Oct 082011
 

ಚೌಪದಿಯಲ್ಲಿ ಪೂರ್ಣಿಸಿ. ರವಿವಾರದಂದೇ ಪರಿಹಾರದ ಬೆಳಕನ್ನು ಹರಿಸಿ 🙂

  27 Responses to “ವಾರಾಂತ್ಯ ಸಮಸ್ಯೆ – “ಅಳಿಯನೋಡಿಸಿ ಮಗಳ ಗೆದ್ದನಯ್ಯಾ””

 1. ಬಳಲಿರಲ್ಮುದ್ದುಕುವರನು ಸುಡುಜ್ವರಬೇಗೆ

  ಯೊಳು ಹುರಳಿಯೆಸರ ಕುಡಿದು ಬೇಗನೆ ನ|

  ರಳದೆಲೆ ಮಲಗಿ ನಿದ್ರಿಸೆನುತ ಸಂತೈಸುತಲಿ

  ಛಳಿಯನೋಡಿಸಿ ಮಗನ ಗೆದ್ದನಯ್ಯಾ||

  • ಪ್ರಸಾದುರವರೆ, ಚೆನ್ನಾಗಿದೆ. ಕೆಲವು ಕಡೆ, ಛಂದೋಗತಿಗೆ ತಕ್ಕಹಾಗೆ ಪದಗಳು ಒಡೆದುಕೊಳ್ಳೂತ್ತಿಲ್ಲ. (ದು ಬೇಗನೆ, ರಳದೆಲೆ ಮ, ಎತ್ಯಾದಿ. ಸಾಮಾನ್ಯವಾಗಿ ಪದ ಒಡೆಯುವುದಾದರೆ, ೪ -೧ ರಂತೆ ಒಡೆಯದಂತೆ ಎಚ್ಚರವಾಗಿದ್ದರೆ ಸರಿ) ಇದರಿಂದಾಗಿ, ಪಂಚಮಾತ್ರೆಯ ಓದುವಿಕೆಯ ಸೌಕರ್ಯಕ್ಕೆ ಸ್ವಲ್ಪ ಭಂಗವಾಗಿದೆ. ಇನ್ನಷ್ಟು ಬರೆಯಿರಿ, ದಾಟಿ ತಾನಾಗಿ ಬರುತ್ತದೆ.

  • ಪ್ರಸಾದ್ – ಲಗಂ ಬಂದಿರುವುದನ್ನೂ ಗಮನಿಸಿ :: “ದುಬೇಗನೆ”.
   ಹಾಗೂ, ಎರಡನೆಯ ಸಾಲಿನಿಂದ ಮೂರನೆಯದಕ್ಕೆ ಪದ ಒಡೆಯದಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಓದಲು ತೊಡಕಾಗುತ್ತದೆ. ಎರಡನೆ ಸಾಲಿನ ತುದಿಗೆ ಯತಿ ಸ್ಥಾನ ವಿದ್ದರೆ ಓದಲು ಅನುಕೂಲ.
   ಇದಕ್ಕೆ ಸರಿಯಾದ ವಿವರಣೆಯನ್ನು ಗಣೇಶರಿಂದ ಅಪೇಕ್ಷಿಸೋಣವೆ?

   ರವೀಂದ್ರರ – “ಬರೆದ ಹಾಗೆ ದಾಟಿ ತಾನಾಗಿ ಬರುತ್ತದೆ” ಅನ್ನುವುದಕ್ಕೆ ನ್ನನ್ನದೊಂದು ಪ್ರತಿರೂಪದ ಸಲಹೆ – “ಓದುವ ದಾಟಿ ಮನನ ಮಾಡಿಕೊಳ್ಳಿ. ಪದಗಳು ತಾವಾಗಿ ಹೊಂದಿಕೊಳುತ್ತವೆ” 🙂

 2. ನನ್ನ ಮೊದಲ ಪ್ರಯತ್ನ. ತಪ್ಪಿದ್ದರೆ ದಯವಿಟ್ಟು ತಿಳಿಸಿ, ಕ್ಷಮಿಸಿ.

