Sep 282020
 

ವರ್ಣನೆಯ ವಸ್ತುಗಳು:

೧. ಕಾಲು ಮುರಿದ ಮಂಚ

೨. ಕವಿಗಳಿಗೂ ಕಪಿಗಳಿಗೂ ಸಂವಾದ

೩. ಸುನಾಮಿ

ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ:

ಪಸುರಾಯ್ತಯ್ ಭರದಿಂದೆ ಕೆಂಪು ಕೇಳ್

ಗತಿ:

ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)

ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು):

  7 Responses to “ಪದ್ಯಸಪ್ತಾಹ: ೪೧೫”

  1. ೧. ಕಾಲು ಮುರಿದ ಮಂಚ

    ಗುಣಬಾಹುಳ್ಯಂ ಪೆರ್ಚೆನೆ
    ಚಣಚಣಕುಂ ಬೋಧಿಸುತ್ತಲಿರ್ದಪನೊರ್ವಂ-
    ಗಣುಕಿಸಲಿತ್ತರ್ ಮುರ್ಗಾ-
    ಲೆಣಿಕೆಯ ಮಂಚಮನದೇರಿ ಬಿದ್ದಂ ನೆಲಕಂ

    ೨. ಕವಿಗಳಿಗೂ ಕಪಿಗಳಿಗೂ ಸಂವಾದ
    ಕಾವ್ಯಮನೊರೆದರ್ ಮುನ್ನಂ
    ನವ್ಯರ್ಕಳುಮೊರೆವರಲ್ತೆ ಕಬ್ಬಮನೀಗಳ್
    ಭವ್ಯಮಿವರ್ಕಳ್ ಸೇರ್ದೊಡ-
    ಮಾ ವ್ಯವಹಾರಂ ಕವಿಪ್ಲವಂಗರ ತೆರದೊಳ್

    ೩. ಸುನಾಮಿ
    ಬನಂಗಳಂ ಪೋಲ್ದಪ ಕೋಟೆಯಿಕ್ಕಿರಲ್
    ವಿನಾಶಮಂ ಪೊರ್ದಿಸಲುರ್ಮಿಛದ್ಮದಿಂ-
    ದನಾಮಧೇಯಂಗೊಳಿಸಲ್ಕೆ ಲೋಗರಂ
    ಸುನಾಮಿಯಿಂದಾರ್ದ್ರತೆಯಿಂಬೆ ತಗ್ಗಿತಯ್

    ಸುನಾಮಿಯಿಂದ ಆರ್ದ್ರತೆಯ ಭಾವವೇ ತಗ್ಗಿತು ಎನ್ನುವುದು ತಯಾತ್ಪರ್ಯ

    ಸಮಸ್ಯೆ:
    ಮುಸುಕಾಗಿರಲೇಳ್ಗೆ ನಿಚ್ಚಮುಂ
    ಪೊಸಬಂ ತಾಂ ನಲವಿಂದಲಯ್ದನಯ್
    ಜಸದಿಂ ದುಡಿಯಲ್ ಕಛೇರಿಯೊಳ್
    ಪಸುರಾಯ್ತಯ್ ಭರದಿಂದೆವಕೆಂಪು ಕೇಳ್
    When report of a company turns from red to green from an efficient new-hire

  2. ಮಂಚವು ನೆಲಕ್ಕೆ ಕಾಲೂರಿಯೂ ಇರುತ್ತದೆ, ಬೆನ್ನನ್ನು ಗೋಡೆಗೊರಗಿಸಿಕೊಂಡೂ ಇರುತ್ತದೆ. ಹಾಗಾಗಿ ಅದರ ಕಾಲು ಮುರಿದರೂ, ಬೀಳದಿರುತ್ತದೆ.
    ದಣಿದೊಡಂ ಕಾಲುಗಳು, ಮಡಚುತ್ತವುಗಳನ್ನು
    ಚಣದೊಳಗೆ ಕೂಡುವೆವು ಗೋಡೆಗೊರಗಿ|
    ಅಣಿಗೊಂಡಿಹುದು ಮಂಚವೀಯೆರಡು ರೀತಿಯಿಂ
    ತುಣುಕಾದೊಡೇಂ ಕಾಲು, ಗೋಡೆಯಿಹುದು||

  3. ಆಧುನಿಕಕವಿಯು ಪೇಳುವ ಪದ್ಯದರ್ಥವದು
    ಬೋಧವಲ್ಲವು ಸಕಲ ಜನಗಳ್ಗೆ ಕೇಳ್|
    ಬಾಧೆಯಿಲ್ಲದೆ ಭಾಷಿಸುತೆ ಕಪಿಗಳೊಳು ತಾವೆ
    ಮೇಧಾವಿ ಯಾರೆಂದು ನಿರ್ಣಯಿಸಲಿ||

