Oct 252011
 

ದೀಪಾವಳಿಯ ಕಾರಣ ಕೆಲವಾದರೂ ಹಬ್ಬದ ಬಗೆಗಿನ ಪದ್ಯಗಳಿರಲೆಂದು ಅಪೇಕ್ಷೆ. ಈ ನೆವದಲ್ಲಿ  ಹೊಸ ಛಂದಸ್ಸುಗಳ ಅಥವಾ ವಿವಿಧಚ್ಛಂದಸ್ಸುಗಳ ಬಳಕೆಯಾಗಲೆಂಬ ಬಯಕೆಯೂ ಇದೆ. ಮೊದಲ ಹೆಜ್ಜೆಯಾಗಿ ನನ್ನ ಒಂದೆರೆಡು ಪದ್ಯಗಳು:

ದ್ರುತವಿಲಂಬಿತವೃತ್ತ||

ನರಕದಾನವಕಾಲದವಾನಲ-
ಕ್ಕುರುವಿನೀಲಪಯೋಧರವಾಗುತುಂ |
ಮೆರೆದ ಕೃಷ್ಣನ ಕಂಗಳ ಮಂಗಳ-
ಸ್ಫುರಣದೀಪಿಕೆಗಳ್  ಶುಭಕೊಪ್ಪುಗುಂ ||

ರಥೋದ್ಧತಾವೃತ್ತ||

ದೇವಗಂಗೆ ಧವಳಧ್ವಜೋಪಮಂ
ತೀವಿರಲ್ ನಭದೆ ವಾಮನಾಂಘ್ರಿಯೊಳ್
ಜೀವಿಗಳ್ಗೆ ಸುಖಶಾಂತಿಯೀವವೊಲ್
ಭಾವಿಕಂ ಗಡಿದು ಪರ್ಬಮೊಪ್ಪುಗುಂ||

ಕಂದ||

ಕತ್ತಲೆಸುತ್ತುಂ ಜಗಮಿದು
ಕತ್ತಲೆ ಸುತ್ತುಂ ಕಡಂಗಿದುದೆನುತ್ತುಂ ಬೇ-
ಸತ್ತಿರೆ ಸಂಪದನಳಿಸುತೆ,
ಸತ್ತಿರೆ ಸಂಪದಮದಂ ಬರ್ದುಂಕಿಪುದೊಳಿತಯ್||

(ಕತ್ತನ್ನು ಅಲೆಸುತ್ತ ಈ ಜಗತ್ತಿನ ಸುತ್ತಲೂ ಕತ್ತಲೆಯೇ ನೆಲಸಿದೆಯೆಂದು ಬೇಸತ್ತಿರುವ  ( ಮನಸ್ಸಿನ) ಸಂಪನ್ನು (strike/bundh) ಅಳಿಸಿ ಸತ್ತಿರುವ ಸಂಪದವನ್ನು ಬದುಕಿಸುವ ಬಗೆಯೇ ಸರಿ.)
ಇದು ಒಂದು ರೀತಿಯ ಚಿತ್ರಕವಿತೆ. ಇದಕ್ಕೆ ಯಮಕಾಲಂಕಾರವೆಂದು ಹೆಸರು.   ಪದಗಳು ಪುನರುಕ್ತವಾದಂತೆ ತೋರಿದರೂ ಅರ್ಥ ಬೇರೆಯೇ ಆಗಿರುವುದು ಇದರ ಚಮತ್ಕಾರ. ಇವೆಲ್ಲ ರಸಪ್ರಧಾನವಲ್ಲ. ಬರಿಯ ಕಸರತ್ತಿನ ಸಂಗತಿಗಳು. ಇಲ್ಲಿ ಸುಮ್ಮನೆ ಕಂದವನ್ನು ಸ್ವಲ್ಪ ಕಗ್ಗಂಟಾಗಿಸೋಣವೆಂದು ಸ್ವಲ್ಪ ಯತ್ನಿಸಿದ್ದೇನಷ್ಟೆ. ದೀಪಾವಳಿಯ ಪಟಾಕಿ ಗಲಾಟೆಯಂತೆಯೇ ಇದೂ ಹೆಚ್ಚು ಸಹನೀಯವಲ್ಲ:-

ಚೌಪದಿ||

ಸಾಲು ದೀಪಗಳಾಗಿ ಭರವಸೆಯ ತಾಳಗಳು
ಕಾಲ ಕುಣಿಸುತ್ತಿರಲು ಭಾವರಾಗ
ಮಾಲೆಯೊಡವರಿದು ಜಯಶೀಲೆ ಸಿರಿ ಬರುವಂತೆ
ಜಾಲಿಸಲಿ ನಿಮ್ಮ ಮನಗಳನು ಬೇಗ||