  ಕಳುವಾದ ಸಮಂತಕಮಣಿ ಕಂಡ ಕೇಶವನು
  ಒಳಹೊಕ್ಕು ಜಾಂಬವಂತನ ಬಿಲವಾ
  ಕಾಳಗದಿ ಸಾಧಿಸದೆ ತನ್ನೊಳಗೆ ರಾಮ ಪು
  ತ್ಥಳಿಯ ನೋಡಿಸಿ ಮಗಳ ಗೆದ್ದನಯ್ಯಾ

  • ಪರೇಶರವರೆ, ಮೊದಲ ಯತ್ನವೇ ತುಂಬಾ ಚೆನ್ನಾಗಿದೆ. ನಾನು ಕನಸುಮನಸಿನಲ್ಲೂ ಊಹಿಸದ ಪರಿಹಾರ. 🙂 “ಒಳಹೊಕ್ಕ ಜಾಂಬವಂತನ ಬಿಲವನು” ಎಂಬುದಾಗಿ ಮಾಡಿದರೆ, ೫ ೫ ೫ +೧ (ಅಥವಾ ೫ ೫ ೫ +೨) ರ ನಿಯಮ ಸರಿ ಬರುವುದು.

  • ನೋಡಿಸಿ = ತೋರಿಸಿ. ಗುಡ್

  • ಪರೇಶರೆ – ಪೂರಣ ಬಹಳ ಸೊಗಸಾಗಿದೆ. ರವೀಂದ್ರ ಹೇಳಿದಂತೆ ೨ನೇ ಸಾಲಿನಲ್ಲಿ “ಬಿಲವನು” ಅಂದರೆ ಇನ್ನೂ ಸೂಕ್ತ ಎಂದು ನನಗೂ‌ ಅನಿಸಿತು.

 3. ಅಳಿ = ದುಂಬಿ ಎಂಬ ಅರ್ಥವಿದೆ. ಅದನ್ನು ಬಳಸಿದ್ದೇನೆ.

  ಗೆಳೆಯ ಮುನಿವರರೆಲ್ಲರೊಡಗೂಡಿ, ದೊರೆಮಗನು
  ನಳಿನಾಕ್ಷಿ ಮನಗೆದ್ದ ಪರಿಯ ಕೇಳಲ್
  ಮುಳಿಯದೆಯೆ ಕಣ್ವಮುನಿ ನಸುನಗುತ ಬಣ್ಣಿಸಿದ
  ನಳಿಯನೋಡಿಸಿ ಮಗಳ ಗೆದ್ದನೆಂದು

 4. ಬಳಲೆ ತೋಟದ ಗಿಡಗಳಾದಿತ್ಯನಬ್ಬರದಿ
  ಬೆಳೆಸುವಳ ಮನಗುಂದೆ ಹೂಗಳಂತೆ
  ನೆಳಲಚಪ್ಪರತಂದೆ ಹೂಡಿ ದಿನಪನ ಪ್ರಭಾ-
  ವಳಿಯನೋಡಿಸಿ ಮಗಳ ಗೆದ್ದನಯ್ಯಾ

  “ಪ್ರಭಾ…” ಎಂಬಲ್ಲಿ ಶಿಥಿಲ ದ್ವಿತ್ವವಾಗಿದೆ

 5. ರವೀಂದ್ರ – ಈ ಸಮಸ್ಯೆಯಲ್ಲಿ, ಅಳಿಯನನ್ನೇ ತರಲು ಕಷ್ಟವಿದೆಯಲ್ಲವೆ? ಅಳಿಯನನ್ನು ಓಡಿಸಬೇಕಿದ್ದರೆ, ಅಳಿಯನನ್ನೋಡಿಸಿ ಎಂದಾಗಬೇಕಲ್ಲವೆ? ಹಿಂದೊಮ್ಮೆ ಇದೇ ರೀತಿಯ ವಿಭಕ್ತಿಯ ಬಗ್ಗೆ ಒಂದೆರ್ರಡು comment ಗಳು ನಡೆದದ್ದು ನೆನಪಿದೆ. ಆದರೆ ಈ ಪ್ರಯೋಗ ಸರಿಯೋ ಇಲ್ಲವೋ ಇತ್ಯರ್ಥ ವಾಗಲಿಲ್ಲ ಅನಿಸುತ್ತದೆ.

