ಚತುರ್ವಿಧ ಕಂದವೆಂದರೆ, ಒಂದೇ ಕಂದಪದ್ಯವನ್ನು ವಿವಿಧ ರೀತಿಗಳಲ್ಲಿ ವಿಭಜಿಸಿ ಅರ್ಥಭಂಗವಾಗದಂತೆ ಮತ್ತಷ್ಟು ಕಂದಪದ್ಯಗಳನ್ನು ರಚಿಸುವ ಪ್ರಕ್ರಿಯೆ.
ಇಲ್ಲಿ ಮೊದಲಪದ್ಯವೇ ಕೀಲಕ. ಮೊದಲಪದ್ಯದಲ್ಲಿ (೧), ಘನಶಾಸ್ತ್ರ ವೆಂಬ ಎರಡನೆಯ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ಎರಡನೆಯ ಕಂದಪದ್ಯವನ್ನೂ, ಸ್ಫುರಧೀ ವೆಂಬ ಮೂರನೇ ಸಾಲಿನ ಮೊದಲ ಪದದಿಂದ ಪ್ರಾರಭಿಸಿ ಮೂರನೇ ಕಂದಪದ್ಯವನ್ನೂ, ದಿನಕರ ಎಂಬ ನಾಲ್ಕನೇ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ನಾಲ್ಕನೇ ಕಂದಪದ್ಯವನ್ನೂ ಬಿಡಿಸಿ ರಚಿಸೆದೆ. ಮೊದಲ ಪದ್ಯದಲ್ಲಿನ ಪದಗಳೇ ನಾಲ್ಕೂಪದ್ಯಗಳಲ್ಲಿ ಪುನರಾವೃತ್ತಿಯಾಗದೆ, ಬೇರೆ ಪದಗಳನ್ನು ಸೇರಿಸದೆ ರಚನೆಯಾಗಿರುವುದು ವಿಶೇಷ.
ಒದ್ವೇಟಿ ವೆಂಕಟಕೃಷ್ಣಯ್ಯ ಎಂಬ ಕವಿ, ಆಗಿನ ಗದ್ವಾಲ್ ಪ್ರಭು, ಸೀತಾರಾಮ ಭೂಪಲನನ್ನು ಕುರಿತ ರಚನೆಯ ಸ್ಪೂರ್ತಿಯಿಂದ, ಮೂಡಿದೆ ಈ ಚತರ್ವಿಧ ಕಂದ. ಕಂದ ಪದ್ಯದ ವಸ್ತು ನಮ್ಮ ಗಣೇಶರೇ. ಅವರೇ ಹೇಳಿದಂತೆ ಇಂಥ ಚಿತ್ರಕವಿತ್ವ, ದೀಪಾವಳಿಯ ನಾಲ್ಕುಸುತ್ತಿನ ಪಟಾಕಿಯಾದರೂ, ಸರ್ಕಸ್ಸಿನ ಕ್ಷಣಿಕಲಾಭ ಇದ್ದದ್ದೇ.
ವರವಾಣಿ ವಿಭವ ಲಕ್ಷಣ
ಭರಿತಾ ಘನಶಾಸ್ತ್ರ ವೇದ್ಯ ವರಜನ ವಿನುತಾ
ಸ್ಫುರಧೀ ಶತಾವಧಾನೇ
ಶ್ವರಗಂ ದಿನಕರ ಸುತೇಜ ನಮನಂ ನಿನಗೈ (೧)
ಘನಶಾಸ್ತ್ರ ವೇದ್ಯ ವರಜನ
ವಿನುತಾ ಸ್ಫುರಧೀ ಶತಾವಧಾನೇಶ್ವರಗಂ
ದಿನಕರ ಸುತೇಜ ನಮನಂ
ನಿನಗೈ ವರವಾಣಿ ವಿಭವ ಲಕ್ಷಣ ಭರಿತಾ (೨)
ಸ್ಫುರಧೀ ಶತಾವಧಾನೇ
ಶ್ವರಗಂ ದಿನಕರ ಸುತೇಜ ನಮನಂ ನಿನಗೈ
ವರವಾಣಿ ವಿಭವ ಲಕ್ಷಣ
ಭರಿತಾ ಘನಶಾಸ್ತ್ರ ವೇದ್ಯ ವರಜನ ವಿನುತಾ (೩)
ದಿನಕರ ಸುತೇಜ ನಮನಂ
ನಿನಗೈ ವರವಾಣಿ ವಿಭವ ಲಕ್ಷಣ ಭರಿತಾ
ಘನಶಾಸ್ತ್ರ ವೇದ್ಯ ವರಜನ
ವಿನುತಾ ಸ್ಫುರಧೀ ಶತಾವ ಧಾನೇ ಶ್ವರಗಂ (೪)
ಜಟಿಲತರಚಿತ್ರಕವಿತಾ-
ಘಟನನಿಪುಣ! ಚಂದ್ರಮೌಳಿ! ಮಿತ್ರವರೇಣ್ಯಾ!!
ಕುಟಿಲಮೆನಿಪ ವಸ್ತುವನೀ
ವಿಕಟೋಜ್ಜ್ವಲರಮ್ಯವಿಧಿಗೆ ತಂದುದೆ ದೋಷಂ!!!!
ತಮ್ಮ ಪದ್ಯ ತುಂಬ ಸೊಗಸಾಗಿದೆ. ಆದರೆ ವಸ್ತು ಮಾತ್ರ ತೀರ ಅಸಾಧು. ಏಕೆಂದರೆ “ಗಣೇಶ” ಎನ್ನುವ ವಿನ್ಯಾಸವೇ ವಕ್ರ, ಕುಟಿಲ. ಅಲ್ಲದೆ ಈ ಜಗಣವು (ಜಗಳವೂ ಆದೀತು! ಏಕೆಂದರೆ, ಣ ಳ ಆಗುವುದು ಕನ್ನಡದಲ್ಲಿ ಸಹಜ; ಗಿಣಿ>ಗಿಳಿ, ಮೊಣಕೈ>ಮೊಳಕೈ ಇತ್ಯಾದಿ) ಕಂದಕ್ಕೆ ಅಷ್ಟು ಹಿತವೂ ಅಲ್ಲ:-). ಈ ಕಾರಣದಿಂದ ಚಂದ್ರಮೌಳಿಯವರ ಕವಿತೆಗೆ ಕಳಂಕವಾಗಿದೆಯೆಂದು ಭಾವಿಸುವೆ!
