Mar 302011
 
ವಿದ್ಯೆಯಾರ್ಜನೆ ಬ್ರಹ್ಮಚಾರಣೆ
ಹೃದ್ಯವಾಗಿಸುವಾನುಮೋದನೆ
ಸದ್ಯ ತಂದಿಹ ಕಂದನೋಪನಯನದ ಶುಭ ಕಾರ್ಯ ||
ಖಾದ್ಯ ಚೋದ್ಯದ ಮಿತದ ಹಿತದಿಂ
ದಧ್ಯಯನ ದಿನನಿತ್ಯ ಸಂಧ್ಯಾs
[ಅಧ್ಯವಸನವು ಮಿಡಿಯುತಲಿ ನಿನ ದೇಹ ಮನಗಳಲಿ]
ರಾಧ್ಯ ಸವಿತಾ ಪಿತೃಋಷಿಂಗಳ ವಂದನೆಯ ಪರಿಯು || ೧ ||

ನುಡಿಯು ಸತ್ಯದ ಮೇಲೆ ನಿಲ್ಲಲಿ
ಕೊಡದೆಯವಕಾಶವನಧರ್ಮಕೆ
ಕಡು ವಿವೇಕವು ಹೊಳೆಯುತಲಿ ಧೀ ಶಕ್ತಿ ಬೆಳೆಮೆಯಲಿ ||
ಬಿಡದೆ ಮನೆತನ ಸಂಪ್ರದಾಯವ
ಕಡಿಯುತಲಿ ಕಡಿದಾದ ಕಷ್ಟವ
ಮಡಗು ನೀ ಹಿರಿದಾದ ಹೆಸರನು ಮನೆಗೆ ಗುರುಕುಲಗೆ || ೨ ||

ಕಾಯು ನೀ ನಿನ ಧರ್ಮ ಕರ್ಮವ
ಬಾಯಿ ಮನಸಿನ ವಿಮಲ ಸೌಷ್ಠವ
ಪಾಯಸದ ತರ ದಕ್ಕುವುದು ಮಿಗೆ ಸುಖದ ಸಂಪದವು ||
ತಾಯಿ ತಂದೆಯು ಮತ್ತಥಿತಿಗಳ
ಕಾಯೊ ಗುರುವೂ ದೇವರೆಂ ತಿಳಿ
ಮಾಯೆಯಾ ಜಗ ತಾನೆ ಸಲ್ವದು ನಿನಗೆ ಹಿಡಿತದಲಿ || ೩ ||

ಬೆರೆಸಿ ಪಾಠದ ಜೊತೆಗೆಯಾಟಗ
ಳರಸಿ ಕಲೆಗಳ ಸೂಕ್ಷ್ಮ ಪದರವ
ಗುರುಗಳುತ್ತಮ ಪ್ರಜೆಯು ನೀನಾಗೆನ್ನ ಕಣ್ಮಣಿಯೇ ||
ಕರುಣದಿಂ ನೀ ಕಾಣು ದೀನರ
ವರುಷ ಕಳೆದಿಹ ಹಳೆಯ ಮನುಜರ
ಯೆರೆಯುತಲಿ ತಂಪೆಲರ ಜನತೆಗೆ ಸುಗುಣ ಸನ್ಮತಿಯೇ || ೪ ||

ಪುರುಷ ಶ್ರೇಷ್ಠರ ವಂಶದಲ್ಲಿನ
ಹಿರಿಯ ಪುಣ್ಯದ ಶಕ್ತಿ ಬೆನ್ನಿನ
ಲಿರಲು ಹರಿನೀ ಸ್ನಾತಕತೆಯೆಡೆ ಹಗುರ ಮನಸಿನಲಿ ||
ಹರಕೆ ಶಕ್ತಿಯಪಾರ ಬಲದಿಂ
ದುರಿಸು ನಿನ್ನಯ ಜ್ಞಾನ ದೀವಿಗೆ
ಸರಸ ಸಾರಸ್ವತದ ಸಮದಿಂದುತ್ತಮೋತ್ತಮನು || ೫ ||

– ರಾಮಚಂದ್ರ

  10 Responses to “ಉಪನಯನದ ಶುಭ ಹಾರೈಕೆ”

  1. raamachandrare.. bahala olleya padyagalu.. anda haage, yaara upanayana?:-)

    uttama prayatna. mandaresi..