  ಆಳಿಯನನ್ನೇ ಓಡಿಸಲು ಈ ಸಮಸ್ಯೆಯ ಪ್ರಯೋಗ ಬಿಟ್ಟರೆ, ಆ ಜಾಡಿನಲ್ಲೇ ಒಂದು ಪೂರಣದ ವಿಚಾರವಿದೆ.

  • ಆಸ್ವಾದಿಸಲಿಕ್ಕೆ, ಅಳಿಯನೋಡಿಸಿ = ಅಳಿಯನು ಓಡಿಸಿ, ಅಳಿಯನ ಓಡಿಸಿ ಏನಾದರೂ ಮಾಡಬಹುದೆಂದು ನನ್ನಿಂಗಿತ. ನಿಮ್ಮ ನವಿರು ಹಾಸ್ಯ ಪ್ರವೃತ್ತಿಯ ಪರಿಚಯವಿರುವುದರಿಂದ “ಆಳಿಯನನ್ನೇ ಓಡಿಸುವ” ಪರಿಹಾರ ನೋಡಲು ಉತ್ಸುಕನಾಗಿದ್ದೇನೆ 🙂

 6. ಎಲ್ಲರ ಪರಿಹಾರಗಳೂ ಅರ್ಥಸ್ವಾರಸ್ಯದಿಂದ ಚೆನ್ನಾಗಿವೆ. ಪ್ರಸಾದ್ ಮತ್ತು ಪರೇಶರ ಪದ್ಯಗಳ ಕೆಲವೊಂದು ಛಂದೋಬಂಧಕ್ಲೇಶಗಳನ್ನು ರವೀಂದ್ರ ಮತ್ತು ರಾಮಚಂದ್ರರು ಸರಿಯಾಗಿಯೇ ಗುರುತಿಸಿ ಆ ತೊಡಕನ್ನು ಬಗೆಹರಿಸಲು ಸರಿಯಾದ ಸೂಚನೆಗಳನ್ನು ಕೂಡ ನೀಡಿರುವುದು ಮುದಾವಹ. ಆದರೆ ಪ್ರಸಾದರ ಪರಿಹಾರದಲ್ಲಿಯ ಕೀಲಕಪದ (ಅಂದರೆ ಶಬ್ದಚ್ಛಲವರ್ಗದ ಸಮಸ್ಯಾಪೂರಣಗಳಲ್ಲಿ ಬರುವ (ಪ್ರಾಯಿಕವಾಗಿ)ಕಡೆಯ ಸಾಲಿನ ಮೊದಲ ಪದಕ್ಕೆ ಈ ಹೆಸರುಂಟು. ಈ ಪದದಿಂದಾಗಿಯೇ ಸಮಸ್ಯೆಯ ತೊಡಕು ಬಗೆಹರಿದು ಹುರುಳು ತಿಳಿಯಾಗುವುದನ್ನು ಸಹೃದಯರೆಲ್ಲ ಬಲ್ಲರಷ್ಟೆ; ಹೀಗಾಗಿಯೇ ಇದು ಕೀಲಕಪದ;key-word) ಚಳಿ ಎಂಬಲ್ಲಿ ಚ್+ಅಳಿಯ ಎಂದು ಸ್ಫುಟಸಂಧಿಯಾಗದು. ಅದೇ ರವೀಂದ್ರರ ಪದ್ಯದಲ್ಲಿ ಸ್ಫುಟವಾಗಿ ಸಂಧಿಯೊಡೆದು ಅಳಿಯ ಎಂಬ ಪದವು ಎದ್ದು ತೋರುವಂತಿದೆ. ಇದು ಸೊಗಸಾದ ದಾರಿ. ದಯಮಾಡಿ ಎಲ್ಲ ಗೆಳೆಯರೂ ಬೇಸರವಿಲ್ಲದೆ ನನ್ನ ಶುಚನೆಗಳನ್ನು ಗ್ರಹಿಸುವಿರೆಂದು ಭಾವಿಸುತ್ತೇನೆ:-)

