Oct 112011
 

ಕಂದ ಛಂದಸ್ಸಿನ ಪದ್ಯದ ಕೊನೆಯ ಸಾಲು ಹೀಗಿದೆ ::

ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?
(ರಸಾಲ= ಮಾವು)

ಮೊದಲ ೩ ಸಾಲುಗಳನ್ನು ಪೂರೈಸಿರಿ

ಕಂದ ಪದ್ಯದ ಛಂದಸ್ಸಿನ ಸ್ವರೂಪ ಇಲ್ಲಿದೆ

ವಿ.ಸೂ :: ಇದು ಗಣೇಶರು ಕೊಟ್ಟ ಸಮಸ್ಯೆ

  56 Responses to “ಸಮಸ್ಯೆ – ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?”

 1. ಬಾಲ ಹನುಮನ ಸೂರ್ಯನನ್ನ ಹಣ್ಣು ಎಂದು ತಿಳಿದು ತಿನ್ನಲು ಹೋದ ಪ್ರಸಂಗ:

  ನೆಲದೊಳ್ ನಿಂತವ ತಾ ಕಾ-
  ಣಲು ದಿನಪನತಿಳಿ ಸುಹಾಸ ಮೊಗಮಂ ಭ್ರಮೆಯೊಳ್
  ಬಲದಿಂ ಮೀಂಟುತ ಜಿಗಿಯಲ್
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

  • ಅರಿಸಮಾಸ ಗಮನಿಸಿದೆ ಸರಿಪಡಿಸಲು ಪ್ರಯತ್ನಿಸಿದ್ದೇನೆ:

   ನೆಲದೊಳ್ ನಿಂತವ ತಾ ಕಾ-
   ಣಲು ದಿನಪನ ತಿಳಿಯಕೆಂಪು ಮೊಗಮಂ ಭ್ರಮೆಯೊಳ್
   ಬಲದಿಂ ಮೀಂಟುತ ಜಿಗಿಯಲ್
   ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

  • ಇನ್ನೊಂದು ತಿದ್ದುಪಡಿ:

   ನೆಲದೊಳ್ ನಿಂತವ ತಾ ಕಾ-
   ಣಲು ದಿನಪನ ಮಾವಗೆಂಪ ಮೊಗಮಂ ಭ್ರಮೆಯೊಳ್
   ಬಲದಿಂ ಮೀಂಟುತ ಜಿಗಿಯಲ್
   ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

   ಮಾವಗೆಂಪ – ಮಾವಿನ ಕೆಂಪ

 2. ಆತ್ಮೀಯ
  ಮುದ್ದು ಮುಖವದು ಬಳಿ ಸಾರ್ದು
  ನಿ೦ದುದು ಕೆನ್ನೆಯದುಬ್ಬಿ ನಗುತಿರಲ್
  ತು೦ಬು ಮೊಗವ ಕ೦ಡ೦ದೆನ್
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

  ತಪ್ಪಿದ್ದರೆ ತಿದ್ದಿ 🙂
  ಹರೀಶ್ ಆತ್ರೇಯ

 3. ಸೋಮ ಅವರ ಪರಿಹಾರ ಸೊಗಸಾಗಿದೆಯಾದರೂ ಸಮಸ್ಯೆಯ ” ಫಲಮಂ…” ಎನ್ನುವ ಪದಕ್ಕೆ ಅಂಟಿಕೊಳ್ಳುವಂತೆ ಹಿಂದಿನ ಸಾಲುಗಳು ಬಂದು ವಾಕ್ಯವೊಂದು ಪರಿಣಮಿಸಬೇಕಲ್ಲವೆ; ಅದು ಆದಂತಿಲ್ಲ. ಹೀಗಾಗಿ ಪೂರಣದಲ್ಲಿ ಸ್ವಲ್ಪ ಕೊರತೆಯಿದೆ. ಅಲ್ಲದೆ ಕಂದಪದ್ಯಕ್ಕೆ ಸ್ವಲ್ಪ ಹೆಚ್ಚಾಗಿ ಹಳಗನ್ನಡದ ಬಿಗಿ-ಬಲ ಬೇಕು:-) ಇಲ್ಲಿ ನಡುಗನ್ನಡದ ತೆಳುತನವಿದೆ.
  ಹರೀಶ್ ಅವರ ಪರಿಹಾರಕ್ಕೆ ಛಂದಸ್ಸಿನ ಅಚ್ಚೇ ಇಲ್ಲವಲ್ಲ! ಹೀಗಾಗಿ ಅಚ್ಚುಕಟ್ಟು ಕೆಟ್ಟದೆಯೆಂದರೆ ಬೇಸರವಿಲ್ಲ ತಾನೆ?

  • ಆತ್ಮೀಯ
   ಖ೦ಡಿತ ಬೇಸರವಿಲ್ಲ. ಆದರೆ ಎಲ್ಲಿ ಕೆಟ್ಟಿದೆಯೆ೦ದು ದಯವಿಟ್ಟು ತಿಳಿಸಿ. ತಿದ್ದಿಕೊ೦ಡು ಮುನ್ನಡೆಯಲು ಸಹಕರಿಸಿ
   ಹರಿ

   • ಹರೀಶರೆ,
    ನಿಮ್ಮ ಪದ್ಯ ಹೀಗೆ ಗಣವಿಭಾಗಗೊಳ್ಳುತ್ತದೆ ::

    ಮುದ್ದು ಮು + ಖವದು ಬ + ಳಿಸಾರ್ದು
    ನಿ೦ದುದು + ಕೆನ್ನೆಯ + ದುಬ್ಬಿ ನ + ಗುತಿರಲ್
    ತು೦ಬು ಮೊ +‌ ಗವ ಕ೦ + ಡ೦ದೆನ್
    ಫಲಮಂ + ತಿನಲಪ್ + ಉದೇಂ ರ + ಸಾಲಫ + ಲದವೊಲ್?

    ೨ನೇ ಸಾಲಿನಲ್ಲಿ ೧ ಗಣ ಕಡಿಮೆಯಿದೆ. ಇನ್ನು ಕಂದ ಪದ್ಯದ ವಿಶೇಷ ಗಣಗಳಲ್ಲಿ ಲಘು-ಗುರು ವಿಭಾಗಗಳನ್ನು ಒಮ್ಮೆ ನಿಮ್ಮ ಪದ್ಯದ ಗಣಗಳಿಗೆ ಹೋಲಿಸಿನೋಡಿದಲ್ಲಿ ತಿದ್ದಲು ಅನುಕೂಲವಾದೀತು
    (ಗಣೇಶರು ಇದನ್ನು ಮತ್ತೆ ಇಂದು ನೋಡದಿರಬಹುದೆಂದು ನಾನೇ ಉತ್ತರಿಸಿದ್ದೇನೆ)

    • ಗು ಲ ಲ + ಲ ಲ ಲ ಲ+ ಲಗುಲ
     ಗು ಲ ಲ + ಗು ಲ ಲ+ ಗು ಲ ಲ + ಲ ಲ ಗು
     ಗು ಲ ಲ + ಲ ಲ ಗು + ಗು ಗು
     ಲ ಲ ಗು + ಲಲಗು + ಲಗುಲ + ಗುಲಲ + ಲಲಗು
     ಇದು ನನ್ನ ಪದ್ಯಕ್ಕೆ ಪ್ರಸ್ತಾರವಲ್ಲವೇ? ಎಲ್ಲಿ ಎಡವಟ್ಟಾಗಿದೆ. ಕ್ಷಮಿಸಿ ತು೦ಬಾ ತೊ೦ದರೆ ಕೊಡುತ್ತಿದ್ದೇನೆ.

    • ೧ನೇ ಸಾಲಿನಲ್ಲಿ :: ಲಗುಲ – ಇದು ಜಗಣವಾಗಿದೆ. ೨ನೇ ಗಣ ಜಗಣವಾಗಬಹುದು. ಇಲ್ಲಿ, ಕೊನೆಯ ಗಣ ಜಗಣವಾಗಿದೆ
     ೨ನೇ ಸಾಲಿನಲ್ಲಿ :: ಒಂದು ಗಣ ಕಮ್ಮಿ ಇದೆ – ೫ ಗಣಗಳಿರಬೇಕು, ೪ ಮಾತ್ರ ಇದೆ – ಮಧ್ಯದ ಜಗಣ ಅಥವಾ ಸರ್ವಲಘುವಿರುವ ಗಣ ತಪ್ಪಿ ಹೋಗಿದೆ ಅನಿಸುತ್ತದೆ.