  2. 🙂
    ಸದ್ಯದಲ್ಲಿ ಒಬ್ಬ ಗೆಳೆಯನ ಮಗನ ಉಪನಯನವಾಯಿತು. ಆಗ, ಒಂದಷ್ಟು ಶುಭ ಹರೈಕೆಗಳನ್ನು ಬರೆದು ಕಳಿಸಿದ್ದೆ (ಅಂಗ್ರೇಜಿಯಲ್ಲಿ). ಅದನ್ನೇ ಸ್ವಲ್ಪ ಬೆಳೆಸೋಣ ಅನ್ನಿಸ್ತು ಅಷ್ಟೆ.

  3. ಪದ್ಯ ರಚನಾ ಭಾವ ಮನದೊಳ-
    ವಧ್ಯವಾಗಿರೆ, ಮಾತು-ಧಾತುಗ
    ಳುದ್ಯಮಿಸಿ ಮಣಿಹಾರವಾಗಿವೆ ವಿಷಯ ವಕ್ತ್ರದೊಳು
    ಹೃದ್ಯವಾಗುತ್ತಿಹವು ಪ್ರಸ್ತುತ
    ವಿದ್ಯಮಾನಗಳೆಲ್ಲ ನಿಮ್ಮಯ
    ಪದ್ಯಗಳಲೊಡಮೂಡಿ, ಬರೆಯಿರಿ ರಾಮಚಂದ್ರಾಖ್ಯ.

  4. ಮೌಳಿಯವರೆ ::

    ಮೆಚ್ಚುಗೆಯ ನಿಮ್ಮೆಲ್ಲ ಪದ್ಯಗ –
    ಳಚ್ಚು ಮೆಚ್ಚಿನ ಷಟ್ಪದಿಯಲಿರೆ
    ಹೆಚ್ಚು ಬರೆಯುವ ಗೀಳು ಮನದೊಳಗಿಳಿದರದು ಸಹಜ |
    ಕಚ್ಚಿ ಹಿಡಿದಕ್ಕರವ ಬಿಡಿಸುತ
    ರಚ್ಚೆ ಹಿಡಿದಿಹ ಸಾಲ ಭರಿಸಿರೆ
    ಹಚ್ಚ ಪದ್ಯದ ಸಾರ್ಥಕತೆಗುತ್ತೇಜನದ ಮೆರಗು ||

  5. ಹೊಚ್ಚ ಹೊಸತನು ಬರೆವ ಕೆಚ್ಚಿರೆ
    ಸ್ವಚ್ಛಮನತೆರೆಯೂಹೆ ಬಣ್ಣದ
    ಅಚ್ಚುಗಳ ಮೂಡಿಸುತ ಬಿಚ್ಚುವುದಂತರಂಗವನು |
    ಹೆಚ್ಚುಹೇಳುವುದೇನು? ವಾಂಖಡೆ
    ‘ಪಿಚ್ಚು’ ಕಲ್ಪನೆಯಾಗೆ ರಸ-ಪಡಿ
    ಯಚ್ಚುಗಳು ಸಿಡಿದೇಳದಿರುವವೆ ವಿಶ್ವ-ಕಪ್ಪಿನಲಿ ||

  6. ರಾಮಚಂದ್ರ ಮತ್ತು ಕಣಾದ ರಾಘವ ಅವರ ಪದ್ಯಗಳನ್ನ ಓದಿದೆ 🙂 quality ಮತ್ತು quantity ಎರಡರಿಂದಲೂ ಉತ್ತಮವಾಗಿದೆ. ಚಂದ್ರಮೌಳಿಯವರ ಮಾರ್ಗದರ್ಶನ ಬಹಳ ಚೆನ್ನಾಗಿದೆ.