  • ಗಣೇಶರಿಗೆ :: ಸಮಸ್ಯೆಯಲ್ಲಿ ವಿಭಕ್ತಿಯ ತೊಡಕಿದೆಯೆ ಎಂಬುದನ್ನೂ ವಿವರಿಸಬೇಕಾಗಿ ಕೋರಿಕೆ. ಅಳಿಯನನ್ನು ಓಡಿಸುವುದು ಅಂಬರ್ಥ ಬರಬೇಕಾದರೆ, “ಅಳಿಯನನ್ನೋಡಿಸುವ” ಎಂದೇ ಬರಬೇಕೊ ಅಥವ “ಅಳಿಯನೋಡಿಸುವ” ಎಂದರೂ ಆಗುತ್ತದೆಯೊ?

 7. ಅಳುವಿನಲಿ ಕರಗಿತ್ತು ಮನದಾಸೆಯಾಕಾಂಕ್ಷೆ
  ಹಳಿದಿದ್ದಳಾ ಕಠಿನ ಪ್ರಶ್ನೆಗಳನು |
  ಇಳೆಯ ಜೀವನದಲ್ಲಿ ತೃಣಸಮವಿದೆಂದು ಕಳ –
  ಕಳಿಯನೋಡಿಸಿ ಮಗಳ ಗೆದ್ದನಯ್ಯಾ ||

 8. ಇಳೆಯ ಚಲುವೆಯ ಪೋಲ್ವ ಸೌಂದರ್ಯದತಿಶಯವ
  ತಳೆದಿಹಳು ಗುರುಪುತ್ರಿ ಬಿಗುಮಾನದೊಳ್
  ಮಳಲುಮುಷ್ಟಿಯಿನೆ ಕುಸಿಯುವೋಲ್ -ಇರದಯುಗಿಬಂಡಿ-
  ಹಳಿಯನೋಡಿಸಿ ಮಗಳ ಗೆದ್ದನಯ್ಯಾ

  ಉಗಿಬಂಡಿ ಇರದ ಬರಿ ಹಳಿಯನ್ನೇ ಓದಿಸಿ = ಸುಳ್ಳನ್ನು ಹೇಳಿ 😉
  ಮಳಲುಮುಷ್ಟಿಯಿನೆ = ಮುಷ್ಟಿಯಲ್ಲಿ ಮರಳನ್ನು ಗಟ್ಟಿಯಾಗಿಸಿದಷ್ಟು ಸೋರುವುದು

