Jul 032017
 

ಸಾಗರವನ್ನು ವರ್ಣಿಸಿ ಪದ್ಯರಚಿಸಿರಿ

  50 Responses to “ಪದ್ಯಸಪ್ತಾಹ ೨೬೨: ವರ್ಣನೆ”

  1. ಅಲೆಯಲೆ ಮೇಲೆ ಜೀವನಯಾನ,
    ಅಲೆ ಅಪ್ಪಳಿಸಲದೆ ಸುಂದರ ತಾಣ,
    ಹಕ್ಕಿಯ ಚಿಲಿಪಿಲಿ ಕಾವ್ಯಗೋಷ್ಠಿ,
    ಎಲ್ಲೆಡೆ ಇಂಚರದಿಂಪಿನ ಸೃಷ್ಠಿ,
    ಬಾನಿನ ಬಣ್ಣದ ಕನ್ನಡಿ ಜಲವು,
    ಕಡಲಿನ ತೀರದ ಮಣ್ಣಿನ ಸುಮವು,
    ಪೂರ್ವದ ಉದಯಕೆ ಮಂಜಿನ ಸಾಕ್ಷಿ,
    ಸಂಜೆಯ ವರ್ಣಕೆ ಅರಳುವುದಕ್ಷಿ,
    ಕಡಲಿನ ಅಲೆಗಳು ನಡೆಸಿರೆ ಕ್ರಾಂತಿ,
    ನಿಸರ್ಗದ ಮಡಿಲಲಿ ಸ್ವರ್ಗದ ಶಾಂತಿ.

    • ಸಾಯಿಪ್ರಸಾದರಿಗೆ ಪದ್ಯಪಾನಕ್ಕೆ ಸ್ವಾಗತ. ಪದ್ಯರಚನೆಯಲ್ಲಿ ಹೊಸಬರು ಆಸಕ್ತಿದೋರುತ್ತಿರುವುದು ಮುದಾವಹ. ನಿಮಗೆ ಕವಿಹೃದಯವಿದೆ, ಕಲ್ಪನೆಯಿದೆ. ಪದ್ಯಪಾನವು ಛಂದೋಬದ್ಧಪದ್ಯಗಳಿಗಾಗಿಯೇ ಮೀಸಲಾದ ಜಾಲದಾಣವಾದ್ದರಿಂದ, ಛಂದಸ್ಸು-ಅಲಂಕಾರಗಳನ್ನು ಕುರಿತಾಗಿ ಇಲ್ಲಿ ಲಭ್ಯವಿರುವ ಶ್ರೀ ರಾ. ಗಣೇಶರ ವಿಡಿಯೊಪಾಠಗಳನ್ನು ಗಮನಿಸಿಕೊಂಡು ಛಂದೋಬದ್ಧವಾಗಿ ಬರೆಯಲು ಆರಂಬಿಸಿ. ಶುಭಾಶಯಗಳು.

    • ಸಾಯಿಪ್ರಸಾದರಿಗೆ ಸ್ವಾಗತ. ನಿಮ್ಮ ಪದ್ಯದಲ್ಲಿ ಕೆಲವಷ್ಟು ಸವರಣೆಗಳನ್ನು ಮಾಡಿದರೆ ಮಂದಾನಿಲ ರಗಳೆಯಾಗುತ್ತದೆ. ಅಂತ್ಯಪ್ರಾಸದಿಂದ ಕೂಡಿದೆ. ಚೆನ್ನಾಗಿದೆ. ಹಾದಿರಂಪರು ಹೇಳಿದಂತೆ ಇನ್ನಷ್ಟು ಛಂದೋಬದ್ಧವಾಗಿ ಬರೆಯಲು ಪ್ರಯತ್ನಿಸಿ.

  2. ಶಾಲಿಕೆಯೊಳ್ ಭೂದೇವಿಯೆ
    ಪಾಲಿನ ವರ್ಣದ ವಿಶಿಷ್ಟ ಸೀರೆಯನಿಂತೀ /
    ಗೋಲಕದೆಲ್ಲೆಡೆಯೊಳ್ ವೀ
    ಚೀಲಯದಂತೆಸೆವ ನೆರಿಗೆಗೊಳಿಸಿಟ್ಟಿರ್ಪಳ್//

    ತನ್ನ ಮನೆಯಲ್ಲಿ ಭೂದೇವಿಯು ಹಾಲಿನ ವರ್ಣದ ವಿಶಿಷ್ಟವಾದ ಸೀರೆಯನ್ನು (ಇಡೀ ಭೂಮಂಡಲದಲ್ಲಿ)
    ಅಲೆಗಳಂತೆ ಕಾಣುವ ನೆರಿಗೆಗಳನ್ನು ಮಾಡಿಟ್ಟಿದ್ದಾಳೆ.