ಗಣಿಪರ್ ವಕ್ರೋಕ್ತಿಯ ರಸ
ಗಣಿಯೆನೆ,ಜಗಣದ ಗಣೇಶನಿಲ್ಲದೆ ಕಂದಂ
ಪೆಣೆಯಲ್ ಸಾಧ್ಯಮೆ? ಪೇಳಿಂ
ಗಣವಿರದೆ ಕವನವೆ? ಗುಣಿಯ ವಿನಯಕೆ ಮಣಿವೆಂ
’ಗಣೇಶ’ ಎಂಬ ಪದ ’ವಕ್ರ’ವಾದರೆ ವಕ್ರೋಕ್ತಿಯೆಂಬುದು ಕಾವ್ಯಮೀಮಾಂಸೆಯ ಪ್ರಮುಖಾಂಗ. ಇನ್ನು ’ಜಗಣ’ದೊಡನೆ ಜಗಳವಾಡದೆ ಕಂದರಚನೆ ದುಸ್ಸಾಧ್ಯ. ಗಣಗಳಿಲ್ಲದೆ (ಗಣಪತಿ) ಪದ್ಯರಚನೆಯೇ ಸೊನ್ನೆ. ಕವಿತೆಯ ಕಳಂಕವಾದರೋ, ಚಂದ್ರನ (ಪದ್ಯರಚಕನ) ಸಹಜ ಭಾ(ವ)ಗ. ಗುಣಿ-ಗುಣಗ್ರಾಹಿಯ ನಮ್ರತೆಗೆ ಪುನರ್ವಂದನೆಯೊಂದೇ ಉಳಿದಿರುವುದು.
ಗಣೇಶರೆ,
ಗಣೇಶ ಎಂಬ (ವಕ್ರ ಕುಟಿಲ?) ಶಬ್ದದಿಂದ ಸೊಗಸಾದ ಪದ್ಯಕ್ಕೆ ಕಳಂಕ ಬಂದಿದೆಯೆಂಬ ತಾಂತ್ರಿಕ ದೋಷವನ್ನು ಒಪ್ಪುವುದು ಕಷ್ಟಸಾಧ್ಯ. ಆದರೆ, ಪದ್ಯಗಳ ಭಾವದಿಂದ (ನಿಮಗೆ ಸಹಜವಾದ) [ಅತೀವ !!!] ಮುಜುಗರವಾಗಿದೆಯೆಂದರೆ ಆ ಕಾರಣಕ್ಕೆ ಕಳಂಕದ ಆಕ್ಷೇಪ ಸಾಧುವಾದೀತು. 🙂
ಆಹಾ, ಚತುರ್ವಿಧ ಕಂದದ ಈ ಸಾಧ್ಯತೆ ಹೊಳೆದೇ ಇರಲಿಲ್ಲ! ರಾಗ-ತಾಳಗಳ ಕಟ್ಟು ಸಡಿಲದಂತೆ ನೆರವಲು ಮಾಡುವ ಸಂಗೀತದ ಕ್ರಮದಂತೆ. ಚಂದ್ರಮೌಳಿಯವರ ಪ್ರಯೋಗ ಅಚ್ಚುಕಟ್ಟಾಗಿದೆ, ಹಾಗೆಯೇ ಈ ಚರ್ಚೆಯೂ ಸ್ವಾರಸ್ಯವೇ.
ಸುಮ್ಮನೇ ಹಾಗೇ ಮತ್ತೊಂದು ನಾಲ್ಕು ಸುತ್ತು ಹಾರಿಸುವ ಆಸೆಯಿಂದ ಇದು:
ನನ್ನಿಯೆ ರುಚಿಯೊಳ ತಿರುಳೈ
ಸೊಗಸಾದ ಕಂಪಿನೊಬ್ಬ
ಟ್ಟುಗಳಾ ವರ ಚಂದ್ರಮೌಳಿ ನನ್ನಿಯೊಳಿರಿಸಲ್
ಸೊಗಮೇ ವಿಚಾರಿಪುದು ಶಾ
ಸ್ತ್ರಗಳಂ ನೆರೆ ನನ್ನಿಯಲ್ತೆ ರುಚಿಯೊಳ ತಿರುಳೈ
ವರ ಚಂದ್ರಮೌಳಿ ನನ್ನಿಯೊ
ಳಿರಿಸಲ್ ಸೊಗಮೇ ವಿಚಾರಿಪುದು ಶಾಸ್ತ್ರಗಳಂ
ನೆರೆ ನನ್ನಿಯಲ್ತೆ ರುಚಿಯೊಳ
ತಿರುಳೈ ಸೊಗಸಾದ ಕಂಪಿನೊಬ್ಬಟ್ಟುಗಳಾ
ಸೊಗಮೇ ವಿಚಾರಿಪುದು ಶಾ
ಸ್ತ್ರಗಳಂ ನೆರೆ ನನ್ನಿಯಲ್ತೆ ರುಚಿಯೊಳ ತಿರುಳೈ
ಸೊಗಸಾದ ಕಂಪಿನೊಬ್ಬ
ಟ್ಟುಗಳಾ ವರ ಚಂದ್ರಮೌಳಿ ನನ್ನಿಯೊಳಿರಿಸಲ್
ನೆರೆ ನನ್ನಿಯಲ್ತೆ ರುಚಿಯೊಳ
ತಿರುಳೈ ಸೊಗಸಾದ ಕಂಪಿನೊಬ್ಬಟ್ಟುಗಳಾ
ವರ ಚಂದ್ರಮೌಳಿ ನನ್ನಿಯೊ
ಳಿರಿಸಲ್ ಸೊಗಮೇ ವಿಚಾರಿಪುದು ಶಾಸ್ತ್ರಗಳಂ
ಮತ್ತೊಂದು:
ಜಗಣಂ ದೋಷಮೆ?
