Oct 052020
 

ವರ್ಣನೆಯ ವಸ್ತುಗಳು:

೧. ಹನುಮಂತನ ಬಾಲ

೨. ಪ್ರವಾಸದ ಆಯಾಸ

೩. ವಸಂತದ ವನಿತೆಯರು

ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಮುಂತಾದ ಛಂದಸ್ಸಿನ ಪಾದಾಂತ್ಯಕ್ಕೆ ಕೆಳಗಿನ ಸಾಲನ್ನು ಹೊಂದಿಸಿ ಪೂರ್ಣಮಾಡಿ:

ನಿದ್ರಾಸಮುದ್ರಂ ಶಿವಂ

  5 Responses to “ಪದ್ಯಸಪ್ತಾಹ ೪೧೬”

 1. ಹನುಮಂತನ ಬಾಲ
  ಕೆಲಸಂ ಕೈಗೊಂಡಿರಲಾಂ
  ಬಲುಹಿಂ ಬಳೆಯುತ್ತೆ ಪೋದುದಲ್ತೆ ನಿತಾಂತಂ
  ಬಲದೊಳ್ ಹನುಮನ ಬಾಲದೆ
  ಕೆಲಮುಂ ತರಮಲ್ಲದಿರ್ಕೆ ನಾಮದೆ ಸಮವೇಂ?

  ಪ್ರಯಾಣದ ಪ್ರಯಾಸ
  ಹೊರಟರೇನು ಹುರುಪಿಂದಲೆಲ್ಲ ದೇಶಾಂತರಗಳ ಯಾನ
  ಮರೆತೊಡೇನು ನಮಗೆಂದುಮಿರ್ದ ಚಿಂತೆಯನು ಶಂಕೆಗಳನು
  ಮೆರೆದೊಡೇನು ಹೊಸದೇಶದಲ್ಲಿಯರಸಿರ್ದೊಡೇನು ಸೊಗಸ
  ಮರಳುವಾಸೆ ಮನೆಸೇರುವಾಸೆ ಮನೆಯಲ್ಲೆ ಮಲಗುವಾಸೆ

  ಸಮಸ್ಯಾಪೂರಣ
  1.
  ಶಿರದೊಳ್ ಗಂಗೆಯ ಕಟ್ಟಿರಲ್ಕೆ ಮಲಗಲ್ ದಿಂಬಾಗದೇನೊದ್ದೆ ತಾಂ
  ಶರಮೆಂಬಂದದೆ ಸೋಮನಂತೆ ತಿವಿಗುಂ ನಿದ್ರಾಸನಕ್ಕೈದೊಡಂ
  ಚಿರದೊಳ್ ಚೀರಿರೆ ಭೂತಸಂಕುಲಗಳುಂ ಶಾಂತಿಪ್ರಣಾಶಂ ಗಡಾ
  ಅರರೇ! ಧ್ಯಾನದ ಸೋಗಿನಲ್ಲೆ ಕುಳಿತಂ ನಿದ್ರಾಸಮುದ್ರಂಹರಂ

  2. (ಪೂರಣದ ಪಾದ ಮಾತ್ರ)
  ಕನಲುತ್ತುಂ ಸತಿ ಕೋಪದಿಂದೆ ಕೆರಳಲ್ ನಿದ್ರಾಸಮುದ್ರಂಹರಂ

  ವಸಂತಕಾಲದ ವನಿತೆಯರು
  ಸಂತರಿಗಲ್ಲ ವಸಂತದ ವನಿತೆಯ –
  ರಂತೆಯೆ ನೈಷ್ಠಕರಿಗಲ್ಲ – ವೆಂಬುದ
  ಪಿಂತೆಯೆ ಪಾಂಡು ಮನಗೊಂಡ

 2. ಪದ್ಯ ಪೂರಣ:

  ಶರಧಿಯೊಳ್ ತೆರೆನೊರೆಯ ಭೋರ್ಗರೆತಮಿರಲದರ-
  ದರಿವಿರದೆ ನಿಶ್ಯಬ್ದಮಾಂತರದೊಳುಂ |
  ಹರನಂತು ಜೀವಜಗದೊಳ್ ನಿರತವುಂ ಧ್ಯಾನ-
  ನಿರತನುಂ ನಿದ್ರಾ ಸಮುದ್ರಂ ಶಿವಂ ||

 3. ೧.ಹನುಮಂತನ ಬಾಲ
  ಭೀಮಪರಾಕ್ರಮಕಂ ತಾ-
  ನೇ ಮಾನಂ ಸಂದುದಂದು ಕಾನನದೊಳ್ ಶ್ರೀ-
  ಧಾಮಂ ಸಾರಥಿಯಾದೊಡ-
  ನಾ ಮಾರುತಿ ಬಾಲದಿಂದೆ ಬೀಳದೆ ನಿಂತಂ
  (ಭೀಮನ ಪರಾಕ್ರಮವನ್ನು ಅಳೆಯುವುದಕ್ಕೆ ಸೌಗಂಧಿಕಾಪುಷ್ಪವನ್ನು ತರುವ ಸಂದರ್ಭದಲ್ಲಿ ಹನುಮಂತನ ಬಾಲವೇ ಪ್ರಮಾಣವಾಯ್ತು. ಆ ಬಳಿಕ ಶ್ರೀಹರಿ ಸಾರಥಿಯಾದ ರಥದಲ್ಲಿ ಆ ಬಾಲದಿಂದಲೇ ಹನುಮಂತ ಬೀಳದಂತೆ ನಿಂತುಕೊಂಡನು. )