  3. ಅಶ್ವಧಾಟೀವೃತ್ತದಲ್ಲಿ ರಚಿಸಿದ್ದೇನೆ. ಒಂದೊಂದು ಪಾದಕ್ಕೂ ಮೂರು ಪ್ರಾಸಸ್ಥಾನಗಳು! ಹಾಗಾಗಿ ಅರ್ಥವನ್ನು ಮೊದಲೇ ಹೇಳಿಬಿಡುತ್ತೇನೆ: ಕಣ್ಣು-ಕಿವಿಗಳಿಗೆ ಇಡಿಯಾಗಿ ಗ್ರಹಿಕೆಯಾಗದಷ್ಟು ಭೂಮವಾಗಿರುವ ಸಮುದ್ರವು, ಬ್ರಹ್ಮಾಂಡಕ್ಕೆ ಹೋಲಿಸಿದರೆ ಬೃಹತ್ತಾದುದೇನಲ್ಲ. ಆದರೂ, ಸ್ವತಂತ್ರಯಂತ್ರಿಗಳೂ, ತನಗಿಂತ ಹಲವುಪಟ್ಟು ದೊಡ್ಡವೂ ಆದ ಸೂರ್ಯಚಂದ್ರರಂಥ ಬೃಹದಾಕಾಶಕಾಯಗಳಿಗೆ ವಿಶ್ರಾಂತಿಸ್ಥಾನವೆಂದು ಕಾಲ್ಪನಿಕವಾಗಿ/ಕವಿಸಮಯವಾಗಿ ಗೃಹೀತವಾಗಿದೆ.

    ನೇತ್ರಂಗಳುಂ ಮಗುಳೆ ಗಾತ್ರಶ್ರವಂಗಳಿಗೆ(ears) ಚಿತ್ರಪ್ರದಂ ಜಡಧಿಯುಂ
    ಪಾತ್ರಂ ಬೃಹದ್ವಿಷಯಸೂತ್ರಂಗಳಿಂಗೆನಿತೊ ನಾತ್ರಂ ವಿತರ್ಕಕರಣಂ|
    ಜ್ಞಾತ್ರರ್ಗಳಿಂಗಿತದೆ ತಂತ್ರಂ ದಿವಾಕರನ, ಯಂತ್ರಂ ನಿಶಾಕರನ ಮೇಣ್
    ಸೌತ್ರಸ್ವತಂತ್ರವು; ಧರಿತ್ರರ್ಗಮಲ್ತೆಲದು ಕ್ಷೇತ್ರಂ ಶಶಾಂಕಗಿನಗಂ||
    (ಸೌತ್ರಸ್ವತಂತ್ರ> ತನ್ನದೇ ಸೂತ್ರವುಳ್ಳದ್ದು)
    ಕೊನೆಯ ಪಾದದ ಪ್ರಥಮಗುಂಫನದಲ್ಲಿ ಮಾತ್ರ ’ಕನ್ನಡಕ್ಕೆ ಯತಿಯಿಲ್ಲ’ ಎಂಬ ನಿಯಮವನ್ನು ಪಾಲಿಸಿದ್ದೇನೆ. ಉಳಿದೆಡೆ ಪಾಲಿಸದಿರುವುದಕ್ಕೆ ಕ್ಷಮೆಯಿರಲಿ 😉 ಪ್ರಾಸಗಳೆಲ್ಲ ಗಜವಾಗಿರುವ ಈ ಪದ್ಯದಲ್ಲಿ ತಂತ್ರಂ ಹಾಗೂ ಯಂತ್ರಂ ಎಂಬ ವೃಷಭಪ್ರಾಸಗಳು ನುಸುಳಿವೆ. ಈ ಪ್ರಾಸಸಂಕರವು ಅನುಪ್ರಾಸದಲ್ಲಿ ಆಗಿರುವುದರಿಂದ ಕ್ಷಮ್ಯವೆಂದುಕೊಳ್ಳಬಹುದೆ?

    • Nice one. May I know the characteristics of this meter asHvadhati?

      • ಅಲ್ಲಿಯೇ ಇದೆಯಲ್ಲ: ನಾನಾನನಾನನನ| ನಾನಾನನಾನನನ| ನಾನಾನನಾನನನ| ನಾ. ಪ್ರತಿಯೊಂದು ಯತಿಗುಂಫನದಲ್ಲೂ ಪ್ರಾಸವಿರಬೇಕು.