ಜಗಣಂ ಗಣೇಶಗೆನಲದೆ
ಸುಗುಣಂ ದೋಷಮೆ ಮಹಾತ್ಮಗಲ್ತೆ ವಿಶೇಷಂ
ಸೊಗಮಲ್ತೆ ಕಲೆಯು ಚಂದ್ರನ
ಮೊಗದೊಳ್ ಭೂಷಣಮೆ ಈಶ ಕಂಠಕೆ ವಿಷಮುಂ
ದೋಷಮೆ ಮಹಾತ್ಮಗಲ್ತೆ ವಿ
ಶೇಷಂ ಸೊಗಮಲ್ತೆ ಕಲೆಯು ಚಂದ್ರನ ಮೊಗದೊಳ್
ಭೂಷಣಮೆ ಈಶ ಕಂಠಕೆ
ವಿಷಮುಂ ಜಗಣಂ ಗಣೇಶಗೆನಲದೆ ಸುಗುಣಂ
ಸೊಗಮಲ್ತೆ ಕಲೆಯು ಚಂದ್ರನ
ಮೊಗದೊಳ್ ಭೂಷಣಮೆ ಈಶ ಕಂಠಕೆ ವಿಷಮುಂ
ಜಗಣಂ ಗಣೇಶಗೆನಲದೆ
ಸುಗುಣಂ ದೋಷಮೆ ಮಹಾತ್ಮಗಲ್ತೆ ವಿಶೇಷಂ
ಭೂಷಣಮೆ ಈಶ ಕಂಠಕೆ
ವಿಷಮುಂ ಜಗಣಂ ಗಣೇಶಗೆನಲದೆ ಸುಗುಣಂ
ದೋಷಮೆ ಮಹಾತ್ಮಗಲ್ತೆ ವಿ
ಶೇಷಂ ಸೊಗಮಲ್ತೆ ಕಲೆಯು ಚಂದ್ರನ ಮೊಗದೊಳ್
Excellent!! Hearty congratulations Mr. Manjunath. You have perfectly grasped the intricacies and demonstrated writing chaturvidha kamda successfully.
Regret for using English as I have less choice of language selection while browsing from other computers.
Best Wishes, Mowly
ಧನ್ಯವಾದ ಚಂದ್ರಮೌಳಿಯವರೆ
ಚಂದ್ರಮೌಳಿ ನೀಳ್ದ ದಾರಿಯೊಳ್ ಸಾಗುತೀ
ಮಂಜುನಾಥರಿತ್ತ ಕಂದಪದ್ಯಂ
ಚಿತ್ರಕಾವ್ಯಲುಬ್ಧಚಿತ್ತಕಾದತ್ತು ಮೇಣ್
ಚಾತಕೋಪಕಾರಿ ಶಿಶಿರವಾರಿ
(ಚಂದ್ರ ಮತ್ತು ಮಂಜುಗಳೆರಡೂ ತಂಪುಗರೆಯುವುವಲ್ಲವೇ)
ತುಂಬ ಹಿಂದೆ, ಅಂದರೆ ಸುಮಾರು ೧೯೯೬ರ ನಡುವೆ ನನ್ನ ಅವಧಾನವೊಂದರಲ್ಲಿ ಕೀ.ಶೇ.ಲಂಕಾ ಕೃಷ್ಣಮೂರ್ತಿಯವರು ಕೇಳಿದ ಚಿತ್ರಕವಿತೆಯ ಪ್ರಶ್ನೆಗಾಗಿ ನಾನು ಆಗ ಹೇಳಿದ ಚತುರ್ವಿಧಕಂದವನ್ನು ಈ ಎರಡು ದಿನಗಳಲ್ಲಿ ಹಳೆಯ ಕಡತಗಳಿಂದ ಹುಡುಕಿ ಹೆಕ್ಕಿ ಇದೀಗ ಇಲ್ಲಿರಿಸುತ್ತಿದ್ದೇನೆ. ತಡವಾದುದಕ್ಕೆ ಕ್ಷಮೆಯಿರಲಿ. ಇದರ ವಸ್ತು ಕವಿತೆಯೇ. ಇಲ್ಲಿ ಒಂದೇ ತೆರನಾದ ಪ್ರಾಸವನ್ನಿಟ್ಟುಕೊಂಡಿದ್ದೇನೆ. ಹೀಗಾಗಿ ರಚನೆಯು ಸ್ವಲ್ಪ ಅನುಪ್ರಾಸಪ್ಲಾವಿತವಾಗುತ್ತದೆ; ಆದರೆ ಪದ್ಯಗುಂಫನವೇಳೆಯಲ್ಲಿ ಕಷ್ಟಕರವೂ ಹೌದು:-)
ಕವಿತೇ! ಕಲಂಕರಹಿತೇ!
ನವಲೇ! ಭವಲೇಶವಿಗತಶಿವತಾಧವಲೇ!
ಜವನಂ ಜಯಿಪ್ಪ ಜವದೊಳ್
ನವುರೇ ನವಿರೇಳ್ವ ನಯದ ಸವಿಯೌ! ಛವಿಯೌ!!
ಭವಲೇಶವಿಗತಶಿವತಾ-
ಧವಲೇ! ಜವನಂ ಜಯಿಪ್ಪ ಜವದೊಳ್ ನವುರೇ
ನವಿರೇಳ್ವ ನಯದ ಸವಿಯೌ!
ಛವಿಯೌ! ಕವಿತೇ! ಕಲಂಕರಹಿತೇ! ನವಲೇ!!
ಜವನಂ ಜಯಿಪ್ಪ ಜವದೊಳ್
ನವುರೇ ನವಿರೇಳ್ವ ನಯದ ಸವಿಯೌ! ಛವಿಯೌ!
ಕವಿತೇ! ಕಲಂಕರಹಿತೇ!
ನವಲೇ! ಭವಲೇಶವಿಗತಶಿವತಾಧವಲೇ!!
ನವಿರೇಳ್ವ ನಯದ ಸವಿಯೌ!
ಛವಿಯೌ! ಕವಿತೇ! ಕಲಂಕರಹಿತೇ! ನವಲೇ!
ಭವಲೇಶವಿಗತಶಿವತಾ-
ಧವಲೇ! ಜವನಂ ಜಯಿಪ್ಪ ಜವದೊಳ್ ನವುರೇ!!