  ವಾಲಿಯ ವಾಲಕ್ಕಂ ತಾಂ
  ಪೋಲಿಕೆಯಂತಿರ್ಪುದೆಂದು ರಾವಣನಾಗಳ್
  ಬಾಲಕೆ ಬೆಂಕೆಯನಿಕ್ಕಲ್
  ಸೋಲದೆ ಮೇಣ್ ಸುಟ್ಟಿತಲ್ತೆ ಲಂಕಾಪುರಿಯಂ
  ((ಬಾಲದಲ್ಲೇ ತನ್ನನ್ನು ಹೊತ್ತುಕೊಂಡು ಹೋಗಿದ್ದ)”ವಾಲಿಯ ಬಾಲಕ್ಕೆ ಹೋಲಿಕೆಯಿದೆ” ಎಂದು ಹೆದರಿದ ರಾವಣ ಹನುಮಂತನ ಬಾಲಕ್ಕೆ ಬೆಂಕಿಯನ್ನು ಕೊಟ್ಟ. ಅದು ಸೋಲದೇ ಲಂಕಾಪುರಿಯನ್ನೇ ಸುಟ್ಟು ಹಾಕಿತು)

  ೨. ಸಮಸ್ಯೆ-
  ವರಮಂ ಪೊಂದೆ ಮೃಕಂಡುವಂದು ಪಡೆಯಲ್ಕಲ್ಪಾಯುವಂ ಪುತ್ರನಂ
  ಚಿರದಿಂ ತಾಪಸನಾದನಲ್ತೆ ಮುನಿಮಾರ್ಕಂಡೇಯನಂತ್ಯಂ ಬರಲ್
  ಪರಮೋಗ್ರಂ ಗಡ ರುದ್ರನೆಯ್ದಿ ಜವನಂ ಮೆಟ್ಟಿರ್ದೊಡಂ ಭೀತಿಯಿಂ
  ಸ್ಮರಿಸುತ್ತಿರ್ಪನವಂಗೆ ದಲ್ ತಿಸುಳಿಯೇ ನಿದ್ರಾಸಮುದ್ರಂಹರಂ||
  (ವರವನ್ನು ಪಡೆದುಕೊಂಡ ಮೃಕಂಡು ಅಲ್ಪಾಯುವಾದ ಮಗನನ್ನು ಪಡೆದ. ಅದನ್ನು ತಿಳಿದ ಮಾರ್ಕಂಡೇಯನು ತಪಸ್ಸಿನಲ್ಲಿ ತೊಡಗಿದ. ಅವನ ಅಂತ್ಯಕಾಲ ಬಂದಾಗ ಪರಮೋಗ್ರನಾದ ರುದ್ರನು ಬಂದು ಯಮನನ್ನು ಮೆಟ್ಟಿದ್ದ. ಆ ಭೀತಿಯಿಂದ ಸ್ಮರಿಸುತ್ತಿರುವ ಯಮನಿಗೆ ಈಗಳೂ ತಿಸುಳಿ(ತ್ರಿಶೂಲಿ) ಎಂದರೆ ನಿದ್ರಾಸಮುದ್ರವನ್ನು ಅಪಹರಿಸುವವವೇ ಆಗಿದ್ದಾನೆ)

  ೩.ವಸಂತಕಾಲದ ವನಿತೆಯರು
  ಬಣ್ಣಬಣ್ಣದಾ ತುಡುಗೆಯಂ ತೊಟ್ಟುಕೊಂಡು
  ಪೆಣ್ಣಿದೋ ಮಧುವಿನೊಳ್ ಪುಷ್ಪರಾಶಿಗಳೊಳು
  ಕಣ್ಣು ಕೋರೈಸುವಂದದಿಂ ಸಾಗುತಿರಲು
  ಪಣ್ಣಿದಂ ಮಾರನಾರನೆಯ ಶರಮನೊಂಸಂ||
  (ಬಣ್ಣಬಣ್ಣದ ವಸ್ತ್ರಗಳನ್ನು ಧರಿಸಿ ಜಾಲ ವಸಂತಕಾಲದಲ್ಲಿ ಹೂವುಗಳ ರಾಶಿಯಲ್ಲಿ ಹೆಂಗಳೆಯರು ಕಣ್ಣು ಕೋರೈಸುವಂತೆ ಸಾಗುತ್ತಿರುವಾಗ (ಅವರಿಂದಲೇ) ಮನ್ಮಥನು ಆರನೆಯ ಬಾಣವೊಂದನ್ನು ರಚಿಸಿದ)

 4. ಹನುಮಂತನ ಬಾಲ :

  ಹತ್ತುತಲೆಯವನ ಬೆಂಬತ್ತಿಕಾಡುತೆ ಭೂತ
  ಹತ್ತಿ ಕುಳಿತಿರೆ ಬಾಲ ಸುತ್ತಿಸುತ್ತಿ !
  ನೆತ್ತಿಗೇರಿರೆ ಕೋಪ ಹೊತ್ತಿಸಿರಲದನಾಗ-
  ಲೆತ್ತಿ ಸುಟ್ಟಿತೆ ಲಂಕೆ ಸುತ್ತಿಸುತ್ತಿ !!

 5. ಪ್ರವಾಸದ ಆಯಾಸ
  ಕೈಕಾಲುಗಳಿಗಾದ ಆಯಾಸದಿಂದೇನು
  ಆ ಕೌತುಕಗಳಿರಲು ಯಾತ್ರೆಯೊಳ್ ಪೇಳ್|
  ಯಾಕಾರೆ ಪೋದೆನೋ ಎನಿಸುವುದು ಮರಳಿರುತ-
  ನೇಕದಾ ಕೊಳೆಬಟ್ಟೆಗಳ ನೋಡೆ ನಾಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)