    • ನಿಮ್ಮ ಪ್ರಯತ್ನ ಸ್ತುತ್ಯ! ಅರ್ಥವು ಸ್ಪಷ್ಟವಾಗುವುದಿಲ್ಲ. ಇಂತಹ ವಿಸ್ತಾರವೈಕಟ್ಯವುಳ್ಳ ವೃತ್ತಗಳಲ್ಲಿ ಪ್ರಾಸನಿರ್ವಹಣೆಯ ಜೊತೆ‌ಮಾಡುವುದು ಕಷ್ಟವೇ ಸರಿ. ನೀವಂದಂತೆ ಯಂತ್ರ ತಂತ್ರ ಇವು ಪ್ರಾಸಕ್ಕೆ ಹೊಂದಲಾರವು. ಅನುಪ್ರಾಸಕ್ಕೆ ಈ ವಿನಾಯಿತಿ ಇದ್ದರೂ ಅಶ್ವಧಾಟಿಯ ಲಕ್ಷಣದಲ್ಲಿ ಆಂತರಿಕಪ್ರಾಸವೂ ಒಂದು ನಿಯಮವಾದ ಕಾರಣ ಹೊಂದುವುದಿಲ್ಲವೇನೋ! ವಿಚಾರಿಸೋಣ. ಧರಿತ್ರರ್ಗೆ- ಸರಿಯಲ್ಲವೆನಿಸುತ್ತದೆ. ಕೊನೆಯ ಸಾಲಿನಲ್ಲಿ ಯಾವ ಯತಿಯನ್ನು ಮೀರಿದ್ದೀರಾ ಅರ್ಥವಾಗಿಲ್ಲ. ಏನೂ ತೊಂದರೆ ಇಲ್ಲ ಎನಿಸಿತು.

      • ಯತ್ಯುಲ್ಲಂಘನೆ: ಸೌತ್ರಸ್ವತಂತ್ರವು; ಧ| ನಾನಾನನಾನನನ

  4. ಮೊದಲೊಳ್ ಚಂದ್ರನನಿತ್ತು ಶಂಕರಜಟಾಜೂಟಕ್ಕೆ ಭೂಷಮ್ಬೊಲಾ
    ಸೊದೆಯಂ ನಿರ್ಜರಕೂಟಕಿತ್ತು ಸಿರಿಯಂ ನಾರಾಯಣಂಗಿತ್ತಿದೇಂ /
    ಪದೆದೀ ಲೋಕದೊಳಾದೆಯೇಂ ಸಕಲಲಾವಣ್ಯಾಕರಂ ನೋಡಿ ನೀ
    ನೆದೆಯುಬ್ಬಿರ್ಪರನಲ್ಪದಾನದೊಳೆ ಮತ್ತಂತಾಗದಿರ್
    ಸಾಗರಾ!
    ಶಂಕರನಿಗೆ ಚಂದ್ರನನ್ನು ಶಿರೋಭೂಷಣವನಾಗಿತ್ತು, ವಿಷ್ಣುವಿಗೆ ಲಕ್ಷ್ಮಿಯನ್ನು ಪತ್ನಿಯನ್ನಾಗಿತ್ತು, ಸುರರಿಗೆ ಅಮೃತವನಿತ್ತು ಇದೇನು ಎಲ್ಲಾ ಥರದ ಲವಣಗಳಿಗೂ ಆಕರವಾಗಿದ್ದೀಯಾ? ಅಲ್ಪವಾದ ದಾನಗಳನ್ನು ಮಾಡಿ ಎದೆಯುಬ್ಬಿರುವವರನ್ನು ನೋಡಿ, ಸಾಗರವೇ! ನೀನೂ ಅವರಹಾಗೆಯೇ ಆಗದಿರು.

  5. ನಾಲ್ಮೊಗನಾದಂ ಮರುಳಂ
    ನಲ್ಮೆಯಿನಿಟ್ಟು ನಿಧಿಯಂ ಸಮುದ್ರದೊಳಾಗಳ್/
    ಬಲ್ಮೆಯ ಮುದ್ರೆಯದಿರದಿರೆ
    ಮೇಲ್ಮೆಯ ಜಲರಾಶಿಯಿತ್ತುದದನೆಲ್ಲರ್ಗಂ//

    ಬ್ರಹ್ಮ ಸೃಷ್ಟಿಯ ಸಂದರ್ಭದಲ್ಲಿ ನಿಧಿಯನ್ನು(ಮುತ್ತು,ಹವಳ…) ಸಮುದ್ರದಲ್ಲಿಟ್ಟು (ಹೆಸರಿನಲ್ಲೇ ಬೀಗವಿದೆ(ಸ-ಮುದ್ರ) ಎಂದುಕೊಂಡ) ಅದಕ್ಕೆ ಬೀಗ ಹಾಕದೇ ಮರುಳಾದ. ಉದಾರ ಮನಸ್ಸಿನ ಸಾಗರ ಅವುಗಳನ್ನು ಎಲ್ಲರಿಗೂ ನೀಡುತ್ತಿದೆ.