  • ಸಾರ್,

   “ಕಂದಪದ್ಯಕ್ಕೆ ಸ್ವಲ್ಪ ಹೆಚ್ಚಾಗಿ ಹಳಗನ್ನಡದ ಬಿಗಿ-ಬಲ ಬೇಕು:-) ಇಲ್ಲಿ ನಡುಗನ್ನಡದ ತೆಳುತನವಿದೆ”
   ಹೌದು ಬರಿಯಬೇಕಾದರೆ ನನಗೂ ಅನ್ನಿಸಿತು, ಹಳೆಗನ್ನಡ ಓದಿಕೊಳ್ಳಬೇಕು ವ್ಯುತ್ಪತ್ತಿ ಸಾಲದು, ಶುರು ಮಾಡುತ್ತೇನೆ 🙂

 4. ರಾಮಚಂದ್ರ ಅವರೇ,

  ಕಂದದ ಬಗೆಗೆ ವಿವರಗಳನ್ನು ಕೊಡುವಾಗ ಮೊದಲ ಉದಾಹರಣೆಯ ಕೊನೆಯ ಸಾಲಿನಲ್ಲಿ ಒಣ್ದು ಅನುಸ್ವಾರವು ಹೆಚ್ಚಾಅಗಿ ಬಂದು ಛಂದೋದೋಷವಾಗಿದೆ. ದಯಮಾಡಿ ಸರಿಪಡಿಸಿರಿ. ಹಾಗೆಯೇ ಹೇರಂಬ ಎನ್ನುವ ಅಲ್ಪಪ್ರಾಣದ ಪದವೇ ಸರಿ, ಪ್ರಾಸವೂ ಉಳಿಯುತ್ತದೆ. ಉಳಿದಂತೆ ಎಲ್ಲ ವಿವರಗಳೂ ಸಲೆಸೊಗಸೆಂದರೆ ಅಲ್ಪವಾದೀತು!!

  • ಗಣೇಶರೆ – ಹೆಚ್ಚಾದ ಅನುಸ್ವಾರವನ್ನು ತೆಗೆದಿದ್ದೇನೆ. ಹೇರಂಬದಲ್ಲಿದ್ದ ಮಹಾಪ್ರಾಣವನ್ನೂ ಸರಿಪಡಿಸಿದ್ದೇನೆ.

 5. ಗಣೇಶರ ಹಳೆಗನ್ನಡದ ಸಲಹೆ ಬಳಸಿ, ಸ್ವಲ್ಪ ಹೆಚ್ಚೇ ಅನಿಸಬಹುದಾದ ಹಳೆಗನ್ನಡದ [ಭಾಸವಿರುವ :-)] ಸಾಮಗ್ರಿಗನ್ನಳವಡಿಸಿದ ನನ್ನ ಮೊದಲ ಕಂದ ಪದ್ಯ ಇಂತಿದೆ ::

  ಗಾತ್ರಂ ರುಚಿಯುಂ ಸಮಮಾ
  ಗಿರ್ದುಮದಂಟಿನ ಸಲೇಪವೆಲ್ಲೆಡೆಯಾಗುಂ |
  ಖಡ್ಗದಿ ಕಡಿವಾ ಹಲಸಿನ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್ ||

 6. ಮೂರು ಕಂದಗಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ, ಲಾಲಿಸಿ:

  ಫಲಮಂ ಭೋಗಿಸಬೇಕದ
  ರೊಳಗಿನಿತನುಮಾನಮಿಲ್ಲ ಕೇಳೀಧರೆಯೊಳ್
  ಬಲಿಯಲ್ ಪಾಪಂ ಬಳಿಕಾ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್

  ಚೆಲುವುಂ ಮೆರೆವಾ ಬಲಮುಂ
  ನಲಮಾಗಿಸಲಪ್ಪುವೆಕೆಡುಕಿನ ವಿಷಗುಣಮಂ
  ಕಲಸಲ್ ಜೇನೊಳ್ ಬೇವಿನ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್

  ಹಲಸನ್ ಬಿಡಿಸಲ್ ವೇಳ್ಕುಂ
  ಸುಲಿದುಣಬೇಕಾ ಚಕೋತಮಂ ಕಿತ್ತಳೆಯಂ
  ಸುಲಿಯದೆ ಬಿಡಿಸದೆ ಮೇಣಾ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್

 7. ಮಂಜುನಾಥರ ಕಂದಗಳೆಲ್ಲ ಆರೋಗ್ಯವಾಗಿವೆ; ಅಂದ-ಚಂದಗಳಿಗೂ ಕೊರತೆಯಿಲ್ಲ. ರಾಮಚಂದ್ರರ ಕಂದನಲ್ಲಿ ಸೊಗಸಿಗೆ ಕೊರತೆಯೇನಿಲ್ಲವಾದರೂ ಪ್ರಾಸದ ಕಾಲ್ಗೆಜ್ಜೆ ಲೋಪವಾಗಿದೆ, ಅಷ್ಟೆ. ಕಂದಗಳನ್ನು ಚೆನ್ನಾಗಿ ಬರೆಯಬೇಕೆಂದು ಬಯಸುವವರಿಗೆ ಡಿ.ವಿ.ಜಿ.ಯವರ ಶೃಂಗಾರಮಂಗಳಂ ಮತ್ತು ಶ್ರೀಕೃಷ್ಣಪರೀಕ್ಷಣಮ್ ಗ್ರಂಥಗಳೂ ಬಸವಪ್ಪಶಾಸ್ತ್ರಿಗಳ ದಮಯಂತೀಸ್ವಯಂವರಕಾವ್ಯವೂ ಜನ್ನನ ಯಶೋಧರಚರಿತೆಯೂ ತುಂಬ ಒಳ್ಳೆಯ ಮಾರ್ಗದರ್ಶಿಗಳು.ಈ ಎಲ್ಲ ಕೃತಿಗಳೂ ಸದ್ಯಕ್ಕೆ ಅಂಗಡಿಗಳಲ್ಲಿ ಸಿಗುವಂತಿವೆ. ಇಲ್ಲವಾದವರಿಗೆ ನನ್ನಿಂದ ನೆರವು ದೊರಕಬಹುದು:-)

  • ಗಣೇಶರೇ ಧನ್ಯವಾದ.

   ಯಶೋಧರಚರಿತೆಯ ಭಾಗಶಃ e-ಪ್ರತಿ ನನ್ನ ಬಳಿಯಿತ್ತು, ಕೆಲ ತಿಂಗಳ ಹಿಂದೆ ನನ್ನ ಕಂಪ್ಯೂಟರ್ ಕ್ರಾಶ್ ಆಗಿ ಎಲ್ಲಾ ಹೋಯಿತು. ಯಾರಬಳಿಯಾದರೂ e-ಪ್ರತಿಯಿದೆಯೇ?

 8. ಉತ್ತರನ ಪೌರುಷದ ಬಗ್ಗೆ:

  ಚಲುವಂಗನೆಯರ ಲೋಲಂ
  ಪ್ರಲಪಲ್ ಪೊಲ್ಲದ ತಳೆರ್ದುನವಿರಂ ಶೌರ್ಯಂ
  ಥಳಿಸಲ್ ಬಿರುದರ್ ಹುಯ್ಯಲ-
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

  ಹುಯ್ಯಲಫಲಮಂ – ಯುಧ್ಧದ ಫಲ
  ಬಿರುದರ್ – ಬಿರುದಿನ ವೀರರು
  ಪ್ರಲಪಲ್ – ಪ್ರಲಾಪಿಸೆ

 9. ಮಿಲನಂಗೈದೊಡೆ ನೆಂಟರ
  ಫಲಮಾವೊಂದಂ ಸಮರ್ಪಿಪುದದುವೆ ಶಾಸ್ತ್ರಂ|
  ಕೆಲಗುಣಿಪುದಂತಿರಲಮ್ಲ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

  ಇದು discarded. ಮೂರನೆಯ ಪಾದಾಂತ್ಯದ ’ರಲಮ್ಲ’ದಲ್ಲಿ ೨ ದೋಷಗಳಿವೆ – ಜಗಣ ಹಾಗೂ ಅರಿಸಮಾಸ. ಮರಳಿ ಯತ್ನವ ಮಾಡು…..

