Jul 042020
 

ನೀಲಕಂಠ ಕುಲಕರ್ಣಿಯವರ ೨ ಪರಿಹಾರಗಳು:
ವ್ಯೋಮವಿಚಿತ್ರತೆಯೆನಲೀ
ನೇಮದೆ ಖಗ್ರಾಸಭಾಸ್ಕರಗ್ರಹಣಂ ತಾಂ|
ಕ್ಷೇಮದೆ ಸರಿಯಲ್ಕರರೇ
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೧

ಹೋ ಮಣ್ತಿಂದೆಯೊ ನೀನೆನು-
ತಾ ಮಾತೆ ಯಶೋದೆ ನೋಡೆ ಬಾಯೊಳ್ ಸೃಷ್ಟಿ-|
ಸ್ತೋಮಮನೆ ತೋರಿ ಯದುಕುಲ-
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೨
ತಾಯಿಗೆ ತನ್ನ ವಿಶ್ವರೂಪವನ್ನು ತೋರುತ್ತ ಯದುಕುಲಸೋಮ ತಾನು ಸೂರ್ಯನನ್ನು ಹೆತ್ತುದನ್ನು ತೋರಿದನು

ಕಾಂಚನಾರವರ ಪರಿಹಾರ:
ವಾಮವದನನಾ ಪೌರ್ಣಿಮೆ
ಸೋಮಂ, ಪ್ರಸವಿಸಿದನಲ್ತೆ ಸೂರ್ಯನೀಗಳ್!
ಭಾಮೆಯನಾಗಮನದೊಳಾ
ಕಾಮಿಯ ಚಿತ್ತದೊಳೆ ವೆಂಕೆಯಿಡುತೆ ವಿರಹದಾ||

ವೀಣಾ ಉದಯನರ ಪರಿಹಾರ-೧ – ಸ್ಯಮಂತಕಮಣಿಪ್ರಸಂಗ:
ರಾಮೆಯೊಡನೆ ಕರಿಗುಹೆಯಿಂ-
ದಾ ಮಣಿಯಂ ಪಿಡಿದುಂ ತಾಂ ಕೃಷ್ಣ ಬರಲ್ಕಾ|
ತಾಮಸಜನರಿಂತೆಂದರ್
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||

ವೀಣಾ ಉದಯನರ ಪರಿಹಾರ-೨
ನೇಮದೆ ಧ್ಯಾನದೊಳಿರಲಾ
ಕಾಮಂ ಬರೆ ಕೆಣಕೆ ತಪವ ನಿಲಿಸಲ್, ರುಷೆಯಿಂ|
ರಾಮಾ! ಧಗೆಯಾಯ್ತಯ್ಯೋ!
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್||

ಶಕುಂತಲಾ ಮೊಳೆಯಾರರ ಪರಿಹಾರ:
ತಾಮಸದಿಂದಿರೆ ನಿಜದೊಳ್,
ಸೀಮಾತೀತದೊಳೆ ದೀಪ್ತಿಯಂ ಜಗಕೀಯಲ್,|
ನೇಮದೆ ಪಡೆದವನಿಂದಂ, (ನೇಮದೆ ಪಡೆಯುತೆ ರವಿಯಿಂ)
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್।।

ಉಷಾ ಉಮೇಶರ ಪರಿಹಾರ-೧:
ಕೋಮಳಮಮಮಾ ಕಂದಂ
ಬಾಮದ ಮುಖಚಂದ್ರದಿಂದೆಸೆದ ರವಿನೇತ್ರಂ|
ಭ್ರೂಮಧ್ಯದೆಡಬಲದೆ ಕಾಣ್
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್!!
(ಬಾಮ = ಮನೋಹರ)

ಉಷಾ ಉಮೇಶರ ಪರಿಹಾರ-೨:
ಭೂಮಿಯೊಳು ಕಾಲಗಣನದ
ನೇಮಮಿದುಂ, ಹೊತ್ತು ’ತಿಂಗಳು’ ಹೆರುದು ’ದಿನ’ವಂ|
ಸಾಮಂ ಕಾಣ್ ’ಪದ’ದೊಳ್ ಗಡ
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್!!
(ತಿಂಗಳು = ಚಂದ್ರ, ದಿನ = ಸೂರ್ಯ)

  One Response to “ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್/ सुषुवे सूर्यमथो सुधांशुरारात्”

  1. ನೃಸೋಮ = a noble man; Kashyapa here, as father of Surya. So that clouds form and pour rain for agriculture, Kashyapa sired Sun in Aditi.
    ಜೀಮೂತಂ ಸೇರುತೆ ಪರಿ-
    ಣಾಮಂಗೊಳೆ ಹಲ್ಯಕೆಂತೊ ವರ್ಷಾಧಾರಂ|
    ವ್ಯೋಮದೊಳಂಗದಿತಿಯೊಳು ನೃ-
    ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)