    • ಸ್ವಲ್ಪ ಅನ್ವಯಕ್ಲೇಶವೊದಗಿದೆ. ಗಮನಿಸಿ. ಇತ್ತುದದ- ಬಿಂದು ಬರಬೇಕು. ಇತ್ತುದದನೇ ಎಂದು ಮಾಡಬಹುದು. ಎಲ್ಲರಿಗೆ ಎಂಬರ್ಥದ ಶಬ್ದ ಪದ್ಯದಲ್ಲಿ ಬಂದಿಲ್ಲವಲ್ಲ!

  6. ನಾಮವಿಶೇಷವನಿದನಾ
    ನೇ ಮುಂ ಪೇಳ್ವೆಂ ಸಮುದ್ರ ನಿನ್ನಂಕಿತಮಂ
    ಕ್ಷೇಮದಿ ತಳೆದವ ನೊರ್ವಂ
    ನೇಮದಿನಬ್ಬರಿಸಿ ಖೂಳರಂ ನುಂಗಿರ್ಪಂ

    ಯಾವಾಗಲೂ ಶಬ್ದಗೈಯುತ್ತಿರುವುದು,ಹತ್ತಿರ ಬಂದವರನ್ನು ಸೆಳೆದು ನುಂಗುವುದು ಸಮುದ್ರದ ಅಭ್ಯಾಸ. ಅರ್ಣವ ಎನ್ನುವ ಹೆಸರಿಟ್ಟುಕೊಂಡ ಕಾರಣದಿಂದಲೋ ಏನೋ ಅರ್ಣಬ್ ಗೋಸ್ವಾಮಿ ಕೂಡಾ ಇದೇ ಕೆಲಸ ಮಾಡುತ್ತಾರೆ.

    • ಆಹಾ! ಸೊಗಸಾದ ಕಲ್ಪನೆ! ಎರಡನೆ ಸಾಲಿನ ಪ್ರಾಸಸ್ಥಾನವನ್ನು ನಿರ್ವಹಿಸುವಲ್ಲಿ ಸ್ವಲ್ಪ ತೊಡಕಾಗಿದೆ. ಏಮೆಂ ಎಂದಾಗುವುದಿಲ್ಲ. ಏನೆಂದು- ಎಂಬ ರೂಪವೇ ಬರಬೇಕು! ವಿಶೇಷಮನ್- ಎಂದಾಗಬೇಕು.
      ನಾಮವಿಶೇಷಮನಿದನಾ
      ನೇ ಮುಂ ಪೇಳ್ವೆಂ ….. ಎಂದು ಬಳಸಬಹುದು. ಏನ್- ಏಂ ಎಂಬುದನ್ನು ಏ ಎಂದೂ ಕೆಲವೆಡೆ ಬಳಸಬಹುದು. ಮುಂ- ಎಂಬುದಕ್ಕೆ ಮುಂದೆ ಎಂಬರ್ಥವಿರುವ ಕಾರಣ ಅರ್ಥಕ್ಕೇನೂ ಕೊರೆಯಾಗುವುದಿಲ್ಲ.

  7. ತವರೂರ ತೊರೆಯುತಲಿ ನಿನ್ನ ಸೇರಲು ತೊರೆಗ-
    -ಳವರು ಬರುತಲಿ ಸುರಿಸೆ ದುಃಖಾಶ್ರುವಂ
    ಕವಲೊಡೆದು ನಿನ್ನೊಡಲ ಸೇರಿರಲ್ಕಾಜಲವು
    ಲವಣಪೂರಿತವಾಯ್ತೆ ನಿನ್ನ ರುಧಿರಂ?

    ತವರಾದ ಪರ್ವತದಿಂದ ಗಂಡನಾದ ಸಮುದ್ರವನ್ನು ಸೇರಲು ಬರುವಾಗ ನದಿಗಳು ಸುರಿಸಿದ ಕಣ್ಣೀರಿಂದಲೇ ಸಮುದ್ರದ ನೆತ್ತರು(ನೀರು ಸಮುದ್ರದ ಮೈಯಲ್ಲಿ ಹರಿಯುವುದರಿಂದ ನೆತ್ತರು ಎಂದಿದ್ದೇನೆ) ಉಪ್ಪಾಯ್ತೆ? ಎನ್ನುವ ಕಲ್ಪನೆ

  8. ’ಸಾಗರ’ವು ತೆರೆಕಂಡು ದಶಕ-ಮೂರಾದೊಡೇಂ(1985)
    ಆಗುವುದೆ ಮರೆಯುಮಾ ಚಲನಚಿತ್ರಂ?
    ಈಗಂತು ಯೂಟ್ಯೂಬಿನೊಳು ನೋಡಬಹುದಲ್ತೆ
    ಕೈಗೆಟುಕುವಂದದೊಳು ಡಿಂಪಲ್ಲಳಂ!!