  4. ಆಗಂತು ಈಗಿಂತು ತಾವಾಡುವಂಥ(ವ)ರೊಳು
    ಏಗುವರು ಜನರೆಂತು ಬಲ್ಲೆಯೇಂ ಪೇಳ್|
    ಹೇಗಿರ್ಪುದಾ ವೈಪರೀತ್ಯವೆಂಬುದ ತಿಳಿಸು
    ಹೋಗಿ ನೋಡಲಿ ಸುನಾಮಿಯ ನಾಶಮಂ||

  5. ಸಮಸ್ಯಾಪೂರಣ:
    (ಹಸುರಾದ ಕೆಂಪು)
    ಬೆಸುದಂಬರಮಿಂತು ತಂಪಗಾ-
    ನಿಸೆ ಸೀಮಂತಕೆ ಸಿಂಗರಂಗೊಳಲ್
    ನಸುಗೆಂಪನೆಮಣ್ಣು ಮಾಗಿತಾಂ
    ಪಸುರಾಯ್ತಯ್ ಭರದಿಂದೆ ಕೆಂಪು ಕೇಳ್ !!

    ( ಸೀಮಂತಕೆ ಹಸುರು ಸೀರೆಯುಟ್ಟಂತೆ ಕಂಡ ಬೆಳೆ ಬೆಳೆದ ಕೆಮ್ಮಣ್ಣ ನೆಲದ ಕಲ್ಪನೆ)

    (ಕೆಂಪಗಾದ ಹಸುರು)
    ಪೆಸರಾಂತಿರೆ ಪುಷ್ಪಪಾತ್ರದಿಂ-
    ದೆಸೆದುಂ ವರ್ಣಮದಿಂತು ಪರ್ಣದೊಳ್
    ಕುಸುಮಾಂಕಿತಮಾಗೆ ವೃಕ್ಷವುಂ
    ಪಸುರಾಯ್ತಯ್ ಭರದಿಂದೆ ಕೆಂಪು ಕಾಣ್ !!

    (ಕೆಂಪನೆ ಹೂ ಬಿಟ್ಟ ಮರದ ಕಲ್ಪನೆ)

  6. (ವಿನೋದವಾಗಿ)

    ಸುಳ್ಳಾದರುಂ ವೇದ ಗಾದೆ ಸುಳ್ಳಾಗದೌ
    ಮಳ್ಳಿ ಮಂಚಕೆ ಕಾಲದೆಷ್ಟೆಂದೆನಲ್
    ಉಳ್ಳ ನಾಲ್ಕಾಲಲೊಂದಂ ಮುರಿದವಳ್ ಮರುಳ್-
    ಗೊಳ್ಳಿಸಲ್ ಮೂರು ಮತ್ತೊಂದೆಂದಳೌ !!

    ಮಳ್ಳಿ ಮಳ್ಳಿ ಮಂಚಕೆ ಎಷ್ಟು ಕಾಲು? ಅಂದರೆ ಮೂರು ಮತ್ತೊಂದು ಅಂದಳಂತೆ !!

  7. ಕಾಲು ಮುರಿದ ಮಂಚ
    ಉಪಯೋಗವಿಲ್ಲೆಂದು ವಿಪರೀತ ಬುದ್ಧಿಯಿಂ –
    ದಪಹಾಸಗೈದು ಕಾಲೊಂದ – ಕಳೆದತ್ತು
    ತ್ರಿಪದಿಯ ನೋಡಿ ಮತಿಗೆಟ್ಟು

    ಕವಿಗಳು ಹಾಗೂ ಕಪಿಗಳ ಸಂವಾದ
    ನಿಮ್ಮ ಗೋಷ್ಠಿಗಳಲ್ಲದೇನೇನು ನಡೆದಪುದೊ
    ನಮ್ಮ ವಾಸನೆಯಿನ್ನುಮುಳಿದಿರ್ಪುದೇಂ
    ಸುಮ್ಮನಿರು ಮಾತಿಲ್ಲಿ ಛಂದದೊಳಗಿರಲೆನ –
    ಲ್ಕುಮ್ಮಳಿಸಿ ನಗೆಯಾಡಿತಾ ಕೋತಿ ತಾಂ

    ಸಮಸ್ಯಾಪೂರಣ
    ಪಸಿರ್ವುಲ್ಲಿನ ಪಾಸಿನೊಳ್ ಸದಾ
    ರಸಮಂ ಪೀರುತೆ ಚೆಲ್ಲಿರಲ್ ಕಸಂ
    ಜಸದಿಂದಲೆ ಸ್ವಚ್ಛಮಾದೊಡಂ
    ಪಸಿರಾಯ್ತೈ ಭರದಿಂದ ಕೆಂಪು ಕೇಳ್

    ಸುನಾಮಿ
    ಸಂದಿರಲ್ ತನ್ನೊಡಲ ಕಂಪನದ ಪರಿಣಾಮ
    ತಿಂದತ್ತು ಸಾಸಿರದ ಜೀವಂಗಳಂ
    ಪಿಂದಿಂದಲೊದೆಯಲ್ಕೆ ಮುಂದೆ ಪಲ್ಲುದುರಿಪುದು
    ತಂದಿರ್ಪುದೇನೀ ಪ್ರಸಂಗಂಗಳೋ

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)