Sep 212020
 

ವರ್ಣನೆಯ ವಸ್ತುಗಳು:

೧. ಶ್ಮಶಾನದ ನೆಲ

೨. ಮಾರುಕಟ್ಟೆಗೆ ಬಂದ ಮಲ್ಲಿಗೆಯ ಹಾರ

೩. ಬಸುರಿಯ ಬಯಕೆ


ಕಂದಪದ್ಯದ  ಸಮಸ್ಯೆ:

ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ 


ಮಂಜುಭಾಷಿಣಿಯ ಸಂಸ್ಕೃತಸಮಸ್ಯೆ

अधराहितान्नमचिरेण शक्तिकृत्

  7 Responses to “ಪದ್ಯಸಪ್ತಾಹ: ೪೧೪”

  1. ಶ್ಮಶಾನದ ನೆಲ…
    ಎನಿತಿರ್ದಪುದಯ್ ಧಾರಣೆ-
    ಯೆನುವರ್ ಚಿರಕಾಲಕೆಂದೆ ಮನೆಯಂ ಕಟ್ಟಲ್
    ತನುವಿಲ್ಲಿಯೆ ಕೊನೆಗಾಣ್ಗುಂ
    ಕನಸೊಳುಮೀ ಭೂಮಿಪಣ್ಯನಂ ಗಯ್ದಪರೇಂ

    ಸಮಸ್ಯೆ…
    ಘಟನಾವಳಿಗಳ ತೆರೆಯೊಳ್
    ಸ್ಫುಟದಿಂ ಜೀವಮನೆ ತುಂಬುತುಂ ಗೈದಪರೈ
    ನಟನದ ರಂಗದೊಳೆಂದುಂ
    ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ

    ನಾಟಕದ ಊಟಮಾಡುವ ಪ್ರಸಂಗದಲ್ಲಿ ಖಾದ್ಯವನ್ನು ತುಟಿಗೆ ಮುಟ್ಟಿದಂತಷ್ಟೇ ಮಾಡುವುದಲ್ಲವೇ

    ಬಸುರಿಯ ಬಯಕೆ…
    ಮುಸುಕಾದುದು ತಾನೆಂಬುದೆ
    ಹಸನಾದುದು ಕೂಸವೆರಸು ಬಾಳ್ತೆಯೆ ನಿಚ್ಚಂ
    ಬಸುರಿನ ಬಯಕೆಯಿದಲ್ತೇ
    ಪಸಿರೊಡೆದಪ ಬನದ ನೆಲಮೆ ಕಾರ್ಗಾಲದೊಳಂ
    (ಹೇಗೆ) ಮಳೆಗಾಲದಲ್ಲಿ ಅರಣ್ಯದ ನೆಲವು ಹೇಗೆ ಹಸಿರಿನಿಂದ ಕೂಡುವುದು (ಹಾಗೆ) ತನ್ನ ತನವು ಮಸುಕಾಗುವುದು, ಕೂಸಿನೊಡನೆಯ ಜೀವನವೇ ಬಸುರಿಯ ಬಯಕೆಯಲ್ಲಿ ಹಸನಾಗುವುದು

    ಮಾರುಕಟ್ಟೆಗೆ ಬಂದ ಮಲ್ಲಿಗೆಯ ಹಾರ…
    ಏರುವುದೆ ಚಟ್ಟಮಂ? ಪ್ರಸ್ತಮಂಚಮನಿಂದು?
    ಸಾರುವುದೆ ವೀರನಂ ಸಮ್ಮಾನಿಸಲ್?
    ಮಾರುಕಟ್ಟೆಗೆ ಬಂದ ಮಲ್ಲಿಗೆಯ ಹಾರಮಿದೊ
    ತಾರತಮ್ಯಮನುಳಿದ ಯೋಗಿಯಲ್ತೇ

  2. ಶ್ಮಶಾನದ ನೆಲ
    ಸಿಡಿಯುತ್ತಲಗ್ನಿಯು ಸುಡುತಿರೆ ಶವವನ್ನು
    ಒಡೆದಿರ್ದ ಮಡಕೆ ನೀರಾದ – ನೆಲವಿಂದು
    ಮಡಿದವರನ್ನು ಕಳಿಸಿತ್ತು