ಭಾಮಿನೀಷಟ್ಪದಿ||

ಶಾರದಾಂಬರದಲ್ಲಿಯೇ ಹಿಂ-
ಗಾರುಮಳೆ, ಕಾರಿರುಳಿನಲ್ಲಿಯೆ
ತೋರುವೀ ಸಿರಿಯೊಸಗೆ, ಸದ್ದಿನ ದಿನದೊಳೇ ಮೌನ|
ಸಾರಲೀ ಸಂದೇಶವನು ಮೆಯ್-
ದೋರಲೀ  ಸಂಭಾವನೆಯನಭಿ-
ಸಾರಲೀಲಾಲಾಸ್ಯವಾಡಲಿ ಕಾವ್ಯವಧು ನಿಮ್ಮೊಳ್||

  23 Responses to “ದೀಪಾವಳಿ ಹಬ್ಬದ ಕಾರಣ ಕೆಲ ಪದ್ಯಗಳು”

 1. ಶ್ರೀ ಗಣೇಶರ ದೀಪಾವಳಿಯ ಭಾವ ಹಾಗು ಹೊಸ ಛಂದಸ್ಸಿನ ಬಳೆಕೆಯ ಸೂಚನೆಗೆ ಸ್ಪಂದಿಸುತ್ತ, ಮೌಡ್ಯವೆಂಬ ಕತ್ತಲೆಯನ್ನು ಸಂತತವಾಗಿ ಪ್ರಜ್ವಲ ಧೀದ್ಯುತಿಯಿಂದ ಹರಿಸಿದ ದ್ವಾಪರದ ದೀಪಾವಳಿಯ ಮಹಾನಾಯಕ ಶ್ರೀಕೃಷ್ಣನ ಸ್ಮರಣೆಗೆ….


  ಕುಮುದ ವೃತ್ತ ||

  ನರಕಾ ಸುರನಂ | ಮುರಬಾಣರನುಂ
  ತರಿದಂತೆ ಹರೀ | ಹರಿಸೆನ್ನಹಮಂ

  (ನರಕ,ಮುರ,ಬಾಣಾಸುರರನ್ನು ಹರಿಸಿದ ಹರಿ ಆ ರಕ್ಕಸರಂತೆ ಕಾಡುವ ಅಹಮನ್ನು ಹರಿಸಲಿ)

  ಚಿತ್ರಪದ ವೃತ್ತ ||

  ಹುಟ್ಟಿದ ಕೂಡಲೆ ಪೂತನೆಯಂ | ಘಟ್ಟಿಸಿ ಕೊಂದಯೊ ಶಾಕಟನಂ
  ಕುಟ್ಟಿ ಬಕಾಸುರ ವತ್ಸರನುಂ | ಮೆಟ್ಟಿ ಕಳಿಂಗನ ಧೇನುಕನಂ
  ದೌಷ್ಟ್ಯದ ಸ್ವಾರ್ಥದ ಹೀನತೆಯಂ | ಕೆಟ್ಟ ವಿಧಾನದ ದೋಷಗಳಂ
  ಸೊಟ್ಟುಗಳಂ ಸರಿಮಾಡಲು ನೀಂ | ಹುಟ್ಟಲು ಬೇಕಿದೆ ಕೃಷ್ಣವಿಭೋ

  (ತಾನು ಹುಟ್ಟಿದಂದಿನಿಂದ ದಾನವೀಯ ವೈವಿಧ್ಯವನ್ನು ಸಂಹರಿಸುತ್ತ ಧರ್ಮದ ಸಾನ್ನಿಧ್ಯವನ್ನು ಕೊಟ್ಟ ಶ್ರೀಕೃಷ್ಣ ಇಂದು ಹುಟ್ಟಬೇಕಿದೆ)

  ಮಲ್ಲಿಕಾಮಾಲೆ ||

  ಗೋಪ ಬಾಲರ ಸೇರಿ ಗೋವ್ಗಳ ಕಾಯ್ವ ಕಾಲದಿ ಪದ್ಮಜಂ
  ಗೋಪರೆಲ್ಲರ ಮಾಯಗೈಯಲು ದರ್ಪಕೌತುಕ ಕಾರ್ಯದಿಂ
  ರೂಪ ಧಾರಣ ಗೈಯುತೆಲ್ಲರ ಬ್ರಹ್ಮಮಾಯೆಯ ನೀಗಿದಯ್
  ಪಾಪ ಕೂಪದಿ ಬಿದ್ದ ಭ್ರಷ್ಟರ ನೀತಿ ಮಾರ್ಗಕೆ ತಾರೆಯಾ