  (ಅಮ್ಲಫಲ = ಹುಣಸೆಹಣ್ಣು)

  • ಸವರಿದ್ದೇನೆ

   ಮಿಲನಂಗೈದೊಡೆ ನೆಂಟರ
   ಫಲಮಾವೊಂದಂ ಸಮರ್ಪಿಪುದದುವೆ ಶಾಸ್ತ್ರಂ|
   ಸಲುವುದೆನುತಲಿತ್ತಮ್ಲದ
   ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

   • This verse is perfect in all the respects of language and metre. the word amla can be made aamla, that’s all. I a m very happy that the classical diction and idiom are now well established in your versification.

 10. ಇನ್ನೊಂದು ಪ್ರಯತ್ನ ::

  ಫಲದೊಳಗರಸಂ ಯಾರುಂ
  ಹಲಸೋ ಮಾವೋ ಇದೇನಹ ಸೊಗದ ಯುದ್ಧಂ |
  ಬಲಮಿರೆ ಗಾತ್ರದಿ ಹಲಸಿನ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್ ||

  • ಗಣೇಶರ ಸಲಹೆಯ ಮೇರೆಗೆ ಬದಲಿಸಿದ ಪದ್ಯ ::
   ಫಲದೊಳಗರಸಂ ಯಾರೈ
   ಹಲಸೋ ಮಾವೋ ಇದೇನಹ ಸೊಗದ ಯುದ್ಧಂ |
   ಬಲಮಿರೆ ಗಾತ್ರದಿ ಹಲಸಿನ
   ಫಲಮಂ ತಿನಲಪ್ಪುದೇಂ ರಸಾಲಫಲದವೊಲ್ ||

 11. ಪ್ರವಾಗಿಲ್ಲ, ಪರಿಹಾರಗಳು ಹಳಗನ್ನಡದ ಹತ್ತಿರಕ್ಕೆ ಬರತ್ತಿವೆ:-)
  ರಾಮಚಂದ್ರರ ಪರಿಹಾರದಲ್ಲಿಯ ಮೊದಲ್ ಸಾಲಿನ “ಯಾರಂ” ಎನ್ನುವುದನ್ನು “ಯಾರಯ್” ಎಂದು ಸವರಿಸಿದಲ್ಲಿ ಪದ್ಯಬಂಧವು ಇನ್ನಷ್ಟು ಸೊಗಸಾದ ಹಲಗನ್ನಡವಾಗುತ್ತದೆ.
  ಸೋಮರ ಪದ್ಯದ ಎರಡನೆಯ ಸಾಲಿನ ಪದಪ್ರಯೋಗದಲ್ಲಿ ಅರ್ಥಸ್ಪಷ್ಟತೆ ನನಗೆ ತಿಳಿಯಲಿಲ್ಲ.
  ಪಳಗನ್ನಡದೊಳ್ ಕಂದಂ
  ತೊಳಗುವ ಪರಿಯನ್ನದೆಂತು ಬಣ್ಣಿಸಲಕ್ಕುಂ?
  ಬೆಳಗಿರಲಪ್ಪಟತುಪ್ಪದೊ-
  ಳಳವರಿತನ್ನಂ, ವನಸ್ಪತಿಯಿನೇನಕ್ಕುಂ!!

  • ಗಣೇಶ್ ಸಾರ್,

   >>ಸೋಮರ ಪದ್ಯದ ಎರಡನೆಯ ಸಾಲಿನ ಪದಪ್ರಯೋಗದಲ್ಲಿ ಅರ್ಥಸ್ಪಷ್ಟತೆ ನನಗೆ ತಿಳಿಯಲಿಲ್ಲ
   “ಪ್ರಲಪಲ್ ಪೊಲ್ಲದ ತಳೆರ್ದುನವಿರಂ ಶೌರ್ಯಂ”
   ಸಲ್ಲದ ಶೌರ್ಯವನ್ನು ರೋಮಾಂಚನದಿಂದ ಪ್ರಲಾಪಿಸಲು (ಚಲುವಂಗನೆಯರೊಡನೆ)
   ಅಥವಾ ಸಲ್ಲದ ರೋಮಾಂಚನದಿಂದ ಸಲ್ಲದ ಶೌರ್ಯವನ್ನು ಪ್ರಲಾಪಿಸಲು

   ಈ ಕೆಳಗಿನ ಪದಗಳ ಅರ್ಥಗಳು ಸರಿಯಾಗಿವೆಯೇ?
   ಪೋಲ್ಲದ – ಸಲ್ಲದ
   ತಳೆರ್ದುನವಿರಂ – ರೋಮಾಂಚನ ತಳೆದು

  • ಕಂದ ಪದ್ಯಗಳ ಬಗ್ಗೆ ಒಂದು ವಿಚಾರ ಗಮನಿಸಿದೆ. ಎರಡನೆಯ ಹಾಗು ನಾಲ್ಕನೆಯ ಸಾಲುಗಳಲ್ಲಿ ಕೊನೆಯ ಗಣವನ್ನು ಹಳೆಗನ್ನಡದ ಶೈಲಿಯಲ್ಲಿ (ಂ, ಐ, ಳ್ ಗಳನಳವಡಿಸಿ) ಬರೆದರೆ ಮತ್ತು ಜಗಣ / ಸರ್ವಲಘು ಬರುವ ಗಣವೊಂದನ್ನು ಗಮನಿಸಿಕೊಂಡರೆ, ಅಷ್ಟು ಕಷ್ಟವೆನಿಸದೆ ಬರೆಯಬಹುದೆನಿಸುತ್ತದೆ.

   ಅಂದಂ ಸುಖಮಂ ಬಹುಳಂ
   ಕಂದಂ ತರ್ಪುದುಮದೆಂದು ನಿಚ್ಚಂ ಕವಿಗಂ
   ಬಂಧಂ ಮಮತೆಯ ಪಗ್ಗಂ
   ತಂದುಂ ಬಿಗಿಯಲ್ ಜನನದ ನೋವದು ತುಚ್ಚಂ

   • ರಾಮಚಂದ್ರರೇ ಚೆನ್ನಾಗಿದೆ.

    ಹೀಗೇ ಹೊಳೆದದ್ದು ಇಲ್ಲೊಂದು; ಇದು ಸಮಸ್ಯಾಪೂರಣವಲ್ಲ, ನಿಮ್ಮನ್ನು ನೋಡಿ ನಾನೂ ನಾಲ್ಕು ಸಾಲು ಗೀಚಬೇಕೆನಿಸಿತು, ಅದು ಇದು:

    ಕಂದಂ ಚಂದದ ಬಂಧಂ
    ಕಂದರ್ಪನ ಕಣೆಮಲರೊಸರುವ ಮಕರಂದಂ
    ಅಂದದ ಕಿರುಗಾಲೋಟದ
    ಛಂದಂ ಕಂದಮ್ಮ ಕಾಲಲೊದೆಯುವ ಚಂದಂ