ಹಿಂದಿನ ಮಿಂಚೆಯಲ್ಲಿದನ್ನು ಒಟ್ಟಾಗಿ ಕಳುಹುವ ಮುನ್ನವೇ ಅಂಗುಲ್ಯಗ್ರಪ್ರಮಾದದಿಂದ ಇವೆರಡೂ ಬೇರೆಯಾದುವು. ತೊಡಕನ್ನು ಮನ್ನಿಸಿರಿ
ಅಜ(ಬ್ರಹ್ಮ) ಮಾಡದ ಸೃಷ್ಟಿಯಿಲ್ಲ, ಅಜ (ಆಡು)ಮುಟ್ಟದ ಸೊಪ್ಪಿಲ್ಲ. ಚಿತ್ರಕಂದವನ್ನವರು ಎಂದೋ ಮಾಡಿದ್ದಾರೆಂಬುದು ತಿಳಿಯಿತು. ಇಂಥ ಚಮತ್ಕಾರಗಳಿಗೆ ಗಣೇಶರು ಸೊಪ್ಪುಹಾಕುವುದಿಲ್ಲವಾದರೂ, ಕವಿತ್ವಂ ರವಿತೇಜತೆ ವಲಂ. ರವಿತೇಜ ’ತೆವಲಂ’ . ಆ ತೆವಲೀ ಚತುರ್ವಿಧ ಕಂದಕೆ ಕಾರಣಂ ವಲಂ… ನಮಃ
ಕವಿತಾ ವಿತಾನ ವಮಲಂ
ಭವದಿಂ ದಿವವೇರ್ವ ವಿಭವ ನವ ಭಾವವಿದೈ
ಸವನಂ ಕವಿತ್ವ ಛವಿಯೊಳ್
ಭುವನಂ ಕವಿಸಿರ್ಪೆ ಗಣಪ ರವಿಯಂತೆವಲಂ
ದಿವವೇರ್ವ ವಿಭವ ನವ ಭಾ
ವವಿದೈ ಸವನಂ ಕವಿತ್ವ ಛವಿಯೊಳ್ ಭುವನಂ
ಕವಿಸಿರ್ಪೆ ಗಣಪ, ರವಿಯಂ-
ತೆ, ವಲಂ ಕವಿತಾ ವಿತಾನ ವಮಲಂ ಭವದಿಂ
ಸವನಂ ಕವಿತ್ವ ಛವಿಯೊಳ್
ಭುವನಂ ಕವಿಸಿರ್ಪೆ ಗಣಪ ರವಿಯಂತೆವಲಂ
ಕವಿತಾ ವಿತಾನ ವಮಲಂ
ಭವದಿಂ ದಿವವೇರ್ವ ವಿಭವ ನವ ಭಾವವಿದೈ
ಕವಿಸಿರ್ಪೆ ಗಣಪ ರವಿಯಂ
ತೆ, ವಲಂ ಕವಿತಾ ವಿತಾನ ವಮಲಂ ಭವದಿಂ
ದಿವವೇರ್ವ ವಿಭವ ನವ ಭಾ
ವವಿದೈ ಸವನಂ ಕವಿತ್ವ ಛವಿಯೊಳ್ ಭುವನಂ
ಅದೆಷ್ಟು ಅವಲೀಲೆಯಾಗಿ ಚತುರ್ವಿಧಕಂದಗಳನ್ನು ಮಾಡಿದ್ದೀರಿ! ಮಂಜುನಾಥರೂ ಅಷ್ಟೆ. ಮತ್ತೆ ಮತ್ತೆ ನಮೋವಾಕಗಳು.
ತುಂಬ ಹಿಂದೆ ಕಂದವನ್ನು ಪ್ರಮಿತಾಕ್ಷರವೃತ್ತದಲ್ಲಿ ಗರ್ಭಿಸಿ ಚಿತ್ರಕವಿತಾಪ್ರಕಾರದ ಬಗೆಬಗೆಯ ಕಸರತ್ತುಗಳನ್ನು ನನ್ನ ದ್ವಿಸಂಧಾನಕಾವ್ಯ ಕುಮಾರಾನಿರುದ್ಧಪರಿಣಯದಲ್ಲಿ ಮಾಡಿದ್ದೆ. ಅದು ಕನ್ನಡದ ಮೊತ್ತಮೊದಲ ದ್ವಿಸಂಧಾನಚಂಪೂಕಾವ್ಯ. (ಇನ್ನೂ ಅಪ್ರಕಟಿತ!)