  (ಮಾನವರ, ದಾನವರ, ದೇವತೆಗಳ ಮತ್ತು ಬ್ರಹ್ಮನ ಮಾಯೆಯನ್ನೂ ನೀಗಿದ ಕೃಷ್ಣ, ಇಂದು, ಜನರ, ನಾಯಕರ, ಮಹಾನಾಯಕರ, ಜಗನ್ನಾಯಕರ ಮೌಢ್ಯವನ್ನು ಕಳೆಯಬೇಕಿದೆ)

  ಉತ್ಪಲಮಾಲೆ ||

  ಗರ್ವಿಸುಯೋಧನಂ ಶಕುನಿ ದ್ರೌಪತಿ ಯರ್ಜುನ ಕರ್ಣಕುಂತಿಯರ್
  ಸರ್ವರೊಳುಂ ಸಮಾನತೆಯ ಹಾಸ್ಯದ ಲಾಸ್ಯದ ಭಾವಮೊಂದಿರಲ್
  ನಿರ್ವಚನಂ ಧರ್ಮಕೆನಲು ಮಾಡುತ ಕಾರ್ಯವ ನೀಡಿ ತತ್ಫಲಮ್
  ಉರ್ವರೆಯೊಳ್ ನಾಯಕನೆನೆ ಹೀಗಿರ ಬೇಕೆನುತಂದು ತೋರಿದೈ

  (ದುಷ್ಟರೋ ಶಿಷ್ಟರೋ, ಎಲ್ಲರೊಡನೆ ಮಂದಹಾಸದಿಂದ ಸುಳಿದು, ಯಾರಮೇಲೂ ಮನಸ್ಸಿನಲ್ಲಿ
  ವಿರೋಧವಿಲ್ಲದೆ, ಅವರವರ ಗತಿಗೆ ಅನುಗುಣವಾಗಿ ವರ್ತಿಸಿ, ಎಲ್ಲ ಕಾರ್ಯಗಳನ್ನೂ ಧರ್ಮಚಕ್ರದ ಅರೆಗಳು ಮೂಲದಲ್ಲಿ ಒಂದಾಗಿ ಚಾಲನೆಗೆ ಅನುಕೂಲವಾಗುವಂತೆ ನಡೆಸಿ, ಇಂದಿನ ನಾಯಕತ್ವ ಹೇಗಿರಬೇಕೆಂಬುದನ್ನು ಅಂದೇ ತೋರಿಸಿಕೊಟ್ಟ ಜಗನ್ನಾಯಕ ಕೃಷ್ಣ)

  ಮತ್ತೇಭ ವಿಕ್ರೀಡಿತ ||

  ಗುರುಬೇಡಲ್ ಮೃತ ಪುತ್ರನಂ ಪಡೆದ ವಸ್ತ್ರಂ ದ್ರೌಪತೀಕಾಂತೆಯುಂ
  ಕುರುಡಂಗಂದು ಸುನೇತ್ರವಂ ಕರುಣದಿಂ ನೀಡಿರ್ದುಮೆಲ್ಲಂ ಕ್ಷಣಂ
  ಸ್ಥಿರವಲ್ತೆಲ್ಲವರಂಗಳುಂ ಪಡೆದವರ್ ಪೊಂದಿರ್ದರೇಂ ಸಂತತಮ್?
  ವರಗೀತಾಮೃತಮೊಂದೆ ಸಾಕು ಭುವನೋದ್ಧಾರಕ್ಕೆ ಕೃಷ್ಣಪ್ರಭೋ

  (ಕೃಷ್ಣ, ಎಲ್ಲರಿಗೂ ಅವರವರು ಬೇಡಿದ್ದನ್ನು ಕೊಟ್ಟ. ಪಡೆದದ್ದು ಅವರಲ್ಲಿ ಶಾಶ್ವತವಾಗಿ ಉಳಿಯಿತೇ? ನಮ್ಮ ಉತ್ಥಾನಕ್ಕೆ ಅವನು ಕೊಟ್ಟ ಗೀತೆಯೇ ಸಾಕು)

  • ಅದ್ಭುತಪದ್ಯಸಂಕುಲಮನಿತ್ತಿರಿ ದೀವಳಿಗೆ ಪ್ರಮೋದದಿಂ-
   ದುದ್ಭವಿಸಲ್ಕೆ ಬಾಣ-ಬಿರುಸೆಲ್ಲಮನೆಲ್ಲೆಡೆ ತೂರುತಾವಗಂ
   ಹೃದ್ಭವನಂತೆ ವರ್ತಿಸೆ, ನಿರೋಧಿಪವೊಲ್ ಮಿಗೆ ಚಂದ್ರಮೌಳಿಯೇ
   ಚಿದ್ಭವಪದ್ಯಮಾಧುರಿಯ ಫಾಲವಿಲೋಚನದಿಂದಮೊಪ್ಪುಗುಂ

