Dec 252017
 

ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ

  18 Responses to “ಪದ್ಯಸಪ್ತಾಹ ೨೮೭: ಸಮಸ್ಯಾಪೂರಣ”

  1. ಅಮರಿದರಿಚಮೂಪಂ ಕರ್ಣನೊತ್ತಾಸೆಯಿಂ ಬಿ-
    ಟ್ಟಮಿತಮಹಿತಸರ್ಪಾಸ್ತ್ರಕ್ಕೆ ಮಣ್ಮುಕ್ಕಿಸಿರ್ಪಂ-
    ಗಮಲನುತಿಗಳಿಂದಂ ಬಿಟ್ಟಹಂಕಾರಮೆಲ್ಲಂ
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ

    ಅಡರಿರುವ ಶತ್ರುಸೇನಾಪತಿ ಕರ್ಣ ತನ್ನನ್ನು ಕೊಲ್ಲಲೇಬೇಕೆಂಬ ಒತ್ತಾಸೆಯಿಂದ ಬಿಟ್ಟ ಸರ್ಪಾಸ್ತ್ರಕ್ಕೆ ಮಣ್ಣುಮುಕ್ಕಿಸಿದ ಹರಿಗೆ, ತನ್ನ ಜಂಭವನ್ನೆಲ್ಲ ತೊರೆದು, ಪಾರ್ಥನು ಸ್ತುತಿಯ ಗೀತೆಯನ್ನು ಅರ್ಪಿಸಿದ.

  2. ಅಮಿತಮಹಿತಸತ್ತ್ವೋದ್ರಿಕ್ತಭೀಮಾನುಜಂ ಸಂ-
    ಗಮಿಸಿದ ಕುರುಸೇನಾಧೀಶರಂ ಕೊಲ್ಲುತೊಲ್ವಂ
    ಸಮರದೆ ಹರಿಗಿತ್ತಂ; ಗೀತೆಯಂ ಪಾರ್ಥನೊಳ್ಪಿಂ
    ಗಮನಿಸಿದವಧಾನಕ್ಕಿರ್ಪುದೇನನ್ಯಮಂಕಂ?!

    ಅಮಿತವಾದ ಸತ್ತ್ವದಿಂದ ಹೋರಾಡಿ ಭೀಮಾನುಜನಾದ ಪಾರ್ಥನು ಕುರುಸೇನಾಪತಿಗಳನ್ನು ಕೊಂದು ಕೃಷ್ಣನಿಗೆ ಪ್ರೀತಿಯನ್ನು ಕೊಟ್ಟ. ಗೀತೆಯನ್ನು ಅರ್ಜುನ ಚೆನ್ನಾಗಿ ಗಮನಿಸಿ ಕೇಳಿದ್ದಕ್ಕೆ ಇದಕ್ಕಿಂತ ಬೇರೆ ಗುರುತು ಇರುವುದೇ?!

  3. ಸಮವಸರಣಮೈ ಗೀತೋಪದೇಶಂ ವಿವರ್ತo
    ಯಮನಿಯಮ ಮಹಾಮಂತ್ರಂ ಕುರುಕ್ಷೇತ್ರದೊಳ್ ಮೇಣ್
    ಸಮನಿತ ಸಮಯಂ ಸಾರ್ಥಕ್ಯ ಕೃಷ್ಣಾರ್ಪಣಂ ಕಾಣ್
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ ||

    ಹರಿ = ಬಾಣ
    “ಬಾಣ”ಕ್ಕೆ ಗೀತೋಪದೇಶ ಮಾಡಿ ಪ್ರಯೋಗಿಸಿದ ಎಂಬ ಅರ್ಥದಲ್ಲಿ !!