ಇದು ಮೊದಲನೆಯ ಹಂತದಲ್ಲಿ ನಮ್ಮ ಗೆಳೆಯರಿಗೆಲ್ಲ ಸುಲಭವಾದೀತು ಮತ್ತು ಗರ್ಭಕವಿತೆ ಹಾಗೂ ವೃತ್ತನಿರ್ವಾಹಗಳೆರಡೂ ಸಾಕಷ್ಟು ಸುಲಭದಲ್ಲಿ ಸಿದ್ಧಿಸೀತೆಂದು ಭಾವಿಸಿ ಸರಳವಾದ ಒಂದು ಮಾದರಿಯನ್ನು ಕೊಡುತ್ತಿದ್ದೇನೆ. ಆಸಕ್ತರು ವಿಜೃಂಭಿಸಿ:-)
ಪ್ರಮಿತಾಕ್ಷರದ ಲಕ್ಷಣ: U U – U – U U U – U U –
ಇದು ಅಚ್ಚುಕಟ್ಟಾಗಿ ಕಂದಪದ್ಯದ ಕುಕ್ಷಿಯೊಳಗೆ ಸಂಪೂರ್ಣವಾಗಿ ಅಡಗುವುದಲ್ಲದೆ ಕಂದವೂ ಇದರ ಉದರದಲ್ಲಿ ಸಮಗ್ರವಾಗಿ ಅಡಗುತ್ತದೆ. ಇದು ನಿಜಕ್ಕೂ ಬಹಳ ವಿರಳಸಾಧ್ಯತೆ. ಇದನ್ನು ನಾನೇ ಮೊದಲು ಆವಿಷ್ಕರಿಸಿದ್ದೆಂದು ಭಾವಿಸುತ್ತೇನೆ. ಇರಲಿ, who is first ಎನ್ನುವುದಕ್ಕಿಂತ what is best ಎನ್ನುವುದೇ ಮುಖ್ಯ. ನನ್ನ ಆಶುಪದ್ಯವಿಂತಿದೆ:
ಪ್ರಮಿತಾಕ್ಷರೋದರದೆ ಕಂದಮುಮೀ
ಪ್ರಮಿತಾಕ್ಷರಂ ನುಸುಳೆ ಕಂದದದೊಳುಂ|
ವಿಮಲಾದಿಮೋಪನಿಷದಾದ್ಯಮಹೋ-
ತ್ತಮಮಂತ್ರದಂತೆ ಗಡ ಕಂಗೊಳಿಕುಂ||
ಸಂದರ್ಭವಿಷ್ಟೆ; ಉಪನಿಷತ್ತುಗಳ ಪೈಕಿ ಮೊದಲನೆಯದಾದ ಈಶಾವಾಸ್ಯದ ಮೊತ್ತಮೊದಲ ಮಂತ್ರ
“ಈಶಾವಾಸ್ಯಮಿದಂ ಸರ್ವಂ….” ಎನ್ನುವಲ್ಲಿ ಈಶಾವಾಸ್ಯ ಎಂಬ ಪದಕ್ಕೆ ಈಶನು ಎಲ್ಲರಿಗೂ ಆವಾಸ, ನೆಲೆ ಎಂಬ ಹಾಗೆಯೇ ಎಲ್ಲದರಲ್ಲಿಯೂ ಈಶನು ಆವಾಸಿಯಾಗಿದ್ದಾನೆ, ನೆಲಸಿದ್ದಾನೆ ಎಂಬ ಅರ್ಥವೂ ಇದೆ. ಈ ತತ್ತ್ವವೇ ಪ್ರಕೃತದ ಗರ್ಭಪದ್ಯದಲ್ಲಿ ಒಂದು ಮಾತ್ರಾಚ್ಛಂದಸ್ಸು ಹಾಗೂ ಒಂದು ವರ್ಣವೃತ್ತ ಒಟ್ಟಾಗಿ ಒಂದರೊಳಗೊಂದು ಇರುವುದಕ್ಕೆ ಅನ್ವಿತವಾಗುತ್ತದೆಂಬ ಚಮತ್ಕಾರ ಗಮನಾರ್ಹ.
ಪ್ರಮಿತಾಕ್ಷರ ಮತ್ತು ಕಂದ ಒಂದು ಪೀತಾಂಬರದಂತೆ. ಹರಿ-ಸಿರಿಗಳಿಗದು ಪಂಚೆ-ಸೀರೆ ಎರಡೂ ಆದಂತೆ. Very wise-speciality-of-Dexterity..
ಪ್ರಮಿತಾಕ್ಷರ
ವೆರಿ ವೈಸ್ಪೆಷಾಲಿಟಿಯ ಡೆಕ್ಸ್ಟಿರಿಟೀ
ಜರಿಪಂಚೆವೋಲೆ ಪ್ರಮಿತಾಕ್ಷರವೈ
ಹರಿ ಕಚ್ಚೆ ಯುಟ್ಟನದೆ ಸೀರೆರಮಾ
ಸಿರಿಗಲ್ತೆ ಕಂದ ಸೊಗಸಿಬ್ಬಗೆಗುಂ
ಕಂದ
ವೆರಿ ವೈಸ್ಪೆಷಾಲಿಟಿಯ ಡೆ-
ಕ್ಸ್ಟಿರಿಟೀ ಜರಿಪಂಚೆವೋಲೆ ಪ್ರಮಿತಾಕ್ಷರವೈ
ಹರಿ ಕಚ್ಚೆ ಯುಟ್ಟ ನದೆ ಸೀ-
ರೆ ರಮಾ ಸಿರಿಗಲ್ತೆ, ಕಂದ ಸೊಗಸಿಬ್ಬಗೆಗುಂ
ಪ್ರಮಿತಾಕ್ಷರ-ಕಂದ ಬಂಧದಲ್ಲಿ ಒಂದು ಪದ್ಯ
ಜಗದೀಶ ಗರ್ಭದೊಳಗೀ ಜಗವುಂ
ಜಗಪೆತ್ತ ಮಣ್ಣು ತರು ಪ್ರಾಣಿಕುಲಂ
ಮಿಗೆ ಮಾನವಾತಿಶಯ ಜೀವಗಣಂ
ಬಗೆಯಲ್ಕದೊಂದರೊಳಗೆಲ್ಲವುಮುಂ !
ಜಗದೀಶ ಗರ್ಭದೊಳಗೀ
ಜಗವುಂ, ಜಗಪೆತ್ತ ಮಣ್ಣು, ತರು, ಪ್ರಾಣಿಕುಲಂ
ಮಿಗೆ ಮಾನವಾತಿಶಯ ಜೀ-
ವಗಣಂ, ಬಗೆಯಲ್ಕದೊಂದರೊಳಗೆಲ್ಲವುಮುಂ!
ಪ್ರಮಿತಾಕ್ಷರ-ಕಂದ ಬಂಧ ಸೊಗಸಾಗಿ ಮೂಡಿಬಂದಿದೆ ಚಂದ್ರಮೌಳಿಯವರೇ
ಚಂದ್ರಮೌಳಿಯವರ ಮಾತು ನಿಜ. ಆಡು ಮುಟ್ಟದ ಸೊಪ್ಪಿಲ್ಲವೆಂಬುದು ಗಣೇಶರಿಗೆ ಒಪ್ಪತಕ್ಕ ಮಾತೇ ಸರಿ. ಬೀದಿಯಲ್ಲಿ ಆನೆಯೊಂದನ್ನು ಮೊದಲಬಾರಿಗೆ ನೋಡಿ ಓಡಿಬಂದು ಹೇಳುವ ಮಗುವಿನ ಸ್ಥಿತಿಯೇ ನಮ್ಮದು 🙂
ಪ್ರಮಿತಾಕ್ಷರದಲ್ಲಿ ಕಂದವನ್ನು ಹುಡುಕುವುದೇನೂ ಕಷ್ಟವಲ್ಲವೆಂದು ಬಾವಿಸಿ ಕಂದದ ಪ್ರಸ್ತಾರವನ್ನು ಪ್ರತ್ಯೇಕವಾಗಿ ಕೊಟ್ಟಿಲ್ಲ.