 2. ಪಂಚಮಾತ್ರಾ ಚೌಪದಿ ::
  ಕೊಟ್ಟ ಮಾತಿನ ಸತ್ಯವನ್ನುಳಿಸಲಾ ಬಲಿಯು
  ದಿಟ್ಟತನದಿಂ ಶಿರವನೊಡ್ಡಿರ್ದ ಪಾದ
  ಮೆಟ್ಟುತೆಮ್ಮಯ ತಲೆಯ ಮೇಲಿರುವಹಂಕಾರ
  ಪಟ್ಟಕೇರಿಸಲಿ ಮನದಭಿಮಾನವ ||

 3. ಪದ್ಯಪಾನದ ವರನು ಕಾವ್ಯವಧುವನು ವರಿಸಿ
  ಆದ್ಯದೀಪಾವಳಿಗೆ ಬಂದಿರುವನು
  ಬಾಧ್ಯರೆಲ್ಲರು ನಾವು, ತಾದಾತ್ಮ್ಯದಲಿ ಕೂಡಿ
  ಅದ್ಯವರನನ್ನು ಮಿಗಿಲುಪಚರಿಸುವ
  (ಆದ್ಯ = ಮೊದಲನೆಯ, ಬಾಧ್ಯ = ನೆಂಟ, ಹೊಣೆಗಾರಿಕೆಯುಳ್ಳವ, ಅದ್ಯ = ಇಂದು)

 4. ಬಲುಸಿರಿವಂತರೈ ಗಣೇಶರು
  ಹಲವು ತರದ ಪಟಾಕಿಯೊಡೆಯರು
  ಕೆಲವು ಭಾಮಿನಿ ಕಂದ ಚೌಪದಿ ನಾಮ ಹಲವಾರು
  ಕಲೆಯದಂಗಣದಲ್ಲಿ ರಂಗಿನ
  ಬೆಳಕ ಬೀರುವ ಹದವ ಹೊಂದಿದ
  ಕೆಲವು ಪೊಟ್ಟಣ ಬಳಸಿ ತೋರಿಸಲೆಮಗೆಸಿರಿಸಗ್ಗ

  • ರವೀಂದ್ರರೆ – ಚೆನ್ನಾಗಿದೆ – ಆದರೆ ಮೊದಲ ಸಾಲಿನಲ್ಲಿ ಜಗಣ ಬಂದಿದೆ.

   • ಒಂದು ಜಗಣ ತಪ್ಪಿಸುವಲ್ಲಿ ಇನ್ನೊಂದು ಜಗಣ ಹಿಡಿದಿದ್ದೇನೆ 🙂 . ಹೀಗೆ ಬದಲಾಯಿಸ ಬಹುದೇನೋ?
    ಬಲುಸಿರಿಸಹಿತರೈ ಗಣೇಶರು

 5. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು 🙂

  ಭಾಮಿನಿ:
  ರಾವಣನ ಸದೆಬಡಿದ ರಾಮನ
  ಸೇವಿಸಲು ಬೆಳಗಿಸುವ ದೀಪವ
  ಸಾವಿನೊಳಸುರ ನರಕನಂತ್ಯವ ಮುದದಿ ನೆನೆಯುತಲಿ
  ಆವರಿಕೆ ಹೂವುಗಳೊಳು ಚಿರಂ-
  ಜೀವಿ ಬಲಿಯನು ಪೂಜೆಗೈಯುವ
  ಭಾವನೆಯ ಹೊರಸೂಸಿ ಭಾಂಧವರೊಡನೆ ಬೆರೆಯುತಲಿ

  ದೃತವಿಲಂಬಿತ:
  ಸೊಗಸು ದೀಪದ ಸಾಲಿನ ಗೊಡೆಗಳ್,
  ಉಗಿವ ಬೆಂಕಿಯ ಹೂವಿನ ಕುಂಡಗಳ್,
  ಮುಗಿಲೊಳಾಡುವ ಬಾಣದ ಗುಚ್ಛಗಳ್
  ಜಗವು ಬಿಂಕದಿ ಬೀಗಿದೆ ಹಬ್ಬದೊಳ್

  • ಸೋಮ ಅವರ ದ್ರುತವಿಲಂಬಿತಕ್ಕೆ ಅವಿಲಂಬಿತಸ್ವಾಗತ. ಪದ್ಯ ಚೆನ್ನಾಗಿದೆ, ಸಲೀಸಾಗಿದೆ.ಆದಾರೆ ಗಣ-ಗಣಕ್ಕೇ ಪದಗಳನ್ನಿಡಬೇಕಾದ ನಿಯಮವೇನಿಲ್ಲ. ಕೇವಲ ಗುರುಲಘುವಿನ್ಯಾಸವನ್ನು ಪಾಲಿಸಿದರೆ ಸಾಕು. ಪದಗಳು ಆಯಾ ಗಣಗಳ ಗಾತ್ರದಲ್ಲಿಬೇಕಾಗಿಲ್ಲ. ಹಾಗಾದಲ್ಲಿ ರಚನೆ ಕಷ್ಟವಾಗುವುದಲ್ಲದೆ ಯಾಂತ್ರಿಕವೂ ಆಗುತ್ತದೆ.