    • ಮಂಜುನಾಥರೆ,
     ಪದ್ಯ ಚೆಲುವಾಗಿದೆ. ಆದರೆ ಎರಡನೆಯ ಸಾಲಿನಲ್ಲಿ ಯತಿಭಂಗವಾಗಿದೆ. ಮುಖ್ಯವಾಗಿ ಈಸಾಲಿನ ಮೂರನೆಯ ಗಣದಲ್ಲಿ ಸರ್ವಲಘು ಗಣ ಬಂದಾಗ ಯತಿಯು ಆಗಣದ ಮೊದಲ ಮಾತ್ರಾಕ್ಷರದ ಬಳಿಕ ಬರಬೇಕಾದುದು ಕಡ್ದಾಯವಷ್ಟೆ. ಜೊತೆಗೆ ಈ ಯೆಡೆಯಲ್ಲಿ ತಿಂಬ ಲಘುಗಳು ಬಂದರೆ ಪದ್ಯಬಂಧದ ನಡೆಗೆಡುತ್ತದೆ. ನಿಮ್ಮ ಪದ್ಯಕ್ಕೊಂದು ಬೋನಸ್ ಕಂದ:
     ಕಂದಂ ಕನ್ನಡನುಡಿಗಾ-
     ನಂದಂ ಕಬ್ಬಿಗರ ಕಾಡಿಗಿದು ಮಾಕಂದಂ
     ಕಂದಂ ಕೃತಿರಂಭೆಗೆ ಜೇ-
     ನಂದಂ ಚಂಪುವಿನ ವೃತ್ತದ ರಸಾಯನಕಂ
     ರಂಭೆ=ಬಾಳೆಗಿಡ, ಜೇನಿನ ಅಂದ=ಜೇನಂದ, ಚಂಪೂಕಾವ್ಯಗಳ ವೃತ್ತಗಳೆಂಬ ರಸಾಯನಕ್ಕೆ ಕಂದವು ಜೇನೆಂಬ ಕಲ್ಪನೆಯಿಲ್ಲಿದೆ,

     • ವಾಹ್ ವಾಹ್… ಕಂದಂ ಮಾಕಂದಂ ಜೇನಂದಂ ಸೊಗಸಾದ ಅನುರಣನ, ಮಾತು ಅರ್ಥಗಳ ರಸಾಯನ.

      ನಿಮ್ಮ ಸಲಹೆಯಂತೆ ನನ್ನ ಕಂದನನ್ನು ತುಸು ತಿದ್ದಿದ್ದೇನೆ ನೋಡಿ:

      ಕಂದಂ ಚಂದದ ಬಂಧಂ
      ಕಂದರ್ಪನ ಕಣೆಯ ಮಲರ ಸವಿ ಮಕರಂದಂ
      ಅಂದದ ಕಿರುಗಾಲೋಟದ
      ಛಂದಂ ಕಂದಮ್ಮ ಕಾಲಲೊದೆಯುವ ಚಂದಂ

      ಆದರೆ ಒಂದು ಪ್ರಶ್ನೆ. ಕನ್ನಡದಲ್ಲಿ ಯತಿನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲವೆಂಬ ನುಡಿಯಿದೆ ನಿಜವೇ? ಕೇಶಿರಾಜನು ಹೀಗೆಲ್ಲೋ ಹೇಳಿದ್ದಾನೆಂದು ಎಲ್ಲೋ ಓದಿದ ನೆನಪು. ಕವಿರಾಜಮಾರ್ಗದಲ್ಲೇನೋ ಈ ಕೆಳಗಿನ ಮಾತು ಬರುತ್ತದೆ:

      ದೋಸಮನೆ ಗುಣದವೋಲು
      ದ್ಭಾಸಿಸಿ ಕನ್ನಡದೊಳೊಲ್ದು ಪೂರ್ವಾಚಾರ್ಯರ್
      ದೇಸಿಯನೆ ನಿಱಿಸಿ ಖಂಡ-
      ಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್

      ಆದರೆ ಮುಂದುವರೆಯುವ ಕವಿರಾಜಮಾರ್ಗಕಾರ “ಆದಾಗ್ಯೂ *ಆದಷ್ಟೂ* ಆರ್ಯೆಯಲ್ಲೂ ಕಂದದಲ್ಲೂ ಆದಿಯಲ್ಲಿ ಯತಿಯನ್ನು ಹೇಳಬೇಕು” ಎನ್ನುತ್ತಾನೆ.

      ಕೊನೆಗೂ ನನ್ನ ಪ್ರಶ್ನೆಯಂತೂ ಉಳಿಯುತ್ತದೆ: ಕನ್ನಡದಲ್ಲಿ ಯತಿನಿಯಮವನ್ನು ಪಾಲಿಸಬೇಕೇ? ಪಾಲಿಸಬಹುದೇ? ಬಾರದೇ?

 12. ಪ್ರಿಯ ಸೋಮ, ನಿಮ್ಮ ಪದ್ಯದ ದ್ವಿತೀಯಪದದಲ್ಲಿ ಅನ್ವಯಕ್ಲೇಶವಿದೆ ಹಾಗೂ ಶೌರ್ಯಂ ಎನ್ನುವ ಪದವನ್ನು ದ್ವಿತೀಯವಿಭಕ್ತಿಯಲ್ಲಿ(ಶೌರ್ಯಮಂ) ಎಂದು ಪಲ್ಲಟ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಮತ್ತೆ ಅರ್ಥಕ್ಲೇಶ ಬರುತ್ತದೆ. ನಿಜವೇ, ಕನ್ನಡದಲ್ಲಿ ವಿಭಕ್ತಿಪಲ್ಲಟದ ಸೌಕರ್ಯವಿದೆ. ಆದರೆ ಅದು ಅನ್ವಯಕ್ಲೇಶದೊಡನೆ ತಳುಕುಹಾಕಿಕೊಂಡಾಗ ಕಷ್ಟವಾಗುತ್ತದೆ. ಹೀಗಾಗಿ ನನ್ನ ಪ್ರತಿಕ್ರಿಯೆ ಹಾಗಿತ್ತು:-) ಜೊತೆಗೆ ಪ್ರಲಪಲ್ ಎನ್ನುವುದು ವ್ಯಾಕರಣವೊಪ್ಪದ ರೂಪ. ಪ್ರಲಪಿಸೆ ಎಂದು ಸವರಿಸಿದರೆ ಸರಿಯಾಗುತ್ತದೆ. ಒಟ್ತಿನಲ್ಲಿ ಆ ಸಾಲನ್ನು ಹೀಗೆ ರೂಪಿಸಬಹುದು:
  ಪ್ರಳಪಿಸೆ ನವಿರೇಳ್ವವೊಲ್ ನಿಜಬಳಮಂ (ಹಳಗನ್ನಡದ ಗಾಢತೆಗಾಗಿ ಳ ಕಾರಗಳನ್ನು ಬಳಸಿದ್ದೇನೆ. ಜೊತೆಗೆ ಳ ಕಾರಪ್ರಾಸವೂ ಬೇಕಿದೆಯಲ್ಲ! ಲಕಾರವನ್ನೂ ಇಟ್ಟುಕೊಳ್ಳಬಹುದು)
  ರಾಮ್, ನಿಮ್ಮ ಸೂಕ್ಷ್ಮದೃಷ್ಟಿಯ ಪರಿಶೀಲನೆ ಚೆನ್ನಾಗಿದೆ. ದಿಟವೇ, ಕಂದದ ರಚನೆಗೆ ಇಂಥ tit-bits ಬೇಕು.
  ಮಂಜುನಾಥರೆ,
  ನನ್ನ ಬಳಿ ಯಶೋಧರಚರಿತೆಯ ಹಾಗೂ ದಮಯಂತೀಸ್ವಯಂವರದ ಮುದ್ರಿತಪ್ರತಿಗಳಿವೆ. ತಂತ್ರಾಶೀಯಪ್ರತಿಯಿಲ್ಲ.
  ಬೇಕಾದರೆ ಎರವಲಿತ್ತೇನು.

  • ಗಣೇಶ್ ಸರ್,

   ವಿಭಕ್ತಿ ಪಲ್ಲಟ ಮತ್ತು ಅನ್ವಯಕ್ಲೇಶಗಳ ಬಗ್ಗೆ ತಿಳಿಯಿತು, ಗಮನದಲ್ಲಿಟ್ಟು ಬರೆಯುತ್ತೇನೆ 🙂

   ಕನ್ನಡದಲ್ಲಿ ಉತ್ತಮ ನಿಘಂಟು ಯಾವುದು ತಿಳಿಸಿಕೊಡಿ

   • ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡನಿಘಂಟು ಸಾಕಾಗುತ್ತದೆ.
    ಜೊತೆಗೆ ಪಿ.ವಿ.ನಾರಾಯಣ ಅವರ ಹಳಗನ್ನಡ ನಿಘಂಟುವೂ ನೆರವಾಗುವುದು.