ಗೆಳೆಯ ಶ್ರೀಶ ಕಾರಂತರಿಗೆ ನನ್ನ ಕವಿತೆ “ಕವಿನಾವಿಕನಿಗೆ ಕಿವಿಮಾತು” ಎಂಬ ಹತ್ತಾರು ಕಂದಪದ್ಯಮಯವಾದ ರಚನೆಯನ್ನು ಕೊಟ್ಟಿದ್ದೇನೆ. ಈ ಮೂಲಕ ಕಂದದ ಗತಿಯು ಇನ್ನುಳಿದ ಗೆಳೆಯರಿಗೆ ಸುಬೋಧವಾದೀತೆಂದು ನನ್ನ ಮನೀಷೆ. ಏಕೆಂದರೆ ಒಂದು ಛಂದಸ್ಸಿನಲ್ಲಿ ಹತ್ತಾರು ಗತಿಸೌಂದರ್ಯವಿರುವ ಪದ್ಯಗಳನ್ನು ಗಳಶುದ್ಧಿಯಿಂದ, ಗತಿಗಮಕಾನುಸಾರವಾಗಿ ಓದಿಕೊಂಡರೆ ಅದರಲ್ಲಿ ಕವನಿಸುವುದು ಬಲು ಸಲೀಸಾಗುತ್ತದೆಂದು ಶಾಸ್ತ್ರೋಕ್ತಿ, ಸಹಜಯುಕ್ತಿ ಮತ್ತು ಸ್ವಾನುಭವಗಳಿಂದ ಸಿದ್ಧ. ಈ ಎಲ್ಲ ವ್ಯಾಯಾಮಗಳಿಂದ ಕವನರಚನಸವನವು (ಕವಿತಾರಚನೆಯ ಯಾಗ) ಸುಕರವಾಗಿ ಸೊಗಯಿಸದಿರದು. ಬಲ್ಲವರಿಗೆ ಪುನರುಕ್ತಿಯಾದೀತು; ಹೀಗಾಗಿ ಡೈಗ್ರೇಷನ್ನಿಗೆ ಪಾರ್ಡನ್ನಿರಲಿ:-)
ಚಂದ್ರಮೌಳಿಯವರಿಗೆ ವಂದನೆಗಳು. ನಿಮ್ಮ ಶರವೇಗದ ಪದ್ಯಗಳಿಗೆ ನನ್ನ ಸ್ಮರಣೀಯಪದ್ಯಪ್ರಸೂನ:
ಪ್ರಮಿತಾಕ್ಷರಂಗಳೆ ಭವತ್ಕ್ರಮಮಯ್
ಸಮಬುದ್ಧಿಯಿಂದೆ ನುಡಿವೊಂದೆಡೆಯೊಳ್|
ಗಮನೀಯಮಿಲ್ಲಿಯ ಕವಿತ್ವಮುಮೀ
ನಮನಾರ್ಹಸಾಧನಕಮಾರತಿಯಯ್||
ಪ್ರಮಿತಾಕ್ಷರ ಮತ್ತು ಕಂದಗಳೆರಡರಲ್ಲೂ ಹೊಂದುವಂತೆ ನನ್ನದೊಂದು ಸಣ್ಣ ಪ್ರಯತ್ನ ಶಾರದೆಯಲ್ಲಿ ಪ್ರಾರ್ಥನೆ,,,
ನುಡಿವೆಣ್ಣೆ ಶಾರದೆಯೆ ನೀ
ಬೆಡಗಿಂ ನುಡಿಯೊಳ್ ಮಹಾರತುನವರ್ಷವಗೆಯ್|
ಪಡೆಯಲ್ಕೆ ಕಾವ್ಯಫಲವಂ
ತುಡಿವೆಂ ಕೊಡು ನೀಂ ಕವಿತ್ವ ಬಲವನ್ನೊಲವಿಂ||
ಗಣೇಶ ಕೊಪ್ಪಲತೋಟರ ಪ್ರಯತ್ನ ಅಚ್ಚುಕಟ್ಟಾಗಿ ಮೂಡಿಬಂದಿದೆ
ಎರಡೇ ದಿನ ಹೊರಹೋಗಿಬರುವಷ್ಟರಲ್ಲಿ ಎಷ್ಟೊಂದು ಬಾಣ ಬಿರುಸುಗಳು ಇದೊಂದೇ ಪುಟದಲ್ಲಿ! ಚತುರ್ವಿದ ಕಂದಗಳೂ, ಪ್ರಮಿತಾಕ್ಷರ-ಕಂದದ ಪ್ರಯೋಗಗಳೂ ಸೊಗಸಾಗಿ ಮೂಡಿವೆ. ನನ್ನದೊಂದು ಪ್ರಯೋಗ ಇಲ್ಲಿದೆ:
ಪ್ರಮಿತಾಕ್ಷರ
ತೊದಲಕ್ಕರಂ ಮಗುವಿಗಂ ಮೊದಲೈ
ಅದಕೆಂದೆ ಕಂದ ಪ್ರಮಿತಾಕ್ಷರನೈ
ಮುದದೊಳ್ ಕುಮಾರ ಬೆಳೆದಾ ಸುದಿನಂ
ಒದಗಲ್ಕೆ ಬಾಲ ಬಹು ಕೋವಿದನೈ
ಕಂದ
ತೊದಲಕ್ಕರಂ ಮಗುವಿಗಂ
ಮೊದಲೈ ಅದಕೆಂದೆ ಕಂದ ಪ್ರಮಿತಾಕ್ಷರನೈ
ಮುದದೊಳ್ ಕುಮಾರ ಬೆಳೆದಾ
ಸುದಿನಂ ಒದಗಲ್ಕೆ ಬಾಲ ಬಹು ಕೋವಿದನೈ
ಹಾಗೆಯೇ ಮತ್ತೊಂದು ಪ್ರಯೋಗ, ಪ್ರಮಿತಾಕ್ಷರ-ಕಂದವನ್ನೇ ಚತುರ್ವಿಧ ಕಂದವಾಗಿ ಬೆಳೆಸಿದ್ದೇನೆ