   • ಹೌದು ಸಾರ್,

    ಮೊದಲನೆಯ ಧೃತವಿಲಂಬಿತ ಪ್ರಯತ್ನ, ಗಣಗಣಕ್ಕೆ ಸರಿತೂಗಿಸಿ ಸುಲಭ ಮಾರ್ಗವನ್ನು ಹಿಡಿದೆ 🙂
    ನಿಬಿಡ ಬಂಧ ಗಮನಿಸುತ್ತೇನೆ

 6. ರಾಮ್ ಅವರ ಪದ್ಯದ ಭಾಷೆ, ಭಾವ ಹಾಗೂ ಬಂಧಗಳೆಲ್ಲ ಸೊಗಸಾಗಿವೆ.

 7. ಹೊಲಿದೊರೆಯೆ, ಬಲಿದೊರೆಯೆ, ತಮ್ಮ ಸಾಮ್ರಾಜ್ಯಕ್ಕೆ
  ಗೆಲುವಿಂದ ತಾವ್ಬಂದು ಕೃಪೆಯಿಂದ
  ಹೊಲಿ ಕೊಟ್ಟು, ಬಲಿ ಪಡೆಯಿರೆಂದುಮಜ್ಞಾತದಲಿ
  ಯುಲಿವಕೃತಜ್ಞತೆಯು ಹಿರಿದಲ್ಲವೆ
  (ಹೊಲಿ = ಧಾನ್ಯ, ಬೆಳೆ)
  (ಹೀಗೆ ಗದ್ದೆಯಲ್ಲಿ ದೀಪಾವಳಿಯದಿಂದ ಕೂಗಿಡುವ ಸಂಪ್ರದಾಯ ನಮ್ಮೂರಲ್ಲಿದೆ. ಯಥಾವತ್ತಾಗಿ: “ಹೊಲೀಂದ್ರ ದೇವ್ರು, ಬಲೀಂದ್ರ ದೇವ್ರು ತಮ್ಮ ಸಾಮ್ರಾಜ್ಯಕ್ ತಾವ್ಬಂದು, ಹೊಲಿ ಕೊಟ್ಟ್, ಬಲಿ ತಕಂಡ್ ಹೊಲಿಯೇ ಬಾ”….ಕೂ.. ೩ ಬಾರಿ)

 8. ಗೆಳೆಯರೇ ಎಲ್ಲರಿಗೂ ದೀವಳಿಗೆಯ ಶುಭಾಶಯಗಳು, ತಡವಾಗಿಯಾದರು. ಹಬ್ಬದ ಮಧ್ಯದಲ್ಲಿ ಬಿಡುವು ಮಾಡಿಕೊಂಡು ಇಲ್ಲಿ ನೋಡಿದರೆ ಇಲ್ಲೂ ದೊಡ್ಡ ಪಟಾಕಿ ಹಬ್ಬವೇ ನೆಡೆದಿದೆ! ಗಣೇಶರ ಮತ್ತು ಚಂದ್ರಮೌಳಿಯವರ ವಿವಿಧ ವರ್ಣ/ಗಾತ್ರ/ಶಕ್ತಿಸಂಚಯದ ಕಾವ್ಯದ ಪಟಾಸುಗಳು ಮನಸೂರೆಗೊಂಡುವು. ಮತ್ತೆ ಸೋಮ, ರವೀಂದ್ರ ಮತ್ತು ರಾಮಚಂದ್ರರ ಪದ್ಯಗಳೂ ಬಹು ಹೃದ್ಯವಾಗಿವೆ. ಈ ಸಂಭ್ರಮಕ್ಕೆ ನನ್ನದೊಂದಿಷ್ಟು ಸುರುಸುರುಬತ್ತಿ ಪೊಟ್ಟಣಗಳನ್ನು ತಂದಿದ್ದೇನೆ. ಒಪ್ಪಿಸಿಕೊಳ್ಳಿ.