    ಬಸುರಿಯ ಬಯಕೆ
    ಉದರದೆ ನವಜೀವವನೇ
    ಕುದುರಿಸಿ ಪೋಷಿಪ್ಪ ತರುಣಿಯೆಳಸಲ್ ತಿನಿಸಂ
    ಮುದದಿಂದೊದಗಿಸಲದನುಂ
    ಸದರದೆ ಬೆಳೆಯುತ್ತೆ ಕಂದಮೊರೆಯದೆ ನಲವಂ

    ಸಮಸ್ಯೆ
    ಚಟದಿಂ ಸೇದಲಫೀಮಂ
    ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ

    ದಿಟದಿಂದೂರಿಗೆ ಬರೆ ತಾಂ
    ಸ್ಫುಟಮೈ ನೀರಿಂಗೆ ಬರ್ಪುದೆಂದುಂ ನಿಚ್ಚಂ
    ಪುಟಿಗುಂ ಚಣದೊಳ್ ಪೊಡೆಗಂ
    ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ
    [ ಊರಿಗೆ ಬಂದವರು ನೀರಿಗೆ ಬಂದ ಹಾಗೆ, ತುಟಿಗೆ ಬಂದ ಖಾದ್ಯ ಕ್ಷಣಮಾತ್ರದಲ್ಲಿ ಹೊಟ್ಟೆಯನ್ನು ಸೇರುವುದು ]

    ಅಟವಿಯೊಳೊರ್ ನರಿ ಪಸಿಯಲ್
    ದಿಟದಿಂ ನಗರಕ್ಕೆ ಬರುತೆ ಕದಿಯುತೆ ತಿನಿಸಂ
    ಸ್ಫುಟದಿಂದೊರೆಸಿರೆ ಕುರಿಯಾ
    ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ
    [ ನರಿಯೊಂದು ತಾನು ತಿಂದು ಕುರಿಯ ಬಾಯಿಗೆ ಒರೆಸಿದ ಕಥೆಯನ್ನಾಧರಿಸಿದ ಪದ್ಯ ]

    ಮಾರುಕಟ್ಟೆಗೆ ಬಂದ ಮಲ್ಲಿಗೆಯ ಹಾರ
    ತರುಣಿಯ ಶಿರವನ್ನೇರುತೆ ಬಂದುದು
    ಮೆರೆಯುತೆ ಸೌಗಂಧವ ಬೀರಿ
    ಹೊರಳುತೆ ಪುಟಿಯುತೆ ಮಾರುವ ಕಟ್ಟೆಯೊ –
    ಳಿರರಾರುಂ ತನಗೆದುರೆಂಬೋಲ್
    [ ಮನೆಯಲ್ಲಿಯೇ ಬೆಳೆದ ಮಲ್ಲಿಗೆಯನ್ನು ಪೋಣಿಸಿದ ಮಾಲೆ, ತರುಣಿಯ ಶಿರವನೇರಿ ಮಾರುಕಟ್ಟೆಗೆ ಬಿಂಕದಿಂದ ಬಂದ ಪದ್ಯ ]