  • ಗಣೇಶರೇ ಧನ್ಯವಾದ. ಆ ಕಡೆ ಬಂದಾಗ ತಮ್ಮಿಂದ ಪಡೆಯುತ್ತೇನೆ.

   ಆಧುನಿಕತೆಯ ವ್ಯಸನ, ಸ್ಥಳಾವಕಾಶದ ಕಾರ್ಪಣ್ಯದಿಂದ ಆದಷ್ಟೂ ತಂತ್ರಾಂಶೀಯ ಪ್ರತಿಗೇ ಬಾಯಿಬಿಡುವಂತಾಗಿದೆ.

 13. ಒಲಿಯುವರೇಂ ಆ ರಸಿಕರ್
  ಕಳಪೆ ಕೃತಿಗುಂ, ರಸ-ದನಿ-ಭಾವವಿರದಿರಲ್
  ಬಲಿತಿರ್ದರೇಂ, ರುಚಿಯಿರದ
  ಫಲಮಂ ತಿನಲಪ್ಪುದೇಂ ರಸಾಲ ಫಲದವೊಲ್

  • ಕಾಂಚನಾರವರೇ, ಎರಡನೆಯ ಸಾಲಿನಲ್ಲಿ “ಕಳಪೆ ಕೃತಿಗುಂ” ಎಂಬಲ್ಲಿ ಪೆ ಅಕ್ಷರಕ್ಕೆ ಗುರುವನ್ನು ತಂದಂತಿದೆ. ಆದರೆ ಕೃ ಒತ್ತಕ್ಷರವಲ್ಲ ಬದಲಿಗೆ ಕ ಕಾ ಕಿ ಕೀ ಯಂತೆಯೇ ಋ ಸ್ವರದ ಜೋಡಣೆಯಷ್ಟೇ; ಆದ್ದರಿಂದ ಅದರ ಹಿಂದಿನ ಅಕ್ಷರಕ್ಕೆ ಗುರು ಬರುವುದಿಲ್ಲ.

   ಮೂರನೆಯ ಸಾಲಿನ ಬಲಿತಿರ್ದರೇಂ ಅನ್ನುವುದನ್ನು ಬಲಿತಿರ್ದೊಡೇಂ ಎಂದರೆ ರಚನೆ ಹೆಚ್ಚು ಬಿಗಿಗೊಳ್ಳುತ್ತದೆಯೆನಿಸುತ್ತದೆ. ರಚನೆ ಹಳೆಗನ್ನಡದ್ದೇ ಇರಬೇಕೆಂದಲ್ಲ ಆದರೆ ಇಡೀ ಕಂದದುದ್ದಕ್ಕೂ ಒಂದೇ ರೀತಿಯ ಭಾಷೆಯಿದ್ದರೆ ಸೊಗಸು.

   • ಸಲಹೆಗೆ ಧನ್ಯವಾದಗಳು. ತಿದ್ದಿದ ಪದ್ಯ ಹೀಗಿದೆ ::

    ಒಲಿಯುವರೇಂ ಆ ರಸಿಕರ್
    ಕಳಪೆಯ ಕೃತಿಗುಂ, ರಸ-ದನಿ-ಭಾವವಿರದಿರಲ್ |
    ಬಲಿತಿರ್ದೊಡೇಂ, ರುಚಿಯಿರದ
    ಫಲಮಂ ತಿನಲಪ್ಪುದೇಂ ರಸಾಲ ಫಲದವೊಲ್ ||

 14. ಕಾಂಚನ ಅವರೇ,
  ನಿಮ್ಮ ಮೊದಲ(?)ಕಂದ ಮುದ್ದಾಗಿದೆ. ಹೀಗೆಂದರೆ ಪೂಜಾ-ಅಜೇಯರಿಗೆ ಬೇಸರವಾಗದಲ್ಲವೇ:-)
  ಆದರೆ ಎರಡನೆಯ ಸಾಲಿನಲ್ಲಿ ಯತಿಭಂಗವಾಗಿದೆ. ಅದನ್ನು ಹೀಗೆ ಸವರಿಸಬಹುದೇನೋ:
  ಕಳಪೆಯ ಕೃತಿಗಂ ರಸ-ಧ್ವನಿಗಳಿಲ್ಲದಿರಲ್ (ಭಾವವು ರಸವಿದ್ದಲ್ಲೆಲ್ಲ ಇರಲೇಬೇಕಾದ ಕಾರಣ ಭಾವ ಪದವಿಲ್ಲಿ ಅಭಾವವಾಗಿದೆ!)

  • ಗಣೇಶರೆ,
   ಇದು ನನ್ನ ಮೊದಲ ಕಂದವೇ ಹೌದು. ತಿದ್ದಿದ್ದಕ್ಕೆ ಧನ್ಯವಾದಗಳು. ಹೊಸ ಪದ್ಯ ಹೀಗಿದೆ ::
   ಒಲಿಯುವರೇಂ ಆ ರಸಿಕರ್
   ಕಳಪೆಯ ಕೃತಿಗಂ ರಸ-ಧ್ವನಿಗಳಿಲ್ಲದಿರಲ್ |
   ಬಲಿತಿರ್ದೊಡೇಂ, ರುಚಿಯಿರದ
   ಫಲಮಂ ತಿನಲಪ್ಪುದೇಂ ರಸಾಲ ಫಲದವೊಲ್ ||

 15. ಪ್ರಿಯ ಮಂಜುನಾಥರೆ,
  ದಿಟವೇ; ಕನ್ನಡಕ್ಕೆ ಯತಿಯಿಲ್ಲ, ಕೋಣನಿಗೆ ಮತಿಯಿಲ್ಲ ಎನ್ನುವ ಗಾದೆಯೇ ಇದೆ! ಕೇಶಿರಾಜನು ಶಬ್ದಮಣಿದರ್ಪಣದ ಕಡೆಯಲ್ಲಿ ಕನ್ನಡದ ವೈಶಿಷ್ಟ್ಯಗಳನ್ನು ಹೇಳುವಾಗ ಯತಿವಿಲಂಘನದಿಂದರಿದಲ್ತೆ ಕನ್ನಡಂ ಎಂದೂ ಹೇಳಿದ್ದಾನೆ. ಆದರೆ ಇದು ವೃತ್ತಗಳಿಗೆ ಮಾತ್ರ ಅನ್ವಿತವಾಗಿದೆಯೆಂಬುದಾನ್ನು ಮನಗಾಣಬೇಕು. ಏಕೆಂದರೆ ಯಾವುದೇ ಚಂಪೂಕವಿಯೂ ಕಂದದಲ್ಲಿ ಯತಿವಿಲಂಘನವನ್ನು ಮಾಡಿಲ್ಲ. ನನ್ನ ವೈಯಕ್ತಿಕ ಅಭಿಮತವೇನೆಂದರೆ ಕಂದ-ವೃತ್ತಷಟ್ಪದಿ-ಸಾಂಗತ್ಯ-ರಗಳೆ-ಚೌಪದಿ ಇತ್ಯಾದಿಗಳಲ್ಲಿ ಆದಿಪ್ರಾಸವನ್ನು ತೊರೆದು ಅಥವಾ ಅನುಕೂಲ ಕಂಡಂತೆ ಅಲ್ಲಲ್ಲಿ ಉಳಿಸಿಕೊಂಡರೂ ಅನುಪ್ರಾಸಗಳ ಮೂಲಕ ಶ್ರುತಿಮಾಧುರ್ಯವನ್ನು ತಂದುಕೊಂಡರೂ ತಪ್ಪಿಲ್ಲ. ಆದರೆ ಯತಿಯನ್ನು ಮಾತ್ರ ತೊರೆಯಬಾರದು. ಮುಖ್ಯವಾಗಿ ಯತಿಪ್ರಬಲಚ್ಛಂದಸ್ಸುಗಳಾದ ಶಾರ್ದೂಲವಿಕ್ರೀಡಿತ-ಮತ್ತೇಭವಿಕ್ರೀಡಿತ-ಸ್ರಗ್ಧರೆ-ಮಹಾಸ್ರಗ್ಧರೆ-ಶಾಲಿನಿ-ಮಾಲಿನಿ-ಪ್ರಹರ್ಷಿಣಿ-ಶಿಖರಿಣಿ-ಹರಿಣಿ-ಪೃಥ್ವಿ-ಮಂದಾಕ್ರಾಂತೆ ಮುಂತಾದ ವೃತ್ತಗಳಲ್ಲಿದು ಸರ್ವಥಾ
  ಅನಿವಾರ್ಯ. ಈ ಎಲ್ಲ ವೃತ್ತಗಳ ಸೊಗಸಿನ ಬಹುಭಾಗವಿರುವುದೇ ಅವುಗಳ ಯತಿಸ್ಥಾನವೈಚಿತ್ರ್ಯದಲ್ಲಿ. ಕಂದದಲ್ಲಾದರೂ ಅಷ್ಟೇ; ಈ ಪದ್ಯಬಂಧದಲ್ಲಿ ಒಮ್ಮೆಲೇ ಏಕತಾಳ ಮತ್ತು ರೂಪಕತಾಳಗಳ ಗತಿಸೌಂದರ್ಯಗಳು ಗೋಚರಸಬೇಕೆಂದರೆ, ಪದ್ಯದ ಧಾಟಿಯು ಏಕತಾನತೆಯ ನೀರಸತೆಯನ್ನು ನೀಗಿಕೊಳ್ಳಬೇಕೆಂದರೆ ಸಮಪಾದಗಳಲ್ ಮೂಉರನೆಯ ಗಣದಲ್ಲಿ ಯತಿಯಾಗಲಿ ಜಗಣವಾಗಲಿ ಅತ್ಯಂತ ಅಪೇಕ್ಷಿತ. ಈ ಬಗೆಗೆ ತಾವು ಶ್ರೀ ಸೇಡಿಯಾಪು ಅವರ ಛಂದೋಗತಿ ಗ್ರಂಥವನ್ನು ತಪ್ಪದೆ ನೋಡಿರಿ. ಅಲ್ಲಿ ಅದ್ಭುತವಾದ ವಿವೇಚನೆಯಿದೆ.