  9. ಯೋಽಪಾಂ ಪುಷ್ಪಂ ವೇದ… In a nutshell
    ಪೃಥ್ವೀ|| ಅಗಾಧಜಲರಾಶಿಯೊಳ್ ಭುವನಮಿರ್ಪುದೈ ನಾವೆವೋ-
    ಲಗೋಚರವನೆಂತೊ ಯಾರ್ ದೃಢದೆ ನಂಬಿಹರ್ ನೀರಿದೇ|
    ಹಗೇವಿನೊಲು ತಾಣಮೆಂದೆನುತೆ ಚಂದ್ರ-ಸೂರ್ಯಾದಿಗಂ (ವಾಯು, ಅಗ್ನಿ, ನಕ್ಷತ್ರ, ಪರ್ಜನ್ಯ, ಸಂವತ್ಸರ)
    ಖಗಾಂಸಸುಖಗಾಮಿಯಾ ಜನಮನೆಲ್ಲಮಂ ಕಾಯುವಂ||
    (ಖಗ=ಗರುಡನ, ಅಂಸ=ಭುಜದ ಮೇಲೆ, ಸುಖಗಾಮಿ=ಸುಖವಾಗಿ ಚಲಿಸುವವನು – ವಿಷ್ಣು)

    • ಹಗೇವು ಎಂಬುದು ಹಳಗನ್ನಡಕ್ಕೆ ಸಾಧುವೇ? ನಂಬಿಹರ್ ಬದಲು ನಂಬಿರ್ಪರ್ ಎಂದಾಗಬೇಕು. ಅದರ ಬದಲು ನಂಬಿದರ್ ಎಂದು ಮಾಡಬಹುದು. ಆರ್ ಎಂಬುದೇ ಹಳಗನ್ನಡಕ್ಕೆ ಸರಿಯಾದ ರೂಪ. ಎಂತುಟಾರ್ ಎಂದು ಮಾಡಬಹುದು. ಎಂತೊ ಯಾರ್ ಎಂಬುದೂ ಆಗುತ್ತದೆ. ತೊಂದರೆ ಇಲ್ಲ.

  10. “ಕಡಲ ತಡಿಯ ವೈಚಿತ್ರ್ಯ”ದ ಬಗೆಗಿನ ಪದ್ಯ. “ಉತ್ಪಲ ಮಾಲೆ”ಯಲ್ಲಿ:

    ಸಾಗರತೀರದೊಳ್ ತ್ರಿಭುಜ ಸಮ್ಮಿಳನಂ ತೆರೆದಾರು ಬಾಹುವಿಂ
    ಬಾಗಿದ ಬಾನೊಡಂ ಕಡಲು ಕೂಡಿರೆ ಭೂಮಿಯ ನೂರು ಕೋನದಿಂ ।
    ಓಗದೊಳಾಗಿರಲ್ ತ್ರಿಗುಣ ಸಂಭವವುಂ ಘನಸಾರ ರೂಪವುಂ
    ಮೇಗಣ ಬಾನೊಳುಂ ಮುಗಿಲೊಳಾವಿಯ ಬಂಧವು ಕಂಡ ಕಾರಣಂ ।।

    (ಭುವಿಯ ಗಡಿ, ಕಡಲ ತಡಿ, ನಭದ ಅಡಿ – ತ್ರಿಕೋನ ಬಂಧದಲ್ಲಿ / ಭೂಮಿ ಘನ, ಕಡಲ ಜಲ, ಆವಿ ಮುಗಿಲು – ತ್ರಿವಿಧ ರೂಪದಲ್ಲಿ ಕಂಡ ವೈಚಿತ್ರ್ಯದ ವರ್ಣನೆ )