  3. *
    ಮಾರುಕಟ್ಟೆಗೆ ಬಂದ ಮಲ್ಲಿಗೆಯ ಹಾರದಿಂ
    ದೂರದೂರಕೆ ಬಂದ ಗಂಧದಿಂದಂ
    ಪಾರುತುಂ ಮಧುಪಂಗಳಂತೆ ಸಾರಿರೆ ಜನರ್
    ಮಾರುವರ್ ಕೂಗದೆಯೆ ಗೆಲ್ವರಲ್ತೇ ||
    (ಮಲ್ಲಿಗೆಯ ಹಾರದಿಂದ ದೂರದೂರಕ್ಕೆ ಪರಿಮಳ ಬರುತ್ತಿರುವ ಕಾರಣ ಜನರೆಲ್ಲರೂ ನೋಡುತ್ತ/ಹಾರುತ್ತ ದುಂಬಿಗಳ ಹಾಗೆಯೇ ಬರುತ್ತಿದ್ದರೆ, ಉಳಿದ ಹೂಗಳನ್ನು ಮಾರುವವರಂತೆ ಇದನ್ನು ಮಾರುವವರು ಕೂಗುವ ಕೆಲಸವಿಲ್ಲದೇ ಗೆದ್ದುಬಿಡುತ್ತಾರಲ್ಲವೇ!)
    *
    ಬಸುರಿಯ ಬಯಕೆ-
    ಬರಿದೇ ಬಯಕೆಯಿದಲ್ಲಂ
    ಪರಿಯಿಸುಗುಂ ಬಸಿರೊಳಿರುವ ಮಗುವಿನ ಬಗೆಯಂ
    ಗಿರಿದುರ್ಗಂಗಳೊಳೆಂತುಟೊ
    ಚರಿಸುತ್ತುಂ ವೀರಸೂವೆನಿಸಿದುದೆ ಸಾಕ್ಷ್ಯಂ||
    (ಬಸುರಿಯ ಬಯಕೆ ಎಂಬುದು ಬರಿಯ ಬಯಕೆ ಮಾತ್ರವಲ್ಲ, ಬಸುರಿನಲ್ಲಿರುವ ಮಗುವಿನ ಮನಸ್ಸನ್ನೇ ತೋರಿಸುತ್ತದೆ. ಬೆಟ್ಟಗಳಲ್ಲಿ ಕೋಟೆಗಳಲ್ಲಿ ಓಡಾಡುತ್ತ (ಶಿವಾಜಿ ಮಹಾರಾಜರ ತಾಯಿ) ವೀರಸೂ(ವೀರನನ್ನು ಪ್ರಸವಿಸಿದವಳು) ಆದದ್ದೇ ಇದಕ್ಕೆ ಸಾಕ್ಷ್ಯ)
    *
    ಸಮಸ್ಯೆ-
    ಕಟುವೇ ಕಷಾಯಮೆನುತುಂ
    ಚಟುಲಂ ಮಗು ಕುಡಿಯದಿರ್ದೊಡಂ ಬೆಲ್ಲದೊಳಂ
    ದಿಟದಿಂದೌಷಧಿವೆರಸಲ್
    ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ||
    (ಕಷಾಯವು ಕಟುವಾಗಿದೆ ಎಂದು ಮಗು ಕುಡಿಯದೇ ಇದ್ದಾಗ ಬೆಲ್ಲದಲ್ಲಿ ಔಷಧವನ್ನು ಬೆರೆಸಿ ತುಟಿಗೆ ಹಚ್ಚಿದಾಗ (ಮಗು ಬೆಲ್ಲದ ಸಿಹಿಯ ಕಾರಣ ಅದನ್ನು ಆಸ್ವಾದಿಸುತ್ತದೆ) ಆ ಖಾದ್ಯವೇ ಬಲವನ್ನು ಕೊಡುತ್ತದೆ)

  4. ಸಮಸ್ಯೆ:

    ಪಟಪಟನೆ ಬಾಯ್ಗಿಡಲ್ಕೇಂ
    ತೃಟಿಯಾದೊಡೆ ಜೀರ್ಣಮಾದುದೋ, ನುರಿಸುತೆ ಮೇಣ್
    ಸ್ಫುಟವೈಶ್ವಾನರನಾ ಕೆಂ-
    ದುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಯ್ಗುಂ

    [ಸುಮ್ಮನೆ ಪಟಪಟ ತಿಂದರೆ ಜೀರ್ಣವಾಗುವುದೇ? ನುರಿಸುತ್ತ ಜಠರದ ವೈಶ್ವಾನರನ ತುಟಿಗಿಟ್ಟರೆ ಬಲ ಬರುವುದು]

    ಮಾರುಕಟ್ಟೆಯ ಮಲ್ಲಿಗೆಯ ಮಾಲೆ:

    ಮಾರೆಂದು ಮೊಳವೆಂದು ತೂರಾಡಿ ಅಳೆದಾರು
    ನಾರಿsನ ಉದ್ದsಕ್ಕೆಳಸ್ಯಾರು | ಜನರೆನ್ನ
    ಸೌರsಭದಳತೆs ತಿಳಿವsರೆ ||

    [ಮಾರು, ಮೊಳ ಅಂತ ಅಳೆಯುತ್ತಾರೆ, ಅದು ನಾರಿನ ಉದ್ದ ಆಯ್ತು. ನನ್ನ ಸೌರಭದ ಅಳತೆ ಗೊತ್ತಾ ಇವರಿಗೆ!]

    ಮಾರುsವ ಕಟ್ಟೆ ಸಂsಸಾರsದ ತೆರನಂತೆ
    ಸಾರಿsದ ಮೇಲೆs ಮತ್ತೆಲ್ಲೊ | ನಡೆವುsದು
    ಮಾರsನ ಮನೆಗೊs ಮಸಣಕ್ಕೊ ||

    [ಈ ಮಾರುಕಟ್ಟೆ ಸಂಸಾರ ಇದ್ದ ಹಾಗೆ. ಇಲ್ಲಿಗೆ ಬಂದ ಮೇಲೆ ಮುಂದೆ ಎಲ್ಲಿಗೆ? ಅಂತಃಪುರಕ್ಕೋ, ಮಸಣಕ್ಕೋ!]

