Jan 242012
 

ರಾತ್ರೆ ಊಟದ ಮೊದಲು ಕೋಣೆಯಲ್ಲಿ ನನ್ನ ತಮ್ಮನ ಜೊತೆ ಹರಟುತ್ತಿದ್ದೆ. ಮಗನೂ ಅಲ್ಲೇ ಆಡಿಕೊಳ್ಳುತ್ತಿದ್ದ. ಹೀಗೇ ಹರಟುತ್ತಿದ್ದಾಗ ಅದೇಕೋ ಮತ್ತಕೋಕಿಲಾ ಛಂದಸ್ಸು ನೆನಪಿಗೆ ಬಂತು. ಅದರ ಬಗ್ಗೆ ನನ್ನ ತಮ್ಮನಿಗೆ ಹೇಳುತ್ತಾ “ಇದು ಏಳೇಳು ಮಾತ್ರೆಗಳ ಮಿಶ್ರಗತಿಯಲ್ಲಿ ಬರುತ್ತದೆ – ಮತ್ತಕೋಕಿಲ ಮತ್ತಕೋಕಿಲ ಮತ್ತ ಕೋಕಿಲ ಕೋಕಿಲಾ” ಎಂಬಂತೆ ಎಂದು ಹೇಳಿದೆ. ಅವನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ “ಇದಕ್ಕೆ ಬೇರಾವುದಾದರೂ ಉದಾಹರಣೆಯಿದೆಯೇ” ಎಂದ. ನಾನು “ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ” ಎಂದೆ

ಅಷ್ಟುಹೊತ್ತಿಗೆ ಹೊರಗೆ ತಟ್ಟೆಹಾಕಿ ಊಟಕ್ಕೆ ಕರೆಯುತ್ತಿದ್ದರು. ನನ್ನ ಮಗ ಅಪ್ರಯತ್ನತಃ “ಊಟ ಮಾಡುವ ಟೈಮು ಬಂದಿತು ಬೇಗ ಬನ್ನಿರಿ ಎಲ್ಲರೂ” ಎಂದು ರಾಗವಾಗಿ, ಲಯಬದ್ಧವಾಗಿ ಕೂಗುತ್ತಾ ಊಟಕ್ಕೆ ಓಡಿಹೋದ! ಒಂದಿನಿತೂ ಎಡರು ತೊಡರಿಲ್ಲ, ಬೇಡದ ಎಳೆತವಿಲ್ಲ, ಮಾತ್ರಾಲೋಪವಿಲ್ಲ! ನನಗೆ ಒಂದು ಕ್ಷಣ ಆಶ್ಚರ್ಯಾನಂದಗಳಿಂದ ಮಾತೇ ಹೊರಡಲಿಲ್ಲ. ಇನ್ನೂ ಕನ್ನಡವನ್ನೇ ಅಕ್ಷರ ಕೂಡಿಸಿಕೊಂಡು ಪ್ರಯಾಸದಿಂದ ಓದುವ ಆರು ವರ್ಷದ ಪೋರ, ವೃತ್ತದ ಒಂದಿಡೀ ಸಾಲನ್ನು ನಿರಾಯಾಸವಾಗಿ, ಸಮಯಸ್ಫೂರ್ತಿಮಾತ್ರದಿಂದ ಅಲ್ಲೇ ಒದರಿ ಓಡಿದ್ದ! ಆಮೇಲೆ ಬಹಳ ಕೊಂಡಾಟ ಸಂತೋಷಗಳ ನಡುವೆ ನನ್ನ ಬಲವಂತಕ್ಕೆ ಅವನು ಮತ್ತೆ ಕೆಲವು ಸಾಲುಗಳನ್ನು ಪ್ರಯತ್ನಿಸಿದರೂ ಅದು ಸರಿಬರಲಿಲ್ಲ, ಅದಿರಲಿ, ಮೊದಲು ಹೇಳಿದ ಸಾಲೂ ಅವನಿಗೆ ಮರೆತುಹೋಗಿತ್ತು. ಈ ಮಧ್ಯೆ ಟಿವಿ, ಮಾತು ಮತ್ತಿತರ ಗಲಾಟೆಗಳ ಜೊತೆ ಊಟ ಮುಗಿಯಿತು, ಅಲ್ಲಿಗೆ ಆ ಮಾತು ಮರೆಯಿತು.

