನ್ನು ಸವಿಯಲು ಬಯಸಿದನು)

    • ನಮಸ್ಕಾರ ಚೇತನ್,
      ರಮೇಶಮವತರಿಸಿರ್ಪಂ- ಎಂಬಲ್ಲಿ ರಮೇಶಂ- ಮುಂದೆ ಸ್ವರ ಬಂದಾಗ ನತ್ವ ಬರಬೇಕಲ್ಲವೇ! ರಮೇಶನವತರಿಸಿರ್ಪಂ ಎಂದಾಗಬೇಕು. ಹಾಗೆಯೇ ಜಿಂಕೆಯ ರೂಪದಲ್ಲಿ ಬಂದದ್ದು ಯಾರು? ಯಾವ ತಿರುಳನ್ನು ಯಾರು ಬಯಸಿದರು ಇತ್ಯಾದಿ ವಿಷಯಗಳೆಲ್ಲ ಪದ್ಯದಲ್ಲಿಯೇ ಸ್ಪಷ್ಟವಾಗಬೇಕಲ್ಲ! ಕೆಳಗೆ ನೀವು ಬರೆದ ಅರ್ಥದಿಂದ ಅದನ್ನು ಅರಿತುಕೊಳ್ಳಬಹುದಷ್ಟೆ! ಇನ್ನೂ ಸ್ಪಷ್ಟವಾಗಿ ಅರ್ಥ ಸ್ಫುರಿಸುವಂತೆ ಮಾಡಲು ಪ್ರಯತ್ನಿಸಿ. ಛಂದಸ್ಸಿನಲ್ಲಿ ನಿಬಿಡಬಂಧವನ್ನು ತಂದರೆ ಇನ್ನೂ ಚೆನ್ನ.

      • ತಮ್ಮ ವಿಮರ್ಶೆಗೆ ಧನ್ಯವಾದಗಳು sir. ದೋಷಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ.

  3. ಹವ್ಯ ವಾಹನನನ್ನು ಆರಾಧಿಸುತ್ತಿರುವ ಮುನೀಂದ್ರನೇ
    ನನ್ನ ಆಹಾರವಾದ ದರ್ಬೆಯನ್ನು ಅಗ್ನಿಗೆ ಸಮರ್ಪಿಸಿದೆ ಏಕೆ?
    ಹಸಿವಿನಿಂದ ಬಳಳಲುತ್ತಿರಿವ ಮನುಜನಿಗೆ ಅಗ್ನಿಯ ಸಮರ್ಪಿಸಿದ ಈ ಹವಿಸ್ಸು ಆಹಾರವಲ್ಲವೇ?
    ನಿಷ್ಕಲ್ಮಶ ಮನಿಸ್ಸಿನ ನಿಷ್ಕಾಮ ಭಕ್ತಿಯಿಂದ ತೃಪ್ತನಾಗುವ ಆ ನರಹರಿಯು ಒಲಿಯುವನೇ
    ಹಸಿದ ಪಶು-ಪಕ್ಷಿ- ಮನುನುಜರ ಮೇಲಿನ ನಿನ್ನ ಯಾಗವೆಂಬ ಅಟ್ಟಹಾಸಕ್ಕೆ

  4. ಮುಟ್ಟಬೇಡ ನನ್ನನ್ನು
    ಪರಬ್ರಹ್ಮನನ್ನು ಆರಾದಿಸಿತ್ತಿರುವೆ ನಾನು |
    ಮಡಿ ಮೈಲಿಗೆಯ ಬಗ್ಗೆ ನಿನಗೆ ಗೊತ್ತೇನು
    ವನದಲ್ಲಿ ಅಲೆದಾಡುವ ವನ್ಯ ಮೃಗವಲ್ಲವೇ ನೀನು||

    ಕರುವಿನ ಎಂಜಲು ಹಾಲಿನಿಂದ ಸಿದ್ಧವಾಗಿರುವುದು
    ಈ ಗೃತವು ಪರಮಾತ್ಮಗೆ ಸ್ವೀಕಾರವಾಗಿಹುದು|
    ವನ್ಯ ಮೃಗದ ಮಾತೊಂದ ನೀ ಕೇಳು
    ಮೇಲು ಕೀಳು ಭಾವನೆಯ ತೊರೆದು ನೀ ಬಾಳು||

    • ಪ್ರಾಣೇಶ ರಾಯರಿಗೆ ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಕಲ್ಪನೆಗಳು ಚೆನ್ನಾಗಿವೆ. ಪದ್ಯಪಾನವು ಛಂದೋಬದ್ಧಪದ್ಯರಚನೆಗೆ ಮೀಸಲಾದದ್ದು. ಇಲ್ಲಿ ಛಂದೋವಿಷಯವಾಗಿ ಶತಾವಧಾನಿ ಶ್ರೀ ರಾ. ಗಣೇಶರ ವಿಡಿಯೋಪಾಠಗಳಿವೆ. ಗಮನಿಸಿಕೊಂಡು ಪದ್ಯರಚನೆಯಲ್ಲಿ ತೊಡಗಿ. ತಮಗೆ ಯಶಸ್ಸಾಗಲಿ.