  • ಸೋಮ – ವಿಚಾರ ಚೆನ್ನಾಗಿದೆ [ ಗುರುಪುತ್ರಿಯನ್ನು ಗೆಲ್ಲುವುದು, ರೈಲ್ಲು ಓಡಿಸುವುದು, ಮಳಲಮುಷ್ಟಿ 🙂 ]
   ೩ನೇ ಸಾಲಿನಲ್ಲಿ ಮಾತ್ರೆಗಳು ಹೆಚ್ಚಾಗಿವೆ. ಮತ್ತು “ಯು ವೋಲ್” ನಲ್ಲಿ ಲಗಂ ಬಂದಿದೆ.
   ಹಾಗೇ, ಗಣೇಶರು ಮೇಲೆ ಪ್ರಸಾದರಿಗೆ ಹೇಳಿದ ಕೀಲಕದ ವಿಷಯ ಇಲ್ಲೂ ಅನ್ವಯಿಸುವುದೆ? ಅಂದರೆ, ಹ್ +‌ಅಳಿ ಆಗಿ ತೊಡಕೆಂಬ ಸಂಶಯ. ಮೇಲೆ “ಪುತ್ಥಳಿ”, “ಪ್ರಭಾವಳಿ” ಮತ್ತು “ಕಳಕಳಿ” ಗಳಲ್ಲಿ ಪದ ಸಾಲುಗಳ ನಡುವೆ ಒಡೆದಿದೆ. “ಚಳಿ” ಮತ್ತು “ಹಳಿ” ಗಳಲ್ಲಿ, ಪದ ಅಲ್ಲೇ ಶುರುವಾಗುತ್ತದೆ. ಆದ್ದರಿಂದ ಸಂಧಿ ಸ್ಫುಟತೆ ಇರದು ಎಂದು ನಾನು ಗಣೇಶರ ಪ್ರತಿಕ್ರಿಯೆಯಿಂದ ಅರ್ಥಮಾಡಿಕೊಂಡಿದ್ದು.

   • ರಾಮ್
    ಚ್ + ಅಳಿಯ ಎಂಬುದರ ವಿವರಣೆಯನ್ನು ಸರಿಯಾಗಿ ಗಮನಿಸಲಿಲ್ಲ. ಹ್ + ಅಳಿಯ ಸಾಧುವಾಗುವುದಿಲ್ಲವೆಂದು ಈಗ ತಿಳಿಯಿತು.

    • ಸೋಮರವರೆ, “ಇರದಯುಗಿಬಂಡಿ” ಬದಲಿಗೆ “ಇರದವುಗಿಬಂಡಿ” ಬಂದರೆ ಚೆನ್ನವೇನೋ?

 9. “ಬಣ್ಣಿಸಿದ
  ನಳಿಯನೋಡಿಸಿ ಮಗಳ ಗೆದ್ದ”

  ಎಂಬ ರವೀಂದ್ರರ ಪೂರಣ ಸ್ಫುಟವಾಗಿದೆ, ಸೊಗಸಾಗಿದೆ. ಅಳಿ ಎಂಬ ಶಬ್ಧ ಸ್ಫುಟವಾಗಿ ದೊರೆಯುತ್ತದೆ, ಅಳಿಯನ್ ಎಂಬ ಸ್ಫುಟವಾದ ವಿಭಕ್ತಿಸೂಚಕವೂ ಇದೆ, ಸಂದರ್ಭವೂ ಅರ್ಥಪೂರ್ಣವಾಗಿದೆ.

  ಮತ್ತನೇಕ ಪೂರಣಗಳು, ಉದಾಹರಣೆಗೆ, ಪುತ್ಥಳಿಯನೋಡಿಸಿ, ಪ್ರಭಾವಳಿಯನೋಡಿಸಿ, ಹಳಿಯನೋಡಿಸಿ, ಕಳಕಳಿಯನೋಡಿಸಿ ಇತ್ಯಾದಿ ಪ್ರಾಸ, ಅಕ್ಷರ ಇವುಗಳು ಕೂಡಿದರೂ ಅಳಿ ಅಥವ ಅಳಿಯ ಎನ್ನುವ ಪದ ಸ್ಫುಟವಾಗಿ ದಕ್ಕುವುದಿಲ್ಲ. ಹಾಗೊಂದುವೇಳೆ ಅಳಿ/ಅಳಿಯನಿಗಾಗಿ ಆ ಪದವನ್ನು ಒಡೆದರೆ ಅದರ ಪೂರ್ವಪದಗಳು ಅರ್ಥ ಕಳೆದುಕೊಳ್ಳುತ್ತದೆ (ಪುತ್ಥ್ + ಅಳಿಯ; ಪ್ರಭಾವ್ + ಅಳಿಯ; ಹ್ + ಅಳಿಯ; ಕಳಕ್ + ಅಳಿಯ ಹೀಗೆ).