ಪ್ರಮಿತಾಕ್ಷರ
ಕ್ರಮದೊಳ್ ಗಣಂ ಸಜಸಸಂಭ್ರಮಿಸಲ್
ಸಮಕೊಳ್ಗೆ ಪ್ರಾಸಯುಗಮಾ ಸಮದೊಳ್
ಕ್ರಮಿಸಲ್ಕೆ ಕಂದಗಣ ಸಂಕ್ರಮದೊಳ್
ಪ್ರಮಿತಾಕ್ಷರಂ ಜೊತೆಗೆ ಸಂಗಮವೈ
ಚತುರ್ವಿಧ ಕಂದ
ಕ್ರಮದೊಳ್ ಗಣಂ ಸಜಸಸಂ-
ಭ್ರಮಿಸಲ್ ಸಮಕೊಳ್ಗೆ ಪ್ರಾಸಯುಗಮಾ ಸಮದೊಳ್
ಕ್ರಮಿಸಲ್ಕೆ ಕಂದ ಗಣಸಂ-
ಕ್ರಮದೊಳ್ ಪ್ರಮಿತಾಕ್ಷರಂ ಜೊತೆಗೆ ಸಂಗಮವೈ
ಸಮಕೊಳ್ಗೆ ಪ್ರಾಸಯುಗಮಾ
ಸಮದೊಳ್ ಕ್ರಮಿಸಲ್ಕೆ ಕಂದ ಗಣಸಂಕ್ರಮದೊಳ್
ಪ್ರಮಿತಾಕ್ಷರಂ ಜೊತೆಗೆ ಸಂ
ಗಮವೈ ಕ್ರಮದೊಳ್ ಗಣಂ ಸಜಸಸಂಭ್ರಮಿಸಲ್
ಕ್ರಮಿಸಲ್ಕೆ ಕಂದ ಗಣಸಂ-
ಕ್ರಮದೊಳ್ ಪ್ರಮಿತಾಕ್ಷರಂ ಜೊತೆಗೆ ಸಂಗಮವೈ
ಕ್ರಮದೊಳ್ ಗಣಂ ಸಜಸಸಂ-
ಭ್ರಮಿಸಲ್ ಸಮಕೊಳ್ಗೆ ಪ್ರಾಸಯುಗಮಾ ಸಮದೊಳ್
ಪ್ರಮಿತಾಕ್ಷರಂ ಜೊತೆಗೆ ಸಂ
ಗಮವೈ ಕ್ರಮದೊಳ್ ಗಣಂ ಸಜಸಸಂಭ್ರಮಿಸಲ್
ಸಮಕೊಳ್ಗೆ ಪ್ರಾಸಯುಗಮಾ
ಸಮದೊಳ್ ಕ್ರಮಿಸಲ್ಕೆ ಕಂದ ಗಣಸಂಕ್ರಮದೊಳ್
ಮೇಲಿನಂತೆಯೇ ಮತ್ತೊಂದು
ಪ್ರಮಿತಾಕ್ಷರ
ನೆಲೆಯುಂಟೆ ಕಾಡೊಳಜಕಂ ಇಲಿಗಂ
ಸಲೆನಿಂತು ತೋರುತಿರಲೀ ಬಲುಹಂ
ಬಲಗೊಂಡ ಜೋಡಿ ಸಲಗಂ ಸಲಗಂ
ಸಲಹೈ ಗಣೇಶ ಹರಿಸೈ ಬಲಮಂ
ಚತುರ್ವಿಧ ಕಂದ
ನೆಲೆಯುಂಟೆ ಕಾಡೊಳಜಕಂ
ಇಲಿಗಂ ಸಲೆನಿಂತು ತೋರುತಿರಲೀ ಬಲುಹಂ
ಬಲಗೊಂಡ ಜೋಡಿ ಸಲಗಂ
ಸಲಗಂ ಸಲಹೈ ಗಣೇಶ ಹರಿಸೈ ಬಲಮಂ
ಸಲೆನಿಂತು ತೋರುತಿರಲೀ
ಬಲುಹಂ ಬಲಗೊಂಡ ಜೋಡಿ ಸಲಗಂ ಸಲಗಂ
ಸಲಹೈ ಗಣೇಶ ಹರಿಸೈ
ಬಲಮಂ ನೆಲೆಯುಂಟೆ ಕಾಡೊಳಜಕಂ ಇಲಿಗಂ
ಬಲಗೊಂಡ ಜೋಡಿ ಸಲಗಂ
ಸಲಗಂ ಸಲಹೈ ಗಣೇಶ ಹರಿಸೈ ಬಲಮಂ
ನೆಲೆಯುಂಟೆ ಕಾಡೊಳಜಕಂ
ಇಲಿಗಂ ಸಲೆನಿಂತು ತೋರುತಿರಲೀ ಬಲುಹಂ
ಸಲಹೈ ಗಣೇಶ ಹರಿಸೈ
ಬಲಮಂ ನೆಲೆಯುಂಟೆ ಕಾಡೊಳಜಕಂ ಇಲಿಗಂ
ಸಲೆನಿಂತು ತೋರುತಿರಲೀ
ಬಲುಹಂ ಬಲಗೊಂಡ ಜೋಡಿ ಸಲಗಂ ಸಲಗಂ
ಬೆಚ್ಚಿ ಬಿದ್ದಿಹೆ ಕಂಡು ನಿಮ್ಮಗಳ ಶಕ್ತಿಯಂ
ಅಚ್ಚರಿಯು ಯೆನಗಿಂದು ಶಿಖರದಷ್ಟು |
ಅಚ್ಚ ಪ್ರೇಮಿಯು ನಾನು ಈ ದೊಡ್ಡ ದೇಶದಾ
ಹೆಚ್ಚಿಸುತಿರುವಿರಿ ಜನಸಂಖ್ಯೆಯನ್ನು ||
ಇಷ್ಟೆಲ್ಲಾ ಕಂದಗಳನ್ನು ನೋಡಿ ವಿನೋದಕ್ಕೆ ಬರೆದದ್ದು . Please excuse 🙂
ಅರೆ! ಕಾಂಚನಾರವರೆನೀವ್
ಮರೆತಿರೆ? ಕಂದಗಳಿವೇಂ ಪ್ರಪಂಚಕೆ ಹೊರೆಯೇ?