  • ಗಣೇಶರೇ, ಹೊಸ ಹೊಳಹಿಗೆ ನನ್ನಿ. ಕನ್ನಡಕ್ಕೆ ಯತಿಯಿಲ್ಲವೆಂದು ನಂಬಿ ಮತಿಗೆಟ್ಟ ಕೋಣನಂತೆ ಯತಿ ಅಂಶವನ್ನು ಗಮನಿಸುತ್ತಲೇ ಇರಲಿಲ್ಲ. ಈ ವಿಷಯವನ್ನು ನನ್ನದೊಂದು ಲೇಖನದಲ್ಲಿ ಪ್ರಸ್ತಾಪಿಸಿಯೋ ಇದ್ದೆ!

   ಈಗ ಈ ಹೊಸ ಬೆಳಕಿನಲ್ಲಿ ನನ್ನ ಎಲ್ಲಾ ಕಂದಗಳನ್ನೂ ಪುನರವಲೋಕಿಸಿದೆ. ಬಹಳಷ್ಟು ಕಡೆ ಸಮಪಾದಗಳಲ್ಲಿ ಜಗಣವನ್ನೇ ಬಳಸಿರುವುದರಿಂದ ಈ ಪ್ರಸಕ್ತಿಯಿಲ್ಲ; ಆದರೆ ಎಲ್ಲೆಲ್ಲಿ ಸರ್ವಲಘು ಬಳಸಿದ್ದೇನೋ ಅಲ್ಲೆಲ್ಲಾ ಸರ್ವಥಾ ಯತಿಯನ್ನು ಕೈಬಿಟ್ಟಿದ್ದೇನೆ! ಅವನ್ನೆಲ್ಲಾ ತಿದ್ದಿ ಹಾಕುವುದೋ ಅಥವ “ಇಲ್ಲಿ ಯತಿಯಿಲ್ಲ”ವೆಂದು ಒಂದು ಬೋರ್ಡು ಹಾಕಿ ಕೈಬಿಡುವುದೋ ಯೋಚಿಸುತ್ತಿದ್ದೇನೆ -:)

   • ಮಂಜುನಾಥರೇ,
    ಒಂದು ಜಿಜ್ಞಾಸೆ: ನೀವು ನನ್ನಿ ಎನ್ನುವ ಶಬ್ದವನ್ನು ಬಳಸುತ್ತಿದ್ದೀರಲ್ಲ, ಅದು ಕೃತಜ್ಞತೆ, ಧನ್ಯವಾದ ಎಂಬಿವೇ ಮುಂತಾದ ಅರ್ಥಗಳನ್ನು ಹೊಂದಿಲ್ಲ. ಕೇವಲ ಸತ್ಯ, ಅಕ್ಕರೆ, ಪ್ರತಿಜ್ಞೆ ಇತ್ಯಾದಿ ಅರ್ಥಗಳಿಗೆ ಮಾತ್ರ ಸೀಮಿತ. ಈ ನಿಮ್ಮ ಪ್ರಯೋಗಕ್ಕೆ ಪೂರ್ವಕವಿಪ್ರಮಾಣವುಂಟೆ? ದಯಮಾಡಿ ತಿಳಿಸಬೇಕು.

    • ಗುರುಗಳಾದ ಗಣೇಶರಿಗೆ ನಮಸ್ತೆ,

     ’ನನ್ನಿ’ ಎಂದರೆ ಧನ್ಯವಾದಗಳು, ಕೃತಜ್ಞತೆ ಎಂಬ ಅರ್ಥವೇ ಇದೆ ಎನ್ನುವ ರೀತಿಯಲ್ಲಿ (ಸಿದ್ಧ ಪಡಿಸುವ ರೀತಿಯಲ್ಲೂ) ಅಂತರಜಾಲದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಜಾಲಕ್ಕೆ ಬರುವ ಮೊದಲು ನಾನೂ ಸಹ ನೀವು ಹೇಳಿರುವ ಅರ್ಥಗಳನ್ನಷ್ಟೆ ತಿಳಿದುಕೊಂಡಿದ್ದೆ. ’ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು’ ಎಂಬಲ್ಲಿ ಸತ್ಯ, ಒಳ್ಳೆಯ ಮಾತು ಎಂಬೀ ಅರ್ಥಗಳಿವೆ ಎಂದು ತಿಳಿದಿದ್ದೆ. ಬಹುಷಃ ಮಂಜುನಾರಿಗೆ ಚರ್ಚೆಯ ಪೂರ್ಣಪಾಠದ ನೆನಪಿರುತ್ತದೆ. ಅವರೇ ಅದನ್ನು ವಿವರಿಸಬಲ್ಲರು :-). ದಯವಿಟ್ಟು ಈ ಸಂಶಯವನ್ನು ನೀವೇ ಪರಿಹರಿಸಿಕೊಡಿ ಎಂದು ಕೋರುತ್ತೇನೆ.

     ಪದ್ಯಪಾನದ ಕಂದಗಳ ರುಚಿ ಹತ್ತಿಸಿಕೊಳ್ಳುತ್ತಿದ್ದೇನೆ. ನಿಮ್ಮ ಮಾರ್ಗದರ್ಶನದಲ್ಲಿ ಮುಂದೆಂದಾದರೂ ಕಂದಗಳನ್ನು ರಚಿಸಲು ಯತ್ತಿಸುವ ಬಯಕೆ ಇದೆ.

     ಧನ್ಯವಾದಗಳು .

    • ಗಣೇಶರೇ, ಈಗ ಈ ಜಿಜ್ಞಾಸೆ ನನಗೂ ಹತ್ತಿತು 🙂 ನಿಜ ಹೇಳಬೇಕೆಂದರೆ ಇದುವರೆಗೂ ನಾನಿದನ್ನು ಬಳಸುತ್ತಿದ್ದುದು ಕೇವಲ ಬಳಕೆಯ ಬಲದಿಂದಷ್ಟೇ.