  ಅಳಿಯನೆಂದೇ ಸ್ಫುಟವಾಗಿ ಪದವನ್ನಿಟ್ಟರೂ ರಾಮಚಂದ್ರರು ಗಮನಿಸಿದಂತೆ ಅಳಿಯನೋಡಿಸಿ ಎಂಬುದು ಅಳಿಯನನ್ನೋಡಿಸಿ ಎಂಬ ಅರ್ಥ ಕೊಡುವುದಿಲ್ಲ. ಆದ್ದರಿಂದ ರವೀಂದ್ರರು ಮಾಡಿದಂತೆ ಅಳಿ ಎಂಬ ಪೂರಣವೇ ನಿಸ್ಸಂಧಿಗ್ದವೆನಿಸುತ್ತದೆ.

  • ಮಂಜುನಾಥರೆ –
   ಈ ಸಮಸ್ಯಾಪೂರ್ಣದಲ್ಲಿ “ಅಳಿ” ಅಥವಾ “ಅಳಿಯ” ಎಂಬ ಪದಗಳೇ ಸಿಕ್ಕ(ದಕ್ಕ)ಬೇಕೆಂದಿಲ್ಲ ಎಂದು ನನ್ನ ಅನಿಸಿಕೆ. ಹಿಂದಿನ ಒಂದು ಸಮಸ್ಯೆಯಲ್ಲಿ “ಸ್ತನ” ಅನ್ನುವುದಕ್ಕೆ “ಬೆಸ್ತನ”, “ಕ್ರಿಸ್ತನ”, “ಗುಮಾಸ್ತನ”, “ನಂಬಿಗಸ್ತನ” ಎಲ್ಲವೂ ಸಾಧು ರೂಪವೆ. ಇಲ್ಲಿ ತೊಡಕಾಗಿರುವುದು “ಚಳಿ” ಎಂಬ ಉಪಯೋಗದಲ್ಲಿ. ಇಲ್ಲಿ “ಚ್” ಅನ್ನುವುದು ಹಿಂದಿನ ಪದದ ಮುಂದುವರಿಕೆಯಲ್ಲ ಹಾಗೂ ಸಂಧಿ ಜೋಡಣೆಯ ಪರಿಕರವೂ ಅಲ್ಲ.
   ನನಗನಿಸುವಂತೆ “ಪುತ್ಥಳಿ”, “ಪ್ರಭಾವಳಿ”, “ಕಳಕಳಿ” ಎಲ್ಲಾ ಸಮಂಜಸವಾಗಿವೆ. ಕೀಲಕವನ್ನುಪಯೋಗಿಸಿ ಸಮಸ್ಯೆಯ ಸಾಲಿನ ಅರ್ಥವನ್ನೇ ಬದಲಿಸುವುದು ಒಂದು ಸ್ವಾರಸ್ಯವೇ ಅಲ್ಲವೆ?

   • ರಾಮಚಂದ್ರರೆ, ““ಬೆಸ್ತನ”, “ಕ್ರಿಸ್ತನ”, “ಗುಮಾಸ್ತನ”, “ನಂಬಿಗಸ್ತನ”” ಈ ಪದಗಳಲ್ಲಿ “ಸ್ತನ” ಪದದ ರೂಪ ಕೆಡುವುದಿಲ್ಲ ಅಲ್ಲವೇ? ಹಾಗೆಯೇ “ಹೂರಣ; ಹೂ ರಣ” ಇತ್ಯಾದಿ. ಅದರಂತೆಯೇ ಅಳಿ ಬೇರೊಂದು ಪದದ ಭಾಗವಾಗಿಯೇ ಬಂದರೂ ಅಳಿ/ಅಳಿಯ ತನ್ನ ಪ್ರತ್ಯೇಕ ಅಸ್ತಿತ್ವವುಳಿಸಿಕೊಳ್ಳಬೇಕಲ್ಲವೇ?