ಮತ್ತೆ ಮಲಗುವ ಸಮಯ, ಮಾಮೂಲಿನಂತೆ ಕತೆ ಕೇಳಿದ ನಂತರ ಹೊರಳಿ ಮಲಗುತ್ತಾ ಮತ್ತೊಂದು ಸಾಲು ಹೊರಟಿತು “ಊಟ ಆಯಿತು ನಿದ್ದೆ ಬಂದಿತು ಹೊದ್ದು ತಾಚಿಯ ಮಾಡುವೆ”!!! ಇಷ್ಟು ಹೇಳಿದ ಮಗು ಆರಾಮವಾಗಿ ಮುದುಡಿ ಮಲಗಿತು. ತಪ್ಪಿಹೋದ ಲಯವನ್ನು ಮತ್ತೆ ಹಿಡಿದ ಖುಶಿ ಮುಖದಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿತ್ತು. ನನಗಂತೂ ಮಗುವಿನ ಮೊದಲ ಮಾತು ಕೇಳಿದಾಗ ಆದಷ್ಟೇ ಸಂತೋಷವಾಯಿತು ಇದರಿಂದ.

ಪದ್ಯಪಾನದ ಗಡಂಗಿನಲ್ಲಿ ಈ ಗದ್ಯಾಲಾಪಕ್ಕೆ ಕ್ಷಮೆಯಿರಲಿ. ಈ ಅಯಾಚಿತ ಪ್ರತಿಭಾ ಪ್ರಕಾಶದಿಂದ ನನಗಾದ ಆನಂದಾತಿರೇಕವನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿತು, ಅಷ್ಟೇ.

  3 Responses to “ಹೀಗೊಂದು ಚಿಕ್ಕ ಸಂತಸ”

  1. ಭಾಮಿನಿಯ ಗತಿಯಲ್ಲಿ ಮಿಶ್ರಲಯಕ್ಕೆ ಸಲ್ಲುವ ರೀತಿಯೊಳ್
    ಕೋಮಲಾಮಲಮತ್ತಕೋಕಿಲಮಲ್ಲಿಕಾಸುಮಮಾಲೆಯೊಳ್|
    ಸ್ವಾಮಿ! ನಿಮ್ಮಯ ಮಗನ ಮಾತಿನ ಪದ್ಯಪಂಕ್ತಿಯನಾಲಿಸಿ
    ಪ್ರೇಮಮಯಹಾರ್ದಿಕಶುಭಾಶಿಷವಿತ್ತೆನಾನಿದೊ ಕೇಳಿಸಿ!!

    • ತಮ್ಮ ಹಾರೈಕೆಯೊಳೆ ಸಂದುದು ನೂರು ಗಜಗಳ ಮಾರ್ಬಲಂ
      ಎಮ್ಮ ಕಂದಗೆ, ಲಲ್ಲೆವಾತಿನ ಹುಲ್ಲೆಗಣ್ಣಿನ ಪೋರಗೆ
      ಸುಮ್ಮನಾಟದ ತವಕದಿಂದವೆ ಸೊಲ್ಲ ನುಡಿವೀ ಕಂದನಿಂ
      ದೆಮ್ಮ ಮನೆ-ಮನ ತುಂಬಿ ಸೂಸಿದೆ ಮತ್ತ ಕೋಕಿಲ ಕೂಜನಂ

  2. ಮಂಜುನಾಥರೆ – ಒಳ್ಳೆಯ ವಿಷಯವನ್ನು ಬರೆದಿದ್ದೀರಿ.
    “ಮತ್ತಕೋಕಿಲ ಮತ್ತಕೋಕಿಲ ಮತ್ತಕೋಕಿಲ ಕೋಕಿಲಾ” – ಈ ವೃತ್ತವು ತೆಲಗಿನಲ್ಲಿ ಮತ್ತಕೋಕಿಲ ಎಂದೂ ಕನ್ನಡದಲ್ಲಿ ಮಲ್ಲಿಕಾಮಾಲೆ ಎಂದೂ ಪ್ರಸಿದ್ಧವಾಗಿರುವುದೆಂದು ಚಂದ್ರಮೌಳಿಯವರು ಹಿಂದೊಂದು ಸರಣಿಯಲ್ಲಿ ವಿವರಿಸಿದ್ದರು :: http://padyapaana.com/?p=719#comment-2209

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)