  ಮತ್ತೇಭವಿಕ್ರೀಡಿತ ವೃತ್ತ
  ನರಕಂ ಲೋಕಕೆ ಕತ್ತಲಿಕ್ಕಿ ನಿಲಿಸಲ್ ಕಾಡಲ್ಕೆ ಮೂಲೋಕಮಂ
  ಸುರರುಂ ಮೇಣ್ ನರರುಂ ಮುರಾರಿ ಹರಿಯಂ ಬೇಡಲ್ ಜಗಂ ಭೋರಿಡಲ್
  ಹರಿ ತಾಂ ವೇಗದಿ ಭಕ್ತರಿಂಗಭಯದಾನಂಗೈಯುತುಂ ಕ್ರೂರಿಯಾ
  ಸುರನಂ ಕುಟ್ಟಿದನೀ ದಿನಂ ನರಕನಾಮಂ ಬಿದ್ದಿತಾ ಹಬ್ಬಕಂ

  ಉತ್ಪಲಮಾಲಾ ವೃತ್ತ
  ಶೌರಿಯ ಭಕ್ತನಾ ಬಲಿಯ ದಾನವ ಬೇಡಿದ ಕುಬ್ಜವಾಮನಂ
  ಮಾರಳೆದುರ್ವಿಯಂ ಗಗನಮಂ ಪದಜೋಡಿಗಳಳ್ತೆಯೊಳ್ ದಿಟಂ
  ಮೂರನೆ ಹೆಜ್ಜೆಗಾ ತಲೆಯ ಪಾದದೊಳೊತ್ತಿದನೊತ್ತಿ ಪಾತಳಂ
  ಸೇರಿಸಿ ಕಾದನಾ ಮನೆಯ ಬಾಗಿಲನೀತನೆ ಭಕ್ತಬಾಂಧವಂ

  ಉತ್ಸಾಹ ರಗಳೆ
  ಚುಕ್ಕಿ ಬೆಳಕ ಚೆಲ್ಲುವಲ್ಲಿ
  ಹಕ್ಕಿ ಹಾಡು ಮೂಡುವಲ್ಲಿ
  ಕತ್ತಲೊಡನೆ ತೆಕ್ಕೆಬಿದ್ದು
  ಎತ್ತಲಾಗೊ ಹೊರಳುತಿದ್ದ
  ಬೆಳಕ ಹಬ್ಬವೆದ್ದಿತೈ
  ಹೊಳೆವ ಮೈಯ ಮುರಿದಿತೈ

  ದ್ರುತವಿಲಂಬಿತ ವೃತ್ತ
  ಜಲಜನಾಭನ ಪಾದಕೆ ವಂದಿಸು
  ತ್ತಲಸಮಂ ಜಡಮಂ ಬಡಿದೋಡಿಸಲ್
  ವಿಲಸಿಸುತ್ತೆರೆದೆಣ್ಣೆಯ ನೀರನುಂ
  ಬೆಳಗುವಳ್ ಕಿರು ದೀಪದ ಸಾಲ್ಗಳಂ

  ರಥೋದ್ಧತಾ ವೃತ್ತ
  ಹೂರಣಂ, ರುಚಿಯ ಬೋಂಡಪಾಯಸಂ
  ಸಾರು ಮೇಣ್ ಕರಿದ ಸಂಡ್ಗೆ ಹಪ್ಪಳಂ
  ಭೂರಿಭೋಜನದಿ ಹೊಟ್ಟೆಯುಬ್ಬಿರಲ್
  ಮೀರಿತೈ ನಿದಿರೆ ಒರಗಿದಾಕ್ಷಣಂ

  ಕಂದ
  ಏನಿದು ಕಣ್ಕುಕ್ಕುವ ಬೆಳ
  ಕೇನಿದು ಸಿಡಿಯುವ ಪಟಾಕಿ ಸರಗಳ ಸದ್ದಿಂ
  ಗಾನಭವೊಡೆವುದೊ ಸಿಡಿವುದೊ
  ಕಾಣೆನಮಮ ತಲೆಯಿದಂತು ಬಿರಿವುದು ಸತ್ಯಂ

  ಚೌಪದಿ
  ಕಾಣಿಲ್ಲಿ ಸುರುಸುರನೆ ಸುರಿವ ಸುರುಬತ್ತಿಯಂ
  ಮೇಣು ಹೂಬಾಣ ಬಿಡುತಿಹ ಪುಟ್ಟಿಯಂ
  ಬಾಣದಾ ಸುಯ್ಲು ಮೇಣ್ ಚಕ್ರಗಳ ವಿಭ್ರಮಂ
  ಕಾಣಿದೋ ಬೆಳಕಹಬ್ಬದ ಸಂಭ್ರಮಂ