    ನನ್ನ ಅನಿಸಿಕೆ ಅಷ್ಟೇ… ಸಮಸ್ಯಾ ಪೂರಣದ ನಿಯಮಗಳು ನನಗೆ ತಿಳಿದಿಲ್ಲ

  • ಮಂಜುನಾಥ ಅವರೆ,
   ರಾಮ್ ಹೇಳಿದಹಾಗೆ “ಪುತ್ಥಳಿ”, “ಪ್ರಭಾವಳಿ”, “ಕಳಕಳಿ” ಎಲ್ಲಾ ಸಾಧುರೂಪಗಳಗುತ್ತವೆ ಎಂದು ನನ್ನ ಅನಿಸಿಕೆಯೂ ಆಗಿದೆ. ಇದರಲ್ಲಿ ಹಿಂದಿನ ಪದದ ಜೋಡಣೆ ಇಂದ ವೈವಿಧ್ಯ ಅರ್ಥ ಸ್ವಾರಸ್ಯಗಳು ಸಾಧ್ಯ.

 10. ಮಳೆಯ ರಭಸಕೆ ರಥವು ಕುಸಿದಿರಲರಸಕುವರಿ
  ತಳಮಳವ ಕಳೆದವೀರನುಯಾವನೊ?
  ಸೆಳೆಯೆ ಕತ್ತಲ ನೆನಪು, ಭಟನೋರ್ವ ಬಂದು ಬಳು-
  ವಳಿಯ ನೋಡಿಸಿ ಮಗಳ ಗೆದ್ದನಯ್ಯಾ

  (ಕತ್ತಲಲಿ ಸಹಾಯಮಾಡಿದ ವೀರನಿಗೆ ರಾಜಕುವರಿ ಯಾವುದೋ ಬಳುವಳಿ ಕೊಟ್ಟಿದ್ದಳು)

 11. ಈ ಸಮಸ್ಯೆ ಕೊಟ್ಟಾಗ ಇದಕ್ಕೆ ಹೆಚ್ಚಿನ ವಿಸ್ತಾರವಿಲ್ಲವೆಂದನಿಸಿತ್ತು. ಬಗಬಗೆಯ ಪರಿಹಾರಗಳು ಬಂದು ಸಮಸ್ಯೆಗೆ ಸಿಗಬೇಕಿದ್ದ ಮರ್ಯಾದೆಗಿಂತ ಜಾಸ್ತಿಯೇ ಸಿಕ್ಕಿತೇನೋ ಎಂದನಿಸುತ್ತಿದೆ :). ಸಹೃದಯಿಗಳೆಲ್ಲರ ವಿಚಾರ ವಿನಿಮಯವೂ ತಿಳುವಳಿಕೆಗೆ ಪೂರಕವಾಯ್ತು.