    (ಕಾಯೇನ ವಾಚಾ …… ಕರೋಮಿ ಯದ್ಯತ್ ಸಕಲಮ್ ಪರಸ್ಮೈ ನಾರಾಯಣಾ ಯೇತಿ ಸಮರ್ಪಯಾಮಿ )

  4. ಅತ್ತಂ-ಇತ್ತಂ: Speaking into a mobilephone while driving!
    ಅಮಲಿನೊಳಗಮಿರ್ದುಂ ಭಾಷಿಯೊಳ್ ರಸ್ತೆಯಂ ನಾಂ
    ಸಮೆಸಿದವೊಲುಮತ್ತಂ ಮಾರ್ಗಣಂ ತೇರ ನೇರಂ|
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ-
    ಗಮೊರೆವುದದನೆಂತೋ ಚೆನ್ನಿನಿಂ ಗೈದನಲ್ತೇ||
    ಹರಿಗಿತ್ತಂ=ಹರಿಗೆ ಇತ್ತಂ (ಈ ಕಡೆ). ಪಾರ್ಥನೊಳ್ಪಿಂಗೆ > ಪಾರ್ಥನ+ಒಳಿತಿಗೆ

  5. ಮಾಲಿನಿಯ ಸರಳೆವರಸೆ !!

    ಸಮನಿಸಿ ಹರಿಚಿತ್ತಂ, ನೀಗಲೆಂದುಂ ವಿಷಾದಂ
    ಸಮಯಕೆ ಹರಸಿತ್ತಂ ಗೀತೆಯಂ ಪಾರ್ಥಗೊಳ್ಪಿಂ |
    ಸಮರಥ ಹರವಿತ್ತುಂ, ಹೂಡಲೆಂದುಂ ವಿವೇಕಂ
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ ||

    ಹರಿ = ವಿಷ್ಣು / ಬಾಣ

    (ಬಾಣವನ್ನು ಪ್ರಯೋಗಿಸುವ ಮುನ್ನ ಮಂತ್ರವನ್ನು ಉಚ್ಚರಿಸುವ ಪ್ರಕ್ರಿಯೆಯ ಕಲ್ಪನೆ )

    • ಸಮನಿಸಿ ಹರಿಚಿತ್ತಂ, ನೀಗಲೆಂದುಂ ವಿಷಾದಂ
      ಸಮಯಕೆ ಹರಸಿತ್ತಂ ಗೀತೆಯಂ ಪಾರ್ಥಗೊಳ್ಪಿಂ |
      ಸಮರಥ ಹರವಿತ್ತುಂ, ನೀಡಲೆಂದುಂ ವಿವೇಕಂ
      ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ ||

    • ವರಸೆ ಸರಳವಾದರೂ ಅರ್ಥ ಮಾತ್ರ ತುಂಬ ಕಠಿಣವಾಯಿತು 🙂

  6. ಶ್ರಮಿಸುತಲಿಹರಲ್ತೇ ಸತ್ಯಮಂ ಮುಚ್ಚಲೆಂದುಂ
    ಭ್ರಮೆಯೊಳಿರುತೆ ಪೇಳ್ವರ್ ವಾಮಮಾರ್ಗೀಯರಿಂತೀ
    “ಯಮನತನುಜನೊರ್ವಂ ಶ್ರೇಷ್ಠನೀ ಭಾರತಕ್ಕಂ
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ”

    • artha spaShTavaagalilla. You are using ಯಮನತನುಜ (yudhiShThira) as ಪಾರ್ಥ?

      • ವಾಮಮಾರ್ಗೀಯರು ಅನೌಚಿತ್ಯವನ್ನಲ್ಲದೆ ಇನ್ನೇನು ನುಡಿದಾರು?

  7. ಕೃಷ್ಣನು ಪಾರ್ಥನಿಗೆ ಗೀತೆಯನ್ನು ಅರ್ಥಾತ್ ’ಗೀತೋಪದೇಶ’ವನ್ನು ನೀಡಿದ. ಆ ಉಪದೇಶವನ್ನು ಆತ್ಮಸಾತ್ತಾಗಿಸಿಕೊಂಡು ಧರ್ಮಯುದ್ಧವನ್ನು ಮಾಡುವ ಮೂಲಕ, ಮೊದಲು ರಣವಿಮುಖನಾಗಿದ್ದ ಪಾರ್ಥನು ಕೃಷ್ಣನಿಗೆ ಗೀತೆಯನ್ನು ಅರ್ಥಾತ್ ’ಗೀತಾಸಾರಫಲ’ವನ್ನು ಶಸ್ತ್ರಾಸ್ತ್ರಪ್ರಯೋಗದ ಮೂಲಕ ನೀಡಿದ.