    • ಓಗ ಎಂದರೇನು? ರೇಖಾಗಣಿತವನ್ನೇ ತಂದುಬಿಟ್ಟಿದ್ದೀರ 😉

      • ಧನ್ಯವಾದಗಳು ಕೊಪ್ಪಲತೋಟ. ಓಗ – ಓಘ (ತ್ಸ) = ಸಮೂಹ , ಗುಂಪು ಅಲ್ಲವೇ ? (ಮೇಗ -ಮೇಘ ಥರ) – ಪ್ರಾಸಕ್ಕಾಗಿ ಬಳಸಿದ್ದು.
        “ಸಿಂಧು”ವೂ ಬಿಂದು-ಬಿಂದುವಿನ ಗಣನೆಯೇ ಅಲ್ಲವೇ ?!!
        ಈ ಗಣಿತ / ವಿಜ್ಞಾನದ ಪದ್ಯ – ಪದ್ಯಪಾನಕ್ಕೆ ಮೊದಲು ಬರೆದಿದ್ದ ಪದ್ಯದ ಮೊದಲ ನುಡಿಯ “ವೃತ್ತ” ರೂಪಾಂತರ. “ಸಾಗರ”ಕ್ಕೆ ಸಮನಾಗಿ “ಕಲ್ಪನೆ”ಯನ್ನು ಬಾಗಿಸಿ (ಅಂದರೆ “ಸೊನ್ನೆ”(=ವೃತ್ತ) ಯಿಂದ ಭಾಗಿಸಿ) “ಅನಂತ”ವಾಗಿಸಲಾಗಲಿಲ್ಲ !!

        • ನೀವು ಗಣಿತಜ್ಞೆ ಕೂಡಾ ಹೌದೆಂದು ತಿಳಿಯಿತು 🙂 ನಿಮ್ಮ punಡಿತ್ಯದಿಂದ ಗಣಿ-ತಜ್ಞೆ ಎಂದು ಓದಿಕೊಂಡೀರಾ! ಸಾವಧಾನ 😛

          • ಧನ್ಯವಾದ ಮಂಜುನಾಥ್, ನಿಮ್ಮ ಈ ಮೆಚ್ಚುಗೆ ಲೆಕ್ಕದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುತ್ತಿದ್ದ ಶಾಲಾ-ಕಾಲೇಜು ದಿನಗಳನ್ನ ನೆನಪಿಸಿತು !!

  11. ಹೊಸದಾಗಿ ಏನನ್ನೂ ಬರೆಯಲಾರದ ಕಾರಣ ಹಿಂದೆಯೇ ಬರೆದ ಅಗಸ್ತ್ಯಚರಿತೆ ಎಂಬ ಕಾವ್ಯದಿಂದ ಕೆಲವು ಪದ್ಯಗಳನ್ನು ಹಾಕುತ್ತಿರುವೆ.
    ಘನದಂದಂ ಜಲಗರ್ಭನಂಬರನದೀಧಾಮಂ ಹರಂಬೋಲ್ತು ಜೀ-
    ವನಲಾವಣ್ಯಕರಂ ವಿರಿಂಚಿಕೃತಲೇಖಂಬೊಲ್ ಸಮುದ್ರಂ ಸ್ವಯಂ
    ಧನಮಂಜೂಷೆಯವೊಲ್ ಸದಾನವಪಥಂ ಕಾಡೆಂಬವೋಲೇ ಸುರೇಂ-
    ದ್ರನವೊಲ್ ವಾರ್ಧಿಯದಾಯ್ತಧಃಕೃತಮಹಾದಿಙ್ನಾಗದಿಂದಾವಗಂ ||
    ತಾತ್ಪರ್ಯ- ಸಮುದ್ರವು ಮೋಡದಂತೆ ಜಲಗರ್ಭ(ನೀರನ್ನು ಗರ್ಭದಲ್ಲಿ ಉಳ್ಳದ್ದು) ,
    ಶಿವನಂತೆ ಅಂಬರನದೀಧಾಮ (ಗಂಗಾನದಿ ಸೇರುವ ಸ್ಥಳ), ಬ್ರಹ್ಮ ಬರೆದ ಹಣೆಯ ಬರೆಹದಂತೆ ಜೀವನಲಾವಣ್ಯಕರ(ಬ್ರಹ್ಮಲೇಖ- ಜೀವನದಲ್ಲಿ ಲಾವಣ್ಯವನ್ನು ಉಂಟುಮಾಡುತ್ತದೆ. ಸಮುದ್ರ- ಜೀವನ ಅಂದರೆ ನೀರನ್ನು ಲಾವಣ್ಯ ಅಂದರೆ ಲವಣದ ಭಾವ-ಉಪ್ಪು ರುಚಿ ಆಗುವಂತೆ ಮಾಡುತ್ತದೆ)
    ಸ್ವಯಂ ಧನಮಂಜೂಷೆ-ದುಡ್ಡಿನ ಪೆಟ್ಟಿಗೆಯಂತೆ ಸಮುದ್ರ- ಮುದ್ರೆ/ಬೀಗದಿಂದ ಕೂಡಿದ್ದು) ಕಾಡಿನಂತೆ ಸದಾನವಪಥ (ಸ+ದಾನವಪಥ-ರಾಕ್ಷಸರ ಹಾದಿಯಿಂದ ಕೂಡಿದ್ದು, ಸದಾ+ನವಪಥ- ಯಾವಾಗಲೂ ಹೊಸ ಹಾದಿಯನ್ನೇ ಉಳ್ಳದ್ದು) ಸುರೇಂದ್ರನಂತೆ ಅಧಃಕೃತಮಹಾದಿಙ್ನಾಗ(ಇಂದ್ರ-ಯಾವತ್ತೂ ಮಹಾದಿಗ್ಗಜ ಐರಾವತವನ್ನು ಏರುತ್ತಾನೆ, ಸಮುದ್ರಕೂಡ ಅಷ್ಟದಿಗ್ಗಜಗಳನ್ನೂ ಕೆಳಕ್ಕೆ ಹಾಕಿರುತ್ತದೆ)