     ನನ್ನಿಯೆಂಬ ಪದ ಈಗಿನ ದಿನಗಳಲ್ಲಿ ಬಳಕೆಯಲ್ಲಿದ್ದಂತಿಲ್ಲ, ಸುಮ್ಮನೇ thanks ಎಂದೋ ಧನ್ಯವಾದವೆಂದೋ ಹೇಳಿಬಿಡುತ್ತೇವೆ. ನಾನೂ ನನ್ನಿಯನ್ನು ಬಳಸತೊಡಗುವ ಮುನ್ನ ಈ ಪದ ತುಸು ಹಳೆಯ ಕನ್ನಡದಲ್ಲಿ ಬಳಕೆಯಲ್ಲಿದ್ದು ಈಗ ಬಳಕೆ ತಪ್ಪಿರುವ ಪದವೆಂದು ಮಾತ್ರ ನನ್ನ ಮನದಲ್ಲಿದ್ದುದು (ನನ್ನಿಯನು ನುಡಿಯುವುದು = ಒಳ್ಳೆಯ ಮಾತಾಡುವುದು; ನನ್ನಿಯೊಳ್ ಇನತನಯಂ = ಸ್ವಾಮಿನಿಷ್ಠೆಯಲ್ಲಿ, ಅಕ್ಕರೆಯಲ್ಲಿ, ಕೃತಜ್ಞತೆಯಲ್ಲಿ ಕರ್ಣ – ಹೀಗೆ ಅರ್ಥೈಸಿ ಅಲ್ಲಿಗೆ ಸುಮ್ಮನಾಗಿದ್ದೆ).

     ಹಳೇ ಮೈಸೂರು ಕಡೆಯ ಕೆಲವು ಮನೆಗಳಲ್ಲಿ ನನ್ನಿಯನ್ನು ಕೃತಜ್ಞತೆ ಎಂಬ ಅರ್ಥದಲ್ಲೂ ಬಳಸುವುದನ್ನು ಕಂಡಿದ್ದೇನೆ (ಉದಾ: ಇಷ್ಟು ಮಾಡಿದ್ರೂ ಇವನಿಗೆ ನನ್ನಿ ಅನ್ನೋದೇ ಇಲ್ಲ ನೋಡು!)

     ಆಮೇಲಾಮೇಲೆ ಅಂತರ್ಜಾಲದಲ್ಲೂ ಅನೇಕ “ಕನ್ನಡೋತ್ಸಾಹೀ” ಮಿತ್ರರು ಬಳಸುತ್ತಿದ್ದುದನ್ನು ನೋಡಿ ಆ ಅಭ್ಯಾಸ ನನಗೂ ಹತ್ತಿತೆನ್ನಿಸುತ್ತದೆ. ಅಷ್ಟಾಗ್ಯೂ ಅದರ ಬಗ್ಗೆ ವಿಶೇಷ ಜಿಜ್ಞಾಸೆ ಇರಲಿಲ್ಲ. ಈಗ ನಿಮ್ಮ ಪ್ರಶ್ನೆಯಿಂದ ಕುತೂಹಲ ಕೆರಳಿ ಶಬ್ದಕೋಶಗಳ ಬೆನ್ನು ಹತ್ತಿದೆ:

     “ನನ್ನಿ”ಯನ್ನು ದ್ರಾವಿಡ ಮೂಲದ “ನಲ್/ನಱ್ (good, fine, excellent etc)” ಪದಗಳಡಿಯಲ್ಲಿ ಪಟ್ಟಿಮಾಡುತ್ತದೆ ಬರೋ ಮತ್ತು ಎಮನೋ ದ್ರಾವಿಡ ನಿಘಂಟು (http://dsal.uchicago.edu/cgi-bin/philologic/getobject.pl?c.1:1:1025.burrow).

     ಹಾಗೆಯೇ ಇದಕ್ಕೆ ಸತ್ಯ, ಅಕ್ಕರೆ, ಮಮತೆ ಇತ್ಯಾದಿ ಅರ್ಥಗಳನ್ನು ಪಟ್ಟಿ ಮಾಡುವ ಕಿಟೆಲ್ ಶಬ್ದಕೋಶ, ಅದಕ್ಕೆ ಸಮಾನಾರ್ಥಕವಾಗಿ ತಮಿಳಿನ ನಣ್ರಿ (ಒಳ್ಳೆಯದು) ಎಂಬುದನ್ನು ಸೂಚಿಸುತ್ತದೆ. ಮುಂದುವರೆದು ಮಲಯಾಳದಲ್ಲಿರುವ ನನ್ನಿ ಎಂಬುದೇ ಪದಕ್ಕೆ goodness, gratitude, right ಇತ್ಯಾದಿ ಅರ್ಥಗಳನ್ನು ಪಟ್ಟಿಮಾಡುತ್ತದೆ.

     ತಮಿಳಿನಲ್ಲಿ ನಣ್ರಿ (ಒಳ್ಳೆಯದು) ಎಂಬ ಪದವನ್ನು thanks ಎಂಬ ಅರ್ಥದಲ್ಲೇ ಬಳಸುತ್ತಾರಾದ್ದರಿಂದ ಕನ್ನಡದಲ್ಲೂ ನನ್ನಿಯನ್ನು ಅದೇ ಅರ್ಥದಲ್ಲಿ ಕೆಲವು ಕನ್ನಡೋತ್ಸಾಹಿಗಳು ಬಳಕೆಗೆ ತಂದಿರಬೇಕು ಎಂಬುದೀಗ ನನ್ನ ಅನಿಸಿಕೆ.

     ಇಷ್ಟಕ್ಕೂ ಈ ಪ್ರಯೋಗ ಸಾಧುವೋ ಎಂಬುದಕ್ಕೆ ಉತ್ತರ ತಮ್ಮಿಂದಲೇ ಬರಬೇಕು 🙂

     • ಪ್ರಿಯ ಮಂಜುನಾಥರೆ,
      ನನಗಾಗಿ ನೀವು ಒಂದು ಸಣ್ಣ ಪ್ರಮಾಣದ ಸಂಶೋಧನೆಯನ್ನೇ ಮಾಡಿದ್ದೀರಿ! ತುಂಬ ಸಂತೋಷ. ನಾನು ಭಾವಿಸುವಂತೆ ತಮಿಳಿನ ನನ್ರಿಯೇ ಈ ಹೊತ್ತಿನ ನನ್ನಿಯ ಅರ್ಥದ ಮೂಲವಾಗಿದೆ. ಆದರೆ ಇದಕ್ಕೆ ಕನ್ನಡದಲ್ಲಿ ಇಂಥ ಅರ್ಥವಿಲ್ಲ.
      ಹೀಗಾಗಿ ಇಂಥವನ್ನು ನಾವು ಬಳಸದೆ ಇರಬಹುದೆಂದು ನನ್ನ ಅನಿಸಿಕೆ. ಏಕೆಂದರೆ ಹಳಗನ್ನಡದಲ್ಲಿ ಕೇವಲ ಸತ್ಯಾರ್ಥದಲ್ಲಿಯೇ ಬಳಕೆಯಾಗಿರುವ ಈ ಪದಕ್ಕೆ ದಿಢೀರನೆ ಇಂಥ ಹೊಸ ಅರ್ಥವನ್ನು ಹಚ್ಚುವುದು ಅಷ್ಟಾಗಿ ಒಪ್ಪದು.
      ಇಂಥ ಉಪಕ್ರಮಗಳು ಭಾಷಾಸಂಪ್ರದಾಯವನ್ನು ಸಡಿಲಮಾಡುತ್ತವೆಂದು ಎನಿಸುತ್ತದೆ. ಇದಕ್ಕೆ ಬದಲಾಗಿ ಒಳ್ಳೆಯ ಹೊಸ ಪದವನ್ನೇ ಟಂಕಿಸಬಹುದಲ್ಲ!
      ಅಥವಾ ಈಗಿರುವ ಆಭಾರಿ, ಋಣಿ, ಧನ್ಯವಾದ, ಕೃತಜ್ಞತೆ ಮುಂತಾದ ಪದಗಳನ್ನೋ; ಪ್ರಕಾರಾಂತರವಾಗಿ ಹೇಳಬಹುದಾದಲ್ಲಿ: ನೆನಕೆ, ವಂದನೆ, ನಮನ ಇತ್ಯಾದಿಗಳನ್ನೋ ಬಳಸಬಹುದೆನಿಸುತ್ತದೆ. ಇರಲಿ, ಭಾಷೆಯ ಬಳಕೆಯಲ್ಲಿ ಆಗ್ರಹ ಕೂಡದು. ಬೇಕಾದರೆ ನನ್ನಿಕೆ, ನನ್ನಿಮೆ ಇತ್ಯಾದಿ ಕಿಂಚಿತ್ ರೂಪವ್ಯತ್ಯಾಸವಿರುವ ಪದಗಳನ್ನು ಬಳಸಿದರೂ ಆದೀತು. ಒಟ್ಟಿನಲ್ಲಿ ಕೂಡಿದಮಟ್ಟಿಗೂ ಗೊಂದಲವಾಗದಂತೆ ನೋಡಿಕೊಂಡರೆ ಸರಿ.
      ಏನೇ ಆಗಲಿ ಬೆಳೆಯುತ್ತಿರುವ ನುಡಿಯಲ್ಲಿ ಈ ಪರಿಯ ಪ್ರಯೋಗಗಳಿಗೆ ನೆಲೆ-ಬೆಲೆ ಇದ್ದೇ ಇರುತ್ತದೆ. …ಧನ್ಯವಾದಗಳು.