      ನಿಮ್ಮ ಮೊದಲಪದ್ಯದ ಹೀಗೊಂದು ಸವರಣೆ. ಇದು ಪಂಚಮಾತ್ರಾಚೌಪದಿಯಲ್ಲಿದೆ. ಪ್ರಾಸಗಳನ್ನೂ ಗಣವಿಭಜನೆಯನ್ನೂ ಗಮನಿಸಿಕೊಳ್ಳಿ:
      ಎನ್ನಯಾಹಾರವೇ ಬೇಕೆ ಹವ್ಯಕೆ ಪೇಳು
      ಅನ್ನಮುಂ ಮೇಣಿಂದೆ ಹಸಿದ ಜನರ|
      ಮನ್ನಿಪಂ ನಿಷ್ಕಲ್ಮಷದ ಭಕ್ತಿಯಿಂ ಭಜಿಸೆ
      ಬನ್ನಗೈದೇಂ ದ್ರವ್ಯ-ಖಾದ್ಯಗಳನುಂ||

  5. ಅನವದ್ಯ||
    ಬರುತುಮೆಮ್ಮಯ ತಾಣಕೆ ಗೈವೈ ನಾಂಗಳೆ ಗೈಯದ ಕಜ್ಜಮಂ (ಹವನ)
    ಭರಿಪುದೆಲ್ಲವ ಸಾಧಿಸಿಯಾಯ್ತೇಂ ಚಂದದೆ ಕಟ್ಟಿಹ ನಾಡೊಳೈ?
    (ನಾಡಿನಲ್ಲಿ ಸಾಧಿಸಬೇಕಾದ್ದೆಲ್ಲವನ್ನೂ ಸಾಧಿಸಿ ಈಗ ಕಾಡಿಗೆ ಬಂದೆಯ?)
    (Grazing)ಚರಿಸುತಿಂತನುಮಿತ್ತುದ ದೇವಂ ತೃಪ್ತಿಯಿನಿಂದಿರೆ ನಾವುಗಳ್
    ಪಿರಿದು ಬುದ್ಧಿಯ ಪೊಂದಿಯು ನೀನುಂ ದೇವನೊಳೇನದೊ ಯಾಚನಂ??

    • ಹಲವು ಹೊಸದಾದ ಛಂದಸ್ಸುಗಳನ್ನು ಬಳಸುವ ನಿಮ್ಮ ಉತ್ಸಾಹ ಮೆಚ್ಚತಕ್ಕದ್ದು. ಕೆಲವೊಂದು ಅಪಶಬ್ದಗಳು ಎಂದೆನಿಸಿದವು- ನಾಂಗಳೆ, ನಾಡೊಳೈ (ನಾಡಿನೊಳ್),ಕಟ್ಟಿಹ- (ಕಟ್ಟಿರ್ಪ- ಎಂದಾದರೆ ಹೆಚ್ಚು ಸೂಕ್ತ. ಇಹ-ನಡುಗನ್ನಡ) ಇಂತನುಂ(ಇನಿತನುಂ?/ಇಂತು?)

      • ತಮ್ಮ ಅನುಪಸ್ಥಿತಿಯಲ್ಲಿ ಏನೇನೆಲ್ಲ ಆಗುತ್ತೆ ಎಂದು ಗೊತ್ತಾಯಿತೆ? ಸಲಹೆಗಳಿಗಾಗಿ ಧನ್ಯವಾದಗಳು. ಸರಿಪಡಿಸುವೆ.

  6. ಆ ಜಿಂಕೆಯಂತೆ ಆ ಋಷಿಯೂ ತನ್ನವರಿಂದ ಬೇರಾಗಿ ವ್ಯಾಕುಲನಾಗಿದ್ದಾನೆ. ಹವನವು ಯಜ್ಞವೊಂದರ ಭಾಗಮಾತ್ರವಾಗಿದ್ದು, ಲೋಕಹಿತಕ್ಕಾಗಿ ಮಾಡುವ ಯಜ್ಞದಲ್ಲಿ ಲೋಗರ ಉಪಸ್ಥಿತಿ-ಸಾಕ್ಷಿಗಳು ಬೇಡವೆ?
    ವಿದ್ರುತವಿಲಂಬಿತ||
    ತಹಿಸಿಹಂ ಋಷಿಯು ಜಿಂಕೆಯವೋಲೆ ತಾಂ
    ಸಹಚರಂಗಳಿನಿಂದೆ ವಿಯೋಗದಿಂ(Separated)|
    ವಿಹಿತಕೆಲ್ಲರಿಗೆ ತಾಂ ಸವಗೈದಿರಲ್
    ಕುಹಕಮಲ್ತೆ ಜನಸಾಕ್ಷಿಯ ಲೋಪಮೈ||