  ಭಾಮಿನೀ ಷಟ್ಪದಿ
  ಭಾಮಿನಿಯರಾ ಸಡಗರವು ಮೇ
  ಣಾ ಮುದದ ರಂಗೋಲಿ ಮನಗೆಲು
  ವಾ ಮಧುರ ಖಾದ್ಯಗಳ ಸವಿ, ಬಾಲಕರ ಹಿರಿ ಹುಯಿಲು
  ಹೂ ಮತಾಪಿನ ಬಿರುಸು-ಬಾಣದ
  ಭೂಮಿಚಕ್ರದ ಸಿಡಿವ ಮದ್ದಿನ
  ಧೂಮಲೀಲೆಯು ಗಗನ ಮುಟ್ಟಿತು ಬೆಳಕ ಹಬ್ಬದೊಳು

  ಮಂದಾಕ್ರಾಂತ
  ಭೂಮ್ಯಾಕಾಶಕ್ಕಡರಿ ನಲಿವೀ ಧೂಮಲೀಲಾವಿಲಾಸಂ
  ರಮ್ಯಂ ಭವ್ಯಂ ಬೆಳಗಿ ನಗುವೀ ವರ್ಣವೈವಿಧ್ಯ ಹಾಸಂ
  ಕಾಮ್ಯಂ ಬಾಯನ್ ರಸಗೊಳಿಸುವೀ ಹಬ್ಬದೂಟಂ ವಿಶೇಷಂ
  ಸೌಮ್ಯಂ ನವ್ಯಂ ಮೊಗದಿಹೊಳೆವೀ ತೃಪ್ತಿ ಸಂತೋಷ ಭಾಸಂ

  • ಪ್ರಿಯ ಮಂಜುನಾಥರೆ, ದೇವಳಿಗೆಯ ಪದ್ಯಗಳ ಮಾಲೆ ಮೊದಲಾಗಿ ಮೂರನೆಯ ದಿನ ಬಂದರೂ ನಿಮ್ಮ ಪದ್ಯಗಳು ಕಾಣಲಿಲ್ಲವೆಂದು ಕಳವಳಗೊಳ್ಳುತ್ತಿರುವಾಗಲೇ ಬಂಪರ್ ಬಹುಮಾನದಂತೆ ನಿಮ್ಮ ರಚೆನೆಗಳು ಕಂಗೊಳಿಸಿವೆ. ವಿಶೇಷತಃ ನೀವು ಹಾಗೂ ಚಂದ್ರಮೌಳಿಯವರು ಪದ್ಯಪಾನೋದ್ಯಾನಕ್ಕೆ ಸರ್ವಋತುಗಳಲ್ಲಿಯೂ ಬಗೆಬಗೆಯ ಮಲರುಗಳನ್ನು ಮುಡಿಸುತ್ತಿದ್ದೀರಿ. ಇದಕ್ಕಾಗಿ ನಾನು ವೈಯಕ್ತಿಕವಾಗಿಯೂ ಋಣಿಯಾಗಿದ್ದೇನೆ. ಸದ್ತ್ಯದ ನಿಮ್ಮ ಬಗೆಬಗೆಯ ಪದ್ಯಪ್ರಸೂನಗಳನ್ನು ಕಂಡು ನನಗಾದ ಹರ್ಷವನ್ನು ಸೀಸಪದ್ಯದಲ್ಲಿ (ಇದು ಕನ್ನಡದವರು ಪಳಗಿಸಿಕೊಂಡ ಮಾತ್ರಾಸೀಸ; ತೆಲುಗಿನವರದು ಅಂಶ ಅಥವಾ ತ್ರಿಮೂರ್ತಿಗಣಘಟಿತವಾದ ಸೀಸ) ನಿರೂಪಿಸುತ್ತಿದ್ದೇನೆ. ನಿಮ್ಮ ಸುವರ್ಣಗಳಿಗೆ ನನ್ನ ಸೀಸ! ಪದ್ಯದಲ್ಲಿ ತೆಗೆದುಕೊಂಡಿರುವ ಸಲುಗೆಗಾಗಿ ಕ್ಷಮೆಯಿರಲಿ.

   ವೃತ್ತಂಗಳಂ ರಚಿಸೆ ಯೂಕ್ಲಿಡ್ದನಂತಾಗಿ
   ಕಂದಂಗಳಂ ರಚಿಸೆ ತಂದೆಯಾಗಿ
   ಷಟ್ಪದಂಗಳನೊರೆಯೆ ಪಂಚಸಾಯಕನಾಗಿ
   ಚೌಪದಂಗಳನೊರೆಯೆ ಚತುರನಾಗಿ
   ಸಾಂಗತ್ಯ ಮಾಡುವೊಡೆ ಸಂಗೀತದಂತಾಗಿ
   ರಗಳೆಗಳ ಮಾಡುವೊಡೆ ರಸಿಕನಾಗಿ
   ಪದ್ಯವೈವಿಧ್ಯದೊಳ್ ಮಂಜುಮಾರ್ಗಣನಾಗಿ
   ಹೃದ್ಯಸೌವಿಧ್ಯದೊಳ್ ನಾಥನಾಗಿ
   ಬೆಳಕಿನೀ ಪರ್ವಸಂದರ್ಭದಲ್ಲಿ ಬೆಳಗೆ
   ಪದ್ಯಪಾನಮಂ ತನ್ನ ಪದ್ಯಂಗಳೆಂಬ
   ಹಣತೆಗಳ ಸಾಲುಸಾಲಾಗಿ ಜೋಡಿಸಿರ್ಪಂ
   ಸ್ನೇಹಮಯ ಕಾವ್ಯವರ್ತಿಯೀ ಮಂಜುನಾಥಂ

