Mar 132011
 
ಹಳೆಯ ಕವಿತೆಗಳನ್ನು ಬದಲಿಸಿ ಬರೆದರೆ ಅಭ್ಯಾಸವಗುತ್ತದೆಂದು ಗಣೇಶ್ ಹೇಳಿದ್ದರಿಂದ, ನರಸಿಂಹ ಸ್ವಾಮಿಯವರ “ಹತ್ತು ವರ್ಷದ ಹಿಂದೆ” ಕವಿತೆಯನ್ನು ಮರಳಿ ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ವಿಷಯವು ಒಮ್ಮೊಮ್ಮೆ ಮೂಲಕ್ಕಿಂತ ಬೇರೆ ದಾರಿಯಲ್ಲಿ ಹೋಗಿರಬಹುದು ::

ಹತ್ತು ವರ್ಷದ ಮುನ್ನ ತೇರಲಿ
ಸುತ್ತಮುತ್ತೋಡಾಡುತಿದ್ದಿರಿ
ಹತ್ತಿರದ ಹೆಣ್ಣೆಂದು ಮೆಚ್ಚುತ ಮುತ್ತನೊತ್ತಿದಿರಿs ||
ಕತ್ತನೆತ್ತದ ಭಯದ ಭರ ನಾ –
ಚುತ್ತ ಕರಗುತ ಕೆಂಪಡರಿ ಮನೆ –
ಯತ್ತ ಓಡಲು ಕೆನ್ನೆಗೆರಡನು ಕೊಟ್ಟರದು ಹದನs || ೧ ||


ಮನೆಗೆ ಹಿರಿಯರ ಕೂಡಿ ಬಂದವ –
ರೆನಗೆ ಉಡುಗೊರೆಯೊಂದ ತಂದು ಲ –
ಗನದ ಮಾತಾಡಿದಿರಿ ಗೆಲುವನು ಹರಡಿದಿರಿ ಬಹುಳ ||
ಇನಿಯರಾದಿರದೊಂದು ಪರಿಯಿಂ –
ದೆನಗೆ ನಚ್ಚನೆ ಸನಿಹ ಬಂದಿರಿ
ಪುನಹ ಪಡೆದಿರಿ ಹೋದ ಮಾನವ ಜೊತೆಗೆ ಹೆಣ್ಣೊಂದs || ೨ ||


ನೆಂಟರೆಲ್ಲರ ಸದರ ಸಡಗರ
ತುಂಟ ಮಕ್ಕಳ ಕೂಟದಾಟಗ –
ಳೆಂಟು ದಿನಗಳ ಮದುವೆ ಸಂಭ್ರಮ ಸಂದ ಸುಮ ಸಮಯ ||
ಅಂಟಿ ಹೊರಟಿತು ಬಾಳ ಬಂಡಿಯು 
[ ಅಂಟಿ ಹೊರಟೆವು ಬಾಳ ಪಥದಲಿ ]
ಬಂಟರೆಲ್ಲರ ಶುಭದ ಹರಕೆಯ
ಸೊಂಟ ಬಾಗಿಸಿ ಪಡೆದ ಹಿರಿಯರ ವರಗಳನುಗ್ರಹದಿs || ೩ ||


ಬಳೆಯು ಮೇಲೇರದೆಲೆ ಮುಂಗೈ –
ಗಳಲಿ ನೋವಾಗಿರಲು ಹಯ್ಯೋ
ಕಳವಳದಿ ಕೆಳಗಿಳಿದು ಬಂದಿರಿ ಚಿಂತೆಯಾಗ್ರಹದಿs ||
ಬಳೆಯ ಸೆಟ್ಟಿಯ ಕುಹಕ ನಗೆಯಿಂ –
ದಳಿದ ತಾಳ್ಮೆಯ ಕೋಪವದು ಮೈ
ಪುಳಕಗೊಳಿಸಿತು ನಿಮ್ಮ ಗೆಳೆತನದುಪರಿ ವಾತ್ಸಲ್ಯ || ೪ ||