  7. ಹಸಿದ ಜೀವಗ
    ಳುಸಿರನುಳಿಸಲು
    ಬೆಸೆದೆನೈಯಗ್ಗಿಯನು ನಾಂ |
    ವಸುಧೆಯೀಶನ
    ಪೆಸರಿನೊಳ್ ನೀಂ
    ಬಸಿರೊಳಿಳಿಸೈ ಕದಲಿಯಂ ||

    (ಲೋಕಕಲ್ಯಾಣಕ್ಕಾಗಿ ಯಜ್ಞ ಮಾಡುತ್ತಿದ್ದೆ. ಹಸಿದು ಬಂದ ನೀನು ನಾರಾಯಣನನ್ನು ಸ್ಮರಿಸಿ ಆ ಹಣ್ಣನ್ನು ತಿನ್ನು !)

  8. ಮನದ ಕಾನನದೊಳಗೆ ಜನ್ನವ
    ಮುನಿಯು ಗೈದಿರಲಾಗ ಬಯಕೆಯು
    ವನಮೃಗದ ರೂಪದಲಿ ಬಂದಿತು ಪರಿಕಿಸಲ್ಕವನಂ
    ಅನುನಯಿಸಿ ಪಾಪದ ಫಲಮನಾ
    ಘನಚರಿತಚಿತ್ತದೊಳು ಮೂಡಿಸ-
    -ಲನಲನಿಂಗಾಹುತಿಯನಿತ್ತನು ಶಮದ ಚಮಸದಲಿ

    ಮನಸ್ಸೆಂಬ ಕಾಡಿನೊಳಗೆ ಮುನಿಯು ತಪಸ್ಸು ಮಾಡುತ್ತಿರಲು, ಆಸೆಯೆಂಬ ಮಾಯಾಮೃಗ ಅವನನ್ನು ಪರೀಕ್ಷಿಸಲು ನಯವಾದ ಮಾತುಗಳನ್ನಾಡುತ್ತಾ ಪಾಪದ ಫಲವನ್ನುಂಟು ಮಾಡಿರಲು, ಶಮವೆಂಬ ದರ್ವಿಯಿಂದ ಬ್ರಹ್ಮಚರ್ಯವೆಂಬ(ಪದ್ಯದಲ್ಲಿ ಬಂದಿಲ್ಲ) ಅಗ್ನಿಗೆ ಆಹುತಿಯಿತ್ತನು. (ಕಲ್ಪನೆ out of control ಆದದ್ದಕ್ಕೆ ಕ್ಷಮೆಯಿರಲಿ ;-))

    • ಕಲ್ಪನೆ out of control ಎಂದೆನಿಸಿಲ್ಲ !! ನಿಮ್ಮ ಆಲೋಚನೆ ಅತ್ಯದ್ಭುತವಾಗಿದೆ !!

    • ಚೆನ್ನಾಗಿದೆ. “ಶಮದ ಚಮಸದಲಿ” ಎಂದೂ ಮಾಡಬಹುದು. ಚಮಚಕ್ಕಿಂತ ಚಮಸ ಹೆಚ್ಚು ವೈದಿಕಪ್ರಯೋಗವಾಗುತ್ತದೆ 😉

  9. ಹರಿಣೀ//
    ಮತಿಯೊಳಿರುವಾ ಕಾಮಾಗ್ನಿಜ್ವಾಲೆಗಂ ಘೃತಮಾಯ್ತಹಂ
    ಕೃತಿಯದನೆ ತಾಂ ಘೋರಾಜ್ಞಾನಾಟವೀಧರೆಯೊಳ್ ರಮಾ/
    ಪತಿಯ ಸತಿಗಂ ಜಾಲಂಬೊಲ್ವೀ ಸುವರ್ಣಮೃಗಂ ಸಮ
    ರ್ಪಿತಮಿದೆನುತುಂ ಸೀತಾಚೌರ್ಯೇಜ್ಯೆಯಂ ನಡೆಸಿರ್ಪನೇಂ?//

    ಚಿತ್ತದಲ್ಲಿರುವ ಆಸೆಯೆಂಬ ಬೆಂಕಿಗೆ ಅಹಂಕಾರವೇ ತುಪ್ಪವಾಯಿತು. ಆಗ ಅಜ್ಞಾನದ ಅಡವಿಯಲ್ಲಿ ಕುಳಿತು ಸೀತಾಹರಣವೆಂಬ ಯಜ್ಞಕ್ಕೆ ಈ ಜಿಂಕೆಯನ್ನೇ ಬಲಿಪಶುವನ್ನಾಗಿ ಮಾಡಿ ಯಾಗವನ್ನು ನಡೆಸಿದ್ದಾನೆಯೇ?(ರಾವಣ)