    ಶ್ಮಶಾನದ ನೆಲ:

    ಬಣ್ಣಿಪ ಭವತ್ಕೃತಿಗಳೇ
    ಕಣ್ಣಾದುವು ಕೀರ್ತಿಗೆನಲು ಧಗಧಗಿಪನಲಂ,
    ತಿಣ್ಣನೆ ಮಿಕ್ಕಿದುದೆಲ್ಲಂ
    ಮಣ್ಣಾದುದೆನುತ್ತೆ ಮಸಣದಾ ನೆಲನುಲಿಗುಂ

    [ನಿನ್ನ ಕೃತಿಗಳು ಮಾತ್ರ ಕೀರ್ತಿಗಾಗುತ್ತವೆ ಅಂತ ಧಗಧಗಿಪ ಅಗ್ನಿ ನುಡಿಯೆ, ಮಿಕ್ಕಿದ್ದೆಲ್ಲ ಮಣ್ಣಾಯಿತು ಅಂತ ಅಲ್ಲಿಯ ನೆಲ ಹೇಳಿತು]

    ಪಣೆಗಣ್ಣುರಿ ಕಾವನನಂ-
    ದೊಣಗಿಸಿ ಪೋಗಿರೆ, ಶ್ಮಶಾನದೀ ನೆಲನೆಮ್ಮೊಳ್
    ಕ್ಷಣವೈರಾಗ್ಯಮನೀಯ್ಗುಂ
    ತಣಿಸಲ್ಕದನೇ ಮುಳುಂಗುವರ್ ನೀರೊಳಗಂ

    [ಅಂದು ಹಣೆಗಣ್ಣುರಿ ಆ ಕಾಮನನ್ನು ಒಣಗಿಸಿತು. ಈ ಶ್ಮಶಾನದ ನೆಲ ನಮ್ಮಲ್ಲಿ ಕ್ಷಣಕ್ಕಾದರೂ ವೈರಾಗ್ಯವನ್ನು ತರುತ್ತಿದೆ. ಅದನ್ನೂ ತಣಿಸಿಕೊಳ್ಳೋಣ ಎಂದು ನೀರಲ್ಲಿ ಮುಳುಗು ಹಾಕಿ ಬರುತ್ತಾರೆ]

  5. ಸಮಸ್ಯಾಪೂರಣ (ವಿನೋದವಾಗಿ) :

    ದಿಟಮೌ ಜಟಿಲಂ ಜಠರಂ
    ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ !
    ನಟಿ ಲಲನಾಮಣಿಗಂ ಮೃದು-
    ಕಟಿಯಂ ಪೊಂದಲೆನಲಧರವರ್ಣಂ ತರಮೌ !!

    “ಡಯಟ್”ಗೆ “ಲಿಪ್ಸ್ಟಿಕ್” ಪೂರಕ ಅಲ್ಲವೇ?!!

  6. ಹೂಣಿದರೂ ಅಷ್ಟೇ, ಸುಟ್ಟರೂ ಅಷ್ಟೇ!

    ನಂದಿಪರು ಮೊಳೆವ ಬೀಜಗಳನ್ನೆ ಸುಟ್ಟು ಹೆಣ-
    ದೊಂದಿಗಾ ರುದ್ರಭೂಮಿಯೊಳೆನಿತನೋ|
    ಒಂದಾರೆ ಪಾಸೆಯಂ ಬೆಳೆಯಬಿಡುವರೆ ನೆಲದೆ
    ಕಂದರವ ತೋಡುವರ್ ಹೆಣವನಿರಿಸಲ್||

  7. ಬರುವುದೊಂದೆಡೆಯಿಂದೆ ಹೂವುಗಳು ಮೇಣವಂ
    ಸರವಾಗಿಸುವ ದಾರವಿನ್ನೊಂದರಿಂ|
    ಬೆರೆತು ದವನವ ಪೊಳೆವ ಮಲ್ಲಿಕಾಹಾರವದು
    ಮೆರೆವುದಯ್ಯೋ ಕತ್ತಿನೊಳ್ ಮಂತ್ರಿಯ||

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)