ಬೆಟ್ಟಗಳ ಸಾಲಿನಲಿ ಹಾದಿಯು
ಬೆಟ್ಟಗಲದಷ್ಟಿರಲು ಜೊತೆಯಲಿ
ಕಟ್ಟಿಕೊಂಡೋಡಾಡುತಿದ್ದಿರಿ ನನ್ನ ಸಂತಸದಿs ||
ನಿಟ್ಟಿನಲಿ ಮುಂದಾಗಿ ನಡೆದಿರಿ
ಬಿಟ್ಟಿರದೆ ಕಣಿವೆಯಲಿ ಹಿಂಗಡೆ –
ಯೊಟ್ಟು ತಿರುಗುತಲೊಟ್ಟು ನಲಿಯುತ ಕೂಡೆ ಸಂಗಡಣೆ || ೫ ||


ಸಿರಿತನದಿ ಬಡತನದಿ ಯಾರೇ
ಇರಲಿಯಾರಿರದಿರಲಿ ಸಮದಿಂ
ಮೆರೆದಿರೆದರದೆ ದೊರೆಯ ತರದಲಿ ಧೀರ ನಿಲುವಿನಲಿs ||
ಸರಿಗನಿಗೆ ಒಪ್ಪಾಗಿ ಕಂದದ
ಮರಿಗೆ ನಾ ದಿಕ್ಕಾಗಿ ಜೊತೆಯ –
ಲ್ಲಿರಲು ಸಂಗಡ ಪಯಣಿಸುವ ನಾವ್ ತುಂಬು ಜೀವನದಿs || ೬ ||

– ರಾಮಚಂದ್ರ

  5 Responses to “ಹತ್ತು ವರ್ಷದ ಹಿಂದೆ – ಮತ್ತೊಮ್ಮೆ … ಭಾಮಿನಿ ಷಟ್ಪದಿಯಲ್ಲಿ”

  1. Message from Sri. Chandra Mowly ::

    Feel good to see the bhAmini of new era. Very well constructed. The third line could be " ganada mAtAdidiri geluvanu haradidiri bahula" to fill the missing 4 matras

    ಮನೆಗೆ ಹಿರಿಯರ ಕೂಡಿ ಬಂದವ –
    ರೆನಗೆ ಉಡುಗೊರೆಯೊಂದ ತಂದು ಲ –
    ಗನದ ಮಾತಾಡಿ ಗೆಲುವ ಹರಡಿದಿರಿ ಬಹುಳ |

  2. ೨ ಬದಲಾವಣೆ ಮಾಡಿದ್ದೇನೆ ::

    ೧. "ಗಾಡಿಯು" -> "ಬಂಡಿಯು"
    ೨. "ಗೆಳೆತನ ಉಪರಿ" -> "ಗೆಳೆತನದುಪರಿ"

  3. Ram,

    ಬಹಳ ಚೆನ್ನಾಗಿದೆ 🙂
    ಬೆಟ್ಟಗಳ – ಬೆಟ್ಟಗಲ ಪ್ರಯೋಗ ಚೆನ್ನಾಗಿದೆ

    "ಬಳೆಯು ಮೇಲೇರದೆಲೆ ಮುಂಗೈ –
    ಗಳಲಿ ನೋವಾಗಿರಲು ಹಯ್ಯೋ"
    कनकवलयभ्रंशरिक्तप्रकोष्ठः ತುಂಬಾ ಚೆನ್ನಾಗಿದೆ

  4. ಹತ್ತಿರದ ಹೆಣ್ಣೆಂದು – ಇದು ಭಾಮಿನಿಗೆ ಹೊಂದುತ್ತದೆಯೇ?

    • ಹರೀಶ – ಗಣ ವಿಭಜನೆ ಈ ರೀತಿ ಆಗುತ್ತದೆ
      ಹತ್ತಿ + ರದ ಹೆಣ್ + ಣೆಂದು + ಮೆಚ್ಚುತ + ಮುತ್ತ + ನೊತ್ತಿದಿ + ರಿ

      ಇದು ಭಾಮಿನಿ ಷಟ್ಪದಿಯ ನಿಯಮಗಳಿಗನುಸಾರವಾಗಿಯೆ ಇದೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)