    • ಹರಿಣಿಯೊಳಗಂ ಸ್ತುತ್ಯಂ ಸಲ್ಗುಂ ತ್ವದೀಯಕವಿತ್ವಮೀ
      ಪರಿಯ ಸೊಗದಿಂ ವೃತ್ತೌಚಿತ್ಯಂ ವಿಚಾರಿಸೆ ಕಲ್ಪನಾ
      ಸ್ಫುರಣಮದು ದಲ್ ರಸ್ಯಂ ಪೌರಾಣಿಕಾಖ್ಯೆಯುಮಂತೆಯೇ
      ಮೆರೆಗುಮಹಹಾ ಮಂಜಾ! ರಂಜಿಪ್ಪುದಲ್ತೆ ವಿಲಾಸದಿಂ||

  10. ಏಂ ಮಾರೀಚನೆ ಬಂದನೋ ಹರಿಣದೀ ಮೈಯಾಂತು, ಮಾಯಾವಿಲಾ-
    ಸಂ ಮರ್ತಂ ಗಡ ಸಂದುದೋ?! ತೊಡೆದ ಸಂಸಾರಪ್ರಲೋಭಂಗಳಿಂ-
    ದೊಮ್ಮಾತೊಮ್ಮನಮೊಂದೆಯುಜ್ಜುಗದಿನಾನಿರ್ದುಂ ದಶಾಸ್ಯೋಪಮಾ-
    ನಂ ಮಚ್ಚಿತ್ತಮೆ ತೃಷ್ಣೆಯೆಂಬ ಮೃಗಮಂ ಹೊಂಚಿಂದಮಟ್ಟಿರ್ಪುದೋ

    ಏನಿದು, ಮಾರೀಚನೇ ಜಿಂಕೆಯ ರೂಪದಲ್ಲಿ ಬಂದನಾ? ಮಾಯೆ ಮತ್ತೆ ಕವಿಯಿತಾ? ಸಂಸಾರದ ಆಸೆಗಳನ್ನೆಲ್ಲ ತೊಡೆದು ಏಕಾಗ್ರತೆಯಿಂದ ನಾನಿದ್ದರೂ ದಶಮುಖಗಳನ್ನು ಹೊತ್ತ ರಾವಣನಂತಿರುವ ನನ್ನ ಚಂಚಲ ಚಿತ್ತವೇ ಆಸೆಯೆಂಬ ಈ ಮೃಗವನ್ನು ಹಂಚುಹಾಕಿ ನನ್ನ ಬಳಿಗಟ್ಟಿತಾ?

    • _/\_ for a good verse

    • ಶಿವನೇ ದುಷ್ಕವಿ‌ಮಸ್ತಕಾರಚಿತಭಿಕ್ಷಾಪಾತ್ರನೇ ನೀಂ ಗಡಂ
      ಕವಿತಾವರ್ಷಕೆ‌ ನೀಲಕಂಠನೆನಿಪಂ ವಂದಿಪ್ಪೆನಾಂ ಪದ್ಯದಿಂ|
      ಭವದೀಯೋಜ್ವಲಪದ್ಯಬಂಧರಚನಾವೈಕ್ರಮ್ಯವಿಸ್ತಾರಸಂ-
      ಭವಶಾರ್ದೂಲವಿಲಾಸದಿಂ ಹರಿಣಮೇಂ ಭೀತಾತ್ಮಕಂ ಸಂದುದೇ!

  11. ವಿನೋದವಾಗಿ :

    ಬಲ್ಲಿತೆನೆ ಯಾಗವಂ ಕೈಕೊಂಡವಂ ಯೋಗಿ
    ತಲ್ಲಣoಗೊಂಡಿರ್ಪ ಕಾಣ್ ತಿರುಗಿರಲ್
    ನಲ್ಲೆ ಬರವಾರುತುಂ ಪೂರ್ಣಾಹುತಿಯನೀಯೆ
    ಮೆಲ್ಲಡಿಯನಿರಿಸಿರಲ್ ಹುಲ್ಲೆಯಲ್ಲಿ !!

    ಬರವಾರ್ = ಹಾದಿನೋಡು

    ಪೂರ್ಣಾಹುತಿಯ ವೇಳೆಗೆ ನಲ್ಲೆ(=ಪತ್ನಿ)ಯನ್ನು ಕಾಯುತಿದ್ದವಗೆ ಹಿಂದಿರುಗಿ ನೋಡಲು ಹುಲ್ಲೆ ಕಂಡಿತೇ ?!!

  12. Thanks koppala tota !

  13. Thanks koppala tota !

  14. Thanks koppala tota !

Leave a Reply to ಅನಂತ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)