    ತಮವನು ಕಳೆಯುತ್ತುಂ ಧರ್ಮಮಂ ಬೋಧಿಸಲ್ ತಾಂ
    (War)ಸಮರದೆ ನರಗಿತ್ತಂ ಗೀತೆಯಂ ಕೃಷ್ಣನೊಳ್ಪಿಂ|
    ದಮಿಸುತಲರಿಯಂ ತಾಂ ಧರ್ಮಮಂ ಸ್ಥಾಪಿಸುತ್ತುಂ
    (Arms)ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ||

  8. ವಿನೋದವಾಗಿ :

    ಸಮರಥ ನಟನಾ ಸನ್ಯಾಸಿ ಸಂಗೀತ ರೂಪಂ
    ಗಮನಿಸಿ ಹರಿಯಿತ್ತಂ ತಂಗಿಯಂ ಪಾರ್ಥಗಂದುಂ |
    ಕಮರದೆ ಮಿಗೆ ಸಂಬಂಧಂ ಸುಭದ್ರಾಬಲಂ ಕಾಣ್
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ ||

    ಸಮರದೆ = ಸವರದೆ / ತುಂಡರಿಸದೆ
    ಹರಿಕೊಳು = ಓಡಿಹೋಗು (ಹರಿಗಿತ್ತಂ ~ ಹರಿಕಿತ್ತಂ =ಓಡಿಹೋದ )

    “ಸಮರದೆ ಗೀತೆಯಂ, ಹರಿಗಿತ್ತಂ “~ (ಆರಾಧಿಸುವೆ ಮದನಾರಿ ….ಎಂದು ) ಹಾಡುಹಾಡುತ್ತಲೇ (ಸುಭದ್ರೆಯೊಂದಿಗೆ) ಕಾಲುಕಿತ್ತ – ಎಂಬ ಅರ್ಥದಲ್ಲಿ !!

  9. ಕಮಲವದನ! ಲಕ್ಷ್ಮೀನೀರಜಾನಂದಕಾರೀ!
    ತಮಹರ! ಭವಪಾಶಾಕೃಷ್ಟನಾಗಿರ್ಪೆನೀಗಳ್
    ಸುಮನಸ! ಪೊರೆಯೆನ್ನಂ ಕಷ್ಟದಿಂದೆನ್ನುತುಂ ತಾಂ
    ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ

    ಅರ್ಜುನವಿಷಾದಯೋಗದಲ್ಲಿ ಅರ್ಜುನನು ಕೃಷ್ಣನಿಗಿತ್ತದ್ದೂ(ಅತ್ತದ್ದೂ) ಗೀತೆಯನ್ನಲ್ಲವೆ?

  10. ಗಮನಿಸೆ ಭಗವದ್ಗೀತೋಪದೇಶಂ ಸದೃಶ್ಯo
    ಸಮನಿಸೆ ಕುರು ಧರ್ಮಕ್ಷೇತ್ರದೊಳ್ ಕಾಣ್ ಭಲಾ ಕೈ –
    ಯ ಮುಗಿಯುತಲಿನಿಂದುಂ, ನೀತ ತಾನಾಲಿಸಿರ್ಪಂ,
    ಸಮರದೆ ಹರಿಗಿತ್ತಂ, ಗೀತೆಯಂ ಪಾರ್ಥನೊಳ್ಪಿಂ ||

    ಕುರುಕ್ಷೇತ್ರದೊಳ್ ಸಮರದೆ, ಹರಿಗಿತ್ತಂ (= ಹರಿಗೆ + ಇತ್ತಂ ~ ಕೃಷ್ಣನ ಈ ಪಕ್ಕ ದಲ್ಲಿ) ನಿಂದುಂ, ಆಲಿಸಿರ್ಪಮ್ ಗೀತೆಯಂ ಪಾರ್ಥನೊಳ್ಪಿಂ.

    ಕುರುಕ್ಷೇತ್ರದಲ್ಲಿ ಗೀತೋಪದೇಶದ ಚಿತ್ರಣ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)