    ಶ್ರೀಯೆಂಬ ಪುತ್ರಿಯನದೋ ಹರಿ ಕೊಂಡು ಪೋದಂ
    ಬಾಯೆಂದು ಪುತ್ರಶಶಿಯಂ ಶಿವನಿಟ್ಟುಕೊಂಡಂ
    ಹಾ!ಯೆಂದು ದುಃಖಿಪವೊಲೀಗಳೆ ರಾವದಿಂದಂ
    ಸ್ವೀಯಾಂಬುರಾಶಿಯೊಳೆ ಸಾಗರನಿರ್ದನತ್ತಲ್||

    ಮೆರೆದಿರ್ಪ ನೀಳಕದ ಗೋಳಕಗಾತ್ರದಿಂದಂ
    ಕರಮುರ್ಬಿ ಮರ್ಬನೊಡಲಿಂ ತೆಗೆಯೆಂಬವೋಲೇ
    ದುರುಳರ್ಕಳಿರ್ಪರೆನುತುಂ ಸಲೆ ತೋರ್ದನೇ ದು-
    ಷ್ಕರಮಲ್ತೆ ದುಷ್ಟರಿದಿರೊಳ್ ಮಿಗೆ ಮಾತನಾಡಲ್ ||

  12. “ಕಡಲ ತಡಿ” ಪೂರ್ಣ ಪದ್ಯ. ಹಿಂದೆ ಬರೆದಿದ್ದ ಹಾಳೆಗಳು ಸಿಕ್ಕ ಖುಷಿಯಲ್ಲಿ ಪೋಸ್ಟ್ ಮಾಡಿದ್ದು !!

    ನಡೆದಿದೆ ನೋಡಲ್ಲಿ ತ್ರಿಭುಜ ಸಮ್ಮಿಲನ
    ನಡೆದಿದೆ ಅಲ್ಲೊಂದು ತ್ರಿಗುಣ ಸಂಭವನ ।
    ಆರು ಬಾಹು ನೂರು ಕೋನ ಆದ ಮೂರು ಸಂಧಿ
    ಭೂಮಿ ಘನ ಕಡಲ ಜಲ ಆವಿ ಮುಗಿಲ ಬಂಧಿ ।
    ಇಳೆಯ-ಗಡಿ ಕಡಲ-ತಡಿ ನಭದ-ಅಡಿಯೆ ಹೇಳಾ
    ನೆಲವೆ ಜಲವು ಜಲದ ನೆಲವು ಅದುವೆ ಅಲ್ಲಿ ನೋಡಾ ।।೧।।
    “ಕ್ಷಿತಿಜ ಭುವಿಯ ನಕ್ಷೆ – ಕಡಲ ರಕ್ಷೆ” !!

    ನಡೆದಿದೆ ನೋಡಲ್ಲಿ ಚಕ್ರ ಸಂಚಲನ
    ನಡೆದಿದೆ ಅಲ್ಲೊಂದು ವಕ್ರ ವಿಯೋಜನ ।
    ತನ್ನ ತಾ ಸುತ್ತುತ್ತೆ ನಿನ್ನ ಸುತ್ತಾ ಸುತ್ತು ಇದೆಯೆ ಮತ್ತು
    ಸಪ್ತ ವರ್ಣದ ಒಪ್ಪು ನೀಲವರ್ಣದ ಅಪ್ಪು ಒಳಗೆ ಉಪ್ಪು ।
    ತಿರುಗುವಿಕೆ ತಂದಂತ ಕಡಲ ಏರುಪೇರು ತೆರೆದ ಋತುಗಳಾರು
    ಸೂರ್ಯ ಚಂದ್ರರ ನೌಕೆ ಮುಗಿಲ ತೇಲು, ಅಲ್ಲಿ ಬಿಟ್ಟವರಾರು?।।೨।।
    “ಏರು ವರ್ಣದ ಸೇತು ಬಂಧ – ಹೇತು ಬಂಧ “!!