ಸುರಿವುವು ಮುದಮಂ ಅಳುವುವೆ
ಕರೆವುವೆ ಕೇಳ್ವುವೆ ದುಬಾರಿ ಪಾಲ್ವೆಣ್ಣೆಗಳಂ?
ಕಂದಗಳಿಂಥವೆ ಬಂದೊಡೆ
ಚಂದಮೆ ಮನಕಂ ಪ್ರಪಂಚಕಂ ಮೇಣ್ ಮನೆಗಂ
ಛಂದದ ಬಂದವ ಬಿಟ್ಟೊಡೆ
ಬಂಧನಮಿನಿತಿಲ್ಲ ಕಾಣಿಮಾ ಜೀವನದೊಳ್
ಆನುಂ ವಿನೋದಕೆಂದೆಂ
ಮೇಣೀ ಅಕ್ಕರದ ಗುಂಪುಗಳ್ ಸಮವಹುದೇಂ
ಆ ನಿಜದ ಕಂದನಕ್ಕರೆ
ಗಾ ನಗುವಾ ಭಂಗಿಗಾ ಚಲುವಿಗಂ ಜಗದೊಳ್ 🙂
ಅಂದದ ಕಂದದ ಬಂಧಂ
ಚಂದದ ಪದಪಾನದಂಗಳದೊಳರಳುತಿರಲ್ |
ಕಂದಗಳೇ ನಗುನಗುತಂ
ಬಂದನುಭವವೆನಗತೀ ಸಹಜದಿಂ ಆದ್ದುಂ ||
ಕವಿವರೇಣ್ಯರ, ಕಾವ್ಯಕುಸುಮಗಳ ಸ್ಫೂರ್ತಿಯಿಂದ,
ಪ್ರಮಿತಾಕ್ಷರ ಮತ್ತು ಕಂದಗಳೆರಡರಲ್ಲೂ ಹೊಂದುವಂತೆ ನನ್ನ ಪ್ರಥಮ ಪ್ರಯತ್ನ..
ಶ್ರೀಹರಿಹರನ ಸ್ತುತಿ..
ಸಿರಿಪಾರ್ವತೀಧರಹರೀ
ಶ್ವರನಂ ವರಕೋಲದಂಷ್ಟ್ರಜಧುನೀತಟಗಂ.
ಅರದೂರ ದೈತ್ಯಗುಹಸಂ
ಹರಣಂ ನಮಿಪೆ ಪ್ರಸನ್ನಿಸು ಗುಣಪ್ರತತಂ.||
ರಥೋದ್ಧತಾ ಛಂದಸ್ಸಿನಲ್ಲಿ ನಮ್ಮ ಹೊಸ ಗೆಳೆಯ ಭೀಮಸೇನ ಪುರೋಹಿತರಿಗೆ ಅಭಿನಂದನೆ:
ಭೀಮಸೇನಕವನಂ ಮನೋಹರಂ
ಸ್ವಾಮಿವಿಷ್ಣು-ಶಿವಸಂಸ್ತುತಿಸ್ಫುಟಂ|
ಕ್ಷೇಮಮಪ್ಪ ಬಗೆಯಿಂದೆ ಪದ್ಯದು-
ದ್ದಾಮನಿರ್ಮಿತಿಗೆ ಸೋಲ್ತೆನಲ್ತೆ ನಾಂ||
ಇದೀಗ ಮಲ್ಲಿಕಾಮಾಲೆ ಎನ್ನುವ ಛಂದಸ್ಸಿನ ಎರಡು ಸಾಲನ್ನು ಒಂದು ಇಡಿಯ ಅರ್ಧಸಮವೃತ್ತದ ಆಕಾರದಲ್ಲಿ ರೂಪಿಸಿದ ರಚನೆ:
ಪದ್ಯಪಾನದ ಮಾನಮಂ ನಿರ-
ವದ್ಯಮಾಗಿಯೆ ಪೆರ್ಚಿಪೀ|
ಹೃದ್ಯರೀತಿಗಳಾವಗಂ ಸುಹೃ-
ದಾದ್ಯರೊಲ್ಮೆಗೆ ಪಾತ್ರಮೈ||
ಇಟ್ಟ ಮೊದಲ ಹೆಜ್ಜೆಗೇ, ವರೇಣ್ಯರು ಕೊಟ್ಟ ಪ್ರೋತ್ಸಾಹ ಆಶೀರ್ವಾದಕ್ಕೆ,
“ಮಂಜುಭಾಷಿಣೀ” ಛಂದಸ್ಸಿನಲ್ಲಿ ಪ್ರಣಾಮಾರ್ಪಣೆ..
ಹಲಕಾವ್ಯಪುಷ್ಪಮಧುಸಂಗಿಕಬ್ಬಿಗರ್
ಜ್ವಲಕೌಮ್ಭಸನ್ನಿಭರು ಪದ್ಯಪಾನದೊಳ್
ಕಲಭಾಷಣಂ ಹೃದಯದಿ ಪ್ರಕೀರ್ತಿಸಲ್
ಬಲಮೈದಲಾಗಿ ನತಮಸ್ತಕಾತ್ಮ ನಾಂ.
ಪುರೋಹಿತರೇ, ತಮ್ಮ ಪ್ರಥಮ ಪ್ರಯತ್ನವೇ ಇಷ್ಟು ಸಲಕ್ಷಣವಾಗಿ ಮಂಗಳಕರವಾಗಿ ಮೂಡಿ ಬಂದಿದೆ, ಸೊಗಸಾಗಿದೆ.
ಹರನುಂ ಮುರಾರಿ ಹರಿಯುಂ, ನೆರೆಯೊಳ್
ಸಿರಿಗೌರಿ ಲಕ್ಷ್ಮಿ ನಲವಿಂ ಮೆರೆಯಲ್
ವರಮಂಗಳಾಚರಣೆಯೀ ಪರಿಯೊಳ್
ನೆರೆ ಭೀಮಸೇನನೊರೆಯಲ್ ಮಿಗಿಲೇಂ?