 12. ಕೀಲಕಪದಕ್ಕೆ ಸಂಬಂಧಿಸಿದಂತೆ ಮಂಜುನಾಥರ ಅಭಿಪಾಯ ಹೆಚ್ಚು ಸಾಧುವಾಗಿದೆ. ಸಮಸ್ಯಾಪೂರಣದಲ್ಲಿ ಅಂಥ ಕಠೋರನಿಯಮಗಳೇನಿಲ್ಲ. ಯಾವುದೇ ನಿಯಮವು ರಸಪರವಾಗಿರಬೇಕೆಂಬುದೇ ಮುಖ್ಯನಿಯಮ. ಸ್ವಾರಸ್ಯವಿರುವುದು ಕೀಲಕಪದವನ್ನು ಕೂಡಿದಮಟ್ಟಿಗೂ ಸ್ಫುಟೀಕೃತವಾಗುವಂತೆ ಉಳಿಸಿಕೊಳ್ಳುವುದರಲ್ಲಿದೆ. ಸಮಸ್ಯೆಯೊಂದಕ್ಕೆ ಹತ್ತಾರು ಪರಿಹಾರಗಳು ಸಾಧ್ಯ. ಆದರೆ ಎಲ್ಲ ಪರಿಹಾರಗಳೂ ಸಮಾನವಾಗಿ ರಸಭರಿತವಾಗಿರುವುದಿಲ್ಲ. ಒಳ್ಳೆಯ ಪರಿಹಾರದಲ್ಲಿ ಹೃದ್ಯವೂ ನವೀನವೂ ಆದ ಕಲ್ಪನೆ, ಸೊಗಸಾದ ಪದವಿನ್ಯಾಸ, ಸಾಧ್ಯವಾದರೆ, ಬೋನಸ್ ಎಂಬಂತೆ ಅರ್ಥಾಲಂಕಾರ-ಶಬ್ದಾಲಂಕಾರಗಳು ಹಾಗೂ ಇಡಿಯ ಪದ್ಯದಲ್ಲಿ ಸಮಸ್ಯೆಯ ಸಾಲು ಹೊರಚ್ಚಾಗಿ ನಿಲ್ಲದೆ ಎಲ್ಲವೂ ಸೇರಿ ಒಂದೇ ಸಮಗ್ರಶಿಲ್ಪವೆನ್ನುವಂಥ ಹದವಿರುತ್ತದೆ. ಇದು ಆದರ್ಶ:-) ಅಲ್ಲದೆ ಎಲ್ಲ ಸಮಸ್ಯೆಗೂ ಅನೇಕಪರಿಹಾರಗಳನ್ನು ಕೊಡುವ ಆಗ್ರಹ ಬೇಕಿಲ್ಲ. ಒಂದೇ ಕೀಲಕಶಬ್ದವನ್ನುಳಿಸಿಕೊಂಡೂ ಬಗೆಬಗೆಯ ಶೈಲಿ-ಶಬ್ದವಿನ್ಯಾಸಗಳಲ್ಲಿ ಪದ್ಯವನ್ನು ರಚಿಸಲೂ ಬಹುದು.
  ವಿಭಕ್ತಿಯ ಬಗೆಗೊಂದು ಮಾತು. ಕನ್ನಡಕ್ಕೆ ವಿಭಕಿಪಲ್ಲಟವೆಂಬ ಅನುಕೂಲತೆಯಿದೆ. ಕೆಲಮಟ್ಟಿಗಿದು ಸಂಸ್ಕೃತಕ್ಕೂ ಇದೆ. ಆದರೆ ಎಲ್ಲ ಹದದೊಳಗಿರಬೇಕು, ರಿಯಾಯಿತಿಯು ಅತಿಯಾಗಬಾರದು. ಹಾಲಿಗೆ ಎಷ್ಟು ನೀರು ಹಾಕಬಹುದು? (ಗಮನಿಸಿರಿ; ಇಲ್ಲಿಯೇ ವಿಭಕ್ತಿಪಲ್ಲಟವಿದೆ!)

  • ಕೀಲಕ ಪದದ ವಿಷಯ ಸ್ವಲ್ಪ ತಿಳಿಯಾಯಿತು 🙂 ಸ್ವರಗಳಿಂದ ಶುರುವಾಗುವ ಪದಗಳಿಗೆ ಕೀಲಕ ಹುಡುಕುವಾಗ ಎಚ್ಚರ ವಹಿಸಬೇಕೆಂದಾಯಿತು.

   “ಹಾಲಿಗೆ ಎಷ್ಟು ನೀರು ಹಾಕಬಹುದು” – ನೀವು ಹೇಳದಿದ್ದರೆ ಖಂಡಿತ ನನಗಂತು ವಿಭಕ್ತಿ ಪಲ್ಲಟವಾದದ್ದು ತಿಳಿಯುತ್ತಿರಲಿಲ್ಲ. “ಹಾಲಿಗೆ ಎಷ್ಟು ನೀರನ್ನು ಹಾಕಬಹುದು” ಎಂಬ ಉಪಯೋಗ ಇಲ್ಲವೇ ಇಲ್ಲವೇನೊ ಅನ್ನಿಸುತ್ತದೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)