    ನಡೆದಿದೆ ಅಲ್ಲೊಂದು ಆವರ್ತ ಪ್ರತಿಫಲನ
    ನಡೆದಿದೆ ಅಲ್ಲೊಂದು ಆಂತರ್ಯ ಸಂಸ್ಕರಣ ।
    ಭೂಮಿ ಚಪ್ಪಟೆ ಬಾನು ಸಮಾoತರದ ಕನ್ನಡಿ
    ಗಟ್ಟಿ ಪದರಸ ಕೆಳಗೆ ಹರಿದು ಕಡಲು ನಿನ್ನಡಿ ।
    ನಿನ್ನ ಅಂದ ನಿನ್ನ ಬಿಂಬ ಅದರ ಬಿಂಬ ತಂದ ಅಂದ
    ಮೇಲೆ ತೇಲಿ ತೇರ ಏರಿ ಮುತ್ತನೀಯ ಬಂದ ।।೩।।
    “ಭುವಿಯ ಕನ್ನಡಿ ಕಡಲು – ಕಣ್ಣಡಿ ತಡಿಲು “!!

    ಕಂಡಿದೆ ನೋಡಲ್ಲಿ ನಿಜದ ಪ್ರತಿ ಬಿಂಬ
    ಕಂಡಿದೆ ಅಲ್ಲೊಂದು ಗತದ ಗತಿ ಬಿಂಬ ।
    ಗೋಲದೊಳಗಿನ ಗೋಲ ದುಂಡು ಕನ್ನಡಿ ನೋಟ
    ತಗ್ಗು ತುಂಬಿದ ರಸವು ಸೀಳು ನದಿಗಳ ಓಟ ।
    ಅಂಬು ತಂದಿದೆ ಬಿಂಬ ಮೇಲೆ ಕೆಳಗಿನ ಮಾಟ
    ಬೀಜದೊಳಗಣ ಬೀಜ ನೋಡು ಇದು ಅವನಾಟ ।।೪।।
    “ಹೊರಗೆ ಗೋಲದ ಸಿಂಧು – ಒಳಗೆ ಕೇಂದ್ರದ ಬಿಂದು”!!

    ಕಂಡಿದೆ ನೋಡಲ್ಲಿ ಬಾಳ ಏರುಪೇರು
    ಕಂಡಿದೆ ಅಲ್ಲೊಂದು ತಾಳ ಏಕ ಸೇರು ।
    ಬಿದ್ದು ಎದ್ದು ಗೆದ್ದ ಪರಿಯು ಒಳಗೆ ತಿಳಿಯ ಕಲೆಯು
    ಓಡಿ ಹೋಗಿ ಬಂತೆ ಮತ್ತೆ ಹೋಗಲೆಂದೆ ಅಲೆಯು ।
    ನಾನು ಬಿಂದು ನೀನು ಸಿಂಧು ಬಂದೆ ನಿನ್ನ ಸೇರಲು
    ನೀನೆ ಬಂದು ಸೇರಿ ಒಂದು ನಾನೆ ನೀನು ಆಗಲು ।।೫।।
    “ಅಲೆವ ನದಿಯ ನೆಲೆಯು – ನಿನ್ನ ಅಲೆಯು” !!

    ನಡೆದಿದೆ ನೋಡಲ್ಲಿ ಸಪ್ತ ಸ್ವರದ ತನನ
    ನಡೆದಿದೆ ಅಲ್ಲೊಂದು ಸುಪ್ತ ಸಾಗರ ಮಥನ ।
    ತೆರೆ ಮೊರೆಯ ತೊರೆ ನೊರೆಯ ಆಲೋಡನ
    ತೆರೆ ತೊರೆಯ ತೆರೆ ಮರೆಯ ಆಲಿಂಗನ ।
    ತಾಳ ಮೇಳದೆ ಬಂದ ಬೆಳ್ ಮುಗಿಲ ನವನೀತ
    ತಳ ಮಳಲೇರಿ ತಂದ ಲವಣಾಮೃತವ ನೀತ ।।೬।।
    “ಲವ – ಲವಣ – ಲಾವಣ್ಯ – ಲಾಸ್ಯ” !!

Leave a Reply to Jyothi Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)