   • ಗಣೇಶರೇ, ಧನ್ಯೋಸ್ಮಿ.

    ಸೀಸಗಳೇ ಇವು? ಸೀಸದ ಭರಣಿಯಲ್ಲಿಟ್ಟ ಹೊನ್ನುಗಳು. ಪಾರಿತೋಷಕವನ್ನು ಸ್ವೀಕರಿಸಿದ್ದೇನೆ.

    ವಿದ್ಯಾಧಿರಾಜಂ ಕವಿರಾಜಭೋಜಂ
    ಪದ್ಯಂಗಳೆಂಬಕ್ಷರಲಕ್ಷಮೀವಂ
    ಹೃದ್ಯಂ ಮನೋಜ್ಞಂ ಹುರುಪೀವ ಭಾವಂ
    ವಿದ್ವದ್ಗಣಕ್ಕಂ ಗಣನಾಥನೀತಂ

  • ಓಹೋ ಮಂಜುನಾಥರೆ,

   ನಿಮ್ಮ ವಿವಿಧ ದೀಪಗಳ ವೈವಿಧ್ಯ ಅದ್ಭುತವು ಮನೋಹರವು ಆಗಿದೆ 🙂

 9. “ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು”

  ಹೃದಯದೊಳಂಗಣ ವಿಷಂ ವು –
  ರಿದು ಪ್ರೀತಿಯ ಬೆಳಕು ಸೂಸುವ ರಸಚಣದವೊಲ್
  ಹದದಿಂ ಪಣತೆಯ ಜಿಡ್ಡಂ
  ವಧಿಸಿ ಬೆಳಗಿದೆ ಮನೆಯಂಗಳವ ದೀಪಿಕೆಯುಂ ||

  • ಕಾಂಚನ ಅವರೆ,
   ಮೊದಲ ಸಾಲಿನಲ್ಲಿ ಕೊನೆಯ ಗಣ ಜಗಣವಾಗಿದೆ. ಇದನ್ನು ದಯವಿಟ್ಟು ಸರಿಪಡಿಸಿರಿ. ಆದರೆ ಪದ್ಯದ ಭಾವವು ತುಂಬ ಸೊಗಸಾಗಿದೆ.

   • ಜಗಣವನ್ನು ಸರಿಮಾಡಿರುವೆ ::
    ಹೃದಯದೊಳಂಗಣ ವಿರಸವು –
    ರಿದು ಪ್ರೀತಿಯ ಬೆಳಕು ಸೂಸುವ ರಸಚಣದವೊಲ್
    ಹದದಿಂ ಪಣತೆಯ ಜಿಡ್ಡಂ
    ವಧಿಸಿ ಬೆಳಗಿದೆ ಮನೆಯಂಗಳವ ದೀಪಿಕೆಯುಂ ||

 10. ನಿನ್ನೆ ಗೋಪೂಜೆ. ಗೋಮಾತೆಗೆ ವಂದಿಸುತ ಕಂದದೊಳ್ …

  ಗೋವಳಗಾನದ ನೆಪ್ಪೋ
  ಭಾವದಿ ಸುರಕಾಮಧೇನು ಸತ್ಕುಲದೊಪ್ಪೋ
  ಗೋವೆಮಗೆ ಪೇಳ್ ನಿನಗೊಲಿದು
  ದಾವುದು ಚಿರಸಾವಕಾಶದೊಳಿರುವ ಗುಣಮಂ

  (ಗೋವಳ = ಗೋಪಾಲ, ನೆಪ್ಪು = ನೆನಪು, ಒಪ್ಪು = ಹೊಳಪು, ಯೋಗ್ಯತೆ.)

 11. ರವೀಂದ್ರರೆ – ಚೆನ್ನಾದ ಪದ್ಯ. ಆದರೆ ಎರಡನೆ ಸಾಲಿನ “ಭಾವದೊಳ್” ಎಂಬಲ್ಲಿ ಒಂದು ಮಾತ್ರೆ ಹೆಚ್ಚಿದೆ. ಇಲ್ಲಿ typo ಆಗಿದೆಯೆ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)