    ಒಂದು ಪದ್ಯವ ಸವೆಯುತಿರೆ ಮ-
    ತ್ತೊಂದನತಿಯುತ್ಸಾಹತೊರುತ
    ಮುಂದೆ ಹಲವಿದೆಯೆನುತ ಉಣಿಸುವ ರಾಮರಿಬ್ಬರಿಗೂ
    ಚಂದದನುಭವ ಹೊಂದಿ ಸಲಹೆಗ-
    ಳಿಂದ ಪ್ರೋತ್ಸಾಹವನು ಕೊಡುತಿಹ
    ಚಂದ್ರ ಮೌಳಿಗು ನನ್ನ ವಿನಯದ ಹೃದ್ಯ ನಮನಗಳು

  7. ಏನಪ್ಪಾ ಇದು….ಗಣೇಶ್ ಸರ್ ನೋಡ್ಲೇಬೇಕು ಇದನ್ನ….nobody would be as happier than him looking into these…will show him today…..

    ಸೋಮ ಪದ್ಯಕೆ ರಾಮ ಪದ್ಯವು
    ರಾಘವಗೆಮೌಳಿಯರ ಸಲಹೆಯು
    ಸೇರಿ ಹೆಚ್ಚಿಸೆ ಕಾವ್ಯ ಸೊಬಗನು ಸುಖಿಸೆ ಸಹೃದಯರೂ |
    ಮಾತು ಮಾತೇ ಪದ್ಯದಲ್ಲಿರೆ
    ಅನ್ಯ ಪದಗಳು ಕಾದು ನಿ೦ತಿರೆ
    ಒರೆಸಿ ಕಣ್ಣನು ನಕ್ಕು ಸುಖಿಸಿರೆ ಕಾವ್ಯ ಕನ್ನಿಕೆಯು ||

  8. ಭಾಮಿನಿಯನೇ ಹಿಡಿದು ಕಾಡುವ
    ಕಾಮುಕತೆ ಹೆಚ್ಚಾಯ್ತದೇನೋ
    ರಾಮ-ಸೋಮರೆ ಚಂದ್ರಮೌಳಿಗಳೇ ವಿವೇಚಿಸಿರಿ
    ಭಾಮಿನಿಯ ಕೈ ಹಿಡಿಯೆ ಶ್ರೀಶನೆ
    ಸ್ವಾಮಿಯೆನ್ನುವೆ ಬ್ರಹ್ಮಚಾರಿಗೆ
    ಸ್ವಾಮಿ! ನೀವೀಯುವುದು ಸೈಡನು ಬಿಟ್ಟು ಭಾಮಿನಿಯ

  9. ಕಟ್ಟಿ ಕೊಂಡಿಹ ಭಾಮಿನಿಯ ನಾವ್
    ಬಿಟ್ಟು ಬಿಡೆ ಲೋಕಾಪವಾದವ
    ದಟ್ಟಿ ಬರುವುದು ಬಿಡದೆ ಬೆನ್ನನು ಕೊನೆಯುಸಿರವರೆಗು |
    ದಟ್ಟವಾಗಿಹ ಛಂದಸಂಕುಲ
    ಸುಟ್ಟ ಮೋರೆಗಳೆಮಗೆ ಕೊಡವೇಂ ?
    ಪಟ್ಟ ಭಾ(ಕಾ)ಮಿನಿ ತೆಕ್ಕೆ ತಪ್ಪೇ ಹರ ಮಹಾದೇವ ||

  10. ಹಿಡಿದು ನಡೆಸಿ ಭಾಮಿನಿಕೈ
    ದೃಢವಿರೆ ಬಿಟ್ಟಾಗ ಬೀಳಲಾರದು(ಳು)ಸಮದಿಂ
    ನಡೆದೀ ಭಾಮಿನಿ ವಿಲಾಸ
    ಪಡೆಯಲಿ ಕಂದನ(ವ)ನು ಕೊನೆಗೆ ಪಥವ್ಯತ್ಯಯದಿಂ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)