 16. ಮಂಜುನಾಥರೆ, ನಿಮ್ಮ ತಿದ್ದಿಕೆಗೊಂಡ ಕಂದವು ಮತ್ತಷ್ಟು ಚೆನ್ನಾಗಿದೆ.
  ಕನ್ನಡದಲ್ಲಿ ಹರಿಹರ, ಚಿಕುಪಾಧ್ಯಾಯ, ಷಡಕ್ಷರಿ, ನೇಮಿಚಂದ್ರ ಮೊದಲಾದವರೂ ಕಂದವನ್ನು ಕೊಂಡಾಡಿದ್ದಾರೆ.
  ತೆಲುಗಿನಲ್ಲಂತೂ “ಕಂದಮು ವ್ರಾಸಿನ ವಾಡೇ ಕವಿಯನಿ ಅಂದುರು” (ಕಂದವನ್ನು ಬರೆದವನೇ ಕವಿ) ಎನ್ನುವ ಮಾತಿದೆ.
  ಸಂಸೃತದ ಆರ್ಯಾ, ಆರ್ಯಾಗೀತಿ, ಉಪಗೀತಿ, ಗೀತಿ ಮುಂತಾದುವೆಲ್ಲ ಕಂದದ ಪೂರ್ವಸೂರಿಗಳೇ. ಇಲ್ಲಿಯ ಸ್ಕಂಧಕವೇ ಪ್ರಾಕೃತದ”ಖಂದಅ’” ಎಂದಾಗಿ ಇದುವೇ ಕನ್ನಡ-ತೆಲುಗುಗಳ ಕಂದವಾಯಿತೆಂಬ ಸಂಗತಿ ತಮಗೆ ತಿಳಿಯದ ವಿಚಾರವೇನಲ್ಲ.

 17. ಕ್ಷಮಿಸಬೇಕು, ಮಂಜುನಾಥರ ಹೆಸರು ತಪ್ಪಾಗಿ ಟಂಕಿತವಾಗಿದೆ. ದಯವಿಟ್ಟು ಅನ್ಯಥಾ ಭಾವಿಸಬೇಡಿರಿ

  • 🙂 ಗಮನಿಸಿದೆ. ಕೀಲಿಮಣೆ ಆಗಾಗ ಹೂಡುವ ಮುಷ್ಕರದಿಂದಾಗಿ ಇದಕ್ಕಿಂತ ಇನ್ನೂ ಎಷ್ಟೋ ಭಾರಿ ಪ್ರಮಾದಗಳನ್ನು ಮಾಡಿಬಿಟ್ಟಿದ್ದೇನೆ 😉 ಪರವಾಗಿಲ್ಲ 🙂

  • ಹೆಸರಿನಲ್ಲಿದ್ದ ತಪ್ಪನ್ನು ತಿದ್ದಲಾಗಿದೆ.

 18. ಗಣೇಶರೇ, “ಇದಕ್ಕೆ ಕನ್ನಡದಲ್ಲಿ ಇಂಥ ಅರ್ಥವಿಲ್ಲ. ಹೀಗಾಗಿ ಇಂಥವನ್ನು ನಾವು ಬಳಸದೆ ಇರಬಹುದು” ಎಂಬ ತಮ್ಮ ಅನಿಸಿಕೆ ಸಾಧುವಾಗಿದೆ, ಅದೇ ನನ್ನ ಅನಿಸಿಕೆ ಕೂಡ.

  ಪದವೊಂದು ವಿವಿಧ ಕಾಲಘಟ್ಟದಲ್ಲಿ ವಿವಿಧ ಪ್ರದೇಶಗಳಲ್ಲಿ ಹೊಸಹೊಸ ಅರ್ಥಗಳನ್ನು ಒಳಗೊಳ್ಳುತ್ತಾ, ಇದ್ದುದನ್ನು ಕಳೆದುಕೊಳ್ಳುತ್ತಾ ಹೋಗುವುದೇ ಜೀವಂತ ಆಡುನುಡಿಯ ಲಕ್ಷಣವಾದ್ದರಿಂದ ತಾವು ಹೇಳಿದಂತೆ ಬೆಳೆಯತ್ತಿರುವ ಯಾವುದೇ ನುಡಿಯಲ್ಲೂ ಈ ಪರಿಯ ಪ್ರಯೋಗಗಳಿಗೆ ನೆಲೆ-ಬೆಲೆ ಇದ್ದೇ ಇರುತ್ತದೆ. ಆದರೆ ಯಾವುದೇ ಧಿಡೀರ್ ಬೆಳವಣಿಗೆ ಭಾಷೆಯ ಸಹಜ ಹರಿವಿನಲ್ಲಿ/ಬೆಳವಣಿಗೆಯಲ್ಲಿ ವಿಕಾರವೇ ಸರಿ. ಆದ್ದರಿಂದ ನನ್ನಿಯನ್ನು ಕೂಡಿದ ಮಟ್ಟಿಗೂ ಅದರ ಮೂಲಾರ್ಥದಲ್ಲೇ ಬಳಸುವುದು ಸಧ್ಯಕ್ಕೆ ಸಾಧುವೆಂದು ನನಗೂ ಅನಿಸುತ್ತದೆ. ಮುಂದೆ ಆಡುನುಡಿಯಲ್ಲಿ ಇದಕ್ಕೆ ಕೃತಜ್ಞತೆಯೆಂಬ ಅರ್ಥವೂ ದೊರಕೊಂಡು ಅದೂ ಸಂಪ್ರದಾಯದ ಭಾಗವಾದರೆ, ಆ ಮಾತು ಬೇರೆ; ಅಲ್ಲವೇ?

 19. ಕಲಿಲಂ ತಿಳಿಯಯ್ ಋಣಕಣ
  ದೊಲವಂ, ಕಡುಕಾಲಕೂಟವ ಪೀರಿ ಬಗೆಯಿಂ
  ಬಲಿದಿರ್ಪಸಾಲವೃಕ್ಷದ
  ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

 20. ರವೀಂದ್ರರ ಪರಿಹಾರದ ಕಲ್ಪನೆಯೂ ಪದ್ಯಬಂಧದ ಹದವೂ ಸೊಗಸಾಗಿವೆ;
  ಸ್ವಲ್ಪ ಸವರಿಸುವುದಾದರೆ,
  …ಕಟುಕಾಲಕೂಟವೀಂಟುವ ಬಗೆಯಿಂ…. (ಈಂಟು= ಕುಡಿ, ಈಂಟುವ=ಕುಡಿಯುವ)

  • ಗಣೇಶರೆ, ಧನ್ಯವಾದಗಳು. ಸವರಿಕೆ ತುಂಬಾ ಚೆನ್ನಾಗಿದೆ. ಅಂತೆಯೆ ಬದಲಿಸಿದ್ದೇನೆ.
   ಕಲಿಲಂ ತಿಳಿಯಯ್ ಋಣಕಣ
   ದೊಲವಂ, ಕಟುಕಾಲಕೂಟಮೀಂಟುವ ಬಗೆಯಿಂ
   ಬಲಿದಿರ್ಪಸಾಲವೃಕ್ಷದ
   ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)